ದಸರಾ ಬಂತೆಂದರೆ ನಮಗೆಲ್ಲಾ ನೆನಪಾಗುವುದು ಮೈಸೂರು, ಅಲ್ಲಿನ ವೈಭವದ ಜಂಬೂ ಸವಾರಿ.
ಆದರೆ ಮೈಸೂರಿನ ಮಣ್ಣಿನಲ್ಲೇ ಒಂದಾದಂತಿರುವ ಹಿಂದೊಮ್ಮೆ ರಾಜಾಶ್ರಯ ಪಡೆದು ತನ್ನ ವೈಭವದ ದಿನಗಳನ್ನು
ಕಂಡಿದ್ದ ಗಂಡು ಕಲೆ ಕುಸ್ತಿಯ ವಿಚಾರ ನಮ್ಮಲ್ಲೆಷ್ಟು ಮಂದಿಗೆ ತಿಳಿದಿದೆ? ದಸರೆಯ ವೈಭವದ ದಿನಗಳು
ಮರಳಿ ಬರಲು ಕೆಲವೇ ದಿನಗಳು ಮಾತ್ರವೇ ಇರುವ ಈ ಸಮಯದಲ್ಲಿ ದಸರೆಯ ಭಾಗವಾಗಿರುವ ಕುಸ್ತಿಯ ಕುರಿತು ಒಂದಿಷ್ಟು
ವಿಚಾರಗಳನ್ನು ತಿಳಿಸುವ ಸಣ್ಣ ಪ್ರಯತ್ನವಿದು.
ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ
ನನ್ನ ನಮಸ್ಕಾರಗಳು.
ಇನ್ನೇನು ದಸರಾ ಹತ್ತಿರದಲ್ಲಿಯೇ ಇದೆ. ದಸರಾ ಎಂದೊಡನೆ
ನಮಗೆಲ್ಲಾ ನೆನಪಾಗುವುದು ಮೈಸೂರು, ಅಲ್ಲಿನ ರಾಜವೈಭೋಗದ ಜಂಬೂ ಸವಾರಿ, ಅರಮನೆ, ಚಾಮುಂಡೇಶ್ವರಿ ತಾಯಿಯ
ವೈಭವಗಳು. ಆದರೆ ದಸರೆಯೆಂದರೆ ಇಷ್ಟೇ ಅಲ್ಲ, ಮೈಸೂರು ದಸರೆಯಲ್ಲಿ ಇನ್ನೂ ಏನೇನೋ ಇವೆ, ಮತ್ತು ಅವೆಲ್ಲಕ್ಕೂ
ಅವುಗಳದೇ ಆದ ಪರಂಪರೆಯೂ ಇದೆ. ಅಂಥವುಗಳಾಲ್ಲಿ ಒಂದು ಮೈಸೂರಿನಲ್ಲಿ ನಡೆಯುವ ಕುಸ್ತಿ ಕಾಳಗ.
ಕುಸ್ತಿ,
ಇದೊಂದು ಪ್ರಾಚೀನ ಭಾರತೀಯ ಕಲೆ. ಇದರಲ್ಲಿ ನಾನಾ ಪ್ರಕಾರಗಳಿದ್ದು
ಹಿಂದೆ ರಾಜ ಮಹಾರಾಜರ ಕಾಲಗಳಾಲ್ಲಿ ರಾಜಾಶ್ರಯವನ್ನು ಹೊಂದಿದ್ದ ಈ ಕುಸ್ತಿಯೆಂಬ ಕ್ರೀಡೆ ಇಂದು ಸಾಕಷ್ಟು
ಪ್ರೋತ್ಸಾಹವಿಲ್ಲದೆ ಸೊರಗಿದೆಯಾದರೂ ಇಂದಿಗೂ ದಸರೆ ಬಂತೆಂದರೆ ಮೈಸೂರಿನ ಮಲ್ಲರಿಗೆ ಹಬ್ಬ! ಈ ಸಂದರ್ಭದಲ್ಲಿ
ಮೈಸೂರಿನ ಸ್ಥಳೀಯ ಕುಸ್ತಿಪಟುಗಳೊಂದಿಗೆ ರಾಜ್ಯದ ಉತ್ತರ ಭಾಗ ಬೆಳಗಾವಿ, ಬಿಜಾಪುರ ಸೇರಿದಂತೆ ನಾನಾ
ಕಡೆಯ ಜಟ್ಟಿಗಳೂ ಮೈಸೂರಿಗೆ ದೌಡಾಯಿಸುತ್ತಾರೆ. ಅವರೆಲ್ಲರೂ ತಮ್ಮ ಅಪೂರ್ವ ಪ್ರತಿಭೆಯನ್ನು ಪಣಕ್ಕಿಟ್ಟು
ಅಖಾಡದಲ್ಲಿ ಎದುರಾಳಿಗಳಾನ್ನು ಮಣ್ಣ ಮುಕ್ಕಿಸುವ ಆ ರೋಮಾಂವನಕಾರಿ ಕ್ಷಣಗಳಾನ್ನು ನೋಡಿಯೇ ಅನುಭವಿಸಬೇಕು.
ಗೋಪಾಲಸ್ವಾಮಿ ಗರಡಿ, , ಮಹಲಿಂಗೇಶ್ವರ ಮಠದ ಗರಡಿ, ಹತ್ತೂ
ಜನರ ಗರಡಿ, ಫಕೀರ್ ಅಹಮದ್ ಗರಡಿ, ಈಶ್ವರ ರಾಯನ ಗರಡಿ....... ಹೀಗೆ ಮೈಸೂರಿನಲ್ಲಿ ಇಂದಿಗೂ ನಾವು ನೂರರಿಂದ ಐನೂರು ಗರಡಿ
ಮನೆಗಳನ್ನು ಕಾಣುತ್ತೇವೆ. ಈ ಎಲ್ಲಾ ಗರಡಿ ಮನೆಗಳಲ್ಲಿ ಇಂದಿಗೂ ಸಾಕಶ್ಟು ಜಟ್ಟಿಗಳು ಕುಸ್ತಿ ಕಲೆಯ
ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಈ ಹಿಂದಿನ ರಾಜ ಮಹಾರಾಜರ ಕಾಲದ ವೈಭವ , ಪ್ರೋತ್ಸಾಹವನ್ನು ಇಂದು
ನಾವು ಕಾಣುವುದಿಲ್ಲ.
