Friday, January 31, 2025

"ಗಣ" Movie Review: ಹೊಸತನವಿಲ್ಲದ ಮತ್ತೊಂದು ಟೈಮ್ ಟ್ರಾವೆಲಿಂಗ್ ಕಥೆ

 ಚಿತ್ರ: ಗಣ

ನಿರ್ದೇಶಕ: ಹರಿಪ್ರಸಾದ್ ಜಕ್ಕ

ನಿರ್ಮಾಣ: ಚೆರಿ ಕ್ರಿಯೇಷನ್ಸ್ ಲಾಂಛನ, ಪಾರ್ಥು 

ತಾರಾಂಗಣ: ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು

ರೇಟಿಂಗ್: 2.5/5

-ರಾಘವೇಂದ್ರ ಅಡಿಗ ಎಚ್ಚೆನ್.


ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ "ಗಣ" ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.  ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಅವರು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.  ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು "ಗಣ" ಚಿತ್ರದ ತಾರಾಬಳಗದಲ್ಲಿದ್ದಾರೆ  2021ರಲ್ಲಿ ಬಿಡುಗಡೆಯಾದ ನಿರ್ದೇಶಕ ಹರಿಪ್ರಸಾದ್ ಜಕ್ಕ ಅವರ ತೆಲುಗು ಚಿತ್ರ ಪ್ಲೇ ಬ್ಯಾಕ್ ಚಿತ್ರದ  ಯಥಾವತ್ ರಿಮೇಕ್ ಚಿತ್ರವೇ "ಗಣ". ಮೂಲ ಚಿತ್ರ ಕ್ರಾಸ್ ಕನೆಕ್ಷನ್ ಕಥೆ ಆಧರಿಸಿದ್ದ ಭಾರತದ ಮೊದಲ ಚಿತ್ರವೆಂದು ಹೇಳಲಾಗಿತ್ತಾದರೂ ಇಲ್ಲಿ ಕನ್ನಡ ಪ್ರೇಕ್ಷಕರಿಗೆ ಸರಿಹೊಂದುವಂತೆ ಕೆಲವು ಮಾರ್ಪಾಡು ಮಾಡಿಕೊಂಡು ತೆರೆಗೆ ತರಲಾಗಿದೆ. 

ಗಣ ಎಂಬ ಪತ್ರಕರ್ತ, ಹಳೆಯ ಲ್ಯಾಂಡ್ ಲೈನ್ ದೂರವಾಣಿಯನ್ನು ಹೊಂದಿರುವ ಹಳೆಯ ಮನೆಗೆ ತೆರಳುತ್ತಾನೆ. ಲ್ಯಾಂಡ್ ಲೈನ್ ಮತ್ತು ಮೊಬೈಲ್ ಫೋನ್ ಗಳು ಕೆಲವೊಮ್ಮೆ ಕ್ರಾಸ್ ಕನೆಕ್ಷನ್ ಗೆ ಹೆಸರುವಾಸಿಯಾಗಿದ್ದರೂ , ಗಣನಿಗೆ ಸುಜಾತಾ ಎನ್ನುವವಳಿಂದ ಅನಿರೀಕ್ಷಿತ ಕರೆ ಬರುತ್ತದೆ, ಅವಳು ಬೇರೊಬ್ಬನೊಡನೆ ಮಾತನಾಡಲು ಬಯಸಿರುತ್ತಾಳೆ. ವಿಚಿತ್ರ ಎನಿಸುವಂತೆ  ಆಕೆ 1993 ರ ಕಾಲದ ಸುಜಾತಾ 2022 ರ ಗಣ ಎಂಬ ಪತ್ರಕರ್ತನನ್ನು ಸಂಪರ್ಕಿಸಿದ್ದಾಳೆ.ಎರಡು ವಿಭಿನ್ನ ಕಾಲಘಟ್ಟದ ವ್ಯಕ್ತಿಗಳು ಮಾತಿಗಿಳಿಯುತ್ತಾರೆ.

ಸುಜಾತಾ ತನ್ನ ಪಾಸ್ಪೋರ್ಟ್ ಸಮಸ್ಯೆಗಳಿಗೆ ಸಹಾಯವನ್ನು ಕೇಳುತ್ತಾಳೆ ಮತ್ತು ಕ್ರೈಂ ರಿಪೋರ್ಟರ್ ಆದ  ಗಣ ಇದರ ತನಿಖೆ ಪ್ರಾರಂಭಿಸುತ್ತಾನೆ. ಇದು ಆತನನ್ನು ಕೊಲೆ ಪ್ರಕರಣವೊಂರ ಸತ್ಯ ತಿಳಿಯುವಂತೆ  ಪ್ರೇರೇಪಿಸುತ್ತದೆ. ಮುಂದೆ ಏನಾಗಲಿದೆ ಎನ್ನುವುದನ್ನು ಪ್ರೇಕ್ಷಕರು ತಾವು ಈಗಾಗಲೇ  ಪ್ಲೇ ಬ್ಯಾಕ್ ಸಿನಿಮಾ ನೋಡದಿದ್ದಲ್ಲಿ ಚಿತ್ರಮಂದಿರಗಳಲ್ಲಿ ತಿಳಿಯಬಹುದಾಗಿದೆ. 

