Monday, October 02, 2017

ಸಾಧನೆ ಪಥದಲ್ಲಿ ಸಾಗುತ್ತಿರುವ ಅಪೂರ್ವ ಛಾಯಾಗ್ರಾಹಕಿ ಹೇಮಾ ನಾರಾಯಣ್

ನಮ್ಮ ಜೀವನದ ಪಯಣದಲ್ಲಿ ಎದುರಾಗುವ ಕೆಲವು ಅದ್ಭುತ ಗಳಿಗೆಗಳನ್ನು ಸೆರೆ ಹಿಡಿದು ನಮ್ಮ ಜೀವನದ ಉದ್ದಕ್ಕೂ ನೆನಪಿರುವಂತೆ ಕಾಪಾಡಿಕೊಳ್ಳುವ ಕ್ರಿಯೆಯೇ ಛಾಯಾಗ್ರಹಣ. ಪ್ರತಿಯೊಬ್ಬರ ಜೀವನದಲ್ಲಿಯೂ ಮಹತ್ವದ ಘಟ್ಟಗಳು ಬರುತ್ತದೆ. ಅಂತಹಾ ಘಟ್ಟಗಳಲ್ಲಿ ನಾವೆಲ್ಲರೂ ಅದನ್ನು ಎಂದಿಗೂ ಮರೆಯದಂತೆ ಇಡಲು ಛಾಯಾಗ್ರಹಣ ನೆರವಿಗೆ ಬರಲಿದೆ. ಎನ್ನುತ್ತಾರೆ ಾಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕಿ ಹೇಮಾ ನಾರಾಯಣ್.



ಸ್ಟ್ರೀಟ್ ಫೋಟೋಗ್ರಫಿ, ಲ್ಯಾಂಡ್ ಸ್ಕೇಪ್ ಫೋಟೋಗ್ರಫಿ, ವೈಲ್ಡ್ ಲೈಫ್ ಫೋಟೋಗ್ರಫಿ, ಅಸ್ಟ್ರೋ ಫೋಟೋಗ್ರಫಿ ಹೀಗೆ ನಾನಾ ವಿಧದ  ಛಾಯಾಚಿತ್ರ ತೆಗೆಯುವುದರಲ್ಲಿ ಸಿದ್ದ ಹಸ್ತರಾದ ಹೇಮಾ ನಾರಾಯಣ್ ಛಾಯಾಗ್ರಹಣದ ವಿವಿಧ ಮಜಲುಗಳ ಅನುಭವ ಹೊಂದಿದ ಇವರು ದೇಶ ವಿದೇಶದ ನಾನಾ ಜಾಲತಾಣಗಳಿಗೆ, ನಿಯತಕಾಲಿಕಗಳಿಗೆ, ಟಿವಿ ಡಾಕ್ಯುಮೆಂಟರಿಗಳಿಗೆ ತಮ್ಮ ಕ್ಯಾಮರಾದ ಮೂಲಕ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುತ್ತಾರೆ.

ಇದುವರೆಗೂ ದೇಶ ವಿದೇಶಗಳಲ್ಲಿ ಸಾಕಷ್ಟು ಛಾಯಾಚಿತ್ರ ಪ್ರದರ್ಶನಗಳನ್ನು ನೀಡಿರುವ ಇವರನ್ನು ಗೃಹಶೋಭಾ ಮಾತಿಗೆ ಆಹ್ವಾನಿಸಿದಾಗ ಆತ್ಮೀಯತೆಯಿಂದ ಮಾತಿಗಿಳಿದ ಹೇಮಾ ತಮ್ಮ ಬದುಕಿನ ಚಿತ್ರವನ್ನು ತೆರೆದಿಟ್ಟದ್ದು ಹೀಗೆ-


ನಾನು ಓದಿದ್ದು ಇಂಜಿನಿಯರಿಂಗ್. ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ಸ್ ಮುಗಿಸಿದಾಗ ನನಗೆ ಐಟಿ ಸಂಸ್ಥೆಯಲ್ಲಿ ಕೆಲಸ ದೊರಕಿತು. ಆಗೆಲ್ಲಾ ನಾನು ಕೆಲಸದ ಸಲುವಾಗಿ ದೂರದ ಊರುಗಳಿಗೆ, ವಿದೇಶಕ್ಕೆ ಪ್ರವಾಸ ಹೋಗಬೇಕಾಗುತ್ತಿತ್ತು. ಆಗೆಲ್ಲಾ ನಾನು ನನ್ನೊಂದಿಗೆ ಕ್ಯಾಮರಾ ತೆಗೆದೊಯ್ಯುತ್ತಿದ್ದೆ. ನಾನು ಭೇಟಿ ನೀಡಿದ ಸ್ಥಳದ ಸುಂದರ ದೃಷ್ಗಳನ್ನು ಸೆರೆ ಹಿಡಿದು ಅದನ್ನು ನನ್ನ ಸಂಗ್ರಹದಲ್ಲಿರಿಸಿಕೊಳ್ಳುತ್ತಿದ್ದೆ.
ಆಗೆಲ್ಲಾ ಕ್ಯಾಮರಾ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೂ ಅಂದು ತೆಗೆದ ಚಿತ್ರಗಳು ಉತ್ತಮವಾಗಿ ಮೂಡಿ ಬಂದಿದ್ದವು. 2005 ರಲ್ಲಿ ಇನ್ನೂ ಐದು ಛಾಯಾಗ್ರಾಹಕರೊಡನೆ ಸೇರಿ ಕರ್ನಾಟಕದ ವಿವಿಧ ಪ್ರಸಿದ್ದ ಸ್ಮಾರಕಗಳ ಛಾಯಾಚಿತ್ರ ತೆಗೆದೆ.  ಈ ಪ್ರಾಜೆಕ್ಟ್‌ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ನನಗೆ ಪ್ರಾಯೋಗಿಕವಾದ ಅನುಭವ ನೀಡಿತು. ಕ್ರಮೇಣ ಕ್ಯಾಮರಾದ ಕುರಿತು ಅನೇಕ ವಿಚಾರಗಳನ್ನು ಕಲಿತೆ. ಕಲಿಯುತ್ತಲೇ ಅದರಲ್ಲಿನ ಆಸಕ್ತಿ ಹೆಚ್ಚುತ್ತಾ ಸಾಗಿತು. ಕಡೆಗೆ 2009 ರಲ್ಲಿ ಐಟಿ ಉದ್ಯೋಗ ಕೈಬಿಟ್ಟು ಪೂರ್ಣ ಪ್ರಮಾಣದಲ್ಲಿ ಛಾಯಾಗ್ರಹಣ ಮತ್ತು  ಫೊಟೋಗ್ರಫಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ.

