ಮಹಾರಾಷ್ಟ್ರದ ಶಿರಡಿ ಸಾಯಿ ಬಾಬಾ ನೆಲೆಸಿರುವ ಪ್ರಖ್ಯಾತ ಪುಣ್ಯ ಕ್ಷೇತ್ರ. ದೇಶದ ನಾನಾ ಕಡೆಗಳಿಂದ ದಿನನಿತ್ಯ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗಾಗಮಿಸಿ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ. ಇಂತಹಾ ಶಿರಡಿ ಕ್ಷೇತ್ರದ ಜತೆಗೆ ಅದೇ ಸುತ್ತ ಮುತ್ತಲ ಇತರೇ ಕ್ಷೇತ್ರಗಳ ಭೇಟಿಗೆ ಪ್ರವಾಸಿಗರಿಗೆ ಶಿರಡಿ ಕೇಂದ್ರ ಸ್ಥಳವಾಗಲಿದೆ.
ಕರ್ನಾಟಕ ಸೇರಿ ದೇಶದ ಎಲ್ಲೆಡೆಗಳಿಂಡ ಉತ್ತಮ ರಸ್ತೆ, ರೈಲು ಸಂಪರ್ಕ ಹೊಂದಿರುವ ಶಿರಡಿಯ ಸಮೀಪವೇ ಇತ್ತೀಚೆಗೆ ವಿಮಾನ ನಿಲ್ದಾಣ ಸಹ ಪ್ರಾರಂಭಗೊಂಡಿದೆ. ಹೀಗಾಗಿ ಶಿರಡಿಗೆ ಯಾವಗಲಾದರೂ ಸುಲಭವಾಗಿ ತಲುಪಬಹುದು. ಶಿರಡಿಯಲ್ಲಿ ತಂಗಲು ಸಾಕಷ್ಟು ಹೋಟೆಲ್, ವಸತಿ ಗೃಹಗಳೂ ಲಭ್ಯವಿದೆ. ಶಿರಡಿ ಸಾಯಿಬಾಬಾ ಮಂದಿರದ ವಸತಿ ವ್ಯವಸ್ಥೆ ಸಹ ಕಡಿಮೆ ಬಜೆಟ್ ನಲ್ಲಿ ಉತ್ತಮ ಗುಣಮಟ್ಟದ ಕೋಣೆಗಳನ್ನು ಹೊಂದಿದೆ.
ಮಹಾರಾಷ್ಟ್ರ ಅಹಮದ್ ನಗರ ಜಿಲ್ಲೆಯಲ್ಲಿರುವ ಶಿರಡಿ ಪುಟ್ಟ ಗ್ರಾಮವಾದರೂ ಸಾಯಿಬಾಬಾ ಮಂದಿರದ ಕಾರಣ ದೇಶ್ದಾದ್ಯಂತ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ತಾಣ. ಶಿರಡಿಯ ಕೇಂದ್ರ ಭಾಗದಲ್ಲಿ ಸಾಯಿಬಾಬಾ ಸಮಾಧಿ ಮಂದಿರವಿದೆ. ಬೆಳಿಗ್ಗೆ 4ಕ್ಕೆ ತೆರೆಯುವ ಈ ಮಂದಿರ ರಾತ್ರಿ 11ಕ್ಕೆ ಮುಚ್ಚಲ್ಪಡುತ್ತದೆ. ಇದೇ ಮಂದಿರದ ಸನಿಹದಲ್ಲಿ ಬಾಬಾ ಅವರು ನೆಲೆಸಿದ್ದ ದ್ವಾರಕಾಮಾಯಿ ಮಸೀದಿ, ಬಾಬಾ ಅವರ ಚಾವಡಿ (ನ್ಯಾಯ ನಿರ್ಣಯ ಸ್ಥಳ), ಗಣೇಶ, ಆಂಜನೇಯನ ಗುಡಿಗಳೂ ಇದೆ. ಸಾಯಿ ಮಂದಿರಕ್ಕೆ ತೆರಳಿದವರು ಈ ಎಲ್ಲಾ ಸ್ಥಳಕ್ಕೂಭೇತಿ ನೀಡುತ್ತಾರೆ.
