Sunday, August 27, 2017

ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕನ್ನಡ ಕುವರಿ ಕೆ.ಆರ್. ನಂದಿನಿ



‘ಶ್ರಮ, ಶ್ರದ್ಧೆ ಮತ್ತು ಛಲ ಇದ್ದರೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು. ಅದಕ್ಕೆ ನೀವು ಯಾವ ಊರಲ್ಲಿದ್ದೀರಿ ಎನ್ನುವುದು ಮುಖ್ಯವಾಗುವುದಿಲ್ಲ. ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಯಾರೂ ಕೂಡ ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು. ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಲು ದೆಹಲಿಯಲ್ಲೇ ಇದ್ದು ವಿಶೇಷ ತರಬೇತಿ ಪಡೆಯಬೇಕು ಎಂದೇನಿಲ್ಲ. ನಾನು ಪ್ರತಿನಿತ್ಯ ಎಂಟರಿಂದ ಹತ್ತು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದೆ. ಈ ನಿರಂತರ ಅದ್ಯಯನವೇ ಇಂದು ಫಲ ನೀಡಿದೆ.' 
ಇದು ಈ ಬಾರಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆ ಐಎಎಸ್ ನಲ್ಲಿ ಪ್ರಥಮ ರ್ಯಂಕ್ ಗಳಿಸಿ ಕರ್ನಾಟಕಕ್ಕೆ ಕೀರ್ತಿ ತಂದ ಕೆ.ಆರ್. ನಂದಿನಿ ಅವರ ನುಡಿಗಳು.
ಇತ್ತೀಚೆಗೆ ಯುಪಿಎಸ್ಸಿ ಪ್ರಕಟಿಸಿದ ಐಎಎಸ್ ಪರೀಕ್ಷಾ ಫಲಿತಾಂಶದಲ್ಲಿ ಇಡೀ ರಾಷ್ಟ್ರಕ್ಕೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ ನಂದಿನಿ ಅವರದ್ದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಕೋಲಾರ ಜಿಲ್ಲೆ ಕೆಂಬೋಡಿ ಗ್ರಾಮದವರಾದ ನಂದಿನಿ ತಂದೆ ಕೆ..ರಮೇಶ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರೆ ತಾಯಿ ವಿಮಲಾ ಸಹ ಉತ್ತಮ ಗೃಹಿಣಿಯಾಗಿದ್ದಾರೆ. ಮನೆಯಲ್ಲಿನ ತಾಯಿ ತಂದೆಯರ ಪ್ರೋತ್ಸಾಹದೊಂದಿಗೆ ಕೋಲಾರದ ಪರಿಸರವೂ ಇವರ ಐಎಎಸ್ ಆಸೆಗೆ ನೀರೆದಿದಿದೆ.
ನಂದಿನಿ ಐದನೇ ತರಗತಿಯಲ್ಲಿದ್ದಾಗಲೇ ಅವರಿಗೆ ತಾವು ಮುಂದೆ ಜಿಲ್ಲಾಧಿಕಾರಿಯಾಗಬೇಂದು ಕನಸು ಚಿಗುರಿತ್ತು. ತಂದೆ ರಮೇಶ್ ಅವರೊಡನೆ ಕೋಲಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಸಾಕ್ಷರತಾ ಆಂದೋಲನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ನಂದಿನಿಗೆ ಆ ಕಾರ್ಯಕ್ರಮದಲ್ಲಿ ಅವರೊಡನೆ ಭಾಗವಹಿಸುತ್ತಿದ್ದ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳನ್ನು ಹತ್ತಿರದಿಂದ ಗಮನಿಸುವ ಅವಕಾಶ ಸಿಕ್ಕಿತ್ತು. ಅದನ್ನು ಉತ್ತಮವಾಗಿ ಬಳಸಿಕೊಂಡ ನಂದಿನಿ ಅವರ ಕಾರ್ಯವೈಖರಿಗಳನ್ನು ಗಮನಿಸುತ್ತಿದ್ದು ಮುಂದೊಂದು ದಿನ ತಾನೂ ಅವರಂತೆಯೇ ಾಧಿಕಾರಿಯಾಗಬೇಕೆಂದು ಕನಸು ಕಟ್ಟಿದ್ದರು.
ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 1 ರಿಂದ 10 ನೇ ತರಗತಿವರೆಗೆ ಓದಿದ ನಂದಿನಿ   2006 ರಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮುಗಿಸಿದ್ದರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ನಡೆಸಿದ್ದರು. 2008 ರಲ್ಲಿ ದ್ವಿತೀಯ ಪಿಯು ಮುಗಿಸಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದರು. ಪದವಿ ಮುಗಿಸಿದ ನಂದಿನಿ ಕೆಲವು ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಐಎಎಸ್ ಅಧಿಕಾರಿ ಆಗಬೇಕೆಂಬ ಹಂಬಲ ಅವರನ್ನು ದೆಹಲಿಗೆ ತೆರಳುವಂತೆ ಮಾಡಿತು. ಅಲ್ಲಿ ಕರ್ನಾಟಕ ಭವನದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇರಿಕೊಂಡರು.
2014 ರಲ್ಲಿ ಪ್ರಥಮ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ನಂದಿನಿ 849 ನೇ ರ್ಯಾಂಕ್ ಪಡೆದಿದ್ದರು. ರ್ಯಾಂಕಿಂಗ್ ಕಡಿಮೆ ಇದ್ದ ಕಾರಣ ಭಾರತೀಯ ಕಂದಾಯ ಸೇವೆ (ಐಆರ್ ಎಸ್) ವಿಭಾಗದಲ್ಲಿ ಆಯ್ಕೆ ಆಗಿದ್ದರು. ಆದರೆ ಐಎಎಸ್ ಆಗುವ ಆಸೆ ಬತ್ತಿರಲಿಲ್ಲ. ಅದಕ್ಕಾಗಿ ದೆಹಲಿಯಲ್ಲಿ ಕೆಲ ತಿಂಗಳು ತರಬೇತಿ ಪಡೆದಿದ್ದು ಬೆಂಗಳೂರಿನ ವಿಜಯನಗರದ ‘ಇನ್ಸೈಟ್ ಐಎಎಸ್’ ಸಂಸ್ಥೆಯಲ್ಲಿ 10 ತಿಂಗಳು ಅಧ್ಯಯನ ನಡೆಸಿದ್ದರು. ಎಂದರೆ ಅದು ಯಾವುದೇ ಬಗೆಯ ವಿಶೇಷ ತರಬೇತಿ ಆಗಿರದೆ ಪರೀಕ್ಷೆಗೆ ಅಗತ್ಯವಾದ ಅದ್ಯಯನ ಸಾಮಗ್ರಿಗಳಷ್ಟೇ ದೊರೆಯುವ ತಾಣವಾಗಿತ್ತು. 



