Saturday, March 18, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 81

ನಂಜನಗೂಡು (Nanjanagud)
ಭಾಗ - 1

ಕುಂಡಿನಿ (ಕೌಂಡಿನ್ಯ) ಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧವಾದ ಶಿವ ಕ್ಷೇತ್ರ ಹಾಗೂ ಪುಣ್ಯ ಭೂಮಿ. ನಂಜನಗೂಡಿನ ಹಿಂದಿನ ಹೆಸರು ಗರಳಪುರಿ. ಗರಳ ಎಂದರೆ ವಿಷ ಅರ್ಥಾತ್ ಹಾಲಾಹಲ.  ಹಾಲಾಹಲವನ್ನೇ ಕುಡಿದ ನಂಜುಂಡ ನೆಲೆಸಿಹ ಪುಣ್ಯ ಭೂಮಿಯೇ ನಂಜನಗೂಡು ಕ್ಷೇತ್ರ.

ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ  ಕೇವಲ 28 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯ ಕ್ಷೇತ್ರದ ಮಹಿಮೆಯ ಬಗ್ಗೆ ಹಲವು ಪುರಾಣಗಳಲ್ಲಿ ಬಣ್ಣಿಸಲಾಗಿದೆ. ಸ್ಕಂದ ಪುರಾಣದಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ.  ಸಮುದ್ರ ಮಟ್ಟದಿಂದ 2155 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಪವಿತ್ರ ಕ್ಷೇತ್ರ ನಂಜನಗೂಡು. ತನ್ನ ಶ್ರೀಮಂತ ಪರಂಪರೆಯಿಂದಾಗಿ ಸಹಾ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಪಟ್ಟಣ ಮೊದಲಿಗೆ ಗಂಗರ ಆಳ್ವಿಕೆಗೆ ಒಳಪಟ್ಟಿತ್ತು, ನಂತರ ಹೊಯ್ಸಳರು ಇದನ್ನು ಆಳಿದರು , ಆನಂತರ  ಮೈಸೂರು  ಒಡೆಯರು ಇದನ್ನು ಆಳಿದರು. ಇತಿಹಾಸದಲ್ಲಿ ದಾಖಲಾದಂತೆ ಶ್ರೀರಂಗಪಟ್ಟಣವನ್ನು ಆಳಿದ ಹೈದರಾಲಿ ಮತ್ತು ಆತನ ಮಗ ಟಿಪ್ಪುಸುಲ್ತಾನ್ ನಂಜನಗೂಡಿನೊಂದಿಗೆ ತುಂಬಾ ಹತ್ತಿರದ ಬಾಂಧವ್ಯವನ್ನು ಹೊಂದಿದ್ದರು.




ನಂಜನಗೂಡಿಗೆ  ಭೇಟಿ ಕೊಡುವವರು ಶ್ರೀ ರಾಘವೇಂದ್ರ ಸ್ವಾಮಿ ಮಠ (ರಾಘವೇಂದ್ರ ಸ್ವಾಮಿಗಳ ಪ್ರತೀಕ ಸನ್ನಿಧಾನ) ಮತ್ತು ಪರಶುರಾಮ ಕ್ಷೇತ್ರಗಳಿಗೆ ಭೇಟಿ ಕೊಡಬಹುದು.

ನಂಜನಗೂಡು ರಾಜ್ಯದ ಅತಿ ದೊಡ್ಡ ದೇವಾಲಯವೂ ಹೌದು.  ದ್ರಾವಿಡ ಶೈಲಿಯಲ್ಲಿರುವ ದೇಗುಲ 117 ಮೀಟರ್ ಉದ್ದ ಹಾಗೂ 48 ಮೀಟರ್ ಅಗಲ ಇದೆ. 147 ಕಂಬಗಳಿಂದ ಕೂಡಿದ ದೇವಾಲಯದ ಒಟ್ಟು ವಿಸ್ತೀರ್ಣ 4,831 ಚ.ಮೀ ಎಂದರೆ ಇದರ ವಿಸ್ತಾರದ ಅರಿವಾಗುತ್ತದೆ. ದೇವಾಲಯದ ಹೊರ ಗೋಡೆ ಸುಮಾರು 3.7 ಮೀಟರ್ ಎತ್ತರ ಇದ್ದು, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಅಧಿಷ್ಠಾನ, ಕಂಬಸಾಲಿನ ಕೈಸಾಲೆ, ಮೇಲೆ ಸುತ್ತಲೂ ದೇವತೆಗಳ ಶಿಲ್ಪಗಳ ಕೂಟ ಮತ್ತು ಶಿಖರ ಗೆಜ್ಜೆಹಾರವಿದೆ. ದೇವಾಲಯದ ಮಹಾದ್ವಾರ ಬೃಹತ್ ರಚನೆಯಿಂದ ಕೂಡಿದ್ದು, ಬಾಗಿಲವಾಡದಲ್ಲಿ ಮೋಹಿನಿ, ದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆ. ಇನ್ನು ಇದರ ಮೇಲಿರುವ ಗೋಪುರ ಏಳು ಅಂತಸ್ತುಗಳಿಂದ ಕೂಡಿದ್ದು, ಸುಮಾರು 37 ಮೀಟರ್ ಎತ್ತರ ಇದೆ. ಅದರ ಮೇಲೆ 7 ಸುವರ್ಣ ಲೇಪಿತ ಕಳಶಗಳಿವೆ. ಅಕ್ಕ ಪಕ್ಕದಲ್ಲಿ ಕೊಂಬುಗಳಿವೆ.
ಪ್ರತಿವರ್ಷ ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಇಲ್ಲಿ ಪಂಚರಥೋತ್ಸವ ಜರುಗುತ್ತದೆ. ನಂಜನಗೂಡಿನಲ್ಲಿ ಶ್ರೀಕಂಠಮುಡಿ, ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ, ತಮ್ಮ ಮುಡಿಯನ್ನು ನೀಡಿ, ಕಪಿಲೆಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ. ಪ್ರತಿವರ್ಷ ಕಾರ್ತೀಕದಲ್ಲಿ ಚಿಕ್ಕ ರಥೋತ್ಸವ ಜರುಗುತ್ತದೆ, ಪ್ರತಿ ಹುಣ್ಣಿಮೆಯ ದಿನ ಇಲ್ಲಿ ರಥೋತ್ಸವ ಜರುಗುತ್ತದೆ.

