Friday, June 21, 2019

ಸಾರಸ್ವತ ಲೋಕದ ಗಿರೀಶೃಂಗವನ್ನೇರಿದ ಗಿರಿಶ್ ಕಾರ್ನಾಡ್

ಖ್ಯಾತ ಸಾಹಿತಿ, ರಂಗಭೂಮಿ, ಸಿನಿಮಾ ನಟರೂ ಆಗಿದ್ದ ನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್  [81] ಸೊಮವಾರ ಬೆಳಿಗ್ಗೆ ಅಸುನೀಗಿದ್ದಾರೆ. ಎಲ್ಲಾ ಸೀಮೆಗಳನ್ನು ಮೀರಿದ್ದ ಮಹಾನ್ ಪ್ರತಿಭೆ ಗಿರೀಶ್ ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ ಹೆಸರಾಗಿದ್ದವರು.

ಕಾರ್ನಾಡರು 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ.  ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದ ಇವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು.ನಂತರ ತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ ಕಾರ್ನಾಡರು   ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಎನಿಸಿಕೊಂಡಿದ್ದಾರೆ.ಚೆನ್ನೈ ನಲ್ಲಿ ವೃತ್ತಿಜೀವನ ಪ್ರಾರಂಭಿಸಿ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ,  ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿ,  ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತಮ್ಮ 42ನೇ ವಯಸ್ಸಿನಲ್ಲಿ ಕೊಡಗಿನ ವೀರಯೋಧ ಕೋದಂಡೇರ ಗಣಪತಿಯವರ ಪುತ್ರಿ, ಡಾ.ಸರಸ್ವತಿ  ಗಣಪತಿಯವರನ್ನು ವಿವಾಹವಾದ ಇವರಿಗೆ ಶಾಲ್ಮಲಿ ರಾಧಾ ಮತ್ತು ರಘು ಅಮಯ್ ಇಬ್ಬರು  ಮಕ್ಕಳಿದ್ದಾರೆ.

ಮಾ ನಿಷಾಧ - ಏಕಾಂಕ ನಾಟಕ, ಯಯಾತಿ - 1961, ತುಘಲಕ್ - 1964, ಹಯವದನ - 1972, ಅಂಜುಮಲ್ಲಿಗೆ - 1977, ಹಿಟ್ಟಿನ ಹುಂಜ ಅಥವಾ ಬಲಿ - 1980, ನಾಗಮಂಡಲ - 1990, ತಲೆದಂಡ - 1991, ಅಗ್ನಿ ಮತ್ತು ಮಳೆ - 1995, ಟಿಪ್ಪುವಿನ ಕನಸುಗಳು - 1997, ಒಡಕಲು ಬಿಂಬ - 2005, ಮದುವೆ ಅಲ್ಬಮ್, ಫ್ಲಾವರ್ಸ - 2012 ಬೆಂದ ಕಾಳು ಆನ್ ಟೋಸ್ಟ ಇವು ಅವರ ಪ್ರಮುಖ ನಾಟಕಗಳಾದರೆ ಆಡಾಡತ ಆಯುಷ್ಯ  ಎಂಬುದು ಅವರ ಆತ್ಮಕಥನ.

ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಕಾರ್ನಾಡರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೂಫಿ ಪಂಥ,  ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶನ ಂಆಡಿದ್ದಾರೆ. ಸಾಹಿತ್ಯಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು ಎನ್ನುವುದು ಇನ್ನೊಂದು ವಿಶೇಡ್ಶ.ಕಾರ್ನಾಡರ ಕೃತಿಗಳು ಇಂಗ್ಲಿಷ್ ಭಾಷೆಯೂ ಸೇರಿದಂತೆ.ವಿದೇಶ ಬಾಷೆಗಳಲ್ಲಿಯೂ ಅನುವಾದವಾಗಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ.  ಧೀರ ರಣ ವಿಕ್ರಮ, ರುದ್ರ ತಾಂಡವ, ಸವಾರಿ-2,  ಯಾರೇ ಕೂಗಾಡಲಿ. ಕಂಪೇಗೌಡ, ಆ ದಿನಗಳು, ತನನಂ ತನನಂ, ಎ.ಕೆ-47 ಮುಂತಾದ ಪ್ರಸಿದ್ಧ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲೂ ಗಿರೀಶ್‌ ಕಾರ್ನಾಡ್‌ ನಟಿಸಿ ದೇಶದಲ್ಲಿ ದೊಡ್ಡ ಹೆಸರು ಮಾಡಿದ್ದರು. 

ಹೀಗೆ ರಂಗಬುಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಗಿರೀಶ್ ಕಾರ್ನಾಡ್ ಸಲ್ಲಿಸಿರುವ ಸೇವೆ ಪರಿಗಣಿಸಿ ಅನೇಕ ಪುರಸ್ಕಾರಗಳು ಲಭಿಸಿದೆ. ಅವುಗಳಲ್ಲಿ .ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,, ಗುಬ್ಬಿ ವೀರಣ್ಣ ಪ್ರಶಸ್ತಿ,, ಕೇಂದ್ರ ಸಂಗೀತ ನಾಟಕ ಅಕಾಡೆಮಿ 
ಪ್ರಶಸ್ತಿ,ಪದ್ಮಶ್ರೀ -1974, ಪದ್ಮಭೂಷಣ -1992, ಜ್ಞಾನಪೀಠ -1998, ಕಾಳಿದಾಸ ಸಮ್ಮಾನ್ - 1998 ಪ್ರಮುಖವಾದವು.

My article Published: on 10 Jun 2019 10:54 AM IST | Updated: 10 Jun 2019 12:42 PM IST at Kannadaprabha.com

Saturday, March 30, 2019

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -101

ಸುಚೀಂದ್ರಂ (Suchindram )


ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್ಯದ ಪ್ರತಿ ಪ್ರಮುಖ ನಗರಗಳಲ್ಲಿ ಶಿವನ ಹಾಗೂ ವಿಷ್ಣುವಿನ ದೇವಾಲಯಗಳನ್ನು ಕಾಣಬಹುದು. ಆದರೆ ಈ ಮೂರೂ ಪ್ರಮುಖ ದೇವತೆಗಳು ಒಟ್ಟಾಗಿ ನೆಲೆಸಿದ್ದರೆ?

ಹೌದು ಅಂತಹ ದೇವಾಲಯ ವಿಶೇಷ. ಸೃಷ್ಟಿಕರ್ತ ಬ್ರಹ್ಮ, ಪಾಲನಕರ್ತ ವಿಷ್ಣು ಹಾಗೂ ಲಯಕರ್ತ ಶಿವ, ಈ ಮೂವರೂ ತ್ರಿಮೂರ್ತಿಗಳು ಒಟ್ಟಾಗಿ ಒಂದೆಡೆ ನೆಲೆಸಿರುವುದು ಬಹು ಅಪರೂಪ. ಆದರೆ ದಕ್ಷಿಣ ದೇವಾಲಯಗಳ ರಾಜ್ಯವೆಂದೆ ಹೇಳಬಹುದಾದ ತಮಿಳುನಾಡು ಇಂತಹ ಒಂದು ವಿಶಿಷ್ಟ ದೇವಾಲಯಕ್ಕೆ ನೆಲೆಯಾಗಿದೆ. ತನುಮಲಯನ್ ಎಂತಲೂ ಕರೆಯಲ್ಪಡುವ ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಪಟ್ಟಣದಲ್ಲಿದೆ. ಸುಚೀಂದ್ರಂ, ಕನ್ಯಾಕುಮಾರಿ ನಗರದಿಂದ 11 ಕಿ.ಮೀ, ನಾಗರಕೋಯಿಲ್ ನಿಂದ 7 ಕಿ.ಮೀ, ತಿರುನೆಲ್ವೇಲಿಯಿಂದ 70 ಕಿ.ಮೀ ಹಾಗೂ ಕೇರಳದ ತಿರುವನಂತಪುರಂನಿಂದ 85 ಕಿ.ಮೀ ಗಳಷ್ಟು ದೂರದಲ್ಲಿದೆ.
 17 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಅದ್ಭುತ ಶಿಲ್ಪಕಲೆಯ ಕಲಾಕೃತಿಗಳಿಂದ ಶ್ರೀಮಂತವಾಗಿದ್ದು  ಶ್ರೇಷ್ಠ ಕೆತ್ತನೆಯ ಕೆಲಸಗಳಿಂದಾಗಿ ಗಮನಸೆಳೆಯುತ್ತದೆ. ಹದಿನೆಂಟಿ ಅಡಿಗಳಷ್ಟು ಎತ್ತರದ ನಾಲ್ಕು ಸಂಗೀತ ಹೊರಡಿಸುವ ಅದ್ಭುತ ಖಂಬಗಳನ್ನು ಇಲ್ಲಿ ಕೆತ್ತಲಾಗಿರುವುದನ್ನು ಕಾಣಬಹುದು. ದೇವಾಲಯದಲ್ಲಿರುವ ಅಲಂಕಾರ ಮಂಟಪದಲ್ಲಿ ಆ ನಾಲ್ಕು ಸಂಗೀತ ಖಂಬಗಳನ್ನು ಕಾಣಬಹುದಾಗಿದ್ದು ಅದರಿಂದ ವಿವಿಧ ಸಂಗೀತಮಯ ಕಮ್ಪನಗಳು ಬರುವುದನ್ನು ಆಸ್ವಾದಿಸಬಹುದು. ಇದಲ್ಲದೆ ನೃತ್ಯ ಮಂಟಪವಿದ್ದು ಅಲ್ಲಿ ಸಾವಿರಕ್ಕೂ ಅಧಿಕ ಕೆತ್ತನೆಯ ಖಂಬಗಳನ್ನು ಕಾಣಬಹುದು.