ಹೀಗೆ ತರಬೇತಿ, ಅದ್ಯಯನ ನಡೆಸಿದ್ದ ನಂದಿನಿ ಮತ್ತೆ 2016 ರಲ್ಲಿ  ಐಎಎಸ್ ಪರೀಕ್ಷೆ ಬರೆದಿದ್ದರು. ಹಾಗೆ ಬರೆದ ಪರೀಕ್ಷೆಯಲ್ಲಿ ಮೊದಲನೇ ರ್ಯಾಂಕ್ ಪಡೆದು ಸಾಧನೆ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಾರೆ.
'ಹುಟ್ಟಿನಿಂದಲೇ ಯಾರೂ ಬುದ್ದಿವಂತರಾಗಿರುವುದಿಲ್ಲ. ನಾನೂ ಅದಕ್ಕೆ ಹೊರತಾಗಿಲ್ಲ' ಎನ್ನುವ ನಂದಿನಿಗೆ ಗಣಿತವೆಂದರೆ ಅತ್ಯಂತ ಕಷ್ಟದ ವಿಷಯ  ಅದು 'ಕಬ್ಬಿಣದ ಕಡಲೆ' ಎನ್ನುವ ಇವರು ಶಾಲಾ ದಿನಗಳಿಂದಲೇ ಗಣಿತ ಹೊರತುಪಡಿಸಿ ಎಲ್ಲಾ ವಿಷಯದಲ್ಲೂ ಟಾಪ್ ಬರುತ್ತಿದ್ದರು. ಗಣಿತ ಏಕೆ ಕಷ್ಟವಾಗುತಿತ್ತು ಎಂಬುದು ಇಂದಿಗೂ ನನಗೆ ಯಕ್ಷಪ್ರಶ್ನೆಯಾಗೆಯೇ ಉಳಿದಿದೆ. ಎನ್ನುತ್ತಾರೆ.
ಕನ್ನಡ ಸಾಹಿತ್ಯ ಎಂದರೆ ನಂದಿನಿಗೆ ಅಚ್ಚು ಮೆಚ್ಚಾಗಿದ್ದು ಐಎಎಸ್ ಪರೀಕ್ಷೆಯಲ್ಲಿಯೂ ಇದನ್ನೇ ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಬಿಡುವಿನ ಸಮಯದಲ್ಲಿ ಕನ್ನಡ ಸಾಹಿತ್ಯಗಳನ್ನು ಓದುತ್ತೇನೆ. ನನ್ನ ಜೀವನದ ಮೇಲೆ ಕನ್ನಡ ಸಾಹಿತ್ಯ ಸಾಕಷ್ಟು ಪ್ರಭಾವ ಬೀರಿದೆ. ಎನ್ನುವ ಇವರು ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಬಳಿ ಕನ್ನಡ ವಿಷಯದ ತರಬೇತಿ ಪಡೆದಿದ್ದರು.
ಪ್ರಸ್ತುತ ನಂದಿನಿ ಹರಿಯಾಣದ ಫರೀದಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಎಕ್ಸೈಸ್ ಅಂಡ್ ನಾರ್ಕೊಟಿಕ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದು ಹೀಗೆ ತರಬೇತಿಯಲ್ಲಿದ್ದಾಗಲೇ ಇನ್ನೊಮ್ಮೆ ಪರೀಕ್ಷೆ ಬರೆದು ಪ್ರಥಮ ರ್ಯಾಂಕ್ ಗಳಿಸಿ ಸಾಧನೆ ತೋರಿದ್ದಾರೆ.
 “ಐಎಎಸ್ ಅಧಿಕಾರಿಯಾಗಿ ಭಾರತೀಯರ ಸೇವೆ ಮಾಡಬೇಕೆಂಬುದೇ ನನ್ನ ಮಹದಾಸೆ. ಐಎಫ್ಎಸ್ ಸೇವೆ ಸೇರುವುದಿಲ್ಲ. ಐಎಎಸ್ ಅಧಿಕಾರಿಯಾಗಿ ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ಜನ ಸೇವೆ ಮಾಡಲಿದ್ದೇನೆ. ದೇಶದ ಎಲ್ಲಾ ಕ್ಷೇತ್ರಗಳೂ ಅಭಿವೃದ್ದಿಯಾಗಬೇಕಿದೆ. ಹೀಗಾಗಿ ಇಂಥದೇ ಕ್ಷೇತ್ರವೆಂದು ಹೇಳಲಾರೆ. ಯಾವುದೇ ವಲಯದಲ್ಲಿಯೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಿಕೊಂಡು ಶ್ರದ್ದೆಯಿಂದಲೂ, ಖುಷಿಯಿಂದಲೂ ಕರ್ತವ್ಯ ನಿರ್ವಹಿಸುವುದು ನನ್ನ ಯೋಜನೆಯಾಗಿದೆ.” ಎಂದೆನ್ನುವ ನಂದಿನಿ ಗಳಿಸಿದ್ದು ಈ ಪರೀಕ್ಷೆಯಲ್ಲಿ ಗಳಿಸಿದ್ದು  ಶೇ.55.3 ಅಂಕಗಳನ್ನು ಎಂದರೆ ಎಂತಹವರಿಗೂ ಅಚ್ಚರಿ ಆಗದಿರದು. ಮುಖ್ಯ ಲಿಖಿತ ಪರೀಕ್ಷೆ ಹಾಗೂ  ಇಂಟರ್’ವ್ಯೂವ್ ಸೇರಿದಂತೆ ಒಟ್ಟು 2,025 ಅಂಕಗಳಿಗೆ ನಂದಿನಿ 1,120 ಅಂಕಗಳನ್ನು ಪಡೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ಬಿಡುಗಡೆ ಮಾಡಿದ ಅಧಿಕೃತ ಅಂಕಪಟ್ಟಿಯಲ್ಲಿ ಈ ಅಂಶ ತಿಳಿಸಲಾಗಿದೆ.
