ಗಯಾ(Gaya)
ಬಿಹಾರದಲ್ಲಿನ
ಶ್ರೀ ಕ್ಷೇತ್ರ ಗಯಾ ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿ ಯಾರಾದರೂ ತಮ್ಮ
ಪಿತೃಗಳಿಗೆ ಪಿಂಡಪ್ರಧಾನವನ್ನು ಮಾಡಿದ್ದಾದರೆ ಅಂತಹಾ ಪಿತೃಗಳು ಶಾಶ್ವತ ಮೋಕ್ಷಕ್ಕೆ ಸಲ್ಲುತ್ತಾರೆ
ಎನ್ನುವುದು ಪುರಾಣ ಕಾಲದಿಂದ ಬಂದ ನಂಬಿಕೆ. ಅಂದಿನಿಂದ ಇಂದಿನವರೆಗೆ ದಿನನಿತ್ಯವೂ ಇಲ್ಲಿರುವ ಶ್ರೀ
ವಿಷ್ಣುಪಾದ ಕ್ಷೇತ್ರದಲ್ಲಿ ಸಾವಿರಾರು ಮಂದಿ ಶ್ರಾದ್ದಾದಿ ಕರ್ಮಗಳನ್ನು ಮಾಡಿಸುತ್ತಾ ಬಂದಿದ್ದಾರೆ.
ಹೀಗೆ ಗಯಾ ಭಾರತದ ಒಂದು ಪವಿತ್ರ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ಇಂತಹಾ ಶ್ರೀ ಕ್ಷೇತ್ರ ಗಯಾದ
ಮಹಿಮೆಯನ್ನು ‘ವಾಯು ಪುರಾಣ’ ದಲ್ಲಿ ಈ ಕೆಳಕಂಡಂತೆ ವರ್ಣಿಸಲಾಗಿದೆ,
ಭಾಗ -1
ಅತ್ಯಂತ ಪ್ರಾಚೀನ ಕಾಲದಲ್ಲಿ
ಗಯಾಸುರನೆಂಬ ಒಬ್ಬ ದೈತ್ಯನಿದ್ದನು. ಇವನು ಕೊಲಾಹಲವೆಂಬ ಪರ್ವತದಲ್ಲಿ ಬ್ರಹ್ಮನನ್ನು ಕುರಿತು ತಪಸ್ಸನ್ನು
ಮಾಡಿ ಬ್ರಹ್ಮನಿಂದ ಎರಡು ವರಗಳನ್ನು ಕೇಳಿದನು. “ ನಾನು ಮೂರು ಲೋಕದಲ್ಲಿದ್ದವರಿಗೆಲ್ಲರಿಗೂ ಮಹಾ ಪವಿತ್ರನಾಗಿರಬೇಕು
ಮತ್ತು ನಾನು ಸ್ಪರ್ಶಮಾಡಿದ ವಸ್ತುಗಳು, ಜೀವಿಗಳು ಮುಕ್ತಿಗೆ ಹೋಗಲು ಯೋಗ್ಯರಾಗಬೇಕು.” ಎಂದು .ಬ್ರಹ್ಮನು
ಈ ಎರಡು ವರಗಳನ್ನು ಕೊಟ್ಟನು.ವರಗಳ ಪ್ರಕಾರ ಇವನನ್ನು ಮುಟ್ಟಿದವರೆಲ್ಲಾ ಮುಕ್ತಿ ಯೋಗ್ಯರಾಗುತ್ತಿದ್ದರು.
ಇದರ ಪರಿಣಾಮದಿಂದ ಧರ್ಮ ದಾನ ಪಿತೃ ಕಾರ್ಯ ಎಲ್ಲಾ ಕಮ್ಮಿಯಾಗುತ್ತಾ ಬಂತು . ಏಕೆಂದರೆ ಇವನನ್ನೇ ಎಲ್ಲರೂ
ಸ್ಪರ್ಶಿಸಿ ಮುಕ್ತಿಪದ ಪಡೆಯುತ್ತಿದ್ದರು.ಯಮಲೊಕ, ಸ್ವರ್ಗ ನರಕ ಎಲ್ಲವೂ ಬಿಕೋ ಎನಿಸಿದವು. ಇದರಿಂದ
ಪ್ರಕೃತಿಯ ನಿಯಮವೂ ಬದಲಾಯಿತು.ನಿತ್ಯ ಆಚರಣೆಯೂ ನಿಂತುಹೊಯಿತು.ಎಲ್ಲ ದೇವತೆಗಳು ಬ್ರಹ್ಮನ ಸಮೀಪ ಹೋಗಿ
ಪ್ರಾರ್ಥಿಸಿದರು. ದೇವತೆಗಳ ಸಹಿತ ಬ್ರಹ್ಮ ದೇವರು ಅನಾದಿಯಾದ ವಿಷ್ಣುವಿನ ಸಮೀಪಕ್ಕೆ ಹೋದರು. ವಿಷ್ಣುವನ್ನು
ಪ್ರಾರ್ಥಿಸಿದರು. ಆಗ ವಿಷ್ಣುವು ದೇವತೆಗಳ ಹಾಗೂ ಬ್ರಹ್ಮ ದೇವರ ಪ್ರಾರ್ಥನೆಯನ್ನು ಕೇಳಿ “ ನೀವು ಗಯಾಸುರನ ಸಮೀಪಕ್ಕೆ ಹೋಗಿ ಅವನ ಶರೀರವನ್ನೇ ಯಜ್ನಕ್ಕಾಗಿ
ಬೇಕೆಂದು ಕೇಳಿರಿ ” ಎಂದನು.
