Wednesday, December 20, 2017

ಭಾರತದ ನಯಾಗರಾ - ಹೊಗೇನಕಲ್ ಜಲಪಾತ

ಕನ್ನಡ ನಾಡಿನ ಜೀವನದಿ ಕಾವೇರಿ ಮಡಿಕೇರಿಯ ತಲಕಾವೇರಿಯಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಸಾಗುತ್ತಾ ಶಿವನಸಮುದ್ರದಲ್ಲಿ ಅದ್ಭುತವಾದ ಜಲಧಾರೆಯನ್ನು ಸೃಷ್ಟಿಸಿ ಮುಂದೆ ಮೆಟ್ಟೂರು ಜಲಾಶಯ ಸೇರುವ ಮುನ್ನ ಇನ್ನೋಂದು ನಯನ ಮನೋಹರ ಜಲಪಾತವನ್ನು ಸೃಜಿಸಿದ್ದಾಳೆ. ಅದುವೇ ಹೊಗೇನಕಲ್ ಜಲಪಾತ.

ಹೊಗೇನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ. ಬೆಂಗಳೂರಿನಿಂದ 180 ಕಿಲೋಮೀಟರ್ ದೂರದಲ್ಲಿರುವ ಹೊಗೇನಕಲ್. ಇಲ್ಲಿಗೆ ತೆರಳಲು ಎರಡು ಮಾರ್ಗಗಳಿವೆ. ಒಂದು ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ, ಇನ್ನೊಂದು ಕೊಳ್ಳೇಗಾಲ-ಮಹೇಶ್ವರ ಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಂ ಬೆಟ್ಟದಿಂದ ಹೊಗೇನಕಲ್ಗೆ 47ಕಿ.ಮೀ. ದೂರ. ಸ್ವಂತ ವಾಹನವಿದ್ದರೆ ಮಾತ್ರ ಮಾರ್ಗ ಅನುಕೂಲ. ಏಕೆಂದರೆ ಮಹದೇಶ್ವರ ಬೆಟ್ಟದಿಂದ ಹೊಗೇನಕಲ್ಗೆ ರಸ್ತೆ ಇದೆ, ಸಾರಿಗೆ ಸೌಲಭ್ಯವಿಲ್ಲ. ಆದರೂ ಹೊಗೇನಕಲ್ ನಿಜವಾದ ಸೌಂದರ್ಯವನ್ನು ಸವಿಯಬೇಕಾದರೆ ಕರ್ನಾಟಕದ ಕಡೆಯಿಂದಲೇ ಪ್ರವೇಶಿಸಬೇಕು. ಮಲೆಮಹೇಶ್ವರ ಬೆಟ್ಟದಿಂದ ಗೋಪಿನಾಥಂ ಮಾರ್ಗವಾಗಿ ಹೊಗೇನಕಲ್ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದ ಗಡಿಯಲ್ಲಿ ಮಾರು ಕೊಟ್ಟಾಯ್ ಎಂಬ ಸ್ಥಳ ಸಿಗುತ್ತದೆ. ಅಲ್ಲಿಂದ ಜಲಪಾತದ ಬಳಿಗೆ ಹೋಗಲು ಒಂದು ಕಿ.ಮೀ. ದೂರ ನದಿ ಹರಿಯುವ ದಿಕ್ಕಿಗೆ ವಿರುದ್ಧವಾಗಿ ದೋಣಿಯಲ್ಲಿ ಪ್ರಯಾಣ ಮಾಡಬೇಕು.





 'ಹೊಗೇನಕಲ್' ಎನ್ನುವುದು ಅಪ್ಪಟ ಕನ್ನಡ ಹೆಸರು. ದೊಡ್ಡದಾದ ಬಂಡೆಗಳನ್ನು ಸೀಳಿಕೊಂಡು ಹರಿಯುವ ಕಾವೇರಿ ಗಗನಕ್ಕೆ ಕೇಳುವಂತೆ ಆರ್ಭಟಿಸಿ ಹರಿಯುತ್ತಾಳೆಇಲ್ಲಿ ಕಾವೇರಿಯ ಆರ್ಭಟಕ್ಕೆ ನೀರು ಹೊಗೆ ಹೊಗೆಯಾಗಿ ಮೇಲೇಳುವುದರಿಂದ ಇದನ್ನು ಹೊಗೇನಕಲ್ಎಂದು ಕರೆಯಲಾಗುತ್ತದೆ.

