ಎಂ.ಕೆ. ಇಂದಿರಾ ರವರ ಎರಡು ಕಾದಂಬರಿಗಳು
ನನ್ನ ಆತ್ಮೀಯ ಗೆಳೆಯರೆಲ್ಲರಿಗೂ ನನ್ನ ನಮಸ್ಕಾರ
ಈ ಬಾರಿ ನಾನು ಹೇಳ ಹೊರಟಿರುವುದು ಕನ್ನಡದ ಖ್ಯಾತ ಲೇಖಕಿಯರಲ್ಲಿ ಒಬ್ಬರಾದ ಎಂ.ಕೆ. ಇಂದಿರಾ ರವರ ಎರಡು ಕಾದಂಬರಿಗಳ ಬಗ್ಗೆ. ನಾನು ಇತ್ತೀಚೆಗೆ ಓದಿದ ಆ ಎರಡು ಕಾದಂಬರಿಗಳ ಕುರಿತು ನಿಮ್ಮೊಂದಿಗೂ ಕೆಲ ವಿಚಾರ ಹಂಚಿಕೊಳ್ಳೋಣ ವೆನಿಸಿ ಬರೆಯಲು ಕುಳಿತೆ.
ಮೊದಲನೆಯದಾಗಿ ಎಂ.ಕೆ. ಇಂದಿರಾ ಕನ್ನಡದ ಒಬ್ಬ ಮಹತ್ವದ ಕಾದಂಬರಿಗಾರ್ತಿ . ಇವರ ‘’ತುಂಗಭದ್ರಾ’’, ‘’ಸದಾನನಂದ’’, ‘’ಗೆಜ್ಜೆ ಪೂಜೆ’’, ‘’ಫಣಿಯಮ್ಮ ‘’ಇವೇ ಮೊದಲಾದ ಕಾದಂಬರಿಗಳು ಇಂದಿಗೂ ಬಹಳ ಜನಪ್ರಿಯವಾದವು. ಫಣಿಯಮ್ಮ ಹಾಗೂ ಗೆಜ್ಜೆ ಪೂಜೆ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ. ಇಂತಹಾ ಮಹತ್ವಪೂರ್ಣ ಲೇಖಕಿಯ ಎರಡು ಕಾದಂಬರಿಗಳ ಕುರಿತಷ್ಟು ಬರೆಯಬೇಕೆಸಿತು.
ಮೊದಲಿಗೆ ನಾನೋದಿದ ಕಾದಂಬರಿಗಳಾವುವು ಎನ್ನುವುದನ್ನು ಹೇಳಿಬಿಡುತ್ತೇನೆ. ನಾನು ಇತ್ತೀಚೆಗೆ ಓದಿದ ಕಾದಂಬರಿಗಳು ”ಸದಾನಂದ”(Sadananda) (ಕಾದಂಬರಿ ಪ್ರಥಮ ಪ್ರಕಟನೆ ಕಂಡದ್ದು ೧೯೬೫ ರಲ್ಲಿ. ಕಾದಂಬರಿಯು ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನವನ್ನು ಪಡೆದಿದ್ದು, ೨೦೦೬-೦೮ ರ ಮದ್ಯದಲ್ಲಿ ”ಇಂದಿನ ಓದುಗರಿಗೆ ಹಿಂದಿನ ಕಾದಂಬರಿಗಳು” ಶೀರ್ಷಿಕೆಯಲ್ಲಿ ಮಯೂರ ಮಾಸಪತ್ರಿಕೆಯಲ್ಲಿಯೂ ಪ್ರಕಟವಾಗಿತ್ತು. ) ಹಾಗೂ ”ಫಣಿಯಮ್ಮ”(Phaniyamma)( ಕಾದಂಬರಿ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದೆ, ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವನ್ನು ಸಹ ತನ್ನದಾಗಿಸಿಕೊಂಡಿದೆ.). ಈ ಎರಡು ಕಾದಂಬರಿಗಳೂ ಇಂದಿರಾರವರ ಮಹತ್ವಪೂರ್ಣ ಕೃತಿಗಳು. ಎರಡರಲ್ಲಿಯೂ ಮಲೆನಾಡು ಪರಿಸರ ಹಾಸುಹೊಕ್ಕಾಗಿದೆ. ಹಾಗೆಯೇ ಮಲೆನಾಡಿಗರ ಜೀವನ ಶೈಲಿಯ ಚಿತ್ರಣ , ಪಾತ್ರಗಳಿಗೆ ತಕ್ಕುದಾದ ಭಾಷೆಯ ಬಳಕೆ ನಮ್ಮ ಗಮನ ಸೆಳೆಯುತ್ತದೆ. ಸದಾನಂದ” ದಲ್ಲಿ ಬರುವ ಕಾದಂಬರಿ ಆರಂಭದ ಸನ್ನಿವೇಷಗಳು ಮಲೆನಾಡಿಗರ ಬಾಲ್ಯ ಜೀವನ ಚಿತ್ರವನ್ನು ಸಾಕಷ್ಟು ಶಕ್ತಿಯುತವಾಗಿ ಕಟ್ಟಿಕೊಡುತ್ತವೆ. ಹಾಗೆಯೇ ಫಣಿಯಮ್ಮ” ದಲ್ಲಿಯೂ ಸಹ 19-20 ನೇ ಶತಮಾನದಲ್ಲಿನ ಸಂಪ್ರದಾಯ, ಮಡಿವಂತ ಕುಟುಂಬ ಜೀವನವನ್ನು ನಮ್ಮೆದುರು ತೆರೆದಿಡುವುದನ್ನು ಕಾಣಬಹುದು. ಇನ್ನೋಂದು ಮುಖ್ಯ ವಿಚಾರವೆಂದರೆ ಈ ಎರಡೂ ಕಾದಂಬರಿಗಳು ನಮ್ಮ ಹಿಂದಿನವರ ತಲೆಮಾರಿನ ಕಥೆ ಹೇಳುವಂತಹವು. ಮುಖ್ಯವಗಿ ‘’ಫಣಿಯಮ್ಮ” ಬದುಕಿದ್ದ ಕಾಲ (ಕಾದಂಬರಿಯಲ್ಲಿಯೇ ತಿಳಿಸಿದಂತೆ 1844-1952 ರ ಅವಧಿ) ಮಲೆನಾಡಿನ ಚಿಕ್ಕ ಹಳ್ಳಿಯೊಂದರಲ್ಲಿ, ಇನ್ನೂ ಸಾಮಾಜಿಕ ಮೌಢ್ಯಗಳ ನಡುವೆ ಜನಸಮುದಾಯ ಬದುಕುತ್ತಿದ್ದ ಕಾಲವದು. ಬಾಯ ವಿವಾಹ ಪದ್ದತಿ, ವಿಧವೆಯಾದ ಯುವತಿಯರ ಕೇಶ ಮುಂಡನಗೈಯ್ಯುವುದು.. ಇಂತಹಾ ಸಾಕಷ್ಟು ಅನಿಷ್ಟ ಸಂಪ್ರದಾಯಗಳ ವಿಜ್ರಂಭಣೆಯಿದ್ದ ಕಾಲಘಟ್ಟ ಅದು. ಆದರೂ ಅಲ್ಲಿನ ಕೆಲ ಪಾತ್ರಗಳು(ದಾಕ್ಷಾಯಿಣಿ) ಆ ಕಟು ಸಂಪ್ರದಾಯವನ್ನು ಕಿತ್ತೊಗೆವ ಧೈರ್ಯ ತೋರುತ್ತವೆ. ಅಂತೆಯೇ ಸದಾನಂದ” ದಲ್ಲಿಯೂ ಸಹ ಅಂದಿನ ಕಾಲದಲ್ಲಿ ದೊಡ್ಡ ಆದರ್ಶವೆನ್ನಬಹುದಾದ ಎರಡು ಮದ್ವೆಗಳು ನಡೆಯುತ್ತವೆ. (ಕುಂಟ ಗೌರಿಯನ್ನು ರಾಜು ಹಾಗೂ ವಿಧವೆ ಕಮಲಾಳನ್ನು ಬರಹಗಾರ ಸದಾನಂದ ವರಿಸುತ್ತಾರೆ.)