ಪ್ರತಿ ಸೋಮವಾರ, ಮಹಾಶಿವರಾತ್ರಿ, ಮಾಸ ಶಿವರಾತ್ರಿ, ಹಬ್ಬ ಹರಿದಿನಗಳು ಹಾಗೂ ಆಷಾಢದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

***

ನಂಜನಗೂಡಿಗೆ ಈ ಹಿಂದೆ ಗರಳಪುರಿ ಎಂದು ಕರೆಯಲಾಗುತ್ತಿತ್ತು. 'ಗರಳ' ಎಂದರೆ ವಿಷ ಎಂದರ್ಥ. ಹಿಂದೆ ಇಲ್ಲಿ ತ್ರಿಯಂಬಕ ರಾಕ್ಷಸನ ಮಗನಾದ ಕೇಶಿ ಎನ್ನುವ ರಾಕ್ಷಸ ವಾಸವಾಗಿದ್ದ. ಪುರಾತನ ಕಾಲದಲ್ಲಿ ಇಲ್ಲಿ ದಂಡಕಾರಣ್ಯ ಬೆಳೆದು ನಿಂತಿತ್ತು. ಇಲ್ಲಿನ ಋಷಿಮುನಿಗಳು ಯಾವುದೇ ತಪಸ್ಸು ಮಾಡಿದರೂ, ಯಾಗಗಳನ್ನು ಮಾಡಿದರೆ ಕೇಶಿ ರಾಕ್ಷಸನು ಅದನ್ನು ಹಾಳು ಮಾಡಿ ಬಿಡುತ್ತಿದ್ದನು. ದೇವತೆಗಳಿಗೂ ಅವನು ಉಪಟಳ ನೀಡುತ್ತಿದ್ದ. ಕಡೆಗೆ ಋಷಿಗಳು ಪರಮೇಶ್ವರನ ಮೊರೆ ಹೊಕ್ಕು ಕೇಶಿ ರಾಕ್ಷಸನಿಂದ ತಮಗೆ ಮುಕ್ತಿ ನೀಡಬೇಕೆಂದು ಕೋರಿದ್ದರು. ಅದರಂತೆಯೇ ಶಿವನು ಅವರುಗಳಿಗೆಲ್ಲಾ ಕಪಿಲಾ ಕೌಂಡಿನಿ ಸಂಗಮದಲ್ಲಿ ಯಜ್ಞವನ್ನು ನೆರವೇರಿಸುವಂತೆ ಅಪ್ಪಣೆಕೊಟ್ಟನು. ಯಜ್ಞವನ್ನು ನಡೆಸುತ್ತಿರುವಲ್ಲಿ ಹವಿಸ್ಸನ್ನು ತಿನ್ನುವುದಕ್ಕೂ ಯಜ್ಞವನ್ನು ಕೆಡಿಸುವುದಕ್ಕೂ ಬಂದ ಕೇಶೀರಾಕ್ಷಸನನ್ನು ಪರಮೇಶ್ವರನು ಸಂಹರಿಸಿದನು. ಹಾಗೆಯೇ ರಾಕ್ಷಸನ ದೇಹವನ್ನು ಅಲ್ಲಿ ಉರಿಯುತ್ತಿದ್ದ ಯಾಗದ ಕುಂಡದಲ್ಲಿ ಹಾಕಿದನು. ಆಗ ಆ ದೇಹದಿಂದ ವಿಷ ಜ್ವಾಲೆಯು ಉತ್ಪನ್ನವಾಗಿ ಸುತ್ತಲಿನ ಪರಿಸರವನ್ನೆಲ್ಲಾ ಆವರಿಸಿಕೊಳ್ಳುತ್ತದೆ. ಇದರಿಂದ ಜಗತ್ತಿಗೆ ಕೆಡುಕಾಗಲಿದೆ ಎನ್ನುವುದನ್ನು ಅರಿತ ಪರಮೇಶ್ವರ ಆ ವಿಷ ಜ್ವಾಲೆಯನ್ನು ಅಂಗೈನಲ್ಲಿ ಎತ್ತಿ ಪಾನ ಮಾಡುತ್ತಾನೆ. ಇದನ್ನು ಕಂಡ ಪಾರ್ವತಿಯು ವಿಷವು ಶಿವನ ದೇಹವನ್ನು ಸೇರದಂತೆ ಅವನ ಕುತ್ತಿಗೆಯನ್ನು ಗಟ್ಟಿಯಾಗಿ ಅದುಮಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಗಂಟಲಿನಲ್ಲಿಯೇ ನಿಂತು ಬಿಡುತ್ತದೆ. ಆಗ ಅವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಪರಮೇಶ್ವರನು ನೀಲಕಂಠನಾಗುತ್ತಾನೆ. 'ಶ್ರೀಕಂಠೇಶ್ವರ' ಎನಿಸುತ್ತಾನೆ.