ಭವಿಷ್ಯದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನಂದಿನಿ ನೀಡುವ ಸೂಚನೆಗಳು ಹೀಗಿದೆ-
“ನಮ್ಮಲ್ಲಿ ಸಾಧಿಸಬೇಕೆನ್ನುವ ಸ್ಪಷ್ಟ ಛಲವಿರಬೇಕು. ಅದಕ್ಕೆ ಬೇಕಾದ ಮಾರ್ಗದಲ್ಲಿ ಸೂಕ್ತ ಮಾರ್ಗದರ್ಶನ ಪಡೆದು ಸಾಗಿದರೆ ಗುರಿ ತಲುಪುವುದು ಖಚಿತ. ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಆರಂಭದಲ್ಲಿ ಈ ಪರೀಕ್ಷೆಗಳ ಬಗ್ಗೆ ಮಾಹಿತಿ ಗೊತ್ತಿರದ ಕಾರಣಕ್ಕೆ ಕಠಿಣ ಎನಿಸುತ್ತವೆ. ಅದಕ್ಕೆ ಕೆಲ ಕಾಲ ಸೂಕ್ತ ಮಾರ್ಗದರ್ಶನ ಪಡೆದು ತರಬೇತಿ ಕೇಂದ್ರಗಳಿಗೆ ಹೋಗಿ ಪರೀಕ್ಷಾ ತಯಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಮಾಡಿದಾಗ ಅವರಿಗೂ ಪರೀಕ್ಷೆಗಳು ಸುಲಭವಾಗುತ್ತದೆ.
“ಇಂಜಿನಿಯರಿಂಗ್ ಮತ್ತು ವೈದ್ಯಕೀಯ  ಹಿನ್ನೆಲೆ ಇರುವವರಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆ ಮತ್ತು ಸಂವಹನದ ಮೇಲೆ ಹಿಡಿತ ಇರುತ್ತದೆ. ಇವು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಹಾಗೂ ಕಲಾ ವಿಭಾಗದವರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಛಲ, ಆತ್ಮವಿಶ್ವಾಸವಿದ್ದಲ್ಲಿ ಯಾವುದೂ ಅಸಾಧ್ಯವಲ್ಲ. ಅಧ್ಯಯನ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಂಡು ಓದುವುದನ್ನೇ ಕಾಯಕ ಮಾಡಿಕೊಳ್ಳಬೇಕು. ಯಾವುದೇ ಒಂದು ವಿಭಾಗ ಅಥವಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಅತ್ಯುತ್ತಮ ನಿರ್ವಹಣೆ ತೋರಲು ಪ್ರಯತ್ನಿಸಬೇಕು. ಇದೆಲ್ಲದರೊಡನೆ ಸೋಲು, ಗೆಲುವನ್ನು ಸಮಾನ ಭಾವನೆಯಿಂದ ಸ್ವೀಕರಿಸುವ ಚಿಂತನೆ ಬೆಳೆಸಿಕೊಳ್ಳಬೇಕು.
“ಮಹಿಳೆಯರ ವಿಚಾರಕ್ಕೆ ಬರುವುದಾದರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪುರುಷರಷ್ಟು ಪ್ರಮಾಣದಲ್ಲಿ ಮಹಿಳೆ ಯಶಸ್ಸು ಸಾಧಿಸಿಲ್ಲ ಎನ್ನುವುದನ್ನು ಒಪ್ಪಬೇಕಾಗುತ್ತದೆ. ಇದಕ್ಕೆ ಸಮಾಜದಲ್ಲಿ ಮಹಿಳೆಯರಿಗಿರುವ ಕಟ್ಟುಪಾಡುಗಳು ಪ್ರಮುಖ ಕಾರಣ ಎನ್ನಬಹುದು. ಆದರೆ ಇತ್ತೀಚೆಗೆ ಈ ಪರೀಕ್ಷೆಗಳಲ್ಲಿ ಆಯ್ಕೆಯಾಗುವವರಲ್ಲಿ ಮಹಿಳೆಯರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎನ್ನಲೇಬೇಕು. ಹಿಂದೆಯೇ ಹೇಳಿದಂತೆ ಸಾಧಿಸುವ ಛಲವಿದ್ದಲ್ಲಿ ಸ್ಥಳ, ಜಾತಿ, ಲಿಂಗ ತಾರತಮ್ಯಗಳು ಅಡ್ಡಿ ಬರಲಾರವು.”


ಕೆ.ಆರ್. ನಂದಿನಿ ಕುರಿತಂತೆ ಕೆಲವು ಕಿರು ಮಾಹಿತಿಗಳು

ಪೂರ್ಣ ಹೆಸರು - ಕೆಂಬೋಡಿ ರಮೇಶ್ ನಂದಿನಿ (ಕೆ.ಆರ್. ನಂದಿನಿ)
ಹುಟ್ಟಿದ ದಿನಾಂಕ ಮತ್ತು  ಸ್ಥಳ -  10-09-1990 ,  ಕೋಲಾರದ ಕೆಂಬೋಡಿ
ತಂದೆ-ತಾಯಿ ಕುಟುಂಬ ವರ್ಗ  - ಕೆ. ರಮೇಶ್ ಹಾಗೂ ವಿಮಲ (ತರುಣ್ ಪಟೇಲ್ ಹೆಸರಿನ ಓರ್ವ ತಮ್ಮನಿದ್ದಾನೆ)
10 ನೇ ತರಗತಿ -ಚಿನ್ಮಯ ವಿದ್ಯಾಲಯ, ಕೋಲಾರ (2006 ರಲ್ಲಿ 96.8 ಅಂಕಗಳೊಂದಿಗೆ ತೇರ್ಗಡೆ)
ದ್ವಿತೀಯ ಪಿಯು - ಆಳ್ವಾಸ್ ಪಿಯು ಕಾಲೇಜು, ಮೂಡಬಿದಿರೆ (2008 ರಲ್ಲಿ 94.8 ಅಂಕಗಳೊಂದಿಗೆ ತೇರ್ಗಡೆ)
ಪದವಿ - ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು (ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ)
ಹುದ್ದೆ - ಐಆರ್ ಎಸ್ ಅಧಿಕಾರಿ (ಪ್ರಸ್ತುತ ಹರಿಯಾಣದ ಫರೀದಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಎಕ್ಸೈಸ್ ಅಂಡ್ ನಾರ್ಕೊಟಿಕ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ)
ಐಎಎಸ್ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳು – 1120 (ಮುಖ್ಯ ಪರೀಕ್ಷೆಯಲ್ಲಿ 927, ಇಂಟರ್ ವ್ಯೂವ್ ನಲ್ಲಿ 193) ಒಟ್ಟಾರೆ ಶೇ.55.3
ಐಎಎಸ್ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಂಡ ಐಚ್ಚಿಕ ವಿಷಯ - ಕನ್ನಡ ಸಾಹಿತ್ಯ
2014 ರಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದಿದ್ದಾಗ ಪಡೆದ ರ್ಯಾಂಕ್ – 849
ಕರ್ನಾಟಕದಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಪ್ರಥಮ ರ್ಯಾಂಕ್ ಗಳಿಸಿದವರಲ್ಲಿ ನಂದಿನಿ ಎರಡನೆಯವರಾಗಿದ್ದಾರೆ. ಇದಕ್ಕೂ ಮುನ್ನ 16 ವರ್ಷಗಳ ಹಿಂದೆ  2001 ರಲ್ಲಿ ವಿಜಯಲಕ್ಷ್ಮಿ ಬಿದರಿ ಈ ಸಾಧನೆ ಮಾಡಿದ್ದರು.
 
(ಈ ಲೇಕನವು ಆಗಸ್ಟ್ 2017 ರ 'ಗೃಹಶೋಭಾ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.)

Friday, August 25, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 88

ಕೊಟ್ಟಾರಕ್ಕರ (Kottarakkara)

ಕೊಟ್ಟಾರಕ್ಕರವು ಕೇರಳ ರಾಜ್ಯದ, ಕೊಲ್ಲಂ ಜಿಲ್ಲೆಯ ಒಂದು ಪಟ್ಟಣ. ಈ ಪಟ್ಟಣವು ಕೊಲ್ಲಂ ಬಂದರಿಗೆ ಸಮೀಪದಲ್ಲಿದೆ. ಇದು ಮಧ್ಯಕಾಲೀನ ಯುಗಕ್ಕೆ ಸಂಬಂಧಿಸಿ ಶ್ರೀಮಂತ ಇತಿಹಾಸವನ್ನು ಹೊಂದಿದೆ ಮತ್ತು ಪ್ರಮುಖ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಕೊಟ್ಟಾರಕ್ಕರ ಪ್ರಸಿದ್ಧ ಇಳೈದಾತು ಸ್ವರೂಪಾಮ್ ಅವರ ರಾಜಧಾನಿಯಾಗಿತ್ತು. ಇಲ್ಲಿಂದ ಸಂಗ್ರಹಿಸಲಾದ ಐತಿಹಾಸಿಕ ಸಾಕ್ಷ್ಯಾಧಾರಗಳು ಅಲ್ಲಿ ಏಳು-ಅರಮನೆಗಳು ಅಸ್ತಿತ್ವದಲ್ಲಿದ್ದವು ಎಂದು ತಿಳಿಸುತ್ತವೆ. ಕೊಟ್ಟಾರಕ್ಕರ ಎಂಬ ಪದವು "ಕೋಟೆ" ಎಂದು ಅರ್ಥೈಸಲ್ಪಡುವ ಕೊಟ್ಟರಾಮ್ ಎಂಬ ಶಬ್ದದ ರೂಪ ಎನ್ನಲಾಗಿದ್ದು 'ಕೊರಾ' ಅಂದರೆ "ಅರಮನೆಗಳ ಭೂಮಿ" ಎಂದರ್ಥ.





