Monday, September 22, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ, 18ನೇ ಸಾಂಸ್ಕೃತಿಕ ಸಿಂಚನ

 ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ, ಪ್ರಯುಕ್ತ18ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ  ಅದ್ದೂರಿಯಾಗಿ ನಡೆಯಿತು. 



ಕಳೆದ ಐದು ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಲೆಮರೆಯ ಕಾಯಿಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಬಾರಿಯ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಉಪ ಕೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಉದ್ಘಾಟಿಸಿದರು. ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾದ ಗಂಡಸಿ ಸದಾನಂದ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪ ಪೋಲೀಸ್ ಆಯುಕ್ತರಾದ (ಡಿಜಿಪಿ) ಡಾ. ಮಂಜುನಾಥ್ ಬಾಬು, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಗರ್ ನವಿಲೆ, ಜೂನಿಯರ್ ಅಪ್ಪು ಖ್ಯಾತಿಯ ಮೂಡಲಗಿ, ಕೆ,ಜಿ.ಎಫ್. ಖ್ಯಾತಿಯ ನಟ ಅನ್ಮೋಲ್ ವಿಜಯಭಟ್ಕಳ್, ಭೈರವಿ ನಾಟ್ಯ ಕಲಾರೂಪಸಂಸ್ಥೆಯ ಸಂಸ್ಥಾಪಕಿ ರೂಪ ಹೃಷಿಕೇಶ್ ಮತ್ತು ಸುಹಾಲಯ ಟ್ರಾವೆಲ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ವೀರಭದ್ರಸ್ವಾಮಿ ಮೊದಲಾದವರು ಭಾಗವಹಿಸಿದ್ದರು.



ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (ರಿ)ವತಿಯಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಹನ್ನೆರಡು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ  ಪುರಸ್ಕರಿಸಲಾಯಿತು. 



ಕಾರ್ಯಕ್ರಮದ ಸಾಂಸ್ಕೃತಿಕ ಸಂಜೆಯಲ್ಲಿ ಹಲವಾರು ಸಂಘ ಸಂಸ್ಥೆಯ ಗಾಯಕರು, ಕಲಾವಿದರು ಸಂಗೀತ ಹಾಗೂ ವೈವಿದ್ಯಮಯ ನೃತ್ಯ ಪ್ರದರ್ಶನವನ್ನು ನೀಡಿದರು. 


ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಭಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 



ಮೂರನೇ ವಿಶ್ವ ಕನ್ನಡ ಹಬ್ಬ ಸಂಚಾಲಕರಾದ ವಿಕಾಸ್,  ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಕೆ.ಎಸ್.  ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭ ಹಾಜರಿದ್ದರು

Saturday, September 20, 2025

ಶ್ವೇತಾಶ್ವತರೋಪನಿಷತ್ತಿನಲ್ಲಿ ಆತ್ಮದ ಗಾತ್ರದ ವಿವರಣೆ!



ನಮ್ಮಲ್ಲಿ ಯಾರೂ ತಮ್ಮ ದೇಹದಲ್ಲಿರುವ ಆತ್ಮವನ್ನು ಬರಿಗಣ್ಣಿನಿಂದ ನೋಡಿಲ್ಲ. ಶ್ವೇತಾಶ್ವತರೋಪನಿಷತ್ತಿನಲ್ಲ ಆತ್ಮದ ನಿಜವಾದ ಆಯಾಮ ಅಥವಾ ಗಾತ್ರವನ್ನು ವಿವರಿಸಲಾಗಿದೆ.

ಶ್ವೇತಾಶ್ವತರೋಪನಿಷತ್ತು ಕೃಷ್ಣ ಯಜುರ್ವೇದಕ್ಕೆ ಸಂಬಂಧಿಸಿದೆ ಮತ್ತು 6 ಅಧ್ಯಾಯಗಳಲ್ಲಿ 113 ಮಂತ್ರಗಳನ್ನು ಒಳಗೊಂಡಿದೆ. ಇದನ್ನು ಸಾ.ಶ.ಪೂ. 4 ನೇ ಶತಮಾನದ ಸುಮಾರಿಗೆ ರಚಿಸಲಾಗಿದೆ ಎಂದು ಅಂದಾಜಿಸಲಾಗಿದೆ.

ಈ ಉಪನಿಷತ್ತಿನ ಹೆಚ್ಚಿನ ಭಾಗವು ಶ್ವೇತಾಶ್ವತರ ಋಷಿಗಳಿಗೆ (ಶ್ವೇತಾಶ್ವತರ ಅಂದರೆ ಬಿಳಿ ಹೇಸರಗತ್ತೆಯ ಸೃಷ್ಟಿಸಿದವನು) ಸೇರಿದೆ.. ಇದರ ಇತರ ವ್ಯಾಖ್ಯಾನಕಾರರು ಆದಿ ಶಂಕರಾಚಾರ್ಯ, ವಿಜ್ಞಾನಾತ್ಮ, ಶಂಕರಾನಂದ ಮತ್ತು ನಾರಾಯಣ ತೀರ್ಥರು. ಶ್ವೇತಾಶ್ವತರೋಪನಿಷತ್ತು ಶೈವಧರ್ಮದ ವ್ಯವಸ್ಥಿತ ತತ್ತ್ವಶಾಸ್ತ್ರದ ಅತ್ಯಂತ ಆರಂಭಿಕ ಪಠ್ಯ ವಿವರಣೆಯಾಗಿದ್ದು, ಮೊದಲ ಬಾರಿಗೆ ರುದ್ರನನ್ನು ಈಶ (ಭಗವಂತ)ನ ಸ್ಥಾನಮಾನಕ್ಕೆ ಏರಿಸಿದೆ, ಇದೇ ನಂತರ ಶಿವನಾಗಿ ರೂಪುತಳೆದ ವಿಶ್ವವಿಜ್ಞಾನದ ಕಾರ್ಯಗಳನ್ನು ನಡೆಸುವ ದೇವರಾಗಿ ಬದಲಾಗಿದೆ.

