Thursday, February 18, 2016

ಓ ಎನ್ ವಿ ಕುರುಪ್ - ಒಂದು ನುಡಿ ನಮನ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಖ್ಯಾತ ಮಲಯಾಳಿ ಕವಿ, ಸಾಹಿತಿ ಮತ್ತು ಪರಿಸರವಾದಿ ಒ.ಎನ್‌.ವಿ ಕುರುಪ್‌ (84) ಅವರು 13-2-2016ರಂದು ನಿಧನ ಹೊಂದಿದರು. ಈ ಸಮಯದಲ್ಲಿ ಕನ್ನಡದ ಜ್ಞಾನಪೀಠ ಪುರಸ್ಕೃತ ಸಾಹಿತಿ ದಿ. ಯು.ಆರ್. ಅನಂತಮೂರ್ತಿಯವರು ಕುರುಪ್ ಮತ್ತು ಮಲಯಾಳಂ ಸಾಹಿತ್ಯದ ಕುರಿತು ಮಂಡಿಸಿದ್ದ ವಿಚಾರಗಳನ್ನು ನಾನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
***

ಜನಪ್ರಿಯರೂ, ಜನಪರರೂ ಆದ ಕವಿ ಓ.ಎನ್.ವಿ. ಕುರುಪ್

ನಾನು ಕೊಟ್ಟಾಯಂನಲ್ಲಿ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಆಗಿದ್ದಾಗ ನನಗೆ ಬಹಳ ಹತ್ತಿರವಾದವರಲ್ಲಿ ಓ.ಎನ್.ವಿ. ಕುರುಪ್‌ರು ಒಬ್ಬರು. ನಾನು ಅವರನ್ನು ಹುಡುಕಿಕೊಂಡು ಹೋದದ್ದುಂಟು. ಅವರು ಹಲವು ಬಾರಿ ನಮ್ಮ ವಿಶ್ವವಿದ್ಯಾಲಯಕ್ಕೆ ಬಂದದ್ದುಂಟು. ಹಲವು ಸೆಮಿನಾರ್‌ಗಳಲ್ಲಿ ಮತ್ತು ವಿದ್ವತ್ ಸಭೆಗಳಲ್ಲಿ ಅವರನ್ನು ನೋಡಿದ್ದೇನೆ. ಈ ಕಾಲದ ಮಲಯಾಳಿ ಸಾಹಿತ್ಯ ವಲಯದಲ್ಲಿ ಎಲ್ಲರೂ ಇಷ್ಟಪಡುವ ಕವಿಯೆಂದರೆ ಓ.ಎನ್.ವಿ.ಯವರು.
ನನಗೆ ಅವರಲ್ಲಿ ಬಹಳ ಇಷ್ಟವಾದ ಪದ್ಯವೊಂದಿದೆ. ಆಶ್ಚರ್ಯವೆಂದರೆ ಅಡಿಗರ ಭೂಮಿಗೀತದಂತೆಯೇ ಭೂಮಿಯ ಬಗ್ಗೆ ಬರೆದ ದೀರ್ಘವಾದ ಪದ್ಯ ಇದು. ಈ ಎರಡು ಪದ್ಯಗಳ ನಡುವಿನ ವ್ಯತ್ಯಾಸವೂ ನನಗೆ ಕುರುಪ್‌ರ ಕಾವ್ಯಮಾರ್ಗವನ್ನು ಅರಿಯಲು ಸಹಾಯಕವಾಗಿತ್ತು. ಅಡಿಗರಲ್ಲಿ ಭೂತಾಯಿಯ ನಿಜವಾದ ಮಕ್ಕಳು ಹುಲಿ, ಚಿರತೆ, ಆನೆ ಕೋಡಗ ಕತ್ತೆ ಇಂತಹ ಪ್ರಾಣಿಗಳು. ಡಿ.ಎಚ್. ಲಾರೆನ್ಸ್ ಅವನದೊಂದು ಸ್ನೇಕ್ ಎನ್ನುವ ಪದ್ಯದಲ್ಲಿ ಹಾವನ್ನು ‘ಲಾರ್ಡ್ ಆಫ್ ಲೈಫ್’ (Lord of Life) ಎನ್ನುತ್ತಾರೆ. ಮನುಷ್ಯ Lord of Life ಅಲ್ಲ. ಲಾರೆನ್ಸ್‌ನಿಂದ ಪ್ರೇರಿತರಾದ ಅಡಿಗರು ಮನುಷ್ಯ-ಭೂಮಿ ಮತ್ತು ಆಕಾಶದ ಸಂಗಮದಿಂದಾಗಿ ಎಡಬಿಡಂಗಿಯಾಗಿ ಕಾಣಿಸುತ್ತಾನೆ ಎಂದು ಭೂಮಿಗೀತದಲ್ಲಿ ನಿರೂಪಿಸುತ್ತಾರೆ. ಮಲಯಾಳಂ ಓದಲು ಬಾರದ ನನ್ನ ಸುಮಾರು ಎರಡು ದಶಕಗಳ ಹಿಂದಿನ ನೆನಪಿನಿಂದ ಹೇಳುವುದಾದರೆ ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಓ.ಎನ್.ವಿ.ಯವರಿಗೆ ಈ ಭೂಮಿ ತಾಯಿಯಿದ್ದಂತೆ. ಅಡಿಗರಿಗೆ ಮಲತಾಯಿಯಿದ್ದಂತೆ. ಈ ದೃಷ್ಟಿಯಿಂದ ಓ.ಎನ್.ವಿ.ಯವರು ನಮ್ಮ ನವೋದಯದ ಜೀವನವನ್ನು ಕೀರ್ತಿಸುವ ಕವಿಗಳ ಸಾಲಿನವರು.
ಮಲಯಾಳದಲ್ಲಿ ಎಲ್ಲ ಬಗೆಯ ಕಾವ್ಯವೂ ಇದೆ. ನವೋದಯ, ಬಂಡಾಯ, ನವ್ಯ- ಎಲ್ಲವೂ ಪ್ರಸ್ತುತವಾಗಿಯೇ ಉಳಿದಿವೆ. ಗತಿಸಿದ ಅಯ್ಯಪ್ಪ ಫಣಿಕ್ಕರ್‌ರಲ್ಲಿ ಹಾಗೂ ಗತಿಸಿದ ಕಡಮನಾಟ್ ರಾಮಕೃಷ್ಣನ್ ಕವಿಯಲ್ಲಿ ಎರಡು ಬಗೆಯಾಗಿ ಕಾವ್ಯ ಹರಿಯುತ್ತದೆ. ಅಯ್ಯಪ್ಪ ಫಣಿಕ್ಕರ್‌ರಲ್ಲಿ ಮತ್ತು ಸಚ್ಚಿದಾನಂದನ್ ಅವರಲ್ಲಿ ಕಾವ್ಯ ಹಲವು ಪ್ರಯೋಗಗಳ ನವ್ಯವಾಗಿದೆ. ಆದರೆ ಕಡಮನಾಟ್ ರಾಮಕೃಷ್ಣರಲ್ಲಿ ಕವಿತಾರಚನೆ ಆದಿಮ ಶಕ್ತಿಯ ಪುರಾಣಗಳನ್ನು ಸೃಷ್ಟಿಸುವ ಕಾವ್ಯವಾಗಿದೆ. ಇಂಥವರ ನಡುವೆ ಓ.ಎನ್.ವಿ. ತಮ್ಮದೇ ಜೀವಪರವಾದ ನಿಲುವುಗಳನ್ನು ಹಾಡುವಂತೆ ಪಠಿಸಬಲ್ಲ ಘನೋದ್ದೇಶದ ಕವಿಗಳಾಗಿ ಉಳಿದಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ನಾನು ಇವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬಹುದೆಂದು ನಿರೀಕ್ಷಿಸಿದ್ದೆ.
ಎಂಬತ್ತೇಳರಲ್ಲಿ ನಾನು ಕೇರಳ ತಲುಪಿದಾಗ ಮೊದಲು ನನ್ನನ್ನು ಭೇಟಿಯಾದವರಲ್ಲಿ ಓ.ಎನ್.ವಿ. ಮುಖ್ಯರು. ಮೇಲೆ ಹೆಸರು ಹೇಳಿದ ಕವಿಗಳ ಪರಿಚಯ ಮಾತ್ರ ನನಗಿತ್ತು. ಓ.ಎನ್.ವಿ. ನನ್ನನ್ನು ಕಂಡೊಡನೆಯೇ ಮಲಯಾಳಂ ಲಿಪಿಯನ್ನು ಕಲಿವ ಸುಲಭವಾದ ಮಾರ್ಗವೊಂದನ್ನು ಹೇಳಿಕೊಟ್ಟರು. ನಿನಗೆ ಗೊತ್ತಿರುವ ಕನ್ನಡ ಲಿಪಿಯನ್ನು ಕೊಂಚ ಬಲಕ್ಕೋ ಎಡಕ್ಕೋ ವಾಲಿಸಿ ಅದರಲ್ಲಿ ಕನ್ನಡ ಲಿಪಿಯ ಛಾಯೆಯನ್ನು ಗುರುತಿಸುವುದನ್ನು ಕಲಿ; ನಿನಗೆ ಆಗ ಕ್ರಮೇಣ ಮಲಯಾಳಂ ಲಿಪಿಯನ್ನು ಗುರುತಿಸುವುದು ಸಾಧ್ಯವಾಗುತ್ತದೆ ಎಂದು. ಓ.ಎನ್.ವಿ. ಹೇಳಿದ್ದನ್ನು ಸತತವಾಗಿ ನಾಲ್ಕು ವರ್ಷಗಳ ಕಾಲವೂ ನಾನು ಗಮನಿಸುತ್ತಲೇ ಹೋಗಿ ಅಷ್ಟಿಷ್ಟು ಓದಲು ಕಲಿತಿದ್ದೆ. ಬಹಳ ಹಿಂದೆ ಕೇರಳದಲ್ಲಿ ಬದುಕಿದ ನನ್ನ ಅಜ್ಜ ನಾಮಫಲಕಗಳನ್ನು ಗಮನಿಸುತ್ತ ನನಗಿಂತ ಚೆನ್ನಾಗಿ ಮಲಯಾಳಂನ್ನು ಓದಬಲ್ಲವರಾಗಿದ್ದರು. ಕೇರಳದಲ್ಲಿ ಗೆಳೆಯ ರಷೀದ್ ಬಗ್ಗೆ ನಾನು ಹೇಳಿದ್ದನ್ನು ಈಗಲೂ ನೆನೆಯುವವರಿದ್ದಾರೆ. ಅನಕ್ಷರಸ್ಥನಾದ ಮಲಯಾಳಿ ಇವನೊಬ್ಬನೇ ಎಂದು ಸೆಮಿನಾರ್ ಸಂದರ್ಭದಲ್ಲಿ ನಾನು ಹೇಳಿದ್ದೆ.

