Friday, February 06, 2015

ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆಗೆ 10 ವರ್ಷ!

ಮೆಣಸಿನಹಾಡ್ಯದಲ್ಲಿ ಎನ್‌ಕೌಂಟರ್‌ ನಕ್ಸಲ್‌ ಬೇರಿಗೆ ಬಿದ್ದ ಮೊದಲ ಪೆಟ್ಟು!
ಸಾಕೇತ್‌ ರಾಜನ್‌! ಕರ್ನಾಟಕದ ನಕ್ಸಲ್‌ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟ ನಾಯಕ.ಹತ್ತುವರ್ಷಗಳ ಹಿಂದೆ 2005 ಫೆ.6ರ ಜಾವ ಚಿಕ್ಕಮಗಳೂರಿನ ಕೊಪ್ಪದ ಮೆಣಸಿನಹಾಡ್ಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗುವುದರೊಂದಿಗೆ ರಾಜ್ಯದಲ್ಲಿ ನಕ್ಸಲ್‌-ಪೊಲೀಸ್‌ ಮುಖಾಮುಖೀಯ ನೇರ ಸಂಘರ್ಷಕ್ಕೆ  ನಾಂದಿಯಾಗಿತ್ತು.ಕರ್ನಾಟಕದಲ್ಲಿ ನಕ್ಸಲ್‌ ಚಳವಳಿಯನ್ನು ಗಟ್ಟಿಗೊಳಿಸಿದ್ದಲ್ಲಿ ಸಾಕೇತ್‌ ರಾಜನ್‌ ಪಾಲು ದೊಡ್ಡದಿದೆ. ಆದರೆ ಸಾಕೇತ್‌ ರಾಜನ್‌ ಹತ್ಯೆ, ಶಸ್ತ್ರಸಜ್ಜಿತ ನಕ್ಸಲ್‌ ಹೋರಾಟಕ್ಕೆ ಭಾರೀ ಪೆಟ್ಟು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾಕೇತ್‌ ರಾಜನ್‌ ಬಗ್ಗೆ, ಅಂದು ನಡೆದಿದ್ದೇನು? ಎಂಬ ಕುರಿತ ವಿವರಗಳು ಇಲ್ಲಿವೆ.

ಸಾಕೇತ್‌ ರಾಜನ್‌ ಯಾರು?
ಸೇನೆಯಲ್ಲಿ ಮೇಜರ್‌ ಆಗಿದ್ದ ಎಸ್‌.ಕೆ.ಸುಂದರ್‌ರಾಜನ್‌ ಅವರ ಪುತ್ರ. ಶ್ರೀಮಂತ ಅಯ್ಯಂಗಾರ್‌ ಕುಟುಂಬದಲ್ಲಿ ಜನಿಸಿದ ಸಾಕೇತ್‌ ರಾಜನ್‌ 1980ರ ವೇಳೆಗೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಪದವಿ ಪೂರೈಸಿದ್ದರು. ಬಳಿಕ ದೆಹಲಿಯ ಜವಾಹರಲಾಲ್‌ ವಿವಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮಾಸ್‌ಕಮ್ಯುನಿಕೇಶನ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೈಸೂರಿನಲ್ಲಿದ್ದಾಗಲೇ ಇಂಗ್ಲಿಷ್‌ನಲ್ಲಿ ಅಪೂರ್ವ ಪಾಂಡಿತ್ಯ ಮತ್ತು ವೈಚಾರಿಕತೆ ಗಳಿಸಿದ್ದರು. ಆ ವೇಳೆಗೆ ಅವರು ಫ್ರಾನ್ಸ್‌ ಫ್ಯಾನನ್‌ ಅ ವರ Wretched of the Earth (ಭೂಮಿಮೇಲಿನ ತಿರಸ್ಕೃತರು) ಕೃತಿ ಓದಿಕೊಂಡಿದ್ದು, ಅವರ ಮೇಲೆ ವ್ಯಾಪಕ ಪ್ರಭಾವ ಬೀರಿತ್ತು. ಓದಿನಲ್ಲಿ ಮುಂದಿದ್ದ ಗೆಳೆಯರ ಪಾಲಿನ "ಸಾಕಿ' ನಾಲ್ಕು ಚಿನ್ನದ ಪದವಿ ಪಡೆದಿದ್ದರು. ಆದರೆ ಅಂದಿನ ವಿವಿ ಘಟಿಕೋತ್ಸವದಲ್ಲಿ ಕೇಂದ್ರ ಶಿಕ್ಷಣ ಸಚಿವ ವಿ.ಸಿ. ಶುಕ್ಲಾ ರವರಿಂದ ಪದವಿ ಪತ್ರ ಸ್ವೀಕರಿಸಬೇಕಿದ್ದು, ಅದನ್ನು ಸ್ವೀಕರಿಸಿದೇ ಧಿಕ್ಕಾರ ಕೂಗಿ ವೇದಿಕೆಯಿಂದ ಹೊರನಡೆದಿದ್ದರು. (ಸಾಕೇತ್‌ ರಾಜನ್‌ ಪತ್ರಿಕೋದ್ಯಮದಲ್ಲಿ ಮೂರು ಸ್ನಾತಕೋತ್ತರ ಪದವಿ ಪಡೆದಿದ್ದರು. ದೆಹಲಿ ಐಐಎಮ್‌ಸಿ ಹೊರತಾಗಿ ಮೈಸೂರು, ಬೆಂಗಳೂರಿನಲ್ಲಿ ಪದವಿ ಪಡೆದಿದ್ದರು.) ಎಡಪಂಥೀಯ ವಿಚಾರ ಧಾರೆಗಳಿಂದ ಪ್ರೇರೇಪಿತರಾಗಿದ್ದ ಸಾಕೇತ್‌, ಅದಾಗಲೇ ಪೀಪಲ್ಸ್‌ ವಾರ್‌ ಗ್ರೂಪ್‌ ಸಂಘಟನೆಗೆ ಪರಿಚಯವಾಗಿದ್ದರು.ಅಂತಹದೊಂದು ಪಡೆಯನ್ನು ತಾವೂ ಕಟ್ಟಬೇಕೆಂದು ಕನಸು ಕಾಣುತ್ತಾ 1982 ರಲ್ಲಿ ಮೈಸೂರಿಗೆ ಬಂದಿದ್ದರು.

