Saturday, March 26, 2016

ಸಂವಹನ ನ್ಯೂನತೆಯುಳ್ಳವರ ಬಾಳಿಗೆ ಬೆಳಕಾದ ಮಹಿಳೆ ಶಾಂತಾ ರಾಧಾಕೃಷ್ಣ

ಇತರರೊಡನೆ ಸಂವಹನ ನಡೆಸಲು ಪ್ರತಿಯೊಬ್ಬರಿಗೂ ಭಾಷೆಯ ಅಗತ್ಯವಿರುತ್ತದೆ. ಜಗತ್ತಿನಲ್ಲಿ ಸಾವಿರ ಸಂಖ್ಯೆಯಲ್ಲಿ ಭಾಷೆಗಳಿದ್ದು ನೂರಾರು ರೀತಿಯಲ್ಲಿ ಸಂವಹನ ಅಡೆಯುತ್ತದೆ. ಆದರೆ ಕೆಲವೊಮ್ಮೆ ಕೆಲವರಿಗೆ ಈ ಸಂವಹನವೇ ಸವಾಲಾಗುತ್ತದೆ. ಶಬ್ದಗಳೆಂದರೇನು? ಭಾಷೆ ಎಂದರೇನು? ಮಾತು ಎಂದರೇನೆಂದೇ ಅರಿಯದ ಹಲವಾರು ಜನರು ನಮ್ಮ ನನಡುವೆ ಇದ್ದಾರೆ. ಕಿವಿ ಕೇಳಿಸದ, ಮಾತನಾಡಲೂ ಬಾರದ ಇಂತಹಾ ಜನರು  ಇತರರೊಡನೆ ಬೆರೆತು ಬಾಳುವುದು ಬಲು ಕಷ್ಟಕರ.


ಇಂತಹಾ ಸ೦ಪಕ೯ ನ್ಯೂನತೆವುಳ್ಳವರನ್ನು ಸಲಹುವುದು, ಅವರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವುದಕ್ಕೆ ಶ್ರಮಿಸುತ್ತಿರುವ ಸಂಸ್ಥೆಯೊಂದು ಬೆಂಗಳೂರಿನಲ್ಲಿದೆ. ಅದುವೇ "ಎಸ್.ಜಿ.ಎಸ್. ವಾಗ್ದೇವಿ ಸ೦ಪಕ೯ ನ್ಯೂನತೆಯುಳ್ಳವರ ಪುನಃಶ್ಚೇತನ ಕೇ೦ದ್ರ"  
ಇದರ ಸಾರಥ್ಯ ವಹಿಸಿದವರು ಅತ್ಯುತ್ತಮ ಶಿಕ್ಷಕಿ ರಾಜ್ಯ ಪ್ರಶಸ್ತಿ ವಿಜೇತೆ  ಡಾ. ಶಾಂತಾ ರಾಧಾಕೃಷ್ಣ

ಶಾಂತಾ ರಾಧಾಕೃಷ್ಣ
ಮೂಲತಃ ಮೈಸೂರಿನವರಾದ ಶಾಂತಾ ರಾಧಾಕೃಷ್ಣ  ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ವಿಶ್ವ ವಿದ್ಯಾನಿಲಯ ದಲ್ಲಿ ವಾಕ್ ಶ್ರವಣ ವಿಷಯದಲ್ಲಿ ಎಂ.ಎಸ್ಸಿ. ಪದವಿ ಪಡೆದುಕೊಂಡರು. ಕೊಯಮತ್ತೂರಿನಲ್ಲಿ ಸ್ಪೀಚ್ ಥೆರಪಿಸ್ಟ್ ಆಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಇವರು, 1973 ರಿಂದಲೂ ವಾಕ್ ಶ್ರವಣ ಪೀಡಿತ ಮಕ್ಕಳ ಪುನಶ್ಚೇತನಕ್ಕೆ ಮೀಸಲಾಗಿರಿಸಿರುವ ಶಾಂತಾ 1985-86 ರಲ್ಲಿ ಅಮೆರಿಕಾದ ಓಕ್ಲಹಾಮಾ ವಿಶ್ವವಿದ್ಯಾನಿಲಯದಲ್ಲಿ ಸ್ಪೀಚ್ ಲ್ಯಾಂಗ್ವೇಜ್ ನಲ್ಲಿ ಎಂ.ಎಸ್ಸಿ. ತರಬೇತಿಯನ್ನು ಮುಗಿಸಿದರು. ಅಮೆರಿಕನ್ ಸ್ಪೀಚ್ ಲ್ಯಾಂಗ್ವೇಜ್ ಅಸೋಸಿಏಷನ್ ಇಂದ ಕ್ಲಿನಿಕಲ್ ಕಾಂಪಿಟೆನ್ಸ್ ಸರ್ಟಿಫಿಕೆಟ್ ಪಡೆದಿರುವ ಇವರು 2010 ರಲ್ಲಿ ಎಸ್ ವ್ಯಾಸಾ ದಿಂದ ಪಿ.ಎಚ್.ಡಿ. ಪದವಿ ಗಳಿಸಿದ್ದಾರೆ.
ಅಮೆರಿಕಾಗೆ ತೆರಳುವ ಮೊದಲು ಶಾಂತಾ ಅವರು ನಂತರದಲ್ಲಿ ದೆಹಲಿಯ ಬಲವಂತ ರಾಯ್ ವಿದ್ಯಾ ಭವನದಲ್ಲಿ ಸಂಶೋಧನಾ ತರಬೇತುದಾರರಾಗಿ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಇದಲ್ಲದೆ 1983 ರಲ್ಲಿ ಬೆಂಗಳೂರಿನಲ್ಲಿ ವಾಕ್ ಶ್ರವಣ ದೋಷವುಳ್ಳ ಮಕ್ಕಳಿಗಾಗಿ ಸಂಯುಕ್ತ ಸಂಸ್ಥೆಯೊಂದನ್ನು ಸ್ಥಾಪನೆ ಮಾಡಿದ್ದರು.. ಹೀಗೆ ಸಂಸ್ಥೆಯೊಂದನ್ನು ಸ್ಥಾಪಿಸಿದ ತರುವಾಯ ಇಂತಹಾ ಮಕ್ಕಳ ತರಬೇತಿಗೆಗತ್ಯವಾದ ಪರಿಕರಗಳ ಕೊರತೆ ಇವರನ್ನು ಕಾಡಿತ್ತು. ಆಗ ತಾವೇ ಖುದ್ದಾಗಿ ಮಕ್ಕಳಿಗೆ ಓದಲೂ, ಹೇಳಿ ಕೊಡಲೂ ಅನುಕೂಲಕರ ಆದ ಪಠ್ಯ ಕ್ರಮವನ್ನು ಅವರೇ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ತಯಾರಿಸಿದರು.
ಕಿವುಡು ಮಕ್ಕಳ ಶಿಕ್ಷಣ ಅನುಕೂಲಕ್ಕಾಗಿ ವಿಶೇಷ ಪುಸ್ತಕ "ವರ್ಕ್ ಬುಕ್ ಫಾರ್ ದಿ ಹಿಯರಿಂಗ್ ಇಂಪೇರ್ಡ್ ಚಿಲ್ಡ್ರನ್" ನ್ನು ರಚಿಸಿದ ಶಾಂತಾ ಅವರು ಮುಂದೆ "ಕಿವುಡು ಮಕ್ಕಳ ಶಿಕ್ಷಕರ ಆಕರ ಗ್ರಂಥ", "ಗ್ಲಾಸರಿ ಆಫ್ ಟರ್ಮ್ಸ್ ವಿತ್ ರೆಫರೆನ್ಸ್ ಟು ಹಿಯರಿಂಗ್ ಇಂಪೆರ್ಡ್", "ದತ್ತಾ ಮೆಥದಾಲಜಿ ಫಾರ್ ಎನ್ ಹ್ಯಾನ್ಸಿಂಗ್ ಲರ್ನಿಂಗ್ - ಗೈಡ್ ಲೈನ್ಸ್ ಫಾರ್ ಟೀಚರ್ಸ್ ಆಂಡ್ ಪೇರೆಂಟ್ಸ್" ನ್ನು (ಕನ್ನಡ ಹಾಗೂ ಇಂಗ್ಲಿಷ್), "ಶ್ರವಣ ನ್ಯೂನತೆಯುಳ್ಳವರಿಗೆ ಸಂಕೇತ ಮಾತು" ಎನ್ನುವ ಪುಸ್ತಕಗಳನ್ನು   ಬರೆದು ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲದೆ ದೂರದರ್ಶನ ಹಾಗೂ ರೇಡಿಯೋ ಕಾರ್ಯಕ್ರಮಗಳ ಮೂಲಕ ಕಿವುಡು ಹಾಗೂ ಸಂವಹನ ನ್ಯೂನತೆಯ ಕುರಿತಂತೆ ಜನಸಾಮಾನ್ಯರಿಗೂ ತಿಳಿಯುವಂತೆ ಸಾಕಷ್ಟು ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ವಾಕ್ ಶ್ರವಣ ತರಬೇತುದಾರರಾಗಿ ಭಾರ್ತ ಹಾಗೂ ವಿದೇಶಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಒಳ್ಳೆಯ ವಾಗ್ಮಿಯಾಗಿರುವ ಶಾಂತಾ ಅವರು ತಮ್ಮ ಕಾಲೇಜು ದಿನಗಳಿಂದಲೂ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ಯೋಗಾಭ್ಯಾಸದಲ್ಲಿಯೂ ಪ್ರಾವೀಣ್ಯತೆ ಗಳಿಸಿರುವ ಇವರು ಆಟಿಸಂ ನಿಂದ ಬಳಲುವ ಮಕ್ಕಳಿಗೆ ಯೋಗದಿಂದ ಸುಧಾರಣೆ ಹೊಂದುವುದು ಸಾಧ್ಯವಿದೆ ಎಂದು ಕಂಡುಕೊಂಡರು. ಮತ್ತು ಇದೇ ವಿಚಾರವಾಗಿ ಸಂಶೋಧನೆ ನಡೆಸಿ "ಸಂಯುಕ್ತ ಯೋಗ ಥೆರಪಿ ಹಾಗೂ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ಸ್" ಎನ್ನುವ ಸಂಶೋಧನಾ ಗ್ರಂಥವನ್ನು ವಿವೇಕಾನಂದ ಯೋಗ ಅನುದಾನ ಸಂಸ್ಥೆಗೆ ಸಲ್ಲಿಸಿದ್ದಾರೆ.