ದೊಡ್ಡದಾದ ಕಡಿದಾದ ಬಂಡೆಗಳ ನಡುವೆ ಧುಮ್ಮಿಕ್ಕುವ ಜಲಧಾರೆ ಇಲ್ಲಿ ಹೊಗೆ ಹೊಗೆಯಾಗಿ ಎತ್ತರೆತ್ತರಕ್ಕೆ ಧುಮುಕುವ ಸೊಬಗನ್ನು ಸವಿಯಲು ಎರಡು ಕಣ್ಣು ಸಾಲದು. ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಜಲಪಾತ ಎಂದರೆ ಅದು ನಯಾಗರ ಎಂದು ನಂಬುವುದಾದರೆ ಹೊಗೇನಕಲ್ಜಲಪಾತವನ್ನು ಭಾರತದ ನಯಾಗರ ಎಂದು ಧಾರಾಳವಾಗಿ ಕರೆಯಬಹುದು.

ಕಾವೇರಿಯ ನೀರು ಬಂಡೆಗೆ ತಾಗಿ ಮುತ್ತು ಚೆಲ್ಲಿದಂತೆ ಚದುರಿ ಬೀಳುತ್ತಿರುವ ಅಪೂರ್ವ ನೋಟ ಅದು ವರ್ಣನಾತೀತ. ಹೊಗೇನಕಲ್ನಲ್ಲಿ ಕಾವೇರಿ ಎರಡು ಶಾಖೆಗಳಾಗಿ, ಪ್ರತಿ ಶಾಖೆಯೂ ಮತ್ತೆ ಹಲವು ಕವಲುಗಳಾಗಿ ಜಲಧಾರೆಯನ್ನು ಸೃಷ್ಟಿಸಿದೆ. ಕೆಲವೆಡೆ ಜಲಧಾರೆಗಳು ಬಂಡೆಗಳ ಮೇಲಿನಿಂದ ಹಂತಹಂತವಾಗಿ ಕೆಳಗಿಳಿದು ನೋಡುಗರ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಬೆಳಕಿನ ಪ್ರಖರ ಕಿರಣಗಲು ಬಂಡೆಗಳ ಮೇಲೆ ಬಿದ್ದು ಚದುರುವ ನೀರಿನ ಹನಿಗಳ ಜೊತೆ ಬೆರೆತು ಬಣ್ಣದ ಚಿತ್ತಾರ ಮೂಡಿಸುತ್ತದೆ. ಇಲ್ಲಿ ಜಲಪಾತವನ್ನು ಎತ್ತರದಲ್ಲಿ ನಿಂತು ವೀಕ್ಷಿಸಲು ತೂಗು ಸೇತುವೆ ಇದೆ.





ಆಯಿಲ್ ಮಸಾಜ್ : ಹೊಗೇನಕಲ್ ಜಲಪಾತದಷ್ಟೇ ಅಲ್ಲಿನ ಮಸಾಜ್‌ನ ಕಾರಣದಿಂದಲೂ ಹೆಸರಾಗಿದೆ. ಇಲ್ಲಿನ ಸ್ಥಳೀಯರು ತಲೆ ಮತ್ತು ಮೈ ಕೈಗಳಿಗೆ ಎಣ್ಣೆ ತಿಕ್ಕಿ ಮಸಾಜ್ ಮಾಡುತ್ತಾರೆ. ಹೀಗೆ ಮಸಾಜ್‌ ಮಾಡಿಸಿಕೊಂಡು ಇಲ್ಲಿನ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಇಲ್ಲಿನ ಬಂಡೆಗಳ ಮೇಲಿನಿಂದ ಬೀಳುವ ನೀರಿಗೆ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಹೊಗೇನಕಲ್‌ಗೆ ಬಂದವರು ಇಡೀ ದೇಹವನ್ನು ಮಸಾಜ್‌ಗೆ ಒಡ್ಡಿ ನೀರಧಾರೆಯಲ್ಲಿ ಸ್ನಾನ ಮಾಡುವುದು ಸಾಮಾನ್ಯ.