ನಕ್ಸಲ್‌ ಚಳವಳಿಯತ್ತ..
ಅದಾಗಲೇ ಆಂಧ್ರಪ್ರದೇಶದಲ್ಲಿ ಮಾರ್ಕ್ಸಿಸ್ಟ್‌-ಲೆನಿನಿಸಮ್‌-ಮಾವೋ ಪ್ರೇರಿತ ಚಳವಳಿಗಳು, ವ್ಯವಸ್ಥೆಯ ವಿರುದ್ಧ ಹೋರಾಟಗಳು ತೀವ್ರಗೊಂಡಿದ್ದವು. ಇದೇ ಸಂದರ್ಭ ಸಾಕೇತ್‌ 1983ರಲ್ಲಿ ಪೂರ್ಣ ಪ್ರಮಾಣದಲ್ಲಿ ನಕ್ಸಲ್‌ ಚಳವಳಿಗೆ ಧುಮುಕಿದರು. ಆರಂಭದಲ್ಲಿ ರಾಜ್ಯದ ಕಮ್ಯುನಿಸ್ಟ್‌ ಕ್ರಾಂತಿಕಾರಿಗಳ ವಿದ್ಯಾರ್ಥಿ ಸಂಘಟನಕಾರರಾಗಿ ಕೆಲಸಮಾಡಿದರು.ಬಳಿಕ ಸಾತನೂರಿನಲ್ಲಿ ಕಟ್ಟುತ್ತಿದ್ದ ಜಪಾನ್‌ ಇಂಡಸ್ಟ್ರಿಯಲ್‌ ಟೌನ್‌ಶಿಪ್‌, ಕುದ್ರೆಮುಖ ಅದಿರು ಕಂಪನಿಯಿಂದಾಗುವ ಹಾನಿ ಬಗ್ಗೆ ಸಕ್ರಿಯವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಬಳಿಕ ಹಂತ ಹಂತವಾಗಿ ನಕ್ಸಲ್‌ ಸಂಘಟನೆಯ ಹುದ್ದೆಯಲ್ಲಿ ಮೇಲೇರುತ್ತಾ ಹೋದರು. 2000ದಲ್ಲಿ ರಾಜ್ಯ ಕಾರ್ಯದರ್ಶಿಯಾಗಿದ್ದರು. ಇದರೊಂದಿಗೆ ಹಲವು ಹೋರಾಟಗಳಿಗೆ ನಿರ್ದೇಶನ ನೀಡಿದ್ದರು.

ಶಸ್ತ್ರ ಸಜ್ಜಿತ ಹೋರಾಟಕ್ಕೆ
ಪರಿಸರ ಸಂಕ್ಷಣ ಚಳವಳಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಯೋಜಿಸಿದ್ದ ಸಾಕೇತ್‌ ರಾಜನ್‌ ತಮ್ಮ ಹೋರಾಟವನ್ನು ಪ್ರತಿಭಟನೆಯಾಚೆಗೂ ವಿಸ್ತರಿಸಲು ಯೋಜಿಸಿದ್ದರು. ಪರಿಣಾಮ ಮಲೆನಾಡು ವಲಯವನ್ನು ಮೂಲವಾಗಿಟ್ಟುಕೊಂಡು ಗೆರಿಲ್ಲಾ ಪಡೆಯೊಂದನ್ನು ರೂಪಿಸಿ ಹೋರಾಟ ತೀವ್ರಗೊಳಿಸುವುದು ಅವರ ಉದ್ದೇಶವಾಗಿತ್ತು. "ಪೆನ್‌ ಆ್ಯಂಡ್‌ ಗನ್‌' ಒಟ್ಟಿಗೆ ಸಾಗಬೇಕು ಎಂಬ ಅವರ ಆಲೋಚನೆಯಾಗಿತ್ತು. ಇದರೊಂದಿಗೆ ಆಂಧ್ರದಲ್ಲಿ ನಕ್ಸಲ್‌ ಪರ ಬರಹ-ಪತ್ರಿಕೆಯಲ್ಲಿ ಸಕ್ರಿಯವಾಗಿದ್ದ ಪತ್ರಕರ್ತೆ ಪತ್ನಿ ರಾಜೇಶ್ವರಿ ಅವರನ್ನುಪೊಲೀಸರು ಗುಂಡಿಟ್ಟು ಕೊಂದ ಘಟನೆ ನಿಸ್ತೇಜರನ್ನಾಗಿಸಿತ್ತು.  ಆ ನಂತರದಲ್ಲಿ ಸಾಕೇತ್‌ ಆಂಧ್ರದ ತೀವ್ರವಾದಿ ಗುಂಪುಗಳೊಂದಿಗೆ ಸಕ್ರಿಯವಾಗಿ ಸೇರಿ ಬಂದೂಕು ಕೈಗೆತ್ತಿಕೊಂಡಿದ್ದು, ಮಲೆನಾಡು ಅರಣ್ಯ ಪ್ರವೇಶ ಮಾಡಿದ್ದರು.

ಮಲೆನಾಡಲ್ಲಿ ಗುಂಡಿನ ಸದ್ದು
 2003 ನವೆಂಬರ್‌ನಲ್ಲಿ ಉಡುಪಿಯ ಈದು ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಮೃತಪಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಕ್ಸಲರು ಶೃಂಗೇರಿಯ ನೆಮ್ಮೂರಿನ ಅರಣ್ಯ ಇಲಾಖೆ ಅತಿಥಿಗೃಹ ಧ್ವಂಸ ಮಾಡಿದ್ದರು. 2004ರಲ್ಲಿ ಪೊಲೀಸ್‌ ಪೇದೆ ಮುದ್ದಪ್ಪ ಅವರನ್ನು ಅಪಹರಿಸಿದ್ದರು. ಇಂತಹ ಕಾರ್ಯಗಳಲ್ಲಿ ತೀವ್ರವಾದಿ ನಕ್ಸಲರಾಗಿದ್ದ ಸಾಕೇತ್‌ ಅವರ ಕೈವಾಡವಿದ್ದದ್ದನ್ನು ಪೊಲೀಸರು ಮನಗಂಡಿದ್ದರು.ಅಲ್ಲದೇ ಮಲೆನಾಡಲ್ಲಿ ನಕ್ಸಲ್‌ ಬೇರು ಪ್ರಬಲವಾಗುತ್ತಿರುವುದು ಗಮನಕ್ಕೆ ಬಂದಿತ್ತು.

