Tuesday, May 08, 2018

ಕನ್ನಡ ನಾಡಿನ ಈ ಗ್ರಾಮದಲ್ಲಿ ಸಂಸ್ಕೃತವೇ ಮನೆಮಾತು!

ಸಂಸ್ಕೃತಕ್ಕೆ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಗೌರವವಿದೆ. ಭಾರತೀಯ ಸಂಶೋಧಕರು, ವಿದೇಶೀಯರು ಸಹ ಈ ಭಾಷೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. 

ಆದರೆ ಇತ್ತೀಚೆಗೆ ನಮ್ಮ ಯುವ ಪೀಳಿಗೆಯಲ್ಲಿ ಸಂಸ್ಕೃತದ ಬಗ್ಗೆ ಅಸಡ್ಡೆ ಬೆಳೆಯುತ್ತಿರುವುದನ್ನು ಕಾಣುತ್ತೇವೆ. ಸಂಸ್ಕೃತವೆಂದರೆ ಹಳೆ ಸಂಪ್ರದಾಯಕ್ಕೇ ಒಗ್ಗಿರುವ ಬಾಷೆ ಎನ್ನುವುದು ಅವರ ವಾದ. ಇದೆಲ್ಲದರ ನಡುವೆ ಕರ್ನಾಟಕದ ಪುಟ್ಟ ಗ್ರಾಮವೊಂದು ಸಂಸ್ಕೃತವನ್ನೇ ಉಸಿರಾಗಿಸಿಕೊಂಡಿದೆ ಎಂದರೆ ನಂಬುವಿರಾ?

ಹೌದು ಶಿವಮೊಗ್ಗ ಸಮೀಪದಲ್ಲಿರುವ ಪುಟ್ಟ ಗ್ರಾಮವೊಂದು ಸಂಸ್ಕೃತ ಗ್ರಾಮ ಎಂದು ಖ್ಯಾತಿ ಪಡೆದಿದೆ. ಮತ್ತೂರು - ಶಿವಮೊಗ್ಗದಿಂದ ಕೇವಲ 5  ಕಿಲೋ ಮೀಟರ್ ಅಂತರದಲ್ಲಿದೆ.


ಈ ಊರಲ್ಲಿ ಎಲ್ಲರೂ ಬಿಳಿ ಪಂಚೆಯನ್ನುಟ್ಟವರೇ ಕಾಣುತ್ತಾರೆ. ತಮಿಳುನಾಡು ಆಂಧ್ರ ಪ್ರದೇಶದ ಅಯ್ಯಂಗಾರ್, ಅಯ್ಯರ್ ಬ್ರಾಹ್ಮಣರಂತೆ ಕಾಣುವ ಇವರು ಕರ್ನಾಟಕದ ವಿರಳ ಜನ ಸಮುದಾಯವಾದ ಸಂಕೇತಿ ಬ್ರಾಹ್ಮಣ ಕುಟುಂಬದವರು.ಇವರು ಮನೆಯಲ್ಲಿ ಕೇವಲ ಸಂಸ್ಕೃತವನ್ನೇ ಮಾತನಾಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಲ್ಲಿನ ಯುವಕರು ಸಂಸ್ಕೃತ  ಮಾತನಾಡುವುದು ಅಚ್ಚರಿಯಾಗುತ್ತದೆ.

ಸಂಸ್ಕೃತವನ್ನು ದೇಶೀಯ ಭಾಷೆಯನ್ನಾಗಿಸಿ ಎಂದು ಹಲವು ವರ್ಷಗಳಿಂಡ ಹೋರಾಟ ನಡೆಸುತ್ತಿರುವ ಇಲ್ಲಿನ ಜನತೆ ವೇದ ವೇದಾಂಗಗಳಲ್ಲಿ ಪಾರಂಗತರಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಂಸ್ಕೃತ ಪದವಿ ಪಡೆದವರು ಈ ಗ್ರಾಮದಲ್ಲಿದ್ದಾರೆ ಎನ್ನುವ ಹೆಮ್ಮೆ ಸಹ ಈ ಗ್ರಾಮಸ್ಥರದಾಗಿದೆ.


ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೇದಾಭ್ಯಾಸಕ್ಕೆಂದೇ ಮೀಸಲಾಗಿರಿಸಲಾದ ಈ ಗ್ರಾಮದಲ್ಲಿ ಕೇರಳದ ಪಲ್ಘಾಟ್‍ನಿಂದ ಬಂದ ಸಂಕೇತಿಗಳು ನೆಲೆಸಿದ್ದಾರೆ. ಇವರು ಇಲ್ಲಿನ ತುಂಗಾ ತೀರವನ್ನು ತಮ್ಮ ವೇದ ಶಾಸ್ತ್ರಗಳ ಅಭ್ಯಾಸಕ್ಕಾಗಿ ಮುಡಿಪಾಗಿರಿಸಿಕೊಂಡಿದ್ದಾರೆ.

ದೇಶದ ನಾನಾ ಭಾಗಗಳಿಂದ ನಾನಾ ಧರ್ಮ, ಜಾತಿಯ ಯುವಕರು ಇಲ್ಲಿಗೆ ಬಂದು ವೇದಾಭ್ಯಾಸ ಪಡೆದು ಹೋಗುತ್ತಾರೆ. ಇಂತಹಾ ವಿದ್ಯಾರ್ಥಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಸೇರಿದ್ದಾರೆನ್ನುವುದು ಇನ್ನೂ ಗಮನಾರ್ಹ ಸಂಗತಿ.
ಗಮಕ ಹಾಡುಗಾರಿಕೆಗಾಗಿ ಸಹ ಈ ಮತ್ತೂರು ಗ್ರಾಮ ಹೆಸರಾಗಿದೆ.ಇಲ್ಲಿರುವ ಪ್ರತಿ ಮನೆಯಲ್ಲಿಯೂ ಗಮಕ ಹಾಡುವವರು ಇದ್ದು ಅವರು ಸಂಜೆ ವೇಳೆಗೆ ದೇವಸ್ಥಾನದ ಕಟ್ಟೆಯಲ್ಲಿ ಕು:ಳಿತು ತಮ್ಮ ಅಭ್ಯಾಸ ನಡೆಸುತ್ತಾರೆ.

ಈ ಊರಿನವರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತೂರು ಕೃಷ್ಣಮೂರ್ತಿ:ದೇಶದ ಪ್ರಖ್ಯಾತ ವಿದ್ವಾಂಸರೆಂದು ಗುರುತಿಸಿಕೊಂಡಿದ್ದರು. 

