Thursday, August 14, 2014

ಯೋಗಿ ಶ್ರೀ ಅರವಿಂದರ ಸ್ವಾತಂತ್ರ್ಯ ಹೋರಾಟ - ಒಂದು ಪರಿಚಯ

ಆಗಸ್ಟ್ 15 ಭಾರತ ಮಾತೆ ಇನ್ನೂರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿದ ದಿನ. ಗಾಂಧಿ, ಪಟೇಲ್, ನೇತಾಜಿ, ಟ್ಯಾಗೂರರಂತಹಾ ಮುಂಚೂಣಿ ನಾಯಕರಲ್ಲದೆ  ಲಕ್ಷಗಳ ಸಂಖ್ಯೆಯ ಯೋಧರು, ನಾಯಕರು, ಜನಸಾಮಾನ್ಯರ ರಕ್ತದ ಕೋಡಿ ಹರಿಸಿ,  ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು. ಅದೇ ಆಗಸ್ಟ್ 15 ರಂದು ಭಾರತಮಾತೆಯ ಅಪ್ರತಿಮ ದೇಶಭಕ್ತ, ಮಹಾನ್ ಯೋಗಿ, ದಿವ್ಯ ಚೇತನರಾದ ಶ್ರೀ ಅರವಿಂದರ ಜನುಮದಿನ. ಆಗಸ್ಟ್ 15, 1872 ರಂದು ಜನಿಸಿದ ಅರವಿಂದರು ಪಾಂಡಿಚೇರಿಯಲ್ಲಿ ನೆಲೆಸಿ ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾಲ್ಲಿ ಒಂದೆನಿಸಿದ “ಸಾವಿತ್ರಿ” ಯನ್ನು ರಚಿಸಿದವರೂ, ಆದ್ಯಾತ್ಮಿಕ ಸಾಧನೆ, ಯೋಗಗಳಿಂದ ಅಪಾರ ಸಿದ್ದಿಯನ್ನು ಪಡೆದವರೆನ್ನುವುದೂ ನಮಗೆಲ್ಲಾ ಚಿರಪರಿಚಿತ ಸಂಗತಿ. ಅದೇ ಅರವಿಂದರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಸಕ್ರಿಯವಾದ ಪಾತ್ರ ವಹಿಸಿದ್ದರೆನ್ನುವುದು ಬಹುಷಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಶ್ರೀ ಅರವಿಂದರು ಜನಿಸಿ ಇದೇ ಆಗಸ್ಟ್ 15 ಕ್ಕೆ 142 ವರ್ಷಗಳಾಗುತ್ತಿದೆ. ಆ ಸಮಯದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅರವಿಂದರ ಪಾತ್ರವೇನೆನ್ನುವುದರ ಕುರಿ ತು ತಿಳಿಸಿಕೊಡುವ ಚಿಕ್ಕ ಪ್ರಯತ್ನವಿದು....

Sri Aurobindo Ghosh (15 August 1872 - 05 December 1950)

