Sunday, October 30, 2016

ನಾಟ್ಯವನ್ನು “ನೃತ್ಯ ಯೋಗ” ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ

“ಯಾವುದೇ ಶ್ರೇಷ್ಠವಾದ ಕಲಾ ಪ್ರಕಾರಗಳು ಮಾನವನ ದೈಹಿಕ, ಭಾವನಾತ್ಮಕ, ಬೌದ್ದಿಕ ಹಾಗೂ ಆದ್ಯಾತ್ಮಿಕ ದೃಷ್ಟಿಕೋನಗಳನ್ನು ಸಂಯೋಜಿಸಲು ತಕ್ಕುದಾದ ಶಕ್ತಿ ಸಾಮರ್ಥ್ಯವನ್ನು ನೀಡುತ್ತವೆ.. ಹಾಗೆಯೇ ಕಲೆ, ಕಲಾ ಪ್ರಕಾರವೆನ್ನುವುದು ಕೇವಲ ಹವ್ಯಾಸ, ಪ್ರಸಿದ್ದಿಗಾಗಿ ಮಾತ್ರವಲ್ಲದೆ ಜೀವನದ ಉನ್ನತಿಗೂ ಮಾರ್ಗವಾಗಬಲ್ಲದು.“ - ಇದು ಪ್ರಖ್ಯಾತ ಭರತನಾಟ್ಯ ಕಲಾವಿದರಾದ ನಾಟ್ಯವನ್ನು "ನೃತ್ಯ ಯೋಗ"ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ ಅವರ ಮಾತುಗಳು. ಮೂಲತಹ ಕರ್ನಾಟಕದ ದಾವಣಗೆರೆಯವರಾದ ಆಶಾ ಇದೀಗ ಅಮೆರಿಕಾದ ಷಿಕಾಗೋ ನಲ್ಲಿ ಆಚಾರ್ಯ ಪರ್ಫಾರ್ಮೆನ್ಸ್ ಆರ್ಟ್ಸ್ ಅಕಾಡಮಿಯ ಸಂಸ್ಥೆಯ ಮುಖೇನ ಅಲ್ಲಿನ ಯುವಜನತೆಗೆ ಭಾರತೀಯ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುತ್ತಿದ್ದಾರೆ. ನೃತ್ಯವನ್ನು ತಮ್ಮ ಬದುಕಿನ ಒಂದು ಅಂಗವೆಂದು ಪರಿಭಾವಿಸಿರುವ ಆಶಾ ಅವರ ಕುರಿತ ಕಿರುಪರಿಚಯ ಇಲ್ಲಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಕಲಾ ಪ್ರಪಂಚದಲ್ಲಿ ಸಕ್ರಿಯರಾಗಿರುವ ಆಶಾವಿದ್ಯಾರ್ಥಿಯಾಗಿಯೂ, ಅಭಿನೇತ್ರಿಯಾಗಿಯೂ ಮಾತ್ರವಲ್ಲದೆುತ್ತಮ ತರಬೇತುದಾರರಾಗಿಯೂ ಹೆಸರಾದವರು.






ಶ್ರೀಮತಿ ಅಡಿಗ ಹಾಗೂ ದಿ.ಚಂದ್ರಶೇಖರ ಅಡಿಗ ಅವರ ಮಗಳಾದ ಆಶಾ ಅತ್ಯಂತ ಕಿರಿಯ ವಯಸ್ಸಿನಿಂದಲೂ ನೃತ್ಯ ಕುರಿತ ಆಸಕ್ತಿ ಒಡಮೂಡಿಸಿಕೊಂಡವರು. ಇವರ ತಂದೆ ತಾಯಿಗಳು ಸಹ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರಾಗಿದ್ದು ನಾನಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಅವರೆಂದಿಗೂ ಮಗಳ ಕಲಾಸಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಿಲ್ಲ. ಬದಲಾಗಿ  ಹುರಿದುಂಬಿಸಿದರು.


ಆಶಾ ತಮ್ಮ ಬಾಲ್ಯದಲ್ಲಿಯೇ ಮನೆಯ ಟಿವಿ, ರೇಡಿಯೋಗಳಲ್ಲಿ ಪ್ರಸಾರಗೊಳ್ಳುತ್ತಿದ್ದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಅವರ ಹಿರಿಯ ಸೋದರಿಯಾದ ಉಷಾ ಅವರು ಸಹ ಭರತನಾಟ್ಯ ಪ್ರವೀಣರಾಗಿದ್ದು ಅವರು ನೃತ್ಯಾಭ್ಯಾಸಕ್ಕೆ ತೊಡಗಿದ್ದ ವೇಳೆ ಆಶಾ ಅವರಿಗೂ ಸಹ ನೃತ್ಯ ಕಲಿಯುವ ಬಯಕೆ ಮೊಳೆಯಿತು. ಅದಿನ್ನೂ ಮೂರು ವರ್ಷ ವಯಸ್ಸಿನವರಾಗಿದ್ದ್ವ ಆಶಾ ತನ್ನ ಅಕ್ಕನೊಂದಿಗೆ ನೃತ್ಯ ತರಬೇತಿಗೆ ಸೇರಿಕೊಂಡರು.

ವಿದ್ವಾನ್ ರಾಜಗೋಪಾಲ ಭಾಗವತ್ ಹಾಗೂ ವಿದುಷಿ ಪೂರ್ಣಿಮಾ ಭಾಗವತ್ ಅವರಿಂದ ವಿದ್ಯುಕ್ತವಾಗಿ ಭರತನಾಟ್ಯ ತರಬೇತಿಯನ್ನು ಹೊಂದಿದ ಆಶಾ "ಕಲಾಕ್ಷೇತ್ರ" ಶೈಲಿಯಲ್ಲಿ ವಿಶೇಷ ನೈಪುಣ್ಯ ಸಾಧಿಸಿದ್ದಾರೆ. ಭಾಗವತ್ ದಂಪತಿಗಳು ವಿದ್ವಾನ್ ಜನಾರ್ಧನ ಅವರ ಶಿಷ್ಯರಾಗಿದ್ದು ವಿದ್ವಾನ್ ಜನಾರ್ಧನರುಪ್ರೊ. ಎಂ.ಆರ್. ಕೃಷ್ಣ್ಮಮೂರ್ತಿಗಳ ಶಿಷ್ಯರಾಗಿದ್ದರು. ಎಂ.ಆರ್. ಕೃಷ್ಣ್ಮೂರ್ತಿಗಳು ಕಲಾಕ್ಷೇತ್ರದ ಮಾರು ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅರುಂಡೇಲ್ ಅವರಲ್ಲಿ ಶಾಸ್ತ್ರೀಯ ನೃತ್ಯಾಭ್ಯಾಸ ನಡೆಸಿದ್ದರು. ಈ ರೀತಿಯಲ್ಲಿ ನೋಡಿದ್ದಾದರೆ ಆಶಾ ಅವರು ರುಕ್ಮಿಣಿ ದೇವಿ ಅವರ ಶಿಷ್ಯ ಪರಂಪರೆಗೆ ಸೇರಿದವರಾಗಿದ್ದಾರೆ. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ವಿದ್ವತ್ ಪದವಿಯನ್ನು ಪೂರ್ಣಗೊಳಿಸಿದ ಆಶಾ ಕರ್ನಾಟಕ ಸರ್ಕಾರ ನಡೆಸುವ ವಿದ್ವತ್ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ.