ದೇವಾಲಯದ ಆವರಣದಲ್ಲಿ ಸಾಯಿಬಾಬಾ ಜೀವನದ ಪ್ರಮುಖ ಘಟ್ಟಗಳಲ್ಲಿ ತೆಗೆಯಲಾದ ಛಾಯಾಚಿತ್ರಗಳಿರುವ ವಸ್ತು ಸಂಗ್ರಹಾಲವೂ ಇದೆ.
ವಿಶೇಷವೆಂದರೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ನಾನಾ ದೇವಾಲಯದಲ್ಲಿರುವಂತೆಯೇ ಇಲ್ಲಿಯೂ ಜನಸಂದಣಿ ಅಧಿಕವಾಗಿದ್ದು ಸರತಿ ಸಾಲಿನಲ್ಲಿ ನಿಂತು ದರ್ಶ್ನ ಪಡೆಯಬೇಕು. ಬಾಬಾ ಸಮಾಧಿ ಮಂದಿರ ದರ್ಶನ ಅಥವಾ ಆರತಿಗೆ ಮುಂಗಡ ಆನ್ ಲೈನ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯವಿದೆ. ದರ್ಶನಕ್ಕೆ 300 ರೂಪಾಯಿಯಾದರೆ ಆರತಿಗೆ 600 ರೂ. ಟಿಕೆಟ್ ದರವಿದೆ. ದೇವಳದ ವಸತಿ ನಿಲಯದಲ್ಲಿ ಒಂದು ಸಾವಿರ ಕೊಠಡಿಗಳಿದ್ದು ಒಂದಕ್ಕೆ 300 ರೂ. ನಂತೆ ಮುಂಗಡ ಕಾಯ್ದಿರಿಸಿಅಬಹುದು.
ಶಿರಡಿಗೆ ತೆರಳಲು ನಾವುಗಳು ಪ್ಯಾಕೇಜ್ ಟೂರ್ ಆಯ್ಕೆ ಮಾಡಿಕೊಂಡಿದ್ದೆವು. ಈ ಪ್ಯಾಕೇಜಿನಲ್ಲಿ ಮುಂಬೈ, ಶಿರಡಿ, ನಾಶಿಕ, ಪಂಚವಟಿ, ಶನಿಶಿಂಗಣಾಪುರ ಮತ್ತು
ರಂಜನ್ ಗಾಂವ್ ಮಹಾಗಣಪತಿ ದೇವಸ್ಥಾನಗಳುಸೇರಿತ್ತು, ನಾವು ಒಟ್ಟು 7 ಮಂದಿ ಬೆಂಗಳೂರಿನಿಂದ ಹೊರಟಿದ್ದೆವು. ಬೆಂಗಳೂರಿನೊಂದ ಮುಂಬೈಗೆ ವಿಮಾನ ಮುಂಬೈನಿಂದ ಉಳಿದ
ಕ್ಷೇತ್ರಗಳಿಗೆ ಎಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು ನಾವು ಶನಿವಾರ ಬೆಳಿಗ್ಗೆ ಏಳಕ್ಕೆ ಮುಂಬೈನಲ್ಲಿದ್ದೆವು.
