Saturday, June 28, 2025

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 125

 ಬದರಿನಾಥ (Badrinath)


 "ದೇವ ಭೂಮಿ" ಎಂದಎ ಕರೆಯಲ್ಪಡುವ ಉತ್ತರಾಖಂಡ ರಾಜ್ಯವು ಸಾಕಷ್ಟು ಮಹತ್ವ ಪಡೆದ ಧಾರ್ಮಿಕ ಆಕರ್ಷಣೆಗಳನ್ನು ಹೊತ್ತು ನಿಂತ, ಹಿಮಾಲಯ ಪರ್ವತಗಳ ಬುಡದಲ್ಲಿ ನೆಲೆಸಿರುವ ಸುಂದರವಾದ ರಾಜ್ಯವಾಗಿದೆ. ಇಲ್ಲಿ ಸಾಕಷ್ಟು ತೀರ್ಥ ಯಾತ್ರಾ ಕ್ಷೇತ್ರಗಳಿರುವುದು ವಿಶೇಷ. ಹಿಂದುಗಳು ತಮ್ಮ ಜೀವಮಾನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ತೀರ್ಥ ಕ್ಷೇತ್ರಗಳ ಪೈಕಿ ಚಾರ್ ಧಾಮ್ ಯಾತ್ರೆಯಲ್ಲಿ ಬರುವ ಬದರಿನಾಥ, ಕೂಡ ಒಂದಾಗಿದೆ ಬದರಿನಾಥ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಧಾರ್ಮಿಕ ಮಹತ್ವವಿರುವ ಪಟ್ಟಣವಾಗಿದೆ. ಬದರಿನಾಥ ದೇವಾಲಯವು 50 ಅಡಿಗಳಷ್ಟು ಎತ್ತರವಿರುವ ರಚನೆಯಾಗಿದ್ದು ಬಂಗಾರದ ಪುಟ್ಟ ಗೋಪುರವನ್ನು ಹೊಂದಿದೆ. ಕಲ್ಲುಗಳಿಂದ ನಿರ್ಮಿಸಲಾಗಿರುವ ದೇವಾಲಯವು ಕಮಾನಿನಾಕಾರದ ಕಿಟಕಿಗಳನ್ನು ಹಾಗೂ ಪ್ರವೇಶಿಸಲು ಮೆಟ್ಟಿಲುಗಳನ್ನು ಹೊಂದಿದೆ.  ದೇವಾಲಯವು ಅಲಕಾನಂದ ನದಿಯ ದಡದಲ್ಲಿರುವ ಎರಡು ಪರ್ವತ ಶ್ರೇಣಿಗಳ ಮಧ್ಯೆದಲ್ಲಿದೆ. ಬದ್ರಿನಾಥ ದೇವಾಲಯದಲ್ಲಿನ ವಿಷ್ಣುವಿನ ವಿಗ್ರಹವನ್ನು ಶಾಲಿಗ್ರಾಮ ಕಲ್ಲಿನಿಂದ ನಿರ್ಮಿಸಲಾಗಿದೆ.   ವಿಗ್ರಹವನ್ನು ದೇವಸ್ಥಾನದ ಬದ್ರಿ ಮರದ ಕೆಳಗೆ ಚಿನ್ನದ ಆವರಣದಲ್ಲಿ ಇರಿಸಲಾಗಿದೆ. ಈ ವಿಗ್ರಹವು ಯೋಗಮುದ್ರೆಯಲ್ಲಿದ್ದು, ವಿಗ್ರಹದಲ್ಲಿನ ದೇವರಿಗೆ 4 ಕೈಗಳಿವೆ. ಒಂದು ಕೈಯಲ್ಲಿ ಚಕ್ರವನ್ನು, ಇನ್ನೊಂದು ಕೈಯಲ್ಲಿ ಶಂಖವನ್ನು ಹಾಗೂ ಇನ್ನೆರೆಡು ಕೈಗಳಲ್ಲಿ ಯೋಗ ಮುದ್ರೆಯನ್ನು ನೋಡಬಹುದಾಗಿದೆ. ಬದ್ರಿನಾಥ ವಿಗ್ರಹದಲ್ಲಿನ ದೇವರ ಹಣೆಯ ಮೇಲೆ ವಜ್ರವನ್ನು ಕೆತ್ತಲಾಗಿದ್ದು, ಇದು ನೋಡುತ್ತಿದ್ದಂತೆ ದೇವರು ಭಕ್ತರನ್ನು ಆಶೀರ್ವದಿಸುವಂತೆ ಕಾಣುತ್ತದೆ. ಬದ್ರನಾಥನ ವಿಗ್ರಹವನ್ನು ಹೊರತುಪಡಿಸಿ ಇಲ್ಲಿ ಏಕಾದಶಿ ದೇವಿಯ ವಿಗ್ರಹವನ್ನು ಕೂಡ ನೋಡಬಹುದಾಗಿದೆ.