ಮುಂದೆ ಪರಮೇಶ್ವರ ಇದೇ ದಂದಕಾರಣ್ಯ, ಗರಳಪುರಿಯಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಇಲ್ಲಿಯೇ ನೆಲೆಸುತ್ತಾನೆ.

ಕಾಲಾನಂತರದಲ್ಲಿ ಕ್ಷತ್ರಿಯ ಸಂಹಾರವನ್ನು ಮಾಡಿದ್ದ ಪರಶುರಾಮ ತಾನು ಮಾಡಿದ್ದ ಪಾಪದ ಪ್ರಾಯಶ್ಚಿತ್ತಕ್ಕಾಗಿ ತಪಸ್ಸನ್ನು ಆಚರಿಸಲು ಸ್ಥಳಕ್ಕಾಗಿ ಹುಡುಕುತ್ತಾ ಗರಳಪುರಿಗೆ ಬರುತ್ತಾನೆ. ಇಲ್ಲಿನ ಪರಿಸರ ಕಂಡು ಸಮ್ಮೋಹಗೊಂಡು ಇಲ್ಲಿಯೇ ತಪಸ್ಸಾಚರಿಸಲು ನಿರ್ಧರಿಸುತ್ತಾನೆ.

ತನ್ನ ಗಂಡು ಕೊಡಲಿಯಿಂದ ತಪಸ್ಸಿಗೆ ಜಾಗವನ್ನು ಮಾಡಿಕೊಳ್ಳಲು ಪೊದೆಯೊಂದನ್ನು ತರಿದಾಗ ಅಲ್ಲಿ ಅದಾಗಲೇ ತಪಸ್ಸು ಮಾಡುತ್ತಿದ್ದ ಪರಮೇಶ್ವರನ ಹಣೆಗೆ ಪರಶುರಾಮನ ಕೊಡಲಿ ತಾಕಿ ಗಾಯವಾಗುತ್ತದೆ. ರಕ್ತ ಚಿಮ್ಮುತ್ತದೆ. ಅದನ್ನು ಕಂಡ ಪರಶುರಾಮನು ಬೆಚ್ಚಿ ಬೀಳುತ್ತಾನೆ. ಪರಮೇಶ್ವರನೇ ಇಲ್ಲಿ ತಪಸ್ಸಾಚರಿಸುತ್ತಿರುವುದು ತಿಳಿದ ಪರಶುರಾಮ ಅವನಲ್ಲಿ ತನ್ನ ತಪ್ಪಿಗಾಗಿ ಕ್ಷಮೆ ಬೇಡುತ್ತಾನೆ. ಶಿವನು ಕ್ಷಮಿಸಿದ್ದಲ್ಲದೆ ಅವನಿಗೆ ಇದೇ ಸ್ಥಳದಲ್ಲಿ ತಪಸ್ಸಾಚರಿಸುವಂತೆ ಹೇಳುತ್ತಾನೆ. ಪರಮೇಶ್ವರನ ಅಪ್ಪಣೆಯಂತೆ ಪರಶುರಾಮ ಇದೇ ಗರಳಪುರಿಯಲ್ಲಿ ಶಿವ, ಆದಿಕೇಶವನನ್ನು ಕುರಿತು ತಪಸ್ಸಾಚರಿಸಿ ತನ್ನ ಪಾಪಗಳನ್ನು ಪರಿಹಾರ ಮಾಡಿಕೊಳ್ಲುತ್ತಾನೆ.

ಮುಂದೆ ಪರಮೇಶ್ವರನೇ ಪ್ರತ್ಯಕ್ಷನಾಗಿ ಪರಶುರಾಮನಿಗೆ "ನಿನ್ನ ಮಾತೃಹತ್ಯಾ ದೋಷ ಸೇರಿದಂತೆ ಸಕಲ ದೋಷಗಳು ನಿವಾರಣೆಯಾಗಿದೆ." ಎಂದು ಹೇಳಿದ್ದಲ್ಲದೆ ಇಲ್ಲಿ ಪರಶುರಾಮನಿಗಾಗಿ ಒಂದು ಗುಡಿ ನಿರ್ಮಿಸಿ ಅಲ್ಲಿ ಪರಶುರಾಮನ ಮೂರ್ತಿಯನ್ನು ಸ್ಥಾಪಿಸುತ್ತಾನೆ. ಮತ್ತು  "ಯಾರು ಇಲ್ಲಿ  ಬಂದು ನನ್ನ ದರ್ಶನ ಮಾಡುತ್ತಾರೆಯೋ ಅವರು ನಿನ್ನ ದರ್ಶನವನ್ನೂ ಮಾಡಿಕೊಂಡು ಹೋಗಬೇಕು. ಅದರಿಂದಲೇ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ" ಎಂದು ಪರಮೇಶ್ವರನೇ ಪರಶುರಾಮನಿಗೆ ಮಾತು ನೀಡುತ್ತಾನೆ. ಅಲ್ಲಿಂದ ಇಂದಿನವರೆಗೂ ಭಕ್ತಾದಿಗಳು ನಂಜುಂಡೇಶ್ವರನ ದರ್ಶನದ ನಂತರ ಪರಶುರಾಮನ ದರ್ಶನವನ್ನೂ ಮಾಡಿ ಪಾಪಗಳನ್ನೆಲ್ಲಾ ಪರಿಹರಿಸೆಂದು ಬೇಡಿಕೊಳ್ಳುವ ಮೂಲಕ ಕೃತಾರ್ಥರಾಗುತ್ತಾರೆ.