ಕೊಟ್ಟಾರಕರಾ ಗಣಪತಿ ದೇವಾಲಯವು ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಕೊಟ್ಟಾರಕರಾ ಗಣಪತಿಯ ಬಗ್ಗೆ ಹಲವಾರು ದಂತ ಕಥೆಗಳಿವೆ. ವಾಸ್ತವವಾಗಿ ಇಲ್ಲಿನ ಮುಖ್ಯ ದೇವತೆ  ಶಿವ, ಆದರೆ ಗಣಪತಿ ಇಲ್ಲಿ ಪ್ರಸಿದ್ಧವಾಗಿದೆ. ಈ ದೇವಾಲಯದ ನಿಖರವಾದ ಹೆಸರು ಕಿಳಕ್ಕಕ್ಕರ ಶಿವಕ್ಷೇತ್ರ. ಮುಖ್ಯ ದೇವತೆ ಶಿವನ ಹೊರತು ಇನ್ನು ಯಾರೂ ಅಲ್ಲ - ಪೂರ್ವ ದಿಕ್ಕಿಗೆ ಮುಖ ಮಾಡಿರುವ ಶಿವನನ್ನು ನಾವಿಲ್ಲಿ ಕಾಣಬಹುದು. ಗಣಪತಿ ಇಲ್ಲಿ ಉಪ ದೇವತೆ ಮಾತ್ರ. ಆದರೆ ಇಂದು ದೇವಾಲಯವು ಶಿವ ದೇವಸ್ಥಾನದ ಎನ್ನುವ ಬದಲಿಗೆ ಗಣಪತಿ ದೇವಸ್ಥಾನವೆಂದು ಪ್ರಸಿದ್ಧವಾಗಿದೆ.

***

ಹಿಂದೆ ಕಿಳಕೆಕ್ಕರ ದೇವಸ್ಥಾನವು ಎರಡು ನಂಬೂದರಿ ಮನೆತನಕ್ಕೆ ಸೇರಿದ್ದಾಗಿತ್ತು, ಅವು - ಅಕಾವೂರ್ ಮತ್ತು ಒಮಾಂಪಲ್ಲಿ. ಪಡಿಂಜಟ್ಟಿಂಕರಾ ಶಿವ ದೇವಸ್ಥಾನವು ಎಲೈಯತುವಿನ ರಾಜ ಮನೆತನಕ್ಕೆ ಸೇರಿತ್ತು.

ಒಂದು ದಿನ, ಸೂರ್ಯೋದಯಕ್ಕೆ ಮುನ್ನ, ಪಂಡಿಂಜಟಿಂಕರಾ ದೇವಸ್ಥಾನದಲ್ಲಿ ಶಿವವನ್ನು ಪ್ರತಿಷ್ಠೆ ಮಾಡುವುದಕ್ಕಾಗಿ ಆಚರಣೆಗಳು ಪ್ರಾರಂಭವಾಗುತ್ತವೆ, ಈ ಕಾರ್ಯವನ್ನು ಪ್ರಸಿದ್ಧ ಉಲಿಯನ್ನರ್ ಪೆರುಮ್ಥಾಕನ್ ನಿರ್ವಹಿಸುತ್ತಿದ್ದರು. ದೇವಸ್ಥಾನದ ಹೊರಗಡೆ, ಮಂತ್ರಗಳನ್ನು ಕೇಳುತ್ತಿದ್ದಾಗ, ಅವರು ಹಲಸಿನ ಮರವನ್ನು ತುಂಡು ಮಾಡಲು ಪ್ರಾರಂಭಿಸಿದರು. ಅಚ್ಚರಿ ಎನ್ನುವಂತೆ ಅವರಿಗೆ ಅದರಲ್ಲಿ, 'ಗಣಪತಿ' ರೂಪವು ಕಂಡು ಬಂದಿತು. ಹೀಗಾಗಿ ಅವರು ಶಿವವನ್ನು ಪ್ರತಿಷ್ಠೆ ಮಾಡಿದ ಬಳಿಕ ನಂತರ 'ಗಣಪತಿ' ಯನ್ನೂ ಪ್ರತಿಷ್ಠೆ ಮಾಡುವಂತೆ ಮುಖ್ಯ ಅರ್ಚಕನನ್ನು ಕೇಳಿದರು. ಆದರೆ ಮುಖ್ಯ ಅರ್ಚಕರು ಅದಕ್ಕೆ ನಿರಾಕರಿಸಿದರು. "ಇದು ಶಿವ ದೇವಸ್ಥಾನ. ಗಣಪತಿಯನ್ನು ಇಲ್ಲಿ ಪೂಜಿಸಲು ಸಾಧ್ಯವಿಲ್ಲ"ಎಂದು ಬಿಟ್ಟರು.

ಹತಾಶರಾದ ಪೆರುಂಠಚನ್, ಅಲ್ಲಿಂದ ಪೂರ್ವ ದಿಕ್ಕಿನತ್ತ ನಡೆದು ಕಿಳಕೆಕ್ಕರ ಶಿವ ದೇವಸ್ಥಾನವನ್ನು ತಲುಪಿದರು. ಅಲ್ಲಿ ದೇವಸ್ಥಾನದ ಅರ್ಛಕರು ದೇವರಿಗೆ ನೈವೇದ್ಯಕ್ಕಾಗಿ ಉನ್ನಿಯಪ್ಪಂ  ಎನ್ನುವ ಖಾದ್ಯವನ್ನು ತಯಾರಿಸುತ್ತಿದ್ದರು. ಪೆರುಂಠಚನ್ ಅವರಿಗೆ "ಈ ಗಣಪತಿಯನ್ನು ಇಲ್ಲಿ ನೀವುಪ್ರಥಿಷ್ಠಾಪನೆ ಮಾಡುವಿರಾ?" ಎಂದು ಕೇಳಿದರು. ಅರ್ಚಕರು ಒಪ್ಪಿಕೊಂಡರು. ಪೆರುಮ್ಥಾಕನ್ ಈ ದೇವಾಲಯವನ್ನು ಪರಿಶೀಲಿಸಿ ನೋಡಿದರು- ಶಿವ ಪೂರ್ವಕ್ಕೆ ಮುಖ ಮಾಡಿದ್ದಾನೆ. ಅವನ ಮುಂದೆ ಗಂಗೆ ಇದ್ದಾಳೆ, ಪಾರ್ವತಿ ಪಶ್ಚಿಮಕ್ಕೆ ತಿರುಗಿ ಕುಳಿತಿದ್ದಾಳೆ. ನೈಋತ್ಯದಲ್ಲಿ ಶಾಸ್ತ್ರ(ಅಯ್ಯಪ್ಪ) ಮತ್ತು ವಾಯುವ್ಯದಲ್ಲಿ  ಸುಬ್ರಹ್ಮಣ್ಯ ಸ್ವಾಮಿ ಗುಡಿಗಳಿವೆ. ಗಣಪತಿ ಕೂಡ ಸ್ಥಾಪನೆ ಆದರೆ, ಶಿವನ ಪರಿವಾರ ಪೂರ್ನಾವಾದಂತೆ ಆಗುತ್ತದೆ. ಈ ಸ್ಥಳವು ಕೈಲಾಸ ಎನಿಸುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಗಣಪತಿಯನ್ನು ಪೆರುಂಠಚನ್ ದೇವಾಲಯದ ಆಗ್ನೇಯ ಭಾಗದಲ್ಲಿ ಪ್ರತಿಷ್ಠೆ ಮಾಡಿದರು.