ಜಗಜಟ್ಟಿಗಳ ಕಾಳಗ ಪರಂಪರೆ
ಮೈಸೂರಿನ ಕುಸ್ತಿಗೆ ಅದರದೇ ಆದ ಹಿನ್ನೆಲೆ ಇದೆ. ಈ ಕುಸ್ತಿಯ
ತವರೂರು ಗುಜರಾತ್. ಅಲ್ಲಿನ ಮೊದೇರಾ ಪ್ರದೇಶದ ಮೊದಮಲ್ಲ ಬ್ರಾಹ್ಮಣ ಸಮುದಾಯ ಇಂದಿನ ಕುಸ್ತಿ ಅಥವಾ
ಮಲ್ಲಯುದ್ದದ ಮೂಲ ಜನಾಂಗವೆನ್ನಲಾಗಿದ್ದು ಕ್ರಮೇಣ ಈ ಜನಾಂಗದವರು ದಕ್ಷಿಣ ಭಾರತವೂ ಸೇರಿದಂತೆ ನಾನಾ
ಕಡೆಯಲ್ಲಿ ತಮಗೆ ದೊರಕಿದ ರಾಜಾಶ್ರಯದಡಿಯಲ್ಲಿ ನೆಲೆನಿಂತು ತಮ್ಮಲ್ಲಿನ ಕಲೆಯನ್ನು ಪೋಷಿಸುತ್ತಾ ಬಂದರು.
ಇಂತಹಾ ಕುಸ್ತಿಯಾಡುವವರನ್ನು ದೇಶದ ನಾನಾ ಕಡೆಗಳಲ್ಲಿ ‘ಜಟ್ಟಿ’, ‘ಮಲ್ಲ’, ‘ಜೇಧಿ’ ಎಂಬ ನಾನಾವಿಧದ
ಹೆಸರುಗಳಿಂದ ಕರೆಯುತ್ತಾರೆ.
ಇಂತಹಾ ಜಟ್ಟಿಗಳಿಗೆ ಆಶ್ರಯ ನೀಡಿದವರಲ್ಲಿ ಪ್ರಮುಖರಾಗಿ
ಕಾಣಿಸುವವರು ವಿಜಯನಗರದ ದೊರೆಗಳು ಹಾಗೂ ಮೈಸೂರಿನ ಒಡೆಯರುಗಳು. ವಿಜಯನಗರಕ್ಕೆ ಭೇಟಿ ಇತ್ತಿದ್ದ ಪೋರ್ಚುಗೀಸ್
ಪವಾಸಿ ಡೊಮಿಂಗೋ ಪಯಾಸ್ ತನ್ನ ಪ್ರವಾಸಿ ಕಥನದಲ್ಲಿ ಜಟ್ಟಿಗಳ ಮಲ್ಲಯುದ್ದ, ಕುಸ್ತಿ ಕಾಳಗದ ಬಗ್ಗೆ
ವಿವರಣೆ ನೀಡುತ್ತಾರೆ. ಇನ್ನು ‘ಮಾನಸೋಲ್ಲಾಸ’ವೆಂಬ ಗ್ರಂಥದಲ್ಲಿಯೂ ‘ಜಟ್ಟಿಗಳನ್ನು ಆಮಂತ್ರಿಸಲು ವಿಶೇಷ
ಅಧಿಕಾರಿಗಳು ನೇಮಿಸಲ್ಪಡುತ್ತಿದ್ದರು, ಅವರೊಡನೆ ಚಿನ್ನದ ಸರವನ್ನು ಕೊಟ್ಟು ಆಮಂತ್ರಿಸುವ ಪರಿಪಾಠವಿತ್ತು’
ಎಂದು ವಿವರಿಸಲಾಗಿದೆ. ಮಲ್ಲರುಗಳು ತಮಗಾಶ್ರಯ ನೀಡಿದ ದೊರೆಗಳಿಗೆ ನಿಷ್ಠರಾಗಿರುತ್ತಿದ್ದರಲ್ಲದೆ ಮಹಾರಾಜರ
ಅಂಗರಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ವಿಜಯನಗರದ ಪತನಾನಂತರ ಕುಸ್ತಿ ಕಲೆಗೆ ಪ್ರಮುಖವಾಗಿ ಪ್ರೋತ್ಸಾಹ
ಮತ್ತು ನೆಲೆ ದೊರಕಿಸಿಕೊಟ್ಟವರೆಂದರೆ ಮೈಸೂರ ಅರಸರು. ಕಂಠೀರವ ನರಸಿಂಹರಾಜ ಒಡೆಯರ್ ನಂತಹಾ ಕೆಲ ಒಡೆಯರು
ತಾವುಗಳೆ ಸ್ವತಃ ಕುಸ್ತಿಮಲ್ಲರಾಗಿದ್ದುದು ವಿಶೇಷ. ರಾಜರುಗಳು ಮಾರುವೇಷದಲ್ಲಿ ನೆರೆರಾಜ್ಯಗಳಿಗೆ ಹೋಗಿ
ಅಲ್ಲಿನ ಮಲ್ಲರಿಗೆ ಸವಾಲೆಸೆದು ಮಣಿಸಿದ ಘಟನೆಗಳನ್ನು ಇಂದಿಗೂ ಮೈಸೂರು ಸುತ್ತಮುತ್ತಲ ಹಿರಿಯರು ಮೆಲುಕು
ಹಾಕುತ್ತಾರೆ. ಕುಸ್ತಿ ಮಲ್ಲರುಗಳು ತಾವು ಹುಲಿ, ಸಿಂಹ, ಆನೆಗಳಂತಹಾ ವನ್ಯಮೃಗಗಳನ್ನು ಮಣಿಸುವ ಮೂಲಕ
ಮಹಾರಾಜರುಗಳಿಂದ ಬಿರುದು ಬಾವಲಿಗಳ್ನ್ನು ಪಡೆಯುತ್ತಿದ್ದರು. ಅಲ್ಲದೆ ಹಲವು ಸಂದರ್ಭಗಳಲ್ಲಿ ಈ ಹಿಂದೆ
ತಿಳಿಸಿದಂತೆ ರಾಜರುಗಳ ಅಂಗರಕ್ಷಕರಾಗಿರುತ್ತಿದ್ದ ಜಟ್ಟಿಗಳು ರಾಜರ ಪ್ರಾಣ ಉಳಿಸಿದಂತಹಾ ಪ್ರಸಂಗಗಳೂ
ಸಾಕಷ್ಟಿವೆ. ಒಮ್ಮೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರುಗಳು ಬೇಟೆಗೆ ಹೋಗಿದ್ದಾಗ ಕರಡಿಯೊಂದರ ಧಾಳಿಗೆ
ತುತ್ತಾದರು. ಆಗ ಅವರ ಜತೆಯಲ್ಲಿದ್ದ ಸದಾನಂದ ಸುಬ್ಬಾ ಜಟ್ಟಪ್ಪನೆಂಬುವವರು ಮಹಾರಾಜರನ್ನು ತೊಂದರೆಯಿಂದ
ಪಾರುಮಾಡಿದರು. ಇದರಿಂದ ಸಂಪ್ರೀತಗೊಂಡ ಮಹಾರಾಜರು ಸದಾನಂದ ಜಟ್ಟಪ್ಪನವರಿಗೆ ಮೈಸೂರಿನ ನಜರಾಬಾದ್ ನಲ್ಲಿ
ಗರಡಿಮನೆಯನ್ನಾರಂಭಿಸಲು ವಿಶಾಲಜಾಗವನ್ನು ನೀಡಿದರು.
