Wednesday, March 12, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 20

ತಲಕಾಡು(Thalakad)

ಹಿಂದೆ ಬಹುಕಾಲ ಕರ್ನಾಟಕದ ಹೆಮ್ಮೆಯ ರಾಜವಂಶ ಗಂಗರ ರಾಜಧಾನಿಯಾಗಿ ಮೆರೆದಿದ್ದ ತಲಕಾಡು ಇಂದು ಮೈಸೂರು ಜಿಲ್ಲೆಯಯಲ್ಲಿನ ಒಂದು ಚಿಕ್ಕ ಗ್ರಾಮ ಮಾತ್ರವೇ ಆದರೂ ಈ ಗ್ರಾಮ ಭಾರತದಲ್ಲಿ ಪುರಾತನವೂ, ಪುರಾಣೋಕ್ತವೂ, ಪವಿತ್ರವೂ ಆದ ಕ್ಷೇತ್ರವೆನಿಸಿದೆ.  ಸ್ಕಾಂದ ಪುರಾಣವು ತಲಕಾಡಿನ ಬಗ್ಗೆ ತನ್ನದೇ  ಕಥೆಯನ್ನು ಹೇಳುತ್ತದೆ ತಲಕಾಡು ಕ್ಷೇತ್ರದಲ್ಲಿ ಪಂಚಲಿಂಗ ಸ್ವರೂಪಿಯಾಗಿ ಈಶ್ವರನು ನೆಲಸಿದ್ದು. ಶ್ರೀ. ವೈದ್ಯನಾಥೇಶ್ವರ, ಶ್ರೀ. ಮರಳೇಶ್ವರ, ಶ್ರೀ. ಪಾತಾಳೇಶ್ವರ, ಶ್ರೀ ಅರ್ಕೇಶ್ವರ ಸ್ವಾಮಿ ಮತ್ತು  ಶ್ರೀ. ಮಲ್ಲಿಕಾರ್ಜುನಸ್ವಾಮಿ ಎಂಬ ಹೆಸರುಗಳಲ್ಲಿ ಪೂಜೆಗೊಳ್ಳುವನು. ತಲಕಾಡು ದಕ್ಷಿಣಕಾಶಿ ಎಂದು ಹೆಸರುವಾಸಿಯಾಗಿದೆ. 

ಇಲ್ಲಿನ ಪಂಚಲಿಂಗ ದರ್ಶನವು ಬಹಳ ಪ್ರಸಿದ್ದವಾಗಿದ್ದು ಯಾವ ವರ್ಷ ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳ್ ಬರುತ್ತವೆಯೋ ಆ ವರ್ಷಗಳಲ್ಲಿ ಇಲ್ಲಿ ವಿಶೇಷ ದರ್ಶನ ಜಾತ್ರಾದಿಗಳು ನಡೆಯುತ್ತವೆ.


ಭಾಗ- 1

ಹಿಂದೆ ವಸಿಷ್ಠ ಕುಲದ ಸೋಮದತ್ತನೆಂಬ ಬ್ರಾಹ್ಮಣನಿದ್ದನು. ಅವನು ಸಂಸಾರದಲ್ಲಿ ಜಿಗುಪ್ಸೆಹೊಂದಿ ವಾರಣಾಸಿಗೆ ಹೋಗಿ ವಿಶ್ವೇಶ್ವರನನ್ನು ಕುರಿತು ತಪಸ್ಸನ್ನಾಚರಿಸಿದನು. ಕಾಶಿ ವಿಶ್ವೇಶ್ವರನು ಅವನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನು. ತಮಗೆ ಮತ್ತು ತನ್ನ ಶಿಷ್ಯರಿಗೆ ಸಶರೀರ ಮುಕ್ತಿಯನ್ನು ಕರುಣಿಸಬೇಕೆಂದು ಸೋಮದತ್ತನು ಬೇಡಿಕೊಂಡನು. ಆದರೆ ಆ ಸ್ವಾಮಿಯು ಸೋಮದತ್ತನಿಗೆ ಅಲ್ಲಿ ಮುಕ್ತಿ ದೊರೆಯಲಾರದೆಂದೂ, ಆತನು ತನ್ನ ಶಿಷ್ಯರೊಡನೆ ದಕ್ಷಿಣಕ್ಕೆ ಪ್ರಯಾಣ ಮಾಡಿ ದಕ್ಷಿಣ ಗಂಗೆ ಎಂದು ಹೆಸರಾಗಿರುವ ಪವಿತ್ರ ಕಾವೇರಿಯ ತೀರದಲ್ಲಿನ ಗಜಾರಣ್ಯ ಕ್ಷೇತ್ರಕ್ಕೆ ಹೋಗಬೇಕೆಂದು ತಿಳಿಸುತ್ತ ಆ ಕ್ಷೇತ್ರ ಕಾವೇರಿ ಮತ್ತು ಕಪಿಲ ಸಂಗಮದಿಂದ ಕೆಲವೇ ಹರಿದಾರಿಗಳಲ್ಲಿ ಮುಂದೆ ಆ ಕ್ಷೇತ್ರದಲ್ಲಿ ನಾನು ವೈಧ್ಯೇಶ್ವರನೆಂದು ಕಾಣಿಸಿಕೊಳ್ಳುತ್ತೇನೆ. ಅಲ್ಲಿನ ಋಚೀಕ ಋಷಿಯ ಆಶ್ರಮದಲ್ಲಿದ್ದುಕೊಂಡು ನೀನು ತಪಸ್ಸನ್ನಾಚರಿಸು, ಕಾಶಿಗಿಂತಲೂ ಮಿಗಿಲಾದ ಮಹಿಮೆಯಿಂದ ಕೂಡಿದ ಆ ಸ್ಥಳದಲ್ಲಿ ನಿನಗೆ ಸಾಯುಜ್ಯ ಸುಲಭವಾಗಿ ಪ್ರಾಪ್ತವಾಗುತ್ತದೆ ಎಂದು ತಿಳಿಸಿದನು. ಸೋಮದತ್ತನು ವಿಶ್ವೇಶ್ವರನ ನುಡಿಯಂತೆ ತನ್ನ ಶಿಷ್ಯ ಪರಿವಾರದೊಡನೆ ದಕ್ಷಿಣ ದಿಕ್ಕಿಗೆ ಪ್ರಯಾಣವನ್ನು ಕೈಗೊಂಡನು. ಅವರು ವಿಂಧ್ಯ ಪರ್ವತದ ದಟ್ಟವಾದ ಕಾಡುಗಳನ್ನು ದಾಟುತ್ತಿದ್ದರು. ಆಗ ಇದ್ದಕಿದ್ದ ಹಾಗೆಯೇ ದೊಡ್ಡ ಆನೆಗಳ ಹಿಂಡೊಂದು ಅವರ ಮೇಲೆ ಎರಗಿ ಬಂತು. ಗಾಬರಿಗೊಂಡ ಸೋಮದತ್ತ ಮತ್ತು ಅವನ ಶಿಷ್ಯರು ಆನೆ ಆನೆ ಎಂದು ಕೂಗುತ್ತಲೇ ಆ ಮದ್ದಾನೆಗಳಿಗೆ ಬಲಿಯಾಗಿ ಪ್ರಾಣ ನೀಗಿದರು.