ನಂತರ ಪೆರುಮ್ತಚನ್ ಅವರು ಅರ್ಚಕರನ್ನು ಕೇಳಿದರು  "ಗಣಪತಿ ಹಸಿದಿದ್ದಾನೆ. ನೀನು ಸಿದ್ಧಪಡಿಸಿದನೈವೇದ್ಯ ಏನು?". "ಉನ್ನಿಯಪ್ಪಮ್" ಅರ್ಚಕರು ಉತ್ತರ ನೀಡಿದರು. ಒಂದು ಎಲೆಯ ಮೇಲೆ, ಅರ್ಚಕರು ಒಟ್ಟಿಗೆ ಆರು ರಿಂದ ಏಳು ಉನ್ನಿಯಪ್ಪಮ್ಗಳನ್ನು ಕಟ್ಟಿದರು. ಪೆರುಂಠಚನ್,ತನ್ನ ಹೃದಯತುಂಬಿದ ಭಕ್ತಿ ಭಾವದೊದನೆ ಆ ಮೊದಲ ನೈವೇದ್ಯವನ್ನು 'ಕೂಟ್ಟಪ್ಪಮ್' ಅನ್ನು ಗಣಪತಿಗೆ ಅರ್ಪಿಸಿದರು. ಕೊಟ್ಟಾರಕ್ಕರ ಗಣಪತಿಗೆ ಕೂಟ್ಟಪ್ಪಮ್ ನೈವೇದ್ಯ ಇಂದಿಗೂ ಪ್ರಚಲಿತವಾಗಿದೆ. ಪೆರುಮ್ಥಾಕನ್ ತಮ್ಮ ಭಕ್ತಿ ಸಮರ್ಪಣೆಯ ನಂತರ ಪ್ರೀತಿ ತುಂಬಿದ ದನಿಯಿಂದ ಹೇಳಿದರು,"ತಂದೆ (ಶಿವ) ಮುಖ್ಯ ದೇವತೆಯಾದರೂ ಇಲ್ಲಿ ಮಗನು (ಗಣಪತಿ) ಹೆಚ್ಚು ಪ್ರಸಿದ್ಧನಾಗುತ್ತಾನೆ".

ಅವರ ಮಾತುಗಳು ನಿಜ ಎಂದು ಸಾಬೀತಾಯಿತು. ಕಿಳಕೆಕ್ಕರ ಶಿವ ದೇವಸ್ಥಾನವನ್ನು ಈಗ ಕೊಟ್ಟಾರಕರಾ ಗಣಪತಿ ದೇವಾಲಯ ಎಂದು ಕರೆಯಲಾಗುತ್ತದೆ.

Thursday, August 17, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 87

ಸುಧಾಮ ಪುರಿ (Porbandar)


ಶ್ರೀಕೃಷ್ಣನ ಗೆಳೆಯ ಕುಚೇಲ ಅಥವಾ ಸುಧಾಮನ ಕಥೆ ಅತ್ಯಂತ ರಮಣೀಯವಾದದ್ದು ಮತ್ತು ಎಲ್ಲರಿಗೂ ಪ್ರಿಯವಾದದ್ದು ಆಗಿದೆ. ಇಂತಹಾ ಸುಧಾಮ ಹುಟ್ಟಿದ ಸ್ಥಳವೇ ಸುಧಾಮ ಪುರಿ.(ಇಂದಿನ ಪೋರಬಂದರ್)  ಭಾರತ ರಾಷ್ಟ್ರಪಿತ ಗಾಂಧಿ ಸಹ ಹುಟ್ಟಿದ್ದದ್ದು ಇಲ್ಲಿಯೇ. ಕೃಷ್ಣನ ಲೀಲಾ ಕ್ಷೇತ್ರವಾದ ದ್ವಾರಕೆಯಿಂದ ಇಲ್ಲಿಗೆ 104 ಕಿಲೋಮೀಟರ್. ಗುಜರಾತಿನ ಮುಖ್ಯ ಪಟ್ಟಣ ಅಹಮದಾಬಾದ್ ನಿಂದ 398 ಕಿಲೋಮೀತರ್ ದೂರದಲ್ಲಿದೆ. ಇಲ್ಲಿ ಇಂದಿಗೂ ಸುಧಾಮ ಪುರಿ ದೇವಾಲಯವಿದ್ದು ಇದನ್ನು 1902 ರಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಮುನ್ನ ಪುಟ್ಟ ಗುಡಿಯೊಂದು ಇದ್ದಿತ್ತು ಮತ್ತು ಅದು 12 ನೇ ಶತಮಾನದಲ್ಲಿ ನಿರ್ಮಾಣವಾಗಿತ್ತು.