ಎಂಬಿಎ ವಿದ್ಯಾಭ್ಯಾಸ ಮಾಡಿದ್ದ ಆಶಾ ಕೆಲಕಾಲ ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಆದರೆ ನೃತ್ಯಕ್ಷೇತ್ರದತ್ತ ಅವರಿಗಿದ್ದ ಬಲವಾದ ಆಸಕ್ತಿಯಿಂದಾಗಿ ಕಲಾಕ್ಷೇತ್ರಕ್ಕೆ ಮರಳಿ ಅದರಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ಮುಂದೆ ಸಂದ್ಯಾ, ಕಿರಣ್ ಸುಬ್ರಹ್ಮಣ್ಯನ್ ಹಾಗೂ ಚೆನ್ನೈ ಕಲಾಕ್ಷೇತ್ರದ ಪ್ರೊ. ಸೂರ್ಯನಾರಾಯಣಮೂರ್ತಿ ಅವರ ಮಾರ್ಗದರ್ಶನದಲ್ಲಿ ತಮ್ಮ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸಿದ್ದ ಆಶಾ ಮುಂದಿನ ದಿನಗಳಲ್ಲಿ ಭಾರ್ತೀಯ ಶಾಸ್ತ್ರೀಯ ನೃತ್ಯ ಸೇರಿದಂತೆ ಜನಪದ ನೃತ್ಯ ಶೈಲಿಗಳಲ್ಲಿಯೂ ಪರಿಣತಿ ಸಾಧಿಸಿದರು.

ದೇಶ-ವಿದೇಶಗಳಲ್ಲಿ ನೃತ್ಯ ಪ್ರದರ್ಶನ, ತರಬೇತಿ
ದಾವಣಗೆರೆಯ ವನಿತಾ ಸಮಾಜ ನಡೆಸುತ್ತಿದ್ದ ನಾಟಕ ಮಂಡಳಿ "ಭೂಮಿಕಾ" ಸಂಘದ ಮೂಲಕ ಆಶಾ ಆಚಾರ್ಯ ಅವರ ರಂಗ ಪ್ರವೇಶವಾಯಿತು. ಅದೇ ಸಮಯದಲ್ಲಿ "ನೀನಾಸಂ" ಮನುಲಾ ಬದಾಮಿ ಅವರಿಂದ ಹೆಚ್ಚಿನ ತರಬೇತಿ ಹೊಂದಿದ್ದರು.
ಆಶಾ ಅವರು ಕರ್ನಾಟಕದ ನಾನಾ ಭಾಗಗಳಲ್ಲಿ ಅಷ್ಟೇ ಅಲ್ಲದೆ ದೆಹಲಿಯ ರಾಜ ಭವನ, ತಿರುಪತಿ, ಆಗ್ರಾ, ಜೆಮ್ ಶೇಡ್ ಪುರ್, ಚೆನ್ನೈ, ಫ್ರಾನ್ಸ್ ಪ್ಯಾರೀಶ್, ಅಮೆರಿಕದ ನ್ಯೂ ಯಾರ್ಕ್, ನ್ಯೂ ಜರ್ಸಿ, ವಾಷಿಂಗ್ ಟನ್ ಮುಂತಾದ ಕಡೆಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ಸೇರಿದಂತೆ ಸಮೂಹ ನೃತ್ಯ, ನೃತ್ಯ ರೂಪಕಗಳನ್ನು ಪ್ರದರ್ಶಿಸಿದ್ದಾರೆ.


ಇನ್ನು ತಮ್ಮ ಹಿರಿಯ ಸಹೋದರಿ ಉಷಾ ಅವರೊಂದಿಗೆ ಸೇರಿ ನಾನಾ ಕಡೆಗಳಲ್ಲಿ ನೀಡಿದ್ದ ನೃತ್ಯ ಪ್ರದರ್ಶನಗಳಿಂದ ಇವರನ್ನು ಜನರು "ಅಡಿಗ ಸೋದರಿಯರು" ಎಂದು ಸಾಮಾನ್ಯವಾಗಿ ಗುರುತಿಸುತ್ತಿದ್ದರು.

ಆಶಾ ಅವರು ತಾವು ಒಂಭತ್ತು ವರ್ಷದವರಿರುವಾಗ ತಿರುಪತಿ ಡ್ಯಾನ್ಸ್ ಅಕಾಡಮಿಯಿಂದ ನಡೆಯುತ್ತಿದ್ದ ನೃತ್ಯ ಕಾರ್ಯಾಗಾರಕ್ಕೆ ಆಯ್ಕೆಗೊಂಡಿದ್ದರು. ಮುಂದೆ ಅದೇ ಸಂಸ್ಥೆಯವರಿಂದ 1992ರಲ್ಲಿ ಫ್ರಾನ್ಸ್ ನ ಪ್ಯಾರೀಸ್ ನಲ್ಲಿ ನೃತ್ಯ ರೂಪಕ ನಡೆಸುವಂತೆ ಆಹ್ವಾನ ಸಿಕ್ಕಿತ್ತು. ಇದರಿಂದ ಆಶಾ ಅವರ ನಾಟ್ಯದ ಕುರಿತಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರಚಾರ ದೊರಕಿತ್ತು. ಮುಂದೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಇದರಿಂದ ಸಾಕ್ಷ್ಟು ನೆರವಾಯಿತು. ನಂತರದಲ್ಲಿ ಆಶಾ ಅವರು ಭಾರತದ ನಾನಾ ಪ್ರದೇಶಗಳಲ್ಲಿ ಮಾತ್ರವಲ್ಲ ಅಮೆರಿಕಾದ ನ್ಯೂ ಜರ್ಸಿ ಸೇರಿದಂತೆ ನಾನಾ ರಾಜ್ಯಗಳಲ್ಲಿ ತಾವು ನೃತ್ಯ ಪ್ರರ್ಶನ, ನಾಟ್ಯ ಶಾಸ್ತ್ರ ಕುರಿತಂತೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.

ಇನ್ನು ಆಶಾ ಕೇವಲ ಭರತನಾಟ್ಯ ಪ್ರವೀಣೆ ಮಾತ್ರವಲ್ಲಿ ಇದರೊಡನೆಯೇ ಕೂಚುಪುಡಿ, ಕಥಕ್, ಯಕ್ಷಗಾನ, ಒಡಿಸ್ಸಿ ನೃತ್ಯ ಶೈಲಿಯಲ್ಲಿಯೂ ಪರೈಣತಿ ಸಾಧಿಸಿದ್ದಾರೆ. ತಿರುಪತಿಯ ಡಾ. ರಾಜು ಅವರಿಂದ ಕೂಚುಪುಡಿ ನೃತ್ಯ ಅಭ್ಯಸಿಸಿದ ಇವರು ರಾಮಕೃಷ್ಣ ಭಟ್ ಅವರಿಂದ ಕಥಕ್, ಹೆಮ್ಮಾಡಿ ರಾಮಚಂದ್ರ ಭಟ್ಟರಿಂದ ಯಕ್ಷಗಾನ ನೃತ್ಯ, ಅಮೆರಿಕಾದ ನ್ಯೂ ಜರ್ಸಿಯವರಾದ ಶ್ರೀಮತಿ ರಿಮ್ಲಿ ರಾಯ್ ಅವರಿಂದ ಒಡಿಸ್ಸಿ ನೃತ್ಯ ಅಭ್ಯಾಸ ನಡೆಸಿದ್ದರು. ಅಲ್ಲದೆ ದಾಂಡಿಯಾ ರಾಸ್, ಗರ್ಭಾ ನೃತ್ಯ, ಕಂಸಾಳೆ, ಕೋಲಾಟ, ಝುಮರ್ ನಾಚ್, ಲಾವಣಿ ಇದೇ ಮೊದಲಾದ ಜನಪದೀಯ ನೃತ್ಯ ಪ್ರಕಾರಗಳನ್ನೂ ಸಹ ಆಶಾ ಅವರು ಸ್ವತಹ ಅಭ್ಯಾಸ ಮಾಡಿ ಆ ಶೈಲಿಯ ನೃತ್ಯಗಳನ್ನೂ ಸಹ ಪ್ರದರ್ಶನ ನೀಡಿದ್ದಾರೆ.



ಆಶಾ ವಿವಾಹದ ನಂತರ ತಮ್ಮ ಪತಿ ಶ್ರೀನಿವಾಸ ಆಚಾರ್ಯ ಅವರೊಂದಿಗೆ ಅಮೆರಿಕಾದಲ್ಲಿ ನೆಲೆಲ್ಸಿದರು. ಅಮೆರಿಕಾದ ಶಿಕಾಗೋನಲ್ಲಿ ತಮ್ಮದೇ ಆಚಾರ್ಯ ಪರ್ಫಾರ್ಮೆನ್ಸ್ ಆರ್ಟ್ಸ್ ಅಕಾಡಮಿಯನ್ನು ಸ್ಥಾಪಿಸಿ ಅದರ ಮೂಲಕ ಭಾರ್ತೀಯ ಸಂಸ್ಕೃತೈ, ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ. ಪಶ್ಚಿಮ ರಾಷ್ಟ್ರಗಳಲ್ಲಿಯೂ ನಮ್ಮ ದೇಶದ ವೈಭವದ ಪರಂಪರೆಯನ್ನು ಪಸರಿಸುವ ಮೂಲಕ ಭಾರತ ದೇಶದ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ಇನ್ನು ಇವರ ಪತಿ ಶ್ರೀನಿವಾಸ ಆಚಾರ್ಯ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ತಮ್ಮ ಪತ್ನಿಯ ಕಲಾಭಿಮಾನದಿಂದ ಸ್ಪೂರ್ತಿಗೊಂಡು ಅವರಿಂದಲೇ ನೃತ್ಯದ ಮಟ್ಟುಗಳನ್ನು ಕಲಿತದ್ದಲ್ಲದೆಿದೀಗ ಆಶಾ ನೀಡುವ ಅನೇಕ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ!

ಕರ್ನಾಟಕ ಸಂಗೀತದಲ್ಲಿ ಸಾಧನೆ
ಆಶಾ ಆಚಾರ್ಯ ಅವರು ತಮ್ಮ ನೃತ್ಯ ಗುರುಗಳಾದ ವಿದ್ವಾನ್ ರಾಜಗೋಪಾಲ ಭಾಗವತ್ ಅವರಿಂದ ಕರ್ನಾಟಕ ಸಂಗೀತವನ್ನೂ ಸಹ ಅಭ್ಯಸಿಸಿದ್ದರು. ಹಲವು ವರ್ಷಗಳ ಕಾಲ ಇನ್ನೂ ಬೇರೆ ಬೇರೆ ಗುರುಗಳಲ್ಲಿ ಸಂಗೀತಾಭ್ಯಾಸ ನಡೆಸಿದ್ದ ಆಶಾ ಕರ್ನಾಟಕ ಸರ್ಕಾರ ನಡಿಸಿದ್ದ ಸಂಗೀತ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಇವರು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವುದಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ.

ಕೊರಿಯೋಗ್ರಫಿ ಮತ್ತು ನಿರ್ದೇಶನ
ಆಶಾ ಆಚಾರ್ಯ ತಾವು ಹಲವಾರು ಭರತನಾಟ್ಯ, ಜನಪದ ನೃತ್ಯಗಳಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇನ್ನು ಹೊಸ ಹೊಸ ನೃತ್ಯ ರೂಪಕಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಇವರ "ಶಿವ ಲಲಾಟ ತಾಂಡವ", "ಕನಕದಾಸ-ಉಡುಪಿ ಕೃಷ್ಣ", "ಶ್ರೀ ಕೃಷ್ಣ ಬಾಲಲೀಲೆ", "ಶಿವ-ಶಕ್ತಿ", "ಪಂಚಭೂತಂ", "ಕರ್ನಾಟಕ ನೃತ್ಯ ವೈಭವ", "ಸ್ಥಿತಿ ಸ್ವರೂಪ", "ವಚನ ವೈಭವ" ಇದೇ ಮೊದಲಾದವು ಕೆಲವು ಜನಪ್ರಿಯ ನೃತ್ಯ ಸಂಯೋಜನೆಗಳಾಗಿವೆ.

ಪ್ರಶಸ್ತಿ ಗೌರವಗಳು
ಆಶಾ ಆಚಾರ್ಯ ಅವರೊಬ್ಬ ಅಮೋಘ ಪ್ರತಿಭೇವಂತೆಯಾಗಿದ್ದಾರೆ. ಅವರ ಈ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಾಕಷ್ಟು ಸಂಖ್ಯೆಯ ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ಸಂದಿವೆ. ಅವಉಗಳಲ್ಲಿ ಪ್ರಮುಖವಾದದ್ದನ್ನು ಈ ಕೆಳಗೆ ನೀಡಲಾಗಿದೆ.-
  • ·   “ನೂಪುರ" ನೃತ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಗುರುಗಳಾದ ವಿದ್ವಾನ್ ರಾಜಗೋಪಾಲ ಭಾಗವತ್ ಅವರಿಂದ "ಶಾರದಾ ಪುರಸ್ಕಾರ"
  • ·         ಏರ್ ಇಂಡಿಯಾದ ರ್ಯಾಂಕ್ ಅವಾರ್ಡ್ 2006
  • ·      ಎಲ್. ಜಯಣ್ಣ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದ "ಚಂಪಿಕಾ ಪತ್ರಿಕೆಯವರು ನೀಡಿದ್ದ "ಕಲಾ ಐಸಿರಿ ಪುರಸ್ಕಾರ 2006"
  • ·         ಜೆಸಿ ಕ್ಲಬ್ ವತಿಯಿಂದ ಔಟ್ ಸ್ಟಾಂಡಿಂಗ್ ಯಂಗ್ ಪರ್ಸನ್ ಅವಾರ್ಡ್
  • ·         ದಾವಣಗೆರೆಯ ಎವಿಕೆ ಕಾಲೇಜಿನವರು ನೀಡಿದ್ದ ಟ್ಯಾಲೆಂಟೆಡ್ ಸ್ಟೂಡೆಂಟ್ ಅವಾರ್ಡ್
  • ·         1999ರಲ್ಲಿ ನೀಡಿದ್ದ ಅತ್ಯದ್ಭುತ ನೃತ್ಯ ಪ್ರದರ್ಶನಕ್ಕೆ ಹರಿಯಾಣ ರಾಜ್ಯ ಸಕಾಋದ ಕಾರ್ಯದರ್ಶಿಗಳಾದ ಕೆ.ಸಿ. ಶರ್ಮಾ ಅವರಿಂದ ಗೌರವ.
  • ·         1999ರಲ್ಲಿ ಆಗ್ರಾ ದಲ್ಲಿ ನಡೆದ ರಾಷ್ಟ್ರ ಮಟ್ಟದ ಸಂಗೀತ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಪ್ರಟಮ ಸ್ಥಾನ.
  • ·         2001ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ನೃತ್ಯ ರೂಪಕಗಳನ್ನು ಪ್ರದರ್ಶನ ನೀಡಿರುವುದಷ್ಟೇ ಅಲ್ಲದೆ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿಕೊಟ್ಟಿದ್ದಾರೆ.

ಇದಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆದ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಬಹುಮಾನಗಳನ್ನು ಪಡೆದಿದ್ದಾರೆ.

ಆಶಾ ಅವರ ಆಶಾ ನುಡಿಗಳು
ನಾಟ್ಯವೆನ್ನುವುದು ಕೇವಲ ಕಲೆ, ಅದು ಮನರಂಜನೆಗಾಗಿ ಮಾತ್ರವೆನ್ನುವುದು ತಪ್ಪು ಕಲ್ಪನೆ. ನಾಟ್ಯ ಮನಉಷ್ಯನ ಮಾನಸಿಕ ಸ್ಥಿತಿಯನ್ನು ಉನ್ನತಿಯತ್ತ ಕೊಂಡೊಯ್ಯಬಲ್ಲದು. ನೃತ್ಯ ಅಥವಾ ನಾಟ್ಯವು "ನೃತ್ಯ ಯೋಗ" ಎನಿಸಿಕೊಂಡಿದೆ. ಇದು ನಿಮಗೆ ಒಳ್ಳೆಯ ಆರೋಗ್ಯವನ್ನು ನೀಡಬಲ್ಲದು, ಮಾನಸಿಕ ಶಾಂತಿಯನ್ನು ತರಬಲ್ಲದು.

ಹೀಗಾಗಿ ಯಾರು ನೃತ್ಯವನ್ನು ಕಲಿಯಬಯಸಿದರೆ ಅಂತಹವರು ಅದನ್ನು ಕೇವಲ ಕಾಲಾಹರಣಕ್ಕಾಗಿ ಕಲಿಯದೆ ಅದನ್ನು ತಮ್ಮ ಆತ್ಮ ಸಂಗಾತಿ ಎಂದು ಪರಿಭಾವಿಸಿರಿ. ನಾನು ಶಾಲಾ ದಿನಗಳಲ್ಲಿದ್ದಾಗ ನನಗಿದ್ದ ಸ್ನೇಹಿತರ ಬಳಗವೇ ಬೇರೆ, ಕಾಲೇಜು ಸೇರಿದಾಗಿನ ವಾತಾವರಣವೇ ಬೇರೆ. ಇನ್ನು ಮದುವೆಯಾದ ಬಳಿಕ ನಾನು ಅಮೆರಿಕಾಗೆ ಬಂದು ನೆಲೆಸಿದ್ದು ಇಲ್ಲಿ ಭಾರತಕ್ಕಿಂತಲೂ ಸಂಪೂರ್ಣವಾಗಿ ಭಿನ್ನ ಸಂಸ್ಕೃತಿಯ ದೇಶವನ್ನು ನೋಡಿದೆ.ಆದರೆ ಅಂದಿನಿಂದ ಇಂದಿನವರೆಗೂ ನನ್ನಲ್ಲಿರುವ ಕಲಾಭಿರುಚಿ, ನೃತ್ಯ ಪ್ರತಿಭೆಯು ನನಗೆ ಅದ್ಭುತ ಶಕ್ತಿಯನ್ನು ನೀಡಿದೆ. ಹೀಗಾಗಿ ನಾನು ನೃತ್ಯವನ್ನು ನನ್ನ ಆತ್ಮ ಸಂಗಾತಿ ಎಂದು ಕರೆದಿದ್ದೇನೆ. ಹೇಗೆ ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎನ್ನುವ ನಾಣ್ನುಡಿ ಇದೆಯೋ ಹಾಗೆಯೇ ಕಲೆಯನ್ನು ನೀವು ಅಭಿವ್ಯಕ್ತಿಗೊಳಿಸಿದರೆ ಅದು ನಿಮ್ಮನ್ನು ಅಭಿವ್ಯಕ್ತಿಗೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ.

ಮುಗಿಸುವ ಮುನ್ನ...

ಭಾರತೀಯ ನೃತ್ಯ ಶೈಲಿಯಲ್ಲಿ ನಾನಾ ಪ್ರಯೋಗಗಳನ್ನು ನಡೆಸಿಕೊಂಡು ಬರುತ್ತಿರುವ, ಅಮೆರಿಕಾದಲ್ಲಿದ್ದೂ ಭಾರತೀಯ ಪರಂಪರೆಯನ್ನು ಬಿಡದೆ ಪೊಷಿಸುತ್ತಿರುವ ಆಚಾರ್ಯ ಪರ್ಫಾರ್ಮಿಂಗ್ ಆರ್ಟ್ಸ್ ಅಕಾಡಮಿಯ ರೂವಾರಿ ನಾಟ್ಯವನ್ನು "ನೃತ್ಯ ಯೋಗ"ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ ಅವರ ಭವಿಷ್ಯದ ಯೋಜನೆಗಳು ಫಲಪ್ರದವಾಗಲಿ. ಅವರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ಲಭಿಸುವಂತಾಗಲಿ ಎಂದು "ಗೃಹಶೋಭಾ" ಪ್ರೀತಿಯಿಂದ  ಹಾರೈಸುತ್ತದೆ.

(ಈ ನನ್ನ ಲೇಖನವು ಕನ್ನಡ   ಮಹಿಳಾ   ಮಾಸಪತ್ರಿಕೆ "ಗೃಹಶೋಭಾ" ಅಕ್ಟೋಬರ್ 2016 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)

Wednesday, October 12, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 77

ಜ್ವಾಲಾದೇವಿ (Jwaladevi) 

ಹಿಮಾಚಲ ಪ್ರದೇಶದ ಕಾಂಗ್ರಾ ಕಣಿವೆ ಪ್ರದೇಶವನ್ನು ಪವಿತ್ರ ಸ್ಥಳ, ದೇವ ಭೂಮಿ ಎನ್ನಲಾಗುತ್ತದೆ. ಪುರಾಣಗಳಲ್ಲಿ ಇದನ್ನು ತ್ರಿಗರ್ತ ದೇಶ ಎಂದು ಉಲ್ಲೇಖಿಸಲಾಗಿದೆ. ಜ್ವಾಲಾದೇವಿ ಅಥವಾ ಜ್ವಾಲಾಜಿ ಎಂದು ಕರೆಯಲ್ಪಡುವ ಜ್ವಾಲಾದೇವಿ ಮಂದಿರವು ಕಾಂಗ್ರಾ ಕಣಿವೆಯಿಂದ 30 ಕಿ.ಮೀ. ಹಾಗೂ ಧರ್ಮಶಾಲಾದಿಂದ  55 ಕಿ.ಮೀ. ದೂರದಲ್ಲಿದೆ. ಈ ಸ್ಥಳವು ಭಾರತದಲ್ಲಿನ ಐವತ್ತೊಂದು ಶಕ್ತಿ ಪೀಠಗಳಲ್ಲಿ ಒಂದಾಗಿದ್ದು ವಿಗ್ರಹವಿಲ್ಲದೆ ಪೂಜೆ ಸಲ್ಲುವ ದೇಶದ ಏಕೈಕ ದೇವಾಲಯವೆನ್ನಲಾಗಿದೆ.