ಆದರೆ ಕ್ಷತ್ರಿಯರಾದ ಮೈಸೂರಿನ ಒಡೆಯರ್ ಕುಟುಂಬದವರು ಮಾತ್ರ ಕ್ಷತ್ರಿಯ ಸಂಹಾರ ಮಾಡಿದ ಅದರ ಪಾಪ ಪರಿಹಾರಕ್ಕಾಗಿ ಇಲ್ಲಿಗೆ ಬಂದು ತಪಸ್ಸಾಚರಿಸಿದ್ದ ಪರ್ಶುರಾಮನ ಸನ್ನಿಧಿಗೆ ತೆರಳುವುದಿಲ್ಲ ಎನ್ನುವುದು ಒಂದು ಅಚ್ಚರಿಯ ಸತ್ಯ ಸಂಗತಿ.

***

ಒಮ್ಮೆ ಪಾರ್ವತೀ ಪರಮೇಶ್ವರರು ನಂದಿಯ ಮೇಲೆ ಕುಳಿತು ಲೋಕ  ಸಂಚಾರಮಾಡುತ್ತಿದ್ದಾಗ, ಪಾರ್ವತಿ ದೇವಿಯು ಭೂ ಲೋಕದಲ್ಲಿ ಪರಮಪವಿತ್ರವಾದ  ಕ್ಷೇತ್ರ ಯಾವುದೆಂದು ಕೇಳಿದರಂತೆ. ಆಗ ಶಿವ  ಕಪಿಲಾ -ಕೌಂಡಿನೀ ನದಿಗಳ ಸಂಗಮಸ್ಥಳವಾದ ಗರಳಪುರಿ ಕ್ಷೇತ್ರವೆ ಪರಮ ಪಾವನವಾದ ಕ್ಷೇತ್ರ ಎಂದು ಹೇಳಿದರಂತೆ.

***

ಸಮುದ್ರಮಥನ ಕಾಲದಲ್ಲಿ ಅಮೃತ ಲಕ್ಷ್ಮಿ ಉಚ್ಚೈಸ್ರವಸ್ಸು ಮುಂತಾದೆಲ್ಲವೂ ಹುಟ್ಟಿದುವಲ್ಲದೇ ಕಾಲಕೂಟವೆಂಬ ವಿಷವೂ ಹುಟ್ಟಿತು. ಪರಮೇಶ್ವರನು ಲೋಕೋದ್ಧಾರಕ್ಕಾಗಿ ಆಕಾಲಕೂಟವನ್ನು ಧರಿಸುವಲ್ಲಿ ಒಂದು ತೊಟ್ಟು ವಿಷವು ದರ್ಭೆಯ ಮೇಲೆ ಬಿತ್ತು. ಅಮೃತವನ್ನು ಹಂಚುತ್ತಿದ್ದ ಮೋಹಿನಿಯನ್ನು ಕೇಶೀ ರಾಕ್ಷಸನು ಮೋಹಿಸಲು ಒಂದು ತೊಟ್ಟು ವಿಷವನ್ನು ಅವನಿಗೆ ಕುಡಿಸಿದಳು. ಶ್ರೀ ನಾರಾಯಣ ಹಸ್ತಸ್ಪರ್ಶವಾದ್ದರಿಂದ ಇವನು ಬಲಿಷ್ಠನಾದ್ದನು. ಆ ವಿಷಸಂಭಂದ ಇಲ್ಲಿ ನಿಂತಿದ್ದರಿಮದ ಇದಕ್ಕೆ “ ಗರಳಪುರಿ” ಅಥವಾ “ ನಂಜನಗೂಡು” ಎಂಬ ಹೆಸರು ಬಂದಿತು.