ಇಂದು ಹಲವಾರು ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿರುವ ಹೇಮಾ ಅವರು ನ್ಯಾಷನಲ್ ಜಿಯೋಗ್ರಾಫಿಕ್ ನ ಟ್ರಾವಲರ್ ಇಂಡಿಯಾ ಕಾರ್ಯಕ್ರಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಇದೆಲ್ಲದರೊಡನೆ 'ವೈಡರ್ ಆಂಗಲ್ಸ್' (Wider Angles)  ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಇದರ ಮೂಲಕವಾಗಿ ಫೊಟೋಗ್ರಫಿ ವರ್ಕ್ ಶಾಪ್ ಗಳನ್ನು ಸಹ ನಡೆಸುತ್ತಿದ್ದಾರೆ. ಜತೆಗೆ ಅನೇಕ ಬಾರಿ ಭಾರತ ಪ್ರವಾಸವನ್ನು ಆಯೋಜಿಸಿ ಫೋಟೋಗ್ರಫಿ ಕುರಿತಾಗಿ ಪ್ರಾತ್ಯಕ್ಷಿಕೆ ಏರ್ಪಡಿಸುತ್ತಾರೆ. ಇದರೊಡನೆ ಫೋಟೋಗ್ರಫಿಯಲ್ಲಿರುವ ನಾನಾ ಸಾಧ್ಯತೆಗಳನ್ನು ಸಹ ತಿಳಿಸಿ ಹೇಳುತ್ತಾರೆ. ದಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬೆಂಗಳೂರು ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕುರಿತಂತೆ ಶಿಕ್ಷಣವನ್ನು ನೀಡುತ್ತಿರುವ ಹೇಮಾ ಇದುವರೆಗೆ ಇಂಟೀರಿಯರ್ಸ್, ಲೈಫ್ ಸ್ಟೈಲ್, ಟ್ರಾವೆಲ್, ಹೋಮ್ ಡೆಕರ್, ಫುಡ್ ಫೋಟೋಗ್ರಫಿ ಗಳಂತಹಾ ಹೊಸವಿಧದ ಫೋಟೋಗ್ರಫಿ ವಿಭಾಗಗಳಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ.


ನ್ಯೂ ಯಾರ್ಕ್ ಇನ್ಸ್ ಟಿಟ್ಯೂಟ್ ಆಫ್ ಫೋಟೋಗ್ರಫಿ ಸಂಸ್ಥೆಯಲ್ಲಿ ಪದವಿ ಪಡೆದಿರುವ ಹೇಮಾ ಅವರಿಗೆ ನ್ಯಾಷನಲ್ ಜಿಯೋಗ್ರಾಫಿ ಮತ್ತು ಜೆಟ್ ಏರ್ ವೇಸ್ ಜಂತಿಯಾಗಿ ನಡೆಸುವ ಮಹಿಳಾ ಛಾಯಾಗ್ರಾಹಕಿಯರ ವಿಶೇಷ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫೋಟೋಗ್ರಫಿ ಕುರಿತಂತೆ ನಡಿಯುವ ರಾಷ್ಟ್ರೀಯ, ಅಂತರಾಷ್ಟ್ರೀಯ ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹೇಮಾ ಅಲ್ಲಿ ತಮ್ಮ ಪ್ರಬಂಧ, ಭಾಷಣಗಳನ್ನು ಮಂಡಿಸಿ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಫೋಟೋಗ್ರಫಿಯಲ್ಲಿ ಹಲವಾರು ವಿಧಾನಗಳಿದೆ ಎನ್ನುವ ಹೇಮಾ ತಾನು ಇತ್ತೀಚೆಗೆ ವನ್ಯಜೀವಿ ಛಾಯಾಗ್ರಹಣ ಮತ್ತು ಅಸ್ಟ್ರೋ ಛಾಯಾಗ್ರಹಣದ ಕುರಿತು ಹೆಚ್ಚಿನ ಮಟ್ಟಿಗೆ ಪ್ರಯೋಗ ಮಾಡುತ್ತಿರುವುದಾಗಿ ಹೇಳುತ್ತಾರೆ.

