ಬೆಂಗಳೂರು : ಕರ್ನಾಟಕ ರತ್ನ, ಕನ್ನಡದ ವರನಟ, ಪದ್ಮಭೂಷಣ ಡಾ.ರಾಜಕುಮಾರ್ ಅವರ 96ನೇ ಹುಟ್ಟುಹಬ್ಬದ ಪ್ರಯುಕ್ತ ಇಂಟರ್ ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆ ವತಿಯಿಂದ ಶ್ರೀವತ್ಸ ಶಾಂಡಿಲ್ಯ ನೇತೃತ್ವದಲ್ಲಿ 14ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿದೆ.
ರಾಜ್ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ: ‘ಹೌಸ್ ಫುಲ್’ ಶೀರ್ಷಿಕೆ ಅಡಿಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನ 14ನೇ ಕ್ರಾಸ್ನಲ್ಲಿರುವ ‘ಸೇವಾ ಸದನ’ ಸಭಾಂಗಣದಲ್ಲಿ ಇದೇ ಗುರುವಾರ (ಏ.24) ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ನಟ ಸಾರ್ವಭೌಮ ಡಾ.ರಾಜಕುಮಾರ್ ನಟಿಸಿರುವ ಹಳೆಯ ಚಲನಚಿತ್ರ ಗೀತೆಗಳು ಅದರಲ್ಲೂ ಶಾಸ್ತ್ರಿಯ ಸಂಗೀತ ಹಿನ್ನೆಲೆ ಇರುವ ಚಿತ್ರದ ಹಾಡುಗಳನ್ನು ಹೆಸರಾಂತ ನೃತ್ಯಗಾರರಿಂದ ಭರತ ನಾಟ್ಯಂ, ಕುಚುಪುಡಿ ಶೈಲಿಯಲ್ಲಿ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕರ್ನಾಟಕ ರತ್ನ ಡಾ.ರಾಜಕುಮಾರ್ ನಟಿಸಿರುವ ಕವಿರತ್ನ ಕಾಳಿದಾಸ, ಬಬ್ರುವಾಹನ, ಶ್ರೀ ಕೃಷ್ಣದೇವರಾಯ, ಆಕಸ್ಮಿಕ, ಸನಾದಿ ಅಪ್ಪಣ್ಣ, ಜೀವನ ಚೈತ್ರ, ಇಮ್ಮಡಿ ಪುಲಕೇಶಿ ಸೇರಿ ಹಲವು ಸೂಪರ್ ಹಿಟ್ ಚಲನಚಿತ್ರ ಗೀತೆಗಳಿಗೆ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಕಲಾ ಸೇವೆಯ ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಉಚಿತವಾಗಿದ್ದು ಅಭಿಮಾನಿಗಳು, ಸಿನಿ ಪ್ರೇಕ್ಷಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸುಮಧುರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಘಟಕರು ವಿನಂತಿಸಿಕೊಂಡಿದ್ದಾರೆ.
ವಿಶಿಷ್ಠ ಹಾಗೂ ಅದ್ದೂರಿ ಕಾರ್ಯಕ್ರಮದಲ್ಲಿ ಹೆಸರಾಂತ ನೃತ್ಯಗಾರರಾದ ಡಾ.ಸಂಜಯ್ ಶಾಂತರಾಮ್, ಡಾ.ವಸಂತ್ ಕಿರಣ್, ವಿದುಷಿಗಳಾದ ರಾಜಶ್ರೀ ಹೊಳ್ಳ, ಶ್ರದ್ಧಾ ಮೆಣನ್ ಅವರುಗಳ ಶಿಷ್ಯರು ಒಳಗೊಂಡಂತೆ ವಿದುಷಿ ಪ್ರತಿಭಾ ಕಿಣಿ, ವಿದುಷಿ ಸೀಮ ಕೃಷ್ಣನ್, ವಿದುಷಿ ಮನುಶ್ರೀ ಆನಂದ್ ಕುಮಾರ್, ವಿದುಷಿ ಅನನ್ಯ ಬಿ ಆರ್, ವಿದುಷಿ ಸೃಷ್ಟಿ ಪಂಡ್ರಿ, ವಿದುಷಿ ಶ್ರೀ ಲಕ್ಷ್ಮಿ, ವಿದುಷಿ ಪ್ರೇರಣ ದೇಶಪಾಂಡೆ ಮತ್ತು ವಿದುಷಿ ಬಿಂದುಶ್ರೀ ಸೇರಿ ಹಲವರು ಭಾಗವಹಿಸಲಿದ್ದಾರೆ.
No comments:
Post a Comment