ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ
ನಂಜುಂಡೇಶ್ವರ ದೇವಾಲಯದ ಕಾರಣ ಇಂದು ಮೈಸೂರು ಜಿಲ್ಲೆಯ ನಂಜನಗೂಡು ವಿಶ್ವ ಪ್ರಸಿದ್ಧವಾಗಿದೆ. ಅದೇ ಊರಿನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸಹ ಅಷ್ಟೇ ಮಹತ್ವವನ್ನು ಹೊಂದಿದೆ ಎನ್ನುವುದು ನಿಮಗೆ ಗೊತ್ತೆ?
ರಾಘವೇಂದ್ರ ಸ್ವಾಮಿಗಳು ಸದಾ ಭಕ್ತರ ಕಷ್ಟ - ಕಾರ್ಪಣ್ಯಗಳನ್ನು ದೂರ ಮಾಡುತ್ತಲೇ ಕೋಟ್ಯಾಂತರ ಭಕ್ತರನ್ನು ಹೊಂದಿದ್ದಾರೆ. ರಾಘವೇಂದ್ರ ಸ್ವಾಮಿಗಳಿಗೆ ಮಂತ್ರಾಲಯದ ಮೂಲ ವೃಂದಾವನವಲ್ಲದೆ, ಜಗತ್ತಿನೆಲ್ಲೆಡೆ ಬೃಂದಾವನಗಳು, ಮಠಗಳು ಇದೆ. ಆದರೆ ಯಾವುದೇ ಸ್ಥಳದಲ್ಲಾಗಲಿ ಅಥವಾ ಯಾವುದೇ ದೇವಸ್ಥಾನಗಳಲ್ಲಾಗಲಿ ಅಥವಾ ಮಠದಲ್ಲಾಗಲಿ ರಾಘವೇಂದ್ರ ಸ್ವಾಮಿಗಳನ್ನು ವಿಗ್ರಹದ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೀರಾ? ಹಾಗೆ ವಿಗ್ರಹದ ರೂಪದಲ್ಲಿರುವ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ, ಪುನಸ್ಕಾರಗಳನ್ನು ನಡೆಸಿಕೊಂಡು ಬರುತ್ತಿರುವ ಜಗತ್ತಿನ ಏಕೈಕ ಸ್ಥಳ ಅಥವಾ ಕ್ಷೇತ್ರ ಎಂದರೆ ಅದುವೇ ನಂಜನಗೂಡಿನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠ.
ಇದು ಯಾರೋ ಕೆತ್ತಿದ ವಿಗ್ರಹವಲ್ಲ ಬದಲಾಗಿ, ಸ್ವತಃ ರಾಘವೇಂದ್ರ ಸ್ವಾಮಿಗಳೇ ತಮ್ಮ ಇಚ್ಛೆಯ ಮೇರೆಗೆ ಕಾವೇರಿ ನದಿಯಲ್ಲಿ ಉದ್ಭವ ಮಾಡಿಸಿದ ದೈವಿಕ ಶಕ್ತಿಯುಳ್ಳ ವಿಗ್ರಹ. ಹಾಗಾಗಿ . ಮೈಸೂರಿನ ನಂಜನಗೂಡಿನಲ್ಲಿರುವ ಈ ರಾಘವೇಂದ್ರ ಸ್ವಾಮಿ ಸನ್ನಿಧಾನವನ್ನು ಪ್ರತೀಕ ಸನ್ನಿಧಾನವೆಂದು ಕರೆಯಲಾಗುತ್ತದೆ.
ಸುಜ್ಞಾನೇಂದ್ರ ತೀರ್ಥರು 1836 ರಿಂದ 1861 ರವರೆಗೆ ಈ ಸನ್ನಿಧಾನದ ಮಠಾಧೀಶರಾಗಿದ್ದರು. ಇವರು ತಮ್ಮ ಕೊನೆಯ ದಿನಗಳಲ್ಲಿ, ತನ್ನ ಅಂತಿಮ ದಿನಗಳು ದೂರವಿಲ್ಲ ಎಂದು ತಿಳಿದು ಮಂತ್ರಾಲಯಕ್ಕೆ ತೆರಳಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳತೊಡಗಿದ್ದರು. ಆ ಸಮಯದಲ್ಲಿ ಸುಜ್ಞಾನೇಂದ್ರ ಸ್ವಾಮಿಗಳ ಕನಸಿನಲ್ಲಿ ರಾಘವೇಂದ್ರ ಸ್ವಾಮಿಗಳು ಕಾಣಿಸಿಕೊಂಡು ನೀವು ಮಂತ್ರಾಲಯಕ್ಕೆ ಬರುವ ಅಗತ್ಯವಿಲ್ಲ. ನಾನೇ ಸ್ವತಃ ನೀವಿದ್ದಲ್ಲಿಗೆ ಬಂದು ನೆಲೆಸುತ್ತೇನೆ ಇದಕ್ಕಾಗಿ, ನಾನು ಮೂರ್ತಿಯ ರೂಪದಲ್ಲಿ ನಿಮಗೆ ಕಾಣಿಸಿಕೊಳ್ಳುತ್ತೇನೆ ಆ ಮೂರ್ತಿಯನ್ನು ತಂದು ನಂಜನಗೂಡಿನಲ್ಲಿ ಪ್ರತಿಷ್ಠಾಪಿಸಬೇಕೆಂದು ಹೇಳುತ್ತಾರೆ. ಕೇವಲ ಸ್ಯಜ್ಞಾನೇಂದ್ರ ತೀರ್ಥರ ಕನಸಿನಲ್ಲಿ ಮಾತ್ರವಲ್ಲದೇ, ಇನ್ನು ಮೂರು ಜನರ ಕನಸಿನಲ್ಲಿ ಸಹ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ. ಅವರೆಂದರೆ ಒಬ್ಬ ಅಗಸ - ಕಾವೇರಿ ನದಿಯ ತಟದಲ್ಲಿ ಬಟ್ಟೆಯನ್ನು ಒಗೆಯುವ ಒಬ್ಬ ವ್ಯಕ್ತಿ. ಅವನು ಬಟ್ಟೆಯನ್ನು ಒಗೆಯುವ ಕಲ್ಲಿಂದ ಓಕಾರ ಕೇಳಿಸುತ್ತದೆ. ಇದರಿಂದ ಗಾಬರಿಯಾದ ಅವನು ಕಲ್ಲಿನ ಮೇಲೆ ಬಟ್ಟೆ ಒಗೆಯುವುದನ್ನೇ ನಿಲ್ಲಿಸುತ್ತಾನೆ. ಆಗ ಸ್ವಾಮಿಗಳು ಅವನ ಕನಸಿನಲ್ಲಿ ಬಂದು ಆ ಕಲ್ಲಿನಲ್ಲಿ ನನ್ನ ವಿಗ್ರಹವಿದೆ. ಆ ಕಲ್ಲನ್ನು ಕೇಳಿಕೊಂಡು ಒಬ್ಬ ವ್ಯಕ್ತಿ ಬರುತ್ತಾನೆ. ಆಗ ಕಲ್ಲನ್ನು ಆತನಿಗೆ ನೀಡೆಂದು ಹೇಳುತ್ತಾರೆ.
ಇದೇ ಸಮಯದಲ್ಲಿ ಮತ್ತೊಬ್ಬ ಬ್ರಾಹ್ಮಣನ ಕನಸಿನಲ್ಲಿ ಸಹ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ. ಬ್ರಾಹ್ಮಣನ ಕನಸಿನಲ್ಲಿ ಕಾಣಿಸಿಕೊಂಡು ಆ ಕಲ್ಲಿನ ಬಗ್ಗೆ ಹೇಳಿ ಆ ಕಲ್ಲನ್ನು ನೀನು ಸುಜ್ಞಾನೇಂದ್ರ ತೀರ್ಥರಿಗೆ ತಲುಪಿಸಬೇಕೆಂದು ಹೇಳುತ್ತಾರೆ. ಅದರಂತೆ ಬ್ರಾಹ್ಮಣ ಆ ಅಗಸನ ಬಳಿ ಬಂದು ಕಲ್ಲನ್ನು ಪಡೆದು ಅದನ್ನು ನಂಜನಗೂಡಿನಲ್ಲಿರುವ ಸುಜ್ಞಾನೇಂದ್ರ ತೀರ್ಥರಿಗೆ ತಲುಪಿಸುತ್ತಾನೆ. ಅದಕ್ಕೆ ಮುನ್ನ ಅಗಸ ಒಮ್ಮೆ ಆಕಲ್ಲನ್ನು ಪರೀಕ್ಷಿಸಲು ಎನ್ನುವಂತೆ ಒಮ್ಮೆ ತಿರುಗಿಸಿ ನೋಡಲು ಅಲ್ಲಿ ರಾಯರ ಮೂರ್ತಿ ಇರುವುದು ಗೋಚರಿಸುತ್ತದೆ.
ಇನ್ನು ಮೈಸೂರಿನ ಅಂದಿನ ಒಡೆಯರ್ ಕನಸಿನಲ್ಲಿ ಸಹ ಸ್ವಾಮಿಗಳು ಕಾಣಿಸಿಕೊಳ್ಳುತ್ತಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕನಸಿನಲ್ಲಿ ಕಾಣಿಸಿಕೊಂಡು ಸುಜ್ಞಾನೇಂದ್ರ ತೀರ್ಥರಿಗೆ ತನ್ನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ಧನ ಸಹಾಯ ಮಾಡುವಂತೆ ಆಜ್ಞೆ ನೀಡುತ್ತಾರೆ. ಅದರಂತೆಯೇ ಮುಮ್ಮಡಿ ಕೃಷ್ಣರಾಜ ಒಡೆಯರು ಸುಜ್ಞಾನೇಂದ್ರ ತೀರ್ಥರಿಗೆ ಸಹಾಯ ಮಾಡುವ ಮೂಲಕ ನಂಜನಗೂಡಿನಲ್ಲಿ ರಾಯರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಉತ್ತರಾಧನೆಯ ದಿನವೇ ಸುಜ್ಞಾನೇಂದ್ರ ತೀರ್ಥರು ರಾಯರ ಪಾದವನ್ನು ಸೇರುತ್ತಾರೆ.
ಅಂದಿನಿಂದ ಇಂದಿನವರೆಗೆ ಮೈಸೂರಿನ ನಂಜನಗೂಡಿನಲ್ಲಿ ಈ ರಾಯರ ವಿಗ್ರಹಕ್ಕೆ ವಿಶೇಷ ಪೂಜೆ ಆರಾಧನೆಗಳು ನಡೆಯುತ್ತಿದ್ದು ದೇಶ ವಿದೇಶಗಳ ಅನೇಕ ಭಕ್ತರು ನಿತ್ಯವೂ ಇಲ್ಲಿಗೆ ಭೇಟಿ ಕೊಟ್ಟು ರಾಯರ ಆಶೀರ್ವಾದ ಪಡೆಯುತ್ತಿದ್ದಾರೆ.