ಈ ಪ್ರದೇಶದಲ್ಲಿಯೆ ಮುಂದೆ ಅನೇಕ ಜಟ್ಟಿಗ ಮನೆತನಗಳು ನೆಲೆಸಿದವು. ಇಂದಿಗೂ ಈ ಗಾಡಿಮನೆಯು ನಿಂಬಜಾದೇವಿ
ಮಂದಿರ ಹಾಗೂ ಕಲ್ಯಾಣಮಂಟಪದ ಪ್ರದೇಶವಾಗಿರುವುದನ್ನು ನಾವು ಕಾಣುತ್ತೇವೆ.
ಗಂಗಾಧರ ಜಟ್ಟಪ್ಪನೆಂಬ ಇನ್ನೊಬ್ಬ ಕುಸ್ತಿ ಮಲ್ಲನು ತಾನು
ಹುಲಿಯನ್ನು ಪಳಗಿಸುವುದರಲ್ಲಿ ನಿಸ್ಸೀಮನೆನಿಸಿಕೊಂಡಿದ್ದನು. ಒಮ್ಮೆ ಆಂಗ್ಲ ಅಧಿಕಾರಿಯೊಬ್ಬ ಕಾಡಿನಿಂದ
ಹುಲಿಯೊಂದನ್ನು ತರಿಸಿ ಕಾಳಗಕ್ಕೆ ಜಟ್ಟಪ್ಪನನ್ನು ಕಾಳಗಕ್ಕೆ ಆಹ್ವಾನಿಸಿದಾಗ ಈತನು ಆ ಹುಲಿಯನ್ನು
ಸಲೀಸಾಗಿ ಮಣಿಸುತ್ತಾನೆ. ಇದರಿಂದ ಸಂಪ್ರೀತರಾದ ಅಂದಿನ ಮೈಸೂರು ಒಡೆಯರು ತಮ್ಮ ಪಟ್ತದ ಆನೆ ‘ಗಂಗಾಧರ’ನ
ಮೇಲೆ ಜಟ್ತಿಯನ್ನು ಮೆರವಣಿಗೆ ಮಾಡಿಸಿದ್ದಲ್ಲದೆ ‘ಗಂಗಾಧರ ಸುಬ್ಬಾ ಜಟ್ಟಪ್ಪ’ ಎನ್ನುವುದಾಗಿ ನಾಮಧೇಯವನ್ನಿತ್ತಿದ್ದರೆನ್ನುವುದು
ಈಗ ಇತಿಹಾಸ.
ವೆಂಕಾಜೆಟ್ಟಿ ಎನ್ನುವ ಉಸ್ತಾದ್ ಓರ್ವರಿಗೆ ರಾಜಾ ಶ್ರೀ
ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿದ ಬೆಳ್ಳಿತಟ್ಟೆಯನ್ನು ಅವರ ವಂಶಜರು ಇಂದಿಗೂ ಕಾಪಾಡಿಕೊಂಡು ಬಂದಿದ್ದು
ಅದನ್ನು ‘ವೆಂಕಾಜೆಟ್ಟಿ ತಟ್ಟೆ’ ಎಂದೇ ಇಂದಿಗೂ ಗುರುತಿಸಲಾಗುತ್ತಿದೆ.
ಗರಡಿಮನೆಗಳ ಒಳಹೊರಗೆ
ಕುಸ್ತಿ ಅಭ್ಯಾಸಿಗಳಿಗೆ ದೈಹಿಕ ದೃಅಢತೆ ಅತ್ಯಂತ ಅಗತ್ಯವಾದುದು.
