ಕೊರೋನಾವೈರಸ್ ಕಾರಣದಿಂದ 2020ರ ವರ್ಷದ ಕ್ರೀಡಾ ಚಟುವಟಿಕೆಗಳು ಇಷ್ಟು ವರ್ಷಗಳಲ್ಲಿ ಇದ್ದಂತೆ ಸಕ್ರಿಯವಾಗಿರಲಿಲ್ಲ. ಒಲಂಪಿಕ್ಸ್ ಸೇರಿದಂತೆ ದೊಡ್ಡ ದೊಡ್ಡ ಕ್ರೀಡಾಕೂಟಗಳು ಮುಂದೂಡಲ್ಪಟ್ಟವು ಇಲ್ಲವೆ ರದ್ದಾದವು. ಆದರೂ ಫುಟ್ಬಾಲ್, ಟೆನಿಸ್ ಮತ್ತು ಬ್ಯಾಡ್ಮಿಂಟನ್ನಂತಹ ಕ್ರೀಡೆಗಳ ವಿಚಾರದಲ್ಲಿ ಈ ವರ್ಷ ಉತ್ತಮವಾಗಿ ಪ್ರದರ್ಶನ ಕಂಡಿದೆ ಎಂದೇ ಹೇಳಬೇಕು. ಅದಾಗ್ಯೂ ಟೋಕಿಯೊ ಒಲಿಂಪಿಕ್ಸ್ಗೆ ತಯಾರಿ ನಡೆಸುತ್ತಿದ್ದ ಕ್ರೀಡಾಪಟುಗಳಿಗೆ ಈ ವರ್ಷ ಮಹತ್ವದ್ದಾಗಿತ್ತು.
ಭಾರತ ಹಿರಿಯ ಟೆನಿಸ್ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಮಹಿಳೆಯರ ಡಬಲ್ಸ್ ವಿಬಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡು ಭಾರತದ ಕ್ರೀಡಾ ವಲಯದ ಪಾಲಿಗೆ ೨೦೨೦ರ ವರ್ಷವನ್ನು ಶುಭಾರಂಭ ಮಾಡಿದ್ದರು. 2017ರ ಬಳಿಕ ಆಡಿದ ಮೊದಲ ಟೂರ್ನಿಯಲ್ಲೇ ಸಾನಿಯಾ ಮಿರ್ಜಾ ಗೆಲುವಿನ ಆರಂಭ ಕಂಡಿದ್ದರು.
ರೋಮ್ ಶ್ರೇಯಾಂಕಿತ ಕುಸ್ತಿ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ ಪೋಗಾಟ್ 53 ಕೆ.ಜಿ ವಿಭಾಗದ ಮಹಿಳಾ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈಕ್ವೆಡಾರ್ನ ಲೂಯಿಸಾ ಎಲಿಜಬೆತ್ ವಾಲ್ವರ್ಡೆ ಅವರನ್ನು ಮಣಿಸಿ ಪೋಗಾಟ್ ಈ ಸಾಧನೆ ಮಾಡಿದ್ದರು.ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ರೋಮ್ ಶ್ರೇಯಾಂಕದ ಸರಣಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಫೈನಲ್ ಹಣಾಹಣಿಯಲ್ಲಿ ಭಜರಂಗ್ ಪೂನಿಯಾ ಅವರು ಅಮೆರಿಕದ ಜೋರ್ಡನ್ ಒಲಿವರ್ ವಿರುದ್ಧ 4-3 ಅಂತರದಲ್ಲಿ ಗೆದ್ದು ಸ್ವರ್ಣ ಪದಕ ತನ್ನದಾಗಿಸಿಕೊಂಡರು. 61 ಕೆ.ಜಿ ಮತ್ತೊಂದು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರವಿಕುಮಾರ್ ದಹಿಯಾ ಅವರು 6-0 ಅಂತರದಲ್ಲಿ ಕಜಕಸ್ತಾನದ ನುರ್ಬೋಲತ್ ಅಬ್ದುಲಿಯೆವ್ ವಿರುದ್ಧ ಗೆದ್ದು ಬಂಗಾರ ಗೆದ್ದರು.