ವನ್ಯಜೀವಿ ಛಾಯಾಗ್ರಹಣದ ಸಲುವಾಗಿ ಆಫ್ರಿಕಾದ ಕಾಡುಗಳಲ್ಲಿ ದಿನಗಟ್ಟಲೆ, ವಾರಗಟ್ಟಲೆ ಅಲೆದಾಡಿದ್ದ ಇವರು ಕೀನ್ಯಾವೇ ಮೊದಲಾದ ಆಫ್ರಿಕಾದ ರಾಷ್ಟ್ರಗಳನ್ನು ಸುತ್ತಿ ಅಲ್ಲಿನ ಕಾಡು ಪ್ರಾಣಿಗಳ ಸುಂದರ ಚಿತ್ರಗಳನ್ನು ತಮ್ಮ ಕ್ಯಮಾರಾದಲ್ಲಿ ಸೆರೆ ಹಿಡಿದಿದ್ದಾರೆ. ನಾನು ಕಾಡಿನಲ್ಲಿ ಸಫಾರಿ ಹೊರಡುವ ಮುನ್ನ ನನ್ನೆರಡೂ ಭುಜಗಳಿಗೆ ಒಂದೊಂದರಂತೆ ಕ್ಯಾಮರಾಗಳನ್ನು ಫಿಕ್ಸ್ ಮಾಡಿಕೊಳ್ಳುತ್ತಿದ್ದೆ. ಅದಲ್ಲದೆ ಹಣೆಯ ಮೇಲೆ ಪಟ್ಟಿಯಂತೆ ಕಟ್ಟಿಕೊಂಡು ಅಲ್ಲಿಯೂ ಒಂದು ಪುಟ್ಟ ಕ್ಯಾಮರಾ ಇರಿಸಿಕೊಳ್ಲುತ್ತಿದ್ದೆ. ನನ್ನ ದಾರಿಯಲ್ಲಿ ಯಾವ ದಿಕ್ಕಿನಿಂದ ಪ್ರಾಣಿಗಳು ಬಂದರೆ ಆ ದಿಕ್ಕಿನ ಕ್ಯಾಮರಾವನ್ನು ತಕ್ಷಣ ಫೋಕಸ್ ಮಾಡಿ ನಿಮಿಷ ಮಾತ್ರದಲ್ಲಿ ಚಿತ್ರ ಸೆರೆ ಹಿಡಿಯಬೇಕಾಗಿತ್ತು. ವನ್ಯಜೀವಿ ಛಾಯಾಗ್ರಹಣ ನಿಜಕ್ಕೂ ಸವಾಲಿನ ಕ್ಷೇತ್ರ, ಎಂದು ತಮ್ಮ ಪ್ರವಾಸ ಅನುಭವವನ್ನು ಹೇಮಾ ಮೆಲುಕು ಹಾಕುತ್ತಾರೆ.

ಇನ್ನು ಅಸ್ಟ್ರೋ ಫೋಟೋಗ್ರಫಿ ಕುರಿತಂತೆ ಹೇಳುವುದಾದರೆ ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ನಕ್ಷತ್ರಪುಂಜ, ಮಿಲ್ಕಿವೇ ಗ್ಯಾಲಕ್ಸಿ ಹಾಗೂ ಅನಿಲದ ಚಲನೆಯನ್ನು ಸೆರೆಹಿಡಿಯುವುದು ಈ ಶೈಲಿಯ ಮುಖ್ಯ ಉದ್ದೇಶ. ಪ್ರತಿನಿತ್ಯ ಆಗಸದಲ್ಲಿ ಕತ್ತಲ ರಾತ್ರಿಯ ಸಮಯ ಹಲವಾರು ನಕ್ಷತ್ರಗಳು ಕಾಣುತ್ತವೆ. ಭೂಮಿಯ ಚಲನೆಗೆ ತಕ್ಕಂತೆ ನಕ್ಷತ್ರದ ಮಾದರಿ (ಪ್ಯಾಟರ್ನ್) ಬದಲಾಗುವಂತೆ ಕಾಣುವುದರಿಂದ ನಾವು ಕ್ಯಾಮರವನ್ನು ಫೋಕಸ್ ಮಾಡಿ ನಿರ್ದಿಷ್ಟ ಕಾಲದವರೆಗೆ ಕಾಯ್ದು ಚಿತ್ರವನ್ನು ಸೆರೆಹಿಡಿಯಬೇಕು. ಹಾಗೆ ಸೆರೆ ಹಿಡಿದ ಚಿತ್ರವನ್ನು ಒಟ್ಟಿಗೆ ಸ್ಯಾಕ್ (ಒಂದುಗೂಡಿಸುವುದು) ಮಾಡಿದರೆ ನಕ್ಷತ್ರದ ಪ್ಯಾಟರ್ನ್‌ ವೃತ್ತಾಕಾರ ಅಥವಾ ಅರ್ಧ ವೃತ್ತಾಕಾರದಲ್ಲಿ ಮೂಡಿರುತ್ತದೆ. ಅದು ಮಿಂಚುಕೋಲಿನಂತೆ ಕಾಣುತ್ತದೆ. ಇದಕ್ಕಾಗಿ ವಿಶೇಷವಾದ ಜಾಗದ ಅವಶ್ಯಕತೆ ಇದೆ. ಕೃತಕ ಬೆಳಕಿಲ್ಲದ, ವಾಯುಮಾಲಿನ್ಯವಿಲ್ಲದ, ಮೋಡವಿಲ್ಲದ, ಸ್ಪಚ್ಛ ಆಕಾಶವಿರುವ ಕಡೆ ಮಾತ್ರವೇ ಅಸ್ಟ್ರೋ ಫೋಟೋಗ್ರಫಿ ಸಾಧ್ಯವಾಗುತ್ತದೆ.

