ಪಳನಿ (Palani)
ತಮಿಳುನಾಡಿನ ಪ್ರಸಿದ್ದ ಸುಬ್ರಹ್ಮಣ್ಯ (ಮುರುಗನ್) ಕ್ಷೇತ್ರ, ಪಳನಿ. ಬೆಂಗಳೂರಿನಿಂದ 400 ಕಿ.ಮೀ. ದೂರದಲ್ಲಿರುವ ಇದು ದಿಂಡಿಗಲ್ ಜಿಲ್ಲೆಗೆ ಸೇರಿದೆ. ಪಶ್ಚಿಮ ಘಟ್ಟದ 2068 ಚ,ಕಿ,ಮೀ. ಪ್ರದೇಶವನು ವ್ಯಾಪಿಸಿರುವ ಪಳನಿ ಬೆಟ್ಟ ಇಲ್ಲಿನ ಸುಂದರ್ ನಿಸರ್ಗ ಧಾಮದಿಂದಲೂ ಹೆಸರಾಗಿದೆ. ವಾರ್ಷಿಕ ಅಂದಾಜು 70 ಲಕ್ಷ ಮಂದಿ ಭೇಟಿ ನೀಡುವ ಈ ಕ್ಷೇತ್ರವು ತಮಿಳು ನಾಡಿನಲ್ಲಿರುವ ಅತ್ಯಂತ ಶ್ರೀಮಂತ ದೇವಾಲಯವೆನ್ನುವ ಖ್ಯಾತಿ ಹೊಂದಿದೆ.
ಹದಿನೆಂಟು ಸಿದ್ದರುಗಳಲ್ಲಿ ಓರ್ವರಾದ ಬೋಗರ್ ಎನ್ನುವವರು ಸ್ಥಾಪಿಸಿದ ದಂಡಾಯುಧ ಪಾಣಿ ರೂಪದ ಸುಂದರ ಮೂರ್ತಿ ಇಲ್ಲಿದೆ.ಇಡುಂಬನ್ ದೇವಾಲಯ, ತಿರು ಅವಿನಾನುಕುಡಿ ದೇವಾಲಯ, ಪೆರಿಯ ನಾಯಕಿ ಅಮ್ಮನ್ ದೇವಾಲಯ ಇವು ಮುರುಗನ್ ಸ್ವಾಮಿ ದೇವಾಲಯದ ಹತ್ತಿರವಿರುವ ಇನ್ನೂ ಕೆಲವು ದೇವಾಲಯಗಳು.
***
ಅದೊಮ್ಮೆ ಕೈಲಾಸದಲ್ಲಿ ಷಣ್ಮುಖ ಹಾಗೂ ಗಣಪತಿಗಾಗಿ ಶಿವ ಪಾರ್ವತಿಯರು ಒಂದು ಸ್ಪರ್ಧೆ ಏರ್ಪಡಿಸುತ್ತಾರೆ. ಅದೆಂದರೆ ಯಾರು ಅತ್ಯಂತ ಶೀಘ್ರವಾಗಿ ಭೂಮಿ - ಭೂಲೋಕವನ್ನು ಸುತ್ತಿ ಬರುತ್ತಾರೆಯೋ ಅವರಿಗೆ ವಿಶೇಷ ಬಹುಮಾನ ಎಂದು ಹೇಳುತ್ತಾರೆ. ಅದರಂತೆ ಸ್ವಾಮಿ ಸುಬ್ರಹ್ಮಣ್ಯನು ತನ್ನ ಸೋದರ ಗಣಪತಿಯತ್ತ ತಿರುಗಿ "ನೋಡು ನಾನು ನವಿಲನ್ನೇರಿ ಕೆಲವೇ ಕ್ಷಣಗಳಲ್ಲಿ ಭೂ ಪ್ರದಕ್ಷಿಣೆ ಮಾಡಿ ಬರುವೆನು. ನೀನು ನಿನ್ನ ವಾಹನ ಇಲಿಯನ್ನೇರಿ ಪ್ರದಕ್ಷಿಣೆ ಹಾಕಲು ದಿನಗಟ್ಟಲೆ ಹಿಡಿಯುತ್ತದೆ!" ಎಂದು ಹಾಸ್ಯ ಮಾಡುತ್ತಾನೆ, ಮತ್ತು ತನ್ನ ವಾಹನ ನವಿಲನ್ನು ಏರಿ ಭೂ ಪ್ರದಕ್ಷಿಣೆಗೆ ಹೊರಡುತ್ತಾನೆ. ಇದರಿಂದ ಮನನೊಂದ ಗಣೇಶನು ಕೆಲವು ಕ್ಷಣ ಯೋಚಿಸುತ್ತಾ ಅಲ್ಲೇ ನಿಲ್ಲುತ್ತಾನೆ. ಆಗ ಪಾರ್ವತಿಯು "ಮಗೂ ಅಣ್ಣನಾಗಲೇ ಹೊರಟನಲ್ಲ, ನೀನು ಭೂ ಪ್ರದಕ್ಷಿಣೆಗೆ ಹೊರಡುವುದಿಲ್ಲವೆ?" ಕೇಳುತ್ತಾಳೆ.