ಶ್ರೀ ಭಗವಾನ್ ವಿಷ್ಣುವಿನ
ಉಪಾಯವನ್ನು ಕೇಳಿದ ಬ್ರಹ್ಮ ಸಹಿತ ದೇವತೆಗಳೆಲ್ಲರೂ ಗಯಾಸುರನ ಸಮೀಪಕ್ಕೆ ಹೋದರು. ದೇವತೆಗಳಿಂದ ಸಹಿತವಾಗಿ
ಬಂದಿರುವ ಬ್ರಹ್ಮನನ್ನು ನೋಡಿ ಬಲು ಸಂತೋಷಪಟ್ಟ ಗಯಾಸುರನು ಅಘ್ಯಪಾದ್ಯಾದಿಗಳನ್ನು ಕೊಟ್ಟು - “ತಾವು ಬಂದಿರುವ ಕಾರಣವೇನು ? ನನಗೆ ಯಾವ ಅನುಗ್ರಹ ಮಾಡಲು
ಬಂದಿರುವಿರಿ ?” ಎಂದು ವಿನಮ್ರತೆಯಿಂದ ಕೇಳಿದನು.ಅದಕ್ಕೆ ಬ್ರಹ್ಮದೇವರು ಹೀಗೆ ಹೇಳಿದರು “ಹೇ ಗಯಾಸುರ
ಇಡೀ ಪ್ರಪಂಚದಲ್ಲಿ ನಾನು ಯಜ್ಞಕ್ಕೆ ಪವಿತ್ರವಾದ ಸ್ಥಳವನ್ನು ಹುಡುಕಿದೆ ಆದರೆ ನಿನ್ನ ಶರೀರದಷ್ಟು
ಪವಿತ್ರವಾದ ಸ್ಥಳ ನನಗೆ ಮತ್ತೊಂದಿಲ್ಲವೆಂದು ತಿಳಿದು ಯಜ್ಞಕ್ಕಾಗಿ ನಿನ್ನ ದೇಹವನ್ನು ಕೇಳಲು ಬಂದಿದ್ದೇನೆ
”ಎಂದರು. ಬ್ರಹ್ಮನ ಈ ಮಾತನ್ನು ಕೇಳುತ್ತಿರುವಾಗಲೇ ಗಯಾಸುರನು ನಾನೇ ಧನ್ಯ ಎಂದುಕೊಂಡು ತನ್ನ ಶರೀರವನ್ನು ಯಜ್ಞಕ್ಕಾಗಿ ಕೊಡಲು ಒಪ್ಪಿ ಉತ್ತರಕ್ಕೆ ತನ್ನ ತಲೆಯನ್ನು
ಇಟ್ಟು ದಕ್ಷಿಣಕ್ಕೆ ತನ್ನ ಕಾಲುಗಳನ್ನು ಚಾಚಿ ಮಲುಗಿದನು.ಅದು ಎಷ್ಟು ದೂರ ಹೋಯಿತೆಂದರೆ ೫ ಕ್ರೋಶದವರೆಗೆ
ಕೈ ಕಾಲುಗಳು ಹಬ್ಬಿದವು.ಒಂದು ಕ್ರೋಶದವರೆಗೆ ತಲೆ ಮಾತ್ರ ಹಬ್ಬಿತ್ತು. ಅಂದರೆ ಸುಮಾರು ೨೦ ಮೈಲಿ ದೊರದವರೆಗೆ
ಹಬ್ಬಿತ್ತು. ಆ ಶರೀರದ ಮೇಲೆಯೇ ಬ್ರಹ್ಮದೇವರು ಯಜ್ಞ
ಪ್ರಾರಂಭಿಸಿದರು. ದರ್ಬೆಗಳನ್ನು ಅಭಿಮಂತ್ರಿಸಿ ಬ್ರಾಹ್ಮಣರನ್ನು ಸೃಷ್ಟಿಸಿದರು. ಹೀಗೆ ಸೃಷ್ಟಿಸಿದ
ಬ್ರಾಹ್ಮಣರಿಗೆ ಯಜ್ಞವೇ ಮೊದಲಾದ ಕ್ರಿಯೆಗಳಿಗೆ ಅಧಿಕಾರವನ್ನು ಕೊಟ್ಟರು. ಯಜ್ಞ ಆರಂಭವಾಯಿತು. ಗಯಾಸುರನ
ಎದೆಯಮೇಲೆ ಯಜ್ಞ ಆರಂಭವಾದಾಗ ಗಯಾಸುರನು ಬಿಸಿ ತಾಳದೆ ಅಲುಗಾಡಲು ಪ್ರಾರಂಭಿಸಿದನು.ಆಗ ಬ್ರಹ್ಮನು ಯಮಧರ್ಮ
ರಾಜನಿಗೆ “ಹೇ ಧರ್ಮರಾಜ,ನಿನ್ನಲ್ಲಿರುವ ದೇವಮಯವಾದ ಶಿಲೆ ಏನಿದೆ ಅದನ್ನು ಈ ದಾನವನ ಶರೀರದ ಮೇಲೆ ಇಡು
ಆಗ ಈ ಕಂಪನ ನಿಲ್ಲುತ್ತದೆ” ಎಂದು . ಧರ್ಮ ರಾಜ ಹಾಗೆಯೇ ಮಾಡಿದಮೇಲೂ ಕಂಪನ ನಿಲ್ಲಲ್ಲಿಲ್ಲ. ಅಲ್ಲಿದ್ದ
ದೇವತೆಗಳೂ ಒಟ್ಟಾಗಿ ತಮ್ಮ ಬಲವನ್ನೆಲ್ಲಾ ಹಾಕಿ ಒತ್ತಿ
ಹಿಡಿದರು. ಆದರೂ ನಿಲ್ಲಲ್ಲಿಲ್ಲ. ಆಗ ಹೇ ವಿಷ್ಣುವೇ