***


ಪಾತಾಳದಲ್ಲಿ ಕಪಿಲ ಋಷಿಗಳು ತಪಸ್ಸು ಮಾಡುವಾಗ ಸಗರ ಚಕ್ರವರ್ತಿಯ 64 ಸಾವಿರ ಮಕ್ಕಳು ಅವರ ತಪ್ಪಸಿಗೆ ವಿಘ್ನಮಾಡಿದುದಕ್ಕಾಗಿ ಸುಟ್ಟು ಬೂದಿಯಾಗುತ್ತಾರೆ. ಕಪಿಲ ಋಷಿಗಳು ತಪೋಭಂಗವಾದುದರಿಂದ ಅಲ್ಲಿಂದ  ನೀಲಾಚಲಕ್ಕೆ ಹೋಗುತ್ತಾರೆ. ಅಲ್ಲಿ, ಪರಮೇಶ್ವರನು ಪ್ರತ್ಯಕ್ಷನಾಗಿ “ ನಿನ್ನ ಬ್ರಹ್ಮರಂಧ್ರದಿಂದ” ಕಪಿಲಾ ನದಿ ಹುಟ್ಟಿ ಜಗದ ಕೊಳೆ ತೊಳೆಯುತ್ತಾಳೆ ಎಂದು ಹರಸುತ್ತಾರೆ. ಕಪಿಲ ಮಹರ್ಷಿಗಳ ಬ್ರಹ್ಮರಂಧ್ರದಿಂದ ಹುಟ್ಟಿದ ನದಿ ಕಪಿಲಾ ನದಿಯಾಗಿದೆ.ಈ ನದಿಯಲ್ಲಿ ವೃಶ್ಚಿಕ ಸಂಕ್ರಮಣದಲ್ಲಿ ಒಂದು ತಿಂಗಳು ಸ್ನಾನ ಮಾಡಿ ಶಿವ ದರ್ಶನ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಕಾರ್ತೀಕ ಸೋಮವಾರ ಪೌರ್ಣಮಿ ದಿನ  ಅರುಣೋದಯದಲ್ಲಿ ಇಲ್ಲಿ ಸ್ನಾನ ಮಾಡಿದರೆ ಸಕಲ ಪಾಪ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ.

Tuesday, February 28, 2017

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 80

ಹೊರನಾಡು (Horanadu)

ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಚಿಕ್ಕಮಗಳೂರಿನ ಹೊರನಾಡಿನಲ್ಲಿರುವ ಭದ್ರಾ ನದಿಯ ದಡದ ಮೇಲಿದೆ. ಇಲ್ಲಿನ ಮುಖ್ಯ ದೇವರು ಅನ್ನಪೂರ್ಣೇಶ್ವರಿ ಹಾಗು ಇನ್ನಿತರ ದೇವರುಗಳು, ಮಹಾಗಣಪತಿ, ಆಂಜನೇಯ ಸ್ವಾಮಿ ಹಾಗು ನವಗ್ರಹಗಳು.

ಈ ದೇವಸ್ಥಾನವನ್ನು ಅಗಸ್ತ್ಯ ಮುನಿಗಳು ಕಟ್ಟಿಸಿದ್ದು. 400 ವರ್ಷಗಳ ಹಿಂದೆ ವಾಸ್ತು ಶಿಲ್ಪ ಹಾಗು ಜ್ಯೋತಿಷ್ಯವನ್ನು ಅವಲಂಬಿಸಿ ಈ ಸಣ್ಣ ದೇವಸ್ಥಾನವನ್ನು ನವೀಕರಣಗೊಳಿಸಲಾಯಿತು. ಇಲ್ಲಿ ದೇವಿ, ಪೀಠದ ಮೇಲೆ ಶಂಖ, ಚಕ್ರ ಹಾಗು ಶ್ರೀ ಚಕ್ರವನ್ನು ಹಿಡಿದು ನಿಂತಿದ್ದಾಳೆ. ಇಲ್ಲಿನ ವಿಶೇಷ ಎಂದರೆ, ಬಂದ ಭಕ್ತರಿಗೆ ತಿಂಡಿ, ಮಧ್ಯಾಹ್ನದ ಊಟ ಹಾಗು ರಾತ್ರಿ ಊಟವನ್ನು ನೀಡಲಾಗುತ್ತದೆ ಹಾಗು ಉಳಿದುಕೊಳ್ಳಲು ದೇವಸ್ಥಾನದ ಆವರಣದಲ್ಲೇ ಸ್ಥಳ ನೀಡಲಾಗುತ್ತದೆ. 


Sri Adishakt
hyathmaka Annapoorneshwari

ಇಲ್ಲಿ ಪೂಜೆ ಸಲ್ಲಿಸಿದವರಿಗೆ ತಮ್ಮ ಜೀವನದಲ್ಲಿ ಎಂದಿಗೂ ಅನ್ನದ ಕೊರತೆ ಬರುವುದಿಲ್ಲ.

***

ಶಿವ ಮತ್ತು ಪಾರ್ವತಿ ಒಂದು ಸಲ ಪಗಡೆ ಆಡುತ್ತಿದ್ದರು. ಶಿವ ತಾನು ಆಟವಾಡುವಾಗ ಅಡ ಇಟ್ಟಿದ್ದ ಎಲ್ಲವನ್ನೂ ಪಾರ್ವತಿಯ ಗೆಲುವಿನಿಂದ ಕಳೆದುಕೊಂಡನು. ಇದರಿಂದ ಅವಮಾನಗೊಂಡ ಶಿವನು ವಿಷ್ಣುವಿನ ಬಳಿ ಈ ವಿಚಾರ ಹೇಳಿಕೊಂಡಾಗ, ಮತ್ತೊಮ್ಮೆ ಆಟವಾಡ ಬೇಕೆಂಬ ಸೂಚನೆ ವಿಷ್ಣು, ಶಿವನಿಗೆ ಕೊಡುತ್ತಾನೆ. ಶಿವನು ಪುನಃ ಆಟವಾಡಿ ತಾನು ಸೋತ ಎಲ್ಲ ವಸ್ತುವನ್ನೂ ಗೆದ್ದುಕೊಳ್ಳುತ್ತಾನೆ. ಇದರಿಂದ ಅನುಮಾನ ಬಂದು, ಪಾರ್ವತಿ ಮತ್ತು ಶಿವನ ಮಧ್ಯೆ ವಾದ ನಡೆಯುತ್ತದೆ. ವಿಷ್ಣು ಮಧ್ಯ ಮಾತನಾಡಿ, ಶಿವ ಪಾರ್ವತಿ ಆ ಆಟವಾಡಿದ್ದು ನಿಜವೇ ಆದರೂ ಅದರ ಚಲನೆ ತನ್ನದು ಎಂದು ಹೇಳುವನು. ಹಾಗಾಗಿ ಶಿವ ಪಾರ್ವತಿ ಆಟವಾಡುತ್ತಿದ್ದುದು ಮಾಯೆ ಎಂದು ಹೇಳುವನು.