ಟೆಲಿ ಫೋಟೊ ಲೆನ್ಸ್‌ ಬಳಸಿ ತೆಗೆದ ಚಿತ್ರವನ್ನು ಸ್ಟಾರ್‌ ಸ್ಟ್ಯಾಕಿಂಗ್, ಸ್ಟಾರ್‌ ಗೇಜಿಂಗ್ ಇತ್ಯಾದಿ ಸಾಫ್ಟ್‌ವೇರ್‌ಗಳನ್ನು ಬಳಸಿ ನೂರಾರು ಫೋಟೊಗಳನ್ನು ಒಗ್ಗೂಡಿಸಿ ಒಂದು ಚಿತ್ರವನ್ನು ತಯಾರಿಸುತ್ತಾರೆ. ಹೀಗೆ ಮಾಡಿದಾಗ ಚಿತ್ರದಲ್ಲಿ ನಕ್ಷತ್ರಗಳ ಪ್ಯಾಟರ್ನ್‌ ಚಲಿಸಿರುವುದು ಗೋಚರಿಸಿರುತ್ತದೆ.


ಇನ್ನು ಇಂತಹಾ ಛಾಯಾಗ್ರಹಣವು ನಿಜಕ್ಕೂ ಮನುಷ್ಯ ಪ್ರಯತ್ನವನ್ನು ಮೀರಿದ್ದಾಗಿದೆ. ನಾನೊಮ್ಮೆ ಲಡಾಕ್ ಪ್ರವಾಸ ಕೈಗೊಂಡ ಸಮಯದಲ್ಲಿ  ಸೂರ್ಯನ ಬೆಳಕಲ್ಲಿ ಹೊಳೆಯುವ, ಬಣ್ಣದಿಂದ ಕೂಡಿದ ಮೋಡವನ್ನು ಕಂಡಿದ್ದೆ. ‘ಮದರ್ ಆಫ್ ಪರ್ಲ್‌’ ಎನ್ನುವ ಹೆಸರಿನ ಆ ಮೋಡ ಗೋಚರಿಸಿದ್ದು ಕೇವಲ 15 ನಿಮಿಷ! ಆ ಕ್ಷಣಕ್ಕೆ ನಮ್ಮ ಬಳಿ ಕ್ಯಾಮರಾ ಇರಬೇಕು. ತೆಗೆದ ಶಾಟ್ ಸರಿಯಾಗಿ ಬಂದಿರಬೇಕು! ತುಸುವೇ ಹೆಚ್ಚು ಕಮ್ಮಿಯಾದರೂ ಮತ್ತೆ ಅಂತಹಾ ಅವಕಾಶ ದೊರೆಯಲಾರದು.

ಹೀಗೆ ತಮ್ಮ ಅನುಭವದೊಡನೆ ಫೋಟೋಗ್ರಫಿಯ ನಾನಾ ವಿಧಾನದ ಕುರಿತು ವಿವರಿಸುವ ಹೇಮಾ ಛಾಯಾಗ್ರಣ ಒಂದು ಕಲೆ. ಇಂದಿನ ಜಮಾನದಲ್ಲಿ ಎಲ್ಲರ ಬಳಿಯೂ ಕ್ಯಾಮರಾ , ಕ್ಯಾಮರಾ ಮೊಬೈಲ್ ಗಳಿರುತ್ತವೆ. ಪ್ರತಿಯೊಬ್ಬರೂ ಫೋಟೋಗ್ರಾಫ್ ತೆಗೆದುಕೊಳ್ಳುವಲ್ಲಿ ತೊಡಗಿರುತ್ತಾರೆ. ಆದರೆ ಕೆಲವು ವಿಶೇಷ ಸನ್ನಿವೇಶ, ಸ್ಥಳಗಳನ್ನು ವೈವಿದ್ಯಮಯ ಆಂಗಲ್ಸ್ ನಿಂದ ಸೆರೆಹಿಡಿಯುವುದನ್ನು ಕಲಿತಾಗ ಯಾರಾದರೂ ಉತ್ತಮ ಛಾಯಾಗ್ರಾಹಕರಾಗಬಲ್ಲರು. ಓರ್ವ ಛಾಯಾಗ್ರಾಹಕನಾಗಲು ಮುಖ್ಯವಾಗಿ ತಾಳ್ಮೆ ಇರಬೇಕು. ಸದಾ ಕುತೂಹಲ, ಚುರುಕು ಬುದ್ದಿ, ತಕ್ಷಣವೇ ಅಲರ್ಟ್ ಆಗುವ ಸ್ವಭಾವವಿರಬೇಕು. ಎನ್ನುತ್ತಾರೆ.

(ನನ್ನ ಲೇಖನವು ಗೃಹಶೋಭಾ ಮಾಸಪತ್ರಿಕೆ ಸೆಪ್ಟೆಂಬರ್ 2017ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)

