Saturday, February 08, 2014

ಪ್ರೀತಿಯ ದೀಪ ಹಚ್ಚಿದ ಕವಿ: ಪರಮೇಶ್ವರ ಭಟ್

ಕನ್ನಡ ನಾಡು ಕಂಡ ಅತ್ಯಂತ ಮಹತ್ವದ ಕವಿಗಳು, ಅನುವಾದಕರು, ಸಹೃದಯ ವಿಮರ್ಶಕರೂ ಆಗಿದ್ದ ಬಹುಮುಖ ಪ್ರತಿಭಾಶಾಲಿ ಪ್ರೊಫೆಸರ್ ಎಸ್.ವಿ. ಪರಮೇಶ್ವರ ಭಟ್ಟರ 101 ನೇ ಜನುಮ ದಿನ (ಫೆಬ್ರವರಿ 8) ದ ಅಂಗವಾಗಿ ಅವರ ದೊಡ್ದ ವ್ಯಕ್ತಿತ್ವವನ್ನು ಪರಿಚಯಿಸುವ ಒಂದು ಕಿರು ಪ್ರಯತ್ನ


ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ಹೃದಯಪೂರ್ವಕ ನಮಸ್ಕಾರಗಳು,
ಈ ವಾರ ಕನ್ನಡ ಕಟ್ಟಾಳುಗಳಾಲ್ಲಿ ಒಬ್ಬರಾದ ಹಿರಿಯ ವಿದ್ವಾಂಸ, ವಾಗ್ಮಿ, ಸಹೃದಯ ಲೇಖಕರಾಗಿದ್ದ ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರ 101 ನೇ ಹುಟ್ಟಿದ ಹಬ್ಬ(ಫೆಬ್ರವರಿ 8).
ಹೀಗೆಂದರೆ ಬಹುಷಃ ಅನೇಕರಿಗೆ ಅವರ ಪರಿಚಯ ಸಿಗಲಿಕ್ಕಿಲ್ಲ. ಅದೇ ಎಸ್.ವಿ. ಪರಮೇಶ್ವರ ಭಟ್ಟರು ಎಂದರೆ ತಕ್ಷಣ ತಿಳಿಯುತ್ತದೆ ಹೌದು ಸ್ನೇಹಿತರೆ, ಇಂದು ಭಟ್ಟರು ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರು ಮಾಡಿಟ್ಟು ಹೋದ ಕೆಲಸದ ಮುಖಾಂತರ ನಾವೆಂದೆಂದೂ ಅವರನ್ನು ನೆನೆಯಬಹುದು..
ಪರಮೇಶ್ವರ ಭಟ್ಟರು ಹುಟ್ಟಿದ್ದು 1914 ಫೆಬ್ರವರಿ 8 ರಂದು ಶಿವಮೊಗ್ಗದ ತೀರ್ಥಹಳ್ಳಿಯ ಮಾಳೂರಿನಲ್ಲಿ. ಇವರ ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಮ್ಮ. ಇಬ್ಬರು ಅಕ್ಕಂದಿರಿದ್ದು ಮನೆಯಲ್ಲಿ ಇವರೇ ಕಿರಿಯವರಾಗಿದ್ದರು. ಆದರೆ ದುರದೃಷ್ಟವಶಾತ್ ಭಟ್ಟರು ಹುಟ್ಟಿದ ಎರಡೇ ವರ್ಷದಲ್ಲಿ ತಾಯಿಯವರನ್ನು ಕಳೆದುಕೊಳ್ಳಬೇಕಾಯಿತು. ಮುಂದೆ ತಂದೆ ಸದಾಶಿವರಾಯರ ಆರೈಕೆಯಲ್ಲಿಯೇ ಮೂವರು ಮಕ್ಕಳೂ ಬೆಳೆದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲೇ ಮುಗಿಸಿದ್ದ ಭಟ್ಟರಿಗೆ ಪ್ರೌಢಶಾಲೆಯಲ್ಲಿ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳಾಗಿ ದೊರಕಿದರು. ಆಧುನಿಕ ದೃಷ್ಟಿಕೋನವನ್ನು ಹೊಂದಿ, ಕನ್ನಡದ ಘನ ಪಂಡಿತರಾಗಿದ್ದ ಶಾಸ್ತ್ರಿಗಳ ಪಾಠ ಪ್ರವಚನಗಳು ಪರಮೇಶ್ವರ ಭಟ್ಟರಲ್ಲಿ ಸಹಜವಾಗಿಯೇ ಸಾಹಿತ್ಯಾಸಕ್ತಿಯನ್ನು ಕೆರಳಿಸಿದವು.
ಮುಂದೆ ಇಂಟರ್ ವಿದ್ಯಾಭ್ಯಾಸದ ಅವಧಿಯಲ್ಲಿ ಸಹ ಎ.ಆರ್. ಕೃಷ್ಣಶಾಸ್ತ್ರಿಗಳು, ವಿ. ಸೀತಾರಾಮಯ್ಯನವರು, ಡಿ.ವಿ. ಶೇಷಗಿರಿರಾಯರು ಇವರೇ ಮೊದಲಾದ ಗುರುವರೇಣ್ಯರ ಶಿಶ್ಯರಾಗಿದ್ದ ಭಟ್ಟರಿಗೆ ಅಲ್ಲಿಯೂ ಸಾಹಿತ್ಯದ ವಾತಾವರಣಾವು ಸುಲಭದಲ್ಲಿ ದಕ್ಕಿತು. 1938 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಕನ್ನಡ ಎಮ್.ಎ. ಪದವಿಯನ್ನು ಪಡೆದ ಪರಮೇಶ್ವರ ಭಟ್ಟರು ಅನಂತರ ಅಲ್ಲಿಯೇ ಕನ್ನಡ ಅದ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1940 ರಲ್ಲಿ ರಾಜಲಕ್ಷ್ಮಿಯವರೊಡನೆ ವಿವಾಹವಾದ ಪರಮೇಶ್ವರ ಭಟ್ಟರಿಗೆ ಭಡ್ತಿಯೊಂದಿಗೆ ತುಮಕೂರಿಗೆ ವರ್ಗವಾಯಿತು. ಅಲ್ಲಿಂದ 1942 ರಲ್ಲಿ ಪುನಃ ಶಿವಮೊಗ್ಗಕ್ಕೆ ವರ್ಗವಾಯಿತು. ಕಾಲೇಜಿನ ಪಾಠ ಪ್ರವಚನಗಳೊಂದಿಗೆ ಅಲ್ಲಿನ ಕರ್ನಾಟಕ ಸಂಘದ ಕಾರ್ಯ ಕಲಾಪಗಳಲ್ಲಿಯೂ ಭಾಗಿಯಾಗಿದ್ದ ಭಟ್ಟರ ಬೊಧಪ್ರದವಾದ ಭಾಷಣ ಶೈಲಿಗೆ ಮಲೆನಾಡಿಗರೆಲ್ಲಾ ಮಾರುಹೋದರು.
