Wednesday, November 13, 2024

ಸುದ್ದಿಯಾಗದ ಸಾಧಕ: ಕವಿ, ಪತ್ರಕರ್ತ ಶ್ಯಾಮಸುಂದರ ಕುಲಕರ್ಣಿ

 ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಅದೆಷ್ತೋ ಮಹಾನ್ ಸಾಧಕರು ಸುದ್ದಿಯಾಗದೆ ಸಾವಿಗೀಡಾಗುತ್ತಾರೆ. ಇದಕ್ಕೆ ಹಲವಾರು ಕಾರಣಗಳಿದೆ, ಉದಾಹರಣೆಗೆ ಎಂ‌ ಡಿ ಸುಂದರ್ , ಹೆಚ್ ವಿ‌.ಸುಬ್ಬಾರಾವ್ ಡೈಲಾಗ್ ರೈಟರ್‌ ಕೆ ನಂಜುಂಡ ಮೊದಲಾದವರು ಸದ್ದಿಲ್ಲದೆ ಮರೆಯಾಗಿದ್ದಾರೆ. ಇದೀಗ ಅಂತಹುದೇ ಇನ್ನೋರ್ವ ಸಾಧಕರು ಸಹ ಸುದ್ದಿಯಾಗದೆ ಹೋಗಿದ್ದಾರೆ. ಅವರೇ ಶ್ಯಾಮಸುಂದರ ಕುಲಕರ್ಣಿ! 