![]() |
ಸಿದ್ದಿವಿನಾಯಕ ದೇವಾಲಯ |
ನಾಸಿಕದ ತ್ರಯಂಬಕೇಶ್ವರ ತಲುಪುವಾಗ ಸಂಜೆ 5.30. ನಾಸಿಕ ಪಟ್ಟಣದಿಂದ ಸುಮಾರು ಮುಕ್ಕಾಲು ಗಂಟೆ ಪ್ರಯಾಣದ ಊರು(ಸುಮಾರು 30 ಕಿ.ಮೀ) ತ್ರಯಂಬಕೇಶ್ವರ. ಸುಮಾರು 700 ವರ್ಷಗಳಷ್ಟು ಹಳೆಯ ದೇವಾಲಯವಾದ ತ್ರಯಂಬಕೇಶ್ವರ ದೇವಾಲಯ ಭಾರತದಲ್ಲಿ ಪ್ರಖ್ಯಾತವಾದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ 10ನೇ ಜ್ಯೋತಿರ್ಲಿಂಗವಾಗಿದೆ. ವಿಶೇಷವೆಂದರೆ ಇಲ್ಲಿ ಮೂರು ಚಿಕ್ಕ ಚಿಕ್ಕ ಶಿವಲಿಂಗಗಳಿದ್ದು ಇದನ್ನು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ರೂಪ ಎನ್ನಲಾಗುತ್ತದೆ. ಭಾರತದ ಇನ್ನಾವ ಜ್ಯೋತಿರ್ಲಿಂಗ ಕ್ಷೇತ್ರದಲ್ಲಿ ಸಹ ಈ ರೀತಿ ಮೂರು ಲಿಂಗಗಳು ಒಟ್ಟಾಗಿಲ್ಲ ಎನ್ನುವುದು ಗಮನಾರ್ಹ.
![]() |
ಮಹಾಲಕ್ಷ್ಮಿ ದೇವಾಲಯ |
ಇದೇ ತ್ರಯಂಬಕೇಶ್ವರ ಸನ್ನಿಧಿಯಲ್ಲಿಯೇ ಭಾರತದ ಪುಣ್ಯನದಿಗಳಲ್ಲೊಂದಾದ ಗೋದಾವರಿ ಉಗಮವಾಗುತ್ತದೆ. ಇದೇ ಸಮೀಪದಲ್ಲಿರುವ ಬ್ರಹ್ಮಗಿರಿ ಬೆಟ್ಟದ ಮೇಲೆ ಹಿಂದೆ ಗೌತಮ ಮಹರ್ಷಿಗಳು ಅಹಲ್ಯೆಯೊಡನೆ ನೆಲೆಸಿದ್ದರು ಎನ್ನಲಾಗುತ್ತದೆ. ಇಂದಿಗೂ ಈ ಗಿರಿಶ್ರೇಣಿಯಲ್ಲಿ ಗೌತಮ, ಅಹಲ್ಯೆಯರಿಗೆ ಮೀಸಲಾದ ಪುಟ್ಟ ಗುಡಿ ಇದೆ. ಅಲ್ಲದೆ ಪ್ರಕೃತಿ ಪ್ರಿಯರಿಗೆ ಇಲ್ಲಿ ಅತ್ಯದ್ಭುತ ಪ್ರಾಕೃತಿಕ ನೋಟಗಳನ್ನು ಹೊತ್ತ ಸುಂದರ ದೃಶ್ಯಗಗಳನ್ನು ಕಾಣಬಹುದಾಗಿದೆ. ಇದೇ ಬೆಟ್ಟದಲ್ಲಿ ಹುಟ್ಟುವ ಇನ್ನೂ ಎರಡು ಪಟ್ಟ ನದಿಗಳು ತ್ರಯಂಬಕೇಶ್ವರದಲ್ಲಿ ಗೋದಾವರಿಯೊಡನೆ ಸಂಗಮವಾಗುತ್ತದೆ. ಇದೇ ಸಂಗಮದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ವಿಶ್ವ ಪ್ರಸಿದ್ದ ನಾಸಿಕ ಕುಂಭಮೇಳವು ನಡೆದು ಲಕ್ಷಾಂತರ ಯಾತ್ರಾರ್ಥಿಗಳು ಪಾಲ್ಗೊಳ್ಳುತ್ತಾರೆ.