ಕಿವುಡು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಶಾಂತಾ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಸಕಾರವು 2007 ರಲ್ಲಿ ಇವರಿಗೆ "ಅತ್ಯುತ್ತಮ ಶಿಕ್ಷಕಿ" ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಂವಹನಾ ನ್ಯೂನತೆಯುಳ್ಳವರ ಪುನಶ್ಚೇತನ ಕಾರ್ಯಕ್ರಮದಲ್ಲಿ ಶಾಂತಾ ಆವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ 2013 ರಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿ ಫಲಕ ನೀಡಿ ಗೌರವಿಸಿದ್ದಾರೆ.

ಎಸ್.ಜಿ.ಎಸ್. ವಾಗ್ದೇವಿ ಸ೦ಪಕ೯ ನ್ಯೂನತೆಯುಳ್ಳವರ ಪುನಃಶ್ಚೇತನ ಕೇ೦ದ್ರ
ವಾಗ್ದೇವಿ ಸಂವಹನಾ ನ್ಯೂನತೆಯುಳ್ಳವರ ಪುನಶ್ಚೇತನ ಕೇಂದ್ರ ಪ್ರಾರಂಭವಾದದ್ದು 1996, ಜನವರಿ 1 ರಲ್ಲಿ. ಕೇವಲ ಎಂಟು ಮಕ್ಕಳೊಂದಿಗೆ ಶಾಂತಾ ಅವರ ಮನೆಯ ಆವರಣದಲ್ಲಿಯೇ ಈ ಪುನಶ್ಚೇತನ ಕೇಂದ್ರ ಪ್ರಾರಂಭಗೊಂಡಿತು. ಕೆಲ ತಿಂಗಳ ನಂತರ  ಗಿರಿನಗರದ ಮೂರನೇ ಹಂತದಲ್ಲಿ ಸಂಸ್ಥೆಯ ಕೇಂದ್ರ ಸ್ಥಾಪನೆಗೊಂಡಿತು.
ದಿನ ದಿನಕ್ಕೆ ಹೆಚ್ಚುತ್ತಾ ಬಂದ ಮಕ್ಕಳ ಸಂಖ್ಯೆಯಿಂದ ತಮಗೆ ಇನ್ನು ಸಾಧ್ಯವಿಲ್ಲವೆಂದೆನಿಸಲು 2001 ರಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು, ಅವಧೂತ ದತ್ತ ಪೀಠ ಇವರ ಆಶ್ರಯಕ್ಕೆ ಸಂಸ್ಥೆಯನ್ನು ಹಸ್ತಾಂತರಿಸಲಾಗಿ ವಾಗ್ದೇವಿ ಸಂಸ್ಥೆಯು ಎಸ್.ಜಿ.ಎಸ್. ವಾಗ್ದೇವಿ ಎನ್ನುವ ಹೆಸರಿನಲ್ಲಿ ಕರೆಯಲ್ಪಟ್ಟಿತು. ಇದೀಗ ಇಪ್ಪತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸಂಸ್ಥೆಯಲ್ಲಿ ಇದುವರೆಗೆ ಕಲಿತವರಲ್ಲಿ ಹಲವಾರು ಮಂದಿ ಬೇರೆ ಬೇರೆ ಕೆಲಸದಲ್ಲಿದ್ದಾರೆ. ಓರ್ವ ವಿದ್ಯಾರ್ಥಿ ಶಿಕ್ಷಕ ವೃತ್ತಿಯಲ್ಲಿದ್ದಾರೆ ಎನ್ನುವುದು ವಿಶೇಷ.
ಸಂಸ್ಥೆಯ ಇಪ್ಪತ್ತನೇ ವರ್ಷಾಚರಣೆಯ ಪ್ರಯುಕ್ತ ಈ ವರ್ಷ ಜನವರಿ ಪ್ರಾರಂಭದಲ್ಲಿ ಬೆಂಗಳೂರಿನ ಸಂಸ್ಥೆಯ ಆವರಣದಲ್ಲಿಯೇ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮ್ಮೇಳನದಲ್ಲಿ ವಿವಿಧ ರಾಜ್ಯದ, ರಾಷ್ಟ್ರದ ತಜ್ಞರೊ೦ದಿಗೆ ಸ೦ವಾದ  ನಡೆದಿತ್ತು.
“ಸಂವಹನ ತೊಂದರೆಯುಳ್ಳವರನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿಗಳನ್ನು ನೀಡುವುದಾಗಿದೆ. ಉಳಿದ ಸಾಮಾನ್ಯ ಮಕ್ಕಳಂತೆಯೇ ಇವರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಅವರು ಸ್ವತಂತ್ರವಾಗಿ ಬದುಕುವಂತೆ ಮಾಡುವುದೇ  ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. ” ಎನ್ನುವ ಶಾಂತಾ “ಮಕ್ಕಳಲ್ಲಿನ ಕಿವುಡುತನವನ್ನು ಆದಷ್ಟು ಬೇಗನೆ ಗುರುತಿಸಿದ್ದರೆ ಒಳ್ಳೆಯದು. ಮಕ್ಕಳು ಮಾತು ಕಲಿಯುವ ಅವಧಿ ಎಂದರೆ ಮೂರು ತಿಂಗಳಿನಿಂದ ಎರಡು ವರ್ಷಗಳ ನಡುವೆ ಅವರಿಗೆ ಸರಿಯಾದ ಶ್ರವಣೋಪಕರಣ ತೊಡಿಸಿ ಮಾತನಾಡಲು, ಕೇಳಲು ಸೂಕ್ತವಾದ ತರಬೇತಿಯನ್ನು ಕೊಡಬೇಕಾಗುತ್ತದೆ.” ಎನ್ನುತ್ತಾರೆ.
ಈ ಸಂಸ್ಥೆಯಲ್ಲಿ ಮಕ್ಕಳಿಗಷ್ಟೇ ಅಲ್ಲದೆ ಇಂತಹಾ ಮಕ್ಕಳ ತಾಯಂದಿರಿಗೂ ತರಬೇತಿಯನ್ನು ನೀಡಲಾಗುತ್ತದೆ. ಎರಡು ವರ್ಷಗಳ ಒಳಗಿನ ಮಗುವನ್ನು ತಾಯಿ ಹೇಗೆಲ್ಲಾ ಮಾತನಾಡಿಸಬೇಕು? ಮಗುವಿನೊಡನೆ ಹೇಗೆ ವರ್ತಿಸಬೇಕು ಎನ್ನುವುದನ್ನು ಹೇಳಿಕೊಡಲಾಗುತ್ತದೆ. ಈ ತರಬೇತಿಗಾಗಿ ರಾಜ್ಯ, ಹೊರ ರಾಜ್ಯಗಳಿಂದ ತಾಯಂದಿರು ಇಲ್ಲಿಗೆ ಬರುತ್ತಾರೆ. ಶಾಂತಾ ಅವರು ಹೇಳುವಂತೆ "ತಾಯಿಯೇ ಮೊದಲ ಗುರುವಾಗಿರುವುದರಿಂದ ಇಂತಹಾ ನ್ಯೂನತೆಯುಳ್ಳ ಮಕ್ಕಳನ್ನು ತಾಯಿ ಸರಿಯಾದ ಬಗೆಯಲ್ಲಿ ತರಬೇತುಗೊಳಿಸಿದ್ದಾದರೆ ಮಕ್ಕಳು ಉತ್ತಮ ಬೆಳವಣಿಗೆ ಹೊಂದುತ್ತಾರೆ."
ಸಂಸ್ಥೆಯಲ್ಲಿ ಕೇವಲ ಕಿವುಡು-ಮೂಕ ಮಕ್ಕಳಿಗೆ ಮಾತ್ರವೇ ತರಬೇತಿಯನ್ನು ನೀಡುವುದಲ್ಲ, ಬದಲಿಗೆ ಬುದ್ದಿಶಕ್ತಿಯಲ್ಲಿ ಸ್ವಲ್ಖಿಂದೆ ಬಿದ್ದಿರುವ -ಇಂಟ್ಉವಕ್ಚುವಲ್ ಡಿಸ್ ಆರ್ಡರ್ ಎನ್ನಬಹುದಾದ ಮಕ್ಕಳಿಗೆ, "ಆಟಿಸಂ" ನಿಂದ ಬಳಲುತ್ತಿರುವವರಿಗೆ, ಅತಿ ಚಾಂಚಲ್ಯತೆ (ಎಡಿಎಚ್‍ಡಿ.) ಹೊಂದಿರುವವರಿಗೆ ಹಾಗೂ ಕಲಿಕೆಯಲ್ಲಿ ಹಿಂದೆ ಇರುವವರಿಗೆ ಸಹ ಸಕಾಲದಲ್ಲಿ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ. ಇನ್ನು. ತೊದಲುವಿಕೆಯ ಸಮಸ್ಯೆ, ಉಚ್ಚಾರಣಾ ದೋಷ ಹೊಂದಿರುವ ಮಕ್ಕಳಿಗೆ ಸಹ ಇಲ್ಲಿ ತರಬೇತಿ ನೀಡಿ ತೊಂದರೆಗಳನ್ನು ದೂರಾಗಿಸುತ್ತಾರೆ.  ಇಷ್ಟೇ ಅಲ್ಲದೆ ಯಾವ ಯಾವ ಕಾರಣಗಳಿಂದಲೋ ವಾಕ್ ತೊಂದರೆಗಳಿಗೆ ತುತ್ತಾಗುವ ಯಾವ ವಯೋಮಾನದವರಿಗೂ ಈ ಸಂಸ್ಥೆಯಲ್ಲಿ ಚಿಕಿತ್ಸೆ ಹಾಗೂ ತರಬೇತಿ ನೀಡಲಾಗುತ್ತದೆ.