ಆಗಸ್ಟ್ 15, 1872 ರಂದು ಜನಿಸಿದ ಅರವಿಂದರು ತಮ್ಮ ವಿದ್ಯಾಭ್ಯಾಸವನ್ನು ಅವರ ತಂದೆ ಡಾ. ಕೃಷ್ಣಧರ ಘೋಷ್ ರವರ ಒತ್ತಾಸೆಯಂತೆ ಇಂಗ್ಲೆಂಡಿನಲ್ಲಿ ಪೂರೈಸಿದರು. ಶ್ರೀ ಅರವಿಂದರ ತಂದೆ ಕೃಷ್ಣ್ ಧರ ಘೋಷ್ ರವರಿಗೆ ಮಕ್ಕಳು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು, ಇಲ್ಲಿನ ಭಾಷೆಯನ್ನೂ ಕಲಿಯುವುದು ಇಷ್ಟವಿಲ್ಲದ ಕಾರಣ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ದೂರದೇಶಕ್ಕೆ ಕಳಿಸಿದ್ದರು. ಆದರೆ ಭಾರತಮಾತೆಯ ಅಪೇಕ್ಷೆಯೋ, ವಿಧಿಯ ಲೀಲೆಯೋ ಎನ್ನುವಂತೆ ಅರವಿಂದರು ಇಂಗ್ಲೆಂಡಿನಲ್ಲಿಯೇ ಇದ್ದರೂ ಅವರಿಗೆ ಜನ್ಮಭೂಮಿಯ ಸೆಳೆತ ತಪ್ಪಲಿಲ್ಲ. ಬಿಳಿ ದೊರೆಗಳು ತಾವು ಭಾರತದಲ್ಲಿ ನಡೆಸುತ್ತಿದ್ದ ಸತತ ದಬ್ಬಾಳಿಕೆಯ ವರದಿಯನ್ನು ಅಲ್ಲಿದ್ದುಕೊಂಡೇ ತಿಳಿಯುತ್ತಿದ್ದ ಅರವಿಂದರ ಮನಸ್ಸಿಗೆ ಬಹಳವೇ ನೋವಾಗುತ್ತಲಿದ್ದಿತು. ಈ ಬ್ರಿಟೀಷರ ದಾಸ್ಯದಿಂದ ನಮ್ಮ ತಆಯಿಯನ್ನು ಬಿಡುಗಡೆಗೊಳಿಸುವುದಕ್ಕಾಗಿ ನಾನೇನಾದರೂ ಮಾಡಲೇಬೇಕು ಎನ್ನುವ ಸಂಕಲ್ಪವನ್ನು ಅವರೌ ಅಂದೇ ಮಾಡಿದ್ದರು. ಇದಕ್ಕಾಗಿಯೇ ಪ್ರತಿಷ್ಠಿತ ಐ.ಸಿ.ಎಸ್. ಪರೀಕ್ಷೆಯಲ್ಲಿ ಹನ್ನೊಂದನೇ ರ್ಯಾಂಕ್ ಪಡೆದಿದ್ದ ಅರವಿಂದರು ಐ.ಸಿ.ಎಸ್. ಹುದ್ದೆಯನ್ನು ತಿರಸ್ಕರಿಸಿ ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟರು!
ಆ ಸಮಯದಲ್ಲಿ ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು “ಇಂಡಿಯನ್ ಮಜಲೀಸ್” ಎನ್ನುವ ಸಂಘವನ್ನು ಸ್ಥಾಪಿಸಿ ಅದರ ಮೂಲಕ ಭಾರತದ ಸ್ವಾತಂತ್ರ್ಯ ಸಂಪಾದನೆಗೆ ಪ್ರಯತ್ನಿಸುತ್ತಿದ್ದರು. ಆ ಸಂಘಟನೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅರವಿಂದರು ಬಹುಬೇಗನೇ ಅದರ ಮುಖ್ಯ ಕಾರ್ಯನಿರ್ವಾಹಕರಾದರು. ಆದರೆ ಆ ಸಂಘಟನೆಯವರು ನಡೆಸುತ್ತಿದ್ದ ತೀರಾ ಸಾವಧಾನಕರ ಪ್ರತಿಭಟನೆಗಳಿಂದ ಮಾತ್ರವೇ ಭಾರತ ಸ್ವಾತಂತ್ರ್ಯ ಹೊಂದುವುದಿಲ್ಲವೆನ್ನುವುದನ್ನು ಅರಿತುಕೊಂಡ ಅರವಿಂದರು ಅದಕ್ಕಾಗಿ ಸಶಸ್ತ್ರ ಹೋರಾಟದ ಅಗತ್ಯವನ್ನು ಮನಗಂಡರು. ಅದೇ ಸಮಯದಲ್ಲಿ ತಮ್ಮಂತೆಯೇ ನಂಬಿಕೆ ಹೊಂದಿದ್ದ ಆ ತಲೆಮಾರಿನ ಕೆಲವು ಯುವಕರನ್ನು ಸೇರಿಸಿಕೊಂಡು ಒಂದು ಉಗ್ರಗಾಮಿಗಳ ಗುಂಪು ರಚಿಸಿಕೊಂಡರು,  ಮತ್ತು ಆ ಗುಂಪಿಗೆ “Lotus and Dagger (ಕಮಲ ಮತ್ತು ಕಠಾರಿ)” ಎಂಬ ಹೆಸರು ನೀಡಿದರು. ಈ ಗುಂಪು ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಬಾಂಬ್ ಗಳ ತಯಾರಿಕೆಯ ಕುರಿತಾಗಿ ಕಲಿಯುವುದು, ಪರದೇಶಗಳಿಂದ ಬಾಂಬ್ ಗಳು, ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸಾಗಿಸುವುದು ಇದರ ಕಾರ್ಯಗಳಾಗಿದ್ದವು. ಗುಂಪಿನ ಸದಸ್ಯರು ಭಾರತದ ಸ್ವಾತಂತ್ರಕ್ಕಾಗಿ ಏನಾದರೂ ಮಾಡಲು ಸಿದ್ದ ಎನ್ನುವುದಾಗಿ ಪ್ರತಿಜ್ಜೆಗೈಯ್ಯಬೇಕಿತ್ತು. ಅರವಿಂದರು ತಾವೂ ಕೂಡ ಅಂತಹಾ ಪ್ರತಿಜ್ಞೆಯನ್ನು ಕೈಗೊಂಡು 1893 ರ ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿಳಿದರು.
ಅರವಿಂದರು ಭಾರತ್ಕ್ಕೆ ಹಿಂತಿರುಗುವ ವೇಳೆಯಲ್ಲಿ ಅವರ ತಂದೆ ಕೃಷ್ಣ್ಧರ ಘೋಷ್ ದೈವಾಧೀನರಾಗಿದ್ದರು. ಅರವಿಂದರಿಗೆ ತಾವು ಜೀವನ ನಡೆಸಲಿಕ್ಕಾಗಿ ಏನಾದರೂ ಕೆಲಸ ಹುಡುಕಬೇಕಿತ್ತು. ಪಾಲಿಗೆ ಬಂದಿದ್ದ ಐ.ಸಿ.ಎಸ್. ಅಧಿಕಾರಿ ಹುದ್ದೆಯನ್ನು ಕಾಲಿನಿಂದ ತುಳಿದು ಬಂದುದಾಗಿತ್ತು. ಅಂತಹಾ ಸಮಯದಲ್ಲಿ ದೈವ ಸಂಕಲ್ಪವೆನ್ನುವಂತೆ ಬರೋಡಾದ ಮಹಾರಾಜರಿಗೆ ತಮ್ಮಲ್ಲಿನ ಆಡಳಿತ ನೋಡಿಕೊಳ್ಲಲು ಒಬ್ಬ ದಕ್ಷ ಅಧಿಕಾರಿಯು ಬೇಕಾಗಿದ್ದಿತು. ಅದೇ ಸಮಯದಲ್ಲಿ ಅವರ ಸಂಪರ್ಕಕ್ಕೆ ಬಂದ ಅರವಿಂದರಿಗೆ ಆ ಹುದ್ದೆ ದೊರೆಯಿತು. ಹೀಗೆ ಅರವಿಂದರು ಫೆಬ್ರವರಿ 8, 1893 ರಿಂದ ಬರೋಡಾ ಮಹಾರಾಜರ ಸೇವೆಗಾಗಿ ನಿಂತರು. ಪ್ರಾರಂಭದ ಎರಡು ವರ್ಷಗಳು 1893 ರಿಂದ 1895 ರ ನಡುವೆ ಬರೋಡಾದ ಸರ್ವೆ ಸೆಟ್ಲಮೆಂಟ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಅರವಿಂದರು 1895 ರಲ್ಲಿ ಬರೋಡಾ ಕಾಲೇಜಿನಲ್ಲಿ ಫ್ರೆಂಚ್ ಭಾಷಾ ಶಿಕ್ಷಕರಾಗಿ ನೇಮಕಗೊಂಡರು. ಬಳಿಇಕ 1899 ರಲ್ಲಿ ಅರವಿಂದರನ್ನು ಅದೇ ಕಾಲೇಜಿನ ಆಂಗ್ಲ ಭಾಷಾ ಪ್ರದ್ಯಾಪಕ ಹುದ್ದೆಗೆ ಖಾಯಂ ಆಗಿ ನೇಮಿಸಲಾಯಿತು. ಕ್ರಮೇಣ ತಮ್ಮ ಹುದ್ದೆಗಳಲ್ಲಿ ಮುಂಭಡ್ತಿ ಪಡೆದುಕೊಳ್ಳುತ್ತಾ ಸಾಗಿದ್ದ ಅರವಿಂದರು 1906 ರಲ್ಲಿ ಬರೋಡಾ ಸರ್ಕಾರದ ಹುದ್ದೆಗೆ ರಾಜೀನಾಮೆ ನೀಡುವಾಗ ಅಲ್ಲಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅರವಿಂದರು ತಾವು ಬರೋಡಾದಲ್ಲಿದ್ದಷ್ಟು ಸಮಯದಲ್ಲಿ ತಮ್ಮ ತಾಯ್ನುಡಿಯಾದ ಬಂಗಾಳಿ ಹಾಗೂ ಭಾರತೀಯರ ದೈವ ಭಾಶೆ ಸಂಸ್ಕೃತದಲಿ ಪಾಂಡಿತ್ಯವನ್ನು ಗಳಿಸಿದರು. ಇದರೊಡನೆ ಭಾರತೀಯ ಪರಂಪರೆ, ಸಂಸ್ಕೃತಿ, ಪುರಾಣ ಎಲ್ಲದರ ಆಳ ಅಧ್ಯಯನ ನಡೆಸಿದರು. ಈ ಎಲ್ಲದರಿಂದಾಗಿ ಅರವಿಂದರಲ್ಲಿ ಭಾರತದ ಕುರಿತ ಸ್ಪಷ್ಟ ಕಲ್ಪನೆಯೊಂದು ಉದಯವಾಯಿತು. ಅಲ್ಲದೆ ತಾಯ್ನೆಲಕ್ಕಾಗಿ ಹೋರಾಡುವ ಬಯಕೆ ದುಪ್ಪಟ್ಟಾಯಿತು.
