ಕಾದಂಬರಿ : ಕಿಲಿಗ್
ಲೇಖಕರು: ಜಯರಾಮಚಾರಿ.
ಪುಟ: 108
ಬೆಲೆ: 145 ರೂ.
ಕಿಲಿಗ್ ಹೀಗೊಂದು ಕಾದಂಬರಿ ಪುಸ್ತಕ ಕೈಗೆ ಸಿಕ್ಕಿದ್ದೇ ತಡ ಓದಬೇಕು ಎಂದುಕೊಂಡು ಓದತೊಡಗಿದೆ.. ಜೀವನದಲ್ಲಿ ನಾವೆಲ್ಲಾ ಅನುಭವಿಸಿರಬಹುದಾದ ಪ್ರೀತಿ, ಕಾಮ, ಸಂಬಂಧಗಳ ನಡುವಿನ ತಕಲಾಟ ಎಲ್ಲವನ್ನೂ ಇಲ್ಲಿ ಲೇಖಕರು ಕಟ್ತಿಕೊಟ್ಟಿದ್ದಾರೆ. ಇಡೀ ಕಥೆ ಲಘು ದಾಟಿಯಲ್ಲಿ ಸಾಗಿದರೂ ಓದಿದ ನಂತರ ಅಲ್ಲಿನ ಪಾತ್ರಗಳು ನಮ್ಮ ಮನಸ್ಸಿನಲ್ಲಿ ಸಹ ಮೂಡಬಲ್ಲವು. ಮಹಾನಗರದ ಸಂಕಟಗಳನ್ನು ಸಂಬಂಧಗಳ ಸಂಕೀರ್ಣತೆಯ ಜೊತೆಗೆ ಹೆಣೆದ ಕಥೆ ಕಿಲಿಗ್ ಎನ್ನಬೇಕು. ಇನ್ನು ನಿತ್ಯ ಬೆಳಗಾದರೆ ವಿಜಯನಗರ, ಮೆಟ್ರೋ, ಇಂದ್ರಪ್ರಸ್ಥ ಹೋಟೆಲ್ ನೋಡುವ ನನಗೆ ಈ ಕಥೆ ಇಲ್ಲೇ ಅಕ್ಕ ಪಕ್ಕ ನಡೆದಿದೆ ಎನ್ನಿಸಿತು.. ಲೇಖಕರೇ ಹೇಳಿರುವಂತೆ ಪ್ರೇಮ ಹಾಗೂ ಕಾಮ ನಡುವೆ ತೆಳುವಾದ ಗಡಿ ರೇಖೆಯಿರುವ, ಥಟ್ಟನೆ ಗುರುತಿಸಲಾಗದ ಎರಡು ಸ್ಥಿತಿಗಳು ಅದನ್ನು ಇಲ್ಲಿ ಬಹಳ ನವಿರಾಗಿ ನಿರೂಪಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಕಾದಂಬರಿ ತುಂಬಾ ಸರಳ ಎಂದೇನೂ ಅಲ್ಲ ಸಂಕೀರ್ಣ ಅಂಶಗಳನ್ನು ಸಹ ಲೇಖಕರು ಸರಳವಾಗಿ ಹೇಳಿಕೊಂಡಿದ್ದಾರೆ.