ಅಲ್ಲಿಂದಾಚೆಗೆ 1968 ರವರೆಗೆ ಮೈಸೂರಿನಲ್ಲೇ ಇದ್ದ ಪರಮೇಶ್ವರ ಭಟ್ತರು 1968 ರಲ್ಲಿ ಮಂಗಳೂರು ಸ್ನಾತಕೋತ್ತ್ರ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡರು. ಅಲ್ಲಿಂದ 1974 ರಲ್ಲಿ ತಾವು ನಿವೃತ್ತಿಯಾಗುವವರೆಗೆ  ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ತಮ್ಮ ವೃತ್ತಿ ಬದುಕನ್ನು ನಡೆಸಿದ್ದ ಭಟ್ಟರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾದ್ಯಾಪಕ ಮುಖ್ಯಸ್ಥರಾಗಿ ಸರಿಸುಮಾರು ಆರು ವರ್ಷಗಳ ಕಾಲ ಮಂಗಳೂರನ್ನೇ ತಮ್ಮ ಸಾಹಿತ್ಯಕೇಂದ್ರವಾಗಿ ಮಾಡಿಕೊಂಡಿದ್ದರು.
ಎಸ್.ವಿ. ಪರಮೇಶ್ವರ ಭಟ್ಟ
ಇನ್ನು ಭಟ್ಟರ ಪಾಠದ ಶೈಲಿಗೆ ಮಾರುಹೋಗದವರಿರಲಿಲ್ಲ. ಇವರ ಪಾಠವನ್ನು ಕೇಳಲಿಕ್ಕಾಗಿ ಅನ್ಯ ತರಗತಿಯಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಹೀಗಾಗಿ ತರಗತಿಯ ಕೋಣೆ ವಿದ್ಯಾರ್ಥಿಗಳಿಂದಲೇ ತುಂಬಿ ಹೋಗಿರುತ್ತಿತ್ತು. ಇವರ ಪಾಠ ಹೇಳುವ ರೀತಿಯ ಬಗ್ಗೆ ಭಟ್ಟರ ಶಿಷ್ಯವೃಂದದಲ್ಲಿ ಪ್ರಮುಖರಾದ ಡಾ. ಬಿ.ಎ. ವಿವೇಕ ರೈಗಳು ತಾವು ಹೀಗೆ ನೆನೆಯುತ್ತಾರೆ-  ``ಪಾಠ ಅದೊಂದು ರಸಲೋಕದ ಯಾತ್ರೆಯಂತೆ. ಹದಿನಾರು ಮಂದಿಯ ತರಗತಿಯಾಗಲಿ , ಸಾವಿರ ಮಂದಿಯ ಸಭೆಯಾಗಲಿ , ಆ ಮಾತಿನ ರೀತಿ , ರೂಪಕಗಳ ಸರಮಾಲೆ , ತಮ್ಮ ಗುರು ಪರಂಪರೆಯ ಸಂಬಂಧದ ಅನುಭವಗಳನ್ನು ಬಿಚ್ಚುತ್ತಿದ್ದ ವೈಖರಿ , ವಿಷಯದ ಮಂಡನೆಯೊಂದಿಗೆ ಜೋಡಣೆಗೊಳ್ಳುತ್ತಿದ್ದ ನೂರಾರು ಅನುಭವದ ತುಣುಕುಗಳು – ಹೀಗೆ ಒಂದು ಗಂಟೆ ಮುಗಿಯುವುದರೊಳಗೆ ಒಂದು ರಸ ವಿಶ್ವಕೋಶದ  ಒಳಗಡೆ ತಿರುಗಾಟದ ಸುಖ ದೊರೆಯುತ್ತಿತ್ತು.’’
