ಶಿರಡಿ (Shirdi)
ಭಾಗ- 2
"ಓಂ ಸಾಯಿರಾಂ" ಇಂದು (ಶುಕ್ರವಾರ 19 ಅಕ್ಟೋಬರ್ 2018) ವಿಜಯದಶಮಿ ದಿನದಂದು ಶಿರಡಿಯ ಮಹಾಸಂತ ಶ್ರೀ ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವನ ಸಂದೇಶಳ ಸಾರುವ ಶಿರಡಿ ಕ್ಷೇತ್ರ ಪರಿಚಯ ಜತೆಗೆ ಸಾಯಿಬಾಬಾ ಜೀವನ, ಬೋಧನೆ, ಪವಾಡಗಳ ಸಂಕ್ಷಿಪ್ತ ನೋಟವನ್ನು "ನಮ್ಮಲ್ಲಿನ ಸ್ಥಳ ಪುರಾಣಗಳು" ಮಾಲಿಕೆಯಲ್ಲಿ ಎರಡು ಭಾಗವಾಗಿ ಬರೆಯುತ್ತಿದ್ದೇನೆ.
ಚಿಕ್ಕ ಗ್ರಾಮವನ್ನು ಜಗತ್ರಸಿದ್ಧ ಯಾತ್ರಾಸ್ಥಳವನ್ನಾಗಿಸಿದ ಮಹಾಸಂತ
ಸಾಯ್ಒಂದು ಕಾಲದಲ್ಲಿ ಹಳೆಯ ಹಾಗು ಚಿಕ್ಕದಾದ ಗ್ರಾಮವಾಗಿತ್ತು. ಈ ದಿನ ಆ ಸ್ಥಳವು ಕಿಕ್ಕಿರಿದ ಜನಸಂದಣಿಯಿಂದ ಕೂಡಿರುವ
ಪವಿತ್ರವಾದ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಸಾಯಿಬಾಬಾ ಅವರ ಜೀವನ ಕಾಲದಲ್ಲಿ 50 ವರ್ಷಕ್ಕಿಂತ ಹೆಚ್ಚಾಗಿ ನಿವಾಸಿಸಿ
ಒಂದು ದೊಡ್ಡಇಬಾಬಾ ಒಬ್ಬ ಪವಾಡ ಪುರುಷ ಎನ್ನುವುದಕ್ಕಿಂತ ಅವರೊಬ್ಬ ಯೋಗಿ, ಮಹಾಗುರು, ಸಂತರೆಂದು ಹೇಳಬಹುದು.
ಯಾತ್ರಾ ಸ್ಥಳವಾಗಿ ಪರಿರ್ವತನೆ ಮಾಡಿದರು.
ಮಹಾಯೋಗಿಯು 1918 ರಲ್ಲಿ ಸಮಾಧಿಯಾದರೂ, ಅಂದಿನಿಂದ ಆತನ ಸಮಾಧಿಯನ್ನು ನಿತ್ಯವೂ ಲಕ್ಷಾದಿ ಮಂದಿ ಭಕ್ತರು
ದರ್ಶನವನ್ನು ಪಡೆಯುತ್ತಾರೆ. ಬಾಲ ಯೋಗಿಯಾಗಿ ಬಾಬಾ ಶಿರಿಡಿಯನ್ನು ಸೇರಿಕೊಂಡ ಪ್ರದೇಶವನ್ನು "ಗುರುಸ್ಥಾನ" ಎಂದು ಕೂಡ
ಕರೆಯುತ್ತಾರೆ. ಇಂದು ಅಲ್ಲಿ ಅದ್ಭುತವಾದ ದೇವಾಲಯವನ್ನು ಹಾಗು ಸ್ಮಾರಕವನ್ನು ಸ್ಥಾಪನೆ ಮಾಡಿದ್ದಾರೆ.
ಇನ್ನು ಶಿರಡಿಗೆ ಆಗಮಿಸುವವರಿಗೆ ಖಂಡೋಬಾ ದೇವಾಲಯ, ಸಾಕೋರಿ ಆಶ್ರಮ, ಶನಿ ದೇವಾಲಯ, ಚಂಗ್ ದೇವ್ ಮಹಾರಾಜ್
ಸಮಾಧಿ, ನರಸಿಂಹ ದೇವಾಲಯಗಳು ಆಕರ್ಷಣೆಯ ಕೇಂದ್ರವಾಗುತ್ತದೆ. ಬಾಬಾ ಅವರು ತಮ್ಮ ಸ್ವ ಹಸ್ತದಿಂದ ಬೆಳಸಿ ಪೋಷಿಸಿದ
ತೋಟವು ಕೂಡ ಇದೆ. ಬಾಬಾ ನಿತ್ಯವು ಈ ವನವನ್ನು ದರ್ಶನ ಮಾಡಿ ನಿಂಬೆ ಮರದ ಕೆಳಗೆ ವಿಶ್ರಮಿಸುತ್ತಿದ್ದರು ಎನ್ನುವುದು
ವಿಶೇಷ.
ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಲ್ಲಿ ಸುಂದರವಾದ ಬಾಬಾ ಅವರ ವಿಗ್ರಹವಿದ್ದು ಗುರುವಾರದಂದು ಭಾರಿ ಸಂಖ್ಯೆಯಲ್ಲಿಯೇ ಜನರು ಸೇರಿರುತ್ತಾರೆ. ಆ ದಿನವು ಪ್ರತ್ಯೇಕವಾದ ಪೂಜೆ, ಬಾಬಾ ವಿಗ್ರಹದ ಪ್ರತ್ಯೇಕವಾದ ದರ್ಶನವಿರುತ್ತದೆ. ಮಂದಿರದಲ್ಲಿ ಬೆಳಗಿನ ಜಾವದ 5 ಗಂಟೆಗೆ ಬಾಬಾಗೆ ಕಾಕಡ ಹಾರತಿಯನ್ನು ಮಾಡುತ್ತಾರೆ. ರಾತ್ರಿಯ ಸಮಯದಲ್ಲಿ ಪ್ರಾರ್ಥನೆಯ ನಂತರ 11 ಗಂಟೆಗೆ ದೇವಾಲಯವನ್ನು ಮುಚ್ಚುತ್ತಾರೆ.
