Saturday, November 24, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -97

ಶ್ರೀಕ್ಷೇತ್ರ ಧರ್ಮಸ್ಥಳ (Dharmasthala)

ಕರ್ನಾಅಕದಲ್ಲಷ್ಟೇ ಅಲ್ಲದೆ ನೆರೆ ರಾಜ್ಯ ಕೇರಳದಲ್ಲಿ ಸಹ ಮನೆಮಾತಾಗಿರುವ ಸತ್ಯ, ಧರ್ಮನ್ಯಾಯಕ್ಕೆ ಹೆಸರಾದ ಕ್ಷೇತ್ರ ಧರ್ಮಸ್ಥಳಕ್ಕೆ ನೂರಾರು ವರ್ಷದ ಇತಿಹಾಸವಿದೆ. ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಎಲ್ಲಾ ದೈವಗಳ ಅಧಿಪತಿಯಾಗಿದ್ದು ಇವನೊಂದಿಗಿನ ಧರ್ಮದೇವತೆಗಳು ಇಲ್ಲಿನ ಹೆಗ್ಗಡೆಗಳ ಆದೇಶವನ್ನು ಪಾಲಿಸುತ್ತಾರೆ  ಇಂತಹಾ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಆರಾಧ್ಯ ಕ್ಷೇತ್ರವಾಗಿದೆರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣ.

ಶ್ರೀ ಮಂಜುನಾಥ ಸ್ವಾಮಿ


ನೇತ್ರಾವತಿ ನದಿಯ ದಡದಲ್ಲಿ  ನೆಲೆಯಾಫ಼್ದ ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ವಿಗ್ರಹವನ್ನು  ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಪುರಾಣಗಳು ಹೇಳುತ್ತವೆ. ಧರ್ಮಸ್ಥಳ ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ - ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ.

ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ 75 ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಜಿರೆಯಿಂದ ಕೇವಲ 9 ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ ಸುಬ್ರಹ್ಮಣ್ಯ,ಉಡುಪಿ,ಕೊಲ್ಲೂರು,ಕಟೀಲು ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ.

***

ಧರ್ಮಸ್ಥಳವು ರೋಚಕವಾದ ಹಿನ್ನೆಲೆಯನ್ನು ಹೊಂದಿದೆ. ಹಿಂದೆ ಧರ್ಮಸ್ಥಳವನ್ನು "ಕುಡುಮ" ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪ್ರಾಂತ್ಯದಲ್ಲಿರುವ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಭೀಮಣ್ಣ ಪರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ದಂಪತಿಗಳು ವಾಸಿಸುತ್ತಿದ್ದರು. ಇವರ ಮನೆಗೆ ಬಂದ ನಾಲ್ವರು ಅತಿಥಿಗಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ದಂಪತಿಗಳು ನೋಡಿಕೊಂಡಿದ್ದರು. ಅದೇ ದಿನ ರಾತ್ರಿಯಲ್ಲಿ ಆ ನಾಲ್ವರು ಅತಿಥಿಗಳು ದೈವದ ರೂಪದ ಮೂಲಕ ಭೀಮಣ್ಣನವರ ಕನಸಿನಲ್ಲಿ ಬಂದು ತಾವು ಇಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ತಿಳಿಸಿದರು. ಆ ನಾಲ್ವರು ದೇವತೆಗಳಿಗೆ ಅಣತಿಯಂತೆ ಮನೆಯನ್ನು ಬಿಟ್ಟುಕೊಟ್ಟ ಭೀಮಣ್ಣ ಎಂಬುವರು ದೇವಾಲಯ ನಿರ್ಮಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದಂತೆ. ಆ ನಾಲ್ಕು ದೈವವೆಂದರೆ ಕಾಳರಾಹು - ಪುರುಷ ದೈವ, ಕಳರ್ಕಾಯಿ - ಸ್ತ್ರೀ ದೈವ, ಕುಮಾರಸ್ವಾಮಿ - ಪುರುಷ ದೈವ, ಹಾಗೂ ಕನ್ಯಾಕುಮಾರಿ - ಸ್ತ್ರೀ ದೈವ. ದಿನ ಕಳೆದಂತೆ ಅರ್ಚಕರು ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಭೀಮಣ್ಣನವರಿಗೆ ಸಲಹೆಯಿತ್ತರು. ಇದರಂತೆ ಧರ್ಮದೇವತೆಗಳೂ ಕೂಡ ಕದ್ರಿಯಲ್ಲಿರುವ ಶ್ರೀಮಂಜುನಾಥನ ಲಿಂಗವನ್ನು ತಂದು ಪ್ರತಿಷ್ಠಾಪಿಸುವಂತೆ ತಿಳಿಸಿದರು ಹಾಗೂ ಈ ಕಾರ್ಯ ಸಂಪನ್ನಗೊಳಿಸಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಅಣ್ಣಪ್ಪಸ್ವಾಮಿಯವರು ಕದ್ರಿಗೆ ತೆರಳಿ ಅಲ್ಲಿಂದ ಶಿವಲಿಂಗವನ್ನು ಇಲ್ಲಿಗೆ ತರುವುದರೊಳಗೆ ಧರ್ಮಸ್ಥಳದ ಶ್ರೀಮಂಜುನಾಥನ ದೇವಾಲಯ ನಿರ್ಮಾಣವಾಗಿತ್ತೆಂದು ಹೇಳುತ್ತದೆ ಇಲ್ಲಿನ ಪ್ರತೀತಿ.

ಮತ್ತೊಂದು ದಂತಕಥೆಯ ಪ್ರಕಾರ, 16 ನೇಯ ಶತಮಾನದಲ್ಲಿ ದೇವಾರಜ ಹೆಗ್ಗಡೆಯವರು ಉಡುಪಿಯ ವಾದಿರಾಜರಿಗೆ ಇಲ್ಲಿಗೆ ಭೇಟಿ ನೀಡಲು ಅಹ್ವಾನಿಸಿದ್ದರು. ಮೊದಲೆ ದಾನ ಧರ್ಮಗಳಿಗೆ ಹೆಸರಾಗಿದ್ದ ಕುಡುಮ ಕ್ಷೇತ್ರಕ್ಕೆ ವಾದಿರಾಜರು ಭೇಟಿ ನೀಡಲು ಸಂತೋಷದಿಂದ ಒಪ್ಪಿದರು ಹಾಗೂ ಭೇಟಿಯೂ ನೀಡಿದರು. ನಂತರ ಧರ್ಮದೂಟ ಸ್ವೀಕರಿಸಲು ಒಪ್ಪಲಿಲ್ಲ. ಕಾರಣವೆಂದರೆ ಅಲ್ಲಿರುವ ಶಿವಲಿಂಗವು ವೈದಿಕ ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಗಿರಲಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಈ ಸಂದರ್ಭದಲ್ಲಿ ಸ್ವತಃ ದೇವರಾಜ ಹೆಗ್ಗಡೆಯವರೆ ವಾದಿರಾಜರನ್ನು ಕುರಿತು ನಿಯಮಗಳಿಗನುಸಾರವಾಗಿ ಲಿಂಗವನ್ನು ತಾವೆ ಮರುಪ್ರತಿಷ್ಠಾಪಿಸಬೇಕೆಂದು ವಿನಂತಿಸಿಕೊಂಡರು. ಅವರ ವಿನಯತೆ, ದಾನ ಧಾರ್ಮಗಳ ಮನೋಭಾವದಿಂದ ಪ್ರಸನ್ನರಾದ ಯತಿಗಳು ಸ್ವತಃ ತಾವೆ ದೈವಿಕ ವಿಧಿ ವಿಧಾನಗಳ ಮೂಲಕ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಹಾಗೂ ನೈತಿಕತೆ, ಸರಳತೆ, ಧರ್ಮ ನೆಲೆಯೂರಿರುವ ಈ ಕ್ಷೇತ್ರಕ್ಕೆ ಧರ್ಮಸ್ಥಳ ಎಂಬ ನಾಮಕರಣ ಮಾಡಿದರು. ಅಂದಿನಿಂದ ಈ ಕ್ಷೇತ್ರವು ಶ್ರೀಕ್ಷೇತ್ರ ಧರ್ಮಸ್ಥಳವಾಗಿ ಜನಪ್ರಿಯವಾಗಿದೆ.

Tuesday, November 13, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -96

ಹಾಸನ (Hassan)

ಹಾಸನ ಕರ್ನಾಟಕದ ಒಂದು ಜಿಲ್ಲಾಕೇಂದ್ರ. ಹಾಸನ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ  ಹೆಸರನ್ನು ಪಡೆದುಕೊಂಡಿದೆ. ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ  ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ. ನಗರವು ರಾಜಧಾನಿ ಬೆಂಗಳೂರಿನಿಂದ 187 ಕಿ.ಮೀ ದೂರದಲ್ಲಿದೆ. ಹಾಸನಕ್ಕೆರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿದೆ.

ಹಾಸನ ಜಿಲ್ಲೆಯ ಬೇಲೂರು ಸಮೀಪದ ಹಳೆಬೀಡು ಪ್ರಸಿದ್ದ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬೇಲೂರು ಚೆನ್ನಕೇಶವ ದೇವಾಲಯ ಶಿಲ್ಪಕಲೆಗಳಿಂದ ವಿಶ್ವ ಪ್ರಸಿದ್ದಿಯನ್ನು ಪಡೆದಿದೆ.  ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಹ ಬಾಹುಬಲಿ ಮೂರ್ತಿಯ ಕಾರಣ ಜೈನರ ಪುಣ್ಯಸ್ಥಳವಾಗಿದ್ದು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.

ಹಾಸನಂಬಾ ಸನ್ನಿಧಿ

ಹಾಸನಂಬಾ  ದೇವಿ


ಹಾಸನಕ್ಕೆ ಹಿಂದೆ ಸಿಂಹಾಸನಪುರಿ ಎಂದು ಹೆಸರಿತ್ತು. ದೇವಿಯರು ನೆಲೆಸಿದ ನಂತರ ಹಾಸನ ಎಂಬ ಹೆಸರು ಬಂದಿತು.

ಸುಮಾರು 12ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರಿಗೆ ಕನಸಿನಲ್ಲಿ ದೇವಿಯು ನಾನು ಇಂತಹ ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು.

ವಿಶೇಷವೆಂದರೆ ಇಲ್ಲಿ ಎಲ್ಲಾ ದೇವಸ್ಥಾನಗಳಂತೆ ವರ್ಷ ಪೂರ್ತಿ ಪೂಜೆ ನಡೆಯುವುದಿಲ್ಲ.ರ್ಷಕ್ಕೆ ಕೇವಲ ಹತ್ತರಿಂದ ಹನ್ನೆರಡು ದಿನ ಮಾತ್ರ ಬಾಗಿಲು ತೆಗೆದಾಗ ದೇವಿಯರ ದರ್ಶನದ ಲಾಭವಾಗುತ್ತದೆ. ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವಂತಹ ಗುರುವಾರದಂದು ಬಾಗಿಲನ್ನು (ವರ್ಷಕೊಮ್ಮೆ) ತೆರೆಯಲಾಗುತ್ತದೆ ಮತ್ತು ಬಲಿಪಾಡ್ಯದ ಮರುದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತಾರೆ.

ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ. ಮುಂದಿನ ವರ್ಷ ದೇವಸ್ಥಾನದ ಬಾಗಿಲು ತೆಗೆಯುವವರೆಗೆ ಹೂವು ಬಾಡದೇ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ಆಕಸ್ಮಿಕ ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ.

ಹಿಂದೆಲ್ಲಾಈ ದೇವರ ಎದುರು ೩ ಬುಟ್ಟಿಯಲ್ಲಿ ಅನ್ನವನ್ನು ಮಾಡಿ ಇಡಲಾಗುತ್ತಿತ್ತು. ಆ ಸಮಯದಲ್ಲಿ ಅನ್ನವು ಹಾಳಾಗದೆ ಬಿಸಿಯಾಗಿರುತ್ತಿತ್ತು ಮತ್ತು ಅದನ್ನೇ ದೇವರ ಪ್ರಸಾದವೆಂದು ಬಡಿಸಲಾಗುತ್ತಿತ್ತು. ಈಗ ಆ ಪದ್ಧತಿಯೂ ಕ್ರಮೇಣ ನಿಂತುಹೋಯಿತು.


***

ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರವಾದ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆನಿಂತರು. ಆ ಸಪ್ತಮಾತೆಯರಾದ ಬ್ರಾಹ್ಮದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವೀ, ವಹಾಹಿಣಿ, ಇಂದ್ರಾಣಿ ಮತ್ತು ಚಾಮುಂಡಿ ಇವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರೀ, ದೇವಿಯರು ದೇವಸ್ಥಾನದಲ್ಲಿ ಹುತ್ತದ ರೂಪದಲ್ಲಿ ಹಾಗೂ ವಹಾಹಿಣಿ, ಇಂದ್ರಾಣಿ, ಚಾಮುಂಡಿ ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ (ಕೆರೆ) ನೆಲೆಸಿರುವರು. ಬ್ರಾಹ್ಮದೇವಿಯು ಹಾಸನದಿಂದ ಸುಮಾrvedರು ೩೫ ಕಿ.ಮೀ. ದೂರದಲ್ಲಿರುವ ಕೆಂಚಮ್ಮ ಹೊಸಕೋಟೆಯಲ್ಲಿ ಕೆಂಚಾಂಬೆಯ ಹೆಸರಿನಲ್ಲಿ ನೆಲೆಸಿದ್ದಾಳೆ.

***

ಓರ್ವ ಸೊಸೆಗೆ ಅತ್ತೆಯು ಬಹಳಷ್ಟು ಕಷ್ಟ ಕೊಡುತ್ತಿದ್ದಳು. ಆ ಸೊಸೆಯು ಪ್ರತಿನಿತ್ಯ ದೇವಸ್ಥಾನಕ್ಕೆ ಬಂದು ದೇವರ ಬಳಿ ಮಾತನಾಡುತ್ತಿದ್ದಳು. ದೇವತೆಯರು ಅವಳಿಗೆ ಪ್ರತ್ಯಕ್ಷರಾಗಿ ಮಾತನಾಡಿಸುತ್ತಿದ್ದರು ಮತ್ತು ಈ ವಿಷಯವನ್ನು ಯಾರ ಬಳಿಯೂ ಹೇಳಬಾರದೆಂದು ದೇವಿಯರು ಸೊಸೆಗೆ ಹೇಳಿದ್ದರು. ಒಂದು ದಿನ ಸೊಸೆ ಅಮ್ಮ ನವರ ದರ್ಶನ ಪಡೆಯಲು ಹೊರಟಾಗ, ಅತ್ತೆಯು ಅವಳನ್ನು ಹಿಂಬಾಲಿಸಿ, ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತು ಧ್ಯಾನ ಮಗ್ನಳಾಗಿದ್ದ ಸೊಸೆಯನ್ನು ಕಂಡು ಕೋಪದಿಂದ ಅತ್ತೆಯು ಮನೆಯ ಕೆಲಸ ಕಾರ್ಯಗಳಿಗಿಂತ ಅಮ್ಮನವರ ದರ್ಶನ ಹೆಚ್ಚಾಯಿತೆ! ಎಂದು ದೇವಿಯ ಮುಂಭಾಗದಲ್ಲಿದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ತಲೆಯ ಮೇಲೆ ಕುಟ್ಟಿದಾಗ ನೋವನ್ನು ತಾಳಲಾರದೆ ಸೊಸೆಯು ‘ಅಮ್ಮ ಹಾಸನಾಂಬೆ’ ಎಂದು ಕೂಗಿದಾಗ ಭಕ್ತಳ ಕಷ್ಟವನ್ನು ನೋಡಿ ಅವಳ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆಯು ಕಲ್ಲಾಗಿ ಬಿಟ್ಟಳು. ಆ ಕಲ್ಲು ಈಗಲೂ ಕಾಣಿಸಲು ಸಿಗುವುದು ಮತ್ತು ಆ ಕಲ್ಲು ವರ್ಷದಿಂದ ವರ್ಷಕ್ಕೆ ಭತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ ಮತ್ತು ಅದು ಸಂಪೂರ್ಣ ಚಲಿಸಿ ದೇವಿಯರ ಪಾದ ತಲುಪಿದ ದಿನ ಕಲಿಯುಗದ ಅಂತ್ಯವಾಗುತ್ತದೆ.

Friday, October 19, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -95

ಶಿರಡಿ (Shirdi)
ಭಾಗ- 2
"ಓಂ ಸಾಯಿರಾಂ" ಇಂದು (ಶುಕ್ರವಾರ 19 ಅಕ್ಟೋಬರ್ 2018) ವಿಜಯದಶಮಿ ದಿನದಂದು ಶಿರಡಿಯ ಮಹಾಸಂತ ಶ್ರೀ ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವನ ಸಂದೇಶಳ ಸಾರುವ ಶಿರಡಿ ಕ್ಷೇತ್ರ ಪರಿಚಯ ಜತೆಗೆ ಸಾಯಿಬಾಬಾ ಜೀವನ, ಬೋಧನೆ, ಪವಾಡಗಳ ಸಂಕ್ಷಿಪ್ತ ನೋಟವನ್ನು "ನಮ್ಮಲ್ಲಿನ ಸ್ಥಳ ಪುರಾಣಗಳು" ಮಾಲಿಕೆಯಲ್ಲಿ ಎರಡು ಭಾಗವಾಗಿ ಬರೆಯುತ್ತಿದ್ದೇನೆ.