Sunday, September 03, 2017

ಹಲವು ಪ್ರಥಮಗಳ ಮಹಿಳೆ ಶಾಂತಾ ರಂಗಸ್ವಾಮಿ



“ನಾವು ಭಾರತದಲ್ಲಿ ಮಹಿಳಾ ಕ್ರಿಕೆಟ್ ಗೆ ಭದ್ರ ಬುಮಾದಿ ಹಾಕಿಕೊಟ್ಟೆವು. ಭಾರತ ಮಹಿಳಾ ಕ್ರಿಕೆಟ್ಟಿನ ಸ್ಥಾಪಕ ತಂಡದ ಸದಸ್ಯರು ಎನ್ನುವ ಹೆಮ್ಮೆ ನನಗಿದೆ. ಈಗ ಜೀವಮಾನ ಸಾಧನೆ ಪುರಸ್ಕಾರ ಲಭಿಸಿರುವುದು ಸಹ ಮಹಿಳಾ ಕ್ರಿಕೆಟ್ಟಿಗೆ ಸಿಕ್ಕ ಗೌರವವಾಗಿದೆ. ಇಷ್ಟು ತಡವಾಗಿಯಾದರೂ ಬಿಸಿಸಿಐ ಮಹಿಳಾ ಕ್ರಿಕೆಟಿಗರನ್ನು ಜೀವಮಾನ ಸಾಧನೆ ಗೌರವಕ್ಕೆ ಪರಿಗಣಿಸಿತಲ್ಲ ಎನ್ನುವುದೇ ಸಂತಸದ ವಿಚಾರ. ಅದು ನನ್ನಿಂದಲೇ ಪ್ರಾರಂಭವಾದದ್ದು ಇನ್ನೂ ಖುಷಿ.”  ಇದು ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ನಿಂದ ಜೀವಮಾನ ಸಾಧನೆ ಪುರಸ್ಕಾರಕ್ಕೆ ಭಾಜನರಾದ ಕರ್ನಾಟಕದ ಹೆಮ್ಮೆಯೆ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿಯವರ ಮನದ ಮಾತುಗಳು.
ಸಿ.ವಿ. ರಂಗಸ್ವಾಮಿ ಹಾಗೂ ರಾಜಲಕ್ಷ್ಮಿಯವರ ಮಗಳಾದ ಶಾಂತಾ ಹುಟ್ಟಿದ್ದು ಚೆನ್ನೈನಲ್ಲಿ ಆದರೂ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಕ್ರಿಕೆಟಿಗರಾದ ಮೇಲೆಯೂ ಆಡಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಮಾತ್ರ. ಹೀಗಾಗಿ ಇವರು ಅಪ್ಪಟ ಕನ್ನಡಿಗರೇ ಎನ್ನುವುದು ನಿರ್ವಿವಾದ. ಏಳು ಜನ ಸಹೋದರಿಯರಲ್ಲಿ ಶಾಂತಾ ಮೂರನೇಯವರಾಗಿದ್ದು ಪದವಿ ವ್ಯಾಸಂಗ ಮಾಡಿ ಮುಗಿಸುವ ವೇಳೆಗೆ ಕೆನರಾ ಬ್ಯಾಂಕಿನಲ್ಲಿ ನೌಕರಿ ದೊರಕಿತ್ತು. ಮುಂದೆ ಅದರಲ್ಲಿಯೇ ಜನರಲ್ ಮ್ಯಾನೆಜರ್ ಹುದ್ದೆಗೇರಿ ನಿವೃತ್ತರಾದರು.