ತೆಪ್ಪ ಸವಾರಿ:  :ಬೇರೆಲ್ಲಾ ಜಲಪಾತಗಳೂ ಮಳೆಗಾಲದಲ್ಲಿ ನದಿ ನೀರು ಹೆಚ್ಚಾದಾಗ ವೀಕ್ಷಿಸಲು ಚೆಂದ. ಆದರೆ ಹೊಗೇನಕಲ್ ಜಲಪಾತ ಮಾತ್ರ ಬೇಸಿಗೆಯಲ್ಲಿ ನದಿ ನೀರು ಕಡಿಮೆಯಾದಾಗ ನೋಡಲು ಸುಂದರ. ಏಕೆಂದರೆ ಮೆಟ್ಟೂರು ಜಲಾಶಯದ ಹಿನ್ನೀರು ಹೊಗೇನಕಲ್‌ವರೆಗೂ ಇದ್ದು, ಬೇಸಿಗೆಯಲ್ಲಿ ಜಲಾಶಯದಿಂದ ನೀರು ತೆರೆದು ಬಿಟ್ಟಾಗ ಹೊಗೇನಕಲ್‌ನಲ್ಲಿ ಹಿನ್ನೀರಿನ ಮಟ್ಟ ಕಡಿಮೆಯಾಗಿ ಜಲಪಾತಗಳು ಇನ್ನೂ ಆಳಕ್ಕೆ ಧುಮುಕಿ ಅವುಗಳ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಈ ಸಮಯದಲ್ಲಿ ಇಲ್ಲಿ ತೆಪ್ಪದ ಮೇಲೆ ಸವಾರಿ ಮಾಡಿ. ಇಡೀ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಹೊಗೇನಕಲ್ ನಲ್ಲಿ  ತಮಿಳುನಾಡಿನಿಂದ ಸುಮಾರು 150 ತೆಪ್ಪಗಳಿದ್ದರೆ ಕರ್ನಾಟಕದಿಂದ ಸುಮಾರು 50 ತೆಪ್ಪಗಳಿವೆ. ನಾಲ್ಕು ಜನರ ತೆಪ್ಪ ಸವಾರಿಗೆ 750 ರೂ, ಶುಲ್ಕವಿದೆ. ಶುಲ್ಕ ಪಾವತಿಸಿ ತೆಪ್ಪದಲ್ಲಿ ಕುಳಿತರೆ ಸುಮಾರು ಎರಡು ಗಂಟೆಗಳ ಕಾಲ ನಮ್ಮನ್ನು ಸುತ್ತಾಡಿಸುವುದಲ್ಲದೆ ಜಲಪಾತದ ಅಂಚಿನವರೆಗೂ ಕರೆದೊಯ್ಯುತ್ತಾರೆ.

ಊಟ, ವಸತಿ: ಹೊಗೇನಕಲ್‌ನ ತಮಿಳುನಾಡು ಭಾಗದಲ್ಲಿ ಅಲ್ಲಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಆದರೆ ನಮ್ಮ ಕಡೆ ಮೂಲಸೌಕರ್ಯದ ಕೊರತೆ ಇದೆ. ನಿರ್ಮಾಣವಾಗಿರುವ ವೀಕ್ಷಣಾ ಗೋಪುರ, ತಂಗುದಾಣಗಳ ನಿರ್ವಹಣೆಯೂ ಹೇಳಿಕೊಳ್ಳುವ ಹಾಗೆ ಇಲ್ಲ. ಇನ್ನು ರಾತ್ರಿ ಉಳಿದುಕೊಳ್ಳಲು ಇಲ್ಲಿ ಹೋಟೆಲ್, ಲಾಡ್ಜ್‌ಗಳು ಬೇಕಾದಷ್ಟಿವೆ. ಸಾರಿಗೆ ವ್ಯವಸ್ಥೆ, ಆಸ್ಪತ್ರೆ, ಅಂಚೆಕಚೇರಿ, ದೂರವಾಣಿ, ಬ್ಯಾಂಕ್, ತಮಿಳುನಾಡು ಗೆಸ್ಟ್ ಹೌಸ್, ಯೂತ್ ಹಾಸ್ಟೆಲ್ ಸೇರಿದಂತೆ ಎಲ್ಲಾ ಸೇವೆಗಳು ಇಲ್ಲಿ ಲಭ್ಯ. ಮೀನು ಮತ್ತು ಮಾಂಸ ಪ್ರಿಯರಿಗೆ ಇಲ್ಲಿ ತಾಜಾ ಮೀನು ಮತ್ತು ಮೊಟ್ಟೆ ಖಾದ್ಯಗಳು ಲಭ್ಯವಿದೆ. ಆದರೆ ಸುತ್ತಲಿನ ಪರಿಸರದಲ್ಲಿ ಎಲ್ಲಿಯೂ ಉತ್ತಮ ಸಸ್ಯಾಹಾರಿ ಹೋಟೆಲ್ ಇರುವುದಿಲ್ಲ. ಹೀಗಾಗಿ ಹೋಗುವಾಗ ಊಟ ಕಟ್ಟಿಕೊಂಡು ಹೋದರೆ ಒಳ್ಳೆಯದು.