ಕೋಲ್ಕತ್ತಾದಲ್ಲಿ ನಡೆದ ನ್ಯಾಷನಲ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು 49 ಕೆ.ಜಿ ವಿಭಾಗದಲ್ಲಿ 203 ಕೆ.ಜಿ ಬಾರ ಎತ್ತುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಜತೆಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡರು.
2020 ರ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ ಭಾರತದ ನವದೆಹಲಿಯ ಇಂದಿರಾ ಗಾಂಧಿ ಅರೆನಾದ ಕೆಡಿ ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಫೆಬ್ರವರಿ 18 ರಿಂದ ಫೆಬ್ರವರಿ 23 ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ಭಾರತ 5 ಚಿನ್ನ, 6 ಬೆಳ್ಳಿ, 9 ಕಂಚು ಸೇರಿದಂತೆ 20 ಪದಕಗಳನ್ನು ಗಳಿಸಿಕೊಂಡಿತ್ತು
ಆಸ್ಟ್ರೀಯಾದಲ್ಲಿ ನಡೆದ ಮೆಂಟನ್ ಕಪ್ ಇಂಟರ್ನ್ಯಾಷನಲ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಪೂರ್ವಿ ಚಂದೇಲಾ ಹಾಗೂ ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನದ ಪದಕ ಗಳಿಸಿದ್ದರು.
2020 ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಪಂದ್ಯಾವಳಿ ಜನವರಿ 20 ರಿಂದ ಫೆಬ್ರವರಿ 2 ರವರೆಗೆ ಮೆಲ್ಬೋರ್ನ್ ಪಾರ್ಕ್ನಲ್ಲಿ ನಡೆಯಿತು. ಆಸ್ಟ್ರೇಲಿಯನ್ ಓಪನ್ನ 108 ನೇ ಆವೃತ್ತಿಯಾಗಿದ್ದ ಈ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಸಿಂಗಲ್ಸ್ನಲ್ಲಿ ನೊವಾಕ್ ಜೊಕೊವಿಕ್ ಮತ್ತು ನವೋಮಿ ಒಸಾಕಾ ಕ್ರಮವಾಗಿ ಹಾಲಿ ಚಾಂಪಿಯನ್ ಆಗಿದ್ದರು. ಆದರೆ ಒಸಾಕಾ ಮೂರನೇ ಸುತ್ತಿನಲ್ಲಿ ಕೊಕೊ ಗೌಫ್ ವಿರುದ್ಧ ಸೋಲುಂಡು ನಿರ್ಗಮಿಸಿದರೆ ಜೊಕೊವಿಕ್ ಡೊಮಿನಿಕ್ ಥೀಮ್ ಅವರನ್ನು ಸೋಲಿಸುವ ಮೂಲಕ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡರು. ಮಹಿಳಾ ಸಿಂಗಲ್ಸ್ ನಲ್ಲಿ ಅಮೆರಿಕಾದ ಟೆನಿಸ್ ಆಟಗಾರ್ತಿ ಸೋಫಿಯಾ ಕೆನಿನ್ ವೃತ್ತಿ ಬದುಕಿನ ಚೊಚ್ಚಲ ಗ್ರ್ಯಾಂಡ್ಸ್ಲ್ಯಾಮ್ ಟ್ರೋಫಿ ಗೆದ್ದುಕೊಂಡರು. 14ನೇ ಶ್ರೇಯಾಂಕಿತೆ ಸೋಫಿಯಾ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತೆ ಗಾರ್ಬಿನಿಯಾ ಮುಗುರುಜ ಅವರನ್ನು ಮಣಿಸಿ ಈ ಸಾಧನೆ ಮಾಡಿದ್ದರು.
