Tuesday, March 22, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths) -113

 

ಕಟೀಲು(Kateel)

ಕರ್ನಾಟಕ ಕರಾವಳಿಯ ಪ್ರಸಿದ್ದ ಯಾತ್ರಾಸ್ಥಳಗಳ ಪೈಕಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಸಹ ಒಂದಾಗಿದೆ. . ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಮುಖ ದೇವಸ್ಥಾನಗಳಲ್ಲೊಂದು. ದೇವಾಲಯದಲ್ಲಿ ಕೇವಲ ಪೂಜೆ ಪುನಸ್ಕಾರಗಳಲ್ಲದೆ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ಸೇವೆಗಳೂ ನಡೆಯುತ್ತದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. 6 ಯಕ್ಷಗಾನ ಮೇಳಗಳು ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ(ಫೋಟೋ ಕೃಪೆ: Kateel Sri Durgaparameshwari Temple Facebook page)
ದೇವರಿಗೆ ನಡೆಯುವ ಸೇವೆಗಳಲ್ಲಿ ಹೂ ಪೂಜೆಯೂ ಒಂದು. ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಲ್ಲಿಗೆ ಹೂವಿನ ಅಲಂಕಾರ ಅಂದರೆ ಬಹಳ ಇಷ್ಟ. ವರ್ಷಕ್ಕೆ ಐದು ಲಕ್ಷಕ್ಕೂ ಹೆಚ್ಚಿನ ಸೇವೆಗಳು ನಡೆಯುತ್ತವೆ. ಹೂಪ್ರಶ್ನೆ ಪ್ರತಿನಿತ್ಯ ಮಧ್ಯಾಹ್ನ 12.25ರಿಂದ 12.30 ಹಾಗೂ ರಾತ್ರಿ 7.15ರಿಂದ 8.30ರವರೆಗೆ ನಡೆಯುತ್ತದೆ. ಯಾವುದೇ ಒಂದು ಕೆಲಸವನ್ನು ಮಾಡುವ ವಿಚಾರದಲ್ಲಿಪ್ರಯತ್ನಿಸಬಹುದೇ ಅಥವಾ ಬೇಡವೇ ಎನ್ನುವ ಕುರಿತು ದೇವಿಯಿಂದ ಆದೇಶ ಪಡೆದುಕೊಳ್ಳುವುದೇ ಹೂಪ್ರಶ್ನೆ. ಶ್ರೀಕ್ಷೇತ್ರದ ಆರಾಧ್ಯಮೂರ್ತಿ ಶ್ರೀ ದುರ್ಗಾಪರಮೇಶ್ವರಿಯ ಆವಿರ್ಭಾವಕ್ಕೆ ಕಾರಣಳಾದ ನಂದಿನಿಯ ಮೂಲ ಸ್ವರೂಪವೇ ಗೋಮಾತೆ. ಈ ಕಾರಣದಿಂದ ಶ್ರೀಕ್ಷೇತ್ರವು ಎರಡು ಗೋಶಾಲೆಗಳನ್ನು ನಡೆಸುತ್ತಿದೆ. ನಂದಿನಿ ಗೋಸೇವೆಗಾಗಿ ಆಸಕ್ತ ಭಕ್ತರಿಗೂ ಅವಕಾಶ ಕಲ್ಪಿಸಿದೆ.

***

ನಂದಿನಿ ನದಿಯ ಕಥೆ:



ಜಾಬಾಲಿ ಮಹರ್ಷಿಯು ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡಿ ದೇವಲೋಕಕ್ಕೆ ತೆರಳಿದ್ದರು. ಕಾಮಧೇನುವನ್ನು ತಂದು ಲೋಕದ ಸಮಸ್ಯೆ ನೀಗಿಸುವ ಆಲೋಚನೆ ಅವರದ್ದಾಗಿತ್ತು. ಕಾಮಧೇನು ಇಲ್ಲದ ಹೊತ್ತಿನಲ್ಲಿ ಭೂಮಿಗೆ ಬರುವಂತೆ ನಂದಿನಿಯನ್ನು ಅವರು ಪರಿಪರಿಯಾಗಿ ಬೇಡುತ್ತಾರೆ. ಆದರೆ ನಂದಿನಿಯು ಭೂಲೋಕದ ಜನರನ್ನು ದೂಷಿಸಿ ಭೂಮಿಗೆ ಬರುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ. ಕುಪಿತನಾದ ಮುನಿವರ್ಯ ಭೂಲೋಕದಲ್ಲಿ ಹುಟ್ಟುವಂತೆ ಶಪಿಸುತ್ತಾನೆ. ಮುಂದೆ ದೇವಿಯೇ ಸಾಂತ್ವನ ಮಾಡಿ ಭೂಮಿಯಲ್ಲಿ ನದಿಯಾಗಿ ಹರಿಯುವಂತೆ ಹರಸುತ್ತಾಳೆ.

ರಾಕ್ಷಸ ವೀರ ಅರುಣಾಸುರನನ್ನು ದೇವಿ ದುಂಬಿಯ ರೂಪದಲ್ಲಿ ಸಂಹಾರ ಮಾಡುತ್ತಾಳೆ. ಹಾಗಾಗಿ ಆಕೆಯನ್ನು ಶಾಂತಗೊಳಿಸಲು ಸೀಯಾಳಭಿಷೇಕ ಅಂದು ಮಾಡಿದ್ದರು ಇಂದೂ ಮಾಡುತ್ತಾ ಬರುತ್ತಿದ್ದಾರೆ.

***

ನಂದಿನಿ ನದಿ ಅವತರಣ ದಿನ

ಹೀಗೊಂದು ಕಲ್ಪನೆಯೇ ಎಷ್ಟೊಂದು ಚೆಂದ!ನದೀ ನಂದಿನೀಯ ಅವತರಣ ದಿನ ಅಥವಾ ಇಳೆಯಲ್ಲಿ ಆಕೆ ಜನ್ಮ ತಾಳಿದ ದಿನ!

ಇದು ಪುರಾಣ ಕಥೆಭೂಮಿಯಲ್ಲಿ ಹನ್ನೆರಡು ವರುಷಗಳ ಭೀಕರ ಬರಗಾಲ. ಎಲ್ಲೆಲ್ಲಿಯೂ ಜನರ ಹಾಹಾಕಾರ. ಇದರಿಮದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿ, ಕಾಮಧೇನುವನ್ನು ಕರೆತರಲು ದೇವಲೋಕಕ್ಕೆ ಹೋದನು. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನುವು ವರುಣಲೋಕಕ್ಕೆ ಯಜ್ಞಕ್ಕಾಗಿ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನೀಯನ್ನು ಕಳುಹಿಕೊಡುವುನೆಂದೂ ಹೇಳಿದನು. ಅದರಂತೆ ನಂದಿನೀಯನ್ನು ಕರೆದು, ‘ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು’ ಎಂದನು. ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ, ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ತಪ್ಪನ್ನರಿತ ನಂದಿನಿ ಮುನಿಯನ್ನು ಯಾಚಿಸಲು, ಕರುಣಾರ್ದ್ರ ಹೃದಯನಾಗಿ, ಆದಿಮಾಯೆಯನ್ನು ಸ್ತುತಿಸು. ಅವಳೇ ನಿನಗೆ ವಿಶಾಪದ ದಾರಿಯನ್ನು ತೋರುವಳು ಎಂದನು.ನಂದಿನೀ ಅನನ್ಯ ಭಕ್ತಿಯಿಂದ ಸ್ತುತಿಸಲಾಗಿ ಜಗಜ್ಜನನೀ ಪ್ರತ್ಯಕ್ಷಳಾದಳು; ಮಗಳೇ ದುಃಖಿಸದಿರು, ನಿನ್ನ ಮಾತೆಯಾದ ನಾನು ನಿನ್ನ ಮಗಳಾಗಿ ಜನಿಸುವೆನು ಎಂದು ಅಭಯವಿತ್ತಳು.ಕೂಡಲೇ ನಂದಿನಿಯು ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು.ಅರುಣಾಸುರನನ್ನು ಭ್ರಮರ ರೂಪ ತಾಳಿ ವಧಿಸಿದ ಜಗನ್ಮಾತೆಯನ್ನು ಸುರರು ಹೂಮಳೆಗೈದು ಸ್ತುತಿಸಿದರು. ದೇವೇಂದ್ರನು ಕಲ್ಪವೃಕ್ಷದ ಫಲವನ್ನು ತಂದು ಅಭಿಷೇಕಗೈದನು. ಆಗ ಪ್ರಸನ್ನಳಾದ ಜಗನ್ಮಾಥೆ ದುಷ್ಟನ ಖಡ್ಗಾಘಾತದಿಂದಲೂ, ದುರ್ಜನರ ರಕ್ತಪಾತದಿಂದಲೂ ಈ ಸ್ಥಳವು ಅಪವಿತ್ರವಾಗಿದೆ. ಆದುದರಿಂದ ಇದೇ ನಂದಿನೀ ನದಿ ಮಧ್ಯದಲ್ಲೇ ಪ್ರಸನ್ನಳಾಗುವಳೆಂದು ಅಭಯವನ್ನಿತ್ತು, ಲಿಂಗಕ್ಯಳಾದಳು.

೪೦ಕಿಲೋ ಮೀಟರ್…ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ಉಗಮವಾದದ್ದು ಎನ್ನುತ್ತಾರೆ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನ ಸೇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನೀಯ ಉದ್ದ ೪೦ಕಿಲೋ ಮೀಟರ್. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ.ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹದಿನೈದರಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು, ಗುಂಡಾವು, ನೀರ್ ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು, ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರು ತಡೆಯುವ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತವೆ.

ದೇಗುಲಗಳನ್ನು ಹಾಡುಮಿಜಾರು ವಿಷ್ಣುಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರೀ, ಕಟೀಲು ದುರ್ಗಾಪರಮೇಶ್ವರೀ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಎಕ್ಕಾರು, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಗಳು, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿವೆ.

ಕಟೀಲು ನಂದಿನಿ ನದಿ

***

ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ ಜಾಬಾಲಿ ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು.

ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು.

ಆಧಾರ: ವಿವಿಧ ಜಾಲತಾಣಗಳು

ಮಾರ್ಕಂಡೇಯ ಪುರಾಣಾಂತರ್ಗತ-ದೇವಿ ಮಹಾತ್ಮೆ (ಸಪ್ತಶತೀ)

ದೇವೀ ಭಾಗವತ

ಸ್ಕಾಂದ ಪುರಾಣಾಂತರ್ಗತ ಸಹ್ಯಾದ್ರಿಖಂಡ

ಸೋದೆಮಠದಿಂದ ಪ್ರಕಾಶಿತ ನಿರ್ಜರಾರಣ್ಯ ಮಹಾತ್ಮ್ಯ (1927)

Tuesday, March 08, 2022

ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?

 ಯುದ್ಧ …

ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ.  ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ.  ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8  ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!

ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ  ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ?  ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.  ಉಕ್ರೇನ್‌ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್‌ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.

ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?

ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ.  ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.

ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು!  ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ  ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ?  ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.

ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ.  ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ  ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ.  ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ.  ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್‌ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ.  ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ  ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ.  1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?

ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ. 

ನನ್ನ ಈ ಲೇಖನವು ಪ್ರಸಿದ್ದ ಆನ್ ಲೈನ್ ತಾಣ "ನಿಲುಮೆ"ಯಲ್ಲಿ ಮಾರ್ಚ್ 9, 2022ರಂದು ಪ್ರಕಟವಾಗಿದೆ..

Friday, February 25, 2022

ಬದುಕಿನ ಗೆಲುವಿಗೆ ಹೊಸ ದಿಕ್ಕು ತೋರಿಸುವ ಮಧುಕರ್‌ ಬಳ್ಕೂರ್‌ ಅವರ ’ಆಸೆಗಳು ಕನಸಾಗಿ ಬದಲಾಗಲಿ’

 ’ಆಸೆಗಳು ಕನಸಾಗಿ ಬದಲಾಗಲಿ’ ಎಂತಹಾ ಅದ್ಭುತ ಮಾತು! ಮಾನವನ ಆಸೆಗಳಿಗೆ ಕೊನೆ ಮೊದಲಿರುವುದಿಲ್ಲ. ಆದರೆ ಅದೇ ಆಸೆ ಕನಸುಗಳಾಗಿ ಬದಲಾಗುವುದು ಎನ್ನುವ ಹಾಗಿದ್ದರೆ ಅದೆಷ್ಟು ಚೆನ್ನ? ಇಷ್ಟಕ್ಕೂ ಇಲ್ಲಿ ಇದನ್ನು ಹೇಳುತ್ತಿರುವುದಕ್ಕೆ ಕಾರಣವಿದೆ. ಉದಯೋನ್ಮುಖ ಲೇಖಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿಯ ಹೆಸರು ’ಆಸೆಗಳು ಕನಸಾಗಿ ಬದಲಾಗಲಿ’ ಈ ಪುಸ್ತಕ ಸಹ ಶೀರ್ಷಿಕಯಷ್ಟೇ ಸುಂದರವಾಗಿದೆ.

ಮೂಲತಃ ಉಡುಪಿಯ ಕುಂದಾಪುರದ ಬಳ್ಕೂರು ಗ್ರಾಮದವರಾದ ಮಧುಕರ್ ವಿದ್ಯಾಭ್ಯಾಸ, ವೃತ್ತಿ ಸಂಬಂಧ ನಾನಾ ಊರುಗಳಲ್ಲಿದ್ದು ಅನುಭವ ಹೊಂದಿದವರು. ಕಳೆದ ಆರೇಳು ವರ್ಷಗಳಿಂದ ರಾಜ್ಯದ ವಿವಿಧ ಪತ್ರಿಕೆ, ನಿಯತಕಾಲಿಕಗಳಲ್ಲಿ ಅವರ ಲೇಖನಗಳು ಪ್ರಕಟವಾಗಿದ್ದು ಹೀಗೆ ಪ್ರಕಟವಾದ ಆಯ್ದ ಪ್ರಮುಖ ಲೇಖನಗಳನ್ನು ಒಟ್ಟುಗೂಡಿಸಿ ’ಆಸೆಗಳು ಕನಸಾಗಿ ಬದಲಾಗಲಿ’ ಎನ್ನುವ ಪುಸ್ತಕವನ್ನು ಹೊರತಂದಿದ್ದಾರೆ.

ವ್ಯಕ್ತಿತ್ವ ವಿಕಸನ ಅಥವಾ ಪರ್ಸನಾಲಿಟಿ ಡೆವಲಪ್‌ಮೆಂಟ್ ಎಂಬುದು ಇಂದಿನ ಯುವಜನತೆ ಇಷ್ಟಪಡುವ ಪ್ರಮುಖ ವಿಷಯಗಳಲ್ಲಿ ಒಂದು. ಇದನ್ನು ಸಧ್ಯ ಚಾಲ್ತಿಯಲ್ಲಿರುವ ಪ್ರಮುಖ ಟ್ರೆಂಡಿಂಗ್ ವಿಷಯವೆಂದರೂ ತಪ್ಪಲ್ಲ. ಅಂತಹ ವ್ಯಕ್ತಿತ್ವ ವಿಕಸನ ವಿಷಯಕ್ಕೆ ಸಂಬಂಧಿ ವಿವಿಧ ವಿಚಾರಗಳನ್ನು ಹೊಂದಿರುವ 32 ಲೇಖನಗಳು ಈ ಪುಸ್ತಕದಲ್ಲಿವೆ. ಆದರೆ ಆ ಒಂದೊಂದು ಲೇಖನವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಜೀವನವನ್ನು ಯಾವ ಯಾವ ದೃಷ್ಟಿಕೋನದಿಂದ ನೋಡಿದಾಗ ಹೇಗೆಲ್ಲಾ ಕಾಣಬಲ್ಲುದು ಎನ್ನುವುದನ್ನು ಇಲ್ಲಿನ ಲೇಖನಗಳಲ್ಲಿ ಲೇಖಕರು ಸ್ವಾರಸ್ಯಕರವಾಗಿ, ಅಷ್ಟೇ ಸರಳವಾಗಿ ವಿವರಿಸಿದ್ದಾರೆ. ’ಗೆಲುವಿಗೆ ನಾವು ಬೇರೆ ದಾರಿ ಹುಡುಕಬೇಕಾಗಿಲ್ಲ. ನಮ್ಮೊಳಗೆ ನಮಗೇ ಗೊತ್ತಿಲ್ಲದೆ ಇರುವ ದಾರಿಗಳನ್ನೇ ಹುಡುಕಿಕೊಳ್ಳುವ ಸಮಯ ಈಗ ಬಂದಿದೆ’ ಎನ್ನುವ ಪುಸ್ತಕದ ಮುಖಪುಟದಲ್ಲಿರುವ ಸಾಲುಗಳು ಪುಸ್ತಕದ ಒಳಪುಟಗಳು ಏನನ್ನು ಹೇಳುತ್ತಿದೆ ಎನ್ನುವುದನ್ನು ತಿಳಿಸುತ್ತದೆ.