ಬಾಲಗ್ರ ಸತಾ ಭಾಗಸ್ಯ ಶತಧಾ ಕಲ್ಪಿತಸ್ಯ ಚ ಭಾಗೋ ಜೀವಃ ಸ ವಿಜ್ಞೇಯಃ ಸ ಕಾನಂತ್ಯಾಯ ಕಲ್ಪತೇ || ಶ್ವೇತಾಶ್ವತರ ಉಪನಿಷದ್ (5.9)

ಎಂದರೆ - ಒಂದು ಕೂದಲನ್ನು ನೂರು ಭಾಗಗಳಾಗಿ ವಿಂಗಡಿಸಿ, ಮತ್ತೆ ಅಂತಹ ಪ್ರತಿಯೊಂದು ಭಾಗವು ನೂರು ಭಾಗಗಳಾಗಿ ವಿಂಗಡಿಸಲ್ಪಟ್ಟಾಗ, ಅಂತಹ ಪ್ರತಿಯೊಂದು ಭಾಗವು ಆತ್ಮದ ಗಾತ್ರವಾಗಿದೆ.

ಇದೇ ರೀತಿಯ ವಿವರಣೆಯನ್ನು ಸ್ವಾಮಿ ಪ್ರಭುಪಾದರು ಚೈತನ್ಯ ಚರಿತಾಮೃತದಲ್ಲಿ ಮಾಡಿದ್ದಾರೆ. ಅವರು ಹೇಳಿದಂತೆ - "ಒಂದು ಕೂದಲಿನ ತುದಿಯನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಬೇಕು ಮತ್ತು ಅಂತಹ ಒಂದು ಭಾಗವು ಚಿತ್-ಕಣ (ಚೇತನದ ಕಣ). ಅಂದರೆ, ಆತ್ಮದ ಪ್ರತ್ಯೇಕ ಕಣವು ಭೌತಿಕ ಪರಮಾಣುಗಳಿಗಿಂತ ಚಿಕ್ಕದಾದ ಆಧ್ಯಾತ್ಮಿಕ ಪರಮಾಣುವಾಗಿದೆ ಮತ್ತು ಅಂತಹ ಪರಮಾಣುಗಳು ಅಸಂಖ್ಯಾತವಾಗಿವೆ."

ಭಗವದ್ಗೀತೆಯೂ ಆತ್ಮದ ಗಾತ್ರವನ್ನು ಉಲ್ಲೇಖಿಸುತ್ತದೆ.

ಆತ್ಮವು ಅವಿನಾಶಿಯಾಗಿದ್ದು ಅದನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ ಎಂದು ಅದು ಹೇಳುತ್ತದೆ. "ಇಡೀ ದೇಹವನ್ನು ವ್ಯಾಪಿಸಿರುವ ವಸ್ತು(ಆತ್ಮ)ವು ಅವಿನಾಶಿ ಎಂದು ನೀವು ತಿಳಿಯಿರಿ. ಆ ಅವಿನಾಶಿ ಆತ್ಮವನ್ನು ಯಾರೂ ನಾಶಮಾಡಲು ಸಾಧ್ಯವಿಲ್ಲ." - ಭಗವದ್ಗೀತೆ 2.17

ಮುಂಡಕೋಪನಿಷತ್ತು ಮಾನವ ದೇಹದಲ್ಲಿ ಆತ್ಮವು ವಾಸಿಸುವ ಸ್ಥಳವನ್ನು ಮತ್ತಷ್ಟು ವಿವರಿಸುತ್ತದೆ. "ಆತ್ಮವು ಪರಮಾಣು ಗಾತ್ರದ್ದಾಗಿದೆ ಮತ್ತು ಪರಿಪೂರ್ಣ ಬುದ್ಧಿಶಕ್ತಿಯಿಂದ ಅದನ್ನು ಗ್ರಹಿಸಬಹುದು. ಈ ಪರಮಾಣು ಆತ್ಮವು ಐದು ವಿಧದ ಗಾಳಿಯಲ್ಲಿ (ಪ್ರಾಣ, ಅಪಾನ, ವ್ಯಾನ, ಸಮಾನ ಮತ್ತು ಉದಾನ) ತೇಲುತ್ತದೆ, ಹೃದಯದೊಳಗೆ ನೆಲೆಗೊಂಡಿದೆ ಮತ್ತು ಸಾಕಾರಗೊಂಡ ಜೀವಿಗಳ ದೇಹದಾದ್ಯಂತ ತನ್ನ ಪ್ರಭಾವವನ್ನು ಹರಡುತ್ತದೆ. ಐದು ವಿಧದ ಭೌತಿಕ ಗಾಳಿಯ ಮಾಲಿನ್ಯದಿಂದ ಕೂಡಿದ ಆತ್ಮವು ಶುದ್ಧವಾದಾಗ, ಅದರ ಆಧ್ಯಾತ್ಮಿಕ ಪ್ರಭಾವವು ಪ್ರದರ್ಶಿಸಲ್ಪಡುತ್ತದೆ." - ಮುಂಡಕ ಉಪನಿಷತ್ (3.1.9)

ನಾವು ಎಚ್ಚರವಾಗಿರುವಾಗ, ನಿದ್ರಿಸುವಾಗ ಮತ್ತು ಕನಸು ಕಾಣುವಾಗ ಪ್ರಾಣ (ಜೀವ) ಕಣ್ಣು, ಹೃದಯ ಮತ್ತು ಗಂಟಲಿನ ನಡುವೆ ಚಲಿಸುತ್ತದೆ ( 3 ಮನಸ್ಸಿನ ಸ್ಥಿತಿಗಳನ್ನು ತ್ರಿ-ಪುರಗಳು ಎಂದು ವಿವರಿಸಲಾದ


.