Ottaplakkal Neelakandan Velu Kurup (27 May 1931 – 13 February 2016),

ಲಿಪಿಯನ್ನು ಮಾತ್ರವಲ್ಲದೇ ಕೆಲವು ವಾಕ್ಯಗಳನ್ನೂ ಮಾತಾಡಲು ಓ.ಎನ್.ವಿ. ನನಗೆ ಕಲಿಸಿದ್ದರು. ನಾನು ಸೆನೆಟ್ ಸಭೆಯಲ್ಲಿ ಮಲಯಾಳಂ ಭಾಷೆ ವಿದ್ಯಾಭ್ಯಾಸದ ಮೊದಲ ಭಾಷೆಯಾಗಬೇಕು ಎಂದು ತೀರ್ಮಾನಿಸಿದ್ದೆ. ಇದರಿಂದ ಓ.ಎನ್.ವಿ. ಪುಳಕಿತರಾಗಿ ಅವರು ಮಾತಾಡಿದ ಅನೇಕ ಸಭೆಗಳಲ್ಲಿ ಕನ್ನಡಿಗನೊಬ್ಬ ಮಲಯಾಳಂ ಭಾಷೆಯ ಪ್ರಾಧಾನ್ಯಕ್ಕೆ ಶ್ರಮಿಸಿದ್ದನ್ನು ಪ್ರೀತಿಯಿಂದ ನೆನೆಯುತ್ತಿದ್ದರು. ಹಾಗೆಯೇ ಕೆಲವು ವರ್ಷಗಳ ಹಿಂದೆ ಶ್ರೀ ಆಂಟೋನಿ ಮುಖ್ಯಮಂತ್ರಿಯಾಗಿದ್ದಾಗ ಪ್ರೈಮರಿ ಶಾಲೆಯ ಅಧ್ಯಯನದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎನ್ನುವ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷನನ್ನಾಗಿ ನನ್ನನ್ನು ಮಾಡಿದ್ದರು. ವಿದ್ಯಾರ್ಥಿಗಳು ಕ್ರಮೇಣ ಕಡಿಮೆಯಾಗುತ್ತಿರುವ, ಆದರೆ ನಿಜವಾದ ಒಳ್ಳೆಯ ಅಧ್ಯಾಪಕರಿರುವ ಸರಕಾರಿ ಶಾಲೆಗಳಿಗೆ ಮತ್ತೆ ವಿದ್ಯಾರ್ಥಿಗಳು ಸೇರುವಂತೆ ಮಾಡಲು ನಾನೊಂದು ಉಪಾಯ ಸೂಚಿಸಿದ್ದೆ. ‘ಮೊದಲ ಮೂರು ವರ್ಷ ಇಂಗ್ಲಿಷನ್ನು ಓದಲು ಬರೆಯಲು ಕಲಿಸುವುದು ಬೇಡ. ಆದರೆ ಸಾಧ್ಯವಿದ್ದಷ್ಟು ಮಾತಾಡುವುದನ್ನು ಮಕ್ಕಳಿಗೆ ಕಲಿಸೋಣ; ಆದರೆ ಅವರು ಕಲಿಯಬೇಕಾದ ಎಲ್ಲ ವಿಷಯವನ್ನೂ ಮಲಯಾಳಿ ಮಾಧ್ಯಮದಲ್ಲಿ ಮಾತ್ರ ಕಲಿಸೋಣ’ ಎಂದು. ಈ ನನ್ನ ಸಲಹೆಗೆ ಕಾರಣ ಇಂಗ್ಲಿಷ್ ಮಾಧ್ಯಮದ, ಇಂಗ್ಲಿಷ್ ವ್ಯಾಮೋಹದ, ಕೆಟ್ಟ ರೀತಿಯ ಶಿಕ್ಷಣದ, ಖಾಸಗೀ ಶಾಲೆಗಳು ಮಕ್ಕಳ ತಂದೆ-ತಾಯಿಗಳಿಗೆ ಆಕರ್ಷಕವಾಗದಂತೆ ಮಾಡುವುದಾಗಿತ್ತು. ಅಲ್ಲದೇ ಎಲ್ಲಾದರೂ ಹೋಗಿ ಬದುಕಬೇಕಾದ ಮಲಯಾಳಿಗಳನ್ನು ಎರಡು ಭಾಷೆಗಳಲ್ಲೂ ಸಲ್ಲುವವರಂತೆ ಮಾಡುವುದೂ ಆಗಿತ್ತು. ವ್ಯಾಪಾರೀ ಮನೋವೃತ್ತಿಯ ಇಂಗ್ಲಿಷ್ ಮಾಧ್ಯಮದ ಖಾಸಗೀ ಶಾಲೆಗಳ ಹಾವಳಿಯಿಂದ ಪಾರು ಮಾಡುವ ಈ ಕ್ರಮಕ್ಕೆ ಖಾಸಗೀ ವಲಯದಿಂದ ತುಂಬ ವಿರೋಧ ಬಂದಿತ್ತು. ಈ ವಿರೋಧದ ನಡುವೆಯೂ ನನ್ನ ವಿಚಾರದ ಪರವಾಗಿ ದನಿಯೆತ್ತಿ ಮಾತಾಡಿದವರು ನನಗೆ ಹಿರಿಯರಾದ ಓ.ಎನ್.ವಿ.ಯವರು. ಇವರು ಕವಿ ಮಾತ್ರರಾಗಿ ಉಳಿಯಲಿಲ್ಲ. ಒಬ್ಬ ನಾಗರಿಕ ಪ್ರಜೆ ಆಡಬೇಕಾದ್ದನ್ನು ಅಂಜದಂತೆ ಆಡಬಲ್ಲವರಾಗಿದ್ದರು.
ಓ.ಎನ್.ವಿ. ಜನಪರ ಕವಿ ಮಾತ್ರವಲ್ಲ. ಜನಪ್ರಿಯ ಕವಿಯೂ, ಘನಪಂಡಿತರೂ ಎನ್ನಬಹುದು. ಒಟ್ಟಾಗಿ ಈ ಮೂರು ಶಬ್ದಗಳನ್ನು ಹಲವರ ಬಗ್ಗೆ ಹೇಳುವುದು ಸಾಧ್ಯವಿಲ್ಲ.