ಅರವಿಂದರದು ಈ ಮೊದಲೇ ಹೇಳಿದಂತೆ ತೀವ್ರಗಾಮಿ ಚಿಂತನೆಯಾಗಿತ್ತು. 1885 - 1905 ರ ನಡುವೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರು ಅನುಸರಿಸುತ್ತಾ ಬಂದಿದ್ದ ದೀನತೆಯ ಧೋರಣೆಯನ್ನು ಖಂಡಿಸಿದ ಅರವಿಂದರು ಮುಂಬೈನಿಂದ ಪ್ರಕಟಗೊಳ್ಳುತ್ತಿದ್ದ “ಇಂದು ಪ್ರಕಾಶ” ಪತ್ರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಕಟುವಾಗಿ ಟೀಕಿಸಿ ಒಂದು ಲೇಖನವನ್ನು ಬರೆದರು. “ಅಖಂಡ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು.” ಎಂದು ಮೊತ್ತ ಮೊದಲಿಗೆ ಪ್ರತಿಪಾದಿಸಿದವರಿ ಶ್ರೀ ಅರವಿಂದರು! ಅಖಂಡ ಭಾರತ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳಾಗಬೇಕು. ಇದು ಇತಿಹಾಸ ಕಲಿಸಿದ ಪಾಠ. ಇದಕ್ಕಾಗಿ ಅರವಿಂದರು ಫ್ರೆಂಚ್ ಕ್ರಾಂತಿಯನ್ನು ಉದಾಹರಿಸಿದರು. ಫ್ರಾನ್ಸ್ ಕ್ರಾಂತಿಯಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರು ಕೃಷಿಕರಾಗಿದ್ದರು. ಸಾಮಾನ್ಯ ಅನಕ್ಷರಸ್ಥ ವರ್ಗದವರಾಗಿದ್ದರು ಎಂದ ಅರವಿಂದರು ಕೃಷಿ ಕಾರ್ಮಿಕರೇ ಭವ್ಯ ಸ್ವಂತಂತ್ರ ಭಾರತದ ಭವಿಷ್ಯದ ನಿಕವಾದ ಕೀಲಿಕೈ ಯಾರು ನಮ್ಮ ದೇಶದ ಕೃಷಿ ಕಾರ್ಮಿಕರಲ್ಲಿನ ಬಲವನ್ನು ಅವರಿಗೆ ತಿಳಿಸಿ ಅವರನ್ನು ಎಚ್ಚರಿಸುವರೋ ಅವರೇ ಭವಿತವ್ಯದ ನಾಯಕರಾಗುತ್ತಾರೆ ಎನ್ನುವ ಮೂಲಕ ಕೃಷಿ ಕಾರ್ಮಿಕರ ಶಕ್ತಿಯನ್ನು ಗುರುತಿಸಿದವರು ಅರವಿಂದರು.
ತ್ಯಾಗ, ಬಲಿದಾನ, ರಕ್ತಪಾತಗಳಿಲ್ಲದೆ ಸ್ವಾತಂತ್ರ್ಯ ಮರೀಚಿಕೆಯಾಗುವುದೆನ್ನುವ ನಂಬಿಕೆ ಹೊಂದಿದ್ದ ಅರವಿಂದರು ಅದಕ್ಕಾಗಿ “ಭವಾನಿ ಮಂದಿರ” ದ ಪರಿಕಲ್ಪನೆಯೊಂದನ್ನು ರೂಪಿಸಿದರು. ಬಂಕಿಮ ವಂದ್ರರ “ಆನಂದ ಮಠ” ಕಾದಂಬರಿಯಲ್ಲಿ ಬರುವಂತೆ ಆರಾಧಕರಾದವರಿಗೆ ಆರಾಧಿಸಲು ಒಂದು ದೇವಿಯು ಬೇಕು. ಭಾರತಾಂಬೆಯೇ ಆ ತಾಯಿ. ಜನ್ಮಭೂಮಿಯ ಮುಕ್ತಿಗಾಗಿ ಸರ್ವತ್ಯಾಗಕ್ಕೂ ಸಿದ್ದರಾಗಿರಿ ಎನ್ನುವುದಾಗಿ ಕರೆ ನೀಡಿದ ಅರವಿಂದರು ಭಾರ್ತ ಮಾತೆಯೇ ಭವಾನಿ ಎನ್ನುವುದಾಗಿ ಬಿಂಬಿಸಿ ಈ “ಭವಾನಿ ಮಂದಿರ” ಯೋಜನೆ ರೂಪಿಸಿದರು. 1899 ರಲ್ಲಿ ಅರವಿಂದರ ಸಂಪರ್ಕಕ್ಕೆ ಬಂದ ಜತೀಂದ್ರನಾಥ ಬ್ಯಾನರ್ಜಿ ಎನ್ನುವ ಯುವಕರೋರ್ವರಿಗೆ ಬರೋಡಾಸಂಸ್ಥಾನದ ಸೈನ್ಯದಲ್ಲಿ ಸೇರಿಕೊಳ್ಲಲು ತಿಳಿಸಿ ಅಲ್ಲಿ ಅವರಿಗೆ ಸೈನ್ಯದ ಬಗ್ಗೆ ಸಾಕಷ್ಟು ತಿಳುವಳಿಕೆ ಬರುವ/ಮ್ತೆ ಮಾಡಿದರು. ಭವಿಷ್ಯದಲ್ಲಿ ತಾವು ಕಟ್ತಬೇಕೆಂದಿದ್ದ ಸೈನ್ಯದಲ್ಲಿ ಭಾಗಿಯಾಗುವಂತೆ ಪ್ರೊತ್ಸಾಹ ನೀಡಿದರು. ಇದಕ್ಕೆ ಒಪ್ಪಿದ ಜತೀಂದ್ರರು ಶ್ರೀ ಅರವಿಂದರ ನಿಷ್ಠೆಯ ಅನುಯಾಯಿಗಳಾದರು. ಆಗಾಗ ಕಲ್ಕತ್ತೆಗೆ ಹೋಗಿ ಬರುತ್ತಲಿದ್ದ ಜತೀಂದ್ರನಾಥರು ಅಲ್ಲಿ ಶ್ರೀ ಅರವಿಂದರ ಆದೇಶದಂತೆ ಬಾರತ ಮಾತೆಯನ್ನು ದಾಸ್ಯದಿಂದ ಬಿಡಿಸುವ ಉದ್ದೇಶದಿಂದ ರೂಪುಗೊಳ್ಳಬೇಕಾದ ಕ್ರಾಂತಿಗಾಗಿ ಜನ, ಧನ ಬಲಗಳನ್ನು ಸಂಚಯಿಸತೊಡಗಿದರು. ಅದೇ ಸಮಯದಲ್ಲಿ ಬರೋಡಾಗೆ ಆಗಮಿಸಿದ ಅರವಿಂದರ ಸಹೋದರರಾದ ಬಾರೀಂದ್ರ ಪ್ರಸಾದ್ ರವರನ್ನು ಸಹ ತಮ್ಮ ಕಾರ್ಯಯೋಜನೆಯಲ್ಲಿ ಪಾಲ್ಗೊಳ್ಳುವದಕ್ಕೆ ಮನವೊಲಿಸಿದರು. ಅವರ ಮೂಲಕ “ಭವಾನಿ ಮಂದಿರ” ಸ್ಥಾಪನೆಗಾಗಿ ನಿರ್ಜನವಾಗಿರುವ ಸೂಕ್ತ ಸ್ಥಳವನ್ನು ಗೊತ್ತು ಮಾದಿದರು.
ಮಹಾರಾಷ್ಟ್ರದ ಥಾಣೆಯಲ್ಲಿ ಆ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಂಗಾಳದ ಐ.ಸಿ.ಎಸ್. ಅಧಿಕಾರಿ ಚಾರುಚಂದ್ರ ದತ್ತರ ಪರಿಚಯವು ಶ್ರೀ ಅರವಿಂದರಿಗೆ ಒದಗಿ “ಭವಾನಿ ಮಂದಿರ” ಯೋಜನೆಯ ಭವಿಷ್ಯದ ರೂಪುರೇಷೆಗೆ ಸಾಕಷ್ಟು ಸಹಕಾರ ಒದಗಿತು. ದತ್ತರವರು ತಾವು ಬ್ರಿಟೀಷ್ ಸರ್ಕಾರದ ಸೇವೆಯಲ್ಲಿದ್ದೂ ಅರವಿಂದರ ಸಿದ್ದಾಂತಕ್ಕೆ ಸಂಪೂರ್ಣ್ ಬೆಂಬಲಿಸಿದರು. ಇನ್ನು ದತ್ತರವರ ಭಾವನವರಾದ ಶ್ರೀಮಂತರಾಗಿದ್ದ ರಾಣಾ ಸುಬೋಧ ಮಲಿಕ್ ರವರ ಬೆಂಬಲವೂ ಅರವಿಂದರಿಗೆ ದೊರಕಿತು. ಮಹಾರಾಷ್ಟ್ರದಲ್ಲಿ ಜನಪ್ರಿಯ ನಾಯಕರಾಗಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರನ್ನು ಸಂಧಿಸಿದ ಅರವಿಂದರು ತಾವು ರೂಪಿಸಿಕೊಂಡ ಯೋಜನೆಯ ವಿವರಗಳನ್ನು ತಿಲಕರಿಗೆ ನೀಡಲಾಗಿ ಅವರು ಆ ಯೋಜನೆಗೆ ತಮ್ಮದೇ ಶೈಲಿಯಲ್ಲಿ ಸ್ಪಷ್ಟ ಸ್ವರೂಪವನ್ನು ನೀಡಿದರು. ಹೀಗೆ ಮಹಾರಾಷ್ಟ್ರದಲ್ಲಿ “ಭವಾನಿ ಮಂದಿರ” ಚಳುವಳಿ ಬಲವಾಗುವುದಕ್ಕೆ ಕಾರಣಾರಾದರು.
ಇತ್ತ ಬಂಗಾಳದಲ್ಲಿಯೂ ಕಲ್ಕತ್ತಾ, ದೇವಘಡ, ಮಿಡ್ನಾಪುರ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಒಟ್ಟು ಆರು ಕ್ರಾಂತಿಕಾರಿ ಚಳುವಳಿ ಕೇಂದ್ರಗಳನ್ನು ಸ್ಥಾಪನೆ ಮಾಡಿದರು. ಅರವಿಂದರ ನಿಕಟವರ್ತಿಗಳಾಗಿದ್ದ ಜತೀಂದ್ರದಾಸ್ ಬ್ಯಾನರ್ಜಿಯವರು ತಾವೂ ಆ ಬಗೆಯ ಕೇಂದ್ರವನ್ನು ಸ್ಥಾಪಿಸುತ್ತಲಿದ್ದು ತಮ್ಮ ಮೇಲಾಧಿಕಾರಿಗಳ ಕಚೇರಿ ಕಂಪೌಂಡಿನಲ್ಲಿಯೇ ಅಂತಹುದೊಂದು ಕೇಂದ್ರವನ್ನು ಸ್ಥಾಪನೆ ಮಾಡಿದ್ದರು!
ದಿನಗಳೆದಂತೆಲ್ಲಾ ಅರವಿಂದರ ಈ ಗುಪ್ತ ಕ್ರಾಂತಿ ಚಳುವಳಿ ಬಂಗಾಳ ಸೇರಿದಂತೆ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿತು. ದೊಡ್ಡ ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಇದ್ದವರೂ ಸಹ ಅರವಿಂದರ ಸಿದ್ದಾಂತಗಳನ್ನು ಅಂಗೀಕರಿಸಿ ಭಾರತಮಾತೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದರು. ಅದೇ ವೇಳೆಯಲ್ಲಿ ಲೋಕಮಾನ್ಯ ತಿಲಕರು ಹಾಗೂ ಅರವಿಂದರ ಮೈತ್ರಿ ಗಾಡವಾಗಿ ಬೆಳೆಯಿತು. ಇಬ್ಬರದೂ ಏಕಮಾತ್ರಗುರಿ – ‘’ಸಂಪೂರ್ಣ ಸ್ವಾರಂತ್ರ್ಯ’’ ಆಗಿದ್ದುದರಿಂದ ಇಬ್ಬರ ಯೋಜನೆಗಳೂ ಏಕಪ್ರಕಾರವಾಗಿ ಸಾಗಿದ್ದವು.
ಹೀಗಿರಲು 1907 ರ ಸೂರತ್ ಕಾಂಗ್ರೆಸ್ ಅಧಿವೇಶನದ ವೇಳೆಯಲ್ಲಿ ಬಂಗಾಳ ಹಾಗೂ ಮಹಾರಾಷ್ಟ್ರದಿಂದ ಅನೇಕ ತೀವ್ರಗಾಮಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪರಿಣಾಮವಾಗಿ ಅಂದಿನವರೆಗೂ ಮಂದಗಾಮಿಗಳ ಪ್ರಾಬಲ್ಯವಿದ್ದ ಕಾಂಗ್ರೆಸ್ ಪಕ್ಷವು ತಿಲಕರು ಹಾಗೂ ಅರವಿಂದ ಮಾರ್ಗದರ್ಶನ, ನಾಯಕತ್ವದೊಡನೆ ಪ್ರಥಮ ಬಾರಿಗೆ ತೀವ್ರಗಾಮಿಗಳ ವಶವಾಯಿತು.