Monday, September 08, 2025

ಮಸ್ಕತ್ ನಲ್ಲಿ ಮೂರನೇ ವಿಶ್ವಕನ್ನಡ ಹಬ್ಬ: ಬಿತ್ತಿಪತ್ರ ಬಿಡುಗಡೆ

ಮಸ್ಕತ್ ನಲ್ಲಿ ನಡೆಯಲಿರುವ ಮೂರನೇ ವಿಶ್ವ ಕನ್ನಡ ಹಬ್ಬವನ್ನು ನವೆಂಬರ್ 28 ರಂದು ಆಯೋಜಿಸಲಾಗಿದ್ದು,  ಕಾರ್ಯಕ್ರಮದ ಬಿತ್ತಿಪತ್ರ ಬಿಡುಗಡೆ ಸಮಾರಂಭವನ್ನು ಹೆಚ್. ಎಸ್. ಆರ್. ಲೇಔಟ್ ನಲ್ಲಿರುವ ಸಮರ್ಥನಂ ಟ್ರಸ್ಟ್ ನಲ್ಲಿ  ಲೋಕಾರ್ಪಣೆಗೊಂಡಿತು.


 ಇಲ್ಲಿನ ಸಮರ್ಥನಂ ಟ್ರಸ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮೂರನೇ ವಿಶ್ವಕನ್ನಡ ಹಬ್ಬದ ಪದಾಧಿಕಾರಿಗಳ ಜೊತೆಯಲ್ಲಿ ಶಾರದಾ ಹಾಗೂ ಶ್ರಾವ್ಯ ರವರು ಪಲ್ಲಕ್ಕಿಯಲ್ಲಿ ಭೀತಿ ಪತ್ರವನ್ನು ವೇದಿಕೆಗೆ ತಂದು ಗಣ್ಯಾಧಿ ಗಣ್ಯರು ಬಿಡುಗಡೆಯನ್ನು ಮಾಡಿದರು. ಇದೇ ವೇಳೆ ಪಿ,ಎಸ್,  ರಂಗನಾಥ್ ಸಂಪಾದಿಸಿರುವ  'ಬಿಯಾಂಡ್ ದಿ ಹರಿಜಾನ್' ( ಇಂಡಿಯನ್ ವಾಯ್ಸಸ್ ಫ್ರಮ್ ಒಮಾನ್) ಪುಸ್ತಕವನ್ನು ಜನಾರ್ಪಣೆಗೊಳಿಸಿದರು.

 ಈ ಸಂದರ್ಭದಲ್ಲಿ ಮೂರನೇ ವಿಶ್ವಕನ್ನಡ ಹಬ್ಬದ ಪ್ರಧಾನ  ಕಾರ್ಯದರ್ಶಿಯನ್ನಾಗಿ ಚೈತ್ರಾ ಕೆ. ಎಸ್. ಹಾರೋಬೆನವಳ್ಳಿ,  ನೃತ್ಯಕ್ಕೆ ಸಹನಾ, ಗಾಯನಕ್ಕೆ ಚೇತನ್ ನಾಯ್ಕ್ ರವರನ್ನು ಆದೇಶ ಪತ್ರ  ವಿತರಿಸಿದರು  ಅಭಿನಂದಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸೋಮಣ್ಣ ಬೇವಿನಮರದ ಅವರು ಕನ್ನಡದ ಸಂಸ್ಕೃತಿ ಉಳಿಸಲು ಬೆಳೆಸಲು ನಮ್ಮ ಬೆಂಬಲ ಯಾವಾಗಲೂ ಇದ್ದೆ ಇರುತ್ತದೆ  ಎಂದು ತಿಳಿಸಿದರು.

 ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಮಾತನಾಡಿ ಕನ್ನಡದ ಕಾರ್ಯಕ್ರಮಗಳು ನಮ್ಮ ಜೀವಾಳ, ನಾಡಿನ ನೆಲ ಜಲ ಸಾಂಸ್ಕೃತಿಕತೆಗಾಗಿ ಸಾಕಷ್ಟು ಹಿರಿಯರು ಹೋರಾಟ ಮಾಡಿದ್ದಾರೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ರೀತಿಯಲ್ಲಿ ನಾವು ಕನ್ನಡವನ್ನು ರಕ್ಷಿಸಿದರೆ ಕನ್ನಡದಿಂದ ನಾವು ರಕ್ಷಿಸಲ್ಪಡುತ್ತೇವೆ ಎಂದು ತಿಳಿಸಿದರು.


 ಮಾಜಿ ಕೇಂದ್ರ ಸಚಿವ ಭಗವಂತ ಖೂಬ ರವರು ಮಾತನಾಡಿ ವಿಶ್ವದಾದ್ಯಂತ ಕನ್ನಡಿಗರು ನೆಲೆಸಿದ್ದಾರೆ ಯಾವುದೇ ಸಮುದಾಯ ಅತ್ಯುನ್ನತ ಸ್ಥಾನಕ್ಕೆ ಇರಬೇಕಾದರೆ ಅದರ ಸಂಸ್ಕೃತಿ ತಳಪಾಯ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಕನ್ನಡ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಹರಡೋಣ ವಿದೇಶದಲ್ಲಿರುವ ಕನ್ನಡಿಗರಲ್ಲಿ ಕನ್ನಡದ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಹೆಜ್ಜೆ ಹೆಜ್ಜೆಗೂ ಅಲ್ಲಿ ಕನ್ನಡಿಗರ ಪ್ರೀತಿ ಸಹಕಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಲ್ಲಿ ಕನ್ನಡದ ಹಬ್ಬ ನಡೆಯಲಿದೆ ಎಂದು  ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ರವರು ಕಣ್ಣಿಲ್ಲದವರು ಸೇರಿ ಅಂಗವಿಕಲರಿಗೆ ಬೆಳಕಾಗಿರುವ ಸಮರ್ಥನಂ ಸಂಸ್ಥೆಯ ಮಹಾಂತೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲು ಪಕ್ಷಾತೀತವಾಗಿ ರಾಜಕಾರಣಿಗಳು ಪ್ರಯತ್ನ ಮಾಡಬೇಕು ಎಂದು ಅಗ್ರಹಿಸಿದರು.

 ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಮಹಂತೇಶ್ ಕಿವಡಸಣ್ಣವರ್ ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಮಸ್ಕತ್ ನಲ್ಲಿ ನಡೆಯಲಿರುವ ಮೂರನೇ ವಿಶ್ವಕನ್ನಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದೀವಿ, ಕನ್ನಡದವನ್ನು ಉಳಿಸಿಕೊಳ್ಳಲು ಬೆಳೆಸಲು ಇಂತಹ ಕಾರ್ಯ ಹೆಜ್ಜೆ  ಹೆಜ್ಜೆಯೂ ಸಹಕಾರಿಯಾಗುತ್ತದೆ ಎಂದು ಹೇಳಿದರು.

 ಕಾರ್ಯಕ್ರಮದ ರೂವಾರಿ ಟಿ ಶಿವಕುಮಾರ್ ನಾಗರನವಿಲೆ ಮಾತನಾಡಿ ದುಬೈ, ಸಿಂಗಾಪುರ್ ಬಳಿಕ ವಿಶ್ವಕನ್ನಡ ಹಬ್ಬ ಮಸ್ಕತ್ ನಲ್ಲಿ ನಡೆಯಲಿದೆ. ಕನ್ನಡದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಸಾಕಷ್ಟು ಸವಾಲಿನಿಂದ ಕೂಡಿದ್ದ ಎರಡನೇ ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಿದ್ದೇನೆ, ಈ ಬಾರಿಯೂ ಎಲ್ಲ ಕನ್ನಡಿಗರು ಒಟ್ಟಾಗಿ ಹಬ್ಬವನ್ನು ಗೆಲ್ಲಿಸಿ ಎಂದರು. ಮೂರನೇ ವಿಶ್ವಕನ್ನಡ ಹಬ್ಬದ ಸಮಿತಿ ಅಧ್ಯಕ್ಷ ದಿನೇಶ್ ಜೋಶಿಯವರು ನಮ್ಮ ತನು, ಮನ, ಎಲ್ಲದರಲ್ಲಿಯೂ ನಮ್ಮ ಬೆಂಬಲವಿದೆ ಮುನ್ನುಗೋಣ ನಮ್ಮ ಕನ್ನಡಾಂಬೆಯ ಹಬ್ಬ ಆಚರಿಸಲು ಎಂದು ಪ್ರಶಂಸಿಸಿದರು. ಮಸ್ಕತ್ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಕರುಣಾಕರಾವ್, ಜಾನಕಿನಾಥ್, ಬಸವ ಬಳಗದ ಶಿವ ಕುಮಾರ್ ಕೆಂಚನಗೌಡ್ರ,  ಮೂರನೇ ವಿಶ್ವಕನ್ನಡ ಹಬ್ಬದ ಎಲ್ಲಾ ಪದಾಧಿಕಾರಿಗಳು  ಸೇರಿ ಹಲವರಿದ್ದರು.


ಹಲವಾರು ಗಣ್ಯಾಧಿ ಗಣ್ಯರು ಮಾತನಾಡಿ ಕನ್ನಡದ ಸೇವೆಗೆ ನಮ್ಮ ಬೆಂಬಲ ಯಾವಾಗಲು ಸಿದ್ದ ನಮ್ಮ ಕನ್ನಡದ ಸೇವೆ ಮಾಡುತ್ತಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಶಿವಕುಮಾರ್ ನಾಗರ ನಾವಿಲೆ ಹಾಗೂ ವಿಶ್ವ ಕನ್ನಡ ಹಬ್ಬದ ಸಮಿತಿಗೆ ಅಭಿನಂದಿಸಿದರು.

Tuesday, September 02, 2025

ತ್ಯಾಗರಾಜನಗರದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ ೧೫ನೇ ವರ್ಷದ ಭವ್ಯ ಗಣೇಶೋತ್ಸವ

ಶ್ರೀ ವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ೧೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಭವ್ಯವಾಗಿ ಜರುಗಿತು. ಈ ಬಾರಿ ವಿಶೇಷವಾಗಿ ಏಳು ದಿನಗಳ “ಸಪ್ತಾಹ” ಕಾರ್ಯಕ್ರಮ ನಡೆಯಿತು.


ಉತ್ಸವದಲ್ಲಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯ, ಶ್ರೀ ವಜ್ರಕ್ಷೆತ್ರ ವ್ಯವಸ್ಥಾಪಕರು ವಾದಿರಾಜ ಆಚಾರ್ಯರು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯರ ಉಪಸ್ಥಿತಿ ವಿಶೇಷ ಆಕರ್ಷಣೆಯಾಯಿತು.

ಉತ್ಸವದಲ್ಲಿ ಪ್ರತಿದಿನ ವಿವಿಧ ಪೂಜೆಗಳು, ಮೂರು ದಿನಗಳಲ್ಲಿ ಮೂರೂ ಬಾರಿ ಅನ್ನಸಂತರ್ಪಣೆ, ಹಾಗೂ ಸ್ವಚ್ಛತೆ – ಪರಿಸರ ಶುದ್ಧೀಕರಣ ಕಾರ್ಯಕ್ರಮ ನಡೆಯಿತು. ಜೊತೆಗೆ ಭಜನೆ, ಸಂಗೀತ, ನೃತ್ಯ, ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಗೆದ್ದವು.


ಸುಂದರ ಅಲಂಕಾರದ ಗಣಪತಿ ವಿಗ್ರಹ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು, ಕೊನೆಯ ದಿನ ಭವ್ಯ ವಿಸರ್ಜನೆ ಮೆರವಣಿಗೆ ಉತ್ಸಾಹಭರಿತವಾಗಿ ನೆರವೇರಿತು.

