ಜ್ವಾಲಾದೇವಿ (Jwaladevi)
ಹಿಮಾಚಲ ಪ್ರದೇಶದ ಕಾಂಗ್ರಾ ಕಣಿವೆ ಪ್ರದೇಶವನ್ನು ಪವಿತ್ರ ಸ್ಥಳ, ದೇವ ಭೂಮಿ ಎನ್ನಲಾಗುತ್ತದೆ. ಪುರಾಣಗಳಲ್ಲಿ ಇದನ್ನು ತ್ರಿಗರ್ತ ದೇಶ ಎಂದು ಉಲ್ಲೇಖಿಸಲಾಗಿದೆ. ಜ್ವಾಲಾದೇವಿ ಅಥವಾ ಜ್ವಾಲಾಜಿ ಎಂದು ಕರೆಯಲ್ಪಡುವ ಜ್ವಾಲಾದೇವಿ ಮಂದಿರವು ಕಾಂಗ್ರಾ ಕಣಿವೆಯಿಂದ 30 ಕಿ.ಮೀ. ಹಾಗೂ ಧರ್ಮಶಾಲಾದಿಂದ 55 ಕಿ.ಮೀ. ದೂರದಲ್ಲಿದೆ. ಈ ಸ್ಥಳವು ಭಾರತದಲ್ಲಿನ ಐವತ್ತೊಂದು ಶಕ್ತಿ ಪೀಠಗಳಲ್ಲಿ ಒಂದಾಗಿದ್ದು ವಿಗ್ರಹವಿಲ್ಲದೆ ಪೂಜೆ ಸಲ್ಲುವ ದೇಶದ ಏಕೈಕ ದೇವಾಲಯವೆನ್ನಲಾಗಿದೆ.
ಕಂಗ್ರಾ ಜಿಲ್ಲೆಯಲ್ಲಿರುವ ಜ್ವಾಲಾಮುಖಿ ಎಂಬ ಹೆಸರಿನ ಪಟ್ಟಣದಲ್ಲಿ ಈ ಜಗನ್ಮಾತೆಯು ಅನಾದಿ ಕಾಲದಿಂದಲೂ ನೆಲೆಸಿದ್ದಾಳೆ. ಪುರಾಣದ ಪ್ರಕಾರ, ಶಕ್ತಿಪೀಠಗಳು ಸತಿ ದೇವಿಯ ಮೃತ ದೇಹದ ವಿವಿಧ ಭಾಗಗಳು ಕತ್ತರಿಸಿಕೊಂಡು ವಿವಿಧ ಸ್ಥಳಗಳಲ್ಲಿ ಬಿದ್ದಾಗ ರೂಪಗೊಂಡಿವೆ. ಅದರಂತೆ ಈ ಸ್ಥಳದಲ್ಲಿ ಮಾತೆಯ ನಾಲಿಗೆಯು ಬಿದ್ದ ಸ್ಥಳವೆಂದು ಪರಿಗಣಿಸಲಾಗಿದೆ. ರುದ್ರಾವತಾರದ ಆದಿ ಶಕ್ತಿಯು ಸದಾ ನಾಲಿಗೆ ಹೊರಚಾಚಿ ಕ್ರೋಧಾಗ್ನಿಯನ್ನು ಉಗುಳುತ್ತಿರುವ ಸಂಕೇತವಾಗಿ ಇಲ್ಲಿ ದೇವಿಯ ಜ್ವಾಲೆಯ ರೂಪದಲ್ಲಿ ನೆಲೆಸಿದ್ದಾಳೆನ್ನಲಾಗಿದೆ. ಅಷ್ಟೆ ಅಲ್ಲ, ಈ ದೇವಾಲಯದಲ್ಲಿ ಒಟ್ಟು ಒಂಭತ್ತು ಸ್ಥಳಗಳಲ್ಲಿ ನೈಸರ್ಗಿಕವಾಗಿ ಊರಿಯುವ ಜ್ವಾಲೆಗಳನ್ನು ಕಾಣಬಹುದಾಗಿದ್ದು ಅವುಗಳು ಒಂಭತ್ತು ವಿವಿಧ ಗುಣಗಳ ಸಂಕೇತಗಳಾಗಿವೆಯಂತೆ! ಸುಮಾರು ಒಂದು ಸಾವಿರ ವರ್ಷಗಳಿಂದಲೂ ನಿರಂತರ್ವಾಗಿ ಉರಿಯುತ್ತಿರುವ ಜ್ವಾಲಾ ಸ್ವರೂಪದ ನಾಲಿಗೆಗಳೇ ಇಲ್ಲಿನ ದೇವತೆ. ಬೆಟ್ಟದ ನಡುವೆ ನಿರ್ಮಿತವಾದ ಈ ಸುಂದರ ದೇವಾಲಯದ ವಾಸ್ತು ಶಿಲ್ಪವೂ ಅದ್ಭುತವಾದದ್ದು. ನಾಲ್ಕು ದಿಕ್ಕಿಗೆ ನಾಲ್ಕು ಗೋಪುರಗಳನ್ನು ಒಳಗೊಂಡ ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ.