ಕೂಡು ಕುಟುಂಬದ ಹಿನ್ನೆಲೆಯಿಂದ ಬಂದ ಶಾಂತಾ ಅವರ ಮನೆಯಲ್ಲಿಯೇ ಇಪ್ಪತ್ತು ಮಕ್ಕಳಿದ್ದರು.ದರಲ್ಲಿಯೂ ಹುಡುಗಿಯರೇ ಹೆಚ್ಚು! ಮಹಿಳಾ ಸೇವಾ ಸಮಆಜದಲ್ಲಿ ಎಲ್ಲರೂ ಕೂಡಿ ಕ್ರಿಕೆಟ್ ಆಡುತ್ತಾ ಬಾಲ್ಯ ಕಳೆದಿದ್ದ ಶಾಂತಾ ಅವರಿಗೆ ಬಾಲ್ಯದಲ್ಲಿಯೇ ಕ್ರಿಕೆಟ್ ಕುರಿತಂತೆ ತೀವ್ರ ಆಸಕ್ತಿ ಮೂಡಿತ್ತು. ಶಾಲೆ, ಕಾಲೇಜು ದಿನಗಳಿಂದಲೂ ಕ್ರಿಕೆಟ್ ಆಡುತ್ತಿದ್ದ ಶಾಂತಾ ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾದರು. ಆಗೆಲ್ಲಾ ಮಹಿಳಾ ಕ್ರಿಕೆಟಿಗರಿಗೆ ಈಗಿನಂತೆ ಸೂಕ್ತ ಅನುಕೂಲಗಳಿರಲಿಲ್ಲ ಎಂದು ನೆನಪಿಸಿಕೊಳ್ಳುವ ಶಾಂತಾ ಅವರು “ನಾನು ಕೆ.ಆರ್. ರಸ್ತೆಯಲ್ಲಿದ್ದ ನನ್ನ ಮನೆಯಿಂದ ಸೆಂಟ್ರಲ್ ಕಾಲೇಜು ಮೈದಾನಕ್ಕೆ ನಡೆದುಕೊಂಡು ಹೋಗಿ ಅಭ್ಯಾಸ ನಡೆಸುತ್ತಿದ್ದೆ. ಕಂಠೀರವ ಸ್ಟೇಡಿಯಂ, ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿಯೂ ನಾವು ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದೆವು.” ಎನ್ನುತ್ತಾರೆ.
ಇದಕ್ಕೂ ಮುನ್ನ ಶಾಂತಾ ಬಾಲ್ ಬಾಡ್ಮಿಂಟನ್ ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ತಮ್ಮ ಕಾಲೇಜು ದಿನಗಳಲ್ಲಿ ಸಾಫ್ಟ್ ಬಾಲ್ ಕ್ರೀಡಾ ತಂಡದ ನಾಯಕಿಯೂ ಆಗಿದ್ದರು ಎನ್ನುವುದು ಗಮನಾರ್ಹ. ಆ ನಂತರ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡುದಲ್ಲದೆ 1976 ರಲ್ಲಿ  ಪ್ರಥಮ ಮಹಿಳಾ ಕ್ರಿಕೆಟ್ ರಾಷ್ಟ್ರೀಯ ತಂಡದ ನಾಯಕಿಯಾಗಿಯೂ ಆಯ್ಕೆಯಾದರು.
ಮುಂದಿನದೆಲ್ಲವೂ ಇತಿಹಾಸ.  ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ವಿದೇಶೀ ನೆಲದಲ್ಲಿ ಶತಕ ಬಾರಿಸಿದ ಮೊದಲ ಮಹಿಳೆ, ಹಾಗೆಯೇ ಟೆಸ್ಟ್ ಪಂದ್ಯ ಗೆದ್ದ ಪ್ರಥಮ ನಾಯಕಿ ಸಹ ಇವರಾಗಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಮತ್ತು ಆಲ್ ರೌಂಡರ್  ಆಗಿದ್ದ ಶಾಂತಾ ಅವರು ಒಟ್ಟು 16 ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದು ಟೆಸ್ಟ್ ನಲ್ಲಿ 750 ಮತ್ತು ಏಕದಿನ ಪಂದ್ಯದಲ್ಲಿ 287 ರನ್ನುಗಳನ್ನು ಗಳಿಸಿದ್ದಾರೆ 8-1-1977 ರಲ್ಲಿ ನ್ಯೂ ಝಿಲ್ಯಾಂಡಿನ ಡ್ಯುನೆಡಿನ್ ನಲ್ಲಿ ನಡೆದ ನ್ಯೂ ಝಿಲ್ಯಾಂಡಿನ ವಿರುದ್ದ ಟೆಸ್ಟ್ ಪಂದ್ಯದಲ್ಲಿ 108 ರನ್ ಗಳಿಸಿ ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎನಿಸಿದ್ರು. 1976 ರಲ್ಲಿ ಪುಣೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದ ಪಂದ್ಯದಲ್ಲಿ ಮ್ಯಾಚ್  ಆಫ್ ದಿ ವುಮನ್ ಗೌರವಕ್ಕೆ ಪಾತ್ರರಾಗಿದ್ದರು.
ಏಕದಿನ ಮಹಿಳಾ ವಿಶ್ವಕಪ್ ಸರಣಿಯು ರಲ್ಲಿ ನ್ಯೂ ಝಿಲ್ಯಾಂಡಿನಲ್ಲಿ ನಡೆದಿದ್ದ ಸಮಯದಲ್ಲಿ ಶಾಂತಾ ತಮ್ಮ ಕ್ರೀಡಾ ಬದುಕಿನ ಅತ್ಯಂತ ಶ್ರೇಷ್ಠ ಬ್ಯಾಂಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇನ್ನೊಮ್ಮೆ ಆಕೆ ದಕ್ಷಿಣ ವಲಯ ಪರವಾಗಿ ಕ್ರಿಕೆಟ್ ಆಡುತ್ತಿದ್ದಾಗ ತಮ್ಮ ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿದ್ದರೂ ಆಟವಾಡಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದರು.
