Thursday, November 11, 2021

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 106

 ದೇವರಾಯನದುರ್ಗ(Devarayana Durga)

ದೇವರಾಯನದುರ್ಗ ಬೆಂಗಳೂರಿನಿಂದ 65 ಕಿ.ಮೀ. ಮತ್ತು ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ ಮತ್ತು ಪವಿತ್ರ ಸ್ಥಳ ಕೂಡ ಹೌದು. ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8 ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ “ನಾಯಕನ ಕೆರೆ” ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ. ದೇವರಾಯನ ದುರ್ಗ ದೇವಾಲಯಗಳಿಗೆ ಮಾತ್ರವಲ್ಲದೆ ಬೇಸಿಗೆಯಲ್ಲೂ ತಂಪಾದ ಪರಿಸರಕ್ಕೆ ಜನಪ್ರಿಯವಾಗಿದೆ.


 ಯುದ್ಧದಲ್ಲಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡ ಮೈಸೂರು- ಚಿಕ್ಕ ದೇವರಾಯ ಒಡೆಯರ್ ಮಹಾರಾಜರಿಂದ ದೇವರಾಯನ ದುರ್ಗಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ,ಹಳೆಯ ಕೋಟೆ,ಸೂರ್ಯಾಸ್ತ ನೋಡಲು ಸುಂದರಾವಾದ ಜಾಗ ಕೂಡ ಇದೆ.ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ

***

ಈ ಸ್ಥಳವನ್ನು ಕರಿಗಿರಿ ಎಂದೂ ಕರೆಯುತ್ತಾರೆ ಅಂದರೆ ಆನೆಗಳಿರುವ ಬೆಟ್ಟ ಎಂದರ್ಥ.ದೇವಾಲಯವಿರುವ ಬೆಟ್ಟವನ್ನು ಪೂರ್ವ ದಿಕ್ಕಿನಿಂದ ನೋಡಿದಾಗ ಅದು ಆನೆಯನ್ನು ಹೋಲುತ್ತದೆ. ಆದ್ದರಿಂದ ಕರಿಗಿರಿ (ಕರಿ-ಆನೆ, ಗಿರಿ-ಬೆಟ್ಟ) ಎಂದು ಹೆಸರು. ಈ ಬೆಟ್ಟವು 3940 ಅಡಿ ಎತ್ತರದಲ್ಲಿದೆ ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಕೃಷ್ಣಾ ನದಿಯನ್ನು ಸೇರುವ ಜಯಮಂಗಲ ಮತ್ತು ಶಿವನಸಮುದ್ರದಲ್ಲಿ ಕಾವೇರಿ ನದಿಯನ್ನು ಸೇರುವ ಶಿಂಷಾ ನದಿಯಂತಹ ನದಿಗಳ ಜನ್ಮಸ್ಥಳ ದೇವರಾಯನದುರ್ಗ. 17 ನೇ ಶತಮಾನದ ಕೋಟೆ ಅವಶೇಷಗಳು, ಹೊಯ್ಸಳ ಮತ್ತು ವಿಜಯನಗರ ಕಾಲದ ಐತಿಹಾಸಿಕ ಅವಶೇಷಗಳು ಮತ್ತು ಒಡೆಯರ್ ರಾಜವಂಶದ ಆಳ್ವಿಕೆಯ ಕುರುಹುಗಳನ್ನು ದೇವರಾಯನದುರ್ಗ ಗ್ರಾಮ ಮತ್ತು ದೇವರಾಯನದುರ್ಗದ ಕುಂಭಿ ಬೆಟ್ಟಗಳಲ್ಲಿ ಕಾಣಬಹುದು.

ಹೊಯ್ಸಳರ ಕಾಲದಲ್ಲಿ ಬೆಟ್ಟದ ಮೇಲೆ ಆನೆ ಬಿದ್ದಸರಿ (ಆನೆ ಬಿದ್ದ ಝರಿ) ಎಂಬ ಹೆಸರಿನ ಊರಿತ್ತು ಎನ್ನುತ್ತದೆ ಇತಿಹಾಸ. ವಿಜಯನಗರದ ಅರಸರ ಕಾಲದಲ್ಲಿ ಬೆಟ್ಟ ದುರ್ಗಕ್ಕೆ ಕರಿಗಿರಿ ಎಂಬ ಹೆಸರು ಪಡೆಯಿತು. 1696ರಲ್ಲಿ ಚಿಕ್ಕದೇವರಾಯ ಒಡೆಯರು ಕೋಟೆಯನ್ನು ವಶಪಡಿಸಿಕೊಂಡ ಮೇಲೆ ಇದಕ್ಕೆ ದೇವರಾಯನದುರ್ಗ ಎಂಬ ಹೆಸರು ಬಂತು.

ಮಲ್ಲಪಟ್ಟಣ ಎಂದೂ ಕರೆಸಿಕೊಂಡಿದ್ದ ದೇವರಾಯನ ದುರ್ಗದಲ್ಲಿ ಮೊದಲನೇ ಕಂಠೀರವ ನರಸರಾಜ ಒಡೆಯರು ದುರ್ಗಾನರಸಿಂಹ ದೇವಾಲಯ ಕಟ್ಟಿಸಿದ್ದಾರೆ. ಕುಂಬಿ ಬೆಟ್ಟಕ್ಕೆ ಹೋಗುವಾಗ ಮೈಸೂರು ಅರಸರ ಕಾಲದ ಕೋಟೆಯ ಪಳೆಯುಳಿಕೆಗಳು ಗೋಚರಿಸುತ್ತವೆ. ಬೆಟ್ಟದ ಮೇಲೆ ಇರುವ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ.

ಊರಿನ ಈಶಾನ್ಯ ದಿಕ್ಕಿನಲ್ಲಿರುವ ಕುಂಭಿಬೆಟ್ಟವಿದೆ. ಬೆಟ್ಟದ ಬಲಕ್ಕೆ ತಿರುಗಿದರೆ ಬಿಲ್ಲಿನ ದೋಣೆ, ಸೀತಾದೇವಿ ಕೊಳ ಹಾಗೂ ರಾಮಲಕ್ಷ್ಮಣರು ತಪವನ್ನಾಚರಿಸಿದ ಗುಹೆ ಇದೆ. ಈ ಗುಹೆಯಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ ಪಕ್ಕದಲ್ಲಿಯೇ ಬ್ರಿಟಿಷರ ಕಾಲದ ಬಂಗ್ಲೆ ಇರುವ ಬಂಗ್ಲೆ ಬೆಟ್ಟ ನೋಡಬಹುದು.


ತುಮಕೂರಿನಿಂದ ಉರುಡಗೆರೆ ಮಾರ್ಗವಾಗಿ ಕ್ಷೇತ್ರಕ್ಕೆ ಬಂದರೆ ಮೊದಲು ನಾಮದ ಚಿಲುಮೆ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಜಯಮಂಗಲಿ ನದಿಯ ತಟದಲ್ಲಿ ಕಾಳಿಕಾಗುಡಿ ಇದೆ. ಮುಂದೆ ನರಸಿಂಹನ ದೇವಾಲಯವಿದೆ. ಪಕ್ಕದಲ್ಲೇ ಮೂರ್ಚಿತನಾಗಿದ್ದ ಲಕ್ಷ್ಮಣನ ರಕ್ಷಿಸಲು ಸಂಜೀವಿನಿ ಪರ್ವತವನ್ನೇ ಕಿತ್ತುತಂದ ಹನುಮ ಸಂಜೀವರಾಯನ ದೇವಾಲಯವಿದೆ. ಕ್ಷೇತ್ರದಲ್ಲಿ ರಾಮತೀರ್ಥ, ಧನುಷ್ ತೀರ್ಥ ಎಂಬ ಎರಡೂ ದೊಣೆಗಳೂ ಇವೆ. ತಳಬೆಟ್ಟದಿಂದ 2 ಕಿಲೋ ಮೀಟರ್ ಮೇಲಿರುವ ಕುಂಬಿ ಬೆಟ್ಟದ ಮೇಲೆ ಕುಂಬೀನರಸಿಂಹನ ದೇವಸ್ಥಾನವಿದೆ.

ಬ್ರಹ್ಮದೇವರು ಇಲ್ಲಿ ತಪವನ್ನಾಚರಿಸಿದಾಗ, ವಿಷ್ಣು ಲಕ್ಷ್ಮೀನರಸಿಂಹ ರೂಪದಲ್ಲಿ ಪ್ರತ್ಯಕ್ಷನಾದನಂತೆ, ವಿಷ್ಣುವಿಗೆ ಬ್ರಹ್ಮದೇವರು ಕುಂಭಾಭಿಷೇಕ ಮಾಡಿದರಂತೆ ಇಲ್ಲಿ ನೆಲೆನಿಂತ ವಿಷ್ಣು ಕುಂಬಿ ನರಸಿಂಹ ಎಂದೂ ಖ್ಯಾತನಾಗಿದ್ದಾನೆ. ಭಕ್ತರು ಯೋಗಾನರಸಿಂಹ, ಲಕ್ಷ್ಮೀನರಸಿಂಹ ಎಂದೂ ಪೂಜಿಸುತ್ತಾರೆ.

ಇಲ್ಲಿರುವ ದೇವಾಲಯದಲ್ಲಿ ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪವಿದೆ. ಇಲ್ಲಿ ನರಸಿಂಹತೀರ್ಥ, ಪಾದ ತೀರ್ಥ, ಪರಾಶರತೀರ್ಥ ಇದೆ. ದಾಸಶ್ರೇಷ್ಠ ಪುರಂದರದಾಸರು ಕ್ಷೇತ್ರಕ್ಕೆ ಭೇಟಿ ನೀಡಿ, ಕರಿಗಿರಿ ನರಸಿಂಹ ಭಕ್ತರ ದಂತಿಸಿಂಹ ಪರಿಪಾಲಿಸು ಮೊರೆಹೊಕ್ಕೆನು ನಾನು ವರದಪುರಂದರ ವಿಠಲ ಎಂದು ಹಾಡಿದ್ದಾರೆ.

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 105

 ಸಾವನದುರ್ಗ (Savandurga )

ಸಾವನದುರ್ಗ ಬೆಂಗಳೂರು ನೆರೆ ಜಿಲ್ಲೆಯಾದ ರಾಮನಗರದ ಮಾಗಡಿಯಿಂದ ) ಪಶ್ಚಿಮಕ್ಕೆ 60 ಕಿಮೀ ದೂರದಲ್ಲಿದೆ. ಈ ಬೆಟ್ಟವನ್ನು ಏಷ್ಯಾದ ಅತಿ ದೊಡ್ಡ ಏಕಶಿಲೆಯ ಬೆಟ್ಟ ಎಂದು ಪರಿಗಣಿಸಲಾಗಿದೆ.ಈ ಬೆಟ್ಟವು ಸರಾಸರಿ ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದೆ ಮತ್ತು ದಕ್ಷಿಣ ಪ್ರಸ್ಥಬೂಮಿಯ ಭಾಗವಾಗಿದೆ. . ಇದು ಪೆನಿನ್ಸುಲರ್ ಗ್ನಿಸ್, ಗ್ರಾನೈಟ್‌ಗಳು, ಅಪರೂಪದ  ಡೈಕ್‌ಗಳು ಮತ್ತು ಲ್ಯಾಟರೈಟ್‌ಗಳನ್ನು ಒಳಗೊಂಡಿದೆ ಸಾವನದುರ್ಗ ಬೆಟ್ಟ ಬೆಂಗಳೂರು ಸಿಟಿ ಜಂಕ್ಷನ್‌ನಿಂದ 48 ಕಿ.ಮೀ, ರಾಮನಗರದಿಂದ 31 ಕಿ.ಮೀ ಮತ್ತು ಮಾಗಡಿಯಿಂದ 13 ಕಿ.ಮೀ ದೂರದಲ್ಲಿದೆ. ಚಾರಣಕ್ಕಾಗಿ  ಇಲ್ಲಿಗೆ ಬೆಂಗಳೂರಿನಿಂದ ಸಾಕಷ್ಟು ಜನ ಪ್ರತಿನಿತ್ಯ ಆಗಮಿಸುತ್ತಾರೆ.

