Tuesday, April 15, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 22

ಕಮಲಶಿಲೆ(Kamalashile)

ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿನ ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಬ್ರಾಹ್ಮೀ ದುರ್ಗಾಪರಮೇಶ್ವರಿಯು ಲಿಂಗ ಸ್ವರೂಪಿಯಾಗಿ ನೆಲೆಸಿ ನಂಬಿದ ಭಕ್ತರನ್ನು ಬೆಂಬಿಡದೆ ಸಲಹುತ್ತಿದ್ದಾಳೆ. ಕರಾವಳಿ ಸೀಮೆಯ ಊರಾಗಿದ್ದರೂ ಮಲೆನಾಡಿನ ಮೂಲೆಯಲ್ಲಿರುವ ಶ್ರೀ ಕ್ಷೇತ್ರ ತನ್ನ ವಿಶಿಷ್ಟ ಪರಿಸರದಿಂದಾಗಿ ನಿಸರ್ಗ ಪ್ರಿಯರಿಗೂ ಮನಸ್ಸಿಗೆ ಮುದ ನೀಡಲಿದೆ.
ಸ್ಕಂದ ಪುರಾಣದಲ್ಲಿರುವಂತೆ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಶಕ್ತಿ ಸ್ವರೂಪಿಣಿ ಮಾತೆಯು ಪರಮೇಶ್ವರನ ಆಜ್ಞೆಯಂತೆ ತಾನು ಬ್ರಾಹ್ಮೀ ದುರ್ಗಾಪರಮೇಶ್ವರಿಯಾಗಿ ನೆಲೆಸಿದ್ದಾಳೆ.
Sri Brahmi Durgaparameshvari, Kamalashile
ಬಹಳ ವರುಷಗಳ ಹಿಂದೊಮ್ಮೆ ಸಹ್ಯಾದ್ರಿ ಖಂಡದಲ್ಲಿನ ಕುಬ್ಜಾ ನದಿಯ ತೀರದಲ್ಲಿ ಮಹಾನ್ ತಪಸ್ವಿಗಾಳಾಗಿದ್ದ ರೈಕ್ವ ಮುನಿಗಳು ಆಶ್ರಮವನ್ನು ರಚಿಸಿಕೊಂಡು ತಪಸ್ಸಿನಲ್ಲಿ ನಿರತರಾಗಿದ್ದರು. ಅದೇ ಸಮಯದಲ್ಲಿ ಅಲ್ಲಿ ಖರಾಸುರ ಹಾಗೂ ರಟ್ಟಾಸುರರಎನ್ನುವ ರಕ್ಕಸ ಸಹೋದರರು ತಪೋನಿರತರಾಗಿದ್ದ ರೈತ್ವ ಮಹರ್ಷಿಗಳು ಸೇರಿದಂತೆ ಸಾತ್ವಿಕರಿಗೆ ಉಪಟಳಗಳನ್ನು ನೀಡುತ್ತಿದ್ದರು. ಅವರುಗಳ ಈ ಉಪಟಳಾವನ್ನು ಸಹಿಸಲಾಗದೆ ಋಇ ಮುನಿಗಳ್ ತಾವು ಶ್ರೀ ಆದಿ ಪರಾಶಕ್ತಿಯನ್ನು ಬೇಡಿಕೊಳ್ಳಲಾಗಿ ಮಾತೆಯು ತಾನು ಬ್ರಾಹ್ಮೀ ದುರ್ಗಾಪರಮೇಶ್ವರಿಯ ಸ್ವರೂಪದಲ್ಲಿ ಅವತರಿಸಿ ಆ ರಕ್ಕಸರೀರ್ವರನ್ನು ಸಂಹರಿಸಿದಳು. ಬಳಿಕ ರೈತ್ವ ಮಹರ್ಷಿಗಳ ಆಶ್ರಮಕ್ಕೆ ಬಂದು ಅವರಿಗೆ ವರ ಪ್ರಸಾದವನ್ನು ಕರುಣಿಸಿದ ಶ್ರೀ ಮಾತೆಯು ಅಲ್ಲಿಯೇ ಲಿಂಗಸ್ವರೂಪದಲ್ಲಿ ನೆಲೆಸುತ್ತಾಳೆ.

***

ಬಹಳ ಹಿಂದೆ ಕೈಲಾಸದಲ್ಲಿನ ಪರಮೇಶ್ವರನ ಸಾನ್ನಿದ್ಯದಲ್ಲಿ ಪಿಂಗಳೆ ಎನ್ನುವ ಹೆಸರಿನ ನರ್ತಕಿಯು ತಾನಿ ದಿನನಿತ್ಯವೂ ನರ್ತನ ಸೇವೆಯನ್ನು ಮಾಡಿಕೊಂಡಿದ್ದಳು.
ಇಂತಿರಲು ಅದೊಂದು ದಿನ ತಾನು ಅತ್ಯಂತ ರೂಪವತಿಯಾಗಿರುವೆನೆಂಬ ಅಹಂಕಾರವು ಅವಳ ತಲೆಯನ್ನು ಹೊಕ್ಕುತ್ತದೆ. ಆ ಅಹಂಕಾರದ ನೆವದಿಂದ ಪಿಂಗಳೆಯು ತಾನು ನರ್ತಿಸುವುದಿಲ್ಲ ಎಂದು ನಿರ್ಧರಿಸುತ್ತಾಳೆ. ಇದರಿಂದ ಕೋಪಗೊಂಡ ಪಾರ್ವತಿ ದೇವ್ಯು ಪಿಂಗಳೆಗೆ “ನೀನು ಅಂಕುಡೊಂಕಿನ ಗೂನು ಬೆನ್ನಿನ ಕುರೂಪಿಯಾಗು” ಎನ್ನುವುದಾಗಿ ಶಾಪವನ್ನು ನೀಡುತ್ತಾಳೆ. ಪಿಂಗ್ಳೆಯು ತಕ್ಷಣವೇ ಅಹಂಕಾರಶೂನ್ಯಳಾಗಿ ತಾನೆಸಗಿದ ತಪ್ಪಿಗೆ ಶ್ರೀ ದೇವಿಯಲ್ಲಿ ಕ್ಷಮೆ ಕೋರಿದ್ದಲ್ಲದೆ ತನಗೊದಗಿದ ಶಾಪದ ವಿಮೋಚನೆಗಾಗಿ ಪರಿಪರಿಯಾಗಿ ಅಂಗಲಾಚುತ್ತಳೆ. ಅದರಿಂದ ಸಂಪ್ರೀತಗೊಂಡ ಶ್ರೀ ಪಾರ್ವತಿ ದೇವಿಯು “ನಾನು ಖರ ರಟ್ಟಾಸುರರ ವಧೆಗಾಗಿ ಶ್ರಾವಣ ಕೃಷ್ಣ ನವಮಿ ಶುಕ್ರವಾರದಂದು ರೈತ್ವಾಶ್ರಮದಲ್ಲಿ ಪತಾಳದಿಂದ ಲಿಂಗ ಸ್ವರೂಪಿಯಾಗಿ ಮೂಡಿ ಬರುತ್ತೇನೆ. ಅದೇ ಮುಂದೆ ‘ಕಮಲಶಿಲೆ’ ಎಂಬುದಾಗಿ ಪ್ರಸಿದ್ದ ಕ್ಷೇತ್ರವಾಗಲಿದೆ. ನೀನು ಅಲ್ಲಿಗೆ ಹೋಗಿ ಸುಪಾರ್ಶ್ವ ಗುಹಾಮುಖದಿಂದ  (ಕೃತಯುಗದಲ್ಲಿ ಸುಪಾರ್ಶ್ವ ಎನ್ನುವ ರಾಜನು ತಾನು ರಾಜಕೀಯದಿಂದ ಜಿಗುಪ್ಸೆಗೊಂಡು ತಪಸ್ಸು ಕೈಗೊಳ್ಳಬೇಕೆಂದಾಗ ಆತನಿಗೆ ಶಿವಪ್ರೇರಣೆಯಾಗಿ ತಾನು ಈ ಸ್ಥಳಕ್ಕೆ ಬಂದು ತಪಸ್ಸಿಗೆ ನಿಂತು ಮೋಕ್ಷ ಹೊಂದಿದ್ದನು. ) ಹೊರಡುವ ನಾಗತೀರ್ಥದ ಸಮೀಪದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ನನ್ನ ಅನುಗ್ರಹಕ್ಕಾಗಿ ತಪಸ್ಸನ್ನು ಮಡು” ಎನ್ನುತ್ತಾಳೆ.