ಕೊರೋನಾ ಕಾರಣದಿಂದ ಜಗತ್ತಿನಾದ್ಯಂತ ಮಾರ್ಚ್ ನಿಂದಮೇ ಅಂತ್ಯದವರೆಗೆ ಎಲ್ಲಾ ಕ್ರೀಡಾ ಚಟುವಟಿಕೆ ಸ್ಥಬ್ದವಾಗಿದ್ದವು. ಈ ನಡುವೆ ಜರ್ಮನಿ ತನ್ನ ಕ್ಲಬ್ ಹಂತದ ಕ್ರೀಡಾಕೂಟವನ್ನು ಮುಚ್ಚಿದ ಬಾಗಿಲುಗಳ ಹಿಂದೆ ಆಯೋಜಿಸಿತ್ತು ಆ ನಂತರ ಪ್ರೀಮಿಯರ್ ಲೀಗ್, ಲಾಲಿಗಾ, ಸೆರಿ ಎ ಎಲ್ಲವೂ ಅಮಾನತುಗೊಂಡ 2019-20 ಋತು ಪ್ರಾರಂಭವಾಗಿತ್ತು.30 ವರ್ಷಗಳ ನಂತರ ಲಿವರ್ಪೂಲ್ ಪ್ರೀಮಿಯರ್ ಲೀಗ್ ಅನ್ನು ಗೆದ್ದುಕೊಂಡಿತು ಮತ್ತು ಪಂದ್ಯಗಳನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದ ಕಾರಣ ಅಭಿಮಾನಿಗಳು ಬೀದಿಗಿಳಿದು ಗೆಲುವನ್ನು ಆಚರಿಸಿದರು. ದುಃಖದಿಂದ ತುಂಬಿದ ಒಂದು ವರ್ಷದಲ್ಲಿ ಕ್ರೀಡೆಯು ಹೇಗೆ ಬೆಳಕನ್ನು ತಂದಿತು ಎಂಬುದಕ್ಕೆ ಲಿವರ್ಪೂಲ್ನ ಗೆಲುವು ಮತ್ತು ಅಭಿಮಾನಿಗಳ ಆಚರಣೆ ಒಂದು ಉದಾಹರಣೆಯಂತಿತ್ತು.
ಕ್ರೀಡಾ ಜಗತ್ತು ನಿಧಾನವಾಗಿ ಮತ್ತೆ ಚಟುವಟಿಕೆಗಳತ್ತ ಮುಖ ಮಾಡಿತ್ತು. ಕ್ರೀಡೆಗಳು ಪುನರಾರಂಭವಾಯಿತು, ಆದರೆ ನೈರ್ಮಲ್ಯ ಮತ್ತು ಆರೋಗ್ಯ ರಕ್ಷಣೆಯ ಪ್ರೋಟೋಕಾಲ್ಗಳ ವಿಷಯದಲ್ಲಿ ಯಾವುದೇ ರಾಜಿ ಇರಲಿಲ್ಲ ಎಂಬುದನ್ನು ಗಮನಿಸಬೇಕು. ಕೋವಿಡ್ ಗಾಗಿ ಆಟಗಾರರನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತಿತ್ತು ಮತ್ತು ಅವರೆಲ್ಲರನ್ನೂ ಜೈವಿಕ ಸುರಕ್ಷಿತ ಜಾಗಗಳಲ್ಲಿ ಉಳಿಯುವಂತೆ ಕೇಳಲಾಯಿತು. ಅನೇಕ ಆಟಗಾರರು ಕೋವಿಡ್ ನಿಂದ ಸುರಕ್ಷಿತವಾಗಿರುವ ಬಗ್ಗೆ ಮಾತನಾಡಿದ್ದರು.