ಮಂದಿರದಲ್ಲಿ ಸುಮಾರು 600 ಮಂದಿ ಭಕ್ತರಿಗೆ ಸರಿಹೋಗುವಂತಹ ಬೃಹತ್ ಹಾಲ್ ಕೂಡ ಇದೆ. ಮೊದಲನೇ ಅಂತಸ್ತಿನಲ್ಲಿ ಬಾಬಾರ ಜೀವನದಲ್ಲಿನ ಮುಖ್ಯವಾದ ಘಟ್ಟಗಳನ್ನು ಕಾಣುವ ಚಿತ್ರಗಳು ಇವೆ. ಈ ಪವಿತ್ರವಾದ ಸ್ಥಳದಲ್ಲಿನ ಅಂಗಡಿಗಳಲ್ಲಿಯೂ ಬಾಬಾ ಅವರ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳು, ಚಿತ್ರಗಳನ್ನು ಮಾರಾಟ ಮಾಡುತ್ತಾರೆ.
ಸಾಯಿಬಾಬಾ ವಿಗ್ರಹ ಸ್ಥಾಪನೆ
ಗುಜರಾತ್‍ನಲ್ಲಿ 1889 ರಲ್ಲಿ ಜನ್ಮಿಸಿದ ಸ್ವಾಮಿ ಸಾಯಿಚರಣ್ ಮೊಟ್ಟಮೊದಲ ಬಾರಿಗೆ ಸಾಯಿಬಾಬಾ ಅವರನ್ನು ತನ್ನ ತಂದೆಯ ಜೊತೆ ಸೇರಿ ಮೊಟ್ಟ ಮೊದಲ ಬಾರಿಗೆ ಅಂದರೆ 1911 ರಲ್ಲಿ ಬಾಬಾರನ್ನು ಆನಂದ ದರ್ಶನ ಮಾಡಿಕೊಂಡನು.
ಕುಷ್ಠರೋಗಿಗಳನ್ನು ನಯ ಮಾಡುತ್ತಿದ್ದ ಬಾಬಾ ಅವರನ್ನು ಕಂಡು ಆಶ್ಚರ್ಯಗೊಂಡ ಆನಂದನು ತನ್ನ ತಂದೆಯವರ ಅನುಮತಿಯ ಮೇರೆಗೆ ಸಾಷ್ಟಾಂಗ ಸಮಸ್ಕಾರವನ್ನು ಮಾಡಿದ. ಆಗ ಬಾಬಾ ಅವರು ಆನಂದನಿಗೆ ದೇವರು ಇದ್ದಾನೆಯೋ, ಇಲ್ಲವೋ ಎಂದು ಎಂದಿಗೂ ಅನುಮಾನ ಬೇಡ ಎಂದರು. ತದನಂತರ 1912 ರಲ್ಲಿ ಗುರು ಪೌರ್ಣಮಿಯಂದು ಬಾಬಾ ಆನಂದನ ಕನಸ್ಸಿನಲ್ಲಿ ಬಂದು "ನೀನೆಂದರೆ ನನಗೆ ಇಷ್ಟ" ಎಂದು ಹೇಳಿದರು. ಅಂದಿನಿಂದ ಆನಂದನು ಆ ಶಿರಿಡಿಯಲ್ಲಿಯೇ ಉಳಿದುಕೊಂಡನು. ಬಾಬಾ ಭಕ್ತರಿಂದ ದಕ್ಷಿಣೆಯನ್ನು ತೆಗೆದುಕೊಳ್ಳುವುದನ್ನು ಆನಂದನು ಹಲವಾರು ಬಾರಿ ಕಂಡಿದ್ದನು. ಬಾಬಾ ಅವರ ಜೀವಿತಾವಧಿಯಲ್ಲಿ ಹಲವಾರು ಅದ್ಭುತಗಳು, ಭೋದನೆಗಳನ್ನು ಸಮೀಪದಲ್ಲಿಯೇ ಇದ್ದು ಪುಸ್ತಕಗಳನ್ನು ರಚನೆ ಮಾಡಬೇಕು ಎಂದು ಅಂದುಕೊಂಡನು.
ಬಾಬಾ ಸಮಾಧಿಯಾದ ನಂತರ ಸಾಯಿ ಸಂಸ್ಥಾನದಲ್ಲಿ ಕಾರ್ಯಕಲಾಪಗಳಲ್ಲಿ ಆನಂದನು ಪಾಲ್ಗೊಳ್ಳುತ್ತಿದ್ದನು. 1945 ರಲ್ಲಿ ಶಿರಿಡಿ ಸಮಾಧಿ ಮಂದಿರದಲ್ಲಿ ಬಾಬಾರವನ್ನು ಅಮೃತ ಶಿಲೆಯಲ್ಲಿ ವಿಗ್ರಹವನ್ನು ಪ್ರತಿಷ್ಟಾನೆ ಮಾಡಿದರು. ಆನಂದ್ 1963 ರಲ್ಲಿ ಸನ್ಯಾಸವನ್ನು ಸ್ವೀಕಾರ ಮಾಡಿ ಸ್ವಾಮಿಜೀಯಾಗಿ ಮಾರ್ಪಾಟಾದರು.
ಶಿರಡಿ ಸಾಯಿಬಾಬಾರವದರ ಬೋಧನೆಗಳು
ಸಾಯಿ ಬಾಬಾ ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆಗಳನ್ನು, ಜಾತಿ ವಾದಗಳನ್ನು ವಿರೋಧಿಸುತ್ತಿದ್ದರು. ಯಾವುದೇ
ಒಂದು ಧರ್ಮಕ್ಕೆ ಕಟ್ಟು ಬೀಳದೆ ಧರ್ಮಾತೀತವಾದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಮುಸ್ಲೀಮರ ರಂಜಾನ್ ಹಬ್ಬವನ್ನು, ಹಿಂದೂಗಳ
ರಾಮ ನವಮಿಯನ್ನು ಸಾಂಗವಾಗಿ ಆಚರಿಸುತ್ತಿದ್ದರು. ಯಾವಾಗಲು ತಮ್ಮ ಅನುಯಾಯಿಗಳಿಗೆ ಸರಳ ಜೀವನವನ್ನೇ ನಡೆಸುವಂತೆ
ಹಾಗು ತಮಗೆ ಇದ್ದುದರಲ್ಲಿಯೇ ದಾನ ಮಾಡಿ ಹಂಚಿ ತಿನ್ನುವ ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಕರೆ ಕೊಟ್ಟಿದ್ದರು.
ಸಾಯಿ ಬಾಬಾ ಅಭಯ ವಾಕ್ಯಗಳು
ಶಿರಡಿಯ ಪವಿತ್ರ ಮಣ್ಣಿನ ಮೇಲೆ ಪಾದವಿರಿಸಿದ ಯಾರಿಗೆ ಆಗಲಿ ಕೆಟ್ಟದ್ದು ಎಂಬುದು ಘಟಿಸಲಾರದು.