ಕೆಲವು ಸಮಯದ ಬಳಿಕ ಪ್ರದಕ್ಷಿಣೆ ಮುಗಿಸಿ ಬಂದ ಷಣ್ಮುಖನು ನೋಡಿದಾಗ ಅದಾಗಲೇ ಗಣೇಶನು ಮೋದಕವನ್ನು ತಿನ್ನುತ್ತಿರುತ್ತಾನೆ. ಇದರಿಂದ ಕುಪಿತನಾದ ಆತ ತಾಯಿಯ ಬಳಿ ಬಂದು ವಿಚಾರಿಸಲು ಪಾರ್ವತಿಯು ಅವನಿಗೆ ಗಣೇಶ ವಿಜಯಿಯಾದ ವಿಷಯ ತಿಳಿಸುತ್ತಾಳೆ. ಆದರೆ ಷಣ್ಮುಖನಿಗೆ ಇದರಿಂದ ತೃಪ್ತಿಯಾಗುವುದಿಲ್ಲ. ಬದಲಾಗಿ ಅವನು ಕೋಪಗೊಂಡು ಮತ್ತೆ ಭೂಲೋಕಕ್ಕೆ ಪಯಣಿಸುತ್ತಾನೆ, ಇಂದಿನ ಪಳನಿ ಕ್ಷೇತ್ರವಿರುವ ಬೆಟ್ಟದಲ್ಲಿ ನಿಂತು ಬಿಡುತ್ತಾನೆ.
***
ಒಮ್ಮೆ ಅಗಸ್ತ್ಯ ಮಹರ್ಷಿಗಳು ತಮ್ಮ ಆಶ್ರಮ ಶಿಷ್ಯನಾದ ಇಡುಂಬನ್ ಗೆ ಉತ್ತರದಲ್ಲಿದ್ದ ಶಿವಗಿರಿ ಹಾಗೂ ಶಕ್ತಿಗಿರಿ ಎನ್ನುವ ಪರ್ವತಗಳನ್ನು ದಕ್ಷಿಣದತ್ತ ತರಲು ಆದೇಶಿಸುತ್ತಾರೆ. ಗುರುವಿನ ಮಾತನ್ನು ಪಾಲಿಸುವುದಾಗಿ ಇಡುಂಬನ್ ಪರ್ವತಗಳನ್ನು ಕವಡಿಯಲ್ಲಿರಿಸಿ ಹೆಗಲ ಮೇಲೆ ಹೊತ್ತು ತರುತ್ತಾ ಇರುವನು. ಪಳನಿಯ ಬಳಿ ಬಂದಾಗ ಅವನಿಗೆ ಆಯಾಸವೆನಿಸಿ ಹೆಗಲ ಮೇಲಿನಿಂದ ಕಾವಡಿಯನ್ನು ಕೆಳಗಿರಿಸುತ್ತಾನೆ. ದೂರದಲ್ಲಿ ನಿಂತಿದ್ದ ಷಣ್ಮುಖ ಸ್ವಾಮಿ (ಮುರುಗನ್) ಇದನ್ನು ನೋಡುತ್ತಾನೆ. ಅದಾಗ ಅವನು ಇಡುಂಬನ್ ನ ಗುರು ಭಕ್ತಿಯನ್ನು ಪರೀಕ್ಷಿಸಲು ಮುಂದಾಗುತ್ತಾನೆ.

ಕ್ರಮೇಣ ಇವನೇ ಷಣ್ಮುಖ ಸ್ವಾಮಿ, ಮುರುಗ ದೇವ ಎನ್ನುವುದು ಇಡುಂಬನ್ ಗೆ ತಿಳಿಯುತ್ತದೆ. ಇಡುಂಬನ್ ಆ ಬಾಲಕನಲ್ಲಿ ಕ್ಷಮೆ ಯಾಚಿಸುತ್ತಾನೆ. ಇಡುಂಬನ್ ಗುರು ಭಕ್ತಿಯನ್ನು ಮೆಚ್ಚಿದ್ದ ಮುರುಗ ದೇವನು ಅವನನ್ನೇ ತನ್ನ ಸೇವಕನನ್ನಾಗಿ ಮಾಡಿಕೊಳ್ಳುತ್ತಾನೆ. ಅಂದಿನಿಂದ ಮುರುಗ ದೇವರಿಗೆ ಕಾವಡಿ ಹೆಗಲಮೇಲೆ ಇರಿಸಿಕೊಂಡು ಹೋಗಿ ಹರಕೆ ಸಲ್ಲಿಸುವುದು ಸಂಪ್ರದಾಯವಾಗಿ ಬಂದಿದೆ. ಇಂದೂ ಸಹ ಇಡುಂಬನ್ ದೇವಾಲಯವನ್ನು ನಾವು ಪಳನಿ ಕ್ಷೇತ್ರದಲ್ಲಿ ಕಾಣುತ್ತೇವೆ.