1900 ರ ಪ್ರಾರಂಭದ ವರ್ಷಗಳು ನಮ್ಮ ಭರತಭೂಮಿ ಸಾಕಷ್ಟು ಕ್ರಾಂತಿಗಳು, ಬದಲಾವಣೆಯನ್ನು ಕಾಣುವಂತಾಯಿತು. ಅದರಲ್ಲಿಯೂ 1905 ರಲ್ಲಾದ ಬಂಗಾಳ ವಿಭಜನೆಯು ದೇಶಾದ್ಯಂತ ಜನರಲ್ಲಿ ಬ್ರಿಟೀಷರ ವಿರುದ್ದ ರೋಷದ ಜ್ವಾಲೆಯನ್ನೇ ಪಸರಿಸಿತು. ಅದೇ ಸಮಯದಲ್ಲಿ ಅರವಿಂದರ ಸಹೋದರ ಬಾರೀಂದ್ರರು 1906 ಮಾರ್ಚ್ ನಲ್ಲಿ “ಯುಗಾಂತರ” ಎನ್ನುವ ವಾರಪತ್ರಿಕೆಯೊಂದನ್ನು ಪ್ರಾರಂಭ ಮಾಡಿದರು. ಆ ಪತ್ರಿಕೆಯಲಿ ಪ್ರಕಟವಾಗುತ್ತಿದ್ದ ಅರವಿಂದರ ಲೇಖನಗಳು ಕ್ರಾಂತಿಗೆ ಇನ್ನಷ್ಟು ಸ್ಪೂರ್ತಿ ನೀಡುತ್ತಿದ್ದವು.
ಏತನ್ಮಧ್ಯೆ 1906 ರಲ್ಲಿ ಬರೋಡಾ ಸರ್ಕಾರದ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಅರವಿಂದರು ಅದಾಗ ಬಂಗಾಳ ನಾಯಕರಾಗಿದ್ದ ಬಿಪಿನ್ ಚಂದ್ರ ಪಾಲ್ ನಡೆಸುತ್ತಿದ್ದ ಆಂಗ್ಲ ವಾರಪತ್ರಿಕೆ “ವಂದೇ ಮಾತರಂ” ಸಂಪಾದಕತ್ವವನ್ನು ವಹಿಸಿಕೊಂಡರು. ಮುಂದೆ ಅರವಿಂದರು ಆ ಪತ್ರಿಕೆಯಲ್ಲಿ ಬರೆದ ಒಂದೊಂದು ಲೇಖನವೂ ಬ್ರಿಟೀಷ್ ಸರ್ಕಾರದ ವಿರುದ್ದ ಬೆಂಕಿಯುಂಡೆಗಳನ್ನುಗುಳುವಂತಿದ್ದವು. “ಏಟಿಗೆ ಏಟಿ! ಮುಯ್ಯಿಗೆ ಮುಯ್ಯಿ!!” ಎನ್ನುವಂತಹಾ ಧೋರಣೆಯ ಆ ಲೇಖನಗಳಿಂದ ಬಂಗಾಳವಷ್ಟೇ ಅಲ್ಲದೆ ದೇಶದ ನಾನಾ ಕಡೆಗಳಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ಬಿರುಸುಗೊಂಡವು. ಇಂತಹಾ ಸಮಯದಲ್ಲಿ ಶ್ರೀ ಅರವಿಂದರನ್ನು ಬಂಧಿಸಬೇಕು, ರಾಜದ್ರೋಹದ ಆಪಾದನೆಯೊಂದಿಗೆ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಬ್ರಿಟೀಷ್ ಸರ್ಕಾರದ ಅಧಿಕಾರಿಗಳು ನಾನಾ ವಿಧದಲ್ಲಿ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರಿಗೆಅರವಿಂದರ ವಿರುದ್ದ ಯಾವುದೇ ರೀತಿಯ ಸಾಕ್ಷ್ಯವು ದೊರೆಯದ ಕಾರಣ ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು!
ಶ್ರೀ ಅರವಿಂದರ ಸಹೋದರ ಬಾರೀಂದ್ರರು ಮಾಣಿಕ್ ತೋರಾ ಎನ್ನುವಲ್ಲಿ ತೋಟದ ಮನೆಯೊಂದನ್ನು ಬಾಡಿಗೆಗ್ ಪಡೆದು ಅಲ್ಲಿ ಭವಾನಿ ಮಂದಿರದ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅದೇ ಸಮಯದಲಿ ಖುದಿರಾಂ ಬೋಸ್ ಎನ್ನುವ ಕ್ರಾಂತಿಕಾರಿಯೋರ್ವರು ಪಪುಲ್ಲ ಜಾಕಿ ಎನ್ನುವ ಇನ್ನೋರ್ವರೊಡನೆ ಕೂಡಿ ನಡೆಸಿದ ಬಂಬ್ ಧಾಳಿಯಲ್ಲಿ ಬ್ರಿಟೀಷ್ ಮಹಿಳೆಯೋರ್ವರು ಮೃತರಾದರು. ಆ ಸಂಬಂಧದಲ್ಲಿ ಖುದಿರಾಂ ಬೋಸ್ ಗೆ ಗಲ್ಲುಶಿಕ್ಷೆಯಾಯಿತು. ಅದೇ ಸಮಯದಲ್ಲಿ ಬಂಗಾಳದ ಪೋಲೀಸರು ತಮಗೆ ಅನುಮಾನ ಹುಟ್ಟಿಸುವ ಚಿಕ್ಕ ದೊಡ್ದ ಮನೆಗಳೆಲ್ಲದರ ಮೇಲೆ ಧಾಳಿಗೆ ಮುಂದಾದರು. ಹಾಗೆಯೇ ಬಾರೀಂದ್ರರ ತೋಟದ ಮನೆಯೂ ಜಪ್ತಿಯಾಗಿ ಅಲ್ಲಿ ಸಾಕ್ಷ್ಟು ಪ್ರಮಾಣದ ಬಾಂಬ್ ಗಳು ಶಸ್ತ್ರಾಸ್ತ್ರಗಳೂ ದೊರಕಿದಾಗ ಆ ಸಮಯದಲ್ಲಿ ಆ ಮನೆಯಲ್ಲಿದ್ದ ಬಾರೀಂದ್ರ, ಅರವಿಂದರೂ ಸೇರಿದಂತೆ ಅನೇಕ ಜನರನ್ನು ಸುಪರ್ದಿಗೆ ತೆಗೆದುಕೊಂಡ ಪೋಲೀಸರು ಎಲ್ಲರ ಮೇಲೆಯೂ ಬಹು ದೊಡ್ಡ ಪ್ರಮಾಣದ ಆರೋಪವನ್ನು ಹೊರಿಸಿದರು.
ಈ ಪ್ರಕರಣದಲ್ಲಿ ಶ್ರೀ ಅರವಿಂದರು ೧1908 ಮೇ 4 ರಂದು ಪೋಲೀಸರಿಂದ ಬಂಧಿಸಲ್ಪಟ್ಟಿದ್ದರು. 1909 ಏಪ್ರಿಲ್ 13 ರವ್ರೆಗೆ ವಿಚಾರಣೆ ನಡೆಯಿತು. 777 ಸಾಕ್ಷಿಗ್ಳ ಹೇಳಿಕೆಗಳು, 4000 ಪುತಗಳ ದಸ್ತಾವೇಜು ದಾಖಲಾದವು. ಅರವಿಂದರ ಪರವಾಗಿ ಅಂದಿನ ಪ್ರಖ್ಯಾತ ವಕೀಲರಾದ ಚಿತ್ತರಂಜನ್ ದಾಸ್ ರವರು ಸತತ ಒಂಭತ್ತು ದಿನಗಳ ಕಾಲ ವಾದ ಮಂಡಿಸಿದರು. ಶ್ರೀ ಅರವಿಂದರನ್ನು ಬಂಧಿಸಿದ ವರ್ಷದ ಮೇಲೆ ಎರಡು ದಿನಗಳ ತರುವಾಯ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶರು ಅರವಿಂದರು ನಿರ್ದೋಷಿಗಳೆಂದು ತೀರ್ಪು ಬರೆದು ಪ್ರಕರಣಕ್ಕೆ ಮುಕ್ತಾಯ ಹಾಡಿದರು.
ಜೈಲಿನಲ್ಲಿದ್ದಷ್ಟೂ ಕಾಲ “ದೇವರು ನನ್ನನ್ನು ಪರೀಕ್ಷೆಗೊಡ್ಡಿದ್ದಾನೆ... ಅವನೇ ಎಲ್ಲದಕ್ಕೂ ಕಾರಣನು.” ಎಂದು ನಿಶ್ಚಲವಾಗಿ ನಂಬಿದ್ದ ಅರವಿಂದರು ತಾವು ಯಾವುದೇ ಉದ್ವೇಗ, ಆವೇಶ್ಗಳಿಗೆ ಸಿಲುಕದೆ ನಿರ್ಲಿಪ್ತರಾಗಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ದೇಶಸೇವೆಯನ್ನೇ ಮುಂದುವರಿಸಿದ ಅರವಿಂದರು “ಕರ್ಮಯೋಗಿ” ಹಾಗೂ “ಧರ್ಮ” ಎನ್ನುವ ಪತ್ರಿಕೆಗಳ ಮೂಲಕ ತಮ್ಮ ರಾಜಕೀಯ ನಿಲುವನ್ನು ಪ್ರಚುರಪಡಿಸುತ್ತಿದ್ದರು. ಅವರು ಬರೆಯುತ್ತಿದ್ದ ಉಗ್ರ ಲೇಖನಗಳಿಂದ ಜನರು ಸ್ಪೂರ್ತಿಗೊಂಡು ಸ್ವತಂತ್ರ್ಯ ಚಳುವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಇದು ಕಾರಣವಾಗಿ ಅಂದಿನ ಬ್ರಿಟೀಷ್ ಸತ್ತೆ ಮತ್ತೆ ಪುನಃ ಅರವಿಂದರನ್ನು ಬಂಧಿಸಿ ಸೆರೆಮನೆಗಟ್ತಬೇಕೆಂದು ಯೋಚಿಸಿತು. ಆ ವಿಚಾರವನ್ನು ಸೋದರಿ ನಿವೇದಿತಾರವರು ಶ್ರೀ ಅರವಿಂದರಿಗೆ ತಿಳಿಸಿದಾಗ ಅವರು ಮತ್ತೆ ತಡ ಮಾಡದೆಯೇ ಕಲ್ಕತ್ತಾವನ್ನು ತೊರೆದು ಚಂದ್ರನಗರವೆಂಬಲ್ಲಿಗೆ ಹೋದರು. ಅಲ್ಲಿ ಒಂದು ತಿಂಗಳ ಕಾಲ ನೆಲೆಸಿದ್ದ ಅರವಿಂದರು 1910 ಏಪ್ರಿಲ್ 1 ರಂದು ಅಲ್ಲಿಂದ ಹೊರಟು ಏಪ್ರಿಲ್ 4 ಕ್ಕೆ ಪಾಂಡಿಚೇರಿಗೆ ಬಂದು ತಲುಪಿದರು. ಅಲ್ಲಿಂದ ಮುಂದೆ ಶ್ರೀ ಅರವಿಂದರು ರಾಜಕೀಯದಿಂದ ಶಾಶ್ವತವಾಗಿ ದೂರ ಸರಿದರು. 1950 ಡಿಸೆಂಬರ್ 5 ರಂದು ತಾವು ದೇಹತ್ಯಾಗ ಮಾಡುವ ದಿನದ ವರೆವಿಗೂ ಪಾಂಡಿಚೇರಿಯನ್ನು ಬಿಟ್ಟು ಹೊರಬರಲಿಲ್ಲ.
ಸ್ನೇಹಿತರೆ, ಇದು ಮಹರ್ಷಿ ಅರವಿಂದರ ಸ್ವಾತಂತ್ರ್ಯ ಹೋರಾಟಗಾಥೆ. ಇಂದು ನಾವೆಲ್ಲಾ ಆಚರಿಸುತ್ತಿರುವ ಈ ಸ್ವಾತಂತ್ರ್ಯೋತ್ಸವದಂದೇ ಶ್ರೀ ಅರವಿಂದರ ಜನ್ಮದಿನವೂ ಆಗಿದ್ದು ಅವರು ಭರತ ಭೂಮಿಗೆ ಸಲ್ಲಿಸಿದ ಸೇವೆ, ಮಾಡಿದ ತ್ಯಾಗವನ್ನು ನೆನೆಯುತ್ತಾ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ........
ಜೈ ಹಿಂದ್....!