ಅವರು ಸಾಯವ ಸಂದರ್ಭದಲ್ಲಿ ಅನೆಯ ಸ್ವರೂಪವನ್ನೆ ಕಲ್ಪಿಸಿಕೊಂಡು ಹೆದರಿದ್ದರಿಂದ ಮುಂದೆ ಅವರಿಗೆ ಆನೆಯ ಜನ್ಮವೇ ಪ್ರಾಪ್ತವಾಯಿತು. ವಿಶ್ವೇಶ್ವರನು ತಿಳಿಸಿದ್ದ ಪವಿತ್ರ ಗಜಾರಣ್ಯ ಕ್ಷೇತ್ರದಲ್ಲಿ ಕಾವೇರಿಯ ತೀರದಲ್ಲಿ ಅವರು ಆನಯಾಗಿಯೇ ಹುಟ್ಟಿದರು. ಗಜಾರಣ್ಯ ಕ್ಷೇತ್ರದಲ್ಲಿ ಒಂದು ಸೊಂಪಾಗಿ ಬೆಳೆದ ಬೂರುಗದ ಮರ, ಆ ಮರದ ಬುಡದಲ್ಲಿ ದಟ್ಟವಾಗಿ ಕವಿದ ಪೊದೆಗಳು, ಆನೆಗಳು ಅಲ್ಲಿನ ಗೋಕರ್ಣ ಸರೋವರದಲ್ಲಿ ಮಿಂದು, ಸೊಂಡಿಲಲ್ಲಿ ನೀರನ್ನು ತುಂಬಿಕೊಂಡು ಕಮಲವನ್ನು ಕಚ್ಚಿ ಆ ಮರದ ಬುಡದ ಪೊದೆಯ ಕಡೆ ಬರುತ್ತಿದ್ದವು. ಬಂದು ಸೊಂಡಿಲ ನೀರನ್ನು ಚುಮುಕಿಸಿ ಆ ಪೊದೆಯ ಮೇಲೆ ಹೂವಿಟ್ಟು ನಮಿಸಿ ಹೋಗುತ್ತಿದ್ದವು. ಆ ದೃಶ್ಯವನ್ನು 'ತಲ' 'ಕಾಡ' ಎಂಬ ಇಬ್ಬರು ಬೇಡರು ನಿತ್ಯವೂ ನೋಡುತ್ತಿದ್ದರು. ಆಶ್ಚರ್ಯಗೊಂಡ ಅವರು ಅದೇನು ಎಂಬುದನ್ನು ಪರೀಕ್ಷಿಸಬೇಕೆಂದು ಎರಡು ಕೊಡಲಿಗಳನ್ನು ತೆಗೆದುಕೊಂಡು ಬಂದರು. ಪೊದೆಗಳನ್ನು ಕಡಿದರು. ಕಡಿಯುವಾಗ ಅವರ ಕೊಡಲಿ ಯಾವುದೋ ವಸ್ತುವಿಗೆ ತಾಕಿದಂತಾಯಿತು. ರಕ್ತ ಚಿಮ್ಮಿತು. ಅದೇನೆಂದು ನೋಡುವಲ್ಲಿ ಅದೊಂದು ಶಿವಲಿಂಗ. ಅದರ ನೆತ್ತಿಯಿಂದ ರಕ್ತ ಹರಿಯುತ್ತಿದೆ. ಇದನ್ನು ನೋಡಿದ ಅವರು ಹೆದರಿ ನಡುಗತೊಡಗಿದರು. ಆಗ ಅಶರೀರವಾಣಿಯೊಂದಾಯಿತು. “ಎಲೈ ಕಿರಾತಕರೆ, ನಿಮಗೆ ಒಳ್ಳೆಯದನ್ನು ಮಾಡುವುದಕ್ಕಾಗಿಯೇ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಈ ಬೂರುಗದ ಮರದ ಎಲೆಯನ್ನು ಹಣ್ಣನ್ನೂ ಅರೆದು ಗಾಯವಾದ ಜಾಗಕ್ಕೆ ಬಳಿಯಿರಿ, ಸುರಿಯುವ ರಕ್ತ ನಿಲ್ಲುತ್ತದೆ. ಅಷ್ಟೇ ಅಲ್ಲ, ರಕ್ತ ಹಾಲಾಗುತ್ತದೆ, ಆ ಹಾಲನ್ನು ನೀವು ಸೇವಿಸಿದರೆ ನಿಮಗೆ ಗಣಪದವಿ ದೊರೆಯುತ್ತದೆ” ದೇವವಾಣಿಗೆ ಬೇಡರು ತಲೆಬಾಗಿದರು. ಕೂಡಲೇ ಬೂರುಗದ ಮರದ ಎಲೆಯನ್ನು ಹಣ್ಣನ್ನು ತೇದು ಗಾಯಕ್ಕೆ ಹಚ್ಚಿದರು. ರಕ್ತ ಹರಿಯುವುದಕ್ಕೆ ಬದಲಾಗಿ ಹಾಲು ಹರಿಯಿತು. ಅದನ್ನು ಸೇವಿಸಿದ ಬೇಡರಿಗೆ ಗಣಪದವಿ ದೊರೆಯಿತು. ಆ ತಲ ಕಾಡ ಎನ್ನುವ ಬೇಡರಿಗೆ ಅಲ್ಲಿ ಮೊದಲ ಬಾರಿಗೆ ಮೋಕ್ಷ ಪ್ರಾಪ್ತವಾದ್ದರಿಂದ ಆ ಸ್ಥಳಕ್ಕೆ "ತಲಕಾಡು" ಎನ್ನುವ ಹೆಸರನ್ನು ಹೊತ್ತಿತ್ತು. ಅದೇ ಈಗಿನ ತಲಕಾಡು.

ಆನೆಯ ರೂಪಿನ ಸೋಮದತ್ತನೂ ಹಾಲನ್ನು ಸೇವಿಸಿ ಶರೀರವನ್ನು ಪಡೆದು ಸಶರೀರಿಯಾಗಿ ಮೋಕ್ಷವನ್ನು ಪಡೆದನು. ತನ್ನ ಗಾಯಕ್ಕೆ ತಾನೇ ವೈದ್ಯವನ್ನು ಸೂಚಿಸಿದವನಲ್ಲವೆ? ಆದುದರಿಂದಲೇ ವೈದ್ಯನಾಥ ಅಥವಾ ವೈಧ್ಯೇಶ್ವರನೆಂದು ಹೆಸರಾಯಿತು. ಮೊದಲಿಗೆ ಸಿದ್ಧಾರಣ್ಯ ಕ್ಷೇತ್ರವಾಗಿದ್ದ ಈ ನೆಲೆ ಅನೆಗಳು ಮೋಕ್ಷವನ್ನು ಪಡೆದ ಮೇಲೆ ಗಜಾರಣ್ಯಕ್ಷೇತ್ರವಾಯಿತು.



ಭಾಗ- 2

"ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲೀ, ಮೈಸೂರು ರಾಜರಿಗೆ ಮಕ್ಕಳಾಗದೆ ಹೋಗಲಿ" ಈ ಶಾಪವನ್ನು ಸುಮಾರು ನಾನೂರು ವರ್ಷಗಳ ಹಿಂದೆ ಆಗ ಮೈಸೂರು ಸೀಮೆಯ ರಾಜಧಾನಿ ಶ್ರೀರಂಗಪಟ್ಟಣ ವಿಜಯನಗರದ ಅರಸರಿಗೆ ಸೇರಿದ್ದು, ಶ್ರೀರಂಗ ರಾಯ ಎಂಬ ಪ್ರತಿನಿಧಿ ನೇಮಿತನಾಗಿದ್ದ. ಆತನ ಮಡದಿಯೇ ಅಲಮೇಲಮ್ಮನವರು ಇವರೇ ಮೈಸೂರು ದೊರೆಗಳಿಗೆ ಶಾಪವನ್ನು ಕೊಟ್ಟವರು.

ಶ್ರೀರಂಗರಾಯರಿಗೆ ಬೆನ್ನುಫಣಿ ರೋಗ ಉಂಟಾಯಿತು. ಅವರು ತಲಕಾಡಿಗೆ ಹೋಗಿ ಅಲ್ಲಿ ವೈದ್ಯೇಶ್ವರ ಸ್ವಾಮಿಯನ್ನು ಅರ್ಚಿಸಲು  ತಿರ್ಮಾನಿಸಿದ ಆಗಲೂ ಶ್ರೀರಂಗರಾಯರಿಗೆ ರೋಗ ನಿವಾರಣೆ ಆಗಲಿಲ್ಲ ನಂತರ ತಲಕಾಡಿನಲ್ಲಿಯೆ ಮರಣಹೊಂದಿದರು. ಅವರ ಮಡದಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿ ನದಿಯ ಆಚೆಗಿರುವ ಮಾಲಂಗಿ ಎನ್ನುವ ಗ್ರಾಮದಲ್ಲಿ ಹೋಗಿ ನೆಲಸಿದಳು. ಶ್ರೀರಂಗಪಟ್ಟಣ ಮೈಸೂರು ಮನೆತನಕ್ಕೆ ಸೇರಿದ ರಾಜ ಒಡೆಯರ ಕೈವಶವಾಯಿತು.

ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಮಂಗಳವಾರ, ಶ್ರುಕ್ರವಾರ, ಶ್ರೀರಂಗನಾಯಕಮ್ಮನವರಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಆ ಸಂಧರ್ಭದಲ್ಲಿ ಅಲಮೇಲಮ್ಮ ತಮ್ಮಲ್ಲಿದ್ದ ಮುತ್ತಿನ ಮೂಗುತಿ ಮತ್ತು ಇತರ ಅಮೂಲ್ಯವಾದ ಆಭರಣಗಳನ್ನು ದೇವರಿಗೆ ಅಲಂಕರಿಸಿ ಮತ್ತೆ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಳು. ಆಕೆ ಮಾಲಂಗಿಗೆ ಹೋಗಿ ನೆಲೆಸಿದ ಮೇಲೆ ದೇವಾಲಯದ ಅಧಿಕಾರಿ ಆಭರಣಗಳ ವಿಚಾರವನ್ನು ರಾಜ ಒಡೆಯರಿಗೆ ತಿಳಿಸಿದ. ಎಂದಿನಂತೆ ಆಭರಣಗಳನ್ನು ಕಳುಹಿಸಬೇಕೆಂದು ರಾಜ ಒಡೆಯರು ನಿರೂಪ ಕಳುಹಿಸಿದರು

ಆದರೆ ಅಲಮೇಲಮ್ಮ ಒಪ್ಪಲಿಲ್ಲ. ಕೊನೆಗೆ ರಾಜ ಒಡೆಯರು ಕೊಡದೆ ಹೋದಲ್ಲಿ ಬಲವಂತವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿಬಿಟ್ಟರು. ಅಲಮೇಲಮ್ಮನಗೆ ತುಂಬ ಸಂಕಟವಾಯಿತು. ಶ್ರೀರಂಗಪಟ್ಟಣಕ್ಕೆ ಮೂಗುತಿಯೊಂದನ್ನು ಕಳುಹಿಸಿ ಉಳಿದ ಒಡವೆಗಳನ್ನು ತನ್ನ ಮಡಿಲಲ್ಲಿ ಕಟ್ಟಿಕೊಂಡು ಅವಳು ಮಾಲಂಗಿಯಲ್ಲಿ ಕಾವೇರಿನದಿಗೆ ಬಿದ್ದಳು. ಬೀಳುವಾಗ ಮೇಲಿನಂತೆ ಶಾಪ ಹಾಕಿದಳು.