ರಾಫೆಲ್ ನಡಾಲ್ ಸೆಪ್ಟೆಂಬರ್ನಲ್ಲಿ ರೋಜರ್ ಫೆಡರರ್ ಅವರ 20 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದ ದಾಖಲೆಯನ್ನು ಸಮಗೊಳಿಸಿದರು. ಸ್ಪೇನ್ ನ ಕ್ರೀಡಾಪಟು ನಡಾಲ್ ಈ ಬಾರಿಯ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗುವ ಮೂಲಕ 13ನೇ ಬಾರಿ ಈ ಸಾಧನೆ ಮಾಡಿದ್ದರು. ಇದಕ್ಕಾಗಿ ಅವರು ನೊವಾಕ್ ಜಾಕೋವಿಚ್ ಅವರನ್ನು ಮಣಿಸಿದರು. ಈ ಗೆಲುವು ಕೊರೋನಾವೈರಸ್ ಹಿನ್ನೆಲೆಯಲ್ಲಿ ಟೆನಿಸ್ ಆಡಲಾಗುತ್ತಿದೆ ಎಂಬುದನ್ನು ಎಲ್ಲರೂ ಮರೆಯುವಂತೆ ಮಾಡಿತು ಮತ್ತು ಈ ಸಾಧನೆಯನ್ನು ನಡಾಲ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಕ್ರೀಡಾ ಪ್ರೇಮಿಗಳು ಆಚರಿಸಿದರು.
2020 ರ ಫ್ರೆಂಚ್ ಓಪನ್ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 11ರವರೆಗೆ ನಡೆಯಿತು. ಇದು ಫ್ರೆಂಚ್ ಓಪನ್ನ 124 ನೇ ಆವೃತ್ತಿಯಾಗಿತ್ತು. ಮಹಿಳಾ ಸಿಂಗಲ್ಸ್ ನಲ್ಲಿ ಇಗಾ ಎವಿತಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಈ ವರ್ಷ ಜುಲೈನಲ್ಲಿ ನಡೆದ ಲಾ ಲೀಗ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ರಿಯಲ್ ಮ್ಯಾಡ್ರಿಡ್ ತಂಡ ಲಾ ಲೀಗಾ ಫುಟ್ಬಾಲ್ ನ ಚಾಂಪಿಯನ್ ಆಗಿತ್ತು.ರಿಯಲ್ ಮ್ಯಾಡ್ರಿಡ್ 2–1 ಗೋಲುಗಳಿಂದ ವಿಲ್ಲಾರ್ರಿಯಲ್ ತಂಡವನ್ನು ಸೋಲಿಸಿ 34 ನೇ ಬಾರಿಗೆ ಲಾ ಲಿಗಾವನ್ನು ಗೆದ್ದುಕೊಂಡಿತು.
ಆಗಸ್ಟ್ ನಲ್ಲಿ ನಡೆದ ಮೊನಾಕೊ ಡೈಮಂಡ್ ಲೀಗ್ ನಲ್ಲಿ ಇಥಿಯೋಪಿಯನ್ ಖ್ಯಾತ ಓಟಗಾರ ಅಥ್ಲೀಟ್ ಕೆನೆನಿಸ್ ಬೆಕೆಲೆ ಅವರ ದಾಖಲೆಯನ್ನು ಜೋಶುವಾ ಚೆಪ್ಟೆಗೀ ಮುರಿದರು. 500 ಮೀ. ಓಟದ ಸ್ಪರ್ಧೆಯಲ್ಲಿ (12:35.36ಸೆ) ಗಿರು ತಲುಪಿದ ಚೆಪ್ಟೆಗೀ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಅಕ್ಟೋಬರ್ನಲ್ಲಿ ಉಗಾಂಡಾದ ಈ ಕ್ರೀಡಾಪಟು 10000 ಮೀ (26: 11.02 ಸೆ) ಯಲ್ಲಿ ವಿಶ್ವ ದಾಖಲೆಯನ್ನು ಉತ್ತಮಗೊಳಿಸಿದರು, ಅಲ್ಲಿ ಮತ್ತೊಮ್ಮೆ ಬೆಕೆಲೆ ಅವರ 15 ವರ್ಷದ ಹಳೆಯ (26: 17.53 ಸೆ) ದಾಖಲೆ ಮುರಿದಿತ್ತು.