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) – 28

ತಂಜಾವೂರು (Tanjavor)
ತಮಿಳು ನಾಡಿನ ತಂಜಾವೂರು ಅಲ್ಲಿನ ಸುಪ್ರಸಿದ್ದ ಬೃಹದೀಶ್ವರ ದೇವಾಲಯದಿಂದ ಜಗತ್ಪ್ರಸಿದ್ದಿಯನ್ನು ಹೊಂದಿದೆ. ೨೧೬ ಅಡಿಗಳ ಎತ್ತರವಿರುವ ಬೃಅಹದೀಶ್ವರ ದೇವಾಲಯದ ಶಿಖರದ ನೆರಳು ದಿನದ ಯಾವುದೇ ಸಮಯದಲ್ಲಿ ನೆಲದ ಮೇಲೆ ಬೀಳುವುದಿಲ್ಲವೆನ್ನುವ್ದು ಆಶ್ಚರ್ಯವಾದರೂ ಸತ್ಯ. ದಕ್ಷಿಣ ಭಾರತದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿಗಳಿಗಾಗಿ ಪ್ರಾಚೀನ ಕಾಲದಿಂದಲೂ ತಂಜಾವೂರು ಹೆಸರುವಾಸಿಯಾದುದು. ಚೋಳರು, ಪಾಂಡ್ಯರ ಕಾಲದ ಅನೇಕ ದೇವಾಲಯಗಳು ತಂಜಾವೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿದ್ದು ಚೋಳರಾಜರು ಗಂಗೈಕೊಂಡ ಚೋಳಪುರಕ್ಕೆ ತಮ್ಮ ರಾಜಧಾನಿಯನ್ನು ಬದಲಿಸುವ ಮುನ್ನ ತಂಜಾವೂರು ಚೋಳರ ರಾಜಧಾನಿಯಾಗಿ ಮೆರೆದಿತ್ತು. ಇಂದಿಗೂ ತಂಜಾವೂರು ಪ್ರದೇಶವು “ತಮಿಳುನಾಡಿನ ಅಕ್ಕಿಯ ಪಾತ್ರೆ” ಎನ್ನುವ ಹಿರಿಮೆಯನ್ನು ಹೊಂದಿದೆ.
Bruhadishwara Temple, Tanjavor, Tamil Nadu

***


ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳ ತಪೋಭೂಮಿಯಾಗಿದ್ದ ಈ ಪ್ರದೇಶದಲ್ಲಿ ತಂಜಾನ ಎನ್ನುವ ಹೆಸರಿನ ಓರ್ವ ಅಸುರನಿದ್ದನು. ಅವನು ಅಲ್ಲಿದ್ದ ಋಷಿಮುನಿಗಳಿಗೆ ಸಾಕಷ್ಟು ಉಪಟಳಗಳಾನ್ನು ನೀಡುತ್ತಾ ಅವರ ತಪಸ್ಸು, ಸಿದ್ದಿಗಳಿಗೆ ಭಂಗ ತರುತ್ತಲಿದ್ದನು. ಹೀಗಿರಲು ಆ ಋಶಿ ಮುನಿವರರೆಲ್ಲರೂ ಸೇರಿ ಶ್ರೀ ವಿಷ್ಣುವಿರುವ ವೈಕುಂಠ ಸದನಕ್ಕೆ ಹೋಗಿ ಅಲ್ಲಿ ತಮ್ಮ ಕಷ್ಟ್ಗಳನ್ನು ಬಿನ್ನವಿಸಿಕೊಳ್ಳಲು ವಿಷ್ಣು ಅವರಿಗೆ ಅಭಯವನ್ನಿತ್ತನು. ಹಾಗೆ ಅಭಯವನ್ನಿತ್ತ ಶ್ರೀ ಹರಿಯು ತಾನು ನೀಲಮೇಘ ಪೆರುಮಾಳ ಎಂಬ ಹೆಸರಿನೊಡನೆ ಅವತರಿಸಿ ಆ ರಕ್ಕಸ ತಂಜಾನನ ವಧೆ ಮಾಡಿದನು. ದುಷ್ಟ ರಾಕ್ಷಸ ತಂಜಾನನು ನೆಲೆಸಿದ್ದ ಕಾರಣದಿಂದಾಗಿಯೇ ಮುಂದೆ ಈ ಪ್ರದೇಶಕ್ಕೆ ತಂಜಾವೂರು ಎನ್ನುವ ಹೆಸರು ಬಂದಿತು.

Thursday, August 07, 2014

ಜನಮಾನಸದ “ಚಾಚಾ ಚೌಧರಿ” - ಪ್ರಾಣ್ ಕುಮಾರ್ ಶರ್ಮಾ

ಖ್ಯಾತ ವ್ಯಂಗ್ಯಚಿತ್ರಕಾರ, ‘ಚಾಚಾ ಚೌಧರಿ’, ‘ರಾಮನ್’, ‘ಶ್ರೀಮತಿ’, ‘ಪಿಂಕಿ’ ಇವೇ ಮೊದಲಾದ  ಸದಾ ಕಾಲ ನೆನಪಿನಲ್ಲಿ ಉಳಿಯುವಂತಹಾ ಪಾತ್ರಗಳ ಸೃಷ್ಟಿಕರ್ತರಾಗಿದ್ದ ಪ್ರಾಣ್ ಕುಮಾರ್ ಶರ್ಮ ಇದೇ ಆಗಸ್ಟ್ ೦5 ರಂದು ದೆಹಲಿಯ ಗುರ್ಗಾಂವ್ ನಲ್ಲಿ ನಿಧನರಾಗಿದ್ದಾರೆ. ಈ ಸಮಯದಲ್ಲಿ ಪ್ರಾಣ್ ಎಂಬ ವ್ಯಂಗ್ಯಚಿತ್ರಕಾರನ ಬದುಕಿನ ಚಿತ್ರಣವನ್ನೊಮ್ಮೆ ಅವಲೋಕಿಸೋಣ......