ನಮ್ಮ ಹಿರಿಯರು ದಾಇಹಿಕ ಕಸರತ್ತಿಗೆ ಅತ್ಯಂತ ಹೆಚ್ಚು ಪ್ರಾಧಾನ್ಯ ನೀಡಿದ್ದ ಕಾರಣ ನಾಡಿನ ಹಳ್ಳಿ ಹಳ್ಳಿಗಳಲ್ಲಿಯೂ
ಹನುಮಾನ್ ಗುಡಿಯ ಪಕ್ಕದಲ್ಲಿ ಗರಡಿ ಮನೆಗಳೂ, ವ್ಯಾಯಾಮ ಶಾಲೆಗಳೂ ತಲೆಯೆತ್ತಿದ್ದವು. ಊರಿನ ಕಟ್ಟುಮಸ್ತಾದ
ಯುವಕರೆಲ್ಲರೂ ಗರಡಿಮನೆಗೆ ಹೋಗಿ ಸಾಮು ಮಾಡುವುದು ಅಂದಿನ ಕಾಲದಲ್ಲಿ ಸಾಮಾನ್ಯವಿತ್ತು. ಸತತ ಸಾಧಬೆಯಿಂದ
ಗಟ್ಟಿಮುಟ್ಟಾದ ದೇಹ, ಎದುರಾಳಿಗಳನ್ನು ನೋಟದಿಂದಲೇ ತಿವಿಯಬಹುದಾದ ಕಣ್ಣೋಟ, ಪ್ರತಿಸ್ಪರ್ಧಿಗಳನ್ನು
ಕ್ಷಣಾರ್ಧದಲ್ಲಿ ಮಣ್ಣು ಮುಕ್ಕಿಸುವ ಮಟ್ಟುಗಳನ್ನು ಕರಗತ ಮಾಡಿಕೊಂಡ ಆ ಜಗಜಟ್ಟಿಗಳ ಕಾಳಗವನ್ನು ನೋಡುವುದೇ
ಕಣ್ಣಿಗೊಂದು ಹಬ್ಬವಿದ್ದಂತೆ
ಇನ್ನು ಹೀಗೆ ಅಖಾಡದಲ್ಲಿ ಮದವೇರಿದ ಸಲಗಗಳಂತೆ ಸೆಣೆಸುವ
ಈ ಪೈಲ್ವಾನರುಗಳ ದಿನಚರಿಯೂ ಸಹ ವಿಭಿನ್ನವಾದದ್ದು. ದಿನವೂ ಮುಂಜಾನೆ ಯೆದ್ದು ಗರಡಿಮನೆಯತ್ತ ಬರುವ
ಪೈಲ್ವಾನರುಗಳು ಕಲ್ಲುಗುಂಡು, ಬಳೆ, ಗದೆ, ಕೊಂತ ಇವೇ ಮುಂತಾದ ಪರಿಕರಗಳನ್ನು ಬಳಸಿಕೊಂಡು ಕಸರತ್ತು
ನಡೆಸುವುದಲ್ಲದೆ ಅವರಲ್ಲೆ ಪರಸ್ಪರ ಕಾದಾಡುತ್ತಾ ತಮ್ಮ ಅಭ್ಯಾಸವನ್ನು ನಡೆಸುತ್ತಾರೆ. ಇದೇ ಸಮಯದಲ್ಲಿ
ಹುಲಿಹೆಜ್ಜೆ, ಹನುಮಾನ್ ದಂಡೆ, ಕಟಾಪ್, ಚಪ್ಪಡಿದಂಡೆ, ಸುತ್ತಂಡೆ, ನಿಕಾಲ್, ಉಕಾಡ್, ಜರಾಸಂಧಿ, ಭೀಮಸೇನಿ ಪಟ್ಟು ಇವೇ ನಾನಾವಿಧದ ತಾಲೀಮಿನಲ್ಲಿ ನಿರತರಾಗುತ್ತಾರೆ.
ನಾನಾ ನಮೂನೆಯ ಪಟ್ಟುಗಳನ್ನು ಹಾಕುವುದು ಹೇಗೆ ಎನ್ನುವುದನ್ನು ಹೇಳಿಕೊಡುವುದೇ ಒಂದು ಕಾಯಕ. ಗರಡಿಯ
ಮಲ್ಲರಿಗೆ ಜಗಜಟ್ತಿಗಳಾ ವಜ್ರಕಾಯ ರೂಪಿಸುವಲ್ಲಿ ಗರಡಿಯ ಖಲೀಫರೂ(ಗರಡಿಮನೆಯ ಮುಖ್ಯ ಗುರುಗಳು) ಉಸ್ತಾದರೂ
ಸಾಕಷ್ಟು ಆಸ್ಥೆವಹಿಸುತ್ತಿದ್ದರು. ಕುಸ್ತಿಯಾಳುಗಳು ಬಳಸುತ್ತಿದ್ದ ಉಪಕರಣಗಳೂ, ಅವರು ಧರಿಸುತ್ತಿದ್ದ
ಉಡುಗೆಗಳೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿದ್ದವು. ಕರೇಲಾ(ಮರದ ಗದೆ), ಗರ್ದನ್ ಕಲ್ಲು, ಮಲ್ಲಂತಿಗೆ(ಜಟ್ಟಿಗಳು
ತೊಡುತ್ತಿದ್ದ ನಡುಕಟ್ಟು), ಹನುಮಾನ್ ಕಾಚಾ ಇವುಗಳಲ್ಲಿ ಹೆಸರಿಸಬಹುದಾದ ಕೆಲವು ವಿಶೇಷ ಸಲಕರಣೆಗಳಾಗಿವೆ.
ಸ್ನೇಹಿತರೇ ಗರಡಿಮನೆಯೆಂದರೆ ಕುಸ್ತಿಯಾಳುಗಳಿಗೆ ದೇವಾಲಯದಂತೆ.
ಅಲ್ಲಿನ ಕರೇಲಾ, ಮಲ್ಲಕಂಬಗಳು ದೈವವಿದ್ದಂತೆ. ಇನ್ನು ಇಲ್ಲಿ ಇನ್ನೊಂದು ಮುಖ್ಯವಾದ ಅಂಶವೆಂದರೆ ಗರಡಿಮನೆಗಳಲ್ಲಿನ ಘಮ್
ಎಂದು ಸುವಾಸನೆ ಬೀರುವ ಕೆಮ್ಮಣ್ಣು. ಈ ಕೆಮ್ಮಣ್ಣಿನ ರಾಶಿಯೇ ಕುಸ್ತಿಪಟುಗಳ ವಜ್ರಕಾಯಕ್ಕೆ ಭದ್ರ ನೆಲೆಯಾಗಿರುತ್ತದೆ.