ಮೊದಲಿಗೆ ಪುಸ್ತಕದಲ್ಲಿನ ಕೆಲ ಲೇಖನಗಳನ್ನು ಬಿಡಿ ಬಿಡಿಯಾಗಿ ನೋಡುವುದಾದರೆ ಪುಸ್ತಕದ ಮೊದಲ ಲೇಖನ ’ಆಸೆಗಳು ಕನಸಾಗಿ ಬದಲಾಗಲಿ’ ಯಲ್ಲಿ ಲೇಖಕ ನಮ್ಮ ಆಸೆಗೂ ಕನಸಿಗೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾರೆ. ಜೊತೆಗೆ ಕನಸುಗಳು ಆಸೆಗಳಿಗಿಂತ ಹೇಗೆ ಶ್ರೇಷ್ಠವಾದದ್ದೆನ್ನುವುದನ್ನು ಹೇಳಿದ್ದಾರೆ. “ಆಸೆಗಳನ್ನು ದುಡ್ಡು ಕೊಟ್ಟು ಕೊಳ್ಳಬಹುದು ಹಾಗೇ ಮಾರಿಕೊಳ್ಳಬಹುದು, ಆದರೆ ಯಾವ ಕನಸನ್ನೂ ದುಡ್ಡಿನಿಂದ ಖರೀದಿಸಲಾಗುವುದಿಲ್ಲ ಹಾಗೂ ಮಾರಿಕೊಳ್ಳಲು ಬರುವುದಿಲ್ಲ” ಎಂಬ ಲೇಖಕರ ಮಾತು ಆಸೆಗಳ ಕ್ಷಣಿಕತೆ ಹಾಗೂ ಕನಸುಗಳ ಮಹತ್ವವನ್ನು ಸಾರುತ್ತದೆ.

ಇನ್ನು ಇಮೇಜ್‌ಗಳ ಬಗ್ಗೆ, ಸೋಲು, ಗೆಲುವುಗಳ ಬಗ್ಗೆ, ಹಿರಿಯರ ಹಾರೈಕೆಗಳ ಬಗ್ಗೆ, ಒಳ್ಳೆತನವೇ ದೌರ್ಬಲ್ಯವಾಗುವ ಬಗ್ಗೆ ನಾನಾ ದೃಷ್ಟಿಕೋನಗಳಿಂದ ವಿವರಿಸಿದ ಲೇಖನಗಳು ಈ ಪುಸ್ತಕದಲ್ಲಿವೆ.

ಇದಲ್ಲದೆ ‘ಟಿ ಟ್ವೆಂಟಿ ವೇಗಕ್ಕೆ ಸಾಯದಿರಲಿ ಕನಸು’, ‘ಕ್ರಿಕೆಟ್ಟು ನಮ್ಮ ಬದುಕಿಗೆ ಹೇಳಿ ಕೊಡಲಿದೆ ಸಾಕಷ್ಟು’ ಎನ್ನುವ ಲೇಖನಗಳಲ್ಲಿ ಜೀವನವನ್ನು ಕ್ರಿಕೆಟ್ ಆಟದೊಡನೆ ಹೋಲಿಸಿರುವುದು ವಿಶೇಷ. ಕ್ರಿಕೆಟ್ಟಿನಲ್ಲಿ ಹೇಗೆ ಸೋಲು ಗೆಲುವುಗಳಿರುತ್ತದೆಯೋ ಹಾಗೇ ಜೀವನದಲ್ಲಿಯೂ ಸೋಲು ಗೆಲುವುಗಳಿರುತ್ತವೆ, ಅದನ್ನು ನಾವು ಕ್ರಿಕೆಟ್ಟಿನ ಸೋಲು ಗೆಲುವಿನಂತೇ ಸಾಮಾನ್ಯವಾಗಿ ಸ್ವೀಕರಿಸಬೇಕು ಎಂದು ಹೇಳಿರುವ ಲೇಖಕರು ಇದು ಕ್ರಿಕೆಟ್ಟಿನಿಂದ ನಾವು ಕಲಿಯಬೇಕಾಗಿರುವ ಆಶಾವಾದದ ಪಾಠ ಎಂದಿದ್ದಾರೆ.

‘ಐ ಡೋಂಟ್ ಕೇರ್ ಎನ್ನುವ ಮೊದಲು…’ ಎನ್ನುವ ಲೇಖನದಲ್ಲಿ ಹಾಗೆನ್ನುವವರ ಮನದಾಳದಲ್ಲಿರುವ ತಮ್ಮನ್ನು ಅರ್ಥ ಮಾಡಿಕೊಳ್ಳದವರ” ಬಗೆಗಿನ ನಿರಾಶೆಯ ಕುರಿತಂತೆ ಲೇಖಕರು ಆಪ್ತ ಮಾತುಗಳನ್ನಾಡಿದ್ದಾರೆ.

‘ನೀವು ನಿಮ್ಮ ಮೊಬೈಲ್ ಬಿಟ್ಟು ಇರಬಲ್ಲಿರಾ?‘ ಎಂಬ ಲೇಖನದಲ್ಲಿ ಬರಹಗಾರ ಇಂದು ನಾವೆಷ್ಟು ಮೊಬೈಲಿಗೆ ಅಡಿಯಾಳಾಗಿದ್ದೇವೆ, ಸ್ಮಾರ್ಟ್ ಫೋನ್ ಗೆ ನಾವೆಷ್ಟು ಒಗ್ಗಿ ಹೋಗಿದ್ದೇವೆ, ಆ ಮೂಲಕ ನಮ್ಮ ನೆಮ್ಮದಿಯನ್ನು ಹೇಗೆ ಕೆಡಿಸಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ಇನ್ನು ‘ಬದುಕಲ್ಲಿ ಸ್ಪಷ್ಟತೆ ಇರಲಿ, ಉತ್ತರದಲ್ಲೂ,’ ‘ನಿಮ್ಮ ಗುರಿ, ನಿರೀಕ್ಷೆ ಎರಡೂ ಒಂದೇನಾ?’ ’ನಂಬಿಕೆ ಅಂದ್ರೆ ನಂಬಿಕೆ ಅಷ್ಟೇ’ ಎಂಬ ಲೇಖನಗಳೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ವಿಚಾರಪೂರ್ಣವಾಗಿದೆ.

ಇಷ್ಟೆಲ್ಲಾ ಹೇಳಿದ ಮೇಲೆ ಈ ಪುಸ್ತಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿ ಎನ್ನುವುದನ್ನು ಗಮನಿಸಲೇಬೇಕು. ಒಬ್ಬ ಲೇಖಕ ತನ್ನ ಚೊಚ್ಚಲ ಕೃತಿಯಲ್ಲಿ ಏನೆಲ್ಲಾ ವಿಷಯಗಳನ್ನು ಹೇಗೆಲ್ಲಾ ಪ್ರಸ್ತುತಪಡಿಸಬಹುದು? ಎಂಬ ಕುತೂಹಲದಿಂದ ನೀವೇನಾದರೂ ಈ ಪುಸ್ತಕ ಓದಲು ಮುಂದಾದರೆ ನಿಮಗೆ ಖಂಡಿತಾ ನಿರಾಶೆಯಾಗುವುದಿಲ್ಲ. ಏಕೆಂದರೆ ಈ ಕೃತಿಯಲ್ಲಿರುವ ಲೇಖನಗಳನ್ನು ಓದಿದಾಗ ನಿಮಗೆ ಇದು ಹೊಸಬರ ಬರಹ ಎಂಬಂತೆ ಕಾಣಿಸುವುದೇ ಇಲ್ಲ. ಬದಲಿಗೆ ಪ್ರತಿಯೊಂದು ಲೇಖನದಲ್ಲಿಯೂ ಗಂಭೀರ ವಿಚಾರಗಳಿದ್ದು ಬರಹದ ಭಾಷೆ ಹಾಗೂ ಶೈಲಿ ಸಹ ಯಾವುದೇ ವಯೋಮಾನದವರೂ ಓದಿ ಅರ್ಥ ಮಾಡಿಕೊಳ್ಳಬಹುದಾದಷ್ಟು ಆಪ್ತ ಹಾಗೂ ಸರಳವಾಗಿದೆ.

ಇದನ್ನೇ ಲೇಖಕರು ತಮ್ಮ ಮಾತುಗಳಲ್ಲಿ “ಸಣ್ಣ ಸಣ್ಣ ಸಾಮಾನ್ಯವೆನ್ನಿಸುವ ವಿಚಾರಗಳೆಲ್ಲಾ ಈ ಪುಸ್ತಕದ ಲೇಖನದಲ್ಲಿ ಮುಖ್ಯವಾದ ಸಂಗತಿ ಎನಿಸುತ್ತದೆ…… ಈ ನಿಟ್ಟಿನಲ್ಲಿ ಈ ಪುಸ್ತಕ ಎಲ್ಲಾ ವರ್ಗದವರಿಗೂ ಎಲ್ಲಾ ವಯೋಮಾನದವರಿಗೂ ತಾಕುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ ಆವಿ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮೂಲಕ ಹೊರಬಂದಿರುವ ಮಧುಕರ್ ಬಳ್ಕೂರು ಅವರ ಈ ಕೃತಿ ಬದುಕಿನಲ್ಲಿ ಸೋತೆವೆಂದುಕೊಂಡವರಿಗೆ ಒಂದೇ ಒಂದು ಗೆಲುವಿಗಾಗಿ ಹಂಬಲಿಸುವವರಿಗೆ ಸ್ಫೂರ್ತಿ, ಭರವಸೆಗಳನ್ನು ನೀಡಬಲ್ಲ ಪುಸ್ತಕವಾಗಿದೆ.

ಗೆಳೆಯ #ಮಧುಕರಬಳ್ಕೂರ್ ಅವರ ಪುಸ್ತಕ #ಆಸೆಗಳುಕನಸಾಗಿಬದಲಾಗಲಿ ಕುರಿತ ನನ್ನ ಪರಿಚಯ ಲೇಖನ #ಪಂಜು ಜಾಲತಾಣದಲ್ಲಿ ದಿನಾಂಕ 21-01-2022ರಂದು ಪ್ರಕಟವಾಗಿದೆ.

ಇಸ್ಲಾಂ ಹಿಜಾಬ್ ಮತ್ತು ವಿದ್ಯಾಭ್ಯಾಸ:

 ಕಳೆದ ಕೆಲ ದಿನಗಳಿಂದ ದೇಶದಾದ್ಯಂತ ಹಿಜಾಬ್ ಕುರಿತ ವಿವಾದ ಹೊಗೆಯಾಡುತ್ತಿದೆ. ಉಡುಪಿಯ ಕಾಲೇಜಿನಲ್ಲಿ ಪ್ರಾರಂಭವಾದ ಚಿಕ್ಕ ಘಟನೆಯೊಂದು ದೇಶದ ಗಡಿಗಳನ್ನು ಮೀರಿ ವಿವಾದವಾಗಿ ಮಾರ್ಪಟ್ಟಿದೆ ಎಂದರೆ ಈ ಆಧುನಿಕ ಕಾಲದಲ್ಲಿಯೂ ಮಾನವನು ಧರ್ಮದ ಸಂಬಂಧವಾಗಿ ಹೇಗೆ ಭಾವಿಸಿಕೊಂಡಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ರಾಜ್ಯದ ನಾನಾ ಶಾಲೆ, ಕಾಲೇಜುಗಳಲ್ಲಿನ ಕೆಲ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಸಿಗದಿದ್ದರೆ ಶಿಕ್ಷಣವನ್ನೇ ಮೊಟಕು ಮಾಡುತ್ತೇವೆ ಎನ್ನುವವರೆಗೆ ಮುಂದುವರಿದಿದ್ದಾರೆ. ಇದು ನಿಜಕ್ಕೂ ಆಘಾತಕರ. ”ನಮಗೆ ನಮ್ಮ ಇಸ್ಲಾಂ ಧರ್ಮ, ಹಿಜಾಬ್ ಮುಖ್ಯ, ಶಾಲೆಯ ಶಿಕ್ಷಣವಲ್ಲ, ಮನೆಯಲ್ಲಿ ನಮ್ಮ ಅಪ್ಪ-ಅಮ್ಮ ಏನು ಹೇಳುತ್ತಾರೆ ಅವರ ಮಾತುಗಳನ್ನು ಕೇಳುತ್ತೇವೆ” ಎನ್ನುವ ಇವರು ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇನ್ನೊಂದೆಡೆ ಹಿಜಾಬ್ ವಿವಾದದ ವಸ್ತುವೇ ಅಲ್ಲ, ಇದು ಮುಸ್ಲಿಂ ಯುವತಿಯರನ್ನು, ಮಹಿಳೆಯರನ್ನು ಶಿಕ್ಷಣದಿಂಡ ದೂರ ಸರಿಸುವ ಸಂಚಾಗಿದೆ ಎಂದು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮದ್ ಖಾನ್ ಹೇಳುತ್ತಾರೆ.

ಮೂಲ ಇಸ್ಲಾಂ ಧರ್ಮದಲ್ಲಿ ಐದು ವಿಷಯಗಳನ್ನು ಕಡ್ಡಾಯ ಮಾಡಲಾಗಿದೆ. ಅವುಗಳೆಂದರೆ ಕಲಿಮಾ, ಪ್ರಾರ್ಥನೆ, ರಂಜಾನ್ ಉಪವಾಸ, ದಾನ ಮತ್ತು ಹಜ್. ಈ ಪಟ್ಟಿಯಲ್ಲಿ ಹಿಜಾಬ್ ಇಲ್ಲ. ಹಾಗಾಗಿ ಇದು ಇಸ್ಲಾಂ ಧರ್ಮದ ಮೂಲ ಅಗತ್ಯವಾಗಿಲ್ಲ ಎಂದು ಕೇರಳ ರಾಜ್ಯಪಾಲರು ತಮ್ಮ ಮಾತುಗಳಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ.

ಹಿಜಾಬ್ ಪರವಾಗಿ ವಾದಿಸುವ ವಿದ್ಯಾರ್ಥಿನಿಯರು ಮಾತ್ರ ತಾವು ನೂರಾರು ವರ್ಷಗಳಿಂದ ಇದನ್ನು ಧರಿಸುತ್ತಾ ಬಂದಿದ್ದೇವೆ. ಇದೇನೂ ನಿನ್ನೆ ಮೊನ್ನೆ ಬಂದ ಆಚರಣೆಯಲ್ಲ. ಇಷ್ತೂ ದಿನ ನಾವು ಶಾಲೆಗೆ ಹಿಜಾಬ್ ಧರಿಸಿಯೇ ಬರುತ್ತಿದ್ದೆವು, ಈಗ ಮಾತ್ರವೇ ವಿರೋಧ ವ್ಯಕ್ತವಾಗುತ್ತಿರುವುದೇಕೆ? ಎನ್ನುತ್ತಾರೆ. ಅಲ್ಲದೆ ಹಿಂದೂ ಯುವತಿಯರು ಬಳೆ, ಕುಂಕುಮಗಳನ್ನು, ಯುವಕರು ರುದ್ರಾಕ್ಷಿಯಂತಹಾ ವಸ್ತುಗಳನ್ನು, ಕ್ರಿಶ್ಚಿಯನ್ನರು ಶಿಲುಬೆಗಳನ್ನು ಧರಿಸಿ ಶಾಲೆಗೆ ಬರಬಹುದಾದರೆ ನಾವೇಕೆ ಹಿಜಾಬ್ ಧರಿಸಕೂಡದು? ಹೀಗೆ ಅವರ ವಾದ ಸರಣಿ ಸಾಗುತ್ತದೆ.

ಹಾಗಾದರೆ ಸಮವಸ್ತ್ರ ಎನ್ನುವುದಕ್ಕೆ ಯಾವ ಮಾನ್ಯತೆ, ಮೌಲ್ಯವೂ ಇಲ್ಲವೆ? ಖಂಡಿತವಾಗಿಯೂ ಇದೆ. ಮಕ್ಕಳಲ್ಲಿ ತಾವು ಇಂತಹಾ ಜಾತಿ, ಧರ್ಮದವರು, ಶ್ರೀಮಂತರು, ಬಡವರು, ಮೇಲು ಕೀಳು ಎಂಬ ನಾನಾ ಬೇಧ ಭಾವಗಳು ಮೂಡದಿರಲಿ ಎಂಬ ಕಾರಣಕ್ಕಾಗಿಯೇ ಒಂದೇ ಬಗೆಯ ಬಣ್ಣ, ವಿನ್ಯಾಸವುಳ್ಳ ಸಮವಸ್ತ್ರ ಹಾಕಿಕೊಳ್ಳುವ ಪದ್ದತಿಯನ್ನು ಜಾರಿಗೆ ತರಲಾಗಿದೆ. ಎಂದರೆ ಒಂದು ಶಾಲೆಯಲ್ಲಿ ಕಲಿಯುವ ಮಕ್ಕಳು ಅವರೆಂತಹಾ ಧಾರ್ಮಿಕ ಹಿನ್ನೆಲೆಯವರಾಗಿದ್ದರೂ, ಆರ್ಥಿಕ ಹಿನ್ನೆಲೆ ಏನೇ ಇದ್ದರೂ ಜಾತಿ ಹೇಗಾಗಿದ್ದರೂ ಅವರೆಲ್ಲಾ ಒಂದೇ ಎಂದು ಮನೋಭಾವ ಬೆಳೆಯುವಂತಿರಬೇಕು. ಆ ಮೂಲಕ ಮಕ್ಕಳಲ್ಲಿ ಪರಸ್ಪರ ಸಮಾನತೆ ಅರಿವು ಮೂಡಬೇಕೆಂಬ ಉದಾತ್ತ ನಿಲುವು ಈ ಸಮವಸ್ತ್ರ ನೀತಿಯ ಹಿಂದಿದೆ. ಆದರೆ ಇದೀಗ ಹುಟ್ಟಿಕೊಂಡಿರುವ ಹಿಜಾಬ್ ವಿವಾದ ಮಕ್ಕಳಲ್ಲಿ ಧರ್ಮ ಬೇಧವನ್ನು ಉಂಟು ಮಾಡಿ ಪರಸ್ಪರ ಸ್ನೇಹದಿಂದಿರಬೇಕಾದವರು ಪರಸ್ಪರ ವೈರತ್ವ ಬೆಳೆಸಿಕೊಳ್ಲಲು ದಾರಿ ಮಾಡಿಕೊಡುತ್ತಿದೆ. ಮುಂದೊಂದು ದಿನ ಇದೇ ಸಮಸ್ಯೆ ಬೃಹತ್ ಗಾತ್ರದಲ್ಲಿ ಬೆಳೆದು ವಿದ್ಯಾರ್ಥಿ ಸಮುದಾಯದ ಒಳಗೆ ಬಹುದೊಡ್ಡ ಸಾಮಾಜಿಕ ಕಂದಕವನ್ನು ನಿರ್ಮಾಣ ಮಾಡುವ ಸಾಧ್ಯತೆಯಿದೆ.