ನೀನೇ ಗತಿ ಯಜ್ಞ ಮುಗಿಯಬೇಕಾದರೆ ಈ ಕಂಪನ ನಿಲ್ಲಬೇಕು ಎಂದು ಪ್ರಾರ್ಥಿಸಿದರು. ಆಗ ಆ ದೇವತೆಗಳ ಈ ದೀನ ಅವಸ್ಥೆಯನ್ನು
ಕಂಡ ಶ್ರೀ ವಿಷ್ಣುವು ತಾನೇ ಗದಾಧಾರೀ ರೂಪದಲ್ಲಿ ಧರ್ಮ ಶಿಲಾದ ಮೇಲೆ ಪ್ರಕಟನಾದನು . ಆಗ ಕಂಪನವು ಶಾಂತವಾಯಿತು. ಆಗ ಆ ಗಧಾದರನು
ಪ್ರಸನ್ನನಾಗಿ ಗಯಾಸುರನಿಗೆ ವರ ಕೇಳಲು ಹೇಳಿದನು.ಗಯಾಸುರನು ಪ್ರಾರ್ಥಿಸಿದನು. ಹೇ ದೇವ ತಮ್ಮ ಕೃಪೆಯಿಂದ
ನಾನು ಕೃತಾರ್ಥನಾಗಿದ್ದೇನೆ. ತಾವು ನನ್ನ ಮೇಲೆ ಪ್ರಸನ್ನರಾಗಿದ್ದರೆ ಈ ಗದಾಧರನ ರೂಪದಿಂದಲೇ ನನ್ನ
ಶರೀರದ ಮೇಲೆ ಯಾವಾಗಲೂ ವಿರಾಜಿಸುತ್ತಿರು, ಅಲ್ಲದೆ,
ನನ್ನನ್ನು ಪವಿತ್ರನನ್ನಾಗಿರಿಸುವುದಲ್ಲದೇ ನನ್ನ ಶರೀರದ ಮೇಲೆ ಎಲ್ಲಾ ದೇವತೆಗಳು ವಾಸವಾಗಿರಲಿ. ವಿಶೇಷವಾಗಿ
ನನ್ನ ಶರೀರದ ಮೇಲೆ ಪಿತೃ ಕಾರ್ಯಕ್ಕಾಗಿ ನನ್ನ ಶರೀರದ ಮೇಲೆ ನಿನ್ನ ಪಾದವಿಡು. ಪಿತೃ ಕಾರ್ಯಕ್ಕಾಗಿ
ಈ ನನ್ನ ಶರೀರದ ಮೇಲಿರುವ ನಿನ್ನ ಪಾದ ಚಿಹ್ನೆ ಇರುವ ಧರ್ಮ ಶಿಲಾದ ಮೇಲೆ ಯಾರು ಪಿಂಡದಾನ ಮಾಡುತ್ತಾರೋ
ಅವರ ಪಿತೃ ದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತವಾಗಲಿ ಮತ್ತು ನಿತ್ಯ ಪಿತೃ ಕಾರ್ಯ ನಡೆಯುತ್ತಿರಲಿ ಎಂದು
ವರವನ್ನು ಕೇಳಿದ್ದರಿಂದ ಇವತ್ತಿನವರೆಗೂ ಭಗವಂತ ಗದಾಧರನ ರೂಪದಿಂದ ಗಯಾ ಕ್ಷೇತ್ರದಲ್ಲಿದ್ದು ಆ ಸ್ಥಳ ವಿಷ್ಣು ಪಾದ ಕ್ಷೇತ್ರವಾಗಿದ್ದು ಪಿತೃಗಳಿಗೆ ಮುಕ್ತಿ ಕೊಡುವ ಕೃಪೆ ಮಾಡುತ್ತಿದ್ದಾನೆ.
ಬ್ರಹ್ಮದೇವನು ತಾನು ಮಾಡುತ್ತಿದ್ದ ಯಜ್ಞವನ್ನು ಪೂರ್ಣ ಮುಗಿಸಿದ ಮೇಲೆ ತನ್ನ ಮಾನಸ ಪುತ್ರರೆನಿಸಿದ್ದ
ಅರ್ಥಾತ್ ಯಜ್ಞದ ಕಾರ್ಯಕ್ಕಾಗಿ ಸೃಷ್ಟರಾದ ಬ್ರಾಹ್ಮಣರಿದ್ದರು .ಅವರನ್ನುದ್ದೇಶಿಸಿ “ ಈ ಯಜ್ಞದಲ್ಲಿ ಬಂದಿರುವ ದೇವ ದುರ್ಲಭವಾದ
ಧನ, ಧಾನ್ಯದಿಂದ ಈ ಭೂಮಿ ಅಳಿಯಲು ಅಶಕ್ಯವಾದ ಧನ ಸಂಪತ್ತಿನಿಂದ ತುಂಬಿ ತುಳುಕುತ್ತಿರುವುದು.ಹಾಲು,ಮೊಸರು
ತುಪ್ಪ ಇವುಗಳ ನದಿಯೇ ಹರಿಯುತ್ತಿದೆ. ಬಂಗಾರ ಬೆಳ್ಳಿಗಳ ಪರ್ವತವೇ ಕಾಣುತ್ತಿದೆ.ಇಂತಹ ಅಸದೃಶ ಸಂಪತ್ತು
ನಿಮ್ಮೆದುರು ಇದ್ದರೂ ಯಾವುದೇ ಯಜ್ಞ ನಿಮಿತ್ತದಿಂದ ದಾನ ತೆಗೆದುಕೊಳ್ಳಬಾರದು” ಎಂದು ಹೇಳಿ ಅಂತರ್ಧಾನರಾದರು.
