Monday, March 25, 2019

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -100

ರಾಮೇಶ್ವರಂ(
Rameswaram
)
ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ.

ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ ಕಡಲ ತೀರದಲ್ಲಿ ವಿಹರಿಸಬಹುದಾಗಿದೆ.  ರಾಮೇಶ್ವರಂನ ಶ್ರೀರಾಮನಾಥ ದೇವಾಲಯ 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು,  ಈ  ಅವಧಿಯಲ್ಲಿ ಆಡಳಿತದಲ್ಲಿದ್ದ ರಾಜರು ದೇವಾಲಯ ನಿರ್ಮಣಕ್ಕೆ ಒತ್ತು ನೀಡಿದ್ದರು.  ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯದ ಪ್ರಾಂಗಣ ವಿಶಾಲವಾಗಿದೆ.  ಪ್ರವೇಶ ದ್ವಾರದ ಅಗಲ 6 ಮೀಟರ್,  ಎತ್ತರ 9 ಮೀಟರ್ ಇದೆ.

ಸುಮಾರು 6 ಹೆಕ್ಟೇರ್ ಪ್ರದೇಶದಲ್ಲಿ ದೇವಾಲಯ ನಿರ್ಮಾಣವಾಗಿದೆ. ದೇವಾಲಯದ ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 197 ಮೀಟರ್,  ಉತ್ತರದಿಂದ ದಕ್ಷಿಣಕ್ಕೆ 133 ಮೀಟರ್ ಉದ್ದವಿದೆ. ದೇವಾಲಯದ ಕಂಬಗಳ ಕಲಾತ್ಮಕ ಕೆತ್ತನೆ ನೋಡುಗರನ್ನು ಸೆಳೆಯುತ್ತದೆ. ರಾಮನಾಥ ಸ್ವಾಮಿ ದೇವಾಲಯದ ಸಮೀಪದಲ್ಲಿ ಅಗ್ನಿತೀರ್ಥವಿದೆ. ರಾಮೇಶ್ವರಂನಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿ ಧನುಷ್ಕೋಟಿ ಇದ್ದು,  ಇಲ್ಲಿ  ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ವಿಗ್ರಹಗಳನ್ನು ನೋಡಬಹುದಾಗಿದೆ. ಮೇಶ್ವರದ ಸುತ್ತಮುತ್ತಲದಲ್ಲಿ ಅನೇಕ ವಿಶಿಷ್ಟವಾದ ದೇವಾಲಯಗಳಿವೆ. ಅವುಗಳಲ್ಲಿ ಕೋದಂಡರಾಮ ಸ್ವಾಮಿ ದೇವಾಲಯ, ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಇನ್ನೂ ಹಲವಾರು. ರಾಮೇಶ್ವರಂ ಕೇವಲ ಧಾರ್ಮಿಕ ಸ್ಥಳವೇ ಅಲ್ಲದೆ, ಪ್ರಮುಖ ಪ್ರವಾಸಿ ತಾಣವೂ ಹೌದು. ರಾಮೇಶ್ವರದಲ್ಲಿ ದೇವಾಲಯಗಳೇ ಅಲ್ಲದೆ ಅನೇಕ ರೋಮಾಂಚನಕಾರಿಯಾದ ಸ್ಥಳಗಳು ಕೂಡ ಇವೆ.

***
ದಶಗ್ರಂಥಿ ಬ್ರಾಹ್ಮಣನಾಗಿದ್ದ ರಾವಣನ ವಧೆಯ ಬಳಿಕ ಅಗಸ್ತೀ ಋಷಿಗಳು ಪ್ರಭು ಶ್ರೀರಾಮನಿಗೆ ಬ್ರಹ್ಮಹತ್ಯೆಯ ಪಾಪದಿಂದ ಮುಕ್ತನಾಗಲು ಸಾಗರತೀರದಲ್ಲಿ ಜ್ಯೇಷ್ಠ ಶುದ್ಧ ದಶಮಿಯ ಮುಹೂರ್ತದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿದರು. ಈ ಕಾರಣದಿಂದ ಶಿವನ ದಿವ್ಯಲಿಂಗವನ್ನು ತರಲು ಮಾರುತಿಯು ಕೈಲಾಸಕ್ಕೆ ಹೋದನು. ಆದರೆ ಶಿವನ ದರ್ಶನವಾಗದ ಕಾರಣ ಮಾರುತಿಯು ತಪಸ್ಸನ್ನು ಪ್ರಾರಂಭಿಸಿದನು. ಕಾಲಾಂತರದಲ್ಲಿ ಶಿವನು ಪ್ರಕಟಗೊಂಡು ಮಾರುತಿಗೆ ತನ್ನ ದಿವ್ಯಲಿಂಗವನ್ನು ನೀಡಿದನು. ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಮಾರುತಿಗೆ ಮುಹೂರ್ತದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಸೀತೆಯು ಮರಳಿನಿಂದ ಒಂದು ಲಿಂಗವನ್ನು ತಯಾರಿಸಿ ಕೊಟ್ಟಳು. ಋಷಿಗಳ ಆದೇಶ ಪಡೆದು ನಂತರ ರಾಮನು ಅದರ ಸ್ಥಾಪನೆಯನ್ನೇ ಮಾಡಿದನು. ಇದೇ ಆ ರಾಮೇಶ್ವರದ ಲಿಂಗವಾಗಿದೆ. ಸ್ಥಳೀಯ ಜನರು ಅದನ್ನು ರಾಮನಾಥಸ್ವಾಮಿ ಎಂದು ಕರೆಯುತ್ತಾರೆ.

ಮಾರುತಿಯು ಮರಳಿ ಬಂದಾಗ ಅವನಿಗೆ ಶ್ರೀರಾಮನು ಲಿಂಗವನ್ನು ಸ್ಥಾಪಿಸಿರುವುದನ್ನು ಕಂಡು ಬಹಳ ದುಃಖವಾಯಿತು. ಆಗ ರಾಮನು ಮಾರುತಿಗೆ ತಾನು ಸ್ಥಾಪಿಸಿದ ಲಿಂಗದ ಹತ್ತಿರವೇ ಅವನು ತಂದ ಲಿಂಗವನ್ನು ಸ್ಥಾಪಿಸಲು ಹೇಳಿದನು. ಅಲ್ಲದೇ, ಮಾರುತಿ ಸ್ಥಾಪಿಸಿದ ಲಿಂಗದ ದರ್ಶನ ಪಡೆಯದೇ ಇದ್ದರೆ ಭಕ್ತರಿಗೆ ರಾಮೇಶ್ವರ ದರ್ಶನದ ಫಲ ದೊರೆಯಲಾರದು ಎಂದೂ ಹೇಳಿದನು. ಈ ಲಿಂಗಕ್ಕೆ ಕಾಶಿವಿಶ್ವನಾಥ ಅಥವಾ ಹನುಮದೀಶ್ವರ ಎಂದು ಕರೆಯುತ್ತಾರೆ.

Friday, March 22, 2019

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -99


ಮದುರೈ(Madurai)


ಭಾರತ ಪರ್ಯಾಯ ದ್ವೀಪದ ಅತ್ಯಂತ ಹಳೆಯ ನಗರ ಇದು ದಕ್ಷಿಣ ಭಾರತದ ತಮಿಳು ನಾಡು ರಾಜ್ಯದಲ್ಲಿರುವ ನಗರ ಮತ್ತು 2ನೆಯ ಅತ್ಯಂತ ದೊಡ್ಡ ನಗರ ಇದು ವೈಗಾಯ್ ನದಿಯ ತೀರದಲ್ಲಿ ಸ್ಥಿತವಾಗಿದೆ. ಮದುರೈ ನಗರವನ್ನು ಅನೇಕ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳು ದೇಗುಲ ನಗರಿ, ಕೂಡಲ್ ಮಾನಗರ್(ತಮಿಳು ನಾಡಿನ ಸಾಂಸ್ಕೃತಿಕ ನಗರಿ), ಮಲ್ಲಿಗೈ ಮಾನಗರ್ (ಮಲ್ಲಿಗೆ ನಗರ), ಥೂಂಗ ನಗರಂ (ನಿದ್ದೆಯಿಲ್ಲದಿರುವ ನಗರ) ಮತ್ತು ಪೂರ್ವದ ಅಥೆನ್ಸ್. ಇದು ಮದುರೈ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ 2001ರ ಜನಗಣತಿಯ ಪ್ರಕಾರ 1,203,095ರಷ್ಟು ಜನಸಂಖ್ಯೆ ಇದೆ. ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದುದಲ್ಲದೇ ಕ್ರಿಸ್ತ ಪೂರ್ವ 550 ಗಳಷ್ಟು ಪ್ರಾಚೀನ ಕಾಲದಿಂದ ರೋಮ್‌ ಮತ್ತು ಗ್ರೀಸ್‌ ರಾಷ್ಟ್ರಗಳ ಜೊತೆಗೆ ಸಂಪರ್ಕವಿರಿಸಿಕೊಂಡಿತ್ತು.

ಪಾಂಡ್ಯರ ರಾಜಧಾನಿಯಾಗಿದ್ದ ಮದುರೈ  ಸಂಗಮ್‌ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌‌ನ ತಿರುವಿಲಾಯದಲ್‌ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ 3ನೇ ಶತಮಾನ BCಯಷ್ಟು ಪ್ರಾಚೀನ ಕಾಲದಲ್ಲಿ ಮೆಗಾಸ್ತನೀಸ್‌ ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್‌ ಮತ್ತು ಗ್ರೀಸ್‌ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರುಪಾಂಡ್ಯರ ರಾಜಧಾನಿಯಾಗಿದ್ದ ಮದುರೈ  ಸಂಗಮ್‌ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌‌ನ ತಿರುವಿಲಾಯದಲ್‌ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ 3ನೇ ಶತಮಾನ BCಯಷ್ಟು ಪ್ರಾಚೀನ ಕಾಲದಲ್ಲಿ ಮೆಗಾಸ್ತನೀಸ್‌ ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್‌ ಮತ್ತು ಗ್ರೀಸ್‌ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರು

ಇಂತಹಾ ನಗರದಲ್ಲಿ  ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನ ಅಥವಾ ಮೀನಾಕ್ಷಿ ಅಮ್ಮನ್ ದೇವಸ್ಥಾನವು  ಒಂದು ಐತಿಹಾಸಿಕ ಹಿಂದು ದೇವಾಲಯವಾಗಿದೆ. ಇದು ಶಿವ ದೇವರಿಗೆ (ಸುಂದರೇಶ್ವರರ್‌ ಅಥವಾ ಸುಂದರ ದೇವರ ರೂಪದಲ್ಲಿ) ಮತ್ತು ಅವನ ಪತ್ನಿ ಪಾರ್ವತಿಗೆ (ಮೀನಾಕ್ಷಿ ರೂಪದಲ್ಲಿ) ಸಮರ್ಪಿತವಾಗಿದೆ. ಈ ದೇವಸ್ಥಾನವು ೨೫೦೦ ವರ್ಷ ಪುರಾತನ ನಗರ ಮಧುರೈನ ಹೃದಯಭಾಗ ಮತ್ತು ಜೀವಾಧಾರವಾಗಿದೆ. 