ಮೂರು ತಿಂಗಳ ಹಿಂದೆ, ಮರ್ಫಿ ಎಂಬ ಕನ್ನಡ ಸಿನಿಮಾ ತೆರೆಗೆ ಬಂದಿದ್ದು ಅದೂ ಸಹ ಇದೇ ಬಗೆಯ ಕಥಾವಸ್ತುವನ್ನು ಹೊಂದಿತ್ತು, ವಿಭಿನ್ನ ಕಥಾಹಂದರಕ್ಕೆ ತೆರೆದುಕೊಳ್ಳುವ ಮುನ್ನ ಗಣ ಚಿತ್ರದ ಕಥೆಗೆ ಸಾಕಷ್ಟು ಸಮೀಪದ ಹೋಲಿಕೆಯನ್ನು ಆ ಚಿತ್ರ ಸಹ ಹೊಂದಿದೆ. ಅಂತೆಯೇ, ಭಾರತೀಯ ಚಿತ್ರರಂಗದಲ್ಲಿ ಟೈಮ್ ಟ್ರಾವೆಲ್ ಅನ್ನು ಕೇಂದ್ರವಾಗಿಸಿಕೊಂಡ ಹಲವಾರು ಚಲನಚಿತ್ರಗಳು ಬಂದಿದೆ.. ಗಣ ಅವುಗಳಲ್ಲಿ ಒಂದಾಗಿದೆ, ಆದರೆ ಇದು ಮತ್ತೊಂದು ಚಿತ್ರದ ರಿಮೇಕ್ ಅನ್ನು ಹೊರತುಪಡಿಸಿ, ಹೊಸದಾಗಿ ಏನನ್ನೂ ಹೇಳುವುದರಲ್ಲಿ ಸೋತಿದೆ. ಕಥಾವಸ್ತುವು ಪ್ರೇಕ್ಷಕರಿಗೆ ತೆರೆದುಕೊಳ್ಳುತ್ತಿದ್ದಂತೆ, ಪ್ರೇಕ್ಷಕರ ಕುತೂಹಲಕ್ಕೆಲ್ಲಾ ತೆರೆ ಬೀಳುತ್ತದೆ., ಅಚ್ಚರಿಯ ಭಾವವನ್ನು ಅಥವಾ ಇತರ ಅಗತ್ಯ ಅಂಶಗಳ ಪ್ರಚೋದಿಸಲು ವಿಫಲವಾಗುತ್ತದೆ, ವಿಶೇಷವಾಗಿ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಮರ್ಫಿಯ ಹಿನ್ನೆಲೆಯಲ್ಲಿ ನೋಡಿದಾಗ "ಗಣ" ಸಿನಿಮಾದಲ್ಲಿ ಬೇರೆಯಾದ ವಿಶೇಷತೆಗಳೇನೂ ಕಾಣುವುದಿಲ್ಲ.

"ಗಣ" ಕೇವಲ ಒಂದು ನಿಷ್ಠಾವಂತ ರಿಮೇಕ್ ಚಿತ್ರ ಎನ್ನುವುದಕ್ಕೆ ಮಾತ್ರ ಸೀಮಿತವಾಗಿದೆ. ಸಿನಿಮಾವು ಕ್ರಾಸ್ ಕನೆಕ್ಷನ್  ಅಥವಾ ಟೈಮ್ ಟ್ರಾವೆಲಿಂಗ್ ವಿಷಯಗಳ ಹೆಚ್ಚು ಅರಿವಿಲ್ಲದವರಿಗೆ ಉತ್ತಮವಾದ ಅನುಭವ ನೀಡಬಹುದು ಹೊರತು ಉಳಿದವರಿಗೆ, ಇದು ಎರಡು ವಿಭಿನ್ನ ಅವಧಿಗಳ ನಡುವಿನ ಸಿನಿಮಾಗಳ ಸಾಲಿನಲ್ಲಿ ಬಂದ ಮತ್ತೊಂದು ಚಿತ್ರ ಮಾತ್ರ.

ನೀವು ಟೈಮ್ ಟ್ರಾವೆಲ್ ಮತ್ತು ಕ್ರಾಸ್-ಕನೆಕ್ಷನ್ ಗಳಂತಹಾ ವೈಜ್ಞಾನಿಕ ಹಿನ್ನೆಲೆಯ ಸಿನಿಮಾವನ್ನು ನೋಡಲು ಇಷ್ಟಪಡುವಿರಾದರೆ ಗಣ ಯೋಗ್ಯ ಆಯ್ಕೆಯಾಗಿದೆ. ಆದರೆ ಇಲ್ಲಿ ರೋಮಾಂಚನಕಾರಿಯಾದ ಯಾವುದೇ ಹೊಸ ಬಗೆಯ ಅನುಭವವನ್ನೂ ಸಹ ನೋಡುವುದು ಸಾಧ್ಯವಿಲ್ಲ.


Sunday, January 26, 2025

ನಟ ಶಿವರಾಜ್ ಕುಮಾರ್ ಅವರು ಬದುಕಿನ ಯುದ್ಧ ಗೆದ್ದು ಬಂದಿರುವುದು ನಮಗೆಲ್ಲಾ ಸಂಭ್ರಮದ ಕ್ಷಣ: ಕೆ.ವಿ.ಪ್ರಭಾಕರ್

 ಬಾಕಿ ಉಳಿದಿರುವ ಐದೂ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಇದೇ ವರ್ಷ ಘೋಷಣೆ : ಕೆವಿಪಿ ಭರವಸೆ

ಬಾಕಿ ಉಳಿದಿರುವ ಐದೂ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಇದೇ ವರ್ಷ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಭರವಸೆ ನೀಡಿದರು. 

ಶ್ರೀ ರಾಘವೇಂದ್ರ ಚಿತ್ರವಾಣಿಯ 49ನೇ  ವಾರ್ಷಿಕೋತ್ಸವ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ಸಾಧಕರಿಗೆ 24ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.‌

"ಸೊಸೆ ತಂದ ಸೌಭಾಗ್ಯ" ಸಿನಿಮಾದಿಂದ ಪಿಆರ್ ಒ ಕ್ಷೇತ್ರಕ್ಕೆ ಆಗಮಿಸಿದ ರಾಘವೇಂದ್ರ ಚಿತ್ರವಾಣಿ ಈಗ ಕನ್ನಡ ಚಿತ್ರರಂಗದ ಸೌಭಾಗ್ಯ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. 
ಈ ವಾರ ಸಿನಿಮಾ ಜಗತ್ತಿಗೆ ಸಂಭ್ರಮದ ವಾರ. 2019 ನೇ ಸಾಲಿನ ರಾಜ್ಯ ಸಿನಿಮಾ ಪ್ರಶಸ್ತಿಗಳು ಹಾಗೂ ನೆನ್ನೆ ಅನಂತನಾಗ್ ಅವರೂ ಸೇರಿ ಸಿನಿಮಾ ಕ್ಷೇತ್ರದ ದಿಗ್ಗಜರಿಗೆ ಪದ್ಮ‌ ಪ್ರಶಸ್ತಿಗಳು ಲಭಿಸಿವೆ. ಇದು ಸಂಭ್ರಮದ ವಾರ ಎಂದರು. 