ಹೀಗೆ ಎರಡು ಕಾದಂಬರಿಗಳಲ್ಲಿಯೂ ಮಲೆನಾಡಿಗರ ಜೀವನ ಶೈಲಿಯೊಂದಿಗೆ ಹಾಸುಹೊಕ್ಕಾಗಿ ಬಂದ ಸಂಪ್ರದಾಯಗಳ ಪಾಲನೆ ಮಾಡುವವರ ಮತ್ತು ಅವರದೇ ತಲೆಮಾರಿನ ಯುವಕರು ಅದನ್ನು ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಎರಡೂ ಬಗೆಯನ್ನು ನಾವಿಲ್ಲಿ ನೋಡಬಹುದು.
”ಸದಾನಂದ” ದಲ್ಲಿನ ಪಾತ್ರಗಳು ಸನ್ನಿವೇಷಕ್ಕೆ ತಕ್ಕುದಾಗಿ ಮಾತನಾಡುವ ರೀತಿಯಲ್ಲಿ, ಮಲೆನಾಡಿಗರ ಅಂದಿನ ನಿತ್ಯ ಜೀವನವನ್ನು ಇಂದಿನ ಆಧುನಿಕ ತಲೆಮಾರಿನವಆದ ನಮ್ಮ ಮುಂದೆ ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಮುಖ್ಯ ಪಾತ್ರಗಳಾದ ರಾಜು(ಇಡೀ ಕಾದಂಬರಿಯಲ್ಲಿ ಎಲ್ಲೋ ಒಂದು ಬಾರಿ ಮಾತ್ರ ನನ್ನ ಹೆಸರು ನಾಗರಾಜು ಎಂದು ಹೇಳಿಕೊಳ್ಳುವ), ಗೌರಿ, ಸದಾನಂದ(ನನ್ನ ಮಟ್ಟಿಗೆ ಈ ಮೂರು ಪಾತ್ರಗಳು ಕಾದಂಬರಿಯ ಕೇಂದ್ರ ಪಾತ್ರಗಳು) ಕಮಲ, ಮೂರ್ತಿ, ಮುಕ್ತಾ- ಇವಿಷ್ಟು ಕಾದಂಬರಿಯಲ್ಲಿ ಬರುವ ಯುವ ಪೀಳಿಗೆಯ ಪಾತ್ರಗಳು. ಇನ್ನು ರಾಮಣ್ಣ, ಅಚ್ಚಮ್ಮ, ಯೆಂಟಮ್ಮ, ತಮ್ಮಯ್ಯ, ಪುಟ್ಟಕ್ಕ- ಈ ಎಲ್ಲಾ ಪಾತ್ರಧಾರಿಗಳು ಸಹ ಸಂಪ್ರದಾಯಿಕ ಜೀವನವನ್ನೇ ಒಗ್ಗಿಕೊಂಡಿರುವಂತಹವು, ಮತ್ತು ಹಾಗಾಗಿಯೇ ತಮ್ಮ ಮಕ್ಕಳ ಬೆಳವಣಿಗೆಗಳಿಂದ ತಾವು ಯಾವುದೋ ಅಗೋಚರ ಸಂಕಟಕ್ಕೀಡಾಗುತ್ತವೆ. ರಾಜುವಿನ ವಿವಾಹಕ್ಕಿಂತಲೂ ಅಂದಿನ ಕಾಲಕ್ಕೆ ಬಲು ದೂರವಾಗಿದ್ದ ವಿಧವೆ ಕಮಲಳ ವಿವಾಹ ಸಂದರ್ಭದಲ್ಲಿ ಈ ಮೇಲ್ಕಂಡ ಪಾತ್ರಗಳ ಮನದಲ್ಲಿನ ಘರ್ಷಣೆಯನ್ನು ನಾವು ಚೆನ್ನಾಗಿ ಅಥ ಮಾಡಿಕೊಳ್ಳಬಹುದು(ಇದೇ ಬಗೆಯ ಘರ್ಷಣೆ ಕಮಲಳ ಮನಸ್ಸಿನಲಿಯೂ ನಡೆದಿತ್ತು!).
ಕಾದಂಬರಿಯ ಆರಂಭದ ಸುಮಾರು 20 ಅದ್ಯಾಯಗಳಲ್ಲಿ ಕಥೆ ರಾಮಣ್ಣನವರ ಮತ್ತು ತಮ್ಮಯ್ಯನವರ ಮನೆಗಳ ಸುತ್ತವೇ ತಿರುಗುತ್ತವೆ. ಯಾವಾಗ ಮೂರ್ತಿಗೆಂದೇ ಮೀಸಲಾಗಿದ್ದ ಗೌರಿಯ ಮದುವೆ ಮುರಿದು ಮೂರ್ತಿ ಪಟ್ಟಣದ ದೇಶಸ್ಥ ಬ್ರಾಹ್ಮಣರಾದ ದೇಶಮುಖರ ಮಗಳನ್ನು ಮದುವೆಯಾಗುವನೋ ಆಗಲೇ ಸಂಪ್ರದಾಯದ ವಿರುದ್ದದ (ಹಾಗೇ ಅಂದಿಗೂ-ಇಂದಿಗೂ ಸಾಮಾನ್ಯವೆನಿಸಿದ ಪಟ್ಟಣ ವ್ಯಾಮೋಹ, ಆಧುನೀಕತೆಯ ಸೆಳೆತ) ವನ್ನು ನಾವು ಕಾಣುತ್ತೇವೆ. ಆದರೆ ಅದೇ ಸಮಯದಲ್ಲಿ ಗೌರಿಯ ಕಾಲು ಮುರಿದು ಹೋಗುವುದು, ಅದರಿಂದ ಮೂರ್ತಿಯ ಮನಸ್ಸಿಗಾಗುವ ನೋವು, ಮತ್ತು ಆತ ಕಡೆಯವರೆಗೂ ತಾನು ಮಾಡಿದ ತಪ್ಪು ನಿರ್ಧಾರಕ್ಕಾಗಿ ಪಡುವ ಪಶ್ಚಾತ್ತಾಪ... ಎಲ್ಲವೂ ಮನ ಮುಟ್ಟುವಂತಿದೆ(ಮೂರ್ತಿಯ ಮದುವೆಗೆಂದು ಬಂದಿದ್ದ ಗೌರಿಯ ನ್ನು ರಾತ್ರಿ ಎಲ್ಲರೂ ಮಲಗಿದಾಗ ನೋಡಲೆಂದು ಕ್ಷಮೆ ಬೇಡಲೆಂದು ಬರುವ ಮೂರ್ತಿ ಅವಳ ಹೊಟ್ಟೆಯ ಮೇಲೆ ಬಿದ್ದು ಬಿಕ್ಕಿ.. ಬಿಕ್ಕಿ... ಅಳುತ್ತಾನೆ..ಆದರೆ ಗೌರಿ ಮಾತ್ರ ತಾನು ಎಳ್ಳಷ್ಟೂ ಬೇಸರಿಸದೆ ಎಲ್ಲವನ್ನು ತೀರಾ ಹಗುರಾಗಿ ತೆಗೆದುಕೊಳ್ಳುತ್ತಾಳೆ.).