ಆ ನಂತರ ದೇವಿಯ ಅನುಜ್ಞೆಯಂತೆ ನಡೆದ ಕುಬ್ಜೆಗೆ ಮುಂದೆ ಶ್ರೀ ದೇವಿಯ ಅನುಗ್ರಹವಾಗುತ್ತದೆ. ಕುಬ್ಜೆಯು ತನ್ನ ತಪಸ್ಸಿನ ಕಾರಣದಿಂದ ನದಿಯಾಗಿ ರೂಪುಗೊಂಡು ಶ್ರೀ ದೇವಿಗೆ ಅಭಿಮುಖವಾಗಿ ಹರಿದು ಪಶ್ಚಿಮ ಸಮುದ್ರವನ್ನು ಸೇರುವ ಈ ಅನ್ದಿಯು ಇಂದು ‘ಕುಬ್ಜ ನದಿ’ ಎಂದು ಪ್ರಸಿದ್ದವಾಗಿದೆ. 

Saturday, April 12, 2014

‘ದೇಶ ಮೊದಲು’ ಎಂದ ಕದನ ಕಲಿಗಳ ಆತ್ಮ ಸಮ್ಮಾನವನ್ನು ದೇನಿಸುತ್ತಾ....

ಯಾರೇ ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರುತ್ತಾನೆಂದರೆ ಆ ವ್ಯಕ್ತಿಯ ಜಾತಿ, ಧರ್ಮಗಳೇನು ಎನ್ನುವುದನ್ನು ಯಾರೊಬ್ಬರೂ ಕೇಳುವುದಿಲ್ಲ. ಬದಲಾಗಿ ಅವನಿಗಿರುವ ದೇಶಾಭಿಮಾನಕ್ಕೆ ದೇಶವಾಸಿಗಳೆಲ್ಲಾ ತಲೆದೂಗುತ್ತಾರೆ. ಸೈನ್ಯಕ್ಕೆ ಸೇರ್ಬಹುದಾದ ವ್ಯಕ್ತಿ ಯಾರೇ ಆದರೂ ಅವನ ಬಗ್ಗೆ ಇಡಿ ದೇಶವೇ ಹೆಮ್ಮೆ ಪಡುತ್ತದೆ ಏಕೆಂದರೆ ಭಾರತೀಯ ಸೇನೆ ನಿರ್ವಹಿಸುವ ಕಾರ್ಯ ಅಂತಹುದು. ಮಳೆ, ಚಳಿ, ಶೀತ ಮಾರುತ, ಬಿರು ಬಿಸಿಲು ಎನ್ನುವುದನ್ನೂ ಲೆಕ್ಕಿಸದೆ ಹಗಲಿರುಳೂ ದೇಶದ ಗಡಿ ಕಾಯುವ ಯೋಧರ ದೇಶ ನಿಷ್ಠೆಯಿಂದಾಗಿಯೇ ಇಂದು ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ.

ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ನಮಸ್ಕಾರಗಳು.

ಅದು 1999 ಮೇ ತಿಂಗಳು, ಪಾಕಿಗಳು ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿ ಮುಟ್ಟಾಗಿದ್ದ ಬಂಕರುಗಳನ್ನು ತಮ್ಮೊಂದಿಗಿಟ್ಟುಕೊಂಡಿದ್ದ ಅವರು ಭಾರತೀಯದ ಸರ್ವ ರೀತಿಯ ಧಾಳಿಗೂ ಸನ್ನದ್ದರಾಗಿದ್ದರು. ಹಳ್ಳಿಗಾಡಿನ ದನಗಾಹಿಗಳಿಂದ ಪಾಕಿಸ್ತಾನದ ಈ ಕುಟಿಲೋಪಾಯವನ್ನರಿತ ನಮ್ಮ ಸೇನೆ ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. ಶತ್ರುಪಡೆಗಳ ಸಾಮರ್ಥ್ಯದ ಅಂದಾಜಿಲ್ಲದ ನಮ್ಮವರು ಬೆಟ್ಟ ಹತ್ತಿ ಪಾಕ್ ನ ಮತಾಂಧ ಸೈನಿಕರ ಕೈಯಲ್ಲಿ ಸಿಕ್ಕಿಹಾಕಿಕೊಂಡು ಕ್ರೂರವಾದ ಹಿಂಸೆಗೆ ತುತ್ತಾದರು. ಅಷ್ಟೆ ಅಲ್ಲ ಅವರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನಾ ಶಿಬಿರಕ್ಕೆ ಹಿಂತಿರುಗಿಸಲಾಯಿತು.

ಅಂದಿನ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರವು ತಕ್ಷಣವೇ ‘ಆಪರೇಷನ್ ವಿಜಯ್’ ಹೆಸರಿನಲ್ಲಿ ಸೈನಿಕ ಕಾರ್ಯಾಚರಣೆ ನಡೆಸಲು ಆದೇಶ ನೀಡಿತು. ಆದರೆ ಅಂತಹಾ ಸೂಕ್ಷ್ಮ ಸ್ಥಿತಿಯಲ್ಲಿ ದೇಶದ ಗಡಿ ಕಾಯುತ್ತಿದ್ದ ಸೈನಿಕರ ಬಳಿ ಸರಿಯಾದ ಆಧುನಿಕ ಶಸ್ತ್ರಾಸ್ತ್ರಗಳೂ ಇರಲಿಲ್ಲ! ದೇಹ ರಕ್ಷಣೆಗೆ ಅವಷ್ಯವಾದ ಬಟ್ಟೆಗಳೂ ಇರಲಿಲ್ಲ!

ಆದರೆ ನಮ್ಮ ಸೈನಿಕರು ಎದೆಗುಂದಲಿಲ್ಲ. ಇರುವಷ್ಟೇ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ಹೊಂದಿಸಿಕೊಂಡು ಯುದ್ಧ ಪ್ರಾರಂಭಿಸಿಯೇ ಬಿಟ್ಟರು.  ಕಾರ್ಗಿಲ್ ಪಟ್ಟಣಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿರುವ ಬೆಟ್ಟ ತೋಲೋಲಿಂಗ್ ನ್ನು ಮೊದಲು ವಶಪಡಿಸಿಕೊಳ್ಲಬೇಕಿತ್ತು. ಬೆಟ್ಟದ ಬುಡದಲ್ಲಿ ನಮ್ಮ ವೀರ ಸೈನಿಕರು ಡೇರೆಗಳನ್ನು ನಿರ್ಮಿಸಿಕೊಂಡು ಸಿದ್ದರಾದರು. ಬೆಟ್ಟದ ಮೇಲೆ ಬೀಡು ಬಿಟ್ಟಿದ್ದ ಪಾಕಿಗಳ ಶಲ್ ಧಾಳಿಗೂ ಅಂಜದೆಯೇ ಧೃಢವಾಗಿ ನಿಂತು ಹೋರಾಟ ನಡೆಸಿದರು.