ತಮಿಳು ಅಳ್ವರರು ನಮೂದಿಸಿರುವ ದಿವ್ಯ ದೇಸಂನ, ವಿಷ್ಣುವಿಗೆ ಮುಡಿಪಾದ 108 ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿರುವ ಬದರಿನಾಥ ದೇವಾಲಯವು ವೈಷ್ಣವರ ಪ್ರಮುಖ ಯಾತ್ರಾ ಕೇಂದ್ರವಾಗಿ ಗಮನ ಸೆಳೆಯುತ್ತದೆ. ಬದರಿನಾಥಕ್ಕೆ ತೆರಳಲು ದೆಹಲಿ, ಹರಿದ್ವಾರ ಹಾಗೂ ರಿಶಿಕೇಷಗಳು ಪ್ರಮುಖ ಪಟ್ಟಣಗಳಾಗಿವೆ. ಈ ಸ್ಥಳಗಳಿಂದ ಕ್ರಮವಾಗಿ ಬದರಿನಾಥ 525 ಕಿ.ಮೀ, 325 ಕಿ.ಮೀ ಹಾಗೂ 296 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಬದರಿನಾಥ ಕ್ಷೇತ್ರದ ಮಹಿಮೆ ಏನು, ಮಹತ್ವ ಏನು, ಎನ್ನುವುದನ್ನು ತಿಳಿಯಲು ಮುಂದೆ ಓದಿ-  


ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ / ಬೋರೆ ಕಾಯಿ (ಬಾರಿ ಕಾಯಿ) ಎಂದಾಗುತ್ತದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದೊಮ್ಮೆ ಈ ಸ್ಥಳದಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿದ್ದವಂತೆ. ಹಾಗಾಗಿ ಇದಕ್ಕೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ. ಲ್ಲಿರುವ ವಿಷ್ಣುವಿನ ದೇವಾಲಯದಿಂದಾಗಿ ಇದಕ್ಕೆ ಬದರಿನಾಥ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಬದರಿಗಳಿರುವ ನಾಡಿನ ನಾಥ (ಒಡೆಯ) ನಾಗಿ ಬದರಿನಾಥನನ್ನು ಕೊಂಡಾಡಲಾಗುತ್ತದೆ.

ಇನ್ನು ಆದಿ ಶಂಕರಾಚಾರ್ಯರು ಧರ್ಮ ಪ್ರಸಾರಕ್ಕಾಗಿ ಭಾರತ ಸಂಚರಿಸುವ ಸಂದರ್ಭದಲ್ಲಿ ಈ ಸ್ಥಳಕ್ಕೆ ಬಂದಾಗ ಅಲಕನಂದಾ ನದಿಯಲ್ಲಿ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಒಡಮೂಡಿದ ಬದರಿನಾರಾಯಣನ ವಿಗ್ರಹವು ದೊರೆತಿತ್ತು. ಹೀಗೆ ದೊರೆತ ನಾರಾಯಣನನ್ನು ಅವರು ತಪ್ತ ಕುಂಡ ಎಂಬ ಬಿಸಿ ನೀರಿನ ಬುಗ್ಗೆ ಬಳಿಯಿರುವ ಗುಹೆಯೊಂದರಲ್ಲಿ ಪ್ರತಿಷ್ಠಾಪಿಸಿ ಪ್ರವರ್ಧಮಾನಕ್ಕೆ ಬರುವಂತೆ ಮಾಡಿದ್ದರು. ನಂತರ ಹದಿನೈದನೇಯ ಶತಮಾನದಲ್ಲಿ ಇಲ್ಲಿನ ಗಡ್ವಾಲ್ ಪ್ರಾಂತವನ್ನಾಳುತ್ತಿದ್ದ ಅರಸನು ಈ ವಿಗ್ರಹವನ್ನು ಈಗಿರುವ ದೇವಾಲಯಕ್ಕೆ ಸ್ಥಳಾಂತರಿಸಿದನು.