ಎಪ್ಪತ್ತರ ದಶಕದಲ್ಲಿ ಮಹಿಳೆಯರು ಕ್ರಿಕೆಟ್ ಆಡುವುದು ಎಂದರೆದು ಸಾಧಾರಣ ವಿಚಾರವಾಗಿರಲಿಲ್ಲ. ಜನರು ಅಚ್ಚರಿಯಿಂದ ಕಾಣುತ್ತಿದ್ದರು. ಅಲ್ಲದೆ 'ಇವರೆಂತಹಾ ಗಂಡುಬೀರಿಗಳು' ಎಂದು ಮೂಗು ಮುರಿಯುತ್ತಿದ್ದರು. ಇಂತಹಾ ಸನ್ನಿವೇಶದಲ್ಲಿ 'ಶಾಂತಾ ಇದ್ದರೇ ಗೆಲುವು' ಎನ್ನುವಂತೆ ಆಡಿದ್ದ ಶಾಂತಾ ರಂಗಸ್ವಾಮಿ ಕ್ರಿಕೆಟ್ ಗೆ ನೀಡಿದ ಕಾಣಿಕೆ ಅದು ಬೆಲೆ ಕಟ್ಟಲಾರದ್ದು. ತೊಂಭತ್ತರ ದಶಕದಲ್ಲಂತೂ ಕ್ರಿಕೆಟ್ ನಲ್ಲಿ ಹೆಸರುವಾಸಿಯಾಗಿದ್ದ ಈಕೆ ಮಹಿಳಾ ಕ್ರಿಕೆಟ್ ಎಂದಾಕ್ಷಣ ಶಾಂತಾ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ದಿಗೆ ಬಂದಿದ್ದರು. ‘1976 ನನ್ನ ಪಾಲಿನ ಸುವರ್ಣ ವರ್ಷ ಎನ್ನುವ ಶಾಂತಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಂಚುರಿ ಬಾರಿಸ್ದೆ. ಟಿಕೆಟ್‌ ಇತ್ತು. 35 ಸಾವಿರ ಜನ ಸೇರಿದ್ರು’ ಎಂದು ನೆನೆಸಿಕೊಳ್ಳುತ್ತಾರೆ.
ತಮ್ಮ ಕ್ರೀಡಾ ಜೀವನದ ನೆನಪುಗಳು ಮತ್ತು ಇಂದಿನ ಭಾರತೀಯ ಮಹಿಳಾ ಕ್ರಿಕೆಟಿನ ಕುರಿತಂತೆ ಮಾತನಾಡುವ ಶಾಂತಾ ರಂಗಸ್ವಾಮಿ ‘ನನಗಿಂದಿಗೂ ನೋವು ಉಂಟು ಮಾಡುವ ಸಂಗತಿ ಎಂದರೆ ಕರ್ನಾಟಕಕ್ಕೆ ನ್ಯಾಷನಲ್ ಚಾಂಪಿಯನ್ ಶಿಪ್ ಗೆಲ್ಲಿಸಿ ಕೊಡಲು ನನ್ನಿಂದ ಸಾಧ್ಯವಾಗಿಲ್ಲ. ವಾರಣಾಸಿಯಲ್ಲಿ ನಡೆದ ಪಂದ್ಯದಲ್ಲಿ ನಾನು ಎಪ್ಪತ್ತಾರು ರನ್ ಗೆ ಔಟಾದೆ. ಇನ್ನೂ ಇಪ್ಪತ್ತು ರನ್ ಬಂದಿದ್ದಲ್ಲಿ ನಾವೇ ಜಯ ಗಳಿಸುತ್ತಿದ್ದೆವು. ಈ ಸೋಲು ನನ್ನನ್ನು ಇಂದಿಗೂ ಕಾಡುತ್ತಿದೆ.
ಇಂದು ಮಹಿಳಾ ಕ್ರಿಕೆಟ್ ಬಹಳಷ್ಟು ಸುಧಾರಿಸಿದೆ. ಆದರೂ ಇಂದಿಗೂ ನಾಯಕಿಯನ್ನು ಅವಲಂಬಿಸುವ ಅನಿವಾರ್ಯತೆ ಇನ್ನೂ ಉಳಿದಿದೆ. ಪುರುಷರ ಕ್ರಿಕೆಟಿನಲ್ಲಿರುವಂತೆ ತಂಡದ ಸದಸ್ಯರು ತಮ್ಮ ಸ್ವಂತ ಪ್ರದರ್ಶನದಿಂದ ಗುರುತಿಸಿಕೊಳ್ಳುವಷ್ಟು ಇನ್ನೂ ಬೆಳೆದಿಲ್ಲ. ಅ<ದು ನನ್ನನ್ನೇ ಅವಲಂಬಿಸಿದ್ದು ಇವತ್ತೂ ಸಹ ಮಿಥಾಲಿಯನ್ನೇ ನೆಚ್ಚಿಕೊಂಡಿರುವುದನ್ನು ಕಾಣುತ್ತೇವೆ, ಈ ನಿಟ್ಟಿನಲ್ಲಿ ಮಹಿಳಾಕ್ರಿಕೆಟ್ ಇನ್ನಷ್ಟು ಸುಧಾರಣೆ ಹೊಂದಬೇಕಿದೆ.
 ಪುರುಷ ಕ್ರಿಕೆಟಿನಂತೆ ಮಹಿಳಾ ಕ್ರಿಕೆಟರ್ ಗಳಿಗೂ ಐಪಿ ಎಲ್ ನಂತಹಾ ಪಂದ್ಯವಾಡಲು ಅವಕಾಶ ಸಿಕ್ಕರೆ ಉತ್ತಮ. ಹತ್ತು ತಂಡಗಳಲ್ಲಿ ನೂರು ಜನ ಆಡಿದಾಗ ಅದರಲ್ಲಿ ಹನ್ನೊಂದು ಮಂದಿಯಾದರೂ ನಮ್ಮವರಿದ್ದರೆ ಒಳ್ಳೆಯದಲ್ಲವೆ? ಇನ್ನು ಆರ್ಥಿಕ ಸ್ವಾವಲಂಬನೆಗೂ ಇದು ಸಹಾಯವಾಗಬಲ್ಲದು ಎನ್ನುವುದು ಸಹ ನಿಜ ಸಂಗತಿ. ಎನ್ನುತ್ತಾರೆ.
ತಂಡದ ನಾಯಕಿಯಾಗಿ ಆಟವಾಡಿದ ಕುರಿತು ವಿವರಿಸುವ ಶಾಂತಾ ನಾನು ಆಡಿದ ಬಹುತೇಕ ಪಂದ್ಯಗಳಲ್ಲಿ ತಂದದ ನಾಯಕತ್ವ ನನ್ನ ಪಾಲಿಗೆ ಬಂದದ್ದೊಂದು ಒಳ್ಳೆಯ ಸಂಗತಿ. ಇಡಿ  ತಂಡವನ್ನು ಮುನ್ನಡೆಸುವ ಸಲುವಾಗಿ ಇದ್ದ ಒತ್ತಡವೇ ನನ್ನನ್ನು ಇನ್ನಷ್ಟು ಉತ್ತಮವಾಗಿ ಆಡುವಂತೆ ಪ್ರೇರಣೆ ಕೊಟ್ಟಿತು. ಹೀಗಾಗಿ ಒತ್ತಡ ನನಗೊಂದು ಸಮಸ್ಯೆಯಾಗಿ ಯಾವತ್ತೂ ಕಾಣಿಸಲಿಲ್ಲ.  ಎಂದು ಹೇಳುತ್ತಾರೆ.
ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಮಂದಳಿಯ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಾಂತಾ ಕ್ರಿಕೆಟ್ ಕ್ಷೇತ್ರಕ್ಕೆ  ಇನ್ನೂ ಏನಾದರೂ ಕೊಡುಗೆ ನೀಡಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಕ್ರಿಕೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂದು ಬಯಸುತ್ತಾರೆ.  ಇಂದಿನ ಯುವತಿಯರು ಆಟದ ಮೇಲೆ ನಿಜವಾದ ಆಸಕ್ತಿ ಇದ್ದರೆ ಶ್ರದ್ದೆಯಿಂದ, ನಿಯತ್ತಾಗಿ ಆಡಬೇಕು. ಫಲಿತಾಂಶ ಅದಾಗಿಯೇ ಬರುತ್ತದೆ. ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವ ಇಲ್ಲಿ ಮುಖ್ಯವಾಗುತ್ತದೆ. ಇವುಗಳಿದ್ದಲ್ಲಿ ಯಾರೂ ಯಾವ ಎತ್ತರಕ್ಕಾದರೂ ತಲುಪುವುದು ಅಸಾಧ್ಯವಲ್ಲ. ಹೀಗೆಂದು ಯುವ ಕ್ರೀಡಾಪಟುಗಳಿಗೆ ಸಂದೇಶ ತಿಳಿಸುವ ಶಾಂತಾ ರಂಗಸ್ವಾಮಿ ತಮ್ಮ ಆಟ ಮತ್ತು ಅದರಲ್ಲಿ ತಾವು ತೋರಿದ ಅದ್ಭುತ ಸಾಧನೆಗಳಿಂದ ಮಹಿಳಾ ಕ್ರಿಕೆಟಿಗರಿಗೆಲ್ಲಾ ಪ್ರೇರಣಾ ಶಕ್ತಿ ಎನಿಸಿದ್ದಾರೆ.