ರಾಜ ಒಡೆಯರಿಗೆ ಈ ವಿಚಾರವನ್ನು ಕೇಳಿ ತುಂಬಾ ವ್ಯಥೆಯಾಯಿತು. ದೇವರಕಾರ್ಯಕ್ಕಾಗಿ ಒಡವೆಗಳಿಗೆ ಹೇಳಿ ಕಳುಹಿಸಿದರೆ ಹೀಗೆ  ದುಡುಕುವುದೇ, ಅಲಮೇಲಮ್ಮನವರು ಮಾಡಿದ ಅ ಕೃತ್ಯಕ್ಕೆ ಬಹಳ ನೊಂದು ಚಿಂತಾಕ್ರಾಂತರಾಗಿರಲು, ಆ ರಾತ್ರಿ ಅಲಮೇಲಮ್ಮನವರು ರಾಜ ಒಡೆಯರ ಸ್ವಪ್ನದಲ್ಲಿ ಪ್ರತಿಬಿಂಬ ರೂಪದಲ್ಲಿ ಕಾಣಿಸಿಕೊಂಡರು. ಕೂಡಲೇ ದೊರೆಗಳು ಪತ್ನಿ ಮುಂತಾದವರೊಡನೆ ಪ್ರತಿ ಬಂಧದ ಭಾದೆಯ ಪರಿಹಾರಕ್ಕಾಗಿ, ಅಲಮೇಲಮ್ಮನವರ ರೂಪದ ಚಿನ್ನದ ಪ್ರತಿಮೆಯನ್ನು ಮಾಡಿಸಿ ನಿತ್ಯ ಪೂಜಾಕಟ್ಟಳೆಯನ್ನು ಮಾಡಿಸಿದ್ದಲ್ಲದೆ, ಪ್ರತಿವರ್ಷ ನವರಾತ್ರಿಯ ಮಹಾನವಮಿ ದಿವಸ ಅಲಮೇಲಮ್ಮನವರ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸುತ್ತಾರೆ ಎಂಬ ಇತಿಹಾಸದ ಕಥೆ ಇದೆ.

Friday, March 07, 2014

ವೃಕ್ಷ ಮಹಿಳೆ

ಮಾರ್ಚ್ 8 `ಅಂತರಾಷ್ಟ್ರೀಯ ಮಹಿಳಾ ದಿನ’. ಇಂದು ಮಹಿಳೆ ತಾನು ಪುರುಷನಿಗೆ ಸರಿಸಮನಾಗಿ ಕಛೇರಿ ಕೆಲಸದಿಂದ ತೊಡಗಿ, ಬಾಹ್ಯಾಕಾಶ ಯಾನದವರೆವಿಗಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಅಂತಹವರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ನವರ ಸಾಧನೆಯೂ ಸ್ತುತ್ಯಾರ್ಹವಾದುದು. ಬಡತನದ  ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅದು. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ  ಮಹಿಳೆಗೆ ಇದೀಗ ನೂರರ ವಸಂತ.

ನನ್ನೆಲ್ಲಾ ಆತ್ಮೀಯ ಗೆಳೆಯರಿಗೂ ನನ್ನ ನಮಸ್ಕಾರಗಳು.
ಕೆಲ ವರ್ಷಗಳ ಹಿಂದೊಮ್ಮೆ ದಾವಣಗೆರೆ ಲೋಕಸಭಾ ಸದಸ್ಯರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ತಾವು ಕಾರ್ಯಕ್ರಮವೊಂದರ ನಿಮಿತ್ತ ಕನಕಪುರದತ್ತ ಹೊರಟಿರುತ್ತಾರೆ. ಅದಾಗ ಮಾರ್ಗ ಮದ್ಯದಲ್ಲಿ ವಾಹನವನ್ನು ನಿಲ್ಲಿಸಿ ತಾವು ದೇಹಬಾಧೆಯನ್ನು ಕಳೆಯಲೋಸುಗ ಮರಗಳ ಮರೆಗೆ ಸಾಗುತ್ತಾರೆ. ಅಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಕಂಡು ಅಚ್ಚರಿಗೊಂಡ ಶಿವಶಂಕರಪ್ಪನವರು ಅಲ್ಲಿನ ದಾರಿಹೋಕರನ್ನು “ಈ ಮರಗಳಾನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರು ಬೆಳೆಸಿದ್ದಾರೆ?” ಎಂದು ಪ್ರಶ್ನಿಸುತ್ತಾರೆ. ಆಗ ಆ ದಾರಿಹೋಕನು ಹೇಳಿದ ಉತ್ತರ ಕೇಳಿ ಶಿವಶಂಕರಪ್ಪನವರಿಗೆ ಆಶ್ಚರ್ಯದೊಂದಿಗೆ ಮನಸ್ಸು ತುಂಬಿ ಬರುತ್ತದೆ.
ಇಷ್ಟಕ್ಕೂ ಆ ದಾರಿಹೋಕನು “ಈ ಮರಗಳನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರೋ, ತಾಲೂಕು ಪಂಚಾಯ್ತಿಯವ್ರೋ ಬೆಳೆಸಿದ್ದಲ್ರೀ... ಇದನ್ನ ಬೆಳೆಸಿದ್ದು ಬಡತನದಲ್ಲೇ ಬಾಳಿ ಬದುಕುತ್ತಿರೋ ಚಿಕ್ಕಯ್ಯ ಮತ್ತು ತಿಮ್ಮಕ್ಕ ಎಂಬೋ ದಂಪತಿಗಳು” ಎಂದು ಉತ್ತರಿಸುತ್ತಾನೆ. ಸುಮಾರು 4 ಕಿಲೋಮೀಟರ್ ದೂರದವರೆಗೆ ಒಟ್ಟು 284 ಆಲದ ಮರಗಳನ್ನು ಬೆಳೆಸಿದವರು ಆ ಬಡ ದಂಪತಿಗಳು ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಶಿವಶಂಕರಪ್ಪನವರು ತಾವೇ ಖುದ್ದಾಗಿ ಆ ದಂಪತಿಗಳನ್ನು ಭೇಟಿ ಮಾಡಲು ಹೊರಡುತ್ತಾರೆ. ಹಾಗೆ ಭೇಟಿ ಮಾಡಿ ಕುಶಲೋಪರಿಗಳನ್ನು ವಿಚಾರಿಸಿದ ಬಳಿಕ ಶಿವಶಂಕರಪ್ಪನವರು “ತಮಗೆ ಮಕ್ಕಳೆಷ್ಟು?” ಎಂದು ಕೇಳಿದಾಗ ತಿಮ್ಮಕ್ಕ “ನಮ್ಗೆ ಮಕ್ಳೇ ಬೇಡ ಸ್ವಾಮೀ... ಈ ಮರ್ಗೋಳೇ ನಮ್ ಮಕ್ಳು..” ಎನ್ನುತ್ತಾರೆ.

