Sunday, November 01, 2015

ನಾನೋದಿದ "ನನ್ನಿ"

ಕರಣಂ ಪವನ್ ಪ್ರಸಾದ್ ಎರ್ಡನೇ ಕಾದಂಬರಿ "ನನ್ನಿ. ಕನ್ನಡದಲ್ಲಿ ಮಹತ್ವದ, ಉತ್ತಮವಾದ ಸಾಹಿತ್ಯ ರಚನೆ ಕಡಿಮೆಯಗುತ್ತಿದೆ. ಕುವೆಂಪು, ಬೇಂದ್ರೆ, ಮಾಸ್ತಿ ನಂತರದಲ್ಲಿ ಭೈರಪ್ಪ, ಕುಂವೀ ಯಂತಹಾ ಬೆರಳೇಣಿಕೆಯ ಕೆಲವರ ಹೊರತೂ ಇನ್ಯಾರೂ ಸಾರ್ವತ್ರಿಕವಾಗಿ ಕನ್ನಡ ಓದುಗರನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವ ಕೊರಗಿರುವಾಗಲೇ ಕರಣಂ ಪವನ್ ಪ್ರಸಾದ್ ಕಾದಂಬರಿ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ "ಕರ್ಮ" ಕನ್ನಡದಲ್ಲಿ ಮಾತ್ರವಲ್ಲ ಆಂಗ್ಲ ಭಾಷೆಗೂ ಅನುವಾದಗೊಂಡು ಸಾಕಷ್ಟು ಓದುಗರನ್ನು ಸೆಳೆದಿದೆ. ಇದೀಗ ಬಂದಿರುವ "ನನ್ನಿ" ಸಹ ಓರ್ವ ನನ್ ಳ ಕಥೆ ಎನಿಸಿದರೂ ಅದಕ್ಕೂ ಹೊರತಾಗಿ ಮಾನವೀಯ ಗುಣದೋಷಗಳ ಕುರಿತಂತೆ ಸಾಕಷ್ಟು ಮಹತ್ವದ ಒಳನೋಟಗಳನ್ನು ಕಾದಂಬರಿಕಾರರು ಇಲ್ಲಿ ತೆರೆದಿಟ್ಟಿದ್ದಾರೆ.ಇಲ್ಲಿ ನಾನು ಕಾದಂಬರಿಯ ವಿಮರ್ಶೆ ಮಾಡಹೊರಡುವುದಿಲ್ಲ, ಬದಲಾಗಿ K P Mahesh Kashyap  Priya Bhat , Manushree Jois, ಇವರೇ ಮೊದಲಾದ  ಬೇರೆ ಬೇರೆ ಗೆಳೆಯರು ತಾವು ಕಾದಂಬರಿಯನ್ನು ಓದಿ ತಮ್ಮ ಫೇಸ್ ಬುಕ್ಕಿನ ಗೋಡೆಗಳ ಮೇಲೆ ಹೇಳಿಕೊಂದ ಅಭಿಪ್ರಾಯಗಳನ್ನಷ್ಟೆ ಸಂಗ್ರಹಿಸಿ ಕೊಟ್ಟಿರುತ್ತೇನೆ.
ನೀವೂ ಕಾದಂಬರಿಯನ್ನುೋದಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.
ಕನ್ನಡದ ಉದಯೋನ್ಮುಖ ಕಾದಂಬರಿಕಾರನನ್ನು ಪ್ರೊತ್ಸಾಹಿಸಿ.

ಎಲ್ಲಾ ಸ್ನೇಹಿತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
***
ಇವತ್ತು ಕರಣಂ ಪವನ್ ಪ್ರಸಾದರ ಹೊಸ ಕಾದಂಬರಿ "ನನ್ನಿ"ಯನ್ನು ಓದಿ ಮುಗಿಸಿದೆ... ತುಂಬಾ ಗಟ್ಟಿ ಕಥಾ ಹಂದರವುಳ್ಳ ಕಾದಂಬರಿ. ಕಾದಂಬರಿ ಓದಿದ ಮೇಲೆ ಲೇಖಕರು ಕಥಾವಸ್ತುವಿನ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ ಎಂದೆನಿಸಿತು. ನನ್ ಪಾತ್ರಧಾರಿಯಾದ ರೋಣಾಳು ಸತ್ಯದ ಹುಡುಕಾಟದಲ್ಲಿ ತಾನು ಯಾವುದು ಸತ್ಯವೆಂದು ನಂಬಿದ್ದಾಳೋ ಅದು ಸತ್ಯ ಅಲ್ಲವೆಂದು ತಿಳಿದಾಗ ಆ ಸತ್ಯದ ಬಗ್ಗೆ ಅಸಹ್ಯಗೊಂಡು ಅದರಿಂದ ವಿಮುಖಗೊಳ್ಳವುದೇ ಕಾದಂಬರಿಯ ಕಥಾವಸ್ತು. ಕಾದಂಬರಿಯ ಕಥಾನಕ ಹರವಾದ ವಿಸ್ತಾರವನ್ನು ಹೊಂದಿ ದಟ್ಟವಾದ ಅನುಭವವನ್ನು ಓದುಗರಿಗೆ ನೀಡುವುದರೊಂದಿಗೆ ನೈಜತೆಗೆ ಹತ್ತಿವಾಗಿರುವಂತೆ ಕಾಣಲಾರಂಭಿಸಿ , ಓದಿದ ನಂತರವೂ ಕಾಡುವ ಗುಂಗನ್ನು ಹೊಂದಿದೆ..



***
ಅಸತ್ಯದ ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವ ‘ನನ್ನಿ
ಕಾರಣಾಂತರಗಳಿಂದಾಗಿ ನಾನು ನನ್ನ ಹೈಸ್ಕೂಲ್‌ಅನ್ನು (೮, ೯ ಮತ್ತು ೧೦ನೆಯ ತರಗತಿ) ಓದಿದ್ದು ಕ್ರಿಶ್ಚನ್ ಸಂಸ್ಥೆಯೊಂದರಲ್ಲಿಯೇ. ಮೊತ್ತ ಮೊದಲಬಾರಿ ನನ್ನದಲ್ಲದ ಧರ್ಮವೊಂದರ ಪರಿಚಯವಾಗಿದ್ದು ಅಲ್ಲಿಯೇ ನನಗೆ. ನಾನು ಅಲ್ಲಿ ಯಾವ ಪೂರ್ವಾಗ್ರಹಗಳಿಲ್ಲದೇ ಬೆರೆತದ್ದು, ಕಲಿತದ್ದು, ನಲಿದದ್ದು. ನನ್ನ ಹೆತ್ತವರು ಯಾವುದನ್ನೂ, ಯಾವತ್ತೂ ತಲೆಗೆ ತುಂಬಿಸಿರಲೂ ಇಲ್ಲ. ಮೂರುವರುಷಗಳಲ್ಲಿ ನಾನು ಅಲ್ಲಿಂದ ಪಡೆದದ್ದು ಅಸಂಖ್ಯಾತ! ಪ್ರತಿ ದಿವಸ ಪ್ರಾರ್ಥನೆಗೆ ಹಾಡುತ್ತಿದ್ದ ‘ಅಗಣಿತ ತಾರಾಗಣಗಳ ನಡುವೆ..’ ಹಾಡನ್ನು ಇಂದೂ ಗುನುಗುತ್ತಿರುತ್ತೇನೆ. ಆ ದಿನಗಳು ನಿಸ್ಸಂಶಯವಾಗಿಯೂ ಮಧುರ ನೆನಪುಗಳಿಂದ ತುಂಬಿದ ನನ್ನ ಅವಿಸ್ಮರಣೀಯ ಕಾಲಘಟ್ಟವಾಗಿವೆ. ಕಿನ್ನಿಗೋಳಿಯ ಲಿಟ್ಲ್‌ಫ್ಲವರ್ ಹೈಸ್ಕೂಲ್ ನನಗೆ ನನ್ನನ್ನು ಪರಿಚಯಿಸಿದ, ನನ್ನೊಳಗೆ ಚಿಗುರುತ್ತಿದ್ದ ಪ್ರತಿಭೆಯನ್ನು ಗುರುತಿಸಿದ ತಾಣ. ಸತ್ಯಕ್ಕೆ ಯಾವ ಬಣ್ಣವೂ ಇಲ್ಲವೆಂಬುದನ್ನು ಇಂದು ನನಗೆ ಮನಗಾಣಿಸಲು ಕಾರಣವಾದ ಜಾಗವೂ ಹೌದು. ಹಾಗಾಗಿ ನನಗೆ ಕಲಿಸಿದ ಅಲ್ಲಿಯ ಎಲ್ಲಾ ಸಿಸ್ಟರ್ಸ್‌ಗಳಿಗೂ ನಾನು ಸದಾ ಚಿರ ಋಣಿ. ಗುರುಭ್ಯೋ ನಮಃ ಎಂದೇ ಅಕ್ಷರ ತಿದ್ದಿಸಿದ ನನ್ನ ಅಪ್ಪನ ಬುನಾದಿಯಡಿ ನನ್ನ ಬಾಲ್ಯ, ಹದಿವಯಸ್ಸು ಅರಳಿದ್ದೂ ಇದಕ್ಕೆ ಕಾರಣವೆನ್ನಬಹುದು. 

ಈ ರೀತಿಯ ನನ್ನ ಪೀಠಿಕೆಗೆ ಒಂದು ಬಲವಾದ ಕಾರಣವಿದೆ. ‘ನನ್ನಿ’ ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ ಎಂಬುದಷ್ಟೇ ನನಗೆ ಗೊತ್ತಿದ್ದುದು ಓದುವ ಮೊದಲು. ನಾನು ಹೈಸ್ಕೂಲ್ ಕಲಿತ ನನ್ನ ಶಾಲೆ, ಸಿಸ್ಟರ್ಸ್‌ಗಳೊಂದಿಗೆ ಒಡನಾಡಿದ್ದು, ಅಲ್ಲಿಯ ಆಶ್ರಮದಲ್ಲಿ ಓದುತ್ತಿದ್ದ ಕ್ರಿಶ್ಚನ್ ಗೆಳತಿಯರ ಒಳಗುದಿಯನ್ನು, ಅನಿಸಿಕೆಗಳನ್ನು ಕೇಳಿದ್ದು ಎಲ್ಲವೂ ಗಟ್ಟಿಯಾಗಿ ಇನ್ನೂ ಸ್ಮೃತಿಯಲ್ಲಿ ಉಳಿದುಕೊಂಡಿವೆ.. ಆಗಾಗ ನೆನಪಾಗಿ ನನ್ನ ಮತ್ತೆ ಗತಕಾಲಕ್ಕೆಳೆಯುತ್ತಿರುತ್ತವೆ. ಆ ದಿನಗಳ ನನ್ನ ಅನುಭವವೇ ಇಂದು ಈ ಕೃತಿಯನ್ನು ಮತ್ತಷ್ಟು ಆಪ್ತವಾಗಿ ಓದಿಸಿಕೊಳ್ಳಲು, ತೀರ ಭಿನ್ನವಲ್ಲದ ಪರಿಸರದೊಳಗೆ (ಕಾದಂಬರಿಯಲ್ಲಿ ಬರುವ) ನನ್ನನ್ನು ಸಮೀಕರಿಸಿಕೊಂಡು, ಹೆಚ್ಚು ತಾದಾತ್ಮ್ಯತೆಯಿಂದ ಒಳಗೆಳೆದುಕೊಳ್ಳಲು ಸಾಧ್ಯವಾಯಿತು ಎನ್ನಬಹುದು. ಅಂತೆಯೇ ಓದಲು ತೆಗೆದುಕೊಂಡಾಗಲೂ, ಓದುವಾಗಲೂ ಯಾವುದೇ ಪೂರ್ವಾಗ್ರಹವಿಲ್ಲದೇ ಓದಿದ್ದೇನೆ.. ವಿಶ್ಲೇಷಿಸಿದ್ದೇನೆ.. ಗಂಟೆಗಟ್ಟಲೇ ಚಿಂತಿಸಿದ್ದೇನೆ ಮತ್ತು ಸಂಶಯವಿದ್ದ ವಿಷಯಗಳ ಗುರುತು ಹಾಕಿಕೊಂಡು, ಕಾದಂಬರಿಯನ್ನೋದಿ ಮುಗಿಸಿದ ಮೇಲೆ, ಲೇಖಕರ ಪರಿಚಯ ಮಾಡಿಕೊಂಡು ಅವರೊಂದಿಗೇ ಖುದ್ದಾ ನನ್ನ ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡಿದ್ದೇನೆ. ಇದು ಹಾಗೇ.. ಇದು ಹೀಗೇ.. ಇದು ಅದೇ... ಎಂಬೆಲ್ಲಾ ಸ್ವಯಂ ನಿರ್ಧಾರಕ್ಕೆ ಬರದೇ ಪರಾಮರ್ಶಿಸಿ ಅರಿಯಲು, ತಿಳಿಯಲು ಯತ್ನಿಸಿದ್ದು. ಹಾಗಾಗಿ ಅಷ್ಟೇ ವಸ್ತುನಿಷ್ಠವಾಗಿ ಈ ಪುಟ್ಟ ವಿಮರ್ಶೆಯನ್ನೂ ಬರೆಯಲು ಪ್ರಯತ್ನಿಸುತ್ತಿದ್ದೇನೆ. 

ಮೊದಲು ಕಥೆಯ ಸ್ಥೂಲ ಚಿತ್ರಣ : ‘ಸಿಸ್ಟರ್ ರೋಣಾ’ಳಿಂದ ಆರಂಭವಾಗುವ ಕಥೆ ‘ರೋಣಾ’ಳೊಂದಿಗೆ ಕೊನೆಯಾಗುವುದು. ರೋಣಾಳಿಂದ ಸಿಸ್ಟರ್ ರೋಣಾಳಾಗುವ ಪ್ರಕ್ರಿಯೆ... ಅದಕ್ಕಿರುವ ಹಿನ್ನಲೆ... ಆನಂತರ ಆಕೆ ಸ್ವಯಂ ವಿಮರ್ಶೆಗೆ, ವಿಶ್ಲೇಷಣೆಗೆ ಹೊರಟು, ಅಚಾನಕ್ಕಾಗಿ ಸಿಗುವ ಯುರೋಪ್ ಲೇಖಕ ಎಡಿನ್ ಬರ್ಗ್‌ನ ಪುಸ್ತಕಗಳ ಪ್ರಭಾವಕ್ಕೆ ಸಿಲುಕಿ ಸತ್ಯಾನ್ವೇಷಣೆಗೆ ಹೊರಟು.. ಆ ಪಥದಲ್ಲಿ ತನ್ನ ಸಹಜ ಗುಣ ಧರ್ಮದಿಂದ ಅದೇ ಸತ್ಯ ಅವಳನ್ನು ಸುಟ್ಟು, ಘಾಸಿಗೊಳಿಸಿ, ತಪದಲ್ಲಿ ಬೆಂದು ಬೆಳಗುವ ಚಿನ್ನದಂತೇ ಆಕೆ ಮತ್ತೆ ಎಲ್ಲಾ ಕಳಚಿ ರೋಣಳಾಗುವ ಕಥೆ. ಈ ಕಥೆ ಆರಂಭದಿದ್ದ, ಅಂತ್ಯದವರೆಗೂ ಬರುವ ಮತ್ತೊಂದು ಪಾತ್ರವಿದೆ. ಮೊದ ಮೊದಲು ಆ ಪಾತ್ರವೇ ಪ್ರಧಾನ ಪಾತ್ರವೆಂಬಂತೇ ಭಾಸವಾಗುವ.. ಕಥೆಯುದ್ದಕ್ಕೂ ಸುಳ್ಳಿಗೂ, ಸತ್ಯಕ್ಕೂ ಇರುವ ಅಂತರ ಅಂದರೆ ಬ್ಲಾಕ್ ಆಂಡ್ ವೈಟ್‌ಅನ್ನು ಸ್ಪಷ್ಟವಾಗಿ ಓದುಗರಿಗೆ ಕಾಣಿಸುವಂಥ ಪಾತ್ರ! ಅದೇ ಮದರ್ ಎಲಿಸಾರದ್ದು. ಈ ಮೂರು ಪ್ರಮುಖ ಪಾತ್ರಗಳಲ್ಲದೇ ಇನ್ನೂ ಹಲವು ಪಾತ್ರಗಳು ತಮಗೊದಗಿಸುವ ಅತ್ಯಗತ್ಯ ಕಾರ್ಯವನ್ನು ಮಾಡಿ, ತಮ್ಮ ತಮ್ಮ ಕೆಲಸದಾನಂತರ ಸತ್ಯಾನ್ವೇಷಣೆಗೆ ರೋಣಾಳನ್ನು ಇನ್ನಷ್ಟು ಉತ್ತೇಜಿಸಿ ಮಾಯವಾಗುತ್ತವೆ. (ಅತಿ ಕ್ಲುಪ್ತವಾಗಷ್ಟೇ ಕಥೆ ಹೇಳುತ್ತಿದ್ದೇನೆ. ಪೂರ್ತಿ ತಿಳಿಯಲು ‘ನನ್ನಿ’ಯ ಓದೊಂದೇ ದಾರಿ.)