ದೇವಾಲಯದಲ್ಲಿ ವಿಶಿಷ್ಟವಾದ ಆಂಜನೇಯನ ಪ್ರತಿಮೆಯೊಂದಿದ್ದು ಒಂದೆ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾದ ಈ ಆಂಜನೇಯನ ಮೂರ್ತಿಯು 22 ಅಡಿಗಳಷ್ಟು ಎತ್ತರವಿದೆ. ಇನ್ನೂ ವಿಶೇಷವೆಂದರೆ ಇಲ್ಲಿನ ಹನುಮಂತನ ಮೂರ್ತಿಯ ಬಾಲಕ್ಕೆ ಭಕ್ತರು ಬೆಣ್ಣೆ ಹಚ್ಚಿ ಪೂಜಿಸುತ್ತಾರೆ.

***

ಅತ್ಯಂತ ಹಿಂದೆ ಇಂದಿನ ಸುಚೀಂದ್ರಂ ಇರುವ ಜಾಗ" ಜ್ಞಾನವನ" ಕ್ಷೇತ್ರ ಎಂದು ಹೆಸರಾಗಿತ್ತು. ಇಲ್ಲಿ ಅತ್ರಿ ಮಹರ್ಷಿಗಳು ಅನುಸೂಯಾದೇವಿಯೊಡನೆ ಆಶ್ರಮದಲ್ಲಿ ವಾಸಿಸುತ್ತಿದ್ದರು. ಅದೊಮ್ಮೆ ತ್ರಿಮೂರ್ತಿಗಳು ಅನಸೂಯಾದೇವಿಯ ಪಾತಿವ್ರತ್ಯ ಧರ್ಮದ ಪರೀಕ್ಷೆಗೆ ಮುಂದಾಗಿದ್ದರು. ಅವರು ಅತ್ರಿ ಮಹರ್ಷಿಗಳು ಆಶ್ರಮದಲ್ಲಿಲ್ಲದ ವೇಳೆ ಆಕೆಯಲ್ಲಿ ಭಿಕ್ಷೆ ಬೇಡಲು ಆಗಮಿಸಿದ್ದರು. ಆಗ ಅನಸೂಯಾದೇವಿ ಅವರಿಗೆ ಭಿಕ್ಷೆ ನೀಡಲು ಬಂದಾಗ ತ್ರಿಮೂರ್ತಿಗಳು "ನೀನು ನಗ್ನಳಾಗಿ(ಹುಟ್ಟಿದಾಗ ಇದ್ದಂತೆ) ಬಂದು ಭಿಕ್ಷೆ ನೀಡಿದ್ದಾದರೆ ಮಾತ್ರವೇ ನಾವು ಸ್ವೀಕರಿಸುವೆವು" ಎಂದು ಷರತ್ತು ಹಾಕಿದ್ದರು.

ಆಗ ಕ್ಷಣ ಕಾಲ ಯೋಚಿಸಿದ ಅನಸೂಯಾದೇವಿ ಅದಕ್ಕೆ ಒಪ್ಪಿದಳು ಮತ್ತು ಆ ತ್ರಿಮೂರ್ತಿಗಳನ್ನು ತನ್ನ ಪಾತಿವ್ರತ್ಯದ ಬಲದಿಂದ ಶಿಶುಗಳನ್ನಾಗಿಸಿ ಎದೆಹಾಲುಡಿಸಿದ್ದಳು ಮತ್ತು ತೊಟ್ಟಿಲಲ್ಲಿಟ್ಟು ತೂಗಿದಳು. ಕಡೆಗೆ ಹೊರ ಹೋಗಿದ್ದ ಅತ್ರಿ ಮಹರ್ಷಿಗಳು ಆಶ್ರಮಕ್ಕೆ ಆಗಮಿಸಿದಾಗ ಅವರಿಗೂ ಅನಸೂಯಳ ಈ ಶಕ್ತಿ ಕಂಡು ಅಚ್ಚರಿಯಾಗಿತ್ತು. ಮುಂದೆ ಇದೇ ಮೂರು ಮಕ್ಕಳು ಒಂದಾಗಿ ಸೇರಿದಾಗ ಶ್ರೀ ಗುರು ದತ್ತಾತ್ರೇಯನ ಜನ್ಮವಾಗಿತ್ತು.

***

ಗೌತಮ ಋಷಿಯ ಪತ್ನಿ ಅಹಲ್ಯೆಯಲ್ಲಿ ಮೋಹಗೊಂಡಿದ್ದ ದೇವೇಂದ್ರ ಗೌತಮ ಮಹರ್ಷಿಯಿಂದ ಶಾಪವನ್ನು ಹೊಂದಿದ್ದನು. ಅಹಲ್ಯೆ ಗೌತಮರ ಶಾಪದ ಕಾರಣ ಕಲ್ಲಾಗಿದ್ದರೆ ದೇವೇಂದ್ರನ ಮೈಮೇಲೆ ಹೆಣ್ಣಿನ ಜನನಾಂಗಗಳೂ ಕಾಣಿಸಿಕೊಂಡು ಅಸಹ್ಯ ಹುಟ್ಟಿಸಿದ್ದವು. ಆಗ ದೇವೇಂದ್ರನು ಗೌತಮರಿಗೆ ಸಾಷ್ಟಾಂಗ ಎರಗಿ ತನ್ನಿಂದಾದ ಪ್ರಮಾದಕ್ಕೆ ಕ್ಷಮೆ ಕೋರಲು ಅವರು "ತ್ರಿಮೂರ್ತಿಗಳನ್ನು ಏಕಸ್ಥಾನದಲಿ ಪೂಜಿಸಿದ್ದಾದರೆ ನಿನ್ನ ಮೇಲಿನ ಶಾಪ ದೂರಾಗಲಿದೆ" ಎಂದು ವಚನ ಕೊಟ್ಟರು. ದೇವೇಂದ್ರ ತ್ರ್ಮೂರ್ತಿಗಳು ಒಟ್ಟಾಗಿ ಇರುವ ಜಾಗವಾವುದು ಎಂದು ಹುಡುಕುತ್ತಾ ನಾರದ ಸಹಾಯ ಕೇಳಿದಾಗ ಅವರು ಅತ್ರಿ ಮಹರ್ಷಿಯ ಆಶ್ರಮದಲ್ಲಿ ತ್ರಿಮೂರ್ತಿಗಳಿರುವುದನ್ನು ಪತ್ತೆ ಮಾಡಿ ಅವನಿಗೆ ಸಹಾಯ್ ನೀಡಿದ್ದರು. ಅತ್ರಿ ಮಹರ್ಷಿ ಹಾಗೂ ತ್ರಿಮೂರ್ತಿಗಳು ದೇವಂದ್ರನ ಶಾಪ ವಿಮೋಚನೆಗೆ ಒಪ್ಪಿಕೊಂಡಿದ್ದು ಅದರಂತೆ ಪ್ರಜ್ಞಾ ತೀರ್ಥದ ದಕ್ಷಿಣ ಭಾಗದಲ್ಲಿನ ಅರಳಿಮರದ ಕೆಳಗೆ ತ್ರಿಮೂರ್ತಿಗಳು ಸ್ಥಿತರಾದರು.
ಅಲ್ಲಿ ಬ್ರಹ್ಮನು ಪಾದವಾಗಿಯೂ, ವಿಷ್ಣು ದೇಹಭಾಗವಾಗಿಯೂ, ಶಿವನು ಶಿರೋಭಾಗವಾಗಿಯೂ ಕಾಣಿಸಿದರು. ಅಲ್ಲದೆ  ಅವರು ಕುಳಿತಿದ್ದ ಅರಳಿಮರ ಯುಗ ಯುಗಗಳಲ್ಲಿ ಅರಳಿ, ತುಳಸಿ, ಬಿಲ್ವ ಹಾಗೂ ಕೊನ್ನೆ ವೃಉಕ್ಷವಾಗಿ ಉಳಿಯಿತು. ಇಂದೂ ನಾವು ಸುಚೀಂದ್ರಂ ನಲ್ಲಿ ಕೊನ್ನೆ ಮರವನ್ನು ಕಾಣುತ್ತೇವೆ.  

ನಾರದರ ಸಂದೇಶದಂತೆ ದೇವೇಂದ್ರ ತ್ರಿಮೂರ್ತಿ ದರ್ಶನಕ್ಕಾಗಿ ಬಂಗಾರದ ರಥದಲ್ಲಿ ಹೊರಟನು. ಆಗ ನಂದಿಯು "ದೇವೇಂದ್ರ ತ್ರಿಮೂರ್ತಿ ದರ್ಶನ್ ಅಮಾಡಲು ಒಬ್ಬನೇ ಬರುವಂತಿಲ್ಲ ಜತೆಗೆ ಕುಲಗುರುಗಳ ಆಶೀರ್ವಾದ ಪಡೆದು ಬರಬೇಕು" ಎಂದು ದೇವೇಂದ್ರನನ್ನು ತಡೆಯುತ್ತಾನೆ. ಇಂದಿನ ತಿರೂರ್ ನಲ್ಲಿ ದೇವೇಂದ್ರ ಬಂಗಾರದ ರಥ ನಿಲ್ಲಿಸಿದ ಸ್ಥಳವಿದೆ. ಇಂದ್ರನನ್ನು ಅಡ್ಡಗಟ್ಟಿದ ನಂದಿಯನ್ನು ಸಹ ನಾವು ದೇವಸ್ಥಾನದಲ್ಲಿ ಕಾಣುತ್ತೇವೆ.