ಎಸ್.ವಿ. ಪರಮೇಶ್ವರ ಭಟ್ಟ್ರರೆಂದರೆ ಇಷ್ಟೇ ಅಲ್ಲ ಸ್ನೇಹಿತರೆ, ಅವರು ಕವಿಗಳು, ಸಂಸ್ಕೃತ ವಿದ್ವಾಂಸರು, ಸದಾ ಕನ್ನಡಕ್ಕಾಗಿ ತುಡಿಯುವ ಮಿಡಿಯುವ ಮನವುಳ್ಳವರು., ಹೀಗೆ ಹೇಳುತ್ತಾ ಹೋದರೆ ಅವರ ವ್ಯಕ್ತಿತ್ವದ ಒಂದೊಂದು ಮುಖವನ್ನು ವಿವರಿಸಲೂ ಒಂದೊಂದು ಲೇಖನವನ್ನೇ ಬರೆಯಬೇಕಾಗಬಹುದು. ಮಂಗಳೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಮೇಲೆ ಮೈಸೂರಿನಲ್ಲಿ ನೆಲೆಸಿದ ಪರಮೇಶ್ವರ ಭಟ್ಟರಿಗೆ ಯುಜಿಸಿ ಪ್ರಾಯೋಜಿತ ಪ್ರಾಧ್ಯಾಪಕರಾಗಿ ಮಾನಸ ಗಂಗೋತ್ರಿಯಲ್ಲಿ ಕೆಲಸ ಮಾಡುವ ಅವಕಾಶವು ದೊರೆಯುತ್ತದೆ. ಅದಾಗ ಅವರು ಯಾವುದಾದರೊಂದು ವಿಷಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪ್ರಕಟಿಸಬೇಕಾದಾಗ  ಭಟ್ಟ್ರೌ ಆರಿಸಿಕೊಂಡ ವಿಷಯ  ಯಾವುದು ಗೊತ್ತೆ? ಕುವೆಂಪು ಅವರ ಕಾವ್ಯ! “ರಸಋಷಿ ಕುವೆಂಪು” ಹೆಸರಿನ ಈ ಬೃಹತ್ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ ಭಟ್ಟರ ಕೆಲಸವನ್ನು ಕಂಡ ಕುವೆಂಪು ತಾವು ಪರಮೇಶ್ವರ ಭಟ್ತ್ರಿಗೆ ಹೀಗೊಂದು ಪತ್ರವನ್ನು ಬರೆಯುತ್ತಾರೆ-
"ನೀವು ಆರಿಸಿಕೊಂಡಿರುವ ವಿಷಯಕ್ಕೆ ನಿಮಗಿಂತಲೂ ಉತ್ತಮತರ ಅಧಿಕಾರಿ ದೊರೆಯುವುದು ಕಷ್ಟ! ನನ್ನಂತೆಯೇ ನೀವೂ ಹುಟ್ಟಿ, ಬೆಳೆದು, ಬಾಲ್ಯದಲ್ಲಿ ಮಲೆಕಾಡುಗಳ ಸಾನ್ನಿಧ್ಗದ ದಿವ್ಯಸೌಂದರ್ಯದ ಪೀಯೂಷವನ್ನು ಆಸ್ವಾದಿಸಿದ್ದೀರಿ. ಭಾಷಾ ಪಾಂಡಿತ್ಯದಲ್ಲಿ ನನ್ನೆಲ್ಲ ವಾಚ್ಯ ಲಕ್ಷ್ಯ ವ್ಯಂಗ್ಯಗಳನ್ನು ತಲಸ್ಪರ್ಶಿಯಾಗಿ ಅರಿಯುವ ಸಾಮಾರ್ಥ್ಯವನ್ನು ಪಡೆದಿದ್ದೀರಿ. ನೀವು ಇದುವರೆಗೆ ಪ್ರಕಟಿಸಿರುವ ವಿಮರ್ಶೆ ಲೇಖನಗಳನ್ನು ನೋಡಿರುವ ನನಗೆ ನನ್ನ ಕೃತಿಗಳ ದರ್ಶನ ಧ್ವನಿಯನ್ನು ದರ್ಶನವನ್ನು ಗ್ರಹಿಸುವ ಗಗನ್ನೋನ್ನತಿ ಧೀಶಕ್ತಿಯ ಕೃಪೆಗೂ ನೀವು ಪಾತ್ರರಾಗಿದ್ದೀರಿ. ನೀವೇ ಬರೆದಿರುವಂತೆ 'ನನ್ನ ಸಾಹಿತ್ಯಜೀವನದ ಕಾರ್ಯಕಲಾಪಗಳಲ್ಲಿ ಈ ಗ್ರಂಥ ಕಟ್ಟಕಡೆಯದಾಗಿ ಮಕುಟಪ್ರಾಯವಾದದ್ದಾಗಿ ರಾರಾಜಿಸಬೇಕು ಎಂಬುದು ನನ್ನ ಅಪೇಕ್ಷೆ' ಎಂಬುದು ಖಂಡಿತವಾಗಿಯೂ ಸಫಲವಾಗುತ್ತದೆ ಎಂಬುದು ನನ್ನ ಆಶೆ ಮತ್ತು ಅನಿಸಿಕೆ.
ಆದರೆ ಒಂದು ಹೆದರಿಕೆ!
ಜನರು ನಿಮ್ಮ ಗ್ರಂಥವನ್ನೇ ಓದಿ ತೃಪ್ತರಾಗಿ ನನ್ನ ಕೃತಿಗಳನ್ನು ಎಲ್ಲಿ ಓದದೇ ಹೋಗುತ್ತಾರೋ ಎಂದು!
ಹಾಗಾದರೂ ಆಗಿಹೋಗಲಿ! ನಷ್ಟವೇನಿಲ್ಲ! ಭಟ್ಟ ಪರಮೇಶ್ವರನಿಗೆ ಜಯವಾಗಲಿ.
ಕುವೆಂಪುರವರ ಈ ಮಾತುಗಳು ಶ್ರಿಯುತ ಎಸ್.ವಿ. ಪರಮೇಶ್ವರ ಭಟ್ಟರಲ್ಲಿದ್ದ ಅಗಾಧವಾದ ಪ್ರತಿಭಾ ಶಕ್ತಿಗೊಂದು ನಿದರ್ಶನ.