ಚಿತ್ರಕೃಪೆ: ಕೆಂಗೇರಿ ಚಕ್ರಪಾಣಿ



ಲಕ್ಷ್ಮಿ ನರಸಿಂಹ ದೇವಾಲಯ ಮತ್ತು ಚಾರಣ ಪ್ರಿಯರ ಸ್ಥಳ

ಸಾವನದುರ್ಗ ದಲ್ಲಿನ ಎರಡು ನಿಷಿದ್ಧ ಬೆಟ್ಟಗಳು, ದೇವಸ್ಥಾನಗಳು ಹಾಗು ಪ್ರಕೃತಿ ಸೌಂದರ್ಯ ಆಕರ್ಷಣೀಯವಾಗಿದೆ. ಬೆಂಗಳೂರಿಂದ ಇದು 33 ಕಿಮೀ ದೂರವಿದ್ದು  ಭಾರತದ ಇತರೆ ಯಾವುದೇ ಭಾಗದಿಂದ ಸುಲಭವಾಗಿ  ತಲುಪಬಹುದು.

ಬೆಟ್ಟಗಳು ಹಾಗು ಕೋಟೆಗಳು


ಕರಿಗುಡ್ಡ ಹಾಗು ಬಿಳಿಗುಡ್ಡಗಳಿಂದಾಗಿ  ಸಾವನದುರ್ಗ  ಹೆಚ್ಚು  ಪ್ರಖ್ಯಾತಿ ಹೊಂದಿದೆ . ಇದರ  ಮೂಲಾರ್ಥ ‘ಬ್ಲ್ಯಾಕ್  ಹಿಲ್ಲ್’ ಹಾಗು  ‘ವೈಟ್ ಹಿಲ್ಲ್  ಎಂದು.  ಕರಿಗುಡ್ಡ ಹಾಗು ಬಿಳಿಗುಡ್ಡಗಳು ಡೆಕ್ಕನ್ ತಪ್ಪಲಿಗಿಂತ ಮೇಲೆ  1226 ಮೀಟರ್ ಗಳಷ್ಟು ಎತ್ತರವಿದೆ. ಇವು ಬೃಹದಾಕಾರದ ಬಂಡೆಗಳು,  ಗ್ರಾನೈಟ್  ಹಾಗು ಲಾಟೆರೈಟ್ ಗಳಿಂದ  ನಿರ್ಮಿತವಾಗಿದ್ದು ಏರಲು ಕಷ್ಟವಾಗಿದೆ. ಬೆಟ್ಟದ ತಳದಿಂದ ತುದಿಯವರೆಗಿನ ಪ್ರಯಾಣ ಹಲವು ಬಂಡೆ ಮುರುಕುಗಳು ಮತ್ತು ಬಾಗುವಿಕೆಯಿಂದ ಕಷ್ಟಕರವಾಗಿರುತ್ತದೆ. ಹಾಗಿದ್ದರೂ  ಉತ್ಸುಕರಿಗೆ  ಇದು ಪರಿಶ್ರಮಕ್ಕೆ ತಕ್ಕ ಫಲವಾಗುತ್ತದೆ. ಪುರಾತನ ಕೋಟೆಯ ಅವಶೇಷಗಳು ಬೆಟ್ಟದ ತುದಿಯಲ್ಲಿ ಕಿರೀಟವಾಗಿ ಅಲಂಕರಿಸುತ್ತವೆ.

ಬೆಟ್ಟಗಳನ್ನು ಹತ್ತುವ  ಆಸಕ್ತಿ ಹೊಂದಿರದವರು ವೀರಭದ್ರೇಶ್ವರ ಸ್ವಾಮಿ ಹಾಗು ನರಸಿಂಹ ಸ್ವಾಮಿ ದೇವಸ್ಥಾನಗಳನ್ನು ಅನ್ವೇಷಿಸಬಹುದಾಗಿದೆ (ಸಂದರ್ಶಿಸಬಹುದಾಗಿದೆ). ಬೆಟ್ಟದ ಕೆಳಗಿರುವ ಗುಡ್ಡಗಳ ಮೇಲೆ ಈ ದೇವಸ್ಥಾನಗಳು ನೆಲೆಸಿವೆ. ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿದ್ದು ವಾಯುವಿಹಾರಕ್ಕೆ ಹೊರಟರೆ ಅಪರೂಪದ ಮರಗಳು ಅಲ್ಲದೆ ಹಳದಿ-ಗಂಟಲಿನ ಬುಲ್ ಬುಲ್  ಹಕ್ಕಿಗಳನ್ನು ಕಾಣಬಹುದು. ಈ ಸ್ಥಳದಲ್ಲಿ ಹಲವು ಕುತೂಹಲಕಾರಿ ಹಿನ್ನೆಲೆಯಿರುವ ಬಹಳಷ್ಟು ಚಿತಾಭಸ್ಮದ ಪಾತ್ರೆಗಳನ್ನು ಕಾಣಬಹುದಾಗಿದೆ.

ಬೆಂಗಳೂರಿಂದ ಮಾಗಡಿಗೆ ಹೋಗುವ ಬಸ್ಸುಗಳು ಸಾವನದುರ್ಗಕ್ಕೆ ಬಹಳ ಹತ್ತಿರದಲ್ಲಿ ಸಂಚರಿಸುತ್ತವೆ. ಅಲ್ಲದೆ ತುಂಬಾ ಬಸ್ಸುಗಳು ಲಭ್ಯವಿದ್ದು ಅಲ್ಲಿಗೆ ಎರಡು ತಾಸಿನ ಪ್ರಯಾಣ, ಅಲ್ಲಿಂದ ಸಾವನದುರ್ಗಕ್ಕೆ ಹೋಗಲು ಸ್ಥಳೀಯ ಬಸ್ಸುಗಳು ಹಾಗು ಆಟೋಗಳ ಸೌಲಭ್ಯವಿದೆ.

***

ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ರೂಪುಗೊಂಡಿದೆ. ಈ ಬೆಟ್ಟದ ಹೆಸರಿನ ಆರಂಭಿದ ದಾಖಲೆಯು ಕ್ರಿ.ಶ. 1340ರಲ್ಲಿ ಮಾಡಬಲುವಿನ ಹೊಯ್ಸಳ ಬಲ್ಲಾಳ III ರ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯ ನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗ ದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢಪಡಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೆಂಪೆಗೌಡದಂತೆ ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. 1638ರಿಂದ 1728ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. 1791ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮೂರನೇ ಆಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು.ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರ್ ‌ನಲ್ಲಿ (1794) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾರೆ.ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾರೆ. ಈ ಬೆಟ್ಟದ ತುದಿಯನ್ನು ತಲುಪಲು ಮೆಟ್ಟಿಲುಗಳಿರಲಿಲ್ಲ ಮತ್ತು ಇದರ ಸುತ್ತ ಬಿದಿರು ಮತ್ತು ಇತರ ಮರಗಳು ಆವರಿಸಿಕೊಂಡು ಒಂದು ತಡೆಗಟ್ಟನ್ನು ರೂಪಿಸಿದ್ದವು.

ಸಾವನದುರ್ಗ. ವಿಜಯನಗರ ಸಾಮ್ರಾಜ್ಯ ಪತನಾನಂತರ ಕೆಲ ಕಾಲದಲ್ಲೇ ಕೆಂಪೇಗೌಡರು ಮಡಿದಾಗ ಮೈಸೂರಿನ ದಳವಾಯಿ ಮಾಗಡಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಮುಂದೆ ಮೈಸೂರಿನ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಸಾವನ ದುರ್ಗವನ್ನು ಟಿಪ್ಪು ಸುಲ್ತಾನ್ ಶಿಕ್ಷಿಸುವ ತಾಣವಾಗಿಸಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾಧ ಮಾಡಿದರೆ ಅವರನ್ನು ಬೆಟ್ಟದ ಮೇಲಿನಿಂದ ತಳ್ಳುವ ಶಿಕ್ಷೆಗೆ ಗುರಿಪಡಿಸುತ್ತಿದ್ದನಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಸಾವಿನ ದುರ್ಗ ಎಂಬ ಹೆಸರು ಬಂದಿದ್ದು, ಮುಂದೆ ಸಾವನ ದುರ್ಗ ಎಂದಾಗಿದೆ ಎನ್ನುವುದು ಒಂದು ಊಹೆ.ಮುಂದೆ ಟಿಪ್ಪು ಸುಲ್ತಾನನಿಂದ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಾಗಡಿ ಪ್ರದೇಶವನ್ನು ಲಾರ್ಡ್ ಕಾರ್ನ್ ವಾಲಿಸ್ ವಶಪಡಿಸಿಕೊಂಡನು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರ ದೇವರ ಗುಡಿ ಹಾಗು ಲಕ್ಷ್ಮಿ ನರಸಿಂಹ ದೇವರ ಗುಡಿಗಳಿವೆ. ಕರ್ನಾಟಕ ಸರ್ಕಾರ ನಿಭಾಯಿಸುತ್ತಿರುವ ಸಣ್ಣ ಅರಣ್ಯ ಪ್ರದೇಶವು ಇಲ್ಲಿದೆ. 'ಎ ಪ್ಯಾಸೇಜ್ ಟು ಇಂಡಿಯಾ' ಎನ್ನುವ ಹಾಲಿವುಡ್ ಚಿತ್ರವನ್ನು ಸಾವನದುರ್ಗದ ಬೆಟ್ಟ ಪ್ರದೇಶಗಳ ಸುತ್ತ ಮುತ್ತ ಚಿತ್ರೀಕರಿಸಲಾಗಿದ್ದು ಒಂದು ಕಾಲಕ್ಕೆ ಸಾವನದುರ್ಗದಲ್ಲಿ ಅತೀ ಹೆಚ್ಚಾಗಿ ಚಿತ್ರೀಕರಣಗಳು ನಡೆಯುತ್ತಿದ್ದವು.

ಈ ಪ್ರದೇಶದಲ್ಲಿ ಬೃಹತ್ ಶಿಲೆಯ ಹೂಳುವ ಸಮಾಧಿಗಳು ಕಂಡುಬಂದಿವೆ. ಸಂಸ್ಕೃತದಲ್ಲಿ ಸಾವಣವೆಂದರೆ ಮೂರು ಬಾರಿ ಮಾಡುವ ವಿಧಿವಿಹಿತ ಕ್ರಮವೆಂದು ಅರ್ಥ.