ನಂದಿಯ ಆದೇಶದಂತೆ ಇಂದ್ರ ಕುಲಗುರು ಬೃಹಸ್ಪತಿಯನ್ನು ಸಂತೃಉಪ್ತಗೊಳಿಸಲು ಘನಾರಣ್ಯದ ಪೂರ್ವದಲ್ಲಿರುವ ಬೆಟ್ಟಕ್ಕೆ ಹೊರಟಿದ್ದನು. ಅಲ್ಲಿ ಇಂದ್ರ ತಪಸ್ಸು ಮಾಡಿ ಬೃಉಅಹಸ್ಪತಿಯನ್ನು ಒಲಿಸಿಕೊಂಡನು. ಇಂದ್ರನಿಗೆ ಪ್ರತ್ಯಕ್ಷನಾದ ಬೃಉಹಸ್ಪತಿ "ನೀನು ಮೊದಲು ನಂದಿ, ಗಣೇಶನನ್ನು ಸ್ಮರಿಸಿ, ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ ನಮಿಸಬೇಕು. ವೃಉಕ್ಷದ ಮುಂದೆ ಕುದಿಯುವ ತುಪ್ಪದ ಹಂಡೆ ನಿರ್ಮಾಣ ಮಾಡಿ ಅದರಲ್ಲಿ ೧೦೦೩ ಬಾರಿ ಮುಳುಗಿ ಪಂಚಾಕ್ಷ ಮಂತ್ರ ಪಠಿಸಬೇಕು. ಆಗ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ ಶಾಪ ವಿಮೋಚನೆಯಾಗಲಿದೆ" ಎನ್ನುತ್ತಾರೆ.  ಇಂದ್ರ ತಪಸ್ಸು ಮಾಡಿದ ಬೆಟ್ಟದ ಭಾಗ ಇಂದು "ಮುರುತ್ವ ಮಲೈ" ಎಂದು ಹೆಸರಾಗ್ಗಿದ್ದು ಇಲ್ಲಿ ದೇವೇಂದ್ರ ಸ್ಥಾನ ಹಾಗೂ ದೇವೇಂದ್ರ ತೀರ್ಥಗಳಿದೆ.
suchindram
ಹಾಗೆ ಬೃಹಸ್ಪತಿಯ ಆದೇಶದಂತೆ ನಂದ್ ಗಣೇಶನನ್ನು ಪೂಜಿಸಿ ಅರಳಿ ವೃಉಕ್ಷಕ್ಕೆ ನಮಿಸಿ ಹಂಡೆಯೊಂದರಲ್ಲಿ ಕುದಿಯುವ ತುಪ್ಪದಲಿ ಮುಳುಗೇಳುವ ಇಂದ್ರನಿಗೆ ತ್ರಿಮೂರ್ತಿಗಳ ದರ್ಶ್ನ ಮಾತ್ರ ಲಭಿಸಲಿಲ್ಲ. ಕಡೆಗೆ ನಿರಾಶನಾದ ಇಂದ್ರದೇವೆ ಅಗ್ನಿಪ್ರವೇಶಕ್ಕೆ ಮುಂದಾಗುತ್ತಾನೆ. ಆಗ ಕಡೇ ಕ್ಷಣದಲ್ಲಿ ತ್ರಿಮೂರ್ತಿಗಳು ಇಂದ್ರನಿಗೆ ದರ್ಶನ ನೀಡುತ್ತಾರೆ. "ನೀನು ಓರ್ವ ಗೃಉಹಸ್ಥೆಯನ್ನು ಬಯಸಿದ್ದಕ್ಕೇ ಇಷ್ಟೆಲ್ಲಾ ಅನರ್ಥವಾಗಿದೆ" ಎಂದ ತ್ರಿಮೂರ್ತೊಗಳು ಇಂದ್ರನ ಶಾಪವನ್ನು ವಿಮೋಚನೆ ಮಾಡುತ್ತಾರೆ. ಆದರೆ ಇಂದ್ರ ಪ್ರತಿನಿತ್ಯ ಇಲ್ಲಿ ಬಂದು ಪೂಜೆ ಸಲ್ಲಿಸಬೇಕೆಂದು ಆದೇಶಿಸುತ್ತಾರೆ.

ತ್ರಿಮೂರ್ತಿಗಳ ಆದೇಶದಂತೆ ಇಂದ್ರ ತ್ರಿಮೂರ್ತಿಗಳ ಪ್ರತಿನಿಧಿ ಸುವಂತಹ (ಜ್ಯೋತಿರ್ಲಿಂಗ) ನಿರ್ಮಾಣ ಮಾಡಿ ಪೂಜಿಸುತ್ತಾ ಬರುತ್ತಾನೆ. ಅಂದಿನಿಂಡ ಇಂದಿನವರೆಗೆ ಪ್ರತಿದಿನವೂ ಇಲ್ಲಿ ಇಂದ್ರನು ಪೂಜೆ ಕೈಗೊಳ್ಳುತ್ತಾನೆ ಎಂಬ ನಂಬಿಕೆ ಇದೆ.

ಇಂದ್ರ ಅರ್ಧ ಜಾಮದ ಪೂಜೆ ನೆರವೇರಿಸಿದ್ದ ಕಾರಣ ಸಂಜೆಯ ಪೂಜೆ ನೆರವೇರಿಸಿದ ಅರ್ಚಕರು ಮುಂಜಾನೆ ಪೂಜೆ ಮಾಡುವಂತಿಲ್ಲ. ಹಾಗಾಗಿ ದೇವಾಲಯದ ಅರ್ಚಕರಲ್ಲಿ ಇಬ್ಬರು ಅರ್ಚಕರು ಸರದಿ ಪ್ರಕಾರ ಪೂಜೆ ನೆರವೇರಿಸುತ್ತಾರೆ. ದೇವಾಲಯದಲ್ಲಿ ಅರ್ಧ ಜಾಮದ ಪೂಜೆ ಇಲ್ಲ, ಲಿಂಗಕ್ಕೆ ಅಭಿಷೇಕವಾಗುವುದಿಲ್ಲ, ಅಭಿಷೇಕ ತೀರ್ಥ ಹೊರಹೋಗಲು "ಗೋಮುಖಿ" ಸಹ ಇಲ್ಲ!

ಇಂದ್ರನ ಶಾಪ ವಿಮೋಚನೆಯಾಗಿ ದೇಹ ಶುದ್ದವಾದ ಈ ಸ್ಥಳಕ್ಕೆ ಸುಚಂದ್ರಂ ಎಂದು ಹೆಸರು ಬಂದಿದೆ. "ಸುಚಿ" ಎಂದರೆ ಶುದ್ದ ಎಂದೂ ಇಂದ್ರನು ಶುಚಿಯಾದ ಸ್ಥಳ ಸುಚೀಂದ್ರಂ ಎಂದು ಕರೆಯಲ್ಪಡುವುದು

***

ಲಂಕೆಗೆ ಹಾರಿ ಸೀತಾಮಾತೆಯನ್ನು ಕಂಡ ಹನುಮಂತ ರಾವಣನ ಭೇಟಿಯಾದ ಬಳಿಕ ರಾವಣನ ಆದೇಶದಂತೆ ಅಲ್ಲಿನ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುತ್ತಾರೆ. ಆಗ ಅದೇ ಬೆಂಕಿಯಿಂದ ಹನುಮನು ಇಡೀ ಲಂಕೆಯನ್ನು ಸುಟ್ಟು ಬೂದಿ ಮಾಡುತ್ತಾನೆ. ಆದರೆ ಇದೇ ವೇಳೆ ಹನುಮನ ಬಾಲದ ಬಹುಭಾಗವೂ ಸಹ ಸುಟ್ಟು ಹೋಗಿರುತ್ತದೆ. ಹಾಗಾಗಿ ಇದರ ಉಪಶಮನಕ್ಕಾಗಿ ಸುಚೀಂದ್ರಂ ನಲ್ಲಿನ ಮಾರುಯತಿಯ ಬಾಲಕ್ಕೆ ಭಕ್ತರು ಇಂದಿಗೂ ಬೆಣ್ಣೆ ಹಚ್ಚಿ ಪೂಜಿಸುತ್ತಾ ಬಂದಿದ್ದಾರೆ. ಇದು ಭಾರತದಲ್ಲಿ ಬೇರೆಲ್ಲೂ ಇಲ್ಲದ  ವಿಶೇಷ ಸಂಪ್ರದಾಯವಾಗಿದ್ದು ಯುಗ ಯುಗಗಳಿಂದ ಇಲ್ಲಿ ನಡೆದು ಬಂದಿದೆ.

Monday, March 25, 2019

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -100

ರಾಮೇಶ್ವರಂ(
Rameswaram
)
ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ.

ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ ಕಡಲ ತೀರದಲ್ಲಿ ವಿಹರಿಸಬಹುದಾಗಿದೆ.  ರಾಮೇಶ್ವರಂನ ಶ್ರೀರಾಮನಾಥ ದೇವಾಲಯ 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು,  ಈ  ಅವಧಿಯಲ್ಲಿ ಆಡಳಿತದಲ್ಲಿದ್ದ ರಾಜರು ದೇವಾಲಯ ನಿರ್ಮಣಕ್ಕೆ ಒತ್ತು ನೀಡಿದ್ದರು.  ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯದ ಪ್ರಾಂಗಣ ವಿಶಾಲವಾಗಿದೆ.  ಪ್ರವೇಶ ದ್ವಾರದ ಅಗಲ 6 ಮೀಟರ್,  ಎತ್ತರ 9 ಮೀಟರ್ ಇದೆ.