ನನ್ನ ಸಮಾಧಿಗೆ ಭೇಟಿ ಕೊಡುವರಿಗೆ ಕಷ್ಟ ಮತ್ತು ಯಾತನೆಗಳು ದೂರಾಗುವವು.
ನಾನು ಭೌತಿಕವಾಗಿ ಇಲ್ಲವಾದರೂ, ನನ್ನ ಸಮಾಧಿಯಿಂದಲೇ ಸದಾ ಭಕ್ತರನ್ನು ರಕ್ಷಿಸುತ್ತೇನೆ.
ನನ್ನನ್ನು ನಂಬಿ, ನಿಮ್ಮ ಎಲ್ಲ ಪ್ರಾರ್ಥನೆಗಳಿಗೂ ನನ್ನಲ್ಲಿ ಉತ್ತರಗಳಿವೆ.
ನನ್ನ ಆತ್ಮವು ಅಮರವಾಗಿದೆ. ಇದನ್ನು ಮೊದಲು ತಿಳಿದುಕೊಳ್ಳಿ.
ನನ್ನನ್ನು ನಂಬಿ ಆರಾಧಿಸಿದ ಭಕ್ತರ ಮನೆಯಲ್ಲಿ ಕಷ್ಟ ಎಂಬ ಪದವೇ ಇರಲಾರದು.
ನನಗೆ ಯಾರು ಸಂಪೂರ್ಣವಾಗಿ ಶರಣಾಗುವರೋ ಅವರಿಗೆ ನಾನು ಸಂಪೂರ್ಣ ಅಧೀನನಾಗಿರುತ್ತೇನೆ.
ಎಲ್ಲರ ಭಾರವನ್ನು ನಾನು ತೆಗೆದುಕೊಳ್ಳುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಬೇಡ.
ಎಲ್ಲ ಸಹಾಯವೂ ಇಲ್ಲೇ ಸಿಗುತ್ತದೆ. ಇದನ್ನು ತಿಳಿಯಿರಿ ಯಾರು ಯಾರು ಹೇಗೆ ಬೇಡುತ್ತಾರೊ ಹಾಗೆ ಫಲವು ದೊರೆಯುತ್ತದೆ.
ಯಾರಾದರೂ ನನಗೆ ಶರಣು ಬಂದು, ಅವರ ಜೀವನ ಪ್ರಯೋಜನವಾಗದೆ ಇದ್ದಾರೆ ತೋರಿಸಿ.
ಸಾಯಿ ಸಾಯಿ ಎಂದವನೇ ಪುಣ್ಯವಂತನು, ನನ್ನ ಮೇಲೆ ಅನನ್ಯ ವಿಶ್ವಾಸ ಶ್ರದ್ಧೆ ಇಟ್ಟು ಸಾಯಿ ಸಾಯಿ ಎಂದವನೇ ಧನ್ಯನು.
ಪವಾಡಗಳು
ಸಾಯಿ ಬಾಬಾ ಅನುಯಾಯಿಗಳು ಹಾಗು ಭಕ್ತರು ಬಾಬಾರ ಹಲವು ಪವಾಡಗಳನ್ನು ನೋಡಿದ್ದಾಗಿ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.
ಒಂದೇ ಸಮಯದಲ್ಲಿ ಎರಡು ಸ್ಥಳದಲ್ಲಿರುವುದು, ನಿರಾಧಾರವಾಗಿ ಗಾಳಿಯಲ್ಲಿ ತೇಲುವುದು, ಮುಖ ನೋಡಿದ ತಕ್ಷಣ
ಮನಸ್ಸಿನಲ್ಲಿರುವುದನ್ನು ಹೇಳುವುದು, ದೇಹದಿಂದ ಆತ್ಮದ ಬೇರ್ಪಡಿಸುವಿಕೆ, ಯಮುನಾ ನದಿಯ ಸೃಷ್ಟಿ, ಸಮಾಧಿ ಸ್ಥಿತಿಗೆ
ತಲುಪುವುದು, ರೋಗಿಗಳನ್ನು ಕ್ಷಣಾರ್ಧದಲ್ಲಿ ಗುಣಮುಕ್ತರನ್ನಾಗಿ ಮಾಡುವುದು, ಕರುಳು ಮತ್ತಿತರ ಹೊಟ್ಟೆಯ ಭಾಗಗಳನ್ನು
ಹೊಟ್ಟೆಯಿಂದ ತೆಗೆದು ಮತ್ತೆ ಹಾಗೆ ಕೂಡಿಸುವುದು,ಬೀಳುತ್ತಿದ್ದ ಮಸೀದಿಯನ್ನು ನೋಟದಿಂದಲೇ ತಡೆದಿದ್ದು, ತಮ್ಮ ಭಕ್ತರಿಗೆ ಪವಾಡ
ಸದೃಶವಾಗಿ ಸಹಾಯ ಮಾಡುತ್ತಿದ್ದ ಎಷ್ಟೋ ಉದಾಹರಣೆಗಳು ಇವೆ.
ಇಂತಹಾ ಕೆಲ ಪ್ರಮುಖ ಪವಾಡಗಳ ಕಿರು ನೋಟ ಇಲ್ಲಿದೆ-
ಮಹಿಳೆಯ ಅಂಧತ್ವ ನಿವಾರಿಸಿದ ಸಾಯಿ ಬಾಬಾ
ಸಾಯಿ ಬಾಬಾರ ಭಕ್ತೆಯೊಬ್ಬರು ಯಾವುದೋ ಕಾರಣದಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ಹಲವು ನೇತ್ರವೈದ್ಯರಲ್ಲಿ
ತೋರಿಸಿದ ಬಳಿಕವೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲ, ವಿದೇಶಕ್ಕೂ ಕರೆದುಕೊಂಡು ಹೋಗಿ ತಜ್ಞರಿಗೆ
ತೋರಿಸಲಾಯಿತು. ಎಲ್ಲೂ ಇವರ ಅಂಧತ್ವಕ್ಕೆ ಪರಿಹಾರವೇ ಇರಲಿಲ್ಲ. ಇವರ ದುಃಖವನ್ನು ನೋಡಲಾರದೇ ಆಕೆಯ ಪತಿ ಆಕೆ
ಆರಾಧಿಸುತ್ತಿದ್ದ ಸಾಯಿಬಾಬಾರ ಸಮಾಧಿಯನ್ನು ಸಂದರ್ಶಿಸುವ ಮೂಲಕ ಕೊಂಚ ಮನಸ್ಸಿಗೆ ಶಾಂತಿ ಸಿಗಬಹುದು ಎಂದು ಶಿರ್ಡಿಗೆ
ಕರೆದುಕೊಂಡು ಬಂದರು.