ಅಂತೆಯೇ ಚಿಕ್ಕ ಮಕ್ಕಳಿಂದ ದೊಡ್ದವರವರೆವಿಗೂ ನಾನಾ ಜನರಲ್ಲಿ ನಾನಾ ಪ್ರಕಾರದ ಶ್ರವಣ ತೊಂದರೆಗಳಿರುತ್ತವೆ. ಅವುಗಳನ್ನು ಗುರುತಿಸಿ ಸೂಕ್ತ ಶ್ರವಣೋಪಕರಣ ನೀಡುವುದು ಹಾಗೂ ಸೂಕ್ತ ಶ್ರವಣ ತರಬೇತಿಯನ್ನು ಕೊಡುವ ಕೆಲಸವನ್ನು ಈ ಕೇಂದ್ರವು ಮಾಡುತ್ತದೆ.
ಶಾಂತಾ ಅವರು ಹೇಳುವಂತೆ ವಾಗ್ದೇವಿ ಸಂಸ್ಥೆಗೆ  ಸೇರುವುದಕ್ಕೆ ಯಾವ ವಯೋಮಿತಿ ಇರುವುದಿಲ್ಲ, ಹಾಗೆಯೇ ವರ್ಷದ ಯಾವ ತಿಂಗಳಲ್ಲಿಯೂ ಸಹ ಸೇರಿಕೊಳ್ಳಬಹುದು. ಇಲ್ಲಿ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿವರೆಗೂ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ. ಇಷ್ಟರವರೆಗೂ ಸುಮಾರು ಮೂರರಿಂದ ನಾಲ್ಕು ಬ್ಫ್ಯಾಚ್ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ. ಇಲ್ಲಿಗೆ ಸೇರಲು ಬಂದವರಲ್ಲಿ ಕಲಿಕೆಗೆ ಬೇಕಾದ ಅಗತ್ಯ ಗುಣಗಳು ಇವೆಯೇ ಎನ್ನುವುದನ್ನು ಮೊದಲು ಗುರುತಿಸಲಾಗುತ್ತದೆ. ಬಳಿಕವಷ್ಟೇ ಕೇಂದ್ರಕ್ಕೆ ಸೇರ್ಪಡೆ ಮಾಡಿಕೊಳ್ಲಲಾಗುವುದು.
ವಾಕ್‍ಶ್ರವಣ ಚಿಕಿತ್ಸಾಲಯವನ್ನೂ ಸಹ ಇದೇ ಸಂಸ್ಥೆಯವರು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಯಾರು ಬೇಕಾದರೂ ಮಾತು ಹಾಗೂ ಕೇಳಿಸಿಕೊಳ್ಳಲು ತೊ೦ದರೆ ಇರುವವರು ಚಿಕಿತ್ಸೆ ಪಡೆಯಲೂಬಹುದು.
ಒಟ್ಟಾರೆಯಾಗಿ ಪಾಲಕರಲ್ಲಿ ಜಾಗೃತಿ ಮೂಡಬೇಕಿದೆ. ಕಿವುಡು ಇಲ್ಲವೇ ಸಂವಹನ ನ್ಯೂನತೆಯುಳ್ಳ ಮಗುವನ್ನು ಹೇಗೆ ನೋಡಿಕೊಳ್ಳಬೇಕೆನ್ನುವ ಅರಿವು ಮೂಡಬೇಕಿದೆ. ಅಮೆರಿಕಾದಂತಹಾ ದೇಶಗಳಲಿರುವಂತೆ ಇಲ್ಲಿಯೂ ಚಿಕ್ಕ ಮಕ್ಕಳಿರುವಾಗಲೇ ಅವರಿಗಿರುವ ಕಿವುಡುತನವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವಂತಾಗಬೇಕು. ಅದಕ್ಕಾಗಿ ವಿದೇಶಗಳಲ್ಲಿರುವ ವಿಶೇಷ ಚಿಕಿತ್ಸೆಗಳು ನಮ್ಮಲ್ಲಿಯೂ ಲಭ್ಯವಾಗಬೇಕಿದೆ. ಇನ್ನು ಈ ಕ್ಷೇತ್ರದಲ್ಲಿ ಕೆಲಸ ಮಾದಲು ಮಾನವ ಸಂಪನ್ಮೂಲದ ಅಗತ್ಯವಿದ್ದು ಇದಕ್ಕೆ ಅವಕಾಶ ಒದಗಿಸಬೇಕು. ಇಂತಹಾ ಮಕ್ಕಳಿಗೆ ತರಬೇತಿಗೊಳಿಸಲು ಸೂಕ್ತ ತರಬೇತುದಾರರು ಬೇಕಾಗುತ್ತಾರೆ. ಇಷ್ಟೆಲ್ಲವೂ ಆದಾಗ ಮಾತ್ರ ಶಾಂತಾ ಅವರಂತಹಾ ಮಹಿಳೆಯರ ಪ್ರಯತ್ನಕ್ಕೆ ಒಂದು ಸಾರ್ಥಕತೆ ದೊರಕುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವಿಳಾಸ
ಎಸ್.ಜಿ.ಎಸ್. ವಾಗ್ದೇವಿ ಸ೦ಪಕ೯ ನ್ಯೂನತೆಯುಳ್ಳವರ ಪುನಃಶ್ಚೇತನ ಕೇ೦ದ್ರ
3 ನೇ "ಸಿ" ಮುಖ್ಯ ರಸ್ತೆ, 7 ನೇ ಅಡ್ಡ ರಸ್ತೆ,
ಗಿರಿನಗರ 2 ನೇ ಹಂತ, ಬೆಂಗಳೂರು – 560085
080-26727141, 65593266


(ಈ ನನ್ನ ಲೇಖನವು ಗೃಹಶೋಭಾ ಮಾರ್ಚ್ 2016

ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. )

Monday, March 21, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 69

ಮುತ್ತತ್ತಿ (Mutthatthi)

ಬೆಂಗಳೂರಿನಿಂದ 100 ಕಿ.ಮೀ. ದೂರದ ರಮ್ಯ ಕಾವೇರಿ ತಟ ‘ಮಾತೆತ್ತಿದರೆ ಮುತ್ತತ್ತಿ’ ಎಂಬ ಗಾದೆಯನ್ನು ಮಹಾನಗರದಲ್ಲಿ ಚಲಾವಣೆಗೆ ತಂದಿದೆ. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. 










ಆಂಜನೇಯಸ್ವಾಮಿ ಮೂರ್ತಿಯು ಮುತ್ತತ್ತಿಯಲ್ಲಿ ಭೂಮಿಯಿಂದ ಮೂಡಿದ್ದು ಸದರಿ ಜಾಗದಲ್ಲಿ ಮೂಡಿರುವ ಮೂರ್ತಿಯನ್ನು ಭೂಮಿಯಲ್ಲೇ ಹೂತು ಹನುಮಂತನ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಆ ಜಾಗದಲ್ಲಿ ದೇವಸ್ಥಾನವನ್ನು 1986-87ನೇ ಸಾಲಿನಲ್ಲಿ ಸಾರ್ವಜನಿಕ/ ಭಕ್ತಾಧಿಗಳ ವಂತಿಕೆಯಿಂದ ಹಣ ಕ್ರೂಢೀಕರಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸದರಿ ಜಾಗದಲ್ಲಿ ನಿರ್ಮಿಸಿರುವ ಹನುಮಂತನು ಸಾರ್ವಜನಿಕ/ಭಕ್ತಾಧಿಗಳಿಗೆ ಅಭಯ ಹಸ್ತವನ್ನು ನೀಡುತ್ತಾ ನೆಲೆಸಿದ್ದಾನೆ.