ಸುಮಾರು 6 ಹೆಕ್ಟೇರ್ ಪ್ರದೇಶದಲ್ಲಿ ದೇವಾಲಯ ನಿರ್ಮಾಣವಾಗಿದೆ. ದೇವಾಲಯದ ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 197 ಮೀಟರ್,  ಉತ್ತರದಿಂದ ದಕ್ಷಿಣಕ್ಕೆ 133 ಮೀಟರ್ ಉದ್ದವಿದೆ. ದೇವಾಲಯದ ಕಂಬಗಳ ಕಲಾತ್ಮಕ ಕೆತ್ತನೆ ನೋಡುಗರನ್ನು ಸೆಳೆಯುತ್ತದೆ. ರಾಮನಾಥ ಸ್ವಾಮಿ ದೇವಾಲಯದ ಸಮೀಪದಲ್ಲಿ ಅಗ್ನಿತೀರ್ಥವಿದೆ. ರಾಮೇಶ್ವರಂನಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿ ಧನುಷ್ಕೋಟಿ ಇದ್ದು,  ಇಲ್ಲಿ  ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ವಿಗ್ರಹಗಳನ್ನು ನೋಡಬಹುದಾಗಿದೆ. ಮೇಶ್ವರದ ಸುತ್ತಮುತ್ತಲದಲ್ಲಿ ಅನೇಕ ವಿಶಿಷ್ಟವಾದ ದೇವಾಲಯಗಳಿವೆ. ಅವುಗಳಲ್ಲಿ ಕೋದಂಡರಾಮ ಸ್ವಾಮಿ ದೇವಾಲಯ, ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಇನ್ನೂ ಹಲವಾರು. ರಾಮೇಶ್ವರಂ ಕೇವಲ ಧಾರ್ಮಿಕ ಸ್ಥಳವೇ ಅಲ್ಲದೆ, ಪ್ರಮುಖ ಪ್ರವಾಸಿ ತಾಣವೂ ಹೌದು. ರಾಮೇಶ್ವರದಲ್ಲಿ ದೇವಾಲಯಗಳೇ ಅಲ್ಲದೆ ಅನೇಕ ರೋಮಾಂಚನಕಾರಿಯಾದ ಸ್ಥಳಗಳು ಕೂಡ ಇವೆ.

***
ದಶಗ್ರಂಥಿ ಬ್ರಾಹ್ಮಣನಾಗಿದ್ದ ರಾವಣನ ವಧೆಯ ಬಳಿಕ ಅಗಸ್ತೀ ಋಷಿಗಳು ಪ್ರಭು ಶ್ರೀರಾಮನಿಗೆ ಬ್ರಹ್ಮಹತ್ಯೆಯ ಪಾಪದಿಂದ ಮುಕ್ತನಾಗಲು ಸಾಗರತೀರದಲ್ಲಿ ಜ್ಯೇಷ್ಠ ಶುದ್ಧ ದಶಮಿಯ ಮುಹೂರ್ತದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿದರು. ಈ ಕಾರಣದಿಂದ ಶಿವನ ದಿವ್ಯಲಿಂಗವನ್ನು ತರಲು ಮಾರುತಿಯು ಕೈಲಾಸಕ್ಕೆ ಹೋದನು. ಆದರೆ ಶಿವನ ದರ್ಶನವಾಗದ ಕಾರಣ ಮಾರುತಿಯು ತಪಸ್ಸನ್ನು ಪ್ರಾರಂಭಿಸಿದನು. ಕಾಲಾಂತರದಲ್ಲಿ ಶಿವನು ಪ್ರಕಟಗೊಂಡು ಮಾರುತಿಗೆ ತನ್ನ ದಿವ್ಯಲಿಂಗವನ್ನು ನೀಡಿದನು. ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಮಾರುತಿಗೆ ಮುಹೂರ್ತದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಸೀತೆಯು ಮರಳಿನಿಂದ ಒಂದು ಲಿಂಗವನ್ನು ತಯಾರಿಸಿ ಕೊಟ್ಟಳು. ಋಷಿಗಳ ಆದೇಶ ಪಡೆದು ನಂತರ ರಾಮನು ಅದರ ಸ್ಥಾಪನೆಯನ್ನೇ ಮಾಡಿದನು. ಇದೇ ಆ ರಾಮೇಶ್ವರದ ಲಿಂಗವಾಗಿದೆ. ಸ್ಥಳೀಯ ಜನರು ಅದನ್ನು ರಾಮನಾಥಸ್ವಾಮಿ ಎಂದು ಕರೆಯುತ್ತಾರೆ.

ಮಾರುತಿಯು ಮರಳಿ ಬಂದಾಗ ಅವನಿಗೆ ಶ್ರೀರಾಮನು ಲಿಂಗವನ್ನು ಸ್ಥಾಪಿಸಿರುವುದನ್ನು ಕಂಡು ಬಹಳ ದುಃಖವಾಯಿತು. ಆಗ ರಾಮನು ಮಾರುತಿಗೆ ತಾನು ಸ್ಥಾಪಿಸಿದ ಲಿಂಗದ ಹತ್ತಿರವೇ ಅವನು ತಂದ ಲಿಂಗವನ್ನು ಸ್ಥಾಪಿಸಲು ಹೇಳಿದನು. ಅಲ್ಲದೇ, ಮಾರುತಿ ಸ್ಥಾಪಿಸಿದ ಲಿಂಗದ ದರ್ಶನ ಪಡೆಯದೇ ಇದ್ದರೆ ಭಕ್ತರಿಗೆ ರಾಮೇಶ್ವರ ದರ್ಶನದ ಫಲ ದೊರೆಯಲಾರದು ಎಂದೂ ಹೇಳಿದನು. ಈ ಲಿಂಗಕ್ಕೆ ಕಾಶಿವಿಶ್ವನಾಥ ಅಥವಾ ಹನುಮದೀಶ್ವರ ಎಂದು ಕರೆಯುತ್ತಾರೆ.

Friday, March 22, 2019

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -99


ಮದುರೈ(Madurai)


ಭಾರತ ಪರ್ಯಾಯ ದ್ವೀಪದ ಅತ್ಯಂತ ಹಳೆಯ ನಗರ ಇದು ದಕ್ಷಿಣ ಭಾರತದ ತಮಿಳು ನಾಡು ರಾಜ್ಯದಲ್ಲಿರುವ ನಗರ ಮತ್ತು 2ನೆಯ ಅತ್ಯಂತ ದೊಡ್ಡ ನಗರ ಇದು ವೈಗಾಯ್ ನದಿಯ ತೀರದಲ್ಲಿ ಸ್ಥಿತವಾಗಿದೆ. ಮದುರೈ ನಗರವನ್ನು ಅನೇಕ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳು ದೇಗುಲ ನಗರಿ, ಕೂಡಲ್ ಮಾನಗರ್(ತಮಿಳು ನಾಡಿನ ಸಾಂಸ್ಕೃತಿಕ ನಗರಿ), ಮಲ್ಲಿಗೈ ಮಾನಗರ್ (ಮಲ್ಲಿಗೆ ನಗರ), ಥೂಂಗ ನಗರಂ (ನಿದ್ದೆಯಿಲ್ಲದಿರುವ ನಗರ) ಮತ್ತು ಪೂರ್ವದ ಅಥೆನ್ಸ್. ಇದು ಮದುರೈ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ 2001ರ ಜನಗಣತಿಯ ಪ್ರಕಾರ 1,203,095ರಷ್ಟು ಜನಸಂಖ್ಯೆ ಇದೆ. ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದುದಲ್ಲದೇ ಕ್ರಿಸ್ತ ಪೂರ್ವ 550 ಗಳಷ್ಟು ಪ್ರಾಚೀನ ಕಾಲದಿಂದ ರೋಮ್‌ ಮತ್ತು ಗ್ರೀಸ್‌ ರಾಷ್ಟ್ರಗಳ ಜೊತೆಗೆ ಸಂಪರ್ಕವಿರಿಸಿಕೊಂಡಿತ್ತು.

ಪಾಂಡ್ಯರ ರಾಜಧಾನಿಯಾಗಿದ್ದ ಮದುರೈ  ಸಂಗಮ್‌ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌‌ನ ತಿರುವಿಲಾಯದಲ್‌ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ 3ನೇ ಶತಮಾನ BCಯಷ್ಟು ಪ್ರಾಚೀನ ಕಾಲದಲ್ಲಿ ಮೆಗಾಸ್ತನೀಸ್‌ ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್‌ ಮತ್ತು ಗ್ರೀಸ್‌ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರುಪಾಂಡ್ಯರ ರಾಜಧಾನಿಯಾಗಿದ್ದ ಮದುರೈ  ಸಂಗಮ್‌ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌‌ನ ತಿರುವಿಲಾಯದಲ್‌ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ 3ನೇ ಶತಮಾನ BCಯಷ್ಟು ಪ್ರಾಚೀನ ಕಾಲದಲ್ಲಿ ಮೆಗಾಸ್ತನೀಸ್‌ ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್‌ ಮತ್ತು ಗ್ರೀಸ್‌ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರು

ಇಂತಹಾ ನಗರದಲ್ಲಿ  ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನ ಅಥವಾ ಮೀನಾಕ್ಷಿ ಅಮ್ಮನ್ ದೇವಸ್ಥಾನವು  ಒಂದು ಐತಿಹಾಸಿಕ ಹಿಂದು ದೇವಾಲಯವಾಗಿದೆ. ಇದು ಶಿವ ದೇವರಿಗೆ (ಸುಂದರೇಶ್ವರರ್‌ ಅಥವಾ ಸುಂದರ ದೇವರ ರೂಪದಲ್ಲಿ) ಮತ್ತು ಅವನ ಪತ್ನಿ ಪಾರ್ವತಿಗೆ (ಮೀನಾಕ್ಷಿ ರೂಪದಲ್ಲಿ) ಸಮರ್ಪಿತವಾಗಿದೆ. ಈ ದೇವಸ್ಥಾನವು ೨೫೦೦ ವರ್ಷ ಪುರಾತನ ನಗರ ಮಧುರೈನ ಹೃದಯಭಾಗ ಮತ್ತು ಜೀವಾಧಾರವಾಗಿದೆ. 