ಅರಿಶಿನ. ಕುಂಕುಮ, ತುಪ್ಪ ಮಿಶ್ರಿತವಾಗಿರುವ ಈ ಮಣ್ಣಿನಲ್ಲಿ ಸಾಕಷ್ಟು ಔಷ್ಧಿಯ ಸತವವಿದ್ದು ಈ ಮಣ್ಣಿನಲ್ಲಿ
ಮಿಂದೇಳುವುದರಿಂದ ಮೈ ಹಗುರಾಗುವುದಲ್ಲದೆ ಚರ್ಮವ್ಯಾಧಿಯೂ ದೂರವಾಗುತ್ತದೆ. ಮುಂಜಾನೆಯೆದ್ದು ಗರಡಿಮನೆಗೆ
ಬರುವ ಗರಡಿಯಾಳು ಈ ಮಣ್ಣನ್ನು ಸನಿಕೆಯಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಹಾಕಬೇಕು. ಇದರಿಂದ ಸ್ನಾಯುಗಳ
ಧೃಢತೆ ಹೆಚ್ಚುವುದಲ್ಲದೆ ದೇಹದ ನಾನಾ ಅಂಗಗಳ ಸದೃಢತೆಗೆ ನೆರವಾಗುತ್ತದೆ. ಬಹುವಾಗಿ ದಣಿದು ಇಲ್ಲವೇ
ಒತ್ತಡಕ್ಕೆ ಸಿಲುಕಿದ ಸಂದರ್ಭದಲ್ಲಿ ಈ ಮಣ್ಣನ್ನು ಹೊದ್ದು ಮಲಗಿದರೆ ನೋವು ಹuEಠಾತ್ ಮಾಯವಾಗುತ್ತದೆ.
ಇನ್ನು ಕುಸ್ತಿಯ ಅಭ್ಯಾಸದ ವೇಳೆ ಬೆನ್ನು, ಕೈ ಕಾಲುಗಳೇನಾದರೂ ಉಳುಕಿದರೆ ಈ ಮಣ್ಣಿನಲ್ಲಿ ಮಸಾಜ್ ಮಾಡಿಸಿಕೊಂಡೆವಾದರೆ
ನೋವು ಉಪಶಮನವಾಗುತ್ತದೆ.
ಇಷ್ಟೆಲ್ಲಾ ಹೇಳಿದ ಮೇಲೆ ಇಂತಹಾ ಮಲ್ಲರು ನಿತ್ಯ ಸೇವಿಸುವ
ಆಹಾರದ ಕುರಿತಾಗಿಯೂ ಹೇಳಲೇಬೇಕು. ಕುಸ್ತಿಯಾಳುಗಳ ಪಟ್ಟುಗಳು, ಅವರು ಎದುರಾಳಿಗಳನ್ನು ಮಣ್ಣು ಮುಕ್ಕಿಸುವ
ಪರಿ ಇವೆಲ್ಲದರ ಹಿಂದೆ ಅವರ ಸತತ ಅಭ್ಯಾಸದಂತೆಯೇ ಅವರು ದಿನನಿತ್ಯ ಸೇವಿಸುವ ಆಹಾರದ ಪಾತ್ರವೂ ಇದೆ.
ಬಾದಾಮಿ ಮಿಶ್ರಿತವಾದ ಲೀಟರ್ ಗಟ್ಟಲೆ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ಪದಾರ್ಥ, ಬೆಣ್ಣೆ,
ಚಪಾತಿ, ರಾಗಿಮುದ್ದೆ, ಹಾಲು, ಹಣ್ಣು ಹಂಪಲುಗಳು (ಇನ್ನು ಕುಸ್ತಿಯಾಳುಗಳೇನಾದರೂ ಮಾಂಸಾಹಾರಿಗಳಾಗಿದ್ದಲ್ಲಿ
ಒಂದು ಕೆಜಿಯಷ್ಟು ಮಟನ್ ಇಲ್ಲವೇ ಒಂದಿಡೀ ಕೋಳಿ ಅವರ ಹೊಟ್ಟೆಗೆ ಸೇರಬೇಕು). ಹೀಗೆ ಪೌಷ್ಟಿಕ ಆಹಾರವನ್ನು
ಸೇವಿಸುವುದರ ಮೂಲಕ ಕಸರತ್ತಿನಿಂದ ದಣಿದ ದೇಹಕ್ಕೆ ಶಕ್ತಿತುಂಬುತ್ತಾರೆ.
ಇನ್ನು ಈ ಗರಡಿಮನೆಯಲ್ಲಿನ ಅಭ್ಯಾಸಿಗಳು ಸ್ತ್ರೀಯರಿಂದ
ಆದಷ್ಟು ದೂರವಿರಬೇಕು. ಸದಾ ಕಟ್ಟುನಿಟ್ಟಿನ ಬ್ರಹ್ಮಚರ್ಯ ಪಾಲನೆ ಅಗತ್ಯ. ದೇಹದ ಕಟ್ಟುಮಸ್ತಿನೊಂದಿಗೆ
ಮನೋದೃಢತೆಯಿದ್ದರೆ ಮಾತ್ರ ಎದುರಾಳಿಗಳನ್ನು ಹಣಿಯಲು ಸಾಧ್ಯವೆನ್ನುವ ಸತ್ಯ ನಮ್ಮ ಹಿರಿಯರಿಗೆ ಅಂದೇ
ಮನವರಿಕೆಯಾಗಿತ್ತು. ಅದೇ ಕಾರಣ ಸ್ತ್ರೀ ಸಗದಿಂದ ದೂರವಿದ್ದು ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸಿಕೊಂಳ್ಳುವ
ಮೂಲಕ, ಸಂಯಮವನ್ನು ಪಾಲಿಸುವುದರ ಮೂಲಕ ಏಕಾಗ್ರತೆಯನ್ನು ಸಾಧಿಸುವುದು ಸಾಧ್ಯವೆಂದು ಅವರು ತಿಳಿದಿದ್ದರು.
ಅದಕ್ಕಾಗಿ ಗರಡಿಮನೆಯಲ್ಲಿ ಪುರುಷರಿಗೆ ಮಾತ್ರವೇ ಪ್ರವೇಶವಿತ್ತು. ಅಭ್ಯಾಸದ ಜಾಗದ ಸುತ್ತಲೂ ಹೊರ ಪ್ರದೇಶದ
ಜನಗಳಿಗೆ ಕಾಣದಂತೆ ದಪ್ಪನೆಯ ತಡಿಕೆಗಳು ಆವೃತವಾಗಿರುತ್ತಿದ್ದವು. (ಇಷ್ಟಾಗಿಯೂ ಅಪ್ಪಿ ತಪ್ಪಿ ಯಾರಾದರೂ
ಹೆಣ್ಣೊಬ್ಬಳು ಗರಡಿಮನೆಯೊಳಗೆ ಕಾಲಿಟ್ತಳೆಂದರೆ ಅವಳ ತಲೆಗೂದಲು ಉದುರುವುದೆಂಬ ನಂಬಿಕೆ ಇತ್ತು!)