ಶಿವನು, ಈ ಜಗತ್ತಿನಲ್ಲಿ ಎಲ್ಲವೂ ಮಾಯೆ ಹಾಗು ಸೇವಿಸುವ ಆಹಾರವೂ ಮಾಯೆ ಎನ್ನುತ್ತಾನೆ. ಪಾರ್ವತಿಯು ಆ ಮಾತನ್ನು ಒಪ್ಪದೆ ಅದನ್ನು ನಿರೂಪಿಸಲು ಮಾಯವಾಗುತ್ತಾಳೆ. ಅದರ ಪರಿಣಾಮವಾಗಿ ಪ್ರಕೃತಿಯ ಚಲನೆ ನಿಂತು ಹೋಗುತ್ತದೆ. ಗಿಡ ಮರಗಳು ಬೆಳೆಯುವುದು ನಿಂತು ಹೋಗುತ್ತದೆ. ಹಾಗಾಗಿ, ಭೂಮಿ ಬಂಜರಾಗಿ ಬರ ಬಂದು ಬಿಡುತ್ತದೆ. ಮಾನವರು, ಪ್ರಾಣಿಗಳು ಹಾಗು ದೇವತೆಗಳು ಎಲ್ಲರೂ ಆಹಾರಕ್ಕಾಗಿ ಪ್ರಾರ್ಥಿಸುತ್ತಾರೆ. ಶಿವನಿಗೆ ಇದರಿಂದ ಆಹಾರದ ಪ್ರಾಮುಖ್ಯತೆ ಹಾಗು ಜೀವಿಗಳಿಗೆ ಆಹಾರವೇ ಮೂಲ ಅಗತ್ಯ ಎಂದು ಮನವರಿಕೆ ಆಗುತ್ತದೆ.

Sri Adishakthyathmaka Annapoorneshwari temple, Horanadu


ಎಲ್ಲರೂ ಪಾರ್ವತಿ ದೇವಿಯನ್ನು ಪ್ರಾರ್ಥಿಸುತ್ತಾರೆ. ಎಲ್ಲರ ಮೇಲೆ ಕರುಣೆ ತೋರಿ ತಾಯಿ ಕಾಶಿಯಲ್ಲಿ ಪ್ರತ್ಯಕ್ಷವಾಗಿ ಆಹಾರವನ್ನು ಹಂಚಲು ಪ್ರಾರಂಭಿಸುತ್ತಾಳೆ. ಶಿವನು ಪಾರ್ವತಿ ದೇವಿಯ ಮುಂದೆ ಭಿಕ್ಷಾ ಪಾತ್ರೆಯನ್ನು ಹಿಡಿದು ನಿಂತಾಗ ಪಾರ್ವತಿ ದೇವಿಯು ಶಿವನನ್ನು ಕಂಡು ಸೌಟಿನಿಂದ ಆಹಾರವನ್ನು ತಿನ್ನಿಸುತ್ತಾಳೆ. ಆಗಿನಿಂದ ಪಾರ್ವತಿಯು ಅನ್ನಪೂರ್ಣೇಶ್ವ ರಿಯಾಗಿ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೆಲೆಸುತ್ತಾಳೆ.

Wednesday, February 22, 2017

ನಿಮಗೂ ಲವ್ವಾಗಿಸುವ 'ನನಗೂ ಲವ್ವಾಗಿದೆ...'



ಬದುಕಿನಲ್ಲಿ ಬೇಕು ಅಂದಿದ್ದೆಲ್ಲವೂ ಆ ಕ್ಷಣದಲ್ಲಿ ಕೈ ಸೇರುತ್ತಿರುತ್ತದೆ. ಅದಿಲ್ಲ, ಇದಿಲ್ಲ ಎಂದು ಕೊರಗಿದ್ದು, ಕನವರಿಸಿದ್ದ್ಯಾವುದೂ ನೆನಪಿಲ್ಲ. 

ಆದರೆ,


ಒಂದು ಲವ್ವೆನ್ನುವ ಲವ್ವು...?

ಊಹ್ಹೂಂ.. ಅದೊಂದು ಮಾತ್ರ ಈ ಬದುಕಿನ ತೋಟದಲ್ಲಿ ಹೂವಾಗಿ ಅರಳಿಕೊಂಡಿರುವುದಿಲ್ಲ. ಪರಿಮಳ ಚೆಲ್ಲಿರುವುದಿಲ್ಲ. ಚೆಲುವು ತುಂಬಿರುವುದಿಲ್ಲ. 