ಸೂಕ್ಷ್ಮಪರಿಶೀಲನೆಯಿಂದ ಕೆತ್ತಿದ ಮತ್ತು ಬಣ್ಣಬಳಿದ ಪ್ರಮುಖ ದೇವರುಗಳಿರುವ ಎರಡು ಬಂಗಾರದ ಗೋಪುರಗಳನ್ನೂ ಒಳಗೊಂಡಂತೆ ಈ ಸಂಕೀರ್ಣವು ೧೪ ಭವ್ಯವಾದ ಗೋಪುರಗಳನ್ನು ಹೊಂದಿದೆ. ಈ ದೇವಸ್ಥಾನವು ತಮಿಳರ ಮಹತ್ವಪೂರ್ಣ ಸಂಕೇತವಾಗಿದೆ, ಹಾಗೂ ಪ್ರಾಚೀನ ಕಾಲದಿಂದ ತಮಿಳು ಸಾಹಿತ್ಯದಲ್ಲಿ ಸೂಚಿಸಲ್ಪಟ್ಟಿದೆ. ಆದರೆ ಪ್ರಸ್ತುತವಿರುವ ರಚನೆಯನ್ನು ೧೬೦೦ರಲ್ಲಿ ನಿರ್ಮಿಸಿರುವುದೆಂದು ನಂಬಲಾಗಿದೆ. ದೇವಸ್ಥಾನದ ಗೋಪುರವು 51.9 ಮೀಟರ್ )ನಷ್ಟು ಎತ್ತರವಿದೆ.



ಜಗತ್ತಿನ ಅತಿ ಪ್ರಾಚೀನ ಪಟ್ಟಣಗಳ ಪೈಕಿ ಮದುರೈ ಸಹ ಒಂದು. 2,500 ವರ್ಷಗಳಷ್ಟು ಇತಿಹಾಸವಿರುವ, ಎಂದಿಗೂ ನಿದ್ರಿಸಲಾರದ ಎಂಬ ಬಿರುದು ಪಡೆದ್ರುವ ಈ ನಗರದ ಮುಖ್ಯ ಹೆಗ್ಗುರುತಾಗಿದೆ ಮೀನಾಕ್ಷಿ ಅಮ್ಮನವರ ದೇವಾಲಯ. ಅಲ್ಲದೆ ತಮಿಳಿನ ಅತಿ ಪುರಾತನ ಸಾಹಿತ್ಯದಲ್ಲಿ ಈ ದೇವಾಲಯದ ಕುರಿತು ಉಲ್ಲೇಖವಿದೆ. ಹೀಗಾಗಿ ತಮಿಳಿಗರಿಗೆ ಸಾಕಷ್ಟು ಮಹತ್ವವಾಗಿದೆ

***

ಮೀನು ಹಾಗೂ ಅಕ್ಷಿಗಳ ಸಮಾಗಮದಿಂದ ವ್ಯುತ್ಪತ್ತಿಯಾದ ಮೀನಾಕ್ಷಿ ಪದವು ಮೀನಿನಂತೆ ಕಣ್ಣುಗಳುಳ್ಳ ಎಂಬ ವಿವರಣೆಯನ್ನು ನೀಡುತ್ತದೆ. ಅಂದರೆ ಮೀನಾಕ್ಷಿ ದೇವಿಯು ಮೀನಿನಂತೆ ಕಣ್ಣುಗಲಿಂದ ಕಂಗೊಳಿಸುವ ಸುಂದರ ಸ್ತ್ರೀಯಾಗಿ ಕಂಡುಬರುತ್ತಾಳೆ. ಅಲ್ಲದೆ ಇಲ್ಲಿ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವಂತೆ ಶಿವನು ಮುಖ್ಯ ದೇವನಾಗಿರದೆ ಮೀನಾಕ್ಷಿ ದೇವಿಯೆ ಪ್ರಧಾನ ದೇವತೆಯಾಗಿರುವುದು ವಿಶೇಷ.

ಹಿಂದೆ ಮಲಯಧ್ವಜ ಪಾಂಡ್ಯ ರಾಜನ ಪತ್ನಿಯಾದ ಕಂಚನಮಲೈಳಿಗೆ ಹಿಂದಿನ ಜನ್ಮದಲ್ಲಿ ಕನಸೊಂದರಲ್ಲಿ ಸ್ವತಃ ಪಾರ್ವತಿಯೆ ಪ್ರತ್ಯಕ್ಷಳಾಗಿ ಅವಳು ಮುಂದಿನ ಜನ್ಮದಲ್ಲಿ ದೇವಿಯೊಬ್ಬಳ ತಾಯಿಯಾಗುತ್ತಾಳೆಂದು ಹೇಳಿದ್ದಳಂತೆ.

ಅದರಂತೆ ಮುಂದೆ ಕಾಂಚನಮಲೈ ಮಲಯಧ್ವಜನ ಮಡದಿಯಾಗಿ ಸಂತಾನ ಬಯಸುತ್ತಿರುವಾಗ ರಾಜನು ಪುತ್ರ ಕಾಮೇಷ್ಠಿ ಯಜ್ಞವನ್ನು ನಡೆಸುತ್ತಾನೆ. ಆ ಯಜ್ಞ ನಡೆಸುತ್ತಿರುವಾಗ ಅಗ್ನಿಯಿಂದ ಪಾರ್ವತಿ ದೇವಿಯು ಹುಡುಗಿಯ ರೂಪದಲ್ಲಿ ಹೊರಬರುತ್ತಾಳೆ. ವಿಚಿತ್ರವೆಂದರೆ ಆ ಹುಡುಗಿಗೆ ಎರಡರ ಬದಲು ಮೂರು ಸ್ತನಗಳಿರುತ್ತವೆ.
ಇದನ್ನು ಕಂಡು ರಾಜ ಅಚ್ಚರಿ ಪಡುವಾಗ, ಅಶರೀರವಾಣಿಯೊಂದು ಆಗಸದಿಂದ "ಎಲೈ ರಾಜನೆ ಹುಡುಗಿಯ ಈ ರೀತಿಯ ಅಸ್ವಾಭಾವಿಕ ದೇಹರಚನೆಗೆ ಚಿಂತಿಸಬೇಕಾಗಿಲ್ಲ, ಅವಳು ತನ್ನ ಬಾಳಿನ ಪತಿಯನ್ನು ಕಂಡೊಡನೆಯೆ ಮೂರನೇಯ ಸ್ತನ ತನ್ನಿಂದ ತಾನೆ ಅಳಿಸಿ ಹೋಗುತ್ತದೆ". ಹೀಗಾಗಿ ರಾಜ ಯಾವ ಚಿಂತೆ ಮಾಡದೆ ಪುತ್ರಿಗೆ ತಡಾತಗೈ ಎಂಬ ನಾಮಕರಣ ಮಾಡಿ ಅತಿ ಪ್ರೀತಿಯಿಂದ ಬೆಳೆಸುತ್ತಾನೆ.

ಮೊದಲೆ ಹುಡುಗಿಯು ಪಾರ್ವತಿಯ ಮರು ಅವತಾರ. ಹೀಗಾಗಿ ಸಕಲ ಶಸ್ತ್ರಾದಿಗಳನ್ನು, ಯುದ್ಧ ವಿದ್ಯೆಗಳನ್ನು ಅತಿ ಸರಾಗವಾಗಿ ಹಾಗೂ ಅಷ್ಟೆ ಪರಿಣಾಮಕಾರಿಯಾಗಿ ಕಲೆಯುತ್ತಾಳೆ. ಹೀಗೆ ಬೆಳೆದ ತಡಾತಗೈ ನಾಲ್ಕು ಲೋಕಗಳಾದ ಬ್ರಹ್ಮಲೋಕ, ವೈಕುಂಠ, ಅಮರಾವತಿ ಹಾಗೂ ಕೈಲಾಸಗಳನ್ನು ವಶಪಡಿಸಿಕೊಳ್ಳುಲು ಮುನ್ನುಗುತ್ತಾಳೆ.