ತಲೆಗೆ ಬಿದ್ದ ಗುಂಡು!
ಈ ಘಟನೆಗಳ ಬಳಿಕ ಸಾಕೇತ್‌ ರಾಜನ್‌ ಅವರ ಚಲನವಲನಗಳ ಮೇಲೆ ಪೊಲೀಸರು ಹದ್ದಿನಗಣ್ಣಿಟ್ಟಿದ್ದರು. 2005 ಫೆ.5ರಂದು ಚಿಕ್ಕಮಗಳೂರು ಡಿವೈಎಸ್‌ಪಿ ಆಗಿದ್ದ ಶಿವಕುಮಾರ್‌ ಅವರ ನೇತೃತ್ವದಲ್ಲಿ 80 ಜನ ಪೊಲೀಸರು ನಾಲ್ಕು ತಂಡಗಳಾಗಿ ಮೆಣಸಿನಹಾಡ್ಯದ ಅರಣ್ಯವಲಯದಲ್ಲಿ ಸಾಕೇತ್‌ಗೆ ಬಲೆ ಬೀಸಿದ್ದರು. ಆ ಗ್ರಾಮದ ಶೇಷಯ್ಯ ಸುಳಿವು ನೀಡಿದ್ದು, ಬೆಳಗಿನ ಜಾವ ಸಾಕೇತ್‌ ಇದ್ದ ಅಡಗುದಾಣಕ್ಕೆ ಪೊಲೀಸರು ಲಗ್ಗೆ ಹಾಕಿದ್ದರು.ಬೆಳಗ್ಗೆ 4.30ರಿಂದ 7ರ ಹೊತ್ತಿಗೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಎಕೆ-47 ಹಿಡಿದಿದ್ದ ಸಾಕೇತ್‌ ತಲೆಗೆ ಗುಂಡು ಹೊಕ್ಕಿತ್ತು.ಮತ್ತು ಅವರ ಅಂಗರಕ್ಷಕನಾಗಿದ್ದ ಶಿವಲಿಂಗು ಧರಾಶಾಯಿಯಾಗಿದ್ದ.

ಹತ್ಯೆಗೆ ಪಾವಗಡದಲ್ಲಿ ಪ್ರತೀಕಾರ!
ಸಾಕೇತ್‌ ರಾಜನ್‌ ಹತ್ಯೆಗೆ ನಕ್ಸಲರು ಪ್ರತೀಕಾರ ತೀರಿಸಿಕೊಂಡಿದ್ದು, ರಾಜ್ಯ ಪೊಲೀಸರ ಹತ್ಯೆಯ ಮೂಲಕ. ಸಾಕೇತ್‌ ಹತ್ಯೆ ನಡೆದು ತಿಂಗಳು ಕಳೆಯುವುದರೊಳಗೆ ಅಂದರೆ 2005ರ ಮಾರ್ಚ್‌ ನಲ್ಲಿ ಮಧುಗಿರಿಯ ಪಾವಗಡದಲ್ಲಿ ಪೀಪಲ್ಸ್‌ ವಾರ್‌ಗೂÅಪ್‌ನ ತೀವ್ರವಾದಿಗಳು ವೆಂಕಮನಹಳ್ಳಿಯ ಶಾಲೆಯಲ್ಲಿ ಬೀಡುಬಿಟ್ಟಿದ್ದ ರಾಜ್ಯ ಪೊಲೀಸ್‌ ಪಡೆಯ ಮೇಲೆ ದಾಳಿ ನಡೆಸಿದ್ದರು. 7 ಮಂದಿ ಪೊಲೀಸರು ಈ ಸಂದರ್ಭ ಮೃತಪಟ್ಟಿದ್ದರು. ಅಲ್ಲದೇ ಸಾಕೇತ್‌ ಬಗ್ಗೆಮಾಹಿತಿ ನೀಡಿದ್ದ ಶೇಷಯ್ಯನನ್ನೂ ನಕ್ಸಲರು ಹತ್ಯೆ ಮಾಡಿದ್ದರು.