***

ಶ್ರೀ ರಾಮ, ಲಕ್ಷ್ಮಣ ಸೀತಾಮಾತೆಯರು ಕಾಡಿಗೆ ವನವಾಸಕ್ಕೆ ಬಂದಾಗ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮರಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನು ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಮೂಗುತಿ ಕಾಣಿಸಿದಾಗ ಹನುಮಂತನು ಮೂಗುತಿಯನ್ನು ಸೀತಾಮಾತೆಗೆ ನೀಡಿದನು, ಅವನು ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗವು ಇಂದಿಗೂ ತಿರುಗಣೆ ಮಡುವೆಂದು ಪ್ರಸಿದ್ದಿಯಾಗಿದೆ. ಹನುಮಂತನು ಸೀತಾಮಾತೆಗೆ ಮೂಗುತಿಯನ್ನು ನೀಡಿದ್ದಕ್ಕೆ ಮುತ್ತೆತ್ತರಾಯನೆಂದು ಹೆಸರು ಬಂದಿರುತ್ತದೆ. ಈಗ ಆ ಸ್ಥಳವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.

Saturday, March 05, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 68

ಅಮರನಾಥ್ (Amaranath)

ಅಮರನಾಥ್ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ. ಸುಮಾರು 5000 ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ. 3888 ಮೀಟರ್  (12,756 ಅಡಿಗಳು) ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು 141 ಕಿ.ಮಿ. ದೂರದಲ್ಲಿದೆ.
ಅಮರನಾಥ್ ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ.  ಅಮರ್ನಾಥ್ ಗುಹೆಯ ಉದ್ದ, ಎತ್ತರ ಹಾಗು ಅಗಲವು ಕ್ರಮವಾಗಿ 60ಅಡಿ, 15ಅಡಿ ಮತ್ತು 30ಅಡಿ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶಿವ ದರ್ಶನ ಪಡೆದು ಪುನಿತರಾಗಲು ಆಗಮಿಸುತ್ತಾರೆ.



ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ. ಪಹಲ್ಗಾಮ್ ಜಮ್ಮುವಿನಿಂದ 315 ಕಿ.ಮೀ ದೂರದಲ್ಲಿದೆ. ಇನ್ನೂ ಶ್ರೀನಗರದಿಂದ ಪಹಲ್ಗಾಮ್ 96 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಪಹಲ್ಗಾಮ್ ನಿಂದ ಯಾತ್ರೆ ಆರಂಭಗೊಳ್ಳುತ್ತದೆ. ಮೊದಲಿಗೆ ಪಹಲ್ಗಾಮ್ ನಿಂದ ಚಂದನ್ವಾರಿಗೆ ತೆರಳಬೇಕು. ಇದು 16 ಕಿ.ಮೀ ಗಳಷ್ಟು ದೂರವಿದೆ. ಮಿನಿ ಬಸ್ಸುಗಳು ದೊರೆಯುತ್ತವೆ. ಇಲ್ಲಿ ಸರ್ಕಾರೇತರ ಸಂಸ್ಥೆಗಳಿಂದ ಸೇವೆಯ ರೂಪದಲ್ಲಿ ಉಚಿತವಾಗಿ ಫಲಾಹಾರಗಳು ದೊರೆಯುತ್ತವೆ.  ವಾತಾವರಣದಲ್ಲಿ ವಿಪರೀತವಾಗಿ ಚಳಿ ಹಾಗೂ ಮುಂದೆ ಸಾಗುತ್ತ ಆಮ್ಲಜನಕದ ಕೊಂಚ ಅಭಾವವಿರುವುದರಿಂದಸಾಕಷ್ಟು ಜಾಗರೂಕತೆ ವಹಿಸಬೇಕು.ಅಗತ್ಯ ವಸ್ತುಗಳನ್ನು ತೆಗೆದುಕೊಂಡು ತೆರಳಿದರೆ ಅವಶ್ಯಕ.
ಇನ್ನು ಒಂದೇ ದಿನದಲ್ಲಿ ಯಾತ್ರೆ ಪೂರ್ಣ ಮಾಡಬಯಸವವರಿಗಾಗಿ ಇಲ್ಲಿ ಹೆಲಿಕಾಪ್ಟರ್ ಸೇವೆ ಕಲ್ಪಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಗುಹೆಯ ಸಮೀಪ ತೆರಳಿ ಅಲ್ಲಿಂದ ಸುಮಾರು 4ರಿಂದ 6   ನಕಿ.ಮೀ ನಡೆದು ಅಮರನಾಥನ ದರ್ಶನ ಪಡೆಯಬಹುದು.

***

ದೇವಿ ಪಾರ್ವತಿಗೆ ಜೀವನ ಮತ್ತು ಅಮರತ್ವದ ರಹಸ್ಯ ಭೋದಿಸಿದ್ದ ಪವಿತ್ರ ಸ್ಥಳವೇ ಅಮರನಾಥ ಗುಹೆ.  ಶಿವನ ಕೊರಳಿನಲ್ಲಿದ್ದ ರುಂಡ ಮಾಲೆಯನ್ನು ಕಂಡ ಪಾರ್ವತಿ ಒಮ್ಮೆ ಆ ಬಗ್ಗೆ ಪ್ರಶ್ನಿಸುತ್ತಾಳೆ. ಅದು ಹೇಗೆ ಬಂತು ಮತ್ತು ಅದರ ಐತಿಹ್ಯವೇನು ಎಂದು. ಇದಕ್ಕೆ ಉತ್ತರಿಸುವ ಶಿವ ತಾನು   ಹುಟ್ಟಿದಾಗನಿಂದಲೇ ತನ್ನ ಕೊರಳಲ್ಲಿ ಈ ರುಂಡ ಮಾಲೆ ಇದೆ. ನೀನು ಹುಟ್ಟಿದಾಗ ಇದಕ್ಕೆ ಮತ್ತೊಂದು ಮಣಿ ಸೇರಿಸಿದೆ ಎಂದು ಹೇಳುತ್ತಾನೆ. ಆಗ ದೇವಿ ಪಾರ್ವತಿ ಹುಟ್ಟು ಸಾವಿನ ಕುರಿತು   ಪ್ರಶ್ನಿಸುತ್ತಾಳೆ. ಎಲ್ಲರೂ ಸಾಯುತ್ತಾರೆ. ಆದರೆ ನೀವು ಮಾತ್ರ ಅಮರರಾಗಿದ್ದೀರಿ. ಅದು ಹೇಗೆ ಎಂದು ಪ್ರಶ್ನಿಸುತ್ತಾಳೆ. ಆರಂಭದಲ್ಲಿ ಶಿವ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತಾನೆ. ಆದರೆ ಪಟ್ಟು   ಬಿಡದ ದೇವಿ ಪಾರ್ವತಿ ಪದೇ ಪದೇ ಈ ಬಗ್ಗೆ ಪ್ರಶ್ನಿಸುತ್ತಿರುತ್ತಾಳೆ. ಅಂತಿಮವಾಗಿ ಶಿವ ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಲು ಸಿದ್ಧನಾಗುತ್ತಾನೆ. ಇದೇ ಅಮರಕಥಾ ಎಂದು   ಹೇಳಲಾಗುತ್ತದೆ.

ಪಾರ್ವತಿಗೆ ಅಮರತ್ವದ ರಹಸ್ಯ ಹೇಳಲು ಸಿದ್ಧನಾದ ಶಿವ ಇದಕ್ಕಾಗಿ ಸೂಕ್ತ ಸ್ಥಳದ ಶೋಧ ನಡೆಸುತ್ತಾನೆ. ತನ್ನ ವಾಹನ ನಂದಿಯೊಂದಿಗೆ ಪಾರ್ವತಿ ಮತ್ತು ಗಣೇಶನೊಂದಿಗೆ ಪ್ರಯಾಣ   ಆರಂಭಿಸುವ ಶಿವ ಅಮರನಾಥ ಗುಹೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಬಳಿಕ ನಂದಿಯನ್ನು ಬೈಲ್ ಗಾಮ್ (ಇಂದಿನ ಪೆಹಲ್ಗಾಮ್) ಬಳಿ ಬಿಟ್ಟು, ಚಂದ್ರನನ್ನು ಚಂದನ್ ವಾರಿಯಲ್ಲಿ ಬಿಡುತ್ತಾನೆ.