 ತಡಾತಗೈ ಪಾರ್ವತಿಯ ಅವತಾರವೆ ಆಗಿರುವುದರಿಂದ ಎಲ್ಲ ಮೂರು ಲೋಕಗಳನ್ನು ಅತಿ ಸುಲಭವಾಗಿ ಗೆದ್ದು ಕೊನೆಯದಾಗಿ ಕೈಲಾಸಕ್ಕೆ ತೆರಳುತ್ತಾಳೆ. ಅಲ್ಲಿಯೂ ಸಹ ಭೂತ ಗಣರನ್ನು, ನಂದಿಯನ್ನು ಬಲು ಸುಲಭವಾಗಿ ಸೋಲಿಸುತ್ತಾಳೆ. ಕೊನೆಯದಾಗಿ ಶಿವನನ್ನು ಗೆಲ್ಲಲು ಅವನ ಹತ್ತಿರ ತೆರಳಿದಾಗ ಅವಳಿಗೆ ಏನೂ ಮಾಡಲಾಗದೆ ಶಿವನಲ್ಲಿ ಪ್ರೀತಿಯುಂಟಾಗಿ ನಾಚಿಕೊಂಡು ಬಿಡುತ್ತಾಳೆ. ತತ್ ಕ್ಷಣವೆ ಅವಳ ಮೂರನೇಯ ಸ್ತನವು ಮಾಯವಾಗಿ ಹೋಗುತ್ತದೆ. ಇದರಿಂದ ಶಿವನೆ ತನ್ನ ಪತಿಯೆಂಬ ಸತ್ಯ ತಿಳಿದು ಶಿವನೊಡನೆ ಮದುವೆಯಾಗಲು ಮದುರೈಗೆ ಆಗಮಿಸುತ್ತಾಳೆ ತಡಾತಗೈ. ಕೊನೆಯಲ್ಲಿ ಇವರಿಬ್ಬರ ಮದುವೆಯು ಸಕಲ ದೇವರುಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ವಿಷ್ಣು ಮೀನಾಕ್ಷಿಯ ತಮ್ಮನಾಗಿ ಈ ಮದುವೆಯನ್ನು ನಡೆಸಿಕೊಡುತ್ತಾನೆ. ನಂತರ ಶಿವನು ಸುಂದರೇಶ್ವರನಾಗಿಯೂ, ತಡಾತಗೈ ಮೀನಾಕ್ಷಿಯಾಗಿಯೂ ಮದುರೈನಲ್ಲಿ ನೆಲೆಸುತ್ತಾರೆ.
 ಇಂದಿಗೂ ಪ್ರತಿ ದಿನ ರಾತ್ರಿ ದೇವಾಲಯ ಮುಚ್ಚುವ ಮೊದಲು ಸುಂದರೇಶ್ವರನ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಿಯ ಕೊಣೆಗೆ ಕೊಂಡೊಯ್ಯಲಾಗುತ್ತದೆ. ಇದು ಅವರಿಬ್ಬರ ಮಿಲನದ ಸಂಕೇತವಾಗಿದೆ. ನಂತ್ರ ಮರು ದಿನ ನಸುಕಿನ ಜಾವದಲ್ಲಿ ಸುಂದರೇಶ್ವರನನ್ನು ದೇವಿಯ ಕೋಣೆಯಿಂದ ಮತ್ತೆ ಮರಳಿ ತರಲಾಗುತ್ತದೆ.

ವರ್ಷದಲ್ಲಿ ಇವರಿಬ್ಬರ ಕಲ್ಯಾಣ ಮಹೋತ್ಸವವನ್ನು ಬಲು ಸಡಗರದಿಂದ ಆಚರಿಸಲಾಗುತ್ತದೆ. ಈ ಉತ್ಸವ ಸಾಮಾನ್ಯವಾಗಿ ಎಪ್ರಿಲ್-ಮೇ ಸಂದರ್ಭದಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ.

***

1812 ರಿಂದ 1828 ರಲ್ಲಿ ಪ್ರಸ್ತುತ ತಮಿಳುನಾಡಿನ ಮದುರೈಗೆ ಕಲೆಕ್ಟರ್ ಆಗಿ ರೋಸ್ ಪೀಟರ್ ಎಂಬ ಬ್ರಿಟೀಷ್ ಕಲೆಕ್ಟರ್ ನೇಮಕಗೊಂಡಿದ್ದರು. ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರೂ ಸಹ ಹಿಂದೂ ಧರ್ಮಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಿದ್ದರು ಮತ್ತು ಸ್ಥಳೀಯ ಪದ್ಧತಿಗಳಿಗೆ ಹೆಚ್ಚು ಗೌರವ ಸೂಚಿಸುತ್ತಿದ್ದರು.

ರೋಸ್ ಪೀಟರ್ ಅವರು ಎಲ್ಲಾ ಧರ್ಮದವರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು ಎಂದು ಹೇಳುತ್ತಾರೆ. ಅವರ ಈ ನಡವಳಿಕೆಯಿಂದಾಗಿ ಅವರ ಹೆಸರು ಹೆಚ್ಚು ಪ್ರಚಲಿತವಾಯಿತು.

ತಮಿಳುನಾಡಿನ ಪ್ರಸಿದ್ಧ ಮೀನಾಕ್ಷಿ ಅಮ್ಮನ ದೇವಸ್ಥಾನವು ಪೀಟರ್ ಅವರ ಮನೆ ಹಾಗೂ ಕಚೇರಿಯ ನಡುವೆ ಇತ್ತು. ಈ ಕಾರಣದಿಂದಾಗಿ ಅವರು ದಿನವೂ ತಮ್ಮ ಕಚೇರಿಗೆ ಹೋಗುವಾಗ ಮೀನಾಕ್ಷಿ ಅಮ್ಮನ ದೇವಸ್ಥಾನದ ಮೂಲಕ ಹಾದು ಹೋಗಬೇಕಾಗಿತ್ತು, ಅವರು ದಿನವೂ ಕುದುರೆಯ ಮೇಲೆ ಹೋಗುತ್ತಿದ್ದರು, ಮೀನಾಕ್ಷಿ ಅಮ್ಮನ ದೇವಸ್ಥಾನ ಬಂದಾಗ, ಅವರು ಕುದುರೆಯಿಂದ ಕೆಳಗಿಳಿದು, ತಮ್ಮ ಹ್ಯಾಟ್ ಮತ್ತು ಶೂಗಳನ್ನು ತೆಗೆದು ತಮ್ಮ ಬರಿಗಾಲಿನಲ್ಲಿಯೇ ನಡೆದುಕೊಂಡು ಹೋಗುತ್ತಿದ್ದರು. ಈ ಮೂಲಕ ಅವರು ಮೀನಾಕ್ಷಿ ಅಮ್ಮನಿಗೆ ತಮ್ಮ ಗೌರವವನ್ನು ಸೂಚಿಸುತ್ತಿದ್ದರು.

ಒಂದು ದಿನ ಮದುರೈ ನಗರದಲ್ಲಿ ಹೆಚ್ಚು ಮಳೆ ಪ್ರಾರಂಭವಾಯಿತು. ಕಲೆಕ್ಟರ್ ಅವರು ತಮ್ಮ ಮನೆಯಲ್ಲಿ ಮಲಗಿದ್ದರು, ಆಕಸ್ಮಿಕವಾಗಿ ಅವರಿಗೆ ಕಾಲಂದಿಗೆಯ ಶಬ್ದದಿಂದ ಎಚ್ಚವಾಯಿತು, ಅವರು ತಮ್ಮ ಹಾಸಿಗೆಯಿಂದ ಎದ್ದು ಶಬ್ದ ಎಲ್ಲಿನಿಂದ ಬರುತ್ತಿದೆ ಎಂದು ನೋಡಿದರು. ಅವರ ಕಣ್ಣಿಗೆ ಒಬ್ಬ ಆಭರಣಗಳನ್ನು ಧರಿಸಿರುವ ಹುಡುಗಿ ಕಾಣಿಸಿತು ಮತ್ತು ಇವರನ್ನು 'ಪೀಟರ್ ಹೊರಗೆ ಬಾ' ಎಂದು ಕರೆಯುತ್ತಿರುವುದು ಕೇಳಿಸಿತು. ಅದನ್ನು ಕೇಳಿಸಿಕೊಂಡು ಅವರು ಮನೆಯಿಂದ ತಕ್ಷಣವೇ ಹೊರಬಂದು ಆ ಓಡುತ್ತಿದ್ದ ಹುಡುಗಿಯನ್ನು ಮಳೆಯಲ್ಲಿಯೇ ಹಿಂಬಾಲಿಸಿದರು. ನಂತರ ತಕ್ಷಣವೇ ಅವರ ಮನೆಯು ಕೆಲವೇ ಕ್ಷಣಗಳಲ್ಲಿ ಕುಸಿದು ಬಿತ್ತು. ನಂತರ ಅವರು ಹಿಂತಿರುಗಿ ನೋಡಿದರೆ ಆ ಹುಡುಗಿ ಓಡುತ್ತಿರುವಂತೆ ಮಾಯವಾದಳು. ಆ ವೇಳೆಯಲ್ಲಿ ಪೀಟರ್ ಅವರು ಆ ಹುಡುಗಿ ಕಾಲಿನಲ್ಲಿ ಅಂದಿಗೆಯೊಂದಿಗೆ ಬರಿಗಾಲಿನಲ್ಲಿ ಯಾವುದೇ ಪಾದುಕೆಗಳಿಲ್ಲದೆಯೇ ಓಡುತ್ತಿರುವುದನ್ನು ಗಮನಿಸಿದರು. ಅವರು ಸಾಕ್ಷಾತ್ ಮೀನಾಕ್ಷಿ ಅಮ್ಮನೇ ತಮ್ಮ ಪ್ರಾಣವನ್ನು ಉಳಿಸಿದಳು ಎಂದು ಅರಿತುಕೊಂಡರು ಮತ್ತು ನಂಬಿದರು.