ಇನ್ನು ಹೇಳಬೇಕೆಂದರೆ ಹೊಗೇನಕಲ್‌ನಲ್ಲಿ ನೀರಿನ ಸೆಳೆತ ಹಾಗೂ ಹೆಬ್ಬಂಡೆಗಳ ಕಾರಣ ನೀರಿಗಿಳಿಯುವುದು ಅಪಾಯ.. ನದಿಯಲ್ಲಿ ಈಜುವ ಸಾಹಸ ಮಾಡುವುದಕ್ಕಿಂತ ಕವಲೊಡೆದಿರುವ ಸಣ್ಣ ಸಣ್ಣ ಝರಿಗಳಲ್ಲಿ ನೀರಾಟವಾಡುವುದು ಲೇಸು.
ಒಟ್ಟಾರೆ ಬೆಂಗಳೂರಿನಿಂದ  ಒಂದು ದಿನದಲ್ಲಿ ಹೋಗಿ ಬರಬಹುದಾದ ಪ್ರವಾಸಿತಾಣಗಳಲ್ಲಿ ಹೊಗೇನಕಲ್‌ ಸಹ ಒಂದಾಗಿದ್ದು ವೀಕೆಂಡ್ ಗಳಲ್ಲಿ ಕುಟುಂಬ, ಸ್ನೇಹಿತರೆಲ್ಲರೂ ಸೇರಿ ಹೊರಟರೆ ಪ್ರಕೃತಿಯ ಸೊಬಗನ್ನು ಸವ್ಯುವುದರೊಡನೆ ಉತ್ತಮ ಪ್ರವಾಸದ ಆನಂದವನ್ನು ಸವಿಯಬಹುದಾಗಿದೆ.

***
ಸಂಕ್ಷಿಪ್ತ ಮಾಹಿತಿ

ಬೆಂಗಳೂರಿನಿಂದ 180 ಕಿಮೀ ದೂರದಲ್ಲಿರುವ ಹೊಗೇನಕಲ್ ತಮಿಳು ನಾಡಿನ ಧರ್ಮಪುರಿ ಜಿಲ್ಲೆಗೆ ಸೇರಿದೆ. ಪೆನ್ನಾಗ್ರಾಮ ತಾಲೂಕು ಕೇಂದ್ರದಿಂದ 16 ಕಿಮೀ ದೂರದಲ್ಲಿರುವ ಇಲ್ಲಿಗೆ ತೆರಳಲು ಧರ್ಮಪುರಿಯಿಂದ ಸಾಕಷ್ಟು ಬಸ್ ವ್ಯವಸ್ಥೆ ಇದೆ. ಪ್ರತಿದಿನ ಬೆಳೆಗ್ಗೆ  ಬೆಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ಎರ್ನಾಕುಲಂ ಎಕ್ಸ್ ಪ್ರೆಸ್ ರೈಲಿನಲ್ಲಿ ಧರ್ಮಪುರಿಗೆ ತಲುಪಿ ಅಲ್ಲಿಂದ ಬಸ್ ಮೂಲಕ ಹೊಗೇನಕಲ್ ತಲುಪಬಹುದು.