ಹೀಗೆ ಮೂರ್ತಿಯ ಮದುವೆ ಎನ್ನುವ ರಾಮಣ್ನನವರ ಪಾಲಿನ ಯುದ್ದ ಮುಗಿಯುತ್ತಿದ್ದಂತೆ ಕಾದಂಬರಿಯ ಕೇಂದ್ರ ಪಾತ್ರ ಸದಾನಂದರ ಆಗಮನವಾಗುತ್ತದೆ. ಪ್ರಥಮ ಬಾರಿಗೆ ರಾಮಣ್ಣನವರ ಮನೆಗೆ ಯಾವುದೋ ಕೆಲಸದ ನಿಮಿತ್ತ ಬರುವ ಸದಾನಂದ ಅಂದೆ ಕಮಲಳ ವೈಧವ್ಯವನ್ನು ಗುರ್ತಿಸುತ್ತಾರೆ, ಆದರೆ ಮನೆಯಲ್ಲಿ ಯಾರಿಗೂ ಅದು ಗಮನಕ್ಕೆ ಬಂದಿರುವುದಿಲ್ಲ(ಕಮಲಳು ತನ್ನ ಕೋಣೆಯೊಳಗಿನಿಂದ ಇಣುಕಿ ಒಮ್ಮೆ ಮಾತ್ರ ಆ ಭವ್ಯ ಪುರುಷಾಕೃಅತಿಯನ್ನು ನೋಡುತ್ತಾಳೆ. ಅವಳಿಗೆ ಅವರ ಕಣ್ಣಿನ ಆ ಚೂಪು ನೋಟವನ್ನು ಮರೆಯಲಾಗುವುದಿಲ್ಲ!). ಇದೇ ವೇಳೆ ರಾಜುವಿಗೆಂದು ನಿಶ್ಚಯವಾಗಿದ್ದ ಎದುರು ಮನೆಯ ಶಾಮಣ್ಣ(ಈ ಪಾತ್ರದ ಬಗ್ಗೆ ಮತ್ತೆ ಹೇಳಲಿಕ್ಕುಂಟು.) ನವರ ಮಗಳು ಜಾನಕಿಯೂ ಅಲ್ಲಿರುವುದೊಂದು ವಿಸ್ಮಯ.
ಅಂದಹಾಗೆ ಇಲ್ಲಿ ಇನ್ನೊಂದು ಮುಖ್ಯ ವಿಚಾರವನ್ನು ಹೇಳಬೇಕು- ಅದೆಂದರೆ ಕಾದಂಬರಿಕಾರ ರಮಾನಂದರ ಕುರಿತು. ಕಾದಂಬರಿಯ ನಾಯಕ ಪಾತ್ರವಾದ ಬರಹಗಾರ ಸದಾನಂದರೇ ರಮಾನಂದರೆಂದು ಊರಿನಲ್ಲಿ ಯಾರಿಗೂ ತಿಳಿದಿರುವುದಿಲ್ಲ.(ಇದು ಆ ಪಾತ್ರದ ನಿಗೂಢತನಕ್ಕೊಂದು ಸಾಕ್ಷಿಯೇ?) ರಮಾನಂದರ ಕಾದಂಬರಿಗಳು ಮಾತ್ರ ಕಮಲಳೂ ಸೇರಿದಂತೆ ಅಂದಿನ ಮಹಿಳೆಯರ ಮೆಚ್ಚುಗೆ ಪಡೆದಿರುತ್ತವೆ(ಕಮಲ ಇದೇ ರಮಾನಂದರ ”ವಿಧವಾ” ಕಾದಂಬರಿಯನ್ನೋದಿ ಅವರ ಬಗ್ಗೆ ಒಂದು ಆದರ್ಶ ಕಲ್ಪನೆಯನ್ನು ತಾಳಿಕೊಂಡಿರುತ್ತಾಳೆ.). ಮುಂದೆ ರಾಜು ಸದಾನಂದರು ವಾಸವಿದ್ದ ಮಧುವನಕ್ಕೆ ಹೋಗುವ ಸನ್ನಿವೇಷ ಬರುವುದು ಮತ್ತು ಅಲ್ಲಿ ಸದಾನಂದರ ನಿತ್ಯದ ಬದುಕಿನ ಒಂದೊಂದೇ ಪುಟಗಳು ತೆರೆದುಕೊಳ್ಳುವುದು ನಾವು ಕಾಣಬಹುದು. ಸದಾನಂದರ ಮೊದಲ ಪತ್ನಿ ಮನೋರಮಾ ತೀರಿಕೊಂಡು ನಾಲ್ಕು ವರ್ಷಗಳಾಗಿರುತ್ತವೆ, ಅವರು ತಮ್ಮ ಆದರ್ಷಕ್ಕೆ ಜೋತುಬಿದ್ದು ಇನ್ನೊಂದು ಕನ್ಯೆಯನು ಲಗ್ನವಾಗಿರುವುದಿಲ್ಲ. ಈ ಎಲ್ಲಾ ವಿಷಯಗಳೂ ರಾಜು ಮಧುವನಕ್ಕೆ ಭೇಟಿ ಕೊಟ್ಟಾಗ ತಿಳಿಯುತ್ತದೆ, ಅದರೊಂದಿಗೆ ರಾಜುವಿಗೆ ಸದಾನಂದರ ವ್ಯಕ್ತಿತ್ವದ ಬಗ್ಗೆ ಕುತೂಹಲಗಳು, ಜತೆಗೆ ಆಕರ್ಷಣೆಯೂ ಹುಟ್ಟಿಕೊಳ್ಳುತ್ತವೆ(ಹೀಗಾಗೇ ರಾಜುವಿಗೆ ಸದಾನಂದರ ಸನಿಹದಲ್ಲಿರುವುದು ಹೆಚ್ಚು ಪ್ರಿಯವೆಂದು ತೋರುತ್ತದೆ, ಅದನ್ನಾತ ಬಾಯಿ ಬಿಟ್ಟು ಹೇಳಿಯೂ ಹೇಳುತ್ತಾನೆ.). ಮತ್ತೆ ಮುಂದೆ ಸದಾನಂದರೊಂದಿಗೆ ಮುಂಬೈಗೆ ಹೋಗುವ ಅವಕಾಶವೂ ರಾಜುವಿನ ಪಾಲಿಗೆ ಲಭಿಸುತ್ತದೆ. ಅಂದಿನ ಕಾಲಕ್ಕೆ ಅದೊಂದು ಮಹಾ ಪ್ರಯಾಣ! ರಾಜು ತನ್ನ ಮನೆಯವರ ಒಪ್ಪಿಗೆ ಪಡೆದು ಮುಂಬೈಗೆ ಪ್ರಯಾಣ ಬೆಳೆಸುತ್ತಾನೆ( ಈ ಸನ್ನಿವೇಶದಲ್ಲಿ ಮಾತ್ರ ಗೌರಿಯ ಪಾತ್ರವಾಡುವ ಮಾತು ಅಲಳ ಸ್ಥಿತಿಯ ಬಗ್ಗೆ ಕನಿಕರ ಹುಟ್ಟಿಸುತ್ತದೆ- ತಾನು ಮುಬೈಗೆ ಹೋಗಲಿರುವ ವಿಚಾರವನ್ನು ಗೌರಿಗೆ ರಾಜು ತಿಳಿಸಿದಾಗ ಗೌರಿ ”ನಿನಗೇನು ಬೇಕು? ಎಂದು ಕೇಳುತ್ತಾನೆ ಅದಕ್ಕೆ ಗೌರಿ ” ನಂಗೇನ್ ಬೇಡ ಮಾರಾಯಾ..... ನೀ ಹೋದೋನ್ ಅಲ್ಲೇ ಉಳ್ಕಾಬ್ಯಾಡ, ವಾಪಾಸ್ ಮ್ನಿಗೆ ಬಾ..... ಸೈ” ಎನ್ನುತ್ತಾಳೆ. ಹೀಗೆ ಮುಂಬೈ ಮಹಾನಗರಕ್ಕೆ ಸದಾನಂದರೊಂದಿಗೆ ಬಂದ ರಾಜುವಿಗೆ ಅವರ ವ್ಯಕ್ತಿತ್ವದ ಮತ್ತಷ್ಟು ನಿಗೂಢಗಳ ದರ್ಶನವಾಗುತ್ತದೆ. ಅಲ್ಲಿ ಅವರು ವಿಧವೆಯರಿಗಾಗಿ, ವೃದ್ದ ಮತ್ತು ಅಂಗವಿಕಲ ಮಹಿಳೆಯರಿಗಾಗಿ ನಡೆಸುತ್ತಿರುವ ಅನಾಥಾಲಯವನ್ನು ಕಂಡು ಬೆರಗಾಗುತ್ತಾನೆ. ಆಗಲೇ ಅವನಿಗೆ ತನ್ನ ಊರಿನಲ್ಲಿನ ಕುಂಟಿ ಗೌರಿ, ಅಕ್ಕ ವಿಧವೆ ಕಮಲ ಬಾರಿ ಬಾರಿಗೂ ನೆನಪಾಗಿ ಕಾಡುತ್ತಾರೆ. ಅವರು ಅಲ್ಲಿ ಅನುಭವಿಸುತ್ತಿರುವ ಯಾತನೆ(ಅದು ಕೊನೆಯಿಲ್ಲದ ಯಾತನೆಯೆಂದು ರಾಮಣ್ಣನೂ ಸೇರಿ ಊರ ಜನ ತೀರ್ಮಾನ ಮಾಡಿಬಿಟ್ಟಿರುತ್ತಾರೆ!). ಆದರೆ ಅದೇ ಮುಂಬೈನ ಮಹಿಳೆಯರಿಗೆ ತಮ್ಮ ಅಂಗವೈಕಲ್ಯ, ವೈಧವ್ಯದ ಹೊರತು ಇನ್ನೊಂದು ಬದುಕಿರುವುದನ್ನು ಕಣ್ಣಾರೆ ಕಾಣುತ್ತಾನೆ ರಾಜು, ಮುಂದೆ ಅದೇ ಅವನಲ್ಲಿ ತಾನು ಸಹ ಅಂತಹಾ ಆದರ್ಶಪ್ರಾಯ ಕೆಲಸ ಮಾಡಲು ಪ್ರೇರಣೆಯಾಗುತ್ತದೆ.