Monday, February 15, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 67

ಶನಿಶಿಂಗಾಪುರ (Shanisingapur)

ಶನಿಶ್ಚರ ಕ್ಷೇತ್ರವಾಗಿ ಜಗತ್ಪ್ರಸಿದ್ದಿ ಪಡೆದಿರುವ, ಇತ್ತೀಚಿನವರೆಗೂ ಇಡೀ ಊರಿನ ಯಾರ ಮನೆಗೂ ಕಿಟಕಿ-ಬಾಗಿಲುಗಳಿಲ್ಲದೆ, ಕಳ್ಳ ಕಾಕರ ಭಯವಿಲ್ಲದೆ ಜನರು ಬದುಕುತ್ತಿರುವ ಊರು ಶನಿಶಿಂಗಾಪುರ. ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿನ ನಿವಾಸ್ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರವು ಮುಂಬೈ ಮಹಾನಗರದಿಂದ ಸುಮಾರು 296 ಕಿ.ಮೀ. ದೂರದಲ್ಲಿದೆ. ಶ್ರೀ ಸಾಯಿಬಾಬಾ ಪವಾಡ ಕ್ಷೇತ್ರವಾದ ಶಿರಡಿಯಿಂದ 72 ಕಿ.ಮೀ ದೂರದಲ್ಲಿದೆ. 







ಇಲ್ಲಿಗೆ ಪ್ರತಿನಿತ್ಯವೂ ಭೇಟಿ ನೀಡುವ ಸಾವಿರ ಸಂಖ್ಯೆಯ ಭಕ್ತಾದಿಗಳು ಶನಿ ದೇವರಿಗೆ ಎಳ್ಳೆಣ್ಣೆಯನ್ನು ಸಮರ್ಪಿಸಿ ಕೃತಾರ್ಥರಾಗುತಾರೆ. 
***

ಸುಮಾರು ನೂರಿನ್ನೂರು ವರ್ಷಗಳ ಹಿಂದೆ ಇದೀಗ ಕ್ಷೇತ್ರವಾಗಿರುವ ಹಳ್ಳಿಯ ಪಕ್ಕದಲ್ಲಿನ ನದಿಯಲ್ಲಿ ಭೀಕರವಾದ ಪ್ರವಾಹ ಉಂಟಾಗಿತ್ತು. ಆ ಪ್ರವಾಹದ ಸಮಯದಲ್ಲಿ 



ಶನಿದೇವರ್ ಫಲಕವು ನೀರಿನಲ್ಲಿ ತೇಲಿ  ಬಂದಿತು. ಕೆಲ ದಿನಗಳ ಬಳಿಕ ಪ್ರವಾಹವು ಇಳಿಮುಖವಾಗಲು ಅಲ್ಲಿನ ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡ ಶನಿಶ್ಚರನು "ಈ ಊರಿನಲ್ಲಿ ವಾಸವಾಗಿರುವ ಸೋದರಳಿಯಾ ಹಾಗೂ ಸೋದರ ಮಾವಂದಿರು ಸೇರಿ ನನ್ನ ಫಲಕವನ್ನು ಊರ ಮಧ್ಯೆ ಸ್ಥಾಪನೆ ಮಾಡಬೇಕು. ಸಮೀಪದಲ್ಲಿ ಬೇವಿನ ಮರ ನೆಡಬೇಕು, ಆದರೆ ಬೇವಿನ ಮರದ ಕೊಂಬೆಗಳು ನನ್ನ ಫಲಕಕ್ಕೆ ತಾಗಬಾರದು." ಎಂದು ಆದೇಶಿಸಿದನು. 

"ನೀನೇನಾದರೂ ಹೀಗೆ ನಡೆದುಕೊಂದಲ್ಲಿ, ಈ ಊರಿನ ರಕ್ಷಣಾ ಭಾರ ನನ್ನದು. ನಿಮ್ಮ ನಿಮ್ಮ ಮನೆಗಳಿಗೆ ಕಿಟಕಿ-ಬಾಗಿಲುಗಳಿರಕೂಡದು." ಎಂದೂ ಅಭಯವನ್ನಿತ್ತನು. 

ಶನಿಶ್ಚರನ ಆದೇಶದ ಅನುಸಾರ ಅವನ ಫಲಕವನ್ನು ಸ್ಥಾಪಿಸಿ ಊರಲ್ಲಿದ್ದ ಮನೆಗಳನ್ನೆಲ್ಲಾ ಬಾಗಿಲು-ಕಿಟಕಿಗಳಿಲ್ಲದ ಮನೆಗಳನ್ನಾಗಿ ಪರಿವರ್ತಿಸಲಾಯಿತು. ಅಲ್ಲಿಂದ ಮುಂದೆ ಈ ಊರಲ್ಲಿ ಕಳ್ಳತನವಾಗಿರುವ ವರದಿ ಇರಲಿಲ್ಲ! ಒಂದೊಮ್ಮೆ ಯಾರಾದರೂ ಕಳ್ಳರು ಕಳ್ಳತನವೆಸಗಿದ್ದೇ ಆದರೆ ಅವರು ತಮ್ಮ ಕಣ್ಣುಗಳನ್ನು ಕಳೆದುಕೊಂಡು ಅದೇ ಊರಿನಲ್ಲಿ ಸುತ್ತುತ್ತಿರಬೇಕಾಗಿ ಬರುತ್ತದೆ ಎನ್ನಲಾಗಿತ್ತು. 

Wednesday, February 03, 2016

ಕನ್ನಡ ಕಥಾಲೋಕದ ಸಾರ್ಥಕ ಕೃತಿ - "ಜುಗಾರಿ ಕ್ರಾಸ್"

ಆಶ್ಚರ್ಯವಾಗಬಹುದು! ಸಹಸ್ರಾರು ಚದರ ಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ನಾಲ್ಕಾರು ದಾರಿ ಕೂಡುವ ಈ ಸರ್ಕಲ್ಲಿಗೆ ಯಾಕೆ ಜುಗಾರಿ ಕ್ರಾಸ್ ಎಂದು ಹೆಸರಿಟ್ಟಿದ್ದಾರೆ ಎಂದು! ಈ ನಿರ್ಜನ ಪ್ರದೇಶದಲ್ಲಿ ಯಾವ ಗಿರಾಕಿ ಸಿಕ್ಕುತ್ತದೆಂದು ಕಾಯುತ್ತಾ ಬಾಡಿಗೆ ಟ್ಯಾಕ್ಸಿಗಳು ನಿಂತಿರುತ್ತವೆಂದು! ಈ ಕೂಡು ರಸ್ತೆಗಳಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ ಮುಂತಾದಲ್ಲಿಗೂ ಹೋಗುವ ರಸ್ತೆಗಳಿರುವುದರಿಂದ ಅಲ್ಲಿಗೆ ಹೋಗುವವರು ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಾರೇನೋ ಎಂದು ಶಂಕಿಸಬಹುದು. ಈ ಪುಣ್ಯಕ್ಷೇತ್ರಗಳಿಗೆ ಹೋಗಬಹುದೆಂಬುದೇನೋ ನಿಜ! ಆದರೆ ಅಲ್ಲಿಗೆ ಬಂದು ಟ್ಯಾಕ್ಸಿ ಮಾಡಿಕೊಂಡು ಹೋಗುವವರು ಯಾರು? ಈ ಪ್ರಶ್ನೆಗೆ ಮಾತ್ರ ಉತ್ತರ ಕೇಳಬೇಡಿ! ಅಲ್ಲಿ ಫಾರೆಸ್ಟ್ ಚೆಕ್ ಪೋಸ್ಟಿನ ಬಳಿ ಒಂದು ದೊಡ್ಡ ಚಾ ಹೋಟೆಲ್ಲು ಸದಾ ನೊಣ ಹೊಡೆಯುತ್ತಾ ಬಿದ್ದಿರುತ್ತದೆ. ಅಲ್ಲಿರುವ ಇಬ್ಬರೇ ಗಿರಾಕಿ, ಫಾರೆಸ್ಟರ್ ಮತ್ತು ಗಾರ್ಡಿಗೆ ಹಡಬಿಟ್ಟೀ ಚಾ ಒದಗಿಸುತ್ತಾ ಅದನ್ನು ನಡೆಸುತ್ತಿರುವವರು ಯಾರು? ಅದನ್ನು ಕಟ್ಟಿಸಿದವರು ಯಾರು? ಹೀಗೆ ಈ ಭಯಂಕರ ಏಕಾಂತದ ಜುಗಾರಿ ಕ್ರಾಸ್ ನೋಡಿದವರಿಗೆ ನೂರಾರು ಕೌತುಕದ ಪ್ರಶ್ನೆಗಳು ಕಾಡುವುದರಲ್ಲಿ ಅನುಮಾನವೇ ಇಲ್ಲ.