Wednesday, August 27, 2025

ನಮ್ಮಲ್ಲಿನ ಸ್ಥಳ ಪುರಾಣಗಳು (Mythes)- 128

 ಕೊಳನಕಲ್ ಮಹಾಗಣಪತಿ ದೇವಸ್ಥಾನ..(Kolanakal Mahaganapati Temple)


ಬೃಹತ್ ಬಂಡೆಯ ಮೇಲೊಂದು ಕೊಳ ಅಲ್ಲೊಂದು ಸುಂದರ ದೇಗುಲ ಇದು ಕುಂದಾಪುರ ತಾಲೂಕಿನಲ್ಲಿರುವ ಕೊಳನಕಲ್ ಮಹಾಗಣಪತಿ ದೇವಸ್ಥಾನ..
ಮಹಾಗಣಪತಿ ದೇವಸ್ಥಾನ ಕೊಳನಕಲ್ಲು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿರುವ ಪ್ರಕೃತಿದತ್ತವಾದ ಪುರಾತನ ದೇವಾಲಯ. ಈ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಗಣಪತಿಯ ಮಹಿಮೆ ಅಪಾರ. ಸಂಕಷ್ಟಿ , ಸಂಕ್ರಮಣ ದಿನಗಳಲ್ಲಿ ಅಪಾರ ಭಕ್ತಾಬಿಮಾನಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಾರೆ. ದೇವಾಲಯವು ಬ್ರಹತ್ ಕಲ್ಲು ಬಂಡೆಯ ಮೇಲೆ ಸ್ಥಾಪಿತವಾಗಿದೆ. ಈ ಬಂಡೆಯ ಆನೆಯ ಆಕಾರ ಹೊಂದಿದ್ದು ನೆಲದ ಮೇಲೆ ನೀರು ಇಲ್ಲದ ಈ ಕಾಲದಲ್ಲಿ ಕಲ್ಲು ಬಂಡೆಯ ಮೇಲೆ ಸದಾ ಕಾಲ ನೀರು ಇರುವುದು ಇಲ್ಲಿಯ ವಿಶೇಷ ಈ ಕಾರಣಕ್ಕಾಗಿಯೇ "ಕೊಳನಕಲ್ಲು" ಎಂದು ಪ್ರಸಿದಿಯಾಗಿದೆ. ಅಭಿವೃದ್ಧಿಯ ಹೊಸ್ತಿಲಲ್ಲಿರುವ ಈ ದೇವಾಲಯಕ್ಕೆ ಭಕ್ತರ ಸಂಖ್ಯೆ ದಿನ ದಿನಕ್ಕೆ  ಏರುತ್ತಿದೆ.,
ಕೊಳ  ಕಲ್ಲು - ಕೊಳವನ್ನು ಹೊಂದಿರುವ ದೈತ್ಯ ಬಂಡೆಯ ಮೇಲೆ ಗಣೇಶನ ಗರ್ಭಗುಡಿ ಇದೆ. ಹಾಗಾಗಿ ಇದಕ್ಕೆ ಕೊಳಂಕಲ್ಲು ಎಂದು ಹೆಸರು ಬಂದಿದೆ.ಈ ಕೊಳದ ನೀರು ಎಂದಿಗೂ ಒಣಗುವುದಿಲ್ಲ. 





***
ಹಲವಾರು ವರ್ಷಗಳ ಹಿಂದೆ, ಬರಗಾಲದ ಪರಿಸ್ಥಿತಿಯನ್ನು ನೀಗಿಸಲು, ಅಳುಪ ರಾಜನು ಚೌಳಿಕೆರೆ ಬಾರ್ಕೂರಿನಲ್ಲಿ ಒಂದು ಕೆರೆಯನ್ನು ನಿರ್ಮಿಸಿದನು. ಆ ಸಮಯದಲ್ಲಿ, ಗಣೇಶನ ರೂಪ ಇದ್ದ ಬಂಡೆ ಇಲ್ಲಿ ಬಿದ್ದಿತು.
ಆಗ ಕೆಲವರು ಇಡೀ ಗಣೇಶ ವಿಗ್ರಹವನ್ನು ತಾವು ತೆಗೆದುಕೊಂಡರಾದರೆ ದೇವರ ಕಿರೀಟ (ಶಿರದ ಕವಚ)  ಹಾರಿ ಇಲ್ಲಿ ಬಿದ್ದಿತು ಎಂದು ಹೇಳುತ್ತಾರೆ, ಮತ್ತು ಉಳಿದ ಭಾಗ ಚೌಳಿಕೆರೆ ಬಳಿ ಬಿದ್ದಿದೆ ಎನ್ನಲಾಗಿದೆ. ಇಂದು, ನಾವಲ್ಲಿ ಭೈರವ ಗಣಪತಿ ದೇವಾಲಯವನ್ನು ಕಾಣಬಹುದು..
ದೇವರು ಹಾರಿಬಂದ ಕಾರಣ, ಈ ಗ್ರಾಮಕ್ಕೆ ಹಾರಿದ ಹಳ್ಳಿ ಎಂಬ ಹೆಸರು ಬಂದಿತು. ಅದು ಕಾಲಾನಂತರದಲ್ಲಿ ಹಾರ್ದಳ್ಳಿಯಾಗಿದೆ.. ಕೆಲವರು ಇಲ್ಲಿನ ಗಣೇಶನು ಮಂಡಿಯೂರಿ ಕುಳಿತ ಭಂಗಿಯಲ್ಲಿದ್ದಾನೆ ಆದ್ದರಿಂದ ಮಂಡಿಹಳ್ಳಿ ಎಂದು ಹೆಸರು ಬಂದಿದೆ, ಅದು ಕಾಲಾಂತರದಲ್ಲಿ ಮಂಡಳ್ಳಿಯಾಗಿದೆ ಎಂದು ಹೇಳುತ್ತಾರೆ.
ತೆರೆದ ಗರ್ಭಗುಡಿಯಲ್ಲಿ ಬೃಹತ್ ಬಂಡೆಯ ಕೆಳಗೆ ಗಣೇಶನನ್ನು ಕಾಣಬಹುದು. ಕೊಳದ ನೀರನ್ನು ಬಳಸಿ ಗಣೇಶನ ಅಭಿಷೇಕವನ್ನು ಮಾಡಲಾಗುತ್ತದೆ. ಸಂಕಷ್ಟಿ ಮತ್ತು ಗಣೇಶ ಚತುರ್ಥಿಯಂದು ಭಕ್ತರು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುತ್ತಾರೆ.