ಮತ್ತೆ ರಾಜುವಿಗೆ ಇನ್ನೊಂದು ಮಹಾ ಅಚ್ಚರಿ ಎದುರಾಗುವುದು ಸಹಾ ಮುಂಬೈನಲ್ಲಿಯೇ, ಅದೇ ಸದಾ ತನ್ನೊಡನಿದ್ದ ಈ ಸಡಾನಂದರೇ ರಮಾನಂದರೆನ್ನುವ ವಿಚಾರ ತಿಳಿಯುವುದು(ರಾಜುವಿನ ಜತೆ ಓದುಗರನ್ನೂ ಸಾಕಷ್ಟು ಕಾಡಿಸುವ ರಮಾನಂದರ ಪಾತ್ರ ಸದಾನಂದರಲ್ಲೆ ಐಕ್ಯವಾಗುವ ಆ ಸನ್ನಿವೇಷವೇ ಕಾದಂಬರಿಯ ಪ್ರಮುಖ ಮತ್ತು ಅತ್ಯಂತ ಸುಂದರ ಸನ್ನಿವೇಷಗಳಲ್ಲಿ ಒಂದು)! ಮತ್ತೆ ಮುಂಬೈನಿಂದ ವಾಪಾಸಾದ ಮೇಲೆ ಮನೆಯವರಿಗೆಲ್ಲ ಈ ವಿಚಾರ ತಿಳಿಸಿದಾಗ ಒಬ್ಬೊಬ್ಬರು ಒಂದೊಂದು ಬಗೆಯ ಅಚ್ಚ್ರರಿಗೆ ಒಳಗಾಗುತ್ತಾರೆ. ಅದರಲ್ಲಿಯೂ ಕಮಲಾ ತನು ಕಲ್ಪಿಸಿಕೊಂಡಿದ್ದ ಆದರ್ಶ ಮೂರ್ತಿ ರಮಾನಂದರನ್ನೂ ನಮ್ಮಂತೆ ಸಾಮಾನ್ಯ ಮನುಷ್ಯನಾದ ಸದಾನಂದರನ್ನೂ ಒಂದಗಿ ನೋಡಲು ಸಾಕಷ್ಟು ಮನಮಂಥನಕ್ಕೆ ಒಳಗಾಗುತ್ತಾಳೆ. ಹೀಗೆ ಇಲ್ಲಿನ ಪ್ರತಿ ಸನ್ನಿವೇಶವೂ ತಾವು ಬೆಳೆಸಿಕೊಂಡು ಬಂದ ಪರಂಪರೆ, ಸಂಪ್ರದಾಯಗಳ ಕಟ್ಟುಗಳ್ನ್ನು ಬಿಡಿಸುತ್ತಾ ಅದರಾಚಿನ ಹೊಸ ತಲೆಮಾರಿನವರ ಜೀವನ ದರ್ಶನ ಮಾಡಿಸುತ್ತಾ ಸಾಗಿ ಬರುವುದನ್ನು ನಾವು ನೋಶುತ್ತೇವೆ.
ಇಷ್ಟಾದ ಬಳಿಕ ಸದಾನಂದ” ಕಾದಂಬರಿಯಲ್ಲಿ ಬರುವ ಶಾಮಣ್ಣನ ಪಾತ್ರ ಹಾಗೂ ಅವರ ಮಗಳಾದ ಜಾನಕಿಯ ಕುರಿತು ಎರಡು ಮಾತು ಹೇಳಬೇಕು. ಮೂರ್ತಿಗೆ ಹೇಗೆ ಗೌರಿಯೊಂದಿಗೆ ಮದುವೆ ಎಂದು ನಿಶ್ಚಯವಾಗಿರುತ್ತದೋ ಅದೇ ರೀತಿಯಲ್ಲಿ ಜಾನಕಿಗೆ ರಾಜುವೇ ನಿನ್ನ ಗಂಡನೆಂದು ತಲೆಯಲ್ಲಿ ತುಂಬಿರಲಾಗುತ್ತದೆ. ಅದಕ್ಕಾಗಿಯೇ ಅವಳು ರಾಜುವು ಮುಂಬೈನಿಂದ ತಂದ ಸೀರೆಯನ್ನು ಬೇರೆಯವರೆಲ್ಲ ಅದು ತೀರಾ ತೆಳು, ಉಡಲಾಗದ್ದು ಎಂದರೂ ಗಂಡನಾಗುವವ ತಂದ ಉಡುಗೊರೆಯೆಂದು ಸಂಭ್ರಮಿಸುತ್ತಾಳೆ. ಜಾನಕಿಯ ವ್ಯಕ್ತಿತ್ವ ಗೌರಿಯಷ್ಟು ಸೀದಾ ಸಾದಾ ಅಲ್ಲ. ಅವಳು ಭಾವನಾತ್ಮಕ ಜೀವಿ. ತನ್ನ ಗಂಡನಾಗುವ ರಾಜುವಿನ ಬಗ್ಗೆ, ತನ್ನ ಮುಂದಿನ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಆಶಾ ಗೋಪುರವನ್ನೇ ಕಟ್ತಿಕೊಂಡಿರುತ್ತಾಳೆ ಜಾನಕಿ. ಶಾಮಣ್ಣನವರೂ ಸಹ ಚಿಕ್ಕಮಗಳೂರಿನ ಉತ್ತಮ ಕಾಫಿ ಎಸ್ಟೇಟ್ ಹೊಂದಿರುವ ರಾಮಣ್ಣನವರ ಮನೆಗೆ ತನ್ನ ಮಗಳು ಹೋಗುವುದರಿಂದ ಸುಖವಾಗಿರುತ್ತಾಳೆಂದು ಭಾವಿಸಿರುತ್ತಾರೆ(ಶಾಮಣ್ಣನವರಿಗೆ ರಾಮಣ್ಣನವರ ಮನೆಯ ಒಳ-ಹೊರಗಿನ ಸಂಬಂಧದ ವರ್ತಮಾನವೆಲ್ಲಾ ತಿಳಿದಿರುತ್ತದೆ ಎನ್ನುವುದು ವಿಶೇಷ.). ಹೀಗಿರುವಾಗ ಗೌರಿಗೆ ಕಾಲುಮುರಿದು ಹೋಗಿ ಅವಳ ಜೀವನದಲ್ಲಿ ಮದುವೆಯೇ ಮರಿಚೀಕೆಯಾಗುತ್ತದೆ. ಸದಾನಂದರೊಂದಿಗೆ ಮುಂಬೈ ನಗರವನ್ನೆಲ್ಲಾ ನೋಡಿಬಂದ ರಾಜು ಜೊತೆಗೆ ತಾನು ಸಹ ಒಂದು ಧೃಢ ನಿರ್ಧಾರ ತಳೆದು ಬಂದಿರುತ್ತಾನೆ. ಅದೇ ತಾನು ಗೌರಿಯನ್ನು ವಿವಾಹವಾಗುವುದು. ಅದಕ್ಕಾಗಿ ಆತ ತನಗೆ ಮೂರ್ಚೆರೋಗವಿದೆ ಎಂದು ಮನೆಯವರನ್ನೂ, ಗೌರಿಯ, ಶಾಮಣ್ಣನವರ ಮನೆಯವರನ್ನೂ ಸೇರಿ ಊರಿಗೆಲ್ಲಾ ನಂಬಿಸುತ್ತಾನೆ(ಆಗ ಮೂರ್ಚ್ ರೋಗಕ್ಕೆ ಗುಣಪಡಿಸಲಾಗದ ಖಾಯಿಲೆ ಎಂಬ ಹಣೆಪಟ್ಟಿ ಇತ್ತು!). ಜಾನಕಿಗೆ ತಾನು ನಿನ್ನನ್ನು ಮದುವೆಯಾಗಲಾರೆನೆಂದು ರಾಜುವೇ ನೇರವಾಗಿ ಹೇಳುತ್ತಾನೆ. ”ಇನ್ನು ನೀನು ಸಾಧ್ಯವಾದಷ್ಟು ನಮ್ಮ ಮನೆಯಿಂದ ದೂರ ಇರೋದು ವಾಸಿ ಅನ್ಸುತ್ತೆ.” ಎಂದಾಗ ಜಾನಕಿಗೆ ದುಃಖ ಒತ್ತರಿಸ್ಕೊಂಡು ಬರುತ್ತದೆ ಅವಳು ಒಂದು ದಿನಪೂರ್ತಿ ಅತ್ತರೂ ಅದು ಶಮನವಾಗಲಾರದು. ಆದರೆ ಮನೆಯಲ್ಲಿ ಶಾಮಣ್ಣನವರಿಗೆ ಈ ಸುದ್ದಿ ಕೇಳಿ ಜಿವ ಹಗುರಾಗುತ್ತದೆ! ಇಲ್ಲೇ ನಾವು ಗೌರಿಯ ವಿಚಾರವನ್ನು ನೋಡುವುದಾದರೆ ಅವಳ್ ನಡೆ ತೀರಾ ಭಿನ್ನ. ತಾನ್ನನ್ನು ಮೂರ್ತಿ ಮದುವೆಯಾಗಲಾರನೆಂದು ತಿಳಿದಾಗ ಸಹ ಬಹಳ ನಿರ್ಲಿಪ್ತಳಾಗಿರುವಳು, ಒಮ್ಮೆಯಂತೂ ”ಅಮ್ಮ ಇಷ್ಟು ಅಳ್ತಾರೆ ನಂಗೆ ಯಾಕೆ ದ್ಃಖವಾಗಲ್ಲ?” ಎಂದು ತನಗೆ ತಾನೆ ಪ್ರಶ್ನೆ ಹಾಕಿಕೊಳ್ಳುತ್ತಾಳೆ ಗೌರಿ! ಮುಂದೆ ಸಹ ಕಾದಂಬರಿಯ ಉದ್ದಕ್ಕೂ ತಾನು ಮೂರ್ತಿಯನ್ನು ಮದುವೆಯಾಗದ್ದಕ್ಕೆ ಗೌರಿಯ ಮನಸ್ಸಿನಲ್ಲಿ ಕಿಂಚಿತ್ತೂ ಬೇಸರದ ಎಳೆ ವ್ಯಕ್ತವಾಗುವುದಿಲ್ಲ, ಅದೇ ಜಾನಕಿ ದಿನವಿಡೀ ಬಿಕ್ಕಳಿಸುತ್ತಾಳೆ.
ಇನ್ನು ಕಾದಂಅಬಿಯಲ್ಲಿ ಬರುವ ಬಚ್ಚ, ಶೀನಿ, ತಂತ್ರಿ, ಅವರ ಮಡದಿ ಅಂಬವ್ವ, ಅವರ ಲೆಕ್ಕವಿಡದ ಮಕ್ಕಳ ಸೈನ್ಯ, ”ನೂಕೋ ನರಸಿಂಹ ಸಾಹುಕಾರ ನರಸಿಂಹಯ್ಯ, ಅದರ ಚಾಲಕ ಶಿಂಗ್ರಿ, ಇಂತಹಾ ಹತ್ತು ಹಲವು ಪಾತ್ರಗಳು ಕಾದಂಬರಿಯ ಒಟ್ಟೂ ಸೌಂದರ್ಯಕ್ಕೆ ತಮ್ಮ ಕೊಡುಗೆಯನ್ನು ಸಾಕಷ್ಟು ನೀಡಿವೆ ಎಂದರೆ ತಪ್ಪಲ್ಲ. ಹಾಗೆ ಈ ಸದಾನಂದ” ದ ಕುರಿತಾಗಿ ಮಾತನಾಡುವಾಗ ಎರಡು ವಿಷಯಗಳನ್ನು ಗಮನಿಸಬೇಕು, ಮೊದಲನೆಯದು ಊರಿನ ಸಂಪರ್ಕ ಕೊಂಡಿಗಳಾದ ಬಸ್ಸುಗಳ ವಿಚಾರ. ಇಲ್ಲಿ ಎರಡು ವಿಧದ ಬಸ್ಸುಗಳಿವೆ ಒಂದು ವೇಗದೂತ ಮಾರುತಿ, ಇನ್ನೊಂದು ನಿಧಾನವೇ ಪ್ರಧಾನವೆನ್ನುವ ನರಸಿಂಹಯ್ಯನವರ ”ನೂಕೋ ನರಸಿಂಹ”. ಕಾದಂಬರಿಯ ಆರಂಭದಲ್ಲಿ ಓದುಗರಿಗೆ ಹಾಸ್ಯವಾಗಿ ತೋರುವ ನೂಕೋ ಸರಸಿಂಹ ಮತ್ತದರ ಚಾಲಕ ಶಿಂಗ್ರಿ ಕಾದಂಬರಿಯ ಒಂದು ಘಟ್ಟದಲ್ಲಿ ನಮಗೆಲ್ಲ ಮಹತ್ವದ ಪಾಠವಾಗುತ್ತಾರೆ. ಜೀವನದಲ್ಲಿ ಎಲ್ಲದಕ್ಕೂ ವೇಗವೊಂದೆ ಪರಿಹಾರವಲ್ಲವೆನ್ನುವುದನ್ನು ಲೇಖಕಿ ಇಲ್ಲಿ ಮಾರುತಿಯನ್ನಿ ಅಪಘಾತಕ್ಕೀಡು ಮಾಡುವ ಮೂಲಕ ತೋರಿಸಿದ್ದಾರೆ, ಮಾತ್ರವಲ್ಲ ಯಾರನ್ನೂ ಕೀಳಾಗಿ ಕಾಣಲಾಗದೆಂದು ಸಹ ಶಿಂಗ್ರಿಯ ಮಾನವೀಯತೆಯ ಮುಖೇನ ತಿಳಿಸಲು ಹೊರಟಿದ್ದಾರೆ.