ಇದಲ್ಲದೆ ಕಳೆದ ಎರಡು ವರ್ಷಗಳಿಂಡ ಕೊರೋನಾ ಮಹಾಮಾರಿಯ ಕಾರಣ ಸರಿಯಾಗಿ ತರಗತಿಯು ನಡೆಯದೆ ಶಿಕ್ಷಣ ವಯವಸ್ಥೆ ತಳ ಹಿಡಿದಿದ್ದು ಶಾಲಾ ಕಾಲೇಜುಗಳು ಕೆಲವೇ ತಿಂಗಳ ಹಿಂದೆ ಸಹಜ ಸ್ಥಿತಿಯನ್ನು ತಲುಪಿದೆ. ಅಈ ಸಮಯದಲ್ಲಿ ,ಕೋವಿಡ್‌ನಿಂದ ಅನಿಯಮಿತವಾದ ಪಠ್ಯ ಚಟುವಟಿಕೆಗಳಿಗೆ ತಲೆ ಕೊಡಬೇಕಾಗಿದ್ದ ಶಿಕ್ಷಣ ಸಂಸ್ಥೆಗಳು ಹಿಜಾಬ್ ನಿಂದಾಗಿ ಸಮವಸ್ತ್ರ ವಿವಾದಕ್ಕೆ ಸಿಲುಕಿರುವುದು ವಿಷಾದನೀಯ.

ಇದೆಲ್ಲಕ್ಕಿಂತ ಮಿಗಿಲಾಗಿ ನಾವಿಲ್ಲಿ ಇನ್ನೊಂದು ಮಹತ್ವದ ಅಂಶವನ್ನು ಗಮನಿಸಬೇಕು. ಅದೆಂದರೆ ಇಂದು ಹಿಜಾಬ್, ಕೇಸರಿ ಶಾಲು ವಿವಾದದಿಂದ ಶಿಕ್ಷಣದಿಂದ ವಂಚಿತರಾದವರಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಇದೇ ದೊಡ್ಡ ಸವಾಲಾಗಲಿದೆ. ಕಾಲೇಜು ವಿದ್ಯಾಭ್ಯಾಸ ಮುಗಿಸಿ ಹೊರಬಂದು ಉದ್ಯೋಗ ಹುಡುಕಾಟ ನಡೆಸುವ ವೇಳೆಯಲ್ಲಿ ಯಾವ ಉದ್ಯೋಗದಾತ ಸಂಸ್ಥೆ ಅಥವಾ ವ್ಯಕ್ತಿಯೂ ಅಂಕಪಟ್ಟಿ ಹಾಗೂ ಶ್ರೇಯಾಂಕ (ಪರ್ಸಂಟೇಜ್) ನೋಡಿ ಆತ/ಆಕೆಗೆ ಉದ್ಯೋಗ ನೀಡುವನೇ ವಿನಃಅ ಆತ/ಆಕೆ ಹಿಜಾಬ್ ಅಥವಾ ಕೇಆರಿ ಶಾಲು ಹಾಕಿರುವುದನ್ನು ನೋಡಿ ಯಾರೂ ಕೆಲಸ ನೀಡುವುದಿಲ್ಲ. ಪ್ರತಿಯೊಬ್ಬ ಮಕ್ಕಳ ಪೋಷಾಕರೂ ತಮ್ಮ ಮಕ್ಕಳು ಒಳ್ಳೇ ಓದು ಓದಿ ವಿದ್ಯಾವಂತರಾಗಿ ಸ್ವಾವಲಂಬಿಗಳಾಗಿ ಬದುಕಬೇಕೆಂದು ಬಯಸುವವರಿದ್ದಾರೆ. ಅದಕ್ಕಾಗಿ ತಾವು ಕಷ್ಟ ಪಟ್ಟು ಸಾಲ, ಸೋಲಗಳನ್ನು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ತಾವು ಧರಿಸುವ ಬಟ್ಟೆಯೇ ಮುಖ್ಯ, ಅದರ ಹಿಂದಿನ ಧಾರ್ನಿಕ ಕಾರಣಗಳೇ ತಮಗೆ ಶ್ರೇಷ್ಠವಾದದ್ದೆಂದು ನಂಬಿ ನಡೆಯುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತಮ್ಮ ತಂದೆ ತಾಯಿಗಳ ಕನಸು ಈಡೇರಿಸಲು ಇರುವ ಏಕೈಕ ಮಹೋನ್ನತ ಮಾರ್ಗ ಶಿಕ್ಷಣ ಎನ್ನುವುದು ಅರಿವಾಗುವ ಮುನ್ನ ಕಾಲ ಮಿಂಚಿ ಹೋಗಿರುತ್ತದೆ.

ಇನ್ನು ಹಿಂದೂ ಅಥವಾ ಮುಸ್ಲಿಂ ಯಾವುದೇ ಧರ್ಮದವರಿರಲಿ ಧಾರ್ಮಿಕ ಆಚರಣೆಗಳ ಮಹತ್ವ ಅದೆಷ್ಟೇ ದೊಡ್ಡದಾಗಿರಲಿ ಅದೆಲ್ಲಕ್ಕೀಂತ ಶಿಕ್ಷಣ, ಭವಿಷ್ಯದ ಜೀವನ ಮುಖ್ಯ ಎನ್ನುವುದನ್ನು ಮನಗಾಣಬೇಕಿದೆ. ಇದಕ್ಕೆ ಉತ್ತಮ ಉದಾಹರಣೆಯನ್ನಾಗಿ ನಾವು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೋಡಬಹುದು. ಓರ್ವ ದಲಿತ ಕುಟುಂಬದಿಂದ ಬಂದ ಅಂಬೇಡ್ಕರ್ ತಾವು ಉನ್ನತ ಜಾತಿಯವರಿಗೆ ಸರಿಸಮನಾಗಿ ನಿಲ್ಲಬೇಕಾದರೆ ನನಗೆ ಶಿಕ್ಷಣವೊಂದೇ ಮಾರ್ಗ ಎಂದು ಅರಿತಿದ್ದರು. ಅದಕ್ಕಾಗಿ ಅವರು ಹಗಲಿರುಳು ಕುಳಿತು ಓದಿ ತಮ್ಮ ಗುರಿಯನ್ನು ಸಾಧಿಸಿದ್ದರು. ಹಾಗಿಲ್ಲದೆ ಅವರೇನಾದರೂ ತಾನು ದಲಿತ, ದಲಿತ ಜಾತಿಯ ಸೂಚಕ ಗುರುತು ಧರಿಸಿ ಮಾತ್ರ ಶಾಲೆಗೆ ಬರುವೆನು ಇಲ್ಲವಾದರೆ ಬರಲಾರೆ ಎಂದು ಪ್ರತಿಭಟಿಸಿ ಉಳಿದಿದ್ದರೆ ಅವರೆಂದೂ ಭಾರತದ ಸರ್ವಶ್ರೇಷ್ಠ ನೇತಾರರಾಗಿರುತ್ತಿರಲಿಲ್ಲ.

ಇದೇ ವೇಳೆ ಶಿಕ್ಷಣ ಮುಖ್ಯವಲ್ಲ ಬದಲಿಗೆ ಧಾರ್ಮಿಕ ಆಚರಣೆ, ನಂಬಿಕೆಗಳು ಮುಖ್ಯ ಎನ್ನುವವರು ಹೇಗೆ ರೂಪುಗೊಳ್ಳಬಹುದು ಎನ್ನಲು ಅಮೆರಿಕಾದ ಅವಳಿ ಕಟ್ಟಡ ನಾಶಪಡಿಸಿದ ಜಾಗತಿಕ ಉಗ್ರ ಅಲ್ ಖೈದಾದ ಜನಕ ಒಸಾಮಾ ಬಿನ್ ಲಾಡೆನ್ ಜೀವನ ನಮ್ಮ ಕಣ್ಣ ಮುಂದಿದೆ. ಲಾಡೆನ್ ಶ್ರೀಮಂತ ಕುಟುಂಬದಲ್ಲಿ ಜನಿಸಿ ಉತ್ತಮ ಶಿಕ್ಷಣ ಪಡೆದಿದ್ದರೂ ಕೂಡ ಧರ್ಮಾಂಧತೆಯಲ್ಲಿ ಮುಳುಗೆದ್ದು ಅದನ್ನೇ ಸರ್ವಸ್ವ ಎಂದುಕೊಂಡ ಪರಿಣಾಮ ಜಾಗತಿಕ ಭಯೋತ್ಪಾದಕನಾಗಿ ಬದಲಾಗಿದ್ದ ಹಾಗೂ ಅಂತ್ಯದಲ್ಲಿ ಅಮೆರಿಕಾ ಕೈನಲ್ಲಿ ಒಂದು ಯಕಶ್ಚಿತ್ ಕ್ರಿಮಿಯಂತೆ ಹತ್ಯೆಯಾದ.

ಹಾಗಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಮ್ಮ ಧರ್ಮದ ನಂಬಿಕೆಗಳಿಗೆ ಜೋತು ಬೀಳದೆ ಶಿಕ್ಷಣದ ಶ್ರೇಷ್ಠತೆಯನ್ನರಿತು ಮುಂದುವರಿದರೆ ಭಾರತ ಇನ್ನಷ್ಟು ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ ಅವರುಗಳನ್ನು ಪಡೆಅಯಲಿದೆ ಅಲ್ಲದೆ ಹೋದರೆ ಮುಂದೊಂದು ದಿನ ಭಾರತದಲ್ಲಿ ಸಹ ನೆರೆಯ ಅಫ್ಘಾನಿಸ್ಥಾನದಂತಹಾ ವ್ಯವಸ್ಥೆ ತಲೆ ಎತ್ತಬಹುದು.ಹಾಗಾಗಿ ಭವ್ಯ ಭಾರತದ ಭವಿಷ್ಯವಾದ ಮಕ್ಕಳು, ಯುವಕ, ಯುವತಿಯರು ರಾಜಕೀಯ ಪ್ರೇರಿತ, ಅಂತರಾಷ್ಟ್ರೀಯ ಒತ್ತಡ ತಂತ್ರಗಳಿಗೆ ಬಲಿಯಾಗದೆ ಹಿಜಾಬ್, ಕೇಸರಿ ಶಾಲುಗಳ ಹಿಂದೆ ಬೀಳದೆ ನೈಜ ಶಿಕ್ಷಣ ಪಡೆಯುವತ್ತ ಗಮನಹರಿಸಿ ಮುಂದಿರುವ ಉಜ್ವಲ ಭವಿಷ್ಯಕ್ಕಾಗಿ ಸಜ್ಜಾಗಬೇಕಿದೆ.

ಹಿಜಾಬ್ ಮತ್ತು ಶಿಕ್ಷಣ ಕುರಿತಂತೆ ನನ್ನ ಲೇಖನ My article @  #ಪಂಜು ಆನ್ಲೈನ್ ಪತ್ರಿಕೆಯಲ್ಲಿ ದಿನಾಂಕ 25-02-2022ರಂದು ಪ್ರಕಟವಾಗಿದೆ

Wednesday, February 23, 2022

अहिंसा परमो धर्मः धर्म हिंसा तथैव च: ಈ ಶ್ಲೋಕ ಯಾವ ಧರ್ಮಗ್ರಂಥದಲ್ಲಿಯೂ ಇಲ್ಲ...!

अहिंसा परमो धर्मः धर्म हिंसा तथैव च:  ಈ ಸಾಲು ಯಾವುದೇ ಧಾರ್ಮಿಕ ಗಂಥಗಳಲ್ಲಿರುವ ಶ್ಲೋಕ ಅಲ್ಲ.ಸಂಸ್ಕೃತ ವ್ಯಾಕರಣದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುವ ಯಾರಾದರೂ 2 ನೇ ಸಾಲು ಶಬ್ದಾರ್ಥದಲ್ಲಿ ಧ್ವನಿಸುವುದಿಲ್ಲ ಎನ್ನುವುದನ್ನು ಪತ್ತೆ ಮಾಡಬಹುದು.


ಮೊದಲ ಸಾಲನ್ನುಮಹಾತ್ಮ ಗಾಂಧೀಜಿಯವರು ‘ಅಹಿಂಸೆಯೇ ಪರಮ ಧರ್ಮ’ ಎಂದು ಉಲ್ಲೇಖಿಸಲು ವ್ಯಾಪಕವಾಗಿ ಬಳಸಿದ್ದಾರೆ.  ಆದರಿದು ಅರ್ಧ ಶ್ಲೋಕ ಮಾತ್ರವೇ ಆಗಿದೆ. ಸಂಪೂರ್ಣಅರ್ಥದಲ್ಲಿ ಆಂಗ್ಲಪದ ನಾನ್ ವಯಲೆನ್ಸ್ ಗೂ ಸಂಸ್ಕೃತದ ಅಹಿಂಸೆ ಎಂಬ ಪದಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಅಲ್ಲದೆ अहिंसा परमो धर्मः ಎಂಬ ಸೂಕ್ತಿ ಮಹಾಭಾರತದಿಂದ ಬಂದಿರುವುದಾಗಿದೆ. ಈ ನುಡಿಗಟ್ಟು ಮಹಾಭಾರತದ ವಿವಿಧ ಪರ್ವಗಳಲ್ಲಿನೇಕ ಬಾರಿ ಕಾಣಿಸಿಕೊಳ್ಳುತ್ತದೆ ಮತ್ತು ಪ್ರತಿ ಸಾಲುಗಳಲ್ಲಿ  ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ನಿರ್ಣಾಯಕ ವಾಕ್ಯಗಳೊಂದಿಗೆ ಹೇಳಲಾಗಿದೆ. ಅಲ್ಲದೆ ಎಲ್ಲಾ ಸನ್ನಿವೇಶಗಳಲ್ಲಿ ಈ ನುಡಿಗಟ್ಟನ್ನು ಬ್ರಾಹ್ಮಣ, ಸನ್ಯಾಸಿಗಳ ಉಪದೇಶಕ್ಕಾಗಿ ಬಳಸಲಾಗಿದೆ. ಅವರು ಎಂದಿಗೂ  ಆಯುಧಗಳಿಂದ ದೂರವಿರುತ್ತಾರೆ ಮತ್ತು ಸ್ವಯಂ-ಸಾಕ್ಷಾತ್ಕಾರವನ್ನು ಸಾಧಿಸುವ ಸಲುವಾಗಿ ತಪಸ್ವಿಗಳ ಜೀವನ ಅನುಸರಿಸುತ್ತಾರೆ. ಧರ್ಮ ಮತ್ತು ರಾಜ್ಯವನ್ನು ರಕ್ಷಿಸುವ ಕರ್ತವ್ಯಕ್ಕೆ ಬದ್ದವಾಗಿರುವ ರಾಜರು ಯೋಧರಾಗಿದ್ದು ಅವರಿಗೆ ಈ ಸೂಕ್ತಿ ಅನ್ವಯಿಸುವುದಿಲ್ಲ. ಅಲ್ಲದೆ ತನ್ನ ಕುಟುಂಬ ಮತ್ತು ತನ್ನ ಸುತ್ತಲಿನ ಸಮಾಜವನ್ನು ರಕ್ಷಿಸುವ ಕರ್ತವ್ಯವನ್ನು ಹೊಂದಿರುವ ಸಾಮಾನ್ಯ ಮನುಷ್ಯನಿಗೆ ಇದು ಅನ್ವಯಿಸುವುದಿಲ್ಲ.

ಆದಿ ಪರ್ವದಲ್ಲಿ - ಸೂತ ಮುನಿಯು ಸರ್ಪವೊಂದು ಸಹಸ್ರಪಪದ  ಎಂಬ ಬ್ರಾಹ್ಮಣನಾಗಿ ರೂಪಾಂತರಗೊಳ್ಳುವ ಕಥೆಯನ್ನು ಹೇಳುತ್ತಿದ್ದಾನೆ ಮತ್ತು ತನ್ನ ಪತ್ನಿ ಹಾವಿನಿಂದ ಕಚ್ಚಲ್ಪಟ್ಟದ್ದರಿಂದ  ಹಾವುಗಳನ್ನು ಕೊಲ್ಲಲು ಹೊರಟಿದ್ದ ರುರು ಎಂಬ ಬ್ರಾಹ್ಮಣನಿಗೆ ಈ ಶ್ಲೋಕವನ್ನು ಹೇಳುತ್ತಾನೆ.