ಸಾಯಿಬಾಬಾರ ಸಮಾಧಿಯ ಬಳಿ ಆಕೆ ತನಗೆ ದೃಷ್ಟಿ ಬಂದರೆ ತಾವು ಬಾಬಾರಿಗೆ ಕಸೂತಿ ಇರುವ ಶಾಲ್ ಒಂದನ್ನು ದೇಣಿಗೆ
ನೀಡುವುದಾಗಿ ಹರಕೆ ಹೊತ್ತರು. ಅಂದಿನಿಂದ ನಿಧಾನವಾಗಿ ಅವರ ದೃಷ್ಟಿ ಮರುಕಳಿಸತೊಡಗಿತು. ಒಂದೇ ವರ್ಷದಲ್ಲಿ ಅವರು
ಪೂರ್ಣ ದೃಷ್ಟಿಯನ್ನು ಪಡೆದರು. ಬಳಿಕ ಅವರು ತಮ್ಮ ಮಾತಿನಂತೆ ದೇಣಿಗೆಯನ್ನು ಒಪ್ಪಿಸಿ ಹರಕೆಯನ್ನು ಪೂರೈಸಿದರು.
ಬೆಂಕಿಯ ಮುನ್ಸೂಚನೆ
ಒಮ್ಮೆ ಶಿರಡಿಯಲ್ಲಿ ಬೆಳೆಯ ಕಟಾವು ಮುಗಿದ ಬಳಿಕ ಒಂದು ಮೈದಾನದಲ್ಲಿ ಇಡಿಯ ಗ್ರಾಮದವರ ಬೆಳೆಯನ್ನು ಒಂದೆಡೆ
ಸಂಗ್ರಹಿಸಲಾಗಿತ್ತು. ಅದು ಬೇಸಿಗೆಯ ದಿನವಾಗಿದ್ದು ಬಿಸಿಲು ಪ್ರಖರವಾಗಿತ್ತು. ಎಲ್ಲರ ಮೈಯಿಂದ ಬೆವರು ಸುರಿಯುತ್ತಿತ್ತು. ಒಂದು
ದಿನ ನಡುಮಧ್ಯಾಹ್ನ ಎಲ್ಲರೂ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ
ಗ್ರಾಮಸ್ಥರೊಬ್ಬರಿಗೆ ಬೆಳೆಗೆ ಬೆಂಕಿ ಹತ್ತಿದೆ ಎಂದು ತಿಳಿಸಿದರು.
ಕೂಡಲೇ ಬೆಳೆ ಇದ್ದ ಕಡೆ ಓಡಿದ ಆ ಗ್ರಾಮಸ್ಥ ದೂರದಿಂದ ಕಂಡಾಗ ಯಾವುದೇ ಬೆಂಕಿ ಕಾಣಿಸದ ಕಾರಣ ಹಿಂದಿರುಗಿ ಅಲ್ಲಿ
ಯಾವುದೇ ಬೆಂಕಿ ಇಲ್ಲವೆಂದು ತಿಳಿಸಿದ. ಆದರೆ ತಮ್ಮ ಮಾತಿನಿಂದ ಹಿಂದೆ ಬರದ ಸಾಯಿಬಾಬಾ ಮತ್ತೊಮ್ಮೆ ಹೋಗಿ ನೋಡು,
ಬೆಂಕಿ ಇದೆ, ಎಂದು ತಿಳಿಸಿದರು. ಯಾವುದಕ್ಕೂ ಹೋಗಿ ನೋಡೋಣ ಎಂದು ಪರಿಶೀಲಿಸಲು ಬಂದ ಗ್ರಾಮಸ್ಥರಿಗೆ ನಿಜವಾಗಿಯೂ
ಬೆಳೆಯ ಗುಂಪಿನ ಹತ್ತಿರವೇ ಇದ್ದ ಹುಲ್ಲಿನ ಕಟ್ಟೊಂದಕ್ಕೆ ಬೆಂಕಿ ಹತ್ತಿದ್ದು ಇನ್ನು ಕೊಂಚ ಹೊತ್ತು ಕಳೆದಿದ್ದರೆ ಇಡಿಯ ಬವಣೆಗೆ ಬೆಂಕಿ
ಹತ್ತುವ ಸಂಭವವಿತ್ತು.
ನೀರಿನಿಂದ ದೀಪ ಬೆಳಗಿತು!
ಸಂತರೆಂದು ಗುರುತಿಸಲ್ಪಡುವ ಮುನ್ನ ಸಾಯಿ ಬಾಬಾರಿಗೆ ಜನರ ಮನಃಸ್ಥಿತಿಯನ್ನು ಅರಿಯಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು.
ಇದಕ್ಕೊಂದು ಉದಾಹರಣೆ ಎಂದರೆ ನೀರಿನಿಂದ ದೀಪ ಬೆಳಗಿಸುವ ಪವಾಡ. ಅಂದು ಫಕೀರ (ಧರ್ಮ ಪ್ರಚಾರಕ) ರಾಗಿದ್ದ
ಸಾಯಿಬಾಬಾರಿಗೆ ಮಸೀದಿಯಲ್ಲಿ ಹಚ್ಚುವ ದೀಪಕ್ಕೆ ಎಣ್ಣೆ ಕೊಳ್ಳಲು ಹಣವಿಲ್ಲದೇ ಇದ್ದ ಕಾರಣ ವರ್ತಕರಿಂದ ಎಣ್ಣೆಯನ್ನು ದಾನ
ಪಡೆದುಕೊಳ್ಳಬೇಕಾಗಿ ಬರುತ್ತಿತ್ತು.
ಆದರೆ ಪ್ರತಿಬಾರಿ ಎಣ್ಣೆಯನ್ನು ದಾನ ನೀಡಿ ಬೇಸರಿಸಿದ ವರ್ತಕರು ಒಂದು ದಿನ ತಮ್ಮಲ್ಲಿ ಎಣ್ಣೆ ಇಲ್ಲ ಎಂದು ಸುಳ್ಳೇ ಹೇಳಿದರು.
ಇವರ ಮಾತಿಗೆ ಯಾವುದೇ ಎದುರುತ್ತರ ನೀಡದ ಸಾಯಿಬಾಬಾ ದೀಪಗಳನ್ನು ನೀರಿನಿಂದ ತುಂಬಿಸಿ ಬೆಳಗಿಸಿದರು. ಈ ದೀಪಗಳು
ಸೂರ್ಯಾಸ್ತದ ಸಮಯದಿಂದ ಮಧ್ಯರಾತ್ರಿಯವರೆಗೆ ಎಣ್ಣೆ ಉರಿದಂತೆಯೇ ಉರಿದವು.