ಇನ್ನೊಂದು ವಿಚಾರ ನಾನು ಗಮನಿಸಿದಂತೆ ಲೇಖಕಿ ಇಲ್ಲಿ ಸಂಪ್ರದಾಯವಾದಿಗಳ ಕಟ್ಟಳೆಯನೆಲ್ಲ ತೊಡೆದು ವಾಸ್ತವ ಬದುಕನ್ನು ಕಣ್ತೆರೆದು ನೋಡುವಂತಹ ಕಥೆ ನಿರೂಪಿಸಿದ್ದಾರೆ. ಅಂದಿನ ಸಮಾಜದಲ್ಲಿ ವಿರುದ್ದವಾದ ವಿಧವಾ ವಿವಾಹದಂತಹಾ ಕ್ರಮವನ್ನು ಸಮರ್ಥಿಸುವ ಮಧ್ಯೆಯೂ ಶಾಸ್ತ್ರಿಗಳ ಭವಿಷ್ಯವಾಣಿ(ಗೌರಿಯ ವಿಚಾರದಲ್ಲಿ ಅವಳಿಗೆ ಎರಡು ವರ್ಷಗಳ ಕಾಲ ಮದುವೆ ಇಲ್ಲ, ಆದರ ಮಧ್ಯೆ ದೊಡ್ಡದೊಂದು ಗಂಡಾಂತರವಿದೆ, ಅದಾದ ಬಳಿಕ ಸೋದರಿಕೆಯಲ್ಲಿ ಮದುವೆಯಾಗುತ್ತದೆ. ಎನ್ನುತ್ತಾರೆ, ಮತ್ತು ಅದು ಗೌರಿಯ ಕಾಲು ಮುರಿಯುವ ಮೂಲಕ ಹಾಗೂ ಕೊನೆಯಲ್ಲಿ ರಾಜು ಗೌರಿಯನ್ನು ವಿವಾಹವಾಗುವ ಮೂಲಕ ನೆರವೇರುತ್ತದೆ!!)ಮಾತ್ರ ಅಷ್ಟೊಂದು ಸರಿಕಾಣಲಾರದು. ಸಂಪ್ರದಾಯ, ಪರಂಪರೆಯ ಕಟ್ಟುಪಾಡನ್ನು ತೊಡೆದು ಹೊರಟಿರುವ ಸದಾನಂದ, ರಾಜುವಿನ ಬದುಕಿನಲಿ ಈ ಶಾಸ್ತ್ರಿಗಳ ಭವಿಷ್ಯ ನಿಜವಾಗುವುದು ಮಾತ್ರ ಲೇಖಕಿ ಎಲ್ಲೋ ಒಂದು ಕಡೆ ಪಿರೋಹಿತಷಾಹಿ, ಜ್ಯೋತಿಷ್ಯ ಶಾಸ್ತ್ರ, ಸಂಪ್ರದಾಯಕ್ಕೆ ಮಣೆ ಹಾಕಿದ್ದಾರೆನ್ನಿಸುವುದಿಲ್ಲವೆ? ಇಷ್ಟೆಲ್ಲದರ ಹೊರತಾಗಿ ”ಸದಾನಂದ” ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದೆನ್ನುವುದು ನಿಸ್ಸಂಶಯ. ನಿಜವಾಗಿಯೂ ಕನ್ನಡಿಗರಾದ ನಾವೆಲ್ಲರೂ ಒಮ್ಮೆ ಓದಲೇಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ”ಸದಾನಂದ” ಕೂಡ ಇರಬೇಕೆನ್ನುವುದು ನನ್ನ ಸದಾಶಯ.
ಇನ್ನು ಇಂದಿರಾರವರ ಇನ್ನೊಂದು ಕಾದಂಬರಿ ”ಫಣಿಯಮ್ಮ” ದ ವಿಚಾರವಾಗಿ ಬರೋಣ. ಕಥಾನಾಯಕಿ ‘’ಫಣಿಯಮ್ಮ’’ ನಾನು ಮೊದಲೇ ಹೇಳಿದಂತೆ 19ನೇ ಶತಮಾನದ ಕಥೆ (ಕಥಾನಾಯಕಿ ಲೇಖಕಿಯ ಅಜ್ಜನ ತಂಗಿಯ್ನ್ನುವುದು ಇನ್ನೊಂದು ವಿಶೇಷ.). ಈ ಕಾದಂಬರಿಯೂ ಸಹ ಮಲೆನಾಡಿನ ಹಳ್ಳಿ, ಪಟ್ಟಣದ ಪರಿಸರದಲ್ಲಿಯೇ ಸುತ್ತುತ್ತದೆ ಮಲೆನಾಡಿನ ಚಿಕ್ಕ ಹಳ್ಲಿ ಹೆಬ್ಬಲಿಗೆಯ ಅಂಚೆ ಮನೆತನದ ತಮ್ಮಯ್ಯನವರ ಮಗಳಾದ ಫಣಿಯಮ್ಮನ ಜೀವನಗಾಥೆಯೇ ಇಡೀ ಕಾದಂಬರಿಯ ವಸ್ತುವಾದರೂ, ನಮಗೆ ಅವರ ನಿತ್ಯ ಬದುಕಿನೊಂದಿಗೆ ಅಂದಿನ ಸಮಾಜದ ಕಟ್ಟು ಕಟ್ಟಳೆಗಳ, ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ಸಂಪ್ರದಾಯಗಳ ಪರಿಚಯವೂ ಆಗುತ್ತದೆ. ಮುಖ್ಯವಾಗಿ ಅಂದು ಚಾಲ್ತಿಯಲ್ಲಿದ್ದ ವಿಧವೆಯರ ಬದುಕಿನ ಒಂದು ಸ್ಪಷ್ಟ ಚಿತ್ರವನ್ನು ನಾವಿಇಲ್ಲಿ ಕಾಣಬಹುದು. ಹಾಗೆಯೇ ಆಧುನಿಕತೆಯ ಅರಿವು, ಅನುಕೂಲಗಳಿರದ ಆ ಸಮಯದಲ್ಲಿ ಅಂದಿನವರ ಜೀವನ ಪದ್ದತಿಯನ್ನು ತಿಳಿದುಕೊಳ್ಳಲಿಕ್ಕೆ ಸಹ ನಮಗಿದು ಸಾಕಷ್ಟು ವಿಷಯವನ್ನು ಒದಗಿಸುತ್ತದೆ. ಅಂದಂತೆ ಅಂದು ಚಾಲ್ತಿಯಲ್ಲಿದ್ದ ಅಂಧ ಶ್ರದ್ದೆ, ಅವೈಚಾರಿಕಾ ಸಂಪ್ರದಾಯ ಕಟ್ಟಪಾಡುಗಳನ್ನು ಲೇಖಕಿ ಬಹಳ ನೈಜವಾಗಿ ಚಿತ್ರಿಸಿದ್ದಾರೆ. ಕಥಾನಾಯಕಿ ಫಣಿಯಮ್ಮ ತನ್ನ ಒಂಭತ್ತನೆ ವರ್ಷದಲ್ಲಿ ವಿಧವೆಯಾಗಿ ಮತ್ತೆ ೧೧೨ ವರ್ಷಗಳ ತನ್ನ ತುಂಬು ಜೀವನವನ್ನು ಎಲ್ಲಾ ಸುಖ-ಸಂತೋಷಗಳಿಂದ ವಂಚಿತಳಾಗಿ ತಪಸ್ವಿಯಂತೆ ಕಳೆಯುತ್ತಾಳೆ.