ಸೂಕ್ಷ್ಮಪರಿಶೀಲನೆಯಿಂದ ಕೆತ್ತಿದ ಮತ್ತು ಬಣ್ಣಬಳಿದ ಪ್ರಮುಖ ದೇವರುಗಳಿರುವ ಎರಡು ಬಂಗಾರದ ಗೋಪುರಗಳನ್ನೂ ಒಳಗೊಂಡಂತೆ ಈ ಸಂಕೀರ್ಣವು ೧೪ ಭವ್ಯವಾದ ಗೋಪುರಗಳನ್ನು ಹೊಂದಿದೆ. ಈ ದೇವಸ್ಥಾನವು ತಮಿಳರ ಮಹತ್ವಪೂರ್ಣ ಸಂಕೇತವಾಗಿದೆ, ಹಾಗೂ ಪ್ರಾಚೀನ ಕಾಲದಿಂದ ತಮಿಳು ಸಾಹಿತ್ಯದಲ್ಲಿ ಸೂಚಿಸಲ್ಪಟ್ಟಿದೆ. ಆದರೆ ಪ್ರಸ್ತುತವಿರುವ ರಚನೆಯನ್ನು ೧೬೦೦ರಲ್ಲಿ ನಿರ್ಮಿಸಿರುವುದೆಂದು ನಂಬಲಾಗಿದೆ. ದೇವಸ್ಥಾನದ ಗೋಪುರವು 51.9 ಮೀಟರ್ )ನಷ್ಟು ಎತ್ತರವಿದೆ.



ಜಗತ್ತಿನ ಅತಿ ಪ್ರಾಚೀನ ಪಟ್ಟಣಗಳ ಪೈಕಿ ಮದುರೈ ಸಹ ಒಂದು. 2,500 ವರ್ಷಗಳಷ್ಟು ಇತಿಹಾಸವಿರುವ, ಎಂದಿಗೂ ನಿದ್ರಿಸಲಾರದ ಎಂಬ ಬಿರುದು ಪಡೆದ್ರುವ ಈ ನಗರದ ಮುಖ್ಯ ಹೆಗ್ಗುರುತಾಗಿದೆ ಮೀನಾಕ್ಷಿ ಅಮ್ಮನವರ ದೇವಾಲಯ. ಅಲ್ಲದೆ ತಮಿಳಿನ ಅತಿ ಪುರಾತನ ಸಾಹಿತ್ಯದಲ್ಲಿ ಈ ದೇವಾಲಯದ ಕುರಿತು ಉಲ್ಲೇಖವಿದೆ. ಹೀಗಾಗಿ ತಮಿಳಿಗರಿಗೆ ಸಾಕಷ್ಟು ಮಹತ್ವವಾಗಿದೆ

***

ಮೀನು ಹಾಗೂ ಅಕ್ಷಿಗಳ ಸಮಾಗಮದಿಂದ ವ್ಯುತ್ಪತ್ತಿಯಾದ ಮೀನಾಕ್ಷಿ ಪದವು ಮೀನಿನಂತೆ ಕಣ್ಣುಗಳುಳ್ಳ ಎಂಬ ವಿವರಣೆಯನ್ನು ನೀಡುತ್ತದೆ. ಅಂದರೆ ಮೀನಾಕ್ಷಿ ದೇವಿಯು ಮೀನಿನಂತೆ ಕಣ್ಣುಗಲಿಂದ ಕಂಗೊಳಿಸುವ ಸುಂದರ ಸ್ತ್ರೀಯಾಗಿ ಕಂಡುಬರುತ್ತಾಳೆ. ಅಲ್ಲದೆ ಇಲ್ಲಿ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವಂತೆ ಶಿವನು ಮುಖ್ಯ ದೇವನಾಗಿರದೆ ಮೀನಾಕ್ಷಿ ದೇವಿಯೆ ಪ್ರಧಾನ ದೇವತೆಯಾಗಿರುವುದು ವಿಶೇಷ.

ಹಿಂದೆ ಮಲಯಧ್ವಜ ಪಾಂಡ್ಯ ರಾಜನ ಪತ್ನಿಯಾದ ಕಂಚನಮಲೈಳಿಗೆ ಹಿಂದಿನ ಜನ್ಮದಲ್ಲಿ ಕನಸೊಂದರಲ್ಲಿ ಸ್ವತಃ ಪಾರ್ವತಿಯೆ ಪ್ರತ್ಯಕ್ಷಳಾಗಿ ಅವಳು ಮುಂದಿನ ಜನ್ಮದಲ್ಲಿ ದೇವಿಯೊಬ್ಬಳ ತಾಯಿಯಾಗುತ್ತಾಳೆಂದು ಹೇಳಿದ್ದಳಂತೆ.

ಅದರಂತೆ ಮುಂದೆ ಕಾಂಚನಮಲೈ ಮಲಯಧ್ವಜನ ಮಡದಿಯಾಗಿ ಸಂತಾನ ಬಯಸುತ್ತಿರುವಾಗ ರಾಜನು ಪುತ್ರ ಕಾಮೇಷ್ಠಿ ಯಜ್ಞವನ್ನು ನಡೆಸುತ್ತಾನೆ. ಆ ಯಜ್ಞ ನಡೆಸುತ್ತಿರುವಾಗ ಅಗ್ನಿಯಿಂದ ಪಾರ್ವತಿ ದೇವಿಯು ಹುಡುಗಿಯ ರೂಪದಲ್ಲಿ ಹೊರಬರುತ್ತಾಳೆ. ವಿಚಿತ್ರವೆಂದರೆ ಆ ಹುಡುಗಿಗೆ ಎರಡರ ಬದಲು ಮೂರು ಸ್ತನಗಳಿರುತ್ತವೆ.
ಇದನ್ನು ಕಂಡು ರಾಜ ಅಚ್ಚರಿ ಪಡುವಾಗ, ಅಶರೀರವಾಣಿಯೊಂದು ಆಗಸದಿಂದ "ಎಲೈ ರಾಜನೆ ಹುಡುಗಿಯ ಈ ರೀತಿಯ ಅಸ್ವಾಭಾವಿಕ ದೇಹರಚನೆಗೆ ಚಿಂತಿಸಬೇಕಾಗಿಲ್ಲ, ಅವಳು ತನ್ನ ಬಾಳಿನ ಪತಿಯನ್ನು ಕಂಡೊಡನೆಯೆ ಮೂರನೇಯ ಸ್ತನ ತನ್ನಿಂದ ತಾನೆ ಅಳಿಸಿ ಹೋಗುತ್ತದೆ". ಹೀಗಾಗಿ ರಾಜ ಯಾವ ಚಿಂತೆ ಮಾಡದೆ ಪುತ್ರಿಗೆ ತಡಾತಗೈ ಎಂಬ ನಾಮಕರಣ ಮಾಡಿ ಅತಿ ಪ್ರೀತಿಯಿಂದ ಬೆಳೆಸುತ್ತಾನೆ.

ಮೊದಲೆ ಹುಡುಗಿಯು ಪಾರ್ವತಿಯ ಮರು ಅವತಾರ. ಹೀಗಾಗಿ ಸಕಲ ಶಸ್ತ್ರಾದಿಗಳನ್ನು, ಯುದ್ಧ ವಿದ್ಯೆಗಳನ್ನು ಅತಿ ಸರಾಗವಾಗಿ ಹಾಗೂ ಅಷ್ಟೆ ಪರಿಣಾಮಕಾರಿಯಾಗಿ ಕಲೆಯುತ್ತಾಳೆ. ಹೀಗೆ ಬೆಳೆದ ತಡಾತಗೈ ನಾಲ್ಕು ಲೋಕಗಳಾದ ಬ್ರಹ್ಮಲೋಕ, ವೈಕುಂಠ, ಅಮರಾವತಿ ಹಾಗೂ ಕೈಲಾಸಗಳನ್ನು ವಶಪಡಿಸಿಕೊಳ್ಳುಲು ಮುನ್ನುಗುತ್ತಾಳೆ.

 ತಡಾತಗೈ ಪಾರ್ವತಿಯ ಅವತಾರವೆ ಆಗಿರುವುದರಿಂದ ಎಲ್ಲ ಮೂರು ಲೋಕಗಳನ್ನು ಅತಿ ಸುಲಭವಾಗಿ ಗೆದ್ದು ಕೊನೆಯದಾಗಿ ಕೈಲಾಸಕ್ಕೆ ತೆರಳುತ್ತಾಳೆ. ಅಲ್ಲಿಯೂ ಸಹ ಭೂತ ಗಣರನ್ನು, ನಂದಿಯನ್ನು ಬಲು ಸುಲಭವಾಗಿ ಸೋಲಿಸುತ್ತಾಳೆ. ಕೊನೆಯದಾಗಿ ಶಿವನನ್ನು ಗೆಲ್ಲಲು ಅವನ ಹತ್ತಿರ ತೆರಳಿದಾಗ ಅವಳಿಗೆ ಏನೂ ಮಾಡಲಾಗದೆ ಶಿವನಲ್ಲಿ ಪ್ರೀತಿಯುಂಟಾಗಿ ನಾಚಿಕೊಂಡು ಬಿಡುತ್ತಾಳೆ. ತತ್ ಕ್ಷಣವೆ ಅವಳ ಮೂರನೇಯ ಸ್ತನವು ಮಾಯವಾಗಿ ಹೋಗುತ್ತದೆ. ಇದರಿಂದ ಶಿವನೆ ತನ್ನ ಪತಿಯೆಂಬ ಸತ್ಯ ತಿಳಿದು ಶಿವನೊಡನೆ ಮದುವೆಯಾಗಲು ಮದುರೈಗೆ ಆಗಮಿಸುತ್ತಾಳೆ ತಡಾತಗೈ. ಕೊನೆಯಲ್ಲಿ ಇವರಿಬ್ಬರ ಮದುವೆಯು ಸಕಲ ದೇವರುಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ವಿಷ್ಣು ಮೀನಾಕ್ಷಿಯ ತಮ್ಮನಾಗಿ ಈ ಮದುವೆಯನ್ನು ನಡೆಸಿಕೊಡುತ್ತಾನೆ. ನಂತರ ಶಿವನು ಸುಂದರೇಶ್ವರನಾಗಿಯೂ, ತಡಾತಗೈ ಮೀನಾಕ್ಷಿಯಾಗಿಯೂ ಮದುರೈನಲ್ಲಿ ನೆಲೆಸುತ್ತಾರೆ.
 ಇಂದಿಗೂ ಪ್ರತಿ ದಿನ ರಾತ್ರಿ ದೇವಾಲಯ ಮುಚ್ಚುವ ಮೊದಲು ಸುಂದರೇಶ್ವರನ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಿಯ ಕೊಣೆಗೆ ಕೊಂಡೊಯ್ಯಲಾಗುತ್ತದೆ. ಇದು ಅವರಿಬ್ಬರ ಮಿಲನದ ಸಂಕೇತವಾಗಿದೆ. ನಂತ್ರ ಮರು ದಿನ ನಸುಕಿನ ಜಾವದಲ್ಲಿ ಸುಂದರೇಶ್ವರನನ್ನು ದೇವಿಯ ಕೋಣೆಯಿಂದ ಮತ್ತೆ ಮರಳಿ ತರಲಾಗುತ್ತದೆ.