ಭಟ್ಟರ ಸಾಹಿತ್ಯ ವಿರಚನೆಗಳ ವಿಚಾರಕ್ಕೆ ಬಂದರೆ 1940 ರಲ್ಲಿ ಅವರ ಪ್ರಥಮ ಕವನ ಸಂಕಲನ “ರಾಗಿಣಿ” ಪ್ರಕಟವಾಯಿತು. ಮುಂದೆ “ಉಪ್ಪು ಕಡಲು”, “ಇಂದ್ರ ಚಾಪ”, “ಇಂದ್ರ ಗೋಪ”, “ಅಂಚೆ ಪೆಟ್ಟಿಗೆ”, “ಜಹನಾರ”, “ಗಗನಚುಕ್ಕಿ” ಇವು ಅವರ ಪ್ರಮುಖ ಕವನ ಸಂಕಲನಗಳಾಗಿವೆ. ``ಗಾಥಾಸಪ್ತಶತಿ’’, ``ಚಂದ್ರವೀಧಿ’’ ಮತ್ತು ``ಕೃಷ್ಣಮೇಧ’’ ಇವರ ಸಾಂಗತ್ಯ ಕೃತಿಗಳು. ``ಸೀಳು ನೋಟ’’ ಪರಮೇಶ್ವರ ಭಟ್ಟರ ವಿಮರ್ಶನಾ ಗ್ರಂಥವಾದರೆ ಮುದ್ದಣ ಕವಿಯ ``ಶ್ರೀರಾಮ ಪಟ್ಟಾಭಿಷೇಕಂ’’, ಮುದ್ದಣ ಕವಿಯ ``ಅದ್ಭುತ ರಾಮಾಯಣಂ’’, ``ಭೂಮಿ ಮತ್ತು ಧೂಮಕೇತು’’, ``ಕಣ್ಣುಮುಚ್ಚಾಲೆ-ಮಕ್ಕಳ ಸಾಹಿತ್ಯ ರಚನೆಗಳು’’ ಇವು ಅವರು ಸಂಪಾದಿಸಿದ ಕೃತಿಗಳಾಗಿವೆ.  ಬಹುಶ್ರುತ ವಿದ್ವಾಂಸರಾಗಿದ್ದ ಪರಮೇಶ್ವರ ಭಟ್ಟರು `ಕನ್ನಡ ಕಾಳಿದಾಸ’ ಎಂಬ ಖ್ಯಾತಿ ಪಡೆದವರು. ``ಕನ್ನಡ ಕಾಳಿದಾಸ ಮಹಾ ಸಂಪುಟ’’, ``ಕನ್ನಡ ಭಾಸ ಮಹಾ ಸಂಪುಟ``, ``ಕನ್ನಡ ಹರ್ಷ ಮಹಾ ಸಂಪುಟ’’, ``ಕನ್ನಡ ಬುದ್ಧ ಚರಿತೆ’’, ``ಕನ್ನಡಗಾಥಾ ಸಪ್ತಶತಿ’’, ``ಕನ್ನಡ ಗೀತಗೋವಿಂದ’’, ``ಕನ್ನಡ ಕವಿ ಕೌಮುದಿ’’, ``ಕನ್ನಡ ಅಮರ ಶತಕ’’ ಎಂಬ ಹೆಸರಿನಲ್ಲಿ ಸಂಸ್ಕೃತದ ಮಹಾಕಾವ್ಯಗಳನ್ನು ಅನುವಾದಿಸಿದ ಪರಮೇಶ್ವರ ಭಟ್ಟರು ಕಾಲಿದಾಸ, ಭಾಸ, ಹರ್ಷ ಇವರುಗಳನ್ನು ಕನ್ನಡಕ್ಕೆ ಅನುವಾದಿಸಿದವರಲ್ಲಿ ಮೊದಲಿಗರಾಗಿದ್ದಾರೆ
ಪರಮೇಶ್ವರ ಭಟ್ತರ ಇಂತಹಾ ಅಗಾಧ ಪಾಂಡಿತ್ಯಕ್ಕೆ ಗೌರವ ಸೂಚಕವಾಗಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳೂ ಅವರನ್ನು ಅರಸಿಕೊಂಡು ಬಂದಿವೆ. ಅವರ ``ಕಾಳಿದಾಸ ಮಹಾಸಂಪುಟ’’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ ನೀಡಿದೆ. ಮೈಸೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳಿಂದ ಗೌರವ ಡಿ.ಲಿಟ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವಗಳು ಅವರಿಗೆ ದೊರೆತಿವೆ. ಜೊತೆಗೆ, ತಮ್ಮ ಅಪಾರ ಶಿಷ್ಯವೃಂದ ಹಾಗೂ ಸಾಹಿತ್ಯಾಭಿಮಾನಿಗಳಿಂದ  'ಪೂರ್ಣಕುಂಭ' ಎಂಬ ಅಭಿನಂದನ ಗ್ರಂಥವೂ ಸಮರ್ಪಣೆಯಾಗಿದೆ.
ಇಷ್ಟಾಗಿಯೂ ಭಟ್ಟರು ತಾವೆಂದೂ ಸಜ್ಜನಿಕೆಯ, ಸರಳ ಜೀವಿಯಾಗಿಯೇ ಇದ್ದವರು. ಬಿ.ಎ. ವಿವೇಕ ರೈಗಳು ಹೇಳುವಂತೆ `` ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಪ್ರೊಫೆಸರ್…...  ನೂರು ನೋವುಗಳ ನಡುವೆಯೂ ಸಾವಿರ ಬಗೆಯ  ನಗೆ ಚೆಲ್ಲಿದ ಪ್ರೊಫೆಸರ್ ಅವರ ವಿದ್ವತ್ತು ಸಾಧನೆಗಳು , ಬಹಳ ಮಂದಿಗೆ ಕಾಣದೆ ಹೋದದ್ದು ಕನ್ನಡ ಸಾಹಿತ್ಯ ಚರಿತ್ರೆಯ  ಒಂದು ವ್ಯಂಗ್ಯ……  ತಮ್ಮೊಡನೆ ಇರುವವರನ್ನೆಲ್ಲ ಸಂತೋಷ ಪಡುವಂತೆ ಮಾಡುತ್ತಿದ್ದರು.ಹಾಗೆ ನೋಡಿದರೆ ಅವರಿಗೆ ದೊರೆತಿರುವ ಪ್ರಶಸ್ತಿಗಳು ಬಹಳವೇನೂ ಇಲ್ಲ.ಸಣ್ಣ ಸಣ್ಣ ಊರುಗಳಲ್ಲಿ ತಮಗೆ ಮಾಡಿದ ಸನ್ಮಾನಗಳನ್ನು ಅವರು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಜನರ ಪ್ರೀತಿಯನ್ನು ಬಹಳ ದೊಡ್ಡ ಗೌರವ ಎಂದು ಭಾವಿಸುತ್ತಿದ್ದರು.ಈ ಅರ್ಥದಲ್ಲೂ ಪರಮೇಶ್ವರ ಭಟ್ಟರು  ಕನ್ನಡದ ಅಪೂರ್ವ ಸಾಹಿತಿ.’’
ಇಂತಹಾ ಅಪೂರ್ವ ಚೇತನವೊಂದು ಅಕ್ಟೋಬರ್ 27 2000 ಕ್ಕೆ ನಮ್ಮನ್ನೆಲ್ಲಾ ಕಣ್ಣೀರ ಕಡಲಲ್ಲಿ ಮುಳುಗಿಸಿ ಮರೆಯಾಯಿತು.
ಭಟ್ಟರಂತಹಾ ಅಪರೂಪದ ಪ್ರತಿಭೆ ಇನ್ನೊಮ್ಮೆ ಕನ್ನಡ ನಾಡಿನಲ್ಲಿ ಹುಟ್ತಿ ಬರಲಿ, ಹುಟ್ಟಿ ಬಂದು ಕನ್ನಡ ತಾಯಿಯ ಸೇವೆಯಲ್ಲಿ ನಿರಂತರವಾಗಿ ತೊಡಗುವಂತಾಗಲಿ ಎಂದು ಆಶಿಸುತ್ತಾ ಶತಮಾನದ ಜನುಮ ದಿನದ ಈ ಶುಭ ಸಮಯದಲ್ಲಿ ಅವರದೇ ಕವನದ ಈ ಕೆಳಗಿನ ಸಾಲುಗಳ ಗುನುಗುತ್ತಾ, ಆ ದಿವ್ಯ ಚೇತನಕ್ಕೆ ನಮಿಸೋಣ…..