ಎಲ್ಲರನ್ನೂ ಪ್ರೀತಿಸಿ
ಬಾಬಾರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು ಅವರು ಯಾರನ್ನೂ ಜಾತಿ ಮತ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ
ಪರಿಗಣಿಸುತ್ತಲೇ ಇರಲಿಲ್ಲ. ಬರೆಯ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳನ್ನೂ ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಎಷ್ಟೋ
ಸಲ ತಮ್ಮ ಭಕ್ತರ ಮನೆಗಳಲ್ಲಿ ಅವರು ಪ್ರಾಣಿಗಳ ರೂಪದಲ್ಲಿ ಬಂದು ಅವರ ಮನೆಯ ಪ್ರಸಾದ ಸ್ವೀಕರಿಸುತ್ತಿದ್ದರು. ಒಮ್ಮೆ ಅವರ
ಭಕ್ತರಾದ ದಾಮಿಯಾ ಎಂಬುವರು ಬಾಬಾರನ್ನು ತಮ್ಮ ವಠಾರಕ್ಕೆ ಊಟಕ್ಕೆ ಆಹ್ವಾನಿಸಿದರು. ಆದರೆ ಬಾಬಾ ತಮ್ಮ ಬದಲಿಗೆ ತಮ್ಮ
ಇನ್ನೊಬ್ಬ ಭಕ್ತ ಬಾಲಾ ಪಟೇಲ್ ಎಂಬುವರು ಬರುತ್ತಾರೆ ಎಂದು ತಿಳಿಸಿದರು
ಬಾಲಾ ಪಟೇಲ್ ದಲಿತರಾಗಿದ್ದ ಕಾರಣ ದಾಮಿಯಾ ಅಥವ ಅವರ ಪಂಗಡದ ಯಾರೂ ಬಾಲಾಪಟೇಲರನ್ನು ಅವಮಾನ
ಮಾಡುವುದಾಗಲೀ ಮೂದಲಿಸುವುದಾಗಲೀ ಮಾಡಬಾರದು, ತಮ್ಮಿಂದ ದೂರವಾಗಿ ಕುಳ್ಳರಿಸಬಾರದು ಎಂದು ಸ್ಪಷ್ಟವಾಗಿ
ತಿಳಿಸಿದರು. ಅಂತೆಯೇ ಬಾಬಾ ಹಾಗೂ ಉಳಿದವರಿಗಾಗಿ ಅನ್ನದ ತಟ್ಟೆಗಳನ್ನು ಸಿದ್ಧಪಡಿಸಿದ ದಾಮಿಯಾ "ಸಾಯಿ, ಬನ್ನಿ" ಎಂದು
ಕರೆದ ತಕ್ಷಣ ಎಲ್ಲಿಂದಲೂ ಒಂದು ಕಪ್ಪು ನಾಯಿ ಓಡೋಡಿ ಬಂದು ಬಾಬಾರಿಗಾಗಿ ಇಟ್ಟಿದ ತಟ್ಟೆಯಿಂದ ತಿಂದು ಬಂದಷ್ಟೇ
ವೇಗವಾಗಿ ಹಿಂದಿರುಗಿತು. ಬಳಿಕ ದಾಮಿಯಾ ಹಾಗೂ ಬಾಲಾ ಪಟೇಲ್ ಜೊತೆಯಾಗಿ ಕುಳಿತು ಊಟ ಮಾಡಿದರು.
ಬಾಬಾರಿಗೆ ಶಿಷ್ಟಾಚಾರ ಮತ್ತು ಧರ್ಮದ ಅಂಧಾನುಕರಣೆ ಬೇಕಿರಲಿಲ್ಲ. ಅವರ ಅನುಗ್ರಹ ಪಡೆಯಲು ಭಕ್ತಿ ಮತ್ತು ನಂಬಿಕೆಯೇ ಸಾಕು
ಎಂದು ಅವರ ಭಕ್ತರು ಇಂದಿಗೂ ನಂಬುತ್ತಾರೆ.
ಪಟೇಲನ ಕುದುರೆ
ಧೂಪ್ಖೇಡಾ ಗ್ರಾಮದ ಪಟೇಲನಾದ ಚಾಂದ್ಪಾಟೀಲ್ ಕಳೆದುಹೋದ ತನ್ನ ಕುದುರೆಯನ್ನು ಹುಡುಕುವುದರಲ್ಲಿ
ಮನುಷ್ಯಪ್ರಯತ್ನವನ್ನೆಲ್ಲ ಮಾಡಿ ದಾರಿಕಾಣದೆ ‘ಏಲಗಂಗಾ’ ನದಿದಂಡೆಯ ಮೇಲೆ ಕುಳಿತು ದುಃಖಭಾರದಲ್ಲಿ ಅಶ್ರುಧಾರೆ ಹರಿಸಿ,
ನಂಬಿದ ದೇವರನ್ನು ಒಂದೇ ಮನಸ್ಸಿನಿಂದ ಧ್ಯಾನಿಸುತ್ತಿದ್ದನು. ಆಗ ಯಾರೋ ತನ್ನ ಹೆಸರನ್ನು ಕೂಗಿ ಕರೆಯುತ್ತಿರುವಂತೆ
ಭಾಸವಾಗಿ ನದಿದಂಡೆಯ ಬೆಟ್ಟದ ಮೇಲಿನ ಕಲ್ಲುಬಂಡೆಗಳ ದಾಟಿ ಅಲ್ಲಿದ್ದ ದಿವ್ಯಪುರುಷನ ಕಂಡು ಮಾತು ಹೊರಡದೆ ನಿಂತನು.