Sunday, August 17, 2025

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 127

 ಕೊಟ್ಟಿಯೂರು (Kottiyoor)


ಸುತ್ತಲೂ ದಟ್ಟಕಾಡು. ನಡುವಲ್ಲೊಂದು ವಾವಲಿ ನದಿ, ನದಿಯ ಆಕಡೆಯೊಂದು ಈ ಕಡೆಯೊಂದು ಒಂದೇ ದೇವಸ್ಥಾನದ ಎರಡು ಭಾಗಗಳು. ಅದುವೇ ಕೊಟ್ಟಿಯೂರು ದೇವಸ್ಥಾನ ಕೇರಳದ  ಕಣ್ಣುರು ಜಿಲ್ಲೆಯ ಬೆಟ್ಟಗುಡ್ಡಗಳ ಮಧ್ಯೆ ಅಂಕು ಡೊಂಕಾಗಿ ಹಚ್ಚ ಹಸಿರ ಪ್ರಕೃತಿ ಮಧ್ಯೆ ಸಾಗೋ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಕೊಟ್ಟಿಯೂರು ದೇವಸ್ಥಾನ ಸಿಗುತ್ತದೆ. ಬೆಂಗಳೂರಿನಿಂದ ಸುಮಾರು 278 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ನೀವು ವಿಮಾನ ಮಾರ್ಗದ ಮೂಲಕ ಹೋಗಲು ಬಯಸಿದರೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಈ ಪವಿತ್ರವಾದ ದೇವಾಲಯವಿದೆ. ಇಲ್ಲಿಗೆ ನೀವು ಟ್ಯಾಕ್ಸಿಯ ಮೂಲಕ ಭೇಟಿ ನೀಡಬಹುದು. ಇಲ್ಲಿ ಎರಡು ದೇವಸ್ಥಾನವಿದೆ. ಒಂದು ಇಕ್ಕರೆ ಕೊಟ್ಟಿಯೂರು ಮತ್ತಿನ್ನೊಂದು ಅಕ್ಕರೆ ಕೊಟ್ಟಿಯೂರು. ಇಕ್ಕರೆ ಕೊಟ್ಟಿಯೂರು ವರ್ಷದ 11 ತಿಂಗಳೂ ತೆರೆದಿರುತ್ತದೆ. ಆದ್ರೆ ಅಕ್ಕರೆ ಕೊಟ್ಟಿಯೂರು ವರ್ಷದಲ್ಲಿ ಕೇವಲ 28 ದಿನಗಳು ಮಾತ್ರ ತೆರೆದಿರುತ್ತದೆ. ಈ ದೇವಸ್ಥಾನವೇ ತನ್ನ ವಿಶಿಷ್ಟ ನೆಲೆ, ಭಾವನೆ ಮತ್ತು ಸರಳತೆಯಿಂದಾಗಿ ಕೇರಳದಲ್ಲಿ ಮನೆ ಮಾತಾಗಿದೆ. 

ಇದು ಬೃಹ್ಮ ವಿಷ್ಣು ಮಹೇಶ್ವರ ಸೇರಿದಂತೆ ಸಕಲ ದೇವಾನುದೇವತೆಗಳೂ ಒಟ್ಟಿಗಿರೋ(ಕೂಡಿ) ಊರು, ಹಾಗಾಗಿ ಕೂಡಿಯೂರು ಅನ್ನೋ ಹೆಸರು ಬಂತು. ಕಾಲಕ್ರಮೇಣ ಕೂಡಿಯೂರು ಅನ್ನೋದು ಜನರ ಬಾಯಲ್ಲಿ ಕೊಟ್ಟಿಯೂರು ಆಗಿದೆ.. ಇನ್ನೊಂದು ರೀತಿಯಲ್ಲಿ ನೋಡಿದರೆ ದೇವಾಲಯಕ್ಕೆ ಕೊಟ್ಟಿಯೂರು ಎಂಬ ಹೆಸರು ಕತ್ತಿ-ಯೂರ್ ನಿಂದ ವಿಕಸನಗೊಂಡಿದೆ, ಇದು ಪುರಳಿಮಲೆಯ ಕಟ್ಟನ್ ರಾಜವಂಶದೊಂದಿಗೆ ಸಂಬಂಧ ಹೊಂದಿದೆ. 

ನದಿಯ ಪಶ್ಚಿಮ ದಿಕ್ಕಿನಲ್ಲಿ ಬೃಹತ್ ಶಾಶ್ವತ ದೇವಸ್ಥಾನದ ಕಟ್ಟಡಗಳನ್ನು ಹೊಂದಿರೋ, ವರ್ಷದ ಹನ್ನೊಂದು ತಿಂಗಳು ತೆರೆದಿದ್ದು ಒಂದು ತಿಂಗಳು ಮುಚ್ಚಲಾಗೋ ದೇವಾಲಯ, ವಡಕ್ಕುನಾಥನ್ ಸ್ಥಿತ ಇಕ್ಕರೆ ಕೊಟ್ಟಿಯೂರಾದರೆ... ಯಾವೊಂದೂ ದೇವಸ್ಥಾನದ ರಚನೆಯೇ ಇಲ್ಲದೆ ಬಯಲ ಪೀಠದ ಮೇಲೊಂದು ಲಿಂಗವಿದ್ದೂ ಕೂಡಾ ವರ್ಷದಲ್ಲಿ ಒಂದು ತಿಂಗಳು ಮಾತ್ರ ದರ್ಶನಕ್ಕೆ ಅವಕಾಶವಿರೋ, ಉಳಿದಂತೆ ವರ್ಷಪೂರ್ತಿ ಪ್ರವೇಶ ನಿಶಿದ್ಧವಿರೋ ಬಯಲು ದೇವಾಲಯವೇ ಸ್ವಯಂಭೂ ಲಿಂಗರೂಪದ ಕಿಳಕ್ಕೇಶ್ವರನ್ ಸ್ಥಿತ ಅಕ್ಕರೆ ಕೊಟ್ಟಿಯೂರು...