ವಜ್ರಮುಷ್ಠಿಯ ವರಸೆ
ಸ್ನೇಹಿತರೆ, ಮೈಸೂರಿನ ದಸರಾ ಕುಸ್ತಿಯ ಬಗ್ಗೆ ಹೇಳುವಾಗ
ಅದರೊಡನೆ ಕುಸ್ತಿಯಲ್ಲೇ ಒಂದು ಭಾಗವಾಗಿರುವ ವಜ್ರಮುಷ್ಠಿ ಕಾಳಗದ ಕುರಿತಾಗಿ ಹೇಳದೆ ಹೋದರೆ ಅದು ಆಭಾಸವಾಗುತ್ತದೆ.
ವಜ್ರಮುಷ್ಠಿ ಕಾಳಗವೆಂದರೆ ಅದು ಬರಿಯ ಸೋಲು ಗೆಲುವಿನ ಸೆಣಾಸಾಟವಲ್ಲ, ಬದಲಾಗಿ ನೆತ್ತರು ಚಿಮ್ಮುವವರೆಗಿನ
ಸೆಣಸು. ಅದೇ ಇದರ ವೈಶಿಷ್ಟ್ಯ. ಹೋರಾಟಕ್ಕೆ ಕಳೆ ಏರುವುದೇ ಮಲ್ಲರುಗಳ ನೆತ್ತಿಯಿಂದ ರಕ್ತ ಚಿಮ್ಮಿದ
ಬಳಿಕ! ಅದುವೇ ಸೋಲು-ಗೆಲುವಿನ ನಿರ್ಣಾಯಕ ಘಟ್ಟ!
ಈ ವಜ್ರಮುಷ್ಠಿ ಕಾಳಗನಿರತ ಜಟ್ಟಿಗಳು ತಾವು ‘ವಜ್ರನಖ’ವೆಂಬ
ಚೂಪಾದ ಆಯುಧವನ್ನು ಮುಷ್ಠಿಗೆ ಕಟ್ಟಿಕೊಂಡು ಸೆಣಸುತ್ತಾರೆ. ಸತತ ಅಭ್ಯಾಸದಿಂದ ಹುರಿಗಟ್ಟಿದ ದೇಹದವರಾದ
ಈ ಮಲ್ಲರುಗಳು ತಲೆಯನ್ನು ಬೋಳಿಸಿಕೊಂಡಿರುತ್ತಾರೆ. ಹೂವು ಹಾಕಿ ಪೂಜಿಸಿದಂತಹಾ ಅಖಾಡದಲ್ಲಿ ಇವರುಗಳ
ಕಾದಾಟವು ಏರ್ಪಡುತ್ತದೆ.
ವಜ್ರಮುಷ್ಠಿ ಕಾಳಗಕ್ಕೆ ಬಳಸುವ ‘ವಜ್ರನಖ’ಗಳನ್ನು ಮೊದಲೆಲ್ಲಾ
ಆನೆಯ ದಂತಗಳಿಂದ ತಯಾರಿಸುತ್ತಿದ್ದರು. ಈ ವಜ್ರನಖವು ಮುಷ್ಠಿಯ ನಾಲ್ಕು ಬೆರಳುಗಳಿಗೆ ತಾಕುವಂತಿರುತ್ತಿತ್ತು.
ಕ್ರಮೇಣ ಅಂತಹಾ ನಖಗಳಾನ್ನು ಇತರೆ ಪ್ರಾಣಿಗಳ ಕೊಂಬಿನಿಂದಲೂ, ಕಬ್ಬಿಣದಿಂದಲೂ ತಯಾರಿಸಲು ಮೊದಲು ಮಾಡಿದರು.
ಇದರ ಮುಂದಿನ ತುದಿಭಾಗವು ಉಗುರಿನಂತೆ ಮೊನಚಾಗಿರುತ್ತದೆ. ಇದರ ಹೊಡೆತಕ್ಕೆ ಸಿಕ್ಕಿದ ಎದುರಾಳಿಯ ಮುಖಾದ
ಚಹರೆಯೇ ಬದಲಾಯಿಸುವಷ್ಟರ ಮಟ್ಟಿನ ತಾಖತ್ತು ಈ ನಖಕ್ಕೆ ಇದೆ.ಮರಾಠಾ ಚಕ್ರವರ್ತಿ ಶಿವಾಜಿ ಮಹಾರಜರು
ತಮ್ಮ ವೈರಿಗಳಾನ್ನು ಕೊಲ್ಲಲು ಬಳಸುತ್ತಿದ್ದ ವ್ಯಾಘ್ರ ನಖವು ಸಹ ಇದೇ ಮಾದರಿಯದಾಗಿತ್ತೆಂದು ಮರಾಠಾ
ಗ್ರಂಥಗಳಿಂದ ತಿಳಿದುಬರುತ್ತದೆ.
ಈ ವಜ್ರಮುಷ್ಠಿ ಕಾಳಗವು ಇಂದಿನ ದಿನಗಳಲ್ಲಿ ವಿಜಯದಶಮಿಯ
ದಿನ ಕೇವಲ ಸಾಂಕೇತಿಕವಾಗಿ ಹಾಗೂ ಯದುರಾಜರ ಸಾಂಪ್ರದಾಯಿಕ ವಿಧಾನಗಳಿಗೆ ಸೀಮಿತವಾಗಿದೆ.