Wednesday, November 10, 2021

ನಮ್ಮಲ್ಲಿನ ಸ್ಥಳ ಪುರಾಣಗಳು- 104

 ಚಿಕ್ಕತಿರುಪತಿ (Chikka Tirupati)

ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ಕ್ಷೇತ್ರ ವಿಶ್ವ ಪ್ರಸಿದ್ದ ವಾಗಿದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನ ಹೊರವಲಯದಲ್ಲಿರುವ, ಕೋಲಾರ ಜಿಲ್ಲೆ ಮಾಲೂರು ತಾಕೂಕಿನ ಚಿಕ್ಕ ತಿರುಪತಿ ಸಹ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಕಾರಣದಿಂದ ಪ್ರಸಿದ್ದಿಯನ್ನು ಹೊಂದಿದೆ. ಇಲ್ಲಿನ ದೇವಾಲಯವು ವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿದ್ದು ಚೋಳರ ಕಾಲದ ದೇವಾಲಯವೆಂದು ಗುರುತಿಸಲ್ಪಟ್ಟಿದೆ. ಚಿಕ್ಕತಿರುಪತಿಯು ತಾಲೂಕು ಕೇಂದ್ರವಾದ ಮಾಲೂರಿನಿಂದ 15 ಕಿಮೀ (9.3 ಮೈಲಿ), ITPL ನಿಂದ 26 ಕಿಮೀ (16 ಮೈಲಿ) ಮತ್ತು ಕೋರಮಂಗಲದಿಂದ 30 ಕಿಮೀ (19 ಮೈಲಿ) ದೂರದಲ್ಲಿದೆ.


.ದೇವಾಲಯವು ಬೆಳಿಗ್ಗೆ 6.30 ರಿಂದ ಸಂಜೆ 7:30 ರವರೆಗೆ (ವಾರದ ಎಲ್ಲಾ ದಿನಗಳು) ತೆರೆದಿರುತ್ತದೆ ಮತ್ತು ದಿನದ ವಿವಿಧ ಸಮಯಗಳಲ್ಲಿ ನಾಲ್ಕು ಜಾವಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರುತ್ತದೆ. ವಾರ್ಷಿಕ ಬ್ರಹ್ಮೋತ್ಸವ ಸಹ ಇಲ್ಲಿ ನೆರವೇರುತ್ತದೆ. ಮಾರ್ಗಶಿರ ಮಾಸದ ವೈಕುಂಠ ಏಕಾದಶಿಯ ದಿನ ಮತ್ತು ಜನವರಿ 1ನೇ ತಾರೀಖು ಹಾಗೂ ಶ್ರಾವಣ ಶನಿವಾರಗಳಂದು ಮತ್ತು  ಧನುರ್ಮಾಸದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ.  ಪ್ರತಿ ನಿತ್ಯ ವೈಖಾನಸಾಗಮ ರೀತ್ಯ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ರಥ ಸಪ್ತಮಿಯ ದಿನ ಸೂರ್ಯಪ್ರಭೆ ಉತ್ಸವ ಇಲ್ಲಿನ ವಿಶೇಷಗಳಲ್ಲಿ ಒಂದು. ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನ ಸ್ವಾಮಿಯವರಿಗೆ ಪುಷ್ಪ ಪಲ್ಲಕ್ಕಿ ಉತ್ಸವ ನಡೆಯುತ್ತದೆ, ಪುಬ್ಬ ನಕ್ಷತ್ರದ ದಿನ ಬ್ರಹ್ಮ ರಥೋತ್ಸವ ಜರುಗುತ್ತದೆ.

***’

ದ್ವಾಪರಯುಗದಲ್ಲಿ ರಾಜ ಮಹಾರಾಜರು, ಋಷಿ ಮುನಿಗಳು ಮಾಡುತ್ತಿದ್ದ ಯಜ್ಞಯಾಗಾದಿಗಳ ಹವಿರ್ಭಾಗವನ್ನು ದೇವತೆಗಳಿಗೆ ಅರ್ಪಿಸುತ್ತಿದ್ದ ಹವ್ಯವಾಹನನಾದ ಅಗ್ನಿದೇವ ಯಥೇಚ್ಛವಾದ ತುಪ್ಪಸೇವನೆಯಿಂದಾಗಿ ಉದರಬೇನೆ (ಹೊಟ್ಟೆನೋವು)ಗೆ ತುತ್ತಾಗುತ್ತಾನೆ. ಸುರವೈದ್ಯರಾದ ಅಶ್ವಿನಿ ಕುಮಾರರು, ಔಷಧ ಸಸ್ಯಗಳಿಂದ ಸಮೃದ್ಧವಾದ ಖಾಂಡವ ವನವನ್ನು ಕಾಳ್ಗಿಚ್ಚಿನಿಂದ ಸುಟ್ಟರೆ, ಆ ಗಿಡಮೂಲಿಕೆಗಳ ಭಕ್ಷಣೆಯಿಂದ ನಿನ್ನ ಉದರ ಬೇನೆ ನಿವಾರಣೆ ಆಗುತ್ತದೆ ಎಂದು ಅಗ್ನಿದೇವನಿಗೆ ತಿಳಿಸುತ್ತಾನೆ. .



ಅಗ್ನಿದೇವ ಖಾಂಡವ ದಹನಕ್ಕಾಗಿ ಮಧ್ಯಮ ಪಾಂಡವ ಅರ್ಜುನನ ಮೊರೆ ಹೋಗುತ್ತಾನೆ. ಖಾಂಡವ ದಹನಕ್ಕೆ ಅಡ್ಡಿ ಆಗದಂತೆ ಆರ್ಜುನ ಹಾಗೂ ಶ್ರೀಕೃಷ್ಣ ಪರಮಾತ್ಮ ಬೆಂಗಾವಲಿಗೆ ನಿಲ್ಲುತ್ತಾರೆ. ಈ ದಹನ ಕಾಲದಲ್ಲಿ ತಕ್ಷಕನೆಂಬ ನಾಗ ಸುಟ್ಟಗಾಯಕ್ಕೆ ತುತ್ತಾಗುತ್ತಾನೆ, ಸಿಟ್ಟಿಗೆದ್ದ ತಕ್ಷಣ ನೀನು ತೇಜೋಹೀನನಾಗು  ಎಂದು ಅಗ್ನಿಗೆ ಶಪಿಸುತ್ತಾನೆ.

ಶಾಪಗ್ರಸ್ಥನಾದ ಅಗ್ನಿ ತನ್ನ ಸುಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಇದರಿಂದಾಗಿ ಋಷಿ ಮುನಿಗಳು ಮಾಡುವ ಯಾಗದ ಹವಿರ್ಭಾಗ ದೇವತೆಗಳ ತಲುಪದ ಸ್ಥಿತಿಯೂ ಬಂದೊದಗುತ್ತದೆ. ಇದರಿಂದ ದೇವತೆಗಳು ಹಾಗೂ ಋಷಿ ಮುನಿಗಳು ವ್ಯಾಕುಲಗೊಳ್ಳುತ್ತಾರೆ.  ಅಗ್ನಿ ದೇವನಿಗೆ ತಕ್ಷಕ ನೀಡಿರುವ ಶಾಪ ವಿಮೋಚನೆ ಮಾಡಿಕೊಳ್ಳಲು ನಾರಾಯಣನ ಕುರಿತು ತಪಸ್ಸು ಆಚರಿಸುವಂತೆ ತಿಳಿಸುತ್ತಾರೆ.

ಹಿರಿಯ ಮಾರ್ಗದರ್ಶನದಂತೆ ಅಗ್ನಿದೇವ ಒಂದು ಮಂಡಲ ಕಾಲ ನಾರಾಯಣನ ಪೂಜೆ ಮಾಡಿ ತಪಸ್ಸು ಮಾಡುತ್ತಾನೆ. ಆಗ ನಾರಾಯಣ ಪ್ರಸನ್ನ ವೆಂಕಟರಮಣನ ರೂಪದಲ್ಲಿ ದರ್ಶನ ನೀಡಿ ಶಾಪ ವಿಮೋಚನೆ ಮಾಡುತ್ತಾನೆ.  ವರದ ನಾರಾಯಣನ (ಪ್ರಸನ್ನ ವೆಂಕಟರಮಣ) ಕೃಪೆಯಿಂದ ಅಗ್ನಿ ಶಾಪವಿಮುಕ್ತನಾಗಿ ಮತ್ತೆ ತನ್ನ ಹಿಂದಿನ ಕಾಂತಿ ಪಡೆಯುತ್ತಾನೆ. ಶ್ರೀಮನ್ನಾರಾಯಣನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ಸ್ಥಳದಲ್ಲಿ ತನಗೆ ವಿಷ್ಣು ದರ್ಶನ ನೀಡಿದ ರೂಪದಲ್ಲೇ ವರದ ನಾರಾಯಣಸ್ವಾಮಿ ವಿಗ್ರಹ ಸ್ಥಾಪಿಸಿ ಪೂಜಿಸಿ, ದೇವಾಲಯವನ್ನು ನಿರ್ಮಾಣ ಮಾಡಿದನೆಂದು ಪ್ರತೀತಿ ಇದೆ.

ಹೀಗೆ ಶತಮಾನಗಳ ಕಾಲದಿಂಡ ಇಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ನಂಬಿದ್ದಾದರೆ ಅವರ ಸಕಲ ಕಷ್ಟಗಳು ನಿವಾರಣೆ ಆಗುತ್ತವೆ. ವಿವಾಹ ವಿಳಂಬ ಆಗುವವರು ಇಲ್ಲಿ ಬಂದು ಹರಕೆ ಹೊತ್ತು ಹೋದರೆ. ಅವರಿಗೆ ಕಂಕಣಭಾಗ್ಯ ಕೂಡಿ ಬರುತ್ತದಂತೆ. ಹೀಗಾಗಿ ಇಲ್ಲಿ ಹರಕೆ ಹೊತ್ತ ತರುವಾಯ ವಿವಾಹ ಆದವರು ಇಲ್ಲಿ ಬಂದು ಕಲ್ಯಾಣೋತ್ಸವ ನೆರಬೇರಿಸುತ್ತಾರೆ.

Friday, October 29, 2021

ಸಿನಿ ನಟ ನಟಿಯರ ಪ್ರಾಣ ಹಿಂಡುತ್ತಿರುವ ಫಿಟ್ ನೆಸ್ ಮಾಯೆ!

ಬದುಕಲು ದೇಹ ಗಟ್ಟಿಮುಟ್ಟಾಗಿ ಆರೋಗ್ಯವಾಗಿರಬೇಕು ಆದರೆ ದೇಹದಾರ್ಡ್ಯತೆಯೊಂದೇ ಬದುಕಿನಶ್ರೇಷ್ಠತೆಗೆ ಮಾನದಂಡ ಎಂದೆಣಿಸಬಾರದು.... ಇಂದು ಪುನೀತ್ ರಾಜ್ ಕುಮಾರ್ ಸಾವನ್ನು ಕಂಡಾಗ ಹೀಗೆನ್ನಿಸಿತು. ಸ್ಯಾಂಡಲ್ ವುಡ್ ನಲ್ಲಿ ಇದು ಎರಡನೇ ಘಟನೆ, ಕಳೆದ ವರ್ಷ ಯುವನಟ ಚಿರಂಜೀವಿ ಸರ್ಜಾ ಕೂಡ ಹೀಗೇ ಅಚ್ಚರಿಯ ರೀತಿಯಲ್ಲಿ ಸಾವನ್ನು ಕಂಡಿದ್ದರು. ಅಂದೂ ಸಹ ಇಡೀ ಕನ್ನಡ ನಾಡು ಶೋಕದಲ್ಲಿತ್ತು. ಇಂದು ವರನಟ ಡಾ. ರಾಜ್ ಕುಟುಂಬದ ಕುಡಿ, ದೊಡ್ಮನೆ ಹುಡ್ಗ ಪುನೀತ್ ನಮ್ಮನ್ನಗಲಿದ್ದಾರೆ. ಈ ಸಂದರ್ಭದಲ್ಲಿ  ಒಬ್ಬ ಕಲಾವಿದನಿಗೆ ದೇಹದಾರ್ಡ್ಯತೆ ಎಷ್ಟರ ಮಟ್ಟಿಗೆ ಮುಖ್ಯ? ಫಿಟ್ ನೆಸ್ ಇದ್ದವರಿಗೆ ಮಾತ್ರ ಚಿತ್ರದಲ್ಲಿ ನಾಯಕನಾಗುವುದು ಸಾಧ್ಯವೆ? ಒಂದೊಮ್ಮೆ ಫಿಟ್ ನೆಸ್ ಇಲ್ಲದಿದ್ದರೆ ಅಥವಾ ಸಾಕಷ್ಟು ದೇಹದಾರ್ಡ್ಯತೆ ಪ್ರದರ್ಶಿಸದೆ ಹೋದರೆ ಚಿತ್ರೋದ್ಯಮದಲ್ಲಿ ಅಂತಹಾ ನಾಯಕರಿಗೆ ಅವಕಾಶ ಇಲ್ಲವಾಗುತ್ತದೆಯೆ? ಎಂಬತ್ತ ಗಮನ ಹರಿಸಬೇಕಿದೆ.