ನನ್ನ ಪ್ರಕಾರ ಪ್ರತಿ ಕಾದಂಬರಿಯ ಒಂದೊಂದು ಪಾತ್ರವೂ ಆ ಕಾದಂಬರಿಯ ಜೀವಂತಿಕೆಯೇ ಆಗಿರುತ್ತದೆ. ಹೀಗಾಗಿ, ಆಯಾ ಕಾದಂಬರಿಯು ಅದರ ಓದುಗ ಓದುವಷ್ಟು ಹೊತ್ತೂ ಕಣ್ಮುಂದೆ ನಡೆವ ಒಂದು ತುಂಬು ಜೀವನವೆನಿಸಿಕೊಂಡು ಬಿಡುತ್ತದೆ. ನನ್ನಿಯ ಕೆಲವು ಓದುಗರಿಗೆ ಮದರ್ ಎಲಿಸಾರೋ, ‘ಸಿ.ರೋಣಾಳೊ’ ಅಥವಾ ಕೇವಲ ರೋಣಾಳೋ, ಮಿಲ್ಟನ್ ಫಾಬ್ರಿಗಾಸ್‌ನೋ, ತೇಗೂರಿನ ರಾಯಪ್ಪನೋ ಕಾದಂಬರಿಯ ಜೀವಾಳದಂತೇ, ಪ್ರಮುಖ ಪಾತ್ರ ಅಂದರೆ ಹೀರೋ/ಸೆಂಟರ್ ಎಂದು ಅನಿಸಿರಬಹುದು. ಆದರೆ ನನಗೆ ಮಾತ್ರ ‘ನನ್ನಿ’ ಕಾದಂಬರಿಯ ಜೀವನದೊಳಗಿನ ಸೆಂಟರ್ ಆಫ್ ಅಟ್ರಾಕ್ಷನ್, ಪ್ರಮುಖ ಪಾತ್ರಧಾರಿ ಎಂದೆನಿಸಿಕೊಂಡವ ಎರಿಕ್ ಬರ್ಗ್‌ನೇ. ಎರಿಕ್ ಯುರೋಪಿನಲ್ಲೆಲ್ಲೋ ಇರುವವನೆಂದು ಹೇಳುವ ಈ ಕಾದಂಬರಿ, ಅವನ ಮೂಲಕ ಹೇಳಿಸುವ ಕಟು ವಾಸ್ತಿವಿಕತೆಯನ್ನು ಬಿಚ್ಚಿ, ಎಳೆಯೆಳೆಯಾಗಿ ಹರವಿ, ಬೆಚ್ಚಿ ಬೀಳುವಂತಹ ಸತ್ಯ ಶೋಧನೆಯನ್ನು ಮಾಡಿಸುತ್ತದೆ. ಎರಿಕ್ ಬರೆದಿದ್ದು ಎನ್ನಲ್ಲಾಗುವ "ಸತ್ಯ ದಯೆ ಮತ್ತು ಸೇವೆ" ಹಾಗೂ "ಮಾನವ ಜಗತ್ತಿನ ಅಪಮೌಲ್ಯಗಳು" ಎಂಬೆರೆಡು ಪುಸ್ತಕಗಳೊಳಗಿನ ವಾಸ್ತವಿಕ ಅಂಶಗಳ ಮಂಥನದಿಂದ ಹೊರ ಬರುವ ಕಟು ಸತ್ಯಗಳು ಓದುಗರಿಗೆ ಜೀರ್ಣಿಸಿಕೊಳ್ಳಲು ತುಸು ತ್ರಾಸದಾಯಕವೂ ಆಗುವುದು. ಆ ನಿಟ್ಟಿನಲ್ಲಿ ಆಮೂಲಾಗ್ರವಾಗಿ ಇಂತಹ ಒಂದು ಸತ್ಯ ಶೋಧನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟ ಕರಣಂ ಪವನ್ ಪ್ರಸಾದ್ ಅವರಈ ಅಪೂರ್ವ ಪುಸ್ತಕ ‘ನನ್ನಿ’ ಎಂದರೆ ಖಂಡಿತ ಉತ್ಪ್ರೇಕ್ಷೆಯೆನಿಸದು.

ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲೊಂದಾದ ಎರಿಕ್ ಬರ್ಗ್ ಎಂಬ ಯುರೋಪಿಯನ್ ಸತ್ಯಶೋಧಕನಷ್ಟೇ ನನ್ನ ಕಾಡಿದ ಪಾತ್ರವೆಂದರೆ, ತೇಗೂರಿನ ರಾಯಪ್ಪ. ಕ್ರಿಶ್ಚನ್ ವಳಿಗನಾಗಿ ಬಾಳಿದ, ಬದುಕಲು ಹೆಣಗಾಡಿದ, ತಾ ಸಾಯುತ್ತಲೇ ತನ್ನ ಪೋಲಿಯೋ ಪೀಡಿತ ಮಗಳಿಗಾಗಿ ದುಡಿದು ದಣಿದ, ಆತನ ಆ ಬೆಚ್ಚಿ ಬೀಳಿಸುವ ಕೊನೆಯ ಎಣಿಸುವಾಗೆಲ್ಲಾ ಎದೆ ಝಿಲ್ಲೆನಿಸುತ್ತದೆ. ಈ ಪಾತ್ರದ ಕುರಿತು ನಾನು ಏನೇ ಹೇಳಿದರೂ ಅದು ಓದುಗರ ಓದುವ ಸುಖವನ್ನು ಕಸಿದುಕೊಂಡಂತಾಗುವುದು. ಈ ಪಾತ್ರ ಚಿತ್ರಣವನ್ನಷ್ಟೇ ಅಲ್ಲಾ, ಈ ಕಾದಂಬರಿಯ ಬೇರಾವ ಪಾತ್ರವನ್ನೂ ಹೆಚ್ಚು ವಿಶ್ಲೇಷಿಸಹೋಗುವುದು ಈ ನಿಟ್ಟಿನಲ್ಲಿ ಸಮಂಜಸವೆನಿಸದು. ಹಾಗಾಗಿ ನಾನು ಓದಿದಾಗಿನಿಂದ ನನ್ನ ಬಿಟ್ಟೂ ಬಿಟ್ಟೂ ಕಾಡುತಿಹ ನನ್ನಿಷ್ಟದ ಪಾತ್ರ, ಕಥೆಯ ಜೀವಾಳನಾಗಿರುವ (ನನ್ನ ವೈಯಕ್ತಿಕ ಅನಿಸಿಕೆಯಂತೇ) ಎಡಿನ್ ಬರ್ಗ್‌ನ ಕೆಲವು ಸಾರ್ವಕಾಲಕ ಸತ್ಯ ದರ್ಶನವನ್ನು, ರೋಣಾಳ ಮಂಥನವನ್ನು ಕಾದಂಬರಿಯಲ್ಲಿದ್ದ ಹಾಗೇ ಇಲ್ಲಿ ಹಂಚಿಕೊಳ್ಳಬಯಸುತ್ತಿದ್ದೇನೆ.  ಈ ಕೆಳಗಿನ ಪ್ರತಿ ಸಾಲೂ ಹೊಸ ಚಿಂತನೆಗಳಿಗೆ, ಹೊಳಹುಗಳಿಗೆ, ಮಂಥನಕ್ಕೆ ನಮ್ಮನ್ನೆಳೆಸುವಂತಿದ್ದು, ಓದುಗರನ್ನೂ ಸತ್ಯಾನ್ವೇಷಣೆಗೆ, ಸ್ವ ವಿಮರ್ಶೆಗೆ ಖಚಿತವಾಗಿಯೂ ಎಳೆಸುತ್ತವೆ ಎಂಬುದು ನನ್ನ ವಿಶ್ವಾಸ.

೧) ಪ್ರಚಾರ ಹೇಗೆ ಪಡೀಬೇಕು ಅನ್ನೋದು ಮುಖ್ಯವೇ ಹೊರತು, ಪ್ರಚಾರಕ್ಕಾಗಿ ಏನು ಮಾಡಿದೆವು ಅನ್ನೋದಲ್ಲ. ನಾನು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಪ್ರಚಾರಕ್ಕೆ ಇಳಿದವನಿಗೂ ಗೊತ್ತಾಗಬಾರದು. ಹಾಗೆ ನೋಡಿಕೊಳ್ಳೋದು ಜಾಣತನ. (ಫಾಬ್ರಿಗಸ್ ಹೇಳುವ ಈ ಮೇಲಿನ ಮಾತೊಳಗಿನ ಮೊನಚು, ವ್ಯಂಗ್ಯ.. ಅದರೊಳಗಿನ ವರ್ತಮಾನದ (ಪ್ರಸ್ತುತ) ಕಟು ವಾಸ್ತವ ಎಷ್ಟು ದಿಟ ಎಂದೆನಿಸಿತು.)


೨) "ಹೇಳಿಕೊಳ್ಳದ ತ್ಯಾಗಗಳಿಗೆ ಬೆಲೆ ಇರೋಲ್ಲ. ಹೇಳಿಕೊಂಡ ತ್ಯಾಗಗಳನ್ನು ನಂಬೋಕೆ ಆಗಲ್ಲ." 

೩) ಯಾವುದು ತಪ್ಪು ಎನ್ನಿಸುತ್ತದೋ ಆಗ ಅದನ್ನು ಸರಿಯೊಂದಿಗಿನ ಯಾವುದೋ ಒಂದು ಅಂಶದೊಂದಿಗೆ ಕೂಡಿಸಿ ತಪ್ಪನ್ನು ಸರಿ ಎನ್ನಿಸುವ ಕುಚೋದ್ಯ ಪ್ರಯತ್ನ ಇಲ್ಲಿ ಪುನರಾವರ್ತನೆ ಆಗುತ್ತಿಲ್ಲವೇ? (ರೋಣಾಳ ಜಿಜ್ಞಾಸೆ)

೪) ಕಾರಣ ಅಶುದ್ಧವಾದ ಮೇಲೆ ಕ್ರಿಯೆಯೂ ಅಶುದ್ಧವೇ, ಕ್ರಿಯೆಗಳಿಂದ ಕಾರಣ ಹುಟ್ಟುವುದಿಲ್ಲ. ಕಾರಣಗಳಿಂದಲೇ ಕ್ರಿಯೆ ಹುಟ್ಟುತ್ತದೆ. ಅದರಲ್ಲೂ ಕಾರಣವಿರುವ ಸೇವೆ!? ಇದರ ಆಳಕ್ಕೆ ಹೋಗಲು ಆಗುತ್ತಿಲ್ಲ. ಹೌದು ಜಗತ್ತಿನಲ್ಲಿ ಯಾವುದೂ ಸೇವೆಯಲ್ಲ. ಸಹಕಾರವಷ್ಟೇ ನಿಜ.

೫) ಮಾನವನು ಪ್ರಾರಂಭಿಸುವ ಪ್ರತಿಯೊಂದು ಸತ್ಕಾರ್ಯಗಳು ಮೂಲದಲ್ಲಿ ನಿಸ್ವಾರ್ಥ ಸೇವೆಯೇ ಆಗಿದ್ದು, ಅನಂತರ ಇಷ್ಟಾರ್ಥಕಾಮವಾಗೇ ಕೊನೆಗೊಳ್ಳುತ್ತದೆ.

೬) ಪ್ರಕೃತಿ ಯಾವುದನ್ನು ಹಿಡಿತದಲ್ಲಿಟ್ಟು, ಯಾವುದನ್ನು ಬೆಳೆಸಬೇಕು ಎಂದು ಆಲೋಚಿಸಿಯೇ ಪ್ರತಿ ಜೀವಿಗೂ ಗುಣಗಳನ್ನು ನೀಡಿದೆ. ಆದರೆ ಮಾನವನು ತನ್ನ ಪಾಕೃತಿಕ ಗುಣಗಳಿಂದ ದೂರವಾಗಿ, ವಿವೇಚನೆಯ ಹೆಸರಿನಲ್ಲಿ ಸಹಜೀವಿ, ಜಗತ್ತನ್ನೇ, ಹತೋಟಿಗೆ ತೆಗೆದುಕೊಂಡು ಹಾಳುಮಾಡುತ್ತಿದ್ದಾನೆ. ಮಾನವನ ಮೂಲ ಗುಣವೇ ಸ್ವಾರ್ಥ. ತನ್ನೆಲ್ಲಾ ಅಪಾಕೃತಿಕ ಗುಣಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಮಾನವ ಜನಾಂಗ ಮರೆಯಾಗುತ್ತಿದೆ. ಈಗಿರುವುದು ಮಿತಿಯನ್ನು ಮೀರಿದ ಕ್ರೂರ ಜೀವ ಸಂತತಿ....

೭) ಮನುಷ್ಯ ಹುಲಿಯನ್ನು ಕೊಂದರೆ ಶೌರ್ಯ, ಆದರೆ ಹುಲಿ ಮನುಷ್ಯನನ್ನು ಕೊಂದರೆ ಕ್ರೌರ್ಯ! (ಜಾರ್ಜ್ ಬರ್ನಾಡ್ ಶಾ) ನನ್ನ ಪ್ರಕಾರ ಪ್ರಾಣ ರಕ್ಷಣೆಗೆ ಹೊರತಾದ ಎಲ್ಲಾ ತರಹದ ಪ್ರಾಣಿಹತ್ಯೆಯೂ ಕ್ರೌರ್ಯವೇ... ಆದರೆ ಮನುಷ್ಯ ಕಾಡನ್ನು ನೆಲಸಮ ಮಾಡಿ, ಪ್ರಾಣ ರಕ್ಷಣೆಯೆಂದು ಆಗಲೂ ಪ್ರಾಣಿಹತ್ಯೆ ಮಾಡುತ್ತಾನೆ. ಮನುಷ್ಯನಿಗೆ ವಿಕೃತಿ ತೋರಲು ಕಾರಣ ಬೇಕು, ಅಷ್ಟೇ.