(ಈ ನನ್ನ ಲೇಖನವು ದಿನಾಂಕ 06 ಮೇ 2018ರಂದು ಕನ್ನಡಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು. https://bit.ly/2KNn6GS )

Thursday, April 26, 2018

ಕನ್ನಡ ಸಾಹಿತ್ಯದ ಅರಳು ಪ್ರತಿಭೆ ಅಂತಃಕರಣ


ಅವನಿನ್ನೂ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ರಾಜ್ಯದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವನ ಲೇಖನಗಳು ಪ್ರಕಟವಾಗುತ್ತಿದ್ದವು. ಐದನೇ ತರಗತಿಗೆ ಬಂದಾಗ ಐದು ಪುಸ್ತಕಗಳನ್ನು ಪ್ರಕಟಿಸಿದ್ದ.  ಎಂಟನೇ ತರಗತಿಗೆ ಬರುವುದರೊಳಗಾಗಿ ಮೂರು ಸಮಗ್ರ ಕೃತಿ ಸೇರಿ ಒಟ್ಟಾರೆ 24 ಪುಸ್ತಕಗಳನ್ನು ಪ್ರಕಟಿಸಿದ್ದ! ಇದಷ್ಟೇ ಅಲ್ಲ, ಸಾಹಿತ್ಯ ಪರಿಷತ್ ನಡೆಸುವ ಕನ್ನಡ ಪರೀಕ್ಷೆಗಳು, ಕಾವ, ಹಿಂದಿ ಪ್ರವೇಶ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿದ್ದು ರಾಜ್ಯ ಮಟ್ಟದ ಮೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಹ ಆಗಿದ್ದ!
ಇಂತಹಾ ಅದ್ಭುತ ಪ್ರತಿಭೆ ಇರುವುದು ನಮ್ಮ ನಾಡಿನ ಮಲೆನಾಡಿನ ಸೆರಗೆಂದೇ ಖ್ಯಾತವಾದ ಶಿವಮೊಗ್ಗ ಜಿಲ್ಲೆಯಲ್ಲಿ. ಈ ಬಾಲಸಾಹಿತಿ, ಸಾಧಕನ ಹೆಸರು  ಅಂತಃಕರಣ.  ಶಿವಮೊಗ್ಗದ ಲೋಯಲಾ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಈ ಪ್ರತಿಭಾವಂತ ಸಾಹಿತಿಯ 'ಆಟದ ಬಯಲು' ಪುಸ್ತಕ ಇತ್ತೀಚೆಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಇದುವರೆಗೆ 345  ಅಂಕಣ ಬರಹ, 93 ಕವಿತೆ, 78 ಕತೆ, 5 ಕಾದಂಬರಿ ಮತ್ತು 1 ನಾಟಕ ರಚಿಸಿರುವ ಅಂತಃಕರಣ ಮೆರವಣಿಗೆ, ವೀರ ಸೈನಿಕ, ಆಟವಿಲ್ಲದ ಮೈದಾನ (ಕಥಾ ಸಂಕಲನ), ), ಭಾರತಿವನದ ಅರಳಿಮರ (ಕಾಡಿನ ಕಥೆಗಳು), ), ರಾಮಪುರದ ಗೆಳೆಯರು, ಆಜಾದ್ ನಗರದ ಆಟಗಾರರು, ಹರಳಿಮಠದ ಸಾಹಸಿ ಹುಡುಗರು, ಗ್ವಾಲಿಮರ್ ರಹಸ್ಯ(ಕಾದಂಬರಿ), ಅಮ್ಮನ ಸಿಟ್ಟು, ಗೆಲ್ಲುವೆನು ನಾ ಗೆಲ್ಲುವೆನು, ಕಣ್ಣಾಮುಚ್ಚಾಲೆ (ಕವನ ಸಂಕಲನ) ಸೇರಿದಂತೆ ಹಲವಾರು ಸಾಹಿತ್ಯ ಕೃತಿಗಳ ಲೇಖಕನಾಗಿದ್ದಾನೆ. . ಈತ ಬರೆದ ಪ್ರವಾಸ ಕಥನಗಳು, ಕವನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಇದಲ್ಲದೆ 'ಎಚ್ಚರಿಕೆ', 'ಜೀವನ್ಮುಖಿ' ಹಾಗೂ ಅಂತರ್ಜಾಲ ಪತ್ರಿಕೆಯಾದ 'ವಿಶ್ವ ಕನ್ನಡಿಗ' ದಲ್ಲಿ ವಾರಕ್ಕೆ ಎರಡು ಅಂಕಣ ಬರೆಯುತ್ತಾನೆ.