ನಾವು ತ್ರಯಂಬಕೇಶ್ವರನ
ದರ್ಶನ ಪಡೆದು ಅಲ್ಲಿಂದ ನಾಸಿಕದಿಂದ 2 ಕಿ.ಮೀ. ಇರುವ ಪಂಚವಟಿಗೆ ತೆರಳಿದೆವು.
ಇದು ಸುಂದರವಾದ ಧಾರ್ಮಿಕ ಕ್ಷೇತ್ರವಾಗಿದ್ದು 5 ವಟವೃಕ್ಷ (ಆಲದ ಮರ) ಗಳಿರುವ ಊರು ಎನ್ನುವ ಅರ್ಥ ಇರುವ ಇದೇ ಸ್ಥಳದಲ್ಲಿ ವನವಾಸದ ಸಮಯದಲ್ಲಿ ರಾಮ, ಲಕ್ಷ್ಮಣರು ಸೀತೆಯೊಡನೆ ವಾಸವಿದ್ದರು. ಶೂರ್ಪನಖಿ ಮೂಲಕ ಸೀತೆಯ ವಿಚಾರ ತಿಳಿದ ರಾವಣ ಇಲ್ಲಿಂದಲೇ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದನೆನ್ನಲಾಗುತ್ತದೆ. ಇಲ್ಲಿರುವ ಸೀತಾಗುಹ (ಸೀತೆಯ ಗುಹೆ), ಕಾಲಾರಾಮ, ಗೋರಾರಾಮ ಮಂದಿರಗಳು (ಕಪ್ಪು ರಾಮ ಹಾಗೂ ಬಿಳಿ ರಾಮನ ಮೂರ್ತಿಗಳಿರುವ ಪ್ರತ್ಯೇಕ ದೇವಾಲಯ) ನೋಡಲು ಅತ್ಯಂತ ಆಕರ್ಷಕವಾಗಿದೆ.
ಇಲ್ಲಿರುವ ರಾಮಕುಂಡ ಸಹ ಅತ್ಯಂತ ಪ್ರಸಿದ್ದವಾದದ್ದು ಇಲ್ಲಿ ಶ್ರೀರಾಮನು ದಶರಥ ಮಹಾರಾಜನಿಗೆ ಪಿಂಡ ಪ್ರಧಾನ ಮಾಡಿದ ಎನ್ನಲಾಗುತ್ತದೆ.
ಇನ್ನು ನಾಸಿಕ (ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ್ದ ಸ್ಥಳ ಎನ್ನುವ ಅರ್ಥದಲ್ಲಿ ಬಳಕಯಾಗುತ್ತಿದೆ) ಪಟ್ಟಣವು ಭಾರತ "ವೈನ್ ಕ್ಯಾಪಿಟಲ್" ಭಾರತದ ಒಟ್ಟಾರೆ ವೈನ್ ಉತ್ಪಾದಿಸುವ ಘಟಕಗಳ ಪೈಕಿ ಅರ್ಧದಷ್ಟು ಘಟಕಗಳು ನಾಸಿಕ್ ನಲ್ಲಿವೆ. ವಾರ್ಷಿಕ 10,000 ಟನ್ ಗಿಂತಲೂ ಹೆಚ್ಚು ಪ್ರಮಾಣದ ದ್ರಾಕ್ಷಿಯನ್ನು ನಾಸಿಕ್ ನಲ್ಲಿ ಬೆಳೆಯಲಾಗುತ್ತದೆ. ಸುಳಾ ದ್ರಾಕ್ಷಾ ರಸ ಪ್ರಸಿದ್ಧವಾಗಿದ್ದು ಸುಳಾ ಉತ್ಸವ ಕೂಡ ಇಲ್ಲಿ ಜರುಗುತ್ತದೆ.