ಕಂಗ್ರಾ ಜಿಲ್ಲೆಯಲ್ಲಿರುವ ಜ್ವಾಲಾಮುಖಿ ಎಂಬ ಹೆಸರಿನ ಪಟ್ಟಣದಲ್ಲಿ ಈ ಜಗನ್ಮಾತೆಯು ಅನಾದಿ ಕಾಲದಿಂದಲೂ ನೆಲೆಸಿದ್ದಾಳೆ. ಪುರಾಣದ  ಪ್ರಕಾರ, ಶಕ್ತಿಪೀಠಗಳು ಸತಿ ದೇವಿಯ ಮೃತ ದೇಹದ ವಿವಿಧ ಭಾಗಗಳು ಕತ್ತರಿಸಿಕೊಂಡು ವಿವಿಧ ಸ್ಥಳಗಳಲ್ಲಿ ಬಿದ್ದಾಗ ರೂಪಗೊಂಡಿವೆ. ಅದರಂತೆ ಈ ಸ್ಥಳದಲ್ಲಿ ಮಾತೆಯ ನಾಲಿಗೆಯು ಬಿದ್ದ ಸ್ಥಳವೆಂದು ಪರಿಗಣಿಸಲಾಗಿದೆ. ರುದ್ರಾವತಾರದ ಆದಿ ಶಕ್ತಿಯು ಸದಾ ನಾಲಿಗೆ ಹೊರಚಾಚಿ ಕ್ರೋಧಾಗ್ನಿಯನ್ನು ಉಗುಳುತ್ತಿರುವ ಸಂಕೇತವಾಗಿ ಇಲ್ಲಿ ದೇವಿಯ ಜ್ವಾಲೆಯ ರೂಪದಲ್ಲಿ ನೆಲೆಸಿದ್ದಾಳೆನ್ನಲಾಗಿದೆ. ಅಷ್ಟೆ ಅಲ್ಲ, ಈ ದೇವಾಲಯದಲ್ಲಿ ಒಟ್ಟು ಒಂಭತ್ತು ಸ್ಥಳಗಳಲ್ಲಿ ನೈಸರ್ಗಿಕವಾಗಿ ಊರಿಯುವ ಜ್ವಾಲೆಗಳನ್ನು ಕಾಣಬಹುದಾಗಿದ್ದು ಅವುಗಳು ಒಂಭತ್ತು ವಿವಿಧ ಗುಣಗಳ ಸಂಕೇತಗಳಾಗಿವೆಯಂತೆ! ಸುಮಾರು ಒಂದು ಸಾವಿರ ವರ್ಷಗಳಿಂದಲೂ ನಿರಂತರ್ವಾಗಿ ಉರಿಯುತ್ತಿರುವ ಜ್ವಾಲಾ ಸ್ವರೂಪದ ನಾಲಿಗೆಗಳೇ ಇಲ್ಲಿನ ದೇವತೆ. ಬೆಟ್ಟದ ನಡುವೆ ನಿರ್ಮಿತವಾದ ಈ ಸುಂದರ ದೇವಾಲಯದ ವಾಸ್ತು ಶಿಲ್ಪವೂ ಅದ್ಭುತವಾದದ್ದು. ನಾಲ್ಕು ದಿಕ್ಕಿಗೆ ನಾಲ್ಕು ಗೋಪುರಗಳನ್ನು ಒಳಗೊಂಡ ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. 

ದೆಹಲಿ ಹರಿದ್ವಾರ ಚಂಡಿಘರ್, ಜಲಂಧರ ಹಾಗೂ ಅಮೃತಸರಗಳಿಂದ ಜ್ವಾಲಾದೇವಿ ದೇವಾಲಯಕ್ಕೆ ಸಾಕಷ್ಟು ಸಾರಿಗೆ ಸೌಲಭ್ಯಗಳಿವೆ. ದೆಹೈ, ಪಠಾಣ್ ಕೋಟ್ ರೈಲುಮಾರ್ಗದಲ್ಲಿ ಜ್ವಾಲಾಜಿ ರೋಡ್ ಎನ್ನುವ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಬಸ್ ಇಲ್ಲವೇ ಖಾಸಗಿ ವಾಹನದ ಮುಖೇನ ಕೇವಲ 17 ಕಿ.ಮೀ ಪಯಣಿಸಿದರೆ ಜ್ವಾಲಾದೇವಿ ದೇವಾಲಯ ತಲುಪಬಹುದು. 

***

ಓರ್ವ ದನಗಾಹಿಯು ತನ್ನ ಹಸುಗಳನ್ನು ಮೇಯಿಸಲು ಪ್ರತಿನಿತ್ಯ ಈಗಿನ ಜ್ವಾಲಾಮುಖಿ ಪ್ರದೇಶಕ್ಕೆ ಬರುತ್ತಿದ್ದನು. ಸಂಜೆ ಹಿಂತಿರುಗಿದ ಮೇಲೆ ಎಲ್ಲಾ ಆಕಳುಗಳಿಂದಲೂ ಹಾಲು ಕರೆಯುತ್ತಿದ್ದ ಆದರೆ ಒಂದು ಹಸು ಮಾತ್ರವೇ ಹಾಲನ್ನು ನೀಡುತ್ತಿರಲಿಲ್ಲ. ಇದನ್ನು ಗಮನಿಸುವ ಸಲುವಾಗಿ ಯುವಕನು ಒಮ್ಮೆ ಹಸುವನ್ನು ಹಿಂಬಾಲಿಸಿಕೊಂಡು ಹೋದ. ಆಗ ದಟ್ಟ ಕಾನನದಿಂದ ಬಂದ ಓರ್ವ ಬಾಲಕಿಯು ಆಕಳ ಹಾಲನ್ನೆಲ್ಲಾ ಕುಡಿದು ಮಾಯವಾಗುತ್ತಿದ್ದದ್ದು ಕಂಡಿತು. ಇದರ ಕುರಿಂತೆ ಆಗ ಆ ಪ್ರಾಂತ್ಯದ ರಾಜನಾಗಿದ್ದ ಭೂಮಿಚಂದ್ರನಿಗೆ ಆ ದನಗಾಹಿ ಯುವಕ ತಿಳಿಸುತ್ತಾನೆ. ಅದಾಗಲೇ ಸತಿದೇವಿಯು ಜ್ವಾಲೆ ರೂಪದಲ್ಲಿ ತನ್ನ ರಾಜ್ಯದಲ್ಲಿ ನೆಲೆಲ್ಸಿರುವಂತೆ ಕನಸು ಕಂಡಿದ್ದ ಆರಾಜನಿಗೆ ಕುತೂಹಲವಾಗಿ ಆ ಯುವಕ ಹೇಳಿದ ಸ್ಥಳಕ್ಕೆ ಆಗಮಿಸುತ್ತಾನೆ. ಆಗ ಅವನಿಗೆ ಬೆಟ್ಟದ ತುದಿಯಲ್ಲಿ ಕೆಲವು ಕಡೆ ಜ್ವಾಲೆಗಳಿರುವುದು ಕಾಣಿಸುತ್ತದೆ. 

ಇದು ಸತಿ ದೇವಿಯ ಮಹಿಮೆ ಎನ್ನುವುದನ್ನು ಅರಿತ ರಾಜನು ದೇವಿಗಾಗಿ ಅಲ್ಲೊಂದು ದೇವಾಲಯ ನಿರ್ಮಿಸುತ್ತಾನೆ. ಅದುವೇ ಈಗಿನ ಜ್ವಾಲಾದೇವಿ ಮಂದಿರವಾಗಿದೆ.