ನಾನಿಲ್ಲಿ ಕೊಟ್ಟಿರುವುದು ‘ನನಿ’ಯಲ್ಲಿ ದಾಖಲಾಗಿರುವ ಕೆಲವೇ ಕೆಲವು ನನ್ನಿಗಳನ್ನು. ಅವುಗಳ ಪೂರ್ಣ ಪಾಠಕ್ಕೆ ಕಾದಂಬರಿಯ ಸಮಗ್ರ ಓದು, ಚಿಂತನೆ ಅತ್ಯಗತ್ಯ. ಇಲ್ಲಿ ಕಾಣ ಸಿಗುವ, ಕುಕ್ಕುವ, ಕರಗಿಸುವ, ಬೆಚ್ಚಿಸುವ, ಕಣ್ಮುಚ್ಚಿ ದಿಟ್ಟಿ ಹೊರಳಿಸಲು, ನಿರ್ಲಕ್ಷಿಸಿ ತಾತ್ಕಾಲಿಕ ನೆಮ್ಮದಿ ಪಡೆಯಲು ಪ್ರೇರೇಪಿಸುವ ಸತ್ಯವು ನಿಜವಾಗಿಯೂ ಉರಿವ ಸೂರ್ಯನಂತೇ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವೇ. ಕಾದಂಬರಿಯಲ್ಲೆಲ್ಲೋ ಬರುವಂತೇ.. ‘ಇಲ್ಲಿ ನಾವು ವಿಮರ್ಶಿಸಬೇಕಾದದ್ದು ಸತ್ಯಕ್ಕೆ ಯಾರು ಹತ್ತಿರವಿದ್ದಾರೆ ಎಂದೇ ಹೊರತು ಸತ್ಯವನ್ನು ಮುಟ್ಟಿದವರು ಯಾರು ಎಂದಲ್ಲ.’  ಅಂತಹ ಸತ್ಯವನ್ನು ಜಾಗೃತಿಯಲ್ಲೇ, ಜಾಗೃತೆಯಿಂದ ತಡವುವ, ಕೊಂಚ ವಿಶಾದದೊಂದಿಗೇ ಸ್ವೀಕರಿಸುವ ಸಣ್ಣ ಅವಕಾಶ ಓದುಗರಾದ ನಮಗೆ ಕಲ್ಪಿಸುತ್ತದೆ ‘ನನ್ನಿ’. 

***

"ನನ್ನೀ" ಓದಾಯಿತು, ವಿಮರ್ಶೆ ಬರೆಯುವಷ್ಟು ದೊಡ್ಡವನಲ್ಲ ನಾನು ಆದರೂ ಈ ಕೃತಿಯ ಬಗ್ಗೆ ಬರೆಯಲೇಬೇಕು ಅನಿಸಿದ್ದಕ್ಕೆ ಬರೆಯುತ್ತಿದ್ದೇನೆ - ಪವನ್ ಪ್ರಾಸದ್ ಅವರ ಮೊದಲ ಕೃತಿ "ಕರ್ಮ" ಕಾದಂಬರಿಯನ್ನು ಒಂದೇ ಸಮನೆ ಓದಿ ಮುಗಿಸಿದ್ದೆ ಆದರೆ "ನನ್ನೀ" ಹಾಗೆ ಒಂದೇ ಗುಟಿಕಿನಲ್ಲಿ ಓಡಿಬಿಡುವ ಕಾದಂಬರಿ ಅಲ್ಲ ಇದರ ವಸ್ತು ನಮ್ಮನ್ನು ಆಳವಾದ ಚಿಂತನೆಯಲ್ಲಿ ಮುಳುಗಿಸುತ್ತದೆ .... ಸತ್ಯ ಎಂದರೆ ಸೂರ್ಯನಿದ್ದಂತೆ ಹತ್ತಿರ ಹೋದರೂ ಸಾವು ದೂರ ಹೋದರೂ ಸಾವು ಈ ಕೃತಿಯ ಮುಖ್ಯ ಪಾತ್ರಧಾರಿ ಸಿಸ್ಟರ್ ರೋಣ ಸತ್ಯದ ಹುಡುಕಾಟದಲ್ಲಿ ಕಂಡುಕೊಳ್ಳುವ ಸತ್ಯ ... ಸಮಕಾಲಿನವಲ್ಲದ ವಸ್ತುವನ್ನು ಇಷ್ಟು ಪರಿಣಾಮಕಾರಿಯಾಗಿ ಮತ್ತು ಅಷ್ಟೇ ಸೊಗಸಾಗಿ ಚಿತ್ರಿಸಲಾಗಿದೆ ಇದು ಈ ವಸ್ತುವಿನ ಮೇಲೆ ಲೇಖಕರ ಸಂಶೋಧನೆ ಮತ್ತು ಅಧ್ಯಯನವನ್ನು ತೋರುತ್ತದೆ. ಇಲ್ಲಿ ಬರುವ ಚಾರಿಟಿ ಮಿಶನ್, ಮದರ್ ಎಲಿಸಾ ,ಸಿಸ್ಟರ್ ರೋಣ ಹಾಗು ಅಲ್ಲಿ ನಡೆಯುವ ಘಟನೆಗಳು ಗೌಪ್ಯಗಳು ಸತ್ಯದ ಅನಾವರಣ ಕೇವಲ ಆ ಪಾತ್ರಗಳಿಗೆ ಸೀಮಿತವಲ್ಲ ಇಲ್ಲಿ ಸಿಸ್ಟರ್ ರೋಣ ಮೂಲಕ ಪ್ರತಿ ಓದುಗ ಮಾನವನ ಮೂಲಭೂತವನ್ನು ಹುಡುಕಿಕೊಳ್ಳುತ್ತಾನೆ ಒಂದು ಹಂತದಲ್ಲಿ ಇದರಲ್ಲಿ ಬರುವ "ಎರಿಕ್ ಬರ್ಗ್" ಅವರ ಚಿಂತನೆ ಹುಟ್ಟಿಸುವ ಸಾಲುಗಳು ಬಹಳ ಅದ್ಬುತವಾಗಿ ಮೂಡಿಬಂದಿದೆ ಕೊನೆಯಲ್ಲಿ ಫಾಬ್ರಿಗಾಸನೇ ಎರಿಕ್ ಬರ್ಗ್ ಎನ್ನುವುದು ಬೆಚ್ಚಿಬೀಳಿಸುವ ಮತ್ತೊಂದು ಸತ್ಯ. ನನ್ನ ಪ್ರಕಾರ ಕಾದಂಬರಿಗಳಲ್ಲಿ ಎರಡು ವಿಧ ಮನರಂಜನೆ ಮತ್ತು ಶುದ್ಧಸಾಹಿತ್ಯ ... ಮನರಂಜನೆಯನ್ನು ಕೇಂದ್ರವಾಗಿಸಿಕೊಂಡು ಬರೆಯುವವರು ನಮ್ಮಲ್ಲಿ ಹೆಚ್ಚು ಆದರೆ ಒಂದು ಕಾದಂಬರಿ ಚಿಂತನೆಗಳನ್ನು ಹುಟ್ಟಿಸುವಲ್ಲಿ ಮತ್ತು "ಚರ್ಚೆ" ಹುಟ್ಟುಹಾಕುವಲ್ಲಿ ಯಶಸ್ವಿಯಾಗುವ ಕಾದಂಬರಿ ಶುದ್ದ ಸಾಹಿತ್ಯವಾಗುತ್ತದೆ 
***

ಯಾವುದೇ ಪೂರ್ವಾಗ್ರಹಗಳಿಲ್ಲದೆ ನನ್ನಿ ಓದಿ ಮುಗಿಸಿದೆ. ಓದಿದ ನಂತರ ಕೆಲವು ಸಾಲುಗಳನ್ನು ಹೇಳಿಕೊಳ್ಳಬೇಕಿರುವುದು ಓದುಗನ ಆದ್ಯ ಕರ್ತವ್ಯ..
***
ಬರೆಯುವಾಗ ಕರಣಂ ಪವನ್ ಪ್ರಸಾದ್ ಎಷ್ಟು
ಶ್ರಮಪಟ್ಟಿದ್ದರು ಅನ್ನುವುದು ನನ್ನಿಯ ಪ್ರತಿ ಪುಟಗಳಲ್ಲಿ ವ್ಯಕ್ತವಾಗುತ್ತದೆ. ಕಲ್ಕತ್ತಾದ ಕಾಳಿ ಘಾಟ್ ದ್ನಾರಾಪುರ ಸ್ಲಮ್ ಹಾಗೂ ಬೆಂಗಳೂರಿನ ತೇಗೂರು ವಳಿಗರು ಹಾಗೂ ಹಲಸೂರು ಚರ್ಚ್ ನಡುವೆ ಕಲ್ಪಿಸಲಾಗಿರುವ ಸಂಪರ್ಕ ಓದುಗರಿಗೆ ಇಷ್ಟವಾಗುತ್ತದೆ
***
ಸಿಸ್ಟರ್ ರೋಣ, ಸಿಸ್ಟರ್ ಶುಭ, ಸಿಸ್ಟರ್ ಸೂಫಿ, ಮದರ್ ಎಲಿಸಾ, ಮಿಲ್ಟನ್ ಫ್ಯಾಬ್ರಿಗಾಸ್, ಡೋರಾ, ಫಾದರ್ ರಾಜನ್, ಸಿಸ್ಟರ್ ಕ್ಲಾಡಿಯಾ, ಸೋಮಶೇಖರ್, ವಿಜಯಮ್ಮ, ವನಿತಾ, ವೀಣಾ, ಪ್ರಸನ್ನ, ಶೇಷಾಚಲ ರಾಯರು, ಮುಖ್ಯವಾಗಿ ಜಾರ್ಜ್ ರಾಯಪ್ಪ, ಸಗಾಯ್ ಮೇರಿ ಹಾಗೂ ಕ್ಯಾಥರಿನ್ ಓದಿನುದ್ದಕ್ಕೂ ಗಾಂಭಿರ್ಯದಲ್ಲೇ ಕಾಣಿಸಿಕೊಳ್ತಾರೆ. ಯಾವ ಪಾತ್ರಗಳೂ ಹೆಚ್ಚು ಕಡಿಮೆಯಾಗದಂತೆ ನಿರೂಪಿಸಲ್ಪಟ್ಟಿವೆ. ಸನ್ನಿವೇಶ ಹಾಗೂ ಸಂಸ್ಕ್ರತಿಗಳನ್ನು ಬ್ಯಾಲನ್ಸ್ ಮಾಡುವಲ್ಲಿ ಕರಣಂ ಸಫಲರಾಗಿದ್ದಾರೆ.
***
ಸಿಸ್ಟರ್ ರೋಣ ಪಾತ್ರದ ಮೂಲಕ ಹೆಣ್ಣಿನ ಆಂತರಿಕ ತುಮುಲಗಳನ್ನು ಪವನ್ ಮನೋಜ್ಞವಾಗಿ ಮನಕಲಕುವಂತೆ ಚಿತ್ರಿಸಿದ್ದಾರೆ. ಕಲ್ಕತ್ತಾದ ಸೇವಾ ಸಂಸ್ಥೆಯಲ್ಲಿ ರೋಣ ಅಲಿಯಾಸ್ ದುರ್ಗಾ ಅನುಭವಿಸಿದ ನರಕದ ನಿಜದರ್ಶನ ಓದುಗರಿಗೂ ಆಗುತ್ತದೆ. ಸೇವೆಗೂ ಸ್ವಾರ್ಥಕ್ಕೂ ಇರುವ ವ್ಯತ್ಯಾಸವನ್ನು ಹುಡುಕಿಕೊಳ್ಳುವ ರೋಣಾಗೆ ಮಿಲ್ಟನ್ ಫ್ಯಾಬ್ರಿಗಾಸನ ನೆರವು ಬೇಕಾಗುತ್ತದೆ. ನನ್ ಒಬ್ಬಳು ತನ್ನ ಪತಿ ಕ್ರಿಸ್ತನನ್ನು ತನ್ನದೇ ಭಾವನಾತ್ಮಕ ಕೋನಗಳಿಂದ ಚಿತ್ರಿಸುವ ಪರಿ ನಿಜಕ್ಕೂ ಅದ್ಭುತ. ಇಲ್ಲಿ ಪವನ್ ಪ್ರಸಾದ್ ರ ಸೃಜನಶೀಲತೆ ಕ್ರಿಯಾತ್ಮಕ ಕೆಲಸ ಮಾಡಿದೆ. ವಾಸ್ತವವನ್ನು ಸಮರ್ಪಕವಾಗಿ ಕಟ್ಟಿಕೊಡುವ ಲೇಖಕ ಎರಿಕ್ ಬರ್ಗ್ ಹಾಗೂ ಮಿಲ್ಟನ್ ಫ್ಯಾಬ್ರಿಗಾಸ್ ನಡುವಿನ ಸಂಬಂಧ ಕಾದಂಬರಿಯ ಕೊನೆಯಲ್ಲಿ ಓದುಗರ ಹುಬ್ಬೇರಿಸುತ್ತದೆ..
***
ಗಾಂಧಿಯ ಸತ್ಯಾನ್ವೇಷಣೆ ವೈಯಕ್ತಿಕ ನೆಲಗಟ್ಟಿಗೆ ಸಂಂಬಂಧಪಟ್ಟಿದ್ದರೇ, ಸಿಸ್ಟರ್ ರೋಣಾಳ ಬದುಕಿನ ಸತ್ಯಾನ್ವೇಷಣೆಯ ಪ್ರಯತ್ನ ಒಂದಿಡೀ ಸಮುದಾಯದ ನಂಬಿಕೆಯ ದೃಢ ತಳಹದಿಗೆ ಸಂಬಂಧಪಟ್ಟಿದ್ದು. ಕಾದಂಬರಿಯಲ್ಲಿ ಧರ್ಮ ಜಿಜ್ಞಾಸೆ ಹಾಗೂ ವ್ಯಾಟಿಕನ್ ರಾಜಕಾರಣದ ನಿರ್ವಿವಾದಿತ ಸೂಕ್ಷ್ಮ ಅವಲೋಕನಗಳಿವೆ.
***
ಕರ್ಮ ಕಾದಂಬರಿ ಬರೆದ ನಂತರ ಎರಡನೆಯ ಪ್ರಯತ್ನವೆಂಬಂತೆ ನನ್ನಿ ಬಿಡುಗಡೆಗೊಳಿಸಿದ ಪವನ್ ಪ್ರಸಾದ್ ಮೇಲೆ ಓದುಗರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನು ಪವನ್ ಹುಸಿಗೊಳಿಸಿಲ್ಲ. ಕಾದಂಬರಿಯ ವಾಸ್ತವ ಸತ್ಯಗಳ ಹುಡುಕಾಟದಲ್ಲಿಯೇ ಸಾಕಷ್ಟು ಗಟ್ಟಿತನವಿದೆ.. ಎರಡನೇ ಕಾದಂಬರಿಯಲ್ಲಿ ತಮ್ಮದೇ ಸ್ವಂತ ನಿರೂಪಣಾ ಶೈಲಿ ಬೆಳೆಸಿಕೊಳ್ಳಲು ಪವನ್ ಯತ್ನಿಸಿದ್ದು ಕಂಡುಬರುತ್ತದೆ. ಆದರೆ ಪ್ರಸಾದ್ ಇನ್ನೂ ಬೈರಪ್ಪನವರ ಪ್ರಭಾವದಿಂದ ಹೊರಬಂದಿಲ್ಲ ಅನ್ನುವುದಕ್ಕೆ ಕಾದಂಬರಿಯನ್ನು ಅವರು ಮುಗಿಸಿರುವುದೇ ಸಾಕ್ಷಿ..
***
ಸ್ವತಃ ಕರಣಂ ಹೇಳುವಂತೆ ಕೇವಲ ಟೈಂ ಪಾಸ್ ಗೆ ಮಾತ್ರವಲ್ಲದೇ ಒಂದು ಪ್ರಬುದ್ಧ ವಿಚಾರ ಅರಿಯಲು ನನ್ನಿ ಓದಬೇಕಿದೆ.. ಓದಿದ ನಂತರ ಒಂದು ಆರೋಗ್ಯಕರ ಚರ್ಚೆ ನಡೆಸುವುದಾದರೆ ನನ್ನಿಯ ಕಥಾವಸ್ತು ಉತ್ತಮ ವಿಷಯ..
-ವಿಭಾ
***