ಬಳಿಕ ತನ್ನ ಪುತ್ರ ಗಣೇಶನನ್ನು ಮಹಾಗುಣ ಪರ್ವತ (ಮಹಾಗಣೇಶ ಪರ್ವತ)ದಲ್ಲಿ ಬಿಟ್ಟು, ತನ್ನ ಕೊರಳಲ್ಲಿರುವ ಹಾವುಗಳನ್ನು ಶೇಷನಾಗ ಸಾಗರದಲ್ಲಿ ಬಿಡುತ್ತಾನೆ. ಬಳಿಕ ಪಂಚಭೂತ (ಭೂಮಿ,   ನೀರು, ಗಾಳಿ, ಬೆಂಕಿ ಮತ್ತು ಆಕಾಶ)ಗಳನ್ನು ಪಂಜ್ ತಾರಿಣಿಯಲ್ಲಿ ಬಿಡುತ್ತಾನೆ. ಇವು ಶಿವನ ತ್ಯಾಗದ ಪ್ರತೀಕ ಎಂದು ಹೇಳಲಾಗುತ್ತದೆ. ಬಳಿಕ ತಾಂಡವ ನೃತ್ಯದಲ್ಲಿ ಪಾಲ್ಗೊಳ್ಳುವ ದಂಪತಿಗಳು   ಅಮರನಾಥ ಗುಹೆಯನ್ನು ಸೇರುತ್ತಾರೆ. ಆಗ ಶಿವ ತನ್ನ ರುದ್ರ ಎಂಬ ಕಾಲಾಗ್ನಿಯನ್ನು ಕರೆದು ತಾನು ಹೇಳುವ ರಹಸ್ಯವನ್ನು ಯಾವ ಜೀವಸಂಕುವೂ ಕೇಳಬಾರದು. ಹೀಗಾಗಿ ಗುಹೆಯ ಸುತ್ತಮುತ್ತ   ಇರುವ ಎಲ್ಲ ಜೀವ ಸಂಕುಲಗಳನ್ನು ನಾಶ ಮಾಡು ಎಂದು ಆದೇಶಿಸುತ್ತಾನೆ.

ಶಿವನ ಆಣತಿಯಂತೆ ರುದ್ರ ಎಂಬ ಕಾಲಾಗ್ನಿ ಗುಹೆಯ ಸುತ್ತಮುತ್ತ ಇರುವ ಎಲ್ಲ ಜೀವ ಸಂಕುಲವನ್ನು   ನಾಶಪಡಿಸುತ್ತದೆ. ಇದಾದ ಬಳಿಕ ಶಿವ ಪಾರ್ವತಿಗೆ ಜೀವನ ಮತ್ತು ಅಮರತ್ವವನ್ನು ಭೋಧಿಸುತ್ತಾನೆ. ಆದರೆ ಈ ನಡುವೆ ಕಾಲಾಗ್ನಿಯ ಜ್ವಾಲೆಗೆ ಸಿಲುಕದೆ ಗುಹೆಯಲ್ಲಿ ಒಂದು ಪಾರಿವಾಳದ   ಮೊಟ್ಟೆ ಇರುತ್ತದೆ. ಭೋದನೆ ಬಳಿಕ ಇದನ್ನು ಶಿವ ಗಮನಿಸುತ್ತಾನೆಯಾದರೂ, ಅದನ್ನು ನಾಶಪಡಿಸುವುದಿಲ್ಲ. ಬದಲಿಗೆ ಅವುಗಳನ್ನು ರಕ್ಷಿಸುತ್ತಾನೆ

ಇಂದಿಗೂ ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಿಕರು ಪವಿತ್ರ ಗುಹೆಯಲ್ಲಿ ಈ ಎರಡು ಪಾರಿವಾಳಗಳನ್ನು ನೋಡಬಹುದು. ಗುಹೆಯ ಸುತ್ತಮುತ್ತ ಇರುವ ಹತ್ತಾರು ಕಿ.ಮೀ ವ್ಯಾಪ್ತಿಯಲ್ಲಿ   ಯಾವುದೇ ಈ ಪಾರಿವಾಳಗಳಿಗೆ ಆಹಾರ ನೀಡಬಲ್ಲ ಯಾವುದೇ ಮೂಲಗಳಿಲ್ಲ ಎನ್ನುವುದು ವಿಶೇಷ. 


Thursday, February 18, 2016

ಓ ಎನ್ ವಿ ಕುರುಪ್ - ಒಂದು ನುಡಿ ನಮನ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಖ್ಯಾತ ಮಲಯಾಳಿ ಕವಿ, ಸಾಹಿತಿ ಮತ್ತು ಪರಿಸರವಾದಿ ಒ.ಎನ್‌.ವಿ ಕುರುಪ್‌ (84) ಅವರು 13-2-2016ರಂದು ನಿಧನ ಹೊಂದಿದರು. ಈ ಸಮಯದಲ್ಲಿ ಕನ್ನಡದ ಜ್ಞಾನಪೀಠ ಪುರಸ್ಕೃತ ಸಾಹಿತಿ ದಿ. ಯು.ಆರ್. ಅನಂತಮೂರ್ತಿಯವರು ಕುರುಪ್ ಮತ್ತು ಮಲಯಾಳಂ ಸಾಹಿತ್ಯದ ಕುರಿತು ಮಂಡಿಸಿದ್ದ ವಿಚಾರಗಳನ್ನು ನಾನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
***