ಆಗ ಫಕೀರನು ‘ಯಾಕೆ ಚಾಂದ್ಪಾಟೀಲ್, ಸೋಜಿಗವ ಕಂಡಂತೆ ನಿಂತಿರುವೆ?’ ಎಂದನು. ದೇವವಾಣಿಯ ಮಾಧುರ್ಯ
ತುಂಬಿದ ಫಕೀರನ ಮಾತಿಗೆ ಇನ್ನಷ್ಟು ಚಕಿತನಾದ ಚಾಂದ್, ‘ತಮಗೆ ನನ್ನ ಹೆಸರು ಹೇಗೆ ಗೊತ್ತು?’ ಎಂಬುದಾಗಿ
ಕುತೂಹಲದಲ್ಲಿ ಕೇಳಿದಾಗ ಆ ಮಹಾತ್ಮನು ಮಂದಹಾಸ ಬೀರಿದನು. ‘ಇಲ್ಲಿನ ಚರಾಚರಗಳೆಲ್ಲವುಗಳ ಬಗ್ಗೆ ಅರಿವಿರುವ ನನಗೆ
ನಿನ್ನ ಹೆಸರು ತಿಳಿಯದಿರುವುದೇ ಪಾಟೀಲ್? ನಿನ್ನ ನೆಚ್ಚಿನ ಕುದುರೆ ಕಳೆದುಕೊಂಡು ರೋದಿಸುತ್ತಿರುವೆಯಲ್ಲವೇ? ಅದರ ಅಗಲಿಕೆಯ
ನೋವನ್ನು ಸಹಿಸದಾಗದೆ ನಿನ್ನ ದೈನಂದಿನ ವ್ಯವಹಾರವನ್ನೂ ಮರೆತು ಬಿಜಿಲಿಯ ಜೀನು ಹೆಗಲಿನಲ್ಲಿ ಹೊತ್ತು ಅದನ್ನು ಹುಡುಕುತ್ತ
ಊರುಕೇರಿ ಕಾಡುಮೇಡು ಅಲೆಯುತ್ತಿರುವೆಯಲ್ಲವೇ? ಪ್ರಾಪಂಚಿಕ ವಿಷಯವಾಸನೆಯಲ್ಲಿ ತನ್ನನ್ನು ತಾನು ಕಳೆದುಕೊಂಡು; ಅದರ
ಹುಡುಕಾಟದಲ್ಲಿ ಬದುಕೆಂಬ ಭ್ರಮೆಯೊಳಗೆ ಜೀವಿಸುವವನು ಮನುಷ್ಯಮಾತ್ರನಲ್ಲವೇ?’ ಎಂದು ಮತ್ತೆ ಆ ಫಕೀರನು ನಕ್ಕನು.
ಇದೇನು ತಾನು ಕಾಣುತ್ತಿರುವುದು ಸ್ವಪ್ನವಲ್ಲವಷ್ಟೇ! ನಿಜಸಂಗತಿಯ ನೋಡಿದಂತೆಯೇ ಹೇಳುತ್ತಿರುವರು. ಇವರು ನಿಜಕ್ಕೂ
ಮನುಷ್ಯರಲ್ಲ, ದೇವಮಾನವರೇ ಇರಬೇಕೆಂದುಕೊಂಡನು. ಕಾಣದೆಯೂ ಕಂಡಂತೆ ಎಲ್ಲವನ್ನೂ ಹೇಳಿದ ಫಕೀರನ ಮಾತಿಗೆ
ಅಹುದು ಅಹುದೆಂದು ಶರಣುಹೋದ ಪಾಟೀಲನು ಭಕ್ತಿಗೌರವದಲ್ಲಿ ಅವರ ಪಾದ ಮುಟ್ಟಿ ನಮಸ್ಕರಿಸಿ ಕೈಯನ್ನು
ಕಣ್ಣಿಗೊತ್ತಿಕೊಂಡನು. ಆಗ ಆ ಮಹಾತ್ಮನು, ‘ಮೂರು ತಿಂಗಳಿನಿಂದ ಬಿಜಲಿಗಾಗಿ ಹಂಬಲಿಸಿ ದುಃಖಿಸಿರುವೆ. ಬಿಜಿಲಿಯೂ ನಿನ್ನ
ಅಗಲಿಕೆಯನ್ನು ಸಹಿಸದೆ – ಎಂದು ಒಡೆಯನ ನೆರಳು ಸೇರುವೆನೋ ಎಂದು ಕಾದಿದೆ. ನಿನ್ನ ಬಿಜಲಿ ಇಲ್ಲೇ ನಿನ್ನ ಬಳಿಯಲ್ಲೇ ಇದೆ.
ಕರೆಯದೆ ಕುದುರೆಯಾದರೂ ಹೇಗೆ ಬರಲು ಸಾಧ್ಯ?’ ಎಂದ ಫಕೀರನು ನದಿಯ ತಪ್ಪಲಿನತ್ತ ಮುಖಮಾಡಿ, ‘ಬಿಜಿಲಿ.. ಬಿಜಿಲಿ..
ಬಿಜಿಲಿ.. ಬಾರಪ್ಪ, ನಿನ್ನ ಯಜಮಾನ ಕಾಯುತ್ತಿದ್ದಾನೆ’ ಎಂದು ಗಟ್ಟಿಯಾಗಿ ಕೂಗಿದನು. ಮುಂದಿನ ಕ್ಷಣದಲ್ಲೇ
ತಪ್ಪಲುಪ್ರದೇಶದಿಂದ ಮಿಂಚಿನ ವೇಗದಲ್ಲಿ ಬಿಜಿಲಿ ಮಹಾತ್ಮನೆಡೆಗೆ ಓಡಿ ಬರುತ್ತಿರುವುದನ್ನು ಕಂಡ ಚಾಂದ್ಪಾಟೀಲ್ ತನ್ನ ಕಣ್ಣನ್ನೇ
ನಂಬದಾದನು. ಓಡಿಬಂದು ಫಕೀರನನ್ನು ಒಮ್ಮೆ ಸುತ್ತುಹಾಕಿದ ಕುದುರೆಯಾದರೋ ತನ್ನೊಡೆಯನ ಬಳಿ ಬಂದು ಕಾಲುಗಳನ್ನು
ಮೇಲೆತ್ತಿ ಕೆನೆಯುತ್ತ ತನ್ನ ಸಂತಸ ವ್ಯಕ್ತಪಡಿಸಿ ಆ ಮಹಾತ್ಮನ ಎದುರು ನಿಂತಿತು. ನೋಡಲು ಫಕೀರನಂತಿರುವ ಇವರು ನಿಜಕ್ಕೂ
ಅವಲಿಯನೇ ಇರಬೇಕೆಂದು ಭಕ್ತಿಭಾವ ಪರವಶನಾದ ಚಾಂದ್ಪಾಟೀಲ್, ‘ನಿಮ್ಮಿಂದಾಗಿ ಬಿಜಿಲಿ ಪುನಃ ನನಗೆ ಸಿಕ್ಕಿತು, ನೀವು
ಅಸಾಮಾನ್ಯರು’ ಎಂದು ಅವರ ಚರಣಾರವಿಂದಕ್ಕೆ ಮತ್ತೊಮ್ಮೆ ನಮಿಸಿದನು.
ಅಪಸ್ಮಾರ ಖಾಯಿಲೆಯನ್ನು ದೂರ ಮಾಡಿದರು!