ಐದು ವರ್ಷಗಳಿಂದ ರಾಜ್ಯ ಸಿನಿಮಾ ಪ್ರಶಸ್ತಿಗಳು ಸ್ಥಗಿತಗೊಂಡಿದ್ದವು. ನಾವು ಈಗಗಲೇ 2019 ರ ಪ್ರಶಸ್ತಿ ಘೋಷಣೆಯಾಗಿದ್ದು ಬಾಕಿ ಇರುವ ಐದೂ ವರ್ಷಗಳ ಪ್ರಶಸ್ತಿಯನ್ನೂ ಇದೇ ವರ್ಷ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದರು. 
ಸಿನಿಮಾ PRO ಗಳಿಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ನಟಿ ಜಯಂತಿ ಅವರ ಹೆಸರಿನ ಪ್ರಶಸ್ತಿ ಸ್ಥಾಪಿಸಲು ಈಗಾಗಲೇ ಸರ್ಕಾರಿ ಆದೇಶ ಆಗಿದೆ ಎಂದು ತಿಳಿಸಿದರು.
ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಹಿರಿಯ ಪತ್ರಕರ್ತೆ ವಿಜಯಮ್ಮ, ಹಿರಿಯ ಪತ್ರಕರ್ತರಾದ ಸದಾಶಿವ ಶೆಣೈ,  ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ನಟಿ ರಾಗಿಣಿ,  ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್,  ಉಮೇಶ್ ಬಣಕಾರ್, ಸಂಜಯ್ ಗೌಡ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Saturday, January 25, 2025

"ಪಾರ್ಲರ್ ಹುಡುಗಿಯೂ ಮರಳುಗಾಡಿನ ಮಹಲು": ಪುಟ್ಟ ಕಾದಂಬರಿಯ ದಟ್ಟ ಸ್ವಪ್ನಸೌಧ

 ಬರಹಗಾರ್ತಿ ಗೀತಾ ಕುಂದಾಪುರ ಅವರು ಎಂಕಾಂ ಪದವಿ ಪಡೆದಿರುವ ಇವರು ವಿದೇಶಗಳಲ್ಲಿ ಪ್ಲಾನರ್‌ ಮತ್ತು ಪ್ರಾಜೆಕ್ಟ್ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಿಗೆ ಲೇಖನ ಕತೆಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಬರೆದ ಸಣ್ಣ ಕತೆಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು ‘ಅಪ್ರಮೇಯ’ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರ ಇನ್ನೊಂದು ಕೃತಿ ದ್ವೀಪಗಳತ್ತ ಯಾನ - ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕಥನ. ಕಡಲ್ಗಳ್ಳರ ಸರಹದ್ದಿನಲ್ಲಿ ಎನ್ನುವುದು ಅವರ ಪ್ರವಾಸ ಕಥನ ‘ ಇಲ್ಲಿ ಲೇಖಕಿ  ರಷ್ಯಾ ಮತ್ತು ಸ್ಕ್ಯಾಂಡಿನೆವಿಯಾ ಪ್ರವಾಸ ಕೈಗೊಂಡವೇಳೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.  ಒಂಟಿ ಪಯಣಿಗರು.ಎನ್ನುವುದು ಇವರ ಇನ್ನೊಂದು ಕಥಾ ಸಂಕಲನ. ಇದೀಗ ಲೇಖಕಿ ಗೀತಾ ತಮ್ಮ ಮೊಟ್ಟ ಮೊದಲ ಕಾದಂಬರಿ ಪ್ರಕಟಿಸಿದ್ದು "ಪಾರ್ಲರ್ ಹುಡುಗಿಯೂ ಮರಳುಗಾಡಿನ ಮಹಲು" ಎನ್ನುವುದು ಈ ಕಾದಂಬರಿಯ ಶೀರ್ಷಿಕೆ.


ಈ ಕಾದಂಬರಿ ಲಾವಣ್ಯ ಎನ್ನುವ ಮದ್ಯಮವರ್ಗದ ಕುಟುಂಬದಿಂದ ಬಂದ ಹುಡುಗಿಯೊಬ್ಬಳ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಮದುವೆ ವಯಸ್ಸಿಗೆ ಬಂದಿದ್ದರೂ ನಾನಾ ಕಾರಣದಿಂದ ಸೂಕ್ತ ವರ ಸಿಕ್ಕದೆ ಮದುವೆಯಾಗದೆ ಇದ್ದ ಲಾವಣ್ಯ ತನ್ನ ಸಂಬಂಧಿಕರಿಂದ ನಾನಾ ಬಗೆಯ ಚುಚ್ಚುಮಾತುಗಳನ್ನು ಕೇಳಬೇಕಾಗುತ್ತದೆ. ಆದರೆ ಇದರಿಂದ ನೊಂದು ಕುಗ್ಗಿ ಹೋಗದ ಆಕೆ ತನ್ನ ಆತ್ಮವಿಶ್ವಾಸ, ಪ್ರಯತ್ನದಿಂದ ಮುಂದುವರಿದು ಗಲ್ಫ್ ರಾಷ್ಟ್ರ ಕತಾರ್ ಗೆ ತೆರಳಿ ಅಲ್ಲಿ ಬ್ಯೂಟಿಷಿಯನ್ ಆಗಿ ಬೆಳೆಯುತ್ತಾಳೆ.

ಮೇಲ್ನೋಟಕ್ಕೆ ಕಾದಂಬರಿ ಹೆಣ್ಣೊಬ್ಬಳ ಜೀವನದ ಕಥೆಯಾಗಿ ಅಲ್ಲದೆ ಹೆಣ್ಣೊಬ್ಬಳು ತನ್ನ ಸಾಹಸ ಪ್ರವೃತ್ತಿಯಿಂದ ಎಲ್ಲವನ್ನೂ ಎದುರಿಸಿ ದಿಟ್ಟವಾಗಿ ಮುನ್ನಡೆಯುವ, ಬೆಳೆದು ಎತ್ತರಕ್ಕೇರುವ ಕಥೆ ಎನಿಸುತ್ತದೆ. ಲಾವಣ್ಯ ತಾನು ಕತಾರ್ ನಲ್ಲಿ ಕೆಲಸ ಮಾಡಿ ತನ್ನ ತಾಯಿ, ಮನೆಯವರಿಗೆ ಹಣ ಕಳಿಸುತ್ತಾ ಜೊತೆಗೆ ತನ್ನನ್ನು ಆಡಿಕೊಂಡಿದ್ದವರ ಮುಂದೆ ತಾನು ಏನೆನ್ನುವುದನ್ನು ಕೆಲಸದ ಮೂಲಕವೇ ತೋರಿಸಿಕೊಡುವ ಕಥೆ ಈ ಕಾದಂಬರಿ.