***

ಒಮ್ಮೆ ವಿಷ್ಣು ಲೋಕ ಕಲ್ಯಾಣಾರ್ಥವಾಗಿ ಥುಲಿಂಗ್ ಎಂಬ ಹಿಮಾಲಯ ಪರ್ವತಗಳಲ್ಲಿ ತಪಗೈಯುತ್ತಿರುವಾಗ ಅಲ್ಲಿನ ಮಾಂಸಾಹಾರಿಗಳು ಹಾಗೂ ಅಪವಿತ್ರರನ್ನು ಕುಂಡು ಬೇಸರಗೊಂಡು ಬದರಿ ಸ್ಥಳಕ್ಕೆ ಬಂದು ತಪಗೈಯಲು ಪ್ರಾರಂಭಿಸಿದ. ಆದರೆ ಈ ಸ್ಥಳದಲ್ಲಿ ವಿಷ್ಣುವಿಗೆ ಸಾಕಷ್ಟು ಚಳಿಯುಂಟಾದಾಗ ಲಕ್ಷ್ಮಿ ದೇವಿಯು ಸ್ವತಃ ಜೂಜುಬಿ/ಬೋರೆ ಕಾಯಿಯ ಗಿಡಗಳ ಕಾಡಿನ ರೂಪ ತಳೆದು ವಿಷ್ಣುವನ್ನು ಕಾಯತೊಡಗಿದಳು. ಇದರಿಂದ ಪ್ರಸನ್ನನಾದ ನಾರಾಯಣ ಬದ್ರಿಕಾ ಆಶ್ರಮ ಎಂದು ಕರೆದ.

***

ಅತ್ಯಂತ ಹಿಂದೆ ಪರಶಿವನು ತನ್ನ ಕುಟುಂಬದೊಂದಿಗೆ ಬದ್ರಿನಾಥದಲ್ಲಿ ವಾಸಿಸುತ್ತಿದ್ದನಂತೆ. ಒಮ್ಮೆ ಶ್ರೀಹರಿಯು ತಾನು ಏಕಾಂತವಾಗಿ ಧ್ಯಾನ ಮಾಡಲು ಪ್ರಶಾಂತ ಸ್ಥಳವನ್ನು ಹುಡುಕುತ್ತಿರುವಾಗ ಶ್ರೀಹರಿಗೆ ಬಲು ಇಷ್ಟವಾಗಿದ್ದು ಇದೇ ಬದ್ರಿನಾಥ. ಆದರೆ ಶ್ರೀಹರಿ ವಿಷ್ಣುವಿಗೆ ಬದ್ರಿನಾಥ ದೇವಾಲಯದಲ್ಲಿ ಪರಶಿವನು ನೆಲೆಸಿದ್ದಾನೆನ್ನುವುದು ತಿಳಿದಿತ್ತು ಆದ್ದರಿಂದ ಪರಶಿವನನ್ನು ಅಲ್ಲಿಂದ ಬೇರೆಡೆಗೆ ಕಳುಹಿಸಲು ಉಪಾಯವೊಂದನ್ನು ಹೂಡಿದನು. 