ಮುಂದೆ ಪಾಂಡವರು ತಾವು ಇದೇ ದೇವಾಲಯವನ್ನು ಜೀರ್ಣೋದ್ದಾರ ಗೊಳಿಸುತ್ತಾರೆ. ಮತ್ತೆ ಹಲವಾರು ಶತಮಾನಗಳ ಕಾಲ ಹಲವಾರು ರಾಜರ ಆಳ್ವಿಕೆಗೆ ಇದು ಒಳಗಾಗಿ ಬಳಿಕ ಅಕ್ಬರನ ವಶಕ್ಕೆ ಬರುತ್ತದೆ. ಅಕ್ಬರ್ ಈ ಜ್ವಾಲೆಯನ್ನು ಆರಿಸುವ ಸಲುವಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಅವನ ಪ್ರಯತ್ನಗಳೆಲ್ಲಾ ವಿಫಲವಾಗುತ್ತವೆ. ಕಡೆಗೆ ದೇವಿಯ ಮಹಿಮೆಯನ್ನರಿತು ಅವಳಿಗೆ ಬೆಳ್ಳಿ ಮತ್ತು ಬಂಗಾರದ ಆಭರಣ, ನಾಣ್ಯಗಳನ್ನು ನೀಡುತ್ತಾನೆ ಆದರೆ ದೇವಿ ಅದನ್ನು ಸ್ವೀಕರಿಸುವುದಿಲ್ಲ. ಮತ್ತು ಸುವರ್ಣ ವಸ್ತು ಗೊತ್ತಿರಲಾರದ ಲೋಹವೊಂದಾಗಿ ಕಪ್ಪಾಗಿ ಪರಿವರ್ತಿತವಾಗುತ್ತದೆ. ಅದನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ.


Friday, September 30, 2016

ಬೋಳುವಾರರ ಮಾನವೀಯ ಪ್ರವಾದಿಯೊಬ್ಬನ ಚಿತ್ರಣ - ಓದಿರಿ

"ಓದಿರಿ"

ಮತ್ತೊಮ್ಮೆ ಕೇಳಿಸಿತ್ತು! ನೇರವಾಗಿ ಆಕಾಶದಿಂದ ಭೂಮಿಗೆ ಇಳಿದು ಬಂದಂತಿದ್ದ ಆ ದ್ವನಿ.
ಸಂಶಯವೇ ಇಲ್ಲ. ಆರು ತಿಂಗಳ ಹಿಂದೆ ಇದೇ "ಹಿರಾ" ಗುಹೆಯೊಳಗಿನ ಕತ್ತಲಲ್ಲಿ ಕುಳಿತು ದ್ಯಾನಿಸುತ್ತಿದ್ದಾಗ, ಎದೆ ಝಲ್ಲೆನ್ನಿಸುವಂತೆ ಬೆಚ್ಚಿ ಬೀಳಿಸಿದ್ದ ಅದೇ ಕಂಚಿನ ಕಂಠದ ದ್ವನಿ.
"ನನಗೆ ಓದಲು ತಿಳಿಯದು."

ನಲವತ್ತರ ಹೊಸ್ತಿಲಲ್ಲಿ ನಿಂತಿದ್ದ ಮಹಮ್ಮದರು ಗಾಬರಿಯಿಂದಲೇ ತೊದಲಿದ್ದರು. ಅದು ನಿಜವೂ ಆಗಿತ್ತು.

ಹುಟ್ಟುವ ಮೊದಲೇ ತಂದೆಯನ್ನೂ, ಎಂಟು ವರ್ಷ ತುಂಬುವ ಮೊದಲೇ ತಾಯಿಯನ್ನೂ ಕಳೆದುಕೊಂಡ ನಿರ್ಗತಿಕ ಬಾಲಕನೊಬ್ಬ, ಅನಂತರದ ಮೊದಲೆರಡು ವರ್ಷ ಬದುಕಿದ್ದು ತಾತ ಅಬ್ದುಲ್ ಮತ್ತಲೀಬರ ಆಶ್ರಯದಲ್ಲಿ. ತಾತನ ಮರಣದ ಬಳಿಕ ಸೇರಿಕೊಂಡದ್ದು ದೊಡ್ಡಪ್ಪ ಅಬೂತಾಲೀಬರ ಮನೆಗೆ. ಹೀಗೆ, ಬಾಲ್ಯವನ್ನು ದೊಡ್ಡಪ್ಪನವರ ಆಡುಗಳನ್ನು ಮೇಯಿಸುವ ಆಳುಮಗನಾಗಿ ಮುಂದೆ ಅವರದೇ ವ್ಯಾಪಾರಿ ಮಳಿಗೆಯಲ್ಲಿ ಸಹಾಯಕನಾಗಿ ದುಡಿಯುತ್ತಾ ಯೌವ್ವನವನ್ನೆಲ್ಲಾ ಕಳೆದುಕೊಂಡಿದ್ದರೆ ಓದುವುದಾದರೂ ಹೇಗೆ? ಅಕ್ಷರವನ್ನುಳಿದು ಮಿಕ್ಕೆಲ್ಲಾ ವಿದ್ಯೆಗಳನ್ನು ಕಲಿಸಲು ಹಠ ಹಿಡಿದವನಂತಿದ್ದ ದೊಡ್ಡಪ್ಪ ಅಬೂತಾಲೀಬರು ತಮ್ಮ ಸೋದರಪುತ್ರನಿಗೆ ಹನ್ನೆರಡಾಗುತ್ತಿದ್ದಂತೆಯೇ ತಮ್ಮ ವರ್ತಕ ತಂಡದಲ್ಲಿ ಸಹಾಯಕನಂತೆ ಇರಿಸಿಕೊಂಡು ಪರದೇಶಗಳಿಗೆ ಕರೆದುಕೊಂಡು ಹೋಗಲಾರಂಭಿಸಿದ್ದರೆ ಬರಹ ಕಲಿಯುವುದಾದರೂ ಹೇಗೆ?

***




ಕನ್ನಡದ ಸೃಜನಶೀಲ ಬರಹಗಾರರಾದ ಬೋಳುವಾರು ಮಹಮದ್ ಕುಂಞಿ ಅವರ ಮೂರನೇ ಕಾದಂಬರಿ - "ಓದಿರಿ" ಯ ಪ್ರಥಮ ಪುಟದ ಸಾಲುಗಳಿವು. ಪ್ರವಾದಿಯ ಜೀವನ ಕುರಿತು ಭಾವಾವೇಶಪೂರಿಯ್ಬತವಾದ, ಐತಿಹಾಸಿಕ ಅಂಶವನ್ನೊಳಗೊಂಡ ಹಲವಾರು ಬರಹಗಳು ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದೆ. ಆದರೆ ಇಲ್ಲಿ ಬೋಳುವಾರು ಅವರು ಪ್ರವಾದಿ ಮಹಮದರ ಜೀವನವನ್ನು ಜನಪದ ನಾಯಕನೋರ್ವನ ಜೀವನದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ, ಆ ಮೂಲಕ ಇದು ಬೇರೆಲ್ಲಾಕೃತಿಗಳಿಗಿಂತ ಭಿನ್ನವಾಗಿರುತ್ತದೆ ಹಾಗೂ ಮುಖ್ಯವಾಗುತ್ತದೆ. ಪ್ರವಾದಿ ಮಹಮದರ ಜೀವನ ಅರಿತವರಷ್ಟೇ ಹೊಸಬರೂ ಸಹ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ರೀತಿಯಲ್ಲಿ ಈ ಕಾದಂಬರಿ ಮೂಡಿ ಬಂದಿದೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ತುಸು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ.

ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ ದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋ ‘ಓದಿರಿ’ ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಎನ್ನುವುದು. "ಅಂತರಂಗ", "ಬಹಿರಂಗ" ಮತ್ತು "ಚದುರಂಗ" ಎನ್ನುವ ಮೂರು ವಿಭಾಗಗಳಲ್ಲಿ ಕಾದಂಬರಿ ಹರಡಿಕೊಂಡಿದೆ. ಬಾಲಕ ಮುಹಮ್ಮದರಲ್ಲಿ ನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗ್ಗೆ, ಮಹಮದ ಒಳಗಿನ ಚಿಂತನೆ, ಆಲೋಚನೆಗಳ ಸಂಘರ್ಷವನ್ನು ಅಂತರಂಗದಲ್ಲಿ ತಿಳಿಸಿದರೆ ತಾನೇ ಅಂತಿಮ ಪ್ರವಾದಿ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಮಹಮದರ ಚಿತ್ರ, ಅದರ ನಂತರದಲ್ಲಿ ಇತರೇ ಧರ್ಮೀಯರು ಮಹಮದರನ್ನು ಣೋಡುವ ರೀತಿಯ ಕುರಿತು ಬಹಿರಂಗದಲ್ಲಿ ಪ್ರಸ್ತಾಪಿಸಲಾಗಿದೆ. ಮಹಮದರು ಕಂಡುಕೊಂಡ ಸತ್ಯದ ಅನುಷ್ಠಾನಕ್ಕಾಗಿ ಅವರು ನಡೆಸುವ ಹೋರಾಟದ ಚಿತ್ರಣ ಮೂರನೇ ಹಾಗೂ ಅಂತಿಮ ಭಾಗ ಚದುರಂಗದಲ್ಲಿ ಪಡಿಮೂಡಿದೆ.
ಆದರೆ ಕಾದಂಬರಿಯ ಅಂತಿಮ ಬಾಗದಲ್ಲಿ ಪ್ರವಾದಿಯ ಸತ್ಯವೇ ಸತ್ಯ ಎಂದು ಪ್ರತಿಪಾದಿಸುವ ಬೋಳುವಾರರ ಬರಹ ಮೊದಲೆರಡು ಭಾಗಗಳಲ್ಲಿದ್ದ ವಿಮರ್ಶಾತ್ಮಕತೆಯ ದೃಷ್ಟಿಯಿಂದ ಹೊರತಾಗಿದೆ ಎನ್ನಬಹುದು. ಆದರೆ ಇದುವರೆಗೂ ನಮಗೆ ಪರಿಚಯವಿಲ್ಲದ ಪರಿಸರದಲ್ಲಿ ನಡೆಯುವ ಕಥೆಯನ್ನು ಇಷ್ಟು ಸರಳವಾಗಿ ಹೇಳಿರುವುದು ಬೋಳುವಾರು ಅವರ ಹೆಚ್ಚುಗಾರಿಕೆಯೇ ಸರಿ.
ಬುದ್ದ, ಬಸವಣ್ಣ, ಏಸು ಕ್ರಿಸ್ತ, ಅವರಂತೆಯೇ ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಮಹಮದರ ಕಥೆ ಮನಸ್ಸಿಗೆ ತಟ್ಟುತ್ತದೆ. ಆದರೆ ಕಾಲ ಸರಿದಂತೆಲ್ಲಾ ಅಂದು ಅವರು ಪ್ರಾರಂಭಿಸಿದ ಧರ್ಮ ಇಂದಿಗೂ ಸರಿಯಾದ ದಾರಿಯಲ್ಲಿ ಸಾಗಿದೆಯೆ ಎಂದು ನೋಡಿದಾಗ ನಿರಾಸೆಯಾಗುವುದು ಸತ್ಯ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನು ಮನುಷ್ಯ ನಿರ್ಮಿತ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ. ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲದ ಮಹಿಮೆಯೇ ಆಗಿದೆ!
ಒಟ್ತಾರೆಯಾಗಿ ಮುಸ್ಲಿಂ ಧರ್ಮ, ಮಹಮ್ಮದರ ಕುರಿತಂತೆ ತಿಳಿಯದಿದ್ದವರೂ ಸಹ ತಿಳಿಯಬಹುದಾದಷ್ಟು ಸರಳ ಸುಂದರವಾಗಿ ಪ್ರವಾದಿ ಮಹಮ್ಮದರ ಜೀವನವನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಬೋಳುವಾರು ತಮ್ಮ ಕಾದಂಬರಿ "ಓದಿರಿ" ಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬೋಳುವಾರು ಅವರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿಕೊಳ್ಳುವಂತೆ ಯಾವುದೇ ಒಂದು ಧರ್ಮವನ್ನು ಅಥವಾ ಧರ್ಮ ಗ್ರಂಥವನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮೊದಲು ಕನಿಷ್ಟ ಒಂದು ಬಾರಿಯಾದರೂ ಓದಿಕೊಳ್ಳುವುದು ಒಳಿತು ಎಂಬುದು ನನ್ನ ನಂಬಿಕೆ. ಹೀಗೆ ಓದಿಕೊಂಡು ಅಲ್ಪ ಸ್ವಲ್ಪವಾದರೂ ಪರಸ್ಪರ ಪರಿಚಿತರಾದರೆ ನಮ್ಮೆಲ್ಲರ ಸಣ್ಣ ಪುಟ್ಟ ದೋಷಗಳು ಾಲ್ಪಸ್ವಲ್ಪವಾದರೂ ಮನ್ನಿಸಲ್ಪಡಭುದೇನೋ ಎಂಬುದು ನನ್ನ ಆಸೆ. ಮನ್ನಿಸಲ್ಪಡಲಿ.

ಆದ್ದರಿಂದ ದಯವಿಟ್ಟು ಓದಿರಿ.

Saturday, September 03, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 76

ಗುಡ್ಡಟ್ಟು  (Guddattu)
ನನ್ನೆಲ್ಲಾ ಸ್ನೇಹಿತರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಇದು ನಮ್ಮಲ್ಲಿನ ಸ್ಥಳ ಪುರಾಣಗಳು ಸರಣಿಯ ಎಪ್ಪತ್ತಾರನೇ ವಿಶೇಷ ಬರಹ. ಗಣೇಶ ಚತುರ್ಥಿಯ ಈ ಸಮಯದಲ್ಲಿ ನಿಸರ್ಗದತ್ತವಾಗಿ ಮೂಡಿಬಂದ ಗಣೇಶನ ಸನ್ನಿಧಿಯೊಂದರ ಕಿರು ಪರಿಚಯ ಹಾಗೂ ಸ್ಥಳ ಮಹಿಮೆಯನ್ನು ತಿಳಿಸಿಕೊಡುವ ಉದ್ದೇಶದಿಂದ ಕುಂದಾಪುರದ ಸಮೀಪವಿರುವ ಗುಡ್ಡಟ್ಟು ಸ್ಥಳ ಪುರಾಣವನ್ನು ಇಲ್ಲಿ ನೀಡುತ್ತಿದ್ದೇನೆ. 
***