ಮುಂಬಯಿಯ ಹರಿಶ್ಚಂದ್ರ ಪಿತಳೆಯವರು ತಮ್ಮ ಮಗನ ಕಾರಣದಿಂದ ಬಹಳ ದುಃಖಿಯಾಗಿದ್ದರು. ಆತನು ಅಪಸ್ಮಾರ
ರೋಗಪೀಡಿತನಾಗಿ ಎಲ್ಲೆಂದರಲ್ಲಿ ಮೂರ್ಛಿತನಾಗಿ ಬಿದ್ದುಬಿಡುತ್ತಿದ್ದನು. ಆರಂಭದಲ್ಲಿ ಕಾಯಿಲೆ ಸರಿಹೋಗುವುದೆಂದು ವೈದ್ಯರು
ಏನೆಲ್ಲ ಔಷಧ ನೀಡಿದರೂ ಮೇಲಾಗಲಿಲ್ಲ; ವಿದೇಶಿ ವೈದ್ಯರಿಂದಲೂ ರೋಗ ಗುಣ ಕಾಣಲಿಲ್ಲ. ದೂರದೂರದ ನಗರಗಳಿಗೆ ಚಿಕಿತ್ಸೆಗೆ
ಹೋಗಿ ಬಂದರೂ ಫಲ ನೀಡಲಿಲ್ಲ. ದಿನೇದಿನೆ ಮಗನು ಹಿಂಸೆ ಅನುಭವಿಸುವುದನ್ನು ನೋಡಲಾರದೆ ಬದುಕು ಕಣ್ಣೀರಾಗಿತ್ತು.
ಆಗರ್ಭ ಶ್ರೀಮಂತನಾದ ಪಿತಳೆ ಮಗನ ಕಾಯಿಲೆ ಗುಣಪಡಿಸಲು ಅದೆಷ್ಟು ಹಣವಾದರೂ ಖರ್ಚುಮಾಡಲೂ ಸಿದ್ದನಿದ್ದ. ವೈದ್ಯರೇ
ಕೈಚೆಲ್ಲಿದ ಮೇಲೆ ಅವನಾದರೂ ಏನು ಮಾಡಿಯಾನು? ಸಾವಿನ ಮನೆ ಬಾಗಿಲು ತಟ್ಟುತ್ತಿರುವ ಮಗನನ್ನು ನೋಡಿ ಸುಮ್ಮನೆ
ಕುಳಿತಿರಲಾಗದೆ ಬೇರೆ ದಾರಿಯೇನೆಂಬ ಚಿಂತೆಯಲ್ಲಿದ್ದನು. ಎಲ್ಲ ಇದ್ದೂ ಏನೂ ಮಾಡಲಾಗದ ಸ್ಥಿತಿ ಪಿತಳೆಯದು.
ಆ ಹೊತ್ತಿಗಾಗಲೇ ದಾಸಗಣುವಿನ ಹರಿಕಥೆ-ಕೀರ್ತನೆಗಳಿಂದ ಸಾಯಿಬಾಬಾರ ಕೀರ್ತಿ ದೇಶದೆಲ್ಲೆಡೆ ವ್ಯಾಪಿಸಿತ್ತು; ಅವರ
ಮಹಿಮೆಯನ್ನು ಹಾಡಿ ಕೊಂಡಾಡುವರು ಸಾಕಷ್ಟು ಜನರಿದ್ದರು. ಸದ್ಗುರುವಿನ ದರ್ಶನ, ಹಸ್ತಸ್ಪರ್ಶಮಾತ್ರದಿಂದಲೂ ಹಾಗೂ ಅವರು
ನೀಡುವ ವಿಭೂತಿಯಿಂದಲೂ ಸರ್ವರೋಗಗಳು ಗುಣವಾಗುವುದೆಂಬ ಮಾತು ಜನಜನಿತವಾಗಿತ್ತು. ಇದು ಹರಿಶ್ಚಂದ್ರ ಪಿತಳೆಯವರ
ಕಿವಿಗೂ ಬಿದ್ದಿತ್ತು. ಆದರೆ ಅವನಿಗೆ ದೇವರು, ದೇವರ ಪೂಜೆ, ಗುರುಬಾಬಾಗಳ ದರ್ಶನ, ಹರಕೆ, ಕಾಣಿಕೆ ಇವುಗಳ ಮೇಲೆ ಅಷ್ಟಾಗಿ
ನಂಬಿಕೆ ಇರಲಿಲ್ಲ. ಅವನು ಮಾಡುತ್ತಿದ್ದ ವ್ಯವಹಾರವೂ ಅದಕ್ಕೆ ಪೂರಕವಾಗಿಯೇ ಇತ್ತು. ಆತನ ತಂದೆ-ತಾಯಿ ದೈವಭಕ್ತರಾದರೂ
ಮಗನಲ್ಲಿ ಅದೊಂದು ಸಂಸ್ಕಾರ ಹರಿದುಬಂದಿರಲಿಲ್ಲ. ಕೆಲವು ಭಕ್ತಬಂಧುಗಳು, ‘ನಿಮ್ಮ ಮಗನನ್ನು ಕರೆದುಕೊಂಡು ಬಾಬಾರಲ್ಲಿಗೆ
ಹೋಗಿ’ ಎಂದು ಹೇಳಿದರಾದರೂ ಆತ ಮೊದಮೊದಲು ಅವರ ಮಾತು ಕೇಳಲಿಲ್ಲ. ಮುಂದೆ ಮಗನ ಕಾಯಿಲೆ
ಉಲ್ಬಣಗೊಳ್ಳತ್ತಿರುವಂತೆ ಬೇರೆ ದಾರಿಗಾಣದಾಯಿತು; ‘ಮನುಜಪ್ರಯತ್ನವನ್ನೆಲ್ಲ ಮಾಡಿ ಆಗಿದೆ, ಇನ್ನು ಉಳಿದಿರುವುದು
ದೈವವೊಂದೇ’ ಎನಿಸಿತು.