ನಟ ಪುನೀತ್ ಸೇರಿ ಅನೇಕರು ತಾವು ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಅದು ತಪ್ಪಲ್ಲ. ಆದರೆ ಫಿಟ್ ನೆಸ್ ಕಾಪಾಡಿಕೊಳ್ಳುವ ಉಮೇದಿನಲ್ಲಿ ದೇಹದ ಆರೋಗ್ಯದ ಬಗ್ಗೆ ಗಮನಿಸುವುದೇ ಇಲ್ಲ! ಒಂದು ಚಿತ್ರಕ್ಕಾಗಿ ಅದರಲ್ಲಿನ ಕೆಲ ದೃಶ್ಯಗಳಿಗಾಗಿ ತಮ್ಮ ತೂಕ ಹೆಚ್ಚಿಸಿಕೊಳ್ಳುವ ಅಥವಾ ಇಳಿಸಿಕೊಳ್ಳುವ ನಟ ನಟಿಯರು ಇತ್ತೀಚೆಗೆ ಹೆಚ್ಚುತ್ತಿದ್ದಾರೆ. ಹಾಗೆ ತಮ್ಮ ಅವಶ್ಯಕತೆಗೆ ತಕ್ಕಂತೆ ದೇಹವನ್ನು ಕರಗಿಸುವ, ಬೆಳೆಸಿಕೊಳ್ಳುವ ಅವರು ಇದರಿಂದ ತಮ್ಮ ಹೃದಯಕ್ಕೆ ಹಾಗೂ ವಿವಿಧ ಅಂಗಾಂಗಗಳಿಗೆ ಆಗಬಹುದಾದ ಪರಿಣಾಮದ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ.

ಅಯ್ಯೋ ಇದೇನೂ ಹೊಸದಲ್ಲ ಹಿಂದಿನ ಕಾಲದಿಂದ ಬಂದದ್ದು, ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಲ್ಲಿಯೂ ದೇಹದ ಪುಷ್ಟಿದಾಯಕತೆಗೆ ಒತ್ತು ನೀಡಲಾಗುತ್ತಿತ್ತು ಎನ್ನಬಹುದು. ಹೌದು. ವರನಟ ಡಾ, ರಾಜ್ ಪ್ರತಿದಿನವೂ ಯೋಗ ಸಾಧನೆ ಮಾಡುತ್ತಾ ಬಂದಿದ್ದರು. ಅಲ್ಲದೆ ಇನ್ನಿತರೆ ನಟರೂ ಸಹ ಯೋಗ, ಆಸನಗಳ ಅಭ್ಯಾಸ ಮಾಡುತ್ತಿದ್ದರು. ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಆಹಾರ ಪದ್ದತಿ ಬದಲಾಗಿದೆ. ಕೆಲಸದ ಒತ್ತಡ ಅಧಿಕವಾಗಿ ಊಟ, ನಿದ್ರೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಹೀಗಿರುವಾಗ ಇದರ ನಡುವೆ ಫಿಟ್ ನೆಸ್ ಗಾಗಿ ಜಿಮ್ ಗಳ ಮೊರೆ ಹೋಗಿ ವಿಪರೀತವಾಗಿ ದೇಹದಂಡನೆ ಮಾಡಿಕೊಳ್ಳುವುದರಿಂದ ಮಾನವ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಲಿವುಡ್ ನಲ್ಲಿ ನಟರು ಅಪಾಯಕಾರಿ ಪ್ರಮಾಣದಲ್ಲಿ ಪಾತ್ರಗಳಿಗಾಗಿ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ಇಳಿಸಿಕೊಳ್ಳುತ್ತಾರೆ. ನಟಿಯರೂ ಸಹ ತಾವು ಮಗುವನ್ನು ಪಡೆದ ನಂತರ ಮತ್ತೆ ತಮ್ಮ ಹಿಂದಿನ ಫಾರ್ಮ್ ಗೆ ಮರಳಲು ಅನೇಕ ಬಗೆಯಲ್ಲಿ ಕಸರತ್ತುಗಳನ್ನು ನಡೆಸುತ್ತಾರೆ. ಆದರೆ ತೆರೆ ಮೇಲೆ ಸುಂದರವಾಗಿ ಕಾಣಿಸುವ ಸಲುವಾಗಿ ಮಾಡುವ ಈ ತಯಾರಿ ನಟ ನಟಿಯರ ಆರೋಗ್ಯ ದೃಷ್ಟಿಯಿಂದ ಸೂಕ್ತವಾದುದ್ದಲ್ಲ.

ಡಯಟ್ ಫುಡ್ ಕಂಪನಿಗಳು ಪ್ರಸಿದ್ದ ನಟ ನಟಿಯರು ತಮ್ಮ ಉತ್ಪನ್ನಗಳನ್ನು ಬಳಸಿದ್ದಾರೆಂದು ಪ್ರಚುರಪಡಿಸಲು ಬಯಸುತ್ತವೆ. ಹಾಗಾದಾಗ ಜನರೂ ಅಂತಹಾ ಉತ್ಪನ್ನಗಳ ಖರೀದಿಗಿಳಿಯುತ್ತಾರೆ ಎಂದು ಭಾವಿಸಿದೆ. ಅದಕ್ಕಾಗಿ ಅಂತಹಾ ಸಂಸ್ಥೆಗಳು ಎಂಡಾರ್ಸ್‌ಮೆಂಟ್ ಡೀಲ್‌ಗಳಿಗಾಗಿ ಸೆಲೆಬ್ರಿಟಿಗಳನ್ನು ನೇಮಿಸಿಕೊಳ್ಳುತ್ತಾರೆ.

ಇನ್ನು ಆಹಾರದಲ್ಲಿನ ಪೌಷ್ಟಿಕಾಂಶಗಳ  ಕುರಿತು ವಿಶೇಷ ತಜ್ಞರು ನಟನಟಿಯರು ಸೇವಿಸುವ ಆಹಾರಗಳ ಬಗ್ಗೆ ಅವರೊಂದಿಗೆ ಆಗಾಗ ಚರ್ಚಿಸುತ್ತಾರೆ.ಅದು ಅವರ ತೂಕದಲ್ಲಿನ ನಷ್ಟ ಅಥವಾ ಹೆಚ್ಚಳದ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಟನಿಗೆ ವಿವರವಾದ ಮತ್ತು ವೈಯಕ್ತಿಕವಾಗಿ ಸೂಚಿಸಿದ ಆಹಾರದ ಪಟ್ಟಿ ನೀಡಬಹುದು.  ಇನ್ನೂ ಕೆಲವರು ತೂಕ ಇಳಿಸಿಕೊಳ್ಲಲು ತಮ್ಮದೇ ತಂತ್ರವನ್ನು ಬಳಸಿಕೊಳ್ಳುತ್ತಾರೆ. ನಟಿ ಬೆಯೋನ್ಸ್ ಅವರು ತಮ್ಮ ಚಲನಚಿತ್ರ ಗಳಲ್ಲಿನ  ಡ್ರೀಮ್‌ಗರ್ಲ್ಸ್‌ ನಂತಹಾ ಪಾತ್ರಕ್ಕಾಗಿ  20 ಪೌಂಡ್‌ಗಳನ್ನು ಇಳಿಸಲು ಮಾಸ್ಟರ್ ಕ್ಲೀನ್ಸ್ ಸಿಸ್ಟಮ್ ಅನ್ನು ಬಳಸಿದ್ದಾರೆಂದು ವರದಿಯಾಗಿತ್ತು.  ಮಾಸ್ಟರ್ ಕ್ಲೀನ್ಸ್ ಸಿಸ್ಟಮ್ ಎನ್ನುವುದು ದೇಹದ ತೂಕ ಇಳಿಕೆ ಮಾಡಲು ನಿಂಬೆ ಪಾನಕ ಆಧಾರಿತ ಮಿಶ್ರಣವನ್ನು ಹೊರತುಪಡಿಸಿ ಏನನ್ನೂ ತಿನ್ನಬಾರದೆಂದು ತಾಕೀತು ಮಾಡುತ್ತದೆ.  ಇದು ಶೀಘ್ರದಲ್ಲಿ ತೂಕವನ್ನು ಇಳಿಸಬಲ್ಲದು ಆದರೆ ಇದರಿಂದ ನಿಮಗೆ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತದೆ.

ವೈಯಕ್ತಿಕ ತರಬೇತುದಾರರು ನಟರು ತಮ್ಮ ತೂಕವನ್ನು ಕಳೆದುಕೊಳ್ಳಲು ಮತ್ತು ಉತ್ತಮ ಮೈಕಟ್ಟು ಪಡೆಯಲು ಪ್ರತಿದಿನ ವರ್ಕ್ ಔಟ್ ಮಾಡಲು ಪ್ರೇರೇಪಿಸುವ ಮೂಲಕ ಅತ್ಯುತ್ತಮವಾಗಿ ಕಾಣುವಂತೆ ಸಲಹೆ ನೀಡುತ್ತಾರೆ. ಕೆಲವರು  ಜಿಮ್‌ನಲ್ಲಿ ದಿನಕ್ಕೆ ಮೂರು ಗಂಟೆಗಳ ಕಾಲ ಕಳೆಯುತ್ತಾರೆ ಮತ್ತು ಅವರ ಕಡೆಯಿಂದ ಪರವಾನಗಿ ಪಡೆದ ತರಬೇತುದಾರರು ತಮ್ಮ ರೂಪದ ಕುರಿತು ಕಮೆಂಟ್ ಮಾಡಲು ಬಯಸುತ್ತಾರೆ. ಅಲ್ಲದೆ ಅಂತಹವರಿಗೆ ದಿನನಿತ್ಯ ವ್ಯಾಯಾಮ ಮಾಡಲು ಕೆಲ ಸಲಹೆ ಸೂಚನೆಗಳನ್ನು ಸಹ ನೀಡಲಾಗುವುದು. ಆದರೆ ಇದೆಲ್ಲವೂ ನಿಯಮಿತವಾಗಿದ್ದಲ್ಲಿ ಉತ್ತಮ ಹಾಗೆಂದು ಅತಿಯಾದರೆ ಅದು ನಟ ನಟಿಯರ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಣಕ್ಕೂ ಸಂಚಕಾರ ತರುತ್ತದೆ.