ಚಳಿಯ ಕೊರೆಯುವ ದಿನಗಳಲ್ಲಿ, ತಣ್ಣನೆಯ ನೀರಲ್ಲಿ ಕಾಲಿಟ್ಟು ಬಿಟ್ಟರೆ ಒಮ್ಮೆಲೇ ಮಿಂಚು ಸಂಚಾರವಾದಂತಾಗಿ ಹಿಂತೆಗೆದುಕೊಂಡು ಬಿಡೋಣ ಅನಿಸುತ್ತದೆ. ಆದರೆ ಹಾಗೆಯೇ ಮುಂದುವರಿದು ಒಂದೆರಡು ಹೆಜ್ಜೆ ಇಟ್ಟು ಮುಂದುವರಿದು ಅಪ್ಪಿಕೊಂಡರೆ ಬೆಚ್ಚನೆಯ ಅನುಭವವಾಗುತ್ತದೆ. ‘ನನ್ನಿ’ ಯಲ್ಲಿ ನನಗೆ ಕಂಡದ್ದು ಹಾಗೆಯೇ…. ಅಪರಿಚಿತ,ಅಪರೂಪದ ಕಥಾಹಂದರದಲ್ಲಿ ಓದುಗನನ್ನು ಕೂರಿಸುತ್ತದೆ. ನನ್ ಒಬ್ಬರ ಮನದಾಳಕ್ಕಿಳಿದು ನೋಡುವ ಚರ್ಚಿನ,ಮಿಷನರಿಗಳ ನೋಟ ಅಚ್ಚರಿಯೆನಿಸುತ್ತದೆ. ಸೇವೆಯ ವಿವಿಧ ಮುಖಗಳು, ಸೇವಾಕೇಂದ್ರದ ಒಳಹೊರಗನ್ನು ಬಿಚ್ಚಿಡುವ ಕಥೆ ಕುತೂಹಲಕಾರಿಯಾಗಿದೆ. ಸತ್ಯಾನ್ವೇಷಣೆಯೇ ಮೂಲವಾಗಿರುವ ಈ ಕಾದಂಬರಿ ನನ್ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದ ತತ್ವಗಳ ಮೇಲೆ ಪ್ರಶ್ನೆಯೆತ್ತುತ್ತದೆ. ಸತ್ಯಕ್ಕೆ ಹತ್ತಿರವಾದರೂ ,ದೂರವಾದರೂ ಸಾವು ಎಂಬ ತರ್ಕಕ್ಕೆ ಒಡ್ಡುತ್ತದೆ.
ಕಾಳಿಘಾಟಿನಲ್ಲಿ ಬಡತನದ ಚಿತ್ರಣ ಮತಾಂತರವಾದ ಸಮಯದ ಬಗೆಗಿನ ಕಲ್ಪನೆ ನೀಡುತ್ತದೆ. ದೇವರ ಹೆಸರಿನಲ್ಲಿ ನಡೆಯುವ ವ್ಯವಸ್ಥೆಯ ಹುಳುಕನ್ನು, ಒಳಗಿನ ಆಚಾರಗಳನ್ನು ಇದು ದಿಟ್ಟವಾಗಿ ಬಿಂಬಿಸಿದೆ. ‘ಫಾಬ್ರಿಗಾಸ್’ ಪಾತ್ರದ ಚಿತ್ರಣದಲ್ಲಿ ಸತ್ಯಾನ್ವೇಷಣೆಯ ದಿಕ್ಕನ್ನು ನಿಷ್ಠುರವಾಗಿ ಮತ್ತು ನಿಷ್ಪಕ್ಷಪಾತವಾಗಿ ತೆಗೆದುಕೊಂಡು ಹೋಗಿರುವುದು ಶ್ಲಾಘನೀಯ.ಮುಖ್ಯಪಾತ್ರವನ್ನು ನಾಯಕಿಯಂತಲ್ಲದೇ ದೌರ್ಬಲ್ಯಗಳನ್ನು ಕೂಡಿಸಿ ರೂಪಿಸಿರುವುದು ಕಾದಂಬರಿಯು ಮನಸಿಗೆ ಹತ್ತಿರವಾಗುತ್ತದೆ. ಧಾರ್ಮಿಕ ಸಂಘಟನೆಗಳಲ್ಲಿರುವ ಮೂಢನಂಬಿಕೆಗಳು ಅದರಲ್ಲಿನ ಅಸಹಾಯಕ ಕ್ಷಣಗಳು ಇದರ ಉತ್ತಮ ಅಂಶ.
ನನ್ನಿಯನ್ನು ಸತ್ಯದ ನೆಲೆಯಲ್ಲಿ ಬರೆಯಲಾಗಿದೆ ಎಂದು ಹಿನ್ನುಡಿಯಲ್ಲಿ ಸ್ಪಷ್ಟ ಪಡಿಸಿರುವುದರಿಂದ ಇದೊಂದು ಓದಿ ಮರೆಯುವ ಸಾಮಾನ್ಯ ಕಥೆ ಅನಿಸುವುದಿಲ್ಲ. ಕಥೆಯ ಭೂಮಿಕೆ ವಿಭಿನ್ನವಾಗಿರುವದರಿಂದಲೋ, ಇಂಗ್ಲಿಷ್ ನ ನೆರಳಿನಿಂದಲೋ ಓದುವಾಗ ನಿರೂಪಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಮುಗಿದಾಗ ಪ್ರಶ್ನೆಗಳು, ಅಚ್ಚರಿಗಳು ತುಂಬಿ ಸರಿ – ತಪ್ಪುಗಳ ತುಲನೆಯಲ್ಲಿ ಜಾರುತ್ತೇವೆ.
‘ಕರ್ಮ’ ದ ಅನುಭೂತಿಯಿಂದ ನಿರೀಕ್ಷೆ ಹೆಚ್ಚಿಸಿದ ಕೃತಿಯಾದರೂ ಅದರ ಯಾವುದೇ ಎಳೆಯೂ ಕಾಣದೆ ಸಂಪೂರ್ಣ ವಿಭಿನ್ನವಾಗಿ ಸ್ವತಂತ್ರವಾಗಿದೆ. ಚರ್ಚಿನ ಕಿಟಕಿಯಲ್ಲಿ ಇಣುಕಿ ಅಲ್ಲಿನ ನೈಜತೆ ಹೇಳಿ, ಅದರೊಂದಿಗೆ ಮನಸಿನಾಳದ ಸತ್ಯಾನ್ವೇಷಣೆಗೆ ತೊಡಗಿ ಸಾಕಷ್ಟು ಪ್ರಶ್ನೆ ಮೂಡಿಸುವ ಕೃತಿ ಚೆನ್ನಾಗಿದೆ. ಯಾವುದೇ ನಿಲುವಿಗೆ ಅಂಟಿಕೊಳ್ಳದೆ ಅನ್ವೇಷಣೆಯ ದಾರಿಯಲ್ಲಿ ಸಾಗುತ್ತದೆ ನನ್ನಿಯ ಜೊತೆಗಿನ ಪಯಣ. ಕನ್ನಡದ ಓದುಗರಿಗೆ ಒಳ್ಳೆಯ, ಹೊಚ್ಚ ಹೊಸ ಕಾದಂಬರಿಯೊಂದು ಕಳೆದು ಹೋಗಲು, ಚಿಂತಿಸಲು ದೊರಕಿದೆ.
***
"ನನ್ನಿ" ಕರ್ಮ ಕಾದಂಬರಿಯ ಲೇಖಕರಾದ ಶ್ರೀ Karanam Pavan Prasad
ಅವರಿಂದ ನಿರೀಕ್ಷಿಸಲ್ಪಟ್ಟ ಉತ್ತಮ ಕಾದಂಬರಿ. ಓದಿ ಮುಗಿಸಿದ ಕ್ಷಣದಲ್ಲಿ ಹಂಚಿಕೊಳ್ಳಬಹುದಾದ ತತ್ಕ್ಷಣದ ಅನಿಸಿಕೆಗಳಿಷ್ಟು ..
ಕಾದಂಬರಿ ಕುರಿತು ಹೇಳಬೇಕೆಂದರೆ ವಿಷಯದ ವ್ಯಾಪ್ತಿ ದೊಡ್ಡದು. ಒಂದು ಮುಖವನ್ನಷ್ಟೇ ಎತ್ತಿಕೊಂಡಿದ್ದರೂ ಕಥೆಗೆ ಪೂರಕವಾದ ಮಾಹಿತಿಗಳಿವೆ. ಅಧ್ಯಯನಾಸಕ್ತರು ಕುಳಿತು ಓದುತ್ತಾರೆ. ಫಾಬ್ರಿಗಾಸನ ಮೂಲಕ ಹೇಳಲು ಹೊರಟಿರುವ ಅನೇಕ ವಿಷಯಗಳು ಮನಸ್ಸನ್ನು ಕಲಕುತ್ತವೆ. ವಿಚಾರಕ್ಕೆ ಹಚ್ಚುತ್ತದೆ. ಮಂಥನದ ನಡುವೆ ವೈಚಾರಿಕತೆ ಇದೆ. ಇವನ್ನೆಲ್ಲ ಓದುವಾಗ ಒಮ್ಮೊಮ್ಮೆ ವಿಷಯದ ಗಹನತೆ ಎಲ್ಲೋ ಗಂಭೀರ ಅನ್ನಿಸಿದರೂ ಮತ್ತೆ ಕಥೆಗೆ ಮರಳುವಾಗ ಸಹಜವಾಗುತ್ತದೆ. ಅದು ತುಂಬಾ ದೀರ್ಘಕಾಲದವರೆಗೆ ಎಳೆದುಕೊಳ್ಳುವುದಿಲ್ಲ. ಕಥೆಯಿಂದ ಓದುಗನನ್ನು ಹೊರಗಿಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಥೆಯ ಈ ಚಿಂತನೆಗಳು ಕೇವಲ ಕ್ರಿಶ್ಚಿಯಾನಿಟಿಗೆ ಸೀಮಿತವಾದುದಲ್ಲ. ಅದು ಮನುಕುಲದ ವಿಚಾರ. ಓದುಗ ಧರ್ಮದ ಸೀಮಿತತೆಯಿಂದ ಹೊರಬಂದು ಓದಿಕೊಳ್ಳಬೇಕು. ಇದು ಎಷ್ಟುಜನರಿಗೆ ಅರ್ಥವಾಗುತ್ತೋ ದೇವರೇ ಬಲ್ಲ.
ಉಳಿದಂತೆ ಒಂದು ಧರ್ಮದ ಹೆಸರಿನಲ್ಲಿ ನಡೆಯುವ ನಡೆಸುತ್ತಿರವ ಅದು ಹಬ್ಬಿರುವ ಎಲ್ಲ ವಿಚಾರಗಳನ್ನೂ ಕಾದಂಬರಿ ಅತ್ಯಂತ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಕಥೆಗೆ ಪೂರಕವಾಗಿ ಬಂದಿರುವುದರಿಂದ ಅದರ ವಿಮಶರ್ೆಗೆ ಬಹಳಷ್ಟು ವಿಸ್ತಾರವಿರುವುದರಿಂದ ಆ ವಿಷಯ ಇಲ್ಲಿ ತೆಗೆದುಕೊಳ್ಳುವುದಿಲ್ಲ.
ಸಿಸ್ಟರ್ ರೋಣ ಒಂದು ವ್ಯವಸ್ಥೆಯ ಕನ್ನಡಿಯಂತೆ ಹೊರಮುಖವಾಗಿ ತೋರಿದರೂ ನನಗೆ ಕಂಡಿದ್ದು ಅವಳ ಒಳಮುಖ. ಹಲವು ಸಲ ಅವಳು ಸಿಟ್ಟಿಗೇಳುತ್ತಾಳೆ.ರೋಧಿಸುತ್ತಾಳೆ. ಅಳುತ್ತಾಳೆ. ಅಷ್ಟೇ ಅಲ್ಲ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಸಹಜವಾದ ಪಾತ್ರಾಭಿವ್ಯಕ್ತಿ. ತುಂಬಾ ಸ್ಮಾರ್ಟ ಅನ್ನಬಹುದು.
ನನಗೆ ಇಷ್ಟವಾದದ್ದು. ಅವಳು ಕ್ರಿಸ್ತನೇ ಗಂಡ ಅನ್ನುತ್ತಲೂ ಫಾಬ್ರಿಗಾಸನ ಪ್ರೇಮವನ್ನು ಮನಸ್ವೀ ಒಪ್ಪಿಕೊಂಡು ಅಪ್ಪಿಕೊಂಡು ನಿಂತುಬಿಡುವುದು. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೆಲ್ಲದರ ನಡುವೆ ಅವಳೆಲ್ಲೋ ಆದರ್ಶಗಳ ಮೂಟೆ ಹೊತ್ತು ಅನಾಮತ್ತು ಏನೂ ಮಾಡದೇ ನನ್ ಆಗಿ ಸಿಸ್ಟರ್ ಆಗಿ ಅದೇ ವಲಯದಲ್ಲಿ ಬದುಕನ್ನು ಮತ್ತೆ ಮತ್ತೆ ಹುಡುಕುವುದು.
ಮನುಷ್ಯ ತನಗೆ ಗೊತ್ತಿಲ್ಲದ ಏನನ್ನೋ ಮಾಡಿಬಿಡುವುದು ಅಸಹಜ ಅನ್ನಿಸುತ್ತದೆ. ಅವನು ಸ್ವಲ್ಪ ಆಕಡೆ ಈಕಡೆ ಅನ್ನಿಸಿದರೂ ತನಗೆ ಗೊತ್ತಿರುವ ಬಗೆಯಲ್ಲೇ ಬದುಕು ಹುಡುಕುವ ಪ್ರಯತ್ನ ಮಾಡುತ್ತಾನೆ. ಆದರೆ ರಾಯಪ್ಪನ ಕೊನೆಯಲ್ಲಿ ಫಾದರ್ ನ ಮಾಂಸ ಭಕ್ಷಣೆ ಮನಸ್ಸಿಗೆ ಕಷ್ಟವೆನ್ನಿಸಿತು. ರಾಯಪ್ಪನ ಪೂರ್ಣ ಚಿತ್ರಣದಲ್ಲಿ ಅವನೊಬ್ಬ
ಅತ್ಯುತ್ತಮ ಅಪ್ಪ. ಅವನೊಬ್ಬ ಸಹೃದಯವಂತ. ಅವನ ಮಗಳಿಗಾಗಿ ವನಿತಳಿಗಾಗಿ ಅವನಲ್ಲಿ ತಾಯಿಯಂತ ಅಂತಃಕರಣವಿತ್ತು. ಆ ಮನುಷ್ಯನ ಚಿತ್ರಣದಲ್ಲಿ ಅಲ್ಲೆಲ್ಲೋ ಮಾಂಸ ಭಕ್ಷಣೆಯ ವಿಷಯ ಬಂದರೂ ಅದೊಂದು ವಿಕ್ಷಿಪ್ತ ವಿಷಯದಂತೆ ಹೊರಗೇ ಉಳಿದುಬಿಡುತ್ತದೆ. ಆದರೆ ಕೊನೆಯ ಅಂಕ ಮಾತ್ರ ಯಾಕೋ ಮನಸಿಗೆ ಕಷ್ಟವೆನ್ನಿಸುತ್ತದೆ.
ಸಲಿಂಗ ಕಾಮದ ಕುರಿತಾಗಿ ನಾನು ಬರೆಯುವುದಿಲ್ಲ. ಪ್ರಪಂಚದ ಬಹಳಷ್ಟು ವಿಕೃತಿಗಳು ಸಹಜ ಎಂಬಂತೆ ನಡೆದುಹೋಗುತ್ತವೆ ಎನ್ನುವ ನಿಮ್ಮದೇ ಮಾತನ್ನು ತುಂಬ ಚಂದವಾಗಿ ಕಟ್ಟಿಕೊಟಿದ್ದೀರಿ. ಈ ಕ್ಷಣಕ್ಕೆ ಇಷ್ಟು ಅನಿಸಿಕೆಗಳು. ಮನಸಿಗೆ ತಾಕಿದ ಹಲವು ಅಂಶಗಳು ಮಥನವಾಗುತ್ತಿರುತ್ತವೆ. ಒಂದೊಳ್ಳೆಯ ಓದಿಗೆ ಚಿಂತನೆಗೆ ಅತ್ಯುತ್ತಮ ಕಾದಂಬರಿ. ಕೊಂಡು ಓದುವ ಎಲ್ಲರಿಗೂ ಖುಷಿಕೊಡುವ ತಾಜಾತನದ ಬರವಣಿಗೆ.

