*ಚಂದನಾ ನಾಗ್ ರಂಗಪ್ರವೇಶ*
ಏಪ್ರಿಲ್ 20ರ ಸಂಜೆ ಭಾನುವಾರ ಎಡಿಎ ರಂಗಮಂದಿರದಲ್ಲಿ ಹಿರಿ ಕಿರಿಯ ಕಲಾವಿದರ ಸಮಾವೇಶ.
ಚಂದನಾ ನಾಗ್ ಸ್ವತಃ ರಂಗಭೂಮಿ ಕಲಾವಿದೆ, ಕಿರು ಚಿತ್ರಗಳ ಬರಹಗಾರ್ತಿ ಮತ್ತು ನಿರ್ದೇಶಕಿ.
ಚಂದನಾ ಭರತನಾಟ್ಯದ ಆರಂಭಿಕ ಪಾಠಗಳನ್ನು ಗುರು ಭಾನುಮತಿ ಅವರಲ್ಲಿ ಬಹಳ ವರ್ಷ ಕಲಿತು, ನಂತರ ಐದು ವರ್ಷ ದಿಂದ ಸ್ನೇಹಾ ಕಪ್ಪಣ್ಣ ಅವರ ಬಳಿ ಕಲಿಕೆ ಮುಂದುವರೆಸಿದ್ದಾರೆ. ಇಷ್ಟು ಕಾಲದ ಸಿದ್ಧತೆಯ ನಂತರ ಈಗ ರಂಗಪ್ರವೇಶ ಮಾಡಿದರು.
ಚಂದನಾ ನಾಗ್ ಅವರ ಈ ರಂಗಪ್ರವೇಶದ ಆರಂಭಕ್ಕೆ ಲಲಿತಾ ಶ್ರೀನಿವಾಸನ್ ಅವರು ದೀಪ ಬೆಳಗಿ ಉದ್ಘಾಟಿಸಿದರು. ನಂತರ ಆದಿತಾಳದ ಪುಷ್ಪಾಂಜಲಿಗೆ ನೃತ್ಯದ ಮೂಲಕ ರಂಗಪ್ರವೇಶ ಆರಂಭಿಸಿದ ಚಂದನಾ ಪಂಚಭೂತಗಳನ್ನು ಪ್ರಧಾನ ವಸ್ತುವಾಗಿರಿಸಿಕೊಂಡು, ಕೌತ್ವಂಗಾಗಿ ಅಗ್ನಿಯ ಹಲವು ಮುಖಗಳನ್ನು ದಾಟಿಸಿದರೆ, ಶಬ್ದಂಗಾಗಿ ಆಕಾಶದ ವಿವರ ನೀಡುವ ಚಿದಂಬರಂ ಶಿವನ ಪದ್ಯವನ್ನು ಅದ್ಭುತವಾಗಿ ಕಟ್ಟಿಕೊಟ್ಟರು. ವರ್ಣದಲ್ಲಿ ನೀರಿನ ಬಗ್ಗೆ ಮಾತಾಡಲು ಗಂಗೆಯ ವಿವಿಧ ಕಥೆಯನ್ನು ಹೇಳುತ್ತ, ಗೀತಗೋವಿಂದದ ಅಷ್ಟಪದಿ ಬಳಸಿ ವಾಯುವಿನ ಬಗ್ಗೆ ಹೇಳಿದರು. ಪದಂನಲ್ಲಿ ಭೂಮಿಯ ಕುರಿತು ಮಾತಾಡಲು ಸೀತೆಯ ಕಥನವಿದ್ದ ಹಾಡನ್ನು ಅಭಿನಯ ಪ್ರಧಾನವಾಗಿ ಕಟ್ಟಿದರು. ಚಿದಂಬರ ಶಿವನ ಬಾನಗಲದ ಪರಿಚಯ ಒಂದೆತ್ತರವಾದರೆ ಪದಂನ ಮೂಲಕ ಸೀತೆಯು ಭೂತಾಯಿಯನ್ನು ಕರೆದು ಅವಳ ಮಡಿಲಿಗೆ ಮರಳಿ ಸೇರುವ ವಿವರ ನೋಡುಗರ ಕಣ್ಣಲ್ಲಿ ಹನಿ ಮೂಡಿಸಿತು.