ಚಿರಂಜೀವಿ ಸರ್ಜಾ, ಪುನೀತ್ ಗೆ ನಿಜಕ್ಕೂ ಆದದ್ದೇನು?

ಚಿರಂಜೀವಿ ಸರ್ಜಾ ಸಾವಿನ ಹಿಂದಿನ ದಿನ ಭಾನುವಾರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಆ ತಕ್ಷಣ ಅಂಬ್ಯುಲೆನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಅವರಿಗೆ ಹೃದಯ ಸ್ತಂಭನವಾಗಿತ್ತು. ಅದಕ್ಕೆ ಮುನ್ನ ಮನೆಯಲ್ಲಿದ್ದಾಗಲೇ ಚಿರಂಜೀವಿಯವರಿಗೆ ಒಮ್ಮೆ ಪ್ರಜ್ಞೆ ಮರುಕಲೀಸಿತ್ತು ಆ ವೇಳೆ ಪತ್ನಿ ಮೇಘನಾರನ್ನು ಕರೆದು ನೀನು ಗಾಬರಿಯಾಗಬೇಡ, ನನಗೇನೂ ಆಗುವುದಿಲ್ಲ ಎಂದಿದ್ದರು. ಎಂದು ಚಿರಂಜೀವಿಯವರ ಒಂದನೇ ವರ್ಷದ ಪುಣ್ಯತಿಥಿಯ ವೇಳೆ ಮೇಘನಾ ನೆನ್ಪು ಮಾಡಿಕೊಂಡಿದ್ದಾರೆ.  ಪುನೀತ್ ರಾಜ್ ಕುಮಾರ್ ಸಹ ದಿನನಿತ್ಯ ಮನೆಯಲ್ಲೇ ಇದ್ದ ಜಿಮ್ ನಲ್ಲಿ ಗಂಟೆ ಗಟ್ಟಲೆ ವರ್ಕ್ ಔಟ್ ಮಡುತಿದ್ದರು. ಅವರಿಗೆ ನಿನ್ನೆ ಸಂಜೆಯಿಂದಲೇ ಚಿಕ್ಕದಾಗಿ ಎದೆನೋವಿತ್ತು ಎಂದೂ ವರದಿಯಾಗಿದ್ದು ಹೆಚ್ಚಿನ ಸಮಸ್ಯೆ ಆಗಲಿಕ್ಕಿಲ್ಲ ಎಂಬ ನಿರ್ಲಕ್ಷವೇ ಅವರ ಪ್ರಾಣವನ್ನು ತಿಂದು ಹಾಕಿತೆ? ಇದಕ್ಕೆ ಆ ಸಾವೇ ಉತ್ತರಿಸಬೇಕು. ಆದರೆ ಒಂದಂತೂ ನಿಜ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಭಾರತೀಯ ಚಿತ್ರರಂಗ ಇಂದು ಮಹತ್ವದ ಸದಭಿರುಚಿಯ ನಟನನ್ನು ಕಳೆದುಕೊಂಡಿದೆ. ಅವರ ಅಭಿಮಾನಿಗಳಿಗೆ ಭರಿಸಲಾಗದ ದುಃಖವಾಗಿದೆ. ಇನ್ನು ಈ ಎರಡು ಸಾವಿನ ನಂತರವಾದರೂ ಚಿತ್ರೋದ್ಯಮದ ನಟ ನಟಿಯರು ಫಿಟ್ ನೆಸ್ ಎಂಬ ಮಾಯೆಯಿಂದ ಹೊರಬರುತ್ತಾರೆಯೆ ಎಂದು ಕಾದು ನೋಡಬೇಕಿದೆ.

ನನ್ನ ಈ ಲೇಖನ ಕನ್ನಡದ ಪ್ರಸಿದ್ದ ನ್ಯೂಸ್ ಪೋರ್ಟಲ್ "ಕನ್ನಡಪ್ರಭ ಡಾಟ್ ಕಾಂ"ನಲ್ಲಿ 30 ಅಕ್ಟೋಬರ್ 2021 ಮಧ್ಯಾಹ್ನ 01:25  ಗೆ  ಪ್ರಕಟವಾಗಿದೆ.

Tuesday, October 05, 2021

ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ

ಹಿಂದುತ್ವದ ಜತೆ ಮುಂದುತ್ವವೂ ಬೇಕು, ಬದುಕು ಮುಂದುವರಿಯಬೇಕು. ಅದಕ್ಕಾಗಿ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆ ಎರಡೂ ಅಗತ್ಯವಾಗಿದೆ. ಹಾಗಾಗಿ ಇಲ್ಲಿನ ಬಹುಭಾಷೆಗಳು ದೇಶದ ಏಕತೆಗೆ ಕಾರಣವಾಗಿದೆ ಎಂದ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

ಶಾರದಾ ಬುಕ್ ಅಂಗಡಿ ಆವರಣದಲ್ಲಿ ನಡೆದ ವಿನುತಾ ವಿಶ್ವನಾಥ್ ಅವರ 'ಹುಣ್ಸ್ ಮಕ್ಕಿ ಹುಳ' ಪುಸ್ತಕ ಕುರಿತ ಸಂವಾದದಲ್ಲಿ ಅವರು ಮಾತನಾಡಿದ್ದರು. 

ಕನ್ನಡವೇ ನಮ್ಮ ಹಕ್ಕಿನ ಭಾಷೆ, ಖಾತೆ ಇದ್ದಂತೆ!

ಕೇಂದ್ರದ ಸರ್ಕಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಏಕಾಭಾಷೆಯನ್ನು ನಮ್ಮ ಮೇಲೆ ಹೇರುತ್ತವೆ ಎಂದ ಹಂಸಲೇಖ ಕನ್ನಡ ನಮಗೆ ಎಂದಿಗೂ ಹಕ್ಕಿನ ಭಾಷೆ, ಕನ್ನಡದಿಂದಲೇ ನಮ್ಮ ಈ ರಾಜ್ಯ ಉಳಿಯುವುದು. ಕನ್ನಡ ನಮ್ಮ ಪಾಲಿಗೆ ಖಾತೆ ಇದ್ದಂತೆ ಎಂದಿದ್ದಾರೆ. ನಾವು ಬಹಳ ಅಪಾಯದ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಸ್ಪಷ್ತತೆ ಇಲ್ಲದಿರುವುದು ಇದಕ್ಕೆ ಕಾರಣ. ತಮಿಳುನಾಡಿನಲ್ಲಿ ಧೈರ್ಯವಾಗಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳುತ್ತಾರೆ. ಆದರೆ ನಾವು ಆ ಧೈರ್ಯ ತೋರಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವೀಗ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ ಅದೇನೆಂದರೆ ನಮಗೆ ಹಿಂದಿ ಬೇಕೆ? ಇಂಗ್ಲೀಷ್ ಬೇಕೆ? ಇದರ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲದಿದ್ದರೆ ಗೊಂದಲ ಮುಂದುವರಿಯಲಿದೆ.

ಇಂಗ್ಲೀಷ್ ನಮ್ಮ ಕನ್ನಡ ತಾಯಂದಿರ ಆಜ್ಞೆಯಾಗಿದೆ. ಪ್ರತಿ ಹೆಣ್ಣುಮಕ್ಕಳೂ ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸಲೇಬೇಕು ಎಂದು ಆಜ್ಞೆ ಮಾಡಿದ್ದಾರೆ. ಅದನ್ನು ಅವರ ಪತಿ ಅನುಸರಿಸುತ್ತಾರೆ. ಹಾಗಾಗಿ ಇಂಗ್ಲೀಷ್ ಅಥವಾ ಇನ್ನಾವುದೇ ಭಾಷೆ ಕಲಿಯುವ ಭಾಷೆಯಾಗಿರಲಿ ಆದರೆ ಕನ್ನಡ ಎಂದಿಗೂ ನಮ್ಮ ಉಸಿರಾಗಿರಬೇಕು. ಕನ್ನಡ ಸಾವಿರಾರು ವರ್ಷ ಇತಿಹಾಸವಿರುವ ಭಾಷೆ. ಆದರೆ ಇದನ್ನು ದಕ್ಷಿಣ ಭಾರತದ ಅಧಿಕೃತ ಭಾಷೆ ಎನ್ನಲಾಗುವುದಿಲ್ಲ. ತಮಿಳು ಇಲ್ಲಿ ಬಗೆಯ ಸಂವಹನ ಭಾಷೆಯಾಗಿದೆ. ಆದರೆ ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿರುವುದು ನನಗೆ ತಮಾಷೆಯಾಗಿ ಕಾಣುತ್ತಿದೆ ಎಂದ ಹಂಸಲೇಖ ಒಂದೊಮ್ಮೆ ದೇವನಾಗರಿ ಭಾಷೆಯನ್ನು ರಾಷ್ಟ್ರಭಾಷೆ ಅಥವಾ ಆಡಳಿತ ಭಾಷೆಯನ್ನಾಗಿಸಿದರೆ ಯಾರೂ ಸಂಸ್ಕೃತ ಅಥವಾ ದೇವನಾಗರಿಯಲ್ಲಿ ವ್ಯವಹರಿಸುವುದಿಲ್ಲ. ಬದಲಿಗೆ ಇಂಗ್ಲೀಷ್ ನಲ್ಲಿ ವ್ಯ್ವವಹರಿಸುತ್ತಾರೆ ಮುಕ್ಕಾಲು ಪಾಲು ಜನ ಇಂಗ್ಲೀಷ್ ಇನ್ನೂ ಕಾಲು ಭಾಗ ಜನರು ಹಿಂದಿಯಲ್ಲಿ ವ್ಯವಹರಿಸಬಹುದು ಎಂದರು.



ಹಿಂದಿ ಭಾಷೆ ಪರ್ಷಿಯಾ, ಉರ್ದು ಹಾಗೂ ಅರಬ್ ಭಾಷೆಯ ಬಲಮಗು, ಐನೂರು ಅಥವಾ ನಾಲ್ಕು ನೂರು ವರ್ಷಗಳ ಇತಿಹಾಸದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ಬೇರೆ ಯಾವ ಭಾಷೆಯನ್ನೂ ಕಲಿಯುವ ಅವಕಾಶವಿದ್ದರೂ ಒಳಿತು ಎಂದರು. ಕನ್ನಡ ಹೋರಾಟಗಾರರು, ಯುವಕರು ಈ ಬಗ್ಗೆ ಇದೀಗ ಗೊಂದಲದಲ್ಲಿದ್ದಾರೆ ಎಂದು ಹಂಸಲೇಖ ಹೇಳಿದರು. 