`'ಪ್ರೀತಿಯ ಕರೆ ಕೇಳಿ
ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ'’
ನಮಸ್ಕಾರ. 

Saturday, February 01, 2014

ವೀರ ಮಹಿಳೆ ಕಿತ್ತೂರು ಚೆನ್ನಮ್ಮ

ಫೆಬ್ರವರಿ 2 ಕಿತ್ತೂರು ರಾಣಿ ಚೆನ್ನಮ್ಮಳ ಸ್ಮೃತಿ ದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕ ಇದು, ನಿಮಗಾಗಿ...

ನಮಸ್ಕಾರ ಸ್ನೇಹಿತರೇ,
ನಮ್ಮ ಕನ್ನಡ ನಾಡು ಹಿಂದಿನಿಂದಲೂ ಸಾಕಷ್ಟು ವೀರರೂ ಶೂರರೂ ಇದ್ದಂತಹಾ ನಾಡು ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗವು ಗಂಡುಗಲಿಗಳ ನಾಡೆಂದೇ ಪ್ರಸಿದ್ದಿಯನ್ನು ಹೊಂದಿದೆ. ಅಂತಹುದರಲ್ಲಿ ಬೆಳಗಾವಿಯಲ್ಲಿನ ಕಿತ್ತೂರು ಸಂಸ್ಥಾನವನ್ನಾಳಿದ ವೀರ ಮಹಿಳೆ ಚೆನ್ನಮ್ಮಾಜಿಯೂ ಒಬ್ಬಳು. ಇಡೀ ದೇಶವನ್ನು ಆಕ್ರಮಿಸಿಕೊಂಡಿದ್ದ ಬ್ರಿಟೀಷರನ್ನು ಗಡ ಗಡನೆ ನಡುಗುವಂತೆ ಮಾಡಿದ್ದಲ್ಲದೆ ತಾನೊಬ್ಬಳೇ ಏಕಾಂಗಿಯಾಗಿ ಅವರ ವಿರುದ್ದ ಹೋರಾಡಿ ಕನ್ನಡಿಗರ ಕೆಚ್ಚೆದೆಯ ಹೋರಾಟಕ್ಕೆ ಸಾಕ್ಷಿಯಾದವಳು. ಇದೇ ಫೆಬ್ರವರಿ 2 ರಂದು ರಾಣಿ ಚೆನ್ನಮ್ಮಳ ಸ್ಮೃತಿ ದಿನ. ತನ್ನಿಮಿತ್ತ ಕಿತ್ತೂರು ಚೆನ್ನಮ್ಮಳ ಜೀವನಗಾಥೆಯ ಒಂದು ಕಿರು ಪರಿಚಯವನ್ನು ನಾನು ನಿಮಗಿಲ್ಲಿ ಮಾಡಿಕೊಡಲಿದ್ದೇನೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಇಂದು  ರಾಣಿ ಚೆನ್ನಮ್ಮನಿಂದಾಗಿ ವಿಶ್ವ ವಿಖ್ಯಾತವಾಗಿದೆ. ಈ ಕಿತ್ತೂರನ್ನು ಆಳಿದ ದೇಸಾಯಿಗಳಲ್ಲಿ ಅತ್ಯಂತ ಪ್ರಮುಖರಾದ ಮಲ್ಲಸರ್ಜ ದೇಸಾಯಿಯವರ ಎರಡನೇ ಪತ್ನಿಯಾಗಿದ್ದ ವೀರ ರಾಣಿ ಚೆನ್ನಮ್ಮ ತನ್ನ ಪುಟ್ಟ ರಾಜ್ಯ ಕಿತ್ತೂರಿನ ರಕ್ಷಣೆಗಾಗಿ ಬಹುತೇಕ ಭಾರತವನ್ನೇ ಆಕ್ರಮಿಸಿಕೊಂಡಿದ್ದ ಪ್ರಬಲರಾದ ಬ್ರಿಟೀಷರ ವಿರುದ್ದ ಸೆಟೆದು ನಿಂತವಳು. ತಾನೊಬ್ಬಳೇ ಏಕಾಂಗಿಯಾಗಿ ಹೋರಾಡಿದ ಈ ಧೀರ ಮಹಿಳೆಯ ಕಥೆ ಎಂಥವರಿಗೂ ಸ್ಪೂರ್ತಿದಾಯಕವಾಗಬಲ್ಲುದು.
ರಾಣಿ ಚೆನ್ನಮ್ಮ
ರಾಣಿ ಚೆನ್ನಮ್ಮ ಹುಟ್ಟಿದ್ದು ಬೆಳಗಾವಿ ನಗರದಿಂದ ಆರು ಕಿಲೋಮೀತರ್ ದೂರದಲ್ಲಿರುವ ಕಾಕತಿ ಎಂಬ ಪುಟ್ಟ ಗ್ರಾಮದಲ್ಲಿ. 1778 ರಲ್ಲಿ ಹುಟ್ಟಿದ ಚೆನ್ನಮ್ಮಳ ತಂದೆ ಕಾಕತಿಯ ದೇಸಾಯಿಯಾಗಿದ್ದ ಧೂಳಪ್ಪಗೌಡರು. ಚೆನ್ನಮ್ಮ ತಾನು ಚಿಕ್ಕ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಬಿಲ್ಲು ವಿದ್ಯೆಯಲ್ಲಿ ಪರಿಣಿತಿಯನ್ನು ಪಡೆದಿದ್ದಳು. ಚಿಕ್ಕಂದಿನಿಂದಲೂ ಅಂಜಿಕೆ ಯಿರದ ಧೈರ್ಯವಂತೆಯಾಗಿದ್ದ ಚೆನ್ನಮ್ಮಳು ತಾನು ಎಂತಹಾ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಬಲ್ಲವಳಾಗಿದ್ದಳು. ಹೀಗಾಗಿಯೇ ಮುಂದೆ ತನ್ನ ರಾಜ್ಯಕ್ಕೆದುರಾದ ಕಠಿಣ ಪರಿಸ್ಥಿತಿಯಲ್ಲಿಯೂ ತಾನು ಒಂದಿನಿತೂ ಅಳುಕದೆ ರಾಜನಿಷ್ಠರಾಗಿದ್ದ ಗುರುಸಿದ್ದಪ್ಪ, ನರಸಿಂಗರಾವ್ ಮತ್ತಿತರರ ಬೆಂಬಲದೊಡನೆ ತನ್ನ ದತ್ತು ಮೊಮ್ಮಗನಿಗೆ ಪಟ್ಟಕಟ್ಟಿದ್ದಳು.