ಇಲ್ಲಿ ನನಗೆ ಕಂಡ ಹಾಗೆ ಲಾವಣ್ಯಳ ಜೀವನದ ಕಥೆಯ ಜೊತೆಗೆ ಕತಾರ್ ಅಥವಾ ಇತರೆ ಗಲ್ಫ್ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳ ಜೀವನ ಹೇಗಿರುತ್ತದೆ ಎನ್ನುವುದನ್ನೂ ಲೇಖಕಿ ತೆರೆದಿಡುತ್ತಾರೆ. ದೂರ ದೇಶಗಳಿಗೆ ಕನಸುಗಳನ್ನು ಕಟ್ಟಿಕೊಂಡು ಕೆಲಸಕ್ಕೆ ಬರುವ ಹೆಣ್ನು ಮಕ್ಕಳು ಅಲ್ಲಿ ಪಡುವ ಬವಣೆಗಳ ಚಿತ್ರಣ ಇಲ್ಲಿದೆ. ಇಲ್ಲಿನ ಕಥಾ ನಾಯಕಿಗೆ ಒಲಿದು ಬಂದಂತೆ ಎಲ್ಲಾ ಹೆಣ್ಣು ಮಕ್ಕಳ ಜೀವನದಲ್ಲಿ ಅದೃಷ್ಟ ಕೈಗೂಡಿ ಬರುವುದಿಲ್ಲ ಎನ್ನುವುದು ಸತ್ಯ. ಇದರಲ್ಲಿ ಬರುವ ಪಾರ್ವತಿ, ಪಸೀದ, ಲೋಲಿಟಾ ಅಂತಹಾ ಪಾತ್ರಗಳು ಇದಕ್ಕೆ ನಿದರ್ಶನ. 


ಒಟ್ಟಾರೆ ಕಾದಂಬರಿ ಸರಳವಾಗಿದ್ದು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಗುರಿ, ಮಹತ್ವಾಕಾಂಕ್ಷೆಯಿದ್ದು ಸಾಧನೆಯ ಛಲ, ಪ್ರಯತ್ನ ಸೇರಿದರೆ ಯಾವುದೇ ಕಷ್ಟಗಳನ್ನೆದುರಿಸಿ ಬದುಕಬಹುದು ಎನ್ನುವುದಕ್ಕೆ ಲಾವಣ್ಯ ಪಾತ್ರ ಒಂದು ಉದಾಹರಣೆ. ಹಾಗೆಯೇ ಇಲ್ಲಿ ಮದ್ಯಮವರ್ಗದ ಮನೆ, ಅಲ್ಲಿನ ಸಂಬಂಧಗಳ ನಡುವಿನ ತಾರತಮ್ಯವನ್ನೂ ಲೇಖಕಿ ಸೂಕ್ತವಾಗಿ ಚಿತ್ರಿಸಿದ್ದಾರೆ.  ಆದರೆ ಕಾದಂಬರಿಯ ಪ್ರಾರಂಭದಲ್ಲಿದ್ದ ಸಮಾಧಾನಕರ ಕಥನ ಶೈಲಿ ಕಾದಂಬರಿಯ ಕಡೆ ಕಡೆಯಲ್ಲಿ ತುಸು ಹೆಚ್ಚಿನ ವೇಗದ ಗತಿಯಲ್ಲಿ ಸಾಗಿದಂತೆ ಎನಿಸುತ್ತದೆ. ಲಾವಣ್ಯಗೆ ಸಲ್ಮಾ ಸಿಕ್ಕ ನಂತರ ಮತ್ತು ಕಾದಂಬರಿಯನ್ನು ಸುಖಾಂತಗೊಳಿಸಬೇಕೆನ್ನುವ ಕಾರಣದಿಂದ ಶ್ರೀಕಾಂತನ ಪಾತ್ರ ಪ್ರವೇಶವಾಗಿದೆ ಎನಿಸಿತು. ಅಲ್ಲದೆ ಅವನ ಲಾವಣ್ಯಳ ಮದುವೆ ಆಗುತ್ತದೆ ಎನ್ನುವುದರೊಂದಿಗೆ ಕಥೆ ಮುಕ್ತಾಯವಾಗಿದ್ದು ಕೊನೆಯಲ್ಲಿ ಕಥೆ ಅವಸರದಲ್ಲಿ ಸಾಗಿತು ಎನಿಸಿತು. ಇದು ಹೊರತು ಲೇಖಕಿಯ ಮೊದಲ ಪ್ರಯತ್ನಕ್ಕೆ ನಾವು ಮೆಚ್ಚುಗೆ ಸೂಚಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. 



Friday, January 24, 2025

ಡಾ.ರಾಜ್ ವಿನಯದ ಗುಣ ಅವರಿಗಿಂತ ಎತ್ತರದ್ದು: ಸಿಎಂ ಸಿದ್ದರಾಮಯ್ಯ

 ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. 

ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನ ಕಾರ್ಯಕ್ರಮದಲ್ಲಿ ಗೋವಿಂದು ಅವರನ್ನು ಸನ್ಮಾನಿಸಿ, ಅಭಿನಂದಿಸಿ ಮಾತನಾಡಿದರು. 

ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.

ಕನ್ನಡ ಕೆಲಸಕ್ಕೆ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುವುದು ಎಂದರು. 

ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೇ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್ ಅವರೇ ಸಾಟಿ. ಇವರಿಗೆ ಸಾಟಿ ಆಗುವವರು ಯಾರೂ ಇನ್ನೂ ಬಂದಿಲ್ಲ ಎಂದರು.

ಡಾ.ರಾಜ್ ಅವರ ಗೋಕಾಕ್ ಚಳವಳಿಯಲ್ಲಿ ನಾನೂ ಅವರ ಭಾಷಣ ಕೇಳಲು ಹೋಗಿದ್ದೆ. ರಾಜ್ ಅವರಿಂದಾಗಿ ಕನ್ನಡ ಹೆಚ್ಚು ಶಕ್ತಿಯುತವಾಗಿ ಬೆಳೆಯಿತು ಎಂದರು‌.


ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದಾಗ ಸಾ.ರಾ.ಗೋವಿಂದು ಮತ್ತು ಹಿರಿಯ ಪತ್ರಕರ್ತ ವೆಂಕಟೇಶ್  ಅವರ ಪರಿಚಯ ಮೊದಲ ಬಾರಿ ಆಯಿತು. ಇವರ ಕನ್ನಡ ಪರ ಹೋರಾಟದ ಬಗ್ಗೆ ಆಗಲೇ ನನಗೆ ಅಭಿಮಾನ ಇತ್ತು. ನನಗೆ ಕನ್ನಡ ನಾಡು, ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದೆ. ಇದನ್ನು ಗ್ರಹಿಸಿಯೇ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನನ್ನನ್ನೇ ಕನ್ನಡ ಕಾವಲು ಸಮಿತಿಗೆ ಅಧ್ಯಕ್ಷನನ್ನಾಗಿಸಿದರು ಎಂದು ಸ್ಮರಿಸಿ, ಗೋವಿಂದು ಅವರ ಬದುಕು ಅವರ ಹೋರಾಟಗಳ ಕಾರಣದಿಂದಾಗಿ ಸಾರ್ಥಕವಾಗಿದೆ ಎಂದರು. 

ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಕ್ಕೂ ಇವತ್ತಿಗೂ ಕನ್ನಡದಲ್ಲೇ ಸಹಿ ಹಾಕ್ತೀನಿ ಎಂದರು. 

ಬೇರೆ ಧರ್ಮ ಮತ್ತು ಇತರೆ ಭಾಷೆಗಳ ಬಗ್ಗೆ ಸಹಿಷ್ಣತೆ ಇರಬೇಕು. ನಮ್ಮ ಭಾಷೆ ಬಗ್ಗೆ ಅಭಿಮಾನ ಹೆಚ್ಚಾಗಿರಬೇಕು. ತಾಯಿ ಭಾಷೆ, ತಾಯಿ ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. 

ಸಾ.ರಾ.ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಕನ್ನಡ ಪರವಾದ ಹೋರಾಟಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಇವರ ಹೋರಾಟದ ಫಲವಾಗಿ ಕನ್ನಡ ಚಿತ್ರರಂಗದ ಅಡಿಪಾಯ ಗಟ್ಟಿ ಆಯಿತು ಎಂದು ಶ್ಲಾಘಿಸಿದರು. 

ಹಿರಿಯ ಸಾಹಿತಿ ಹಂಪನಾ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋ.ರು.ಚನ್ನಬಸಪ್ಪ, ನಾಡೋಜ ಬರಗೂರು ರಾಮಚಂದ್ರಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಹಿರಿಯ ಪತ್ರಕರ್ತರಾದ ವೆಂಕಟೇಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Monday, January 20, 2025

ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷ ಸಂಭ್ರಮ

 ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ), ಬೆಂಗಳೂರು ಅರ್ಪಿಸುವ 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷದ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಗರದ ನಯನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ ಇದು14ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಇದನ್ನು ಕಾರ್ಯಕ್ರಮ ನಿರ್ವಾಹಕರು ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಪ್ರತಿಭಾ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಗೌರವ ಸೂಚಿಸುವ ಕೆಲಸವನ್ನು ಇದು ನಿಮ್ಮ ವಾಹಿನಿ ಕಲಾ ವೇದಿಕೆ ಮಾಡಿಕೊಂಡು ಬರುತ್ತಿದೆ. ಇದು ಹಾಗೇ ಮುಂದುವರಿಯಲಿ, ವೇದಿಕೆಗೆ ನನ್ನ ಸಹಕಾರ ಪ್ರೋತ್ಸಾಹ ಸಹ ಇರುತ್ತದೆ ಎಂದು ಅವರು ಹೇಳಿದರು.

ಬೆಳಿಗ್ಗೆ ಹತ್ತರಿಂದ ರಾತ್ರಿ ಎಂಟರವರೆಗೆ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು. 

ಅನ್ಮೂಲ್ ವಿಜಯ್ ಭಟ್ಕಳ್, ಡಾ. ಮೋನಿಷಾ ನವೀನ್, ಭಜರಂಗಿ ಚೇತನ್ ರಾಜ್, ಚಂದ್ರಶೇಖರ ಜಿ. , ಅಂಕಿತಾ ಜೈರಾಮ್, ಸುಕೃತಿ ಎಂ.ಎಸ್., ಸೆಲ್ವಕುಮಾರ್, ವರ್ಷಿಣಿ, ಲಿಖಿತ್ ಎನ್. ಜಾಲಿ ಜಾಲಿ ಜ್ಯಾಕ್, ಚಂದ್ರಿಕಾ ಬಿ.ವಿ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಹನ್ನೆರಡಕ್ಕೂ ಹೆಚ್ಚು ಭರತನಾಟ್ಯ, ಕೂಚುಪುಡಿ, ಕಥಕ್, ಹಿಪ್ ಹಾಪ್ ಡ್ಯಾನ್ಸ್, ವೆಸ್ಟರ್ನ್ ಡ್ಯಾನ್ಸ್, ಮೊದಲಾದ ವೈವಿದ್ಯಮಯ ಕಾರ್ಯಕ್ರಮ ನಡೆಯಿತು. 


ಇದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 


ಕಾರ್ಯಕ್ರಮದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) ಪ್ರಧಾನ ಕಾರ್ಯದರ್ಶಿ ಆಗಿರುವ ಕಿಶೋರ್ ಕುಮಾರ್ ಕೆ.ಎಸ್. ಉಪಸ್ಥಿತರಿದ್ದರು. 

Sunday, January 19, 2025

ಬಕುಲದ ಕವಿ ಸು.ರಂ. ಎಕ್ಕುಂಡಿ

 ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು  20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಬಾಲ್ಯದಲ್ಲಿ ಬಹಳ ಬಡತನ ಇದ್ದ ಕಾರಣ ಇವರಿಗೆ ವಿದ್ಯೆ ಕಲಿಯಲು ಬಹಳ ಕಷ್ಟವಾಗಿತ್ತು. ತಮ್ಮ ಐದನೇ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ಎಕ್ಕುಂಡಿಯವರು ಸವಣೂರಿನ ಶ್ರೀ ಸತ್ಯಭೋಧ ಸೇವಾಸಂಘ ನಡೆಸುತ್ತಿದ್ದ ವಾಚನಾಲಯದ ಸದಸ್ಯರ ಪುಸ್ತಕಗಳನ್ನು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಹೊತ್ತುಕೊಂಡರು. ಇದರಿಂದ ದೊರೆತ ಅಲ್ಪ ಆದಾಯದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. 


ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು.  ಇವರು ಪ್ರಧಾನವಾಗಿ ಕವಿಯಾಗಿ ಹೆಸರು ಪಡೆದವರು. ಇವರ ಕಾವ್ಯದಲ್ಲಿ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯ ಮೈವೆತ್ತಿ ನಿಂತಿದೆ. ಅಲ್ಲಿಯ ಸಮುದ್ರ, ಮುಸಲಧಾರೆ ಮಳೆ, ಹಕ್ಕಿಪಕ್ಷಿಗಳ ಕಲರವ, ಹಾಲಕ್ಕಿ ಒಕ್ಕಲಿಗರ ಶ್ರಮಜೀವನ, ತೆಂಗಿನಮರಗಳ ಸೊಬಗು ಇವರ ಕವಿತೆಗಳಲ್ಲಿ ಜೀವಂತಿಕೆ ಪಡೆದಿವೆ. 