ಸುಮಾರು 1840 ರ ಆಜು ಬಾಜಿನಲ್ಲಿ ಮಲೆನಾಡಿನ ಹಳ್ಳಿಯೊಂದರ ಕಟ್ಟಾ ಸಂಪ್ರದಾಯದ ಕುಟುಂಬದಲ್ಲಿ ಜನಿಸಿದ ಫಣಿಯಮ್ಮ ಅಂದಿನ ಸಂಪ್ರದಾಯದಂತೆ ತನ್ನ ಒಂಭತ್ತನೇ ವಯಸ್ಸಿಗೆ ವಿವಾಹವಾದಳು. ಆದರೆ ಅವಳ ಹಿರಿಯರು ಹೇಳಿದಂತೆ ಅಖಂಡ ಸೌಭಾಗ್ಯವತಿಯಾಗದೆ ಮದುವೆಯಾದ ಎರಡನೆ ತಿಂಗಳಿಗೆ ಗಂಡನನ್ನು ಕಳೆದುಕೊಂಡು ವಿಧವೆ ಪಟ್ಟವನ್ನು ಧರಿಸಿದಳು. ಸಂಸಾರವೆಂದರೇನು? ಎನ್ನುವುದೇ ತಿಳಿಯದ ಫಣಿಯಮ್ಮನ ಬದುಕುವ ಹಕ್ಕನ್ನು ಅಂದಿನ ಸಮಾಜ ಕಿತ್ತುಕೊಳ್ಳುತ್ತದೆ, ಆದರೂ ಆಕೆ ತನ್ನ ಜೀವನ ಪೂರ್ತಿ ವಿರಾಗಿಯಂತೆ ಜೀವಿಸಿ (ಕಾದಂಬರಿಯ ಒಂದು ಹಂತದಲ್ಲಿ ಅವಳೆ ಹೇಳುವಂತೆ - ಕೆಸುವಿನೆಲೆಯ ಮೇಲಿನ ನೀರಿನಂತೆ ಬದುಕಿ) ಪವಿತ್ರಾತ್ಮಳೂ, ಪೂಜನೀಯಳೂ ಆಗುತ್ತಾಳೆ. ಫಣಿಯಮ್ಮ ವಿಧವೆಯಾದಾಗ ಆಕೆಗಿನ್ನೂ ಒಂಭತ್ತರ ವಯಸ್ಸು, ಆಕೆಯಿನ್ನೂ ಮೈ ನೆರೆದಿರುವುದಿಲ್ಲ. ಆ ಕಾರಣ ಅವಳನ್ನು ಕತ್ತಲೆ ಕೋಣ್ಯಲ್ಲಿ ಕೂಡಿ ಹಾಕಲಾಗುತ್ತದೆ. ನಾಲ್ಕು ವರ್ಷಗಳ ಕಾಲ ಹಾಗೆ ಕತ್ತಲೆ ಕೋಣೆಯಲ್ಲಿ ಕಳೆದ ಬಳಿಕ ಮೈ ನೆರೆದ ಫಣಿಯಮ್ಮನ ಮೈಮೇಲಿನ ಮಂಗಳ ಸೂಚಕಗಳನ್ನೆಲ್ಲಾ ತೆಗೆದು, ಕೇಶಮುಂಡನ ಮಾಡಲಾಗುತ್ತದೆ. ಅಂದಿನಿಂದ ತಾನು ಸಾಯುವ ಕೊನೆ ಕ್ಷಣದವರೆವಿಗೂ ಪರರ ಸೇವೆ ಮಾಡುತ್ತಲೇ ಕಳೆಯುವ ಫಣಿಯಮ್ಮನ ಪಾತ್ರ ಒಂದು ದೃಷ್ಟಿಯಿಂದ ತ್ಯಾಗಮೂರ್ತಿಯಾಗಿ ತೋರುತ್ತದೆ.
ಇನ್ನು ಇದರೊಂದಿಗೆ ಹತ್ತಾರು ಪಾತ್ರಗಳು, ಹಲವು ಘಟನೆಗಳೂ ಕೂಡಿ ಕಾದಂಬರಿ ಸಂಕೀರ್ಣಾತೆಯನ್ನು ತಲುಪುತ್ತದೆ. ಜತೆಗೆ ಅಂದಿನ ಸಮಾಜದಲ್ಲಿದ್ದ ಕುರುಡು ಅಂಧಶ್ರದ್ದೆಯ ಕುರಿತಾದ ವಿರೋಧವೂ ವ್ಯಕ್ತವಾಗುತ್ತದೆ. ಅಂದಿನ ಮಠ-ಮಾನ್ಯಗಳು ನಡೆಸುವ ಹೆಣ್ಣಿನ ಶೋಷಣೆಯನ್ನೂ ಸಹ ಲೇಖಕಿ ಇಲ್ಲಿ ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಂದಿನ ಶೃಂಗೇರಿ ಮಠದ ಸ್ವಾಮಿಗಳಾಗಿದ್ದ ನರಸಿಂಹ ಭಾರತಿಗಳು ಮಾತೆತ್ತಿದರೆ ಬಹಿಷ್ಕಾರ ಹಾಕುವುದು, ಯಾರಾದರೂ ಬಾಲ ವಿಧವೆಯರು ಬಸಿರಾದರೆಂದರೆ ಜಾತಿಯಿಂದಲೇ ಭ್ರಷ್ಠರನ್ನಾಗಿಸುವುದು(ಇದರಲ್ಲಿ ಅವರ ತಪ್ಪೇನೆಂದು ಸಹ ನೋಡದೆಯೆ!) ಈ ಮೂಲಕ ಮಠಗಳು ಹೆಣ್ಣಿನ ವಿಚಾರದಲ್ಲಿ ತೋರುತ್ತಿದ್ದ ಪ್ರತೀಕಾರದ ದೃಷ್ಟಿ ಸಹ ಇಲ್ಲಿ ವ್ಯಕ್ತವಾಗಿದೆ. ಅಂತೆಯೇ ಹಿಂದಿನ ಪುರಾಣಗಳಲ್ಲಿ ಬರುವ ಸ್ತ್ರೀ ಪಾತ್ರಗಳ ಬಗ್ಗೆ, ಅಲ್ಲಿ ಕಂಡು ಬರುವ ಪಕ್ಷಪಾತ ಧೋರಣೆ, ಸ್ತ್ರೀ ಕುರಿತಂತೆ ಇದ್ದ ಅವಿಜ್ಞಾನಿಕ ಪ್ರಜ್ಞೆಯ ಕುರಿತಾಗಿಯೂ ಕಾದಂಬರಿಯಲ್ಲಿ ಲೇಖಕಿ ಸಮರ್ಥವಾಗಿ ತಿಳಿಸುತ್ತಾರೆ. ಕಥಾನಾಯಕಿ ಫಣಿಯಮ್ಮನ ಪಾತ್ರವೇ ಇಂಥಾ ಪುರಾಣಗಳನ್ನು ಅಲ್ಲಗೆಳೆಯುವುದನ್ನು ನಾವಿಲ್ಲಿ ಕಾಣಬಹುದು. (”ಶ್ರೀ ರಾಮನ ಕೈ ಹಿಡಿದ ಸೀತಾದೇವಿ ಎಂಥಾ ಸುಖ ಪಟ್ಳು? ಉದ್ದಕ್ಕೂ ಆಕೆಗೆ ಕಷ್ಟವೇ....... ಆಕೆನ ಬೆಂಕಿಗೆ ಹಾರಿಸ್ದ, ಬಸ್ರಿ ಹೆಂಗ್ಸೀನ ಕಾಡಿಗೆ ಕಳಿಸ್ದ....... ಎಂಥಾ ಪುರಾಣವೋ... ಪುಣ್ಯಕಥೆಯೋ?.......” ಫಣಿಯಮ್ಮನಾಡುವ ಈ ಮಾತುಗಳಲ್ಲಿ ಪುರಾಣಗಳ ಬಗ್ಗೆ ಅವಳಿಗಿದ್ದ ತಾತ್ಸಾರ ಭಾವನೆಯನ್ನು ನೋಡುತ್ತೇವೆ.) ಅಂದು ಚಾಲ್ತಿಯಲ್ಲಿದ್ದ ಪುರುಷ ಪ್ರಧಾನ ಸಮಾಜದ ಢಾಂಭಿಕತೆಯನ್ನು ನಿರ್ಭಯವಾಗಿ ಟೀಕಿಸುವ ಫಣಿಯಮ್ಮ ಸಂಪ್ರದಾಯದ ಕುರಿತಾಗಿ ಒಂದು ಸನ್ನಿವೇಶದಲ್ಲಿ ಹೀಗೆ ನುಡಿಯುತ್ತಾಳೆ, ” ಎಂಥಾ ಸಂಪ್ರದಾಯ ನಮ್ದು? ಗಂಡ್ಸು ಯಾರನ್ನೇ ಮುಟ್ಟಿ ಬಂದು, ಜನಿವಾರ ಬದ್ಲಾಯ್ಸಿಕೊಡ್ರೆ ಅದು ಶುದ್ದ, ಅದೇ ಹೆಂಗ್ಸು.... ಯಾರನ್ನೂ ಮುಟ್ಟೋದ್ ಬ್ಯಾಡ, ನೋಡಿದ್ರೆ ಸಾಕು ಅವ್ಳು ಕುಲಟೆ....!”