ಸಾಲು ಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ
ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ ಮಹಿಳೆಗೆ ಇದೀಗ ನೂರರ ವಸಂತ.
ತಿಮ್ಮಕ್ಕ ತಾವು ಅಕ್ಷರದ ಮುಖ ನೋಡಿದವರಲ್ಲ, ತಮ್ಮ ಕಾಯಕದ ಮೂಲಕವೇ ತತ್ವಾದರ್ಶಗಳಾನ್ನು ರೂಢಿಸಿಕೊಂಡು ಅಕ್ಷರಸ್ಥರ ಸರಿಸಮವೆಂಬಂತೆ ಆದರ್ಶ ಮಹಿಳೆಯಾಗಿ ಬೆಳೆದ ಮಹಾನ್ ಚೇತನ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಹುಳಿಕಲ್ಲು ಗ್ರಾಮದವರಾದ ತಿಮ್ಮಕ್ಕ ಹುಟ್ಟುತ್ತಲೇ ಬದತನವನ್ನು ಹಾಸಿ ಹೊದ್ದು ಬಂದವರು. ಯಾವುದೇ ಬಗೆಯ ಔಪಚಾರಿಕ ಶಿಕ್ಶಣವನ್ನು ಪಡೆಯದ ಈಕೆ ತಾವು ಕಲ್ಲು ಗಣಿಯೊಂದರಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು.
ತಮ್ಮದೇ ಊರಿನಲ್ಲಿ ದನಗಳನ್ನು ಕಾಯುತ್ತಿದ್ದ ಚಿಕ್ಕಯ್ಯ ಎಂಬುವವನೊಡನೆ ವಿವಾಹವಾದ ತಿಮ್ಮಕ್ಕನವರಿಗೆ ದುರಾದೃಷ್ಟವಶಾತ್ ಮಕ್ಕಳಾಗಲಿಲ್ಲ. ಆದರೆ ಎಲ್ಲರಂತೆಯೇ ಅದನ್ನೊಂದು ಕೊರಗು ಎಂದುಕೊಂಡು ತಿಮ್ಮಕ್ಕನವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬದಲಾಗಿ ಆಲದ ಸಸಿಗಳನ್ನು ಸಾಲು ಸಾಲಾಗಿ ನೆಡಲು ಮೊದಲು ಮಾಡಿದರು. ಮೊದಲ ವರ್ಷದಲ್ಲಿ ಕುದೂರು ಬಳಿಯ ಹೆದ್ದಾರಿಯ 4 ಕಿಲೋಮೀಟರ್ ಅಂತರದಲ್ಲಿ 10 ಸಸಿಗಳನ್ನು ನೆಟ್ಟಂತಹಾ ತಿಮ್ಮಕ್ಕ ಎರಡನೇ ವರ್ಷ 15, ಮೂರನೇ ವರ್ಷ 20, ಹೀಗೆ ಸಸಿಗಳನ್ನು ನೆಡುತ್ತಾ ಹೋದರು. ತಿಮ್ಮಕ್ಕ ನವರ ಪತಿ ಚಿಕ್ಕಯ್ಯ ರವರೂ ತಮ್ಮ ಪತ್ನಿಯ ಕಾಯಕದಲ್ಲಿ ಕೈ ಜೋಡಿಸಿದರು. ಸಸಿಗಳಿಗೆ ನೀರುಣಿಸುವುದಲ್ಲದೆ, ಸಸಿಗಳನ್ನು ಜಾನುವಾರುಗಳಿಂದ ರಕ್ಷಿಸುವ ಸಲುವಾಗಿ ಅವುಗಳ ಸುತ್ತ ಮುಳ್ಳಿನ ಪೊದೆಗಳಾನ್ನು ಹೊದ್ದಿಸಿ ಕಾಪಾಡಿದರು. ಸಸಿಗಳ ಬೆಳವಣಿಗೆಗೆ ನೀರಿನ ಅವಶ್ಯಕತೆಯಿದ್ದ ಕಾರಣದಿಂದ ಮಳೆಗಾಲದ ಸಮಯದಲ್ಲಿಯೇ ಸಸಿಗಳನ್ನು ನೆಡುತ್ತಿದ್ದರು, ಆ ಸಸಿಗಳು ಮುಂದಿನ ಮಳೆಗಾಲದ ಸಮಯದಲ್ಲಿ ಆ ಎಲ್ಲಾ ಸಸಿಗಳು ಚೆನ್ನಾಗಿ ಬೆಳೆದು ನೆಲದಲ್ಲಿ ಆಳವಾಗಿ ಬೇರು ಬಿಟ್ಟಿರುತ್ತಿದ್ದವು. ಬೇಸಿಗೆಯ ಸಮಯದಲ್ಲಿ ಸಸಿಗಳಿಗೆ ನೀರಿನ ಕೊರತೆಯಾಗಲು ಕೆಲವೊಮ್ಮೆ ತಿಮ್ಮಕ್ಕ ದಂಪತಿಗಳು ನಾಲ್ಕು ಕಿಲೋಮೀಟರ್ ದೂರದಿಂದ ಕೊಳಗಗಳಲ್ಲಿ ನೀರನ್ನು ತಂದು ಸಸಿಗಳಿಗೆ ನೀರುಣಿಸುತ್ತಿದ್ದರು.
ಹೀಗೆ ತಿಮ್ಮಕ್ಕ ದಂಪತಿಗಳು ತಾವು ಮಕ್ಕಳಿಲ್ಲದ ಕೊರಗನ್ನು ನೀಗಲು ಅನುಸರಿಸಿದ ದಾರಿಯಿಂದಾಗಿ ಇಂದು 4 ಕಿಲೋಮೀಟರ್ ಅಂತರದಲ್ಲಿ ಒಟ್ಟು 284 ಸಾಲು ಮರಗಳು(ಇದೀಗ ಈ ಮರಗಳ ನಿರ್ವಹಣೆಯನ್ನು ರಾಜ್ಯ ಸರಕಾರ ವಹಿಸಿಕೊಂಡಿದೆ.) ಬೆಳೆದು ನಿಂತು ಆ ಮಾರ್ಗವಾಗಿ ಸಾಗುವ ಪ್ರಯಾಣಿಕರಿಗೆ ನೆಮ್ಮದಿಯ ನೆರಳು ನೀಡುತ್ತಿವೆ. ಕೇವಲ ಆತ್ಮ ಸಂತೋಷಕ್ಕಾಗಿ ಮರಗಳನ್ನು ಬೆಳೆಸುವ ಕಾಯಕಕ್ಕಿಳಿದ ತಿಮ್ಮಕ್ಕ ತಾವು ಎಂದಿಗೂ ಪ್ರಚಾರ ಬಯಸಿದವರಲ್ಲ. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಹಂಬಲಿಸಿದವರಲ್ಲ. ಆದರೆ ತಿಮ್ಮಕ್ಕನವರ ನಿಸ್ವಾರ್ಥ ಸೇವೆ, ಅದು ತನ್ನಿಂದ ತಾನು ಜನರ ಮದ್ಯೆ ಪಸರಿಸಿ ಅವರನ್ನು ಜನಪ್ರಿಯಗೊಳಿಸಿತು. ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅರಸಿ ಬಂದವು. ತಿಮ್ಮಕ್ಕ ಬೀಗಲಿಲ್ಲ, ತಾವು ಮಾಡುವ ಕೆಲಸವನ್ನು ನಿಲ್ಲಿಸಲಿಲ್ಲ. ಮರಗಳೆಂಬ ಮಕ್ಕಳನ್ನು ನಿರಂತರವಾಗಿ ಬೆಳೆಸುತ್ತಲೇ ಹೋದರು, ಅಕ್ಕರೆಯಿಂದ, ಪ್ರೀತಿಯಿಂದ, ತಾಯಿಯಂತೆ ಪ್ರತಿಯೊಂದು ಸಸಿಗಳನ್ನು ಜೋಪಾನ ಮಾಡುತ್ತಾ ಅದರಿಂದಲೇ ಆತ್ಮ ಸಂತೃಪ್ತಿಯನ್ನು ಕಂಡುಕೊಂದರು. ನೂರಾರು ಜನರಿಗೆ ಸ್ಪೂರ್ತಿಯ ಚಿಲುಮೆಯಾದರು, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಎಂದು ಖ್ಯಾತರಾದರು.
ತಿಮ್ಮಕ್ಕ ನವರ ಮರಗಳ ಪೋಷಣೆ ಕಾರ್ಯವನ್ನು ಗಮನಿಸಿ ರಾಶ್ಟ್ರೀಯ, ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ವೀರ ಚಕ್ರ ಪ್ರಶಸ್ತಿ, ಕರ್ನಾಟಕ ಸರಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ. ಹಂಪಿ ವಿಶ್ವವಿದ್ಯಾನಿಲಯದಿಂದ “ನಾಡೋಜ” ಗೌರವ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಸಹ ಭಾಜನರಾಗಿದ್ದಾರೆ.  ಹೀಗೆ ತಿಮ್ಮಕ್ಕ ನವರು ಹತ್ತಾರು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದ್ದಾರೆ
ತಮ್ಮ ಕೆಲಸಗಳಿಂದಾಗಿ ಅಂತರಾಷ್ಟ್ರೀಯವಾಗಿಯೂ ಗುರುತಿಸಿಕೊಂಡಿರುವ ತಿಮ್ಮಕ್ಕನವರಿಗೆ ಅನೇಕ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂದಿವೆ, ಸಾಲುಮರದ ತಿಮ್ಮಕ್ಕ ತನ್ನ ನಿಸ್ವಾರ್ಥ ಕರ್ಮದ ಮೂಲಕ ಜನಜನಿತರಾಗಿದ್ದಾರೆ. ಅಷ್ಟೇ ಅಲ್ಲ. ಪರಿಸರ ರಕ್ಷಣೆಯ ಕಾಯಕದ ಜತೆ ಜತೆಗೆ ಸಮಾಜ ಸೇವಾ ಕೈಂಕರ್ಯವನ್ನು ತಿಮ್ಮಕ್ಕ ನಡೆಸಿಕೊಂಡು ಬರುತ್ತಿದ್ದಾರೆ. 1991ರಲ್ಲಿ ತಮ್ಮ ಪತಿ ತೀರಿ ಹೋದ ಬಳಿಕ ತಿಮ್ಮಕ್ಕ ಬದುಕು ಸಮಾಜ ಕಾಯಕಕ್ಕೆ ಮೀಸಲಾಗಿದೆ. ತಮಗೆ ಯಾರಾದರೂ ಹಣ ಸಹಾಯ ಮಾಡಿದರೆ ಅದನ್ನು ಸಮಾಜದ ಕೆಲಸಕ್ಕೆ ಉಪಯೋಗಿಸುವತಿಮ್ಮಕ್ಕನವರ ನಿಸ್ಪೃಹ ಸೇವೆಯನ್ನು ಯಾರೇ ಆದರೂ ಮೆಚ್ಚದಿರಲು ಸಾಧ್ಯವೆ? ಸಹಾರ ವಿಮಾನ ಸಂಸ್ಥೆಯು ವೃಕ್ಷಮಾತೆಗೆ ನಗದು ಸಹಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೇಂದ್ರ ಸರಕಾರವು ರಾಷ್ಟ್ರೀಯ ನಾಗರಿಕ ಪ್ರಶಸ್ತಿ ನೀಡಿದೆ. ಆದರೆ ತಿಮ್ಮಕ್ಕನವರು ಈ ಹಣವನ್ನು ತಮ್ಮ ಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಹೆರಿಗೆ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ನೀಡಿದ್ದಾರೆ. ತಾವೊಬ್ಬ ಅನ್ಕ್ಷರಸ್ಥೆಯಾಗಿದ್ದು ಸಮಾಜದ ಒಳಿತಿಗಾಗಿ ಸತತ ಸುಡಿಯುವ ತಿಮ್ಮಕ್ಕ ನವರ ಸಂಸ್ಕಾರವಂತ ಜೀವನ ಇಂದಿನ ವಿದ್ಯಾವಂತರಿಗೆಲ್ಲರಿಗೂ ಮಾದರಿಯಾಗಬಲ್ಲುದು.ತನಗೆ ಎಷ್ಟು ಬೇಕೋ ಅಷ್ಟನ್ನು ಪಡೆದುಕೊಂಡು ಉಳಿದುದನ್ನು ಸಮಾಜಕ್ಕೆ ಉಪಯೋಗಿಸುವ ತಿಮ್ಮಕ್ಕನವರ ಬದುಕು ಅರ್ಥಪೂರ್ಣವಾದುದು. ಇವರ ಬದುಕು, ಕಾಯಕ, ವಿಚಾರಧಾರೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ.
ಇಂತಹಾ ವೃಕ್ಷ ಮಹಿಳೆಗೆ ಅಂತರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ನಮ್ಮದೊಂದು ಸಲಾಮ್ ಇರಲಿ....
ನಮಸ್ಕಾರ