ಕುಸ್ತಿಯ ಇಂದಿನ ಗತಿ-ಸ್ಥಿತಿ
ರಾಜರ ಕಾಲದಲ್ಲಿ ತನ್ನದೇ ವೈಭೋಗದಿಂದ ಮೆರೆದಿದ್ದ ಕುಸ್ತಿ
ಇಂದು ಅಕ್ಷರಷಃ ಮೂಲೆಗುಂಪಾಗಿದೆ ಎನ್ನಬೇಕು. ದೇಶವು ಸ್ವಾತಂತ್ರ್ಯ ಪಡೆದು ರಾಜರ ಆಡಳಿತವೆಲ್ಲ ಕೊನೆಯಾಗಿ
ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ಕುಸ್ತಿಯೂ ಸೇರಿದಂತೆ ಅಂದಿನ ಅದೆಷ್ಟೋ ಗ್ರಾಮೀಣ ಕ್ರೀಡೆಗಳಿಗೆ
ದೊರಕುತ್ತಿದ್ದ ಪ್ರೋತ್ಸಾಹವು ನಿಂತುಹೋಯಿತು. ಅಂತೆಯೇ ಇಂದಿನ ಆಧುನೀಕತೆಯ ಭರಾಟೆಯಲ್ಲಿ ಎಲ್ಲೆಲ್ಲೂ
ತಲೆಯೆತ್ತಿರುವ ಜಿಮ್, ಏರೋಬಿಕ್ಸ್ ನಂತಹಾ ಆಧುನಿಕ ತಾಣಗಳತ್ತ ಯುವಕರು ಹೆಚ್ಚೆಚ್ಚು ವಾಲುತ್ತಿದ್ದಾರೆ.
‘ಸಿಕ್ಸ್ ಪ್ಯಾಕ್’ ಎನ್ನುವ ಮೋಹಕ್ಕೆ ಒಳಗಾಗಿರುವ ಯುವಜನತೆ ಅಲ್ಲಿನ ಉಪಕರಣಗಳನ್ನು ಬಳಸಿ ಕಸರತ್ತಿನ್ನು
ನಡೆಸುತ್ತಾ ತಮ್ಮ ನೆಲದ ಸಂಪ್ರದಾಯಿಕ ಕಲೆಯಾದ ಕುಸ್ತಿಯಿಂದ ದೂರಾಗುತ್ತಿದ್ದಾರೆ. ಹೀಗಾಗಿ ಆರೋಗ್ಯದ
ಜತೆಗೆ ಶ್ರದ್ದೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಿದ್ದ ದೇಸೀ ಪರಂಪರೆಯ ಕುಸ್ತಿ ಹಾಗೂ ಗರಡಿ ಮನೆಗಳು
ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ.
ಇಂದಿನ ಯುವಜನತೆಯ ಈ ತೆರನಾದ ನಡೆಗಳಿಂದ ಹಿಂದೆಲ್ಲಾ ನೂರೈವತ್ತಕ್ಕೂ
ಹೆಚ್ಚಿದ್ದ ಗರಡಿಮನೆಗಳ ಸಂಖ್ಯೆ ಇಂದು ಅರವತ್ತಕ್ಕೆ ಬಂದು ನಿಂತಿದೆ. ವೈಜ್ಞಾನಿಕ ಆವಿಷ್ಕಾರಗಳು ನಮ್ಮ
ನಾಡಿನ ಸಾಂಸ್ಕೃತಿಕ ಪರಂಪರೆಯ ಅದೆಷ್ಟೋ ಕಲೆಗಳಾನ್ನು ಬಲಿಪಡೆದಂತೆ ಗರಡಿಮನೆಯ ಮೇಲೆಯೂ ತನ್ನ ಪ್ರಭಾವವನ್ನು
ಬೀರಿದೆ. ಇಂದಿನ ಅದೆಷ್ಟೋ ಯುವಕರಿಗೆ ಗರಡಿಮನೆಗಳ ಪರಿಚಯವೇ ಇಲ್ಲದಾಗಿದೆ. ಇನ್ನು ಗರಡಿ ಮನೆ, ಗರಡಿಯಾಳುಗಳ
ಬಗ್ಗೆ ಹಿಂದೆ ಜನರಲ್ಲಿದ್ದ ಗೌರವಯುತ ಭಾವನೆಗಳೂ ಇಂದು ನಶಿಸಿವೆ. ಇಷ್ಟಾಗಿಯೂ ಕೆಲ ಯುವಕರು ಗರಡಿಮನೆಯತ್ತ
ಬಂದು ಅಭ್ಯಾಸ ನಡೆಸುವುದಕ್ಕೆ ಪ್ರಾರಂಭಿಸಿದರೂ ಇಂದಿನ ದಿನಗಳಾಲ್ಲಿ ಮಾಮೂಲಿಯಾಗಿರುವ ಸಮಯದ ಅಭಾವ,
ಕೆಲಸದ ಒತ್ತಡದ ನೆವ ಹೇಳಿ ಅರ್ಧಕ್ಕೆ ಬಿಟ್ಟು ಹೋಗಿಬಿಡುತ್ತಾರೆ.
ಇನ್ನು ಇಂದಿನ ದಿನಗಳಲ್ಲಿ ಕುಸ್ತಿ ಮಲ್ಲರಿಗೆ ಪ್ರೋತ್ಸಾಹ
ನೀಡುವವರೇ ಇಲ್ಲವಾಗಿದೆ. ಹಿಂದೆಲ್ಲಾ ವಾರ ವಾರವೂ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ರಾಜರು,
ಪೌರ ಮಹಾಜನಗಳು ತಾವು ಇಂತಹಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಇಂದು ವರುಷಕ್ಕೊಮ್ಮೆ ಕುಸ್ತಿ
ಪಂದ್ಯಾವಳಿ ಆಯೋಜಿಸುದೂ ಇಲ್ಲವೆಂಬಂತಾಗಿದೆ. ಇಷ್ಟೇ ಅಲ್ಲ್ದೆ ಗರಡಿಯಾಳುಗಳು ಸಾಕಷ್ಟು ಪೌಷ್ಟಿಕ ಆಹಾರವನ್ನು
ಅಪೇಕ್ಷಿಸುತ್ತಾರೆ. ಲೀಟರ್ ಗಟ್ತಲೆ ಬಾದಾಮಿ, ಕೇಸರಿ ಮಿಶ್ರಿತ ಹಾಲು, ಬೆಲ್ಲ್, ರವೆಯಿಂದ ಮಾಡಿದ
ಸಿಹಿ, ಹಣ್ಣು ಹಂಪಲುಗಳು ಇವೆಲ್ಲವೂ ಒಬ್ಬ ಸಾಮಾನ್ಯ ಗರಡಿಯಾಳಿನ ನಿತ್ಯದ ಅಗತ್ಯವಾಗುತ್ತದೆ. ಆದರೆ
ಇಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಯನ್ನೇನಾದರೂ ಗಮನಿಸಿದ್ದಾರೆ ಸಾಮಾನ್ಯ ಜನರ ಊಟಕ್ಕೇ ಕಷ್ಟ
ಪಡುವ ವೇಳೆಯಲ್ಲಿ ಇನ್ನು ಗರಡಿಯಾಳುಗಳ ಗತಿಯೇನುಎನ್ನೋಣ?
ಇಷ್ಟೇ ಅಲ್ಲ ಸ್ನೇಹಿತರೆ, ಇಂದು ಈ ಗರಡಿಮನೆಗಳಿಗೆ ಬರುವ
ಅಭ್ಯಾಸಿಗಳು ಬಳಸುವ ಉಪಕರಣಗಳು, ಅವರು ಉಡುವ ಉಡುಗೆಗಳು ಸಹ ದೊರೆಯುವುದು ಕಷ್ಟ. ಕಸರತ್ತು ಅಭ್ಯಾಸಿಗಳು
ಧರಿಸುವ ಹನುಮಾನ್ ಕಾಚಾ ಅಥವಾ ಲಂಗೋಟಿಗೆ ಅದರದ್ದೇ ಆದ ಮಹತ್ವವಿದೆ. ಆದರೆ ಇಂದು ಈ ಹನುಮಾನ್ ಕಾಚಾಗಳಾನ್ನು
ಹೊಲಿದು ಕೊಡುವವರೆ ಇಲ್ಲವಾಗಿದ್ದಾರೆ. ಈಗಿನವರಿಗೆ ಇಂತಹಾ ವಿನ್ಯಾಸದ ಉಡುಪನ್ನು ಹೊಲಿಯಲೂ ಬರುವುದಿಲ್ಲವಾದ
ಕಾರಣ ದೂರ ಪ್ರದೇಶಗಳಿಂದ ಅಂತಹಾ ಉಡುಪನ್ನು ತರಬೇಕಾಗುತ್ತದೆ. ಹೀಗೆ ಪರಿಕರಗಳ ಕೊರತೆ ಇಲ್ಲವೇ ಅಲಭ್ಯತೆಗಳೂ
ಕುಸ್ತಿ ಕಲೆ ಯಂತಹಾ ಮಹತ್ವದ ಕಲೆಯೊಂದು ನೇಪಥ್ಯಕ್ಕೆ
ಸರಿಯಲು ಕಾರಣವೆಂದರೆ ತಪ್ಪಾಗಲಾರದು.
ಹೀಗೆ ಒಟ್ಟಾರೆಯಾಗಿ ಇಂದು ಭಾರತದ ಅದರಲ್ಲಿಯೂ ಮೈಸೂರಿನ
ಮಣ್ಣಿನಲ್ಲಿ ಒಂದಾಗಿದ್ದ ಕುಸ್ತಿ ಕಲೆ ಆಧುನೀಕತೆಯ ಭರಾಟೆ, ಸರ್ಕಾರ, ಜನಸಾಮಾನ್ಯರ ಪ್ರೋತ್ಸಾಹದ ಕೊರತೆಯಂತಹಾ
ನಾನಾ ಕಾರಣಗಳಿಂದ ನಿಧಾನವಾಗಿ ನಶಿಸುತ್ತಿದೆ. ಈ ರೀತಿಯಾಗಿ ಆಧುನೀಕತೆಯ ಹುಚ್ಚು ಅಲೆಗೆ ಕೊಚ್ಚಿ ಹೋದ
ಅನೇಕ ಜನಪದ ಕಲೆಗಳನ್ನು ನಾವಿಂದು ಸ್ಮರಿಸಬಹುದು. ಇಂದು ಕುಸ್ತಿಯೂ ಅದನ್ನು ಹೇಳಿಕೊಡುವ ಗರಡಿಮನೆಗಳು
ಸಹ ಅದೇ ಸಾಲಿನಲ್ಲಿದೆ. ಇನ್ನಾದರೂ ನಾವುಗಳು ಎಚ್ಚೆತ್ತುಕೊಳ್ಳದೆ ಹೋದರೆ ನಮ್ಮ ಮುಂದಿನ ತಲೆಮಾರಿನವರಿಗೆ
ಕುಸ್ತಿಯೆಂದರೆ ಕೇವಲ ಪುಸ್ತಕ, ಚಿನಿಮಾಗಳಲ್ಲಿ ನೋಡುವಂತಹಾ ದುರ್ಗತಿಯು ಬಂದರೂ ಆಶ್ಚರ್ಯವಿಲ್ಲ!
ಹೀಗಾಗಿ ದಸರೆಯು ಸಮೀಪಿಸುತ್ತಿರುವ ಈ ಶುಭ ಸಂದರ್ಭದಲ್ಲಿ
ಸರ್ಕಾರ ಹಾಗೂ ಸಾರ್ವಜನಿಕರು ಇನ್ನಾದರೂ ಇತ್ತ ಗಮನಹರಿಸಿ ನಮ್ಮ ಮಣ್ಣಿನ ಸಂಸ್ಕೃತಿಯ ಭಾಗವಾಗಿರುವ
ಕುಸ್ತಿ ಕಲೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕಿದೆ. ಕುಸ್ತಿ ಕಲಿತವರಿಗೂ ಅದನ್ನು ಹೇಳಿಕೊಡುವ ಗರಡಿಮನೆಯಂತಹಾ
ಸ್ಥಳಗಳಿಗೂ ಸಾಕಷ್ಟು ಅನುಕೂಲಗಳಾನ್ನು ಮಾಡಿಕೊಟ್ಟು ಆ ಮುಖೇನ ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ದೇಸೀ
ಕುಸ್ತಿಯನ್ನು ಕಲಿಯುವುದಕ್ಕೆ ಪ್ರೋತ್ಸಾಹ ನೀಡಬೇಕಿದೆ.
ನಮಸ್ಕಾರ.