ಜುಗಾರಿ ಕ್ರಾಸಿನ ಎಲ್ಲಾ ದಾರಿಗಳಿಗೂ ಒಂದೊಂದು ಬಲವಾದ ಗಳುವನ್ನು ಅಡ್ಡಲಾಗಿ ಕವೆಗೋಲಿನ ಮೇಲೆ ಕೂರಿಸಿರುತ್ತಾರ್ರೆ. ಮೊದಲು ಆ ಬಿದಿರು ಬೊಂಬುಗಳಿಗೆ ಒಂದೊಂದು ಕೆಂಪು ಲಾಟೀನನ್ನು ಹೋಗಿ ಬರುವ ವಾಹನಗಳಿಗೆ ಸುಲಭವಾಗಿ ಗುರುತಿಸಲು ಸಾಧ್ಯವಾಗಲೆಂದು ಕಟ್ಟಿರುತ್ತಿದ್ದರು. ಆದರೆ ಅಲ್ಲಿ ನಡೆಯುವ ಕಾಳ ವ್ಯವಹಾರದ ದಂಧೆ ಇವ್ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ ಇಲ್ಲದ್ದರಿಂದ ದಿನಕ್ಕೊಂದು ಬೊಂಬು ಮುರಿದು, ಲಾಟೀನು ಪುಡಿಪುಡಿಯಾಗಿ, ಅರಣ್ಯಿಲಾಖೆಗೆ ಈ ಲುಕ್ಸಾನು ತಡೆಯಲಾಗದೆ ಲಾಟೀನು ಕಟ್ಟುವುದನ್ನು ಖೈದು ಮಾಡಿ........................

***

"ಜುಗಾರಿ ಕ್ರಾಸ್" ಪೂರ್ಣಚಂದ್ರ ತೇಜಸ್ವಿಯವರ ಮಹತ್ವದ ಕಾದಂಬರಿ.  ಕನ್ನಡ ಸಾಹಿತ್ಯ ಲೋಕದಲ್ಲಿ ಛಾಪು ಮೂಡಿಸಿದ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ ಕಾಳದಂಧೆಗಳ ಕುರಿತು ಈ ಕೃತಿಯಲ್ಲಿ ತೇಜಸ್ವಿಯವರು ಮಾತನಾಡುತ್ತಾ ಪ್ರಾಕೃತಿಕ ಸಂಪತ್ತನ್ನು ಕಾಪಾಡುವ ಬಗೆಗೆ ತಮ್ಮದೇ ನೆಲೆಯಲ್ಲಿ ಚಿಂತನೆ ನಡೆಸುತ್ತಾರೆ. ತೇಜಸ್ವಿಯವರೇ ಹೇಳಿಕೊಂಡಿರುವಂತೆ ಒಂದು ಕ್ಷಣಕ್ಕೆ ರೊಮ್ಯೋಂಟಿಕ್ ಥ್ರಿಲ್ಲರ್ ಎಂದೆನಿಸಬಹುದಾದ ಈ ಕೃತಿ ಬದಲಾಗುತ್ತಿರುವ ಸನ್ನಿವೇಶಗಳು ಉಂಟುಮಾಡುತ್ತಿರುವ ಅವಾಂತರ ಅಪಾಯಗಳನ್ನೂ, ಅಭಿವದ್ಧಿಶೀಲ ರಾಷ್ಟ್ರಗಳ ಪ್ರದೇಶಗಳಲ್ಲಿ ಜಾಗತಿಕ ಪರಿಣಾಮಗಳು ಸೃಷ್ಟಿಸಬಹುದಾದ ತಲ್ಲಣಗಳನ್ನೂ ಎಳೆಎಳೆಯಾಗಿ ಪ್ರೇಕ್ಷಕರ ಮುಂದಿಡುತ್ತಾ ಹೋಗುತ್ತದೆ. ಕೇವಲ 24 ಗಂಟೆಗಳ ಅವಧಿಯ ಕಥೆ ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವಿಕ ಸಾಮಾಜಿಕ ಕಾದಂಬರಿ. ಕುವೆಂಪು ಅವರ ಕಾನೂರು ಹೆಗ್ಗಡತಿ, ಕಾರಂತರ ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ ಈ ಕಾದಂಬರಿಯೇ ಉದಾಹರಣೆ.  ಮಲೆನಾಡಿನ ದಟ್ಟ ಕಾಡೇ ಕಾಳ ದಂಧೆಗಳ ತವರೂರಾಗುವುದು, ಈ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಏಲಕ್ಕಿ ಮಾರಲೆಂದು ಹೊರಟ ವಿದ್ಯಾವಂತ ರೈತ ದಂಪತಿ ಸುರೇಶ ಮತ್ತು ಗೌರಿ ಆ ವ್ಯೆಹದಲ್ಲಿ ಸಿಕ್ಕಿಹಾಕಿಕೊಳ್ಳುವುದು, ಜುಗಾರಿ ಕ್ರಾಸ್ ಎಂಬ ಊರಿನಲ್ಲಿ ನಡೆಯುತ್ತಿದ್ದ ರಹಸ್ಯ ಕಾಳ ಧಂಧೆಯ ಕುರಿತು ಹೇಳುತ್ತಾ ಒಬ್ಬ ಅಮಾಯಕ ಸುರೇಶ ತನಗೆ ಗೊತ್ತಿಲ್ಲದಂತೆ ಆ ಕಾಳ ಧಂಧೆಗೆ ಸೇರಿಬಿಡುತ್ತಾನೆ. ಹಾಗೆ ಸೇರುವ ಮುನ್ನ ಹಾಗೂ ತದನಂತರದ ಸರಣಿ ಕಥೆಗಳನ್ನು ಅತ್ಯಂತ ಕ್ರೀಯಾಶೀಲತೆಯಿಂದ ಹೆಣೆದಿದ್ದಾರೆ. ಸುರೇಶ ಮತ್ತು ಗೌರಿ ಆ ಕಾಳ ಧಂಧೆಗೆ ಆಕಸ್ಮಿಕ ವಾಗಿ ಸಿಕ್ಕು ಪಟ್ಟ ಕಷ್ಟಗಳು ಹಾಗೂ ಅದರಿಂದ ಹೊರಬಂದ ಪರಿ ಈ ಕಥೆಯ ಸಾರಾಂಶ
ಹುಸಿ ಕ್ರಾಂತಿಕಾರಿ ಗಂಗೂಲಿ, ಅರವತ್ತು ಸಾವಿರ ಲಂಚ ಕೊಟ್ಟು ಅದನ್ನು ಗಿಟ್ಟಿಸಲು ಪೇಚಾಡುವ ಇಕ್ಬಾಲ್, ಇಪ್ಪತ್ತು ರೂಪಾಯಿಗೂ ಖೂನಿ ಮಾಡಬಲ್ಲ ಜಾನಿ ಹೆನ್ರಿ, ಅನಧಿಕೃತವಾಗಿ ಚೆಕ್‌ಗಳನ್ನು ಕ್ಯಾಷ್ ಮಾಡುವ ಶೇಷಪ್ಪ ಪಾತ್ರಗಳಂತೆ ಕಾಣದೆ ಪ್ರೇಕ್ಷಕರ ನಡುವೆ ಇರುವ ಸಹಜ ವ್ಯಕಿಗಳಂತೆ ಗೋಚರಿಸುತ್ತಾರೆ.
ಪರಸ್ಪರ ವೈರುಧ್ಯಗಳನ್ನೇ ಅದೃಶ್ಯ ತಂತುಗಳಿಂದ ಸಂಯೋಜಿಸುತ್ತ ಸಾಗುವ ಈ ಕಾದಂಬರಿಯೊಂದು ವಿಚಿತ್ರ ಮತ್ತು ಅಸಾಧಾರಣ ಕೃತಿ. ಜೀವನದ ವಿರಾಟ್ ಅರ್ಥ ಹೀನತೆಯ ಪರಿಧಿಯೊಳಗೆ ಅದರ ಅರ್ಥಪೂರ್ಣತೆಯನ್ನು ಅನ್ವೇಷಿಸುತ್ತದೆ. ಅಸಂಗತ ಘಟನಾವಳಿಗಳ ಸರಣಿಯನ್ನೇ ಸುಸಂಗತ ಕಥೆಯನ್ನಾಗಿ ನೇಯುತ್ತದೆ. ಚರಿತ್ರೆಯ ಅಪಹಾಸ್ಯವನ್ನು ತಿಳಿಹಾಸ್ಯ ಮತ್ತು ವಿನೋದಗಳಿಂದ ಪ್ರತಿರೋಧಿಸುತ್ತದೆ. ಶತಮಾನದ ಕಥೆಯನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರತಿಮಿಸುತ್ತದೆ. ಜೀವನವನ್ನು ಎದುರಿಸಲು ಆಶಾವಾದ, ನಿರಾಶವಾದ ಇವುಗಳೆಲ್ಲವನ್ನೂ ಮೀರಿದ ಗಂಭೀರ ಎದೆಗಾರಿಕೆಯನ್ನು ಇದು ನಮಗೆ ತೋರಿಸಿ ಕೊಡುತ್ತದೆ
ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ. ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು ಅಲ್ಲಿನ ಕಷ್ಟ-ಸುಖಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಈ ಕೃತಿ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
ಒಟ್ತಾರೆ ಇದೊಂದು ಸಾಹಸಮಯ ಪತ್ತೇದಾರಿ ಕಾದಂಬರಿಯಂತಿದ್ದು  ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಸವಾಗುತ್ತದೆ