‘ಯಾವ ಹೂವು ಯಾರ ಮುಡಿಗೋ.. ‘ಪ್ರೀತಿಸಿದೆ ಪ್ರೇಮಿಸಿದೆ..’‘ಒಲವಿನ ಉಡುಗೊರೆ ಕೊಡಲೇನು’, ‘ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ’, ‘ಯಾವ ಹೂವು ಯಾರ ಮುಡಿಗೋ’, ‘ಸೇವಂತಿಯೇ-ಸೇವಂತಿಯೇ’ ‘ಚಿಕ್ಕಮಗಳೂರ ಚಿಕ್ಕಮಲ್ಲಿಗೆ ‘ ಇನ್ನೂ ಹಲವಾರು ಕನ್ನಡ ಹಾಡುಗಳನ್ನು ಬರೆದಿರುವ ಶ್ಯಾಮಸುಂದರ ಕುಲಕರ್ಣಿ (ಪತ್ರಕರ್ತರು ಮತ್ತು ಕವಿ ) ನಿಧನ ಹೊಂದಿದ್ದಾರೆ. ಎಲೆ ಮರೆಯ ಕಾಯಿಯಂತೆ ಬದುಕಿ ಬಾಳಿದ ಬರಹಗಾರ ಶ್ಯಾಮಸುಂದರ ಕುಲಕರ್ಣಿ ಅಕ್ಟೋಬರ್ 31 ರಂದು ನಿಧನ ಹೊಂದಿದ್ದಾರೆ. ಆದರೆ ಸುದ್ದಿ ತಡವಾಗಿ ಬಹಿರಂಗಗೊಂಡಿದೆ. ತಮ್ಮ ಸಾವು ಸುದ್ದಿ ಆಗಬಾರದೆಂದು ಅವರು ಬಯಸಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ನಿಧನದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಗಾಯಕಿ ವಾಣಿಜಯರಾಂ ಅವರ ಕನ್ನಡದ ಮೊದಲ ಹಾಡು ‘ಮೂಡಣದಾ ರವಿ…’ ಹಾಡು ಕೆ ಶ್ಯಾಮಸುಂದರ ಕುಲಕರ್ಣಿಯವರು ಬರೆದ ಮೊದಲ ಹಾಡಾಗಿತ್ತು. ಹಾಡುಗಳು ಮಾತ್ರವೇ ಅಲ್ಲದೆ ಕನ್ನಡದ ಕೆಲವು ಜನಪ್ರಿಯ ಸಿನಿಮಾಗಳಿಗೆ ಸಂಭಾಷಣೆ, ಕೆಲವಕ್ಕೆ ಚಿತ್ರಕತೆಗಳನ್ನು ಸಹ ಬರೆದಿದ್ದಾರೆ. ‘ಒಲವಿನ ಉಡುಗೊರೆ’ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು’, ‘ಪರಾಜಿತ’ ಸಿನಿಮಾದ ‘ಸುತ್ತಮುತ್ತಲು ಸಂಜೆಗತ್ತಲು ಸಂಜೆ ಗತ್ತಲು’, ‘ಅಜೇಯ’ ಸಿನಿಮಾದ ‘ಹೀರೋ ಹೀರೋ ಹೀರೋ ನಾನೇ ನಾನೇ ನಾನೇ’, ‘ಸೂರ್ಯವಂಶ’ ಸಿನಿಮಾದ ‘ಸೇವಂತಿಯೆ ಸೇವಂತಿಯೆ’, ‘ಭರತ್’ ಸಿನಿಮಾದ ‘ನೀಲಿ ಬಾನಲಿ’ ‘ಒಂದು ಸಿನಿಮಾ ಕತೆ’ ಸಿನಿಮಾದ ‘ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ’, ‘ಬೆಸುಗೆ’ ಸಿನಿಮಾದ ‘ಯಾವ ಹೂವು ಯಾರ ಮುಡಿಗೊ…ಯಾರ ಒಲವು ಯಾರ ಕಡೆಗೊ’ ಸೇರಿದಂತೆ ಅನೇಕ ಜನಪ್ರಿಯ ಗೀತೆಗಳನ್ನು ಶ್ಯಾಮಸುಂದರ ಕುಲಕರ್ಣಿ ಅವರು ರಚಿಸಿದ್ದಾರೆ. ‘ಛಲಗಾರ’ ಚಿತ್ರಕ್ಕೆ ‘ಮೂಡಣದಾ ರವಿ’ ಗೀತೆಯನ್ನು ಬರೆಯುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಶ್ಯಾಮಸುಂದರ ಕುಲಕರ್ಣಿ ‘ಹೊಸ ರಾಗ’ ‘ಗಣೇಶ ಸುಬ್ರಹ್ಮಣ್ಯ’ ‘ಒಂದು ಸಿನಿಮಾ ಕತೆ’ ಮೊದಲಾದ ಚಿತ್ರಗಳಿಗೆ ಸಾಹಿತ್ಯ ಸಹ ಅವರದ್ದೇ ಆಗಿತ್ತು. ‘ಮುಕ್ತಿ’ ಚಿತ್ರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿತ್ರೀಕರಣಗೊಂಡಾಗ ಕಲ್ಪನಾ ಹಿಡಿದು ಕೊಂಡ ನೋಟ್ ಬುಕ್ ಶ್ಯಾಮಸುಂದರ ಕಲುಕರ್ಣಿಯವರದಾಗಿತ್ತು. ಪ್ರವಾಹ ಪರಿಹಾರ ನಿಧಿಗೆ ಕಲಾವಿದರು ಯಾತ್ರೆ ನಡೆಸಿದಾಗ ರಾಜ್ ಕುಮಾರ್ ಅವರಿಗೆ ಕುಲಕರ್ಣಿ ಕೊಡೆ ನೀಡಿದ್ದರು. ಕಲ್ಪನಾ ಅವರ ಬರಹಗಾರ್ತಿ ಮುಖವನ್ನು ಚೆನ್ನಾಗಿ ಬಳಸಿಕೊಂಡವರಲ್ಲಿ ಕುಲಕರ್ಣಿಯವರು ಪ್ರಮುಖರು. ವಿಶೇಷಾಂಕಗಳಿಗೆ ಪ್ರಮುಖ ಲೇಖನಗಳನ್ನು ಬರೆಸಿದ್ದರು. ಕಲ್ಪನಾ ಬಿರುಗಾಳಿಯಂತೆ ಬಂದಾಗ ಅವರನ್ನು ಸಮಾಧಾನ ಮಾಡುವ ಚಾಣಕ್ಷತೆ ಅವರಿಗಿತ್ತು. ಡಾ.ರಾಜ್ ಕುಮಾರ್ ಸೇರಿದಂತೆ ಹಳೆ ತಲೆಮಾರಿನ ಕಲಾವಿದರನ್ನು ಕುಲಕರ್ಣಿ ಬಹಳ ಸೊಗಸಾಗಿ ಸಂದರ್ಶಿಸಿದ್ದರು. ಅವರ ಸಂದರ್ಶನಗಳು ಪತ್ರಕರ್ತರಿಗೆ ಮಾದರಿ ಎನ್ನುವಂತಿದ್ದವು.
ಸಂಯುಕ್ತ ಕರ್ನಾಟಕದಲ್ಲಿ ಹಲವು ವರ್ಷ ಕೆಲಸ ಮಾಡಿದ್ದ ಶ್ಯಾಮಸುಂದರ ಕುಲಕರ್ಣಿ ಅವರು, ನಟಿ ಕಲ್ಪನಾ ಅವರಿಂದ ಅಂಕಣಗಳನ್ನು ಬರೆಸಿದ್ದರು. ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ನೇರವಾಗಿ, ಪರೋಕ್ಷವಾಗಿ ಅವರು ಸಹಾಯ ಮಾಡಿದ್ದರು. ಡಾ ರಾಜ್​ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರೊಟ್ಟಿಗೆ ಆಪ್ತ ಸ್ನೇಹ ಹೊಂದಿದ್ದರು. ಹಲವರ ಸಂದರ್ಶನಗಳನ್ನು ಅವರು ಪ್ರಕಟಿಸಿದ್ದರು. ಇತಿಹಾಸದ ಅನೇಕ ರೋಚಕ ಘಟನೆಗಳನ್ನು ಅಷ್ಟೇ ರಸವತ್ತಾಗಿ ವಿವರಿಸುವ ಶಕ್ತಿ ಅವರಲ್ಲಿತ್ತು. ಕರ್ನಾಟಕ ಚಲನಚಿತ್ರ ಅಕಾಡಮಿಗಾಗಿ 2000-2010ರವರೆಗಿನ ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸುವ ‘ಚಂದನ ವನ’ದ ಪ್ರಧಾನ ಸಂಪಾದಕತ್ವ ವಹಿಸಿದ್ದ ಇವರು ‘ಮಲ್ಲಿಗೆ ಮಾಸಪತ್ರಿಕೆಗೆ ಚಿತ್ರರಂಗದ ವರ್ಷದ ರಿಪೋರ್ಟ್ ಕಾರ್ಡ್ ಅನ್ನು ಸಹ ಬಹಳ ಮುತುವರ್ಜಿಯಿಂದ ಮಾಡಿ ಕೊಡುತ್ತಿದ್ದರು.
ಇಂತಹಾ ಮಹನೀಯರು ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಅವರ ಖಾಸಗಿ ಜೀವನದಲ್ಲಿ ದೊಡ್ಡ ದುರಂತದ ಬಳಿಕ ಅವರು ಸಾರ್ವಜನಿಕ ಬದುಕಿನಿಂದ ದೂರವಾಗಿ ಹೆಚ್ಚು ಅಂತರ್ಮುಖಿಗಳಾಗಿದ್ದರು. ಇದೀಗ ಅವರು ಸಾವನ್ನಪ್ಪಿ ಕೆಲವಾರು ದಿನಗಳಾಗಿದ್ದರೂ ಆ ಸುದ್ದಿ ಕೂಡ ಯಾವ ಖ್ಯಾತನಾಮ ಮಾದ್ಯಮಗಳಲ್ಲಿ ಪ್ರಕಟವಾಗಿಲ್ಲ. ಹೀಗೆ ಸುದ್ದಿಯಾಗದ ಸಾಧಕರು ನಮ್ಮ ನಡುವೆ ಇನ್ನೂ ಎಷ್ಟು ಮಂದಿ ಇದ್ದಾರೆ? ಆಲೋಚಿಸಿದರೆ ಮನಸ್ಸು ತೇವವಾಗುತ್ತದೆ….

No comments:

Post a Comment