ಈ ಮೊದಲೇ ಹೇಳಿದಂತೆ ಪಾಕಿಸ್ತಾನದ ಸೈನಿಕರು ಎಲ್ಲಾ ಬಗೆಯಲ್ಲಿ ತಯಾರಾಗಿಯೇ ಬಂದಿದ್ದರು. ಆಧುನಿಕ ಶಸ್ತ್ರಾಸ್ತ್ರ, ಮದ್ದುಗುಂಡುಗಳ ಸಮೇತರಾಗಿ ಎಂತಹಾ ಪ್ರತಿರೋಧವನ್ನೂ ಎದುರಿಸಲು ಸಿದ್ದರಾಗಿದ್ದರು. ಒಟ್ಟಾರೆ 160 ಕಿ.ಮೀ. ವಿಸ್ತಾರಕ್ಕೆ ಇವರು ಚಾಚಿಕೊಂಡಿದ್ದರು ನಾವು ನಡೆಸಿದ ಮೊದಲ ಹಂತದ ಧಾಳಿಗಳೆಲ್ಲಾ ವಿಫಲವಾದವು. ವಾಯುಸೇನಾಬಲದೊಡನೆ ಧಾಳಿಯನ್ನು ನಡೆಸಿದಾಗಲೂ ಪಾಕಿಗಳು ತಾವು ಬಂಕರುಗಳಲ್ಲಿ ಅವಿತುಕೊಂಡು ತಮ್ಮ ಪ್ರಾಣರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ನಮ್ಮ ಅನೇಕ ಯುವ ಸೈನ್ಕ ಅಧಿಕಾರಿಗಳು ಪಾಕ್ ಪ್ರಣೀತ ಶೆಲ್ ಧಾಳಿಗಳಿಂದ ಹತರಾದರು. ಮಣ್ಜು ಮುಸುಕಿದ ಅತ್ಯಂತ ಕ್ಲಿಷ್ಟಕರ ಹವಾಮಾನ ಪರಿಸ್ಥಿತಿಯಲ್ಲಿ ಬೆಟ್ಟದ ಮೇಲೆ ಭೀಕರ ಯುದ್ಧವು ಜರುಗಿತು.


ಜುಲೈ 13 ಕ್ಕೆ ತೋಲೋಲಿಂಗ್ ನಮ್ಮ ವಶವಾಯಿತು.

ಅಲ್ಲಿಂದ ಮತ್ತೆ ನಮ್ಮ ಸೈನಿಕರು ಹಿಂಜರಿಯಲೇ ಇಲ್ಲ, ಒದೊಂದೇ ಬೆಟ್ಟವನ್ನೂ ವಶಪಡಿಸಿಕೊಳ್ಳುತ್ತಲೇ ಮುನ್ನಡೆದಂತೆ ಪಾಕಿಗಳ ಆಕ್ರಮಣ ಶಕ್ತಿ ತಗ್ಗುತ್ತಾ ಸಾಗಿತು. ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫೋರ್ಡ್ ನೋನ್‌ಗ್ರುಮ್‌ನ ನೇತೃತ್ವದಲ್ಲಿ ಸೈನಿಕರ ಪಡೆಯೊಂದು ತೋಲೋಲಿಂಗ್ ನಷ್ಟೇ ಮಹತ್ವದ್ದಾಗಿದ್ದ ಪಾಯಿಂಟ್ 4812 ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಜುಲೈ 5 ಕ್ಕೆ ಟೈಗರ್ ಹಿಲ್ ನಮ್ಮದಾಯ್ತು. ಪಾಯಿಂಟ್ 4875 ನಮ್ಮ ಕೈಸೇರಿತು

ಜುಲೈ 26 ಕ್ಕೆ ಕಾರ್ಗಿಲ್ ಶಿಖರದ ಮೇಲೆ ಭಾರತದ ವಿಜಯ ಪತಾಕೆ ಹಾರಾಡಿತು.

ವಿಕ್ರಮ್ ಭಾತ್ರಾ, ಕರ್ನಲ್ ವಿಶ್ವನಾಥನ್, ಮನೋಜ್ ಕುಮಾರ್ ಪಾಂಡೆ ಹೀಗೆ ಒಬ್ಬರಲ್ಲ, ಇಬ್ಬರಲ್ಲ, ಒಟ್ಟು 524 ಸೈನಿಕರು, ಅಧಿಕಾರಿಗಳು ತಮ್ಮ ಪ್ರಾಣತತ್ತರು.  ಜತೆಗೇ 1363 ಮಂದಿ ಗಾಯಾಳುಗಾಳಾದರು. ಈ ಭರತ ಮಾತೆಯ ಶಿರದ ಕಿರೀಟದಂತಿರುವ ಕಾಶ್ಮೀರವನ್ನು ನಮ್ಮಲ್ಲೇ ಉಳಿಸಿಕೊಟ್ಟರು

ಈ ವಿಜಯದೊಡನೆ ನಿಜಕ್ಕೂ ಭಾರತವು ಪ್ರಕಾಶಿಸಿತು!
***

ಇಷ್ಟಕ್ಕೂ ಇದೆಲ್ಲಾ ಏಕೆ ನೆನಪಾಯಿತೆಂದರೆ, ಇನ್ನೇನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ 16 ನೇ ಲೋಕಸಭೆಗೆ ಈಗಾಗಲೇ ಮತದಾನವು ಆರಂಭವಾಗಿದೆ. ಎಲ್ಲಾ ಪಕ್ಷಗಳಲ್ಲಿನ ರಾಜಕಾರಣಿಗಳು ಅಬ್ಬರದ ಪ್ರಚಾರದಲ್ಲಿ ತೊಡ್ಗಿದ್ದಾರೆ. ಒಬ್ಬರನ್ನೊಬ್ಬರು ಹಳಿಯುತ್ತಾ, ವೈಯುಕ್ತಿಕವಾದ ನಿಂದನೆಗಳನ್ನೂ ಮಾಡಿಕೊಳ್ಳುತ್ತಾ ತಮ್ಮನ್ನು ತಾವು ಇನ್ನಷ್ಟಿ ಕೆಳ ಮಟ್ಟಕ್ಕೆ ತಂದುಕೊಳ್ಳುತ್ತಿದ್ದಾರೆ.

ಇಷ್ಟೆಲ್ಲದರ ಮಧ್ಯೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಪ್ರಮುಖರೋರ್ವರು ದೇಶವೇ ಹೆಮ್ಮೆಪಡಬೇಕಾದ ಕಾರ್ಗಿಲ್ ವಿಜಯದ ವಿಚಾರವನ್ನೂ ತಮ್ಮ ಮತಯಾಚನೆಗಾಗಿ ಬಳಸಿಕೊಂಡು ಸುದ್ದಿ ಮಾಡಿದ್ದಾರೆ. ಅದಷ್ಟೆ ಅಲ್ಲದೆ ಯುದ್ದದಲ್ಲಿ ಹೋರಾಡಿದ ವೀರ ಸೈನಿಕರ ಮತ ಧರ್ಮದ ವಿಷಯವಾಗಿಯೂ ಮಾತನಾಡಿ ದೇಶದ ಸಮಗ್ರತೆಯನ್ನು ಕಾಯುವ ಪವಿತ್ರ ಕಾರ್ಯ ನಿರ್ವಹಿಸುವ ಸೈನಿಕರ ಮಧ್ಯೆಯೂ ಭೇಧ ಭಾವದ ವಿಷಬೀಜವನ್ನು ಬಿತ್ತಲು ಮುಂದಾಗಿದ್ದಾರೆ. ನಮ್ಮನ್ನಾಳಲಿಕ್ಕಿರುವವರಿಂದ ಇಂತಹಾ ಕೀಳು ಮಟ್ಟದ ಹೇಳಿಕೆಗಳನ್ನು ಮತ್ತು ಅದರಿಂದ ತಾವು ಪಡೆಯಬಯಸುವ ಬಿಟ್ಟಿ ಪ್ರಚಾರವನ್ನು ದೇಶದ ಯುವಜನತೆ ಯೆಂದಿಗೂ ಕ್ಷಮಿಸಬಾರದು.