ಪಂಚವಟಿಯ ಶ್ರೀರಾಮನ ದರ್ಶನ ಪಡೆದ ನಾವುಗಳು ನಾಸಿಕದಲ್ಲಿ ರಾತ್ರಿ ಭೋಜನ ಮುಗಿಸಿಕೊಂಡು ಅಲ್ಲಿಂದ ರಾತ್ರಿ 11.30 ಸುಮಾರಿಗೆ ಶಿರಡಿಯತ್ತ ತಲುಪಿದೆವು. ಶಿರಡಿಗೆ ತೆರಳಿ ಅಲ್ಲಿ ಮೊದಲೇ ಕಾಯ್ದಿರಿಸಲಾಗಿದ್ದ ಹೋಟೆಲ್ ಕೋಣೆಯಲ್ಲಿ ರಾತ್ರಿ ತಂಗಿದ್ದು ಬೆಳಿಗ್ಗೆ 6ಕ್ಕೆ ಮೊದಲೇ ನಿಗದಿಯಾದಂತೆ ಸಾಯಿಬಾಬಾ ದರ್ಶನಕ್ಕೆ ಹೊರಟೆವು. ಗೇಟ್ ನಂ.3ರಿಂದ ಮಂದಿರ ಪ್ರವೇಶಿಸಿ ಸಮಾಧಿ ದರ್ಶನ ಪಡೆವಾಗಲೂ ಸರತಿ ಸಾಲಿನಲ್ಲೇ ಹೋಗಬೇಕಾಗಿತ್ತು.
ಅಷ್ಟೆಲ್ಲಾ ಜನಸಂದಣಿಯ ನಡುವೆಯೇ ಸಾಯಿಬಾಬಾ ಸಮಾಧಿಯ ಸಮೀಪದಲ್ಲೇ ಎರಡು ನಾಯಿಗಳು ಏನೂ ಗೊತ್ತಿಲ್ಲದಂತೆ ಮಲಗಿದ್ದದ್ದು ಅಚ್ಚರಿ ತಂದಿತ್ತು. ಸಾಯಿಬಾಬಾ ಅವರಿಗೆ ನಾಯಿಗಳೆಂದರೆ ಪ್ರೀತಿಯೆಂದೂ, ನಾಯಿಗಳು ದೇಗುಲದಲ್ಲಿ ಸದಾ ಕಾಲ ಇರುತ್ತವೆಂದೂ ನಮ್ಮ ಪ್ರವಾಸಿ ಮಾರ್ಗದರ್ಶಕ (ಗೈಡ್) ಹೇಳಿದರು.
![]() |
ನಾಸಿಕದ ತ್ರಯಂಬಕೇಶ್ವರ ದೇವಾಲಯ |
ಹೀಗೆ ಸಾಯಿಬಾಬಾ ಮಂದಿರ, ದ್ವಾರಕಾಮಾಯಿ ಸೇರಿ ಸುತ್ತಲ ದೇವಾಲಯಗಳ ದರ್ಶನ ಪಡೆದು ಹೊರಬರುವಾಗ ಗಂಟೆ 9ತ್ತಾಗಿತ್ತು.. ಹೋಟೆಲ್ ಚೆಕ್ ಔಟ್ ಮಧ್ಯಾಹ್ನ 12ಕ್ಕೆ ನಿಗದಿಯಾಗಿದ್ದು ಅಲ್ಲಿಯವರೆಗೆ ಶಾಪಿಂಗ್ ಗೆ ಅವಕಾಶವಿತ್ತು. ನಾವು ದೇವಾಲಯ ಸುತ್ತಲಿನಲ್ಲಿರುವ ಸಿಹಿತಿಂಡಿ, ಬಾಬಾ ಮೂರ್ತಿಗಳನ್ನು ಸಾಲಾಗಿಜೋಡಿಸಿಟ್ಟ ಅಂಗಡಿಗಳ ಸಾಲಿನುದ್ದಕ್ಕೆ ಸಾಗಿದೆವು. ಬಾಬಾ ಮೂರ್ತಿಗಳು, ಛಾಯಾಚಿತ್ರಗಳು, ಮಣಿಸರ ಸೇರಿ ಸಿಹಿ ತಿಂಡಿಗಳ ಅಂಗಡಿಗಳ ಸಾಲು ಸಾಲೇ ಅಲ್ಲಿದ್ದು ಪ್ರವಾಸಿ ತಾಣವಾಗಿರುವ ಕಾರಣ ಬೆಲೆಗಳೆಲ್ಲಾ ತುಸು ಅಧಿಕವಾಗಿದ್ದವು.
ನಾವು ಶಿರಡಿ ಬಸ್ ನಿಲ್ದಾಣದ ಬಳಿ ಇರುವ ಖಂಡೋಬಾ ಮಂದಿರಕ್ಕೆ ತೆರಳಿದ್ದೆವು. ಸಾಯಿ ಬಾಬಾ ಪ್ರಥಮ ಬಾರಿಗೆ ಕಾಣಿಸಿಕೊಂಡದ್ದು ಇದೇ ಮಂದಿರದಲ್ಲಿರುವ ಮರದ ಬಳಿಯಲ್ಲಿ. ಅದಾಗ ಅಲ್ಲಿನ ಅರ್ಚಕ ಪ್ರಮುಖರೊಬ್ಬರು 'ಆವೋ ಸಾಯಿ' ಎಂದು ಕರೆದರು. ಅದುವೇ ಬಾಬಾ ಅವರ ಖಾಯಂ ಹೆಸರಾಯಿತು ಎನ್ನಲಾಗುತ್ತದೆ.
ಶಿರಡಿಯಲ್ಲಿ ಬಾಬಾ ಒಟ್ಟು 64 ವರ್ಷಗಳ ಕಾಲ ಬದುಕಿದ್ದರು ಕ್ರಿ.ಶ. 1918 ವಿಜಯದಶಮಿಯ ದಿನದಂದು ಅವರು ಸಮಾಧಿಸ್ಥರಾದರು. ಎಂದರೆ ಈ ವರ್ಷ (2018 ಸಾಯಿ ಬಾಬಾ ಸಮಾಧಿಯಾಗಿ ನೂರನೇ ವರ್ಷವಾಗಿದೆ. ಈ ಪ್ರಯುಕ್ತ ವರ್ಷ ಪೂರ್ತಿ ದೇವ ಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳಿದ್ದು ಬರುವ ವಿಜಯದರ್ಶಮಿಯಂದು ಅತ್ಯಂತ ವೈಭವದ ಬಾಬಾ 100ನೇ ಮಹಾಸಮಾಧಿ ವರ್ಷೋತ್ಸವ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 12ಕ್ಕೆ ನಾವು ಶಿರಡಿಯ ಆಗ್ನೇಯಕ್ಕೆ ಸುಮಾರು 75 ಕಿ.ಮೀ ದೂರದಲ್ಲಿರುವ ಶನಿ ದೇವರ ಸನ್ನಿಧಾನ ಶನಿಶಿಂಗಣಾಪುರಕ್ಕೆ ತೆರಳಿದ್ದೆವು.