ಇಂದು ವೈದಿಕ ಪ್ರಜ್ನೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ:

ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ರಂಗ ಪ್ರವೇಶಿಸಿದ ಮೊದಲ ವರ್ಗ ಅದು ವೈದಿಕ ವರ್ಗವಾಗಿತ್ತು. ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ವರ್ಗವನ್ನು ಮೊದಲು ಪ್ರವೇಶಿಸಿದ್ದು ಈ ವೈದಿಕ ಪ್ರಜ್ಞೆ. ವೈದಿಕ ಪ್ರಜ್ಞೆ ಹಿನ್ನೆಲೆ ದೊರತದ್ದು ನಮ್ಮ ಪುಣ್ಯ. ಇಂದು ಅದೇ ವೈದಿಕ ಪ್ರಜ್ಞೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ. ರಾಷ್ಟ್ರೀಯ ಪ್ರಜ್ಞೆ ನಮಗೂ ಅಗತ್ಯವಿದೆ. ಆದರೆ ಆ ರಾಷ್ಟ್ರೀಯತೆಯ ಜತೆಗೆ ನಮ್ಮ ಪ್ರಾದೇಶಿಕತೆಯ ಸ್ವಾಯತ್ತತೆಯನ್ನು ಕಳೆದುಕೊಳ್ಲಲು ನಾವು ಸಿದ್ದವಾಗಿಲ್ಲ ಎಂದು ಹಂಸಲೇಖ ಹೇಳಿದ್ದಾರೆ. ಅದೊಮ್ಮೆ ಕಳೆದುಹೋದಲ್ಲಿ ಭಾರತದಲ್ಲಿ ಬಹುದೊಡ್ಡ ವ್ಯತ್ಯಾಸಗಳು ಪ್ರಾರಂಭವಾಗಲಿದೆ. ಪುರಿ ಉಂಡೆಯಾಗಿರುವುದನ್ನು ಒಂದೊಂದೇ ಎಳೆ ಬಿಚ್ಚಿದರೆ ಮತ್ತೆ ಈ ಹಿಂದಿದ್ದ ೫೮ ಸಂಸ್ಥಾನಗಳ ರೀತಿಯಲ್ಲಿ ಚಿತ್ರ ವಿಚಿತ್ರವಾಗಿ ಹಂಚಿಕೆಯಾಗಲಿದೆ ಹಾಗಾಗಿ ಸಂವಿಧಾನದ ಹಿನ್ನೆಲೆ ಒಂದಾಗಿರುವ ಭಾರತವನು ಹಾಗೇ ಉಳಿಸಿಕೊಳ್ಲಬೇಕು ಎಂದರು

ಭಾರತದ ಏಕತ್ವದ ಸಂಕೇತ ಕುಂಕುಮ

ಭಾರತದ ಏಕತ್ವದ ಸಂಕೇತ ಕುಂಕುಮ ಎಂದಿರುವ ಹಂಸಲೇಖ ಇಲ್ಲಿ ಸಿಖ್ಖರು, ಮುಸ್ಲಿಮರು, ಕ್ರೈಸ್ತರು ಸಹ ಕುಂಕುಮ ಇಡಬಲ್ಲರು. ತಾಳಿ ಎಲ್ಲಾ ಧರ್ಮೀಯರಲ್ಲಿ ಸ್ವೀಕಾರವಾಗಿದೆ. ಗೋವು, ದೇವಾಲಯಗಳು ನಮ್ಮ ಏಕತ್ವದ ಸಂಕೇತಗಳಾಗಿದೆ ಎಂದರು. ಇದೆಲ್ಲಾ ರಾಷ್ಟ್ರೀಯತೆಯಾಗಿದ್ದು ಇದರ ಮೂಲಕ ಬಹುತ್ವವನ್ನೂ ಕಾಪಾಡಿಕೊಳ್ಳುತ್ತಾ, ಏಕತ್ವದ ಸಂಕೇತವನ್ನು ಗೌರವಿಸುತ್ತಾ ಕನ್ನಡವನ್ನು ಸಹ ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಹಂಸಲೇಕ ಅವರು ತಮ್ಮ ಶಾರದಾ ಬುಕ್ ಅಂಗಡಿ ಬಗ್ಗೆ ಪರಿಚಯ ಮಾಡಿಕೊಟ್ಟ ನಂತರದಲ್ಲಿ ವಿನುತಾ ವಿಶ್ವನಾಥ್  ಅವರ "ಹುಣ್ಸ್ ಮಕ್ಕಿ ಹುಳ" ಪುಸ್ತಕದ ಕುರಿತ ಸಂವಾದ ನಡೆಯಿತು. ವಿನುತಾ ಅವರ ಆತ್ಮಕಥೆಯಾಗಿರುವ ಹುಣ್ಸ್ ಮಕ್ಕಿ ಹುಳ ದಲ್ಲಿ ವಿನುತಾ ತಮ್ಮ ಜೀವನದ ಹಲವು ಅನುಭವವನ್ನು ಹಂಚಿಕೊಂಡಿದ್ದು ಓದುಗರಿಗೆ ಸ್ಪೂರ್ತಿಯ ಕಥೆಯನ್ನು ಉಣಬಡಿಸಿದ್ದಾರೆ.

ದಿನಾಂಕ  02/10/2021 ರಂದು ಹಂಲೇಖ ದೇಸಿ ಶಾಲೆ ಆವರಣದ ಶಾರದಾ ಬುಕ್ ಅಂಗಡಿಯಲ್ಲಿ ನಡೆದ ಶ್ರೀಮತಿ ವಿನುತಾ ವಿಶ್ವನಾಥ್ ಅವರ  ಹುಣ್ಸ್ ಮಕ್ಕಿ ಹುಳ ಪುಸ್ತಕ ಸಂವಾದದಲ್ಲಿ ಬಾಗವಹಿಸಿ ತಯಾರಿಸಿದ್ದ ಈ ವರದಿ ದಿನಾಂಕ 04/10/2021ರಂದು ಕನ್ನಡದ ಹೆಸರಾಂತ ನ್ಯೂಸ್ ಪೋರ್ಟಲ್ ಕನ್ನಡಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು.

Thursday, September 23, 2021

ಗಟ್ಟಿಗಿತ್ತಿಯೊಬ್ಬಳ ಪ್ರಾಮಾಣಿಕ ಬರಹ-'ಹುಣ್ಸ್ ಮಕ್ಕಿ ಹುಳ'

 ಹೆಣ್ಣೊಬ್ಬಳಿಗೆ ಬಾಹ್ಯ ಸೌಂದರ್ಯಕ್ಕಿಂತ ಆತರಿಕ ಸೌಂದರ್ಯವೇ ಮುಖ್ಯವೆಂಬುದು ಅತ್ಯಂತ ಖಚಿತವಾಗಿದ್ದರೂ ಹೆಣ್ನಾಗಿ ಅದರಲ್ಲಿಯೂ ಬಾಲ್ಯದಲ್ಲಿ ತಾನು ಎಲ್ಲರ ಕಣ್ಣಿಗೆ "ಚೆನ್ನಾಗಿ" ಅಂದವಾಗಿ ಕಾಣಬೇಕೆಂದು ಬಯಸುವುದು ಪ್ರತಿ ಹೆಣ್ಣಿನ ಮನದಾಸೆ.  ಆದರೆ ವಿಧಿಯ ದುರಂತವೆಂಬಂತೆ ಘಟನೆಯೊಂದರಲ್ಲಿ ಎಲ್ಲರಿಂದ "ಗೊಂಬೆ" ಎಂದೆನ್ನಿಸಿಕೊಂಡಿದ್ದ ಬಾಲಕಿಯೊಬ್ಬಳು ಮೈಪೂರ್ತಿ ಸುಟ್ಟು ಕರಕಲಾದಾಗ ಅನುಭವಿಸಿದ ದೈಹಿಕ, ಮಾನಸಿಕ ಯಾತನೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಶ್ರೀಮತಿ ವಿನುತಾ ವಿಶ್ವನಾಥ್ ಇಂತಹಾ ದುರ್ಬರ ಸನ್ನಿವೇಶವನ್ನೂ ಮೆಟ್ಟಿ ನಿಂದು ಧೈರ್ಯದಿಂದ ಜೀವನದಲ್ಲಿ ಮುಂದುವರಿಯಬಹುದೆನ್ನಲು ಉತ್ತಮ ಉದಾಹರಣೆಯಾಗಿ ನಮ್ಮೊಡನಿದ್ದಾರೆ. ಕೆಲ ತಿಂಗಳ ಹಿಂದೆ ಪ್ರಕಟವಾದ ಅವರ ಆತ್ಮಕಥನ "ಹುಣ್ಸ್ ಮಕ್ಕಿ ಹುಳ" ಈ ನಿಟ್ಟಿನಲ್ಲಿ ಕನ್ನಡದಲ್ಲಿ ಬಂದ ಹೆಣ್ಣುಮಗಳೊಬ್ಬಳ ಅತ್ಯಂತ ಮಹತ್ವದ ಜೀವನ ಕಥಾನಕವಾಗಿದೆ.

ನಾನು ಓದಿದ್ದ ಇತ್ತೀಚಿನ ಪುಸ್ತಕಗಳ ಪೈಕಿ ನನ್ನ ಗಮನ ಸೆಳೆದ ಹಾಗೂ ಮನದಲ್ಲಿ ಗಟ್ಟಿಯಾಗಿ ನೆಲೆಯಾದ ಪುಸ್ತಕ "ಹುಣ್ಸ್ ಮಕ್ಕಿ ಹುಳ". ಮಹಿಳೆಯೊಬ್ಬಳು ತನ್ನ ಮನಸಿನಾಳವನ್ನು ಅತ್ಯಂತ ನಿರ್ಭೀತವಾಗಿ ಹೊರಹಾಕಿರುವ ಕೆಲವೇ ಕೆಲವು ಕೃತಿಗಳಲ್ಲಿ ಈ ಕೃತಿ ಒಂದಾಗಿದೆ. ಅದರಲ್ಲಿಯೂ ಕನ್ನಡದಲ್ಲಿ ಇಂತಹಾ ಕೃತಿಗಳ ಸಂಖ್ಯೆ ಅತ್ಯಂತ ಕಡಿಮೆ ಎನ್ನಬೇಕು.ಇದಕ್ಕೆ ಮುನ್ನ ಡಾ. ವಿಜಯಾ ಅವರ "ಕುದಿ ಎಸರು" ಹಾಗೂ ಪದ್ಮ ಪ್ರಶಸ್ತಿ ವಿಜೇತರಾಗಿದ್ದ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರ"ನಡುವೆ ಸುಳಿವ ಹೆಣ್ನು" ಕೃತಿಗಳನ್ನು ನಾವು ಈ ಸಾಲಿನಲ್ಲಿ ಗುರುತಿಸಲು ಬಹುದು.

ಜೀವನ ಸಾಕು ಎನ್ನಿಸಿದಾಗ ತೆಗೆದು ಓದುವುದಾದರೆ ಓದಿದ್ವರ ಮನದಲ್ಲಿ ಮತ್ತೆ ಬದುಕಬೇಕೆಂಬ ಹಂಬಲ ಹುಟ್ಟಿಸುವ ಶಕ್ತಿ ವಿನುತಾ ಅವರ ಪುಸ್ತಕಕ್ಕಿದೆ. ಲೇಖಕಿ, ರಂಗಭೂಮಿ ಕಲಾವಿದೆ ವಿನುತಾ ವಿಶ್ವನಾಥ್ ತಮ್ಮ ಜೀವನದಲ್ಲಿ ಎದುರಿಸಿದ ಎಲ್ಲಾ ಸವಾಲುಗಳನ್ನು ಎಳೆ ಎಳೆಯಾಗಿ ಇಲ್ಲಿ ತೆರೆದಿಟ್ಟಿದ್ದಾರೆ.  ಜೀವನ ನಿಂತ ನೀರಲ್ಲ ಹರಿಯುವ ನದಿ, ನಾವು ಮನುಷ್ಯರು ಏನೇ ಕಷ್ಟ ಸೋಲುಗಳ ಬಂದ್ದರು ಎದುರಿಸಿ ಮುನ್ನುಗ್ಗುತ್ತಿರಬೇಕು, ಎಲ್ಲವ ಎದುರಿಸಿ ನಿಲ್ಲಬೇಕು, ಮತ್ತೊಬ್ಬರಿಗೆ ಸ್ಪೂರ್ತಿಯಾಗಿ ಮಾದರಿಯಾಗಿ ನಿಲ್ಲಬೇಕು ಎನ್ನುವುದನ್ನು ಲೇಖಕಿ ವಿನುತಾ ಪುಸ್ತಕದಲ್ಲಿ ಸ್ಪಷ್ತವಾಗಿ ಹೇಳಿದ್ದಾರೆ.