ಇಂತಹ ಒಂದು ಭಾವ ಅವರಲ್ಲಿ ಮೂಡಿದ್ದೂ ಪೂರ್ವಪುಣ್ಯದಿಂದಲಿ ಎನ್ನುವುದು ಸರಿ. ರೋಗಗ್ರಸ್ತ ಮಗನೊಂದಿಗೆ ಕುಟುಂಬಸಮೇತ
ಶಿರಡಿಗೆ ಬಂದನು. ಬರುವಾಗ ಬರಿಗೈಯಲ್ಲಿ ಬರಲಿಲ್ಲ. ತನ್ನ ಶ್ರೀಮಂತಿಕೆ ತಕ್ಕಂತೆ ಬಾಬಾರಿಗೆಂದು ಹಣ್ಣು ಉಡುಗೊರೆಯನ್ನು
ತಂದಿದ್ದನು. ಅವೆಲ್ಲವನ್ನೂ ಬಾಬಾರಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದನು. ಪಿತಳೆಯ ಕುಮಾರನು ಸಾಯಿನಾಥರನ್ನು
ನೋಡುತ್ತಿರುವಂತೆ ಸ್ಮೃತಿ ತಪ್ಪಿ ಬಿದ್ದನು; ಬಾಯಿಯಿಂದ ಬಿಳಿನೊರೆ ಉಕ್ಕಿತು. ಅವನ ತಾಯಿ, ‘ಮಗನೇ’ ಎಂದು
ಚೀತ್ಕರಿಸಿದಳು. ಉಸಿರಾಟ ನಿಲ್ಲುತ್ತಿರುವಂತೆ ಕೈಕಾಲು ಒದರುತ್ತಿದ್ದ ಮಗನನ್ನು ನೋಡಿ ತಂದೆ ದಿಕ್ಕು ತೋಚದಂತಾದನು. ಬಹಳ
ಸಮಯದವರೆಗೂ ಅದೇ ಸ್ಥಿತಿ! ಮಗ ಆಗಾಗ ಎಚ್ಚರ ತಪ್ಪುತ್ತಿದ್ದನಾದರೂ ಈ ಪ್ರಮಾಣದ ಹಿಂಸೆ ಎಂದೂ ಅನುಭವಿಸಿರಲಿಲ್ಲ.
‘ಸಾಯಿನಾಥರ ಸನ್ನಧಿಯಲ್ಲಿ ರೋಗ ಗುಣವಾಗುವುದೆಂದು ಬಂದರೆ ಉಲ್ಬಣವಾಯಿತಲ್ಲ, ನೆರಳಿಗಾಗಿ ಮರದ ಆಶ್ರಯಕ್ಕೆ ಬಂದರೆ
ಮರವೇ ಶಿರದ ಮೇಲೆ ಉರುಳಿತೇ? ಹುಲಿಯಿಂದ ತಪ್ಪಿಸಿಕೊಂಡ ಹಸು ಕಟುಕನ ಕೈಗೆ ಸಿಕ್ಕಿದಂತಾಯಿತೇ? ಧರೆಗೆ ಬೀಳುವುದನ್ನು
ತಪ್ಪಿಸಲು ಹೋಗಿ ಕೆರೆಗೆ ಕೆಡವಿದೆನೇ?’ ಎಂಬೆಲ್ಲ ಸಂಕಟದಲ್ಲಿ ಆ ದಂಪತಿ ಗೋಳಾಡಿದರು. ಇದನ್ನು ಶಾಂತಚಿತ್ತದಿಂದ
ಗಮನಿಸಿದ ಸಾಯಿಬಾಬಾ, ‘ಏಕೆ ಇಷ್ಟು ಸಂಕಟಪಡುವಿರಿ? ದುಃಖದ ಹಿಂದೆ ಸುಖವೂ ಅನುಸರಿಸಿ ಬರುತ್ತದೆ. ಧೈರ್ಯ
ತಂದುಕೊಳ್ಳಿ, ಪತಿ-ಪತ್ನಿ ಇಬ್ಬರೂ ಮಗನನ್ನು ಹಿಡಿದುಕೊಳ್ಳಿ, ಜ್ಞಾನ ಬರುವುದು. ನಂತರ ನೀವು ಉಳಿದುಕೊಂಡ ವಸತಿಗೃಹಕ್ಕೆ
ಕರೆದುಕೊಂಡು ಹೋಗಿ. ಕಷ್ಟಕ್ಕೆ ಹೆದರಿದರೆ ಇಷ್ಟಾರ್ಥ ನೆರವೇರದು. ಸ್ವಲ್ಪ ಹೊತ್ತಿಗೆ ಸರಿಹೋಗುವನು’ ಎಂದು ಹೇಳಿ ಅವರ
ಮುಂದಿನ ಮಾತಿಗೆ ಅವಕಾಶಕೊಡದಂತೆ ಎದ್ದುಹೋದರು.
ಬಾಬಾರ ಮಾತಿನಂತೆ ಕುಮಾರ ಎಚ್ಚರಗೊಂಡನು, ಆ ಕುಟುಂಬದ ಆನಂದಕ್ಕೆ ಪಾರವಿಲ್ಲ. ನಂತರ ಮಗನೊಂದಿಗೆ ವಸತಿಗೃಹಕ್ಕೆ
ಬಂದರು. ಆ ಒಂದು ದಿನದಲ್ಲಿ ಕುಮಾರ ಸುಧಾರಿಸಿಕೊಂಡನು. ಸದ್ಗುರುವಿನ ದರ್ಶನ ಆಶೀರ್ವಾದಮಾತ್ರದಿಂದಲೆ ಮಗನಿಗೆ
ಗುಣವಾಯಿತು. ಅವರಲ್ಲಿದ್ದ ಸಂಶಯ ದೂರವಾಗಿ ಸಾಯಿನಾಥರ ಮೇಲಿನ ಭಕ್ತಿ, ನಂಬಿಕೆ ದ್ವಿಗುಣಗೊಂಡಿತು. ಮರುದಿನ
ದಂಪತಿಯಿಬ್ಬರೂ ಮಸೀದಿಗೆ ತೆರಳಿ ಸಾಯಿನಾಥರಿಗೆ ಸಾಷ್ಟಾಂಗವೆರಗಿ ಅವರ ಸೇವೆಯಲ್ಲಿ ತೊಡಗಿದರು. ಆಗ ಬಾಬಾ, ‘ನಿಮ್ಮ
ಸಂಕಲ್ಪ ತೀರಿತು ತಾನೆ? ವಿಕಲ್ಪದ ತರಂಗಗಳು ಹಾರಿಹೋದವಷ್ಟೆ! ಈಗ ನಂಬಿಕೆ ಬಂದಿತೇ? ಸಹನೆ ಮತ್ತು
ವಿಶ್ವಾಸದಲ್ಲಿರುವವರನ್ನು ಪರಮಾತ್ಮ ರಕ್ಷಿಸದೆ ಇರನು’ ಎಂದರು.
(ಕಡೆಯ ಎರಡು ಪವಾಡ ಪ್ರಸಂಗಗಳುಬೆಂಗಳೂರಿನ ಶ್ರೀ ಸಾಯಿ ದರ್ಶನಂ ಟ್ರಸ್ಟ್ ಪ್ರಕಟಿಸಿರುವ ‘ಶ್ರೀ ಸಾಯಿ ಲೀಲಾಮೃತ’ ಗ್ರಂಥದಿಂದ್ ಆಯ್ದ ಭಾಗ)