Monday, March 03, 2014

‘ಗುಹೆ’ ತೊರೆದ ‘ಸಿಂಹ’

‘ಸಿಂಹ’ ‘ಗುಹೆ’ಯನ್ನು ತೊರೆದು ಅನಂತದತ್ತ ಮುಖಮಾಡಿ ನಡೆದಿದೆ.
ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ, ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರ್ವರಿ 28 ರಂದು ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಎನ್ನುವುದು ವಿಧಿ ವಿಪರ್ಯಾಸ.


‘ಸಿಂಹ’ ‘ಗುಹೆ’ಯನ್ನು ತೊರೆದು ಅನಂತದತ್ತ ಮುಖಮಾಡಿ ನಡೆದಿದೆ.

ಹೌದು ಸ್ನೇಹಿತರೆ, ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ, ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರ್ವರಿ 28 ರಂದು ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಎನ್ನುವುದು ವಿಧಿ ವಿಪರ್ಯಾಸ.
 
ಸಿ.ಆರ್. ಸಿಂಹ(16-06-1942 - 28-02-2014)
ಚಿಕ್ಕಂದಿನಿಂದಲೂ ರಂಗಭೂಮಿಯೊಂದಿಗೆ ನಂಟನ್ನು ಹೊಂದಿದ್ದ ಸಿ.ಆರ್. ಸಿಂಹರವರು ತಾವೇ ರಚಿಸಿದ ‘ನಟಾರಂಗ’ ಎನ್ನುವ ನಾಟಕ ತಂಡದ ಮೂಲಕ ‘ತುಘಲಕ್’, ‘ಸಂಕ್ರಾಂತಿ’, ಮೊದಲಾದ ನಾಟಕಗಳಾನ್ನು ರಂಗದ ಮೇಲೆ ತಂದು ಜನಪ್ರಿಯಗೊಳಿಸಿದ್ದರು. ಅದರಲ್ಲಿಯೂ ‘ತುಘಲಕ್’ ನಾಟಕದ ತುಘಲಕ್ ಪಾತ್ರವನ್ನು ತಾವೇ ನಟಿಸಿದ್ದ ಆ ಪಾತ್ರವೇ ಅವರಿಗೆ ಸಾಕಷ್ಟು ಜನಮನ್ನಣೆ ಗಳಿಸಿಕೊಟ್ಟಿತ್ತು. ಆ ಕಾಲದಲ್ಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ತುಘಲಕ್’ ಬರೋಬ್ಬರಿ 200 ಪ್ರದರ್ಶನಗಳನ್ನು ಕಂಡಿತ್ತು! ಗಿರೀಶ್ ಕಾರ್ನಾಡರ ಇನ್ನೊಂದು ಪ್ರಸಿದ್ದ ನಾಟಕ ’ತಲೆದಂಡ’ ದಲ್ಲಿನ ಬಿಜ್ಜಳನ ಪಾತ್ರದಲ್ಲಿಯೂ ಮಿಂಚಿದ್ದ ಸಿಂಹರವರಿಗೆ ತಾವು ನಟಿಸಿದ ಪಾತ್ರದೊಳಗೆ ಪ್ರವೇಶಿಸಿ ಅದನ್ನು ತನ್ನದಾಗಿಸಿಕೊಳ್ಳುವ ಕಎಲೆಯು ಸಿದ್ದಿಸಿತ್ತು. ಇವರ ನಿರ್ದೇಶನದಲ್ಲಿ ಮೂಡಿಬಂದ ಏಕವ್ಯಕ್ತಿ ನಾಟಕ ‘ಟಿಪಿಕಲ್ ಕೈಲಾಸಮ್’ ಕೈಲಾಸಂ ಬಗೆಗಿನ ಸಿಂಹರವರ ಅಭಿಮಾನಕ್ಕೊಂದು ಸಾಕ್ಷಿಯಾದರೆ ‘ ರಸಋಷಿ ಕುವೆಂಪು’ ಸಿಂಹರಿಗೆ ರಸಋಷಿಯ ಮೇಲಿದ್ದ ಪ್ರೀತಿಯನ್ನು ತೋರುವಂತಹುದು.

ತಮ್ಮ ಜೀವನವನ್ನೆಲ್ಲಾ ನಾಟಕ, ರಂಗಭೂಮಿ, ಚಿತ್ರರಂಗಕ್ಕಾಗಿಯೆಂದೇ ಮೀಸಲಿಟ್ಟಿದ್ದ ಸಿಂಹ ತಾವು ಬಹಳ ಸ್ನೇಹಪರರೂ, ಸರಳಜೀವಿಯೂ ಆಗಿದ್ದವರು. ಗೆಳೆತನಕ್ಕಾಗಿ ಯಾವತ್ತು ಹಂಬಲಿಸುತ್ತಿದ್ದ ಸಿಂಹ ತಮ್ಮ ಮನೆಗೆ ಯಾರು ಯಾವಾಗ ಬಂದರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಸಂಜೆ ಸಮಯದಲ್ಲಿ ತಾವು ಗೆಳೆಯರೊಡನೆ ಕಾಂಗ್ರೆಸ್ ಕಡಲೆ ಬೀಜಗಳನ್ನು ಮೆಲ್ಲುತ್ತಾ ತಾವು ಕಂಡ, ಕೇಳಿದ ಹಿರಿಯ ಸಾಹಿತಿಗಳ, ನಟರ ಜೀವದಲ್ಲಿನ ಸ್ವಾರಸ್ಯಕರ ಸನ್ನಿವೇಶಗಳನ್ನು ವಿವರಿಸುತ್ತಿದ್ದರೆ ಎದುರಿದ್ದವರಲ್ಲಿ ತಾವೂ ಆ ಕಾಲಕ್ಕೆ ಸರಿದಂತೆ ಭಾಸವಾಗುತ್ತಿತ್ತು. ಒಮ್ಮೊಮ್ಮೆ ತಾವು ಮಹತ್ತರವಾದ ಕನಸು, ಕಲ್ಪನೆಗಳೊಂದರ ಭಾಗವೇನೋ ಎನ್ನುವ ರೀತಿಯಲ್ಲಿ ಎದುರಿನಲ್ಲಿದ್ದವರ ಮುಂದೆ ಅಗಾಧವಾದ ಕನಸೊಂದನ್ನು ಹಾಸಿ ಬಿಡುತ್ತಿದ್ದರು.ಸಿಂಹ ಇದ್ದ ಕಡೆ ನಗುವಿಗೆ ಎಂದೂ ಕೊರತೆ ಇರುತ್ತಿರಲಿಲ್ಲ. ಅವರ ಮಾತುಗಳಲ್ಲಿ ಹಾಸ್ಯೋಕ್ತಿಗಳದ್ದೇ ಪಾರುಪತ್ಯವಿರುತ್ತಿತ್ತು. ಉತ್ತಮ ಮಾತುಗಾರರಾಗಿದ್ದ ಸಿಂಹ ರವರ ಜತೆಗೆ ಮಾತನಾಡುವ ವ್ಯಕ್ತಿ ಅದು ಯಾರೇ ಆಗಿದ್ದರೂ ಅವರ ಮಾತಿನ ಮೋಡಿಗೆ ಮರುಳಾಗುತ್ತಿದ್ದರು, ನಗೆಗಡಲಿನಲ್ಲಿ ತಾಲುತ್ತಿದ್ದರು.