ಇಲ್ಲಿನ ಪ್ರವೇಶ ನಿಶಿದ್ಧ ಎಷ್ಟು ಕಟ್ಟುನಿಟ್ಟು ಅಂದ್ರೆ, ಒಂದ್ಸಲ ಇಲ್ಲಿಗೆ ಸ್ವಯಂ ಶಂಕರಾಚಾರ್ಯರೇ ಭೇಟಿನೀಡಿದ್ದ ಸಂದರ್ಭದಲ್ಲಿಯೂ ಕೂಡಾ ವೈಶಾಖಮಾಸವಾಗಿರದ ಕಾರಣ ನದಿ ದಾಟದೆ ಅಲ್ಲಿಂದಲೇ ಕೈಮುಗಿದು ಹೋಗಿದ್ದರಂತೆ.. 

***

ಒಮ್ಮೆ ಶಿವನ ಮಾವನಾದ ಹಾಗೂ ಸತಿ ದೇವಿಯ ತಂದೆಯಾದ ದಕ್ಷ ಪ್ರಜಾಪತಿಯು ಯಾಗವನ್ನು ಹಮ್ಮಿಕೊಂಡಾಗ ಅವನು ಶಿವನನ್ನು ತನ್ನ ಯಜ್ಞಕ್ಕೆ ಆಹ್ವಾನಿಸದೇ ಆತನನ್ನು ಅವಮಾನ ಮಾಡುತ್ತಾನೆ. ಇದರಿಂದ ಕೋಪಗೊಂಡ ಸತಿ ದೇವಿಯು ತಂದೆ ಆಯೋಜಿಸಿದ್ದ ಯಜ್ಞ ಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ಸ್ವಂಯಚಾಲಿತವಾಗಿ ತ್ಯಜಿಸುತ್ತಾಳೆ.  ದಕ್ಷನು ಭೃಗುಮಹರ್ಷಿಗಳ ನೇತೃತ್ವದಲ್ಲಿ ಯಾಗ ನಡೆಸಿದ, ಸತಿ ಆ ಯಜ್ಞಕುಂಡದಲ್ಲಿ ಪ್ರಾಣಬಿಟ್ಟ ಜಾಗವೇ ಈ ಅಕ್ಕರೆ ಕೊಟ್ಟಿಯೂರು. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ಬಂದು ದರ್ಶನ ಮಾಡಿದ್ರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಅಂದು ಆಶೀರ್ವಾದ ಮಾಡಿದನು.. 

ಆ ಘಟನಾವಳಿಗಳ ಸಂಪೂರ್ಣ ಯಥಾವತ್ತು ಪುನರ್‌ಸೃಷ್ಟಿಯೇ ವೈಶಾಖ ಮಾಸದಲ್ಲಿ 27ದಿನಗಳ ಕಾಲ ನಡೆಯೋ ವೈಶಾಖ ಮಹೋತ್ಸವ.

ಪಶ್ಚಿಮದ ಇಕ್ಕರೆ ದೇವಸ್ಥಾನದಿಂದ ತರಲಾಗೋ ಉತ್ಸವ ಮೂರ್ತಿಯನ್ನು ಇಲ್ಲಿ ಪ್ರತಿಷ್ಢಾಪಿಸಲಾಗುತ್ತದೆ. ಹಾಗಾಗಿ ಈ 27ದಿನ ಆ ದೇವಾಲಯ ಬಂದ್. (ಈ ವರ್ಷ ಜೂನ್ 8ರಿಂದ ಜುಲೈ 4ರವರೆಗೆ ನಡೆದಿದೆ..) ಇಲ್ಲಿ ಅಂದಿನ ಋಷಿಮುನಿಗಳ ಯಾಗಶಾಲೆಗಳಂತೆಯೇ ತಾಳೆಯ ಪರ್ಣಕುಟೀರ, ತಾಳೆಗರಿಯ ಛತ್ರಿಗಳು ಸೇರಿದಂತೆ ಎಲ್ಲವೂ ಯಥಾವತ್ತು ನಿರ್ಮಾಣ. ಮೊದಲ ದಿನ ಆನೆಯೊಂದಿಗೆ ಶುರುವಾಗೋ ಮಹೋತ್ಸವ, ಕೊನೆಯ ದಿನ ಇದಿಷ್ಟನ್ನೂ ಅದೇ ಆನೆಯಿಂದಲೇ ನೆಲಸಮಗೊಳಿಸೋ ಮುಖಾಂತರ ಕೊನೆಯಾಗುತ್ತದೆ...


Friday, August 15, 2025

ಪೆಟ್ಲು ಎಂಬ ಆಟಿಕೆಯ ಬಂದೂಕು ನಮ್ಮ ಬಾಲ್ಯದ ಆಟ...

ನಿಮ್ಮಲ್ಲಿ ಎಷ್ಟು ಜನರಿಗೆ ಈ ಪೆಟ್ಲು ಕಾಯಿ ನೆನಪಿದೆ?. ನಾವು ಇದನ್ನು ಪೆಟ್ಲು - ಪೆಟ್ಲು ಕಾಯಿ ಎಂದು ಕರೆಯುತ್ತಿದ್ದೆವು, ಇದು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿನ ಅತ್ಯಂತ ಶಕ್ತಿಶಾಲಿ ಬಂದೂಕುಗಳಲ್ಲಿ ಒಂದಾಗಿದೆ. ಪೆಟ್ಲು ಕೋವಿ ಅಥವಾ ಪೆಟ್ಲು ಗನ್, ವಾಯು ಸಂಕೋಚನದ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಕೃಷ್ಣಾಷ್ಟಮಿ ಸಮಯದಲ್ಲಿ  ಬಹುತೇಕ ಎಲ್ಲಾ ಮಕ್ಕಳ ಕೈಯಲ್ಲಿ ಇರುತ್ತಿತ್ತು.