ನಕ್ಸಲ್‌ ಬೇರಿಗೆ ಬಿದ್ದ ಮೊದಲ ಪೆಟ್ಟು
ಮಲೆನಾಡಿನಲ್ಲಿ ನಕ್ಸಲ್‌ ಸಿದ್ಧಾಂತದ ಬೇರುಗಳನ್ನು ಭದ್ರಪಡಿಸುವ ಪ್ರಯತ್ನಕ್ಕೆ ಪೊಲೀಸರು ಸಾಕೇತ್‌ರಾಜನ್‌ ಹತ್ಯೆ ಮೂಲಕ ಮೊದಲ ಪೆಟ್ಟು ನೀಡಿದ್ದರು. ಪಶ್ಚಿಮಘಟ್ಟದಲ್ಲಿ ನಕ್ಸಲ್‌ ಚಟುವಟಿಕೆಗಳು ನಡೆಯುತ್ತಿದೆ ಎಂಬುದು ಹೊರಜಗತ್ತಿಗೆ ತಿಳಿದದ್ದೇ ಈ ಹತ್ಯೆಯ ಬಳಿಕ! ಈ ಘಟನೆ ನಂತರ ನಕ್ಸಲರು ಹಾಗೂ ಸರ್ಕಾರದ ನಡುವೆ ನೇರ ಸಂಘರ್ಷ ಆರಂಭವಾಯಿತು. ಸಾಕೇತ್‌ ರಾಜನ್‌ ಮೃತಪಟ್ಟ ನಂತರ ನಕ್ಸಲರಿಗೆ ಸೂಕ್ತ ನಾಯಕತ್ವ ದೊರಕಲಿಲ್ಲ. ಸರ್ಕಾರದ ಕೆಲವೊಂದು ಆಡಳಿತಾತ್ಮಕ ನಿರ್ಧಾರಗಳಿಂದಾಗಿಯೂ ನಕ್ಸಲ್‌ ಪರ ಧೋರಣೆಗಳು ಕಂದಿದವು.


ಕೃಪೆ: ಉದಯವಾಣಿ ದಿನಪತ್ರಿಕೆ..



Thursday, February 05, 2015

ನಿತ್ಯೋತ್ಸವ ಕವಿ ನಿಸಾರ್ @ 80

ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ|| ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ  05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು. ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ. ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು. ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ  ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.   ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ  ಅಧ್ಯಾಪಕ ವೃತ್ತಿ ಆರಂಭ. ಮಾಡಿದ್ದ ನಿಸಾರ್ ಅಹಾದ್ ನಂತರದಲ್ಲಿ ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ.


ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ  ೧೦ನೇ ವಯಸ್ಸಿನಲ್ಲೇ 'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು ಅನರ್ಸ್ ಅಧ್ಯಯನ ಸಮಯದಲ್ಲಿ  ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳಾಗಿದ್ದರು. ಇದರಿಂದ ನಿಸಾರ್ ರವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲು ಸಾಧ್ಯವಾಯಿತು.. ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ ‘ಚಂದನ’ ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ. ಹೊರತಂದ ನಿಸಾರ್ ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ.ಯನ್ನೂ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರಾಗಿದ್ದರು.
ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿತಾ ಹೃದಯವನ್ನು ಪಕ್ವಗೊಳಿಸಿಅವರನ್ನೊಬ್ಬ ಶ್ರೇಷ್ಠ ಕವಿಯನ್ನಾಗಿ ರೂಪಿಸಿತು. 1960ರಲ್ಲಿ ಪ್ರಕಟಗೊಂಡ ‘ಮನಸು ಗಾಂಧಿಬಜಾರು’ ಎಂಬ ಕವಿತಾಸಂಕಲನದಿಂದ ತೊಡಗಿ 2013ರ ‘ವ್ಯಕ್ತಿಪರ ಕವನಗಳು’ ಕೃತಿಯವರೆಗೆ19 ಕವನಸಂಕಲನಗಳನ್ನೂ 12 ಗದ್ಯ,  ಪ್ರಬಂಧ, ವಿಮರ್ಶೆಯ ಲೇಖನ ಸಂಕಲನಗಳನ್ನೂ 5 ಮಕ್ಕಳ ಸಾಹಿತ್ಯಗ್ರಂಥಗಳನ್ನೂ5 ಅನುವಾದ ಗ್ರಂಥಗಳನ್ನೂ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟ ಹಿರಿಮೆ  ಇವರದು ಇವರ ಹಲವು ಕವಿತಾಸಂಕಲನಗಳು ಮೂರು ಮೂರು ಆವೃತ್ತಿಗಳನ್ನು ಕಂಡಿವೆ. ‘ನಿತ್ಯೋತ್ಸವ’ ಎಂಬ ಕವನಸಂಕಲನವು 24 ಬಾರಿ  ಮುದ್ರಿತವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಶೇಕ್ಸ್‌ಪಿಯರನ ನಾಟಕಗಳನ್ನೂ, ರಷ್ಯನ್ ಕಥೆಗಳನ್ನೂ ,ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ. 1978ರಲ್ಲಿ ಭಾರತೀಯ ಭಾಷೆಗಳಲ್ಲೇ ಮೊತ್ತಮೊದಲನೆಯದಾಗಿ ಭಾವಗೀತಗಳ ದನಿಸುರುಳಿಯನ್ನು ಹೊರತಂದು ಸುಗಮಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು. ‘ನಿತ್ಯೋತ್ಸವ’ ಎಂಬ ಭಾವಗೀತಗಳ ಆ ದನಿಸುರುಳಿಯು ಕನ್ನಡದ ಸುಗಮಸಂಗೀತ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ.
ಇವರ ಯಾವುದೇ ಕವನವು ನಮ್ಮನ್ನು ಕ್ಷೆಬೆಗೀಡು ಮಾಡದೇ, ಮನವನ್ನು ಖತಿಗೊಳಿಸದೇ ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿರುತ್ತದೆ.   ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು, ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ. ಇದೇ ಕಾರಣದಿಂದಾಗಿಯೇ 'ಉತ್ತನೆಲದ ಗೆರೆ' 'ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು', 'ಕೊಯ್ದ ಹಸಿಮರದ ಕಂಪು', 'ಸಮಾಜವಾದದ ರೊಟ್ಟಿಯ ತುಣುಕು' ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ. ನೆರುಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ. ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿರುತ್ತದೆ. . 'ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು' ಎಂಬಂಥ ಪದಚಮತ್ಕಾರಗಳೂ ಇರುತ್ತದೆ. . 'ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ’ ಎಂಬಂಥ ತರ್ಕ ಜಿಜ್ಞಾಸೆಯೂ ಇರುತ್ತದೆ. .
ಅದೇ ರೀತಿಯಲ್ಲಿ ಇವರ 'ಇದು ಬರಿ ಬೆಡಗಲ್ಲೋ ಅಣ್ಣ' ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂ ಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ.