ವಾದ ವಿವಾದಗಳಿಂದ ಸದಾ ದೂರವೇ ಇರುತ್ತಿದ್ದ ಎಕ್ಕುಂಡಿ ಮಾನವೀಯ ಅಂತಃಕರಣವನ್ನೇ ತಮ್ಮ ಕಾವ್ಯದಲ್ಲೂ ಉಸಿರಾಡಿದವರು. ಹೊಗಳಿಕೆ ತೆಗಳಿಕೆಗಳಿಗೆ ನಿರ್ಲಿಪ್ತ ಭಾವ ಅವರದು. ಇವರ ಕಾವ್ಯಗಳಲ್ಲಿ ಕಥನ ಕವನಗಳ, ಬರಹಗಳಲ್ಲಿ ಮಾಧ್ವ ನಿಲುವು, ಮಾರ್ಕ್ಸ್‌ವಾದಿ ಧೋರಣೆ ಇವೆರಡೂ ಕಂಡುಬರುತ್ತವೆ ಎಂಬ ಮಾತಿದೆ. ಬದುಕಿನ ಆಚರಣೆಗೆ ನಂಬಿದ ಸಿದ್ಧಾಂತಗಳಲ್ಲಿ, ಮನುಕುಲದ ಏಳ್ಗೆಗಾಗಿ ಕ್ರೌರ್ಯವನ್ನು ನಿರಾಕರಿಸುವ ಮಾನವೀಯ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಅವರು ಅನುಸರಿಸಿದ ರೀತಿ ಅದು. ಪುತಿನ ಅವರು ಬಣ್ಣಿಸಿದಂತೆ ಎಕ್ಕುಂಡಿ ಯವರು "ಸಹಜ ಕವಿ". ಅವರ ಕಾವ್ಯದ ಕೇಂದ್ರಬಿಂದು ಮನುಷ್ಯನೇ. ಇವರ ಕಾವ್ಯದಲ್ಲಿ ಜನಸಾಮಾನ್ಯರು ಅತಿ ಸಹಜವಾಗಿ ಮೂಡಿ ಬಂದರು. ಎಕ್ಕುಂಡಿ ಯವರ " ಮಿಥಿಲೆ" ಕವಿತೆ ಎಲ್ಲರ ಮೈಮನಸ್ಸನ್ನು ಆವರಿಸಿಕೊಳ್ಳುವಂತದ್ದು.

ಎಕ್ಕುಂಡಿ ಅವರ ಕಾವ್ಯದ ಕೇಂದ್ರ ಮನುಷ್ಯನೇ ಆಗಿರುವುದಕ್ಕೂ, ಅವರ ಪ್ರಧಾನ ಕಾವ್ಯಪ್ರಕಾರ ಕಥನಕವನವೇ ಆಗಿರುವುದಕ್ಕೂ ಕಾರಣಗಳು ಸ್ಪಷ್ಟವಾಗಿಯೇ ಇವೆ.  ‘ಬೆಳ್ಳಕ್ಕಿಗಳು’ ಸಂಕಲನದ ಕೆಲವು ರಚನೆಗಳು ಕೊಂಚ ಭಿನ್ನವಾದರೂ ಒಟ್ಟಾರೆ ಎಕ್ಕುಂಡಿ ಕಾವ್ಯಪ್ರಪಂಚ ಕಥನಕವನಗಳಿಂದಲೇ ಸಮೃದ್ಧವಾಗಿವೆ.  ‘ಕೊರಗು’ ಎಂಬ  ಕವನದಲ್ಲಿ ಏನಿಲ್ಲ ಎಂದು ಹೇಳುವಾಗ, ‘ಬುತ್ತಿ’ ಕವನದಲ್ಲಿ ಏನಾಗಬೇಕು ಎಂದು ಒತ್ತಿ ಹೇಳುವಾಗ, ‘ಬೆಳ್ಳಕ್ಕಿಗಳು’ ಕವನದಲ್ಲಿ ಭರವಸೆಯ ಹಾಡನ್ನು ಹಾಡುವಾಗ, ‘ಶರಣು’ ಕವನದಲ್ಲಿ ತನ್ಮಯತೆಯಿಂದ ಪ್ರಾರ್ಥಿಸುವಾಗ ಕೂಡ ಮನುಷ್ಯಾವಸ್ಥೆಯ ನೆಲೆಗಳಿಂದ ಎಕ್ಕುಂಡಿ ಕವನಗಳು ಬಿಡುಗಡೆ ಹೊಂದಿವೆ ಅನ್ನಿಸುವುದಿಲ್ಲ.  ಪ್ರಕೃತಿಯನ್ನು ಕುರಿತು ಹಾಡುವಾಗಲೂ ಕವಿ, ಮನುಷ್ಯ ಸಮಾಜವು ಪ್ರಕೃತಿಯಿಂದ ಪಡೆಯಬಹುದಾದ ಜೀವನೋತ್ಸಾಹದ ಕಡೆಗೆ ಒಂದು ಕಣ್ಣಿಟ್ಟಿರುವುದು ಕಾಣುತ್ತದೆ’  (-ಟಿ. ಪಿ. ಅಶೋಕ) 

ಎಕ್ಕುಂಡಿಯವರೇ ಬಣ್ಣಿಸುವ ಹಾಗೆ – ಅವರ ಕಾವ್ಯ –  ‘ಶಬರಿ, ಸುಧಾಮ, ಗಜೇಂದ್ರ, ಕುಬ್ಜೆ ಮತ್ತು ಪುರಂದರದಾಸರ ಭಕ್ತಿ ಮತ್ತು ಪ್ರೇಮಗಳನ್ನು ಕುರಿತು ಬಣ್ಣಿಸುತ್ತದೆ.   ಏಸು, ಪ್ರವಾದಿ ಹಾಗೂ ದೇವರ ದಾಸೀಮಯ್ಯರಂಥ ಆತ್ಮದ ಒಕ್ಕಲಿಗರನ್ನು ಬಣ್ಣಿಸುತ್ತದೆ’.

ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ರಶಿಯನ್ ಕಾದಂಬರಿಗಳು


ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಂದ ಪ್ರಶಸ್ತಿ ಪುರಸ್ಕಾರಗಳು- ಲೆನಿನ್ನರ ನೆನಪಿಗೆ ಎನ್ನುವ ಕೃತಿಗೆ 1970ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ. "ಮತ್ಸ್ಯಗಂಧಿ" ಕವನ ಸಂಕಲನಕ್ಕೆ 1975 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ. ಬೆಳ್ಳಕ್ಕಿಗಳು ಹಸ್ತಪ್ರತಿಗೆ 1982 ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ. ಬಕುಲದ ಹೂವುಗಳು" ಎಂಬ ಕೃತಿಗೆ 1992ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಮಸಣದ ಹೂವು" ಚಿತ್ರಕ್ಕಾಗಿ ಇವರ ಸಾಹಿತ್ಯ ಗೀತೆ ಬಳಸಿಕೊಳ್ಳಲಾಗಿತ್ತು. ಸಾಹಿತ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ ಸು.ರಂ. ಎಕ್ಕುಡಿಯವರು 20-08-1995ರಂದು ನಿಧನರಾದರು. 


ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕವನ ಸಂಕಲನವಾದ ”ಬಕುಲದ ಹೂಗಳು’  ಎಂಬ ಕೃತಿಗೆ 1992  ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.  ಜನರ ನೋವು ನಲಿವುಗಳನ್ನೇ ಕಾವ್ಯವಾಗಿಸಿಕೊಂಡ ಸರಳ ಕವಿ ಸು. ರಂ ಎಕ್ಕುಂಡಿಯವರು. ಇವರ ಕವಿತೆಗಳ ಮೂಲ ಜನಸಾಮಾನ್ಯರೇ ಆದ್ದರಿಂದ ಬಡವರ, ದುಡಿವವರ ಪರ ಬರೆದ ಕವಿ ಎಕ್ಕುಂಡಿಯವರು.

ಪ್ರಸ್ತುತ ಬಕುಲದ ಹೂಗಳು ಕವನ ಸಂಕಲದಲ್ಲಿ 35  ಕವಿತೆಗಳಿವೆ. ನಿರ್ದಿಷ್ಟ ನಾಮರೂಪಧಾರಿಯಾದ ವ್ಯಕ್ತಿಗಳು ಒಂದು ನಿಶ್ಚಿತ ಜೀವನ ಸಂದರ್ಭಕ್ಕೆ ಸ್ಪಂದಿಸುವ ವರ್ಣನಾತ್ಮಕ ಕಥನ ಈ ಸಂಗ್ರಹದುದ್ದಕ್ಕೂ ಕಂಡು ಬರುತ್ತದೆ. 

ಪುರಾಣೀಕರಣವು ಎಕ್ಕುಂಡಿಯವರ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಕೊಳದ ಗೌರಿ, ಇಬ್ಬರು ರೈತರು, ಬಕುಲದ ಹೂಗಳು, ಈ ಸಂಗ್ರಹದ ಮುಖ್ಯ ಕವಿತೆಗಳಾಗಿವೆ. 

Monday, January 13, 2025

'ಹಳದಿ ಚೇಳಿನ ಒಡೆಯ ಸುದರ್ಶನ ದೇಸಾಯಿ

- ರಾಘವೇಂದ್ರ ಅಡಿಗ ಎಚ್ಚೆನ್. 

ಸುದರ್ಶನ ದೇಸಾಯಿರವರು ಕನ್ನಡದ ಪತ್ತೆದಾರಿ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಹೆಸರನ್ನು ಸಂಪಾದಿಸಿದವರು. ಸುದರ್ಶನ ದೇಸಾಯಿ ಅವರು. ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯಲ್ಲಿನ  ರೋಚಕವಾದ,ಕುತೂಹಲಕಾರಿ ಕಥಾ ವಸ್ತುಗಳು ಓದುಗರನ್ನು ಬಹಳವಾಗಿಯೇ ಆಕರ್ಷಿಸಿದ್ದವು. ಕನ್ನಡದ ಪತ್ತೇದಾರಿ ಲೇಖಕರನ್ನು ಒಟ್ಟುಗೂಡಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಪ್ರಥಮ ಪತ್ತೇದಾರಿ ಸಾಹಿತ್ಯ ಸಮ್ಮೇಳನವನ್ನು ಇವರು ನೆರವೇರಿಸಿದ್ದರು. ಇವರ ಹಳದಿ ಚೇಳು,ಕೆಂಪು ಜೇಡ,ಅಗ್ನಿ ಪರ್ವತ, ಕೆರಳಿದ ಸರ್ಪ, ವಿಚಿತ್ರ ಅಪರಾಧಿ ಮುಂತಾದ ಕೃತಿಗಳು ಸಾಕಷ್ಟು ಜನಪ್ರಿಯತೆ ಗಳಿಸಿದವು. ಇವುಗಳಲ್ಲಿ  'ಹಳದಿ ಚೇಳು' ಕಾದಂಬರಿಯಂತೂ  ಅಪಾರ ಜನಪ್ರಿಯತೆ ಗಳಿಸಿತ್ತು. ಹೀಗಾಗಿ ಅವರು  ತಮ್ಮ ನಿವಾಸಕ್ಕೆ ಅವರು 'ಹಳದಿ ಚೇಳು' ಎಂದೇ ಹೆಸರಿಟ್ಟಿದ್ದರು. 




1979ರಲ್ಲಿ ಬರೆದ ಮನೋವೈಜ್ಞಾನಿಕ ಕಾದಂಬರಿ ‘ತಿರುವು’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡನಂತರ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರವರು ಇದೇ ಕಾದಂಬರಿಯನ್ನು ಆಧರಿಸಿ ‘ಮಾನಸ ಸರೋವರ’ ಎಂಬ ಹೆಸರಿನಿಂದ ಚಿತ್ರವನ್ನು ನಿರ್ದೇಶಿಸಿದರು. ಇವರ ಮೊದಲ ಸಾಮಾಜಿಕ ಕಾದಂಬರಿ ‘ಹಾಲಿನ ಕಡಲು ಜೀನಿನ ಒಡಲು’. ನಂತರ ‘ನೀರ ಮೇಲಿನ ಹೆಜ್ಜೆ’, ‘ಸಂಜೆ ಮಲ್ಲಿಗೆ’, ‘ಅಮರದೀಪ, ‘ಸೇವಕ’, ‘ಎಂಟೆದೆ ಬಂಟ’(ಚಲನಚಿತ್ರವಾಗಿದೆ) , ‘ಅಗ್ನಿ ಪರ್ವತ’ ಮುಂತಾದ 20ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ದೇಸಾಯರ ಜನಪ್ರಿಯ ಕಾದಂಬರಿಗಳಲ್ಲಿ ‘ಶರವೇಗದ ಸರದಾರ’ವೂ ಒಂದು. ಕುಮಾರ ಬಂಗಾರಪ್ಪ ಅವರ ನಾಯಕತ್ವದಲ್ಲಿ ಅದು ಚಲನಚಿತ್ರವಾಯಿತು ( ನಟ ಸಿ. ಆರ್. ಸಿಂಹ ಅದರ ನಿರ್ದೇಶಕ.)  ಅವರ ನೂರನೇ ಕೃತಿ  ‘ಸಾಂವಿ'.  ಪತ್ತೇದಾರಿ ಸಾಹಿತ್ಯ ಕುರಿತು ("ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ" ) ನೂರು ವರ್ಷದ ಇತಿಹಾಸ ಬರೆದಿದ್ದಾರೆ. ಇದೊಂದು ಸಂಶೋಧನಾತ್ಮಕ ಆಕರ ಗ್ರಂಥವಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಇವರಿಗೆ "'ಆದರ್ಶ ಶಿಕ್ಷಕ' ಎಂದು ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಅಲ್ಲದೆ ರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಬಂದಿತ್ತು. ಎರಡು ಬಾರಿ ಪತ್ತೇದಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದಇವರ ಮನೆ 'ಹಳದಿ ಚೇಳು' ವಿನ ಸುತ್ತಮುತ್ತಲಿನ ಪ್ರದೇಶಕ್ಕೆ ಧಾರವಾಡ ನಗರಪಾಲಿಕೆಯು "ಸುದರ್ಶನ ದೇಸಾಯಿ ಕಾಲನಿ" ಎಂದು ನಾಮಕರಣ ಮಾಡಿದೆ.