ಶನಿದೇವರೇ ನೆಲೆ ನಿಂತಿರುವ ಈ ಗ್ರಾಮ ದೇಶದಲ್ಲಿ ಪ್ರಖ್ಯಾತವಾಗಿದ್ದು ಸಹಸ್ರಾರು ಜನ ನಿತ್ಯವೂ ಇಲ್ಲಿಗೆ ಆಗಮಿಸುವರು. ವಿಶೇಷವೆಂದರೆ ಈ ಶನಿದೇವರ ಮಂದಿರಕ್ಕೆ ಯಾವ ಬಾಗಿಲು, ಕಿಟಕಿ, ಗೋಪುರಗಳಲ್ಲ. ಬಯಲಿನ ನಡುವೆಯೇ ನಿಂತಿರುವ ಶನಿದೇವರ ನೆಲೆಯಾದ ಈ ಊರಿನಲ್ಲಿರುವ ಮನೆ, ಅಂಗಡಿ, ಬ್ಯಾಂಕ್, ಶಾಲೆಯಂತಹಾ ಕಛೇರಿಗಳಿಗೆ ಸಹ ಬಾಗಿಲು, ಬೀಗಗಳಿಲ್ಲ! ಇಲ್ಲಿ ಕಳ್ಳತನ ಮಾಡಿದ್ದರೆ ಶನಿದೇವರ ಪ್ರಕೋಪಕ್ಕೆ ಈಡಾಗಬೇಕಾಗುವುದು ಎನ್ನುವ ನಂಬಿಕೆ ಇದ್ದು ಶನಿದೇವರ ಅಣತಿಯಂತೆಯೇ ಇಲ್ಲಿ ಯಾರ ಮನೆ, ಕಛೇರಿಗಳಿಗೆ ಬಾಗಿಲು ಇರುವುದಿಲ್ಲವಂತೆ.
![]() |
ಪಂಚವಟಿ |
ದಂತಕಥೆಯಂತೆ ಇಲ್ಲಿನ ಹಳ್ಳಿಗಾಡಿನ ಕುರಿ ಮೇಯಿಸುವವನೊಬ್ಬನಿಗೆ ಈ ಹೊಳಪುಳ್ಳ ಕರಿಶಿಲೆ ಕಾಣಿಸಿತು. ಆತ ಕುತೂಹಲಗೊಂಡು ತನ್ನ ಬಳಿಯಿದ್ದ ಕೋಲಿಂದ ಅದನ್ನು ತಿವಿಯಲು ಅದರಿಂದ ರಕ್ತ ಒಸರಿತು. ಇದನ್ನು ಕಂಡು ಗಾಬರಿಗೊಂಡ ಆತ ಹಳ್ಳಿಯ ಇತರರಿಗೆ ಈ ವಿಚಾರ ತಿಳಿಸಿದ. ಅಂದಿನ ರಾತ್ರಿ ಆ ಹಳ್ಳಿಯಲಿದ್ದ ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡ ಶನಿದೇವ 'ನಾನು ಈ ಗ್ರಾಮದಲ್ಲಿ ನೆಲೆಸುವವನಿದ್ದೇನೆ. ಈ ಕರಿಶಿಲೆಯನ್ನು ಪ್ರತಿಷ್ಠಾಪಿಸಿ ನಿತ್ಯವೂ ಪೂಜೆ, ತೈಲಾಭಿಷೇಕ ನೆರವೇರಿಸಿರಿ. ಮುಂದೆ ಇಲ್ಲೆಲ್ಲೆ ಆಗಲಿ ಕಳ್ಳತನವಾಗದಂತೆ ನಾನು ನೋಡಿಕೊಳ್ಳುವೆನು' ಎಂದು ಆದೇಶಿಸಿದ.
ಅದರಂತೆ ಆ ಕರಿಶಿಲೆಯನ್ನು ಊರ ನಡುವೆ ಪ್ರತಿಷ್ಠಾಪಿಸಲಾಗಿದ್ದು ಅಂದಿನಿಂದ ಇಂದಿನವರೆಗೆ ಶನಿದೇವರಿಗೆ ನಿತ್ಯ ಪೂಜೆ, ತೈಲಾಭಿಷೇಕಗಳು ನಡೆಯುತ್ತಿದೆ.