ವರ್ಷದಲ್ಲಿ ಇವರಿಬ್ಬರ ಕಲ್ಯಾಣ ಮಹೋತ್ಸವವನ್ನು ಬಲು ಸಡಗರದಿಂದ ಆಚರಿಸಲಾಗುತ್ತದೆ. ಈ ಉತ್ಸವ ಸಾಮಾನ್ಯವಾಗಿ ಎಪ್ರಿಲ್-ಮೇ ಸಂದರ್ಭದಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ.

***

1812 ರಿಂದ 1828 ರಲ್ಲಿ ಪ್ರಸ್ತುತ ತಮಿಳುನಾಡಿನ ಮದುರೈಗೆ ಕಲೆಕ್ಟರ್ ಆಗಿ ರೋಸ್ ಪೀಟರ್ ಎಂಬ ಬ್ರಿಟೀಷ್ ಕಲೆಕ್ಟರ್ ನೇಮಕಗೊಂಡಿದ್ದರು. ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರೂ ಸಹ ಹಿಂದೂ ಧರ್ಮಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಿದ್ದರು ಮತ್ತು ಸ್ಥಳೀಯ ಪದ್ಧತಿಗಳಿಗೆ ಹೆಚ್ಚು ಗೌರವ ಸೂಚಿಸುತ್ತಿದ್ದರು.

ರೋಸ್ ಪೀಟರ್ ಅವರು ಎಲ್ಲಾ ಧರ್ಮದವರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು ಎಂದು ಹೇಳುತ್ತಾರೆ. ಅವರ ಈ ನಡವಳಿಕೆಯಿಂದಾಗಿ ಅವರ ಹೆಸರು ಹೆಚ್ಚು ಪ್ರಚಲಿತವಾಯಿತು.

ತಮಿಳುನಾಡಿನ ಪ್ರಸಿದ್ಧ ಮೀನಾಕ್ಷಿ ಅಮ್ಮನ ದೇವಸ್ಥಾನವು ಪೀಟರ್ ಅವರ ಮನೆ ಹಾಗೂ ಕಚೇರಿಯ ನಡುವೆ ಇತ್ತು. ಈ ಕಾರಣದಿಂದಾಗಿ ಅವರು ದಿನವೂ ತಮ್ಮ ಕಚೇರಿಗೆ ಹೋಗುವಾಗ ಮೀನಾಕ್ಷಿ ಅಮ್ಮನ ದೇವಸ್ಥಾನದ ಮೂಲಕ ಹಾದು ಹೋಗಬೇಕಾಗಿತ್ತು, ಅವರು ದಿನವೂ ಕುದುರೆಯ ಮೇಲೆ ಹೋಗುತ್ತಿದ್ದರು, ಮೀನಾಕ್ಷಿ ಅಮ್ಮನ ದೇವಸ್ಥಾನ ಬಂದಾಗ, ಅವರು ಕುದುರೆಯಿಂದ ಕೆಳಗಿಳಿದು, ತಮ್ಮ ಹ್ಯಾಟ್ ಮತ್ತು ಶೂಗಳನ್ನು ತೆಗೆದು ತಮ್ಮ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿದ್ದರು. ಈ ಮೂಲಕ ಅವರು ಮೀನಾಕ್ಷಿ ಅಮ್ಮನಿಗೆ ತಮ್ಮ ಗೌರವವನ್ನು ಸೂಚಿಸುತ್ತಿದ್ದರು.

ಒಂದು ದಿನ ಮದುರೈ ನಗರದಲ್ಲಿ ಹೆಚ್ಚು ಮಳೆ ಪ್ರಾರಂಭವಾಯಿತು. ಕಲೆಕ್ಟರ್ ಅವರು ತಮ್ಮ ಮನೆಯಲ್ಲಿ ಮಲಗಿದ್ದರು, ಆಕಸ್ಮಿಕವಾಗಿ ಅವರಿಗೆ ಕಾಲಂದಿಗೆಯ ಶಬ್ದದಿಂದ ಎಚ್ಚವಾಯಿತು, ಅವರು ತಮ್ಮ ಹಾಸಿಗೆಯಿಂದ ಎದ್ದು ಶಬ್ದ ಎಲ್ಲಿನಿಂದ ಬರುತ್ತಿದೆ ಎಂದು ನೋಡಿದರು. ಅವರ ಕಣ್ಣಿಗೆ ಒಬ್ಬ ಆಭರಣಗಳನ್ನು ಧರಿಸಿರುವ ಹುಡುಗಿ ಕಾಣಿಸಿತು ಮತ್ತು ಇವರನ್ನು 'ಪೀಟರ್ ಹೊರಗೆ ಬಾ' ಎಂದು ಕರೆಯುತ್ತಿರುವುದು ಕೇಳಿಸಿತು. ಅದನ್ನು ಕೇಳಿಸಿಕೊಂಡು ಅವರು ಮನೆಯಿಂದ ತಕ್ಷಣವೇ ಹೊರಬಂದು ಆ ಓಡುತ್ತಿದ್ದ ಹುಡುಗಿಯನ್ನು ಮಳೆಯಲ್ಲಿಯೇ ಹಿಂಬಾಲಿಸಿದರು. ನಂತರ ತಕ್ಷಣವೇ ಅವರ ಮನೆಯು ಕೆಲವೇ ಕ್ಷಣಗಳಲ್ಲಿ ಕುಸಿದು ಬಿತ್ತು. ನಂತರ ಅವರು ಹಿಂತಿರುಗಿ ನೋಡಿದರೆ ಆ ಹುಡುಗಿ ಓಡುತ್ತಿರುವಂತೆ ಮಾಯವಾದಳು. ಆ ವೇಳೆಯಲ್ಲಿ ಪೀಟರ್ ಅವರು ಆ ಹುಡುಗಿ ಕಾಲಿನಲ್ಲಿ ಅಂದಿಗೆಯೊಂದಿಗೆ ಬರಿಗಾಲಿನಲ್ಲಿ ಯಾವುದೇ ಪಾದುಕೆಗಳಿಲ್ಲದೆಯೇ ಓಡುತ್ತಿರುವುದನ್ನು ಗಮನಿಸಿದರು. ಅವರು ಸಾಕ್ಷಾತ್ ಮೀನಾಕ್ಷಿ ಅಮ್ಮನೇ ತಮ್ಮ ಪ್ರಾಣವನ್ನು ಉಳಿಸಿದಳು ಎಂದು ಅರಿತುಕೊಂಡರು ಮತ್ತು ನಂಬಿದರು.

ಕೆಲವು ದಿನಗಳ ನಂತರ ಮೀನಾಕ್ಷಿ ಅಮ್ಮನಿಗೆ ದೇವಸ್ಥಾನದಲ್ಲಿ ಇಲ್ಲದ ಯಾವುದಾದರೂ ಕಾಣಿಕೆಯನ್ನು ನೀಡಬೇಕೆಂದು ಬಯಸಿದರು. ಇದರ ಕುರಿತು ತಿಳಿದುಕೊಳ್ಳಲು ಅವರು ದೇವಸ್ಥಾನದ ಅರ್ಚಕರ ಬಳಿ ಚರ್ಚಿಸಿ ಒಂದು ಜೊತೆ ಬಂಗಾರದ ಪಾದುಕೆಗಳನ್ನು ಮಾಡಿಸಿಕೊಡುವುದಾಗಿ ಒಪ್ಪಿಕೊಂಡರು. ಇವರು ಮಾಡಿಸಿಕೊಟ್ಟಂತಹ ಪಾದುಕೆಗಳು 412 ಮಾಣಿಕ್ಯ ಕಲ್ಲುಗಳು ಮತ್ತು 80 ವಜ್ರಗಳನ್ನು ಹೊಂದಿದೆ ಮತ್ತು ಅವರ ಹೆಸರು 'ಪೀಟರ್' ಎಂದು ಪಾದುಕೆಗಳ ಕೆಳಭಾಗದಲ್ಲಿ ಕೆತ್ತಲಾಗಿದೆ. ಈಗಲೂ ಸಹ ಆ ಪಾದುಕೆಗಳನ್ನು 'ಪೀಟರ್ ಪಾದುಕಂ' ಎಂದು ಕರೆಯಲಾಗುತ್ತದೆ.

ಆ ಪಾದುಕೆಗಳನ್ನು ಈಗಲೂ ಸಹ ದೇವಸ್ಥಾನದಲ್ಲಿ ಕಾಪಾಡಲಾಗಿದೆ ಮತ್ತು ಪ್ರತಿ ವರ್ಷ 'ಚಿತ್ರಾ ಉತ್ಸವ' ಸಮಯದಲ್ಲಿ, ಈ ಪಾದುಕೆಗಳನ್ನು ಉತ್ಸವ ಮೂರ್ತಿ ಮೀನಾಕ್ಷಿ ಈ ಪಾದುಕೆಗಳನ್ನು ತೊಡುತ್ತಾಳೆ.





Friday, February 22, 2019

ಧರ್ಮಸ್ಥಳಕ್ಕೆ ಬಾಹುಬಲಿ ಬಂದಿದ್ದು ಹೇಗೆ ಗೊತ್ತಾ?