ಚಿಕ್ಕ ಗ್ರಾಮವನ್ನು ಜಗತ್ರಸಿದ್ಧ ಯಾತ್ರಾಸ್ಥಳವನ್ನಾಗಿಸಿದ ಮಹಾಸಂತ

ಸಾಯ್ಒಂದು ಕಾಲದಲ್ಲಿ ಹಳೆಯ ಹಾಗು ಚಿಕ್ಕದಾದ ಗ್ರಾಮವಾಗಿತ್ತು. ಈ ದಿನ ಆ ಸ್ಥಳವು ಕಿಕ್ಕಿರಿದ ಜನಸಂದಣಿಯಿಂದ ಕೂಡಿರುವ 
ಪವಿತ್ರವಾದ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಸಾಯಿಬಾಬಾ ಅವರ ಜೀವನ ಕಾಲದಲ್ಲಿ 50 ವರ್ಷಕ್ಕಿಂತ ಹೆಚ್ಚಾಗಿ ನಿವಾಸಿಸಿ 
ಒಂದು ದೊಡ್ಡಇಬಾಬಾ ಒಬ್ಬ ಪವಾಡ ಪುರುಷ ಎನ್ನುವುದಕ್ಕಿಂತ ಅವರೊಬ್ಬ ಯೋಗಿ, ಮಹಾಗುರು, ಸಂತರೆಂದು ಹೇಳಬಹುದು. 
ಯಾತ್ರಾ ಸ್ಥಳವಾಗಿ ಪರಿರ್ವತನೆ ಮಾಡಿದರು.

ಮಹಾಯೋಗಿಯು 1918 ರಲ್ಲಿ ಸಮಾಧಿಯಾದರೂ, ಅಂದಿನಿಂದ ಆತನ ಸಮಾಧಿಯನ್ನು ನಿತ್ಯವೂ ಲಕ್ಷಾದಿ ಮಂದಿ ಭಕ್ತರು 
ದರ್ಶನವನ್ನು ಪಡೆಯುತ್ತಾರೆ. ಬಾಲ ಯೋಗಿಯಾಗಿ ಬಾಬಾ ಶಿರಿಡಿಯನ್ನು ಸೇರಿಕೊಂಡ ಪ್ರದೇಶವನ್ನು "ಗುರುಸ್ಥಾನ" ಎಂದು ಕೂಡ 
ಕರೆಯುತ್ತಾರೆ. ಇಂದು ಅಲ್ಲಿ ಅದ್ಭುತವಾದ ದೇವಾಲಯವನ್ನು ಹಾಗು ಸ್ಮಾರಕವನ್ನು ಸ್ಥಾಪನೆ ಮಾಡಿದ್ದಾರೆ.

ಇನ್ನು ಶಿರಡಿಗೆ ಆಗಮಿಸುವವರಿಗೆ ಖಂಡೋಬಾ ದೇವಾಲಯ, ಸಾಕೋರಿ ಆಶ್ರಮ, ಶನಿ ದೇವಾಲಯ, ಚಂಗ್ ದೇವ್ ಮಹಾರಾಜ್ 
ಸಮಾಧಿ, ನರಸಿಂಹ ದೇವಾಲಯಗಳು ಆಕರ್ಷಣೆಯ ಕೇಂದ್ರವಾಗುತ್ತದೆ. ಬಾಬಾ ಅವರು ತಮ್ಮ ಸ್ವ ಹಸ್ತದಿಂದ ಬೆಳಸಿ ಪೋಷಿಸಿದ 
ತೋಟವು ಕೂಡ ಇದೆ. ಬಾಬಾ ನಿತ್ಯವು ಈ ವನವನ್ನು ದರ್ಶನ ಮಾಡಿ ನಿಂಬೆ ಮರದ ಕೆಳಗೆ ವಿಶ್ರಮಿಸುತ್ತಿದ್ದರು ಎನ್ನುವುದು 
ವಿಶೇಷ.

ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಲ್ಲಿ ಸುಂದರವಾದ ಬಾಬಾ ಅವರ ವಿಗ್ರಹವಿದ್ದು ಗುರುವಾರದಂದು ಭಾರಿ ಸಂಖ್ಯೆಯಲ್ಲಿಯೇ ಜನರು ಸೇರಿರುತ್ತಾರೆ. ಆ ದಿನವು ಪ್ರತ್ಯೇಕವಾದ ಪೂಜೆ, ಬಾಬಾ ವಿಗ್ರಹದ ಪ್ರತ್ಯೇಕವಾದ ದರ್ಶನವಿರುತ್ತದೆ. ಮಂದಿರದಲ್ಲಿ ಬೆಳಗಿನ ಜಾವದ 5 ಗಂಟೆಗೆ ಬಾಬಾಗೆ ಕಾಕಡ ಹಾರತಿಯನ್ನು ಮಾಡುತ್ತಾರೆ. ರಾತ್ರಿಯ ಸಮಯದಲ್ಲಿ ಪ್ರಾರ್ಥನೆಯ ನಂತರ 11 ಗಂಟೆಗೆ ದೇವಾಲಯವನ್ನು ಮುಚ್ಚುತ್ತಾರೆ. 


ಮಂದಿರದಲ್ಲಿ ಸುಮಾರು 600 ಮಂದಿ ಭಕ್ತರಿಗೆ ಸರಿಹೋಗುವಂತಹ ಬೃಹತ್ ಹಾಲ್ ಕೂಡ ಇದೆ. ಮೊದಲನೇ ಅಂತಸ್ತಿನಲ್ಲಿ ಬಾಬಾರ ಜೀವನದಲ್ಲಿನ ಮುಖ್ಯವಾದ ಘಟ್ಟಗಳನ್ನು ಕಾಣುವ ಚಿತ್ರಗಳು ಇವೆ. ಈ ಪವಿತ್ರವಾದ ಸ್ಥಳದಲ್ಲಿನ ಅಂಗಡಿಗಳಲ್ಲಿಯೂ ಬಾಬಾ ಅವರ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳು, ಚಿತ್ರಗಳನ್ನು ಮಾರಾಟ ಮಾಡುತ್ತಾರೆ.

ಸಾಯಿಬಾಬಾ ವಿಗ್ರಹ ಸ್ಥಾಪನೆ

ಗುಜರಾತ್‍ನಲ್ಲಿ 1889 ರಲ್ಲಿ ಜನ್ಮಿಸಿದ ಸ್ವಾಮಿ ಸಾಯಿಚರಣ್ ಮೊಟ್ಟಮೊದಲ ಬಾರಿಗೆ ಸಾಯಿಬಾಬಾ ಅವರನ್ನು ತನ್ನ ತಂದೆಯ ಜೊತೆ ಸೇರಿ ಮೊಟ್ಟ ಮೊದಲ ಬಾರಿಗೆ ಅಂದರೆ 1911 ರಲ್ಲಿ ಬಾಬಾರನ್ನು ಆನಂದ ದರ್ಶನ ಮಾಡಿಕೊಂಡನು. 

ಕುಷ್ಠರೋಗಿಗಳನ್ನು ನಯ ಮಾಡುತ್ತಿದ್ದ ಬಾಬಾ ಅವರನ್ನು ಕಂಡು ಆಶ್ಚರ್ಯಗೊಂಡ ಆನಂದನು ತನ್ನ ತಂದೆಯವರ ಅನುಮತಿಯ ಮೇರೆಗೆ ಸಾಷ್ಟಾಂಗ ಸಮಸ್ಕಾರವನ್ನು ಮಾಡಿದ. ಆಗ ಬಾಬಾ ಅವರು ಆನಂದನಿಗೆ ದೇವರು ಇದ್ದಾನೆಯೋ, ಇಲ್ಲವೋ ಎಂದು ಎಂದಿಗೂ ಅನುಮಾನ ಬೇಡ ಎಂದರು. ತದನಂತರ 1912 ರಲ್ಲಿ ಗುರು ಪೌರ್ಣಮಿಯಂದು ಬಾಬಾ ಆನಂದನ ಕನಸ್ಸಿನಲ್ಲಿ ಬಂದು "ನೀನೆಂದರೆ ನನಗೆ ಇಷ್ಟ" ಎಂದು ಹೇಳಿದರು. ಅಂದಿನಿಂದ ಆನಂದನು ಆ ಶಿರಿಡಿಯಲ್ಲಿಯೇ ಉಳಿದುಕೊಂಡನು. ಬಾಬಾ ಭಕ್ತರಿಂದ ದಕ್ಷಿಣೆಯನ್ನು ತೆಗೆದುಕೊಳ್ಳುವುದನ್ನು ಆನಂದನು ಹಲವಾರು ಬಾರಿ ಕಂಡಿದ್ದನು. ಬಾಬಾ ಅವರ ಜೀವಿತಾವಧಿಯಲ್ಲಿ ಹಲವಾರು ಅದ್ಭುತಗಳು, ಭೋದನೆಗಳನ್ನು ಸಮೀಪದಲ್ಲಿಯೇ ಇದ್ದು ಪುಸ್ತಕಗಳನ್ನು ರಚನೆ ಮಾಡಬೇಕು ಎಂದು ಅಂದುಕೊಂಡನು.

ಬಾಬಾ ಸಮಾಧಿಯಾದ ನಂತರ ಸಾಯಿ ಸಂಸ್ಥಾನದಲ್ಲಿ ಕಾರ್ಯಕಲಾಪಗಳಲ್ಲಿ ಆನಂದನು ಪಾಲ್ಗೊಳ್ಳುತ್ತಿದ್ದನು. 1945 ರಲ್ಲಿ ಶಿರಿಡಿ ಸಮಾಧಿ ಮಂದಿರದಲ್ಲಿ ಬಾಬಾರವನ್ನು ಅಮೃತ ಶಿಲೆಯಲ್ಲಿ ವಿಗ್ರಹವನ್ನು ಪ್ರತಿಷ್ಟಾನೆ ಮಾಡಿದರು. ಆನಂದ್ 1963 ರಲ್ಲಿ ಸನ್ಯಾಸವನ್ನು ಸ್ವೀಕಾರ ಮಾಡಿ ಸ್ವಾಮಿಜೀಯಾಗಿ ಮಾರ್ಪಾಟಾದರು.

ಶಿರಡಿ ಸಾಯಿಬಾಬಾರವದರ ಬೋಧನೆಗಳು

ಸಾಯಿ ಬಾಬಾ ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆಗಳನ್ನು, ಜಾತಿ ವಾದಗಳನ್ನು ವಿರೋಧಿಸುತ್ತಿದ್ದರು. ಯಾವುದೇ 
ಒಂದು ಧರ್ಮಕ್ಕೆ ಕಟ್ಟು ಬೀಳದೆ ಧರ್ಮಾತೀತವಾದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಮುಸ್ಲೀಮರ ರಂಜಾನ್ ಹಬ್ಬವನ್ನು, ಹಿಂದೂಗಳ 
ರಾಮ ನವಮಿಯನ್ನು ಸಾಂಗವಾಗಿ ಆಚರಿಸುತ್ತಿದ್ದರು. ಯಾವಾಗಲು ತಮ್ಮ ಅನುಯಾಯಿಗಳಿಗೆ ಸರಳ ಜೀವನವನ್ನೇ ನಡೆಸುವಂತೆ 
ಹಾಗು ತಮಗೆ ಇದ್ದುದರಲ್ಲಿಯೇ ದಾನ ಮಾಡಿ ಹಂಚಿ ತಿನ್ನುವ ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಕರೆ ಕೊಟ್ಟಿದ್ದರು.

ಸಾಯಿ ಬಾಬಾ ಅಭಯ ವಾಕ್ಯಗಳು

ಶಿರಡಿಯ ಪವಿತ್ರ ಮಣ್ಣಿನ ಮೇಲೆ ಪಾದವಿರಿಸಿದ ಯಾರಿಗೆ ಆಗಲಿ ಕೆಟ್ಟದ್ದು ಎಂಬುದು ಘಟಿಸಲಾರದು.
ನನ್ನ ಸಮಾಧಿಗೆ ಭೇಟಿ ಕೊಡುವರಿಗೆ ಕಷ್ಟ ಮತ್ತು ಯಾತನೆಗಳು ದೂರಾಗುವವು.
ನಾನು ಭೌತಿಕವಾಗಿ ಇಲ್ಲವಾದರೂ, ನನ್ನ ಸಮಾಧಿಯಿಂದಲೇ ಸದಾ ಭಕ್ತರನ್ನು ರಕ್ಷಿಸುತ್ತೇನೆ.

ನನ್ನನ್ನು ನಂಬಿ, ನಿಮ್ಮ ಎಲ್ಲ ಪ್ರಾರ್ಥನೆಗಳಿಗೂ ನನ್ನಲ್ಲಿ ಉತ್ತರಗಳಿವೆ.
ನನ್ನ ಆತ್ಮವು ಅಮರವಾಗಿದೆ. ಇದನ್ನು ಮೊದಲು ತಿಳಿದುಕೊಳ್ಳಿ.
ನನ್ನನ್ನು ನಂಬಿ ಆರಾಧಿಸಿದ ಭಕ್ತರ ಮನೆಯಲ್ಲಿ ಕಷ್ಟ ಎಂಬ ಪದವೇ ಇರಲಾರದು.
ನನಗೆ ಯಾರು ಸಂಪೂರ್ಣವಾಗಿ ಶರಣಾಗುವರೋ ಅವರಿಗೆ ನಾನು ಸಂಪೂರ್ಣ ಅಧೀನನಾಗಿರುತ್ತೇನೆ.
ಎಲ್ಲರ ಭಾರವನ್ನು ನಾನು ತೆಗೆದುಕೊಳ್ಳುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಬೇಡ.
ಎಲ್ಲ ಸಹಾಯವೂ ಇಲ್ಲೇ ಸಿಗುತ್ತದೆ. ಇದನ್ನು ತಿಳಿಯಿರಿ ಯಾರು ಯಾರು ಹೇಗೆ ಬೇಡುತ್ತಾರೊ ಹಾಗೆ ಫಲವು ದೊರೆಯುತ್ತದೆ.
ಯಾರಾದರೂ ನನಗೆ ಶರಣು ಬಂದು, ಅವರ ಜೀವನ ಪ್ರಯೋಜನವಾಗದೆ ಇದ್ದಾರೆ ತೋರಿಸಿ.
ಸಾಯಿ ಸಾಯಿ ಎಂದವನೇ ಪುಣ್ಯವಂತನು, ನನ್ನ ಮೇಲೆ ಅನನ್ಯ ವಿಶ್ವಾಸ ಶ್ರದ್ಧೆ ಇಟ್ಟು ಸಾಯಿ ಸಾಯಿ ಎಂದವನೇ ಧನ್ಯನು.

ಪವಾಡಗಳು

ಸಾಯಿ ಬಾಬಾ ಅನುಯಾಯಿಗಳು ಹಾಗು ಭಕ್ತರು ಬಾಬಾರ ಹಲವು ಪವಾಡಗಳನ್ನು ನೋಡಿದ್ದಾಗಿ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. 
ಒಂದೇ ಸಮಯದಲ್ಲಿ ಎರಡು ಸ್ಥಳದಲ್ಲಿರುವುದು, ನಿರಾಧಾರವಾಗಿ ಗಾಳಿಯಲ್ಲಿ ತೇಲುವುದು, ಮುಖ ನೋಡಿದ ತಕ್ಷಣ 
ಮನಸ್ಸಿನಲ್ಲಿರುವುದನ್ನು ಹೇಳುವುದು, ದೇಹದಿಂದ ಆತ್ಮದ ಬೇರ್ಪಡಿಸುವಿಕೆ, ಯಮುನಾ ನದಿಯ ಸೃಷ್ಟಿ, ಸಮಾಧಿ ಸ್ಥಿತಿಗೆ 
ತಲುಪುವುದು, ರೋಗಿಗಳನ್ನು ಕ್ಷಣಾರ್ಧದಲ್ಲಿ ಗುಣಮುಕ್ತರನ್ನಾಗಿ ಮಾಡುವುದು, ಕರುಳು ಮತ್ತಿತರ ಹೊಟ್ಟೆಯ ಭಾಗಗಳನ್ನು 
ಹೊಟ್ಟೆಯಿಂದ ತೆಗೆದು ಮತ್ತೆ ಹಾಗೆ ಕೂಡಿಸುವುದು,ಬೀಳುತ್ತಿದ್ದ ಮಸೀದಿಯನ್ನು ನೋಟದಿಂದಲೇ ತಡೆದಿದ್ದು, ತಮ್ಮ ಭಕ್ತರಿಗೆ ಪವಾಡ 
ಸದೃಶವಾಗಿ ಸಹಾಯ ಮಾಡುತ್ತಿದ್ದ ಎಷ್ಟೋ ಉದಾಹರಣೆಗಳು ಇವೆ.