ಫಣಿಯಮ್ಮ ತೀರಾ ಪರೋಪಕಾರಿಯಾದ ಹೆಂಗಸು, ಆಕೆಯ ಊರಲ್ಲಿ ಯಾರಿಗೆ ಕಷ್ಟವಿದ್ದರೂ ತನ್ನ ಕೈಲಾದ ಸಹಾಯವನ್ನು ಮಾಡುವಳು, ಇದಕ್ಕೊಂದು ಉತ್ತಮ ಉದಾಹರಣೆ ದಲಿತರ ಸಿಂಕಿಯ ಹೆರಿಗೆ ಪ್ರಸಂಗ, ಮದ್ಯರಾತ್ರಿಯ ಸಮಯದಲ್ಲಿ ಸಿಂಕಿ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಮನೆಯವರ ವಿರೋಧವನ್ನೂ ಲೆಕ್ಕಿಸದೆ ಅವಳ ಹೆರಿಗೆ ಮಾಡಿಸುವ ಫಣಿಯಮ್ಮನನ್ನು ನಾವಿಲ್ಲಿ ಕಾಣುತ್ತೇವೆ(ಆದರೆ ಆ ರೀತಿ ಹೆರಿಗೆ ಮಾಡಿಸಿ ಮೂರು ದಿನಗಳವರೆಗೆ ಅವಳ ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ... ”ತಾನು ಮೈಲಿಗೆಯಾದೆನೊಂದು” ಪದೇ-ಪದೇ ಪಶ್ಚಾತ್ತಾಪ ಪಡುವಳು, ಮತ್ತೆ ನಾಲ್ಕನೇ ದಿನ ”ಒಂದ್ ಹೆರಿಗೆ ಮಾಡ್ಸಿದ್ರೆ ಒಮ್ಮೆ ಕಾಶಿ ಯಾತ್ರೆ ಮಾಡ್ದಂತೆ... ಅದು ಯಾರದ್ದಾದ್ರೆ ಏನು, ಜೀವವೇ ದೊಡ್ಡದಲ್ಲ್ವೆ?” ಎಂದು ಸಮಾಧಾನ ಹೊಂದುವಳು.) ಇದೇ ಕಾದಂಬರಿಯಲ್ಲಿ ದಲಿತರ ಮೇಲೆ ಮೇಲ್ವರ್ಗದವರು ಅಂದು ನಡೆಸುತ್ತಿದ್ದ ಶೋಷಣೆಯನ್ನೂ ಸಹ ಚಿತ್ರಿಸಲಾಗಿದೆ. ನಾಲ್ಕು ದಿನ ದೋಣಿ ನಡೆಸಿದ ಅಂಬಿಗರು ತಮಗೆ ಸಲ್ಲಬೇಕಿದ್ದ ಎರಡಾಣೆಗೆ ಪರದಾಡುವ ದೃಷ್ಯವೇ ಇದಕ್ಕೆ ಸಾಕ್ಷಿ.
ಕಾದಂಬರಿ ಮುಂದುವರಿದಂತೆಲ್ಲಾ ಫಣಿಯಮ್ಮನ ಆಂತರ್ಯ ತಾನಾಗೇ ತೆರೆದುಕೊಳ್ಳುವುದನ್ನು ನಾವು ಕಾಣುತ್ತೇವೆ, ಇದಕ್ಕೆ ಸಾಕ್ಷಿಯೆಂಬಂತೆ ಗಂಡನನ್ನು ಬಿಟ್ಟ ಸುಬ್ಬಿಯ ಪ್ರಸಂಗ ಬರುತ್ತದೆ, ಗಂಡನನ್ನು ಬಿಟ್ಟ ಸುಬ್ಬಿಗೆ ಅವಳ ತಾಯಿ ಬೈಯ್ಯುತ್ತಿದ್ದಾಗ ಬರುವ ಫಣಿಯಮ್ಮ ಹೀಗೆನ್ನುತ್ತಾಳೆ- ”ಯಾಕ್ ಚಿಕ್ಕಮ್ಮ ಅದನ್ ಬೈತಿ? ಮೊದ್ಲೇ ನೊಂದದೆ ಹೆಣ್ಣು, ನಂಗ್ ಗಂಡ್ನಿಲ್ಲ... ಅದರ ಪಾಲಿಗೆ ಇದ್ದೂ ಇಲ್ಲ...”. ಹಾಗೆ ಇನ್ನೊಂದು ಸನ್ನಿವೇಶದಲ್ಲಿ ” ಎಷ್ಟು ದಿನ ಇದ್ರೂ ಇಷ್ಟೇ ಸೈಯಲ್ಲ.... ಚಟ್ಟ ಕಟ್ಟೋಕು ಬರ್ದು, ಬುಟ್ಟಿ ಹೆಣಿಯೋಕೂ ಬರ್ದು... ಅಂಥಾ ಗೆದ್ಲು ತಿಂದ ಹುಳು ನಾನು” ಎನ್ನುತ್ತಾಳೆ. ಇಲ್ಲೆಲ್ಲಾ ಫಣಿಯಮ್ಮನ ಅಂತರಂಗದಲ್ಲಿದ್ದ ಅಗಾಧ ನೋವು-ನಿರಾಸೆಗಳು ವ್ಯಕ್ತವಾಗುತ್ತದೆ. (ದಾಕ್ಷಾಯಿಣಿಯ ಪ್ರಸಂಗದಲ್ಲೂ ಸಹ ಅವಳಿಗೆ ಕೇಶಮುಂಡನ ಮಾಡುವುದು ಫಣಿಯಮ್ಮನ ಅಂತರಂಗಕ್ಕೆ ಇಷ್ಟವಿರುವುದಿಲ್ಲ, ಅವಳು ಪಂಚಾಯ್ತಿಯಿಂದ ದೂರ ಉಳಿಯುವುದೇ ಇದಕ್ಕೆ ಸಾಕ್ಷಿ. )
ಒಟ್ತಾರೆಯಾಗಿ ನಮ್ಮ ಸಮಾಜದಲ್ಲಿನ ಜಿಡ್ಡುಗಟ್ಟಿದ ಸಂಪ್ರದಾಯಗಳ ಮಸಿಗೋಡೆಯನ್ನು ಒಡೆಯುವ ದಿಟ್ಟ ಪ್ರಯತ್ನವನ್ನು ನಾವಿಲ್ಲಿ ಕಾಣಬಹುದು. ಅಂತೆಯೇ ಈ ಕಾದಂಬರಿಯಲ್ಲಿ ಅಂದಿನ ಸಮಾಜವನ್ನೊಪ್ಪಿಕೊಂಡ ಪಾತ್ರಗಳಂತೆಯೇ ಹೊಸ ಗಾಳಿಗೊಡ್ಡಿಕೊಂಡ ಪಾತ್ರಗಳನ್ನು ಸಹ ನಾವಿಲ್ಲಿ ನೋಡುತ್ತೇವೆ. ಹಾಗೆಯೇ ಕಾದಂಬರಿಯು ಕೇವಲ ಸಾಹಿತ್ಯಿಕ ಮಾನದಂಡಗಳಲ್ಲದೆ, ಸಾಹಿತ್ಯೇತರ ವೈಚಾರಿಕ ಮಾನದಂಡಗಳಿಂದಲೂ ಅಳೆಯಬಹುದಾದ ಬಲು ವಿಶಿಷ್ಟ ಕೃತಿ ಎನ್ನಬೇಕು.
ಹೀಗೆ ಒಟ್ತಾಗಿ ಎಂ.ಕೆ ಇಂದಿರಾರವರ ಈ ಎರಡೂ ಕಾದಂಬರಿಗಳು ಕನ್ನಡ ಸಾಹಿತ್ಯ ವಲಯದಲ್ಲಿ ಬಲು ವಿಶಿಷ್ಟ, ಅಷ್ಟೇ ಮೌಲ್ಯಯುತವಾದುದೆನ್ನುವುದು ನನ್ನ ಅಭಿಪ್ರಾಯ. ಪ್ರತಿಯೊಬ್ಬ ಕನ್ನಡಿಗನೂ ಇಂದಿರಾರವರ ಈ ಎರಡು ಕೃತಿಗಳನ್ನು ಓದಿಕೊಳ್ಳಬೇಕೆಂಬುದು ನನ್ನ ಅಂತರಂಗದ ಅಪೇಕ್ಷೆ.
No comments:
Post a Comment