ಸರ್ವ ಧರ್ಮಗಳ ಜನರನ್ನು ಏಕ ರೀತಿಯಲ್ಲಿ ಕಾಣುವ ಶಾಂತಿಧಾಮ ಕರುನಾಡಿನ ಧರ್ಮಸ್ಥಳ ಕ್ಷೇತ್ರ. ಅಲ್ಲಿನ ಮಂಜುನಾಥ ಸ್ವಾಮಿ ಸತ್ಯ, ನ್ಯಾಯಕ್ಕೆ ಹೆಸರಾಗಿದ್ದಾನೆ. ಇದೇರೀತಿ ಅಲ್ಲಿನ ಹೆಗ್ಗಡೆ ಕುಟುಂಬ ಸಹ "ಮಾತು ಬಿಡ ಮಂಜುನಾಥ" ಎಂದೇ ಖ್ಯಾತಿ ಗಳಿಸಿದ ವೀರೇಂದ್ರ ಹೆಗ್ಗಡೆ ಹಾಗೂ ಅವರ ಹಿಂದಿನ ತಲೆಮಾರು ಹಲವು ಶತಮಾನಗಳಿಂದ ಧರ್ಮ ಪರಿಪಾಲನೆ ಕಾರ್ಯ ಮಾಡುತ್ತಾ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇದೀಗ ಇಂದಿನಿಂದ ಧರ್ಮಸ್ಥಳದಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದ್ದು ಇದರ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಬಾಹುಬಲಿ ಆಗಮನ ಹೇಗಾಯಿತೆಂಬ ವಿಚಾರವನ್ನು ಸಂಕ್ಷಿಪ್ತವಾಗಿ ತಿಳಿಯಲು ಪ್ರಯತ್ನಿಸೋಣ.
 
170 ಟನ್ ತೂಕದ ಈ ಪ್ರತಿಮೆ ಕಾರ್ಕಳದಲ್ಲಿ ಸೃಷ್ಟಿಯಾಗಿದ್ದು ಧರ್ಮಸ್ಥಳದಲ್ಲಿ ಸ್ಥಾಪನೆಗೊಳ್ಳುವವರೆಗಿನ ಕಥೆ ರೋಚಕವಾದದ್ದು.ಅದರ ನಿರ್ಮಾಣದ ಹಿಂದೆ ವೀರೇಂದ್ರ ಹೆಗ್ಗಡೆಯವರ ತಾತ ಹಾಗೂ ತಂದೆಯವರಾದ ಮಂಜಯ್ಯ ಹೆಗ್ಗಡೆ,.ರತ್ನವರ್ಮ ಹೆಗ್ಗಡ ಅವರ ಕನಸಿದೆ ರತ್ನವರ್ಮ ಹೆಗ್ಗಡೆ ಮತ್ತು ಅವರ ಪತ್ನಿ ರತ್ನಮ್ಮನವರಿಗೆ ಕಾರ್ಕಳ, ವೇಣೂರು ಬಾಹುಬಲಿಗಳ ಮಹಾಮಸ್ತಕಾಭಿಷೇಕಗಳ ಕಂಡು ನಲ್ಯಾಡಿಬೀಡಿನಲ್ಲಿ ಸಹ ಬಾಹುಬಲಿ ಸ್ಥಾಪನೆಯಾಗಬೇಕೆಂದು ಪ್ರೇರಣೆಯಾಗಿತ್ತು. ಇದಕ್ಕಾಗಿ ಅವರು ಕಾರ್ಕಳ ಸಮೀಪದ ಮಂಗಳಪಾದ ಎಂಬಲ್ಲಿ 100 ಅಡಿ ಎತ್ತರ, 48 ಅಡಿ ಅಗಲದ ಬಂಡೆ ಗುರುತಿಸಿ ಬಾಹುಬಲಿ ಮೂರ್ತಿ ಕಡೆಯಲು ಮಹೂರ್ರ್ತ ನಿಗದಿಪಡಿಸಿದ್ದರು. 1967ರ ವಿಜಯ ದಶಮಿಯಂದು ಶಾಸ್ತ್ರೋಕ್ತವಾಗಿ ಮೂರ್ತಿ ಕೆತ್ತನಾ ಕಾರ್ಯ ಪ್ರಾರಂಬವಾಗಿತ್ತು.
 
6 ಅಡಿ ಉದ್ದದ ಮುಖ, 1 ಅಡಿ ಕುತ್ತಿಗೆ, 22.3 ಅಡಿಗಳ ತೋಳುಗಳು, 19.5 ಅಡಿಗಳ ಸೊಂಟದ ಸುತ್ತಳತೆ, 13 ಅಡಿಗಳ ಬೆನ್ನಿನ ಭಾಗ, 13.5 ಅಡಿಗಳ ಭುಜದ ಅಗಲ, 1.4 ಅಡಿಗಳ ದಪ್ಪ ಪಾದನೆಗಳು, 1 ಅಡಿ ಹೆಬ್ಬೆರಳು, 3.5 ಅಡಿಗಳ ಕಿವಿಗಳು, ಹಾಗೂ 1.10 ಅಡಿಗಳ ಮೂಗು, ವಿಗ್ರಹವು ಪಾದದಿಂದ ನೆತ್ತಿಯವರೆಗೆ 39 ಅಡಿಗಳು ಎತ್ತರ ಪೀಠ 13 ಅಡಿ ಪೀಠ ಸಹಿತ ವಿಗ್ರಹದ ಎತ್ತರ 52 ಅಡಿ ಬಾಹುಬಲಿ ನಿರ್ಮಾಣವಾಗಿದ್ದ. ರೆಂಜಾಳ ಗೋಪಾಲಶಣೈ ಎಂಬುವವರು ಇದನ್ನು ಕೆತ್ತಿದ್ದರು 
 
ಕಾರ್ಕಳದಿಂದ 69 ಕಿಮೀ ದೂರದ ಧರ್ಮಸ್ಥಳಕ್ಕೆ 1973ರ ಫೆ.15ರಂದು ಪ್ರಯಾಣ ಪ್ರಾರಂಭಿಸಿದ ಬಾಹುಬಲಿ .ಮೂರು ದಿನಗಳ ಕಾಲ ಪ್ರಯಾಣ ಮಾಡಿ ಫೆ.18ಕ್ಕೆ ಧರ್ಮಸ್ಥಳ ಸೇರಿದನು. ಆದರೆ. ವಿಗ್ರಹವನ್ನು ರತ್ನಗಿರಿ ಬೆಟ್ಟದಲ್ಲಿ ನಿಲ್ಲಿಸಿ ಪ್ರತಿಷ್ಠಾಪನೆ ಮಹೋತ್ಸವ ನೆರವೇರಲು ಮತ್ತೆ ನಾಲ್ಕು ವರ್ಷ ಹಿಡಿದಿತ್ತು.1982ರಲ್ಲಿ  ಈ ಕಾರ್ಯ ಯಶಸ್ವಿಯಾಗಿ ಮುಗಿದು ಮೊದಲ ಮಸ್ತಕಾಭಿಷೇಕ ನಡೆದಿತ್ತು.
ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ಸಾಗಿಸಿದ್ದು ಸಹ ರೋಚಕ ಗಾಥೆಯಾಗುತ್ತದೆ. ಕಾರ್ಕಳ-ಧರ್ಮಸ್ಥಳದ ಮಾರ್ಗದುದ್ದ್ದಕ್ಕೂ ಜನರು ಲಕ್ಷ ಸಂಖ್ಯೆಯಲ್ಲಿ ಸೇರಿ ಜಯಘೋಷಗಳನ್ನು ಹಾಕಿ ಬಾಹುಬಲಿಗೆ ಸ್ವಾಗತ ಕೋರುತ್ತಿದ್ದರು. ಮುಂಬೈ ಮೂಲದ ಮಂಗತ್ ರಾಮ್ ಸಂಸ್ಥೆ ಈ ಬಾಹುಬಲಿ ವಿಗ್ರಹ ಸಾಗಾಟದ ಜವಾಬ್ದಾರಿ ಹೊತ್ತಿತ್ತು. ಮಾಲೀಕ ದೀನನಾಥ ಜಬಾನ್ ಈ ಸಂಸ್ಥೆಯ ಮಾಲೀಕನಾಗಿದ್ದನು. ಅದಕ್ಕಾಗಿ ದೈತ್ಯ ಗಾತ್ರದ ಟ್ರ್ಯಾಲಿ ಹಾಗೂ ಅದಕ್ಕೆ ಪೂರಕವಾಗಿರುವ ಟಯರ್ ಗಳ ನಿರ್ಮಾಣ ಮಾಡಲಾಗಿತ್ತು. 64 ಗಾಲಿಗಳುಳ್ಳ 20 ಟನ್ ಭಾರದ, 40 ಅಡಿ ಉದ್ದದ ಟ್ರ್ಯಾಲಿ ಅದಾಗಿತ್ತು
 
ನನ್ನ ಈ ಲೇಖನ  09 ಫೆ.2019 ರಂದು ಕನ್ನಡಪ್ರಭ.ಕಾಂನಲ್ಲಿ ಪ್ರಕಟವಾಗಿತ್ತು
 
 