ಬಾಲ್ಯ - ವೃತ್ತಿ ಬದುಕು
ಇಂದಿನ ಪಾಕಿಸ್ತಾನದಲ್ಲಿನ ಲಾಹೋರ್ ಬಳಿಯ ಕಸೂರ್ ಎಂಬ ಚಿಕ್ಕ ಗ್ರಾಮದಲ್ಲಿ 1938, ಆಗಸ್ಟ್ 15 ರಂದು ಪ್ರಾಣ್ ಕುಮಾರ್ ಶರ್ಮಾರವರ ಜನನವಾಯಿತು. 1947 ರ ಬಳಿಕ ಪ್ರಾಣ್ ರವರ ಕುಟುಂಬ ಗ್ವಾಲಿಯರ್ ನಗರಕ್ಕೆ ತನ್ನ ವಾಸವನ್ನು ಬದಲಾಯಿಸಿತು. ಪ್ರಾಣ್ ರವರು ಗ್ವಾಲಿಯರ್ ನ ಇವ್ನಿಂಗ್ ಕ್ಯಾಂಪ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಬಳಿಕ ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ನಾಲ್ಕು ವರ್ಷಗಳ ಫೈನ್ ಆರ್ಟ್ಸ್(ಚಿತ್ರಕಲಾ ತರಬೇತಿ) ಪದವಿ ಶಿಕ್ಷಣವನ್ನು ಪಡೆದುಕೊಂಡರು.
ತಮ್ಮ ವೃತ್ತಿ ಬದುಕಿನ ಪ್ರಾರಂಭದಲ್ಲಿ ಕೆಲಕಾಲ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡಿದ್ದ ಪ್ರಾಣ್ 1960 ರಲ್ಲಿ ದೆಹಲಿ ಮೂಲದ ‘ಮಿಲಾಪ್’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅಲ್ಲಿ ವರು ‘ಬಾಬು’ ಎನ್ನುವ ಪಾತ್ರವನ್ನು ಸೃಷ್ಟಿಸಿ ವ್ಯಂಗ್ಯಚಿತ್ರಗಳನ್ನು ರಚಿಸಿದ್ದರು. 1969 ರಲ್ಲಿ ಹಿಂದಿ ನಿಯತಕಾಲಿಕೆ ‘ಲಾಟ್ ಪಾಟ್’ ಗಾಗಿ ಅವರು ರಚಿಸಿದ ‘ಚಾಚಾ ಚೌಧರಿ’ ವ್ಯಂಗ್ಯಚಿತ್ರ ಪಾತ್ರವು ಅವರಿಗೆ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ತಂದುಕೊಟ್ಟಿತು. ಪ್ರಾಣ್ ಚಾಚಾ ಚೌಧರಿಯ ಪಾತ್ರವನ್ನು ಸೃಷ್ಟಿಸಿದ ವೇಳೆಯಲ್ಲಿ ದೇಶಾದ್ಯಂತ ಜನರು ಸೂಪರ್ ಮ್ಯಾನ್, ಪ್ಯಾಂಟಮ್ ನಂತಹಾ ವ್ಯಂಗ್ಯಚಿತ್ರ ಸರಣಿಯನ್ನು ಮೆಚ್ಚಿಕೊಂಡಿದ್ದರು. ಅವೆಲ್ಲವೂ ವಿದೇಶೀ ಮೂಲದ ವ್ಯಂಗ್ಯಚಿತ್ರಗಳಾಗಿದ್ದವು. ಆದರೆ ಪ್ರಾಣ್ ರವರ ‘ಚಾಚಾ ಚೌಧರಿ’ಪ್ರಾರಂಭವಾದ ಅತ್ಯಂತ ಶೀಘ್ರದಲ್ಲಿ ದೇಸ ವಿದೇಶಗಳ ಜನರು ಮೆಚ್ಚುವಂತಾಯಿತು. ಪ್ರಾಣ್ ರವರೇ ತಮ್ಮ ಒಂದು ಸಂದರ್ಶನದಲ್ಲಿ ಚಾಚಾ ಚೌಧರಿ ಪಾತ್ರದ ಕುರಿತು ಈ ರೀತಿಯಾಗಿ ಅಭಿಪ್ರಾಯ ಪಟ್ಟಿದ್ದಾರೆ - “Each family has its own wise old man. He solved his problems with common sense, but with a touch of humor. Humor is the basis of my cartoon.” ‘ರಾಮನ್’, ‘ಪಿಂಕಿ’, ‘ಬಿಲ್ಲೂ’, ‘ಶ್ರೀಮತಿ’ ಇವೇ ಮೊದಲಾದವು ಪ್ರಾಣ್ ಕುಮಾರ್ ಶರ್ಮಾರವರ ಇತರೆ ವ್ಯಂಗ್ಯಚಿತ್ರ ಪಾತ್ರಗಳಾಗಿದ್ದವು.
ಪ್ರಾಣ್ ರವರ ವ್ಯಂಗ್ಯಚಿತ್ರಗಳಾವುವೂ ವಿದೇಶೀ ಪಾತ್ರಗಳಿಂದ, ಕಥೆಗಳಿಂದ ಸ್ಪೂರ್ತಿಗೊಂಡವುಗಳಾಗಿರಲಿಲ್ಲ. ಅವೆಲ್ಲವೂ ನಮ್ಮಂತೆಯೇ ಸಾಮಾನ್ಯ ಜನರ ನಡುವೆ ಇದ್ದವುಗಳಾಗಿದ್ದು ಅವರು ರಚಿಸಿದ್ದ ಶ್ರೀಮತಿ ಪಾತ್ರವು ಇದಕ್ಕೊಂದು ನಿದರ್ಶನವಾಗಬಲ್ಲದು. ನಗರವಾಸಿ ಮದ್ಯಮ ವರ್ಗದ ಸಂಸಾರಸ್ಥ ಗೃಹಿಣಿಯ ಪಾತ್ರ - ಶ್ರೀಮತಿ.  ಈ ಪಾತ್ರದ ಮುಖೇನ ಪ್ರಾಣ್ ರವರು ಮದ್ಯಮ ವರ್ಗದ ಸಂಸಾರದ ಸವಾಲುಗಳ ಕುರಿತು ಬೆಳಕು ಬೀರುತ್ತಿದ್ದರು. ಅವರ ಬಿಲ್ಲೂ, ರಾಮನ್ ರಂತಹವರು ಇಂದಿಗೂ ನಮ್ಮ ನಡುವೆ ಇರುವುದೇ ಅವರ ವ್ಯಂಗ್ಯಚಿತ್ರಗಳ ಶ್ರೇಷ್ಟತೆಗೂ, ಪ್ರಸ್ತುತತೆಗೂ ಸಾಕ್ಷಿಯಾಗಿದೆ.