***
ಓರ್ವ ದನಗಾಹಿಯು ತನ್ನ ಹಸುಗಳನ್ನು ಮೇಯಿಸಲು ಪ್ರತಿನಿತ್ಯ ಈಗಿನ ಜ್ವಾಲಾಮುಖಿ ಪ್ರದೇಶಕ್ಕೆ ಬರುತ್ತಿದ್ದನು. ಸಂಜೆ ಹಿಂತಿರುಗಿದ ಮೇಲೆ ಎಲ್ಲಾ ಆಕಳುಗಳಿಂದಲೂ ಹಾಲು ಕರೆಯುತ್ತಿದ್ದ ಆದರೆ ಒಂದು ಹಸು ಮಾತ್ರವೇ ಹಾಲನ್ನು ನೀಡುತ್ತಿರಲಿಲ್ಲ. ಇದನ್ನು ಗಮನಿಸುವ ಸಲುವಾಗಿ ಯುವಕನು ಒಮ್ಮೆ ಹಸುವನ್ನು ಹಿಂಬಾಲಿಸಿಕೊಂಡು ಹೋದ. ಆಗ ದಟ್ಟ ಕಾನನದಿಂದ ಬಂದ ಓರ್ವ ಬಾಲಕಿಯು ಆಕಳ ಹಾಲನ್ನೆಲ್ಲಾ ಕುಡಿದು ಮಾಯವಾಗುತ್ತಿದ್ದದ್ದು ಕಂಡಿತು. ಇದರ ಕುರಿಂತೆ ಆಗ ಆ ಪ್ರಾಂತ್ಯದ ರಾಜನಾಗಿದ್ದ ಭೂಮಿಚಂದ್ರನಿಗೆ ಆ ದನಗಾಹಿ ಯುವಕ ತಿಳಿಸುತ್ತಾನೆ. ಅದಾಗಲೇ ಸತಿದೇವಿಯು ಜ್ವಾಲೆ ರೂಪದಲ್ಲಿ ತನ್ನ ರಾಜ್ಯದಲ್ಲಿ ನೆಲೆಲ್ಸಿರುವಂತೆ ಕನಸು ಕಂಡಿದ್ದ ಆರಾಜನಿಗೆ ಕುತೂಹಲವಾಗಿ ಆ ಯುವಕ ಹೇಳಿದ ಸ್ಥಳಕ್ಕೆ ಆಗಮಿಸುತ್ತಾನೆ. ಆಗ ಅವನಿಗೆ ಬೆಟ್ಟದ ತುದಿಯಲ್ಲಿ ಕೆಲವು ಕಡೆ ಜ್ವಾಲೆಗಳಿರುವುದು ಕಾಣಿಸುತ್ತದೆ.
ಇದು ಸತಿ ದೇವಿಯ ಮಹಿಮೆ ಎನ್ನುವುದನ್ನು ಅರಿತ ರಾಜನು ದೇವಿಗಾಗಿ ಅಲ್ಲೊಂದು ದೇವಾಲಯ ನಿರ್ಮಿಸುತ್ತಾನೆ. ಅದುವೇ ಈಗಿನ ಜ್ವಾಲಾದೇವಿ ಮಂದಿರವಾಗಿದೆ.

No comments:
Post a Comment