ಸಿ.ಆರ್. ಸಿಂಹ ಹೆಸರಿಗಷ್ಟೇ ‘ಸಿಂಹ’ ಆಗಿದ್ದವರು. ನೋಡಲು ದೊಡ್ಡ ಆಕಾರ, ದೊಡ್ಡ ದನಿ ಎಲ್ಲವೂ ಇದ್ದ ಸಿಂಹ ಮಾತಿನಲ್ಲಿಯೂ, ಮನಸ್ಸಿನಲ್ಲಿಯೂ ಅತ್ಯಂತ ಮೃದು ಸ್ವಭಾವದವರು. ಇದೇ ಕಾರಣಕ್ಕೆ ಸಿಂಹ ರವರನ್ನು ಹತ್ತಿರದಿಂದ ಬಲ್ಲವರೆಲ್ಲಾ ಹೆಳುತ್ತಿದ್ದದ್ದು “ಸಿಂಹ ದೈಹಿಕವಾಗಿ ಮಾತ್ರ ಸಿಂಹ, ಮನಸ್ಸು ಪುಣ್ಯಕೋಟಿಯದು” ಎಂದು.

ಚೆನ್ನಪಟ್ಟಣ ರಾಮಸ್ವಾಮಿಶಾಸ್ತ್ರಿ ಸಿಂಹ ಹುಟ್ಟಿದ್ದು 1942 ಜೂನ್ 16 ರಂದು, ತಾತನವರು ಕಟ್ಟಿದ್ದ ಮನೆಯಲ್ಲಿ  ಚೆನ್ನಪಟ್ಟಣದಲ್ಲಿದ್ದ ಅವರ ತಾತನವರರಾದ  ಸಿ.ಕೆ. ವೆಂಕಟರಾಮಯ್ಯನವರೂ ಸಹ ಖ್ಯಾತನಾಮ ಸಾಹಿತಿಗಳಾಗಿದ್ದರು, ಮೈಸೂರು ಒಡೆಯರಿಂದ ‘ರಾಜಸೇವಾಸಕ್ತ’ ಬಿರುದಿಗೆ ಭಾಜನರಾದವರು,  ಅಷ್ಟೇ ಅಲ್ಲದೆ ಭಾರತ ಸರ್ಕಾರದ ಅತ್ಯುನ್ನತ ಗೌರವ ಪ್ರಶಸ್ತಿಗಳಲ್ಲೊಂದಾದ ‘ಪದ್ಮಶ್ರೀ’ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಇಷ್ಟಾಗಿ ಸಿ.ಆರ್. ಸಿಂಹರವರ ತಂದೆ ರಾಮಸ್ಸ್ವಾಮಿ ಶಾಸ್ತ್ರಿಗಳು ಸಹ ಪ್ರಸಿದ್ದ ವಕೀಲರಾಗಿದ್ದವರು. ತಾತನವರು ಚನ್ನಪಟ್ಟಣ ಕೋಟೆಯೊಳಗೆ ಕಟ್ಟಿಸಿದ್ದ ಮನೆಯಲ್ಲಿಯೇ ಸಿಂಹ ಹಾಗೂ ಅವರ ಸಹೋದರ ನಟ ಶ್ರೀನಾಥ್ ರವರ ಜನನವಾದದ್ದು. ಸಿಂಹರಿಗೆ ಆರೇಳು ವರ್ಷಗಳಿದ್ದಾಗ ಅವರ ಕುಟುಂಬವು ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಅಲ್ಲಿಂದ ಮುಂದೆ ಸಿಂಹರವರ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲೇ ಮುಂದುವರಿಯಿತು.

ಈ ಮೊದಲೇ ಹೇಳಿದಂತೆ  ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿಯ ಕಡೆ ಒಲವನ್ನು ಹೊಂದಿದ್ದ ಸಿಂಹ ತಮ್ಮ ಹನ್ನೆರಡನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. ನ್ಯಾಷನಲ್ ಕಾಲೇಜು ವಿದ್ಯಾರ್ಥಿಯಾಗಿಯೂ, ಹಳೆ ವಿದ್ಯಾರ್ಥಿಯಾಗಿಯೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಮುಂದೆ ತಮ್ಮ ಮೂವತ್ತನೇ ವಯಸ್ಸಿಗೆ ತಮ್ಮದೇ ಸಮಾನ ವಯಸ್ಕರು, ಸಮಾನ ಮನಸ್ಕರನ್ನು ಕೂಡಿಕೊಂಡು ‘ನಟರಂಗ’ ಎನ್ನುವ ಹೆಸರಿನಲ್ಲಿ ರಂಗಸಂಸ್ಥೆಯೊಂದನ್ನು ಸ್ಥಾಪಿಸಿದರು. ಆ ಮುಂದೆ ‘ಕಾಕನ ಕೋಟೆ’, ‘ಸಂಕ್ರಾಂತಿ’, ‘ತುಘಲಕ್’, ‘ತಲೆದಂಡ’, ‘ಸೂರ್ಯ ಶಿಕಾರಿ’ ಇದೇ ಮೊದಲಾದ ನಾಟಕಗಳನ್ನು ರಂಗದ ಮೇಲೆ ತಂದುದಲ್ಲದೆ, ನಟ, ನಿರ್ದೇಶಕರಾಗಿ ಸಾಕಷ್ಟು ಹೆಸರು, ಕೀರ್ತಿಯನ್ನು ಸಂಪಾದಿಸಿದರು. 1983 ರಲ್ಲಿ ‘ವೇದಿಕೆ’ ಹೆಸರಿನ ಇನ್ನೊಂದು ತಂಡವನ್ನು ರಚಿಸಿದ ಸಿ.ಆರ್. ಸಿಂಹ ಏಕವ್ಯಕ್ತಿ ಪ್ರದರ್ಶಾನವಾಗಿ ಕನ್ನಡದ ಇನ್ನೊಬ್ಬ ಖ್ಯಾತ ನಾಟಕ ಸಾಹಿತಿ ಟಿ.ಪಿ ಕೈಲಾಸಂ ರವರ ಜೀವನವನ್ನು ಆಧರಿಸಿದ ‘ಟಿಪಿಕಲ್ ಕೈಲಾಸಂ’ ನಾಟಕವನ್ನು ರಚಿಸಿ ರಂಗ ಪ್ರಯೋಗವನ್ನು ನಡೆಸಿದ್ದಲ್ಲದೆ ಆ ನಾಟಕವನ್ನು ಅಮೇರಿಕಾ, ಕೆನಡಾ ದಂತಹಾ ವಿದೇಶದ ನೆಲದಲ್ಲಿಯೂ ಜನಪ್ರಿಯಗೊಳಿಸಿದರು. ‘ಕರ್ಣ’, ‘ಭೈರವಿ’, ‘ಅಗ್ನಿ ಮತ್ತು ಮಳೆ’ ಇದೇ ಮೊದಲಾದ ಅನೇಕ ನೂತನ ಸ್ವರೂಪದ ನಾಟಕಗಳು ‘ಸಿಂಹ ವೇದಿಕೆ’ ಯಿಂದ ಮೂಡಿಬಂದಿತು.