ವಿಷ್ಣುವು ಮಗುವಿನ ಅವತಾರವನ್ನು ಧರಿಸಿ ಬದ್ರಿನಾಥದಲ್ಲಿ ಜೋರಾಗಿ ಅಳಲು ಆರಂಭಿಸಿದನು. ಪುಟ್ಟ ಮಗು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಂಡ ಪಾರ್ವತಿಯು ಆ ಮಗುವನ್ನು ಸಮಾಧಾನಗೊಳಿಸಲು ಮುಂದಾದಳು ಆದರೆ ಮಗುವಿನ ರೂಪದಲ್ಲಿದ್ದ ವಿಷ್ಣು ಸಮಾಧಾನಗೊಳ್ಳದೇ ಮತ್ತಷ್ಟು ಜೋರಾಗಿ ಅಳತೊಡಗಿದನು. ಪಾರ್ವತಿಗೆ ಆ ಮಗು ಯಾರೆಂದು ಗುರುತಿಸಲು ಸಾಧ್ಯವಾಗದಿದ್ದರೂ ಪರಶಿವನಿಗೆ ಆ ಮಗು ವಿಷ್ಣುವೇ ಎಂದು ತಿಳಿಯಿತು. ಪಾರ್ವತಿ ಮಗುವನ್ನು ಸಮಾಧಾನಗೊಳಿಸಲು ಕೋಣೆಯೊಳಗೆ ಕರೆದುಕೊಂಡು ಹೋಗುವಾಗ ಪರಶಿವನು ಬೇಡವೆಂದು ತಡೆಯುತ್ತಾನೆ. ಆದರೆ ಶಿವನ ಮಾತನ್ನು ಅಲ್ಲಗಳೆದ ಪಾರ್ವತಿಯು ಮಗುವನ್ನು ಸಮಾಧಾನಗೊಳಿಸಲು ಒಳಗೆ ಕರೆದುಕೊಂಡು ಹೋಗಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನಪಡಿಸುತ್ತಾಳೆ. ವಿಷ್ಣು ಪಾರ್ವತಿ ಹೊರಗಡೆ ಹೋಗಲೆಂದು ನಿದ್ರಿಸುವಂತೆ ನಾಟಕವಾಡುತ್ತಾನೆ. ಆಗ ಪಾರ್ವತಿಯು ಮಗು ಮಲಗಿದೆಯೆಂದು ಬಾಗಿಲಿನಿಂದ ಹೊರಗಡೆ ಹೋಗುತ್ತಾಳೆ. ಆ ಸಂದರ್ಭದಲ್ಲಿ ವಿಷ್ಣು ಬಾಗಿಲನ್ನು ಮುಚ್ಚಿ ಶಿವನಿಗೆ ಮತ್ತು ಪಾರ್ವತಿಗೆ ಕೇದರನಾಥದಲ್ಲಿ ನೆಲೆಸುವಂತೆ ಹೇಳುತ್ತಾನೆ. ಅಂದಿನಿಂದ ಬದ್ರಿನಾಥದಲ್ಲಿ ವಿಷ್ಣುವು ನೆಲೆಸುತ್ತಾನೆ. ಹಾಗೂ ಪರಶಿವನು ತನ್ನ ಕುಟುಂಬದೊಂದಿಗೆ ಕೇದರನಾಥದಲ್ಲಿ ನೆಲೆಯಾಗುತ್ತಾನೆ.

ಇನ್ನು ಪರಶಿವನು ಹಾಗೆ ಕೇದಾರಕ್ಕೆ ತೆರಳುವ ಸಮಯದಲ್ಲಿ ಇಲ್ಲಿ ತನ್ನೊಂದು ಅಂಶವನ್ನು ಉಳಿಸಿ ಹೋಗಿದ್ದು ಅದನ್ನು ಇಂದು ಆದಿ ಕೇದಾರ ಎನ್ನಲಾಗುತ್ತದೆ. ಬದರಿನಾರಾಯಣನ ದೇವಾಲಯದ ಎಡಭಾಗದಿಂದ ಸ್ವಲ್ಪ ಕೆಳಗಿಳಿದರೆ ಅಲ್ಲಿ ಆದಿ ಕೇದಾರ ಮಂದಿರವಿದ್ದು ಕೇದಾರನಾಥಕ್ಕೆ ಹೋಗಲಾಗದವರು ಇಲ್ಲಿಯೇ ದರ್ಶನ ಮಾಡಿ ಕೇದಾರನಾಥನ ದರ್ಶನ ಫಲ ಪಡೆಯಬಹುದಾಗಿದೆ. 