'ನನ್ನಿ' ಕಥೆಯ ಬಗ್ಗೆ ಹೇಳಿದರೆ ಓದುಗರಿಗೆ ತಾಜಾತನ ಮತ್ತು ಕುತೂಹಲ ಕಡಿಮೆ ಆದಂತೆ ನನ್ನ ಭಾವನೆ, ಆದ್ದರಿಂದ ಇಲ್ಲಿ ನಾನು ಬರೀ ಲೇಖಕರ ಬಗ್ಗೆಯೇ ಒಂದೆರಡು ಮಾತು ಹೇಳುತ್ತೇನೆ. 'ಕರ್ಮ' ದಲ್ಲೇ ಓದುಗರ ಆಕರ್ಷಿಸಿದ್ದ ಲೇಖಕ Karanam Pavan Prasad ಪ್ರಥಮ ಪಂದ್ಯದಲ್ಲೇ ಶತಕ ಹೊಡೆದು ಬಹಳ ನಿರೀಕ್ಷೆ ಮೂಡಿಸಿದಂತಹ ಯುವ ಲೇಖಕ. ತಮ್ಮ ಎರಡನೇ ಕಾದಂಬರಿಯಲ್ಲಿ ಬೇರೆಯೇ ವಸ್ತುವಿನ ಬಗ್ಗೆ ಬಹಳ ಆಳವಾದ ಅಧ್ಯಯನ, ನಿರೂಪಣಾ ಶೈಲಿ, ಓದುಗರನ್ನೇ ಸಹ ಪಾತ್ರಧಾರಿಯಾಗಿಸುವಂತಹ ಅವರ ರಂಗಭೂಮಿಯ ಅನುಭವ ಇಲ್ಲಿ ಬಹಳ ಉಪಯೋಗವಾಗಿದೆ. 'ನನ್ನಿ' ಶೀರ್ಷಿಕೆಯೇ ಬಹಳ ಚೆಂದ ಮತ್ತು ಕುತೂಹಲ ಮೂಡಿಸುತ್ತದೆ!
ಈ ಕಾದಂಬರಿಯ ಕಾಲಘಟ್ಟವನ್ನು ದೃಢೀಕರಿಸಲು ಉಪಯೋಗಿಸಿರುವ ಉದಾಹರಣೆಗಳು ತುಂಬಾ ವಿಭಿನ್ನವಾಗಿವೆ, ಅದರಲ್ಲೂ ನಾ ಕಂಡ ನನ್ನ ಹಳೆಯ ಬೆಂಗಳೂರನ್ನು ನೆನಪಿಸುವ ಪ್ರಸಂಗಗಳು ನನ್ನ ಬಾಲ್ಯದ ನೆನಪಿಗೆ ಜಾರಿಸಿ ಕಥೆಯಲ್ಲಿ ಇನ್ನೂ ಆಳವಾಗಿ ಪ್ರವೇಶಿಸುವಂತೆ ಮಾಡಿತು. ಈ ಕಾದಂಬರಿಯ ಯಾವ ಪಾತ್ರವೂ ಅನಗತ್ಯವೆನಿಸದೆ ಕಥೆಯ ಓಟಕ್ಕೆ ಪೂರಕವಾಗಿವೆ.
ಯುವ ಸಾಹಿತಿಗಳ ಕೊರತೆಯನ್ನು ನೀಗಿಸುವಲ್ಲಿ ಹಾಗೂ ಗಟ್ಟಿ ಕಥಾ ವಸ್ತುವಿನ ಆಯ್ಕೆಯಲ್ಲಿ ಆಳವಾದ ಅಧ್ಯಯನ ಮಾಡುವ ಯುವಕರಿದ್ದಾರೆ ಎಂಬುದೇ ಒಂದು ಸಂತಸದ ಸುದ್ದಿ, ಕರಣಂ ಅವರ ಈ ಕೃತಿಗೆ ನನ್ನ ಮೆಚ್ಚುಗೆ ಸೂಚಿಸುತ್ತಾ ಹಾಗೂ ಮುಂದಿನ ಅವರ ಕೃತಿಗಳಿಗೆ ಶುಭಕೋರುತ್ತೇನೆ. 

Sunday, October 18, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 60

ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ
(Bhagandeshwar and Thalakaveri)

ಕರ್ನಾಟಕದ ಸ್ವಿಜರ್ ಲ್ಯಾಂಡ್ ಎಂದು ಕರೆಯುವ ಕೊಡಗಿನಲ್ಲಿ ಹಲವಾರು ಪುಣ್ಯ ಹಾಗೂ ಪ್ರವಾಸಿ ಸ್ಧಳಗಳಿವೆ. ಅಂತಹ ಪುಣ್ಯ ಸ್ಧಳಗಳಲ್ಲಿ ಒಂದು ಕೊಡಗಿನ ತಲ ಕಾವೇರಿ. ಕೋಡಗಿನ ಮುಖ್ಯ ಪಟ್ಟಣ ಮಡಿಕೇರಿಯಿಂದ 48 ಕಿ. ಮೀ. ದೂರದಲ್ಲಿರುವ ಈ ಪ್ರದೇಶ ಮೂರು ರಾಜ್ಯಗಳಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಧಳ. ಕರ್ನಾಟಕ , ತಮಿಳುನಾಡು , ಕೇರಳ ರಾಜ್ಯಗಳಿಗೆ ನೀರಿನ ಆಶ್ರಯ ನೀಡಿರುವ ಕಾವೇರಿ ಉಗಮ ಗೋಳ್ಳವುದು ತಲಕಾವೇರಿಯಲ್ಲಿ. ಪ್ರಕೃತಿಯ ರಮ್ಯ ನೋಟದ ನಡುವೆ ಭಕ್ತಿ ಭಾವವನ್ನು ಉಂಟುಮಾಡುವ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ ಕಾವೇರಿ ತೀರ್ಥೋದ್ಭವದ ವೇಳೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

Goddess Cauveri at Thalakaveri, 

***
ಪೂರ್ವಕಾಲದಲ್ಲಿ ಕವೇರನೆಂಬ ಬ್ರಾಹ್ಮಣೋತ್ತಮನು ಬ್ರಹ್ಮಗಿರಿಯಲ್ಲಿ ವಾಸಿಸಿಕೊಂಡಿದ್ದು ತನಗೆ ಸಂತತಿಯಾಗಬೇಕೆಂದು ಬಯಸಿ ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದನು. ವಿಪ್ರೋತ್ತಮನ ತಪಸ್ಸಿಗೆ ಒಲಿದು ಬ್ರಹ್ಮದೇವನು ಪ್ರತ್ಯಕ್ಷನಾಗಿ 'ನೀನು ಪೂರ್ವಕಾಲದಲ್ಲಿ ಪುತ್ರಸಂತಾನ ಪ್ರಾಪ್ತಿಯಾಗಲು ಬೇಕಾದ ಧರ್ಮವನ್ನು ಮಾಡಿರುವುದಿಲ್ಲ ಹಾಗಾಗಿ ನಿನಗೆ ಲೋಪಾಮುದ್ರೆಯೆಂಬ ನಾಮಾಂಕಿತವನ್ನೊಳಗೊಂಡ ನನ್ನ ಮಾನಸಪುತ್ರಿಯನ್ನು ಮಗಳಾಗಿ ನೀಡುವೆನು' ಎಂದು ಹೇಳಿ ಕುಮಾರಿಯನ್ನು ಪುತ್ರಿಯಾಗಿ ಸ್ವೀಕರಿಸುವಂತೆ ಆಜ್ಞೆ ನೀಡಿದನು. ಅನುಸಾರವಾಗಿ ಕವೇರನು ಲೋಪಾಮುದ್ರೆಯನ್ನು ಸಂತೋಷದಿಂದ ಸ್ವೀಕರಿಸಿ ಅನೇಕ ವಿಧದಲ್ಲಿ ದಿವ್ಯ ಕುಮಾರಿಯನ್ನು ಸ್ತುತಿಸಿ ಕೊಂಡಾಡಿದನು. ದೇವದಾನವರು ಕ್ಷೀರಸಮುದ್ರವನ್ನು ಮಥನ ಮಾಡಿದಾಗ ಉತ್ಪತ್ತಿಯಾದ ಅಮೃತವನ್ನು ಅಸುರರು ಅಪಹರಿಸಿದರು. ಅದನ್ನು ಕೈವಶ ಮಾಡಿಕೊಳ್ಳಲು ದೇವದೇವತೆಗಳ ಪರವಾಗಿ ವಿಷ್ಣು ಅಂಶದಿಂದ ಹುಟ್ಟಿದ ಮೋಹಿನಿಯಂತೆಯೇ ಲಕ್ಷ್ಮಿದೇವಿಯ ಅಂಶದಿಂದ ಹುಟ್ಟಿದವಳೇ ಶ್ರೀ ಲೋಪಾಮುದ್ರೆ. ನಂತರ ಅವಳನ್ನು ಶ್ರೀ ಹರಿಯು ಬ್ರಹ್ಮದೇವನಿಗೆ ಆಶೀರ್ವಾದಪೂರ್ವಕವಾಗಿ ನೀಡಿ ಮಾನಸಪುತ್ರಿಯಾಗಿ ಸ್ವೀಕರಿಸೆಂದನು. ಹೀಗೆ ದಿವ್ಯಾಂಶ ಸಂಭೂತಳಾದ ಶ್ರೀ ಲೋಪಾಮುದ್ರೆಯ ದಿವ್ಯ ತೇಜಸ್ಸು-ಯೋಗ್ಯತೆಗಳನ್ನು ಕಂಡು ತಪೋಘನನಾದ ಕವೇರನು ಆಕೆಯನ್ನು ಪುನಃಪುನಃ ಸ್ತುತಿಸಿದನು. ಜಗತ್ತಿನ ಸಮಸ್ತ ಪ್ರಾಣಿಗಳಿಗೂ ಕಲ್ಯಾಣಾನುಗ್ರಹದೇವತೆಯಾದ ಶ್ರೀದೇವಿಯೇ ಆಗಿದ್ದ ಶ್ರೀ ಲೋಪಾಮುದ್ರಾ ದೇವಿಯು ಕವೇರ ಮುನಿಯನ್ನು ಸಂತೈಸುತ್ತಾ 'ತಂದೆಯೇ! ನಾನು ಲೋಕ ಕಲ್ಯಾಣವನ್ನು ಸಾಧಿಸಲು ನದಿರೂಪವಾಗಿ ಹರಿದು ಸಮುದ್ರವನ್ನು ಸೇರುವೆನು. ಜನರು ನನ್ನನ್ನು ಲೋಕದಲ್ಲಿ ಬ್ರಹ್ಮಪುತ್ರಿಯೆಂದೂ, ಮಾಯೆ ಎಂದೂ, ಕಾವೇರಿ ಎಂದೂ ಕರೆಯುವರು. ಜನರ ಪಾಪಗಳನ್ನು ನಾನು ನಾಶ ಮಾಡುವವಳೆಂದು ಲೋಕಪ್ರಸಿದ್ಧಳಾಗುವೆನು ಎಂದು ಹೇಳಿದಳು. ನಂತರ ಕವೇರ ಮುನಿಯು ಲೋಪಾಮುದ್ರೆಯ ಅನುಗ್ರಹಕ್ಕೆ ಪಾತ್ರನಾಗಿ ದೇಹತ್ಯಾಗ ಮಾಡಿ ತನ್ನ ಸತಿಸಹಿತನಾಗಿ ಬ್ರಹ್ಮಲೋಕವನ್ನು ಸೇರಿದನು. ಇಳೆಗೆ ಇಳಿದು ಬಂದ ದೇವಕುವರಿ ಶ್ರೀ ಲೋಪಾಮುದ್ರೆಯು ಜಗತ್ಕಲ್ಯಾಣವನ್ನು ಸಾಧಿಸುವ ದೃಷ್ಟಿಯಿಂದ ಶಿವನನ್ನು ಕುರಿತು ಕಠೋರ ತಪಸ್ಸನ್ನು ಆಚರಿಸುತ್ತಾ, ಬ್ರಹ್ಮರ್ಷಿಗಳ ಒಡನೆ ಬ್ರಹ್ಮಗಿರಿಯ ಪವಿತ್ರ ನೆಲೆಯಲ್ಲಿ ವಾಸಿಸುತ್ತಾ ಇದ್ದಳು.
Goddess Cauveri temple, Thalakaveri