Monday, January 18, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 66

ಶ್ರೀ ಮಲೆ ಮಹದೇಶ್ವರ (Male Mahadeshwara)
ಭಾಗ –4

 ಶ್ರೀ ಮಲೆ ಮಹದೇಶ್ವರ ಬೆಟ್ಟ.  ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ, ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ ಮಹತ್ವವನ್ನು ಪಡೆದುಕೊಂಡು ಬಂದಿದೆ.  ಬೆಂಗಳೂರಿನಿಂದ 210  ಕಿ ಮೀ ದೂರ ದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಈ ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ.  ಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಆ ಏಳು ಮಲೆಗಳು ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ, ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮಿಯ ದೇವಾಲಯವಿದೆ.
ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಮಹದೇಶ್ವರರ ಬಗ್ಗೆ ನೂರಾರು ಜಾನಪದ ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ ಕಾಲದ 1761ರ ಒಂದು ಶಾಸನದಲ್ಲಿ ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ. ಈ ದೇವಸ್ಥಾನಕ್ಕೆ ‍ಫೆಬ್ರವರಿ ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ. ಆ ದಿನದಂದು ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.





***

ನಂತರ ಸ್ವಾಮಿ ಮಾದಪ್ಪ ತಾಳಬೆಟ್ಟಕ್ಕೆ ಬಂದರು. ಅಲ್ಲಿ ಮುಕ್ಕಡಲಿ ಮಾರಿಯನ್ನು ಭೇಟಿಯಾಗಿ ಅವಳಿಂದ ಶ್ರವಣಾಸುರನ ವಿಚಾರವನ್ನು ತಿಳಿದುಕೊಳ್ಳುತ್ತಾನೆ. ಅಲ್ಲಿಂದ ಬಿಳಿಗಿರಿ ರಂಗನಾಥನನ್ನು ದರ್ಶನ ಮಾಡಿಕೊಂಡು ಮುಂದೆ ನದಿಯ  ಸನಿಹದಲ್ಲಿ ಮಾರೀರೆಯರಿಗೆ ಹರಸಿ ಬಂಕಾಪುರಕ್ಕೆ ಆಗಮಿಸಿದನು. ಅಲ್ಲಿ ಶ್ರವಣಾಸುರನನ್ನು ಸಂಹರಿಸಿ ಶ್ರಾವಣ ಮಾಸದಲ್ಲಿ ನಿನಗೆ ಕಜ್ಜಾಯವನ್ನು ನೀಡುವ ವ್ಯವಸ್ಥೆ ನಾನು ಮಾಡಿಸುತ್ತೇನೆಂದು ಹರಸಿ ಸ್ವಾಮಿಯು ಮುಂದೆ ತವಸೆರೆ ಬೆಟ್ಟಕ್ಕೆ ಬಂದು ತಪಸ್ಸು ಮಾಡುತ್ತಾರೆ. ಅಲ್ಲಿ ಅವರಿಗೆ "ತವಸಾರಪ್ಪ" ಎಂದು ಹೆಸರಾಗುತ್ತದೆ. ಅಲ್ಲಿಂದ ನಂತರದಲ್ಲಿ ಸ್ವಾಮಿ ಮಾದಪ್ಪನು ಪಯಣಿಸಿ ಮಾರ್ಗದಲ್ಲಿ ಒಂದು ಕರಿ ಬಂಡೆಯ ಮೇಲೆ ಮಲಗಿ ಆಯಾಸ ಪರಿಹರಿಸಿಕೊಳ್ಳುತ್ತಿರಲು ಬಿಸಿಲು ಬೀಳುತ್ತಿದ್ದ ಆ ಸಮಯಕ್ಕೆ ಆನೆಗಳು ಅಲ್ಲಿಗೆ ಬಂದು ಸ್ವಾಮಿಗೆ ಎಳತಾದ ಸೊಪ್ಪಿನಿಂದ ನೆರಳನ್ನು ನೀಡುತ್ತಿವೆ. ಜತೆಗೆ ತಮ್ಮ ಸೊಂಡಿಲಿನಿಂದ ಸ್ವಾಮಿಗೆ ದಿಂಬನ್ನು ಮಾಡುತ್ತವೆ. ಆಗ ಮಾದಪ್ಪನು ಆ ಆನೆಗಳಿಗೆ ಮುಂದೆ ಈ ಸ್ಥಳವು "ಆನೆ ತಲೆ ದಿಂಬ" ಎಂದು ಹೆಸರಾಗಲಿ, ನಿಮ್ಮಗಳ ಸೇವೆಗಾಗಿ ಭೂಲೋಕದ ಜನರು ಗಜಗೌರಿ ವ್ರತವನ್ನು ಮಾಡಲಿ." ಎಂದು ಹರಸುತ್ತಾನೆ.
ಅಲ್ಲಿಂದ ಮಾದಪ್ಪನು ನಡುಮಲೆಗೆ ಬಂದು ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದುಕೊಂಡನು. ಮುಂದೆ ಆಲಂಬಾಡಿ ಚಿತ್ತೇಗೌಡರ ಹಸುಗಳನ್ನು ತನ್ನತ್ತ ಕರೆಸಿಕೊಂದನು. ಆಗ ತನ್ನ ಲೀಲೆಯಿಂದ ಚಿಂಜೇಗೌಡನಿಂದ ಹದಿನಾರಂಕಣದ ಗುಡಿಯನ್ನು ಕಟ್ಟಿಸಿಕೊಂಡನು. ನಂತರದಲ್ಲಿ ಶಾಂತ ಮಲ್ಲಿಕಾರ್ಜುನ ಸ್ವಾಮಿಯವರಿಂದ ಬೇಡ ಕಂಬಳಕ್ಕೆ ನೂರೊಂದು ವಕ್ಕಲನ್ನು ಮಾಡಿಕೊಂಡನು.  ಅವರೆಲ್ಲರಿಗೂ ಲಿಂಗಧಾರಣೆಯನ್ನು ಮಾಡಿಸಿದ. ಅವಲರೆಲ್ಲರೂ ಮಾದಪ್ಪನ ಬಳಿಯೇ ಉಳಿದರು. ಅವರೆಲ್ಲರೂ ಸೇರಿ ಅಲ್ಲೊಂದು ಊರನ್ನು ಕಟ್ಟಿ ಅದಕ್ಕೆ "ದೇವರ ಹಳ್ಳಿ" ಎಂದು ನಾಮಕರಣ ಮಾಡಿದರು. ಆ ಬಳಿಕ ಶಾಂತವೀರ ಸ್ವಾಮಿಗಳು ತಾವು ತಪವನ್ನಾಚರಿಸಿ ಲಿಂಗೈಕ್ಯರಾದರು. ಆ ಸ್ಥಳವೇ ಇಂದು " ಸಾಲೂರು  ಮಠ" ಎಂದು ಕರೆಯಲ್ಪಟ್ಟು ಪ್ರತಿದಿನವೂ ಸಾವಿರಾರು ಜಂಗಮರು ಆಗಮಿಸುವ ಯಾತ್ರಾ ಸ್ಥಳವಾಗಿದೆ.