![]() |
ರಂಜನ್ ಗಾಂವ್ ಮಹಾಗಣಪತಿ |
ನಾವೂ ಸಹ ಆ ವಿಸ್ಮಯಕಾಇ ಶಿಲೆಯನ್ನು ವೀಕ್ಷಿಸಿ ಅಚ್ಚರಿಗೊಂಡೆವು. ಅಲ್ಲಿಂದ ಹೊರಟ ನಾವುಗಳು ಸಂಜೆ 6.30ರ ವೇಳೆಗೆ ಪೂನಾ ಸಮೀಪದ ರಂಜನ್‌ಗಾಂವ್ ಗೆ ಬಂದೆವು. ಅಲ್ಲಿ ಮಹಾಗಣಪತಿ ದೇವಸ್ಥಾನ ಬಹು ಪ್ರಸಿದ್ದವಾದದ್ದು. ಪೂನಾ ಸುತ್ತ ಮುತ್ತಲೂ ಇರುವ ಅಷ್ಟ ವಿನಾಯಕ ಸನ್ನಿಧಾನಗಳಲ್ಲಿ ಇದು 8ನೇ ಅಥವಾ ಕಡೆಯ ಸನ್ನಿಧಾನ ಎಂ ದು ನಮ್ಮ ಗೈಡ್ ಹೇಳಿದ್ದ.
![]() |
ರಂಜನ್ ಗಾಂವ್ ಮಹಾಗಣಪತಿ ದೇವಾಲಯ ಮಹಾದ್ವಾರ |
ಒಂದು
ಐತಿಹ್ಯದಂತೆ ರಂಜನ್ಗಾಂವ್ ಪಟ್ಟಣವಿರುವ ಸ್ಥಳ ತ್ರಿಪುರಾಸುರನನ್ನು ವಧಿಸಲು ಪರಮೇಶ್ವರ ತನ್ನ ಮಗ ಗಣಪತಿಯ ಆಶೀರ್ವಾದ ಪಡೆದ ಸ್ಥಳವಾಗಿದೆ.
ಹಾಗೆ ಶಿವನು ಗಣೇಶನ ಆಶೀರ್ವಾದ ಪಡೆದ ಸ್ಥಳದಲ್ಲಿಯೇ ಪರಮೇಶ್ವರ ಗಣೇಶನ ದೇವಸ್ಥಾನವನ್ನು ನಿರ್ಮಿಸಿದ್ದನು. ಆ ದೇವಸ್ಥಾನದ ಸುತ್ತಲಿನ ನಗರವನ್ನು ಮಣಿಪುರ ಎಂದು ಕರೆಯಲಾಗುತ್ತಿತ್ತು. ಅದೇ ಮಣಿಪುರ ಇಂದು ರಂಜನ್ಗಾಂವ್ ಆಗಿದೆ. ಶಿವನು ಪ್ರತಿಷ್ಠಾಪಿಸಿ ಪೂಜಿಸಿದ ಆ ಗಣೇಶ ದೇವಸ್ಥಾನ ಇದೇ ಮಹಾಗಣಪತಿ ಸನ್ನಿಧಾನ ಎನ್ನಲಾಗುತ್ತದೆ.
ನಾವು ಮಹಾಗಣಪತಿಯನ್ನು ದರ್ಶಿಸಿ ಅಲ್ಲಿಂದ ಪೂನಾ ವಿಮಾನ ನಿಲ್ದಾಣ ತಲುಪಿದೆವು. ಮತ್ತೆ ಅಲ್ಲಿಂದ ನಿಗದಿಯಾಗಿದ್ದ ವಿಮಾನದಲ್ಲಿ ಬೆಂಗಳೂರಿನತ್ತ ಪಯಣಿಸಿದೆವು. ಹೀಗೆ ಶಿರಡಿ, ನಾಸಿಕ ಪ್ರವಾಸ ನಮ್ಮ ನೆನಪುಗಳ ಪುಟದಲ್ಲಿ ಸೇರಿ ಹೋಯಿತು.
(ಈ ನನ್ನ ಲೇಖನದ ಸಂಗ್ರಹ ರೂಪ 08 ಮೇ 2018ರಂದು ಕನ್ನಡಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು - https://bit.ly/2KNn6GS)
No comments:
Post a Comment