Pran Kumar Sharma ( 15 August 1938 - 5 August 2014),

ಪ್ರಾಣ್ ಬಗೆಗಿನ ಕೆಲ ವಿಶೇಷ ಮಾಹಿತಿಗಳು -
ಪ್ರಾಣ್ ತಮ್ಮ ವೃತ್ತಿ ಬದುಕಿನುದ್ದಕ್ಕೂ ವ್ಯಂಗ್ಯಚಿತ್ರಗಳ ಸರಣಿಯನ್ನೇ ರಚಿಸಿದ್ದಾರೆ. ಇದುವರೆವಿಗೂ ಅವರ 400 ಸಂಖ್ಯೆಯ ವ್ಯಂಗ್ಯಚಿತ್ರಗಳ ಪುಸ್ತಕಗಳು ಬಂದಿದ್ದರೆ ಎರಡು ಲಕ್ಷಕ್ಕೂ ಹೆಚ್ಚಿನ ಚಿತ್ರಗಳನ್ನು ರಚಿಸಿದ್ದಾರೆ. ದೇಶದಲ್ಲಿನ ನಾನಾ ಭಾಷೆಗಳ ೩೦ ಕ್ಕೂ ಹೆಚ್ಚಿನ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳೂ ಇವರ ವ್ಯಂಗ್ಯಚಿತ್ರಗಳನ್ನು ತಮ್ಮ ಪತ್ರಿಕೆ/ನಿಯತಕಾಲಿಕಗಳಲ್ಲಿ ಪ್ರಕಟಿಸಿವೆ. (ಕನ್ನಡದಲ್ಲಿ ‘ಪ್ರಜಾವಾಣಿ’, ‘ಮಯೂರ’, ಸುಧಾ’ ಸೇರಿದಂತೆ ನಾನಾ ವೃತ್ತಪತ್ರಿಕೆಗಳಲ್ಲಿ ಇವರ ವ್ಯಂಗ್ಯಚಿತ್ರ ಸರಣಿಯು ಪ್ರಕಟಗೊಂಡಿದೆ. )
ಅಮೇರಿಕಾದಲ್ಲಿರುವ ಅಂತರಾಷ್ಟ್ರೀಯ ವ್ಯಂಗ್ಯಚಿತ್ರಗಳ ಸಂಗ್ರಹಾಗಾರದಲ್ಲಿ ಪ್ರಾಣ್ ರವರ ‘ಚಾಚಾ ಚೌಧರಿ’ಸರಣಿಯ ಎರಡು ಕಂತುಗಳನ್ನು ಪ್ರದರ್ಶನಕ್ಕಾಗಿ ಇಡಲಾಗಿದೆ. ‘ಚಾಚಾ ಚೌಧರಿ’ ಪ್ರಾರಂಭಾವಾದ ಹಿಂದಿಯ ‘ಲಾಟ್ ಪಾಟ್’ನಿಯತಕಾಲಿಕವು ಅಂದಿನಿಂದ ಇಂದಿನವರೆಗೂ ತನ್ನ ಪ್ರಕಟಣೆಯನ್ನು ಕಾಣುತ್ತಿದ್ದು ಇಂದು ಅದರ ಹಿಂದಿ ಆವೃತ್ತಿ 175000 ಪ್ರತಿಗಳ ಪ್ರಸಾರ ಕಾಣುತ್ತಿದ್ದರೆ ಆಂಗ್ಲ ಭಾಷಾ ಆವೃತ್ತಿಯು 225000 ಕ್ಕೂ ಹೆಚ್ಚಿನ ಮುದ್ರಣದೊಡನೆ ಪ್ರಸರಣಗೊಳ್ಳುತ್ತಿದೆ.
ಶ್ರೀಮತಿ ಪಾತ್ರವು ಪ್ರಾಣ್ ರವರ ಪಾತ್ರಗಳಾ ಸೃಷ್ಟಿಯಲ್ಲಿ ಅತ್ಯಂತ ಹಳೆಯ ಪಾರ್ತವಾಗಿದ್ದು ೧೯೬೮ ರಲ್ಲಿ ಈ ಪಾತ್ರವನ್ನು ಅವರು ಪ್ರಥಮ ಬಾರಿಗೆ ರಚಿಸಿದ್ದರು. ಪ್ರಾಣ್ ರವರ ಎಲ್ಲಾ ಪಾತ್ರಗಳೂ ಜನಸಾಮಾನ್ಯರ ಜೀವನದ ನಡುವಿನವುಗಳೇ ಆಗಿದ್ದು ಚಾಚಾ ಚೌಧರಿ ಕುಟುಂಬದ ಹಿರಿಯ ಸದಸ್ಯನಾದರೆ ಪಿಂಕಿ ಯುವ ತರುಣಿಯಾಗಿದ್ದಾಳೆ. ರಾಮನ್ ವೃತ್ತಿ ನಿರತರ, ನೌಕರ ವರ್ಗದ ಪ್ರತಿನಿದ್ದರೆ, ಶ್ರೀಮತಿ ಸಾಮಾನ್ಯ ವರ್ಗದ ಗೃಹಿಣಿಯಾಗಿರುವಳು.
ಪ್ರಾಣ್ ರವರ ಪಾತ್ರವಾದ ಬಿಲ್ಲೂವಿನ ಕಣ್ಣುಗಳನ್ನು ಇದುವರೆವಿಗೂ ಯಾರೂ ನೋಡಿಲ್ಲ! ಬಿಲ್ಲೂ ತನ್ನ ಕಣ್ಣುಗಳನ್ನು ಯಾವಾಗಲೂ ತನ್ನ ಕೂದಲುಗಳಿಂದ ಮುಚ್ಚಿಕೊಂಡಿರುತ್ತಾನೆ. ಪ್ರಾಣ್ ರವರ ಸಾಬೂ ತಾನು ಮಾಡುವ ಪ್ರತಿಯೊಂದು ಊಟದ ವೇಳೆಯಲ್ಲಿ ಒಟ್ಟು 108 ಚಪಾತಿ, 20 ಲೀಟರ್ ಲಸ್ಸಿ, 12 ಕೆಜಿ ಹಲ್ವಾವನ್ನು ಸೇವಿಸುತ್ತಾನೆ! ಚಾಚಾ ಚೌಧರಿಯ ಪ್ರೀತಿಯ ನಾಯಿ ರಾಕೆಟ್ - ಪ್ರಪಂಚದಲ್ಲಿನ ಏಕೈಕ ಸಸ್ಯಾಹಾರಿ ನಾಯಿ ಇದಾಗಿದೆ!

ಗೌರವ - ಪುರಸ್ಕಾರಗಳು
ಪ್ರಾಣ್ ರವರು ಗಳಿಸಿದ್ದ ಅಪಾರ ಜನಮೆಚ್ಚುಗೆ, ಅವರವೃತ್ತಿ ಬದುಕಿನಲ್ಲಿ ಅವರೇರಿದ್ದ ಸಾಧನೆಯ ಶಿಖರ ಇವು ಅವರಿಗೆ ಅನೇಕ ಬಗೆಯ ಗೌರವ ಪ್ರಶಸ್ತಿಗಳು ಲಭಿಸುವಂತೆ ಮಾಡಿದವು. 1983 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು “ರಾಮನ್ - ಹಮ್ ಏಕ್ ಹೈ” ಎನ್ನುವ ಪ್ರಾಣ್ ರವರ ವ್ಯಂಗ್ಯಚಿತ್ರ ಪುಸ್ತಿಕೆಯೊಂದನ್ನು ಬಿಡುಗಡೆಗೊಳಿಸಿದರು. ಇದರಿಂದಾಗಿ ಪ್ರಾಣ್ ರವರ ವ್ಯಕ್ತಿತ್ವಕ್ಕೆ ಇನ್ನೊಂದು ಗರಿ ಮೂಡಿದಂತಾಯಿತು. ಪ್ರಾಣ್ ವ್ಯಂಗ್ಯಚಿತ್ರಗಳ ಪ್ರಖ್ಯಾತಿಯಿಂದಾಗಿ ಅವರ ಹೆಸರು 1995 ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಯಿತು. ಇದಲ್ಲದೆ ಪ್ರಾಣ್ ಕುಮಾರ್ ಶರ್ಮಾರವರು 2001 ರಲ್ಲಿ ಬಾರತೀಯ ವ್ಯಂಗ್ಯಚಿತ್ರಕಾರರ ಶಿಕ್ಷಣ ಸಂಸ್ಥೆಯವರು ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು.

ಇಲ್ಲಿ ನಿಮಗಾಗಿ ಪ್ರಾಣ್ ರವರ ಸೃಷ್ಟಿಯಾದ ರಾಮನ್ ನ ಒಂದು ಚಿತ್ರಕಥೆ ಇದೆ, ನೋಡಿ..... 
Raman

Monday, August 04, 2014

“ಸಮರಸವೇ ಜೀವನ” ಎಂದ ಸಮನ್ವಯದ ಸಾಹಿತಿ- ವಿ.ಕೃ. ಗೋಕಾಕ್

ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991 ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಗೋಕಾಕರು ಹುಟ್ಟಿ ಇದೇ ಆಗಸ್ಟ್ 9, 2014 ಕ್ಕೆ ಸರಿಯಾಗಿ 105 ವರ್ಷಗಳಾಗುತ್ತವೆ. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಉದ್ದಾರಕ್ಕಾಗಿ ಪಣತೊಟ್ಟು ಬಾಳಿದ ಆ ದಿವ್ಯ ಚೇತನವನ್ನು ನೆನೆಯುತ್ತಾ ಅವರ ಬದುಕಿನ ಪಯಣವನ್ನೊಮ್ಮೆ ಅವಲೋಕಿಸೋಣ....


ವಿನಾಯಕ ಕೃಷ್ಣರಾವ್ ಗೋಕಾಕರು  ಅಗಸ್ಟ್.9,1909 ರಂದು ಅವಿಭಜಿತ ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು. ವಿನಾಯಕರ ವಿದ್ಯಾಭ್ಯಾಸ ಸವಣೂರು ಹಾಗೂ  ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡ ದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸಂಪರ್ಕ ಒದಗಿ ಬಂದಿತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ  ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ``ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದ ರು.’’ ಎಂದು ಗೋಕಾಕರೇ ಒಮ್ಮೆ ಹೇಳಿಕೊಂಡಿದ್ದರು.
ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಗೋಕಾಕರು, ಮುಂದೆ  ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು. ಗೋಕಾಕರ ಪಾಠದ ಶೈಲಿ ಅದೆಷ್ಟು ಅದ್ಭುತವಾಗಿದ್ದಿತೆಂದರೆ ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರು.  ಕೆಲ ಸಮಯದ ಬಳಿಕ  ಗೋಕಾಕರನ್ನು ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿ, . ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ವಿನಾಯಕ ಕೃಷ್ಣ ಗೋಕಾಕ ಆಗಿದ್ದರು.
ಇಂಗ್ಲೆಂಡಿನಿಂದ ಹಿಂತಿರುಗಿದ ಬಳಿಕದಲ್ಲಿ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲರ ಹುದ್ದೆ ಯನ್ನಲಂಕರಿಸಿದ ಗೋಕಾಕರು ಮುಂದೆ ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್ ದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು  ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು.