ಜನಪ್ರಿಯರೂ, ಜನಪರರೂ ಆದ ಕವಿ ಓ.ಎನ್.ವಿ. ಕುರುಪ್

ನಾನು ಕೊಟ್ಟಾಯಂನಲ್ಲಿ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಆಗಿದ್ದಾಗ ನನಗೆ ಬಹಳ ಹತ್ತಿರವಾದವರಲ್ಲಿ ಓ.ಎನ್.ವಿ. ಕುರುಪ್‌ರು ಒಬ್ಬರು. ನಾನು ಅವರನ್ನು ಹುಡುಕಿಕೊಂಡು ಹೋದದ್ದುಂಟು. ಅವರು ಹಲವು ಬಾರಿ ನಮ್ಮ ವಿಶ್ವವಿದ್ಯಾಲಯಕ್ಕೆ ಬಂದದ್ದುಂಟು. ಹಲವು ಸೆಮಿನಾರ್‌ಗಳಲ್ಲಿ ಮತ್ತು ವಿದ್ವತ್ ಸಭೆಗಳಲ್ಲಿ ಅವರನ್ನು ನೋಡಿದ್ದೇನೆ. ಈ ಕಾಲದ ಮಲಯಾಳಿ ಸಾಹಿತ್ಯ ವಲಯದಲ್ಲಿ ಎಲ್ಲರೂ ಇಷ್ಟಪಡುವ ಕವಿಯೆಂದರೆ ಓ.ಎನ್.ವಿ.ಯವರು.
ನನಗೆ ಅವರಲ್ಲಿ ಬಹಳ ಇಷ್ಟವಾದ ಪದ್ಯವೊಂದಿದೆ. ಆಶ್ಚರ್ಯವೆಂದರೆ ಅಡಿಗರ ಭೂಮಿಗೀತದಂತೆಯೇ ಭೂಮಿಯ ಬಗ್ಗೆ ಬರೆದ ದೀರ್ಘವಾದ ಪದ್ಯ ಇದು. ಈ ಎರಡು ಪದ್ಯಗಳ ನಡುವಿನ ವ್ಯತ್ಯಾಸವೂ ನನಗೆ ಕುರುಪ್‌ರ ಕಾವ್ಯಮಾರ್ಗವನ್ನು ಅರಿಯಲು ಸಹಾಯಕವಾಗಿತ್ತು. ಅಡಿಗರಲ್ಲಿ ಭೂತಾಯಿಯ ನಿಜವಾದ ಮಕ್ಕಳು ಹುಲಿ, ಚಿರತೆ, ಆನೆ ಕೋಡಗ ಕತ್ತೆ ಇಂತಹ ಪ್ರಾಣಿಗಳು. ಡಿ.ಎಚ್. ಲಾರೆನ್ಸ್ ಅವನದೊಂದು ಸ್ನೇಕ್ ಎನ್ನುವ ಪದ್ಯದಲ್ಲಿ ಹಾವನ್ನು ‘ಲಾರ್ಡ್ ಆಫ್ ಲೈಫ್’ (Lord of Life) ಎನ್ನುತ್ತಾರೆ. ಮನುಷ್ಯ Lord of Life ಅಲ್ಲ. ಲಾರೆನ್ಸ್‌ನಿಂದ ಪ್ರೇರಿತರಾದ ಅಡಿಗರು ಮನುಷ್ಯ-ಭೂಮಿ ಮತ್ತು ಆಕಾಶದ ಸಂಗಮದಿಂದಾಗಿ ಎಡಬಿಡಂಗಿಯಾಗಿ ಕಾಣಿಸುತ್ತಾನೆ ಎಂದು ಭೂಮಿಗೀತದಲ್ಲಿ ನಿರೂಪಿಸುತ್ತಾರೆ. ಮಲಯಾಳಂ ಓದಲು ಬಾರದ ನನ್ನ ಸುಮಾರು ಎರಡು ದಶಕಗಳ ಹಿಂದಿನ ನೆನಪಿನಿಂದ ಹೇಳುವುದಾದರೆ ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಓ.ಎನ್.ವಿ.ಯವರಿಗೆ ಈ ಭೂಮಿ ತಾಯಿಯಿದ್ದಂತೆ. ಅಡಿಗರಿಗೆ ಮಲತಾಯಿಯಿದ್ದಂತೆ. ಈ ದೃಷ್ಟಿಯಿಂದ ಓ.ಎನ್.ವಿ.ಯವರು ನಮ್ಮ ನವೋದಯದ ಜೀವನವನ್ನು ಕೀರ್ತಿಸುವ ಕವಿಗಳ ಸಾಲಿನವರು.
ಮಲಯಾಳದಲ್ಲಿ ಎಲ್ಲ ಬಗೆಯ ಕಾವ್ಯವೂ ಇದೆ. ನವೋದಯ, ಬಂಡಾಯ, ನವ್ಯ- ಎಲ್ಲವೂ ಪ್ರಸ್ತುತವಾಗಿಯೇ ಉಳಿದಿವೆ. ಗತಿಸಿದ ಅಯ್ಯಪ್ಪ ಫಣಿಕ್ಕರ್‌ರಲ್ಲಿ ಹಾಗೂ ಗತಿಸಿದ ಕಡಮನಾಟ್ ರಾಮಕೃಷ್ಣನ್ ಕವಿಯಲ್ಲಿ ಎರಡು ಬಗೆಯಾಗಿ ಕಾವ್ಯ ಹರಿಯುತ್ತದೆ. ಅಯ್ಯಪ್ಪ ಫಣಿಕ್ಕರ್‌ರಲ್ಲಿ ಮತ್ತು ಸಚ್ಚಿದಾನಂದನ್ ಅವರಲ್ಲಿ ಕಾವ್ಯ ಹಲವು ಪ್ರಯೋಗಗಳ ನವ್ಯವಾಗಿದೆ. ಆದರೆ ಕಡಮನಾಟ್ ರಾಮಕೃಷ್ಣರಲ್ಲಿ ಕವಿತಾರಚನೆ ಆದಿಮ ಶಕ್ತಿಯ ಪುರಾಣಗಳನ್ನು ಸೃಷ್ಟಿಸುವ ಕಾವ್ಯವಾಗಿದೆ. ಇಂಥವರ ನಡುವೆ ಓ.ಎನ್.ವಿ. ತಮ್ಮದೇ ಜೀವಪರವಾದ ನಿಲುವುಗಳನ್ನು ಹಾಡುವಂತೆ ಪಠಿಸಬಲ್ಲ ಘನೋದ್ದೇಶದ ಕವಿಗಳಾಗಿ ಉಳಿದಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ನಾನು ಇವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬಹುದೆಂದು ನಿರೀಕ್ಷಿಸಿದ್ದೆ.
ಎಂಬತ್ತೇಳರಲ್ಲಿ ನಾನು ಕೇರಳ ತಲುಪಿದಾಗ ಮೊದಲು ನನ್ನನ್ನು ಭೇಟಿಯಾದವರಲ್ಲಿ ಓ.ಎನ್.ವಿ. ಮುಖ್ಯರು. ಮೇಲೆ ಹೆಸರು ಹೇಳಿದ ಕವಿಗಳ ಪರಿಚಯ ಮಾತ್ರ ನನಗಿತ್ತು. ಓ.ಎನ್.ವಿ. ನನ್ನನ್ನು ಕಂಡೊಡನೆಯೇ ಮಲಯಾಳಂ ಲಿಪಿಯನ್ನು ಕಲಿವ ಸುಲಭವಾದ ಮಾರ್ಗವೊಂದನ್ನು ಹೇಳಿಕೊಟ್ಟರು. ನಿನಗೆ ಗೊತ್ತಿರುವ ಕನ್ನಡ ಲಿಪಿಯನ್ನು ಕೊಂಚ ಬಲಕ್ಕೋ ಎಡಕ್ಕೋ ವಾಲಿಸಿ ಅದರಲ್ಲಿ ಕನ್ನಡ ಲಿಪಿಯ ಛಾಯೆಯನ್ನು ಗುರುತಿಸುವುದನ್ನು ಕಲಿ; ನಿನಗೆ ಆಗ ಕ್ರಮೇಣ ಮಲಯಾಳಂ ಲಿಪಿಯನ್ನು ಗುರುತಿಸುವುದು ಸಾಧ್ಯವಾಗುತ್ತದೆ ಎಂದು. ಓ.ಎನ್.ವಿ. ಹೇಳಿದ್ದನ್ನು ಸತತವಾಗಿ ನಾಲ್ಕು ವರ್ಷಗಳ ಕಾಲವೂ ನಾನು ಗಮನಿಸುತ್ತಲೇ ಹೋಗಿ ಅಷ್ಟಿಷ್ಟು ಓದಲು ಕಲಿತಿದ್ದೆ. ಬಹಳ ಹಿಂದೆ ಕೇರಳದಲ್ಲಿ ಬದುಕಿದ ನನ್ನ ಅಜ್ಜ ನಾಮಫಲಕಗಳನ್ನು ಗಮನಿಸುತ್ತ ನನಗಿಂತ ಚೆನ್ನಾಗಿ ಮಲಯಾಳಂನ್ನು ಓದಬಲ್ಲವರಾಗಿದ್ದರು. ಕೇರಳದಲ್ಲಿ ಗೆಳೆಯ ರಷೀದ್ ಬಗ್ಗೆ ನಾನು ಹೇಳಿದ್ದನ್ನು ಈಗಲೂ ನೆನೆಯುವವರಿದ್ದಾರೆ. ಅನಕ್ಷರಸ್ಥನಾದ ಮಲಯಾಳಿ ಇವನೊಬ್ಬನೇ ಎಂದು ಸೆಮಿನಾರ್ ಸಂದರ್ಭದಲ್ಲಿ ನಾನು ಹೇಳಿದ್ದೆ.

Ottaplakkal Neelakandan Velu Kurup (27 May 1931 – 13 February 2016),

ಲಿಪಿಯನ್ನು ಮಾತ್ರವಲ್ಲದೇ ಕೆಲವು ವಾಕ್ಯಗಳನ್ನೂ ಮಾತಾಡಲು ಓ.ಎನ್.ವಿ. ನನಗೆ ಕಲಿಸಿದ್ದರು. ನಾನು ಸೆನೆಟ್ ಸಭೆಯಲ್ಲಿ ಮಲಯಾಳಂ ಭಾಷೆ ವಿದ್ಯಾಭ್ಯಾಸದ ಮೊದಲ ಭಾಷೆಯಾಗಬೇಕು ಎಂದು ತೀರ್ಮಾನಿಸಿದ್ದೆ. ಇದರಿಂದ ಓ.ಎನ್.ವಿ. ಪುಳಕಿತರಾಗಿ ಅವರು ಮಾತಾಡಿದ ಅನೇಕ ಸಭೆಗಳಲ್ಲಿ ಕನ್ನಡಿಗನೊಬ್ಬ ಮಲಯಾಳಂ ಭಾಷೆಯ ಪ್ರಾಧಾನ್ಯಕ್ಕೆ ಶ್ರಮಿಸಿದ್ದನ್ನು ಪ್ರೀತಿಯಿಂದ ನೆನೆಯುತ್ತಿದ್ದರು. ಹಾಗೆಯೇ ಕೆಲವು ವರ್ಷಗಳ ಹಿಂದೆ ಶ್ರೀ ಆಂಟೋನಿ ಮುಖ್ಯಮಂತ್ರಿಯಾಗಿದ್ದಾಗ ಪ್ರೈಮರಿ ಶಾಲೆಯ ಅಧ್ಯಯನದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎನ್ನುವ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷನನ್ನಾಗಿ ನನ್ನನ್ನು ಮಾಡಿದ್ದರು. ವಿದ್ಯಾರ್ಥಿಗಳು ಕ್ರಮೇಣ ಕಡಿಮೆಯಾಗುತ್ತಿರುವ, ಆದರೆ ನಿಜವಾದ ಒಳ್ಳೆಯ ಅಧ್ಯಾಪಕರಿರುವ ಸರಕಾರಿ ಶಾಲೆಗಳಿಗೆ ಮತ್ತೆ ವಿದ್ಯಾರ್ಥಿಗಳು ಸೇರುವಂತೆ ಮಾಡಲು ನಾನೊಂದು ಉಪಾಯ ಸೂಚಿಸಿದ್ದೆ. ‘ಮೊದಲ ಮೂರು ವರ್ಷ ಇಂಗ್ಲಿಷನ್ನು ಓದಲು ಬರೆಯಲು ಕಲಿಸುವುದು ಬೇಡ. ಆದರೆ ಸಾಧ್ಯವಿದ್ದಷ್ಟು ಮಾತಾಡುವುದನ್ನು ಮಕ್ಕಳಿಗೆ ಕಲಿಸೋಣ; ಆದರೆ ಅವರು ಕಲಿಯಬೇಕಾದ ಎಲ್ಲ ವಿಷಯವನ್ನೂ ಮಲಯಾಳಿ ಮಾಧ್ಯಮದಲ್ಲಿ ಮಾತ್ರ ಕಲಿಸೋಣ’ ಎಂದು. ಈ ನನ್ನ ಸಲಹೆಗೆ ಕಾರಣ ಇಂಗ್ಲಿಷ್ ಮಾಧ್ಯಮದ, ಇಂಗ್ಲಿಷ್ ವ್ಯಾಮೋಹದ, ಕೆಟ್ಟ ರೀತಿಯ ಶಿಕ್ಷಣದ, ಖಾಸಗೀ ಶಾಲೆಗಳು ಮಕ್ಕಳ ತಂದೆ-ತಾಯಿಗಳಿಗೆ ಆಕರ್ಷಕವಾಗದಂತೆ ಮಾಡುವುದಾಗಿತ್ತು. ಅಲ್ಲದೇ ಎಲ್ಲಾದರೂ ಹೋಗಿ ಬದುಕಬೇಕಾದ ಮಲಯಾಳಿಗಳನ್ನು ಎರಡು ಭಾಷೆಗಳಲ್ಲೂ ಸಲ್ಲುವವರಂತೆ ಮಾಡುವುದೂ ಆಗಿತ್ತು. ವ್ಯಾಪಾರೀ ಮನೋವೃತ್ತಿಯ ಇಂಗ್ಲಿಷ್ ಮಾಧ್ಯಮದ ಖಾಸಗೀ ಶಾಲೆಗಳ ಹಾವಳಿಯಿಂದ ಪಾರು ಮಾಡುವ ಈ ಕ್ರಮಕ್ಕೆ ಖಾಸಗೀ ವಲಯದಿಂದ ತುಂಬ ವಿರೋಧ ಬಂದಿತ್ತು. ಈ ವಿರೋಧದ ನಡುವೆಯೂ ನನ್ನ ವಿಚಾರದ ಪರವಾಗಿ ದನಿಯೆತ್ತಿ ಮಾತಾಡಿದವರು ನನಗೆ ಹಿರಿಯರಾದ ಓ.ಎನ್.ವಿ.ಯವರು. ಇವರು ಕವಿ ಮಾತ್ರರಾಗಿ ಉಳಿಯಲಿಲ್ಲ. ಒಬ್ಬ ನಾಗರಿಕ ಪ್ರಜೆ ಆಡಬೇಕಾದ್ದನ್ನು ಅಂಜದಂತೆ ಆಡಬಲ್ಲವರಾಗಿದ್ದರು.
ಓ.ಎನ್.ವಿ. ಜನಪರ ಕವಿ ಮಾತ್ರವಲ್ಲ. ಜನಪ್ರಿಯ ಕವಿಯೂ, ಘನಪಂಡಿತರೂ ಎನ್ನಬಹುದು. ಒಟ್ಟಾಗಿ ಈ ಮೂರು ಶಬ್ದಗಳನ್ನು ಹಲವರ ಬಗ್ಗೆ ಹೇಳುವುದು ಸಾಧ್ಯವಿಲ್ಲ.