ಇಂತಹಾ ಕೆಲ ಪ್ರಮುಖ ಪವಾಡಗಳ ಕಿರು ನೋಟ ಇಲ್ಲಿದೆ-

ಮಹಿಳೆಯ ಅಂಧತ್ವ ನಿವಾರಿಸಿದ ಸಾಯಿ ಬಾಬಾ 

ಸಾಯಿ ಬಾಬಾರ ಭಕ್ತೆಯೊಬ್ಬರು ಯಾವುದೋ ಕಾರಣದಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ಹಲವು ನೇತ್ರವೈದ್ಯರಲ್ಲಿ 
ತೋರಿಸಿದ ಬಳಿಕವೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲ, ವಿದೇಶಕ್ಕೂ ಕರೆದುಕೊಂಡು ಹೋಗಿ ತಜ್ಞರಿಗೆ 
ತೋರಿಸಲಾಯಿತು. ಎಲ್ಲೂ ಇವರ ಅಂಧತ್ವಕ್ಕೆ ಪರಿಹಾರವೇ ಇರಲಿಲ್ಲ. ಇವರ ದುಃಖವನ್ನು ನೋಡಲಾರದೇ ಆಕೆಯ ಪತಿ ಆಕೆ 
ಆರಾಧಿಸುತ್ತಿದ್ದ ಸಾಯಿಬಾಬಾರ ಸಮಾಧಿಯನ್ನು ಸಂದರ್ಶಿಸುವ ಮೂಲಕ ಕೊಂಚ ಮನಸ್ಸಿಗೆ ಶಾಂತಿ ಸಿಗಬಹುದು ಎಂದು ಶಿರ್ಡಿಗೆ 
ಕರೆದುಕೊಂಡು ಬಂದರು. 



ಸಾಯಿಬಾಬಾರ ಸಮಾಧಿಯ ಬಳಿ ಆಕೆ ತನಗೆ ದೃಷ್ಟಿ ಬಂದರೆ ತಾವು ಬಾಬಾರಿಗೆ ಕಸೂತಿ ಇರುವ ಶಾಲ್ ಒಂದನ್ನು ದೇಣಿಗೆ 
ನೀಡುವುದಾಗಿ ಹರಕೆ ಹೊತ್ತರು. ಅಂದಿನಿಂದ ನಿಧಾನವಾಗಿ ಅವರ ದೃಷ್ಟಿ ಮರುಕಳಿಸತೊಡಗಿತು. ಒಂದೇ ವರ್ಷದಲ್ಲಿ ಅವರು 
ಪೂರ್ಣ ದೃಷ್ಟಿಯನ್ನು ಪಡೆದರು. ಬಳಿಕ ಅವರು ತಮ್ಮ ಮಾತಿನಂತೆ ದೇಣಿಗೆಯನ್ನು ಒಪ್ಪಿಸಿ ಹರಕೆಯನ್ನು ಪೂರೈಸಿದರು. 

ಬೆಂಕಿಯ ಮುನ್ಸೂಚನೆ

ಒಮ್ಮೆ ಶಿರಡಿಯಲ್ಲಿ ಬೆಳೆಯ ಕಟಾವು ಮುಗಿದ ಬಳಿಕ ಒಂದು ಮೈದಾನದಲ್ಲಿ ಇಡಿಯ ಗ್ರಾಮದವರ ಬೆಳೆಯನ್ನು ಒಂದೆಡೆ 
ಸಂಗ್ರಹಿಸಲಾಗಿತ್ತು. ಅದು ಬೇಸಿಗೆಯ ದಿನವಾಗಿದ್ದು ಬಿಸಿಲು ಪ್ರಖರವಾಗಿತ್ತು. ಎಲ್ಲರ ಮೈಯಿಂದ ಬೆವರು ಸುರಿಯುತ್ತಿತ್ತು. ಒಂದು 
ದಿನ ನಡುಮಧ್ಯಾಹ್ನ ಎಲ್ಲರೂ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ 
ಗ್ರಾಮಸ್ಥರೊಬ್ಬರಿಗೆ ಬೆಳೆಗೆ ಬೆಂಕಿ ಹತ್ತಿದೆ ಎಂದು ತಿಳಿಸಿದರು.



ಕೂಡಲೇ ಬೆಳೆ ಇದ್ದ ಕಡೆ ಓಡಿದ ಆ ಗ್ರಾಮಸ್ಥ ದೂರದಿಂದ ಕಂಡಾಗ ಯಾವುದೇ ಬೆಂಕಿ ಕಾಣಿಸದ ಕಾರಣ ಹಿಂದಿರುಗಿ ಅಲ್ಲಿ 
ಯಾವುದೇ ಬೆಂಕಿ ಇಲ್ಲವೆಂದು ತಿಳಿಸಿದ. ಆದರೆ ತಮ್ಮ ಮಾತಿನಿಂದ ಹಿಂದೆ ಬರದ ಸಾಯಿಬಾಬಾ ಮತ್ತೊಮ್ಮೆ ಹೋಗಿ ನೋಡು, 
ಬೆಂಕಿ ಇದೆ, ಎಂದು ತಿಳಿಸಿದರು. ಯಾವುದಕ್ಕೂ ಹೋಗಿ ನೋಡೋಣ ಎಂದು ಪರಿಶೀಲಿಸಲು ಬಂದ ಗ್ರಾಮಸ್ಥರಿಗೆ ನಿಜವಾಗಿಯೂ 
ಬೆಳೆಯ ಗುಂಪಿನ ಹತ್ತಿರವೇ ಇದ್ದ ಹುಲ್ಲಿನ ಕಟ್ಟೊಂದಕ್ಕೆ ಬೆಂಕಿ ಹತ್ತಿದ್ದು ಇನ್ನು ಕೊಂಚ ಹೊತ್ತು ಕಳೆದಿದ್ದರೆ ಇಡಿಯ ಬವಣೆಗೆ ಬೆಂಕಿ 
ಹತ್ತುವ ಸಂಭವವಿತ್ತು.

ನೀರಿನಿಂದ ದೀಪ ಬೆಳಗಿತು!

ಸಂತರೆಂದು ಗುರುತಿಸಲ್ಪಡುವ ಮುನ್ನ ಸಾಯಿ ಬಾಬಾರಿಗೆ ಜನರ ಮನಃಸ್ಥಿತಿಯನ್ನು ಅರಿಯಲು ಬಹಳ ಕಷ್ಟಪಡಬೇಕಾಗಿ ಬಂದಿತ್ತು. 
ಇದಕ್ಕೊಂದು ಉದಾಹರಣೆ ಎಂದರೆ ನೀರಿನಿಂದ ದೀಪ ಬೆಳಗಿಸುವ ಪವಾಡ. ಅಂದು ಫಕೀರ (ಧರ್ಮ ಪ್ರಚಾರಕ) ರಾಗಿದ್ದ 
ಸಾಯಿಬಾಬಾರಿಗೆ ಮಸೀದಿಯಲ್ಲಿ ಹಚ್ಚುವ ದೀಪಕ್ಕೆ ಎಣ್ಣೆ ಕೊಳ್ಳಲು ಹಣವಿಲ್ಲದೇ ಇದ್ದ ಕಾರಣ ವರ್ತಕರಿಂದ ಎಣ್ಣೆಯನ್ನು ದಾನ 
ಪಡೆದುಕೊಳ್ಳಬೇಕಾಗಿ ಬರುತ್ತಿತ್ತು. 

ಆದರೆ ಪ್ರತಿಬಾರಿ ಎಣ್ಣೆಯನ್ನು ದಾನ ನೀಡಿ ಬೇಸರಿಸಿದ ವರ್ತಕರು ಒಂದು ದಿನ ತಮ್ಮಲ್ಲಿ ಎಣ್ಣೆ ಇಲ್ಲ ಎಂದು ಸುಳ್ಳೇ ಹೇಳಿದರು. 
ಇವರ ಮಾತಿಗೆ ಯಾವುದೇ ಎದುರುತ್ತರ ನೀಡದ ಸಾಯಿಬಾಬಾ ದೀಪಗಳನ್ನು ನೀರಿನಿಂದ ತುಂಬಿಸಿ ಬೆಳಗಿಸಿದರು. ಈ ದೀಪಗಳು 
ಸೂರ್ಯಾಸ್ತದ ಸಮಯದಿಂದ ಮಧ್ಯರಾತ್ರಿಯವರೆಗೆ ಎಣ್ಣೆ ಉರಿದಂತೆಯೇ ಉರಿದವು. 

ಎಲ್ಲರನ್ನೂ ಪ್ರೀತಿಸಿ

ಬಾಬಾರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು ಅವರು ಯಾರನ್ನೂ ಜಾತಿ ಮತ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ 
ಪರಿಗಣಿಸುತ್ತಲೇ ಇರಲಿಲ್ಲ. ಬರೆಯ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳನ್ನೂ ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಎಷ್ಟೋ 
ಸಲ ತಮ್ಮ ಭಕ್ತರ ಮನೆಗಳಲ್ಲಿ ಅವರು ಪ್ರಾಣಿಗಳ ರೂಪದಲ್ಲಿ ಬಂದು ಅವರ ಮನೆಯ ಪ್ರಸಾದ ಸ್ವೀಕರಿಸುತ್ತಿದ್ದರು. ಒಮ್ಮೆ ಅವರ 
ಭಕ್ತರಾದ ದಾಮಿಯಾ ಎಂಬುವರು ಬಾಬಾರನ್ನು ತಮ್ಮ ವಠಾರಕ್ಕೆ ಊಟಕ್ಕೆ ಆಹ್ವಾನಿಸಿದರು. ಆದರೆ ಬಾಬಾ ತಮ್ಮ ಬದಲಿಗೆ ತಮ್ಮ 
ಇನ್ನೊಬ್ಬ ಭಕ್ತ ಬಾಲಾ ಪಟೇಲ್ ಎಂಬುವರು ಬರುತ್ತಾರೆ ಎಂದು ತಿಳಿಸಿದರು

ಬಾಲಾ ಪಟೇಲ್ ದಲಿತರಾಗಿದ್ದ ಕಾರಣ ದಾಮಿಯಾ ಅಥವ ಅವರ ಪಂಗಡದ ಯಾರೂ ಬಾಲಾಪಟೇಲರನ್ನು ಅವಮಾನ 
ಮಾಡುವುದಾಗಲೀ ಮೂದಲಿಸುವುದಾಗಲೀ ಮಾಡಬಾರದು, ತಮ್ಮಿಂದ ದೂರವಾಗಿ ಕುಳ್ಳರಿಸಬಾರದು ಎಂದು ಸ್ಪಷ್ಟವಾಗಿ 
ತಿಳಿಸಿದರು. ಅಂತೆಯೇ ಬಾಬಾ ಹಾಗೂ ಉಳಿದವರಿಗಾಗಿ ಅನ್ನದ ತಟ್ಟೆಗಳನ್ನು ಸಿದ್ಧಪಡಿಸಿದ ದಾಮಿಯಾ "ಸಾಯಿ, ಬನ್ನಿ" ಎಂದು 
ಕರೆದ ತಕ್ಷಣ ಎಲ್ಲಿಂದಲೂ ಒಂದು ಕಪ್ಪು ನಾಯಿ ಓಡೋಡಿ ಬಂದು ಬಾಬಾರಿಗಾಗಿ ಇಟ್ಟಿದ ತಟ್ಟೆಯಿಂದ ತಿಂದು ಬಂದಷ್ಟೇ 
ವೇಗವಾಗಿ ಹಿಂದಿರುಗಿತು. ಬಳಿಕ ದಾಮಿಯಾ ಹಾಗೂ ಬಾಲಾ ಪಟೇಲ್ ಜೊತೆಯಾಗಿ ಕುಳಿತು ಊಟ ಮಾಡಿದರು. 

ಬಾಬಾರಿಗೆ ಶಿಷ್ಟಾಚಾರ ಮತ್ತು ಧರ್ಮದ ಅಂಧಾನುಕರಣೆ ಬೇಕಿರಲಿಲ್ಲ. ಅವರ ಅನುಗ್ರಹ ಪಡೆಯಲು ಭಕ್ತಿ ಮತ್ತು ನಂಬಿಕೆಯೇ ಸಾಕು 
ಎಂದು ಅವರ ಭಕ್ತರು ಇಂದಿಗೂ ನಂಬುತ್ತಾರೆ. 

ಪಟೇಲನ ಕುದುರೆ

ಧೂಪ್​ಖೇಡಾ ಗ್ರಾಮದ ಪಟೇಲನಾದ ಚಾಂದ್​ಪಾಟೀಲ್ ಕಳೆದುಹೋದ ತನ್ನ ಕುದುರೆಯನ್ನು ಹುಡುಕುವುದರಲ್ಲಿ 
ಮನುಷ್ಯಪ್ರಯತ್ನವನ್ನೆಲ್ಲ ಮಾಡಿ ದಾರಿಕಾಣದೆ ‘ಏಲಗಂಗಾ’ ನದಿದಂಡೆಯ ಮೇಲೆ ಕುಳಿತು ದುಃಖಭಾರದಲ್ಲಿ ಅಶ್ರುಧಾರೆ ಹರಿಸಿ, 
ನಂಬಿದ ದೇವರನ್ನು ಒಂದೇ ಮನಸ್ಸಿನಿಂದ ಧ್ಯಾನಿಸುತ್ತಿದ್ದನು. ಆಗ ಯಾರೋ ತನ್ನ ಹೆಸರನ್ನು ಕೂಗಿ ಕರೆಯುತ್ತಿರುವಂತೆ 
ಭಾಸವಾಗಿ ನದಿದಂಡೆಯ ಬೆಟ್ಟದ ಮೇಲಿನ ಕಲ್ಲುಬಂಡೆಗಳ ದಾಟಿ ಅಲ್ಲಿದ್ದ ದಿವ್ಯಪುರುಷನ ಕಂಡು ಮಾತು ಹೊರಡದೆ ನಿಂತನು. 
ಆಗ ಫಕೀರನು ‘ಯಾಕೆ ಚಾಂದ್​ಪಾಟೀಲ್, ಸೋಜಿಗವ ಕಂಡಂತೆ ನಿಂತಿರುವೆ?’ ಎಂದನು. ದೇವವಾಣಿಯ ಮಾಧುರ್ಯ 
ತುಂಬಿದ ಫಕೀರನ ಮಾತಿಗೆ ಇನ್ನಷ್ಟು ಚಕಿತನಾದ ಚಾಂದ್, ‘ತಮಗೆ ನನ್ನ ಹೆಸರು ಹೇಗೆ ಗೊತ್ತು?’ ಎಂಬುದಾಗಿ 
ಕುತೂಹಲದಲ್ಲಿ ಕೇಳಿದಾಗ ಆ ಮಹಾತ್ಮನು ಮಂದಹಾಸ ಬೀರಿದನು. ‘ಇಲ್ಲಿನ ಚರಾಚರಗಳೆಲ್ಲವುಗಳ ಬಗ್ಗೆ ಅರಿವಿರುವ ನನಗೆ 
ನಿನ್ನ ಹೆಸರು ತಿಳಿಯದಿರುವುದೇ ಪಾಟೀಲ್? ನಿನ್ನ ನೆಚ್ಚಿನ ಕುದುರೆ ಕಳೆದುಕೊಂಡು ರೋದಿಸುತ್ತಿರುವೆಯಲ್ಲವೇ? ಅದರ ಅಗಲಿಕೆಯ 
ನೋವನ್ನು ಸಹಿಸದಾಗದೆ ನಿನ್ನ ದೈನಂದಿನ ವ್ಯವಹಾರವನ್ನೂ ಮರೆತು ಬಿಜಿಲಿಯ ಜೀನು ಹೆಗಲಿನಲ್ಲಿ ಹೊತ್ತು ಅದನ್ನು ಹುಡುಕುತ್ತ 
ಊರುಕೇರಿ ಕಾಡುಮೇಡು ಅಲೆಯುತ್ತಿರುವೆಯಲ್ಲವೇ? ಪ್ರಾಪಂಚಿಕ ವಿಷಯವಾಸನೆಯಲ್ಲಿ ತನ್ನನ್ನು ತಾನು ಕಳೆದುಕೊಂಡು; ಅದರ 
ಹುಡುಕಾಟದಲ್ಲಿ ಬದುಕೆಂಬ ಭ್ರಮೆಯೊಳಗೆ ಜೀವಿಸುವವನು ಮನುಷ್ಯಮಾತ್ರನಲ್ಲವೇ?’ ಎಂದು ಮತ್ತೆ ಆ ಫಕೀರನು ನಕ್ಕನು.
ಇದೇನು ತಾನು ಕಾಣುತ್ತಿರುವುದು ಸ್ವಪ್ನವಲ್ಲವಷ್ಟೇ! ನಿಜಸಂಗತಿಯ ನೋಡಿದಂತೆಯೇ ಹೇಳುತ್ತಿರುವರು. ಇವರು ನಿಜಕ್ಕೂ 
ಮನುಷ್ಯರಲ್ಲ, ದೇವಮಾನವರೇ ಇರಬೇಕೆಂದುಕೊಂಡನು. ಕಾಣದೆಯೂ ಕಂಡಂತೆ ಎಲ್ಲವನ್ನೂ ಹೇಳಿದ ಫಕೀರನ ಮಾತಿಗೆ 
ಅಹುದು ಅಹುದೆಂದು ಶರಣುಹೋದ ಪಾಟೀಲನು ಭಕ್ತಿಗೌರವದಲ್ಲಿ ಅವರ ಪಾದ ಮುಟ್ಟಿ ನಮಸ್ಕರಿಸಿ ಕೈಯನ್ನು 
ಕಣ್ಣಿಗೊತ್ತಿಕೊಂಡನು. ಆಗ ಆ ಮಹಾತ್ಮನು, ‘ಮೂರು ತಿಂಗಳಿನಿಂದ ಬಿಜಲಿಗಾಗಿ ಹಂಬಲಿಸಿ ದುಃಖಿಸಿರುವೆ. ಬಿಜಿಲಿಯೂ ನಿನ್ನ 
ಅಗಲಿಕೆಯನ್ನು ಸಹಿಸದೆ – ಎಂದು ಒಡೆಯನ ನೆರಳು ಸೇರುವೆನೋ ಎಂದು ಕಾದಿದೆ. ನಿನ್ನ ಬಿಜಲಿ ಇಲ್ಲೇ ನಿನ್ನ ಬಳಿಯಲ್ಲೇ ಇದೆ. 
ಕರೆಯದೆ ಕುದುರೆಯಾದರೂ ಹೇಗೆ ಬರಲು ಸಾಧ್ಯ?’ ಎಂದ ಫಕೀರನು ನದಿಯ ತಪ್ಪಲಿನತ್ತ ಮುಖಮಾಡಿ, ‘ಬಿಜಿಲಿ.. ಬಿಜಿಲಿ.. 
ಬಿಜಿಲಿ.. ಬಾರಪ್ಪ, ನಿನ್ನ ಯಜಮಾನ ಕಾಯುತ್ತಿದ್ದಾನೆ’ ಎಂದು ಗಟ್ಟಿಯಾಗಿ ಕೂಗಿದನು. ಮುಂದಿನ ಕ್ಷಣದಲ್ಲೇ 
ತಪ್ಪಲುಪ್ರದೇಶದಿಂದ ಮಿಂಚಿನ ವೇಗದಲ್ಲಿ ಬಿಜಿಲಿ ಮಹಾತ್ಮನೆಡೆಗೆ ಓಡಿ ಬರುತ್ತಿರುವುದನ್ನು ಕಂಡ ಚಾಂದ್​ಪಾಟೀಲ್ ತನ್ನ ಕಣ್ಣನ್ನೇ 
ನಂಬದಾದನು. ಓಡಿಬಂದು ಫಕೀರನನ್ನು ಒಮ್ಮೆ ಸುತ್ತುಹಾಕಿದ ಕುದುರೆಯಾದರೋ ತನ್ನೊಡೆಯನ ಬಳಿ ಬಂದು ಕಾಲುಗಳನ್ನು 
ಮೇಲೆತ್ತಿ ಕೆನೆಯುತ್ತ ತನ್ನ ಸಂತಸ ವ್ಯಕ್ತಪಡಿಸಿ ಆ ಮಹಾತ್ಮನ ಎದುರು ನಿಂತಿತು. ನೋಡಲು ಫಕೀರನಂತಿರುವ ಇವರು ನಿಜಕ್ಕೂ 
ಅವಲಿಯನೇ ಇರಬೇಕೆಂದು ಭಕ್ತಿಭಾವ ಪರವಶನಾದ ಚಾಂದ್​ಪಾಟೀಲ್, ‘ನಿಮ್ಮಿಂದಾಗಿ ಬಿಜಿಲಿ ಪುನಃ ನನಗೆ ಸಿಕ್ಕಿತು, ನೀವು 
ಅಸಾಮಾನ್ಯರು’ ಎಂದು ಅವರ ಚರಣಾರವಿಂದಕ್ಕೆ ಮತ್ತೊಮ್ಮೆ ನಮಿಸಿದನು.