ಸ್ನೇಹಿತರೇ ನಿಮಗೆ ಗೊತ್ತಿರಲಿ, ನಮ್ಮ ದೇಶದಲ್ಲಿ ಯಾರೇ ಒಬ್ಬ ವ್ಯಕ್ತಿ ಸೈನ್ಯಕ್ಕೆ ಸೇರುತ್ತಾನೆಂದರೆ ಆ ವ್ಯಕ್ತಿಯ ಜಾತಿ, ಧರ್ಮಗಳೇನು ಎನ್ನುವುದನ್ನು ಯಾರೊಬ್ಬರೂ ಕೇಳುವುದಿಲ್ಲ. ಬದಲಾಗಿ ಅವನಿಗಿರುವ ದೇಶಾಭಿಮಾನಕ್ಕೆ ದೇಶವಾಸಿಗಳೆಲ್ಲಾ ತಲೆದೂಗುತ್ತಾರೆ. ಸೈನ್ಯಕ್ಕೆ ಸೇರ್ಬಹುದಾದ ವ್ಯಕ್ತಿ ಯಾರೇ ಆದರೂ ಅವನ ಬಗ್ಗೆ ಇಡಿ ದೇಶವೇ ಹೆಮ್ಮೆ ಪಡುತ್ತದೆ ಏಕೆಂದರೆ ಭಾರತೀಯ ಸೇನೆ ನಿರ್ವಹಿಸುವ ಕಾರ್ಯ ಅಂತಹುದು. ಮಳೆ, ಚಳಿ, ಶೀತ ಮಾರುತ, ಬಿರು ಬಿಸಿಲು ಎನ್ನುವುದನ್ನೂ ಲೆಕ್ಕಿಸದೆ ಹಗಲಿರುಳೂ ದೇಶದ ಗಡಿ ಕಾಯುವ ಯೋಧರ ದೇಶ ನಿಷ್ಠೆಯಿಂದಾಗಿಯೇ ಇಂದು ನಾವೆಲ್ಲಾ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಒಂದು ವೇಳೆ ನಮ್ಮ ಸೈನಿಕರಲ್ಲಿ ಅಂತಹಾ ಕರ್ತವ್ಯ ನಿಷ್ಠೆ ಇಲ್ಲವಾಗಿದ್ದಲ್ಲಿ ಇಂದು ನಮ್ಮ ನಿಮ್ಮ ಮನೆಗಳ ಮೇಲೆಯೂ ಪರದೇಶವಾಸಿಗಳು ಬಾಂಬ್ ಧಾಳಿಗಳನ್ನು ನಡೆಸುತ್ತಿದ್ದರು!

ಅಂತಹಾ ಮಹಾನ್ ಅನಾಹುತಗಳಿಂದ ನಮ್ಮನ್ನೆಲ್ಲಾ ಕಾಪಾಡುತ್ತಾ ತಾನು ದೈಹಿಕವಾಗಿ, ಮಾನಸಿಕವಾಗಿ ತೊಂದರೆ ಅನುಭವಿಸಿದರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ದವಿರುವ ಇಂತಹಾ ಸೈನಿಕರ ಮಧ್ಯೆ ನಮ್ಮ ರಾಜಕಾರಣಿಗಳು ಜಾತಿ, ಧರ್ಮಗಳ ಹೆಸರಿನಲ್ಲಿ ವಿಷಬೀಜವನ್ನು ಬಿತ್ತ ಹೊರಟಿದ್ದಾರಲ್ಲ, ಇದಕ್ಕೆ ಏನೆನ್ನೋಣ?

ದೇಶ ಕಾಯುವ ಜವಾನ್ ಗಳಲ್ಲಿ ಜಾತೀಯತೆಯನ್ನು ಕಾಣುವವರಿಗೆ ಧಿಕ್ಕಾರವಿರಲಿ!

ನಮಸ್ಕಾರ

Friday, March 28, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 21

ಮಧೂರು(Madhoor)

‘ದೇವರ ಸ್ವಂತ ನಾಡು’ ಎಂದೇ ಖ್ಯಾತವಾಗಿರುವ ಕೇರಳ ರಾಜ್ಯದ ಉತ್ತರದಲ್ಲಿನ ಸುಂದರ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಿಲ್ಲೆ ಕಾಸರಗೋಡು. ಇಲ್ಲಿನ ಶ್ರೀ ಕ್ಷೇತ್ರ ಮಧೂರು ಅಲ್ಲಿನ ಮದನಂತೇಶ್ವರ ವಿನಾಯಕ ದೇವಾಲಯದಿಂದಾಗಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಸಿದ್ದಿ ಹೊಂದಿದೆ. ದೇವಾಲಯದ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಕ್ಷೇತ್ರ. ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟಗಳು ಅದರ ತಪ್ಪಲಲ್ಲಿ ಇರುವ ತೆಂಗು-ಅಡಿಕೆ ತೋಟಗಳು ಕ್ಷೇತ್ರಕ್ಕೆ ಮೆರುಗನ್ನು ನೀಡುತ್ತದೆ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ಹೊಳೆ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಮೂರು ಅಂತಸ್ತಿನಲ್ಲಿ ಇರುವುದು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಮತ್ತು ಕೆಳಗಿನ ಅಂತಸ್ತಿಗೆ ಹಂಚಿನ ಹೊದಿಕೆ. ದೇವಾಲಯದ ಸುತ್ತಲೂ ವಿವಿಧ ಕೆತ್ತನೆ ಕೆಲಸಗಳನ್ನು ಕಾಣಬಹುದು. ’ಗಜಪೃಷ್ಠ’ ಆಕಾರವು ಪ್ರಾಚೀನ ಬೌದ್ಧರ ಕೊಡುಗೆ ಎನ್ನುವ ಪ್ರತೀತಿಯಿದೆ. ಕರಾವಳಿಯ ಭಾರಿ ಮಳೆ ಮತ್ತು ಹವಾಮಾನಗಳು ಇವುಗಳ ರಚನೆಯ ಮೇಲೆ ಪ್ರಭಾವ ಬೀರಿದೆ. ಹಾಗೆ ನೇಪಾಳಿ ಶೈಲಿಯ ಪ್ರಭಾವವೂ ಇರಬಹುದು ಎಂದು ಊಹಿಸಲಾಗಿದೆ.