अहिंसा परमो धर्मः सर्वप्राणभृतां स्मृतः ।

तस्मात्प्राणभृतः सर्वान्न हिंस्याद्ब्राह्मणः क्वचित् ।। (1.11.12) [ 1 ನೇ (ಆದಿ) ಪರ್ವ, 11 ನೇ ಅಧ್ಯಾಯ, 12 ನೇ ಶ್ಲೋಕ]

ನಿಸ್ಸಂಶಯವಾಗಿ ಅಹಿಂಸೆಯು ಇತರರ ಜೀವವನ್ನು ಉಳಿಸುವುದಕ್ಕಾಗಿನ  ಅತ್ಯುನ್ನತ ಸದ್ಗುಣವಾಗಿದೆ. ಆದ್ದರಿಂದ ಬ್ರಾಹ್ಮಣನು ಯಾವುದೇ ಜೀವಿಯ ಪ್ರಾಣವನ್ನು ತೆಗೆಯಬಾರದು.

ವನಪರ್ವದಲ್ಲಿ - ಮಾರ್ಕಂಡೇಯ ಮುನಿಯು ಮಿಥಿಲೆಯಲ್ಲಿ ವಾಸಿಸುತ್ತಿದ್ದ ಕೌಶಿಕ ಎಂಬ ಬ್ರಾಹ್ಮಣ ಮತ್ತು ಧರ್ಮವ್ಯಾಧ ಎಂಬ ಕೋಳಿ ವ್ಯಾಪಾರಿಯ ನಡುವಿನ ಚರ್ಚೆಯನ್ನು ವಿವರಿಸುತ್ತಾನೆ. ಕೌಶಿಕನು ಕೋಳಿ ವ್ಯಾಪಾರಿಯಲ್ಲಿ  ಕೇಳುತ್ತಾನೆ ‘ಸದ್ಗುಣವೆಂದರೇನು ಎಂದು ನಾನು ಹೇಗೆ ತಿಳಿಯಲಿ’ ಅದಕ್ಕೆ ಧರ್ಮವ್ಯಾಧನು ಉತ್ತರಿಸುತ್ತಾನೆ:

अहिंसा सत्यवचनं सर्वभूतहितं परम

अहिंसा परमॊ धर्मः स च सत्ये परतिष्ठितः

सत्ये कृत्वा परतिष्ठां तु परवर्तन्ते परवृत्तयः ।। (3.198.69)

ಪವಿತ್ರ ಪುರುಷರಲ್ಲಿ, ಸದ್ಗುಣವನ್ನು ಮೂರು ವಿಧಗಳಲ್ಲಿ ತೋರಿಸಲಾಗುತ್ತದೆ  ವೇದಗಳಲ್ಲಿ ಅಳವಡಿಸಲಾಗಿರುವ ಮಹಾನ್ ಸದ್ಗುಣ, ಇನ್ನೊಂದು ಧರ್ಮ ಶಾಸ್ತ್ರಗಳಲ್ಲಿ ಹೇಳಲಾಗಿರುವ  ಸದ್ಗುಣ ಮತ್ತು ಜ್ಞಾನ ಸಂಪಾದನೆ, ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆಗಳ ಮೂಲಕ ಪಡೆಯುವ ಸದ್ಗುಣ  ಸತ್ಯತೆ, ಸಹನೆ, ಶುದ್ಧತೆ ಮತ್ತು ನೇರ ನಡೆ ಇವು ಸದ್ಗುಣಗಳ ರೂಪಗಳಗಿದೆ.

ಅನುಶಾಸನ ಪರ್ವದಲ್ಲಿ - ಯುಧಿಷ್ಠಿರನು ಬಾಣಗಳ ಹಾಸಿಗೆಯ ಮೇಲಿರುವ ಭೀಷ್ಮನಿಂದ ಅಂತಿಮ ಸೂಚನೆಗಳನ್ನು ಪಡೆಯುತ್ತಿದ್ದಾನೆ, ಯುಧಿಷ್ಠಿರನು ಭೀಷ್ಮನನ್ನು ಕೇಳುತ್ತಾನೆ -

अहिंसा परमॊ धर्म इत्य उक्तं बहुशस तवया ।

शराथ्धेषु च भवान आह पितॄन आमिष काङ्क्षिणः ।। (13.116.1)

ಗಾಯ ಅಥವಾ ವ್ರಣದಿಂದ ದೂರವಿರುವುದು ಅತ್ಯುನ್ನತ ಧರ್ಮ ಎಂದು ನೀವು ಹಲವು ಬಾರಿ ಹೇಳಿದ್ದೀರಿ. ಆದಾಗ್ಯೂ, ಪಿತೃಗಳ ಗೌರವಾರ್ಥವಾಗಿ ಆಚರಿಸಲಾಗುವ ಶ್ರಾದ್ಧಗಳಲ್ಲಿ, ವ್ಯಕ್ತಿಗಳು ತಮ್ಮ ಒಳಿತಿಗಾಗಿ ವಿವಿಧ ರೀತಿಯ ಮಾಂಸವನ್ನು ಅರ್ಪಿಸಬೇಕು.

ಭೀಷ್ಮನು ಇದಕ್ಕೆ ವಿವರವಾಗಿ ಉತ್ತರಿಸಿದ್ದಾನೆ.ಈ  ಎರಡು ಶ್ಲೋಕಗಳಲ್ಲಿ ಅದನ್ನು ಮತ್ತೆ ಉಲ್ಲೇಖಿಸಲಾಗಿದೆ.

अहिंसा परमॊ धर्मस्तथाहिंसा परॊ दमः।

अहिंसा परमं दानमहिंसा परमं तपः ।।

अहिंसा परमॊ यज्ञस तथाहिस्मा परं बलम

अहिंसा परमं मित्रम अहिंसा परमं सुखम

अहिंसा परमं सत्यम अहिंसा परमं शरुतम ।। (13.117.37,38)

ಅಹಿಂಸೆ ಅತ್ಯುನ್ನತ ಧರ್ಮ, ಅಹಿಂಸೆ ಅತ್ಯುನ್ನತ ಸ್ವಯಂ ನಿಯಂತ್ರಣ,

ಅಹಿಂಸೆಯೇ ಶ್ರೇಷ್ಠ ಉಡುಗೊರೆ , ಅಹಿಂಸೆಯೇ ಅತ್ಯುತ್ತಮ ಅಭ್ಯಾಸ,

ಅಹಿಂಸೆಯೇ ಅತ್ಯುನ್ನತ ತ್ಯಾಗ, ಅಹಿಂಸೆಯೇ ಶ್ರೇಷ್ಠ ಶಕ್ತಿ,

ಅಹಿಂಸೆಯೇ ಶ್ರೇಷ್ಠ ಸ್ನೇಹಿತ, ಅಹಿಂಸೆಯೇ ಶ್ರೇಷ್ಠ ಸಂತೋಷ,

ಅಹಿಂಸೆ ಅತ್ಯುನ್ನತ ಸತ್ಯ, ಮತ್ತು ಅಹಿಂಸೆಯೇ ಶ್ರೇಷ್ಠ ಬೋಧನೆ.

ಆದರೆ ರಾಮಾಯಣ ಮತ್ತು ಮಹಾಭಾರತಗಳೆರಡೂ ಯುದ್ಧ ಮತ್ತು ಆತ್ಮರಕ್ಷಣೆಯನ್ನು ಸಮರ್ಥಿಸುವ ಸಂದರ್ಭಗಳ ಕುರಿತು ಮಾತನಾಡುವ ಬಹು ಸ್ಲೋಕಗಳನ್ನು ಹೊಂದಿವೆ. ಅನುಶಾಸನ ಪರ್ವದಲ್ಲಿ ಅಂದಿನ ಕಾಲದ  ಅಗ್ರಗಣ್ಯ ಯೋಧ ಭೀಷ್ಮನು ಅಹಿಂಸೆಯ ಬಗ್ಗೆ ಮಾತನಾಡುತ್ತಾನೆ ಏಕೆಂದರೆ ಅವನು ತನ್ನ ಕರ್ತವ್ಯದ ಹಾದಿಯಲ್ಲಿ ಮಾತ್ರವೇ ಹೋರಾಟ ನಡೆಸಿದ್ದಾನೆ.

ಅಹಿಂಸೆಯ ವ್ಯಾಖ್ಯಾನದಲ್ಲಿ ಒಂದು ಹೀಗಿದೆ-

वेदोक्तेन प्रकारेण विना सत्यं तपोधन ।

कायेन मनसा वाचा हिंसाऽहिंसा न चान्यथा ॥

आत्मा सर्वगतोऽच्छेद्यो न ग्राह्य इति मे मतिः ।

स चाहिंसा वरा प्रोक्ता मुने वेदान्तवेदिभिः ॥ ( 1.7,8 दर्शनोपनिषत्) ದರ್ಶನೋಪನಿಷತ್) ದರ್ಶನ ಉಪನಿಷತ್ ಅಥವಾ ಜಬಲ್ ದರ್ಶನ ಉಪನಿಷದ್ ಅಥವಾ ಸಂವೇದದ ಯೋಗ ದರ್ಶನ ಉಪನಿಷತ್.

ವಾಸ್ತವವಾಗಿ, ವೇದಗಳ  ಸೂಚನೆಗಳಿಗೆ ಅನುಸಾರವಾಗಿ ದೇಹ, ಮನಸ್ಸು ಅಥವಾ ಬಾಯಿಮಾತಿನ ಮೂಲಕ ಹಿಂಸೆಗೆ ಒಳಗಾಗದಿರುವುದು ಅಹಿಂಸೆ: ಇಲ್ಲವಾದಲ್ಲಿ ಅಲ್ಲ. ಓ ಋಷಿ! ಆತ್ಮವು ಎಲ್ಲವನ್ನೂ ವ್ಯಾಪಿಸುತ್ತದೆ ಮತ್ತು ಅದು ಅವಿಭಾಜ್ಯವಾಗಿದೆ ಮತ್ತು ಇಂದ್ರಿಯಗಳಿಗೆ ಅದನ್ನು ಪ್ರವೇಶಿಸಲು/ಕಲ್ಪಿಸಲು ಸಾಧ್ಯವಿಲ್ಲ ಎನ್ನುವುದು ದೃಢವಾದ ನಂಬಿಕೆ ವೇದಾಂತವನ್ನು ತಿಳಿದವರು ಈ ನಂಬಿಕೆಯನ್ನು ಅಹಿಂಸೆಯ ಅತ್ಯುತ್ತಮ ಆಧಾರವೆಂದು ಹೇಳುತ್ತಾರೆ.

ಇಲ್ಲಿ, ಅಹಿಂಸೆಯು  ಯೋಗಿಯ ಮೂಲಭೂತ ನೀತಿಗಳನ್ನು (ಯಮ) ವಿವರಿಸುವ ಸಂದರ್ಭದಲ್ಲಿದೆ. ಇದು ರಾಜ, ಸೈನಿಕ, ಉದ್ಯಮಿ, ರೈತ ಇತ್ಯಾದಿ ಜನವರ್ಗಗಳಿಗೆ  ಅನ್ವಯಿಸುವುದಿಲ್ಲ.

ಒಬ್ಬ ವ್ಯಾಪಾರಿ ತನ್ನ ಅಂಗಡಿಯಿಂದ ಕಳ್ಳ ಕದಿಯುವುದನ್ನು ನೋಡಿಯೂ  ಕುಳಿತುಕೊಂಡು 'ಅಹಿಂಸಾ ಪರಮೋ ಧರ್ಮಃ' ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ರೈತ ತನ್ನ ಬೆಳೆಯನ್ನು ಕೀಟಗಳಿಂದ ರಕ್ಷಿಸದಿರಲು  ಸಾಧ್ಯವಿಲ್ಲ.

ಈ ಅನಗತ್ಯ 'ಅಹಿಂಸಾ' ಪದ್ಧತಿಗಳಿಂದ ರಾಜರು ಬೌದ್ಧ ಮತ್ತು ಜೈನ ಸನ್ಯಾಸಿಗಳ ಮಾತಿಗೆ ಕಟ್ಟುಬಿದ್ದು ದುರ್ಬಲರಾದರು. ತ್ತು ಭಾರತವನ್ನು ಆಕ್ರಮಣಕಾರರು ವಶಪಡಿಸಿಕೊಳ್ಳಲು ಅವಕಾಶವಾಗಿತ್ತು. ಒಬ್ಬ ರಾಜನು ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲನಾದರೆ ಮತ್ತು ದುಷ್ಟರನ್ನು ಶಿಕ್ಷಿಸದಿದ್ದರೆ, ಅವನ ದೇಶವು ಸಂಪೂರ್ಣ ಅವ್ಯವಸ್ಥೆಯ ಹಂತ ತಲುಪುತ್ತದೆ. ಕೊಲೆಗಾರನನ್ನು ಗಲ್ಲಿಗೇರಿಸುವುದು ರಾಜನಿಗೆ ಅಹಿಂಸೆ. ಹಲವರ ಪ್ರಾಣ ತೆಗೆಯುವ ಮನುಷ್ಯನನ್ನು ಕೊಲ್ಲುವುದು ಅಹಿಂಸೆ. ನಿಜವಾದ ಸನ್ಯಾಸಿ ತನ್ನ ಪ್ರಾಣಕ್ಕೆ ಅಪಾಯವಿರುವಾಗಲೂ ತನ್ನನ್ನು ತಾನು ರಕ್ಷಿಸಿಕೊಳ್ಳಬಾರದು. ಸನ್ಯಾಸಿ ಎಂದರೆ ತನ್ನ ದೇಹದೊಂದಿಗೆ ಸಹವಾಸ ಮಾಡದೆಯೇ  ತನ್ನನ್ನು ಆತ್ಮದೊಂದಿಗೆ ಗುರುತಿಸಿಕೊಳ್ಳುವವನಾಗಿದ್ದಾನೆ.

"ಅಹಿಂಸಾ ಪರಮೋ ಧರ್ಮಃ"  ಎಂಬ ವಾಕ್ಯ ಭಗವದ್ಗೀತೆಯಲ್ಲಿಲ್ಲ!

ಗೀತೆಯಲ್ಲಿ ಅಹಿಂಸೆ  ಪದವನ್ನು ನಾಲ್ಕು ಬಾರಿ ಉಲ್ಲೇಖಿಸಲಾಗಿದೆ.

ತಾನು ಹತಾಶನಾಗಿದ್ದೇನೆ ಮತ್ತು ಯುದ್ಧ ಮಾಡಲು ಇಷ್ಟವಿಲ್ಲ ಎಂದು ಅರ್ಜುನನು ಕೃಷ್ಣನಿಗೆ ಹೇಳಿದಾಗ, ಶ್ರೀಕೃಷ್ಣನು ಅರ್ಜುನನಿಗೆ ಎದ್ದು ಯುದ್ಧ ಮಾಡುವಂತೆ ಪದೇ ಪದೇ ಹೇಳುತ್ತಾನೆ.

अथ चेत्त्वमिमं धर्म्यं संग्रामं न करिष्यसि

ततः स्वधर्मं कीर्तिं च हित्वा पापमवाप्स्यसि [Gita 1.20]

ನೀನು ಈ ಧರ್ಮಯುದ್ಧವನ್ನು ಮಾಡದಿದ್ದರೆ ನಿನ್ನ ಕರ್ತವ್ಯಗಳನ್ನು ನಿರ್ಲಕ್ಷಿಸುವುದಕ್ಕಾಗಿ ನೀನು ಖಂಡಿತವಾಗಿಯೂ ಪಾಪಗಳನ್ನು ಅನುಭವಿಸುವೆ. ಹಾಗಾಗಿ ಓರ್ವ ಸಾಹಸಿಯಾಗಿ ನಿನ್ನ ಖ್ಯಾತಿ ಮಣ್ಣುಗೂಡಲಿದೆ.

ಕೃಷ್ಣನು ‘ಅಹಿಂಸಾ ಪರಮೋ ಧರ್ಮ’ ಎಂದು ಹೇಳಿದ್ದರೆ ಯುದ್ಧವು ಪ್ರಾರಂಭವಾಗುವ ಮೊದಲೇ ಕೊನೆಗೊಳ್ಳುತ್ತಿತ್ತು ಏಕೆಂದರೆ ಯುದ್ಧದ ಅಗತ್ಯವಿಲ್ಲ ಏಕೆಂದರೆ ಅಹಿಂಸೆಯೇ ಶ್ರೇಷ್ಠ ಮತ್ತು ಪಾಂಡವರು ಕೌರವರು ತಮ್ಮ ಮೇಲೆ ಮಾಡಿದ ಪ್ರತಿಯೊಂದು ದೌರ್ಜನ್ಯವನ್ನು ಕ್ಷಮಿಸಬೇಕು ಎಂದು ಕೃಷ್ಣ ಬೋಧಿಸುತ್ತಿದ್ದ. “ಅಹಿಂಸಾ ಪರಮೋ ಧರ್ಮಃ” ನಿವೃತ್ತಿ ಮಾರ್ಗವನ್ನು ತುಳಿಯುವ ಸನ್ಯಾಸಿಗಳು ಮಾತ್ರ ಅಭ್ಯಾಸ ಮಾಡಬೇಕಾಗಿರುವ ಮಾತು. ಇದನ್ನು ಗೃಹಸ್ಥ  ಕಟ್ಟುನಿಟ್ಟಾಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಅಪರಾಧಿಗಳನ್ನು ಶಿಕ್ಷಿಸುವುದು ಮತ್ತು ದೈಹಿಕ ಹಿಂಸಾಚಾರದ ಮೂಲಕ ಅವರಿಂದ ಮಾಹಿತಿಯನ್ನು ಪಡೆಯುವುದು ಪೊಲೀಸರ ಕರ್ತವ್ಯ.