Tuesday, January 15, 2019

ಶತಮಾನ ಕಂಡ ‘ಪಾಪು’, ಕನ್ನಡ ಕಣ್ಮಣಿ ಪಾಟೀಲ ಪುಟ್ಟಪ್ಪ

ಕರ್ನಾಟಕ, ಕನ್ನಡದ ಜನರು ಪುಟ್ಟಪ್ಪ ಎಂಬ ಹೆಸರಿನ ಇಬ್ಬರು ವ್ಯಕ್ತಿಗಳನ್ನು ಎಂದಿಗೂ ಮರೆಯುವಂತಿಲ್ಲ. ಅದರಲ್ಲಿ ಒಬ್ಬರು ಕನ್ನಡ ಸಾಹಿತ್ಯ ದಿಗ್ಗಜರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರಾದರೆ ಇನ್ನೊಬ್ಬರೇ ಕನ್ನಡ ಪತ್ರಿಕೋದ್ಯಮದ ಧೀಮಂತ ಪಾಟೀಲ ಪುಟ್ಟಪ್ಪ.
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರಿಗೆ ಇಂದು (14 2019.) ನೂರನೇ ಜನ್ಮದಿನ. ಕನ್ನಡಿಗರೆಲ್ಲರಿಗೆ `ಪಾಪು’ ಎಂದೇ ಗುರ್ತಿಸಲ್ಪಡುವ ಇವರು ಕನ್ನಡ ಪರ ಹೋರಾಟಗಳು, ಕಾಳಜಿಗಳಿಂದ ಜನಮಾನಸದಲ್ಲಿ ನೆಲೆಯಾದವರು. ಇವರ ಕನ್ನಡದ ಬಗೆಗಿನ ಮಗುವಿನಂತಹಾ ಪ್ರೀತಿ ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟ, ಅಪಾರವಾದ ಪಾಂಡಿತ್ಯ ಎಲ್ಲವೂ ಶ್ರೇಷ್ಠಮಟ್ಟದ್ದೆನ್ನುವುದರಲ್ಲಿ ಅನುಮಾನವಿಲ್ಲ. ಇಂತಹಾಮೇರು ವ್ಯಕ್ತಿತ್ವ ಇಂದು ನೂರನೇ ವಸಂತಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಯಾತ್ರೆಯ ಕಿರುಪರಿಚಯ ಇಲ್ಲಿದೆ.
14 ಜನವರಿ 1919ರಲ್ಲಿ , ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿಸಿದ ಪುಟ್ಟಪ್ಪ ಅವರ ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ.ಸ್ವಗ್ರಾಮ ಹಾಗೂ ಹಾವೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಲಿಂಗರಾಜ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆಇದ್ದಾರೆ.ವಿಜಯಪುರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಪುಟ್ಟಪ್ಪ ಅಲ್ಲಿ ಸರಿಯಾದ ಕಕ್ಷಿದಾರರು ಸಿಕ್ಕದೆ ಊಟಕ್ಕೆ ಸಹ ಪರದಾಡುವಂತಹಾ ಕಷ್ಟಕರ ಬದುಕು ನೋಡಬೇಕಾಗಿತ್ತು. ಬಳಿಕ ಅಲ್ಲಿಂದ ಜೀವನ ಅರಸಿ ಮುಂಬೈಗೆ ತೆರಳಿದ ಇವರು ಅಲ್ಲಿ ನ್ಯಾಯಾಲಯಕ್ಕಿಂತ ಹೆಚ್ಚು ಪತ್ರಿಕಾ ಕಛೇರಿಗಳಲ್ಲಿ ಸಮಯ ಕಳೆದಿದ್ದರು.
ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಅವರೊಡನೆ ಸ್ನೇಹ ಬೆಳೆಸಿದ ಪುಟ್ಟಪ್ಪ ತಾವೂ ಪತ್ರಿಕೋದ್ಯಮಿಯಾಗಬೇಕೆಂಬ ಹಂಬಲಕ್ಕೆ ಬಿದ್ದು ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎ ಪದವಿ ಪಡೆದಿದ್ದರು.
ಅಲ್ಲಿಂದ ಹಿಂತಿರುಗಿದ ಮೇಲೆ 1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ,1956ರಲ್ಲಿ ಸಂಗಮ ಮಾಸಿಕ,1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರೀ ಮಾಸಿಕ ಸೇರಿ ಣಾನಾ ಕಡೆಗಳಲ್ಲಿ ನಾನಾ ಪತ್ರಿಕೆಗಳಲ್ಲಿ ದುಡಿದ ಇವರು  ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು ಜತೆಗೆ ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡರು.
ಪತ್ರಿಕಾ ಸಂಪಾದಕರಾಗಿ ಮನೆಮಾತಾದ ಪುಟ್ಟಪ್ಪ ಸಾರ್ವಜನಿಕ ರಂಗಗಳಲ್ಲಿ ಸಹ ಸಾಕಷ್ಟು ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಸಭೆಯ ಸದಸ್ಯ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸಂಸ್ಥಾಪನಾ ಅಧ್ಯಕ್ಷ, ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ನಾನಾ ಹೋರಾಟದಲ್ಲಿ ಭಾಗವಹಿಸಿದ್ದ್ದಾರೆ. ಇಷ್ಟೇ ಅಲ್ಲದೆ  ವಿದ್ಯಾರ್ಥಿಯಾಗಿದ್ದಾಗಲೇ 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಮುಖಂಡರಾಗಿ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿ ಹಾಕಿ ಆ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು., ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದ್ದ ಇವರು ನೂರರ ವಸಂತ ತಲುಪಿದ ಇಂದಿಗೂ ಕನ್ನಡದ ಪರ ಜಾಗೃತ ಮನಸ್ಸುಳ್ಳವರಾಗಿದ್ದಾರೆ.
ಸಾಹಿತಿಯಾಗಿ ನಏಕ ಪುಸ್ತಕಗಳನ್ನು ಪ್ರಕಟಿಸಿರುವ ಪುಟ್ಟಪ್ಪ ಅವರ ಪ್ರಮುಖ ಕೃತಿಗಳೆಂದು ಇವನ್ನು ಹೆಸರಿಸಬಹುದು- ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಶಿಲಾಬಾಲಿಕೆ ನುಡಿದಳು, ಗವಾಕ್ಷ ತೆರೆಯಿತು, ಸಾವಿನ ಮೇಜವಾನಿ
ಕನ್ನಡದ ಪ್ರಮುಖ ಸಾಹಿತಿ, ಪತ್ರಿಕೋದ್ಯಮಿ, ಹೋರಾಟಗಾರರಾಗಿ ಪುಟ್ಟಪ್ಪನವರ ಸಾಧನೆಗೆ ಮನ್ನಣೆಯಾಗಿ ಅನೇಕ ಗೌರವ, ಪ್ರಶಸ್ತಿಗಳು ಲಭಿಸಿದೆ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ನೃಪತುಂಗ ಪ್ರಶಸ್ತಿಗಳು ಪ್ರಮುಖವಾಗಿದೆ. ಇದಲ್ಲದೆ ಪಾಪು ಅಭಿಮಾನಿಗಳೂ ಸಮರ್ಪಿಸಿದ  ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’ ಸಹ ಅವರ ಜೀವನ ಸಾಧನೆಗೆ ಹಿಡಿದ ಕನ್ನಡಿ.
ಇಂತಹಾ ಮೇರು ವ್ಯಕ್ತಿ ಇನ್ನಷ್ಟು ವರ್ಷ ಕಾಲ ಬಾಳಲಿ, ಕನ್ನಡ ನಾಡು, ನುಡಿಗೆ ಇನ್ನಷ್ಟು ಸೇವೆ ಅವರಿಂದ ಲಭಿಸಲಿ ಎನ್ನುವುದು "ಕನ್ನಡಪ್ರಭ ಡಾಟ್ ಕಾಂ" ನ ಹಾರೈಕೆ.

(ನನ್ನ ಈ ಲೇಖನವು 14 Jan 2019 06:49 PMಗೆ "ಕನ್ನಡಪ್ರಭ ಡಾಟ್ ಕಾಂ" ನಲ್ಲಿ ಪ್ರಕಟಗೊಂಡಿದೆ)

Wednesday, December 19, 2018

ವಿಶ್ವ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್: ಶತಮಾನದ ನೆನಪು

ಯೋಗಗುರು ಬೆಳ್ಳೂರು ಕೃಷ್ಣಮಾಚಾರ್‌ ಸುಂದರರಾಜ ಅಯ್ಯಂಗಾರ್‌, ಹೀಗೆಂದರೆ ಬಹುಷಃ ಬಹಳಷ್ಟು ಜನರಿಗೆ ತಿಳಿಯಲಿಕ್ಕಿಲ್ಲ. ಅದೇ  ಯೋಗದೀಕ್ಷಾ ದುರಂಧರ, ವಿಶ್ವ ಯೋಗಾಚಾರ್ಯ ಪ್ರೊ.ಬಿ.ಕೆ.ಎಸ್‌. ಅಯ್ಯಂಗಾರ್‌ ಎಂದರೆ ತಕ್ಷಣ ಅರ್ಥವಾಗುತ್ತದೆ. ಇಂದು (ಡಿಸೆಂಬರ್ 14) ಅವರು ನಮ್ಮೊಡನಿದ್ದಿದ್ದರೆ ನೂರು ವರ್ಷಗಳಾಗುತ್ತಿತ್ತು. ಭಾರತ ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ  ಯೋಗ.ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವ ಈ ಯೋಗ ಪರಂಪರೆಯನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಮಾನ್ಯ ಮಾಡಲಾಗಿದೆ. ಹೀಗೆ ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ ಯೋಗಾಚಾರ್ಯ ಬಿ. ಕೆ. ಎಸ್‌.ಅಯ್ಯಂಗಾರ್‌ ಅವರ ಕೊಡುಗೆ ಅಪಾರವಾದದ್ದು. ಹೀಗಾಗಿ ಅವರ ನೂರನೇ ಜನ್ಮದಿನಾಚರಣೆಯಂದು ಅವರನ್ನು ಸ್ಮರಿಸುವ ನೆಪದಲ್ಲಿ ಅವರ ಜೀವನ, ಸಾಧನೆಯನ್ನೊಮ್ಮೆ ಮೆಲುಕು ಹಾಕುವ ಚಿಕ್ಕ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.
 
ಶ್ರೇಷ್ಠ ಯೋಗ ಶಿಕ್ಷಕರಾಗಿದ್ದ ಬಿಕೆಎಸ್ ಅಯ್ಯಂಗಾರರು ಹುಟ್ಟಿದ್ದು 14 ಡಿಸೆಂಬರ್ 1918ರಂದು ಕೋಲಾರ ಜಿಲ್ಲೆಯ ಬೆಳ್ಳೂರು
ಗ್ರಾಮದಲ್ಲಿ.  ಕನ್ನಡದ ಕಣ್ವ ಎಂದು ಖ್ಯಾತರಾದ ಬಿಎಂಶ್ರೀ ಹುಟ್ಟೂರು ಸಹ ಇದೇ ಆಗಿತ್ತು. ಇವರ ತಂದೆ ಕೃಷ್ಣಮಾಚಾರ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಿಕೆಎಸ್ ಒಂಬತ್ತು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಕಡುಬಡತನದ ಬಾಲ್ಯವನ್ನು ಕಂಡ ಇವರು ಸಂಬಂಧಿಕರ ಮನೆಯಲ್ಲೇ ಬೇಳೆದವರು. ಜತೆಗೆ ಇನ್‌ಫ್ಲುಯೆಂಝಾ, ವಿಷಮಜ್ವರ, ಮಲೇರಿಯಾ, ಹಾಗೂ ಕ್ಷಯರೋಗ ಸೇರಿ ಅನೇಕ ವಿಧದ ಖಾಯಿಗಲೆಗಳಿಗೆ ಇವರ ದೇಹವೇ ಆಶ್ರಯ ತಾಣವಾಗಿತ್ತು.
 
ಕ್ಷಯರೋಗವನ್ನು ಜಯಿಸಲು ಯೋಗದೀಕ್ಷೆ
 
ಮೆಟ್ರಿಕ್ಯುಲೇಷನ್ ವರೆಗಷ್ಟೇ ವಿದ್ಯಾಭ್ಯಾಸ ನಡೆಸಿದ ಬಿಕೆಎಸ್ ತಾವು ಅನುಭವಿಸುತ್ತಿದ್ದ ಅಸಹನೀಯ ಖಾತಯಿಎಗಳಿಂದ ಪಾರಾಗಲು ಯೋಗಾಭ್ಯಾಸದ ಮೊರೆ ಹೋದದ್ದೇ ಮಉಂದೆ ಅವರನ್ನು ವಿಶ್ವಯೋಗಾಚಾರ್ಯನನ್ನಾಗುವಂತೆ ಮಾಡಿತ್ತು!
ಹದಿನೈದನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನೆಲೆಸಿದ್ದ ತಮ್ಮ ಭಾವಮೈದುನ ಟಿ.ಕೃಷ್ಣಮಾಚಾರಿಯವರ ಬಳಿ ಎರಡು ವರ್ಷ ಕಾಲ ಯೋಗಾಭ್ಯಾಸ ನಡೆಸಿದ್ದರು. ಕೃಷ್ಣಮಾಚಾರ್ ಸಹ ಸಾಮಾನ್ಯ ಗುರುವಾಗಿರಲಿಲ್ಲ ಅವರು ಹಿಮಾಲಯದಲ್ಲಿ ಯೋಗಗುರುಗಳಿಂದ ಯೋಗ ವಿದ್ಯಾಭ್ಯಾಸ ಪಡೆದು ಅದನ್ನು ದಕ್ಷಿಣ ಭಾರತದಾದ್ಯಂತ ಪ್ರಚಾರ ಮಾಡಲು ಮೈಸೂರು ಒಡೆಯರ ಆಶ್ರಯ ಪಡೆದಿದ್ದರು.
 