ಕುಂದಾಪುರದ ಹುಣ್ಸ್ ಮಕ್ಕಿಯವರಾದ ವಿನುತಾ ಅತ್ಯಂತ ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಂಡವರು. ಹಾಗಾಗಿಯೇ ಅವರಿಗೆ ಇಷ್ಟು ಸ್ಪಷ್ಟವಾಗಿ ತಮ್ಮ ಜೀವನದ ಕಥೆಯನ್ನು ಬರೆಯಲು ಸಾಧ್ಯವಾಗಿದೆ.


ಅವರ ತಂದೆ ಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಒಂದು ದಿನ ಹೋಟೆಲ್‌ ಬೆಂಚಿನ ಮೇಲೆ ಇಟ್ಟಿದ್ದ ಸೀಮೆ ಎಣ್ಣೆಚಿಮಣಿ ದೀಪ ವಿನುತಾ ಅವರ ಮೈಮೇಲೆ ಬಿದ್ದು ಆಕೆಯ ಶೇ. 60ರಷ್ಟು ದೇಹ ಸುಟ್ಟು ಹೋಗಿತ್ತು. ಆಗಿನ್ನೂ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ವಿನುತಾ ಮುಖ ಕಪ್ಪಾಗಿದ್ದು ದೇಹ ಸುಕ್ಕುಜ್ಗಟ್ಟಿತು. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿನುತಾ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೊಮ ಮುಗಿಸಿ ಕೆಲಸಕ್ಕೆ ಸೇರಲು ಬಯೈದಾಗ ಮಾತ್ರ ಅವರ ಮುಖದ ಸುಟ್ಟ ಕಲೆ ಅವರಿಗೆ ಕೆಲಸ ಸಿಕ್ಕದ ಹಾಗೆಮಾಡಿತ್ತು! ಪ್ರೀತಿಸಿದ್ದ ಹುಡುಗ ದೂರವಾಗಿದ್ದ...  “ನಿಮ್ಮಂಥವರು ಸಾರ್ವಜನಿಕ ಸ್ಥಳಗಳಿಗೆ ಬರುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ಹೆದರಿಕೊಳ್ಳುತ್ತಾರೆ’  ಎಂಬಂತಹಾ ಕಟು ವಾಕ್ಯಗಳನ್ನು ಕೇಳಬೇಕಾಯಿತು!

ಆಗ ಅವರ ನೆರವಿಗೆ ಬಂದದ್ದು ರಂಗಭೂಮಿ.  ಗೆಳೆಯ ಚೇತನ್‌ ಸಹಾಯದಿಂದ ರಂಗಭೂಮಿಗೆ ಬಂದ ವಿನುತಾ ಬೆಂಗಳೂರಿನಲ್ಲಿಂದು ಸಂವಾದ ಬೆಂಗಳೂರು ರಂಗತಂಡದ ಕಲಾವಿದೆಯಾಗಿದ್ದಾರೆ.

ಇನ್ನು ಪುಸ್ತಕದ ಪ್ರಾರಂಭದಲ್ಲಿ ಬಾಲ್ಯದ ನೆನಪುಗಳು ಡಾಳಾಗಿದ್ದು ಆ ಅಧ್ಯಾಯಗಳ ಭಾಷೆ ಸಹ ಅಷ್ಟೇ ಸರಳವಾಗಿದೆ. ಅದೇ ಪುಸ್ತಕರ ಅಂತ್ಯಕ್ಕೆ ಹತ್ತಿರವಾದಂತೆಲ್ಲಾ ಪ್ರಬುದ್ದ ಜೀವನ ಕಥೆ ಬರುತ್ತಲೂ ಭಾಷೆ ಸಹ ಅಷ್ಟೇ ಪ್ರೌಢವಾಗಿರುವುದು ಕಾಣುತ್ತೇವೆ. ಇದು ಲೇಖಕಿಯ ಮೊದಲ ಪುಸ್ತಕದಲ್ಲೇ ಕಂಡು ಬಂದ ವಿಶೇಷತೆ ಎನ್ನುವುದು ಅವರು ಮುಂದೊಂದು ದಿನ ಅದ್ಭುತ ಕಥೆಗಾರ್ತಿ, ಲೇಖಕಿಯಾಗಬಹುದೆನ್ನಲು ಸಾಕ್ಷಿ ಹೇಳುತ್ತವೆ.

ವಿನುತಾ ಅವರೇ ಹೇಳಿದಂತೆ ಹೆಣ್ಣು ಮಕ್ಕಳಲ್ಲಿ ಇರುವ ಕೀಳರಿಮೆ ಅವರಲ್ಲಿದ್ದ ನೈಜ ಪ್ರತಿಭೆಯನ್ನು ಮುಚ್ಚಿ ಹಾಕುತ್ತಿದೆ. ಅಂತಹವರ ಕೀಳರಿಮೆಯನ್ನು ತೊರೆದು ಧೈರ್ಯದಿಂದ ಬದುಕನ್ನು ಮುನ್ನಡೆಸಬೇಕೆಂಬ ಕಾರಣಕ್ಕೆ ಈ ಪುಸ್ತಕ ಬರೆದಿದ್ದೇನೆ.. ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಡಿ. ಸುಮನ್ ಕಿತ್ತೂರು ಹೇಳಿದಂತೆ "ಸಣ್ಣ ಸಣ್ಣ ವಿಚಾರಗಳಲ್ಲಿ ಎಷ್ಟೋ ದೊಡ್ಡ ದೊಡ್ಡ ತಾತ್ವಿಕ ಪಯಣ ತೆರೆದುಕೊಳ್ಳುತ್ತದೆ ಎಂಬುದನ್ನು ಈ ಆತ್ಮಕಥೆ ನಿರೂಪಿಸುತ್ತದೆ. ತಮ್ಮದಲ್ಲದ ತಪ್ಪಿಗೆ, ಸಮಾಜದೊಂದಿಗೆ, ಅದರ ತಿರಸ್ಕಾರದೊಂದಿಗೆ ಗುದ್ದಾಡಲೂ ಸಹ ಆಗದ, ಆತ್ಮಸ್ಥೈರ್ಯ ಕಳೆದುಕೊಂಡು ಮೂಲೆಗುಂಪಾಗುವ ಎಷ್ಟೊ ಜೀವಗಳಿಗೆ ಈ ಆತ್ಮಕಥೆ ಸ್ಫೂರ್ತಿಯಾಗಲಿದೆ." ಎಂಬ ಮಾತುಗಳು ಸತ್ಯ.

ಹಾಗೆ ನೋಡಿದರೆ ವಿನುತಾ ಅವರ ಜೀವನಾನುಭವ ಒಂದು ಒಳ್ಳೆಯ ಕಾದಂಬರಿಗೆ ವಸ್ತುವಾಗಬಹುದಾಗಿತ್ತು. ಬಾಲ್ಯದ ದುರಂತ, ಕಾಲೇಲು ಜೀವನ, ಮೊದಲ ಪ್ರೀತಿಯ ವಿರಹ, ಪಿಜಿಯಲ್ಲಿನ ಜೀವನ, ರಂಗಭೂಮಿಯ ಸೆಳವು ಎಲ್ಲವೂ ಒಂದು ಉತ್ತಮ ಕಥೆ, ಕಾದಂಬರಿಯಾಗಲು ಯೋಗ್ಯವಾಗಿದೆ. ಆದರೆ ವಿನುತಾ ಕಾದಂಬರಿಯನ್ನು ಬರೆಯದೇ ಆತ್ಮಕಥೆ ಬರೆದುಕೊಂಡು ತಮ್ಮ ಜೀವನದ ಕಥೆಯ ಮೂಲಕವೇ ನಾಡಿನ ಯುವ ಜನತೆ ಅದರಲ್ಲಿಯೂ ಮಹಿಳೆಯರಿ ಸ್ಪೂರ್ತಿ ತುಂಬಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಲೇಖಕಿ ವಿನುತಾ ನಿಜಕ್ಕೂ "ಗಟ್ಟಿಗಿತ್ತಿ" ಮನಸಿನ ಮಾತನ್ನು ಬರವಣಿಗೆಗೆ ಇಳಿಸಿ ಪ್ರತಿಯೊಬ್ಬರಿಂದ ಸೈ ಎನ್ನಿಸಿಕೊಳ್ಲಲು ಎಲ್ಲರಿಗೂ ಸಾಧ್ಯವಿಲ್ಲ ಆದರೆ ವಿನುತಾ ಅದರಲ್ಲಿ ಯಶಸ್ವಿಯಾಗಿದ್ದಾರೆ. ವಿನುತಾ ಅವರ ಮುಂದಿನ ಬರಹಗಳು ಆದಷ್ಟು ಬೇಗ ಪ್ರಕಕಟವಾಗಲಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನನ್ನ ಹಾರೈಕೆ...

Saturday, September 11, 2021

ನಮ್ಮಲ್ಲಿನ ಸ್ಥಳಪುರಾಣಗಳು 103


ಗುರುನಾನಕ್ ಝೀರಾ ಸಾಹಿಬ್, ಬೀದರ್

 ಸಿಖ್ಖರ ಗುರುಗಳಾದ ಗುರುನಾನಕ್ ದೇವರು ಕಾಲಿನಿಂದ ಕಲ್ಲನ್ನು ಒದ್ದು ನೀರು ತೆಗೆದ ಸ್ಥಳ ಕರ್ನಾಟಕದಲ್ಲಿರುವುದು ನಿಮಗೆ ಗೊತ್ತೇ?. ಅರೆ, ಏನಿದು? ಎಲ್ಲಿನ ಸಿಖ್ಖರ ಪಂಜಾಬ್, ಎಲ್ಲಿನ ಕರ್ನಾಟಕ?. ಹಾಗಿದ್ದರೂ ಕರ್ನಾಟಕಕ್ಕೂ ಸಿಖ್ಖರ ಗುರುಗಳಾದ ಗುರುನಾನಕ್ ದೇವರಿಗೂ ಸಂಬಂಧವೊಂದಿದೆ. ಬನ್ನಿ ಅದರ ಕುರಿತು ಸ್ವಲ್ಪ ತಿಳಿಯೋಣ?. 