ಬದುಕಿಗೆ ಎಲ್ಲವೂ ಇದೆ. ಆದರೆ ಏನೆಂದರೆ ಏನೂ ಇಲ್ಲ ಎನ್ನುವಂತಹಾ ತಿರುಬೋಕಿ ಸ್ಥಿತಿಯಲ್ಲಿ ಬದುಕು ಬೀದಿ ಬೀದಿ ಅಲೆಯುತ್ತಿರುತ್ತದೆ. ಹೇಗಾದರೂ ಸರಿ ಒಂದೇ ಒಂದು ಲವ್ವಾದರೆ ಸಾಕು ಎಂದ್ ಹಂಬಲಿಸಿ ಪ್ರೀತಿಯನ್ನು ಹೊತ್ತು ತರುವ ಜೀವಕ್ಕಾಗಿ ಹುಡುಕಾಡುತ್ತಿರುತ್ತದೆ........

***

ಇವು ಕೆ. ಗಣೇಶ್ ಕೊಡೂರು (ಅರುಡೋ ಗಣೇಶ) ಅವರ ನೂತನ ಪುಸ್ತಕ 'ನನಗೂ ಲವ್ವಾಗಿದೆ...' ಯಲ್ಲಿನ ಪ್ರಥಮ ಸಾಲುಗಳು. 

ಪ್ರೀತಿ ಇಲ್ಲದ ಬದುಕು ಬದುಕೂ ಅಲ್ಲ. ಅಂತಹಾ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. - ಇವು ನನಗೂ ಲವ್ವಾಗಿದೆ ಪುಸ್ತಕದ ಲೇಖಕರಾದ ಗಣೇಶ್ ಅವರ ನುಡಿಗಳು. ಹಾಗೆಂದು ಇದು ಅವರ ಮಾತಷ್ಟೇ ಅಲ್ಲ. ಪ್ರತಿಯೊಬ್ಬ ಮಾನವ ಜೀವಿಯ ಮಾತು ಕೇವಲ ಮಾನವರಲ್ಲ ಈ ಸೃಷ್ಟಿಯಲ್ಲಿರಬಹುದಾದ ಎಲ್ಲಾ ಪಶು, ಪಕ್ಷಿ, ಕೀಟಾದಿಗಳೂ ಜೀವಿಸುವುದಕ್ಕೆ ಕಾರಣ ಪ್ರೀತಿ. ಭಗವಂತನು ಈ ಜಗತ್ತನ್ನು ಸೃಷ್ಟಿಸಿದ್ದಾನೆ ಎಂದು ನಂಬುವುದಾದರೆ ಅದಕ್ಕೂ ಅವನಲ್ಲಿದ್ದ ಪ್ರೀತಿಯೇ ಕಾರಣ. ಹೀಗಾಗಿ ಪ್ರೀತಿಯೇ ಜಗತ್ತಿನ ತಾಯಿ ಬೇರು.

ನಾವೆಲ್ಲ ಪ್ರೀತಿ ಎಂದರೆ ಕಾಲೇಜು ದಿನಗಳಲ್ಲಿ ಯುವ ಜೋಡಿಗಳಲ್ಲಿ ಅಂಕುರಿಸುವ ಪ್ರೀತಿ ಎಂದೇ ಭಾವಿಸುತ್ತೇವೆ. ಇಂದಿನ ಸಿನಿಮಾಗಳಂತೂ ಇದನ್ನೇ ವೈಭವೀಕರಿಸಿ ತೋರಿಸುತ್ತವೆ. ಆದರೆ ಈ ಪ್ರೀತಿ ಎಂದರೆ ಅಷ್ಟೇ ಅಲ್ಲ ಇನ್ನೂ ಬೇರೇನೇ ಆಗಿದೆ ಎಂದು ತಿಳಿಯಬೇಕಾದರೆ ಈ ಪುಸ್ತಕವನ್ನೊಮ್ಮೆ ಓದಬೇಕು.

ಲೇಖಕ ಕೆ. ಗಣೇಶ್ ಕೊಡೂರು
ನನಗೂ ಲವ್ವಾಗಿದೆ- ಹೀಗೆಂದು ಪ್ರತಿಯೊಬ್ಬರೂ ಘೋಷಿಸಿಕೊಳ್ಲ್ಲಲು ಬಯಸುತ್ತಾರೆ. ಆದರೆ ಎಲ್ಲರಿಗೂ ಹೀಗೆ ಸ್ವಯಂ ಘೋಷಿಸಿಕೊಳ್ಳುವ ಅವಕಾಶ ಸಿಗುವುದಿಲ್ಲ. ಎನ್ನುವುದು ಜೀವನದಷ್ಟೇ ಸತ್ಯ. ಪ್ರೀತಿಯಲ್ಲಿನ ನಾನಾ ಹಂತಗಳನ್ನು ಮತ್ತು ಆ ಹಂತಗಳಲ್ಲಿ ನಮಗೆ ಆಗಬಹುದಾದ ಲವ್ವಿನ ದಟ್ಟ ಅನುಭವವನ್ನೂ ಸರಳವಾದ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಗಣೇಶ್ ಇಲ್ಲಿ ಪ್ರೀತಿಗೆ ಇರಬಹುದಾದ ಎಲ್ಲಾ ಬಗೆಯ ಆಯಾಮಗಳನ್ನು ತೋರಿಸಿದ್ದಾರೆ. 