Monday, February 15, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 67

ಶನಿಶಿಂಗಾಪುರ (Shanisingapur)

ಶನಿಶ್ಚರ ಕ್ಷೇತ್ರವಾಗಿ ಜಗತ್ಪ್ರಸಿದ್ದಿ ಪಡೆದಿರುವ, ಇತ್ತೀಚಿನವರೆಗೂ ಇಡೀ ಊರಿನ ಯಾರ ಮನೆಗೂ ಕಿಟಕಿ-ಬಾಗಿಲುಗಳಿಲ್ಲದೆ, ಕಳ್ಳ ಕಾಕರ ಭಯವಿಲ್ಲದೆ ಜನರು ಬದುಕುತ್ತಿರುವ ಊರು ಶನಿಶಿಂಗಾಪುರ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿನ ನಿವಾಸ್ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರವು ಮುಂಬೈ ಮಹಾನಗರದಿಂದ ಸುಮಾರು 296 ಕಿ.ಮೀ. ದೂರದಲ್ಲಿದೆ. ಶ್ರೀ ಸಾಯಿಬಾಬಾ ಪವಾಡ ಕ್ಷೇತ್ರವಾದ ಶಿರಡಿಯಿಂದ 72 ಕಿ.ಮೀ ದೂರದಲ್ಲಿದೆ. 







ಇಲ್ಲಿಗೆ ಪ್ರತಿನಿತ್ಯವೂ ಭೇಟಿ ನೀಡುವ ಸಾವಿರ ಸಂಖ್ಯೆಯ ಭಕ್ತಾದಿಗಳು ಶನಿ ದೇವರಿಗೆ ಎಳ್ಳೆಣ್ಣೆಯನ್ನು ಸಮರ್ಪಿಸಿ ಕೃತಾರ್ಥರಾಗುತಾರೆ. 
***

ಸುಮಾರು ನೂರಿನ್ನೂರು ವರ್ಷಗಳ ಹಿಂದೆ ಇದೀಗ ಕ್ಷೇತ್ರವಾಗಿರುವ ಹಳ್ಳಿಯ ಪಕ್ಕದಲ್ಲಿನ ನದಿಯಲ್ಲಿ ಭೀಕರವಾದ ಪ್ರವಾಹ ಉಂಟಾಗಿತ್ತು. ಆ ಪ್ರವಾಹದ ಸಮಯದಲ್ಲಿ 



ಶನಿದೇವರ್ ಫಲಕವು ನೀರಿನಲ್ಲಿ ತೇಲಿ  ಬಂದಿತು. ಕೆಲ ದಿನಗಳ ಬಳಿಕ ಪ್ರವಾಹವು ಇಳಿಮುಖವಾಗಲು ಅಲ್ಲಿನ ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡ ಶನಿಶ್ಚರನು "ಈ ಊರಿನಲ್ಲಿ ವಾಸವಾಗಿರುವ ಸೋದರಳಿಯಾ ಹಾಗೂ ಸೋದರ ಮಾವಂದಿರು ಸೇರಿ ನನ್ನ ಫಲಕವನ್ನು ಊರ ಮಧ್ಯೆ ಸ್ಥಾಪನೆ ಮಾಡಬೇಕು. ಸಮೀಪದಲ್ಲಿ ಬೇವಿನ ಮರ ನೆಡಬೇಕು, ಆದರೆ ಬೇವಿನ ಮರದ ಕೊಂಬೆಗಳು ನನ್ನ ಫಲಕಕ್ಕೆ ತಾಗಬಾರದು." ಎಂದು ಆದೇಶಿಸಿದನು. 

"ನೀನೇನಾದರೂ ಹೀಗೆ ನಡೆದುಕೊಂದಲ್ಲಿ, ಈ ಊರಿನ ರಕ್ಷಣಾ ಭಾರ ನನ್ನದು. ನಿಮ್ಮ ನಿಮ್ಮ ಮನೆಗಳಿಗೆ ಕಿಟಕಿ-ಬಾಗಿಲುಗಳಿರಕೂಡದು." ಎಂದೂ ಅಭಯವನ್ನಿತ್ತನು. 

ಶನಿಶ್ಚರನ ಆದೇಶದ ಅನುಸಾರ ಅವನ ಫಲಕವನ್ನು ಸ್ಥಾಪಿಸಿ ಊರಲ್ಲಿದ್ದ ಮನೆಗಳನ್ನೆಲ್ಲಾ ಬಾಗಿಲು-ಕಿಟಕಿಗಳಿಲ್ಲದ ಮನೆಗಳನ್ನಾಗಿ ಪರಿವರ್ತಿಸಲಾಯಿತು. ಅಲ್ಲಿಂದ ಮುಂದೆ ಈ ಊರಲ್ಲಿ ಕಳ್ಳತನವಾಗಿರುವ ವರದಿ ಇರಲಿಲ್ಲ! ಒಂದೊಮ್ಮೆ ಯಾರಾದರೂ ಕಳ್ಳರು ಕಳ್ಳತನವೆಸಗಿದ್ದೇ ಆದರೆ ಅವರು ತಮ್ಮ ಕಣ್ಣುಗಳನ್ನು ಕಳೆದುಕೊಂಡು ಅದೇ ಊರಿನಲ್ಲಿ ಸುತ್ತುತ್ತಿರಬೇಕಾಗಿ ಬರುತ್ತದೆ ಎನ್ನಲಾಗಿತ್ತು. 

Wednesday, February 03, 2016

ಕನ್ನಡ ಕಥಾಲೋಕದ ಸಾರ್ಥಕ ಕೃತಿ - "ಜುಗಾರಿ ಕ್ರಾಸ್"