ಆತ್ಮರಕ್ಷಣೆಗಾಗಿ ಮಾಡಿದ ಕೊಲೆ ಅಪರಾಧವಲ್ಲ ಎಂದು ಕಾನೂನು ಕೂಡ ಘೋಷಿಸಿದೆ.

परित्राणाय साधूनां विनाशाय च दुष्कृताम्

धर्मसंस्थापनार्थाय सम्भवामि युगे युगे |

ಧರ್ಮನಿಷ್ಠರನ್ನು ಬಿಡುಗಡೆ ಮಾಡಲು ಮತ್ತು ದುಷ್ಕರ್ಮಿಗಳನ್ನು ನಾಶಮಾಡಲು, ಹಾಗೆಯೇ ಧರ್ಮದ ತತ್ವಗಳನ್ನು ಮರುಸ್ಥಾಪಿಸಲು, ನಾನು ಯುಗ ಯುಗಗಳಲ್ಲಿಯೂ  ಕಾಣಿಸಿಕೊಳ್ಳುತ್ತೇನೆ. 

ಅಹಿಂಸೆಯು ಎಲ್ಲರಿಗೂ ಅನ್ವಯಿಸಬಹುದಾದ ಶ್ರೇಷ್ಠವಾದ ಧರ್ಮವಲ್ಲ ಮತ್ತು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನ ಅಥವಾ ಅವನಂತಹಾ ಯೋಧನಿಗೆ  ಖಂಡಿತವಾಗಿಯೂ ಅಲ್ಲ ಎಂದು ಕೃಷ್ಣ ಸ್ಪಷ್ಟವಾಗಿ ಹೇಳಿದ್ದಾನೆ.

Sunday, January 23, 2022

ಇತ್ತೀಚೆಗೆ ನಾನು ಓದಿದ ಮೂರು ಮಹತ್ವದ ಕೃತಿಗಳು

ನಿವೃತ್ತ ಡಿಜಿಪಿ  ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಡಿವಿ ಗುರುಪ್ರಸಾದ್ ವರ "ಪ್ರತೀಕಾರ" ಪುಸ್ತಕ ನಾನು ಇತ್ತೀಚೆಗೆ ಓದಿದ ಪುಸ್ತಕಗಳ ಪೈಕಿ ಗಮನ ಸೆಳೆದ ಪುಸ್ತಕವಾಗಿದೆ. ಇಸ್ರೇಲಿನ ಗೂಢಚಾರಿ ಸಂಸ್ಥೆ ಮೊಸಾದ್ ಹಾಗೂ ಅದರ ಕಾರ್ಯಾಚರಣೆಗಳ ಕುರಿತಂತೆ ಕನ್ನಡದಲ್ಲಿ ಇಷ್ಟು ವಿಸ್ಕೃತವಾಗಿ ಬೇರಾವ ಲೇಖಕರೂ ಇದುವರೆಗೆ ಬರೆದಿಲ್ಲ ಎಂದು ನಾನು ಭಾವಿಸಿದ್ದೇನೆ. 

ತನ್ನ ಸುತ್ತಲೂ ಬದ್ದ ವೈರಿ ರಾಶ್ಃಟ್ರಗಳನ್ನು ಹೊಂದಿದ್ದರೂ ಒಂದೆ ದೇಶ ತನ್ನ ರಕ್ಷಣೆಯನ್ನು ಮಾಡಿಕೊಳ್ಳುವುದರೊಡನೆಯೇ ತನ್ನ ವಿರುದ್ಧ ನಡೆದ ಎಲ್ಲಾ ಪಿತೂರಿಗಳಿಗೂ ಯಾವ ರೀತಿಯಲ್ಲಿ ನೇರಾ ನೇರ ಪ್ರತೀಕಾರ ತೆಗೆದುಕೊಳ್ಳುತ್ತದೆ ಎನ್ನಲು ಇಸ್ರೇಲ್ ನಮ್ಮ ಮುಂದಿರುವ ಸ್ಪಷ್ಟ ಉದಾಹರಣೆ. ಇಸ್ರೇಲ್ ತಾನು ಒಂದು ಪುಟ್ಟ ದೇಶವಾಗಿದ್ದರೂ ತನ್ನ ಕೆಲಸಗಳ ಮೂಲಕ ವಿಶ್ವದ ಅಗ್ರ ದೇಶಗಳ ಸಾಲಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯವನ್ನು ತೋರಿಸಿದೆ. ಅಲ್ಲಿನ ಗೂಢಚರ ವ್ಯವಸ್ಥೆ ಎಷ್ಟು ಬಲವಾಗಿದೆ ಎಂದರೆ ಯಾವುದೇ ರಾಷ್ಟ್ರ ಅದರ ವಿರುದ್ಧ ಪಿತೂರಿ ನಡೆಸುವ ಮುನ್ನ ಎರಡೆರಡು ಬಾರಿ ಯೋಚಿಸಬೇಕಿದೆ. 

ಗುರುಪ್ರಸಾದ್ ಅವರು ತಮ್ಮ "ಪ್ರತೀಕಾರ" ದಲ್ಲಿ ವಿಶ್ವದ ಪ್ರಸಿದ್ಧ ಗೂಢಚಾರಿ ಸಂಘಟನೆ ಮೊಸಾದ್ ಮಾಡಿದ ಆಪರೇಷನ್ ರಾತ್ ಅಪ್ ಗಾಡ್,  ಆತಂಕವಾದಿ ನಾಯಕರ ಹತ್ಯೆ, ಇರಾನ್ ಇರಾಕ್, ಸಿರಿಯಾ ಅನುಸ್ಥಾವರಗಳ ಮೇಲಿನ ದಾಳಿಗಳು, ಮ್ಯೂನಿಕ್ ಒಲಂಪಿಕ್ ನಲ್ಲಿ ನಡೆದ ಇಸ್ರೇಲಿ ಕ್ರೀಡಾಪಟುಗಳು ಮೇಲಿನ ದಾಳಿ ಆ ನಂತರ ನಡೆದ ಮೊಸಾದ್ ಕಾರ್ಯಾಚರಣೆಗಳ ಬಗೆಗೆ ವಿವರವಾಗಿ ಬರೆದಿದ್ದಾರೆ.  ಅಲ್ಲದೆ ಮೊಸಾದ್ ನ. ಗೂಡಚಾರಿ  ಎಲಿ ಕೋಹೆನ್ .ಪಿ ಎಲ್ ಓ .  / ಬಿ.ಎಸ್.ಓ ಹಾಗೂ ಪಿ.ಎಫ್.ಎಲ್.ಪಿ. ಉಗ್ರ ಸಂಘಟನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 ಇಂತಹಾ ಇಸ್ರೇಲ್ ನಿಂದ ನಾವು (ಭಾರತ ಹಾಗೂ ಭಾರತೀಯರು) ಕಲಿಬಹುದಾದ ಸಾಕಷ್ಟು ಅಂಶಗಳಿದೆ ಎನ್ನುವುದರ ಬಗ್ಗೆ ಸಹ ಲೇಖಕರು ಸೂಚಿಸಿದ್ದಾರೆ. ಉದಾಹರಣೆಗೆ ಕಂದಹಾರ್ ವಿಮಾನ ಅಪಹರಣವಾಗಿದ್ದಾಗ ಭಾರತ ಸರ್ಕಾರ ತೆಗೆದುಕೊಂಡ ನಿಲುವು ಹಾಗೂ ಇಸ್ರೇಲ್ ಗೆ ಸೇರಿದ್ದ ವಿಮಾನಗಳ ಸಾಲು ಸಾಲು ಅಪಹರಣ ನಡೆದಾಗ ಆ ರಾಷ್ಟ್ರ  ತೆಗೆದುಕೊಂಡ ತೀರ್ಮಾನಗಳು ಹೇಗೆ ಭಿನ್ನವಾಗಿದೆ ಎನ್ನುವುದನ್ನು ನಾವು ಕಲಿಯಬಹುದು. 

ಒಟ್ಟೂ ೧೩ ಅಧ್ಯಾಯಗಳಲ್ಲಿ ಇಸ್ರೇಲ್ ರಾಷ್ಟ್ರ ಹಾಗೂ ಮೊಸಾದ್ ಕುರಿತ ಕಿರುಪರಿಚಯದಿಂದ ಪ್ರಾರಂಭಿಸಿ ಮೊಸಾದ್ ಗೆ ಮುಖಭಂಗವಾಗಿದ್ದ ಎರಡು ಕಾರ್ಯಾಚರಣೆಗಳ ವರೆಗೆ ಸಾಕಷ್ಟು ಮಾಹಿತಿಗಳಿದೆ. ಅವುಗಳಲ್ಲಿ "ಅಡಾಲ್ಫ್ ಐಕ್ ಮನ್ ಮೇಲಿನ ಪ್ರತೀಕಾರ", "ಎಲಿ ಕೊಹೇನ್", "ಮ್ಯೂನಿಚ್ ಒಲಂಪಿಕ್ ಘಟನೆ". "ಆಪರೇಷನ್ ಎಂಟಬೇ" ಸೇರಿದಂತೆ ಹಲವಾರು ಪ್ರಮುಖ ಅಧ್ಯಾಯಗಳಿದ್ದು ಇವೆಲ್ಲವೂ ಒಂದು ರೀತಿಯಲ್ಲಿ ಇಸ್ರೇಲ್ ನ ಇತಿಹಾಸದ ಜತೆಜತೆಗೆ ೧೯೪೫ರ ಎರಡನೇ ವಿಶ್ವ ಯುದ್ಧದ ನಂತರದ ಜಾಗತಿಕ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತದೆ. ಏಕೆಂದರೆ ಗುರುಪ್ರಸಾದ್ ಅವರ ಪುಸ್ತಕದಲ್ಲಿ ೧೯೪೫ರಿಂದ ಹಿಡಿದು ೨೦೨೧ರವರೆಗೆ(ಇರಾನ್ ಅಣುಸ್ಥಾವರಗಳ ಮೇಲಿನ ಇಸ್ರೇಲ್ ದಾಳಿ) ವರೆಗೆ ಎಲ್ಲಾ ವಿವರಗಳಿದೆ..

ಇನ್ನು ಗುರುಪ್ರಸಾದ್ ಅವರು ಈ ಪುಸ್ತಕ ಬರೆಯುವ ಮುನ್ನ ತಾವು ನಡೆಸಿದ್ದ ಅಧ್ಯಯನ ಆಳ ವಿಸ್ತಾರಗಳ ಬಗ್ಗೆ ಹೇಳಲೇ ಬೇಕು. ಸ್ವತಃಅ ಅವರೇ ಇಸ್ರೇಲ್, ಪ್ಯಾಲಸ್ತೈನ್, ಜೆರುಸಲೆಂ ಸೇರಿ ನಾನಾ ಪ್ರದೇಶಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ ಬರೆದ ಪುಸ್ತಕವಾಗಿರುವುದರಿಂದ ಕನ್ನಡ ಸಾಹಿತ್ಯಕ್ಕೆ, ಪುಸ್ತಕ ಲೋಕಕ್ಕೆ ಇದೊಂದು ಅಮೂಕ್ಲ್ಯ ಕೊಡುಗೆ ಆಗಬಲ್ಲದು. ಇನ್ನು ಪುಸ್ತಕ ಓದುತ್ತಿದ್ದರೆ ಅದೊಂದು ಪತ್ತೇದಾರಿ ಕಥಾನಕದಂತೆ ಭಸವಾಗುವುದರಿಂದ ಓದುವವರಿಗೆ ಯಾವ ಕಾರಣಕ್ಕೂ ಸುದ್ದಿ ವರದಿಯ ಆಧಾರಿತ ಲೇಖನ ಓದಿದ ಅನುಭವವಾಗುವುದಿಲ್ಲ ಅಬ್ದಲಿಗೆ ಒಂದು ಉತ್ತಮ ಕಥೆ ಓದಿದ ಅನುಭವವಾಗುತ್ತದೆ. ಆ ಪ್ರಕಾರವಾಗಿ ಪುಸ್ತಕ ಸಾಮಾನ್ಯ ಓದುಗ ಸಹ ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಎನಿಸಿದೆ.

ಇದೇ ವೇಳೆ ನಾನು ಇತ್ತೀಚೆಗೆ ಓದಿದ ಇನ್ನೆರಡು ಪುಸ್ತಕಗಳ ಬಗ್ಗೆ ಎರಡು ಮಾತುಗಳನ್ನಿಲ್ಲಿ ಹೇಳಬಯಸುತ್ತೇನೆ. ಅದರಲ್ಲಿ ಒಂದು ಸಂತೋಷ್ ಕುಮಾರ್ ಮೆಹಂದಳೆ ಅವರ "ಅಬೋಟ್ಟಾಬಾದ್" ಹಾಗೂ ಇನ್ನೊಂದು ಎಸ್. ಉಮೇಶ್ ಅವರ "ಸಿಯಾಚಿನ್" ಈ ಮೇಲಿನ ಎರಡೂ ಪುಸ್ತಕಗಳು ಕನ್ನಡದ ಮಟ್ಟಿಗೆ ಮಹತ್ವದ ಪುಸ್ತಕಗಳೆಂದು ನಾನು ಭಾವಿಸುತ್ತೇನೆ. "ಅಬೋಟ್ಟಾಬಾದ್" ನಲ್ಲಿ ಉಗ್ರ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೀವನ ಕೇಂದ್ರವಾಗಿರಿಸಿಕೊಂಡು ಬರೆಯಲಾದ ಕಥೆ ಇದ್ದರೂ ಜಗತ್ತಿನಲ್ಲಿ ಮುಸ್ಲಿಂ ಉಗ್ರವಾದ ಬೆಳೆದು ಬಂದ ರೀತಿಯನ್ನು ಸುವಿವರ ಆಗಿ ಕಟ್ಟಿಕೊಡಲಾಗಿದೆ. ಜತೆಗೆ ಲಾಡೆನ್ ನನ್ನು ಹಣಿಯಲು ಅಮೆರಿಕಾ ಪಡೆ ನಡೆಸಿದ ಕಾರ್ಯಾಚರ್ಣೆ ತಂತ್ರಗಳ ವಿವರಣೆಗಳು ಸಹ ಅತ್ಯಂತ ಸ್ಪಷ್ಟ ಹಾಗೂ ಸುಂದರವಾಗಿ ಮೂಡಿ ಬಂದಿದೆ. ಇನ್ನು "ಸಿಯಾಚಿನ್" ನಲ್ಲಿ ಉಮೇಶ್ ಅವರು ತಾವು ಭಾರತೀಯ ಸೈನಿಕರು ಸಿಯಾಚಿನ್ ಎಂಬ ಏನೂ ಬೆಳೆಯದ ಬರಡುಭೂಮಿಯ ರಕ್ಷಣೆಗಾಗಿ ಹೇಗೆ ಹಗಲಿರುಳು ಹೆಣಗುತ್ತಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಅಲ್ಲದೆ ಕರುನಾಡ ಹೆಮ್ಮೆ ಹನುಮಂತಪ್ಪ ಕೊಪ್ಪದ್ ಅವರ ವೀರತ್ವದ ಬಗ್ಗೆ ಸಹ ವಿವರವಾಗಿ ಮಾಹಿತಿ ನೀಡಿದ್ದಾರೆ, ಯಾರೇ ಆದರೂ ಈ ಪುಸ್ತಕವನ್ನೊಮ್ಮೆ ಓದಿದರೆ ನಮಗೇ ಸಿಯಾಚಿನ್ ಗೆ ಹೋಗಿ ಬಂದಷ್ಟು ಅನುಅಭವವಾಗುವುದಲ್ಲದೆ ಭಾರತೀಯ ಸೈನಿಕರು, ಸೇನೆಯ ಮೇಲೆ ಅಪಾರ ಗೌರವ ಮೂಡುತ್ತದೆ. ನಾವು ಭಾರತೀಯರೆಂದು ಹೇಳಿಕೊಳ್ಲಲು ಹೆಮ್ಮೆ ಎನಿಸುತ್ತದೆ.

ಒಟ್ಟಾರೆ ಇಂತಹಾ ಪುಸ್ತಕಗಳನ್ನು ನೀಡೀದ ಮೂವರು ಲೇಖಕರಿಗೆ ನನ್ನ ಅನಂತ ನಮಸ್ಕಾರಗಳು.



Thursday, January 13, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 112

ಗಾಣಗಾಪುರ(Ganagapura)

 ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. ಶ್ರೀ ಕ್ಷೇತ್ರ ಗಾಣಗಾಪುರವು ಕಲಬುರ್ಗಿಯಿಂದ 37.7 ಕಿ.ಮೀ ದೂರದಲ್ಲಿದೆ. ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಇದಾಗಿದ್ದು ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ  22 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮವಾಗುವ ಈ ಕ್ಷೇತ್ರದಲ್ಲಿ ಹಿಂದೆ ಯಜ್ಞಕಾರ್ಯಗಳು ನೆರವೇರುತ್ತಿದ್ದು ಆ ಯಜ್ಞಬೂದಿಯನ್ನು ಒಂದು ಕಡೆ ಗುಡ್ಡೆ ಮಾಡಲಾಗಿದೆಯೆಂದು ಪ್ರತೀತಿ ಇದ್ದು ಇಂದೂ ಸಹ ಭಸ್ಮದ ರಾಶಿ ನೋಡಬಹುದು. ಭಾವುಕ ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು. ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ. ಸಂಗಮದಿಂದ ಊರಿಗೆ ಬರುವ ದಾರಿಯಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥೀತೀರ್ಥ, ಪಾಪವಿನಾಶಿತೀರ್ಥ, ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ ಎಂಟು ತೀರ್ಥಗಳಿವೆ. ಇಲ್ಲಿನ ತೀರ್ಥಗಳಲ್ಲಿ ಸ್ನಾನಮಾಡಿದರೆ ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ.