ಬಿಜಾಪುರ ಸುಲ್ತಾನರ ಪತನದ ಬಳಿಕ ಉತ್ತರ ಕರ್ನಾಟಕದಾದ್ಯಂತ ಒಂದು ಬಗೆಯ ಅರಾಜಕತೆಯುಂಟಾಗುತ್ತದೆ. ದಕ್ಷಿಣದ ಮೈಸೂರನ್ನಾಳುತ್ತಿದ್ದ ಒಡೆಯರ್ ರನ್ನು ಮೂಲೆಗುಂಪು ಮಾಡಿ ರಾಜ್ಯದ ಆಡಳಿತವನ್ನೆಲ್ಲಾ ತಮ್ಮ ಕೈಗೆ ತೆಗೆದುಕೊಂಡಿದ್ದ ಹೈದರ್ ಹಾಗೂ ಟಿಪ್ಪು ಸುಲ್ತಾನರುಗಳು ಉತ್ತರದಲ್ಲಿನ ಆ ಅರಾಜಕತೆಯ ಲಾಭವನ್ನು ಪಡೆಯಲು ಹವಣಿಸುತ್ತಿದ್ದರೆ ಇನ್ನೊಂದು ಕಡೆ ಮರಾಠಾ ಪೇಶ್ವೆಗಳು ಸಹ ತಮಗೆ ಎಲ್ಲಾದರೂ ಅವಕಶ ದಕ್ಕೀತೆಂದು ಕಾಯುತ್ತಿರುತ್ತಾರೆ. ಇನ್ನೊಂದು ಕಡೆ ಭಾರತೀಯ ರಾಜರುಗಳ ಈ ಒಳಜಗಳ, ಅದರಿಂದುಂಟಾದ ಅರಾಜಕತೆ ಇವು ಬ್ರಿಟೀಷರು ಭಾರತದಲ್ಲಿ ತಮ್ಮ ಭದ್ರ ನೆಲೆಯನ್ನು ಕಂಡುಕೊಳ್ಳಲು ಸಹಕಾರಿಯಾದವು.
ಪರಿಸ್ಥಿತಿ ಹೀಗಿರಲು ಟಿಪ್ಪು ಸುಲ್ತಾನನು ಕಿತ್ತೂರಿನ ದೊರೆ ಮಲ್ಲಸರ್ಜನನ್ನು ಬಂಧಿಸಿ ಕಪಾಲದುರ್ಗ ಎನ್ನುವಲ್ಲಿ ಸೆರೆಯಿಟ್ಟಿದ್ದನು. ಅವನ ಸೆರೆವಾಸದಿಂದ ತಪ್ಪಿಸಿಕೊಂಡ ದೊರೆ ಮಲ್ಲಸರ್ಜನು 1803 ರಲ್ಲಿ ಅಂದಿನ ಬ್ರಿಟೀಷ್ ಗವರ್ನರ್ ಲಾರ್ಡ್ ವೆಲ್ಲಸ್ಲಿ ಗೆ ನೆರವು ನೀಡುವ ಮೂಲಕ ಕಿತ್ತೂರು ಸಂಥಾನವನ್ನು ಭದ್ರಗೊಳಿಸಿದ್ದನು. 1809 ರಲ್ಲಿ ಮರಾಠ ಪೇಶ್ವೆಯವರಿಗೂ ನೆರವಾಗಿ ಅವರಿಂದ ಸನ್ನದನ್ನು ಹೊಂದಿದ್ದನು. ಆದರೆ ಪೇಶ್ವೆಗಳು ತಾವು ಸಹ ಮಲ್ಲಸರ್ಜನಿಗೆ ವಿಶ್ವಾಸ ದ್ರೋಹವೆಸಗಿ ಅವನನ್ನು ಬಂಧಿಸಿ ಮೂರು ವರ್ಷಗಳ ಕಾಲ ಪೂನಾದ ಜೈಲಿನಲ್ಲಿಟ್ತರು. ಇದಾಗಿ 1816 ರಲ್ಲಿ ಅಲ್ಲಿಂದ ಬಿಡುಗಡೆಯಾಗಿ ಕಿತ್ತೂರಿಗೆ ಮರಳುತ್ತಿರುವಾಗ ಮಾರ್ಗಮಧ್ಯದಲ್ಲಿಯೇ ಮಲ್ಲಸರ್ಜನು ಕೊನೆಯುಸಿರೆಳೆದನು.