ಆಶ್ಚರ್ಯವಾಗಬಹುದು! ಸಹಸ್ರಾರು ಚದರ ಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ನಾಲ್ಕಾರು ದಾರಿ ಕೂಡುವ ಈ ಸರ್ಕಲ್ಲಿಗೆ ಯಾಕೆ ಜುಗಾರಿ ಕ್ರಾಸ್ ಎಂದು ಹೆಸರಿಟ್ಟಿದ್ದಾರೆ ಎಂದು! ಈ ನಿರ್ಜನ ಪ್ರದೇಶದಲ್ಲಿ ಯಾವ ಗಿರಾಕಿ ಸಿಕ್ಕುತ್ತದೆಂದು ಕಾಯುತ್ತಾ ಬಾಡಿಗೆ ಟ್ಯಾಕ್ಸಿಗಳು ನಿಂತಿರುತ್ತವೆಂದು! ಈ ಕೂಡು ರಸ್ತೆಗಳಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ ಮುಂತಾದಲ್ಲಿಗೂ ಹೋಗುವ ರಸ್ತೆಗಳಿರುವುದರಿಂದ ಅಲ್ಲಿಗೆ ಹೋಗುವವರು ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಾರೇನೋ ಎಂದು ಶಂಕಿಸಬಹುದು. ಈ ಪುಣ್ಯಕ್ಷೇತ್ರಗಳಿಗೆ ಹೋಗಬಹುದೆಂಬುದೇನೋ ನಿಜ! ಆದರೆ ಅಲ್ಲಿಗೆ ಬಂದು ಟ್ಯಾಕ್ಸಿ ಮಾಡಿಕೊಂಡು ಹೋಗುವವರು ಯಾರು? ಈ ಪ್ರಶ್ನೆಗೆ ಮಾತ್ರ ಉತ್ತರ ಕೇಳಬೇಡಿ! ಅಲ್ಲಿ ಫಾರೆಸ್ಟ್ ಚೆಕ್ ಪೋಸ್ಟಿನ ಬಳಿ ಒಂದು ದೊಡ್ಡ ಚಾ ಹೋಟೆಲ್ಲು ಸದಾ ನೊಣ ಹೊಡೆಯುತ್ತಾ ಬಿದ್ದಿರುತ್ತದೆ. ಅಲ್ಲಿರುವ ಇಬ್ಬರೇ ಗಿರಾಕಿ, ಫಾರೆಸ್ಟರ್ ಮತ್ತು ಗಾರ್ಡಿಗೆ ಹಡಬಿಟ್ಟೀ ಚಾ ಒದಗಿಸುತ್ತಾ ಅದನ್ನು ನಡೆಸುತ್ತಿರುವವರು ಯಾರು? ಅದನ್ನು ಕಟ್ಟಿಸಿದವರು ಯಾರು? ಹೀಗೆ ಈ ಭಯಂಕರ ಏಕಾಂತದ ಜುಗಾರಿ ಕ್ರಾಸ್ ನೋಡಿದವರಿಗೆ ನೂರಾರು ಕೌತುಕದ ಪ್ರಶ್ನೆಗಳು ಕಾಡುವುದರಲ್ಲಿ ಅನುಮಾನವೇ ಇಲ್ಲ.




ಜುಗಾರಿ ಕ್ರಾಸಿನ ಎಲ್ಲಾ ದಾರಿಗಳಿಗೂ ಒಂದೊಂದು ಬಲವಾದ ಗಳುವನ್ನು ಅಡ್ಡಲಾಗಿ ಕವೆಗೋಲಿನ ಮೇಲೆ ಕೂರಿಸಿರುತ್ತಾರ್ರೆ. ಮೊದಲು ಆ ಬಿದಿರು ಬೊಂಬುಗಳಿಗೆ ಒಂದೊಂದು ಕೆಂಪು ಲಾಟೀನನ್ನು ಹೋಗಿ ಬರುವ ವಾಹನಗಳಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗಲೆಂದು ಕಟ್ಟಿರುತ್ತಿದ್ದರು. ಆದರೆ ಅಲ್ಲಿ ನಡೆಯುವ ಕಾಳ ವ್ಯವಹಾರದ ದಂಧೆ ಇವ್ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ ಇಲ್ಲದ್ದರಿಂದ ದಿನಕ್ಕೊಂದು ಬೊಂಬು ಮುರಿದು, ಲಾಟೀನು ಪುಡಿಪುಡಿಯಾಗಿ, ಅರಣ್ಯಿಲಾಖೆಗೆ ಈ ಲುಕ್ಸಾನು ತಡೆಯಲಾಗದೆ ಲಾಟೀನು ಕಟ್ಟುವುದನ್ನು ಖೈದು ಮಾಡಿ........................

***

"ಜುಗಾರಿ ಕ್ರಾಸ್" ಪೂರ್ಣಚಂದ್ರ ತೇಜಸ್ವಿಯವರ ಮಹತ್ವದ ಕಾದಂಬರಿ.  ಕನ್ನಡ ಸಾಹಿತ್ಯ ಲೋಕದಲ್ಲಿ ಛಾಪು ಮೂಡಿಸಿದ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ ಕಾಳದಂಧೆಗಳ ಕುರಿತು ಈ ಕೃತಿಯಲ್ಲಿ ತೇಜಸ್ವಿಯವರು ಮಾತನಾಡುತ್ತಾ ಪ್ರಾಕೃತಿಕ ಸಂಪತ್ತನ್ನು ಕಾಪಾಡುವ ಬಗೆಗೆ ತಮ್ಮದೇ ನೆಲೆಯಲ್ಲಿ ಚಿಂತನೆ ನಡೆಸುತ್ತಾರೆ. ತೇಜಸ್ವಿಯವರೇ ಹೇಳಿಕೊಂಡಿರುವಂತೆ ಒಂದು ಕ್ಷಣಕ್ಕೆ ರೊಮ್ಯೋಂಟಿಕ್ ಥ್ರಿಲ್ಲರ್ ಎಂದೆನಿಸಬಹುದಾದ ಈ ಕೃತಿ ಬದಲಾಗುತ್ತಿರುವ ಸನ್ನಿವೇಶಗಳು ಉಂಟುಮಾಡುತ್ತಿರುವ ಅವಾಂತರ ಅಪಾಯಗಳನ್ನೂ, ಅಭಿವದ್ಧಿಶೀಲ ರಾಷ್ಟ್ರಗಳ ಪ್ರದೇಶಗಳಲ್ಲಿ ಜಾಗತಿಕ ಪರಿಣಾಮಗಳು ಸೃಷ್ಟಿಸಬಹುದಾದ ತಲ್ಲಣಗಳನ್ನೂ ಎಳೆಎಳೆಯಾಗಿ ಪ್ರೇಕ್ಷಕರ ಮುಂದಿಡುತ್ತಾ ಹೋಗುತ್ತದೆ. ಕೇವಲ 24 ಗಂಟೆಗಳ ಅವಧಿಯ ಕಥೆ ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವಿಕ ಸಾಮಾಜಿಕ ಕಾದಂಬರಿ. ಕುವೆಂಪು ಅವರ ಕಾನೂರು ಹೆಗ್ಗಡತಿ, ಕಾರಂತರ ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ ಈ ಕಾದಂಬರಿಯೇ ಉದಾಹರಣೆ.  ಮಲೆನಾಡಿನ ದಟ್ಟ ಕಾಡೇ ಕಾಳ ದಂಧೆಗಳ ತವರೂರಾಗುವುದು, ಈ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಏಲಕ್ಕಿ ಮಾರಲೆಂದು ಹೊರಟ ವಿದ್ಯಾವಂತ ರೈತ ದಂಪತಿ ಸುರೇಶ ಮತ್ತು ಗೌರಿ ಆ ವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳುವುದು, ಜುಗಾರಿ ಕ್ರಾಸ್ ಎಂಬ ಊರಿನಲ್ಲಿ ನಡೆಯುತ್ತಿದ್ದ ರಹಸ್ಯ ಕಾಳ ಧಂಧೆಯ ಕುರಿತು ಹೇಳುತ್ತಾ ಒಬ್ಬ ಅಮಾಯಕ ಸುರೇಶ ತನಗೆ ಗೊತ್ತಿಲ್ಲದಂತೆ ಆ ಕಾಳ ಧಂಧೆಗೆ ಸೇರಿಬಿಡುತ್ತಾನೆ. ಹಾಗೆ ಸೇರುವ ಮುನ್ನ ಹಾಗೂ ತದನಂತರದ ಸರಣಿ ಕಥೆಗಳನ್ನು ಅತ್ಯಂತ ಕ್ರೀಯಾಶೀಲತೆಯಿಂದ ಹೆಣೆದಿದ್ದಾರೆ. ಸುರೇಶ ಮತ್ತು ಗೌರಿ ಆ ಕಾಳ ಧಂಧೆಗೆ ಆಕಸ್ಮಿಕ ವಾಗಿ ಸಿಕ್ಕು ಪಟ್ಟ ಕಷ್ಟಗಳು ಹಾಗೂ ಅದರಿಂದ ಹೊರಬಂದ ಪರಿ ಈ ಕಥೆಯ ಸಾರಾಂಶ
ಹುಸಿ ಕ್ರಾಂತಿಕಾರಿ ಗಂಗೂಲಿ, ಅರವತ್ತು ಸಾವಿರ ಲಂಚ ಕೊಟ್ಟು ಅದನ್ನು ಗಿಟ್ಟಿಸಲು ಪೇಚಾಡುವ ಇಕ್ಬಾಲ್, ಇಪ್ಪತ್ತು ರೂಪಾಯಿಗೂ ಖೂನಿ ಮಾಡಬಲ್ಲ ಜಾನಿ ಹೆನ್ರಿ, ಅನಧಿಕೃತವಾಗಿ ಚೆಕ್‌ಗಳನ್ನು ಕ್ಯಾಷ್ ಮಾಡುವ ಶೇಷಪ್ಪ ಪಾತ್ರಗಳಂತೆ ಕಾಣದೆ ಪ್ರೇಕ್ಷಕರ ನಡುವೆ ಇರುವ ಸಹಜ ವ್ಯಕಿಗಳಂತೆ ಗೋಚರಿಸುತ್ತಾರೆ.
ಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿ ಕೊಡುತ್ತದೆ
ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ. ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು ಅಲ್ಲಿನ ಕಷ್ಟ-ಸುಖಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಈ ಕೃತಿ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ಒಟ್ತಾರೆ ಇದೊಂದು ಸಾಹಸಮಯ ಪತ್ತೇದಾರಿ ಕಾದಂಬರಿಯಂತಿದ್ದು  ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಸವಾಗುತ್ತದೆ