ಮುಂದೆ ಕಾವೇರಿ ನದಿ ತಿರುಗುವ ಎಡಯಲ್ಲಿ ಮಾದಪ್ಪನು ತಪವನಾಚರಿಸುತ್ತಿರಲು ಅಲ್ಲಿಗೆ ಗಂಗಾಧರ (ಹಿಂದೆ ಹಾವಾಗಲೆಂದು ಶಾಪ ಹೊಂದಿದ ಮಾಂತ್ರಿಕ) ಆಗಮಿಸಿ ಸ್ವಾಮಿಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಕ್ಷಮೆ ಯಾಚಿಸುತ್ತಾನೆ. ಆಗ ಮಾದಪ್ಪನು "ಅಯ್ಯಾ ಮುಂದೆ ಕಲಿಯುಗದಲ್ಲಿ ನೀನಿಲ್ಲಿ ಕಲ್ಲಾಗಿತು, ನಾನು ಲಿಂಗರೂಪಿಯಾಗಿರುತ್ತೇನೆ. ನನ್ನ ಭಕ್ತಗಣಗಳಿಗೆ ರಕ್ಷಕನಾಗಿದ್ದು ನನ್ನ ಸೇವೆಯಲ್ಲಿ ಭಾಗಿಯಾಗು. ನೀನಿರುವ ಈ ಸ್ಥಳವು "ನಾಗಮಲೆ"ೆಂದು ಹೆಸರಾಗಲಿ."ಎಂದು ಆಶೀರ್ವದಿಸುತ್ತಾನೆ. ಮುಂದೆ ಮಾದಪ್ಪನು ನಡುಮಲೆಗೆ ಬಂದು ನಾನಾರಿಂದ ಪೂಜೆಗೊಳ್ಳಬೇಕೆನ್ನುವುದನ್ನು ನಿರ್ಧರಿಸುತ್ತಿದ್ದಾನೆ.
ಬೇಡ ಕಂಪಣವೆನ್ನುವಲ್ಲಿ ಮಾದಪ್ಪನ ಅನುಗ್ರಹವಿರುವ ಓರ್ವ ಹೆಣ್ಣು ಮಗಳು ಹುಟ್ಟಿರುತ್ತಾಳೆ. ಅವಳ ಹೆಸರು ಸಂಕಮ್ಮ, ಆಕೆ ಮಾದೇಶ್ವರನ ಪರಮ ಭಕ್ತಳಾಗಿ ಬೆಳೆದು ಒಡ್ದವಳಾಗಿದ್ದಾಳೆ. ವಳಿಗೆ ದೇವಗಾರ ನೀಲಯ್ಯನೊಡನೆ ವಿವಾಹವಾಗುತ್ತದೆ. ನೀಲಯ್ಯನು ಸಂಕಮ್ಮನ ಮನೆಯಲ್ಲಿ ಹನ್ನೆರಡು ವರ್ಷಗಳ ಕಾಲ ಇದ್ದನು. ಆಗ ಅವನ ದಾಯಾದಿಗಳು ಸುಮ್ಮನಾಗಿರಲಿಲ್ಲ. ಅವರೆಲ್ಲರೂ ನೀಲಯ್ಯನನ್ನು ಕೊಂಕು ಮಾತುಗಳಿಂದ ಚುಚ್ಚುತ್ತಲೂ, ಅಪಹಾಸ್ಯವನ್ನು ಮಾಡುತ್ತಲೂ ಇದ್ದರು. ಆಗ ನೀಲಯ್ಯನು ತಕ್ಷಣವೇ ತನ್ನ ಪತ್ನಿಯೊಂದಿಗೆ ಒಂದು ತಿಂಗಳಿಗಾಗುವಷ್ಟು ಸಾಮಾನನ್ನು ತೆಗೆದುಕೊಂಡು   ಮನೆ ತೊರೆಯುತ್ತಾನೆ.