ಇವನ ಬಳಿಕ ಅಧಿಕಾರವನ್ನು ವಹಿಸಿಕೊಂಡಿದ್ದ ಶಿವಲಿಂಗರುದ್ರಸರ್ಜನು ತಾನು ಬ್ರಿಟೀಷರೊಡನೆ ಸ್ನೇಹದಿಂದಿದ್ದನು. ಈ ಒಂದು ಸ್ನೇಹದ ಕುರುಹಾಗಿ ಪ್ರತಿ ವರ್ಷ ಒಂದು ಲಕ್ಷದ ಎಪ್ಪತ್ತು ಸಾವಿರ(1,70,000) ರೂಪಾಯಿ ಬ್ರಿಟೀಷರ ಕೈಸೇರಿರುತ್ತಿತ್ತು! ಶಿವಲಿಂಗರುದ್ರಸರ್ಜನು ತಾನು 11 ಸೆಪ್ಟೆಂಬರ್ 1824 ರಂದು ತನ್ನ ರಾಜ್ಯಕ್ಕೆ ವಾರಸುದಾರರಿಲ್ಲದೆ ತೀರಿಕೊಂಡನು. ಶಿವಲಿಂಗರುದ್ರಸರ್ಜನು ತಾನು ಸಾಯುವ ಸಮಯದಲ್ಲಿ ಆತನ ಮಡದಿಗೆ ಕೇವಲ 11 ವರ್ಷ! ಶಿವಲಿಂಗ ಮಲ್ಲಸರ್ಜನು ತಾನು ಮರಣ ಹೊಂದುವ ಮುನ್ನ ಮಾಸ್ತವರಡಿ ಗೌದರ ಪುತ್ರ ಶಿವಲಿಂಗಪ್ಪನನ್ನು ದತ್ತು ಪಡೆದಿರುತ್ತಾನೆ. ಆದರೆ ಅಂದಿನ ಬ್ರಿಟೀಷರ ಕಂಪನಿ ಸರ್ಕಾರ ಈ ದತ್ತು ಪುತ್ರನು ರಾಜ್ಯದ ಒಡೆಯನಾಗಲು ಸರ್ವಥಾ ನಿರಾಕರಿಸುತ್ತದೆ.  ಆ ಸಮಯದಲ್ಲಿ ಧಾರವಾಡ ಸೀಮೆಯ ಕಲೆಕ್ಟರ್ ಆಗಿದ್ದ ಥ್ಯಾಕರೆಯು ತಾನು ಸ್ವತಃ ಕಿತ್ತೂರಿಗೆ ಭೇಟಿ ನೀಡಿ ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ.
ಕಿತ್ತೂರಿನ್ನು ಬ್ರಿಟೀಷರ ಆಕ್ರಮಣಗಳಿಂದ ರಕ್ಶಿಸಲು ಚೆನ್ನಮ್ಮ ಸಾಕಷ್ಟು ಪ್ರಯತ್ನ ಪಡುತ್ತಾಳೆ. ಮೊದಲು ಬ್ರಿಟೀಷ್ ಅಧಿಕಾರಿಗಳಾಗಿದ್ದ ಥ್ಯಾಕರೆ, ಮನ್ರೋ, ಚಾಪ್ಲಿನ್ ರವರುಗಳಿಗೆ ಸಂಧಾನ ಮಾಡಿಕೊಳ್ಳುವ ಸಲುವಾಗಿ ಪತ್ರ ಬರೆಯುತ್ತಾಳೆ. ಆದರೆ ಬ್ರಿಟೀಷರು ಅದಾಗಲೇ ಕಿತ್ತೂರನ್ನು ವಶಪಡಿಸಿಕೊಂಡೇ ಸಿದ್ದ ಎಂಬ ತೀರ್ಮಾನಕ್ಕೆ ಬಂದಾಗಿರುತ್ತದೆ. ಇದನ್ನರಿತ ಚೆನ್ನಮ್ಮನು ತಾನು ಹಠ ಬಿಡದೆ ನೆರೆ ರಾಜ್ಯದ ರಾಜರುಗಳ ಸಹಕಾರ ಕೋರಿ ಅವರಿಗೂ ಓಲೆ ಕಳುಹಿಸುತ್ತಾಳೆ. ಆದರೆ ಯಾರಿಂದಲೂ ತಕ್ಕ ಸಮಯಕ್ಕೆ ಸಹಕಾರ ದೊರೆಯದೆ ಹೋಗುತ್ತದೆ.
21 ಅಕ್ಟೋಬರ್ 1824 ಕ್ಕೆ ಥ್ಯಾಕರೆ ಕಿತ್ತೂರಿಗೆ ತಾನು ಸೈನ್ಯ ಸನ್ನದ್ದನಾಗಿ ಆಗಮಿಸುತ್ತಾನೆ. 23 ಅಕ್ಟೋಬರ್ 1824 ರಂದು ಥ್ಯಾಕರೆ ಅಧಿಕೃತವಾಗಿ ಯುದ್ದವನ್ನು ಆರಂಭಿಸುತ್ತಾನೆ. ಕೋಟೆಯ ಮೇಲೆ ತೋಪನ್ನು ಹಾರಿಸಲು ಅಪ್ಪಣೆ ಮಾಡಿದ ಥ್ಯಾಕರೆಯ ಸೈನ್ಯದ ಮೇಲೆ ಕೋಟೆಯೊಳಗಿನಿಂದ ನುಗ್ಗಿಬಂದ ಕಿತ್ತೂರಿನ ಸಾವಿರಾರು ಸಂಖ್ಯೆಯ ವೀರರ ಪಡೆ ಒಂದೇ ಸಮನೆ ಧಾಳಿಗೆ ತೊಡಗುತ್ತದೆ. ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪ ಹಾರಿಸಿದ ಗುಂಡಿಗೆ ಥ್ಯಾಕರೆ ಬಲಿಯಾಗುತ್ತಾನೆ. ಸ್ಟೀವನ್ಸನ್ ಹಾಗೂ ಈಲಿಯಟ್ ಎನ್ನುವ ಇಬ್ಬರು ಅಧಿಕಾರಿಗಳು ಸೆರೆಯಾಗುತ್ತಾರೆ. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾಗುತ್ತಾರೆ
ಹೀಗೆ ಮೊದಲ ಬಾರಿಗೆ ಬ್ರಿಟೀಷರ ವಿರುದ್ದ ಕಾಳಗದಲ್ಲಿ ಗೆದ್ದು ತನ್ನ ನಾಡಿನ ಸ್ವಾತಂತ್ರ್ಯ ಪತಾಕೆಯನ್ನು ಹಾರಿಸಿದ ಚೆನ್ನಮ್ಮಳ ವಿರುದ್ದ ಬ್ರಿಟೀಷರು ಒಳ ಒಳಗೇ ಕತ್ತಿ ಮಸೆಯುತ್ತಿರುತ್ತಾರೆ. ಸಣ್ಣ ಸಂಸ್ಥಾನವೊಂದರ ರಾಣಿಯೊಬ್ಬಳಿಂದ ಸೋತು ಅವಮಾನಿತರಾದ ಬ್ರಿಟೀಷರಿಗೆ ಚೆನ್ನಮ್ಮಳ ಮೇಲೆ ಮತ್ತಷ್ಟು ದ್ವೇಷ ಕೆರಳುತ್ತದೆ.