ಅಪಸ್ಮಾರ ಖಾಯಿಲೆಯನ್ನು ದೂರ ಮಾಡಿದರು!

ಮುಂಬಯಿಯ ಹರಿಶ್ಚಂದ್ರ ಪಿತಳೆಯವರು ತಮ್ಮ ಮಗನ ಕಾರಣದಿಂದ ಬಹಳ ದುಃಖಿಯಾಗಿದ್ದರು. ಆತನು ಅಪಸ್ಮಾರ 
ರೋಗಪೀಡಿತನಾಗಿ ಎಲ್ಲೆಂದರಲ್ಲಿ ಮೂರ್ಛಿತನಾಗಿ ಬಿದ್ದುಬಿಡುತ್ತಿದ್ದನು. ಆರಂಭದಲ್ಲಿ ಕಾಯಿಲೆ ಸರಿಹೋಗುವುದೆಂದು ವೈದ್ಯರು 
ಏನೆಲ್ಲ ಔಷಧ ನೀಡಿದರೂ ಮೇಲಾಗಲಿಲ್ಲ; ವಿದೇಶಿ ವೈದ್ಯರಿಂದಲೂ ರೋಗ ಗುಣ ಕಾಣಲಿಲ್ಲ. ದೂರದೂರದ ನಗರಗಳಿಗೆ ಚಿಕಿತ್ಸೆಗೆ 
ಹೋಗಿ ಬಂದರೂ ಫಲ ನೀಡಲಿಲ್ಲ. ದಿನೇದಿನೆ ಮಗನು ಹಿಂಸೆ ಅನುಭವಿಸುವುದನ್ನು ನೋಡಲಾರದೆ ಬದುಕು ಕಣ್ಣೀರಾಗಿತ್ತು. 
ಆಗರ್ಭ ಶ್ರೀಮಂತನಾದ ಪಿತಳೆ ಮಗನ ಕಾಯಿಲೆ ಗುಣಪಡಿಸಲು ಅದೆಷ್ಟು ಹಣವಾದರೂ ಖರ್ಚುಮಾಡಲೂ ಸಿದ್ದನಿದ್ದ. ವೈದ್ಯರೇ 

ಕೈಚೆಲ್ಲಿದ ಮೇಲೆ ಅವನಾದರೂ ಏನು ಮಾಡಿಯಾನು? ಸಾವಿನ ಮನೆ ಬಾಗಿಲು ತಟ್ಟುತ್ತಿರುವ ಮಗನನ್ನು ನೋಡಿ ಸುಮ್ಮನೆ 
ಕುಳಿತಿರಲಾಗದೆ ಬೇರೆ ದಾರಿಯೇನೆಂಬ ಚಿಂತೆಯಲ್ಲಿದ್ದನು. ಎಲ್ಲ ಇದ್ದೂ ಏನೂ ಮಾಡಲಾಗದ ಸ್ಥಿತಿ ಪಿತಳೆಯದು.
ಆ ಹೊತ್ತಿಗಾಗಲೇ ದಾಸಗಣುವಿನ ಹರಿಕಥೆ-ಕೀರ್ತನೆಗಳಿಂದ ಸಾಯಿಬಾಬಾರ ಕೀರ್ತಿ ದೇಶದೆಲ್ಲೆಡೆ ವ್ಯಾಪಿಸಿತ್ತು; ಅವರ 
ಮಹಿಮೆಯನ್ನು ಹಾಡಿ ಕೊಂಡಾಡುವರು ಸಾಕಷ್ಟು ಜನರಿದ್ದರು. ಸದ್ಗುರುವಿನ ದರ್ಶನ, ಹಸ್ತಸ್ಪರ್ಶಮಾತ್ರದಿಂದಲೂ ಹಾಗೂ ಅವರು 
ನೀಡುವ ವಿಭೂತಿಯಿಂದಲೂ ಸರ್ವರೋಗಗಳು ಗುಣವಾಗುವುದೆಂಬ ಮಾತು ಜನಜನಿತವಾಗಿತ್ತು. ಇದು ಹರಿಶ್ಚಂದ್ರ ಪಿತಳೆಯವರ 
ಕಿವಿಗೂ ಬಿದ್ದಿತ್ತು. ಆದರೆ ಅವನಿಗೆ ದೇವರು, ದೇವರ ಪೂಜೆ, ಗುರುಬಾಬಾಗಳ ದರ್ಶನ, ಹರಕೆ, ಕಾಣಿಕೆ ಇವುಗಳ ಮೇಲೆ ಅಷ್ಟಾಗಿ 
ನಂಬಿಕೆ ಇರಲಿಲ್ಲ. ಅವನು ಮಾಡುತ್ತಿದ್ದ ವ್ಯವಹಾರವೂ ಅದಕ್ಕೆ ಪೂರಕವಾಗಿಯೇ ಇತ್ತು. ಆತನ ತಂದೆ-ತಾಯಿ ದೈವಭಕ್ತರಾದರೂ 
ಮಗನಲ್ಲಿ ಅದೊಂದು ಸಂಸ್ಕಾರ ಹರಿದುಬಂದಿರಲಿಲ್ಲ. ಕೆಲವು ಭಕ್ತಬಂಧುಗಳು, ‘ನಿಮ್ಮ ಮಗನನ್ನು ಕರೆದುಕೊಂಡು ಬಾಬಾರಲ್ಲಿಗೆ 
ಹೋಗಿ’ ಎಂದು ಹೇಳಿದರಾದರೂ ಆತ ಮೊದಮೊದಲು ಅವರ ಮಾತು ಕೇಳಲಿಲ್ಲ. ಮುಂದೆ ಮಗನ ಕಾಯಿಲೆ 
ಉಲ್ಬಣಗೊಳ್ಳತ್ತಿರುವಂತೆ ಬೇರೆ ದಾರಿಗಾಣದಾಯಿತು; ‘ಮನುಜಪ್ರಯತ್ನವನ್ನೆಲ್ಲ ಮಾಡಿ ಆಗಿದೆ, ಇನ್ನು ಉಳಿದಿರುವುದು 
ದೈವವೊಂದೇ’ ಎನಿಸಿತು.




ಇಂತಹ ಒಂದು ಭಾವ ಅವರಲ್ಲಿ ಮೂಡಿದ್ದೂ ಪೂರ್ವಪುಣ್ಯದಿಂದಲಿ ಎನ್ನುವುದು ಸರಿ. ರೋಗಗ್ರಸ್ತ ಮಗನೊಂದಿಗೆ ಕುಟುಂಬಸಮೇತ 
ಶಿರಡಿಗೆ ಬಂದನು. ಬರುವಾಗ ಬರಿಗೈಯಲ್ಲಿ ಬರಲಿಲ್ಲ. ತನ್ನ ಶ್ರೀಮಂತಿಕೆ ತಕ್ಕಂತೆ ಬಾಬಾರಿಗೆಂದು ಹಣ್ಣು ಉಡುಗೊರೆಯನ್ನು 
ತಂದಿದ್ದನು. ಅವೆಲ್ಲವನ್ನೂ ಬಾಬಾರಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದನು. ಪಿತಳೆಯ ಕುಮಾರನು ಸಾಯಿನಾಥರನ್ನು 
ನೋಡುತ್ತಿರುವಂತೆ ಸ್ಮೃತಿ ತಪ್ಪಿ ಬಿದ್ದನು; ಬಾಯಿಯಿಂದ ಬಿಳಿನೊರೆ ಉಕ್ಕಿತು. ಅವನ ತಾಯಿ, ‘ಮಗನೇ’ ಎಂದು 
ಚೀತ್ಕರಿಸಿದಳು. ಉಸಿರಾಟ ನಿಲ್ಲುತ್ತಿರುವಂತೆ ಕೈಕಾಲು ಒದರುತ್ತಿದ್ದ ಮಗನನ್ನು ನೋಡಿ ತಂದೆ ದಿಕ್ಕು ತೋಚದಂತಾದನು. ಬಹಳ 
ಸಮಯದವರೆಗೂ ಅದೇ ಸ್ಥಿತಿ! ಮಗ ಆಗಾಗ ಎಚ್ಚರ ತಪ್ಪುತ್ತಿದ್ದನಾದರೂ ಈ ಪ್ರಮಾಣದ ಹಿಂಸೆ ಎಂದೂ ಅನುಭವಿಸಿರಲಿಲ್ಲ. 
‘ಸಾಯಿನಾಥರ ಸನ್ನಧಿಯಲ್ಲಿ ರೋಗ ಗುಣವಾಗುವುದೆಂದು ಬಂದರೆ ಉಲ್ಬಣವಾಯಿತಲ್ಲ, ನೆರಳಿಗಾಗಿ ಮರದ ಆಶ್ರಯಕ್ಕೆ ಬಂದರೆ 
ಮರವೇ ಶಿರದ ಮೇಲೆ ಉರುಳಿತೇ? ಹುಲಿಯಿಂದ ತಪ್ಪಿಸಿಕೊಂಡ ಹಸು ಕಟುಕನ ಕೈಗೆ ಸಿಕ್ಕಿದಂತಾಯಿತೇ? ಧರೆಗೆ ಬೀಳುವುದನ್ನು 
ತಪ್ಪಿಸಲು ಹೋಗಿ ಕೆರೆಗೆ ಕೆಡವಿದೆನೇ?’ ಎಂಬೆಲ್ಲ ಸಂಕಟದಲ್ಲಿ ಆ ದಂಪತಿ ಗೋಳಾಡಿದರು. ಇದನ್ನು ಶಾಂತಚಿತ್ತದಿಂದ 
ಗಮನಿಸಿದ ಸಾಯಿಬಾಬಾ, ‘ಏಕೆ ಇಷ್ಟು ಸಂಕಟಪಡುವಿರಿ? ದುಃಖದ ಹಿಂದೆ ಸುಖವೂ ಅನುಸರಿಸಿ ಬರುತ್ತದೆ. ಧೈರ್ಯ 
ತಂದುಕೊಳ್ಳಿ, ಪತಿ-ಪತ್ನಿ ಇಬ್ಬರೂ ಮಗನನ್ನು ಹಿಡಿದುಕೊಳ್ಳಿ, ಜ್ಞಾನ ಬರುವುದು. ನಂತರ ನೀವು ಉಳಿದುಕೊಂಡ ವಸತಿಗೃಹಕ್ಕೆ 
ಕರೆದುಕೊಂಡು ಹೋಗಿ. ಕಷ್ಟಕ್ಕೆ ಹೆದರಿದರೆ ಇಷ್ಟಾರ್ಥ ನೆರವೇರದು. ಸ್ವಲ್ಪ ಹೊತ್ತಿಗೆ ಸರಿಹೋಗುವನು’ ಎಂದು ಹೇಳಿ ಅವರ 
ಮುಂದಿನ ಮಾತಿಗೆ ಅವಕಾಶಕೊಡದಂತೆ ಎದ್ದುಹೋದರು.

ಬಾಬಾರ ಮಾತಿನಂತೆ ಕುಮಾರ ಎಚ್ಚರಗೊಂಡನು, ಆ ಕುಟುಂಬದ ಆನಂದಕ್ಕೆ ಪಾರವಿಲ್ಲ. ನಂತರ ಮಗನೊಂದಿಗೆ ವಸತಿಗೃಹಕ್ಕೆ 
ಬಂದರು. ಆ ಒಂದು ದಿನದಲ್ಲಿ ಕುಮಾರ ಸುಧಾರಿಸಿಕೊಂಡನು. ಸದ್ಗುರುವಿನ ದರ್ಶನ ಆಶೀರ್ವಾದಮಾತ್ರದಿಂದಲೆ ಮಗನಿಗೆ 
ಗುಣವಾಯಿತು. ಅವರಲ್ಲಿದ್ದ ಸಂಶಯ ದೂರವಾಗಿ ಸಾಯಿನಾಥರ ಮೇಲಿನ ಭಕ್ತಿ, ನಂಬಿಕೆ ದ್ವಿಗುಣಗೊಂಡಿತು. ಮರುದಿನ 
ದಂಪತಿಯಿಬ್ಬರೂ ಮಸೀದಿಗೆ ತೆರಳಿ ಸಾಯಿನಾಥರಿಗೆ ಸಾಷ್ಟಾಂಗವೆರಗಿ ಅವರ ಸೇವೆಯಲ್ಲಿ ತೊಡಗಿದರು. ಆಗ ಬಾಬಾ, ‘ನಿಮ್ಮ 
ಸಂಕಲ್ಪ ತೀರಿತು ತಾನೆ? ವಿಕಲ್ಪದ ತರಂಗಗಳು ಹಾರಿಹೋದವಷ್ಟೆ! ಈಗ ನಂಬಿಕೆ ಬಂದಿತೇ? ಸಹನೆ ಮತ್ತು 
ವಿಶ್ವಾಸದಲ್ಲಿರುವವರನ್ನು ಪರಮಾತ್ಮ ರಕ್ಷಿಸದೆ ಇರನು’ ಎಂದರು.

(ಕಡೆಯ ಎರಡು ಪವಾಡ ಪ್ರಸಂಗಗಳುಬೆಂಗಳೂರಿನ ಶ್ರೀ ಸಾಯಿ ದರ್ಶನಂ ಟ್ರಸ್ಟ್ ಪ್ರಕಟಿಸಿರುವ ‘ಶ್ರೀ ಸಾಯಿ ಲೀಲಾಮೃತ’ ಗ್ರಂಥದಿಂದ್ ಆಯ್ದ ಭಾಗ)

Thursday, October 18, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -94

ಶಿರಡಿ (Shirdi)
ಭಾಗ- 1

"ಓಂ ಸಾಯಿರಾಂ" ನಾಳೆ (ಶುಕ್ರವಾರ 19 ಅಕ್ಟೋಬರ್ 2018) ವಿಜಯದಶಮಿ ದಿನದಂದು ಶಿರಡಿಯ ಮಹಾಸಂತ ಶ್ರೀ ಸಾಯಿಬಾಬಾ ಸಮಾಧಿಸ್ಥರಾಗಿ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವನ ಸಂದೇಶಳ ಸಾರುವ ಶಿರಡಿ ಕ್ಷೇತ್ರ ಪರಿಚಯ ಜತೆಗೆ ಸಾಯಿಬಾಬಾ ಜೀವನ, ಬೋಧನೆ, ಪವಾಡಗಳ ಸಂಕ್ಷಿಪ್ತ ನೋಟವನ್ನು "ನಮ್ಮಲ್ಲಿನ ಸ್ಥಳ ಪುರಾಣಗಳು" ಮಾಲಿಕೆಯಲ್ಲಿ ಎರಡು ಭಾಗವಾಗಿ ಬರೆಯುತ್ತಿದ್ದೇನೆ.