ಕೆಲವು ದಿನಗಳ ನಂತರ ಮೀನಾಕ್ಷಿ ಅಮ್ಮನಿಗೆ ದೇವಸ್ಥಾನದಲ್ಲಿ ಇಲ್ಲದ ಯಾವುದಾದರೂ ಕಾಣಿಕೆಯನ್ನು ನೀಡಬೇಕೆಂದು ಬಯಸಿದರು. ಇದರ ಕುರಿತು ತಿಳಿದುಕೊಳ್ಳಲು ಅವರು ದೇವಸ್ಥಾನದ ಅರ್ಚಕರ ಬಳಿ ಚರ್ಚಿಸಿ ಒಂದು ಜೊತೆ ಬಂಗಾರದ ಪಾದುಕೆಗಳನ್ನು ಮಾಡಿಸಿಕೊಡುವುದಾಗಿ ಒಪ್ಪಿಕೊಂಡರು. ಇವರು ಮಾಡಿಸಿಕೊಟ್ಟಂತಹ ಪಾದುಕೆಗಳು 412 ಮಾಣಿಕ್ಯ ಕಲ್ಲುಗಳು ಮತ್ತು 80 ವಜ್ರಗಳನ್ನು ಹೊಂದಿದೆ ಮತ್ತು ಅವರ ಹೆಸರು 'ಪೀಟರ್' ಎಂದು ಪಾದುಕೆಗಳ ಕೆಳಭಾಗದಲ್ಲಿ ಕೆತ್ತಲಾಗಿದೆ. ಈಗಲೂ ಸಹ ಆ ಪಾದುಕೆಗಳನ್ನು 'ಪೀಟರ್ ಪಾದುಕಂ' ಎಂದು ಕರೆಯಲಾಗುತ್ತದೆ.

ಆ ಪಾದುಕೆಗಳನ್ನು ಈಗಲೂ ಸಹ ದೇವಸ್ಥಾನದಲ್ಲಿ ಕಾಪಾಡಲಾಗಿದೆ ಮತ್ತು ಪ್ರತಿ ವರ್ಷ 'ಚಿತ್ರಾ ಉತ್ಸವ' ಸಮಯದಲ್ಲಿ, ಈ ಪಾದುಕೆಗಳನ್ನು ಉತ್ಸವ ಮೂರ್ತಿ ಮೀನಾಕ್ಷಿ ಈ ಪಾದುಕೆಗಳನ್ನು ತೊಡುತ್ತಾಳೆ.





Friday, February 22, 2019

ಧರ್ಮಸ್ಥಳಕ್ಕೆ ಬಾಹುಬಲಿ ಬಂದಿದ್ದು ಹೇಗೆ ಗೊತ್ತಾ?

ಸರ್ವ ಧರ್ಮಗಳ ಜನರನ್ನು ಏಕ ರೀತಿಯಲ್ಲಿ ಕಾಣುವ ಶಾಂತಿಧಾಮ ಕರುನಾಡಿನ ಧರ್ಮಸ್ಥಳ ಕ್ಷೇತ್ರ. ಅಲ್ಲಿನ ಮಂಜುನಾಥ ಸ್ವಾಮಿ ಸತ್ಯ, ನ್ಯಾಯಕ್ಕೆ ಹೆಸರಾಗಿದ್ದಾನೆ. ಇದೇರೀತಿ ಅಲ್ಲಿನ ಹೆಗ್ಗಡೆ ಕುಟುಂಬ ಸಹ "ಮಾತು ಬಿಡ ಮಂಜುನಾಥ" ಎಂದೇ ಖ್ಯಾತಿ ಗಳಿಸಿದ ವೀರೇಂದ್ರ ಹೆಗ್ಗಡೆ ಹಾಗೂ ಅವರ ಹಿಂದಿನ ತಲೆಮಾರು ಹಲವು ಶತಮಾನಗಳಿಂದ ಧರ್ಮ ಪರಿಪಾಲನೆ ಕಾರ್ಯ ಮಾಡುತ್ತಾ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇದೀಗ ಇಂದಿನಿಂದ ಧರ್ಮಸ್ಥಳದಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದ್ದು ಇದರ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಬಾಹುಬಲಿ ಆಗಮನ ಹೇಗಾಯಿತೆಂಬ ವಿಚಾರವನ್ನು ಸಂಕ್ಷಿಪ್ತವಾಗಿ ತಿಳಿಯಲು ಪ್ರಯತ್ನಿಸೋಣ.
 
170 ಟನ್ ತೂಕದ ಈ ಪ್ರತಿಮೆ ಕಾರ್ಕಳದಲ್ಲಿ ಸೃಷ್ಟಿಯಾಗಿದ್ದು ಧರ್ಮಸ್ಥಳದಲ್ಲಿ ಸ್ಥಾಪನೆಗೊಳ್ಳುವವರೆಗಿನ ಕಥೆ ರೋಚಕವಾದದ್ದು.ಅದರ ನಿರ್ಮಾಣದ ಹಿಂದೆ ವೀರೇಂದ್ರ ಹೆಗ್ಗಡೆಯವರ ತಾತ ಹಾಗೂ ತಂದೆಯವರಾದ ಮಂಜಯ್ಯ ಹೆಗ್ಗಡೆ,.ರತ್ನವರ್ಮ ಹೆಗ್ಗಡ ಅವರ ಕನಸಿದೆ ರತ್ನವರ್ಮ ಹೆಗ್ಗಡೆ ಮತ್ತು ಅವರ ಪತ್ನಿ ರತ್ನಮ್ಮನವರಿಗೆ ಕಾರ್ಕಳ, ವೇಣೂರು ಬಾಹುಬಲಿಗಳ ಮಹಾಮಸ್ತಕಾಭಿಷೇಕಗಳ ಕಂಡು ನಲ್ಯಾಡಿಬೀಡಿನಲ್ಲಿ ಸಹ ಬಾಹುಬಲಿ ಸ್ಥಾಪನೆಯಾಗಬೇಕೆಂದು ಪ್ರೇರಣೆಯಾಗಿತ್ತು. ಇದಕ್ಕಾಗಿ ಅವರು ಕಾರ್ಕಳ ಸಮೀಪದ ಮಂಗಳಪಾದ ಎಂಬಲ್ಲಿ 100 ಅಡಿ ಎತ್ತರ, 48 ಅಡಿ ಅಗಲದ ಬಂಡೆ ಗುರುತಿಸಿ ಬಾಹುಬಲಿ ಮೂರ್ತಿ ಕಡೆಯಲು ಮಹೂರ್ರ್ತ ನಿಗದಿಪಡಿಸಿದ್ದರು. 1967ರ ವಿಜಯ ದಶಮಿಯಂದು ಶಾಸ್ತ್ರೋಕ್ತವಾಗಿ ಮೂರ್ತಿ ಕೆತ್ತನಾ ಕಾರ್ಯ ಪ್ರಾರಂಬವಾಗಿತ್ತು.
 
6 ಅಡಿ ಉದ್ದದ ಮುಖ, 1 ಅಡಿ ಕುತ್ತಿಗೆ, 22.3 ಅಡಿಗಳ ತೋಳುಗಳು, 19.5 ಅಡಿಗಳ ಸೊಂಟದ ಸುತ್ತಳತೆ, 13 ಅಡಿಗಳ ಬೆನ್ನಿನ ಭಾಗ, 13.5 ಅಡಿಗಳ ಭುಜದ ಅಗಲ, 1.4 ಅಡಿಗಳ ದಪ್ಪ ಪಾದನೆಗಳು, 1 ಅಡಿ ಹೆಬ್ಬೆರಳು, 3.5 ಅಡಿಗಳ ಕಿವಿಗಳು, ಹಾಗೂ 1.10 ಅಡಿಗಳ ಮೂಗು, ವಿಗ್ರಹವು ಪಾದದಿಂದ ನೆತ್ತಿಯವರೆಗೆ 39 ಅಡಿಗಳು ಎತ್ತರ ಪೀಠ 13 ಅಡಿ ಪೀಠ ಸಹಿತ ವಿಗ್ರಹದ ಎತ್ತರ 52 ಅಡಿ ಬಾಹುಬಲಿ ನಿರ್ಮಾಣವಾಗಿದ್ದ. ರೆಂಜಾಳ ಗೋಪಾಲಶಣೈ ಎಂಬುವವರು ಇದನ್ನು ಕೆತ್ತಿದ್ದರು 
 
ಕಾರ್ಕಳದಿಂದ 69 ಕಿಮೀ ದೂರದ ಧರ್ಮಸ್ಥಳಕ್ಕೆ 1973ರ ಫೆ.15ರಂದು ಪ್ರಯಾಣ ಪ್ರಾರಂಭಿಸಿದ ಬಾಹುಬಲಿ .ಮೂರು ದಿನಗಳ ಕಾಲ ಪ್ರಯಾಣ ಮಾಡಿ ಫೆ.18ಕ್ಕೆ ಧರ್ಮಸ್ಥಳ ಸೇರಿದನು. ಆದರೆ. ವಿಗ್ರಹವನ್ನು ರತ್ನಗಿರಿ ಬೆಟ್ಟದಲ್ಲಿ ನಿಲ್ಲಿಸಿ ಪ್ರತಿಷ್ಠಾಪನೆ ಮಹೋತ್ಸವ ನೆರವೇರಲು ಮತ್ತೆ ನಾಲ್ಕು ವರ್ಷ ಹಿಡಿದಿತ್ತು.1982ರಲ್ಲಿ  ಈ ಕಾರ್ಯ ಯಶಸ್ವಿಯಾಗಿ ಮುಗಿದು ಮೊದಲ ಮಸ್ತಕಾಭಿಷೇಕ ನಡೆದಿತ್ತು.
ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ಸಾಗಿಸಿದ್ದು ಸಹ ರೋಚಕ ಗಾಥೆಯಾಗುತ್ತದೆ. ಕಾರ್ಕಳ-ಧರ್ಮಸ್ಥಳದ ಮಾರ್ಗದುದ್ದ್ದಕ್ಕೂ ಜನರು ಲಕ್ಷ ಸಂಖ್ಯೆಯಲ್ಲಿ ಸೇರಿ ಜಯಘೋಷಗಳನ್ನು ಹಾಕಿ ಬಾಹುಬಲಿಗೆ ಸ್ವಾಗತ ಕೋರುತ್ತಿದ್ದರು. ಮುಂಬೈ ಮೂಲದ ಮಂಗತ್ ರಾಮ್ ಸಂಸ್ಥೆ ಈ ಬಾಹುಬಲಿ ವಿಗ್ರಹ ಸಾಗಾಟದ ಜವಾಬ್ದಾರಿ ಹೊತ್ತಿತ್ತು. ಮಾಲೀಕ ದೀನನಾಥ ಜಬಾನ್ ಈ ಸಂಸ್ಥೆಯ ಮಾಲೀಕನಾಗಿದ್ದನು. ಅದಕ್ಕಾಗಿ ದೈತ್ಯ ಗಾತ್ರದ ಟ್ರ್ಯಾಲಿ ಹಾಗೂ ಅದಕ್ಕೆ ಪೂರಕವಾಗಿರುವ ಟಯರ್ ಗಳ ನಿರ್ಮಾಣ ಮಾಡಲಾಗಿತ್ತು. 64 ಗಾಲಿಗಳುಳ್ಳ 20 ಟನ್ ಭಾರದ, 40 ಅಡಿ ಉದ್ದದ ಟ್ರ್ಯಾಲಿ ಅದಾಗಿತ್ತು
 