ಒಡೆಯರ ಯೋಗಶಾಲೆಯಲ್ಲಿ ಪ್ರಧಾನ ಯೋಗಶಿಕ್ಷಕರಾಗಿದ್ದ ಕೃಷ್ಣಮಾಚಾರ್ ಅವರ ಮಾರ್ಗದರ್ಶನದಲ್ಲಿ ಬಿಕೆಎಸ್ ತಮ್ಮೆಲ್ಲಾ  ಖಾಯಿಲೆಗಳಿಗೆ ಪರಿಹಾರ ಕಂಡುಕೊಂಡರು.
 
ಆದರೆ ಅದೇನೂ ಅಷ್ಟು ಸುಲಭದಲ್ಲಿ ಒಲಿದ ಶಿಕ್ಷಣವಲ್ಲ, ಪ್ರಾರಂಭದಲ್ಲಿ ಅದೊಂದು ಶಿಕ್ಷೆ ಎಂಬಂದತೆ ಬಿಕೆಎಸ್ ಅವರಿಗೆ ಹಲವು ಬಾರಿ ಭಾಸವಾಗಿದ್ದಿದೆ. ಏಕೆಂದರೆ ಗುರು ಕೃಉಷ್ಣಮಾಚಾರ್ ಕಠಿಣವಾದ ಯೋಗವನ್ನು ಹೇಳುತ್ತಿದ್ದು ಅದನ್ನು ಸಾಧಿಸುವವರೆಗೂ  ಊಟವನ್ನು ಸಹ ನೀಡುತ್ತಿರಲಿಲ್ಲ. ಒಂದು ಬಾರಿ ಅದು ಎಷ್ಟು ವಿಪರೀತಕ್ಕೆ ಹೋಗಿತ್ತೆಂದರೆ ಗುರುಗಳು ಬಿಕೆಎಸ್ ಅವರಿಂದ  ಕಾಲುಗಳ ಅಗಲಿಸುವ ಆಸನ ಮಾಡಿಸಿದ್ದರು. ಆಗ ಬಿಕೆಎಸ್ ತೊಡೆಯಲ್ಲಿನ ಒಂದು ಅಸ್ಥಿಬಂಧಕ (ಲಿಗಾಮೆಂಟ್) ಕತ್ತರಿಸಿ ಹೋಗಿ ಹಲವಾರು ದಿನಗಳ ಕಾಲ ನಡೆಯಲೂ ಆಗುತ್ತಿರಲಿಲ್ಲ!
 
ಆದರೆ ಕಾಲಕ್ರಮೇಣ ಆಸನಗಳು ಕರಗತವಾಗುತ್ತಾ ಹೋಗಿ ದೇಹವುೀಲ್ಲಾ ವಿಧದ ಆಸನಗಳಿಗೆ ಒಗ್ಗಿಕೊಂಡಿತ್ತು, ಮಾತ್ರವಲ್ಲ ಜೀವನದಲ್ಲೇ ಪ್ರಥಮ ಬಾರಿಗೆ ತನ್ನ ಆರೋಗ್ಯದಲ್ಲಿ ಮಹತ್ವದ ಸುಧಾರಣೆಗಳಾಗುತ್ತಿದೆ ಎಂದು ಬಿಕೆಎಸ್ ಗೆ ಅರಿವಾಗಿತ್ತು.
 
ಮೈಸೂರಿನಿಂದ ಪುಣೆಗೆ
 
ಬಿಕೆಎಸ್ ಗೆ ಹದಿನೆಂಟು ವರ್ಷವಾಗಿದ್ದಾಗ ಅವರ ಭಾವಮೈದುನ, ಗುಉರು ಅವ್ರನ್ನು ಧಾರವಾಡಕ್ಕೆ ಕರೆತಂದು ಯೋಗ ಪ್ರದರ್ಶನ ಏರ್ಪಡಿಸಿದ್ದರು. ಇದು ಬಿಕೆಎಸ್ ಜೀವನದ ಮಹತ್ವದ ಘಟ್ಟವಾಗಿತ್ತು. ಅಲ್ಲಿಂದ ಮುಂದೆ ಬಿಕೆಎಸ್ ಧಾರವಾಡ, ಹುಬ್ಬಳ್ಳಿಗಳಲ್ಲಿ  ನೆಲೆಸಿ ಯೋಗತರಗತಿಗಳನ್ನು ನಡೆಸಲು ಪ್ರಾರಂಭಿಸಿದ್ದರು. ಸುಮಾರು ಒಂದು ವರ್ಷಗಳ ಕಾಲ ಧಾರವಾಡದಲ್ಲಿ ಹಲವರಿಗೆ  ಯೋಗ ತರಬೇತಿ ನೀಡಿದ್ದ ಬಿಕೆಎಸ್ ಸಿವಿಲ್ ಸರ್ಜನ್ ಡಾ. ವಿ.ಬಿ.ಗೋಖಲೆ ಅವರ ಆಹ್ವಾನದ ಮೇರೆಗೆ 1937ರಲ್ಲಿ  ಪುಣೆಗೆ ತೆರಳಿದರು
 
1937 ಸೆಪ್ಟೆಂಬರ್ ಮೊದಲನೆಯ ತಾರೀಖಿಗೆ ಅಯ್ಯಂಗಾರರ ಯೋಗತರಗತಿಗಳು ಪುಣೆಯ ಡೆಕ್ಕನ್ ಜಮಖಾನಾದಲ್ಲಿ ಪ್ರಾರಂಭವಾಗಿತ್ತು. ಸುಮಾರು ಮೂರು ವರ್ಷಗಳಲ್ಲಿ 600ಕ್ಕೂ ಹೆಚ್ಚು ಮಂದಿಗೆ ಯೋಗಶಿಕ್ಷಣ ನೀಡಿದ ಬಿಕೆಎಸ್ ಅವರ ಖ್ಯಾತಿಯು ಹಲವರ ಕಣ್ಣು ಕುಕ್ಕುವಂತೆ ಮಾಡಿತ್ತು. 1941ರಲ್ಲಿ ಒಂದು ಘಟನೆಯಲ್ಲಿ ಕೆಲ ಹೊಟ್ಟೆಕಿಚ್ಚಿನ ಜನರು ಬಿಕೆಎಸ್ ಯೋಗತರಗತಿಗೆ ಬೆಂಕಿ ಇಟ್ಟಿದ್ದರು. ಬೆಂಕಿಯಲ್ಲಿ ಅವರು ಉಪಯೋಗಿಸುತ್ತಿದ್ದ ಯೋಗ ಸಾಧನಗಳು, ಜಮಖಾನೆ ಎಲ್ಲಾ ಸುಟ್ಟು ಹೋಗಿದ್ದವು. ಇಇಷ್ಟಾದರೂ  ಅವರು ತಮ್ಮ ನಿರಂತರ ಯೋಗಸಾಧನೆಯನ್ನು ಮಾತ್ರ ಎಂದಿಗೂ ನಿಲ್ಲಿಸಲಿಲ್ಲ.
 
ವಿವಾಹ
 
ಬಿಕೆಎಸ್ ಅತ್ತ ಪುಣೆಯಲ್ಲಿ ಯೋಗಸಾಧನೆಯಲ್ಲಿ ನಿರತವಾಗಿದ್ದರೆ ಇತ್ತ ಅವರ ಮನೆಯವರಿಗೆ ಅವರ ನೆಲೆಯಿಲ್ಲದ ಸನ್ಯಾಸಿಯ  ಜೀವನ ಕಂಡು ಆತಂಕ ಪ್ರಾರಂಭವಾಗಿತ್ತು. ಇದೇ ಕಾರಣಕ್ಕೆ ಅವರೆಲ್ಲಾ ಸೇರಿ ಹದಿನಾರು ವರ್ಷದ ರಮಾಮಣಿ ಎಂಬ ಯುವತಿಯೊಡನೆ ಬಿಕೆಎಸ್ ವಿವಾಹ ನೆರವೇರಿಸಲು ನಿಶ್ವಯಿಸಿದರು.
 
ವಿಶೇಷವೆಂದರೆ ಬಿಕೆಎಸ್ ಯೋಗ ಸಾಧನೆಯೇ ನನ್ನ ಜೀವನೋದ್ದೇಶ ಎಂದುಕೊಂಡಿದ್ದ ಬಿಕೆಎಸ್ ತಾನು ಮದುವೆಯಾಗುವ  ಹುಡುಗಿಯನ್ನು ನೋಡಲೂ ಹೋಗಿರಲಿಲ್ಲ! ಜುಲೈ 11, 1943ರಂದು ಅವರ ವಿವಾಹ ನೆರವೇರಿತು. ಬಿಕೆಎಸ್ ಬಾಳಸಂಗಾತಿಯಾಗಿ  ಬಂದಿದ್ದ ರಮಾಮಣಿ ಅವರಿಗೆ ಜೀವನದುದ್ದಕ್ಕೂ ಆಧಾರಸ್ತಂಭವೆಂಬತೆ ಇದ್ದರು. ಗಂಡನ ಯೋಗಸಾಧನೆಗೆ ತಾವು ಹಿಂದಿನಿಂದ  ಬೆಂಬಲ ನೀಡುತ್ತಾ ಬಂದಿದ್ದ ರಮಾಮಣಿ ಅವರ ಕುರಿತಂತೆ ಬಿಕೆಎಸ್ "ನಾವು ಯಾವುದೇ ದ್ವಂದ್ವವಿಲ್ಲದೆ ನಮ್ಮೆರಡೂ ಆತ್ಮಗಳು  ಒಂದೇ ಎಂಬಂತೆ ಜೀವಿಸಿದ್ದೆವು" ಎಂದಿದ್ದರು.
 