ದೊಡ್ಡಮ್ಮನ ಪ್ರೋತ್ಸಾಹ
ಅಂತಃಕರಣನ ತಂದೆ ಸರ್ಜಾ ಶಂಕರ್ ಕಾನೂನು ವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ತಾಯಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಸೂಪರ್ ವೈಸರ್ ಆಗಿದ್ದಾರೆ. ತಂದೆ ತಾಯಿಗಳು ಅವನಿಗೆ ಚಿಕ್ಕ ವಯಸ್ಸಿನಿಂದ ಓದುವ ಹವ್ಯಾಸ ಬೆಳೆಸಿದ್ದು ಯುಕೆಜಿ ಓದುವಾಗಲೇ ಅವನು ಕವಿತೆ, ಕಥೆಗಳನ್ನು ಬರೆಯುತ್ತಿದ್ದ. ಹೀಗೆ ಸಣ್ಣ ಸಣ್ಣ ಬರಹಗಳಿಗೆ ಅವನ ದೊಡ್ಡಮ್ಮ ಅಂಕಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದರು. ಒಂದು ಬರಹಕ್ಕೆ 100ಕ್ಕೆ 95 ಅಥವಾ 96 ಅಂಕಗಳು ಪಡೆಯುತ್ತಿದ್ದ ಅಂತಃಕರಣನಿಗೆ ತಾನು 100ಕ್ಕೆ 100 ಅಂಕ ಪಡೆಯುವಂತೆ ಬರೆಯಬೇಕೆಂದು ಛಲ ಹುಟ್ಟಿತ್ತು. ಇದೇ ಆಸೆಯಿಂದ ಆತ ಇನ್ನಷ್ಟು ಚೆನ್ನಾಗಿ ಬರೆಯುವತ್ತ ಗಮನ ಹರಿಸಿದ್ದ. ಇದೇ ಮುಂದೆ ಆತನಿಗೆ ಸಾಹಿತ್ಯ ಲೋಕದಲ್ಲಿ ಉನ್ನತ ಸ್ಥಾನ ದೊರಕಲು ಕಾರಣವಾಗಿತ್ತು.
"ಮಕ್ಕಳ ಸಾಹಿತ್ಯ ಇಂದಿಗೂ ಕನ್ನಡದಲ್ಲಿ ಉತ್ತಮವಾಗಿ ಮೂಡಿಬರುತ್ತಿದ್ದು ನನ್ನ ವಯೋಮಾನದ ಮಕ್ಕಳು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವುದು ನನಗೆ ಸಂತೋಷ. ದೊಡ್ಡವರೂ ಸಹ ಉತ್ತಮವಾದ ಮಕ್ಕಳ ಸಾಹಿತ್ಯವನ್ನು ರಚನೆ ಮಾಡುತ್ತಾರೆ. ಎಚ್.ಎಸ್. ವಾಕೋಡ ನನ್ನ ಮೆಚ್ಚಿನ ಸಾಹಿತಿ. ಅವರ 'ಕೋಟೆಯಾದವರು' ಕಾದಂಬರಿಯಿಂದ ಸ್ಪೂರ್ತಿಗೊಂಡು ನಾನೂ ಕಾದಂಬರಿ ರಚನೆ ಮಾಡಿದೆ
"ಇಂಗ್ಲೀಷ್ ಸಾಹಿತ್ಯದಲ್ಲಿ ರಸ್ಕಿನ್ ಬಾಂಡ್ ನನ್ನ ಮೆಚ್ಚಿನ ಲೇಖಕ" ಎನ್ನುವ ಅಂತಃಕರಣ ತಾನೀಗ ಪ್ರಥಮ ಬಾರಿಗೆ ಇಂಗ್ಲಿಷ್ ನಲ್ಲಿ ಕಾದಂಬರಿಯೊಂದರ ರಚನೆಯಲ್ಲಿ ತೊಡಗಿದ್ದಾನೆ.

ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ
ತನ್ನ ಅಸಾಮಾನ್ಯ ಪ್ರತಿಭೆಯಿಂದ, ಸಾಹಿತ್ಯ ಅಭಿಮಾನಿಗಳ ಮನಸೂರೆಗೊಂಡ ಈ ಬಾಲಕ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ್ದು ‘ನನ್ನ ನಾಳೆ, ನನ್ನ ಕನಸು’ ಎನ್ನುವ ವಿಚಾರಪೂರ್ಣ ಪ್ರಬಂಧ ಮಂಡಿಸಿದ್ದಾನೆ. ಅಲ್ಲದೆ ಜ.31 ರಂದು ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಡೆದ ಪ್ರಥಮ  ಕೊಡಗು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಈತ ಆಹ್ವಾನಿತ ಅತಿಥಿಯಾಗಿದ್ದ.. ಫೆ.4ರಂದು ಮುಂಡರಗಿಯಲ್ಲಿ ನಡೆಯಲಿರುವ  ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ಉದ್ಘಾಟಿಸಲು ಸಹ ಅಂತಃಕರಣನಿಗೆ ಆಹ್ವಾನ ಬಂದಿದೆ ಎನ್ನುವುದು ಗಮನಾರ್ಹ.

ಕ್ರೀಡಾಲೋಕದಲ್ಲಿಯೂ ಆಸಕ್ತಿ
ಭವಿಷ್ಯದಲ್ಲಿ ತಾನೊಬ್ಬ ಕ್ರೀಡಾ ಪತ್ರಕರ್ತನಾಗಬೇಕು ಎನ್ನುವ ಗುರಿ ಹೊಂದಿರುವ  ಈತನಿಗೆ ಕ್ರೀಡೆಗಳ ಬಗೆಗೆ ವಿಶೇಷ ಒಲವಿದೆ. ಫುಟ್ ಬಾಲ್, ಡಿಸ್ಕಸ್ ಥ್ರೋ, ಕರಾಟೆ, ಕಬಡ್ಡಿ, ಚೆಸ್ ಹೀಗೆ ನಾನಾ ಕ್ರೀಡೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಈ ಬಾಲಪ್ರತಿಭೆ ಜಿಲ್ಲಾ ಮಟ್ಟದ ಹಲವು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ. 'ವಿಶ್ವ ಕನ್ನಡಿಗ'ದಲ್ಲಿ ವಾರಕ್ಕೊಂದರಂತೆ ಕ್ರೀಡಾ ವಿಚಾರಗಳನ್ನು ಕೇಂದ್ರವಾಗಿಸಿಕೊಂಡು ಅಂಕಣ ಪ್ರಕಟಿಸುತ್ತಿದ್ದಾನೆ.