ಶಾಂತಾ ರಗಸ್ವಾಮಿ ಸಂಕ್ಷಿಪ್ತ ವಿಚಾರಗಳು
ಜನನ: ಜನವರಿ 1, 1954
ಸ್ಥಳ: ಚೆನ್ನೈ
ತಂದೆ–ತಾಯಿ:ಸಿ.ವಿ. ರಂಗಸ್ವಾಮಿ, ರಾಜಲಕ್ಷ್ಮಿ
ಒಡಹುಟ್ಟಿದವರು: ಏಳು ಸಹೋದರಿಯರು
ಶಿಕ್ಷಣ: ಮಹಿಳಾ ಸೇವಾ ಸಮಾಜ, ನ್ಯಾಷನಲ್‌ ಹೈಸ್ಕೂಲ್‌, ಕಾಲೇಜಿನಲ್ಲಿ ಪದವಿ ವ್ಯಾಸಂಗ
ವೃತ್ತಿ: ಕೆನರಾ ಬ್ಯಾಂಕ್‌, ಪ್ರಧಾನ ವ್ಯವಸ್ಥಾಪಕಿಯಾಗಿ ನಿವೃತ್ತಿ
***
ಮಹಿಳಾ ಕ್ರಿಕೆಟರ್ ಆಗಿ ಶಾಂತಾ ಅವರ ಸಾಧನೆ
ಬಲಗೈ ಬ್ಯಾಟ್ಸ್‌ಮನ್‌, ಆಲ್‌ರೌಂಡರ್‌
1976ರಿಂದ 1991: ರಣಜಿ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್‌ ಪಂದ್ಯಗಳಲ್ಲಿ ಸಕ್ರಿಯ
1976–1983: ರಾಷ್ಟ್ರೀಯ ತಂಡದ ನಾಯಕಿ
1976: ಅರ್ಜುನ ಪ್ರಶಸ್ತಿ
16 ಟೆಸ್ಟ್‌ ಪಂದ್ಯಗಳಲ್ಲಿ 750 ರನ್‌ ಬ್ಯಾಟಿಂಗ್‌ ರೇಟಿಂಗ್‌: 32.6
ಬೌಲಿಂಗ್‌ ರೇಟಿಂಗ್‌: 31.61
ಮಹಿಳಾ ಕ್ರಿಕೆಟರ್‌ಗಳಲ್ಲಿ ಶತಕ ಬಾರಿಸಿದವರಲ್ಲಿ ಮೊದಲ ಭಾರತೀಯರು
19 ಏಕದಿನ ಪಂದ್ಯಗಳಲ್ಲಿ 287 ರನ್‌, 12 ವಿಕೆಟ್‌
1982: ಮಹಿಳಾ ಕ್ರಿಕೆಟ್‌ ವರ್ಲ್ಡ್‌ ಕಪ್‌ನಲ್ಲಿ  (ನ್ಯೂಜಿಲೆಂಡ್‌) ಜೀವಮಾನದ ಸಾಧನೆ
ಪುರುಷರ ಪಂದ್ಯಕ್ಕೆ ಕಾಮೆಂಟರಿ, ರಾಷ್ಟ್ರೀಯ ಮಹಿಳಾ ಆಯ್ಕೆ ಸಮಿತಿ ಅಧ್ಯಕ್ಷೆಯಾಗಿ 2013ರಲ್ಲಿ ನಿವೃತ್ತಿ,  ಕ್ರಿಕೆಟ್‌ ಬರಹಗಾರರು.
2017: ಬಿಸಿಸಿಐ ನಿಂದ ಜೀವಮಾನ ಸಾಧನೆ ಪುರಸ್ಕಾರ
  

ಭಾರತ ಮಹಿಳಾ ಕ್ರಿಕೆಟ್ ತಂದದ ನಾಯಕಿಯಾಗಿದ್ದ ಹಿರಿಯ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರೊಡನೆ ನಡೆಸಿದ ಸಂದರ್ಶನ ಲೇಖನ.  ಈ ನನ್ನ ಲೇಖನವು ಗೃಹಶೋಭಾ ಮಾಸಪತ್ರಿಕೆ ಆಗಸ್ಟ್ 2017ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.