***


ಶ್ರೀಕೃಷ್ಣನಿಗೆ ಸುಧಾಮ ಎಂಬ ಬ್ರಾಹ್ಮಣ ಸ್ನೇಹಿತನಿದ್ದನು, ಗೃಹಸ್ಥನಾಗಿದ್ದರೂ ಅವನು ನೆಮ್ಮದಿಯ ಜೀವನಕ್ಕಾಗಿ ಐಶ್ವರ್ಯವನ್ನು ಸಂಗ್ರಹಿಸುವುದರಲ್ಲಿ ನಿರತನಾಗಿರಲಿಲ್ಲ. ತನ್ನ ಅದೃಷ್ಟಕ್ಕೆ ಅನುಗುಣವಾಗಿ ಬಂದ ಆದಾಯದಿಂದಲೇ ತೃಪ್ತನಾಗಿದ್ದನು ಮತ್ತು ಹೊರನೋಟಕ್ಕೆ ಅವನು ಬಡವನ ಹಾಗೆ ಕಾಣುತ್ತಿದ್ದನು. ಒಮ್ಮೆ ಸುಧಾಮನ ಹೆಂಡತಿ ಅವನಿಗೆ ತನ್ನ ಸ್ನೇಹಿತನಾದ ಶ್ರೀಕೃಷ್ಣನ ಬಳಿಗೆ ಹೋಗಿ ಧನ ಸಹಾಯವನ್ನು ಕೇಳಬೇಕೆಂದು ಹೇಳಿದನು. ಆಗ ಅವನಿಗೆ ಶ್ರೀಕೃಷ್ಣನಿಂದ ಯಾವ ಸಹಾಯವನ್ನು ಕೇಳುವ ಮನಸ್ಸಿಲ್ಲದಿದ್ದರೂ ಶ್ರೀಕೃಷ್ಣನ ದರ್ಶನ ಮಾಡಬಹುದೆಂದು ಯೋಚಿಸಿ, ತನ್ನ ಪತ್ನಿಯು ನೀಡಿದ ೪ ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ದ್ವಾರಕೆಗೆ ಹೊರಟನು. ಅವನು ಶ್ರೀಕೃಷ್ಣನಿದ್ದ ಅರಮನೆಗೆ ಬಂದಾಗ ಶ್ರೀಕೃಷ್ಣನು ಅವನನ್ನು ಆದರದಿಂದ ಬರಮಾಡಿಕೊಂಡನು ಮತ್ತು ಅವನಿಗೆ ಬ್ರಾಹ್ಮಾಣರಿಗೆ ಮಾಡುವ ಎಲ್ಲಾ ಸತ್ಕಾರಗಳನ್ನು ಮಾಡಿದನು. ಶ್ರೀಕೃಷ್ಣನು ಸುಧಾಮನೊಂದಿಗೆ, ಅವರು ಗುರುಕುಲದಲ್ಲಿದ್ದಾಗ ನಡೆದ ಘಟನೆಗಳ ಬಗ್ಗೆ ಬಹಳ ಸಮಯ ಮಾತನಾಡಿದನು. ನಂತರ ಶ್ರೀಕೃಷ್ಣನು ಸುಧಾಮನಿಗೆ “ಪ್ರಿಯ ಗೆಳೆಯ, ನೀನು ನನಗಾಗಿ ಏನು ತಂದಿದ್ದೀಯೆ? ನಿನ್ನ ಹೆಂಡತಿಯು ನನಗಾಗಿ ಏನು ಕಳುಹಿಸಿದ್ದಾಳೆ ಎಂದು ಕೇಳಿದನು? ದ್ವಾರಕೆಯ ಒಡೆಯನಾದ ಶ್ರೀಕೃಷ್ಣನಿಗೆ ತಾನು ತಂದಿರುವ ಅವಲಕ್ಕಿಯನ್ನು ಹೇಗೆ ಕೊಡುವುದು ಎಂದು ಅದನ್ನು ಸುಧಾಮ ಬಚ್ಚಿಟ್ಟು ಕೊಳ್ಳುತ್ತಿದ್ದನು. ಆಗ ಶ್ರೀಕೃಷ್ಣನು ಅವನಿಂದ ಅದನ್ನು ಕಿತ್ತುಕೊಂಡು ಅದರಿಂದ ಒಂದು ಹಿಡಿ ಅವಲಕ್ಕಿಯನ್ನು ತಿಂದನು. ಎರಡನೆಯ ಹಿಡಿಯನ್ನು ತಿನ್ನುವಾಗ ರುಕ್ಮಿಣಿಯು ಶ್ರೀಕೃಷ್ಣನ ಕೈಯನ್ನು ಹಿಡಿದು ತಡೆದಳು. ಅವಳು ಶ್ರೀಕೃಷ್ಣನಿಗೆ “ಪ್ರಿಯ ಪ್ರಭುವೇ, ಈ ಒಂದು ಹಿಡಿ ಅವಲಕ್ಕಿಯು ಇದನ್ನು ಕೊಟ್ಟವನನ್ನು ಈ ಜನ್ಮದಲ್ಲಿಯೂ ಮುಂದಿನ ಜನ್ಮದಲ್ಲಿಯೂ ಶ್ರೀಮಂತನನ್ನಾಗಿ ಮಾಡುತ್ತದೆ” ಎಂದು ಹೇಳಿದಳು. ಸುಧಾಮನು ದ್ವಾರಕೆಯಲ್ಲಿ ಒಂದು ರಾತ್ರಿ ಕಳೆದು ಹೊರಟನು ಮಾರ್ಗದಲ್ಲಿ ಅವನು ಶ್ರೀಕೃಷ್ಣನ ಗುಣಾತಿಶಯಗಳನ್ನು ನೆನೆಸಿಕೊಳ್ಳುತ್ತಿದ್ದನು. ಹೀಗೆ ಅವನು ತನ್ನ ಮನೆಯನ್ನು ತಲುಪಿದಾಗ ಅಲ್ಲಿ ಸ್ವರ್ಗದಲ್ಲಿರುವ ಐಶ್ವರ್ಯಕ್ಕಿಂತ ಹೆಚ್ಚಾದ ಐಶ್ವರ್ಯವನ್ನು ಶ್ರೀಕೃಷ್ಣನು ಅವನಿಗೆ ಕರುಣಿಸಿದ್ದನ್ನು ಕಂಡು ಅವನ ಮಹಿಮೆಗಳನ್ನು ಕೊಂಡಾಡಿದನು. ಶ್ರೀಮಂತಿಕೆಯನ್ನು ಇಂದ್ರಿಯ ತೃಪ್ತಿಗಾಗಿ ಬಳಸಿದರೆ ಅದು ಅವನತಿಗೆ ಕಾರಣವಾಗುತ್ತದೆ, ಆದರೆ ಅದನ್ನು ಶ್ರೀಕೃಷ್ಣನ ಸೇವೆಗೆ ಬಳಸಿದರೆ ಉನ್ನತಿಗೆ ಕಾರಣವಾಗುತ್ತದೆ. ಸುಧಾಮನು ಶ್ರೀಕೃಷ್ಣನು ತನಗೆ ನೀಡಿದ ಶ್ರೀಮಂತಿಕೆಯನ್ನು ತನ್ನ ಮಿತಿಮೀರಿದ ಇಂದ್ರಿಯ ತೃಪ್ತಿಗೆ ಬಳಸಬಾರದು, ಬದಲಿಗೆ ಶ್ರೀಕೃಷ್ಣನ ಸೇವೆಗೆ ಬಳಸಬೇಕು ಎಂದು ನಿಶ್ಚಯಿಸಿದನು. ಹೀಗೆ ಸುಧಾಮನು ಶ್ರೀಕೃಷ್ಣನ ಸೇವೆಯನ್ನು ಮಾಡುತ್ತಾ ಸಾವಿನ ನಂತರ ಭಗವಂತನ ಧಾಮಕ್ಕೆ ಹಿಂದಿರುಗಿದನು.