ಅಲ್ಲಿಂದ ಅಲರುಗಳು ಬಹುದೂರ ನಡೆದು ಒಂದು ಗವಿಯಲ್ಲಿ ವಾಸಕ್ಕೆ ನಿಲ್ಲುತ್ತಾರೆ. ಸಂಕಮ್ಮ ಆ ಗವಿಯಲ್ಲಿ ವಾಸ ಮಾಡಿದ್ದಕ್ಕಾಗಿ ಆ ಪ್ರದೇಶವನ್ನಿಂದು "ಸಂಕಮಲೆ" ಎಂದು ಕರೆಯಲಾಗುತ್ತದೆ. ಅಲ್ಲಿ ಅವರು ವಾಸ ಮಾಡುತ್ತಿರಲು ಅವರು ಮನೆಯಿಂದ ತಂದಿದ್ದ ಸಾಮಾನುಗಳು ಖಾಲಿಯಾಗುತ್ತದೆ. ಆಗ ನೀಲಯ್ಯನು ನಾನಿನ್ನು ಬೇಟೆಯಾಡಲು ಹೊರಡಬೇಕಾಗಿದೆ ಎಂದು ತೀರ್ಮಾನಿಸಿದ. ಹೋಗಿ ಬರಲು ಒಟ್ಟೂ ಒಂಭತ್ತು ದಿನಗಳಾಗುತ್ತವೆ. ಅಷ್ಟರವರೆಗೂ ಈ ಸುಕುಮಾರಿ ಒಬ್ಬಳೇ ಇರಬೇಕು. ಅವಳಾನ್ನಾರಾದರೂ ಹಾರಿಸಿಕೊಂಡು ಹೋದರೆ ಏನುಗತಿ ಎಂದು ತರ್ಕಿಸಿ ಅವಳನ್ನು ಕರೆದು ಅವಳ ಸೀರೆ, ಕುಪ್ಪಸವನ್ನೆಲ್ಲಾ ಬಿಚ್ಚಲು ಹೇಳಿ ಅವಳಿಗೆ ತೇಗದೆಲೆಗಳನ್ನು ತೊಡಿಸಿದ. ಬಾಯಿ ತೆರೆಯಲು ಹೇಳಿ ಮಾತನಾಡಲೂ ಆಗದಂತೆ ನೆಗ್ಗಿಲ ಮುಳ್ಳನ್ನು ಚುಚ್ಚಿದನು. ಮತ್ತು ಕೈ ಕಾಲುಗಳನ್ನು ಸರಪಣಿಗಳಿಂದ ಬಂಧಿಸಿ ಗವಿಯ ಬಾಯಿಗೆ ಬಂಡೆಯನ್ನು ತುರುಕಿ ತಾನು ಕಾಡಿನೊಳಗಡೆ ನಡೆದನು. ಮೂರು ದಿನಗಳು ಕಳೆಯಿತು. ಆ ಸಂಕವ್ವೆ ತಾನು ಉಪವಾಸವಿದ್ದಳು. ಮೈಮೇಲಿನ ಎಲೆಗಳು ಒಣಗಿವೆ. ಗೆದ್ದಿಲುಗಳು ತಿಂದು ಹಾಕಿದ ಪರಿಣಾಮ ಬರಿ ಮೈನಲ್ಲಿ ಮಲಗಿದ್ದಳೆ. ಆಗ ಅಲ್ಲಿದ್ದ ಕಟ್ಟಿರುವೆಗಳು ಅವಳ ಮೈಯನ್ನು ಮುತ್ತುತ್ತವೆ. ಕಚ್ಚುತ್ತವೆ. ಆಗ ನೋವು ತಾಳಲಾರದೆ, ಹಸಿವು , ನೀರಡಿಕೆಗಳನ್ನು ತಾಳಲಾರದೆ ಮಾಯಕಾರ ಮಾದಪ್ಪನನ್ನು ಬೇಡಿಕೊಳ್ಳುತ್ತಾಳೆ. ಆಗ ಮಾದಪ್ಪ ತಪಸ್ಸಿನಲ್ಲಿ ನಿರತನಾದವನು ಎಚ್ಚೆತ್ತು ಬೇಡರ ಕನ್ನಯ್ಯನಿಗೆ ತನ್ನ ಹುಲಿಯನ್ನು ತಯಾರು ಮಾಡೆಂದು ಅಪ್ಪಣೆ ಕೊಡಿಸಿ ಅವಳನ್ನು ರಕ್ಷಿಸಲು ಹೊರಡುತ್ತಾನೆ. ಹಾಗೆ ಬಂದ ಮಾದಪ್ಪನು ಗವಿಯ ಬಾಯಿಯ ಬಂಡೆಯನ್ನು ಸರಿಸಿ ಒಳಬಂದು ವಿಭೂತಿಯನ್ನು ಮಂತ್ರಿಸಿ ಅವಳಿಗೆ ಕೊಟ್ತನು. ತಕ್ಷಣವೇ ಅವಳ ಕಷ್ತಗಳೆಲ್ಲ ನೀಗಿದವು. ಅವಳಿದ್ದ ಗವಿಯು ಅರಮನೆಯಾಯಿತು. ತೊಟ್ಟಿದ್ದ ಸೊಪ್ಪಿನ ಉಡುಗೆ ರೇಶಿಮೆಯ ಸೀರೆಯಾಯಿತು. ಮನೆಯ ಹೊರಗೆ ಚಿನ್ನದ ಕಂಸಾಳೆಗಳ ನಾದ ಪ್ರರಂಭವಾಗಿ ಮಾದಪ್ಪನ ಆಗಮನವನ್ನು ಸಾರುತ್ತಿದ್ದವು. ಆಗ ಸಂಕವ್ವೆಯು ತಾನು ಮುತ್ತು ರತ್ನಗಳನ್ನು ತಂದು ಮಾದಪ್ಪನ ಪಾದಕ್ಕೆ ಸಮರ್ಪಿಸಿದಳು. ಆನಂದದಿಂದ ಆರತಿ ಎತ್ತಿ ಸಂಭ್ರಮಿಸಿದಳು. ಆಗ ಮಾದಪ್ಪನು "ತಾಯೀ, ನಿನಗೆ ಮಕ್ಕಳಿದ್ದಾರೆಯೇ?" ಎಂದು ಕೇಳಲು "ಅಯ್ಯಾ ಮಾದಪ್ಪ ಮದುವೆಯಾಗಿ ಒಂಭತ್ತು ವರ್ಷಗಳಾದವು. ಮಕ್ಕಳಾಗಿಲ್ಲ." ಎನ್ನಲು ಮಾದಪ್ಪನು ಬಂಜೆಯಾದವಳ ಬಳಿ ಭಿಕ್ಷೆ ಸ್ವೀಕರಿಸಲಾರೆ ಎನ್ನುತ್ತಾನೆ. ಆಗ ಸಂಕವ್ವೆ ನನ್ನ ಮನೆ ದೇವರಾದ ನೀನೇ ಹಾಗೆಂದರೆ ನನ್ನ ಗತಿಯೇನು ಎಂದು ವಿಲಾಪಿಸುತ್ತಾಳೆ. ಆಗ ಮಾದೇಶನು "ನಿನಗೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತೇನೆ, ಆದರೆ ಗಂಡು ಮಗುವಾದರೆ ಗುಡ್ದದವನನ್ನಾಗಿಯೂ, ಹೆಣ್ಣಾದರೆ ಗುಡ್ಡಿಅನ್ನಾಗಿಯೂ ಬಿಡಬೇಕು. ಸಮ್ಮತವೆ?" ಎಂದು ಕೇಳಲು ಸಂಕವ್ವೆ ಸಂತೋಷದಿಂದ ಒಪ್ಪಿಕೊಳ್ಳುತ್ತಾಳೆ.
ಮಾದಪ್ಪನು ಅನುಗ್ರಹಿಸಿ ಹೊರಡುತ್ತಾನೆ. ಆಗ ಅದೇ ಸಮಯಕ್ಕೆ ಬೇಟೆಗೆ ಹೋಗಿದ್ದ ಅವಳ ಪತಿ ನೀಲಯ್ಯನು ಆಗಮಿಸುತ್ತಾನೆ. ಗುಹೆಯ ಬದಲಾಗಿ ಮನೆಯನ್ನು ಕಂಡು, ಅವಳ ಅಲಂಕಾರವನ್ನು ಕಂಡು ಕುಪಿತಗೊಂಡು, ಇವಳು ಯಾರನ್ನೋ ಮಾಡಿಕೊಂಡಿದ್ದಾಳೆ ಎಂದು ಶಂಕಿಸಿ ಅವಳನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಮಾಯಕಾರ ಮಾದೇಶನು ಅವಳ ತದ್ರೂಪವನ್ನು ಒಂದು ಮರದ ಕೊಂಬೆಯಿಂದ ನಿರ್ಮಿಸಿರುತ್ತಾನೆ ಮತ್ತು ನೀಲಯ್ಯ ಅದನ್ನೇ ತನ್ನ ಪತ್ನಿಯೆಂದು ಭಾವಿಸಿ ಕಡಿದು ಹಾಕುತ್ತಾನೆ. ಆಗ ಆ ಶಬ್ದದಿಂದ ಕುಪಿತಗೊಂಡ ಸಂಕವ್ವೆ ಹೊರ ಬಂದು ನೋಡಲು ನೀಲಯ್ಯನು "ಎಲೆ ಹೆಣ್ಣೆ ಏನು ಮಾಡುತ್ತಿರುವೆ? ನಾನು ಬೇಟೆಗೆ ಹೋದ ಬಳಿಕ ಯಾರೊಡನೆ ವಾಸಿಸುತ್ತಿದ್ದೆ?" ಎಂದು ಕೇಳಲು :ಶಿವ ಶಿವಾ! ನಾನೇನೂ ತಪ್ಪು ಮಾಡಿಲ್ಲಸ್ವಾಮಿ.ನಮ್ಮ ಮನೆ ದೇವರಾದ ಮಾಯಕಾರ ಮಾದಪ್ಪನ ಕೃಪೆ ಇದು."ಎನ್ನಲು ಅವನು ನಂಅದೆ ಅವಳನ್ನು ನಡುಮನೆಗೆ ಕರೆದು ಕುದಿವ ಎಣ್ಣೆ ಬಾಣಲೆಯಲ್ಲಿ ಕುಳ್ಳಿರಲು ಹೇಳಿದ ಅವಳು ಮಾದಪ್ಪನನ್ನು ನೆನೆದು ಕುಳಿತಿರಲು ಆ ಎಣ್ಣೆಯೂ ತಣ್ಣನೆಯ ನೀರಾಯಿತು. ಅವನಾಗ ಇವಳಾರೋ ಮಂತ್ರ್ವಾದಿಯನ್ನೇ ವರಿಸಿದ್ದಾಳೆಂದು ನಂಬಿ ಮೂರು ಖಂಡುಗ ಎಳ್ಳು, ರಾಗಿ ಹಾಗೂ ನವಣೆಯನ್ನು ಮಿಶ್ರ ಮಾಡಿ ಅವಳನ್ನು ಕರೆದು "ನೋದು ರಾತ್ರಿ ಬೆಳಗಾಗುವುದರೊಳಗೆ ಈ ಮೂರೂ ಧಾನ್ಯಗಳು ಬೇರೆ ಬೇರೆಯಾಗಿರಬೇಕು. ಇಲ್ಲವಾದರೆ ನಿನ್ನ ತಲೆಯನ್ನು ಆಹುತಿ ತೆಗೆದುಕೊಳ್ಳುತ್ತೇನೆ." ಎನ್ನುತ್ತಾನೆ. ಮಾಯಕಾರ ಮಾದಪ್ಪನ ಸಹಾಯದಿಂದ ರಾತ್ರಿ ಬೆಳಗಾಗುವುದರಲ್ಲಿ ಆ ಧಾನ್ಯಗಳೂ ಬೇರೆ ಬೇರೆಯಾಗಿದ್ದವು , ಆದರೆ ನೀಲಯ್ಯ ಇನ್ನೂ ತನ್ನ ಪತ್ನಿಯನ್ನು ನಂಬಲು ತಯಾರಿರಲಿಲ್ಲ.
ಕಡೆಗೆ ಕೆಂದದ ರಾಶಿಯ ಮೇಲೆ ಮೂರು ಬೊಗಸೆ ಕೆಂದವನ್ನು ಉಡಿಯಲ್ಲಿರುವಂತೆ ನಡೆಯಲು ಸಂಕಮ್ಮನಿಗೆ ಹೇಳಲು ಅವಳು ಹಾಗೆಯೇ ಮಾಡುತ್ತಾಳೆ. ಆಗ ಅವನು ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟು ಮಾದೇಶನ ಒಕ್ಕಲಾಗಿ ಬಾಳಲು ಸಮ್ಮತಿಸಿ ಬಾಳುತ್ತಾನೆ. ಮುಂದೆ ಅವರಿಗೆ ಆವಳಿ ಜವಳಿ ಮಕ್ಕಳಾಗುತ್ತಾರೆ. ಅವರಿಬ್ಬರನ್ನೂ ಚೆನ್ನಾಗಿ ಬೆಳೆಸಿದ ನೀಲಯ್ಯ-ಸಂಕಮ್ಮ ದಂಪತಿಗಳು ಆ ಮಕ್ಕಳನ್ನು ಮಠಕ್ಕೆ ನೀಡುತ್ತಾರೆ. ಮಠದಲ್ಲಿ ಅವರಿಗೆ "ಕಾರಯ್ಯ" ಹಾಗೂ "ಬಿಲ್ಲಯ್ಯ"ಎಂದು ನಾಮಕರಣ ಮಾಡುತ್ತಾರೆ. ಕಾರಯ್ಯನಿಗೆ ಮಂತ್ರ, ತಂತ್ರಗಳನ್ನು ಕಲಿಸಿ ಪರಿಶೆ ಜನರನ್ನು ನೋಡಿಕೊಳ್ಳಲಿಕ್ಕಾಗಿ ನೇಮಿಸಿದ ಮಾದಪ್ಪನು ಬೀರಯ್ಯನಿಗೆ ಅನುಸಾಲಮ್ಮನನ್ನು ತಂದು ಮದುವೆ ಮಾಡಿಸುತ್ತಾನೆ. ಆ ದಂಪತಿಗಳಿಗೆ ಶೇಶಣ್ಣನೆನ್ನುವ ಗಂಡು ಮಗು ಜನ್ಮಿಸುತ್ತದೆ.
ಅವನಿಗೆ ಮಠಕ್ಕೆ ಬಂದ ಜನಗಳನ್ನು ಕಾಯುವ ಕೆಲಸ ಹಚ್ಚಲಾಯಿತು. ಆ ಶೇಶಣ್ಣನೂ ದೊಡ್ದವನಾದನು. ಆಗ ಮಾದಪ್ಪ " ಶೇಶಣ್ಣ ನೀನು ದೀಕ್ಷೆ ತೆಗೆದುಕೊಂಡು ನಾಲ್ಕಾರು ಮನೆಯಿಂದ ಭಿಕ್ಷೆ ಎತ್ತಿ ಗುಡ್ದರನ್ನು ಸಲಹುವಂತವನಾಗು." ಎಂದಾಗ ಾವನು ಅದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆಗ ಮಾದಪ್ಪ ತಾನು ಮಂತ್ರದಿಂದ ದನಗಳ ಹಟ್ಟಿಯಲ್ಲಿ ಒಂದು ಹುಲಿಯನ್ನು ಸೃಷ್ಟಿಸುತ್ತಾನೆ. ಮರುದಿನ ಯಥಾಪ್ರಕಾರ ಶೇಶಣ್ಣ ಕೊಳಲನೂದಲು ದನಗಳೆಲ್ಲವೂ ಎದ್ದು ಮೇಯಲು ಹೊರ ಹೋಗುತ್ತವೆ. ಆದರೆಆ ಒಂದು ಹುಲಿ ಮಲಗಿರುತ್ತದೆ. ಆಗ ಶೇಶಣ್ಣ ಅದೂ ಸಹ ದನವೆಂದೇ ಭಾವಿಸಿ ದೊಣ್ಣೆಯಿಂದ ಬೀಸಿ ಹೊಡೆಯುತ್ತಾನೆ. ಆಗ ಒಂದೇ ನೆಗೆತದಲ್ಲಿ ಎದ್ದ ಆ ಭಯಂಕರ ವ್ಯಾಘ್ರವು ಶೇಶಣ್ಣನ ಮೇಲೆರಗಿ ಅವನ ಹೊಟ್ಟೆಯನ್ನೇ ಬಗೆದು ಹಾಕುತ್ತದೆ.
ಶೇಶಣ್ಣ್ ಸತ್ತು ಮಲಗಿರಲು ತಾಯಿ ಅನುಸಾಲಮ್ಮ ನನ್ನ ಮಗನನ್ನು ಹುಡುಕುತ್ತಾ ಬರುತ್ತಾಳೆ. ಆಗ ತೊಟ್ಟಿಯಲ್ಲಿ ಸತ್ತು ಬಿದ್ದ ಶೇಶಣ್ಣನನ್ನು ಕಂಡು ಗಾಬರಿಯಿಂದ ತನ್ನ ಪತಿ ಬಿಲ್ಲಯ್ಯನಿಗೆ ಸುದ್ದಿ ತಿಳಿಸಲು ಬಿಲ್ಲಯ್ಯನು ಮಾದಪ್ಪನ ಬಳಿ ಸಾರಿ ತನ್ನ ಮಗನನ್ನು ಉಳಿಸಿ ಕೊಡುವಂತೆ ಕೇಳುತ್ತಾನೆ. ಆಗ ಮಾದಪ್ಪ "ನಿನ್ನೆಗೆ ಅವನ ಆಯಸ್ಸು ತೀರಿದೆ. ಚಿಂತೆ ಬೇಡ ಅವನಿಗೆ ನಾನು ಹನ್ನೆರಡು ವರ್ಷಗಳಿಗೊಮ್ಮೆ ಜಾತ್ರೆ ಮಾಡಿಸುತ್ತೇನೆ. ಹಸಿ ಬತ್ತ, ಹಸಿ ಕೊಂಡದಿಂದ ಜಾತ್ರೆ ಮಾಡಿಸುತ್ತೇನೆ. ಇವನನ್ನು ಕರೆದುಕೊಂಡು ಹೋಗಿ ಅಂತರಗಂಗೆ ಹತ್ತಿರ ನಿಕ್ಷೇಪವನ್ನು ಮಾಡಿರಿ. ಎಂದು ಅಪ್ಪಣೆ ಮಾಡಲು ದಂಪತಿಗಳು ಹಾಗೆಯೇ ಮಾಡಿದರು.
ನಂತರದಲ್ಲಿ ಆ ದಂಪತಿಗಳಿಗೆ ಕಾಳ ಮಾದ ಒಡೆಯರು, ಬೋಳಮಾದ ಒಡೆಯರು, ಕೆಂಪಮಾದ ಒಡೆಯರು ಎನ್ನುವ ಮೂವರು ಮಕ್ಕಳಾದರು. ಅವರ ವಂಶದವರೇ ಈಗ ನಾಲ್ಕು ನಾಲ್ಕು ತಿಂಗಳಿಗೆ ಸೇವೆ ಮಾಡಿಕೊಂಡು ಬರುತ್ತಿದ್ದಾರೆ,
ಹೀಗೆ ತಮಡಿಗಳನ್ನು ಪಡೆದ ನಂತರ ಅಲ್ಲಿನ ನೇರಳೆಕೆರೆ ಎನ್ನುವ ಜಾಗದಲ್ಲಿ ಪಟಗಾರ ರಾಯಣ್ಣ ನಾಯಕನೆನ್ನುವನಿದ್ದ. ಅವನನ್ನು ಓಕುಳಿ ಸೇವೆಗೆ ಕತೃವಾಗಿಸಿಕೊಳ್ಳುತ್ತಾರೆ. ಹೀಗೆ ಆನಂದದಿಂದ ಸ್ವಾಮಿಯು ನಡುಮಲೆಯಲ್ಲಿ ನೆಲೆಸಿರಲು ಅದೊಮ್ಮೆ ಸರಗೂರಿನ ಮೂಗಪ್ಪ ಹಾಗೂ ರಾಮವ್ವೆ ಬರುತ್ತಾರೆ. ಹಾಗೆ ಬಂದ ಮೂಗಪ್ಪ,"ತಂದೆ ನನಗೆ ವಯಸ್ಸಾಗಿದೆ. ನಾನು ಬೆಟ್ಟವನ್ನೇರಲುಸಾಧ್ಯವಿಲ್ಲವಲ್ಲ." ಎಂದಾಗ ಮಾದಪ್ಪನು ಅವರಿಗೊಂದು ಲಿಂಗವನ್ನು ನೀಡಿ "ಇದನ್ನು ನಿನ್ನ ಊರಾದ ಸರಗೂರಿನಲ್ಲಿ ಪ್ರತಿಷ್ಠೆ ಮಾಡು. ಯಾರಿಗೆ ನನ್ನ ಏಳು ಮಲೆ ಬೆಟ್ಟವನ್ನೇರಲು ಸಾಧ್ಯವಿಲ್ಲವೋ ಅಂತಹವರು ಸರಗೂರಿಗೆ ಬಂದು  ದರ್ಶನ ಮಾಡಿದರೆ ನನಗೆ ಸಂತೋಷವಾಗುತ್ತದೆ" ಎಂದು ಅಭಯ ನೀಡುತ್ತಾರೆ. ಆಗ ರಾಮವ್ವೆ "ಸ್ವಾಮಿ ನಮ್ಮ ವಂಶದಲ್ಲಿ ಯಾರೇ ಎಣ್ಣೆ ಮಜ್ಜನ ಮಾಡಿಸಿದರೂ ಅವರಿಗೆ ದರ್ಶನ ನೀಡುವಂತೆ ಪ್ರಾರ್ಥಿಸಿಕೊಳ್ಳುತ್ತಾಳೆ. ಸ್ವಾಮಿಯು ಅದಕ್ಕೆ ಸಮ್ಮತಿಸಿ ಅನುಗ್ರಹಿಸುತ್ತಾನೆ.
ಹೀಗೆ ಸ್ವಾಮಿಯು ದಿನ ದಿನಕ್ಕೆ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರಲು ಒಂದು ಮಹಾ ಶಿವರಾತ್ರಿಯ ದಿನ ಹಾಲಂಬಾಡಿ ಜುಂಜೇಗೌಡರು ಕಟ್ಟಿಸಿಕೊಟ್ಟ ಗುಡಿಯ ಒಳಗೆ ಲಿಂಗರೂಪಿಯಾಗಿ ನೆಲೆಸುತ್ತಾರೆ. ಅಲ್ಲಿಂದ ಇಂದಿನವರೆಗೂ ಲಕ್ಷಂತರ ಭಕ್ತರಿಗೆ ಮಾದಪ್ಪನು ಅಭಯವನ್ನಿತ್ತು ಆಶೀರ್ವಾದ, ಸಕಲಯ್ಶ್ವರ್ಯ, ಸಿರಿ ಸಂಪತ್ತನ್ನು ಕರುಣಿಸುತ್ತಾ ಬರುತ್ತಿದ್ದಾನೆ. 

"ಏಳು ಮಲೆ, ಎಪ್ಪತ್ತೇಳು ಮಲೆ ಮಾಯಕಾರ ಮಾದಪ್ಪನಿಗೆ ಉಘೇ.... ಉಘೇ....!!"