ಗೀತಾ, ಸುನೀತಾ, ಸುಚೀತಾ, ಸುನೀಲಾ, ಸವಿತಾ ಎಂಬ ಐವರು ಹೆಣ್ಣುಮಕ್ಕಳು ಹಾಗೂ ಪ್ರಶಾಂತ ಎಂಬ ಓರ್ವ ಪುತ್ರ ಇವರಿಗೆ  ಜನಿಸಿದರು.
 
ಮೆನ್ಯೂಹಿನ್ ತಂದ ಭಾಗ್ಯ!
 
1952 ಬಿಕೆಎಸ್ ಜೀವನದಲ್ಲಿ ಮಹತ್ವದ ವರ್ಷವಾಗಿತ್ತು. ಅದೇ ವರ್ಷ ಜಗತ್ಪ್ರಸಿದ್ದ ಪಿಟೀಲು ವಾದಕರಾಗಿದ್ದ ಯಹೂದಿ ಮೆನ್ಯೂಹಿನ್  ಭಾರತಕ್ಕೆ ಆಗಮಿಸಿದ್ದರು. ಭಾರತದ ಪ್ರಥಮ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರ ಅತಿಥಿಯಾಗಿದ್ದ ಮೆನ್ಯೂಹಿನ್  ಗೋಣು ಹಾಗೂ ಬಲಭುಜದ ನೋವಿನಿಂದ ಬಳಲುತ್ತಿದ್ದರು. ಮುಂಬೈನಲ್ಲಿ ಮೆನ್ಯೂಹಿನ್ ಕಾರ್ಯಕ್ರಮ ನೀಡಲು ಬಂದಾಗ ಅಲ್ಲಿನ  ಓರ್ವ ಐಎಎಸ್ ಅಧಿಕಾರಿ ಅವರಿಗೆ ಪುಣೆಯಲ್ಲಿರುವ ಬಿಕೆಎಸ್ ಅವರನ್ನು ಕಾಣಲು ಹೇಳಿದ್ದರು.
 
ಐದು ನಿಮಿಷಗಳ ಭೇಟಿ!
 
ಆತನಿಗೆ ಬಿಕೆಎಸ್ ಅವರನ್ನು ಭೇಟಿಯಾಗುವುದು ಮೊದಲಾಗಿ ಇಷ್ಟವಿರಲಿಲ್ಲ ಆದರೂ ಕೇವಲ ಐದು ನಿಮಿಷಗಳ ಭೇಟಿಗಾಗಿ  ಸಮಯ ತೆಗೆದುಕೊಂಡು ಮುಂಬೈನಿಂದ ಪುಣೆಗೆ ಬೆಳಿಗ್ಗೆ ಏಳು ಗಂಟೆಗೆಲ್ಲಾ ಹಾಜರಾಗಿದ್ದರು. ಬಿಕೆಎಸ್ ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಮೆನ್ಯೂಹಿನ್ ಗೆ ಬಿಕೆಎಸ್  ಕೆಲ ಆಸನಗಳನ್ನು ಸಲಹೆ ಮಾಡಿದರು.
 
ಅವರು ಹೇಳಿದ ಆಸನಗಳ ಮಾಡುತ್ತಲೇ ಮೆನ್ಯೂಹಿನ್ ದೇಹದಲ್ಲಿ ಹೊಸ ಚೈತನ್ಯವೊಂದು ಮೂಡಿಬಂದಿತ್ತು. ಐದು ನಿಮಿಷಗಳ  ಭೇಟಿಯು ಮೂರೂವರೆ ಗಂಟೆಗಳ ಕಾಲ ವಿಸ್ತರಿಸಿತ್ತು. ಇಷ್ಟರಲ್ಲಿ ಇಬ್ಬರ ನಡುವೆ ಸ್ನೇಹವು ಬೆಳೆದು ಅದು 47 ವರ್ಷಗಳ ಬಳಿಕ  1999ರಲ್ಲಿ ಮೆನ್ಯೂಹಿನ್ ಅಸುನೀಗುವವರೆಗೂ ಈ ಮಹಾಮೈತ್ರಿ ಹಾಗೆಯೇ ಇತ್ತು.
 
ಬಿಕೆಎಸ್ ಅವರ ಕಾರಣದಿಂದ ಮೆನ್ಯೂಹಿನ್ ಆರಾಮವಾಗಿ ಪಿಟೀಲು ನುಡಿಸುವಂತಾಗಿತ್ತು. ಇದಕ್ಕೆ ಪ್ರತಿಯಾಗಿ ಅವರು ಒಂದು  ಬೆಲೆಬಾಳುವ ಗಡಿಯಾರವನ್ನು ಕೊಟ್ಟು ಅದರ ಹಿಂದೆ ಟು ಮೈ ವಯೋಲಿನ್ ಟೀಚರ್- ಬಿ.ಕೆ.ಎಸ್.ಐಯ್ಯಂಗಾರ್ ಎಂದು ಬರೆದಿದ್ದರು.
 
ವಿದೇಶಗಳಲ್ಲಿ ''ಅಯ್ಯಂಗಾರ್ ಯೋಗ'
 
1954ರಲ್ಲಿ ಮೆನ್ಯೂಹಿನ್ ಬಿಕೆಎಸ್ ಅಯ್ಯಂಗಾರ್ ಅವರನ್ನು ಸ್ವಿಡ್ಜರ್ ಲ್ಯಂಆಡ್ ಗೆ ಕರೆಸಿಕೊಂಡಿದ್ದರು. ಅಲ್ಲಿಯೇ ಅವರಲ್ಲಿ ಇನ್ನಷ್ಟು  ಯೋಗಶಿಕ್ಷಣವನ್ನೂ ಪಡೆದರು. ಮೆನ್ಯೂಹಿನ್ ತಮ್ಮ ಯೋಗ ಗುರುವಿನ ಪರಿಚಯವನ್ನು ಪಾಶ್ಚಾತ್ಯ ದೇಶಗಳಿಗೆ ಮಾಡಿಕೊಟ್ಟರು.  ಇದರಿಂದ ಅಯ್ಯಂಗಾರ್ ವಿದೇಶಗಳಲ್ಲಿಯೂ ಯೋಗತರಗತಿಗಳನ್ನು ತೆರೆಯಲು ಸಾಧ್ಯವಾಗಿತ್ತು. ಅವರ ಪ್ರಥಮ ಪುಸ್ತಕ ಲೈಟ್  ಆನ್ ಯೋಗ ಕ್ಕೆ ಮುನ್ನುಡಿಯನ್ನು ಸ್ವತಃ ಮೆನ್ಯೂಹಿನ್ ಬರೆದರು
 
ಆದರೆ ಪ್ರಾರಂಭದಲ್ಲಿ ಅಲ್ಲಿಯೂ ಅವರು ವರ್ಣಬೇಧದ ಕಠೀಣ ಕಷ್ಟಗಳನ್ನು ಎದುರಿಸಬೇಕಾಗಿತ್ತು. ಕೆಲ ದೇಶದವರು ಇವನಾರೋ  ಜಾದೂಗಾರನೆಂದು ಭಾವಿಸಿದ್ದರು. ಲಂಡನ್ ಮಹಾನಗರದಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ  ಎದುರಾಗಿತ್ತು. ಆದರೆ ಬಾಲ್ಯದಿಂದ ಕಷ್ಟಗಳ ನಡುವೆಯೇ ಬೆಳ್ದ ಬಿಕೆಎಸ್ ಅವರಿಗಿದು ಅಷ್ಟೇನೂ ಭಿನ್ನವಾಗಿ ಕಾಣಿಸಲಿಲ್ಲ. ಕಡೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇವರ ಯೋಗಸಾಧನೆ, ಯೋಗ ಶಿಕ್ಷಣಗಳು ಎಷ್ಟು ಪ್ರಚುರವಾಗಿತ್ತೆಂದರೆ ಬೆಲ್ಜಿಯಂ ರಾಣಿ ಎಲಿಜಬೆತ್, ಆರನೇ ಪೋಪ್ ಪಾಲ್ ಸಹ ಇವರ ಶಿಷ್ಯರಾಗಿದ್ದರು!
 
ಇನ್ನು ಭಾರತದಲ್ಲಿ  ನೆಹರು, ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಅಚ್ಯುತ್ ಪಟವರ್ಧನ್, ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ, ದಿಲೀಪ್ಕುಮಾರ್ ರಾಯ್, ಸಂಗೀತಗಾರ ಅಮ್ಜದ್ ಆಲಿಖಾನ್, ಕಲಾವಿದ ಆರ್.ಕೆ. ಲಕ್ಷ್ಮಣ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಮಹಿಂದರ್ ಅಮರನಾಥ್, ರಾಹುಲ್ ದ್ರಾವಿಡ್, ಕಿರಣ್ ಮೋರೆ, ಜಹೀರ್ ಖಾನ್  ಹೀಗೆ ಅನೇಕ ಮಹನೀಯರಿಗೆ ಬಿಕೆಎಸ್ ಯೋಗ ಗುರುಗಳಾಗಿದ್ದರು.
 
ಅಯ್ಯಂಗಾರ್ ಯೋಗ-ಆದ್ಯಾತ್ಮಿಕ ಶಿಸ್ತು
 
ಬಿಕೆಎಸ್ ಅಯ್ಯಂಗಾರರಿಗೆ ಯೋಗವೆನ್ನುವುದು ಕೇವಲ ದೈಹಿಕ ವ್ಯಾಯಾಮವಷ್ಟೇ ಆಗಿರಲಿಲ್ಲ ಅದು ಆದ್ಯಾತ್ಮಿಕ ಶಿಸ್ತು ಸಹ ಆಗಿತ್ತು.  ಯೋಗವು ಆತ್ಮ ಸಾಕ್ಷಾತ್ಕಾರದ ಮಾದ್ಯಮ" ಎಂದು ಅವರು ಹೇಳುತ್ತಿದ್ದರು. ಬಿಜೆಎಸ್ ತಮ್ಮ ಜೀವಿತಾವಧಿಯಲ್ಲಿ ಸುಮಾರು  200ರಷ್ಟು ಯೋಗ ಭಂಗಿಗಳನ್ನು, ಸುಮಾರು 14 ಬಗೆಯ ಪ್ರಾಣಾಯಾಮ ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸಿ, ಪ್ರಯೋಗಾರ್ಹ  ಯೋಗವಿದ್ಯೆಗೆ ಹೊಸ ಆಯಾಮ ಒದಗಿಸಿಕೊಟ್ಟರು.
 