ಗಾಣಗಾಪುರದ ಜಾತ್ರೆ ಸಮಾರಂಭದ ವಿಷಯವನ್ನು ಹೇಳುವುದಾದರೆ ಶ್ರೀದತ್ತಜಯಂತಿ ಮತ್ತು ಶ್ರೀನರಸಿಂಹ ಸರಸ್ವತಿಯವರ ಪುಣ್ಯತಿಥಿ - ಇವೆರಡು ವಿಶೇಷ ಮಹತ್ತ್ವದವು. ಶ್ರೀಗುರುವಿನ ಜೀವನಕಾರ್ಯ ಇಲ್ಲಿಯೇ ನಡೆದುದರಿಂದ ಈಗ ಸು. 500 ವರ್ಷಗಳಿಂದ ಇದು ಭಕ್ತರಿಗೆ ಜಾಗೃತ ಸ್ಥಾನವಾಗಿದೆ. ಗಾಣಗಾಪುರದಲ್ಲಿರುವ ನಿರ್ಗುಣ ಮಠ ಶ್ರೀ ನಸಿಂಹ ಸರಸ್ವತಿಯವರಿಗೆ ಮೀಸಲಾಗಿದೆ.ಇಲ್ಲಿಗೆ ಬರುವ ಭಕ್ತರು ವಿಶೇಷವಾಗಿ ನಿರ್ಗುಣ ಪಾದುಕೆಗಳ ಪೂಜೆಯನ್ನು ಮಾಡುತ್ತಾರೆ. ಸ್ವತಃ ಸ್ವಾಮಿಯವರು ಹೇಳಿರುವಂತೆ ಇಂದಿಗೂ ಅವರು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರು ವಿಶಿಷ್ಟವಾದ ಮಧುಕರಿ ಆಚರಣೆಯನ್ನು ಪಾಲಿಸುತ್ತಾರೆ. ಮಧುಕರಿ ಎಂದರೆ ಭೀಕ್ಷೆ ಬೇಡುವುದಾಗಿದೆ. ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿರುವ ಮನೆಗಳ ಪೈಕಿ ಕನಿಷ್ಠ ಐದು ಮನೆಗಳಲ್ಲಿ ಭೀಕ್ಷೆ ಬೇಡಿ ನಂತರ ಪಾದುಕೆಯ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ.ಈ ರೀತಿ ಮಾಡುವುದರಿಂದ ದತ್ತಾತ್ರೇಯರ ಕೃಪೆ ಉಂಟಾಗಿ ಭಕ್ತರ ಎಲ್ಲ ಬಯಕೆಗಳು ನಿಖರವಾಗಿ ಈಡೇರುತ್ತವೆಂದು ಅಚಲವಾಗಿ ನಂಬಲಾಗುತ್ತದೆ.

ಆಧಿವ್ಯಾಧಿಗಳಿಂದ ಬಳಲುವ ಅನೇಕ ಜನ ತಮ್ಮ ದುಃಖನಿವಾರಣೆಗಾಗಿ ಇಲ್ಲಿಗೆ ಬಂದು ಸೇವೆಮಾಡಿ ಶ್ರೀಗುರುಚರಿತ್ರೆ ಪಾರಾಯಣಮಾಡಿ ಭಿಕ್ಷಾ ಜೀವನವನ್ನು ನಡೆಸುವರು. ಶ್ರೀಗುರುಚರಿತ್ರೆಯಲ್ಲಿನ ಚಮತ್ಕಾರಿ ಕಥೆಗಳನ್ನೋದುವುದರಿಂದ ಶ್ರದ್ಧಾಜೀವನವನ್ನನುಸರಿಸುವುದರಲ್ಲಿ ವಿಶ್ವಾಸ ಹುಟ್ಟುತ್ತದೆ. ಮಠದಲ್ಲಿ ಮಧ್ಯಾಹ್ನ ಮಹಾನೈವೇದ್ಯ ನಡೆಯುತ್ತದೆ. ಅನಂತರ ಸೇವಾಕರ್ತರು ಮಧುಕರಿ ಬೇಡಲು ಹೋಗುತ್ತಾರೆ. ಧನಿಕರಾದ ಅನೇಕ ದತ್ತಭಕ್ತರು ಸೇವಾಕರ್ತರಿಗೆ ಧನಧಾನ್ಯ ಸಹಾಯ ಒದಗಿಸುತ್ತಿದ್ದಾರೆ. ದತ್ತವ್ರತದ ಪ್ರಕಾರ ಪ್ರತಿಯೊಬ್ಬ ಯಾತ್ರಿಕನೂ ಕನಿಷ್ಠಪಕ್ಷ ಐದು ಮನೆಗಳಿಗಾದರೂ ಹೋಗಿ ಬೇಡಬೇಕು ಎಂಬುದು ನಿಯಮ. ಭಾವುಕ ಭಕ್ತರು ಈ ನಿಯಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾರೆ.

ದತ್ತಾತ್ರೇಯ ಮಂದಿರ ಗಾಣಿಗಾಪುರ ಕಲಬುರಗಿ

***

ದತ್ತಾತ್ರೇಯನನ್ನು ಮೂರು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ರೂಪವೆಂದು ಪರಿಗಣಿಸಲಾಗುತ್ತದೆ. ದತ್ತಾತ್ರೇಯ  ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲಾಗಿದೆ. ಮೂರು ರೂಪಗಳನ್ನು ಹೊಂದಿದ್ದರಿಂದ ಭಗವಾನ್ ದತ್ತಾತ್ರೇಯನನ್ನು ಕಲಿಯುಗದ ದೇವರು ಎಂದು ಪರಿಗಣಿಸಲಾಗುತ್ತದೆ. ಹಸು ಮತ್ತು ನಾಯಿ ಎರಡೂ ಅವನ ವಾಹನವಾಗಿದೆ. ದತ್ತಾತ್ರೇಯ   ಆಜನ್ಮ ಬ್ರಹ್ಮಚಾರಿ ಮತ್ತು ಸನ್ಯಾಸಿ ಎಂದು ಗುರುತಿಸಲಾಗುತ್ತದೆ.  ದತ್ತ ಶಬ್ದದ ಅರ್ಥ "ಕೊಟ್ಟಿದ್ದು", ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಅವನು ಅತ್ರಿಯ ಪುತ್ರ, ಹಾಗಾಗಿ "ಆತ್ರೇಯ"ನೆಂಬ ಹೆಸರು. ದತ್ತಾತ್ರೇಯ ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ದೂರ್ವಾಸ ಮುನಿ ಈತನ ಸಹೋದರ. ನಿಮಿ ಋಷಿ ಈತನ ಮಗ. ಏಳನೆಯ ದಿವಸದಲ್ಲಿಯೇ ಈತ ತಾಯಿಯ ಗರ್ಭದಲ್ಲಿ ಪ್ರಕಟವಾಗಿ ತಂದೆಗೆ ಸಹಾಯ ಮಾಡಿದನೆಂದು ಕಥೆಯಿದೆ.

ಒಮ್ಮೆ ಮಾತಾ ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ ತಮ್ಮ ವಾಸ್ತವತೆಯ ಬಗ್ಗೆ ಬಹಳ ಹೆಮ್ಮೆಪಟ್ಟರು. ಅವರ ಅಹಂಕಾರಕ್ಕೆ ಪೆಟ್ಟು ನೀಡಲು ತ್ರಿಮೂರ್ತಿಗಳು ಲೀಲೆಯೊಂದನ್ನು ಯೋಜಿಸಿದರು. ತ್ರಿಮೂರ್ತಿಗಳ ಉಪಾಯದಂತೆ, ನಾರದರು ಒಂದು ದಿನ ತ್ರಿದೇವತೆಗಳ ಬಳಿ ಬಂದು ನಿಮ್ಮ ರೂಪ ಮತ್ತು ಗುಣಗಳು ಋಷಿ ಅತ್ರಿರವರ ಪತ್ನಿ ಅನುಸೂಯಾ ಅವರ ಮುಂದೆ ಏನೂ ಇಲ್ಲ ಎಂದು ಹೇಳಿದರು. ಆಗ ತ್ರಿದೇವತೆಗಳು ತ್ರಿಮೂರ್ತಿಗಳ ಬಳಿ ಹೋಗಿ ನೀವು ಅತ್ರಿ ಮಹರ್ಷಿಯ ಪತ್ನಿ ಅನುಸೂಯಾಳ ಬಳಿ ಹೋಗಿ ಆಕೆಯ ಗುಣಗಳನ್ನು, ಪತಿ ನಿಷ್ಠೆಯನ್ನು ಪರೀಕ್ಷಿಸಬೇಕೆಂದು ಒತ್ತಾಯಿಸುತ್ತಾರೆ. ತಮ್ಮ ಹೆಂಡತಿಯರ ಒತ್ತಾಯಕ್ಕೆ ಒಪ್ಪಿಕೊಂಡ ಶಿವ, ವಿಷ್ಣು ಮತ್ತು ಬ್ರಹ್ಮರು ಸಾಧು ವೇಷ ಧರಿಸಿ ಭಿಕ್ಷೆ ಬೇಡಲು ಸತಿ ಅನುಸೂಯಿಯ ಆಶ್ರಮಕ್ಕೆ ಹೋದರು. ಆ ಸಮಯದಲ್ಲಿ ಅತ್ರಿ ಮಹರ್ಷಿಗಳು ಆಶ್ರಮದಲ್ಲಿ ಇರುವುದಿಲ್ಲ. ಮೂವರು ಸತಿ ಅನುಸೂಯಾಳ ಬಳಿ ಭಿಕ್ಷೆ ಕೇಳಿದರು ಆಗ ಸತಿ ಅನುಸೂಯ ತನ್ನ ಬಳಿ ಇದ್ದ ಧಾನ್ಯಗಳನ್ನು ಭಿಕ್ಷೆ ನೀಡಲು ಹೊರಟಾಗ ಅದನ್ನು ತ್ರಿಮೂರ್ತಿಗಳು ತಿರಸ್ಕರಿಸುತ್ತಾರೆ. ಅನುಸೂಯಾಳನ್ನು ಕುರಿತು ನಮಗೆ ಎದೆಹಾಲನ್ನೇ ಭಿಕ್ಷೆಯಾಗಿ ನೀಡಬೇಕೆಂದು ಹೇಳುತ್ತಾರೆ. ಇದನ್ನು ಕೇಳಿ ಸತಿ ಅನುಸೂಯಾ ಗಾಬರಿಯಾದರು, ಆದರೆ ಸಾಧುಗಳನ್ನು ಅವಮಾನಿಸಲಾಗುವುದಿಲ್ಲ ಎಂಬ ಭಯದಿಂದ ಅವಳು ತನ್ನ ಗಂಡನನ್ನು ನೆನಪಿಸಿಕೊಳ್ಳುವ ಮೂಲಕ ತನ್ನ ಸತಿ ಧರ್ಮದ ಪ್ರಮಾಣವಚನ ಸ್ವೀಕರಿಸಿದಳು. ನನ್ನ ಸತಿ ಧರ್ಮ ನಿಜವಾಗಿದ್ದರೆ, ಮೂವರೂ 6 ತಿಂಗಳ ವಯಸ್ಸಿನ ಶಿಶುಗಳಾಗುತ್ತಾರೆ ಎಂದು ಅವಳು ಬೇಡಿಕೊಂಡರು. ಅನುಸೂಯಾ ಅಂದುಕೊಂಡಂತೆ ಮೂವರು ದೇವರುಗಳು 6 ತಿಂಗಳ ಶಿಶುಗಳಾದರು ಮತ್ತು ಸತಿ ಅನುಸೂಯಾ ಅವರನ್ನು ತಾಯಿಯಂತೆ ಎದೆಹಾಲನ್ನು ನೀಡುತ್ತಾಳೆ.

ಗಂಡಂದಿರು ಹಿಂತಿರುಗದಿದ್ದಾಗ, ತ್ರಿದೇವತೆಗಳು ಚಿಂತೆ ಮಾಡಲು ಪ್ರಾರಂಭಿಸಿದರು. ಆಗ ನಾರದರು ಬಂದು ಇಡೀ ವಿಷಯವನ್ನು ಹೇಳಿದರು. ನಂತರ ಮೂವರು ದೇವತೆಗಳು ಸತಿ ಅನುಸೂಯಾ ಅವರ ಬಳಿ ಹೋಗಿ ಕ್ಷಮೆಯಾಚಿಸಿ ತಮ್ಮ ಗಂಡನನ್ನು ಮರಳಿ ನೀಡುವಂತೆ ಕೇಳಿಕೊಂಡರು. ಅನುಸೂಯಾ ತ್ರಿಮೂರ್ತಿಗಳನ್ನು ಮತ್ತೆ ಅವರ ಸ್ವರೂಪಕ್ಕೆ ಮರಳಿ ತಂದಳು. ಅನುಸೂಯೆಯ ಸತಿ ಧರ್ಮದಿಂದ ಸಂತಸಗೊಂಡ ತ್ರಿದೇವರು, ನಾವು ಮೂವರು ನಿಮ್ಮ ಭಾಗವಾಗಿ ಜನಿಸುತ್ತೇವೆ ಎಂಬ ವರವನ್ನು ನೀಡಿದರು. ನಂತರ ಬ್ರಹ್ಮ ಭಾಗದಿಂದ ಚಂದ್ರ, ವಿಷ್ಣುವಿನ ಭಾಗದಿಂದ ದತ್ತಾತ್ರೇಯ ಮತ್ತು ನಂತರ ಋಷಿ ದುರ್ವಾಸರು ಶಿವನ ಭಾಗದಿಂದ ಜನಿಸಿದರು. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ದತ್ತಾತ್ರೇಯನನ್ನು ಮೂರು ದೇವರುಗಳ ರೂಪವೆಂದು ಪರಿಗಣಿಸಲಾಗುತ್ತದೆ.