ಇಬ್ಬರ ನಡುವೆ ಮತ್ತೆ ಪತ್ರ ವ್ಯವಹಾರಗಳು ಆರಂಭಗೊಳ್ಳುತ್ತವೆ. ಅದಾಗಿ 1824 ಡಿಸೆಂಬರ್ 2 ರಂದು ಚೆನ್ನಮ್ಮಳಲ್ಲಿ ಸೆರೆಯಾಳಾಗಿದ್ದ ಸ್ಟೀವನ್ಸನ್ ಹಾಗೂ ಈಲಿಯಟ್ ರ ಬಿಡುಗಡೆಯಾಗುತ್ತದೆ. ಇದಾದ ಮರುದಿನ ಎಂದರೆ ಡಿಸೆಂಬರ್ 3 1824 ರಂದು ಬ್ರಿಟೀಷರು ಮತ್ತೆ ಬೃಹತ್ ಸೈನ್ಯದೊಂದಿಗೆ ಕಿತ್ತೂರಿನ ಮೇಲೆ ಮುಗಿಬೀಳುತ್ತಾರೆ. ಡಿಸೆಂಬರ್ 4 ರಂದು ಸರ್ದಾರ ಗುರುಸಿದ್ದಪ್ಪನು ಸೆರೆಯಾಗುತ್ತಾನೆ. ಡಿಸೆಂಬರ್ 5, 1824 ರಂದು ಕೆಚ್ಚೆದೆಯ ವೀರ ರಾಣಿ ಚೆನ್ನಮ್ಮಾಜಿಯು ತಾನು ತನ್ನ ಸೊಸೆಯಂದಿರಾದ ವೀರಮ್ಮ ಹಾಗೂ ಜಾನಕಿಬಯಿಯವರ ಜತೆ ಕೈದಿಯಾಗುತ್ತಾಳೆ. ಅವರನ್ನು ತುರ್ತು ವಿಚಾರಣೆ ನಡೆಸಿದ (ವಿಚಾರಣೆ ನಡೆಸಿದ ನಾಟಕ ಆಡಿದ)  ಬ್ರಿಟೀಷ್ ನ್ಯಾಯಾಸ್ಥಾನವು ಡಿಸೆಂಬರ್ 12 1824 ಕ್ಕೆ ಬೈಲಹೊಂಗಲದ ಕಾರಾಗ್ರಹಕ್ಕೆ ಸ್ಥಳಾಂತರಿಸುತ್ತಾರೆ. ಅಲ್ಲೇ ನಾಲ್ಕು ವರ್ಷಗಳ ಕಾಲ ಸೆರೆಯಾಳಾಗಿದ್ದ ಚೆನ್ನಮ್ಮಾಜಿಯು 1829 ಫೆಬ್ರವರಿ 2 ರಂದು ಅಲ್ಲಿಯೇ ಮರಣಹೊಂದುತ್ತಾಳೆ.
ಚೆನ್ನಮ್ಮಳ ಮರಣದ ಬಳಿಕವೂ ದೇಶನಿಷ್ಠರ ಹೋರಾಟ ಮುಂದುವರಿಯುತ್ತದೆ. ಯುದ್ದ ಖೈದಿಯಾಗಿದ್ದು ಬಿಡುಗಡೆಯಾದ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣನು ತಾನು ಚೆನ್ನಮ್ಮಳ ದತ್ತು ಪುತ್ರ ಶಿವಲಿಂಗಪ್ಪನ ಮುಂದಾಳತ್ವವನ್ನಿಟ್ಟುಕೊಂಡು ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾನೆ. ಆದರೆ 1830 ಫೆಬ್ರವರಿಯಲ್ಲಿ ನಮ್ಮವರೇ ಕೆಲ ವಿಶ್ವಾಸ ದ್ರೋಹಿಗಳು ರಾಯಣ್ಣನಿರುವ ಸ್ಥಳವನ್ನು ಕಂಪನಿ ಸರ್ಕಾರದವರಿಗೆ ತೋರಿಸಿ ಅವನನ್ನು ಸೆರೆಹಿಡಿಸುತ್ತಾರೆ. ಅದೇ 1830 ಮೇ ನಲ್ಲಿ ಕಿತ್ತೂರ ದೊರೆಯಾದ ಶಿವಲಿಂಗಪ್ಪ ಮತ್ತವನ ನಾಲ್ಕು ಸಾವಿರ ಬೆಂಬಲಿಗರು ತಾವು ಬ್ರಿಟೀಷರಿಗೆ ಸ್ವಯಂ ಶರಣಾಗುತ್ತಾರೆ.  ಇದಾದ ಬಳಿಕ ಜುಲೈ 1830 ಕ್ಕೆ ಚೆನ್ನಮ್ಮಳ ಪ್ರೀತಿಯ ಸೊಸೆ ವೀರಮ್ಮ ತಾನು ಸೆರೆಮನೆಯಲ್ಲಿಯೇ ಸಾವನ್ನಪ್ಪುತ್ತಾಳೆ.
ಸರಿಸುಮಾರು ಆರು ತಿಂಗಳುಗಳ ತರುವಾಯ 1831, ಜನವರಿ 26 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಲಾಗುತ್ತದೆ.
ಹೀಗೆ ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿದ ಕನ್ನಡ ನಾಡಿನ ಹೆಮ್ಮೆಯ ಮಹಿಳೆ ರಾಣಿ ಚೆನ್ನಮ್ಮಳ ಅಗಾಧ ದೇಶಪ್ರೇಮವು ಎಲ್ಲರಿಗೂ ಮಾದರಿಯಾಗುವಂತಹುದು. ಆಕೆಯ ಸ್ಮೃತಿ ದಿನವಾದ ಇಂದು ಕನ್ನಡಿಗರಾದ ನಾವೆಲ್ಲರೂ ಅವಳ ಹೋರಾಟವನ್ನು ನೆನೆಯುತ್ತಾ ಅವಳಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ದೇಶದುದ್ದಗಲದ ಎಲ್ಲಾ ವಿರರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ. ಆ ಮುಖೇನ ಅವರ ಆದರ್ಶತಮ ಬದುಕಿಗೆ ವಂದಿಸೋಣ.
ಜೈ ಹಿಂದ್....!