Vinayaka Krishnarao Gokak (09-08-1909 - 28-04-1992)


ಸಾಹಿತ್ಯ ಸೇವೆ
ನವೋದಯದ ನಂತರ ಬದಲಾಗಬೇಕಾಗಿದ್ದ ಕಾವ್ಯಕ್ಕೆ ಅಗತ್ಯವಾದ ಛಂದೋರೂಪವನ್ನು ‘ನವ್ಯಕಾವ್ಯ’ಪರಿಕಲ್ಪನೆಯನ್ನೂ ಹಾಗೂ ನವ್ಯತೆಯ ಕುರಿತ ಚಿಂತನೆಗಳನ್ನು ನೀಡಿದ ಗೋಕಾಕರ ಸಾಹಿತ್ಯ ಸಾಧನೆ ನಿಜಕ್ಕೂ ಶ್ಲಾಘನೀಯವಾದುದು. ವಿನಾಯಕ ಕೃಷ್ಣ ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು. ಮೊದಲ ಪ್ರಕಟಿತ ಕೃತಿ “ಕಲೋಪಾಸಕರು”. ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ “ಸಮುದ್ರ ಗೀತೆಗಳು” ಮತ್ತು “ಸಮುದ್ರದಾಚೆಯಿಂದ”- ಇವು ಮಹತ್ವದ ಕೃತಿಗಳಾಗಿವೆ. . ಇದು ಗೋಕಾಕರ ಕಾವ್ಯ ಮಾರ್ಗದಲ್ಲಿ ಮೊದಲ ವಿಶಿಷ್ಟ ಮೈಲಿಗಲ್ಲು. ಸಾಹಿತ್ಯದಲ್ಲಿಯೇ ಸಮುದ್ರವನ್ನು ಕುರಿತ ಅನುಭವ ಇಷ್ಟು ಸೊಗಸಾಗಿ, ಪ್ರಮಾಣಿಕವಾಗಿ ಬಂದದ್ದು ಇದೇ ಮೊದಲು. ಈ ವಸ್ತು ವೈವಿದ್ಯ ಅದನ್ನು ಹಿಡಿದಿರಿಸಿದ ನೂತನ ಛಂದೋ ವೈವಿದ್ಯ ನಿಜವಾಗಿಯೂ ಹೊಸ ಮಾರ್ಗ ನಿರ್ಮಾಣದ ಸಂಕೇತದಂತಿದೆ.
ಸಾಹಿತ್ಯವನ್ನು ಒಂದು ಕಾಯಕದಂತೆ ಅನವರತ - ಅವಿರತವಾಗಿ ನಡೆಸಿಕೊಂಡು ಬಂದ ಗೋಕಾಕರ ಸಾಹಿತ್ಯ ನಿರ್ಮಿತಿಯ ಹರಹು ವಿಶಾಲವಾದದ್ದು. ಅವರ ಸಾಹಿತ್ಯದ ಆಳ-ಅಗಲ ಶ್ರದ್ಧೆಯಿಂದ ಮನವಿಟ್ಟು ಕೃತಿಗಳನ್ನು ಓದಿದವರಿಗಷ್ಟೇ ನಿಲುಕುವಂತಹುದು. ಗೋಕಾಕರು ತಾವು ಹಿಂದಿನ ಚಂಪೂಕಾವ್ಯದ ತಂತ್ರವನ್ನು ಹೊಸಗನ್ನಡ ಕವಿತೆಗೆ ಅಳವಡಿಸಲು ಪ್ರಯತ್ನಿಸಿದವರು. 1945 ರಲ್ಲಿ ಪ್ರಕಟವಾದ‘ ’’ತ್ರಿವಿಕ್ರಮನ ಆಕಾಶಗಂಗೆ” ಹಾಗೂ 1965 ರಲ್ಲಿ ಪ್ರಕಟವಾದ “ಇಂದಲ್ಲ ನಾಳೆ”  ಕೃತಿಗಳು ಹೊಸ ಬಗೆಯ ಚಂಪೂಕಾವ್ಯಗಳೆಂದೇ ಗುರುತಿಸಲ್ಪಟ್ಟಿವೆ. ಆಧುನಿಕ ಕಾವ್ಯಕ್ಕೆ ಶೈಶವಾವಸ್ಥೆಯಲ್ಲಿ ಚೈತನ್ಯ ನೀಡಿ ಮುನ್ನಡೆಸಿ, ನಮ್ಮ ಸಂಸ್ಕೃತಿಯೊಳಗೆ ಬೀಸಿದ ಆಧುನಿಕ ವಾತಾವರಣವನ್ನು ಮನಮುಟ್ಟುವಂತೆ ತಮ್ಮ ಕೃತಿಗಳಲ್ಲಿ ವರ್ಣಿಸಿದ ಗೋಕಾಕರ ಸೃಜನಶೀಲತೆ ಎಂಥವರನ್ನೂ ಬೆರಗುಗೊಳಿಸುವಂತಹುದು.
ಗೋಕಾಕರು ನಾಟಕ, ಪ್ರಬಂಧ, ಪ್ರವಾಸ ಕಥನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ "ಸಮರಸವೇ ಜೀವನ" ಗೋಕಾಕರದ್ದೇ ಕೃತಿ. ಬಹುಷಃ ಭಾರತದ ಬೇರಾವ ಭಾಷೆಗಳಲ್ಲಿ ಇಷ್ಟು ಬೃಹತ್ ಗಾತ್ರದ ಕಾದಂಬರಿ ಇರಲಿಕ್ಕಿಲ್ಲವೇನೋ?! ಕಾದಂಬರಿ ತನ್ನ ಗಾತ್ರದಲ್ಲಿ ಮಾತ್ರವಲ್ಲ ತನ್ನ ವಸ್ತು ವಿಶೇಷಗಳಿಂದಲೂ ಸಾಹಿತ್ಯಾಸಕ್ತರ ಹಾಗೂ ವಿಮರ್ಶಕ ವರ್ಗದವರ ಮನ ಗೆಲ್ಲುವಂತಿರುವುದು ಗಮನಾರ್ಹ ಸಂಗತಿ. "ಜನನಾಯಕ" ಗೋಕಾಕರ ಸುಪ್ರಸಿದ್ಧ ನಾಟಕವಾದರೆ "ಭಾರತ ಸಿಂಧು ರಶ್ಮಿ" ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು. ವಿಶ್ವಾಮಿತ್ರ ಈ ಕಾವ್ಯದ ನಾಯಕ. ಇದು ಆಧುನಿಕ ಕಾಲಘಟ್ಟದಲ್ಲಿ ಕನ್ನಡದಲ್ಲಿ ಬಂದ ಅತ್ಯಂತ ಅಪೂರ್ವ ಮಹಾಕಾವ್ಯ ಕೃತಿಯಾಗಿದೆ.
ಇದಲ್ಲದೆ ಗೋಕಾಕರು ಒಟ್ಟು ಆರು ಕವನ ಸಂಗ್ರಹಗಳು, ಮೂರು ನಾಟಕಗಳು, ನಾಲ್ಕು ವಿಮರ್ಶಾ ಸಂಕಲನಗಳು, ಎರಡು ಪ್ರವಾಸ ಕಥನಗಳನ್ನು ರಚಿಸಿದ್ದಾರೆ. “ಊರ್ಣನಾಭ”, “ಉಗಮ”, “ಬಾಳ ದೇಗುಲದಲ್ಲಿ” “ದ್ಯಾವಾ ಪೃಥಿವೀ” (ಖಂಡ ಕಾವ್ಯ), “ಅಭ್ಯುದಯ” ಗಳು ಕವನ ಸಂಗ್ರಹಗಳಾದರೆ, “ಯುಗಾಂತರ”, ವಿಮರ್ಶಕ ವೈದ್ಯ” ನಾಟಕಗಳು, “ಇಂದಿನ ಕನ್ನಡ ಕಾವ್ಯದ ಗೊತ್ತುಗುರಿ” ಯು ಗೋಕಾಕರ ಮಹತ್ವದ ವಿಮರ್ಶಾ ಕೃತಿಯಾಗಿದೆ.

ಪ್ರಶಸ್ತಿ – ಗೌರವಗಳು
ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಶೈಲಿಯಲ್ಲಿ ಹಲವು ಉಪಯುಕ್ತ ಕೊಡುಗೆ ನೀಡಿದ ಗೋಕಾಕರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, , ಪದ್ಮಶ್ರೀ ಪುರಸ್ಕಾರ (1961), ಭಾರತೀಯ ವಿದ್ಯಾಭವನದ ರಾಜಾಜಿ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. 1967 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು 1979 ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. 1958 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿಯನ್ನೂ ಗೋಕಾಕರು ಅಲಂಕರಿಸಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ (1983) ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಗೋಕಾಕರು ಅಂತಹಾ ಸ್ಥಾನಗಳನ್ನಲಂಕರಿಸಿದ್ದ ಪ್ರಥಮ ಕನ್ನಡಿಗರಾಗಿದ್ದರು. ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಜ್ಞಾನಪೀಠ ಪ್ರಶಸ್ತಿ (1991), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ 1960 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

ಗೋಕಾಕ್ ವರದಿ
ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ 1980 ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ "ಗೋಕಾಕ್ ಚಳವಳಿ" ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ. ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ "ಗೋಕಾಕ್ ವರದಿ"ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ.

ನಿಧನ
ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಕನ್ನಡದ ಕಟ್ಟಾಳು ಗೋಕಾಕರು 1992 ರ ಎಪ್ರಿಲ್.28 ರಂದು ಬೆಳಗಿನ ಜಾವ ಮುಂಬಯಿಯಲ್ಲಿ ಕೀರ್ತಿಶೇಷರಾದರು.