ಉಡುಪಿ  ಜಿಲ್ಲೆಯ  ಕುಂದಾಪುರ ತಾಲೂಕಿನಲ್ಲಿರುವ ಗುಡ್ಡಟ್ಟು  ಗ್ರಾಮ  ಮಹಾಗಣಪತಿ ನೆಲೆಸಿರುವ  ಪಾವನ ಪುಣ್ಯ ಕ್ಷೇತ್ರವಾಗಿದೆ.ಸುಂದರ, ಹಚ್ಚ ಹಸಿರಿನ ನಡುವೆ ಇರುವ ಬೃಹದಾಕಾರದ ಬಂಡೆಯೇ ಗಣೇಶನ ಆವಾಸ ಸ್ಥಾನ. ಇದೊಂದು ನಿಸರ್ಗ ಸೃಷ್ಟಿಯಾಗಿರುವುದರಿಂದ ನೋಡಲು ಅಾತ್ಯಾಕರ್ಷಕವೂ ಆಗಿದೆ.ಬೃಹತ್ ಬಂಡೆಯಲ್ಲಿ  ಪೂರ್ವಾಭಿಮುಖವಾಗಿ  ತೆೆರೆದಿರುವ  ಮಡುವಿನಲ್ಲಿ  ಸುಮಾರು 3 ಅಡಿ ಎತ್ತರದ ಕಪ್ಪು ಶಿಲೆಯಲ್ಲಿರುವ,  ಕಾಲು  ಮಡಚಿ, ಸೊಂಡಿಲು  ತಿರುಚಿ ಕುಳಿತಿರುವ  ಈ  ಗಣಪತಿಯ  ಸ್ವಯಂಭೂ ವಿಗ್ರಹವಾಗಿದ್ದುವಿಗ್ರಹವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದು ಇಲ್ಲಿನ ವಿಶೇಷ. 




ದೇವಾಲಯದ ಗರ್ಭಗುಡಿ  ಪ್ರಾಕೃತಿಕವಾದರೂ ತೀರ್ಥಮಂಟಪ, ಹೆಬ್ಟಾಗಿಲುಗಳನ್ನು ನಂತರ ನಿರ್ಮಿಸಲಾಗಿದೆಉಡುಪಿಯಿಂದ 35 ಕಿ.ಮೀ, ಕುಂದಾಪುರದಿಂದ 15 ಕಿ.ಮೀ ಅಂತರದಲ್ಲಿರುವ ಈ ಕ್ಷೇತ್ರಕ್ಕೆ ಬಸ್  ಅಥವಾ ಕ್ಯಾಬ್ಗಳ ಮೂಲಕ ಸುಲಭವಾಗಿ ತಲುಪಬಹುದು. ಗಣೇಶ ಚತುರ್ಥಿಯಂತಹಾ ಮಹತ್ವದ ಹಬ್ಬದ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆಯುವ ಭಕ್ತಾದಿಗಳು ಇಲ್ಲಿ ನಡೆಯುವ ಆಯುರ್ಕೊಡ ಸೇವೆಯನ್ನು ನೋಡಿ ಕಣ್ತುಂಬಿಕೊಂಡು ಪಾವನರಾಗುತ್ತಾರೆ.
***

Sri Siddivinayaka Temple, Guddattu
ತ್ರಿಪುರಾಸುರ ಎಂಬ ರಾಕ್ಷಸನ  ಸಂಹಾರ ಕಾಲದಲ್ಲಿ  ಈಶ್ವರನು  ಯುದ್ಧಕ್ಕೆ  ಹೋಗುವಾಗ  ಪ್ರಮಾದವಶಾತ್ ಗಣಪತಿಯನ್ನು   ಸ್ಮರಿಸದೇ  ತೆರಳುತ್ತಾನೆ.  ಆದರೆ ಜಯ ಲಭಿಸದೇ   ಪರದಾಡುವ  ಪರಿಸ್ಥಿತಿ ಬಂದಾಗ  ತನ್ನ  ಮಗನಿಂದಲೇ ತನಗೆ  ವಿಘ್ನ  ಬಂದಿದೆ  ಎಂದು ಅರಿತ  ಪರಶಿವನು ಕೋಪಗೊಂಡು  ಗಣಪತಿಯ ಮೇಲೆ  ಆಗ್ನೇಯಾಸ್ತ್ರವನ್ನು  ಪ್ರಯೋಗಿಸುತ್ತಾನೆ.   ಆದರೆ ಯಾವ  ಅಸ್ತ್ರವೂ   ಗಣಪತಿಯನ್ನು  ಏನೂ ಮಾಡಲು ಸಾಧ್ಯವಿಲ್ಲ.  ಅದೇ  ರೀತಿಯಾಗಿ  ಶಿವನು ಪ್ರಯೋಗಿಸಿದ   ಅಸ್ತ್ರ ಹುಸಿಯಾಗಲೂ  ಸಾಧ್ಯವಿಲ್ಲ. ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಆ ಅಸ್ತ್ರವು  ಗಣಪತಿಯನ್ನು  ಹೊತ್ತೂಯ್ದು   ಮಧುಸಾಗರದಲ್ಲಿ   ಕೆಡುವುತ್ತದೆ. ಮಧು ಎಂದರೆ ಜೇನು  ತುಪ್ಪ. ತನಗೆ  ಅತ್ಯಂತ  ಪ್ರಿಯವಾದ ಜೇನುತುಪ್ಪದಲ್ಲಿ   ಬಿದ್ದ   ಗಣಪತಿ  ಯಥೇತ್ಛವಾಗಿ  ಮಧುಪಾನ   ಮಾಡಿ  ತೃಪ್ತಿ  ಹೊಂದುತ್ತಾನೆ. ತನ್ನನ್ನು ಇಲ್ಲಿ  ತಂದು   ಹಾಕಿದವರ ಕಾರ್ಯ  ಜಯವಾಗಲೆಂದು   ಹರಸುತ್ತಾನಂತೆ. ಆಗ ಈ  ವರದ ಪರಿಣಾಮ  ಶಿವನು  ತ್ರಿಪುರಾಸುರನನ್ನು   ಸಂಹಾರಮಾಡಿ   ಜಯ ಶಾಲಿಯಾಗುತ್ತಾನೆ. ಇತ್ತ ಗಣಪತಿಗೆ ಅತಿಯಾದ  ಮಧು  ಸೇವನೆಯಿಂದ  ದೇಹದಲ್ಲಿ   ಉಷ್ಣ  ಹೆಚ್ಚಾಗಿ   ಉರಿ  ಭಾದೆ  ತಾಳಲಾರದೇ   ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ  ಶಿವನು   ಗಣಪತಿಯ ಉರಿಶಮನಕ್ಕಾಗಿ   ನರಸಿಂಹ  ತೀರ್ಥದ  ಪಕ್ಕದಲ್ಲಿ  ಜಲಾದಿವಾಸವಾಗಿರು ಎಂದು ಈ ಸ್ಥಾನವನ್ನು   ಗಣಪತಿಗೆ  ಅನುಗ್ರಹಿಸುತ್ತಾನೆ , ಅಂದಿನಿಂದ  ಇಂದಿನವರೆಗೂ ಇಲ್ಲಿ   ಹರಿಯುವ   ನರಸಿಂಹ  ತೀರ್ಥ ಎಂಬ ನದಿಯ  ಪಕ್ಕದಲ್ಲಿ   ಇರುವ  ಬೃಹತ್  ಬಂಡೆಯ  ಮಡುವಿನಲ್ಲಿ  ಜಲಾದಿವಾಸವಾಗಿ  ನೆಲೆಸಿ  ಗಣಪತಿಯು  ಭಕ್ತರನ್ನು ಉದ್ಧರಿಸುತ್ತಿದ್ದಾನೆ