ಕೆಲವು ಕಾಲದ ನಂತರ ಧರ್ಮರಾಜನು
ಒಂದು ಯಜ್ಞವನ್ನು ಪ್ರಾರಂಭಿಸಿದನು . ಯಜ್ಞದ ಪೂರ್ಣ ಫಲ ಪ್ರಾಪ್ತಿಗಾಗಿ ಬ್ರಾಹ್ಮಣರಿಗೆ ಬಂಗಾರವನ್ನು
ದಾನ ಮಾಡಿದನು. ಬ್ರಹ್ಮ ಸೃಷ್ಟರಾದ ಆ ಬ್ರಾಹ್ಮಣರು ಅಜ್ಞಾನ ಮೋಹಿತರಾಗಿ ಈ ದಾನವನ್ನು ಸ್ವೀಕರಿಸಿದರು. ಇನ್ನೊಬ್ಬರಲ್ಲಿ ದಾನಕ್ಕಾಗಿ
ಕೈ ಚಾಚಿದ್ದಕ್ಕೆ ಬ್ರಹ್ಮನು ಕೋಪಗೊಂಡು ನೀವೆಲ್ಲಾ ದರಿದ್ರರಾಗಿರಿ ಎಂದು ಅವರಿಗೆ ಶಾಪವಿತ್ತನು. ಕಾಲಾಂತರದಲ್ಲಿ
ಈ ಎಲ್ಲಾ ಬಂಗಾರದ ರಾಶಿ ಶಿಲಾ ರೂಪತಾಳಿ ಪರ್ವತಗಳಾಗಿ ಬಿದ್ದವು. ಭೂ ಮಂಡಲವೇ ಐಶ್ವರ್ಯ ಹೀನವಾಗಿ ಕಾಣುತ್ತಿತ್ತು.
ಈ ಬ್ರಹ್ಮಣರು ತಮ್ಮ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾ ಬಹು ದೈನ್ಯದಿಂದ ಬ್ರಹ್ಮನನ್ನು ಪ್ರಾರ್ಥಿಸಿದರು.
ಆಗ ಬ್ರಹ್ಮನು ಇವರ ಮೇಲೆ ದಯೆತೋರಿ ಈ ತೀರ್ಥದಲ್ಲಿ
ನಡೆಯತ್ತಕ್ಕ ಪಿತೃ ಯಜ್ಞವೇ ಮೊದಲಾದ ಕಾರ್ಯಗಳು ನೀವು
ಸಂತುಷ್ಟರಾದ ಮೇಲೆಯೇ ಪೊರ್ತಿಯಾಗುತ್ತದೆ. ಆದ್ದರಿಂದ ಇಲ್ಲಿ ಪಿತೃಕಾರ್ಯವನ್ನು ಮಾಡುವವರು ನಿಮ್ಮನ್ನು
ಗೌರವಿಸಬೇಕು. ಹಾಗೆ ಮಾಡಿದಾಗ ಮಾತ್ರ ಅವರ ಪಿತೃದೇವತೆಗಳಿಗೆ ತೃಪ್ತಿಯುಂಟಾಗುತ್ತದೆ ಎಂದು ಹೇಳಿ ಜನಗಳು
ಸಂತುಷ್ಟರಾಗಿ ನಿಮಗೆ ದಾನಮಾಡುವರು. ನೀವು ಅವರ ಪಿತೃಗಳ ಮುಕ್ತಿಗಾಗಿ ತೃಪ್ತರಾಗುವುದು . ಈ ರೀತಿ
ನಿಮಗೆ ಜೀವನ ಸಾಧನೆಯೂ ಆಗುತ್ತದೆ ಎಂದು ವರವನ್ನು ಕೊಟ್ಟು ಅಂತರ್ಧಾನ ಹೊಂದಿದರು.
ಭಾಗ -2
ಧರ್ಮರಾಜನಿಗೆ ವಿಶ್ವರೂಪ ನಾಮಕಳಾದ
ಹೆಂಡತಿಯಲ್ಲಿ ಅತ್ಯಂತ ಸುಂದರಿಯಾದ ಒಬ್ಬಳು ಮಗಳು ಹುಟ್ಟಿದಳು. ಅವಳ ಹೆಸರು “ಧರ್ಮವ್ರತಾ” ಎಂದು..
ಈ ಧರ್ಮವ್ರತೆಯ ವಿವಾಹಕ್ಕಾಗಿ ವರವನ್ನು ಹುಡುಕುತ್ತಿದ್ದನು. ಎಷ್ಟು ಹುದುಕಿದರೂ ತಕ್ಕನಾದ ವರ ಸಿಗಲಿಲ್ಲ.ಕೊನೆಗೆ
ಧರ್ಮರಾಯನು ತಾನೇ ಹೇಳಿದನು - ಹೇ ಧರ್ಮವ್ರತೆಯೇ ನಿನಗೆ ಉತ್ತಮವಾದ ವರ ದೊರೆಯಲು ನೀನು ತಪಸ್ಸನ್ನು
ಮಾಡು ಎಂದು. ತಂದೆಯ ಮಾತಿನಂತೆ ಧರ್ಮವ್ರತೆಯು ನಿರ್ಜನವಾದ ಅರಣ್ಯದಲ್ಲಿ ಘೋರ ತಪಸ್ಸನ್ನು ಆಚರಿಸುತ್ತಿದ್ದಳು.ತಪಸ್ಸಿನ ಬಲದಿಂದಾಗಿ ಅವಳ
ತೇಜಸ್ಸು ಇಮ್ಮಡಿಯಾಗಿತ್ತು. ಇವಳ ತೇಜಸ್ಸು,ಲಾವಣ್ಯ
ತಪಸ್ಸಿನಲ್ಲಿ ಏಕಾಗ್ರತೆಯನ್ನು ನೋಡಿ ಮರೀಚಿ ಋಷಿಗಳು ಮುಗ್ದರಾಗಿ ಕೇಳಿದರು. ನೀನು ಯಾರು