***

‘ದತ್ತ’ ಮತ್ತು ‘ ಆತ್ರೇಯ’ ಎರಡು ಪದಗಳು ಸೇರಿದ ದತ್ತಾತ್ರೇಯ ಆಗಿದೆ. ಅಂದರೆ ದತ್ತನು ಅತ್ರಿಯ ಮಗ ಆತ್ರೇಯ. ದತ್ತ ಎಂದರೆ ಕೊಡುವುದು ಎಂದರ್ಥ. ಇಲ್ಲಿ ದತ್ತನು ತನ್ನನ್ನು ತಾನೇ ಅತ್ರಿ-ಅನುಸೂಯರಿಗೆ ಕೊಟ್ಟುಕೊಂಡು ದತ್ತನಾದನು. ಅತ್ರಿ ಒಬ್ಬ ಋಷಿ. ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ. ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದವನು. ಈತನ ಹೆಂಡತಿ ಅನಸೂಯೆ ಮಹಾ ಪತಿವ್ರತೆ. ಪ್ರತಿಷ್ಠಾನ (ಈಗಿನ ಪೈಠಣ- ಮಹಾರಾಷ್ಟ್ರದಲ್ಲಿದೆ)ದಲ್ಲಿ ಇಂಥಹದೇ ಇನ್ನೊಬ್ಬ ಪತಿವ್ರತೆ ಇದ್ದಳು. ಅವಳ ಹೆಸರು ಸುಮತಿ. ಅವಳ ಗಂಡ ಕೌಶಿಕ. ಅವನು ತಪ್ಪುದಾರಿ ಹಿಡಿದು ಸುಮತಿಯನ್ನು ಬಿಟ್ಟು ಹೊರಟು ಹೋಗುತ್ತಾನೆ. ಹಾಗಿರಲು ಒಮ್ಮೆ ವಿಪರೀತ ಖಾಯಿಲೆ ಬಂದು ಮೈಯಲ್ಲಾ ಹುಣ್ಣಾಗುತ್ತದೆ. ಮತ್ತೆ ಸುಮತಿಯ ಬಳಿಗೇ ಬರುತ್ತಾನೆ. ಅವಳು ತುಂಬಾ ಒಳ್ಳೆಯವಳು ಕ್ಷಮಾಶೀಲೆ. ಅವನ ಹುಣ್ಣುಗಳನ್ನು ತೊಳೆದು ಔಷಧ ಹಾಕಿ, ಒಳ್ಳೆಯ ಆಹಾರ ಕೊಡುತ್ತಾಳೆ. ಅವನಿಗೆ ನಡೆಯಲೂ ಆಗದಿದ್ದಾಗ ಒಂದು ಸಂಜೆ ಸುಮತಿ ಅವನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಡುತ್ತಾಳೆ. ಇದೇ ಸಮಯದಲ್ಲಿ ಆ ಊರಿನಲ್ಲಿ ಘಟನೆಯೊಂದು ನಡೆದಿತ್ತು. ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದ್ದರು. ಆದರೆ ಆ ಅಪರಾಧಿ, ತಪ್ಪಿಸಿಕೊಂಡು ಪರಾರಿಯಾಗುತ್ತಾನೆ. ಅಪರಾಧಿಯಂತೆ ಕಂಡ ಇನ್ನೊಬ್ಬನನ್ನ ರಾಜಭಟರು ಕರೆತಂದು ರಾಜನ ಎದುರು ನಿಲ್ಲಿಸಿದಾಗ ಹಿಂದು ಮುಂದು ಆಲೋಚಿಸದೇ ರಾಜ ಅವನ್ನು ಶೂಲಕ್ಕೇರಿಸುವಂತೆ ಅಪ್ಪಣೆ ಮಾಡುತ್ತಾನೆ. ರಾಜಾಜ್ಞೆಯಂತೆ ಆತನನ್ನು ಶೂಲಕ್ಕೆ ಏರಿಸಲಾಗುತ್ತದೆ. ಆದರೆ ಆತ ನಿಜವಾದ ಅಪಾರಾಧಿಯೇ ಅಲ್ಲ. ಆತ ಮಾಂಡವ್ಯನೆಂಬ ಋಷಿ. ಆತನ ಯೋಗಬಲದಿಂದ ಶೂಲದ ಮೇಲೆ ಸಾಯದೇ ನೇತಾಡುತ್ತಿರುತ್ತಾನೆ.[೧] ಅದೇ ಮಾರ್ಗವಾಗಿ ಪತಿಯನ್ನು ಹೊತ್ತು ಸುಮತಿ ಬರುವಾಗ ಕತ್ತಲೆಯಲ್ಲಿ ಕೌಶಿಕನ ಕಾಲು ಶೂಲಕ್ಕೆ ತಾಗುತ್ತದೆ. ಇದರಿಂದಕುಪಿತಗೊಂಡ ಋಷಿ “ಈ ಶೂಲಕ್ಕೆ ಕಾಲು ತಾಗಿಸಿಕೊಂಡವನು ಸೂರ್ಯ ಹುಟ್ಟಿದೊಡನೆ ಸಾಯಲಿ" ಎಂದು ಶಪಿಸುತ್ತಾನೆ. ಇದನ್ನು ಕೇಳಿಸಿಕೊಂಡ ಸುಮತಿ ಪತಿಯೇ ಸರ್ವಸ್ವ ಎಂದು ನಂಬಿದ ಆಕೆ “ಎಲೈ ಸೂರ್ಯನೇ, ನೀನು ಉದಯಿಸಬೇಡ. ನನ್ನ ಮಾತು ಮೀರಿದರೆ ನೀನು ಸುಟ್ಟು ಬೀಳುವೆ" ಎನ್ನುತ್ತಾಳೆ. ಪತಿವ್ರತೆಯ ಶಕ್ತಿ ಮಹತ್ತಾದುದು. ಅವಳ ಶಾಪಕ್ಕೆ ಹೆದರಿ ಸೂರ್ಯ ಹುಟ್ಟಲೇ ಇಲ್ಲ. ಜಗತ್ತೆಲ್ಲ ಕತ್ತಲಾಯಿತು. ಗಿಡ ಮರ ಬಳ್ಳಿಗಳು ಬೆಳೆಯುವುದು ನಿಂತು ಹೋಯಿತು. ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋದವು. ಜನರ ಸಂಕಷ್ಟ ನೋಡಿ ದೇವತೆಗಳಿಗೆ ಮರುಕ ಹುಟ್ಟಿತು. ಅವರು ಈ ಕಷ್ಟವನ್ನು ನಿವಾರಿಸುವಂತೆ ಬ್ರಹ್ಮನಲ್ಲಿ ಮೊರೆಹೋದರು. ಅದಕ್ಕೆ ಬ್ರಹ್ಮ ಪತಿವ್ರತೆಯು ಶಾಪವಿತ್ತಿದ್ದರಿಂದ ಆಕೆಯ ಬಳಿಗೆ ಹೋಗೋಣ ಎನ್ನುತ್ತಾನೆ. ಬ್ರಹ್ಮಾದಿ ದೇವತೆಗಳೆಲ್ಲ ಪ್ರತಿಷ್ಠಾನಗರದ ಬಳಿ ಇದ್ದ ಅತ್ರಿ ಋಷಿಯ ಆಶ್ರಮದ ಬಳಿ ಬರುತ್ತಾರೆ. ಅನುಸೂಯಾ ದೇವಿಯನ್ನು ಕಂಡು ವಂದಿಸುತ್ತಾರೆ. ಋಷಿ ದಂಪತಿಗಳಿಗೆ ಆಶ್ಚರ್ಯ. ಬ್ರಹ್ಮ, ಇಂದ್ರ ಮೊದಲಾದ ದೇವತೆಗಳು ಇಳಿದು ಬಂದಿದ್ದಾರೆಂದು. ಕಾರಣ ಕೇಳುವ ಮೊದಲೇ “ತಾಯಿ, ಕೌಶಿಕನ ಪತ್ನಿ ಸುಮತಿಯ ಶಾಪದಿಂದ ಲೋಕವೆಲ್ಲ ಅಸ್ತವ್ಯಸ್ತವಾಗಿದೆ. ಜನರು, ಪಶು ಪಕ್ಷಿಗಳು ಹಾಹಾಕಾರ ಮಾಡುತ್ತಿವೆ. ಆದ್ದರಿಂದ ನೀನು ಪ್ರಸನ್ನಳಾಗಿ ಸುಮತಿಗೆ ತಿಳಿ ಹೇಳಬೇಕು. ಇದರಿಂದ ನಾವು ಉಪಕೃತರಾಗುವೆವು” ಎನ್ನುತ್ತಾರೆ. ಅತ್ರಿ ಅನಸೂಯೆಯರು ದೇವತೆಗಳೊಡನೆ ಸುಮತಿಯ ಮನೆಗೆ ತೆರಳುತ್ತಾರೆ ಮತ್ತು ತಾವು ಬಂದ ಕಾರಣವನ್ನು ತಿಳಿಸುತ್ತಾರೆ. 'ಇದು ದೇವಕಾರ್ಯ ನೀನು ಮಾಡಿಕೊಡಬೇಕು. ಸೂರ್ಯನಿಗೆ ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಂಡು ಲೋಕವನ್ನು ಉಳಿಸು' ಎನ್ನುತ್ತಾರೆ. ಅದಕ್ಕೆ ಸುಮತಿ, "ನಿಜ ಆದರೆ ಸೂರ್ಯನು ಉದಯಿಸಿದರೆ ನನ್ನ ಗಂಡನು ಮರಣ ಹೊಂದುತ್ತಾನೆ. ಆತ ಹೋದರೆ ನನ್ನ ಸರ್ವಸ್ವವೇ ಹೋದ ಹಾಗೆ. ಶಾಪವನ್ನು ಹಿಂದೆ ತೆಗೆದುಕೊಳ್ಳಲಾರೆ" ಎಂದು ಬಿಟ್ಟಳು. ಆಗ ಅನಸೂಯ, ತಂಗಿ ಸುಮತಿ ನಿನ್ನ ಶಾಪವನ್ನು ಹಿಂಪಡೆ. ನಾನು ನನ್ನ ಶಕ್ತಿಯಿಂದ ನಿನ್ನ ಗಂಡನನ್ನು ಮತ್ತೆ ಬದುಕಿಸಿ ಕೊಡುವೆ" ಎಂದಳು. ಆಗ ಸುಮತಿ ಶಾಪವನ್ನು ಹಿಂಪಡೆಯುತ್ತಾಳೆ. ಅನಸೂಯ ಕೊಟ್ಟ ಮಾತಿನಂತೆ ಮತ್ತೆ ಕೌಶಿಕನನ್ನು ಬದುಕಿಸುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ. ದೇವತೆಗಳು ಅನಸೂಯೆಯನ್ನು ಹೊಗಳಿ ಕೊಂಡಾಡುತ್ತಾರೆ. ಮಾತೆ ನೀನು ದೇವಕಾರ್ಯವನ್ನು ಮಾಡಿಕೊಟ್ಟೆ. ನಾವು ಸಂತುಷ್ಟರಾಗಿದ್ದೇವೆ ಬೇಕಾದ ವರ ಬೇಡಿಕೋ ಎನ್ನುತ್ತಾರೆ. ಆಗ ಅನಸೂಯೆ, ಹರಿ ಹರ ಬ್ರಹ್ಮರು ನನ್ನ ಮಕ್ಕಳಾಗಲಿ ಎಂದು ಬೇಡಿಕೊಳ್ಳುತ್ತಾಳೆ. ಹಾಗೆಯೇ ಆಗಲಿ ಎಂದು ದೇವತೆಗಳೂ ಹರಸುತ್ತಾರೆ. ಅದರಂತೆ ಬ್ರಹ್ಮನ ಅಂಶದಲ್ಲಿ ಚಂದ್ರನೂ, ವಿಷ್ಣುವಿನ ಅಂಶದಲ್ಲಿ ದತ್ತನೂ, ಈಶ್ವರನ ಅಂಶದಿಂದ ದುರ್ವಾಸನೂ ಹುಟ್ಟಿದರು. ಹೀಗೆ ಅನಸೂಯಾದೇವಿ ಮೂವರು ಮಕ್ಕಳನ್ನು ಪಾಲಿಸಿದಳು. ಮಕ್ಕಳು ಬೆಳೆದು ದೊಡ್ಡವರಾದರು. ನಂತರ ತಂದೆ ತಾಯಿಯರ ಅಪ್ಪಣೆ ಪಡೆದು ಚಂದ್ರ ಚಂದ್ರಮಂಡಲಕ್ಕೆ ಹೋದನು. ದುರ್ವಾಸನು ನೆನೆದಾಗ ಬರುವೆನೆಂದು ತಪಸ್ಸಿಗೆ ಹೋದನು. ದತ್ತನು ತಂದೆ ತಾಯಿಯರ ಸೇವೆಯಲ್ಲೇ ಉಳಿದನು.

***

ಶ್ರೀ ಗುರು ಚರಿತ್ರ ಗ್ರಂಥದಲ್ಲಿ ನರಸಿಂಹ ಸರಸ್ವತಿ ಸ್ವಾಮಿಯವರು ಗುರು ದತ್ತ ಕ್ಷೇತ್ರದ ಮಹಿಮೆ ಕುರಿತು ಹಾಗೂ ತಾವು ಸದಾ ಈ ಕ್ಷೇತ್ರದಲ್ಲೆ ಜಾಗೃತವಾಗಿ ನೆಲೆಸಿರುವುದರ ಕುರಿತು ಉಲ್ಲೇಖಿಸಿದ್ದಾರೆ. ಭೀಮಾ ಹಾಗೂ ಅಮರ್ಜಾ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದ ಗಾಣಗಾಪುರಕ್ಕೆ ಇನ್ನೂ ಹೆಚ್ಚಿನ ವಿಶೇಷವಿದೆ.

ನಾಥ ಸಂಪ್ರದಾಯದ ಆದಿ ಗುರು ಅಂದರೆ ಮೊದಲ ಗುರುವಾಗಿ ದತ್ತಾತ್ರೇಯರನ್ನು ಆರಾಧಿಸಲಾಗುವುದು. ಹಾಗಾಗಿ ಗುರುಗಳ ಗುರು, ಯೋಗಿಯಾಗಿ ದತ್ತ ಆರಾಧನೆ ನಡೆಯುತ್ತದೆ. ಇದಲ್ಲದೆ ದತ್ತಾತ್ರೆಏಯ ಸ್ವಾಮಿಯ ಮರು ಅವತಾರವೆನ್ನಲಾದ ಶ್ರೀ ನರಸಿಂಹ ಸರಸ್ವತಿ ಸ್ವಾಮಿಯವರು ನೆಲೆಸಿರುವ ಕ್ಷೇತ್ರವೆ ಶ್ರೀಕ್ಷೇತ್ರ ಗಾಣಗಾಪುರ.

***

ಸಂಕ್ಷಿಪ್ತ ಶ್ರೀ ಗುರುಚರಿತ್ರೆ:-

ಸರಸ್ವತಿ ಗಂಗಾಧರ ಗುರು ಭಕ್ತನಿಗೊಲಿದು ಬಂದನಾ ಶ್ರೀದತ್ತ !

ಪರಿಪರಿ ತಾಪವ ಕ್ಲೇಶವ ಕಳೆಯುತ ನಿಜ ಸುಖವಿತ್ತನು ಶ್ರೀ ದತ್ತ


ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀ ದತ್ತ!

ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀ ದತ್ತ


ನಿಂತು ನುಡಿವ ಯೋಗಿಂದ್ರನಂಘ್ರಿಯನು ಪಿಡಿದು ಕೇಳಿದ ಶ್ರೀ ದತ್ತ!

ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ


ಆಲಿಸು ಕುವರನೆ ಶ್ರೀಗುರು ಚರಿತೆಯ ಭವತಾರಕನವ ಶ್ರೀದತ್ತ !

ತೇಲುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀ ದತ್ತ


ಇವನೇ ದತ್ತನು ಅನುಸೂಯಾತ್ಮಜ ವಿಶ್ವನಿಯಾಮಕ ಶ್ರೀ ದತ್ತ!

ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀ ದತ್ತ


ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ದರಿಸಿದ ಶ್ರೀ ದತ್ತ!

ಕಾಪಿಡೇ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀ ದತ್ತ


ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀ ದತ್ತ!

ಸಾರ್ಥಕವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀ ದತ್ತ


ಮಂದಮತಿ ಅಂಬಾ ಕುಮಾರನಿಗೆ ಜ್ಞಾನದಾತನು ಶ್ರೀ ದತ್ತ!

ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀ ದತ್ತ


ಅಗಸಗ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀ ದತ್ತ!

ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀ ದತ್ತ


ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀ ದತ್ತ !

ಉಚಿತ ಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀ ದತ್ತ


ಅವಳೀತನಯರ ತಾಯಿಗೆ ಕರುಣಿಸಿ ಕಾಶಿಗೆ ಬಂದನು ಶ್ರೀ ದತ್ತ!

ನವ ಸಂವತ್ಸರವಿರೆ ಸನ್ಯಾಸವ ಸ್ವೀಕರಿಸಿದನು ಶ್ರೀಧತ್ತ!


ಮೂವತ್ತಬುಧವ ದಾಟಿ ಬಂದು ತಾಯ್ತಂದೆಯ ನೋಡಿದ ಶ್ರೀ ದತ್ತ¡

ಆವುದನೆಲ್ಲವ ನೀಡಿ ಹರಸುತ ಪಯಣವ ಬೆಳೆಸಿದ ಶ್ರೀಧತ್ತ


ಉದರಶೂಲೆಯ ವಿಪ್ರನ ಜನ್ಮವನುಳಿಸಿ ಕಾಯ್ದನು ಶ್ರೀಧತ್ತ !

ಮುದದಿ ಪೂಜಿಸುವ ಸತಿ-ಪತಿಯರನು ಕಂಡು ನಲಿದನು ಶ್ರೀ ದತ್ತ


ಸಾಯನದೇವನ ಸಾವನು ತಪ್ಪಿಸಿ ಯವನನಂಜಿಸಿದ ಶ್ರೀ ದತ್ತ!

ಧ್ಯೇಯ ಸಾಧನೆಗೆ ಯಾತ್ರೆಯ ಮಾಡಲು ಶಿಷ್ಯನ ಕಳುಹಿದ ಶ್ರೀ ದತ್ತ


ಗುಪ್ತವಾಗಿರಲು ಗುರುನಿಂದಕನಿಗೆ ಭೋಧವ ಮಾಡಿದ ಶ್ರೀ ದತ್ತ !

ಸುಪ್ತ ಚೇತನೆಯ ಚಾಲಿಪ ಶಕ್ತಿಯು ಗುರುವಿಗಿದೆಂದನು ಶ್ರೀ ದತ್ತ


ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ ಮತಿಯ ಪಾಲಿಸಿದ ಶ್ರೀಧತ್ತ!

ಭಾವದಿ ಭಿಕ್ಷೆಯ ನೀಡಿದ ವಿಪ್ರಗೆ ಸಂಚಿತ ತೋರಿದ ಶ್ರೀಧತ್ತ


ಯೋಗಿನಿಯರ ಸಹವಾಸದಿ ಇರುವನು ನರಸಿಂಹ ಸರಸ್ವತಿ ಶ್ರೀಧತ್ತ !

ಸಾಗಿ ಶೋಧಿಸಿದ ಅಂಬಿಗರವನಿಗೆ ಗುಪಿತವ ಹೇಳಿದ ಶ್ರೀಧತ್ತ


ಹರಕೆಯ ಕುವರನ ಹರಣವ ಬರೆಸಿದ ಔದುಂಬರದಿ ಶ್ರೀ ದತ್ತ !

ಬರುತ ಅಮರಜಾ ಭೀಮಾ ಸಂಗಮ ಕ್ಷೇತ್ರದಿ ತಂಗಿದ ಶ್ರೀ ದತ್ತ


ಬರಡೆಮ್ಮೆಯನು ಕರೆಯಿಸಿ ಜನರಿಗೆ ಕೌತುಕ ತೋರಿದ ಶ್ರೀ ದತ್ತ!

ಹರುಷದಿ ಕರೆಯಲು ಗಾಣಗಾಪುರಕೆ ನೆಲೆಸಬಂದನಾ ಶ್ರೀದತ್ತ


ದೂರಮಾಡಿದ ಬ್ರಹ್ಮರಾಕ್ಷಸನ ಕುಮಸಿಗೆ ನಡೆದನು ಶ್ರೀ ದತ್ತ!

ತೋರಿದ ತ್ರಿವಿಕ್ರಮ ಭಾರತಿಗೆ ವಿಶ್ವರೂಪವನು ಶ್ರೀ ದತ್ತ


ವಾದಿಸ ಬಂದಿಹ ಸೊಕ್ಕಿದ ವಿಪ್ರರ ಗರ್ವವ ಕಳೆದನು ಶ್ರೀ ದತ್ತ!