ಶಿರಡಿ ನಗರ ಪಂಚಾಯತ ಎಂದು ಪರಿಚಿತವಾಗಿರುವ ಪುರಸಭೆ ಯ ಆಡಳಿತ ವ್ಯಾಪ್ತಿಯಲ್ಲಿ ಬರುವ, ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ರಾಹತಾ ತಾಲ್ಲೂಕಿನಲ್ಲಿ ಸ್ಥಿತವಾಗಿರುವ ಒಂದು ಪಟ್ಟಣ. ಅಹಮದ್‌ನಗರ್‌ದಿಂದ ಸರಿಸುಮಾರು 83 ಕಿ.ಮಿ. ಮತ್ತು ಕೋಪರಗಾ೦ವನಿಂದ 15 ಕಿ.ಮಿ. ದೂರವಿರುವ ಇದನ್ನು ಅಹಮದ್‌ನಗರ್ - ಮನ್ಮಾಡ್ ರಾಜ್ಯ ಹೆದ್ದಾರಿ ಸಂಖ್ಯೆ 10 ರ ಮೂಲಕ ತಲುಪಬಹುದಾಗಿದೆ.

ಶಿರಡಿ ಪಟ್ಟಣದ ಹೃದಯಭಾಗದಲ್ಲಿ 200 ಚದರ ಮೀ. ವಿಸ್ತೀರ್ಣದಲ್ಲಿರುವ ಶ್ರೀಸಾಯಿಬಾಬಾ ದೇವಸ್ಥಾನ ವಿಶ್ವಾದ್ಯಂತ ಆಗಮಿಸುವ ಭಕ್ತಾದಿಗಳಿಂದ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಸರಾಸರಿ ದಿನನಿತ್ಯ 20,000 ಭಕ್ತರು ಶ್ರೀ ಸಾಯಿಬಾಬಾ ದರ್ಶನಕ್ಕೆ ಬರುತ್ತಾರೆ.  ಹಬ್ಬದ ಋತುವಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಮಂದಿರಕ್ಕೆ ಭೇಟಿ ನೀಡುತ್ತಾರೆ. 

1998-99ರಲ್ಲಿ ದೇವಸ್ಥಾನ ಆವರಣವನ್ನು ನವೀಕರಣಗೊಳಿಸಲಾಯಿತು. ಈಗ ದರ್ಶನ ಮಾರ್ಗ, ಪ್ರಸಾದ(ಬೋಜನ, ರಾತ್ರಿಯೂಟ), ದಾನದ ಕೌಂಟರ್, ಪ್ರಸಾದದ ಕೌಂಟರ್, ಕ್ಯಾಂಟೀನ್, ರೈಲ್ವೆ ಮೀಸಲು ಕೌಂಟರ್, ಪುಸ್ತಕದ ಮಳಿಗೆ ಮುಂತಾದ ಸೌಲಭ್ಯಗಳಿಂದ ಸಜ್ಜುಗೊಂಡಿದೆ. ಯಾತ್ರಿಕರಿಗೆ ಸಾಯಿಬಾಬ ಸಂಸ್ಥಾನವು ವಸತಿ ಸೌಲಭ್ಯಗಳನ್ನು ಕೂಡ ಒದಗಿಸುತ್ತದೆ. 

ಮುಂಬೈನಿಂದ 161 ಕಿಮೀ, ಪುಣೆಯಿಂದ 100 ಕಿಮೀ, ಹೈದರಾಬಾದ್ 360 ಕಿಮೀ, ಮನ್ಮಾಡ್ 29 ಕಿಮೀ, ಔರಂಗಾಬಾದ್ 66, ಭೋಪಾಲ್ 277 ಕಿಮೀ ಮತ್ತು ಬರೋಡದಿಂದ 202 ಕಿಮೀ ದೂರವಿರುವ ಶಿರಡಿಗೆ  ನೇರಬಸ್ ಸೌಕರ್ಯವಿದೆ.ಹತ್ತಿರದ ರೈಲ್ವೆ ನಿಲ್ದಾಣವು ಮನ್ಮಾಡ್ ಆಗಿದ್ದು, ಕೇಂದ್ರ ರೈಲ್ವೆಯ ಮನ್ಮಾಡ್-ದಾಂಡ್ ವಿಭಾಗದಲ್ಲಿದೆ. ಮುಂಬೈ, ಪುಣೆ, ದೆಹಲಿ, ವಾಸ್ಕೊನಿಂದ ಮನ್ಮಾಡ್ ರೈಲು ಸೌಲಭ್ಯವಿದೆ. ಮುಂಬೈ ಮತ್ತು ಪುಣೆ ಹತ್ತಿರದ ವಿಮಾನ ನಿಲ್ದಾಣಗಳು.

***

ಶಿರಡಿ  ಸಾಯಿ ಬಾಬಾ (ಸಮಾಧಿ – 15 ಅಕ್ಟೋಬರ್ 1918 - ವಿಜಯದಶಮಿ ದಿನ) ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ಮತ್ತು ತಮ್ಮ ಜೀವನದ ಅವಧಿಯಲ್ಲಿ ಹಾಗು ನಂತರ ಅವರು ಮುಸ್ಲಿಮ್ ಅಥವಾ ಹಿಂದೂಗಳೇ ಎಂಬುದು ಅನಿಶ್ಚಿತವಾಗಿಯೇ ಉಳಿಯಿತು.

ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗು ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಬೋದಿಸುತ್ತಿದ್ದರು ಕೂಡ.



ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು “ಮನುಷ್ಯ” ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗು ಜಾತ್ಯಾತೀತ. ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಹಾಗು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು ಎನ್ನಲಡ್ಡಿಯಿಲ್ಲ.

ಸಾಯಿ ಬಾಬಾ ಬದುಕಿದ್ದು ಮುಸ್ಲೀಮರ ಸಾಮಾನ್ಯ ಮಸೀದಿಯಲ್ಲಿ, ಆದರೆ ಅದೇ ಮಸೀದಿಗೆ ‘ದ್ವಾರಕಾಮಾಯಿ’ ಎಂಬ ಹಿಂದೂ ಹೆಸರು ನಾಮಕರಣ ಮಾಡಿ ಹಿಂದೂ ಮುಸ್ಲೀಮರ ಸಾಮರಸ್ಯದ ಜೀವನಕ್ಕೆ ನಾಂದಿ ಹಾಡಲು ಪ್ರಯತ್ನಿಸಿದ್ದರು. ಇವಿಷ್ಟೇ ಅಲ್ಲದೆ ದಿನ ನಿತ್ಯದ ಜೀವನದಲ್ಲೂ ಬಾಬಾ ಅನೇಕ ಹಿಂದೂ ಆಚರಣೆಗಳನ್ನು ಮತ್ತು ಮುಸ್ಲೀಂ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದರು.

ಬಾಬಾರವರ ಒಂದು ಸುಪ್ರಸಿದ್ಧ ಉಕ್ತಿ “ಸಬ ಕಾ ಮಾಲಿಕ್ ಏಕ್ ಹೈ”(ಸರ್ವರ ಮಾಲೀಕನು ಒಬ್ಬನೇ). ಇದು ಹಿಂದೂ, ಇಸ್ಲಾಂ ಹಾಗು ಸೂಫಿ ತತ್ವಗಳನ್ನು ಒಳಗೊಂಡಿದೆ. ಅವರು ಸದಾ ಕಾಲ ಭಕ್ತರಿಗೆ ಕೊಡುತ್ತಿದ್ದ ಅಭಯ ವಾಕ್ಯಗಳೆಂದರೆ “ನನ್ನನ್ನು ನಂಬಿ, ನಿಮ್ಮ ಪ್ರಾರ್ಥನೆಗಳಿಗೆ ನನ್ನಲ್ಲಿ ಉತ್ತರಗಳಿವೆ” ಹಾಗು “ಅಲ್ಲಾ ಮಾಲಿಕ್ “(ದೇವರೇ ಮಾಲೀಕ).

'ಸಾಯಿ' ಪದದ ಹಿನ್ನೆಲೆ

ಸಾಯಿಬಾಬಾ ರವರ ನಿಜವಾದ ಹೆಸರಿನ ಹಾಗು ಜನ್ಮ ಸ್ಥಳದ ಬಗ್ಗೆ ಯಾವುದೇ ಯಾವುದೇ ಸ್ಪಷ್ಟ ಉಲ್ಲೇಖಗಳಿಲ್ಲ. ಇದರ ಬಗ್ಗೆ ಬಾಬಾರವರನ್ನೇ ಕೇಳಿದಾಗ ಯಾವುದೇ ಸೂಕ್ತವಾದ ಸ್ಪಂದನೆ ಸಿಕ್ಕಿಲ್ಲವೆಂದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಯಿಬಾಬಾರು ಶಿರಡಿಗೆ ಆಗಮಿಸಿ ದಾಗ ಅವರಿಗೆ ಯಾವ ಹೆಸರಿತ್ತು ಎಂಬ ಬಗ್ಗೆ ಇತಿಹಾಸದಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.

ಆದರೆ ಸ್ಥಳೀಯ ಖಂಡೋಬ ದೇವಳದ ಆಗಮಿಕರು ಅವರನ್ನು ಕಂಡು ‘ಯಾ ಸಾಯಿ'(ಸಾಯಿ ಸುಸ್ವಾಗತ) ಎಂದು ಉದ್ಘರಿಸಿದರಂತೆ. ಅಂದಿನಿಂದ ಅವರ ಹೆಸರು ಸಾಯಿ ಬಾಬಾ ಎಂದೇ ಪ್ರಸಿದ್ಧಿಯಾಗಿದೆ. ‘ಸಾಯಿ’ ಎನ್ನುವ ಪದವು ಪೆರ್ಶಿಯಾ ಭಾಷೆಯಲ್ಲಿ ಸೂಫಿ ಸಂತರು ಗಳಿಗೆ ಕೊಡುತ್ತಿದ್ದ ಒಂದು ಬಿರುದಾಗಿತ್ತುಹಾಗು ಅದು ‘ಬಡ ವ್ಯಕ್ತಿ ‘ ಎಂಬ ಅರ್ಥ ಹೊಂದಿತ್ತು.

ಬಂಜಾರ ಭಾಷೆಯಲ್ಲಿ ಸಾಯಿ ಎಂದರೆ ‘ಒಳ್ಳೆಯ’ ಎಂಬ ಅರ್ಥವಿದೆ. ಬಾಬಾ ಎಂದರೆ ಭಾರತೀಯ ಭಾಷೆಯಲ್ಲಿ ತಂದೆಯ ತಂದೆ ಸ್ಥಾನ ಅಥವಾ ಹಿರೀಕರು ಎಂಬರ್ಥವಿದೆ. ಹೀಗಾಗಿ ಸಾಯಿ ಬಾಬಾ ಎಂದರೆ ‘ಒಳ್ಳೆಯ ಗುರು’ ‘ಪವಿತ್ರ ಗುರು’ ‘ಸಂತ ಪಿತಾಮಹ’ ಎಂಬಂತಹ ಅರ್ಥಗಳು ಬರುತ್ತವೆ. 

ಇತಿಹಾಸ ಮೂಲಗಳು

ಸಾಯಿ ಬಾಬಾ ಜೀವನ ಚರಿತ್ರಕಾರರು (ಉದಾಹರಣೆಗೆ: ಗೋವಿಂದ ರಾವ್ ರಘುನಾಥ ದಾಬೋಲ್ಕರ್, ಆಚಾರ್ಯ ಎಕ್ಕಿರಾಳ ಭಾರದ್ವಾಜ್, ಸ್ಮ್ರಿತಿ ಶ್ರೀನಿವಾಸ್, ಆಂತೋನಿಯೋ ರಿಗೊಪೋಲಾಸ್) ಅವಲೋಕಿಸಿರುವ ಪ್ರಾಥಮಿಕ ಮೂಲವೆಂದರೆ ಶಿರಡಿಯಲ್ಲಿ ದೊರೆತ ಒಂದು ಡೈರಿ. ಈ ಡೈರಿಯನ್ನು ಬರೆದಿದ್ದು ‘ಗಣೇಶ ಶ್ರೀಕೃಷ್ಣ ಕಪರ್ದೆ’ ಎನ್ನುವರು. ಇವರು ಪ್ರತಿ ದಿನವು ಶಿರಡಿಯಲ್ಲೇ ಇದ್ದುಕೊಂಡು ಡೈರಿಯನ್ನು ಬರೆದಿದ್ದಾರೆ ಎನ್ನಲಾಗಿದೆ.

ಪ್ರಾರಂಭದ ದಿನಗಳು

ಶ್ರೀ ಸಾಯಿಬಾಬಾ ಅವರ ಏಕೈಕ ಲಭ್ಯ ಜೀವನ ಚರಿತ್ರೆ "ಶ್ರೀ ಸಾಯಿ ಸತ್‌ಚರಿತೆ"ಯನ್ನು 1914ರಲ್ಲಿ ಶ್ರೀ ಅನ್ನಾ ಸಾಹೇಬ್ ಧಾಬೋಲ್ಕರ್ ಎಂಬವರು ಬರಹರೂಪಕ್ಕಿಳಿಸಿದ್ದರು.

ಒಂದು ನಂಬಿಕೆಯ ಪ್ರಕಾರ, ಮಹಾರಾಷ್ಟ್ರದ ಪರ್‌ಭನಿ ಜಿಲ್ಲೆಯ ಪಾಥರಿ ಎಂಬ ಗ್ರಾಮದಲ್ಲಿ ಸಾಯಿಬಾಬಾ ಅವರ ಜನನವು 1835ರಲ್ಲಿ ಆಯಿತು. (ಶಿರಡಿ ಸಾಯಿಬಾಬಾ ಅವರ ಜನನವು ಪಾಥರಿ ಗ್ರಾಮದಲ್ಲಿ 1830ರ ಡಿಸೆಂಬರ್ 27ರಂದು ಆಗಿತ್ತು ಎಂದು ಸತ್ಯ ಸಾಯಿಬಾಬಾ ಅವರು ಹೇಳಿದ್ದಾರೆ.)

1835ರಿಂದ 1846ರವರೆಗಿನ 12 ವರ್ಷ ಪೂರ್ತಿ ಸಾಯಿಬಾಬಾ ಅವರು ತಮ್ಮ ಮೊದಲ ಗುರು ರೋಶನ್‌ಷಾ ಫಕೀರರ ನಿವಾಸದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. ತದನಂತರ 1854ರವರೆಗೆ ಬಾಬಾ ಅವರು ಬೇಂಕುಷ್ ಆಶ್ರಮದಲ್ಲಿದ್ದರು ಎನ್ನಲಾಗುತ್ತಿದೆ.

"ಸಾಯಿ ಸಚ್ಚರಿತ್ರೆ” ಗ್ರಂಥದಲ್ಲಿ ದಾಖಲಾಗಿರುವ ಪ್ರಕಾರ ಸಾಯಿ ಬಾಬಾ ತಮ್ಮ 16ನೆ ವಯಸ್ಸಿನಲ್ಲಿ ಶಿರಡಿ ಪ್ರವೇಶ ಮಾಡಿದರು. ಶಿರಡಿ ಗ್ರಾಮವು ಈಗಿನ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿದೆ. ಸಾಯಿಬಾಬ ಒಂದು ಬೇವಿನ ಮರದ ಕೆಳಗೆ ಧ್ಯಾನಸ್ಥ ಭಂಗಿಯಲ್ಲಿ ಶಿರಡಿಯ ನಿವಾಸಿಗಳ ಕಣ್ಣಿಗೆ ಬಿದ್ದರು.