ಇಂತಹಾ ಲೇಖಕರ ಹಳದಿ ಚೇಳು ಕೃತಿ ಇಂದಿಗೂ ಬಹು ವಿಶಿಷ್ಟವಾಗಿ ಓದಿಸಿಕೊಳ್ಳುವ ಪುಸ್ತಕವೆಂದರೆ ತಪ್ಪಲ್ಲ. ಈ ಮೊದಲೇ ಹೇಳಿದಂತೆ ಲೇಖಕರಿಗೆ ಬಹಳ ಪ್ರಸಿದ್ಧಿ ತಂದು ಕೊಟ್ಟ ಪತ್ತೇದಾರಿ ಕೃತಿಯಿದು. ಇದನ್ನು ಜೇಮ್ಸ್ ಬಾಂಡ್ ಶೈಲಿಯ ಚಲನಚಿತ್ರವಾಗಿ ಸಹ ನಿರ್ಮಾಣ ಮಾಡುವಷ್ಟು ಸಾಹಸ, ಪ್ರಣಯ, ರೋಚಕತೆ, ದೇಶಭಕ್ತಿ, ಭಾವುಕತೆ‌ ಹಾಗೂ ರೋಮಾಂಚಕ ಅಂಶಗಳನ್ನು ಒಳಗೊಂಡಿದೆ. ಅತ್ಯಂತ ರೋಚಕತೆ ಜೊತೆಗೆ ರಕ್ತಪಾತದಿಂದ ಕೂಡಿದ ಕಥಾವಸ್ತುವಿದು. ಓದುಗರು ಊಹೆ ಮಾಡಲೂ ಸಾಧ್ಯವಿರದ ತಿರುವುಗಳಿವೆ. ಒಂದಷ್ಟು ಕಾಮಭರಿತ ಸನ್ನಿವೇಶಗಳನ್ನು ತುರುಕಲಾಗಿದೆ ಎನ್ನಿಸಿತು. ಹೇಮಂತನ ಪ್ರಳಯ ರುದ್ರನಂತಹ ವರ್ತನೆ, ಶತ್ರುಗಳನ್ನು ಶಿಕ್ಷಿಸಲು ಅವನು ಬಳಸುವ ವಿವಿಧ ಕ್ರೂರ ವಿಧಾನಗಳು, ಗುಪ್ತಚರ ಏಜೆಂಟರು ಬಳಸುವ ಹಲವು ಬಗೆಯ ಸಲಕರಣೆಗಳು, ಮೃತ್ಯು ಕಣ್ಣೆದುರು ತಾಂಡವವಾಡುತ್ತಿದ್ದರೂ ಅಂಜದ ಆ ನಡೆ, ಅಲ್ಲದೇ ಪ್ರತೀ ಬಾರಿಯೂ ಸಾವನ್ನು ಗೆದ್ದು ಬಂದು ಶತ್ರುಗಳಿಂದಲೇ ಪ್ರಶಂಸೆಗೆ ಒಳಗಾಗುವ ಆ ಅಸೀಮ ಧೈರ್ಯ ಹಾಗೂ ದೇಶಭಕ್ತಿಯ ಕಿಚ್ಚು... ಎಲ್ಲವೂ ಓದುಗರನ್ನು ಬಿಟ್ಟೂ ಬಿಡದೇ ಓದಿಸಿಕೊಂಡು ಹೋಗುತ್ತದೆ. 

ಇನ್ನು ಇವರದೇ ಕಾದಂಬರಿ ಆಧರಿಸಿ ಅನೇಕ ಚಲನಚಿತ್ರಗಳೂ ಬಂದಿವೆ. ಅವುಗಳಲ್ಲಿ ಕೆಲವು ಮೇಲೆ ಹೆಸರಿಸಲಾಗಿದೆ. ಮತ್ತು ಈ ಕೆಳಗೆ ಅವುಗಳ ಸಂಪೂರ್ಣ ಪಟ್ಟಿ ಇದೆ- 

ಶ್ರೀನಾಥ್, ಪದ್ಮಾವಾಸಂತಿ, ರಾಮಕೃಷ್ಣ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಮಾನಸ ಸರೋವರ"

ಕುಮಾರ್ ಗೋವಿಂದ್, ಸಂಗೀತಾ ಅಭಿನಯದ  ಗುರುಪ್ರಸಾದ್ ನಿರ್ದೇಶನದ ಮೃತ್ಯು ಬಂಧನ

ಕುಮಾರ್ ಬಂಗಾರಪ್ಪ, ಯಮುನಾ ಅಭಿನಯದ ಎಚ್.ಎನ್. ಶಂಕರ್ ನಿರ್ದೇಶನದ ಕೆರಳಿದ ಸರ್ಪ
ಅಂಬರೀಶ್, ರಜನಿ, ವಜ್ರಮುನಿ ಅಭಿನಯದ ಡಿ. ರಾಜೇಂದ್ರ ಬಾಬು ನಿರ್ದೇಶನದ ಎಂಟೆದೆ ಬಂಟ
ಕುಮಾರ್ ಬಂಗಾರಪ್ಪ, ಅಶ್ವಿನಿ ಭವೆ ಅಭಿನಯದ ಕೆ.ವಿ. ಜಯರಾಂ ನಿರ್ದೇಶನದ ಶರವೇಗದ ಸರದಾರ
ಅನಂತ್ ನಾಗ್, ಗೀತಾ ಅಭಿನಯದ ಕೆ.ವಿ. ಜಯರಾಂ ನಿರ್ದೇಶನದ ಅರುಣ ರಾಗ