ಪೆಟ್ಲು ಎಂದರೆ ಆಟವಾಡಲು ಬಳಸುವ ಒಂದು ರೀತಿಯ ಆಟಿಕೆ. ಇದು ಬಿದಿರಿನ ಕೊಳವೆ ಮತ್ತು ಮರದ ಕಡ್ಡಿಯಿಂದ ಮಾಡಲ್ಪಟ್ಟಿದೆ. ಬಿದಿರಿನ ಕೊಳವೆಯ ಒಳಗೆ ಕಾಯಿಯನ್ನು ಹಾಕಿ, ಕಡ್ಡಿಯಿಂದ ಒತ್ತಿದರೆ, ಕಾಯಿ ಜೋರಾಗಿ ಶಬ್ದ ಮಾಡುತ್ತಾ ಹೊರಗೆ ಚಿಮ್ಮುತ್ತದೆ.
ಪೆಟ್ಲು ಕಾಯಿ ಆಟಿಕೆ ಮಲೆನಾಡಿನ ಅಂದಿನ ಮಕ್ಕಳ ಆಟಿಕೆಗಳ ಒಂದು ಭಾಗವಾಗಿತ್ತು.  ಈ ಆಟಿಕೆ ಮಕ್ಕಳಿಗೆ ಬಹಳ ಖುಷಿ ಕೊಡುತ್ತದೆ.  ಸೌಂಡು ಚಂದ ಬರಬೇಕು ಅಂದ್ರೆ ಪೆಟ್ಲೆ ಮುಂದುಗಡೆ ತೆಂಗಿನ ಓಲೆಯಲ್ಲಿ ಸ್ವಲ್ಪ ಸುತ್ತಿ ಆಗ ಪೆಟ್ಲೆಯಲ್ಲಿ ಸೌಂಡ್ ಚೆನ್ನಾಗಿ ಬರುತ್ತಿತ್ತು.
ಮಳೆ ಜೋರಾದಾಗ ಮಕ್ಕಳು ಒಂದೆಡೆ ಕೂತು ಪೆಟ್ಲಾಟ ಆಡೋದು ಎಂತಾ ಖುಷಿ ಇತ್ತು... ಕೃಷ್ಣ ಜನ್ಮಾಷ್ಟಮಿ ವಿಟ್ಲ ನಿಂಗಿ ಹೊತ್ತು ಈ ಪೆಟ್ಲಾಟದ ಗಮ್ಮತ್ತು ಅನುಭವಿಸಿದವರಿಗೆ ಗೊತ್ತು..
ಇನ್ನು ಪೆಟ್ರೋಲ್ ಕಾಯಿ ಉಪ್ಪಿನಕಾಯಿ ಮಾಡೋ ಕ್ರಮವೂ ಇತ್ತು..
ಪೆಟ್ಲು ಕಾಯಿ / ಆರಮರಲು
ಲಿಂಬೆಕಾಯಿ ಜೊತಿಗೆ  ಪೆಟ್ಲುಕಾಯಿ ಸೇರ್ಸಿ ಉಪ್ಪಿನಕಾಯಿ ಮಾಡಿರೆ ಊಟಕ್ಕೆ ಲಾsssಯ್ಕ್ ಆತಿತ್.. ಈ ಮಳೆಗಾಲದ್ ಸುರುಲಿ ಮಲೆನಾಡಿನಲ್ಲಿ ಇಂಬ್ಳದ ಗಿಜಿ ಗಿಜಿ ಅಲ್ಲಿ ಪೆಟ್ಲುಕಾಯಿ ಕುಯ್ದು ತರುದೇ ಒಂದ್ ದೊಡ್ ರಗಳೆ ಆದ್ರೂ ಚಪಲ ಬಿಡೂದಿಲ್ಲ, ಎಸ್ಟ್ ಕಷ್ಟ ಆದ್ರೂ ಹೋಗ್ ತರುದೇ ಉಪ್ಪಿನ್ಕಾಯಿ ಹಾಕುದೇ......
ಮಲೆನಾಡಿನಲ್ಲಿ ಶ್ರಾವಣ ಮಾಸ, ಸಾಲು ಹಬ್ಬಗಳ ಆಗಮನದ ಸೂಚನೆ ಕೊಡಲು ಕಾಡಿನಲ್ಲಿ ಕೆಲ ವಿಶಿಷ್ಟ ಸಸ್ಯಗಳು ತಲೆ ಎತ್ತಿ ಹಸಿರು ತುಂಬಿ ಹೂ ಕಾಯಿ ಬಿಡಲಾರಂಭಿಸುತ್ತವೆ. ಅವುಗಳಲ್ಲಿ ಈ ಸಸ್ಯ ರೂಟೇಸಿ , ಸಿಟ್ರಸ್ ಕುಟುಂಬದ ಒಂದು ಸದಸ್ಯ. ಇದು ಅರಮರಲ ಕಾಯಿ ಅಥವಾ ಪೆಟ್ಲು ಕಾಯಿ. ಈಗ ಗಿಡ ಕಾಡಲ್ಲಿ ಹೂ ಕಾಯಿ ಕಟ್ಟುತ್ತಾ ಕೃಷ್ಣ ಜನ್ಮಾಷ್ಟಮಿ ಕಾಲ, ಹಾಗೂ  ಪೆಟ್ಲು ಹಬ್ಬವನ್ನು ಆಹ್ವಾನಿಸುತ್ತಿದೆ. ಈ ಗಿಡದ ಎಲೆ ಕಾಯಿಗಳಿಗೆ ವಿಶಿಷ್ಟ ಲಿಂಬೆ ಗಿಡದ ಆರೋಮ, ಮುಳ್ಳುಗಳು, ಅರಮರಲು ಕಾಯಿ ಉಪ್ಪಿನಕಾಯಿ ಬಲು ಚೆಂದ.
ಬಿಸಿ ಬಿಸಿ ಕೆಂಪಕ್ಕಿ ಗಂಜಿ + ತುಪ್ಪ ಅದುಕ್ಕೆ ಪೆಟ್ಲುಕಾಯಿ ಉಪ್ಪಿನ್ ಕಾಯಿ  ಆ ಹಾ ಅದರ ಗಮ್ಮತ್ತೇ ಬೇರೆ.....

.