Madhur Sri Mahaganapathi


ಬಹಳ ವರ್ಷಗಳ ಹಿಂದೊಮ್ಮೆ ಕ್ಷೇತ್ರದ ಬಳಿಯ ಹಳ್ಲಿಯೊಂದರ ಪಕ್ಕದಲ್ಲಿ ವಾಸವಿದ್ದ ’ಮದರು’ ಎನ್ನುವ ಹೆಸರಿನ ಸ್ತ್ರೀಯೋರ್ವಳು ತನ್ನ ಗೃಹಕೃತ್ಯಕ್ಕಾಗಿ ಸೊಪ್ಪು ಕಡಿಯುತ್ತಿದ್ದ ಸಮಯದಲ್ಲಿ ಆಕೆಯ ಕತ್ತಿಯು ಶಿಲೆಯೊಂದಕ್ಕೆ ತಾಗಿ ರಕ್ತ ಹರಿಯಲು ಆರಂಭವಾಯಿತು. ಅದನ್ನು ಅವಳು ಗಾಬರಿಯಿಂದ ತನ್ನ ಮನೆಯವರಿಗೆ ತಿಳಿಸಿದಾಗ, ಅವರೆಲ್ಲ ಒಂದಾಗಿ ಸೀಮೆಯ ಅರಸರ ಬಳಿ ಹೇಳಿಕೊಂಡರು. ಅರಸರೂ ಮತ್ತು ಅಲ್ಲಿರುವವರು ಒಕ್ಕೊರಲಿನಿಂದ ’ಜಲಾಶಯವಿರುವ ಪ್ರಶಸ್ತ ಜಾಗದಲ್ಲಿ ಕಾಣಿಸಿಕೊಂಡರೆ ಮಂದಿರ ನಿರ್ಮಿಸಿ ಪೂಜಿಸುವೆವು’ ಎಂದು ಭಕ್ತಿಯಿಂದ ಪ್ರಾರ್ಥಿಸಿದಾಗ ವಿಗ್ರಹವು ಮಧುವಾಹಿನಿ ತಟದಲ್ಲಿ ಕಾಣಿಸಿಕೊಂಡಿತಂತೆ. ಆ ಪ್ರದೇಶದಲ್ಲಿ ಸ್ವಭಾವ ವೈರವನ್ನು ಮರೆತು ಹುಲಿ-ದನಗಳು ಸ್ನೇಹದಿಂದ ಇರುವುದನ್ನು ಕಂಡು ಅವರು ಇದುವೇ ಯೋಗ್ಯ ಸ್ಥಳವೆಂದು ಅಲ್ಲಿಯೇ ಮಂದಿರ ನಿರ್ಮಿಸಿ ಪೂಜಿಸತೊಡಗಿದರು. ದೇವಾಲಯದ ಹಿಂಭಾಗದಲ್ಲಿ ಈಗ ಒಂದು ಅರಳಿ ಕಟ್ಟೆಯಿದೆ. ಹುಲಿ-ದನಗಳು ವಿಶ್ರಮಿಸಿಕೊಂಡಿದ್ದನ್ನು ನೆನಪಿಸುವ ಹುಲಿ-ಕಲ್ಲನ್ನು ಅಲ್ಲಿ ಈಗಲೂ ಕಾಣಬಹುದು. ’ಮದರು’ ಎಂಬ ಹೆಸರೇ ನಂತರ ಗ್ರಾಮೀಣ ಆಡುಭಾಷೆಯಲ್ಲಿ ಮುಂದೆ ’ಮಧೂರು’ ಎಂದಾಯಿತು ಎಂಬ ನಂಬಿಕೆಯಿದೆ.


Madhur Sri Madanantheshwara Sri Mahaganapathi Temple
ಹೀಗಿರಲು ಅದೊಮ್ಮೆ ಜಾತ್ರೆಗೆಂದು ಬಂದ ದೇವಾಲಯದ ಅರ್ಚಕರ ಮಕ್ಕಳು ಗೋಡೆಯಲ್ಲಿ ಗಣಪತಿಯ ಚಿತ್ರ ಬರೆದು ಹೂಗಳಿಂದ ಅಲಂಕರಿಸಿ ಪೂಜಿಸುತ್ತಾ ಹಿರಿಯರು ಪೂಜಾಕಾರ್ಯಕ್ಕಾಗಿ ತಂದ ಅಕ್ಕಿಯ ಹುಡಿಯನ್ನು ನೀರಿನಲ್ಲಿ ಕಲಸಿ ಉಂಡೆಯಂತೆ ಮಾಡಿ ನೈವೇದ್ಯ ಮಾಡುತ್ತಾ ಶ್ರದ್ಧಾ ಭಕ್ತಿಗಳಿಂದ ಪೂಜೆಯಲ್ಲಿ ತನ್ಮಯರಾಗಿದ್ದರು. ಹಿರಿಯರು ಇದನ್ನು ಕಂಡು ಅಚ್ಚರಿಗೊಂಡು ವಿಧಿವತ್ತಾದ ಪೂಜೆ ನಡೆಸಿದರು. ಮಕ್ಕಳು ಮಾಡಿದ "ಹಸಿ ಅಕ್ಕಿ ಹುಡಿಯಿಂದ ಕಲಸಿದ ಉಂಡೆ"ಯ ಪ್ರತೀಕವಾಗಿ ಬೆಲ್ಲ ಸೇರಿಸಿದ, ಸಂಪೂರ್ಣ ಬೇಯದ "ಪಚ್ಚಪ್ಪ"ದ ನೈವೇದ್ಯ ಅಂದಿನಿಂದ ಆರಂಭವಾಯಿತು. ಮುಂದೆ ಕಡುಶರ್ಕರಪಾಕದಿಂದ ಈ ಚಿತ್ರದ ಉಬ್ಬು ಶಿಲ್ಪವನ್ನು ರಚಿಸಿ, ಅಲ್ಲಿಗೆ ಚಿಕ್ಕ ಬಾಗಿಲಿನಿಂದ ಕೂಡಿದ ಗುಡಿಯನ್ನು ನಿರ್ಮಾಣ ಮಾಡಲಾಯಿತು.  ಇಲ್ಲಿರುವುದು ಬಲಮುರಿ ಗಣಪತಿಯ ಮೂರ್ತಿಯಾಗಿದ್ದು ಮೂರ್ತಿಯ ಸೊಂಡಿಲು ಬಲಭಾಗಕ್ಕೆ ತಿರುಗಿಕೊಂಡಿದೆ. 

ಕಥೆಯಾದರು ಚಿತ್ತಾಲ

ಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಎಂದಿದ್ದ ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ
ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ


ಆತ್ಮೀಯ ಗೆಳೆಯರಿಗೆಲ್ಲಾ ನನ್ನ ನಮಸ್ಕಾರಗಳು,
ಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ  ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.
ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದಲ್ಲಿ ನವ್ಯ ಯುಗ ಪ್ರಾರಂಭಾವಾಗಿದ್ದ ಕಾಲಘಟ್ಟದಲ್ಲಿ ತಮ್ಮನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಚಿತ್ತಾಲರು ನವ್ಯ ಮಾರ್ಗದಲ್ಲಿನ ಕಥೆಗಳು, ಕಾದಂಬರಿಗಳು ಅಂದು ಸಾಕಷ್ಟು ಪ್ರಸಿದ್ದವಾಗಿದ್ದವು. ‘ಪುರುಷೋತ್ತಮ’, ‘ಛೇದ’, ‘ಶಿಕಾರಿ’ ಗಳಂತಹಾ ಪ್ರಸಿದ್ದ ಹಾಗೂ ಮಹತ್ವದ ಕಾದಂಬರಿಗಳನ್ನು ರಚಿಸಿದ್ದ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕನ್ನಡದ ಅತ್ಯಂತ ಜನಪ್ರಿಯ ಕಥಾ ಸಂಕಲನಗಳಲ್ಲಿ ಒಂದು.
ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕುಮಟಾದ ಹನೇಹಳ್ಳಿಯವರಾದ ಚಿತ್ತಾಲರು ತಮ್ಮ ಜೀವನದ ಅರ್ಧಕ್ಕೂ ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದಿದ್ದರು. ಹನೇಹಳ್ಳಿಯ ವಿಠೋಬಾ, ರುಕ್ಮಿಣಿ ದಂಪತಿಗಳ ಏಳು ಮಕ್ಕಳುಗಳ ಪೈಕಿ ಐದನೆಯವರಾಗಿದ್ದ ಯಶವಂತ ಚಿತ್ತಾಲರು 1928 ರಲ್ಲಿ ಜನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಚಿತ್ತಾಲರು ಕುಮಟಾ, ಧಾರವಾಡ್, ಮುಂಬೈ ಹಾಗೂ ನ್ಯೂ ಜರ್ಸಿಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದರು. ಇವರು ವಿಜ್ಞಾನ ಪದವೀಧರರಾಗಿದ್ದು ರಸಾಯನ ಶಾಸ್ತ್ರದಲ್ಲಿ ಉನ್ನತ ಮಟ್ಟದ ಪ್ರೌಢಿಮೆಯನ್ನು ಹೊಂದಿದ್ದರು. ಅದರಲ್ಲಿಯೂ ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಅನುಭವ ಹೊಂದಿದ್ದ ಚಿತ್ತಾಲರು . ಮುಂಬೈ ವಿವಿಯ ಪ್ಲಾಸ್ಟಿಕ್ ತಂತ್ರವಿಜ್ಞಾನದ ಬಿಎಸ್‌ಸಿಯಲ್ಲಿ ಪ್ರಥಮ ಸ್ಥಾನ ಸುವರ್ಣ ಪದಕ ಪಡೆದಿರು. ನಲ್ವತ್ತ ನಾಲ್ಕನೇ ವಯಸ್ಸಿನಲ್ಲಿ ಅಮೆರಿಕದ ಸ್ಟೂವನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಎ ಪದವಿ ಪಡೆದಿದ್ದ. ಚಿತ್ತಾಲರು ಬೆಕಾಲೈಟ್ ಹೈಲಮ್ ಲಿ. ಕಂಪನಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ. ಇಲ್ಲಿ ಹಲವು ವರ್ಷಗಳ ಕಾಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಮುಂಬೈನಲ್ಲಿ ಅದೇ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಡೈರಕ್ಟರ್ ಆಗಿ 1985ರಲ್ಲಿ ನಿವೃತ್ತಿ ಹೊಂದಿದ್ದರು.
ಯಶವಂತ ಚಿತ್ತಾಲ (1928 - 2014)

ಕವಿ ಗಂಗಾಧರ ಚಿತ್ತಾಲರ ಸಹೋದರರಾಗಿದ್ದ ಯಶವಂತ ಚಿತ್ತಾಲರಿಗೆ ಬಾಲ್ಯದಿಂದಲೂ ಸಾಹಿತ್ಯದ ಕಡೆಗೆ ಒಲವಿದ್ದಿತು. ಪಾಶ್ಚಾತ್ಯ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿನ ಸಾಹಿತ್ಯದ ಮೌಲ್ಯಗಳ ತೌಲನಿಕ ಚಿಂತನೆಯನ್ನು ನಡೆಸಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಯಶವಂತ ಚಿತ್ತಾಲರಿಗೆ ಮನಃಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರಗಳಲ್ಲಿ ಬಹಳ ಆಸಕ್ತಿ ಇದ್ದಿತು. ಇವರು ತಮ್ಮ ವಿಶಿಷ್ಟ ಬಗೆಯ ಸಾಹಿತ್ಯದಿಂದ ಜನರನ್ನು ಸಮ್ಮೋಹಗೊಳಿಸಿದ್ದಲ್ಲದೆ ತಮ್ಮ ಸಜ್ಜನಿಕೆಯ ಜೀವನ ಶೈಲಿ, ಜೀವನ ಪ್ರೀತಿಯಿಂದಲೂ ಅಪಾರ ಜನ ಮೆಚ್ಚುಗೆಗೆ ಭಾಜನರಾಗಿದ್ದವರು.
ಶಾಂತಿನಾಥ ದೇಸಾಯಿ, ಗೌರೀಶ ಕಾಯ್ಕಿಣಿಯವರುಗಳಿಂದ ಅಪಾರ ಪ್ರಭಾವಕ್ಕೊಳಗಾಗಿದ್ದ ಚಿತ್ತಾಲರು 1957 ರಲ್ಲಿ ಹೊರತಂದ ‘ಸಂದರ್ಶನ’ ಕಥಾ ಸಂಕಲನದಿಂದ ಪ್ರಾರಂಭಿಸಿ ತಾವು ಆಸ್ಪತ್ರೆಗೆ ಸೇರುವ ಹಿಂದಿನ ದಿನದವರೆಗೂ ನಿರಂತರವಾಗಿ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಚಿತ್ತಾಲರು ಆಸ್ಪತ್ರೆಗೆ ಸೇರುವ ಮುನ್ನಿನ ದಿನ ‘ದಿಗಂಬರ’ ಎನ್ನುವ ಹೆಸರಿನ ಕಾದಂಬರಿಯ ೨೫ ನೇ ಅಧ್ಯಾಯವನ್ನು ಮುಗಿಸಿದ್ದರು. ವಿನೂತನ ವಸ್ತುವಿನಿಂದ ಕೂಡಿದ್ದ ಈ ಕಾದಂಬರಿ ಚಿತ್ತಾಲರ ಅನಿರೀಕ್ಷಿತ ಮರಣದಿಂದಾಗಿ ಅಪೂರ್ಣವಾಗಿಯೇ ಉಳಿಯುವಂತಾಗಿದೆ.
 ಚಿತ್ತಾಲರ ವಿವಿಧ ಕೃತಿಗಳನ್ನು ಓದುತ್ತಾ ಹೋದಂತೆ ಆ ಬರವಣಿಗೆ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಬಾಲ್ಯಕಾಲದ ಜಗತ್ತನ್ನು ವರ್ತಮಾನದ ಸಂಕೀರ್ಣ ಬದುಕಿನೊಡನೆ ಹೋಲಿಸುವ ಅವರ ರೀತಿಯು ಬಹಳವೇ ಅದ್ಭುತವಾದುದು. ಯಶವಂತ ಚಿತ್ತಾಲರು ತಮ್ಮ ವೈಯುಕ್ತಿಕ ಬದುಕಿನಲ್ಲಿ ತಾವು ಅನುಭವಿಸಿದ ದುರಂತಗಳನ್ನೆಲ್ಲವನ್ನೂ ಮೆಟ್ಟಿ ನಿಂತು ಅದಕ್ಕೂ ಹೆಚ್ಚಿನ ಜೀವನ ಶ್ರದ್ದೆಯಿಂದ, ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ ಕಥೆ, ಕಾದಂಬರಿಗಳ ಮುಖೇನ ತಮ್ಮ ಅನಯತೆಯನ್ನು ಮೆರೆದಿದ್ದಾರೆ. ಇವರ ‘ಕಥೆಯಾದಳು ಹುಡುಗಿ’ ಕಥಾ ಸಂಕಲನಕ್ಕೆ 1983 ರ ಕೇಂದ್ರ ಸಾಹಿತ್ಯ ಅಕಾಡ್ಮಿ ಪ್ರಶಸ್ತಿ ದೊರಕಿದ್ದರೆ, ಇವರ ಖ್ಯಾತ ಕಾದಂಬರಿ ‘ಶಿಕಾರಿ’ 1979 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಬಹುಮಾನದಿಂದ ಪುರಸ್ಕೃತವಾಗಿದೆ ಇವರ ಮತ್ತೊಂದು ಮಹತ್ವದ ಕಾದಂಬರಿ ‘ಪುರುಷೋತ್ತಮ’ ಕ್ಕೆ 2000 ನೇ ಸಾಲಿನ ನಿರಂಜನ ಪುರಸ್ಕಾರ, ಬಾರತ ಬಾಷಾ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಅಕಾಡ್ಮಿ ಪ್ರಶಸ್ತಿಗಳು ಲಭಿಸಿದೆ.
ಒಟ್ತಾರೆಯಾಗಿ ಐದು ಕಾದಂಬರಿಗಳು, ಒಂಭತ್ತು ಕಥಾ ಸಂಕಲನಗಳು, ಮೂರು ವಿಮರ್ಶಾ ಪ್ರಬಂಧ ಲೇಖನ ಸಂಗ್ರಹಗಳನ್ನು ರಚಿಸಿರುವ ಚಿತ್ತಾಲರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ(1988), ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರಗಳು ಸಂದಿವೆ.
“ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ನಾನು ನಾನಾಗಿಯೇ ಉಳಿದು ಉಳಿದವರಿಂದ ಬರೆಯಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಚಿತ್ತಾಲರು ಬರವಣಿಗೆಯನ್ನು ಕುರಿತು ತಾಳಿದ್ದ ನಿಲುವು ಇದು. ಇಂದು ಚಿತ್ತಾಲರ ಭೌತಿಕ ದೇಹ ನಮ್ಮೊಂದಿಗಿಲ್ಲ. ಆದರೆ ಅವರ ಸಾಹಿತ್ಯ, ಬರವಣಿಗೆಯ ಮೂಲಕ ಅವರೆಂದಿಗೂ ನಮ್ಮೊಡಾನಿರುತ್ತಾರೆ. ಕನ್ನಡ ಇರುವವರೆಗೂ ಕನ್ನಡ ಸಾಹಿತ್ಯವಿರುತ್ತದೆ. ಕನ್ನಡ ಸಾಹಿತ್ಯವಿರುವವರೆಗೂ ಯಶವಂತ ಚಿತ್ತಾಲರ ಬರಹಗಳಿರುತ್ತವೆ. ಅವರ ಬರಹಗಳಿರುವವರೆಗೂ ಅವರೂ ನಮ್ಮೊಡನಿರುತ್ತಾರೆ. ಎಲ್ಲಾ ಕನ್ನಡ ಸಾಹಿತ್ಯಾಭಿಮನಿಗಳ ಹೃದಯದಲ್ಲಿ ‘ಕಥೆ’ಯಾಗಿ, ಪುರುಷೋತ್ತಮನಾಗಿ.....
ನಮಸ್ಕಾರ. 