ಆಗಸ್ಟ್ನಲ್ಲಿ ನಡೆದ ಆನ್ಲೈನ್ ಚೆಸ್ ಒಲಿಂಪಿಯಾಡ್ನಲ್ಲಿ ಭಾರತ ಹಾಗೂ ರಷ್ಯಾವನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು. ಫೈನಲ್ ಸಮಯದಲ್ಲಿ ಇಂಟರ್ನೆಟ್ ನಿಲುಗಡೆಯಿಂದಾಗಿ ಟ್ರೋಫಿಯನ್ನು ಹಂಚಿಕೊಳ್ಳಬೇಕಾಗಿತ್ತು, ಆದರೆ ಇದು ಭಾರತದ ಸಾಧನೆಗೇನೂ ಕುಂದು ತರಲಿಲ್ಲ.
ಸೆಪ್ಟೆಂಬರ್ ಆರಂಭದಲ್ಲಿ, ಯುಎಸ್ ಓಪನ್ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ತನ್ನ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದನು. ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಆಂಡಿ ಮುರ್ರೆ ಅವರ ಪ್ರಾಬಲ್ಯವನ್ನು ಮುರಿದು ಈ ಸಾಧನೆ ಮಾಡಿದ್ದರು. ಈ ಪಂದ್ಯಾವಳಿಯಲ್ಲಿ ನಾಲ್ಕನೇ ಸುತ್ತಿನಲ್ಲಿ ಅಜಾಗರೂಕತೆಯಿಂದ ಲೈನ್ಸ್ಪರ್ಸನ್ಗೆ ಹೊಡೆದಿದ್ದಕ್ಕಾಗಿ ಜೊಕೊವಿಕ್ ಅವರನ್ನು ಅನರ್ಹಗೊಳಿಸಲಾಯಿತು. ನವೋಮಿ ಒಸಾಕಾ ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಸ್ವೀಡನ್ನ ಅರ್ಮಾಂಡ್ ಡುಪ್ಲಾಂಟಿಸ್ ಈ ಸೆಪ್ಟೆಂಬರ್ ನಲ್ಲಿ ರೋಮ್ ನಲ್ಲಿ ಹೊಸ ವಿಶ್ವ ದಾಖಲೆಯನ್ನು(6 ಮೀಟರ್, 15 ಸೆಂಟಿಮೀಟರ್) ಸ್ಥಾಪಿಸಿದ್ದರು. ಅವರು 26 ವರ್ಷಗಳಿಂದ ಸೆರ್ಗೆ ಬುಬ್ಕಾ ಅವರ ಹೆಸರಲ್ಲಿದ್ದ (6 ಮೀ, 14 ಸೆಂ) ದಾಖಲೆಯನ್ನು ಡುಪ್ಲಾಂಟಿಸ್ ಅಳಿಸಿದ್ದರು.
ಅಕ್ಟೋಬರ್ನಲ್ಲಿ ಪೋರ್ಚುಗೀಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಮೈಕೆಲ್ ಷೂಮೇಕರ್ ಅವರ 91 ಗೆಲುವುಗಳ ದಾಖಲೆಯನ್ನು ಲೂಯಿಸ್ ಹ್ಯಾಮಿಲ್ಟನ್ ಮುರಿದರು ಮತ್ತು ಕೆಲ ರೇಸ್ ಗಳ ನಂತರದಲ್ಲಿ ಬ್ರಿಟ್ ಏಳನೇ ಬಾರಿಗೆ ವಿಶ್ವ ಡ್ರೈವರ್ಸ್ ರ ಚಾಂಪಿಯನ್ ಆದರು, ಇದು ಷೂಮೇಕರ್ ಅವರ ದಾಖಲೆಯನ್ನು ಸಮಗೊಳಿಸಿತು. ಹ್ಯಾಮಿಲ್ಟನ್ನ ಮರ್ಸಿಡಿಸ್ ತನ್ನ ಏಳನೇ ನೇರ ಕನ್ಸ್ಟ್ರಕ್ಟರ್ಗಳ ಚಾಂಪಿಯನ್ಶಿಪ್ ಅನ್ನು (2014 ರಿಂದ 2020 ರವರೆಗೆ) ಪಡೆದುಕೊಂಡಿದೆ, ಫೆರಾರಿಯ ಆರು ವರ್ಷಗಳ ದಾಖಲೆಯನ್ನು (1999 ರಿಂದ 2004) ಇದು ಅಳಿಸಿದೆ.