? ಇಂತಹ ಘೋರವಾದ ಅರಣ್ಯದಲ್ಲಿ ತಪಸ್ಸನ್ನು ಏಕೆ ಮಾದುತ್ತಿದ್ದೀಯ ? ಎಂದು.ಮಹರ್ಷಿ ಮರೀಚಿಗಳ ಶಬ್ಧಗಳನ್ನು ಕೇಳಿಸಿಕೊಂಡ ಧರ್ಮವ್ರತೆಯು ಕಣ್ಣು ತೆರೆದು ನೋಡಿ ಗೌರವದಿಂದ ನಮಸ್ಕರಿಸಿ ಹೇಳಿದಳು.ವಿಪ್ರೊತ್ತಮರೇ ನಾನು ಧರ್ಮರಾಜನ
ಪುತ್ರಿ ಧರ್ಮವ್ರತ. ನನ್ನ ತಂದೆಯ ಆಜ್ಞಾನುಸಾರ ನಾನು
ಉತ್ತಮನಾದ ಪತಿಯನ್ನು ಪಡೆಯಲು ತಪಸ್ಸನ್ನು ಆಚರಿಸುತ್ತಿರುವೆ ಎಂದು.ಈ ಮಾತನ್ನು ಕೇಳಿ ಮರೀಚಿ ಮಹರ್ಷಿಯು
ತನ್ನೊಡನೆ ವಿವಾಹ ಆಗುವಂತೆ ಹೇಳಿದರು.ಆಗ ಧರ್ಮವ್ರತೆಯು ಹೇಳಿದಳು . ತಾವು ದಯಮಾಡಿ ನನ್ನ ತಂದೆಯವರನ್ನು
ಒಪ್ಪಿಸಿರಿ ನಾನು ಸ್ವತಂತ್ರಳಲ್ಲ ಎಂದು.ಮಹರ್ಷಿ ಮರೀಚಿಗಳು ಧರ್ಮರಾಜನಿಗೆ ಹೇಳಿ ಅವನನ್ನು ಒಪ್ಪಿಸಿ
ಧರ್ಮವ್ರತೆಯನ್ನು ವಿವಾಹವಾದರು. ಅತ್ಯಂತ ಗುಣವತಿ ಶೀಲವತಿಯಾದ ಈ ಧರ್ಮವ್ರತೆಯು ಪತಿಯಾದ ಮರೀಚಿಯೊಡನೆ
ಅವರ ಆಶ್ರಮದಲ್ಲಿ ವಾಸಿಸಲಾರಂಭಿಸಿದಳು
ಒಂದು ದಿನ ಮಹರ್ಷಿ ಮರೀಚಿಗಳು ಒಂದು ಯಜ್ಞ ಕಾರ್ಯದಲ್ಲಿ ತುಂಬಾ ಬಳಲಿದವರಾಗಿ ಆಶ್ರಮಕ್ಕೆ ಬಂದರು.ಬಂದ ತಕ್ಷಣ ಶ್ರಮವಾಗಿದ್ದರಿಂದ
ಒಂದು ಕಡೆ ಹೋಗಿ ನಿದ್ರೆ ಹೋದರು. ಆಗ ಧರ್ಮವ್ರತೆಯು ಅವರ ಪಾದಸೇವಾದಲ್ಲಿ ಆಸಕ್ತಳಾದಳು. ಅದೇ ಸಮಯಕ್ಕೆ
ಮರೀಚಿಗಳ ತಂದೆಯಾದ ಬ್ರಹ್ಮದೇವರು ಅಲ್ಲಿಗೆ ಬಂದರು.ಆಗ ಪತಿ ಸೇವೆಯನ್ನು ಬಿಡಬೇಕೊ ಬಂದಿರುವ ಮಾವನವರಾದ
ಬ್ರಹ್ಮದೇವರನ್ನು ಗೌರವಿಸಬೇಕೋ ಎಂಬುದರಲ್ಲಿ ಸಂದೇಹಗ್ರಸ್ತಳಾಗಿ ವಿಚಾರಿಸುತ್ತಾ ಬಂದಿರುವ ಬ್ರಹ್ಮನನ್ನು
ಸ್ವಾಗತಿಸಿದಳು.ಇದೇ ಸಮಯಕ್ಕೆ ಸರಿಯಾಗಿ ಪತಿಯಾದ ಮರೀಚಿ ಮಹರ್ಷಿಗಳು ಕಣ್ತೆರೆದು ನೋಡಿ ಸೇವಾವನ್ನು
ಮಧ್ಯದಲ್ಲೇ ಬಿಟ್ಟುದುದಕ್ಕೆ ಕೋಪಗೊಂಡರು. ಆಗ ಬ್ರಹ್ಮನ ಉಪಚಾರದಲ್ಲಿದ್ದ ಧರ್ಮವ್ರತೆಯನ್ನು “ನೀನು
ಶಿಲೆಯಾಗು ” ಎಂದು ಶಪಿಸಿದರು.ಧರ್ಮವ್ರತೆ ಬಂದು ಬಹಳ ನಮ್ರತೆಯಿಂದ ಸಮಾದಾನ ಪಡಿಸಲು ಬಹು ಪ್ರಯತ್ನಪಟ್ಟಳು
ಮತ್ತು ನಿಮ್ಮ ತಂದೆಯೇ ಆದ ಬ್ರಹ್ಮದೇವರು ಬಂದಿದ್ದರು . ನಾನು ನಿಮ್ಮ ಸೇವೆಯನ್ನು ಬಿಟ್ಟು ಅವರ ಸೇವೆಗೆ
ತೊಡಗಿದೆ. ಮನೆಗೆ ಬಂದವರನ್ನು ಸತ್ಕರಿಸುವುದು ಗೃಹಿಣೀ ಧರ್ಮ . ಈ ವಿಷಯದಲ್ಲಿ ನನ್ನದೇನೂ ತಪ್ಪಿಲ್ಲವೆಂದು
ಪ್ರಾರ್ಥಿಸಿದಳು. ನಾನು ನಿರ್ದೋಷಿ ಎಂದಳು.ಆಶ್ರಮದಲ್ಲಿ ಬಂದಿದ್ದ ಬ್ರಹ್ಮದೇವನನ್ನು ನೋಡಿ ಮರೀಚಿ