ಪ್ರಶಸ್ತಿ ಗೌರವಗಳು
ಅಂತಃಕರಣನ ಅಂತಃಸತ್ವದಲ್ಲಿ ಮೂಡಿಬಂದ ಸಾಹಿತ್ಯ ಕೃತಿಗಳು ಒಂದಕ್ಕಿಂತ ಒಂದು ಉತ್ತಮವಾಗಿದ್ದು ಸಾಹಿತ್ಯ ವಲಯದ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಗಿದೆ. ಆತನ ಪ್ರತಿಭೆಯನ್ನು ಗುರುತಿಸಿದ ನಾಡಿನ ನಾನಾ ಸಂಘ ಸಂಸ್ಥೆಗಳು ಗೌರವಿಸಿ, ಪ್ರಶಸ್ತಿಗಳನ್ನು ನೀಡಿದ್ದು ಅವುಗಳಲ್ಲಿ ಕೆಲ ಪ್ರಮುಖ ಪ್ರಶಸ್ತಿ ಪುರಸ್ಕಾರಗಳು ಹೀಗಿದೆ-
ಕರ್ನಾಟಕ ಸರ್ಕಾರದಿಂದ 'ಅಸಾಧಾರಣ ಪ್ರತಿಭೆ ರಾಜ್ಯ ಪ್ರಶಸ್ತಿ', ಕನ್ನಡ ಸಾಹಿತ್ಯ ಪರಿಷತ್ತಿನ ವಸುಧೇಂದ್ರ ಭೂಪಾಲಂ ಪ್ರಶಸ್ತಿ,  ಕನ್ನಡ ಸಾಹಿತ್ಯ ಪರಿಷತ್ತಿನ ಸಿಸು ಸಂಗಮೇಶ ದತ್ತಿ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡಮೆಯ ಚಿಣ್ಣರ ಚಂದಿರ ಪುಸ್ತಕ ಬಹುಮಾನ, ಧಾರವಾಡ ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ನ ಬೇಂದ್ರೆ ಗ್ರಂಥ ಬಹುಮಾನ, ಪ್ರಜಾವಾಣಿ ಯುಗಾದಿ ಮಕ್ಕಳ ಕವನ ಸ್ಪರ್ಧೆ ಬಹುಮಾನ, ಮಹಾರಾಷ್ಟ್ರದ ಅಕ್ಕಲಕೋಟೆಯ ಆದರ್ಶ ಕನ್ನಡ ಬಳಗದಿಂದ ಬಾಲಪ್ರತಿಭೆ 2017 ಪ್ರಶಸ್ತಿ
ಹೀಗೆ ತನ್ನ ಜನ್ಮಜಾತ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನ ಪ್ರಭಾವಳಿಯನ್ನು ವೃದ್ದಿಸಿಕೊಳ್ಳುತ್ತಿರುವ ಬಾಲಕ ಅಂತಃಕರಣನಿಂದ ಭವಿಷ್ಯದಲ್ಲಿ ಇನ್ನಷ್ಟು ಶ್ರೇಷ್ಠ ಕೃತಿಗಳು ಮೂಡಿ ಬರಲಿ, ಕನ್ನಡ ಸಾಹಿತ್ಯ ಲೋಕಕ್ಕೆ ಅವನಿಂದ ಇನ್ನಷ್ಟು ಸೇವೆ ಲಭಿಸಲಿ.  ಅಂತಃಕರಣನ ಸಾಹಿತ್ಯ ಪ್ರಭೆ ಅನಂತವನ್ನು ತಲುಪಲಿ  ಎಂದು 'ಕನ್ನಡಪ್ರಭ ಡಾಟ್ ಕಾಂ' ಈ ಮೂಲಕ ಶುಭ ಹಾರೈಸುತ್ತದೆ.


(ಈ ನನ್ನ ಲೇಖನವು 04 ಫೆಬ್ರವರಿ 2018ರಂದು ಕನ್ನಡ ಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು https://bit.ly/2KdHGQa)

Wednesday, April 04, 2018

ಶಿಲ್ಪಿಯ ಕೈಯಲ್ಲಿ ಅರಳಿದ ಕೈಲಾಸ

ಕಾಂಚೀಪುರ ದೇವಳಗಳ ನಗರಿ, ರೇಷ್ಮೆ ಸೀರೆಗಳಿಗೆ ಪ್ರಸಿದ್ದಿ, ತಮಿಳುನಾಡಿನ ವಿಶಿಷ್ಟ ಪೊಂಗಲ್, ಕೈ ಮುರುಕು, ತೆಂಗೋಳು, ಹಲ್ಲಿಗೆ ಷಾಕ್, ಪುಳಿಯೋಗರೆಗಳಿಗೆ ಹೆಸರುವಾಸಿ.

 ಕೈಲಾಸನಾಥ ದೇವಾಲಯ ಹೊರಾಂಗಣ ನೋಟ



ಇಲ್ಲಿನ ಏಕಾಂಬರನಾಥ, ಕಾಮಾಕ್ಷಿ, ವರದರಾಜ ಪೆರುಮಾಳ್, ಕೈಲಾಸನಾಥ ದೇವಾಲಯ ಸೇರಿ ಅನೇಕ ದೇವಾಲಯಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತದೆ.

ಇಂತಹಾ ಸಿಂಹದ ಕೆತ್ತನೆಗಳು ಈ ದೇವಾಲಯದಲ್ಲಿ ಬಹಳಷ್ಟು ಕಾಣಿಸುತ್ತದೆ
ಇದರಲ್ಲಿಯೂ ಕೈಲಾಸನಾಥ ದೇವಾಲಯ ಶಿಲ್ಪಕಲೆ ಕುಸುರಿ ಕೆತ್ತನೆಗಳಿಂದ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಭಾರತದಲ್ಲಿನ ಮೂರು ಪ್ರಮುಖ ಕೈಲಾಸನಾಥ ಮಂದಿರಗಳಲ್ಲಿ ಇದೂ ಒಂದು (ಇನ್ನೆರಡು ದೇವಾಲಯಗಳು ಕ್ರಮವಾಗಿ ಮಹಾರಾಷ್ಟ್ರದ ಎಲ್ಲೋರಾ ಹಾಗೂ ತಮಿಳುನಾಡಿನ ಉತ್ತಿರೂರು ಎನ್ನುವಲ್ಲಿದೆ)

ಕಾಂಚೀಪುರದಲ್ಲಿ ಪಲ್ಲವರಿಂದ ನಿರ್ಮಿತವಾಗಿರುವ ಈ ದೇವಾಲಯ ಸುಮಾರು 1200 ವರ್ಷಗಳಷ್ಟು ಹಳೆಯದು. ಪಲ್ಲವ ರಾಜ 2ನೆಯ ನರಸಿಂಹ ವರ್ಮ ನಿರ್ಮಾಣ ಮಾಡಿದ್ದ ಈ ದೇವಾಲಯ ಎದುರಿನ ಗೋಪುರ ಹಾಗೂ ಬಸವ ಅತ್ಯಂತ ಆಕರ್ಷಕವಾಗಿದೆ.



ಸುಂದರವಾದ ಗರ್ಭಗುಡಿಯ ಮೇಲಿರುವ 
ವಿಮಾನ, ಕಂಬಗಳಿಂದ ಕೂಡಿದ ಮಂಟಪ, ಮುಂಭಾಗ ಮತ್ತು ಸುತ್ತಲೂ ಪ್ರಾಕಾರದಲ್ಲಿರುವ 58 ಪುಟ್ಟ ಗುಡಿಗಳೂ ಅವುಗಳಲ್ಲಿರುವ ಮೆದುವಾದ ಮರಳುಗಲ್ಲಿನಿಂದ ಮಾಡಲ್ಪಟ್ಟಿರುವ ಶಿವ ವಿಗ್ರಹಗಳೂ ಈ ದೇವಾಲಯದ ಹಿರಿಮೆಯ ಪ್ರತೀಕಗಳು. ಮೊದಲಿಗೆ ಈ ವಿಗ್ರಹಗಳನ್ನು ಅಲಂಕರಿಸಲು ಬಳಸಿದ ಆ ಬಣ್ಣಗಳ ಚಿಹ್ನೆಗಳು ಮಾತ್ರ ಈಗ ಉಳಿದುಬಂದಿದೆ.

ಒಂದು ಐತಿಹ್ಯದ ಪ್ರಕಾರ, ರಾಜ ರಾಜ ಚೋಳ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಲೆಯೇ ತಂಜಾವೂರಿನಲ್ಲಿ ಬೃಹದೀಶ್ವರ ದೇವಸ್ಥಾನ ಸ್ಥಾಪಿಸಲು ಸ್ಪೂರ್ತಿ ದೊರೆಯಿತು ಎನ್ನಲಾಗುತ್ತದೆ.

ದೇವಾಲಯದ ಮುಂಭಾಗದಲ್ಲಿ ಹಲವಾರು ಪುಟ್ಟ ಗುಡಿಗಳಿವೆ ಮತ್ತು ಕೋಷ್ಟಕಗಳಿದ್ದು ಅದರಲ್ಲಿ ಶಿವಲಿಂಗಗಳಿವೆ.ಒಳಾಂಗಣದ ಭಿತ್ತಿಯಲ್ಲಿ ಸಾಲು ಸಾಲು ಕಂಭಗಳು, ಎಲ್ಲೆಲ್ಲು ನೋಡಿದರೂ ಸಿಂಹಗಳ ಚಿತ್ರ! ದೊಡ್ಡ ಸಿಂಹಗಳು ಬಾಯ್ದೆರೆದು ನಮ್ಮನ್ನು ನೋಡುತ್ತದೆ!














ಮಧ್ಯದಲ್ಲಿರುವ ಕೈಲಾಸನಾಥನ ಆಲಯದ ಗೋಪುರ ಸಾಧಾರಣ ಎತ್ತರವಿದೆ. ಗರ್ಭಗೃಹದಲ್ಲಿ ಕರಿಶಿಲೆಯಲ್ಲಿ ಕೆತ್ತಿದ ದೊಡ್ಡ ಶಿವಲಿಂಗವಿದೆ. ಬಹಳ ಸುಂದರವಾಗಿದೆ. ಇಲ್ಲೇ ಪಕ್ಕದ ಗೋಡೆಗೆ ಒರಗಿಸಿರುವ ಭಿನ್ನವಾಗಿರುವ ಬಹಳ ದೊಡ್ಡ ಪಾಣಿ ಪೀಠ ಒಂದನ್ನು ಇರಿಸಿದ್ದಾರೆ. ಇದು ಮುರುಕಲು ಆದ್ದರಿಂದ ಪೂಜೆಗೆ ಯೋಗ್ಯವಲ್ಲ. ಅದರ ಗಾತ್ರ ನೋಡಿಯೇ ಅಚ್ಚರಿಪಡಬೇಕು. 

ದೇವಾಲಯ ಪ್ರಾಕಾರದಲ್ಲಿ ಶಬರ ಶಂಕರ ವಿಳಾಸದ ಚಿತ್ರಗಳು ಕಣ್ಣಿಗೆ ಕಟ್ಟಿದಂತಿದೆ ಒಟ್ಟಾರೆ ಪಲ್ಲವ ಶಿಲ್ಪಕಲಾ ವೈಭವಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ.  ಭಾರತದಲ್ಲಿ ಬೇರಾವ ದೇವಾಲಯದಲ್ಲಿಯೂ ಸಿಕ್ಕದ ಶಿವನ ಅರವತ್ತ ನಾಲ್ಕು ಕಲಾ ವೈಭವಯುತ ರೂಪವನ್ನು ಈ ದೇವಾಲಯದಲ್ಲಿ ಮಾತ್ರ ಕಾಣಬಹುದು. 

ಇನ್ನು ಈ ದೇವಾಲಯದಲ್ಲಿ ಕಂಬವೊಂದರ ಮೇಲೆ ಚಾಲುಕ್ಯ ಅರಸ 2ನೆಯ ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಕೆತ್ತಿಸಿದ ಕನ್ನಡ ಶಾಸನ ಇರುವುದು ಗಮನಾರ್ಹ ಸಂಗತಿ.
















(ಈ ನನ್ನ ಲೇಖನವು 15 ಏಪ್ರಿಲ್ 2018ರಂದು ಕನ್ನಡ ಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು https://bit.ly/2HtBWjx)

Sunday, March 18, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 91

ಕಾಂಚೀಪುರ (Kanchipuram)
ಭಾಗ - 2
ಕಂಚಿ, ಕಾಂಚೀಪುರ - ತಮಿಳುನಾಡಿನಲ್ಲಿರುವ ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು. ದೇವಾಲಯಗಳ ನಗರಿ, ಪ್ರಾಚೀನ ಶಿಕ್ಷಣ ಕೇಂದ್ರ, ರೇಷ್ಮೆ ಉತ್ಪಾದನೆ, ಪಲ್ಲವರ ರಾಜಧಾನಿ ಇಹೀಗೆ ನಾನಾ ಕಾರಣಗಳಿಂಡ ಹೆಸರಾಗಿರುವ ಈ ಪಟ್ಟಣದ ಸೊಗಸೇ ಅವರ್ಣನೀಯವಾದದ್ದು.

ಚೆನ್ನೈನಿಂದ ನೈಋತ್ಯಕ್ಕೆ 75 ಕಿಮೀ ದೂರದಲ್ಲಿ, ಪಾಲಾರ್ ನದಿಯ ದಡದಲ್ಲಿ ಚೆಂಗಲ್ಪಟ್ಟಿಗೆ 35 ಕಿಮೀ ದೂರದಲ್ಲಿರುವ ನಗರಿ  ಪ್ರಾಚೀನ ಕಾಲದಿಂದಲೂ ಅನೇಕ ಸಂತರು, ಭಕ್ತರು, ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು. ಶ್ರವಣರು ಹಾಗೂ ತಾತ್ತ್ವಿಕರಿಗೆ ವಿದ್ಯಾಕೇಂದ್ರವೂ ಜನ್ಮಸ್ಥಳವೂ ಆಗಿದೆ.  ಅರ್ಥಶಾಸ್ತ್ರ ರಚಿಸಿದ ಚಾಣಕ್ಯ ಮತ್ತು ಕರ್ಣಾಟಕ ಸಂಗೀತದ ಪಿತಾಮಹಾರೆನಿಸಿದ ಶಾಮಶಾಸ್ತ್ರಿಗಳ ಜನ್ಮಸ್ಥಳ ಇದೇ ಕಾಂಚೀಪುರ.

ಶ್ರೀ ಏಕಾಮ್ರನಾಥ ಸ್ವಾಮಿ


ಶಿವಕಂಚಿ, ವಿಷ್ಣುಕಂಚಿ ಎಂದು ನಗರದಲ್ಲಿ ಎರಡು ಭಾಗಗಳಿದ್ದು ಶಿವಕಂಚಿಯಲ್ಲಿ ಸುಪ್ರಸಿದ್ಧ ಕಾಮಾಕ್ಷಿ, ಏಕಾಂಬರೇಶ್ವರ, ಕೈಲಾಸನಾಥ ದೇವಸ್ಥಾನಗಳಿವೆ. ಶಂಕರಾಚಾರ್ಯರ ಪೀಠಗಳಲ್ಲಿ ಒಂದಾದ ಕಾಮಕೋಟಿ ಪೀಠವಿದೆ.  ವಿಷ್ಣುಕಂಚಿಯಲ್ಲಿ ವರದರಾಜಸ್ವಾಮಿ ದೇವಸ್ಥಾನವಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಉತ್ಸವಗಳಿಗೆ ದಕ್ಷಿಣ ಭಾರತದಿಂದಲೇ ಅಲ್ಲದೆ ಉತ್ತರ ಭಾರತದಿಂದಲೂ ಅಸಂಖ್ಯಾತ ಯಾತ್ರಾರ್ಥಿಗಳು ಆಗಮಿಸುತ್ತಾರೆ.

ಕಾಂಚೀಪುರ ರೇಷ್ಮೆ ನೇಯ್ಗೆಯಲ್ಲಿ ಜಗದ್ವಿಖ್ಯಾತವೆನಿಸಿದೆ. ಇಲ್ಲಿ ತಯಾರಾದ ರೇಷ್ಮೆ ಸೀರೆಗಳಿಗೆ ವಿದೇಶಗಳಿಂದ ಹೆಚ್ಚಿನ ಬೇಡಿಕೆಯಿದೆ. ಇಲ್ಲಿ 8,000 ಕ್ಕೂ ಮೇಲ್ಪಟ್ಟು ರೇಷ್ಮೆ ಕೈಮಗ್ಗಗಳಿವೆ.

***
ಏಕಾಮ್ರನಾಥ ದೇವಾಲಯದ ಹಿಂಭಾಗದಲ್ಲಿರುವ 3500 ವರ್ಷ ಹಳೆಯ ಪವಿತ್ರ ಏಕಾಮ್ರ(ಮಾವಿನ ಮರ)

ಏಕಾಂಬರೇಶ್ವರ ಅಥವಾ ಏಕಾಮ್ರನಾಥ ದೇವಾಲಯ ಕಾಂಚೀಪುರದ ಅತಿ ದೊಡ್ಡ ದೇವಾಲಯ. ಇದರ ಹಿಂಭಾಗದಲ್ಲಿರುವ ಮಾವಿನ ಮರವು ಪವಿತ್ರ ಮಾವಿನ ಮರವಾಗಿದೆ. ಇದು 3500 ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ ಎನ್ನಲಾಗಿದ್ದು ಇದರ ನಾಲ್ಕು ಗೆಲ್ಲುಗಳು ನಾಲ್ಕು ವೇದಗಳ ಸಂಕೇತ ಎನ್ನಲಾಗುತ್ತದೆ. ಈ ನಾಲ್ಕೂ ಗೆಲ್ಲುಗಳಲ್ಲಿ ಬಿಡುವ ಎಲೆ, ಹಣ್ಣುಗಳು ವಿಭಿನ್ನ ರುಚಿ ಹೊಂದಿದೆ ಎನ್ನುವುದು ಇನ್ನೊಂದು ವಿಸ್ಮಯಕಾರಿ ಸಂಗತಿ.

***

ಒಮ್ಮೆ ಪಾರ್ವತಿ ದೇವಿಯು ಕುಚೋದ್ಯಕ್ಕೆನ್ನುವಂತೆ ಶಿವನ ಹಿಂದಿನಿಂದ ಆಗಮಿಸಿ ಅವನ ಎರಡೂ ಕಣ್ಣುಗಳನ್ನು ಮುಚ್ಚುತ್ತಾಳೆ. ಹಾಗೆ ಶಿವನ ಕಣ್ಣನ್ನು ಮುಚ್ಚಿದಾಗ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಸೂರ್ಯ, ಚಂದ್ರ ಅಗ್ನಿಗಳನ್ನೇ ಕಣ್ಣಾಗಿ ಉಳ್ಳ ಪರಮೇಶ್ವರನ ಕಣ್ಣು ಮುಚ್ಚಲು ಲೋಕವೆಲ್ಲಾ ಅಂಧಕಾರದಲ್ಲಿ ಮುಳುಗಿತು.

ಶ್ರೀ ಏಕಾಮ್ರನಾಥ ಸ್ವಾಮಿ ಮತ್ತು ಶ್ರೀ ಕಾಮಾಕ್ಷಿ ಅಂಬಾಳ್



ಏಕಾಮ್ರನಾಥ ದೇವಾಲಯ ಪುಷ್ಕರಿಣಿ
ಆಗ ಲೋಕವನ್ನೆಲ್ಲಾ ತಾಮಸ ಶಕ್ತಿಗಳು ಆವರಿಸಿಕೊಂಡವು. ಮಾನವರ ಪಾಪಗಳೆಲ್ಲಾ ಕರಿನೆರಳಾಗಿ ಪಾರ್ವತಿಯನ್ನು ಸುತ್ತಿಕೊಂಡವು. ಬಿಳುಪಾದ ಆಕೆಯ ಮೈಬಣ್ಣವು ಗಾಢ ಕರಿವರ್ಣಕ್ಕೆ ತಿರುಗಲ್ಪಟ್ಟಿತು. ಒಂದೇ ಒಂದು ಕ್ಷಣದಲ್ಲಿ ಆಕೆ ಅಂಧಕಾರದ ಸ್ವರೂಪಳಾಗಿ ಮಾರ್ಪಟ್ಟಳು.

"ಶಿವ ಶಿವಾ! ಇದೇನು ಹೀಗಾಗುತ್ತಿದೆ? ನನ್ನ ಮೈ ಬಣ್ಣವೇಕೆ ಕಪ್ಪಗಾಗಿದೆ?" ಪಾರ್ವತಿ ಪರಮೇಶ್ವರನನ್ನು ಕೇಳುವಳು.

"ದೇವಿ, ಇದು ಬಣ್ಣವಲ್ಲ, ಜೀವರಾಶಿಗಳ ಪಾಪಸಾಗರ." ಪರಮೇಶ್ವರ ಉತ್ತರಿಸಿದ್ದ.

ಏಕಾಮ್ರನಾಥ ದೇವಾಲಯದಮುಖ್ಯ ಗೋಪುರಗಳಲ್ಲಿ ಒಂದು
ಪಾರ್ವತಿ ಈ ಕರಿಯ ಪಾಪಕೂಪಗಳಿಂದ ದಹಿಸತೊಡಗಿದ್ದಳು. ಇದರಿಂದ ಪಾರುಮಾಡುವಂತೆ ತನ್ನ ಪತಿಯನ್ನು ಕೇಳಿದಳು.  "ಪ್ರಿಯೆ, ಇದು ಲೋಕಕಲ್ಯಾಣಾರ್ಥವಾಗಿ ಸಂಭವಿಸಿದೆ. ನೀನೀಗ ಬಬದರಿನಾಥಕ್ಕೆ ತೆರಳಬೇಕು. ಅಲ್ಲಿ ನೀನು ಮಗುವಿನ ರೂಪದಲ್ಲಿ ಕಾಣಿಸಿಕೊಳ್ಳಬೇಕು. ಆ ಕ್ಷೇತ್ರದಲ್ಲಿರುವ ಕಾತ್ಯಾಯನ ಮುನಿಯು ನಿನ್ನನ್ನು ಒಯ್ದು ಸಲಹುತ್ತಾರೆ. ನೀನು ಯಾರೆನ್ನುವುದನ್ನು ಆತ ಯೋಗಜ್ನಾನದಿಂಡ ಅರಿತಾಗ ನಿನಗೆ ಯೋಗದಂಡ, ಕಮಂಡಲ, ರುದ್ರಾಕ್ಷಿ, ಪಾತ್ರೆಗೆಳು, ಕೊಡೆ, ಚಾಮರ, ಹುರಿದ ಬೀಜಗಳು ಇದೇ ಮೊದಲಾದ ತಪಸ್ಸಿಗೆ ಅನುಕೂಲವಾಗುವ ಸಾಧನಗಳನ್ನು ನೀಡುವನು.

ಏಕಾಮ್ರನಾಥ ದೇವಾಲಯ
"ಅವುಗಳನ್ನು ತೆಗೆದುಕೊಂಡ ನೀನು ಕಾಶಿಗೆ ತೆರಳಬೇಕು. ಅಲ್ಲಿ ಕ್ಷಾಮದಿಂದ ಜನರು ಹಾಹಾಕಾರ ಪಡುತ್ತಿರುವರು.ಅವರ ಕಷ್ಟಗಳನ್ನು ನೀನು ಪರಿಹರಿಸಲು ಬೇಕು. ಅದಕ್ಕಾಗಿ ಕಾಶಿಯಲ್ಲಿ ನೀನು ಅನ್ನಪೂರ್ಣೆಯಾಗಿ ಹನ್ನೆರಡು ವರ್ಷಗಳ ಕಾಲ ನೆಲೆಸಬೇಕು.

"ಬಳಿಕ ಮತ್ತೆ ದಕ್ಷಿಣಕ್ಕೆ ತೆರಳಬೇಕು. ದಕ್ಷಿಣ ದಿಕ್ಕಿಗಿರುವ ಒಂದು ಸ್ಥಳದಲ್ಲಿ ಮುನಿಯು ನಿನಗೆ ಕೊಟ್ಟ ತಪಓ ಪರಿಕರಗಳು ಅಚ್ಚರಿ ಎನ್ನುವಂತೆ ಬದಲಾಗುತ್ತದೆ. ರುದ್ರಾಕ್ಷಿ ಮಾಲೆಯು ಬಿಲ್ವ ಮಾಲೆಯಾಗಿ, ಕೊಡೆಯು ನಾಗಭೂಷಣವಾಗಿ, ಯೋಗದಂಡವು ತ್ರಿಶೂಲವಾಗಿ, ಕಮಂಡಲುವಿನ ಜಲವು ಹಾಲಾಗಿ, ಬೀಸಣಿಗೆಯು ಗಿಳಿಯಾಗುತ್ತದೆ. ಚಾಮರವು ಷೋಡಶ ಕನ್ಯೆಯರಾಗುತ್ತಾರೆ. ಹುರಿದ ಬೀಜಗಳು ಮೊಳಕೆಯೊಡೆಯುತ್ತದೆ. ಅದುವೇ ಕಂಚಿ ಕ್ಷೇತ್ರ.

ಏಕಾಮ್ರನಾಥ ದೇವಾಲಯದ ಆವರಣ
"ಅಲ್ಲಿ ಒಂದು ಮಾವಿನ ಮರದ ಕೆಳಗೆ ಉದ್ಭವ ಲಿಂಗವು ಕಾಣುವುದು. ಅದು ನನ್ನದೇ ಸ್ವರೂಪ. ನೀನು ಅದನ್ನು ಹಾಲಿನಿಂದ ತೊಳೆದು ನಾಗಭೂಷಣದಿಂದ ಅಲಂಕರಿಸಿ, ಬಿಲ್ವದ ಮಾಲೆ ಹಾಕಿ ಪೂಜಿಸು. ಷೋಡಶ ಕನ್ಯೆಯರನ್ನು ಲಿಂಗದ ಸೇವೆಗಾಗಿ ನಿಲ್ಲಿಸಿ ಕೈಯಲ್ಲಿ ಗಿಳಿಯನ್ನು ಹಿಡಿದು ಪಂಚಾಗ್ನಿ ವೇದಿಕೆಯ ಮೇಲೆ ನಿಂತು ತಪಸ್ಸು ಮಾಡಬೇಕು. ಅಲ್ಲಿ ನಾವು ಇನ್ನೊಮ್ಮೆ ಸಮಾಗಮ ಹೊಂದುವೆವು. ಆಗ ನಿನಗೆ ಆವರಿಸಿದ ಕರಿಛಾಯೆಯು ಮಾಯವಾಗುವುದು, ಬಂಗಾರದ ವರ್ಣ ಮೂಡಿ ಬರುವುದು" ಪರಮೇಶ್ವರ ವಿವರಿಸಿದನು.