ಜರ್ಮನಿಯ ಕಲೋನ್ನಲ್ಲಿ ಕೊನೆಗೊಂಡ ಕಲೋನ್ ಬಾಕ್ಸಿಂಗ್ ವಿಶ್ವಕಪ್ನಲ್ಲಿ ಭಾರತ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದೆ.
ಈ ವರ್ಷ ಕ್ರೀಡಾ ಜಗತ್ತಿನಲ್ಲಿ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಟ್ಲಿಫ್ಟರ್ ಸಂಜಿತಾ ಚಾನು ಆರೋಪ ಮುಕ್ತವಾಗಿದ್ದಾರೆ. ಭಾರತದ ವೇಟ್ಲಿಫ್ಟರ್ ಸಂಜಿತಾ ಚಾನು ಅವರ ಮೇಲಿದ್ದ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಅಂತಾರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಫ್) ಕೈಬಿಟ್ಟಿದ್ದು, ಸಂಜಿತಾ ಚಾನು ಅವರ ಮೇಲಿನ ಆರೋಪ ‘ದೃಢೀಕೃತವಲ್ಲ’ ಎಂದು ಹೇಳಿತ್ತು.
ಫುಟ್ಬಾಲ್ ಕ್ರೀಡಾಕೂಟ ಆಯೋಜನೆಗೆ ಭಾರತ ಸಜ್ಜು: 2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ.ಏಷ್ಯನ್ ಫುಟ್ಬಾಲ್ ಒಕ್ಕೂಟ(ಎಎಫ್ಸಿ )ಮಹಿಳಾ ಫುಟ್ಬಾಲ್ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಮಾತ್ರವಲ್ಲದೆ 2027ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಸೇ ಆಸಕ್ತಿ ತೋರಿ ಬಿಡ್ ಸಲ್ಲಿಸಿದೆ.
2020ರಲ್ಲಿ ಪ್ರಮುಖ ಪ್ರಶಸ್ತಿಗೆ ಭಾಜನವಾದ ಕ್ರೀಡಾ ತಾರೆಯರು
- ಎಂ.ಸಿ. ಮೇರಿ ಕೋಮ್ ಗೆ ಪದ್ಮ ವಿಭೂಷಣ, ಪಿ.ವಿ. ಸಿಂಧು ಗೆ ಪದ್ಮ ಭೂಷಣ ಪ್ರಶಸ್ತಿ
- ಒ.ಬಿ. ದೇವಿ, ಎಂ.ಪಿ. ಗಣೇಶ್, ಜಿತು ರಾಯ್, ತರುಣ್ ದೀಪ್ ರೈ, ರಾಣಿ ರಾಂಪಾಲ್ ಗೆ ಪದ್ಮ ಶ್ರೀ ಪ್ರಶಸ್ತಿ
- ಪುಲ್ಲೇಲಾ ಗೋಪಿಚಂದ್ ಗೆ ಒಲಿಂಪಿಕ್ ಸಮಿತಿ ತರಬೇತುದಾರರ ಜೀವಮಾನ ಸಾಧನೆ ಪ್ರಶಸ್ತಿ
- ಪಿ.ವಿ ಸಿಂಧುಗೆ ವರ್ಷದ ಬಿಬಿಸಿ ಭಾರತೀಯ ಕ್ರೀಡಾಪಟು ಪ್ರಶಸ್ತಿ
- ಪಿಟಿ ಉಷಾ ಅವರಿಗೆ ಬಿಬಿಸಿ ಜೀವಮಾನ ಸಾಧನೆ ಪ್ರಶಸ್ತಿ
- ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ (ಬಿಡಬ್ಲ್ಯುಎಫ್) 'ಐ ಆ್ಯಮ್ ಬ್ಯಾಡ್ಮಿಂಟನ್ 'ಜಾಗೃತಿ ಅಭಿಯಾನದ ರಾಯಭಾರಿಯಾಗಿ ಪಿ.ವಿ. ಸಿಂಧು ನೇಮಕ