ಋಷಿಗಳು ನಿಜವಾದ ಸಂಗತಿಯನ್ನು ತಿಳಿದು ಪೇಚಿಗೆ ಸಿಕ್ಕಿಕೊಂಡರು. ನಾನು ನಿರ್ದೊಷಿಯಾದವಳಿಗೆ ಸುಮ್ಮನೆ
ಶಾಪ ಕೊಟ್ಟೆನೆಂದು ಮರುಗಿದರು. ಆದರೇನು ಕೊಟ್ಟ ಶಾಪ ಹಿಂತೆಗೆದುಕೊಳ್ಳ ಲಾಗದು . ಎಷ್ಟು ಪ್ರಾರ್ಥಿಸಿದರೂ
ಶಾಪ ಹಿಂತೆಗೆದುಕೊಳ್ಳಲಾಗದ್ದಿದ್ದರಿಂದ ಧರ್ಮವ್ರತೆಯೂ ಪತಿಗೆ ಶಾಪ ಕೊಟ್ಟಳು. ನೀನು ಯೋಚಿಸದೇ ಶಾಪಕೊಟ್ಟಿದ್ದಕ್ಕಾಗಿ
ಮುಂದೆ ಮಹಾದೇವನು ನಿನಗೆ ಶಾಪ ಕೊಡುವನು ಎಂದು ಹೇಳಿ ಘೋರವಾದ ತಪಸ್ಸಿನಲ್ಲೇ ತೊಡಗಿದಳು. ಇವಳ ತಪಸ್ಸಿನ
ಜ್ವಾಲೆಯಿಂದ ಬೆಂದ ಇಂದ್ರಾದಿ ದೇವತೆಗಳು ಭಯ ಕಂಪಿತರಾದರು. ತಮ್ಮನ್ನು ರಕ್ಷಿಸಬೇಕೆಂದು ಶ್ರೀ ವಿಷ್ಣುವಿಗೆ
ಶರಣಾಗತರಾಗಿ ವಿಜ್ಞಾಪಿಸಿಕೊಂಡರು. “ಪ್ರಭೋ, ಧರ್ಮವ್ರತೆಯ ತಪಸ್ಸಿನ ಜ್ವಾಲೆಯಿಂದ ನಮ್ಮನ್ನು ರಕ್ಷಿಸು”
ಎಂದು. ಇವರ ಪ್ರಾರ್ಥನೆಯನ್ನು ಕೇಳಿದ ಶ್ರೀ ಮಹಾವಿಷ್ಣುವು ಧರ್ಮವ್ರತೆಯ ಸಮೀಪಕ್ಕೆ ಬಂದು ಪ್ರಕಟನಾಗಿ
ಏನು ಬೇಕೆಂದು ಕೇಳಿದನು. ತನ್ನೆದುರಿನಲ್ಲೇ ಪ್ರಕಟನಾದ ವಿಷ್ಣುವನ್ನು ಕುರಿತು ಧರ್ಮವ್ರತೆಯು ವಿಷ್ಣುವಿಗೆ ನಮಸ್ಕರಿಸಿ ಪತಿಯ ಶಾಪದಿಂದ
ಮುಕ್ತಳನ್ನಾಗಿಸು ಎಂದು ಕೇಳಿಕೊಂಡಳು.ಆಗ ವಿಷ್ಣುವು ದೇವೀ , ಪತಿಯ ಶಾಪದಿಂದ ಮುಕ್ತಳನ್ನಾಗಿ ಮಾಡುವುದು
ಕಷ್ಟ. ಆದ್ದರಿಂದ ನಿನಗೆ ಬೇಕಾದ ಬೇರೆ ವರವನ್ನು ಕೇಳಿಕೋ ಎಂದನು. ಆಗ ಧರ್ಮವ್ರತೆಯು ಹಾಗಾದರೆ ಪ್ರಭೋ
ನನ್ನನ್ನು ಯಾರು ಸ್ಪರ್ಷ ಮಾಡುತ್ತಾರೋ ಅವರು ಸರ್ವ ಶಾಪದಿಂದ ಮುಕ್ತರಾಗಬೇಕು ಮತ್ತು ಅವರಿಗೆ ಮುಕ್ತಿ
ದೊರೆಯಬೇಕು. ಎಲ್ಲಾ ದೇವತೆಗಳು ನನ್ನಲ್ಲೇ ವಾಸಮಾಡಿಕೊಂಡಿರಬೇಕು ಎಂದು ಕೇಳಿದಳು.ಅತ್ಯಂತ ದಯಾಮಯನಾದ
ಪರಮಾತ್ಮನು ಧರ್ಮವ್ರತೆ ಕೇಳಿದುದೆಲ್ಲವನ್ನು ಕೊಟ್ಟು
ಅಂತರ್ಧಾನ ಹೊಂದಿದನು
ಧರ್ಮವ್ರತೆಯು ಈ ರೀತಿ ವರ
ಪಡೆದು ಧರ್ಮಶಿಲಾ ಎಂದಾದಳು. ಗಯಾಸುರನ ಮೇಲೆ ಇರುವ ಈ ಶಿಲೆಗಳೇ ಧರ್ಮವ್ರತೆ. ಇನ್ನೋಂದು ವಿಷೇಷವೆಂದರೆ
ಗಯಾಸುರನ ಮೇಲೆ ಜನಾರ್ಧನ ರೂಪಿ ಭಗವಂತ ತಾನು ಪೂರ್ಣ ಸನ್ನಿಧಾನದಿಂದ ಇರುವೆನೆಂದು ತಿಳಿಸಲು ತನ್ನ
ಬಲ ಪಾದವನ್ನು ಗಯಾಸುರನ ದೇಹದ ಮೇಲಿಟ್ಟಿರುವನು. ಆ ಪಾದದ ಮೇಲೆಯೇ ಎಲ್ಲರೊ ಪಿತೃವಿನ ಪಿಂಡವನ್ನು ಅರ್ಪಿಸುತ್ತಾರೆ.
ಆದ್ದರಿಂದ ಪಿತೃಗಳು ಮುಕ್ತಿಹೊಂದುತ್ತಾರೆ ಅರ್ಪಿಸಿದವನಿಗೂ ಅನಂತ ಪುಣ್ಯ ಐಶ್ವರ್ಯಾದಿಗಳು ಪ್ರಾಪ್ತವಾಗುತ್ತದೆ.