ಪ್ರೀತಿ ಹೇಗೆಲ್ಲ ಹುಟ್ತಬಲ್ಲದು? ಅದರ ಹಿನ್ನೆಲೆಯ ಸನ್ನಿವೇಶ, ಪ್ರೀತಿಸುವವರಲ್ಲಿ ಇರಬೇಕಾದ ಪರಸ್ಪರ ನಂಬಿಕೆ, ಬಡತನದ ಬೇಗೆಯಲ್ಲಿಯೂ ಪ್ರೀತಿ ಹೇಗೆ ಮರವಾಗಿ ಬೆಳೆಯಬಲ್ಲದು ಎನ್ನುವುದನ್ನ ಒಂದು ಬಗೆಯ ಕಾವ್ಯಾತ್ಮಕ ಗದ್ಯ ಶೈಲಿಯಲ್ಲಿ ಕಟ್ಟಿ ಕೊಟ್ಟಿರುವ ಗಣೇಶ್ ಕೊಡೂರು ಅವರ ಈ ಪುಸ್ತಕ ಯುವ ಜನತೆಗೆ ಅತ್ಯಂತ ಹೆಚ್ಚು ಆಪ್ತವಾಗುತ್ತದೆ. ಯುವ ಮನಸ್ಸುಗಳಲ್ಲಿ ಪ್ರೀತಿಯ ಕುರಿತಾಗಿ ಏನಾದರೂ ಸಂದೇಹಗಳಿದ್ದಲ್ಲಿ ಇದನ್ನು ನಿವಾರಿಸಿಕೊಳ್ಳಲು ಈ ಪುಸ್ತಕ ಸೂಕ್ತ ಮಾರ್ಗದರ್ಶಿಯೂ ಆಗಬಹುದು. ಈ ಅರ್ಥದಲ್ಲಿ ಹೇಳಿದರೆ ಇದು ಪ್ರೇಮಿಗಳ ಪಾಲಿನ ಪಠ್ಯ ಪುಸ್ತಕ!

ಒಟ್ಟೂ ಸುಮಾರು ಎಂಭತ್ತು ಪುಟಗಳ ಈ ಕಿರುಹೊತ್ತಿಗೆಯಲ್ಲಿ ಬದುಕೆಂದ ಮೇಲೆ ಲವ್ವಾಗಲಏಬೇಕು... ಎನ್ನುವ ಮುಖ್ಯ ಶೀರ್ಷಿಕೆಯಡಿಯಲ್ಲಿ ಒಂದು ಸುದೀರ್ಘ ಪ್ರಬಂಧ ಇದೆ. ನಡು ನಡುವೆ ಉಪ ಶೀರ್ಷಿಕೆಗಳಿದ್ದರೂ ಸಹ ಪುಸ್ತಕ ಪೂರ್ಣವಾಗಿ ಓದಿದಾಗ ಪ್ರೀತಿ ಎನ್ನುವ ಏಕ ಸಮ ಭಾವ ನಮ್ಮಲ್ಲಿ ಮೂಡುವುದು ಸುಳ್ಳಲ್ಲ. 

ಒಟ್ತಾರೆ ಪ್ರೀತಿಸುವ ಜೋಡಿಗಳ ನಡುವಿನ ಸಂಬಂಧ ಸಾಮೀಪ್ಯ, ಅವರಲ್ಲಿನ ಅನಂಬಿಕೆ ಅಪನಂಬಿಕೆಗಳ ತಾಕಲಾಟ, ಜೀವನದಲ್ಲೆದುರಾಗುವ ಪರಿಸ್ಥಿತಿಗಳನ್ನು ಎದುರಿಸಿ ಪ್ರೇಮವನ್ನು ಗೆಲ್ಲುವ ಬಗೆ ಎಲ್ಲವನ್ನೂ ಗಣೇಶ್ ಅವರು ಅತ್ಯಂತ ಸುಂದರವಾಗಿ ಇಲ್ಲಿ ಹಣೇದಿರುತ್ತಾರೆ. ನಾವೇಕೆ ಪ್ರೀತಿಗಾಗಿ ಹಂಬಲಿಸುತ್ತೇವೆ? ಎನ್ನುವ ಪ್ರಶ್ನೆಗೆ ಉತ್ತರವಾಗಿ ಈ ಪುಸ್ತಕವಿದೆ ಎಂದರೆ ಅತು ಕ್ಲೀಶೆಯಲ್ಲ.

ಇನ್ನೇನು ಹೇಳಲಿ....?  ನಿಮಗೆ ಲವ್ವಾಗಿದೆಯೊ, ಇಲ್ಲವೋ ಈ ಪುಸ್ತಕವನ್ನೊಮ್ಮೆ ಓದಿದರೆ ನಿಮಗೆಲ್ಲೋ ಒಂದು ಕಡೆ ಲವ್ವಾಗುವುದಂತೂ ಖಚಿತ,  ಅಂದ  ಹಾಗೆ. ಹೌದು ನನಗೂ ಲವ್ವಾಗಿದೆ.... :)

Friday, February 03, 2017

ಈಜು ಕೊಳದ "ಚಿನ್ನದ ಚಿಟ್ಟೆ"


















ನನ್ನ ಈ ಲೇಖನವು ಗೃಹಶೋಭಾ ಮಾಸಪತ್ರಿಕೆ ಜನವರಿ 2017 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.