- ಸಾನಿಯಾ ಮಿರ್ಜಾ ಏಷ್ಯಾ / ಓಷಿಯಾನಿಯಾ ವಲಯದಿಂದ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯೆ
- ಕ್ರಿಸ್ಟಿಯಾನೊ ರೊನಾಲ್ಡೊಗೆ ಗ್ಲೋಬಲ್ ಸಾಕರ್ 'ಪ್ಲೇಯರ್ ಆಫ್ ದಿ ಸೆಂಚುರಿ' ಗೌರವ
2020ರಲ್ಲಿ ನಿವೃತ್ತರಾದ ಮಹತ್ವದ ಕ್ರೀಡಾ ತಾರೆಯರು
- ಐದು ಬಾರಿಯ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ವಿಜೇತೆ ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ,
- ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್
- ಚೈನಾ ಬ್ಯಾಡ್ಮಿಂಟನ್ ಸೂಪರ್ ಸ್ಟಾರ್ ಲಿನ್ ಡಾನ್
- ಡಬ್ಲ್ಯುಡಬ್ಲ್ಯುಇ ಲೆಜೆಂಡ್ ಅಂಡರ್ ಟೇಕರ್
2020ರಲ್ಲಿ ನಿಧನರಾದ ಮಹತ್ವದ ಕ್ರೀಡಾ ತಾರೆಯರು
- ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಕುಲ್ಲರ್
- ಭಾರತದ ದಿಗ್ಗಜ ಫುಟ್ಬಾಲ್ ಆಟಗಾರ ಪಿ.ಕೆ. ಬ್ಯಾನರ್ಜಿ
- ಭಾರತದ ಫುಟ್ಬಾಲ್ ದಿಗ್ಗಜ ಚುನಿ ಗೋಸ್ವಾಮಿ
- ಇಪ್ಪತು ಬಾರಿ ಪಿಜಿಎ ಟೂರ್ ವಿಜೇತ ಡೌಗ್ ಸ್ಯಾಂಡರ್ಸ್
- ಪಾಕಿಸ್ತಾನದ ಖ್ಯಾತ ಸ್ಕ್ವ್ಯಾಷ್ ಆಟಗಾರ ಅಜಂ ಖಾನ್
- ಖ್ಯಾತ ಟೆನ್ನಿಸ್ ತಾರೆ, ನಾಲ್ಕು ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಕಿರೀಟ ಜಯಿಸಿದ್ದ ಆ್ಯಶ್ಲೇ ಕೂಪರ್
- ಭಾರತದ ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಸೀನಿಯರ್
- ಭಾರತದ ಮಾಜಿ ಶೂಟರ್ ಮತ್ತು ತರಬೇತುದಾರೆ ಪೂರ್ಣಿಮಾ ಜಾನಾನೆ
- ಹಿರಿಯ ಬಾಸ್ಕೆಟ್ ಬಾಲ್ ಆಟಗಾರ ಕೆ.ರಘುನಾಥ್
- ಭಾರತದ ಮಾಜಿ ಫುಟ್ಬಾಲ್ ಆಟಗಾರ ಲೈಶ್ರಾಮ್ ಮನಿಟೋಂಬಿ ಸಿಂಗ್
- ಹಿರಿಯ ಅಥ್ಲೆಟಿಕ್ ಕೋಚ್ ಪುರುಷೋತ್ತಮ ರೈ
- ಫುಟ್ಬಾಲ್ ದಂತಕಥೆ ಆಟಗಾರ ಡಿಗೊ ಮರಾಡೋನ
- 'ಬ್ರಾಡೀ ಲೀ' ಖ್ಯಾತಿಯ ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಜಾನ್ ಹ್ಯೂಬರ್