ಬೇವಿನ ಮರದಡಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ ತೇಜೋಮಯನಾದ ಬಾಲಕನನ್ನು ಕಂಡೊಡನೆ ಶಿರಡಿಯ ನಿವಾಸಿಗಳು ಆಶ್ಚರ್ಯಭರಿತರಾದರು ಮತ್ತು ಆತನು ಯಾರೆಂಬುದನ್ನು ತಿಳಿಯಲು ಮೊದಲಾದರು. ಅಷ್ಟು ಸಣ್ಣ ವಯಸ್ಸಿನಲ್ಲಿ ಚಳಿ, ಗಾಳಿ, ಮಳೆ, ಹಗಲು, ಇರುಳುಗಳಿಗೆ ಹೆದರದೆ ಧ್ಯಾನ ಮಾಡುತ್ತಿದ್ದವನ ಕಂಡಿದ್ದೇ ಅವರೆಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಇದಾದ ಮೇಲೆ ಶಿರಡಿಯ ಧಾರ್ಮಿಕ ನಂಬಿಕೆ ಗಳಿದ್ದ ಜನರೆಲ್ಲರೂ ಬಾಬಾರನ್ನು ಸದಾ ಸಂಧಿಸುತ್ತಿದ್ದರು. ಇನ್ನುಳಿದ ಜನರು ಆ ತರುಣನನ್ನು ಹುಚ್ಚನಿರಬಹುದೆನ್ದೇ ಭಾವಿಸಿ ಕಲ್ಲು ತೂರುತ್ತಿದ್ದರು. ಈ ಘಟನೆಗಳ ನಂತರ ಸಾಯಿ ಬಾಬಾ ಶಿರಡಿಯಿಂದ ನಿರ್ಗಮಿಸಿದರು ಎನ್ನುತ್ತದೆ ಇತಿಹಾಸ. ಸಾಯಿ ಬಾಬಾ ಜೀವನ ಚರಿತ್ರೆ ಬರೆದಿರುವ ನರಸಿಂಹ ಸ್ವಾಮೀಜಿಯವರು ಸಾಯಿಬಾಬಾ ಬ್ರಾಹ್ಮಣ ದಂಪತಿಗಳಿಗೆ ಜನಿಸಿದವರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ರಾಹ್ಮಣ ಕುಲದಲ್ಲಿ ಜನಿಸಿದರೂ ಫಕೀರರೊಬ್ಬರ ಆಶ್ರಯದಲ್ಲಿ ಬೆಳೆದಿದ್ದುದರಿಂದ ತಮ್ಮ ಆಚರಣೆಯಲ್ಲಿ ಮುಸ್ಲೀಮರ ಕೆಲವು ಆಚರಣೆಗಳನ್ನು ಒಳಗೂಡಿಸಿಕೊಂಡಿರಬಹುದು ಎಂದು ನರಸಿಂಹ ಸ್ವಾಮೀಜಿ ತಮ್ಮ ವಾದವನ್ನು ಮುಂದಿಡುತ್ತಾರೆ. ವಾದಗಳು ಏನೇ ಆದರು ‘ಸಾಯಿ ಸಚ್ಚರಿತ್ರೆ’ ಯಲ್ಲಿ ಅಧಿಕೃತವಾಗಿ ಇರುವ ಪ್ರಕಾರ ಸಾಯಿಬಾಬಾ ರ ಜನ್ಮಸ್ಥಳ, ಜನ್ಮ ದಿನಾಂಕ ಹಾಗು ಅವರ ಪೂರ್ವಾಶ್ರಮದ ಸಂಬಂಧಗಳ ಯಾವುದೇ ನಿಖರ ಉಲ್ಲೇಖಗಳು ಇಲ್ಲ.

ಈ ವಿಚಾರವಾಗಿ ಕೆಲ ಭಕ್ತರು ಬಾಬಾರನ್ನೇ ಪ್ರಶ್ನಿಸಿದಾಗ ಅವರು ಈ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದನ್ನು ಹಲವಾರು ಭಕ್ತರು ಒಪ್ಪಿಕೊಂಡಿದ್ದಾರೆ. ಬಾಬಾರು ಶಿರಡಿಯಿಂದ ನಿರ್ಗಮಿಸಿದ ಮೇಲೆ ಯಾರಿಗೂ ಅವರ ಬಗ್ಗೆ ಅಷ್ಟಾಗಿ ಮಾಹಿತಿಗಳು ಇರುವುದಿಲ್ಲ. ಆದರೂ ಶಿರಡಿಯಿಂದ ಹೊರಟ ಬಾಬ ಅನೇಕ ಸಂತರನ್ನು ಹಾಗೂ ಫಕೀರರನ್ನು ಭೇಟಿ ಮಾಡುತ್ತಾ ಅವರಿಂದ ಆಧ್ಯಾತ್ಮಿಕ ಜ್ಞಾನ ಸಂಪಾದನೆ ಮಾಡುತ್ತಾ ನೇಯ್ಗೆಯ ಕೆಲಸವನ್ನು ಮಾಡುತ್ತಾ ಕಾಲ ಕಳೆದಿರಬಹುದು ಎಂಬ ನಂಬಿಕೆ ಇದೆ.

ಮತ್ತೊಂದು ಮೂಲದ ಪ್ರಕಾರ ಅವರು ಭಾರತದಲ್ಲಿ ಸಿಪಾಯಿ ದಂಗೆ ಯಾಗುವ ಹೊತ್ತಿಗೆ ಅಂದರೆ 1857ರ ಆಸು ಪಾಸು ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಸೇನೆಯಲ್ಲಿ ಗುರುತಿಸಿಕೊಂಡಿದ್ದರು.ಐತಿಹ್ಯಗಳ ಪ್ರಕಾರ ಸಾಯಿಬಾಬ ಶಿರಡಿಯಲ್ಲಿ 3 ವರ್ಷಗಳಿದ್ದು 1 ವರ್ಷ ಮಾತ್ರ ಶಿರಡಿಯಿಂದ ಹೊರಗೆ ಕಳೆದಿದ್ದಾರೆ. ಇದಾದ ನಂತರ 1858ರ ಆಸು ಪಾಸಿನಲ್ಲಿ ಶಿರಡಿಗೆ ಮರಳಿ ಅನಂತರ ಶಾಶ್ವತವಾಗಿ ಅಲ್ಲಿಯೇ ಉಳಿದರು ಎನ್ನಲಾಗಿದೆ.

ಶಿರಡಿಗೆ ಪುನರಾಗಮನ

1858ರಿಂದ 1918ರ ಅಕ್ಟೋಬರ್ 15ರಂದು ದೇಹತ್ಯಾಗ ಮಾಡುವವರೆಗೂ ಬಾಬಾ ಅವರು ಶಿರಡಿಯಲ್ಲಿ ನೆಲೆನಿಂತು ತಮ್ಮ ಲೀಲೆಗಳಿಂದ ಭಗವದ್ಭಕ್ತರನ್ನು ಹರಸುತ್ತಿದ್ದರು.

1858ರಲ್ಲಿ ಬಾಬಾ ಶಿರಡಿಗೆ ಹಿಂದಿರುಗಿದಾಗ ಅವರ ಉಡುಗೆಯ ಶೈಲಿ ಸಂಪೂರ್ಣ ಬದಲಾಗಿತ್ತು. ಮುಕ್ಕಾಲು ತೋಳು ಇರುವ ಮಂಡಿಯವರೆವಿಗೂ ಇರುವ ಕಪನಿಯನ್ನು ಧರಿಸಿ ಕಾಲುಗಳಿಗೆ ಶ್ವೇತ ವರ್ಣದ ಒಂದು ವಸ್ತ್ರ ಹಾಗು ತಲೆಗೆ ಶ್ವೇತವರ್ಣದ ಬಟ್ಟೆಯೊಂದನ್ನು ಸುತ್ತಿಕೊಂಡಿರುತ್ತಿದ್ದರು. ಮುಂದೆ ಬಾಬಾರು ಈ ಶೈಲಿಯನ್ನೇ ಅನುಸರಿಸಿದರು. ಅವರ ಈ ಧರಿಸಿನ ಶೈಲಿ ಯಥಾವತ್ತಾಗಿ ಸೂಫಿ ಶೈಲಿಯನ್ನೇ ಹೋಲುತ್ತಿದ್ದು ಗಮನಾರ್ಹ.

Wednesday, September 19, 2018

ಕುರಿಗಾಹಿಯೊಬ್ಬ ನಿರ್ಮಿಸಿದ 14 ಕೆರೆಗಳು ಬರಡು ಗ್ರಾಮವನ್ನು ಹಸಿರಿನ ನಂದನವನ ಮಾಡಿತು!

ಹನ್ನೆರಡು-ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಕಾಯಕಯೋಗಿ ಸೊನ್ನಲಿಗೆ ಸಿದ್ದರಾಮನ ಕಥೆಯನ್ನು ನಾವೆಲ್ಲಾ ಕೇಳಿದ್ದೇವೆ. ಆತ ಸೊನ್ನಲಿಗೆಯಲ್ಲಿ ಕೆರೆಯನ್ನು ಕಟ್ಟಿಸಿ ಕಾಯಕ ನಿಷ್ಠೆಗೆ ಹೆಸರಾದ ಶರಣ, ಮಹಾಸಂತ. ಐದೇ ರೀತಿಯಲ್ಲಿ ಈ ಶತಮಾನದಲ್ಲಿ ನಮ್ಮ ನಡುವೆಯೂ ಓರ್ವ ಕಾಯಕಯೋಗಿ ಇದ್ದಾರೆ. ಅವರಿಗೀಗ 82 ವರ್ಷ, ಕುರಿಗಾಹಿ, ಅನಕ್ಷರಸ್ಥ ಆದರೆ ವಿದ್ಯಾವಂತರಲ್ಲಿಯೂ ಕಾಣಿಸದ ಪರಿಸರ ಪ್ರಜ್ಞೆಯನ್ನು ನಾವು ಅವರಲ್ಲಿ ಕಾಣಬಹುದು. ತಮ್ಮ ಗ್ರಾಮದಲ್ಲಿ ಅವರಿದುವರೆಗೆ ನಿರ್ಮಾಣ ಮಾಡಿರುವ 14 ಕೆರೆಗಳಿಂದಾಗಿ ಬರಡಾಗಿದ್ದ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ!

ಅವರೇ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಕಾಮೇಗೌಡ. 
ದಾಸರದೊಡ್ಡಿಯ ನೀಲಿ ವೆಂಕಟಗೌಡ ಹಾಗೂ ರಾಜಮ್ಮ ದಂಪತಿಗಳ ಹತ್ತನೇ ಪುತ್ರರಾದ ಕಾಮೇಗೌಡ ಶಾಲೆಯ ಮೆಟ್ಟಿಲು ಹತ್ತಿದವರಲ್ಲ.ಚಿಕ್ಕ ಮನೆ, ಒಂದುದಿನದ ಬಿತ್ತನೆಗಾಗುವಷ್ಟು ಭೂಮಿ, ಒಂದಷ್ಟು ಕುರಿಗಳು ಇದಷ್ಟೇ ಅವರ ಆಸ್ತಿ.

ಸುಮಾರು 40 ವರ್ಷದ ಹಿಂದೆ ತಮ್ಮ ಮನೆ ಸಮೀಪವಿದ್ದ ಕುಂದೂರು ಬೆಟ್ಟ ಬಹುತೇಕ ಬಂಜರಾಗಿ ಅಲ್ಲಲ್ಲಿ ಒಣ ಪೊದೆಗಳನ್ನು ಬಿಟ್ಟರೆ ಬೇರೇನೂ ಇಲ್ಲದ ಜಾಗವೊಂದು ಇವರ ಗಮನ ಸೆಳೆದಿತ್ತು. ಬೆಟ್ಟ್ದ ಮೇಲೆ ಕುರಿ ಮೇಯಿಸಹೋದಾಗಲೂ ಅಲ್ಲಿ ಕುರಿಗಳು ನೀರಿನ ಸೆಲೆ ಇಲ್ಲದ ಕಾರಣ ಕಷ್ಟಪಡುವುದನ್ನು ಅರಿತರು. ಬೆಟ್ಟದಲ್ಲಿ ವಾಸಿಸುತ್ತಿದ್ದ ಹಕ್ಕಿಗಳಿಗಾಗಲಿ, ಇತರೆ  ಜೀವಿಗಳಿಗಾಗಲಿ ಸರಿಯಾದ ನೀರಿನ ಒರತೆ ಇರಲಿಲ್ಲ. ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದರೂ ಬೆಟ್ಟದ ಇಳಿಜಾರಿನ ಪ್ರದೇಶಗಳಲಿ ಅದೆಲ್ಲ ಹರಿದು ಹೋಗಿ ಬಿಡುತ್ತಿತ್ತು. ಬೆಟ್ಟ್ದ ಮೇಲೆ ಹೆಚ್ಚು ನೀರು ನಿಲ್ಲುತ್ತಿರಲಿಲ್ಲ, ಅಲ್ಲಿನ ನೆಲ ಹೆಚ್ಚು ನೀರನ್ನು ಇಂಗಿಸಿಕೊಳ್ಳುತ್ತಿರಲಿಲ್ಲ.

ಇದನ್ನು ಗಮನಿಸಿದ ಕಾಮೇಗೌಡರಿಗೆ ತಾವೇ ಏಕೆ ಈ ಬೆಟ್ಟದಲ್ಲಿ ಕೆರೆಗಳನ್ನು ನಿರ್ಮಿಸಬಾರದೆನ್ನುವ ಆಲೋಚನೆ ಹೊಳೆದಿದೆ. ಸುಮಾರು 35 ವರ್ಷಗಳ ಹಿಂದೆ (ಸರಿಯಾದ ದಿನಾಂಕ ನೆನಪಿಲ್ಲ) ತಮ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ತೊಡಗಿದ ಕಾಮೇಗೌಡರು ಇದುವರೆಗೆ ಸುಮಾರು 14-15 ಕೆರೆಗಳನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ಅವರು ಯಾವ ಸರ್ಕಾರಿ ಯೋಜನೆಯ ನೆರವು ಬಯಸಲಿಲ್ಲ. ಅಲ್ಲದೆ ಇದಕ್ಕಾಗಿ 10-15 ಲಕ್ಷಕ್ಕಿಂತ ಕಡಿಮೆ ವೆಚ್ಚ ಮಾಡಿದ್ದಾರೆ.ಇದೀಗ 14 ಕೆರೆಗಳನ್ನು ನಿರ್ವಹಿಸುತ್ತಿರುಅವ್ ಕಾಮೇಗೌಡರು ಕೆಲ ಕೆರೆಗಳಿಗೆ ತಮ್ಮ ಮೊಮ್ಮಕ್ಕಳ ಹೆಸರನ್ನು ಇರಿಸಿದ್ದಾರೆ. ಕಾಮೇಗೌಡರ ಈ ಕಾಯಕನಿಷ್ಠೆ ಯಾವ ಪ್ರಮಾಣದ್ದೆಂದರೆ ತಮಗೆ ಸಂದ ಅನೇಕ ಬಹುಮಾನ ರೂಪದ ಹಣವನ್ನು ಸಹ ಅವರು ಈ ಕೆರೆಗಳ ನಿರ್ಮಾಣ, ನಿರ್ವಹಣೆಗಾಗಿಯೇ ಬಳಸಿದ್ದಾರೆ, ಬಳಸುತ್ತಿದ್ದಾರೆ.


ಎಕ್ಸ್ ಪ್ರೆಸ್ ತಂಡವು ಇವರ ಮನೆಗೆ ಭೇಟಿ ಕೊಟ್ಟಾಗ ಕಂಡುಬಂದ ದೃಶ್ಯ ಅತ್ಯಂತ ಅದ್ಭುತವಾಗಿತ್ತು, ಎರಡೆಕರೆ ಭೂಮಿಯಲ್ಲಿ ಅರ್ಧ ನಿರ್ಮಾಣವಾಗಿರುವ ಮನೆ, ಬೆಟ್ಟ್ದ ಮೇಲೆ ಹಾಸಿದಂತಿರುವ ಕೆರೆಗಳು ಅದರ ಮೂಲಕ  ವರ್ಷಪೂರ್ತಿ ಹರಿಯುವ ನಿರಿನ ಒರತೆಯನ್ನು ಕಂಡು ಉಂಟಾದ ಆನಂದ ಶಬ್ದಾತೀತವಾಗಿತ್ತು.

ಕೆಲವು ವಾರಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾಮೇಗೌಡರಿಗೆ ಮನೆಯಿಂದ ಹೊರಗೆ ಬಿಸಿಲಿಗೆ ಹೋಗದಂತೆ ವೈದ್ಯರು ಎಚ್ಚರಿಸಿದ್ದಾರೆ. ಆದರೆ ಅವರು ಮಾತ್ರ ಇದಕ್ಕೆ ಸೊಪ್ಪು ಹಾಕುವವರಲ್ಲ "ಕುಡುಕನಿಗೆ ಯಾರಾದರೂ ಕುಡಿಯಬೇಡ ಎಂದರೆ ಅವನದನ್ನು ಬಿಟ್ಟಾನೆಯೆ? ನಾನೂ ಹಾಗೆಯೇ, ನನಗೆ ಹೊರಗೆ ಹೋಗಬೇಡವೆನ್ನಲು ಅವರಾರು? ಇಷ್ಟಕ್ಕೂ ನಾನು ಕಣ್ಣುಗಳನ್ನು ಮುಚ್ಚಿಕೊಂಡೇ ಇಲ್ಲೆಲ್ಲಾ ತಿರುಗಬಲ್ಲೆ, ನನಗೆ ಈ ಊರು, ಬೆಟ್ಟ್ದ ಇಂಚಿಂಚೂ ಪರಿಚಯವಿದೆ" ಅವರು ಹೇಳಿದರು.