ದಿವ್ಯವಾದ ಕಾಂತಿಯಿಂದಲೂ, ತಪಸ್ಸಿನ ತೇಜಸ್ಸಿನಿಂದಲೂ ಕೂಡಿ ಕಾವೇರಿಯು ಬ್ರಹ್ಮಗಿರಿಯ ತಪ್ಪಲಿನಲ್ಲಿ ಬ್ರಹ್ಮರ್ಷಿಗಳ ಪವಿತ್ರವಾದ ಆಶ್ರಮದಲ್ಲಿ ಆನಂದವಾಗಿ ಬಾಳುತ್ತಿದ್ದಳು. ಆ ಸಂದರ್ಭದಲ್ಲಿ ಋಷಿವರ್ಯರಾದ ಅಗಸ್ತ್ಯಮುನಿಗಳು ಉತ್ತರ ಭಾರತದಿಂದ ದಕ್ಷಿಣಾಪಥಕ್ಕೆ ಬಂದವರು ಬ್ರಹ್ಮಗಿರಿಗೆ ಸಂದರ್ಶನವಿತ್ತರು. ಬ್ರಹ್ಮಋಷಿಗಳನೇಕರ ತಪೋಧಾಮವಾದ ಬ್ರಹ್ಮಗಿರಿಯಲ್ಲಿದ್ದ ವಸಿಷ್ಠ ಇತ್ಯಾದಿ ಮಹರ್ಷಿಗಳನ್ನು ಭೇಟಿಮಾಡಿ ಅವರಿಂದ ಆತಿಥ್ಯವನ್ನು ಪಡೆದು ಋಷ್ಯಾಶ್ರಮದ ಮೂಲ ಶಕ್ತಿಯೋ ಎಂಬಂತಿದ್ದ ಶ್ರೀ ಕಾವೇರಿ ದೇವಿಯನ್ನು ಕಂಡು ಹರ್ಷಗೊಂಡರು. ತ್ರಿಕಾಲ ಜ್ಞಾನಿಯೂ, ಮುನಿಪುಂಗವರೂ ಆದ ಅಗಸ್ತ್ಯ ಮಹರ್ಷಿಗಳು ಕಾವೇರಿ ದೇವಿಯ ಜನ್ಮದ ಮೂಲ ಉದ್ದೇಶವನ್ನು ಗ್ರಹಿಸಿಕೊಂಡರು. ಅಗಸ್ತ್ಯ ಋಷಿಗಳು ಶ್ರೀ ಕಾವೇರಿಯನ್ನು ವಿವಾಹವಾಗಲು ಬಯಸಿದರು. ಮಹರ್ಷಿಗಳ ಬಯಕೆಗೆ ಕಾವೇರಿದೇವಿಯು ಒಪ್ಪಿ 'ತನ್ನನ್ನು ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದೆಂದೂ, ಹೋದರೆ ತಾನು ಸಲಿಲೇಶ್ವರನಾದ ಸಮುದ್ರದೆಡೆಗೆ ನದಿಯಾಗಿ ಹೊರಟು ಹೋಗುತ್ತೇನೆ' ಎಂತಲೂ ಹೇಳಿದಳು. ಶ್ರೀದೇವಿಯು ಹೇಳಿದ ನಿಬಂಧನೆಗೆ ಋಷಿ ಅಗಸ್ತ್ಯರು ಸಮ್ಮತಿಸಿದರು. ಅನುಸಾರವಾಗಿ ಋಷ್ಯಾಶ್ರಮದ ಪವಿತ್ರ ನೆಲೆಯಲ್ಲಿ ದೇವದೇವತೆಗಳ ಸಮ್ಮುಖದಲ್ಲಿ ಶ್ರೀಅಗಸ್ತ್ಯ ಕಾವೇರಿಯರ ಕಲ್ಯಾಣವು ವೇದೋಕ್ತ ರೀತಿಯಲ್ಲಿ ಬಹಳ ವೈಭವದಿಂದ ನಡೆಯಿತು. ನಂತರ ಕೆಲವು ಸಮಯದ ತನಕ ನೂತನ ದಂಪತಿಗಳು ಗೃಹಸ್ತಾಶ್ರಮ ಜೀವನವನ್ನು ಸುಖವಾಗಿ ಸಾಗಿಸುತ್ತಾ ಬಂದರು. ಹೀಗಿರುವಾಗ ಒಂದು ದಿನ ಬ್ರಾಹ್ಮೀಮುಹೂರ್ತದಲ್ಲಿ ಮಹರ್ಷಿ ಅಗಸ್ತ್ಯರು ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನಕಾ ನದಿಯ ತೀರಕ್ಕೆ ಸ್ನಾನಕ್ಕೆಂದು ತೆರಳಿದರು. ತೆರಳುವ ಮುನ್ನ ತಮ್ಮ ಪವಿತ್ರ ಕಮಂಡಲದೊಳಗೆ ಶ್ರೀ ಕಾವೇರಿಯನ್ನು ಆವಾಹನೆ ಮಾಡಿ ತಮ್ಮ ಶಿಷ್ಯರಿಗೆಲ್ಲಾ 'ಜಾಗ್ರತೆ ನೋಡಿಕೊಳ್ಳಿ' ಎಂದು ಹೇಳಿ ತೆರಳಿದರು. ಲೋಕಪಾವನೆಯಾಗಿ, ಲೋಕೇಶ್ವರಿಯಾಗಿ, ಲೋಕೋಪಯೋಗಿ ನದಿಯಾಗಿ ಬೆಳಗಬೇಕಾಗಿ ಇಳೆಗೆ ಇಳಿದು ಬಂದ ಮಹಾತಾಯಿ ಕಾವೇರಿ ಇದೇ ಸಂದರ್ಭವನ್ನು ನಿರೀಕ್ಷಿಸುತ್ತಿರಬೇಕು! ತನ್ನ ನಿಬಂಧನೆಯನ್ನು ಪತಿಯಾದ ಅಗಸ್ತ್ಯರು ಉಲ್ಲಂಘಿಸಿದರೆಂದು ಹೇಳಿ ಹೊರಡುವ ಅವಕಾಶ ಒದಗಿ ಬಂತು. ಕಾವೇರಿ ಕೂಡಲೇ ಕಮಂಡಲುವಿನಿಂದ ಹೊರಬಂದು ಪಕ್ಕದ ಬ್ರಹ್ಮಕುಂಡಿಕೆಯನ್ನು ಸೇರಿ ಅಲ್ಲಿಂದ ಜಲರೂಪಳಾಗಿ, ನದಿಯಾಗಿ ಹರಿಯ ಹೊರಟಳು. ಅವಳ ಹರಿವಿಕೆಯನ್ನು ತಡೆಯ ಹೋದ ಶಿಷ್ಯರಿಗೆ ಕಾಣಿಸಿಕೊಳ್ಳದೆ ಗುಪ್ತಗಾಮಿನಿಯಾಗಿ ಸ್ವಲ್ಪದೂರ ಹರಿದು ಮತ್ತೆ ಕಾಣಿಸಿಕೊಂಡಳು. ಆಗ ಸ್ನಾನಾಹ್ನಿಕಗಳನ್ನು ಮುಗಿಸಿ ಬಂದ ಮುನಿ ಪುಂಗವರಿಗೆ ತನ್ನ ಸತಿ ಎಸಗಿದ ಕಾರ್ಯದ ಅರಿವಾಗಿ "ನದಿಯಾಗಿ ಮುಂದೆ ಹರಿಯುವುದು ಬೇಡ. ಮರಳಿ ತನ್ನ ಪತ್ನಿಯಾಗಿ ಶರೀರಧಾರಿಯಾಗಿ ಬಾಳು' ಎಂದು ಅವರು ಬಹು ವಿಧದಲ್ಲಿ ಶ್ರೀಕಾವೇರಿಯನ್ನು ಕೇಳಿಕೊಂಡರು. ಓಂಕಾರೇಶ್ವರಿಯೂ, ಜಗನ್ಮಾತೆಯೂ, ಇಚ್ಛಾಜ್ಞಾನಕ್ರಿಯಾಶಕ್ತಿಸ್ವರೂಪಿನಣಿಯಾದ ಶ್ರೀ ಕಾವೇರಿ ದೇವಿಯು ಓಂಕಾರೇಶ್ವರರಾದ ಅಗಸ್ತ್ಯ ಮುನಿಗಳಿಗೆ ಸಮಾಧಾನ ಹೇಳುತ್ತಾ, ಲೋಕಕಲ್ಯಾಣಕ್ಕಾಗಿ ತಾನು ನದಿರೂಪ ತಳೆದು ಲೋಕೋಪಕಾರ ಮಾಡುವೆನೆಂದು ಸ್ಪಷ್ಟಪಡಿಸಿದಳು. ಅಗಸ್ತ್ಯರು ಶಿಷ್ಯವರ್ಗದವರನ್ನೊಡಗೂಡಿಕೊಂಡು ಶ್ರೀ ಕಾವೇರಿಯು ನದಿಯಾಗಿ ಹರಿದು ಮುಂದುವರಿದಂತೆ ಹಿಂಬಾಲಿಸುತ್ತಾ ತೆರಳಿದರು. ಕಾವೇರಿಯು ನದಿಯಾಗಿ ಹರಿದು ಕೆಲವು ಮೈಲುಗಳಷ್ಟು ಮುಂದೆ ತೆರಳಿದಾಗ ನಾಗಲೋಕದವರು ಹಾದಿಗೆ ಅಡ್ಡಲಾಗಿ ಬಂದು ಶ್ರೀಮಾತೆಯನ್ನು ಸ್ತುತಿಸಿ ಮಾತೆಯನ್ನು ನದಿಯಾಗಿ ಹರಿಯದೆ ಉಳಿಯಬೇಕೆಂದು ಪ್ರಾರ್ಥಿಸಿದರು. ಅವರನ್ನು ಸಮಾಧಾನಗೊಳಿಸಿ ಶ್ರೀಕಾವೇರಿಯು ಮುಂದೆ ಸರಿದಳು. ನಾಗಲೋಕದವರು ಶ್ರೀಮಾತೆಯನ್ನು ತಡೆದ ಸ್ಥಳವು ನಾಗತೀರ್ಥವೆಂದು ಪ್ರಸಿದ್ಧವಾಯಿತು. ನಾಗತೀರ್ಥದಿಂದ ಮುಂದೆ ಸಾಗಿದ ಶ್ರ್ರೀಕಾವೇರಿಯು ಭಾಗಮಂಡಲ ಕ್ಷೇತ್ರದಲ್ಲಿ ಕನಕ, ಸುಜ್ಯೋತಿ ನದಿಗಳನ್ನು ಒಡಗೂಡಿಕೊಂಡು ಮುಂದೆ ತೆರಳಿದರು. ಹೀಗೆ ಕೆಲವು ಮೈಲುಗಳು ಸಾಗಿದಾಗ ವಲಂಬುರಿ (ಬಲಮುರಿ) ಎಂಬ ಊರಿಗೆ ತಲುಪಿದಳು. ಅಲ್ಲಿ ಕೊಡಗನ್ನು ಆಳುತ್ತಿದ್ದ ಚಂದ್ರವರ್ಮ ರಾಜನ ಸಂತತಿಯವರೂ, ಮಾತೆಯ ಭಕ್ತರಾದವರೆಲ್ಲರೂ ಶ್ರೀಮಾತೆಯನ್ನು ಎದುರುಗೊಂಡರು. ಶ್ರೀಕಾವೇರಿ ನದಿಯ ನೀರಿನ ಹರಿಯುವಿಕೆಯ ರಭಸಕ್ಕೆ ಅಲ್ಲಿ ನೆರೆದಿದ್ದ ಸ್ತ್ರೀಯರ ಸೀರೆ ನೆರಿಗೆಯು ಹಿಂಬದಿಗೆ ಸರಿದು ಹೋಯಿತು. ನೆರೆದಿದ್ದ ಜನಸಮೂಹ, ತನ್ನ ಪತಿದೇವ, ಭಕ್ತ ವರ್ಗದವರೆಲ್ಲರನ್ನೂ ಶ್ರೀಮಾತೆ ಕೆಲವು ಮಾತುಗಳನ್ನು ಹೇಳಿದಳು. ತನ್ನ ಪತಿಯನ್ನು ಉದ್ದೇಶಿಸಿ, ತಾನು ಲೋಕೋಪಕಾರಕ್ಕಾಗಿ ನದಿಯಾಗಿ ಹೊರಟು ಹೋಗುವೆನೆಂದೂ, ಆದರೆ ದ್ವಿರೂಪ ತಾಳಿ ಒಂದು ರೂಪದಲ್ಲಿ ಕಾವೇರಿಯಾಗಿ ನದಿಸ್ವರೂಪದಲ್ಲಿ ಲೋಕೋಪಕಾರ ಕೆಲಸಕ್ಕೆ ತೆರಳಿ ಸಮುದ್ರವನ್ನು ಸೇರುವೆನೆಂತಲೂ, ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ "ಸತ್ಯ, ಧರ್ಮ, ಪ್ರೇಮ, ಭಕ್ತಿ, ಶ್ರದ್ಧೆಗಳಿಂದ ಕೂಡಿದವರಾಗಿ ಸದಾ ಸುಖಿಯಾಗಿರಿ. ಈ ದಿನ ಇಲ್ಲಿ ಹಿಂದೆ ಸರಿದುಹೋದ ಸ್ತ್ರೀಯರ ಸೀರೆ ನೆರಿಗೆಗಳು ನಾನು ನದಿರೂಪ ತಳೆದು ಹರಿದುದರ ಜ್ಞಾಪಕಾರ್ಥವಾಗಿ ಮುಂದೆಯೂ ಹೀಗೆಯೇ ನಿತ್ಯಾಚರಣೆಯಲ್ಲಿ ನೆರಿಗೆ ಕ್ರಮದಿಂದ ಸ್ತ್ರೀಯರಿಂದ ಅನುಸರಿಸಲ್ಪಡುವಂತಾಗಲಿ. ವರ್ಷಕ್ಕೊಮ್ಮೆ ಸೂರ್ಯನು ತುಲಾರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣ ಕಾಲದಲ್ಲಿ ಗಂಗಾದಿ ಸಮಸ್ತ ಪುಣ್ಯ ತೀರ್ಥಗಳಿಂದ ನಾನು ಒಡಗೂಡುವವಳಾಗುತ್ತೇನೆ" ಎಂದು ಹೇಳಿ ಆಶೀರ್ವದಿಸಿ ಮುಂದೆ ನದಿರೂಪವಾಗಿ ತೆರಳಿದಳು. ನೆರೆದಿದ್ದ ಜನಸ್ತೋಮ ಜಯಕಾವೇರಿ - ಜಯ ಜಗನ್ಮಾತೆ ಎನ್ನುತ್ತಾ ಒಕ್ಕೊರಲಿನಿಂದ ಶ್ರೀಮಾತೆಯನ್ನು ಕೊಂಡಾಡಿದರು. ಮಹರ್ಷಿಗಳಾದ ಶ್ರೀ ಅಗಸ್ತ್ಯರು ಶ್ರೀ ಕಾವೇರಿಯನ್ನು ಆಶೀರ್ವದಿಸಿ ಅವಳ ಮೂಲಕ ಲೋಕಕ್ಕೆ ಕಲ್ಯಾಣ ಉಂಟಾಗಲಿ ಎಂದು ಹಾರೈಸಿದರು. ಬಲಮುರಿಯಿಂದ ಮುಂದೆ ಗುಹ್ಯ-ರಾಮಸ್ವಾಮಿ ಕಣಿವೆ-ಕನ್ನಂಬಾಡಿಗಳನ್ನು ಹಾದು ಪಶ್ಚಿಮವಾಹಿನಿಯಾಗಿ ಶ್ರೀರಂಗಪಟ್ಟಣದ ಹತ್ತಿರ ಹರಿದು ಪುನಃ ಪೂರ್ವಾಭಿಮುಖಿಯಾಗಿ ಸಾಗಿ ಶ್ರೀರಂಗಪಟ್ಟಣವನ್ನು ಸೇರಿದಳು. ಮುಂದಕ್ಕೆ ಸಾಗಿ ತಿರುಮಕೂಡಲು-ತಲಕಾಡು-ಮೆಟ್ಟೂರು-ಶ್ರೀರಂಗಂ-ತಿರುಚಿನಾಪಳ್ಳಿ-ಕುಂಭಕೋಣಂ ಇತ್ಯಾದಿ ಊರುಗಳನ್ನು ಸೇರುತ್ತಾ ಕೊನೆಗೆ ಪೂರ್ವ ಸಮುದ್ರವನ್ನು ಸೇರಿದಳು.
ಕಾವೇರಿ ನದಿಗೆ ಅಲ್ಲಲ್ಲಿ ಹರಿದು ಸೇರಿದ ಅನೇಕ ಉಪನದಿಗಳ ಪೈಕಿ ಕನ್ನಿಕೆ ಮತ್ತು ಸುಜ್ಯೋತಿ ಎಂಬ ಎರಡು ನದಿಗಳು ಪ್ರಸಿದ್ಧವಾಗಿದ್ದವು. ಅವುಗಳಿಗೆ ತಮ್ಮದೇ ಆದ ಪೌರಾಣಿಕ ಹಿನ್ನಲೆಯಿದೆ. ಸುಜ್ಯೋತಿಯು ಕನಕೆಯಂತೆ ಕಾವೇರಿಯನ್ನು ನದಿರೂಪಳಾಗಿ ಹರಿದು ಸೇರಿ ಸಂಗಮವಾಗುವುದನ್ನು ಭೌತಿಕ ಚಕ್ಷುಗಳಿಂದ ಕಾಣಲು ಸಾಧ್ಯವಿಲ್ಲ. ಗಂಗಾ, ಯಮುನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಸರಸ್ವತಿ ನದಿ ಹೇಗೆ ಅಜ್ಞಾತವಾಗಿ ಸಂಗಮವಾಗಿದೆಯೋ ಹಾಗೆಯೇ ಕನ್ನಿಕೆ-ಕಾವೇರಿ ನದಿಗಳ ಒಡನೆ ಸುಜ್ಯೋತಿಯು ಸಂಗಮವಾಗಿರುತ್ತದೆ
ಕನ್ನಿಕೆಯು ಪೌರಾಣಿಕವಾಗಿ ಇಂದ್ರನ ಪರಿಚಾರಿಕೆಯಾದ ಯಕ್ಷಸ್ತ್ರೀಯಾಗಿದ್ದಳು. ಹಿಂದೆ ಸುಯಜ್ಞೆಯೆಂಬ ವಿಪ್ರಶ್ರೇಷ್ಠನೊಬ್ಬನಿದ್ದು ಅವನು ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸನ್ನು ಆಚರಿಸಿದನು. ಭಕ್ತನ ತಪಸ್ಸಿಗೆ ಒಲಿದ ಭಗವಾನ್ ಶ್ರೀಹರಿಯು ತಾಪಸೋತ್ತಮನಾದ ಸುಯಜ್ಞನಿಗೆ ತನ್ನಂಶದಿಂದ ಉತ್ಪನ್ನಳಾದ ಕನ್ನಿಕೆ ಸುಜ್ಯೋತಿ ಎಂಬುವಳನ್ನು ನೀಡಿ, ಬ್ರಹ್ಮಗಿರಿಯ ಬಳಿಯ ಗಜರಾಜನಿಗೆ ತೆರಳಿ ಅಲ್ಲಿ ಪುತ್ರಿಯೊಡನೆ ಇರು ಎಂದು ಹೇಳಿ ಅಂತರ್ಧಾನನಾದನು. ಸುಯಜ್ಞನು ವರಲಬ್ಧೆಯಾದ ಕುವರಿ ಸುಜ್ಯೋತಿಯೊಡನೆ ಗಜರಾಜಗಿರಿಗೆ ಬಂದನು. ಅಲ್ಲಿದ್ದ ಶುಭಕಾರಿಣಿ ಯಕ್ಷಿಣಿಯಾದ ಕನ್ನಿಕೆಯೊಡನೆ ಪುತ್ರಿ ಸುಜ್ಯೋತಿಯನ್ನು ಕೂಡಿಕೊಂಡು ಶುದ್ಧಚಾರಿತ್ರ್ಯವಂತನೂ, ತಪೋನಿಷ್ಠನೂ ಆಗಿ ಬಾಳಹೊರಟನು. ಕೆಲವು ಕಾಲಾನಂತರ ಶ್ರೀಮಹಾವಿಷ್ಣುವಿನ ದರ್ಶನ ಹೊಂದಿ ವೈಕುಂಠಧಾಮಕ್ಕೆ ತೆರಳಿದನು. ತಂದೆಯ ನಿರ್ಗಮನದ ನಂತರ ಪುತ್ರಿ ಸುಜ್ಯೋತಿಯು ಭಗವಂತನ ದರ್ಶನಕ್ಕಾಗಿ ವಿಶೇಷವಾದ ತಪಸ್ಸನ್ನೆಸಗಿದಳು. ಅಷ್ಟರಲ್ಲಿ ದೇವಲೋಕದ ಒಡೆಯನಾದ ದೇವೇಂದ್ರನು ಅಲ್ಲಿಗೆ ಆಗಮಿಸಿ ಸುಜ್ಯೋತಿಯನ್ನು ವಿವಾಹವಾಗಲು ಬಯಸಿದನು. ಅವನು ಸುಜ್ಯೋತಿಯನ್ನು ಕುರಿತು "ಸಹಸ್ರ ಸಂವತ್ಸರಗಳ ನಂತರ ನದಿಯಾಗಿ ತೆರಳು. ಆ ತನಕ ನನ್ನೊಡನೆ ಪತ್ನಿಯಾಗಿ ಬಾಳಿಕೊಂಡಿರು" ಎಂಬುದಾಗಿ ಹೇಳಿದನು. ಇಂದ್ರನ ಈ ಬಯಕೆಯಿಂದ ಅಸಂತುಷ್ಟನಾದ ಸುಜ್ಯೋತಿಯು ಗೆಳತಿ ಕನ್ನಿಕೆಯೊಡನೆ ಮಾತನಾಡಿ ಆಕೆಯನ್ನು ಒಡಗೂಡಿಕೊಂಡು ನದಿರೂಪಳಾಗಿ ಹರಿಯ ಹೊರಟಳು. ತನ್ನ ಮಾತನ್ನು ಲೆಕ್ಕಿಸದೆ ನದಿಯಾಗಿ ಸರಿದ ಸುಜ್ಯೋತಿಯನ್ನು ಕಂಡು ಇಂದ್ರನು 'ಜಲಶೂನ್ಯಳಾಗು' ಎಂದು ಆಕೆಗೆ ಶಾಪವನ್ನು ಕೊಟ್ಟನು. ಸುಜ್ಯೋತಿಯು ಇಂದ್ರನಲ್ಲಿ ಮರುಸಮಾಧಾನದ ವರಬೇಡಲು ಇಂದ್ರನು ಪರಮಪಾವನೆಯಾದ ಕಾವೇರಿ ನದಿಯ ಪವಿತ್ರವಾರಿ ಸೋಂಕಿದಾಗ ಜಲಪೂರ್ಣಳಾಗೆಂದು ಮರುವರವನ್ನಿತ್ತನು. ಅನುಸಾರವಾಗಿ ಸುಜ್ಯೋತಿಯು ಕನ್ನಿಕಾ-ಕಾವೇರಿ ಸಂಗಮದ ಪವಿತ್ರ ಮುಹೂರ್ತವನ್ನು ನಿರೀಕ್ಷಿಸುತ್ತಾ ಇದ್ದಳು. ಮಂಗಳ ಮುಹೂರ್ತದಲ್ಲಿ ಪವಿತ್ರ ಕಾವೇರಿ-ಕನ್ನಿಕೆಯರ ಸಂಗಮವಾದಾಗ ಸುಜ್ಯೋತಿಯು ಸೇರಿ ಜಲ ಶೂನ್ಯತೆಯನ್ನು ಕಳೆದುಕೊಂಡು ಜಲಪೂರ್ಣತೆಯನ್ನು ಪಡೆದು ಪವಿತ್ರ ನದಿಯಾಗಿ ರೂಪಾಂತರ ಹೊಂದಿದಳು.
***
Sri Bhagandeshwara temple, Bhagamandala