Tuesday, August 15, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 86

ಮುಂಬೈ(Mumbai)


ಮುಂಬೈ ನಗರ, ಮಹಾರಾಷ್ಟ್ರದ ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (೨೦೦೬ ರ ಅಂದಾಜು) ವಾಸಿಸುವ ಇದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ , ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು , ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು, ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ.



ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ.
ಮುಂಬಯಿ ಹೆಸರಿನ ಮೂಲ ಮುಂಬಾದೇವಿ ಎಂಬ ದೇವಿಯ ಹೆಸರು. ಮುಂಬಾದೇವಿ ದೇವಾಲಯ ಇಂದಿಗೂ ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು.

ಮುಂಬೈ ನಗರ ದೇವಿಯಾದ ಮುಂಬಾ ದೇವಿ ದೇವಸ್ಥಾನವು ಮುಂಬೈ ನಗರ ವ್ಯಾಪ್ತಿ ಪ್ರದೇಶದಲ್ಲಿರುವ ಪ್ರಸಿದ್ಧ ದೇವಸ್ಥಾನ. ಮೂಲ ಮುಂಬಾ ಮರಾಠಿ ಪದವು ಮಹಾ ಅಂಬಾ (ಅಂಬಾ ಎಂದರೆ ತಾಯಿ ಅಥವಾ ಮಾತೆ) ಎಂಬ ಶಬ್ದದಿಂದ ವ್ಯುಕ್ತಿ ಹೊಂದ ಪದವಾಗಿದೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.



6 ಶತಮಾನಗಳಷ್ಟು ಪುರಾತನವಾದ ಈ ದೇವಾಲಯ ಟ್ಯಾಕ್ಸಿ ಹಾಗು ರಿಕ್ಷಾಗಳ ಮೂಲಕ ಸುಲಭವಾಗಿ ತಲುಪಬಹುದಾದ ದಕ್ಷಿಣ ಮುಂಬೈನ ಭುಲೇಶ್ವರ ಪ್ರದೇಶದಲ್ಲಿದೆ.

ಹಿಂದೆ ಮುಂಬಾರಕ ಎಂಬ ದೈತ್ಯನ ಉಪಟಳವು ಇಲ್ಲಿ ಹೆಚ್ಚಾದಾಗ ಇಲ್ಲಿ ವಾಸಿಸುತ್ತಿದ್ದವರೆಲ್ಲ ಒಟ್ಟಿಗೆ ಸೇರಿ ಬ್ರಹ್ಮನನ್ನು ಕುರಿತು ಭಕ್ತಿಯಿಂದ ತಮ್ಮನ್ನು ಆ ದೈತ್ಯ್ನಿಂದ ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ಇವರ ಪ್ರಾರ್ಥನೆಯನ್ನು ಆಲಿಸಿದ ಬ್ರಹ್ಮನು ಅಷ್ಟ ಭುಜವುಳ್ಳ ಶಕ್ತಿ ರೂಪದ ದೇವಿಯನ್ನು ಸೃಷ್ಟಿಸುತ್ತಾನೆ. ನಂತ ಆ ದೇವಿಯು ಮುಂಬರಕನೊಡನೆ ಘೋರ ಯುದ್ಧ ಮಾಡಿ ಅವನನ್ನು ಸೋಲಿಸಿ ಕೆಳಗುರುಳಿಸುತ್ತಾಳೆ. ಸೋತಿದ್ದ ಆ ದೈತ್ಯನು ದೇವಿಯನ್ನು ಮನಸಾರೆ ಪ್ರಾರ್ಥಿಸಿ ತನ್ನ ಹೆಸರನ್ನು ಇಟ್ಟುಕೊಂಡು ಇಲ್ಲಿಯೆ ನೆಲೆಸಲು ಕೋರುತ್ತಾನೆ. ಆ ಕೋರಿಕೆಯನ್ನು ಮನ್ನಿಸಿದ್ದ ದೇವಿಯು ಮುಂಬಾ ಬ್ದೇವಿ ಎನ್ನುವ ಹೆಸರಿನಲ್ಲಿ ಇಲ್ಲಿಯೇ ನೆಲೆಸುತ್ತಾಳೆ.