ಯೋಗದ ಮೂಲಕ ದೇಹದ ಮೇಲೆ ಸ್ಥಿರತೆಯನ್ನು ಸಾಧಿಸಿಕೊಳ್ಳುವುದು ಹೇಗೆಂದು ಇವರು ತೋರಿಸಿಕೊಟ್ಟ ರೀತಿಗೆ ಇಡೀ ಜಗತ್ತು  ತಲೆಬಾಗಿತ್ತು. 1970ರ ಅವಧಿಯಲ್ಲಿ ಮೊದಲಬಾರಿಗೆ ಬಿಕೆಎಸ್ ಈ ಹೊಸ ವಿಧಾನದ ಯೋಗವನ್ನು ಪರಿಚಯಿಸಿದ್ದರು. ಉಸಿರಿನ  ಮೂಲಕ ನಿಯಂತ್ರಣ ಸಾಧಿಸುವುದಲ್ಲದೆ ದೇಹದ ವಿವಿಧ ಭಾಗಗಳನ್ನು  ಆಸನಕ್ಕೆ ಒಳಪಡಿಸಿ ದೇಹದ ಮೇಲೆ ಸ್ಥಿರತೆಯನ್ನು ಸಾಧಿಸುವ ಕ್ರಮವೇ ಅವರ ಹೊಸ ಯೋಗ ವಿಧಾನವಾಗಿತ್ತು. ಅದುವೇ ಅಯ್ಯಂಗಾರ್ ಯೋಗ ಎಂದು ಜಗತ್ ಮನ್ನಣೆ ಗಳಿಸಿತ್ತು.
 
ಪುಸ್ತಕಗಳ ಮೂಲಕ ಯೋಗ ಪ್ರಚಾರ
 
ಬಿಕೆಎಸ್ ಪ್ರಕಟಿಸಿದ ಪುಸ್ತಕರಗಳ ಸಂಖ್ಯೆಯೂ ದೊಡ್ಡದಿದೆ. ಅವುಗಳಲ್ಲಿ  ಲೈಟ್ ಆನ್ ಯೋಗ (1966), ಲೈಟ್ ಆನ್  ಪ್ರಾಣಾಯಾಮ (1978),  ಆರ್ಟ್ ಆಫ್ ಯೋಗ (1985) ಲೈಟ್ ಆನ್ ಯೋಗ ಸೂತ್ರಾಸ್ ಆಫ್ ಪತಂಜಲಿ ಅತ್ಯಂತ ಮಹತ್ವವಾದವು.
 
ಪ್ರಶಸ್ತಿ-ಪುರಸ್ಕಾರಗಳು
 
ವಿಶ್ವದ ನಾನಾ ಕಡೆ ಯೋಗ ಶಿಕ್ಷಣದ ಮೂಲಕ ಹೆಸರಾದ ಬಿಕೆಎಸ್ ಅಯ್ಯಂಗಾರ್ ಅವರಿಗೆ ಸಾಕಷ್ಟು ಮನ್ನಣೆ ಗೌರವಗಳು ಅರಸಿ  ಬಂದಿದ್ದವು. ಅವುಗಳಲ್ಲಿ  ಪದ್ಮಶ್ರೀ(1991), ಪದ್ಮ ಭೂಷಣ(2002), ಪದ್ಮ ವಿಭೂಷಣ(2014) ಪ್ರಶಸ್ತಿ ಅತ್ಯಂತ ಶ್ರೇಷ್ಠವಾದದ್ದು.
 
ಇನ್ನು  ಜಗದ್ವಿಖ್ಯಾತ ಟೈಮ್ಸ್ ನಿಯತಕಾಲಿಕವು 2004ರಲ್ಲಿ ಬಿಕೆಎಸ್ ಅಯ್ಯಂಗಾರರನ್ನು ವಿಶ್ವದ ನೂರು ಪ್ರಭಾವಶಾಲಿ ವ್ಯಕ್ತಿಗಳಲ್ಲಿ  ಒಬ್ಬರೆಂದು ಗುರುತಿಸಿತ್ತು.
 
2011ರಲ್ಲಿ ಚೀನಾ ಅಂಚೆ ಇಲಾಖೆ ಬಿಕೆಎಸ್ ಅವರ ಗೌರವಾರ್ಥ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿತ್ತು.  ಆಕ್ಸ್ ಫರ್ಡ್  ಶಬ್ದಕೋಶದಲ್ಲಿ ಸಹ "ಅಯ್ಯಂಗಾರ್" ಎಂಬ ಶಬ್ದವಿದ್ದು ಇದಕ್ಕೆ "ದೇಹದ ಪರಿಪೂರ್ಣ ಭಂಗಿಗಾಗಿ ಬೆಲ್ಟ್, ಮರದ ಇಟ್ಟಿಗೆಯಂತಹಾ  ಸಾಧನ ಬಳಸುವ ಹಠಯೋಗದ ಒಂದು ಮಾರ್ಗ" ಎಂದು ಅರ್ಥ ನೀಡಲಾಗಿದೆ!
ಡಿಸೆಂಬರ್2015ರಲ್ಲಿ ಅಯ್ಯಂಗಾರರ 97ನೇ ಜನ್ಮದಿನದಂದು ಗೂಗಲ್ ವಿಶೇಷ ಡೂಡಲ್ ರಚಿಸಿಆವರಿಗೆ ಗೌರವ ಸಮರ್ಪಿಸಿತ್ತು.
 
"ನನ್ನ ದೇಹವೇ ಒಂದು ದೇವಾಲಯ, ಆಸನಗಳೇ ನನ್ನ ಪೂಜೆ, ನಾವು ಪ್ರಾಣಿಗಳಂತೆ ಭೂಮಿಮೇಲೆ ನಡೆದಾಡುತ್ತೇವೆ. ಆದರೆ  ಒಂದು ದೈವಿಕ ಚೈತನ್ಯವನ್ನು ಹೊತ್ತಿರುವ ಕಾರಣ ನಕ್ಷತ್ರಗಳೊಡನೆ ತಿರುಗಬಲ್ಲೆವು" ಎಂದಿದ್ದ ಬಿಕೆಎಸ್ ಅಯ್ಯಂಗಾರ್ 2014,  ಆಗಸ್ಟ್ 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯಲ್ಲಿ ಕಾಲವಶರಾದರು.
 
(ನನ್ನ ಈ ಲೇಖನ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರರ ಜನ್ಮ ಶತಮಾನ ದಿನವಾದ ಡಿಸೆಂಬರ್ 14, 2018ರಂದು ಕನ್ನಡಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು)

Sunday, December 09, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -98

ಸಿಗಂಧೂರು (Sigandur)

ಮಲೆನಾಡಿನ ದಟ್ಟ ಕಾಡಿನ ನಡುವೆ ಚೌಡೇಶ್ವರಿ ಮಾತೆ ನೆಲೆಸಿದ ಸ್ಥಳವೇ ಸಿಗಂಧೂರು. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ  ಮಡಿಲಲ್ಲಿರುವ ಈ ಕ್ಷೇತ್ರಕ್ಕೆ ತೆರಳಲು ಸಾಗರ-ಹೊಳೆಬಾಗಇಲು ನಡುವಿನ ಬಸ್ ಹತ್ತಿ ಸುಮಾರು ದೂರ ಶರಾವತಿಯ ಲಾಂಚ್ ನಲ್ಲಿ ಪ್ರಯಾಣಿಸಿ ಮತ್ತೆ ಬಸ್ ನಲ್ಲಿ ಐದು ಕಿಮೀ ದೂರ ಕ್ರಮಿಸಬೇಕು. ಸಾಗರ ಪಟ್ಟಣದಿಂದ ಸುಮಾರು 40 ಕಿಮೀ ಇರುವ ಸಿಗಂಧೂರಿಗೆ ಬೆಂಗಳೂರಿನಿಂದ 410 ಕಿಮೀ ಆಗಲಿದೆ.


ಸುಮಾರು ಎರಡೂವರೆ ಶತಮಾನ ಕಾಲದಷ್ಟು ಹಳೆಯದಾದ ಈ ಕ್ಷೇತ್ರದಲ್ಲಿ ಮಕರ ಸಂಗಕ್ರಮಣದಿಂದ ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ.ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಎನಿಸಿದ್ದು ಪ್ರತಿನಿಯ ಬೇರೆ ಬೇರೆ ಊರುಗಳಿಂದ ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಸ್ಥಳದ ಸುತ್ತ ಮುತ್ತಲೆಲ್ಲಿಯೂ ಕಳ್ಳತನ ಮಾಡದಂತೆ ದೇವಿಯು ತಡೆದಿದ್ದಾಳೆ ಎನ್ನುವುದು ಸ್ಥಳೀಯ ಜನರ ನಂಬಿಕೆಯಾಗಿದೆ. ಈ ದೇವಾಲಯದ ಕೂಗಳತೆ ಅಂತರದಲ್ಲೇ ಭೂತನಾಥ ಎಂಬ ವೀರಭದ್ರ ದೇವಾಲಯವೂ ಇದೆ. ಭೂತನಾಥ ಸುತ್ತಲ ಗ್ರಾಮಗಳನ್ನು ಕಾಯುತ್ತಾರೆ ಎನ್ನುವುದು ಜನರ ನಂಬುಗೆಯಾಗಿದೆ.


***

ಸುಮಾರು ಐದು ಶತಮಾನದ ಹಿಂದೆ ಶೇಶಪ್ಪ ಎಂಬಾತಿಂದಿನ ಸಿಗಂಧೂರು ಇರುವ ಸ್ಥಳದಲ್ಲಿದ್ದ ದಟ್ಟ ಕಾಡಿಗೆ ಬೇಟೆಗಾಗಿ  ಬಂದಿದ್ದನು. ದಾರಿ ತಪ್ಪಿದ ಕಾರಣ ರಾತ್ರಿ ಅವನೊಂದು ಮರದಡಿ ಮಲಗಿದ್ದ. ಅಂದಿನ ರಾತ್ರಿ ತಾಯಿ ಚೌಡೇಶ್ವರಿ ಅವನ ಕನಸಲ್ಲಿ ಕಾಣಿಸಿಕೊಂಡು "ಅಯ್ಯಾ ಶೇಶಪ್ಪ, ಇಲ್ಲಿ ನಾನು ನೆಲೆಸಿದ್ದೇನೆ, ನೀನು ನನಗಾಗಿ ಒಂದು ಗುಡಿಯನ್ನಿಲ್ಲಿ ಕಟ್ಟಿಸಬೇಕು" ಎಂದು ಆದೇಶಿಸಿದ್ದಳು.
ಮರುದಿನ ಊರಿಗೆ ಮರಳಿದ ಶೇಶಪ್ಪ ತನ್ನೂರ ಪುರೋಹಿತರ ಬಳಿ ಈ ಸಮಾಚಾರ ಹೇಳಲು ಅವರು ಆ ಸ್ಥಳದಲ್ಲಿ ಗುಡಿ ಕಟ್ಟಿ  ದೇವಿಯನ್ನು ಪ್ರತಿಷ್ಠಾಪಿಸುತ್ತಾರೆ.