ಭಾಗಮಂಡಲ ಕ್ಷೇತ್ರಕ್ಕೆ ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ಧವಾಗಿರುತ್ತದೆ. ಇಲ್ಲಿ ಶ್ರೀ ಭಗಂಡೇಶ್ವರ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಮಹಾವಿಷ್ಣು ದೇಗುಲಗಳಿವೆ. ಶ್ರೀ ಮಹಾಗಣಪತಿ ಸನ್ನಿಧಿಯು ದೇಗುಲದ ಹೊರ ಅಂಗಣದಲ್ಲಿದೆ.
ಹಿಂದೆ ಭಗಂಡರೆಂಬ ಮುನಿವರ್ಯರು ಇಲ್ಲಿ ವಾಸವಾಗಿದ್ದು, ಷಣ್ಮುಖಸ್ವಾಮಿಯನ್ನು ಕುರಿತು ತಪಸ್ಸು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಸುಬ್ರಹ್ಮಣ್ಯಸ್ವಾಮಿಯ ದಿವ್ಯ ನೆಲೆಯಾಗಿದ್ದು ಸ್ಕಂದಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದ್ದ ಇಂದಿನ ಭಾಗಮಂಡಲದ ಭೂ ಭಾಗವನ್ನು ಭಗಂಡ ಋಷಿಗಳ ಮೇಲೆ ಸುಪ್ರೀತರಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಅನುಗ್ರಹ ಪೂರ್ವಕವಾಗಿ ಅವರಿಗೆ ಕೊಡುಗೆಯಾಗಿ ನೀಡುತ್ತಾರೆ. ಋಷಿಗಳ ಪರಮಪಾವನನಾದ ತಪೋಭೂಮಿ ಹಾಗೂ ದೇವನೆಲೆಯಾದ ಸ್ಕಂದ ಕ್ಷೇತ್ರದಲ್ಲಿ ಸರ್ವಜೀವರ ಕ್ಷೇಮಕ್ಕಾಗಿ ಶಿವಲಿಂಗವೊಂದನ್ನು ಭಗಂಡ ಮಹರ್ಷಿಗಳು ಪ್ರತಿಷ್ಠಾಪಿಸುತ್ತಾರೆ. ಭಗಂಡ ಋಷಿಯು ನೆಲೆಸಿ ತಪಸ್ಸನ್ನು ಎಸಗಿ ಷಣ್ಮುಖಸ್ವಾಮಿಯಿಂದ ಅನುಗ್ರಹವಾಗಿ ಪಡೆದ ಕ್ಷೇತ್ರವಾದ್ದರಿಂದ ಭಗಂಡಕ್ಷೇತ್ರ ಎಂದು ಹೆಸರಾಯಿತು. ಅದೇ ಹೆಸರು ಮುಂದೆ ಭಾಗಮಂಡಲ ಎಂದು ರೂಪಾಂತರವನ್ನು ಹೊಂದಿತು. ಭಗಂಡ ಋಷಿಗಳು ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಭಗಂಡೇಶ್ವರನೆಂದು ಸ್ತುತಿಸಿ ಶಿವನನ್ನೇ ಪ್ರಧಾನವಾಗಿ ಪೂಜಿಸುವಂತಾಯಿತು. ಮಹಾ ತಪಸ್ವಿಗಳಾದ ಭಗಂಡ ಮಹರ್ಷಿಗಳು ತಪಸ್ಸನ್ನು ಎಸಗಿದ ಭೂಮಿಯಾದುದರ ಜೊತೆಗೆ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಸ್ವಕೀಯ ಕ್ಷೇತ್ರವಾಗಿಸಿಕೊಂಡಿದ್ದ ಭೂಭಾಗವಾಗಿದ್ದು, ಋಷಿ ಪ್ರತಿಷ್ಠೆಯಿಂದಾದ ಶಿವದೇಗುಲದಿಂದ ಕೂಡಿರುವ ಭಾಗಮಂಡಲವು ಪುರಾಣ ಪ್ರಸಿದ್ಧವಾದ ಪವಿತ್ರ ಕ್ಷೇತ್ರ ಎಂಬುದರಲ್ಲಿ ಸಂದೇಹವಿಲ್ಲ.

Friday, October 16, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 59

ಭಕ್ತಾಪುರ (ನೇಪಾಳ) – Bhakthapur (Nepal)



ಹಿಂದೂ, ಬೌದ್ದ ಸಂಸ್ಕೃತಿಗಳ ನೆಲೆವೀಡಾದ ನೇಪಾಳದಲ್ಲಿರುವ ಭಕ್ತಾಪುರ ಅಲ್ಲಿನ ತುಳಜಾ ಭವಾನಿ (ತಲೈಜು ಭವಾನಿ) ದೇವಾಲಯದಿಂದಲೂ, ಅರಮನೆಗಳಿಂದಲೂ ಪ್ರಸಿದ್ದವಾಗಿದೆ. ರಲ್ಲಿ ಭಾರತದ ಓರ್ವ ಅರಸನಾದ ಹರಸಿಂಗ ದೇವ ಭಕ್ತಾಪುರಕ್ಕೆ ಆಗಮಿಸಿದ್ದನು. ಅವನ ಕುಲದೇವಿಯಾದ ತುಳಜಾ ಭವಾನಿಯನ್ನೂ ಜತೆಗೊಯ್ದಿದ್ದ ಆ ಅರಸನು ಭಕ್ತಾಪುರದ ರಾಜನಾಗಿ ಪ್ರಾಚೀನವಾದ ತುಳಜಾ ಭವಾನಿ ದೇವಾಲಯವನ್ನು ನಿರ್ಮಿಸಿದನು. ನೇಪಾಳಿಗರ ಬಾಯಲ್ಲಿ ಈ ತುಳಜಾ ಭವಾನಿಯು ತಲೇಜು ಭವಾನಿಯಾಗಿ ಕಠ್ಮಂಡು ಕಣಿವೆಯ ರಕ್ಷಕಿ ಎನಿಸಿದಳು.

ಕುಮಾರಿ ದೇವಿ (Kumari Devi, Nepal)
ಹರಸಿಂಗನ ಕಾಲದಿಂದಲೂ ತಲೇಜು ಭವಾನಿಯನ್ನು ಕುಮಾರಿ ದೇವತೆಯ ಸ್ವರೂಪದಲ್ಲಿ ಆರಾಧಿಸುವ ಸಂಪ್ರದಾಯವು ಬೇಳೆದು ಬಂದಿದೆ. ನೇಪಾಳದ ಕಠ್ಮಂಡು ಕಣಿವೆಯ ಮೂರು ಜಿಲ್ಲೆಗಳಲ್ಲಿಯೂ ತಲೇಜು ಭವಾನಿಯ ದೇವಾಲಯಗಳಿದ್ದು ಅವುಗಳಲ್ಲಿ ಭಕ್ತಾಪುರದ ದೇವಾಲಯವೇ ಅತ್ಯಂತ ಪುರಾತನವಾದದ್ದು.
ಅದರಂತೆ ಇಂದಿಗೂ ನೇಪಾಳದ ಗರ್ಭಿಣಿ ಮಹಿಳೆಯರು ತಾವು ಕನಸಿನಲ್ಲಿ ಕೆಂಪು ಸರ್ಪವನ್ನು ಕಂದದ್ದಾದರೆ ದೇವಿ ತಲೇಜು ಭವಾನಿಯು ತಮ್ಮ ಗರ್ಭದಲ್ಲಿ ಕುಮಾರಿ ದೇವಿಯ ಸ್ವರೂಪದಲ್ಲಿ ಅವತರಿಸುತ್ತಾಳೆಂದು ನಂಬುವರು.

***

ದರ್ಬಾರ್ ಚೌಕ, ಭಕ್ತಾಪುರ್ (Darbar Circle, Bhakthapur, Nepal) 
ನೇಪಾಳದ  ಅರಸ ಜಯಪ್ರಕಾಶ ಮಲ್ಲನಿಗೆ ತ್ರಿಪಾಸಾ ಹೆಸರಿನ ಪಗಡೆಯಾಟವು ಅತ್ಯಂತ ಪ್ರಿಯವಾಗಿತ್ತು. ಅದೊಂದು ದಿನ ರಾತ್ರಿಯ ವೇಳೆ ಅವನೊಬ್ಬನೇ ತನ್ನ ಕೋಣೆಯಲ್ಲಿ ಈ ಆಟವನ್ನಾಡುತ್ತಿರಲು ಒಂದು ಕೆಂಪು ಸರ್ಪ ಅವನ ಮುಂದೆ ಬಂದಿತು. (ಕೆಂಪು ಸರ್ಪವು ತಲೇಜು ಭವಾನಿಯ ವಾಹನ.) ರಾಜನೆದ್ದು ದೇವಿಯನ್ನು ಸ್ವಾಗತಿಸಿದನು. ಅವಳು ಆ ರಾತ್ರಿಯಿಡೀ ಅವನೊಡನೆ ಆಟವನ್ನಾಡಿದ್ದಳು.