ಸಿಖ್ಖರ ಗುರುದ್ವಾರಗಳು ಭಾರತ ಉಪಖಂಡದಾದ್ಯಂತ ಹರಡಿಕೊಂಡಿರುವುದು ನಮಗೆಲ್ಲಾ ತಿಳಿದವಿಚಾರವಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸುವಲ್ಲಿ ಈಗಲೂ, ಆಗಲೂ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇರುವ ಸಿಖ್ಖರು ಇಂದು ಭಾರತ, ಪಾಕಿಸ್ತಾನಗಳ ಎಲ್ಲ ಕಡೆಗಳಲ್ಲಿಯೂ ಕಾಣಸಿಗುತ್ತಾರೆ. ಸಿಖ್ಖರ ಅಷ್ಟೊಂದು ಗುರುದ್ವಾರಗಳ ಪೈಕಿ ಸಿಖ್ಖರು ಅತಿ ಪವಿತ್ರವೆಂದು ಭಾವಿಸಿ ಭೇಟಿ ಕೊಡುವ ಪ್ರಮುಖ ಗುರುದ್ವಾರಗಳಲ್ಲಿ ಭಾರತದ ಪಂಜಾಬ್ ರಾಜ್ಯದ ಅಮೃತಸರದ ಸ್ವರ್ಣ ಮಂದಿರ, ಸಿಖ್ಖರ ಪರಮೋಚ್ಚ ಗುರುಗಳಾದ ಸಂತ ಗುರುನಾನಕರು ತಮ್ಮ ಜೀವನದ ಕಡೆಗಾಲವನ್ನು ಕಳೆದು ಸಮಾಧಿ ಹೊಂದಿದ ಸ್ಥಳವಾದ ಪಾಕಿಸ್ತಾನ ಪಂಜಾಬ್ ಪ್ರಾಂತದ ಕರ್ತಾರ್ ಪುರದ ಗುರುದ್ವಾರಗಳು ಮುಖ್ಯವಾದವು. ಇವುಗಳ ನಡುವಲ್ಲಿ ನಮ್ಮ ದಕ್ಷಿಣ ಭಾರತದಲ್ಲಿ, ಅದೂ ಕರ್ನಾಟಕದ ಮುಕುಟ ಮಣಿಯಾದ ಬೀದರ್ ನಲ್ಲಿ ಇಂತಹುದೇ ಸಿಖ್ಖರ ಪವಿತ್ರ ಸ್ಥಳವೊಂದಿದೆ ಎನ್ನುವುದು ನಿಮ್ಮನ್ನು ಆಶ್ಚರ್ಯಕ್ಕೀಡು ಮಾಡುತ್ತದೆ. ಹೌದು, ಬೀದರ್ ನಲ್ಲಿರುವ ಗುರುನಾನಕ್ ಜೀರಾ ಸಾಹಿಬ್ ಗುರುದ್ವಾರವೇ ಆ ಪವಿತ್ರ ಸ್ಥಳ. ಇಲ್ಲಿ ಸಿಖ್ಖರು ಈ ಗುರುದ್ವಾರವನ್ನು ಅವರ ಪಂಗಡದ ಏಳ್ಗೆಗೆಂತಲೋ, ಅವರ ಮತ ಪ್ರಚಾರಕ್ಕೆಂತಲೋ ನಿರ್ಮಾಣ ಮಾಡಿಕೊಂಡಿದುದಲ್ಲ. ಬದಲಾಗಿ ಇದರ ಹಿಂದೆ ಬಲವಾದ ಇತಿಹಾಸವೇ ಇದೆ. 

ಸಂತ ಗುರುನಾನಕರು ತಮ್ಮ ಜೀವಮಾನದಲ್ಲಿ ಎರಡನೇ ಪ್ರಚಾರ ಯಾತ್ರೆ ಕೈಗೊಂಡ ಸಂಧರ್ಭದಲ್ಲಿ, ಅಂದರೆ ಕ್ರಿಶ. ೧೫೧೦ ರಿಂದ ೧೫೧೪ರವರೆಗೆ  ಭಾರತದ ನಾನಾ ಕ್ಷೇತ್ರಗಳನ್ನು, ಸಾಧು-ಸಂತರನ್ನು, ಪಂಡಿತರನ್ನೂ ಭೇಟಿ ಮಾಡುತ್ತಾ ಯಾತ್ರೆ ಮಾಡುತ್ತಿದ್ದರು. ಹೀಗೆಯೇ ಯಾತ್ರೆ ಮಾಡುತ್ತಾ ದಕ್ಷಿಣ ಭಾರತದೆಡೆಗೆ ಬಂದ ಸಂಧರ್ಭದಲ್ಲಿ ಮೊದ ಮೊದಲು ಇಂದಿನ ತೆಲಂಗಾಣದ ಹೈದರಾಬಾದ್ ಮತ್ತು ಗೋಲ್ಕೊಂಡ ರಾಜ್ಯಗಳಿಗೆ ಭೇಟಿಯಿತ್ತ ಗುರುನಾನಕರು ಅಲ್ಲಿನ ಮುಸ್ಲಿಂ ಸಂತರು ಕೆಲವರಿಂದ ಬೀದರ್ ನಲ್ಲಿ ಫಿರ್ ಜಲಾಲುದ್ದೀನ್ ಮತ್ತು ಯಾಕುಬ್ ಅಲಿ ಎಂಬುವವರು ನಾನಾ ಸತ್ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಗಳಾಗಿ ಬದುಕುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಕೂಡಲೇ ಬೀದರ್ ಕಡೆಗೆ ಪ್ರಯಾಣ ಬೆಳೆಸುವ ಗುರುನಾನಕರು  ಬೀದರ್ ನ ಹೊರವಲಯದಲ್ಲಿ ತಮ್ಮ ಹಿಂಬಾಲಕರೊಂದಿಗೆ ಇಳಿದುಕೊಳ್ಳುತ್ತಾರೆ. ಅನೇಕ ಮುಸ್ಲಿಂ ಸಂತರ ಕುಟೀರಗಳಿದ್ದ ಸ್ಥಳದಲ್ಲಿ ಇಳಿದುಕೊಂಡ ಗುರುನಾನಕರು ಅಲ್ಲಿದ್ದವರಿಗೆ ಉಪದೇಶ ನೀಡುತ್ತಾರೆ. ಗುರುನಾನಕರ ಯೋಚನೆ, ಉಪದೇಶಗಳನ್ನು ಎರಡು ಮಾತಿಲ್ಲದೆ ಪ್ರೀತಿಯಿಂದ ಒಪ್ಪಿಕೊಳ್ಳುವ ಹಲವಾರು ಸಂತರು ಗುರುನಾನಕರ ಅನುಯಾಯಿಗಳಾಗುತ್ತಾರೆ. ದಿನಗಳೆಯುವುದರೊಳಗಾಗಿ ಗುರುನಾನಕರು ಉತ್ತರ ದೇಶದಿಂದ ಬಂದಿರುವ ವಿಚಾರ ಬೀದರ್ ನಾದ್ಯಂತ ಹರಡುತ್ತದೆ. ಅವರನ್ನು ಕಾಣಲು, ಉಪದೇಶಗಳನ್ನು ಕೇಳಲು ತಂಡೋಪತಂಡವಾಗಿ ಜನಗಳು ಬರಲು ಆರಂಭಿಸುತ್ತಾರೆ. ಅನೇಕ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಿ ತಿಳಿದುಕೊಂಡು ಅದಕ್ಕೊಂದು ಪರಿಹಾರ ಸೂಚಿಸುತ್ತಿದ್ದ ಗುರುನಾನಕರು ಅಲ್ಲಿ ಕಂಡದ್ದು ಬರಗಾಲದ ಭೀಕರತೆ. ಗುರುನಾನಕರು ಅಲ್ಲಿಗೆ ಭೇಟಿ ಕೊಟ್ಟ ಸಮಯದಲ್ಲಿ ಭೀಕರ ಬರ ಆವರಿಸಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ ಜನರು ಬಾವಿ ತೋಡಿದರೆ ಅಲ್ಲಿಯೂ ನೀರು ಸಿಗದೇ ಗುಳೇ ಹೋಗುವುದಕ್ಕೆ ತೊಡಗಿರುತ್ತಾರೆ. ಅನೇಕ ಜನರಿಂದ ಇದೇ ವಿಷಯ ಕೇಳಿದ್ದ

 ಗುರುನಾನಕರು ಜನರ ಬವಣೆಗೆ ಮರುಗಿ ಅದಕ್ಕೆ ತಾವೇ ಉಪಾಯವೊಂದನ್ನು ಹೂಡಲು ಸಿದ್ಧರಾಗುತ್ತಾರೆ. ಗುರುನಾನಕರು ಕಣ್ಮುಚ್ಚಿ ಕೆಲಕಾಲ ಧ್ಯಾನಿಸಿ 'ಸತ್ ಕರ್ತಾರ್'(ಕನ್ನಡದಲ್ಲಿ 'ಉತ್ತಮ ಕಾರ್ಯಗಳನ್ನು ಮಾಡುವಂತಹ' ಎಂಬರ್ಥ) ಎಂದು ಉಚ್ಚರಿಸುತ್ತಾ ತಮ್ಮ ಮರದ ಪಾದರಕ್ಷೆಗಳನ್ನು ಧರಿಸಿ ಅಲ್ಲಿದ್ದ ಕಲ್ಲೊಂದನ್ನು ಒದೆಯುತ್ತಾರೆ. ಆಶ್ಚರ್ಯ ಹಾಗು ಪವಾಡ ಸದೃಶ ರೀತಿಯಲ್ಲಿ ಗುರುನಾನಕರು ಒದ್ದ ಜಾಗದಲ್ಲಿ ನೀರಿನ ಬುಗ್ಗೆಯೊಂದು ಹೊರಚಿಮುತ್ತದೆ. ಶುದ್ಧ ಕುಡಿಯುವ ನೀರಿನ ಬುಗ್ಗೆ ಅದಾಗಿದ್ದು ಅಲ್ಲಿನ ಜನರ ದಣಿವನ್ನು ನೀಗಿಸುತ್ತದೆ. ಜಲ ಬುಗ್ಗೆಗೆ ಸೂಫಿ ಸಂತರು 'ಝೀರಾ' ಎಂದು ಕರೆಯುತ್ತಿದ್ದರು. ಗುರುನಾನಕರಿಂದ ಉದ್ಭವಿಸಿದ ಜಲ ಬುಗ್ಗೆಯಾದ ಕಾರಣದಿಂದ ಇದನ್ನು 'ಗುರುನಾನಕ್ ಝೀರಾ' ಎಂದೂ, ಇಲ್ಲಿರುವ ಗುರುದ್ವಾರವನ್ನು 'ಗುರುನಾನಕ್ ಝೀರಾ ಸಾಹಿಬ್' ಎಂದೂ ಕರೆಯಲಾಗುತ್ತದೆ. ಇಲ್ಲಿ ಅಂದಿನಿಂದಲೂ ಈ ರೀತಿಯ ಸ್ಥಳಪುರಾಣವಿತ್ತೇ ವಿನಃ ಗುರುದ್ವಾರವಿರಲಿಲ್ಲ. ಸಂತ ಗುರುನಾನಕರ ಅಪಾರ ಅಭಿಮಾನಿಗಳೂ, ಅನುಯಾಯಿಗಳು ಈ ಪ್ರದೇಶಕ್ಕೆ ಗುರುನಾನಕರು ಭೇಟಿ ಕೊಟ್ಟಿದುದನ್ನು ಅಮರವಾಗಿರಿಸಲು ನಿರ್ಧಾರ ಕೈಗೊಂಡು ನಮಗೆ ಸ್ವಾತಂತ್ರ್ಯ ದಕ್ಕಿದ ಮರು ವರ್ಷವೇ ಅಂದರೆ ೧೯೪೮ರಲ್ಲಿ ಇಲ್ಲೊಂದು ಗುರುದ್ವಾರವನ್ನು ನಿರ್ಮಾಣ ಮಾಡಿ ದಾಸೋಹ(ಪಂಜಾಬಿ: ಲಂಗರ್) ಸೇವೆಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ.