ಕೊಲ್ಲೂರು(Kollur)
ಪರಶುರಾಮನ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ (ಕರ್ನಾಟಕದಲ್ಲಿನ 'ಸಪ್ತ ಮುಕ್ತಿಸ್ಥಳ') ಒಂದಾದ ಕೊಲ್ಲೂರು ಕುಂದಾಪುರ ತಾಲ್ಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿ, ದಟ್ಟವಾದ ಕಾನನದ ನಡುವೆ ನೆಲೆಸಿಹ ಮೂಕಾಂಬಿಕೆ, ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಗಾಗಿ ಅವತಾರವೆತ್ತಿದ ಶಕ್ತಿ ದೇವತೆ. ಸಹಸ್ರ ಸಹಸ್ರ ಭಕ್ತರನ್ನು ಹೊಂದಿರುವ ಜಗನ್ಮಾತೆ, ಶ್ರೀ ಮೂಕಾಂಬಿಕೆ.
ಬಹಳ ವರ್ಷಗಳ ಹಿಂದೆ ಈಗಿನ ಕೊಲ್ಲೂರು ಇರುವಲ್ಲಿ ದಟ್ಟವಾದ ಕಾಡು ಇತ್ತು. ಆ ದಟ್ತ
ಕಾನನದ ಮದ್ಯೆ ಹರಿಯುತ್ತಿದ್ದ ಸೌಪರ್ಣಿಕಾ ನದಿಯ ತೀರದಲ್ಲಿ ಕೋಲ ಮಹರ್ಷಿ ಎನ್ನುವ ಮಹಾ ತಪಸ್ವಿಗಳು
ಪರ್ಣಕುಟೀರವನ್ನು ಸ್ಥಾಪಿಸಿ ತಮ್ಮ ತಪೋ ಜೀವನವನ್ನು ಸಾಗಿಸುತ್ತಿದ್ದರು. ಅವರ ಆಶ್ರಮದಲ್ಲಿದ್ದ ಹಸುವೊಂದು
ಅಲ್ಲಿನ ಅರಣ್ಯ ಮದ್ಯದಲ್ಲಿ ಉದ್ಭವವಾಗಿದ್ದ ಕಲ್ಲೊಂದಕ್ಕೆ ದಿನವೂ ಹಾಲೆರೆದು ಬರುತ್ತಿತ್ತು. ಅದನ್ನು
ನೋಡಿದ ಕೋಲ ಮಹರ್ಷಿಗಳು ತಾವು ಆ ಕಲ್ಲಿಗೆ ದಿನನಿತ್ಯ ಪೂಜೆ ಸಲ್ಲಿಸಲಾರಂಭಿಸಿದರು. ಅದಾಗಿ ಬಳಿಕ ಶಿವನ
ಕುರಿತಾಗಿ ತಪಸ್ಸು ಕೈಗೊಂಡ ಕೋಲ ಮಹಷಿಗಳು ತಾವು ವಾಸಿಸುತ್ತಿದ್ದ ಸ್ಥಳವು ತನ್ನ ಹೆಸರಿನಲ್ಲಿಯೇ ಉಳಿಯಬೇಕೆಂದು
ಶಿವನಲ್ಲಿ ಪ್ರಾರ್ಥಿಸಿದರು. ಆ ಪ್ರಕಾರವಾಗಿ ಆ ಸ್ಥಳಕ್ಕೆ ”ಕೋಲಾಪುರ” ಎನ್ನುವ ಹೆಸರಾಯಿತು.
ಮತ್ತೆ
ಹಲವು ವರ್ಷಗಳು ಉರುಳಿದವು. ಅದ್ದಗ ಕಂಹಾಸುರನೆನ್ನುವ ಅಸುರನೊಬ್ಬಬಲಾದ್ಯನಾಗಿ ಅಲ್ಲಿಗೆ ಬಂದನಲ್ಲದೆ
ಕೋಲ ಮಹರ್ಷಿ ಸೇರಿದಂತೆ ಅಲ್ಲಿ ನೆಲೆಸಿದ್ದ ಋಷಿ ಮುನಿಗಳಿಗೆ ತೀವ್ರ ತೊಂದರೆಕೊಡಲು ಪ್ರಾರಂಭಿಸಿದ.
ಅದಾಗ ತ್ರಿಮೂರ್ತಿಗಳ ಮೊರೆಹೋದ ಋಷಿಗಳು ಅಸುರನಿಂದ ತಮ್ಮನ್ನು ರಕ್ಷಿಸುವಂತೆ ಮೊರೆಯಿಟ್ಟರು. ಆ ಅವರ
ಬೇಡಿಕೆಗೆ ಮಣಿದ ತ್ರಿಮೂರ್ತಿಗಳು ತ್ರಿಪುರ ಭೈರವಿಯನ್ನು ಸೃಷ್ಟಿಸಿ ಅಸುರನ ವಧೆಗಾಗಿ ಕಳಿಸಿದರು.
ಅದನ್ನು ತಿಳಿದ ಅಸುರ ಕಂಹಾಸುರನು ಋಷ್ಯಮೂಕಾಚಲವೆಂಬಲ್ಲಿಗೆ ಓಡಿಹೋಗಿ ತಪಸ್ಸಿನಲ್ಲಿ ನಿರತನಾದನು.
ಅದಾಗಿ
ಬಹಳ ವರ್ಷಗಳು ಗತಿಸಿದ ನಂತರ ಋಷ್ಯಮೂಕಾಚಲದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಅಸುರನಿಗೆ ಪರಮೇಶ್ವರನೊಲಿವ
ವೇಳೆ ಸನ್ನಿಹಿತವಾಯಿತು. ಈ ವಿಚಾರವನ್ನರಿತ ಋಷಿಗಳು ಪರಮೇಶ್ವರಿಯನ್ನ ಪ್ರಾರ್ಥಿಸಿ ಶಿವನು ದರ್ಶನ
ನೀಡುವ ಸಮಯದಲ್ಲಿ ನೀನು ಅಸುರನ ನಾಲಿಗೆಯ ಮೇಲೆ ನೆಲೆಸಿ ಆತನನ್ನು ಮೂಕನನ್ನಾಗಿಸಬೇಕೆಂದು ಪ್ರಾರ್ಥಿಸಿಕೊಂಡರು.
ಅದರಂತೆಯೇ ನಡೆದುಕೊಂಡ ದೇವಿ ಅಸುರನು ವರ ಕೇಳುವುದನ್ನು ತಪ್ಪಿಸಿ ಅವನು ಮೂಕಾಸುರನಾಗುವಂತೆ ಮಾಡಿದಳು.
ಮುಂದೆ ಋಷಿಗಳಿಂದಲೇ ನಾನು ಮೂಕನಾದುದೆಂದು ಅರಿತ ಮೂಕಾಸುರ ಪುನಃ ಋಷಿಗಳಿಗೆ ಉಪಟಳ ನೀಡಲು ಆರಂಭಿಸಿದ.
ಅದಾಗ ಪುನಃ ದೇವಿಯ ಮೊರೆಹೋದ ಋಷಿಗಳು ಅಸುರನಿಂದ ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳಲು ದೇವಿಯು ಉಗ್ರ
ಶಕ್ತಿ ಸ್ವರೂಪಿಣಿಯಾಗಿ ಅವತರಿಸಿ ಮೂಕಾಸುರನನ್ನು ಕೊಂದು ಮೂಕಾಂಬಿಕೆ ಎನಿಸಿದಳು. ರಕ್ಕಸ ಸಂಹಾರದ
ಬಳಿಕ ಋಶಿಗಳೆಲ್ಲರೂ ಸೇರಿ ದೇವಿಗೆ ನೀನು ತಮ್ಮಲ್ಲಿಯೇ ನೆಲೆಸಬೇಕೆಂದು ಬೇಡಿಕೊಂಡಾಗ ದೇವಿ ಅದನ್ನು
ಸಂತೋಷದಿಂದೊಪ್ಪಿ ಅಲ್ಲಿಯೇ ನೆಲೆಸಿದಳು.
ಮುಂದೆ ಆ ಸ್ಥಳಕ್ಕೆ ಕೋಲಾಪುರ ಎಂತಲೂ ದೇವಿಗೆ ಮೂಕಾಂಬಿಕೆ
ಎಂತಲೂ ಹೆಸರಾಯಿತು. ಇದೀಗ ಜನರ ಆಡುಭಾಷೆಯಲ್ಲಿ ಊರು ಕೊಲ್ಲೂರು ಆಗಿದೆ. ಕೊಲ್ಲೂರ ಮೂಕಾಂಬೆ ದೇಶದೆಲ್ಲೆಡೆ
ವಿಖ್ಯಾತ ಶಕ್ತಿದೇವತೀನಿಸಿ ಸಾವಿರಾರು ಭಕ್ತಕೋಟಿಯನ್ನು ಆಶೀರ್ವದಿಸಿ ಸಲಹುತ್ತಿದ್ದಾಳೆ.
No comments:
Post a Comment