ತಲೇಜು ಭವಾನಿ (Thalelu Bhavani, Bhkthapur, Nepal)
ಅಂದಿನಿಂದಲೂ ಪ್ರತಿ ದಿನದ ರಾತ್ರಿ ದೇವಿಯು ಅರಸನೊಡನೆ ತ್ರಿಪಾಸಾ ಆದಲು ಬರುತ್ತಿದ್ದಳು. ಬೆಳಗಿನ ಸೂರ್ಯೋದಯದ ಒಳಗೆ ಮರೆಯಾಗುತ್ತಿದ್ದಳು. "ತನ್ನ ಆಗಮನದ ವಿಚಾರವನ್ನು ರಾಜನು ಮೂರನೆಯವರಿಗೆ ಹೇಳಬಾರದು" ಎಂದು ದೇವಿಯು ಅರಸನಿಗೆ ಅಪ್ಪಣೆ ಕೊಡಿಸಿದ್ದು ಅದರಂತೆಯೇ ರಾಜನು ಆ ವಿಚಾರವನ್ನು ಯಾರಲ್ಲಿಯೂ ಹೇಳಿರಲಿಲ್ಲ. ಅದೊಂದು ದಿನ ರಾತ್ರಿಯ ವೇಳೆಯಲ್ಲಿ ಅರಸನು ಯಾರೊಡನೆ ಕಳೆಯುತ್ತಾನೆನ್ನುವ ಕೆಟ್ಟ ಕುತೂಹಲದಿಂದ ಅರಸನ ಕೋಣೆಗೆ ರಾಣಿಯು ಪ್ರವೇಶಿಸಿದಳು. ರಾಣಿಗೆ ತಲೇಜು ದೇವಿ ಕಾಣಿಸಿಕೊಂಡಳು, ಮತ್ತು ಅವಳು ತಾನು ಕೂಡಲೇ ಸರ್ಪವನ್ನೇರಿ ಮರೆಯಾದಳು. ಅದಾಗ ರಾಜ ಅವಳನ್ನು ತಡೆಯಲು ಪ್ರಯತ್ನಿಸಿದ. ಬಗೆ ಬಗೆಯಾಗಿ ಬೇಡಿಕೊಂಡನಾದರೂ ಅವಳು ಹೊರಟು ಹೋದಳು. ಹಾಗೆ ಹೊರಡುವುದಕ್ಕೂ ಮುನ್ನ - "ಮುಂದೆ ತಾನು ರತ್ನಾವಳಿಯ ನೇವಾರಿ ಶಾಕ್ಯ ಪಂಥದ ಜನರ ನಡುವೆ ಅವತರಿಸುತ್ತೇನೆ. ಅಲ್ಲಿ ನನ್ನನ್ನು ಹುಡುಕಬಹುದು." ಎಂದು ನುಡಿದಳು. ಅದರಂತೆಯೇ ರಾಜನು ಅವಳನ್ನು ಹುಡುಕುತ್ತಾ ತಾನೂ ಅರಮನೆಯನ್ನು ಬಿಟ್ಟು ಹೊರಟನು.

***

ತಲೇಜು ಭವಾನಿ ದೇವಾಲಯ (Thalelu Bhavani temple, Bhkthapur, Nepal)
ನೇಪಾಳದ ಅರಸ ತ್ರೈಲೋಕ್ಯ ಮಲ್ಲನು ರಾಜ್ಯವನ್ನಾಳುತ್ತಿರಲು ದೇವಿ ತಲೇಜು ಭವಾನಿಯು ಪ್ರತಿದಿನ ರಾತ್ರಿಯ ವೇಳೆ ಮಾನವ ರೂಪ ಧರಿಸಿ ಬರುತ್ತಿದ್ದಳು. ಅರಸನು ಅವಳೊಡನೆ ರಾಜ್ಯದ ಕ್ಷೇಮ ಸಮಾಚಾರಗಳನ್ನು ಚರ್ಚಿಸುತ್ತಿದ್ದ. ಅದೊಮ್ಮೆ ಅರಸನು ತಾನು ದೇವಿಯೊಡನೆ ದೇಹ ಸಂಪರ್ಕ ಬೇಳೇಸಲು ಮುಂದಾದಾಗ ಅವಳು ಕೋಪಗೊಂಡು ಅವನಿಂದ ದೂರಾದಳು. ಅದಾದ ನಂತರ ಅರಸನು ತಾನು ಪಶ್ಚಾತ್ತಾಪದಿಂದ ಕೂಡಿ ದೇವಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸಿದನು. ಮತ್ತು ಮರಳಿ ಬರುವಂತೆ ಪ್ರಾರ್ಥಿಸಿದನು. ಅಂತ್ಯದಲ್ಲಿ ದೇವಿಯು "ತಾನು ಶಾಕ್ಯ ಕುಟುಂಬದ ಕನ್ಯೆಯ ದೇಹದಲ್ಲಿ ಕಾಣಿಸಿಕೊಳ್ಳುತ್ತೇನೆ" ಎಂದು ನುಡಿದಳು.

***

ನೇಪಾಳದ  ಅರಸ ಜಯಪ್ರಕಾಶ ಮಲ್ಲನ ಕಾಲದಲ್ಲಿ ಓರ್ವ ಎಳೆ ಬಾಲೆಯ ಮೈಮೇಲೆ ದೇವಿ ತಲೇಜು ಆವಾಹನೆಯಾಗುವಳೆಂದು ಅವಳನ್ನು ರಾಜ್ಯದಿಂದಲೇ ಗಡಿಪಾರು ಮಾಡಲಾಗಿತ್ತು. ಇದನ್ನು ತಿಳಿದ ರಾಣಿಯು ಆ ಬಾಲಕಿಯನ್ನು ಕೂದಲೇ ಹುಡುಕಿ ತರುವಂತೆ ತನ್ನ ಪತಿಯನ್ನು ವಿನಂತಿಸಿದ್ದಳು. ಆ ಹುಡುಗಿಯನ್ನು ದೇವಿಯ ಜೀವಂತ ಅವತಾರವೆಂದು ಪೂಜಿಸಬೇಕೆಂದು ಅಣತಿ ಮಾಡಿದ್ದಳು. 

Wednesday, October 07, 2015

ಕುಪ್ಪಳ್ಳಿ, ಕವಿಶೈಲ - ಆದ್ಯಾತ್ಮಿಕ ಅನುಭೂತಿ ನೀಡುವ ಸ್ಮರಣೀಯ ಸ್ಥಳ



ನಾನು ಹಾಗೂ ನನ್ನ ಅಣ್ಣ ಪ್ರಭಾಕರ ಅಡಿಗ ಕವಿಶೈಲದ ಬಂಡೆಯ ಮೇಲೆ
ನಾನು ಮೊನ್ನೆ ಗಾಂಧಿ ಜಯಂತಿಯಂದು ಕನ್ನಡದ ಮಹಾನ್ ಕವಿ ರಸಋಷಿ ಕುವೆಂಪು ಜನ್ಮಭೂಮಿ ಕುಪ್ಪಳ್ಳಿಗೆ ನನ್ನ ಅಣ್ಣನೊಡನೆ ಭೇಟಿ ನೀಡಿದ್ದೆ. ಅಲ್ಲಿನ ಸುಂದರ ಪ್ರಕೃತಿ, ನಯನಮನೋಹರ ಹಸಿರು ವಾತಾವರಣ ನನ್ನನ್ನು ಮಂತ್ರಮುಗ್ದನನ್ನಾಗಿಸಿತು. ಅಂತಹಾ ಹಚ್ಚ ಹಸಿರಿನ ನಡುವೆ ಇರುವ ಕವಿಮನೆ ನಿಜಕ್ಕೂ ಪ್ರಶಾಂತವಾಗಿದ್ದು ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಮನಸ್ಸಿಗೆ ಶಾಂತಿ ಸಮಾಧಾನವನ್ನು ನೀಡುತ್ತದೆ.


ಕವಿಶೈಲದ ವರ್ಣನೆ ಇರುವ ಕಲ್ಲು




ಪ್ರಪಂಚದ ಹದಿನೆಂಟು ಜೀವ ವೈವಿದ್ಯದ ತಾಣದಲ್ಲಿ ಒಂದಾದ ಸ್ಥಳ ಸಹ್ಯಾದ್ರಿ ಬೆಟ್ಟ, ಅದರ ತಪ್ಪಲಲ್ಲೆ ಇರುವುದು ಕುವೆಂಪುರವರ ಬಾಲ್ಯ ಕಳೆದ ಮನೆ, ಈಗ “ಕವಿಮನೆ” ಯಾಗಿದೆ.  ಇನ್ನೂರು ವರ್ಷ ಹಳೆಯದಾದ ಮನೆಯು, ಮಲೆನಾಡಿನ ಸೌಂದರ್ಯವನ್ನು ತನ್ನ ಒಡಲಲ್ಲೆ ಇನ್ನೂರು ವರ್ಷ ಇಟ್ಟುಕೊಂಡಿದ್ದ ಈ ಮನೆಯು ಎಂತವರನ್ನು ಏನನ್ನು ಮಾತನಾಡಿಸದೆ ತನ್ನ ಕಡೆಗೆ ದಿಟ್ಟಿಸುವಂತೆ ಮಾಡುತ್ತದೆ.
ಕುವೆಂಪು ಬಳಸುತ್ತಿದ್ದ ಎತ್ತಿನ ಗಾಡಿ ಇರುವ ಕೋಣೆ
ಕುಪ್ಪಳ್ಳಿಯಲ್ಲಿ ಹುಟ್ಟಿ ಮೈಸೂರಿನಲ್ಲಿ ನಿಂತು ಅಖಂಡ ವಿಶ್ವಕ್ಕೆ ವಿಶ್ವಮಾನವ ಸಂದೇಶ ಕೊಟ್ಟ ಕುವೆಂಪುರವರ ಮನೆ ಇಂದು ಪ್ರವಸಿತಾಣ. ಅತ್ಯುತ್ತಮ ಕೃತಿಗಳನ್ನು ಕೊಟ್ಟು, ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು, ಬದುಕಿನ ಅರ್ಥವನ್ನು ತಿಳಿಸಿಕೊಟ್ಟು ಅಮರರಾದ ಕವಿ ಕುವೆಂಪುರವರ ಮನೆ ಇಂದಿನ ಆದುನಿಕ ಮನೆ ತರಹದ ಫಾಸ್ಟ್ ಫುಡ್ ನಂತೆ ಅಲ್ಲ. ಕವಿ 

ಮನೆಯ ಅಡುಗೆ ಮನೆ, ಸ್ನಾನದ ಕೋಣೆಯಿಂದ ಹಿಡಿದು ಮಲಗುವ ಕೋಣೆಯ ತನಕ ಎಲ್ಲೆಲ್ಲೂ ಎಲ್ಲವೂ ಸತ್ವ ಭರಿತ ವೈಶಿಷ್ಟವುಳ್ಳ ವಸ್ತುಗಳು, ಕುವೆಂಪು ತಮ್ಮ ನೆನಪಿನ ದೋಣಿಯಲ್ಲಿ ಉಲ್ಲೇಖಿಸಿರುವ ಹಾಗೆ ನನ್ನ ಹುಟ್ಟು ಅರ್ಥಾತ್ ಅದು ನನ್ನ ಅಜ್ಜಿ ನನ್ನನ್ನು ತಯಾರಿಸಿದಳು ಎಂದು. ಅದಕ್ಕೆ ಮೇಲೆ ನಾನು ಹೇಳಿದ್ದು " ಬದುಕಿಗೆ ಬೇಕಾದ ಅಗತ್ಯ ತಿಳುವಳಿಕೆ ನೀಡುವಲ್ಲಿ ವಿಫಲರಾದ ಹಿರಿಯರು ಕೂಡ ಇದರಲ್ಲಿ ಭಾಗಿ " ಎಂದು. ಕುವೆಂಪು ಉಪಯೋಗಿಸಿದ ವಸ್ತುಗಳು ಅವರ ಎಲ್ಲಾ ಡಾಕ್ಟರೇಟ್ ಪದವಿಗಳು, ಅವರ ಮಧುವೆಯ ಕರೆಯೋಲೆ, ತುಂಬು  ಕುಟುಂಬದ ಚಿತ್ರಗಳು, ಕುಲಪತಿಯಾಗಿ ಕುವೆಂಪು, ಅಜ್ಜನಾಗಿ ಕುವೆಂಪು ಹೀಗೆ ಹಲವು ಬಗೆಯ ವಿಚಾರಗಳು ನಮಗೆ ನೋಡ ಸಿಗುತ್ತವೆ.
ಕುಪ್ಪಳ್ಳಿ ಮಹಾಮನೆಯ ಮೂಲ ಹೆಬ್ಬಾಗಿಲು
ಕುಪ್ಪಲ್ಲಿ ಕವಿಮನೆ
ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನವು ಈ ಮನೆಯನ್ನು, ಅದರ ಮೂಲ ವಿನ್ಯಾಸಕ್ಕೆ ಹಾಳಾಗದಂತೆ ನವೀಕರಿಸಿ, ಒಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡಿಸಿದೆ.  ಮನೆಯ ಒಳಗೆ ಕುವೆಂಪುರವರು ಕುಪ್ಪಳ್ಳಿ ಮತ್ತು ಮೈಸೂರಿನಲ್ಲಿ ಇದ್ದಾಗ ಬಳಸುತ್ತಿದ್ದ ವಸ್ತುಗಳು, ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಬಳಸುತ್ತಿದ್ದ ದೊಡ್ಡ ಗಾತ್ರದ ಅಡಿಗೆ ಮನೆಯ ವಸ್ತುಗಳು, ಅವರ ಸಾಹಿತ್ಯ ಭಂಡಾರ, ಅವರ ಪ್ರಶಸ್ತಿಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ.  ಕುವೆಂಪುರವರ ವಿವಾಹದ ಮುದ್ರಿತ ಪತ್ರ ಮತ್ತು ವಿವಾಹ ಮಂಟಪ ಗಮನ ಸೆಳೆಯುವಂತ ವಸ್ತುಗಳಾಗಿವೆ.  ಕುವೆಂಪುರವರ ಕೆಲವು ಕಾದಂಬರಿಗಳ ಮೊದಲ ಮುದ್ರಿತ ಪ್ರತಿಗಳನ್ನು ಪ್ರದರ್ಶಿಸಲಾಗಿದೆ.  ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ “ಶ್ರೀ ರಾಮಾಯಣದರ್ಶನಂ” ಮಹಾಕಾವ್ಯದ ಮೊದಲ ಹಸ್ತಪ್ರತಿ ಇದರಲ್ಲಿ ಪ್ರಮುಖವಾದದ್ದು.  ಕರ್ನಾಟಕ ರತ್ನ, ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪತ್ರಗಳು, ಫಲಕಗಳನ್ನು ಮೊದಲ ಬಾರಿ ಕಂಡ ನನಗೆ,ಆದ ಸಂಭ್ರಮ ಅದನ್ನು ಬರವಣಿಗೆಯಲ್ಲಿ ವರ್ಣಿಸಲು ಸಾಧ್ಯವಿಲ್ಲ!
ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು,
ಕಲಾವಂಥನಿಗೆ ಅದು ಸಗ್ಗವೀಡು.
ಕವಿಶೈಲದ ಕುರಿತಂತೆ ಕುವೆಂಪು ಆಡಿರುವ ಈ ಮಾತುಗಳು ಅಕ್ಷರಶಃ ನಿಜ.
ಕುವೆಂಪು ಸಮಾಧಿ
ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.
ಕವಿಶೈಲದ ಆ ಸುಂದರ ಪ್ರಕೃತಿಯ ಮಡಿಲಲ್ಲಿ ಇಂದು ವಿವಿಧ ಸಾಹಿತಿಗಳ ಹಸ್ತಾಕ್ಷರಗಳನ್ನೊಳಗೊಂಡ ಬಂಡೆಯ ಮೇಲೆ ಕುವೆಂಪು ತಾವು ಅನವರತ ಕುಳಿತು ಧ್ಯಾನಸ್ಥರಾಗುತ್ತಿದ್ದರು. ಇಂದು ಅದೇ ಸ್ಥಳದ ಎದುರಲ್ಲಿ ಅವರು ಸಮಾಧಿಸ್ಥರಾಗಿದ್ದಾರೆ (ಅದೇ ಕಲ್ಲಿನ ಎದುರು ಅವರ ಸಮಾಧಿ ಇದೆ.)

ಕುವೆಂಪು ಪುತ್ರರಾದ ಪೂರ್ಣಚಂದ್ರ ತೇಜಸ್ವಿ ಸಮಾಧಿ
ಒಟ್ಟಾರೆ ಹೇಳಬೇಕೆಂದರೆ ನಾನು ಈ ಸ್ಥಳಕ್ಕೆ ಭೇಟಿ ನೀಡುವ ಸುಯೋಗ ಕೂಡಿಬಂದದ್ದುಆದು ನನ್ನ ಸುಕೃತವೇ ಸರಿ. ಕುವೆಂಪುವಿನಂತಹಾ ಧ್ಯಾನಸ್ಥ ಕವಿ ನಡೆದ ಮಣ್ಣಿನಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದೇ ಕನ್ನಡಿಗರಾದ ನಾವೆಲ್ಲ ಹೆಮ್ಮೆ ಪಡಬಹುದಾದ ಸಂಗತಿ.