ವೇದದಸಾರ ನಿರೂಪಣ ಮಾಡುತ ಅದ್ಭುತ ಹೇಳಿದ ಶ್ರೀ ದತ್ತ


ತಿಳಿಯದ ವಿಪ್ರರು ವಾದವ ಬೆಳೆಸಲು ಹೊಲೆಯನ ಕರೆದನು ಶ್ರೀ ದತ್ತ !

ಬಳಿದು ಬಸ್ಮವ ಕೃಪೆಯನು ಮಾಡುತ ವಾದಿಸ ಹೇಳಿದ ಶ್ರೀ ದತ್ತ


ಪಾಪಿಗಳಾಗಲೇ ಅಂಜಿ ನಡುಗಿದರು ಶಾಪವ ಕೊಟ್ಟನು ಶ್ರೀ ದತ್ತ!

ಪಾಪ-ಪುಣ್ಯದ ಸಂಚಿತ ಕರ್ಮದ ಫಲವನುಸುರಿದ ಶ್ರೀಧತ್ತ


ಭಸ್ಮ ಮಹಾತ್ಮೆಯ ತಿಳಿಹೇಳಿದನು ವಾಮದೇವನು ಶ್ರೀ ದತ್ತ!

ವಿಸ್ಮಯ ಗೊಂಡಿಹ ರಾಕ್ಷಸ ಜನುಮಕೆ ಮೋಕ್ಷವನಿತ್ತನು ಶ್ರೀಧತ್ತ


ಸತಿ ಸಾವಿತ್ರಿಯ ಪತಿ ಮೃತನಾಗಲು ಅಳುವುದ ಕಂಡನು ಶ್ರೀ ದತ್ತ!

ಸತಿ ಧರ್ಮದ ಇತಿಹಾಸದ ಹೇಳುತ ಸತಿ ಹೋಗೆಂದನು ಶ್ರೀ ದತ್ತ


ಹೋಗುವ ಮುನ್ನ ಕ್ಷೇತ್ರಕ್ಕೆ ಬಂದ ಬಾಲೆಯ ಹರಸಿದ ಶ್ರೀ ದತ್ತ!

ಹೋಗದು ಜೀವ ಎನ್ನಯ ನುಡಿಯಿದು ಮಂಗಳ ವೆಂದನು ಶ್ರೀದತ್ತ


ಚೇತರಿಸಿತು ಶವ ಅಭಿಷಿತ ಜಲದಿಂ ಪ್ರೋಕ್ಷಣೆ ಮಾಡಲು ಶ್ರೀ ದತ್ತ!

ಆತುರದಿಂ ದಂಪತಿಗಳು ಬಾಗಲು ಆಶೀರ್ವದಿಸಿದ ಶ್ರೀಧತ್ತ


ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ ಹೇಳಿದನವರಿಗೆ ಶ್ರೀ ದತ್ತ!

ಭದ್ರೆ ಸೀಮಂತಿನಿ ಮಾಡಿದ ಚಂದಿರ ವಾರದ ವ್ರತವನು ಶ್ರೀ ದತ್ತ


ಬೆಳಗಿನಿಂದಲಿ ರಾತ್ರಿಯವರೆಗಿನ ವಿಹಿತಕರ್ಮವನು ಶ್ರೀ ದತ್ತ!

ತಿಳಿಯಪಡಿಸಿದ ವಿಪ್ರನ ಮಡದಿಗೆ ಪರಾನ್ನದೋಷವ ಶ್ರೀ ದತ್ತ


ಮೂವರ ಭೋಜನ ಅಕ್ಷಯವಾಗಿಸಿ ದಾಸಗೋಲಿದನುಶ್ರೀ ದತ್ತ!

ಸಾವ ಸಮೀಪದ ಗಂಗಾ ಮಾತೆಗೆ ಮಕ್ಕಳ ಕೊಟ್ಟನು ಶ್ರೀಧತ್ತ


ಒಣಮರ ಚಿಗುರಿಸಿ ನರಹರಿ ವಿಪ್ರನ ಕುಷ್ಠವು ಕಳೆದನು ಶ್ರೀ ದತ್ತ!

ಅಣುಕದಿ ಅಂಜಿಕೆ ತೋರುತ ಶಿಷ್ಯನ ಪರೀಕ್ಷೆ ಮಾಡಿದ ಶ್ರೀದತ್ತ


ಕಾಶಿ ಕ್ಷೇತ್ರದ ಮಹಿಮೆಯ ತೋರಿದ ಸಾಯನ ದೇವಗೆ ಶ್ರೀ ದತ್ತ!

ತೋಷ ದೊಲವನು ಹಾಡುತಲೆಂದನು ಹರಿಹರ ಬ್ರಹ್ಮನು ಶ್ರೀ ದತ್ತ


ಅನಂತನಾವ್ರತ ಮಹಿಮೆಯ ಹೇಳುತ ವ್ರಥ ಮಾಡಿಸಿದನು ಶ್ರೀ ದತ್ತ!

ಅನಂತಕೋಟೆಯು ಅನಂತರೂಪನು ಅನಂತ ಮಹಿಮನು ಶ್ರೀ ದತ್ತ


ನೇಕಾರಗೆ ಶ್ರೀಶೈಲದ ಯಾತ್ರೆಯ ಮಾಡಿಸಿದನು ತಾ ಶ್ರೀದತ್ತ !

ಸಾಕಾರದಿ ಶಿವರಾತ್ರಿ ಮಹಾತ್ಮೆಯ ಹೇಳಿದನಾತಗೆ ಶ್ರೀ ದತ್ತ


ದೇವಿಯ ಭಕ್ತನ ಕುಷ್ಟ ನಿವಾರಿಸಿ ಜ್ಞಾನವ ಕೊಟ್ಟನು ಶ್ರೀದತ್ತ !

ಕವಿಯಾದ ಕಲ್ಮೇಶ ಅರ್ಚಕನ ಶಿಷ್ಯನ ಮಾಡಿದ ಶ್ರೀದತ್ತ


ಹಸುಳರೆಲ್ಲರನು ಮೆಚ್ಚಿಸಿ ಧರಿಸಿದ ಎಂಟು ರೂಪವನ್ನು ಶ್ರೀ ದತ್ತ!

ಕೃಷಿಕನ ಮೌನಾರ್ಚನೆಗೊಲಿದಿತ್ತನು ನೂರ್ಮಡಿ ಧಾನ್ಯವ ಶ್ರೀದತ್ತ


ಪುರಜನರಿಂ ಸಹ ಸಕಲ ತೀರ್ಥಗಳ ಯಾತ್ರೆಯ ಮಾಡಿದ ಶ್ರೀದತ್ತ!

ಪೂರ್ವಾಶ್ರಮದ ಭಗಿನಿಯ ಪಾಪಕ್ಷಾಲನೆ ಮಾಡಿದ ಶ್ರೀಧತ್ತ


ಹರುಷದಿ ಹೇಳಿದ ಗುರು ಗೀತೆಯನು ನಾಮಧಾರಕಗೆ ಶ್ರೀ ದತ್ತ!

ನೆರೆ ನಂಬುವರನು ಪರಿಪಾಲಿಸುವುದು ನಿಶ್ಚಿತವೆಂದನು ಶ್ರೀ ದತ್ತ


ಯಾಕೋ ರಜಕ ಎನ್ನುತ್ತಾ ಯವನರ ರಾಜನ ಕರೆದನು ಶ್ರೀ ದತ್ತ!

ಕಾಕುಗೊಂಡಿಹ ರಾಜನ ಮಂಡಿಯ ರೋಗವ ಕಳೆದನು ಶ್ರೀ ದತ್ತ


ಯವನರಕಾಟಕೆ ಕದಳೀವನಕೆ ಹೋಗುವೆನೆಂದನು ಶ್ರೀದತ್ತ !

ಅವಸರದಿಂ ಬಲು ಶೋಕಿಸಬೇಡಿರಿ ಇಲ್ಲಿಹೆನೆಂದನು ಶ್ರೀದತ್ತ


ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ ಎಂದನು ಶ್ರೀದತ್ತ!

ಬೇಡಿದ ಕೊಡುವೆನು ಭಾವುಕ ಜನರಿಗೆ ಸತ್ಯವು ಎಂದನು ಶ್ರೀ ದತ್ತ


ಅತಿ ಸಂಕ್ಷೇಪದ ಗುರುಚರಿತೆಯ ದಿನವೂ ಹಾಡುವ ಕೆಳ್ವರಿಗೆ !

ಅತಿ ಆನಂದವು ಮೇಣ್ ಸುಖಸಂಪದ ಪಾಲಿಸುವನು ಶ್ರೀ ದತ್


ಮಂದಮತಿ ನಾ ತೊದಲ್ನುಡಿಯಿಂದಲೇ ಹಾಡಿದೆನು ಶ್ರೀ ದತ್ತ!

ವಂದಿಸುತಲಿ ನಾ ಅರ್ಪಣ ಮಾಡುವೆ ನಿನ್ನಡಿಗಳಿಗೆ ಶ್ರೀಧತ್ತ

ಮಂಗಳ ಮಂಗಳ ನಿತ್ಯ ಸುಮಂಗಳ ಮಂಗಲಮಯ ಶ್ರೀ ದತ್ತ!

ಗಂಗೆ ಮಾಳಾಂಬಿಕೆ ಕಾಂತಸ್ವರೂಪನು ಸಚ್ಚಿದಾನಂದಮಯ ಶ್ರೀ ದತ್ತ

ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವ ದತ್ತ!

ಶ್ರೀಕೃಷ್ಣಾರ್ಪಣಮಸ್ತು!

***

ಶ್ರೀ ನರಸಿಂಹ ಸರಸ್ವತಿ ಮಹಾರಾಜ್
ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳು ಕ್ರಿ.ಶ. 1378 ರಿಂದ 1459ರ ಅವಧಿಯಲ್ಲಿ ಭೌತಿಕವಾಗಿ ಕಾಣಿಸಿಕೊಂಡಿದ್ದರು. (ಶಕ 1300 ರಿಂದ ಶಕ 1380) ಇವರು ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಾಗವಾಗಿರುವ ವಾಶಿಮ್ ಜಿಲ್ಲೆಯ ಕಾರಂಜಾಪುರ, ಆಧುನಿಕ ಕಾಲದ ಲಾಡ್-ಕರಂಜಾ (ಕಾರಂಜಾ) ನಲ್ಲಿ ಒಂದು ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಮಾಧವ ಹಾಗೂ ತಾಯಿ ಅಂಬಾ ಭವಾನಿ. ಬಾಲ್ಯದಲ್ಲಿ ಇವರಿಗೆ ಕಾಳೆ ಎಂಬ ಕುಟುಂಬದ ಹೆಸರಿನೊಡನೆ ನರಹರಿ ಅಥವಾ ಶಾಲಿಗ್ರಾಮದೇವ ಎಂಬ ಹೆಸರಿಡಲಾಗಿತ್ತು. 

ಶ್ರೀ ನರಸಿಂಹ ಸರಸ್ವತಿಯನ್ನು ದತ್ತಾತ್ರೇಯರ ಎರಡನೇ ಅವತಾರವೆಂದು ಪರಿಗಣಿಸಲಾಗುತ್ತದೆ, ಮೊದಲ ಅವತಾರ ಶ್ರೀಪಾದ ಶ್ರೀವಲ್ಲಭರಾಗಿದ್ದು ಅವರು ಅಂಬಾ ಭವಾನಿಗೆ ಆಶೀರ್ವದಿಸಿದ್ದರು.ಅಲ್ಲದೆ ಆಕೆ ಶಿವಪೂಜೆ ನಡೆಸುವಂತೆ ಸಲಹೆ ನೀಡಿದ್ದರು. ತರ ಅವನು ಅವಳ ಮುಂದಿನ ಜನ್ಮದಲ್ಲಿ ಕಲಿಯುಗದಲ್ಲಿ ಸನಾತನ ಧರ್ಮವನ್ನು ಉದ್ದರಿಸಲು ತಾವು ನರಸಿಂಹ ಸರಸ್ವತಿಗಳಾಗಿ ಜನಿಸುತ್ತೇವೆ. ಎಂದು ಅಭಯ ನೀಡಿದ್ದರು. ಅದರಂತೆ ನರಸಿಂಹ ಸರಸ್ವತಿಯವರ ಜನನವಾಗಿತ್ತು.

ಬಾಲ್ಯದಲ್ಲಿ ನರಸಿಂಹ ಸರಸ್ವತಿ ಶಾಂತ ಸ್ವಭಾವದವನಾಗಿದ್ದ.ಹೆಚ್ಚು ಮಾತನಾಡುತ್ತಿರಲಿಲ್ಲ. ಇದು ಅವನು ಮಾತನಾಡುತ್ತಾನೋ ಇಲ್ಲವೋ ಎಂಬುದರ ಬಗ್ಗೆ ಹೆತ್ತವರಿಗೆ ಚಿಂತೆ ಹತ್ತಿಸಿತ್ತು. ಅದಾಗ್ಯೂ ಬಾಲಕ ನರಸಿಂಹ ಸರಸ್ವತಿ ಒಮ್ಮೆ ಬ್ರಹ್ಮೋಪದೇಶ ಹೊಂದಿದ ನಂತರ ಮಾತನಾಡಲು ಪ್ರಾರಂಭಿದುವುದಾಗಿ ಕೈ ಸನ್ನೆಗಳ ಮೂಲಕ ತೋರಿಸಿದ. ಉಪನಯನದ ನಂತರ ಬಾಲಕ ನರಸಿಂಹ ಸರಸ್ವತಿಗಳು  ವೇದಗಳನ್ನು ಪಠಿಸಲು ಪ್ರಾರಂಭಿಸಿದರು, ಇದು ಹಳ್ಳಿಯಲ್ಲಿನ ಬ್ರಾಹ್ಮಣರನ್ನು ತುಂಬಾ ಮೆಚ್ಚಿಸಿತು, ಹಿರಿಯ ವಿದ್ವಾಂಸರು ಅವರಲ್ಲಿ ವೇದಗಳ ಕಲಿಯಲು ಆಗಮಿಸುತ್ತಿದ್ದರು.

ನರಸಿಂಹ ಸರಸ್ವತಿ 1386 ರಲ್ಲಿ ತನ್ನ 8 ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಮನೆಯನ್ನು ತೊರೆದು ಕಾಲ್ನಡಿಗೆಯಲ್ಲಿ ಕಾಶಿಗೆ ಹೊರಟರು. ಅವರು ಶ್ರೀ ಕೃಷ್ಣ ಸರಸ್ವತಿಯಿಂದ ಕಾಶಿಯಲ್ಲಿ ಸನ್ಯಾಸ ಪಡೆದರು. ಅವರ ಹೆಸರಿನ ಎರಡನೇ ಭಾಗ ೯ಸರಸ್ವತಿ) ನಾಮಧೇಯ ಈ ಗುರುಗಳ ಕಾಣಿಕೆಯಾಗಿದೆ.  ಅವರು ಅಂತಿಮವಾಗಿ ಅವರಿಗೆ ಶ್ರೀ ನರಸಿಂಹ ಸರಸ್ವತಿ ಎಂದು ಹೆಸರಿಸಿ ದೀಕ್ಷೆ ನೀಡಿದರು. 

ಸನ್ಯಾಸಿಯಾದ ನಂತರ, ನರಸಿಂಹ ಸರಸ್ವತಿಯವರು  ತನ್ನ ಹೆತ್ತವರನ್ನು ಭೇಟಿಯಾಗಲು 30 ನೇ ವಯಸ್ಸಿನಲ್ಲಿ ಕಾರಂಜಾಗೆ ಹಿಂದಿರುಗುವ ಮೊದಲು ಹಲವಾರು ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರು. ಅವರು ತಮ್ಮ ಜೀವನದ ಕೊನೆಯ 20 ವರ್ಷಗಳ ಕಾಲ ಗಾಣಗಾಪುರದಲ್ಲಿದ್ದರು. ಅದಕ್ಕೆ ಮುನ್ನ ಸಹ ಅವರು ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದ್ದರು. ಜೀವನದ ಅಂತ್ಯದ ವೇಳೆಗೆ, ನರಸಿಂಹ ಸರಸ್ವತಿ ಅವರು ಬೀದರ್‌ನ ಮುಸ್ಲಿಂ ರಾಜ (ಸುಲ್ತಾನ್) ರನ್ನು ಭೇಟಿಯಾದರು, ಅವರು ಆ ಸಮಯದಲ್ಲಿ ಆ ಪ್ರದೇಶದ ಆಡಳಿತಗಾರರಾಗಿದ್ದ ಬಹಮನಿ ಸುಲ್ತಾನರ ಮಹಮೂದ್ ಷಾ ಬಹಮನಿ ಸುಲ್ತಾನ್ ಆಗಿದ್ದನು.

ತಮ್ಮ ಜೀವನ ಅಂತ್ಯವಾಗುವುದನ್ನು ಅರಿತ ಶ್ರೀಗಳ್:ಉ ತಾವು ಸಮಾಧಿ ಹೊಂದಲು ತೀರ್ಮಾನಿಸಿದ್ದರು.ವರು ಕದಳಿ (ಶ್ರೀಶೈಲಂ ಬಳಿಯ ಕದಳಿ ವನಂ) ಕಾಡಿಗೆ ಹೊರಟರು. ಅವರು ಅಲ್ಲಿ ಶ್ರೀ ನಿಜಗುಣಾನಂದರ ರೀತಿಯಲ್ಲಿ ಸಮಾದಿ ಹೊಂದಿದರು.