ಹೀಗೆ ರಂಗಭೂಮಿಯನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಸಿ.ಆರ್. ಸಿಂಹ ತಾವು ಚಿತ್ರರಂಗಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸುಮಾರು 150 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ, ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಸಿಂಹ ಶ್ರೀ ಪಟ್ಟಾಭಿ ರಾಮರೆಡ್ಡಿ ನಿರ್ಮಾಣ, ನಿರ್ದೇಶನ ಮಾಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ‘ಸಂಸ್ಕಾರ’(1970) ಚಿತ್ರದ ಮೂಲಕ ಚಿತ್ರರಂಗಕ್ಕೆ ಧುಮುಕಿದರು. ಸಾಹಿತಿ ಯು.ಆರ್. ಅನ್ಂತಮೂರ್ತಿ ಕಥೆಯನ್ನು ಆಧರಿಸಿದ್ದ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗಿರಿಶ್ ಕಾಸರವಳ್ಳಿ ಚಿತ್ರಕಥೆಯನ್ನು ಬರೆದಿದ್ದರು.

ರಂಗಭೂಮಿಯಂತೆಯೇ ಸಿನಿಮಾ ರಂಗದಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಾ ಸಾಗಿದ ಸಿ.ಆರ್. ಸಿಂಹ ಹಾಸ್ಯ ನಟನಾಗಿಯು, ಖಳ ನಟನಾಗಿಯು, ಚಿತ್ರದ ಪ್ರಮುಖ ಪೋಷಕ ನಟನಾಗಿಯೂ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಸಿಂಹ ಯಾವುದೇ ಪಾತ್ರವನ್ನ್ನಾದರೂ ತನ್ಮಯತೆಯಿಂದ ಅಭಿನಯಿಸುತ್ತಿದ್ದರು ‘ಕಾಡು’, ‘ಬರ’, ‘ಸಂಕಲ್ಪ’, ‘ನೀ ಬರೆದ ಕಾದಂಬರಿ’, ‘ನೀ ತಂದ ಕಾಣಿಕೆ’, ‘ಚಿತೆಗೂ ಚಿಂತೆ’, ‘ರಾಯರು ಬಂದರು ಮಾವನ ಮನೆಗೆ’, ‘ಅನುರೂಪ’, ‘ಇಂದಿನ ರಾಮಾಯಣ’, ‘ಪರಮೇಶಿ ಪ್ರೇಮ ಪ್ರಸಂಗ’, ‘ಹೊಸನೀರು’ ಹೀಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಲನಚಿತ್ರ ನಿರ್ದೇಶನ ಕ್ಷೇತ್ರಕ್ಕೂ ಕೈಹಾಕಿ ಜಯಿಸಿದ್ದ ಸಿ.ಆರ್. ಸಿಂಹ ಕುಮಾರ್ ಬಂಗಾರಪ್ಪ ನಟಿಸಿದ ‘ಅಶ್ವಮೇಧ’ ಚಿತ್ರಕ್ಕೆ ‘ಆಕ್ಷನ್ ಕಟ್’ ಹೇಳಿದ್ದರು. ಮುಂದೆ ‘ಶಿಕಾರಿ’, ‘ಕಾಕನ ಕೋಟೆ’, ‘ಅಂಗೈಯಲ್ಲಿ ಅಪ್ಸರೆ’, ‘ಸಿಂಹಾಸನ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಪ್ರಸಿದ್ದವಾಗಿದ್ದ ಶಂಕರ್ ನಾಗ್ ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ನಲ್ಲಿಯ ಅಭಿನಯವೂ ಸಿಂಹ ರವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಇತ್ತೀಚೆಗೆ ಸಿಂಹ ರವರ ಪುತ್ರ ಋತ್ವಿಕ್ ಸಿಂಹ ನಿರ್ದೇಶಿಸಿದ್ದ ‘ರಸಋಷಿ ಕುವೆಂಪು’ ಚಿತ್ರದಲ್ಲಿ ಕುವೆಂಪು ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಸಿಂಹ ಆ ಪಾತ್ರದಲ್ಲಿ ತಾವು ಸ್ವತಃ ಕುವೆಂಪು ರವರ ಆತ್ಮವನ್ನೇ ಆವಾಹಿಸಿಕೊಂಡವರಂತೆ ನಟಿಸಿದ್ದರು. ಹೀಗೆ ಕಲಾತ್ಮಕ ಹಾಗೂ ವಾಣಿಜ್ಯ ಹಿನ್ನೆಲೆಯ ಚಿತ್ರಗಳೆರಡರಲ್ಲಿಯೂ ತಮ್ಮ ಪಾರಮ್ಯ ಮೆರೆದ ಸಿಂಹರವರ ಕೆಲವು ಡೈಲಾಗ್ ಡೆಲಿವರಿಗಳು ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿವೆ.

ಇನ್ನು ರಂಗಭೂಮಿ, ಚಲನಚಿತ್ರ ರಂಗದಲ್ಲಿ ಸತತವಾಗಿ ಕೆಲಸ ಮಾಡಿದ್ದ ಸಿ.ಆರ್. ಸಿಂಹ ತಾವು ಬರಹಗಾರರಾಗಿಯೂ ಪ್ರಸಿದ್ದಿ ಪಡೆದಿದ್ದರು. ಈ ಹಿಂದೆ ವಿಶ್ವೇಶ್ವರ ಭಟ್ಟರು ಸಂಪಾದಕರಾಗಿದ್ದ ವೇಳೆಯಲ್ಲಿ ಕನ್ನಡದ ಪ್ರಸಿದ್ದ ದಿನಪತ್ರಿಕೆ ‘ವಿಜಯ ಕರ್ನಾಟಕ’ ದಲ್ಲಿ “ನಿಮ್ಮ ಸಿಮ್ಮ” ಎನ್ನುವ ಹೆಸರಿನ ಅಂಕಣ ಪ್ರಕಟವಾಗುತ್ತಿತ್ತು. ಆ ಅಂಕಣವನ್ನು ಬರೆಯುತ್ತಿದ್ದುದು ಇದೇ ಸಿ.ಆರ್. ಸಿಂಹ. ತಮ್ಮ ರಂಗಭೂಮಿ. ಚಿತ್ರರಂಗದಲ್ಲಿನ ಅನುಭವಗಳು ಹಿರಿಯ ನಿರ್ದೇಶಕ, ನಟರ ಜತೆಗಿನ ಒಡನಾಟಗಳು ಈ ಎಲ್ಲದರ ಬಗೆಗೆ ತಮ್ಮ ಅನುಭವಗಳನ್ನು ಈ ಅಂಕಣದ ಮೂಲಕ ಬರಹ ರೂಪಕ್ಕಿಳಿಸಿದ್ದರು.

ಇಂತಹಾ ರಂಗನಟನಿಗೆ ಅವರ ಅಪೂರ್ವ ಪ್ರತಿಭಾ ಶಕ್ತಿಗೆ ಕಲಶವಿಟ್ಟಂತೆ ಅನೇಕ ಪ್ರಶಸ್ತಿ ಗೌರವಗಳು ಲಭಿಸಿದೆ. ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ನಾಟಕ ಅಕಾಡಮಿ ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳ ಸಂದಿರುವುದರೊಂದಿಗೆ ಅಮೇರಿಕಾ, ಕೆನಡಾ, ಯುರೋಪ್ ಸೇರಿದಂತೆ ವಿದೇಶಗಳಲ್ಲಿಯೂ ಅವರ ಕಲಾಭಿಮಾನಿಗಳು ಅವರನ್ನು ಸನ್ಮಾನಿಸಿ ಗೌರವ ಸೂಚಿಸಿದ್ದಾರೆ. ಇನ್ನು ಬೆಂಗಳುರು ಸೇರಿದಂತೆ ರಾಜ್ಯದ, ಹೊರ ರಾಜ್ಯದ ಅನೇಕ ಸಂಘ ಸಂಸ್ಥೆಗಳಿಂದ ಸ್ವೀಕರಿಸಿದ ಗೌರವ, ಸನ್ಮಾನಗಳಿಗೆ ಲೆಕ್ಕವಿಲ್ಲ.