’ಹುಚ್ಚ’ನೆಂಬ ಹಣೆಪಟ್ಟಿ 
ಕೆರೆ ನಿರ್ಮಾಣ ಮಾಡಿ ಬಂಜರು ಭೂಮಿಯಲ್ಲಿ ನೀರಿನ ಒರತೆ ಚಿಮ್ಮಿಸಿದ ಕಾಮೇಗೌಡರನ್ನು ಆ ಊರಿನ ಜನ, ಅವರ ಸಂಬಂಧಿಗಳೆಲ್ಲ  "ಹುಚ್ಚ" ಎಂದು ಕರೆದರು.ಕಳೆದ 40 ವರ್ಷಗಳಿಂದ, ಸುಮಾರು 5 ರಿಂದ 9 ಗಂಟೆಯವರೆಗೆ, ಅವರು ಕೆರೆಗಳನ್ನು ಅಗೆಯುವ ಕಾಯಕದಲ್ಲಿ ನಿರತರಾಗುತ್ತಾರೆ. ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ಕುರಿಗಳನ್ನು ಮೇಯಿಸುತ್ತಾ ಕಾಲ ಕಳೆಯುತ್ತಾರೆ. "ಕೆಲವೊಮ್ಮೆ ನಾನು ರಾತ್ರಿ ಸಮಯದಲ್ಲಿ ಸಹ ಬೆಟ್ಟದ ಮೇಲೇರಿ ಕೆರೆಗಳನ್ನು ನಿರ್ಮಿಸಲು ನೆಲ ಅಗೆಯುತ್ತಿದ್ದದ್ದು ಇದೆ. ದೀಪದ ಬೆಳಕಿನಲ್ಲಿ ಇಲ್ಲವೇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ನಾನು ಈ ಕಾಯಕ ಮಾಡುತ್ತಿದ್ದೆ" ಎಕ್ಸ್ ಪ್ರೆಸ್ ಪ್ರತಿನಿಧಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಜನರೆಲ್ಲಾ ಅವರನ್ನು ’ಹುಚ್ಚ’ ಎಂದರೂ ಕಾಮೇಗೌಡ ಮಾತ್ರ ತಾವು ಹಿಡಿದ ಮಾರ್ಗ ಬಿಡಲಿಲ್ಲ. ಕುಂದೂರು ಬೆಟ್ಟದ ಮೇಲೆ ಕೆರೆ ನಿರ್ಮಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡರು. ಅವರ ಈ ವಿಚಿತ್ರ ಜೀವನ ಶೈಲಿ ಅವರನ್ನು ಅವರ ಸಂಬಂಧಿಅಗ್ಳು, ಸ್ನೇಹಿತರಿಂದ ದೂರ ಮಾಡಿತು."ನಾನು ಕೆರೆ ನಿರ್ಮಾಣಕ್ಕೆ ಕೈ ಹಾಕಿ ನನ್ನ ದುಡಿಮೆ, ಉಳಿತಾಯವನ್ನೂ ಅದಕ್ಕೆ ವಿನಿಯೋಜಿಸತೊಡಗಿದಾಗ ನನ್ನ ಸಂಬಂಧಿಗಳು ನನ್ನಿಂದ ದೂರಾದರು. ಆದರೆ ಬೆಟ್ಟ ಹಾಗೂ ಸುತ್ತಲಿನ ಮರಗಳು, ಮೃಗ ಪಕ್ಷಿಗಳು ನನ್ನ ಸಂಬಂಧಿಗಳಾದವು. ಕೆಲವರು ನನ್ನ ಕಾಯಕ ನೋಡಿ ಹಾಸ್ಯ ಮಾಡಿದರು, ಇನ್ನು ಕೆಲವರು ಸರ್ಕಾರಿ ಜಾಗವನ್ನು ತನ್ನ ಕೆಲಸಕ್ಕೆ ಬಳಸಿದ್ದನ್ನು ವಿರೋಧಿಸಿದರು. ಆದರೆ ನಾನು ಮಾತ್ರ ಕೆರೆ ನಿರ್ಮಾಣವನ್ನು ನಿಲ್ಲಿಸಲಿಲ್ಲ. ಈಗ ನಾನು ಯಾರಿಗೇ ಬೇಕಾದರೆ ಸವಾಲು ಹಾಕುವೆ! ನಾನು ನಿರ್ಮಿಸಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಸಹ ನೀರು ಬತ್ತುವುದಿಲ್ಲ, ಕಾಮೇಗೌಡರು ವಿವರಿಸಿದ್ದಾರೆ.

ನಲವತ್ತು ವರ್ಷಗಳ ಹಿಂದೆ ಅವರು ಮೊದಲ ಕೆರೆ ನಿರ್ಮಾಣ ಮಾಡಲು ಆರು ತಿಂಗಳ ಕಾಲ ತೆಗೆದುಕೊಂಡಿದ್ದರು. ದಾಸರದೊಡ್ಡಿಯಲ್ಲಿ ಅವರ ನಿರ್ಮಾಣದ ಮೊದಲ ಕೆರೆಯನ್ನು ನಾವಿಂದು ಕಾಣಬಹುದು. ಅಲ್ಲಿಂದೀಚೆಗೆ ತಮ್ಮ ಅತ್ಯಲ್ಪ ಉಳಿತಾಯದ ಹಣವನ್ನು ವಿನಿಯೋಜಿಸಿ ಕೆರೆ ನಿರ್ಮಾಣ, ಅಗೆಯುವ ಕಾಯಕಕ್ಕಾಗಿ ಕೆಲವು ಸಹಾಯಕರನ್ನು ನೇಮಿಸಿಕೊಂಡರು.ಇವರು ನಿರ್ಮಿಸಿದ 14 ಕೆರೆಗಳೂ ಸಹ ಪರಸ್ಪರ ಸಂಬಂಧ ಹೊಂದಿವೆ."ಮೇಲ್ಭಾಗದ ಕ್ರೆ ತುಂಬಿದ ಬಳಿಕ ಕೆಳಗಿನ ಕೆರೆಗೆ ನೀರು ಹರಿಯುತ್ತದೆ" ಕಾಮೇಗೌಡರು ತಾವು ಕೆರೆ ನಿರ್ಮಾಣಕ್ಕೆ ಕೈ ಹಾಕುವ ಮುನ್ನ ಅಲ್ಲಿನ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ.

ಕಾಮೇಗೌಡರು ತಾವು ನಿರ್ಮಿಸಿದ ಪ್ರತಿಯೊಂದು ಕೆರೆಗೆಳ ಬಳಿ ಹೋಗಲು ಕಿರಿದಾದ ದಾರಿಯನ್ನೂ ಮಾಡಿದ್ದಾರೆ.ನಡು ನಡುವೆ ಕಲ್ಲುಗಳನ್ನು ಇಟ್ಟು ಮಾಡಿರುವ ಈ ಮಾರ್ಗ ಅವರ ಪ್ರಕೃತಿ ಪ್ರೇಮವನ್ನು ಸೂಚಿಸುತ್ತದೆ. ಕಾಮೇಗೌಡರು ಪ್ರತಿದಿನವೂ ಈ 14  ಕೆರೆಗಳಿಗಳಿಗೆ ತಪ್ಪದೆ ಭೇಟಿ ನೀಡುತ್ತಾರೆ. "ನೀವು ಒಂದು ದಿನ ಊಟ ಮಾಡಿ ಮತ್ತೆಲ್ಲಾ ದಿನ ಉಪವಾಸವಿರಲು ಸಾಧ್ಯವಿಲ್ಲವಷ್ಟೆ? ಇದೂ ಹಾಗೆಯೇ ನಾನು ಒಂದು ದಿನ ಕೆರೆ ನಿರ್ಮಾಣ ಮಾಡುವುದಿಲ್ಲ, ವರ್ಷದ ಎಲ್ಲಾ ಸಮಯವನ್ನೂ ಇದಕ್ಕೆ ಮೀಸಲಿರಿಸುತ್ತೇನೆ"

ಕಾಮೇಗೌಡರ ಈ ಕಾಯಕದಿಂದಾಗಿ ಇಂದು ಬೆಟ್ಟ್ದ ಮೇಲೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತೇವಾಂಶ ಉಳಿದುಕೊಂಡಿದ್ದು ಹಸಿರು ನಳನಳಿಸುತ್ತಿದೆ.ಅವರು ಬೆಟ್ಟ್ದ ಮೇಲೆ ಇನ್ನಷ್ಟು ಹಸಿರು ಹುಲ್ಲನ್ನು ಸಹ ಬೆಳೆಸಿದ್ದು ಪಕ್ಷಿಗಳು, ಕುರಿಗಳಿಗೆ ಉತ್ತಮ ಮೇವು ದೊರೆಯುವುದಕ್ಕೆ ಇದು ಸಹಾಯವಾಗಲಿದೆ. "ನಾನು ಇಷ್ಟೆಲ್ಲಾ ಕೆರೆ ಕುಂಟೆಗಳನ್ನು ನಿರ್ಮಾಣ ಮಾಡಿದ್ದೇನೆ. ಆದರೆ ಅದಕ್ಕಾಗಿ ಎಂದಿಗೂ ಸಾಲ ತೆಗೆದುಕೊಂಡಿಲ್ಲ. ಇದುವರೆಗೆ ನಾನು 10 ರಿಂದ 15 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದೇನೆ, ಬಸವಶ್ರೀ ಪುರಸ್ಕಾರ ಸೇರಿ ಅನೇಕ ಬಹುಮಾನಗಳಿಂದ ಬಂದ ಹಣವನ್ನು ನಾನು ಈ ಕೆರೆ ನಿರ್ಮಾಣಕ್ಕೆ ಉಪಯೋಗಿಸಿದ್ದೇನೆ.

"ನಾನು ಎರಡು ಎಕರೆ ಭೂಮಿ ಹೊಂದಿದ್ದೇನೆ, ನಾನೇನಾದರೂ ಈ ಕೆರೆಗಳ ನಿರ್ಮಾಣಕ್ಕಾಗಿ ನನ್ನ ಉಳಿತಾಯವನ್ನು ವಿನಿಯೋಜಿಸದೆ ಹೋಗಿದ್ದಲ್ಲಿ ಇನ್ನಷ್ಟು ಎಕರೆ ಭೂಮಿ ಖರೀದಿಸಿಅಬಹುದಿತ್ತು, ಇನ್ನಷ್ಟು ದೊಡ್ಡ ಮನೆ ಕಟ್ಟಬಹುದಾಗಿತ್ತು.ಆದರೆ ಇಂದು ನಾನು ಮಾಡಿದ ಕೆಲಸದಿಂದ ಸುತಲಿನ ಅನೇಕ ಹಳ್ಳಿಗಳ ನೀರಿನ ಬವಣೆ ನೀಗಿದೆ. ನಾನು ನಿರ್ಮಾಣ ಮಾಡಿದ 14 ಕೆರೆಗಳಲ್ಲಿ ಒಂಭತ್ತು ನನ್ನ ಗ್ರಾಮದಲ್ಲಿದ್ದರೆ ಇನ್ನು ಐದು ಪನತಳ್ಳಿ ಎನ್ನುವ ಪಕ್ಕದ ಗ್ರಾಮಕ್ಕೆ ಸೇರಿದೆ

"ನಾನು ನನ್ನ ಹಣವನ್ನು ಮಕ್ಕಳು, ಮೊಮ್ಮಕ್ಕಳಿಗೆ ನೀಡಿದ್ದರೆ ಅವರದನ್ನು ಖರ್ಚು ಮಾಡಿ ದಿವಾಳಿಯಾಗುತ್ತಿದ್ದರು. ಆದರೆ ಈ ಕೆರೆಗಳಿಗೆ ಹಾಕಿದ ಹಣದಿಂದ ಕೆರೆಗಳಲ್ಲಿ ವರ್ಷಪೂರ್ತಿ ನೀರಿದ್ದು ಅವರು ಶ್ರೀಮಂತ ಪರಿಸರಕ್ಕೆ ಕಾಅಣವಾಗಿದೆ. ನನಗೆ ಕೆಲವರು ಕೆಲವೊಮ್ಮೆ ಸ್ವಂತ ಖರ್ಚಿಗೆಂದು ಹಣ ನಿಡುತ್ತಾರೆ, ನಾನದನ್ನು ಬೇಡವೆನ್ನಲಾರೆ, ಹೇಗೆ ಕುಡುಕನಿಗೆ ಮದ್ಯಕ್ಕಾಗಿ ಹಣ ಖರ್ಚು ಮಾಡುವುದು ಇಷ್ಟವೋ ಹಾಗೆ ನಾನು ನನಗೆ ಸಿಕ್ಕ ಹಣವನ್ನೆಲ್ಲಾ ಈ ಕೆರೆಗಳಿಗಾಗಿ ಬಳಸುತ್ತೇನೆ" ಅವರು ನುಡಿದರು.

ಕಾಮೇಗೌಡರ ಕಿರು ಪರಿಚಯ
ಹೆಸರು: ಕಾಮೇಗೌಡ
ವಯಸ್ಸು: 82
ಊರು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ
ಪೋಷಕರು: ನೀಲಿ ವೆಂಕಟಗೌಡ ಹಾಗೂ ರಾಜಮ್ಮ
ನಿರ್ಮಿಸಿದ ಕೆರೆಗಳ ಸಂಖ್ಯೆ: 14
ಸಂದ ಪ್ರಶಸ್ತಿಗಳು: ಬಸವಶ್ರೀ ಪ್ರಶಸ್ತಿ (2017), ರಮಾಗೋವಿಂದ ಪ್ರಶಸ್ತಿ (2017) ಇನ್ನೂ ಮುಂತಾದವು

(ನನ್ನ ಈ ಲೇಖನವು 15 ಜುಲೈ 2018 10:19 AM ಗೆ "ಕನ್ನಡಪ್ರಭ ಡಾಟ್ ಕಾಂ"" ನಲ್ಲಿ ಪ್ರಕಟವಾಗಿತ್ತು)

Sunday, September 16, 2018

ವಿಶ್ವಧರ್ಮ ಸಮ್ಮೇಳನದಲ್ಲಿ ವೀರ ಸನ್ಯಾಸಿ ವಿವೇಕಾನಂದರ ವಿಜಯಪತಾಕೆ!

"ಮನುಷ್ಯನಿಗೆ ಶಾಂತಿ, ನೆಮ್ಮದಿಯನ್ನು ತರುವುದೇ ಧರ್ಮದ ಉದ್ದೇಶ" ಎಂದಿದ್ದ ವೀರ ಸನ್ಯಾಸಿ ವಿವೇಕಾನಂದ ಅಮೆರಿಕಾದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ 125 ವರ್ಷ ತುಂಬುತ್ತಿದೆ! ಹತ್ತೊಂಭತ್ತನೇ ಶತಮಾನದಲ್ಲಿ ಜಗತ್ತಿನ ಸನಾತನ ಧರ್ಮದ ಸತ್ಯವನ್ನು ಎತ್ತಿಹಿಡಿಯಲು ಭಾರತದಲ್ಲಿ ಅವತರಿಸಿದ ಮಹಾಪುರುಶರಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಹೆಸರು ಅತ್ಯಂತ ಮುಂಚೂಣಿಯಲ್ಲಿ ನಿಲ್ಲುವಂತದು.

ಅದರಲ್ಲಿಯೂ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಸಾವಿರಾರು ಕಿಮೀ ದೂರದ ಅಮೆರಿಕಾದ ಚಿಕಾಗೋದಲ್ಲಿ  ಮಾಡಿದ ಐತಿಹಾಸಿಕ  ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ಇದು ಕೇವಲ ವಿವೇಕಾನಂದರ ವಿಜಯ ಯಾತ್ರೆಯಲ್ಲ,  ಭಾರತದ, ಹಿಂದೂ ಧರ್ಮದ ಸಾಹಸ ಯಾತ್ರೆಯೇ ಆಗಿತ್ತು. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ  ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನ, ಅವರಲ್ಲಿನ ಧರ್ಮಜಾಗೃತಿಯನ್ನು ಬಡಿದೆಬ್ಬಿಸುವಂತಹುದಾಗಿತ್ತು.



ವಿಶ್ವಧರ್ಮ ಸಮ್ಮೇಳನ ಹಿನ್ನೆಲೆ
1893ರ ಸೆಪ್ಟೆಂಬರ್ 11ರಿಂದ 27ರವರೆಗೆ ಚಿಕಾಗೋದ "ಕೊಲಂಬಿಯನ್ ಜಾಗತಿಕ ಮೇಳ"ದ ಅಂಗವಾಗಿ ನಡೆದ ವಿಶ್ವಧರ್ಮ ಸಮ್ಮೇಳನ ಪ್ರಪಂಚದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆಯಾಗಿದೆ.ಹಿಂದೂಧರ್ಮದ ಚ್ರಿತ್ರೆಯಲ್ಲಿ ಹೊಸ ಅಧ್ಯಾಯವೊಂದಕ್ಕೆ ಇದು ನಾಂದಿ ಹಾಡಿತ್ತು. ಪ್ರಪಂಚದ ಸಕಲ ಮತಧರ್ಮಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಗಳಾಗಿದ್ದರು. ಇದೊಂದು ಮಾನವತೆಯ ಆದರ್ಶಗಳ ಒಗ್ಗೂಡಿಸುವಿಕೆಯ ಸಮ್ಮೇಳನವಾಗಿತ್ತು.ಜಗತ್ತಿನ ಮಾನವರೆಲ್ಲರಿಗೆ ಸಂಬಂಧಿಸಿದ ಎಲ್ಲಾ ಮುಖ್ಯ ವಿಷಯದ ಮೇಲೆ ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂದುಓರ್ವ ವಕೀಲ  ಚಾರ್ಲ್ಸ್ ಬಾನಿ ಸಲಹೆ ನೀಡಿದ್ದು ಎಲ್ಲರಿಂದ ಸರ್ವಸಮ್ಮತಿ ದೊರಕಿಸಿಕೊಂಡಿತ್ತು. ಅಲ್ಲದೆ ಈ ಜಾಗತಿಕ ಮಹಾ ಸಮ್ಮೇಳನಕ್ಕೆ ಬಾನಿ  ಅವರನ್ನೇ ಮಹಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಾರಂಭದಲ್ಲಿ ಕೆಲ ಕ್ರೈಸ್ತ ಬಿಷಪ್ಪರು "ಸರ್ವಧರ್ಮ ಸಮ್ಮೇಳನ:ಕ್ಕೆ ವಿರೋಧ ವ್ಯಕ್ತಪಡಿಸಿದರೂ ಕಡೆಗೆ ಅದು ನಡೆಯಲೇಬೇಕು  ಎಂದೂ ತೀರ್ಮಾನವಾಗಿ ಚಿಕಾಗೋದ ಮಿಚಿಗನ್ ಅವೆನ್ಯೂದಲ್ಲಿ ಅದೇ ತಾನೆ ನೂತನವಾಗಿ ನಿರ್ಮಾಣವಾಗಿದ್ದ "ಆರ್ಟ್ ಇನ್ ಸ್ಟಿಟ್ಯೂಟ್" ಎನ್ನುವ ಭವ್ಯ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ಎಲ್ಲಾ ರಂಗದ ಪ್ರಮುಖರು, ಜಾಗತಿಕ ಗಣ್ಯ ವ್ಯಕ್ತಿಗಳು, ಪಾಶ್ಚಾತ್ಯತತ್ವಶಾಸ್ತ್ರ ಪ್ರವಿಣರು, ಕ್ರೈಸ್ತ ಧರ್ಮದ ಉನ್ನತ  ಧರ್ಮಾಧಿಕಾರಿಗಳು - ಎಲ್ಲರೂ ಭಾಗವಹಿಸಿದ್ದರು. 