ಒಂದು ಸಾರಿ ಯಮನು ಬ್ರಹ್ಮನ ಸಮೀಪಕ್ಕೆ ಹೋಗಿ ಹೇ ಬ್ರಹ್ಮದೇವ ಧರ್ಮವ್ರತೆಯ ಪ್ರಭಾವದಿಂದಾಗಿ ನಮ್ಮ
ಪಟ್ಟಣವೆಲ್ಲಾ ಬರಿದಾಗಿದೆ ಎಂದನು. ಅದಕ್ಕೆ ಬ್ರಹ್ಮದೇವರು ಧರ್ಮಶಿಲೆಯನ್ನೇ ನಿನ್ನ ಲೋಕದಲ್ಲಿಟ್ಟುಕೊ
ಎಂದನು. ಇದೇ ಧರ್ಮಶಿಲಾನೇ ಗಯಾಸುರನ ಮೇಲಿಟ್ಟಿದೆ ಆದ್ದರಿಂದ ಎಲ್ಲಾ ತೀರ್ಥಗಳು ಹಾಗೂ ಸರ್ವ ದೇವತೆಗಳ
ಸನ್ನಿಧಾನ ಮತ್ತು ಸಾಕ್ಷಾತ್ ಗದಾಧರ ರೂಪೀ ವಿಷ್ಣುವಿನ
ಸನ್ನಿಧಾನವೂ ಅಲ್ಲಿ ಇವೆ.
ಪತ್ನಿಯಾದ ಧರ್ಮವ್ರತೆಯ ಶಾಪ
ಪಡೆದು ಸಂಚರಿಸುತ್ತಿದ್ದ ಮರೀಚಿ ಮುನಿಗಳು ಒಂದು ಅರಣ್ಯವನ್ನು ಪ್ರವೇಶಿಸಿದರು.ಅಲ್ಲಿ ಪಾರ್ವತಿ ಸಹಿತ
ಶೀ ಮಹಾದೇವನು ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಏಕಾಂತದಲ್ಲಿ ಮಹಾದೇವನಿಗೆ ಆಕಸ್ಮಿಕವಾಗಿ ಮರೀಚಿಗಳ ಆಗಮನದಿಂದ ಕೋಪ ಬಂದು
“ನಿನ್ನ ಶರೀರ ಕಪ್ಪಾಗಲಿ” ಎಂದು ಶಪಿಸಿದರು.ಮಹಾದೇವನನ್ನು ಸಮಾಧಾನ ಪಡಿಸಿದ ಮೇಲೆ ,ಆ ಮಹಾದೇವನು ಗಯಾ
ದರ್ಶನದಿಂದ ನಿಮಗೆ ಮುಕ್ತಿಯಾಗುತ್ತದೆಂದು ಸೊಚಿಸಿ
ಅದೃಶ್ಯರಾದರು. ಮರೀಚಿ ಮುನಿಗಳು ಗಯಾಕ್ಕೆ ಹೋಗಿ ಅಲ್ಲಿರುವ ಗದಾಧರನ ದರ್ಶನ ವಿಷ್ಣುಪಾದದ ದರ್ಶನದಿಂದ
ಕಪ್ಪು ಕಳೆಯನ್ನು ಹೋಗಿಸಿಕೊಂಡು ಮೊದಲಿನಂತೆ ಕಾಂತಿಯುಕ್ತರಾಗಿ ವಿರಾಜಿಸುತ್ತಿದ್ದರು.ಒಂದು ಸಮಯದಲ್ಲಿ
ಮಹರ್ಷಿ ವಸಿಷ್ಟರು ಶೀ ರುದ್ರದೇವರನ್ನು ಕುರಿತು ತಪಸ್ಸು ಮಾಡಿದರು ರುದ್ರದೇವರು ಪ್ರಸನ್ನರಾಗಿ ನಿನಗೆ
ಏನುಬೇಕೆಂದು ಕೇಳಿದ್ದಕ್ಕೆ ತಾವು ಯಾವಾಗಲೂ ಗಯಾದಲ್ಲೇ ವಾಸಿಸಬೇಕೆಂದು ಕೇಳಿಕೊಂಡರು. ಆದ್ದರಿಂದ ಇಂದಿಗೂ
ಈ ಕ್ಷೇತ್ರದಲ್ಲಿ ರುದ್ರದೇವರ ಸನ್ನಿದಾನವಿದೆ.ಗದಾಧರ ದೇವರ ಸಮೀಪ ಇರುವುದು.