‘ಸಿಂಹ’ ರ ‘ಗುಹೆ’

ಸಿ.ಆರ್. ಸಿಂಹ ರವರ ಬಗ್ಗೆ ಇಷ್ಟೆಲ್ಲಾ ಮಾತು ಹೇಳಿದ ಮೇಲೆ ಅವರು ವಾಸಿಸುತ್ತಿದ್ದ ‘ಗುಹೆ’ ಯ ಕುರಿತಾಗಿ ಹೇಳದೆ ಹೋದರೆ ಅದು ನಿಜಕ್ಕೂ ಅಪಚಾರವಾದೀತು. ಈ ‘ಗುಹೆ’ ಇರುವುದು ಬೆಂಗಳೂರಿನ ಬನಶಂಕರಿ ರಿಂಗ್ ರೋಡಿನಲ್ಲಿನ ಇಟ್ಟೂಮಡು ಬಡಾವಣೆಯ ಅಂಚಿನಲ್ಲಿ. ಇದನ್ನವರು ಯಾವ್ದೇ ರೀತಿಯಲ್ಲಿಯೂ ಕಾಂಕ್ರೀಟ್ ಬಳಸದೆ ಕಲ್ಲು, ಮಣ್ಣುಗಳಿಂದಲೇ ನಿರ್ಮಿಸಿದ್ದರು. ಇದೊಂದು ವಿಚಿತ್ರ ಆಕಾರದ ಮನೆ(‘ಗುಹೆ’ ಎಂಬುದು ಸಿಂಹ ರವರು ಆ ತಮ್ಮ ಪ್ರೀತಿಯ ಮನೆಗಿಟ್ಟ ಹೆಸರು) ಈದ್ರು 50X80X30 ಅಡಿಗಳ ವಿನ್ಯಾಸವನ್ನು ಹೊಂದಿದ್ದೆಂದು ಸಿಂಹರೇ ಹೇಳುತ್ತಿದ್ದರು. ಅಂದಹಾಗೆ ಖ್ಯಾತ ವಿನ್ಯಾಸಕಾರರಾದ ಜಯಸಿಂಹ ರವರು ಈ ಮನೆಯ ವಿನ್ಯಾಸಕರಾಗಿದ್ದು ಸಿಂಹ ರವರ ಕನಸಿನ ಕೂಸಾಗಿತ್ತು. ಇದರಲ್ಲಿನ ಅನೇಕ ವೈಶಿಷ್ಟ್ಯಗಳಿಂದಾಗಿ ಹತ್ತು ಹಲವು ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದ ಈ ‘ಗುಹೆ’ ಒಟ್ಟು ಸ್ಥಳಾವಕಾಶದ ಮೂರನೆ ಒಂದಂಶವನ್ನು ಆಕ್ರಮಿಸಿಕೊಂಡಿದೆ. ಉಳಿದ ಹೊರಾಂಗಣದಲ್ಲಿ ಒಂದು ಚಂದ್ರಾಂಗಣ(ಥಿಯೇಟರ್) ಇದ್ದು ವಿವಿಧ ಹೂವು-ಹಣ್ಣುಗಳ ಗಿಡಗಳಿರುವ ಉದ್ಯಾನವನವೂ ಇದೇ ಆವರಣದಲ್ಲಿದೆ. ಮನೆಯೊಳಗೆ ಅಲ್ಲಲ್ಲಿ ಸೂರ್ಯನ ಬೆಳಕು ನೇರವಾಗಿ ಪ್ರವೇಶಿಸುವಂತೆ ಮನೆಯನ್ನು ವಿನ್ಯಾಸಗೊಳಿಸಲಾಗಿತ್ತು. ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ನ ಅಭಿಮಾನಿಯಾಗಿದ್ದ ಸಿ.ಆರ್. ಸಿಂಹ ತಮ್ಮ ‘ಗುಹೆ’ ಯ ಮದ್ಯದಲ್ಲಿ ಕಂಬದೋಪಾದಿಯಲ್ಲಿ ಚಾಪ್ಲಿನ್ ನ ಕಲ್ಲಿನ ಪ್ರತಿಮೆಯನ್ನು ನಿಲ್ಲಿಸಿದ್ದರು. ಇದರ ಕೆತ್ತನಾ ಕೆಲಸ ಖ್ಯಾತ ಶಿಲ್ಪಿಗಳಾದ ಜಾನ್ ದೇವರಾಜ್ ರವರದ್ದಾಗಿದೆ.

ಈ ಚಾಪ್ಲಿನ್ ಪ್ರತಿಮೆಯಿದ್ದ ಸಿಂಹ ರವರ ಮನೆಗೊಮ್ಮೆ ಕನ್ನಡದ ವರನಟ ಡಾ. ರಾಜ್ ಭೇಟಿಯಿತ್ತಿದ್ದರು. ಮನೆಯ ವಿನ್ಯಾಸವನ್ನು ಕಂಡು ಅತ್ಯಂತ ಆಶ್ಚರ್ಯ, ಸಂತೋಷಗಳನ್ನು ವ್ಯಕ್ತಪಡಿಸಿದ್ದ ರಾಜ್ ಕುಮಾರ್ ಮನೆಯಲ್ಲಿನ ಚಾಪ್ಲಿನ್ ಪ್ರತಿಮೆಯನ್ನು ನೋಡಿ ಬಹಳವೇ ಆನಂದ ಪಟ್ಟಿದ್ದರು. ಹೀಗಿರಬೇಕಾದರೆ ಇದೇ ಸಮಯದಲ್ಲಿ ಅಲ್ಲೇ ಇದ್ದ ಸಿಂಹ ರಾಜ್ ರವರತ್ತ ನೋಡಿ “ನಿಮ್ಮದೊಂದು ಆಟೋಗ್ರಾಫ್ ಬೇಕು” ಎಂದರು. ವಿಶೇಷವೆಂದರೆ ಆ ಸಮಯದಲ್ಲಿ ಸಿಂಹ ರವರ ಕೈಯಲ್ಲಿ ಯಾವುದೇ ಪೆನ್ನಾಗಲೀ, ಕಾಗದವಾಗಲೀ ಇರಲಿಲ್ಲ. ರಾಜ್ ರವರಿಗೂ ಅಚ್ಚರಿಯಾಯಿತು, ‘ಏನಿದು ಇದ್ದಕ್ಕಿದ್ದ ಹಾಗೆ ಆಟೋಗ್ರಾಫ್ ಕೇಖುತ್ತಿದ್ದಾರೆ, ಅದೂ ಪೆನ್ನು, ಕಾಗದಗಳಿಲ್ಲದೆ?’ ಎಂದುಕೊಳ್ಳುತ್ತಾ ಪ್ರಶ್ನಾರ್ಥಕವಾಗಿ ಎಂಬಂತೆ ಸಿಂಹ ರವರತ್ತ ನೋಡಿದಾಗ ಚಾಪ್ಲಿನ್ ಕಂಬದತ್ತ ಕೈ ತೋರಿಸಿದ ಸಿಂಹ “ನಿಮ್ಮ ಹಸ್ತಾಕ್ಷರ ಇಲ್ಲಿ ಬೇಕು” ಎಂದರು. ಮತ್ತೆ ಮರು ಮಾತಾಡದ ರಾಜ್ ತಕ್ಷಣವೇ ‘ರಾಜ್ ಕುಮಾರ್’ ಎಂಬುದಾಗಿ ಆ ಕಲ್ಲಿನ ಮೇಲೆ ಅಚ್ಚ ಕನ್ನಡದಲ್ಲಿ ರುಜು ಮಾಡಿದರು. ಅದಾಗ ಸಿಂಹ ರವರ ಆನಂದಕ್ಕೆ ಪಾರವಿಲ್ಲವಾಯಿತು. ಮುಂದೆ ರಾಜ್ ರವರು ಅಂದು ಆ ಕಲ್ಲಿನ ಮೇಲೆ ಮಾಡಿದ ಸಹಿಯನ್ನು ಕಲ್ಲಿನಿಂದ ಕೆತ್ತಿಸಿ ಶಾಶ್ವತವಾಗಿಸಿಬಿಟ್ಟರು. ರಾಜ್ ರವರೂ ಸಹ ಇದರಿಂದ ಸಂಭ್ರಮಗೊಂಡು ಅಂದಿನ ಬಳಿಕ ಯಾರೇ ಅಭಿಮಾನಿಗಳು ತಮ್ಮ ಮನೆಗೆ ಬಂದರೂ ಸಿಂಹ ರವರ ಗುಹೆ... ಅಲ್ಲಿನ ಚಾಪ್ಲಿನ್ ಪ್ರತಿಮೆ.... ಅದರ ಮೇಲಿನ ತನ್ನ ಸಹಿ... ಈ ಕುರಿತಂತೆ ಹೇಳಿಯೇ ಹೇಳುತ್ತಿದ್ದರು.

ಸ್ನೇಹಿತರೆ,ಸಿ.ಆರ್. ಸಿಂಹ ರವರಂತಹಾ ಅದ್ಭುತ ಪ್ರತಿಭೆಗಳು ಇಲ್ಲದ ಕನ್ನಡ ರಂಗಭೂಮಿ, ಚಿತ್ರರಂಗ ನಿಜಕ್ಕೂ ಬಣಬಣವೆನಿಸುತ್ತಿದೆ. ಹೊರಟು ಹೋದ ಸಿಂಹ  ರವರಂತಹಾ ಇನ್ನಷ್ಟು ಸಿಂಹಗಳು ಕನ್ನಡ ನಾಡಿಗೆ ದೊರಕಲಿ, ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಪರಂಪರೆಗೆ ಅದರಿಂದ ಇನ್ನಷ್ಟು ಉತ್ತಮ ಕಾಣಿಕೆ ಸಿಗಲಿ ಎಂದು ಹಾರೈಸೋಣ.

ಅಗಲಿದ ಸಿಂಹ ರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ

ನಮಸ್ಕಾರ.