ಕಾದಂಬರಿಯಲ್ಲಿ ಬರುವ ಕೆಲವು ಸಾಲುಗಳು - 'ಹಾಳು ನೆನಪುಗಳಿಗೂ ರೂಟ್ ಕ್ಯನಾಲ್ ಇರಬೇಕಿತ್ತು', 'ಹಳೆ ಹುಡುಗಿಯ ನೆನಪುಗಳಿಂದ, ಕಿತ್ತು ತಿನ್ನುವ ಟ್ಯಾಕ್ಸ್ ಬಲೆಯಿಂದ ಮಿಡಲ್ ಕ್ಲಾಸ್ ಹುಡುಗರು ಪಾರಾಗುವುದು ಹೇಗೆ ಸಾಧ್ಯ?', 'ದಾಂಪತ್ಯದ ಸಂಕೀರ್ಣತೆಗೆ ಅದರದ್ದೇ ಆದ ಸದ್ದುಗಳಿರುತ್ತವೆ', 'ಉದ್ದುದ್ದದ ಸಾರಿ ಮೆಸೇಜುಗಳನ್ನು ಟೈಪಿಸುವ ವಯಸ್ಸನ್ನು ದಾಟಿಯಾಗಿದೆ' ನನ್ನ ಗಮನ ಸೆಳೆದವು. ಇಲ್ಲೆಲ್ಲಾ ಜೀವನ ಅನುಭವದ ವಿವಿಧ ಸ್ವರೂಪದ ಚಿತ್ರಣ ನಾವು ಕಾಣುತ್ತೇವೆ.
ಇಲ್ಲಿ ಕಥಾನಾಯಕ, ಅಕ್ಷತಾ ಹಾಗೂ ರಂಜನಿ ಎಂಬ ಮೂರು ಪಾತ್ರಗಳು ಮಾತ್ರವೇ ಪ್ರಮುಖವಾಗಿ ಕಾಣುತ್ತದೆ. ಕಥಾನಾಯಕ ಸತೀಶನ ಮದುವೆಯಾಗಿದ್ದು ಮಗು ಂಆಡಿಕೊಳ್ಳುವ ಬಗ್ಗೆ ಆಲೋಚಿಸುತ್ತಾನೆ. ಆ ಹಂತದಲ್ಲಿ ಅವನ ತಾಯಿಯ ಜೊತೆಗಿನ ತನ್ನ ಬಾಲ್ಯದ ದಿನಗಳು, ಅವಳ ನಿರ್ವ್ಯಾಜ ಪ್ರೀತಿ ಸಹ ಸುಂದರವಾಗಿ ಕಟ್ಟಿಕೊಡಲಾಗಿದೆ. ಅದೇ ವೇಳೆ ರಂಜನಿ ಎಂಬ ಪಾತ್ರದ ಮೂಲಕ ಪತಿ ಪತ್ನಿಯರ ಸಂಬಂಧ, ದಾಂಪತ್ಯದ ವಿವಿಧ ಮಜಲು ಸಹ ಇಲ್ಲಿ ಕಾಣುತ್ತದೆ.
ಇದಲ್ಲದೆ ಇಂದಿನ ಜಗತ್ತನ್ನು ಆಳುತ್ತಿರುವ ಸಾಮಾಜಿಕ ಮಾದ್ಯಮಗಳು, ಅದರ ಮೂಲಕ ಆಗುವ ಪರಿಚಯವು ತೀರಾ ಬೆಡ್ ರೂಮಿನೊಳಗೆ ಪ್ರವೇಶಿಸುವ ಮಟ್ಟಿಗೆ ಬೆಳೆಯುತ್ತದೆ ಅದರ ಫಲಿತಾಶ ಏನಾಗಲಿದೆ ಎನ್ನುವುದನ್ನು ಸಹ ಹೇಳಲಾಗಿದೆ. ಕಾದಂಬರಿಯ ಅಂತ್ಯದಲ್ಲಿ ’ಸಾರಿ’ ಎಂಬ ಪದ ಕೊನೆಯಾಗದ ತಪ್ಪಗಳಿಗೆ ಬಿಡುಗಡೆಗೆ ಮುಲಾಮಾಗಿದೆಯ ಎನ್ನುವ ಪ್ರಶ್ನೆಯೊಂದಿಗೆ ನಮಗೊಂದು ನಿಟ್ಟುಸಿರು ತರಿಸುತ್ತದೆ. ಕಾಮದ ಸೆಳೆವಿಗೆ ಸಿಕ್ಕವ್ಯಕ್ತಿ ಅದರಿಂದ ಬಿಡುಗಡೆ ಹೊಂದುವುದಕ್ಕೆ ಕಾರಣವಾಗಿರುವುದು ಜೀವನದಲ್ಲಿ ಬಂದ ಅಮ್ಮನ ಪ್ರತಿರೂಪದಂಥಾ ಮಗು ಎನ್ನುವುದು ಓದುಗರಿಗೆ ಕಾಡುವ ಅಂಶವಾಗುತ್ತದೆ. ಬದುಕಿನ ನಾಗಾಲೋಟದಲ್ಲಿ ಆ ಕ್ಷಣದ ಘಟನೆಗಳು ವ್ಯಕ್ತಿತ್ವವೊಂದನ್ನು ಅದು ಪ್ರೇಮವೊ ಕಾಮವೊ ಎಂಬಂತೆ ಕಾಡಿ ಸ್ವಚ್ಛ ಬೆಳಕೊಂದನ್ನು ಮಿಂಚು ಸುಳಿದಂತೆ ಬೆರಗು ಮೂಡಿಸಿ ಬದುಕನ್ನು ಇನ್ನಷ್ಟು ಆಪ್ತವಾಗುವಂತೆ ಮಾಡುವ ಬದುಕಿಗೆ ಪಾಠಹೇಳಿಕೊಟ್ಟವರು ಯಾರು!? ಅದೊಂದು ಸೋಜಿಗವೆ ಸರಿ ಅಲ್ಲಿ ಗೆಲ್ಲುವುದು ಪ್ರೇಮವೊ ಕಾಮವೊ ಆಕರ್ಷಣೆಯೊ ಅದನ್ನು ಕಾಲವೆ ಉತ್ತರಿಸಬೇಕು ಉತ್ತರಿಸುತ್ತದೆ ಕೂಡಾ ಎಂಬುದನ್ನು ಕಾದಂಬರಿ ಹೇಳಿದೆ ಅನಿಸುತ್ತದೆ. “ ಸಾವು ಪ್ರಜ್ಞೆಯನ್ನು ಮೀರಿದ ಸಂಗತಿಯೇ" ಅನ್ನುವಂಥ ಒಂದಿಷ್ಟು ಸಾಲುಗಳು ಮನಸಿಗೂ ತಲೆಗೂ ಎರಡಕ್ಕೂ ತಾಕುತ್ತವೆ. ಅಲ್ಲಲ್ಲಿ ಹೋಲಿಕೆ ಇರೋದ್ರಿಂದ ಕಾದಂಬರಿ ತೂಕ ಹೆಚ್ಚಾಗಿದೆ. ಅಲ್ಲದೆ “ಗ್ರಾಚಾರ್ ಗಾಂಡ್ ಮಾರೆತೋ ಖುದಾ ಕ್ಯಾ ಕರೇ" ಅನ್ನುವಂತಹದು. “ಉದ್ದುದ್ದ ಟೈಪಿಸುವ ವಯಸ್ಸು ಮುಗಿದು ಹೋಗಿದೆ" ಅನ್ನುವ ಒಂದಿಷ್ಟು ಪ್ರಬುದ್ಧ ಗಟ್ಟಿತನದ ಸಾಲಿಗೆ ಮೆಚ್ಚುಗೆ ಸೂಚಿಸಲೇಬೇಕು.
ಕಡೇದಾಗಿ ಹೇಳೋದಾದರೆ ಇದೊಂದು ಸರಳ ಸುಂದರ ಕಾದಂಬರಿ, ಓದಿ ಮುಗಿದ ಮೇಲೆಯೂ ನಮ್ಮ ನೆನಪಿನಲ್ಲಿ ಉಳಿಯಬಹುದಾದ ಕೆಲವು ಪಾತ್ರಗಳು, ಘಟನೆಗಳನ್ನು ಕಟ್ಟಿಕೊಟ್ಟ ಲೇಖಕರಿಗೆ ಧನ್ಯವಾದ....