Sunday, March 23, 2014

‘ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು?’

ಇದ್ದಕ್ಕಿದ್ದಂತೆಯೇ ‘ನಾನು ಸಾಯುವೆನು’ ಎಂಬ ಭಯವು ನನ್ನನ್ನಾವರಿಸಿಕೊಂಡಿತು…..   ಈ ಭಾವನೆಯು ತೋರಿದ ಕೂದಲೇ ಈಗ ನಾನೇನು ಮಾಡಬೇಕೆಂದು ನನ್ನಲ್ಲಿ ನಾನೇ ಯೋಚಿಸತೊಡಗಿದೆನು.  ಮರಣ ಭಯವು ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿತು. ನಾನು ಮಾತುಗಳಿಂದ ಹೇಳಿದೆ, ‘ಇದೋ ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು? ಸಾಯುವವನು ಯಾರು?  ದೇಹವು ಸಾಯುತ್ತದೆ.’

 “ಕಡೆಯದಾಗಿ ನಾನು ಮಧುರೆಯನ್ನು ಬಿಟ್ಟು ಹೊರಡುವ ಆರು ವಾರಗಳ ಮುಂಚಿತವಾಗಿಯೇ ನನ್ನ ಜೀವಿತದಲ್ಲಿ ಒಂದು ದೊಡ್ಡ ಮಾರ್ಪಾಡಾಯಿತು. ಅದು ಆಕಸ್ಮಿಕವಾಗಿ ಉಂಟಾದದ್ದು. ಒಂದು ದಿನ ಮಹಡಿಯ ಮೇಲೆ ನಾನೊಬ್ಬನೇ ಕುಳಿತಿದ್ದೆನು. ಎಂದಿನಂತೆ ಆರೋಗ್ಯವಾಗಿಯೇ ಇದ್ದೆನು. ಆದರೆ ಇದ್ದಕ್ಕಿಂದ್ದಂತೆಯೇ ‘ನಾನು ಸಾಯುವೆನು’ ಎಂಬ ಭಯವು ನನ್ನನ್ನಾವರಿಸಿಕೊಂಡಿತು. ಈ ಭಾವನೆಯು ತೋರಿದ ಕೂದಲೇ ಈಗ ನಾನೇನು ಮಾಡಬೇಕೆಂದು ನನ್ನಲ್ಲಿ ನಾನೇ ಯೋಚಿಸತೊಡಗಿದೆನು. ವೈದ್ಯರನ್ನಾಗಲೀ, ಹಿರಿಯರನ್ನಾಗಲೀ, ಗೆಳೆಯರನ್ನಾಗಲೀಈ ವಿಷಯವನ್ನು ಕುರಿತು ವಿಚಾರಿಸಲು ಇಷ್ಟಪಡಲಿಲ್ಲ. ಆಗ ನನಗುಂಟಾದ ಈ ಪ್ರಶ್ನೆಯನ್ನು ನಾನೇ ಬಗೆಹರಿಸಿಕೊಳ್ಳಬೇಕೆಂದು ನಿರ್ಧರಿಸಿದೆನು. ಮರಣ ಭಯವು ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿತು. ನಾನು ಮಾತುಗಳಿಂದ ಹೇಳಿದೆ, ‘ಇದೋ ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು?ಸಾಯುವವನು ಯಾರು? ದೇಹವು ಸಾಯುತ್ತದೆ.’ ಎಂದು ಮನಸ್ಸಿನಲ್ಲಿಯೇ ಅಂದುಕೊಡೆನು. ಕೂಡಾಲೇ ಇಂತಹಾ ಸ್ಥಿತಿಯನ್ನು ಅಭಿನಯಿಸಿ ನೋಡಿದೆನು. ಕೈಕಾಲುಗಳನ್ನು ಉದ್ದಕ್ಕೆ ಚಾಚಿ ಅವು ಬಿಗಿದುಕೊಳ್ಳುವಂತೆ ಮಾಡಿದೆನು. ಅನಂತರ ಮುಂದಾಗುವುದನ್ನು ಕಾಣಲು ನಿಜವಾದ ಶವದಂತೆಯೇ ಆದೆನು. ಅಂದರೆ ಉಸಿರನ್ನು ಬಿಗಿಹಿಡಿದು ಶಬ್ದವು ಹೊರಬೀಳದಂತೆ ತುಟಿಗಳನ್ನು ಬಲವಾಗಿ ಅಮುಕಿ ಹಿಡಿದುಕೊಂಡೆನು. ಈಗ ಈ ದೇಹವು ಸತ್ತಿದೆ. ಇದನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಬೂದಿ ಮಾಡುವರು. ಈ ದೇಹದ ನಾಶದಿಂದ ನಾನು ನಾಶವಾದೆನೆ? ನಾನು ಈ ದೇಹವೆ? ಇದು ಮಾತನಾಡದ ಜಡವಸ್ತು. ಆದರೆ ನನ್ನ ವ್ಯಕ್ತಿತ್ವವು ಪೂರ್ಣ ಶಕ್ತಿಯೊಂದಿಗೆ ಸ್ಪಷ್ಟವಾಗಿ ತಿಳಿಯುತ್ತಿರುವುದಲ್ಲದೆ ದೇಹಕ್ಕಿಂತಲೂ ಭಿನ್ನವಾಗಿ ಒಳಗಡೆಯಲ್ಲಿ ‘ನಾನು, ನಾನು’ ಎಂಬ ಸ್ಮರಣೆಯನ್ನುಂಟುಮಾಡುತ್ತಿರುವುದು. ಆದುದರಿಂದ ಈ ದೇಹವನ್ನತಿಕ್ರಮಿಸಿದ ಒಂದು ಚೇತನವೇ ನಾನು. ಭೌತಿಕ ದೇಹವು ಸಾಯುವುದು. ಆದರೆ ಅದನ್ನತಿಕ್ರಮಿಸಿರುವ (ದೇಹವಿಲ್ಲದಿರುವಾಗಲೂ ಇರುವ) ಆತ್ಮವನ್ನು ಮರಣವು ಮುಟ್ತಲಾರದು. ಆದುದರಿಂದ ಮರಣ ರಹಿತನಾದ ಆತ್ಮನೇ ನಾನು, ಎಂಬುದಾಗಿ ನನ್ನಲ್ಲಿಯೇ ಅಂದುಕೊಂಡೆನು. ಇದೆಲ್ಲಾ ಬುದ್ದಿಯ ಕಲ್ಪನೆಗಳಲ್ಲ. ಯಾವ ಬಗೆಯ ವಿವಾದಕ್ಕೂ ಅವಕಾಶವಿಲ್ಲದೆ ಪ್ರತ್ಯಕ್ಷವಾಗಿ ನಾನು ಕಂಡ ಶಾಶ್ವತವಾದ ಸತ್ಯ ಸ್ವರೂಪವು, ನನ್ನ ಕಣ್ಣ ಮುಂದೆ ಮಿಂಚಿನಂತೆ ಸ್ಪಷ್ಟವಾಗಿ ತೋರಿತು. ನಾನು ಎಂಬುದು ಸತ್ಯಕ್ಕಿಂತಲೂ ಸತ್ಯವಾಗಿತ್ತು. ಆ ಸ್ಥಿತಿಯಲ್ಲಿ ಅದೊಂದೇ ಸತ್ಯವು. ದೇಹ ಸಂಬಂಧವಾದ ಕಾರ್ಯಗಳೂ, ಬುದ್ದಿ ಸಂಬಂಧವಾದ ವೃತ್ತಿಗಳೂ ಅದನ್ನೆ ಆಶ್ರಯಿಸಿಕೊಂಡಿರುತ್ತವೆ. ಈ ನಾನು ಅಥವಾ ಆತ್ಮನು ಒಂದು ವಶೀಕರಣ ಶಕ್ತಿಯೊಂದಿಗೆ ನನ್ನ ಪೂರ್ಣ ತಿಳುವಳಿಕೆಗೂ ಕೇಂದ್ರವಾಗಿತ್ತು. ಈ ಅನುಭವವಾದ ಕೂಡಲೇ ನನಗುಂಟಾಗಿದ್ದ ಮರಣ ಭಯವು ಮಾಯವಾಯಿತು. ಆ ಕ್ಷಣದಿಂದ ಇಂದಿನವರೆಗೂ ಆತ್ಮಭಾವವು ನನ್ನಲ್ಲಿ ಅನುಸ್ಯೂತವಾಗಿದೆ.”

*****

ಗೆಳೆಯರಿಗೆಲ್ಲಾ ನನ್ನ ನಮಸ್ಕಾರಗಳು.


ಕಳೆದ ವಾರವಷ್ಟೇ ನಾನು ತಿರುವಣ್ಣಾಮಲೈಗೆ ಭೇಟಿ ನೀಡಿದ್ದಾಗ ಅಲ್ಲಿನ ಶ್ರೀ ಅರುಣಾಚಲೇಶ್ವರ ತೇಜೋಲಿಂಗದ ದರ್ಶನ ಪಡೆದ ತರುವಾಯ  ಅಲ್ಲಿನ ರಮಣಾಶ್ರಮಕ್ಕೂ ಹೋಗಿದ್ದೆನು. ಅಲ್ಲಿನ ಪ್ರಶಾಂತ ಪರಿಸರ, ಆ ಪರಮ ಯೋಗಿವರ್ಯರು ನಡೆದಾಡಿದ ಪುಣ್ಯಭೂಮಿಯಲ್ಲಿ ನನ್ನ ಚೇತನವೂ ಸಮ್ಮಿಳಿತಗೊಂಡು ಒಂದು ಬಗೆಯ ಅನಿರ್ವಚನೀಯ ಆನಂದವನ್ನು ಹೊಂದಿತು. ಆ ಸಂದರ್ಭದಲ್ಲಿ ತಿರುವಣ್ಣಾಮಲೈ ನಲ್ಲಿನ ರಮಣಾಶ್ರಮದವರು ಪ್ರಕಟಿಸಿರುವ, ಎಸ್. ರಾಮಚಂದ್ರ ರಾವ್ ಬರೆದಿರುವ “ಭಗವಾನ್ ಶ್ರೀ ರಮಣ ಮಹರ್ಷಿ” ಪುಸ್ತಿಕೆಯನ್ನು ಓದಲಾಗಿ ನನಗೆ ಬಹಳವೇ ಮೆಚ್ಚುಗೆಯಾದ ರಮಣ ಗುರು ತಮ್ಮ ಹದಿನಾರನೇ ವರ್ಷದಲ್ಲಿ ಅನುಭವಿಸಿದ ಮರಣದ ಕುರಿತಾದ ಸತ್ಯಾನುಭವವು ಅವರದೇ ಮಾತುಗಳಲ್ಲಿರುವ ಈ ಮೇಲಿನ ಭಾಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.

ತಿರುವಣ್ಣಾಮಲೈ ಎಂಬ ತೇಜೋಲಿಂಗ ಕ್ಷೇತ್ರದಲ್ಲಿ ನೆಲೆಸಿ ತಮ್ಮ ಮಾರ್ಗದರ್ಶನವನ್ನರಸಿ ಬಂದವರಿಗೆ ಕಿಂಚಿತ್ತೂ ಕೋಪಿಸಿಕೊಳ್ಳದೆ ದಾರಿತೋರಿದ ಮಹಾ ಗುರು ಭಗವಾನ್ ಶ್ರೀ ರಮಣ ಮಹರ್ಷಿ ನಡೆಸಿದ ಸರಳ ಜೀವನ ತೋರಿದ ಆದರ್ಶ ಎಂದೆಂದೂ ಸದಾ ಅನುಕರಣೀಯವಾದುದು. ಆ ಮಹಾತ್ಮರ ಸದುಪದೇಶ, ಪವಿತ್ರವಾದ ನಡೆ ನುಡಿಗಳು ಇಂದಿನ ಯುವಜನರಿಗೆ ಮಾದರಿಯಾಗಿವೆ ಬೋಧಪ್ರದವಾಗಿವೆಯಲ್ಲವೆ?

ನಮಸ್ಕಾರ