ಏಕಾಮ್ರನಾಥ ದೇವಾಲಯದ ಹೊರಸುತ್ತಿನಲ್ಲಿರುವ ವಿವಿಧ ಗಾತ್ರದ ಲಿಂಗಗಳು
(ಇಲ್ಲಿ ಒಟ್ಟು 1008 ಲಿಂಗಗಳಿವೆ)
ಪಾರ್ವತಿಯು ಅಂತೆಯೇ ಮಾಡಿದಳು. ತಾನು ಕಾತ್ಯಾಯಿನೀ ಸ್ವರೂಪ ಧರಿಸಿ ಕಾಶಿಗೆ ಬಂದು ಅಲ್ಲಿ ಅನ್ನಪೂರ್ಣೆಯಾಗಿ ಅಲ್ಲಿಂದ ದಕ್ಷಿಣಕ್ಕೆ ಬಂದು ಶಿವನು ಸೂಚಿಸಿದ ಆ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಿ ತಪೋನಿರತಳಾದಳು.

ಆದರೆ ಆಕೆ ಎಷ್ಟು ಕಾಲ ತಪಸ್ಸು ಮಾಡಿದರೂ ಶಿವ ಪ್ರತ್ಯಕ್ಷನಾಗಲಿಲ್ಲ. ಅದಾಗ ಒಮ್ಮೆ ಅಲ್ಲಿಗೆ ಬಂದ ನಾರದರು ಕಾತ್ಯಾಯಿನಿಗೆ 'ಪಂಚಪಾನ ಮಂತ್ರ' ವನ್ನು ಉಪದೇಶಿಸಿದರು. ಈ ಮಂತ್ರೆ ಬಲದಿಂದ ಶಿವನಲ್ಲಿ ಕಾಮೋದ್ದೀಪನವಾಯಿತು. ಕಾಮನ ಉರಿ ತಾಳಲಾಗದೆ ಪರಮೇಶ್ವರ ಗಂಗೆಯನ್ನು ದಕ್ಷಿಣಕ್ಕೆ ಕಳಿಸಿದ. ಗಂಗೆ ಎಲ್ಲವನ್ನೂ ಮುಳುಗಿಸುತ್ತಾ ಸಾಗಿದ್ದಳು. ಆದರೆ ಪಾರ್ವತಿಯು ಕಾಳಿ ಸ್ವರೂಪವನ್ನು ತಾಳಿ ಗಂಗೆಯನ್ನು ತನ್ನ ಕಪಾಲದಲ್ಲಿ ತುಂಬಿಸಿಕೊಂಡಳು.

ಏಕಾಮ್ರನಾಥ ದೇವಾಲಯ
ಆಗ ಶಿವನು ತಾನು ಪ್ರಳಯರುದ್ರನಾಗಿ ಅವಳ ಮೇಲೆ ನುಗ್ಗಿದನು. ಆದರೆ ಕಾತ್ಯಾಯಿನಿಯು ಪ್ರಳಯದಲ್ಲಿ ತಾನು ಪೂಜಿಸುತ್ತಿದ್ದ ಲಿಂಗವು ಮುಳುಗಬಾರದೆನ್ನುವ ಕಾರಣಕ್ಕೆ ಅದನ್ನು ಎತ್ತಿ ತನ್ನ ಎದೆ ಭಾಗದಲ್ಲಿರಿಸಿಕೊಂಡಳು.

ಪರಮೇಶ್ವರನನ್ನು ದಹಿಸುತ್ತಿದ್ದ ಕಾಮಾಗ್ನಿಯು ಕಾತ್ಯಾಯಿನಿಯ ಸಂಗಮದಿಂದ ಶಾಂತಗೊಂಡಿತು. ಆ ಕ್ಷಣವೇ ಕಾತ್ಯಾಯಿನಿ ಸ್ವರೂಪದ ಪಾರ್ವತಿಗೆ ಆವರಿಸಿದ್ದ ಕರಿಛಾಯೆ ತೊಲಗಿ ಹೋಯಿತು. ಶಿವನು ತನ್ನ ನಿಜ ಸ್ವರೂಪದಲ್ಲಿ ಕಾತ್ಯಾಯಿನೀ ಸ್ವರೂಪದ ಪಾರ್ವತಿಗೆ ಕಾಣಿಸಿದ. ದೇವಾನುದೇವತೆಗಳು ಈ ಸಂದರ್ಭದಲ್ಲಿ ಹರ್ಷಚಿತ್ತರಾಗಿ ಹೂಮಳೆಗೆರೆದರು. ಅವರು ಕಾಂಚೀಪುರದಲ್ಲಿ ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವ ನೆರವೇರಿಸಲು ಉದ್ಯುಕ್ತರಾದರು.

ಹಾಗೆ ಶಿವ ಪಾರ್ವತಿಯರ ಕಲ್ಯಾಣವು ಒಂಭತ್ತು ದಿನಗಳ ಕಾಲ ನಡೆಯಿತು. ಹತ್ತನೇ ದಿನಕ್ಕೆ ಶಿವನು ಏಕಾಮ್ರನಾಥ*ನ ಸ್ವರೂಪದಲ್ಲಿಯೂ, ಪಾರ್ವತಿಯು ಕಾಮಾಕ್ಷಿ ಸ್ವರೂಪದಲ್ಲಿಯೂ ವೇದಿಕೆ ಮೇಲೆ ಕುಳಿತರು.

ಬ್ರಹ್ಮ, ಮಹಾವಿಷ್ಣು, ಲಕ್ಷ್ಮಿದೇವಿಯರು ಈ ವಿವಾಹದ ಮುಖ್ಯ ಆದ್ವರ್ಯರಾಗಿದ್ದರು. ಹೀಗೆ ದೇವಾನು ದೇವತೆಗಳ ಸಮ್ಮುಖದಲ್ಲಿ ಏಕಾಮ್ರನಾಥನು ಕಾಮಾಕ್ಷಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದನು. ಶ್ರೀ ಕಾಮಾಕ್ಷೀ-ಏಕಾಮ್ರನಾಥರ ವಿವಾಹ ಸಂಪನ್ನವಾಯಿತು.

ಏಕಾಮ್ರನಾಥ ದೇವಾಲಯ ಭವ್ಯ ನೋಟ


*ಏಕಾಮ್ರ - ಏಕ ಎಂದರೆ ಒಂದು, ಆಮ್ರ ಎಂದರೆ ಮಾವಿನ ಮರ. ಏಕಾಮ್ರ ಎಂದರೆ ಒಂದು ಮಾವಿನ ಮರ. ಪಾರ್ವತಿಯು ಶಿವಲಿಂಗವನ್ನು ಪೂಜಿಸಿ ತಪೋನಿರತಳಾಗಿದ್ದ ಮಾವಿನ ಮರವನ್ನು ಇದು ಸೂಚಿಸುವುದು.