ಭಾಗ -3
ಹಿಂದೆ ಗದಾ ಎಂಬ ದಾನವನೊಬ್ಬನಿದ್ದ. ಭಗವಾನ್ ವಿಷ್ಣುವು ಅವನನ್ನು ಸಂಹಾರ ಮಾಡಿದ. ಮರಣಹೊಂದಿದ
ಆ ಗದಾಸುರನ ಮೂಳೆಯಿಂದ ವಿಷ್ವಕರ್ಮನು ಒಂದು ಗದಾವನ್ನು ಮಾಡಿ ಇಟ್ಟುಕೊಂಡಿದ್ದನು.ಇದೇ ಸಮಯದಲ್ಲಿ
“ಹೋತಾ” ಎಂಬ ದೈತ್ಯನೊಬ್ಬ ಒಂದು ಸಾವಿರ ವರ್ಷ ತಪಸ್ಸನ್ನುಮಾಡಿ, ನನಗೆ ಚಕ್ರ , ಶಂಖ ಮುಂತಾದವುಗಳಿಂದ
ವಧೆಯಾಗಬಾರದೆಂದು ವರವನ್ನು ಪಡೆದುಕೊಂಡು ದೇವತೆಗಳನ್ನು ಬಹುವಾಗಿ ಪೀಡಿಸುತ್ತಿದ್ದನು. ಇವನಿಂದ ಪೀಡಿತರಾದ
ದೇವತೆಗಳು ಶೀ ವಿಷ್ಣುವನ್ನು ಮೊರೆಹೊಕ್ಕರು. ಶೀ ವಿಷ್ಣುವು ದೇವತೆಗಳಿಗೆ ಹೀಗೆಂದನು ಹೇ ದೇವತೆಗಳೇ
ಇವನು ಚಕ್ರಾದಿಗಳಿಂದ ವಧ್ಯನಲ್ಲ. ಅಪರೂಪವಾದ ಅಸ್ತ್ರದಿಂದ ಅವನನ್ನು ಸಂಹರಿಸಬೇಕು. ಈ ಮಾತನ್ನು ಕೇಳಿ
ವಿಶ್ವಕರ್ಮನು ತಾನು ರಚಿಸಿ ಇಟ್ಟಿದ್ದ ಗದೆಯನ್ನು ತಂದು ಕೊಟ್ಟನು.ಅದನ್ನು ತೆಗೆದುಕೊಂಡು ಆ ಹೋತಾ
ಎಂಬ ದೈತ್ಯನನ್ನು ಸಂಹಾರಮಾಡಿದ ವಿಶ್ವಕರ್ಮನ ಪ್ರಾರ್ಥನಾನುಸಾರ ಆ ಗದಾಸುರನ ಮೂಳೆಯಿಂದಾದ ಗದಾ ಧರಿಸಿದ
ಪ್ರಯುಕ್ತ ಇವನಿಗೆ ಗದಾಧರ ಎಂಬ ಹೆಸರು ಬಂದಿದೆ,
ಸಂಹಾರದ ನಂತರ ಗದೆಯನ್ನು ವಿಶ್ವಕರ್ಮನಿಗೆ
ಕೊಟ್ಟು ತನ್ನ ನಿಜವಾದ ಪ್ರಾಚೀನವಾದ ಶುದ್ದ ಸತ್ವಭರಿತ ಗದಾ ಧರಿಸಿದನೆಂದು ಹೆಸರು ಮೊದಲಿನಿಂದಲೂ ಇದೆ
ಇಂತಹ ಗದಾಧರನೇ ಗಯಾಸುರನ ಮೇಲೆ ಇರುವನು
ಯಾವಾಗ ಗಯಾಸುರನ ಮೇಲೆ ಗದಾಧರ
ಬಂದು ನಿಂತನೋ ಆಗ ಬ್ರಹ್ಮ ದೇವರು ದೇವತೆಗಳು ಸ್ತುತಿಸಿ ಹೇ ವಿಷ್ಣುವೇ ನೀನು ಇನ್ನು ಮುಂದೆ ಇಲ್ಲೇ
ಸನ್ನಿಹಿತನಾಗಿರಬೇಕೆಂದು ಕೇಳಿಕೊಂಡನು.ಆಗ ಶೀ ವಿಷ್ಣುವು ಅವರನ್ನು ಕುರಿತು ಯಾವ ಮನುಷ್ಯನು ತನ್ನ
ಪಿತೃಗಳನ್ನು ಉದ್ದೇಶಿಸಿ ಶ್ರಾದ್ದ ಪಿಂಡಾದಿಗಳನ್ನು ಇಲ್ಲಿಗೆ ಬಂದು ಮಾಡುತ್ತಾನೋ ಅವನ ಕುಲ ಉದ್ದಾರವಾಗುತ್ತದೆ.ಏಳು
ಕುಲಗಳು ಉದ್ದಾರವಾಗುತ್ತವೆ. ಈ ಪುಣ್ಯ ಭೂಮಿ ಮೇಲೆ ಯಾವ ವ್ಯಕ್ತಿ ತಿಲಯುಕ್ತ ಪಿಂಡದಾನ ಮಾಡುತ್ತಾನೋ
ಅವನ ಪಿತೃಗಳ ಉದ್ದಾರವಾಗುತ್ತದೆ. ಕಪ್ಪು ಎಳ್ಳಿನಿಂದ ತರ್ಪಣ ಕೊಡುವುದರಿಂದ ರಾಕ್ಷಸರ ಬಾಧೆಯಾಗುವುದಿಲ್ಲ.
ಗಯಾ ಕ್ಷೇತ್ರದಲ್ಲಿ ಪಿಂಡದಾನ ಮಾಡುವುದರಿಂದ ಅಶ್ವಮೇಧ ಯಜ್ಞದ ಫಲ ಪ್ರಾಪ್ತವಾಗುತ್ತದೆ. ಪಿತೃಗಳಿಗೆ
ದೀರ್ಘಕಾಲೀನವಾದ ತೃಪ್ತಿಯಾಗುತ್ತದೆ.
ವಿಶಾಲನೆಂಬ ರಾಜನು ಸಂತಾನ
ಹೀನನಾಗಿದ್ದು ಗಯಾ ಕ್ಷೇತ್ರಕ್ಕೆ ಬಂದು ಪಿಂಡ ದಾನಾದಿಗಳನ್ನು ಮಾಡಿ ಅಲ್ಲಿರುವ ಬ್ರಾಹ್ಮಣರನ್ನು ಧನ ಹಿರಣ್ಯಾದಿಗಳಿಂದ ತೃಪ್ತಿಪಡಿಸಿದನಾದ ಪ್ರಯುಕ್ತ ಅವನಿಗೆ
ಸಂತಾನ ಪ್ರಾಪ್ತಿಯಾಯಿತು. ಇದು ಗಯಾ ಗದಾಧರನ ಮಹಿಮೆ.
ಈ ಗಯಾ ಕ್ಷೇತ್ರದಲ್ಲಿ ಸ್ನಾನ
, ದಾನ, ಜಪ , ಹೋಮ , ಪಿತೃ ಯಜ್ಞಾದಿಗಳನ್ನು ಮಾಡಿದರೆ ಪುಣ್ಯ ಬರುವುದಲ್ಲದೇ ಅಕ್ಷಯ ಲೋಕಗಳು ಪ್ರಾಪ್ತವಾಗುತ್ತದೆ