ತಮ್ಮ ಹಲವು ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿಯ ಬಹುಮಾನಗಳನ್ನು ನಿಸಾರ್ ಅಹಮದ್ ಪಡೆದಿದ್ದಾರೆ. ‘ಹಕ್ಕಿಗಳು’ ಎಂಬ ಕೃತಿಗೆ 1978ರಲ್ಲಿ, ‘ಇದು ಬರಿ ಬೆಡಗಲ್ಲೊ ಅಣ್ಣ’ ಎಂಬ ಕೃತಿಗೆ 1981ರಲ್ಲಿ ‘ಅನಾಮಿಕ ಆಂಗ್ಲರು’ ಕೃತಿಗೆ 1982ರಲ್ಲಿ, ‘ಹಿರಿಯರು ಹರಸಿದ ಹೆದ್ದಾರಿ’ ಕೃತಿಗೆ 1992ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಕುವೆಂಪು ಹೆಸರಿನ ವಿಶ್ವಮಾನವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1993ರಲ್ಲಿ ಬೆಂಗಳೂರು ಮಹಾನಗರಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, 2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ,'73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿ ಆಯ್ಕೆಯಾಗಿದ್ದ ನಿಸಾರ್ ರವರಿಗೆ 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2014ರಲ್ಲಿ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ – ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದು.
ಇದಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹಾಗೂ ದುಬೈ, ಅಬುದಾಬಿ, ಕುವೈತ್, ಇಂಗ್ಲೆಂಡ್, ಸಿಂಗಾಪುರ ಮೊದಲಾದೆಡೆಗಳ ಕನ್ನಡ ಬಳಗಗಳು ಇವರನ್ನು ಸಮ್ಮಾನಿಸಿವೆ. 1967 ಮತ್ತು 1985ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನು ಪ್ರತಿನಿಧಿಸಿದ ಹಿರಿಮೆ ಇವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದಿದ್ದಾರೆ. ಡಾ. ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಗಳು ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ಮಲಯಾಳಂ, ಮರಾಠಿ, ತಮಿಳು ಹಾಗೂ ಚೀನಿ ಭಾಷೆಗಳಿಗೆ ಅನುವಾದಿತವಾಗಿವೆ. ಇವರ ಬದುಕು ಬರವಣಿಗೆಗಳ ಕುರಿತು ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪಿ‌ಎಚ್. ಡಿ. ಮಟ್ಟದ ಅಧ್ಯಯನಗಳು ನಡೆದು ಪುಸ್ತಕಗಳು ಹೊರಬಂದಿವೆ. ಕರ್ನಾಟಕ ಸರಕಾರವು ಇವರನ್ನು 2011ರಲ್ಲಿ ರಾಜ್ಯಮಟ್ಟದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿದೆ.
2006ರಲ್ಲಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ ‘ನಿಸಾರ್ ನಿಮಗಿದೋ ನಮನ’ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲಾಯಿತು. ಅವರ ಬಗೆಗೆ ಸಾಕ್ಷ್ಯಚಿತ್ರ, ಸಂದರ್ಶನ, ಕವನವಾಚನ ಮೊದಲಾದ ಸಿ.ಡಿಗಳು ಹೊರಬಂದಿವೆ. ‘ಕುರಿಗಳು ಸಾರ್ ಕುರಿಗಳು’ ಎಂಬ ಕವಿತೆಯ ಮೂಲಕ ಸಾಹಿತ್ಯಲೋಕಕ್ಕೆ ಆತ್ಮೀಯರಾದ ಡಾ. ಕೆ. ಎಸ್. ನಿಸಾರ್ ಅಹಮದ್ ಅವರು ಇಂದೂ ಆ ಜನಪ್ರಿಯತೆಯನ್ನೂ ವೈಚಾರಿಕತೆಯನ್ನೂ ಉಳಿಸಿಕೊಂಡು ಸಾಹಿತ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ನಮಗೆಲ್ಲ ಸಂತೋಷದ ಸಂಗತಿ.
ಇಷ್ಟೆಲ್ಲಾ ಪ್ರಶಸ್ತಿ, ಗೌರವಗಳೊಂದಿಗೆ ಕನ್ನಡಿಗರ ಹೃದಯ ಗೆದ್ದಿರುವ  ಇವರು ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯ ಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೆ ಸ್ವಯಂ ತೇಜೋಮಾನರಾಗಿರುವ ಯುಗದ ಕವಿ ಯಾಗಿದ್ದಾರೆ. ಅವರೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳ ಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾ ತೊಟ್ಟುಕೊಂಡರಂತೆ. ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದ ಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿ.
ಇಂತಹಾ ಸಹೃದಯ ಕವಿವರ್ಯರು ಇಂದು ತಮ್ಮ ೮೦ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಕನ್ನಡಕ್ಕೆ ಇನ್ನೊಬ್ಬ ರಾಷ್ಟ್ರಕವಿ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದ್ದು,ನ್ನಮ್ಮೆಲ್ಲರ ಪ್ರೀತಿಯ ನಿಸಾರ್ ಅಹಮದ್ ಮುಂದಿನ ರಾಷ್ಟ್ರಕವಿಯಾಗಲೆದು ಹಾರೈಸೋಣ.......

Sunday, February 01, 2015

ಅಖಿಲ ಭಾರತ ೮೧ನೇ ಕನ್ನಡ ಸಾಹಿತ್ಯ ಅಮ್ಮೇಳನ ಅಧ್ಯಕ್ಷೀಯ ಭಾಷಣ

ಇಂದಿನಿಂದ ಮೂರು ದಿನಗಳ ಕಾಲ ಗೊಮ್ಮಟನಗರಿ, ಜೈನ ಕಾಶಿ ಶ್ತವಣಬೆಳಗೊಳದಲ್ಲಿ ಅಖಿಲ ಭಾರತ ೮೧ನೇ ಕನ್ನಡ ಸಾಹಿತ್ಯ ಅಮ್ಮೇಳನದ ಸಂಭ್ರಮ. ಉದ್ಘಾಟನಾ ದಿನವಾದ ಇಂದು ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ದಲಿಂಗಯ್ಯನವರು ಮಾಡಿದ ಅಧ್ಯಕ್ಷೀಯ ಭಾಷಣದ ಪೂರ್ಣ ರೂಪವಿದು, ನಿಮಗಾಗಿ....... 
***