ನನ್ನ ಈ ಲೇಖನ  09 ಫೆ.2019 ರಂದು ಕನ್ನಡಪ್ರಭ.ಕಾಂನಲ್ಲಿ ಪ್ರಕಟವಾಗಿತ್ತು
 
 

Tuesday, January 15, 2019

ಶತಮಾನ ಕಂಡ ‘ಪಾಪು’, ಕನ್ನಡ ಕಣ್ಮಣಿ ಪಾಟೀಲ ಪುಟ್ಟಪ್ಪ

ಕರ್ನಾಟಕ, ಕನ್ನಡದ ಜನರು ಪುಟ್ಟಪ್ಪ ಎಂಬ ಹೆಸರಿನ ಇಬ್ಬರು ವ್ಯಕ್ತಿಗಳನ್ನು ಎಂದಿಗೂ ಮರೆಯುವಂತಿಲ್ಲ. ಅದರಲ್ಲಿ ಒಬ್ಬರು ಕನ್ನಡ ಸಾಹಿತ್ಯ ದಿಗ್ಗಜರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರಾದರೆ ಇನ್ನೊಬ್ಬರೇ ಕನ್ನಡ ಪತ್ರಿಕೋದ್ಯಮದ ಧೀಮಂತ ಪಾಟೀಲ ಪುಟ್ಟಪ್ಪ.
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರಿಗೆ ಇಂದು (14 2019.) ನೂರನೇ ಜನ್ಮದಿನ. ಕನ್ನಡಿಗರೆಲ್ಲರಿಗೆ `ಪಾಪು’ ಎಂದೇ ಗುರ್ತಿಸಲ್ಪಡುವ ಇವರು ಕನ್ನಡ ಪರ ಹೋರಾಟಗಳು, ಕಾಳಜಿಗಳಿಂದ ಜನಮಾನಸದಲ್ಲಿ ನೆಲೆಯಾದವರು. ಇವರ ಕನ್ನಡದ ಬಗೆಗಿನ ಮಗುವಿನಂತಹಾ ಪ್ರೀತಿ ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟ, ಅಪಾರವಾದ ಪಾಂಡಿತ್ಯ ಎಲ್ಲವೂ ಶ್ರೇಷ್ಠಮಟ್ಟದ್ದೆನ್ನುವುದರಲ್ಲಿ ಅನುಮಾನವಿಲ್ಲ. ಇಂತಹಾಮೇರು ವ್ಯಕ್ತಿತ್ವ ಇಂದು ನೂರನೇ ವಸಂತಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಯಾತ್ರೆಯ ಕಿರುಪರಿಚಯ ಇಲ್ಲಿದೆ.
14 ಜನವರಿ 1919ರಲ್ಲಿ , ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿಸಿದ ಪುಟ್ಟಪ್ಪ ಅವರ ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ.ಸ್ವಗ್ರಾಮ ಹಾಗೂ ಹಾವೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಲಿಂಗರಾಜ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆಇದ್ದಾರೆ.ವಿಜಯಪುರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಪುಟ್ಟಪ್ಪ ಅಲ್ಲಿ ಸರಿಯಾದ ಕಕ್ಷಿದಾರರು ಸಿಕ್ಕದೆ ಊಟಕ್ಕೆ ಸಹ ಪರದಾಡುವಂತಹಾ ಕಷ್ಟಕರ ಬದುಕು ನೋಡಬೇಕಾಗಿತ್ತು. ಬಳಿಕ ಅಲ್ಲಿಂದ ಜೀವನ ಅರಸಿ ಮುಂಬೈಗೆ ತೆರಳಿದ ಇವರು ಅಲ್ಲಿ ನ್ಯಾಯಾಲಯಕ್ಕಿಂತ ಹೆಚ್ಚು ಪತ್ರಿಕಾ ಕಛೇರಿಗಳಲ್ಲಿ ಸಮಯ ಕಳೆದಿದ್ದರು.
ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಅವರೊಡನೆ ಸ್ನೇಹ ಬೆಳೆಸಿದ ಪುಟ್ಟಪ್ಪ ತಾವೂ ಪತ್ರಿಕೋದ್ಯಮಿಯಾಗಬೇಕೆಂಬ ಹಂಬಲಕ್ಕೆ ಬಿದ್ದು ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎ ಪದವಿ ಪಡೆದಿದ್ದರು.
ಅಲ್ಲಿಂದ ಹಿಂತಿರುಗಿದ ಮೇಲೆ 1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ,1956ರಲ್ಲಿ ಸಂಗಮ ಮಾಸಿಕ,1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರೀ ಮಾಸಿಕ ಸೇರಿ ಣಾನಾ ಕಡೆಗಳಲ್ಲಿ ನಾನಾ ಪತ್ರಿಕೆಗಳಲ್ಲಿ ದುಡಿದ ಇವರು  ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು ಜತೆಗೆ ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡರು.
ಪತ್ರಿಕಾ ಸಂಪಾದಕರಾಗಿ ಮನೆಮಾತಾದ ಪುಟ್ಟಪ್ಪ ಸಾರ್ವಜನಿಕ ರಂಗಗಳಲ್ಲಿ ಸಹ ಸಾಕಷ್ಟು ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯ ಸಭೆಯ ಸದಸ್ಯ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸಂಸ್ಥಾಪನಾ ಅಧ್ಯಕ್ಷ, ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ನಾನಾ ಹೋರಾಟದಲ್ಲಿ ಭಾಗವಹಿಸಿದ್ದ್ದಾರೆ. ಇಷ್ಟೇ ಅಲ್ಲದೆ  ವಿದ್ಯಾರ್ಥಿಯಾಗಿದ್ದಾಗಲೇ 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಮುಖಂಡರಾಗಿ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿ ಹಾಕಿ ಆ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು., ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದ್ದ ಇವರು ನೂರರ ವಸಂತ ತಲುಪಿದ ಇಂದಿಗೂ ಕನ್ನಡದ ಪರ ಜಾಗೃತ ಮನಸ್ಸುಳ್ಳವರಾಗಿದ್ದಾರೆ.
ಸಾಹಿತಿಯಾಗಿ ನಏಕ ಪುಸ್ತಕಗಳನ್ನು ಪ್ರಕಟಿಸಿರುವ ಪುಟ್ಟಪ್ಪ ಅವರ ಪ್ರಮುಖ ಕೃತಿಗಳೆಂದು ಇವನ್ನು ಹೆಸರಿಸಬಹುದು- ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಶಿಲಾಬಾಲಿಕೆ ನುಡಿದಳು, ಗವಾಕ್ಷ ತೆರೆಯಿತು, ಸಾವಿನ ಮೇಜವಾನಿ
ಕನ್ನಡದ ಪ್ರಮುಖ ಸಾಹಿತಿ, ಪತ್ರಿಕೋದ್ಯಮಿ, ಹೋರಾಟಗಾರರಾಗಿ ಪುಟ್ಟಪ್ಪನವರ ಸಾಧನೆಗೆ ಮನ್ನಣೆಯಾಗಿ ಅನೇಕ ಗೌರವ, ಪ್ರಶಸ್ತಿಗಳು ಲಭಿಸಿದೆ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ನೃಪತುಂಗ ಪ್ರಶಸ್ತಿಗಳು ಪ್ರಮುಖವಾಗಿದೆ. ಇದಲ್ಲದೆ ಪಾಪು ಅಭಿಮಾನಿಗಳೂ ಸಮರ್ಪಿಸಿದ  ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’ ಸಹ ಅವರ ಜೀವನ ಸಾಧನೆಗೆ ಹಿಡಿದ ಕನ್ನಡಿ.
ಇಂತಹಾ ಮೇರು ವ್ಯಕ್ತಿ ಇನ್ನಷ್ಟು ವರ್ಷ ಕಾಲ ಬಾಳಲಿ, ಕನ್ನಡ ನಾಡು, ನುಡಿಗೆ ಇನ್ನಷ್ಟು ಸೇವೆ ಅವರಿಂದ ಲಭಿಸಲಿ ಎನ್ನುವುದು "ಕನ್ನಡಪ್ರಭ ಡಾಟ್ ಕಾಂ" ನ ಹಾರೈಕೆ.

(ನನ್ನ ಈ ಲೇಖನವು 14 Jan 2019 06:49 PMಗೆ "ಕನ್ನಡಪ್ರಭ ಡಾಟ್ ಕಾಂ" ನಲ್ಲಿ ಪ್ರಕಟಗೊಂಡಿದೆ)