ಭಾರತದಿಂದ ವಿವೇಕಾನಂದರಷ್ಟೇ ಅಲ್ಲದೆ ಬ್ರಹ್ಮ ಸಮಾಜ ಪ್ರತಿನಿಧಿಯಾಗಿ ಪ್ರತಾಪ್ ಚಂದ್ರ ಮಜೂಮ್ದಾರ್ ಸಹ ಭಾಗವಹಿಸಿದ್ದರು. ಜೈನ, ಬೌದ್ಧ ಮತ ಪ್ರತಿನಿಧಿಗಳು ಸಹ ಆಗಮಿಸಿದ್ದರು. ಶ್ರೀಲ<ಕಾದಿಂದ ಬೌದ್ದ ಧರ್ಮ ಪ್ರತಿನಿಧಿ ಧರ್ಮಪಾಲ  ಸಹ ಹಾಜರಿದ್ದರು.
ಮೈಸೂರು ಒಡೆಯರ್ ಸಹಾಯ!
ವಿಶೇಷವೆಂದರೆ ವಿವೇಕಾನಂದರಿಗೆ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬೇರೆ ಪ್ರತಿನಿಧಿಗಳಂತೆ ಮುಂಚಿತ  ಆಹ್ವಾನ ಬಂದಿರಲಿಲ್ಲ. ಕಡೆಯ ಎರಡು ದಿನಗಳಿರುವಾಗ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಪ್ರತಿನಿಧಿತ್ವ  ದೊರಕಿಸಿಕೊಂಡಿದ್ದರು. ಇಷ್ಟಕ್ಕೆ ಮುನ್ನ ಅಮೆರಿಕಾಗೆ ತೆರಳಲು ಸಜ್ಜಾಗುತ್ತಿದ್ದ ವಿವೇಕಾನಂದರ ಬಳಿ ಅಗತ್ಯಕ್ಕೆ ತಕ್ಕಷ್ಟು ಹಣವಿರಲ್ಲಿಲ್ಲ,  ವಿಶ್ವ ಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಭಾರತದ ಜ್ಞಾನ ಸಂಪತ್ತನ್ನು ಪರಿಚಯಿಸಬೇಕೆನ್ನುವ ಹಂಬಲದಿಂದ ಹೊರಟಿದ್ದ ವಿವೇಕಾನಂದರಿಗೆ ಸಹಾಯ ಹಸ್ತ ಚಾಚಿದ್ದು ಮೈಸೂರಿನ 10ನೇ  ಚಾಮರಾಜೇಂದ್ರ ಒಡೆಯರ್!

ಇದು ನಿಜ! ಸ್ವಾಮಿ ವಿವೇಕಾನಂದರ ವಿದೇಶ ಪ್ರವಾಸದ ಸಂಪೂರ್ಣ ಪ್ರಾಯೋಜಕರು ಮೈಸೂರಿನ ಒಡೆಯರು. 1868ರಲ್ಲಿ  ಸಿಂಹಾಅನವೇರಿದ್ದ  10ನೇ  ಚಾಮರಾಜೇಂದ್ರ ಒಡೆಯರ್ ಬಳಿಗೆ ಆಗಮಿಸಿದ್ದ ವಿವೇಕಾನಂದರಿಗೆ ತಾವು ಅಮೆರಿಕಾಗೆ ತೆರಳಿ  ಧರ್ಮಸಭೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದಲ್ಲದೆ ಅದಕ್ಕೆ ತಗುಲುವ ಅಷ್ಟೂ ಖರ್ಚನ್ನು ತಾವೇ ನೀಡಿ ಉದಾರತೆ ಮೆರೆದಿದ್ದರು.
ಧರ್ಮ ಸಮ್ಮೇಳನದಲ್ಲಿ ವಿವೇಕಾನಂದ
1893ರ ಸೆಪ್ಟೆಂಬರ್ 11 ಸೋಮವಾರ ಬೆಳಿಗ್ಗೆ 10ಕ್ಕೆ ಸರಿಯಾಗಿ ಐತಿಹಾಸಿಕ ವಿಶ್ವಧರ್ಮ ಸಮ್ಮೇಳನ ಉದ್ಘಾಟನೆಯಾಗಿತ್ತು. ಸಾವಿರಾರು ಜನರಿಂದ ಕಿಕ್ಕಿರಿದಿದ್ದ ಸಭಾಸದನದ ವೇದಿಕೆಯ ನಟ್ಟ ನಡುವೆ ಅಮೆರಿಕಾದ ಕ್ಯಾಥೋಲಿಕ್ ಕ್ರೈಸ್ತರ ಅತ್ಯಂತ ಶ್ರೇಷ್ಠ  ಧರ್ಮಗುರುಗಳಾದ ಕಾರ್ಡಿನಲ್  ಗಿಬ್ಬನ್ಸ್ ಕುಳಿತಿದ್ದರು. ಅವರ ಎರಡೂ ಬದಿ ವೊವೊಧ ಧರ್ಮಗಳ ಪ್ರತಿನಿಧಿಗಳು ಆಸೀನರಾಗಿದ್ದರು.  ಅವರೆಲ್ಲರ ನಡುವೆ ಕಿತ್ತಲೆ ಬಣ್ಣದ  ನಿಲುವಂಗಿ, ಪೀತ ವರ್ಣದ ಪೇಟ ಧರಿಸಿ ರಾಜಗಾಂಭೀರ್ಯದಿಂದ ಕುಳಿತಿದ್ದ ಸ್ವಾಮಿ  ವಿವೇಕಾನಂದ ವಿಶಿಷ್ಟ ಉಡುಪು, ಗಂಭೀರ ವ್ಯಕ್ತಿತ್ವದಿಂದ ಸಭಿಕರ ಗಮನ ಸೆಳೆದಿದ್ದರು.

ಮೊದಲಿಗೆ ಸ್ವಾಗತ ಸಮಿತಿಯ ಅಧಿಕಾರಿಗಳು ಮಾತನಾಡಿದರು. ಬಳಿಕ ಒಬ್ಬೊಬ್ಬ ಪ್ರತಿನಿಧಿಗಳು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ  ಸಾಗಿದ್ದರು. ಆದರೆ ವಿವೇಕಾನಂದರು ತಾವು ಎಲ್ಲವನ್ನೂ ಗಮನಿಸುತ್ತಾ ಮೌನವಾಗಿದ್ದರು. ಒಂದೆರಡು ಬಾರಿ ಅವರಿಗೆ ಭಾಷಣಕ್ಕಾಗಿ ಕರೆ ಬಂದರೂ "ಮತ್ತೆ ಮಾಡುತ್ತೇನೆ" ಂದು ಮುಂದೆ ಹಾಕಿದ್ದರು. ಕಡೆಗೊಮೆ ಸಭಾಧ್ಯಕ್ಷರಾದ ಚಾರ್ಲ್ಸ್ ಬಾನಿ  ಅವರೇ ಸ್ವಾಮಿ ವಿವೇಕಾನಂದರಿಗೆ ಭಾಷಣ ಮಾಡಬೇಕು ಎಂದು ಕೇಳಿದರು. ಅದಕ್ಕೆ ವಿವೇಕಾನಂದರ ಪಕ್ಕದಲ್ಲೇ ಕುಳಿತಿದ್ದ ಫ್ರೆಂಚ್ ಪಾದ್ರಿಗಳಾದ ಬಾನೆಟ್ ಮಾರಿ ಸಹ ಪ್ರೋತ್ಸಾಹ ನೀಡಿದರು.
ಘರ್ಜಿಸಿದ ಸಿಂಹ!
ಸ್ವಾಮಿ ವಿವೇಕಾನಂದರು ಯಾವ ಪೂರ್ವ ತಯಾರಿಗಳಾಗಲಿ, ಭಾಷಣವನ್ನು ಸಿದ್ದಪಡಿಸಿಕೊಂಡಾಗಲಿ ಸಭೆಯ ಎದುರು ನಿಲ್ಲಲಿಲ್ಲ, ಅವರು  ಸಭೆ ಎದುರು ನಿಂತು ಕ್ಷಣ ಮಾತ್ರ ಸಮಸ್ತ ಸಭೆಯನ್ನೊಮ್ಮೆ ಅವಲೋಕಿಸಿದರು. ಸರಸ್ವತೀ ದೇವಿಗೆ ವಂದನೆ ಸಲ್ಲಿಸಿದರುನಂತರ ಸಣ್ಣ ಭಾಷಣ ಪ್ರಾರಂಭಿಸಿದರು. "ಅಮೇರಿಕೆಯ ಸೋದರಿಯರೇ ಮತ್ತು ಸೋದರರೇ" ಎಂದು ಹೇಳಿದ್ದೇ ತಡ ಕಿವಿ  ಕಿವುಡಾಗುವಂತೆ ಕರತಾಡನ ನಡೆಯಿತು. ಪ್ರತಿಯೊಬ್ಬರೂ ಎದ್ದು ನಿಂತು ಜಯಘೋಷ ಮಾಡಿದರು, ತಮ್ಮ ತಮ್ಮ ಕರವಸ್ತ್ರ, ಹ್ಯಾಟುಗಳನ್ನು ಬೀಸಿ ಹರ್ಷ ವ್ಯಕ್ತಪಡಿಸಿದರು! ಇದನ್ನು ಕಂಡ ಸ್ವಾಮಿ ವಿವೇಕಾನಂದ ದಂಗಾಗಿ ಹೋದರು. 

ಕರತಾಡನ, ಜಯಘೋಷಗಳು ಮುಗಿದ ಮೇಲೆ ಭಾಷಣ ಮುಂದುವರಿಸಿದ ಅವರು "ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ  ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
"ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು....ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು..... ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ  ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ-  ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”
ಜಗತ್ತಿನ ಕಣ್ಮಣಿ
ಚಿಕಾಗೋ ವಿಶ್ವಧರ್ಮ ಸಮ್ಮೇಳನ ಉದ್ಘಾಟನಾ ದಿನದ ಸ್ವಾಮಿ ವಿವೇಕಾನಂದರ ಭಾಷಣ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಅಗ್ರ  ಸುದ್ದ್ದಿಯಾಗಿತ್ತು. ಹೀಗೆ ಭಾರತದಲ್ಲಿ ಸಾಮಾನ್ಯ ಸನ್ಯಾಸಿ, ಬೈರಾಗಿಯಾಗಿದ್ದ ಓರ್ವ ವ್ಯಕ್ತಿ ರಾತ್ರಿ ಬೆಳಗಾಗುವಷ್ಟರಲ್ಲಿ ಜಗತ್ತಿನ  ಕಣ್ಮಣಿಯಾಗಿ ಬದಲಾಗಿದ್ದರು. ಸ್ವಾಮೀಜಿ ಮಾಡಿದ್ದ ಪುಟ್ಟ ಭಾಷಣ ಮನೆರಿಕನ್ನರ ಮೇಲೆ ಮಾಡಿದ್ದ ಪರಿಣಾಮ ಹಾಗಿತ್ತು.  ಅದರಲ್ಲಿಯೂ ಅವರು ಪ್ರಾರಂಭದಲ್ಲಿ ಉದ್ಘರಿಸಿದ ಸಾಲುಗಳು "ಅಮೆರಿಕಾದ ಸೋದರಿಯರೆ, ಸೋದರರೇ" ಎಂಬ ಯಾವ 
ನಾಟಕೀಯತೆ ಇಲ್ಲದ ಮೂರು ಸರಳ ಶಬ್ದಗಳಿಗೆ ಇಡೀ ಅಮೆರಿಕಾವೇ ತಲೆದೂಗಿತ್ತು.

 ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಒಟ್ಟು ಆರು ಭಾಷಣಗಳನ್ನು ಮಾಡಿದ್ದರು, "ಹಿಂದೂಧರ್ಮ" ಎನ್ನುವ ವಿಚಾರದ ಕುರಿತಂತೆ  ಮಾಡಿದ್ದ ಭಾಷಣ ಸಹ ಅಮೋಘವಾದುದಾಗಿತ್ತು.  ಸಮ್ಮೇಳನದ ಕಡೆಯ ದಿನ ಸಮಾರೋಪ ಸಮಾರಂಭದಂದು ಸಹ ವಿವೇಕಾನಂದರು ತಮ್ಮ ಚುಟುಕಾದ ಭಾಷಣದ ಮೂಲಕ  ಸಮತ್ವದ ಸಾರವನ್ನು ತಿಳಿಸಿದ್ದರು.

"ಯಾರು ಯವ ಧರ್ಮವನ್ನು ಮತಾಂತರಗೊಳ್ಳುವದು ಅಗತ್ಯವಿಲ್ಲ, ಆದರೆ ಉಳಿದವರ ಉನ್ನತ  ಭಾವನೆಗಳನ್ನು ಮೈಗೂಡಿಸಿಕೊಂಡು ವಿಯುಕ್ತಿಕತೆಯನ್ನು ಕಳೆದುಕೊಳ್ಳದೆ ತಾನೇ ತಾನಾಗಿ ಬೆಳೆಯಬೇಕು..... ಪಾವಿತ್ರತೆ, ಪರಿಶುದ್ದರತೆ ಹಾಗೂ ಅನುಕಂಪೆಯು ಜಗತ್ತಿನ ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ, ಎಲ್ಲ ಧರ್ಮದಲ್ಲಿ ಅತ್ಯಂತ  ಶೀಲವಂತರಾದ ಸ್ತ್ರೀ ಪುರುಷರು ಆಗಿಹೋಗಿದ್ದಾರೆ. ಇಷ್ಟಾಗಿಯೂ ನಮ್ಮ ಧರ್ಮವೇ ಉಳಿಯುತ್ತದೆ ಎನ್ನುವವ್ವರ ವಾದ ಕೇಳಿದಾಗ  ನನಗೆ ಕನಿಕರ ಮೂಡುತ್ತದೆ" ಎಂದಿದ್ದರು.

ಹೀಗೆ ಸರ್ವಧರ್ಮ ಸಮ್ಮೇಳನದ ಮೂಲಕ ಭಾರತದ ಓರ್ವ ಪರಿವ್ರಾಜಕ ಸನ್ಯಾಸಿ ವಿಶ್ವಮಾನ್ಯತೆ ಗಳಿಸಿಕೊಂಡಿದ್ದರು. ಅಮೆರಿಕಾ ಪ್ರವಾಸ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವು ದೊರಕಿಸಿಕೊಟ್ಟಿತು. ಇ<ತಹಾ ಚಿಕಾಗೋ ಧರ್ಮಸಮ್ಮೇಳ ನಡೆದು  ಇದೀಗ 125 ವರ್ಷಗಳಾಗಿದ್ದು ನಮ್ಮ ನಡುವೆ ಇಂದಿಗೂ ಕುದಿಯುತ್ತಿರುವ ಧರ್ಮ ವೈಷಮ್ಯ, ಮಾರಣಾಂತಿಅಕ ಭತಯೋತ್ಪಾದನೆ  ಕೃತ್ಯಗಳನ್ನು ಕಂಡಾಗ ಮತ್ತೆ ಮತ್ತೆ ವಿವೇಕಾನಂದರ ಸಂದೇಶ ನೆನಪಿಸಿಕೊಳ್ಳಬೇಕು ಎನಿಸುತ್ತದೆ.
ಆಧಾರ: ಸ್ವಾಮಿ ಪುರುಷೋತ್ತಮಾನಂದ ವಿರಚಿತ "ವಿಶ್ವವಿಜೇತ ವಿವೇಕಾನಂದ"

(ಈ ನನ್ನ ಲೇಖನವು 11 ಸೆಪ್ಟೆಂಬರ್ 2018 12:00 AM ಗೆ 'ಕನ್ನಡಪ್ರಭ ಡಾಟ್ ಕಾಂ' ಜಾಲತಾಣದಲ್ಲಿ ಪ್ರಕಟವಾಗಿತ್ತು)