ನಟುವಾಂಗದಲ್ಲಿ ಸ್ವತಃ ಗುರು ಸ್ನೇಹಾ ಕಪ್ಪಣ್ಣ, ಗಾಯನದಲ್ಲಿ ಶ್ರೀವತ್ಸ, ಮೃದಂಗದಲ್ಲಿ ವಿದ್ವಾನ್ ಶ್ರೀಹರಿ, ಕೊಳಲು ವಾದನದಲ್ಲಿ ವಿದ್ವಾನ್ ಮಹೇಶ್ ಸ್ವಾಮಿ ಮತ್ತು ರಿದಂನಲ್ಲಿ ವಿದ್ವಾನ್ ಕಾರ್ತಿಕ್ ವೈದಾರ್ತಿ ಇದ್ದ ಹಿಮ್ಮೇಳದ ಜೊತೆಗೆ ಹಿರಿ-ಕಿರುತೆರೆ ಕಲಾವಿದೆ ಹಾಗೂ ಭರತನಾಟ್ಯ ಕಲಾವಿದೆ ಸೀತಾ ಕೋಟೆ ಅವರ ನಿರೂಪಣೆ, ಶಶಿಧರ್ ಅಡಪ ಅವರ ರಂಗ ಸಜ್ಜಿಕೆ, ಕಿರಣ್ ರಾಜ್ ಅವರ ಪ್ರಸಾಧನ, ನಾಗರಾಜ್ ಅವರ ಬೆಳಕು ವಿನ್ಯಾಸ ಇದ್ದ ಈ ಕಾರ್ಯಕ್ರಮಕ್ಕೆ ಎರಡು ಹೊಸ ಸಂಯೋಜನೆಗಳನ್ನು ರಮ್ಯಾ ಸೂರಜ್ ಅವರು, ಅಕ್ಷಯ್ ಮರಾಠೆ ಅವರು ರಚಿಸಿದ್ದರು.
ಚಲನ ಚಿತ್ರನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಂಸಲೇಖಾ , ಎಸ್.ಜಿ.ಸಿದ್ದರಾಮಯ್ಯ , ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜರಾದ ಚಿರಂಜೀವಿ ಸಿಂಗ್, ಬಿಎಲ್ ಶಂಕರ್, ಜಿ. ರಾಮಕೃಷ್ಣ , ಗಿರಿಜಾ ಲೋಕೇಶ್, ಗಿರೀಶ್ ಕಾಸರವಳ್ಳಿ, ಜಯಂತ್ ಕಾಯ್ಕಿಣಿ, ವಿ. ಹರಿಕೃಷ್ಣ , ಯೋಗರಾಜ್ ಭಟ್ , ವೈಕೆ ಮುದ್ದುಕೃಷ್ಣ, ವನಮಾಲ ವಿಶ್ವನಾಥ್, ಅರುಂಧತಿ ನಾಗ್ , ನಟ ಕಿಶೋರ್ ಮತ್ತು ನೃತ್ಯ, ಸಂಗೀತ ಕ್ಷೇತ್ರದ ಗಣ್ಯರೂ ಸೇರಿದಂತೆ ಕಲಾಭಿಮಾನಿಗಳೂ ಈ ಕಾರ್ಯಕ್ರಮದಲ್ಲಿ ಇದ್ದು ಚಂದನಾ ನಾಗ್ ರಂಗಪ್ರವೇಶಕ್ಕೆ ಸಾಕ್ಷಿಯಾದರು.
ತನ್ನ ಭರತನಾಟ್ಯ ಕಲಿಕೆಯನ್ನು ಮತ್ತು ಅಭಿನಯವನ್ನು ಅತ್ಯಂತ ಸಮರ್ಥವಾಗಿ ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದ ಚಂದನಾ ನಾಗ್ ಎಲ್ಲ ನೋಡುಗರಿಂದ ಮೆಚ್ಚುಗೆಯನ್ನು ಪಡೆದರು. ಈ ಬಗೆಯಲ್ಲಿ ಕಳೆದ ಭಾನುವಾರ ಏಪ್ರಿಲ್ ಇಪ್ಪತ್ತರ ಸಂಜೆ ತುಂತುರು ಮಳೆಯಿಂದ ಆರಂಭವಾಗಿ ಚಪ್ಪಾಳೆಗಳ ಸುರಿಮಳೆಯಲ್ಲಿ ಸಂಪನ್ನವಾಯಿತು.
- ರಾಧಿಕಾ ರಂಜನ
No comments:
Post a Comment