***

 ಒಮ್ಮೆ ಲಕ್ಷ್ಮಿ ದೇವಿಯು ತನ್ನ ತವರಿಗೆ ಹೋದಾಗ ವಿಷ್ಣುವಿಗೆ ತನ್ನ ಸತಿಯಿಲ್ಲದೇ ದಿನವನ್ನು ಹೇಗೆ ಕಳೆಯುವುದೆನ್ನುವುದರ ಕುರಿತು ಚಿಂತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವಿಷ್ಣು ಧ್ಯಾನ ಮಾಡಲು ಕುಳಿತುಕೊಳ್ಳುತ್ತಾನೆ. ಲಕ್ಷ್ಮಿಯು ತವರು ಮನೆಯಿಂದ ಹಿದಿರುಗಿ ವಿಷ್ಣುವಲ್ಲಿಗೆ ಬರುತ್ತಾಳೆ. ಆಗ ವಿಷ್ಣು ಎಲ್ಲಿಯೂ ಕೂಡ ಕಾಣಿಸುವುದಿಲ್ಲ. ಲಕ್ಷ್ಮಿ ತುಂಬಾ ಸಮಯಗಳ ಕಾಲ ಹುಡುಕಿದ ನಂತರ ವಿಷ್ಣು ಆಲದ ಮರದ ಬಳಿ ಧ್ಯಾನ ಮಾಡುತ್ತಿರುವುದನ್ನು ನೋಡುತ್ತಾಳೆ. ಆಗ ಲಕ್ಷ್ಮಿ ವಿಷ್ಣುವನ್ನು ಬದ್ರಿನಾಥ ಎನ್ನುವ ಹೆಸರಿನಿಂದ ಕೂಗಿ ಕರೆದ ಕಾರಣ  ಆ ಸ್ಥಳವು ಬದ್ರಿನಾಥವಾಗಿದೆ ಎನ್ನಲಾಯಿತು.

ಇನ್ನೊಂದು ಕಥೆಯ ಪ್ರಕಾರ ದೀರ್ಘ ಕಾಲ ನಾರಾಯಣನನ್ನು ಬಿಟ್ಟಿರಲಾಗದ ಲಕ್ಷ್ಮಿ ತಪಸ್ಸಿಗೆ ಕುಳಿತ ವಿಷ್ಣುವಿಗೆ ಆಹಾರ, ರಕ್ಷಣೆ, ನೆರಳು ನೀಡಲು ಮುಳ್ಳುಗಳಿಂದ ಕೂಡಿದ ಬದರಿ ವೃಕ್ಷವಾಗಿ ಈ ಸ್ಥಳದಲ್ಲಿ ನೆಲೆಯಾಗಿದ್ದಾಳೆ. ಆ ವೃಕ್ಷ ವಿಶಾಲವಾಗಿ ಹರಡಿಕೊಂಡು ವಿಶಾಲ ಬದರಿ ಎಂದು ಹೆಸರಾಯಿತು ಹಿಂದೆ ಕ್ಷೇತ್ರದ ತುಂಬಾ ಎಲ್ಲೆಲ್ಲೂ ಕಂಡು ಬರುತ್ತಿದ್ದ ಬದರಿ ವೃಕ್ಷ ಇಂದು ಲಕ್ಷ್ಮಿ ಸ್ತಂಭ ಎನ್ನುವ ಗುರುತಿನಲ್ಲಿ ಮಾತ್ರವೇ ಉಳಿದುಕೊಂಡಿದೆ. 

***

ಕ್ಷೇತ್ರಪಾಲ ಘಂಟಾಕರ್ಣ


ಬದರಿ ಕ್ಷೇತ್ರದ ಕ್ಷೇತ್ರಪಾಲ ಘಂಟಕರ್ಣನ ಕಥೆ ಸಹ ಸ್ವಾರಸ್ಯವಾಗಿದೆ. ಘಂತಕರ್ಣ ಒಬ್ಬ ರಾಕ್ಷಸನಾಗಿದ್ದು ಅವನು ರಾಮಾಯಣದಲ್ಲಿ ಬರುವ ರಾವಣನಂತೆ ಶಿವಭಕ್ತನಾಗಿದ್ದನು. ಅವನು ಶಿವನನ್ನು ಕುರಿತು ಸಾವಿರಾರು ವರ್ಷ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾನೆ. ಆಗ ಅವನಿಗೆ ಶಿವನು ಪ್ರತ್ಯಕ್ಷ್ಯವಾಗಿ "ವರವೇನು ಬೇಕು" ಎಂದು ಕೇಳಲು ತನಗೆ ಮುಕ್ತಿ ಕರುಣಿಸು ಎನ್ನುತ್ತಾನೆ. ಆದರೆ ಶಿವನು ಈ ಬದರಿ ಕ್ಷೇತ್ರವು ನಾರಾಯಣನಿಗೆ ಸೇರಿದೆ, ನಾನು ಇಲ್ಲಿ ನಿನಗೆ ಮುಕ್ತಿ ಕೊಡುವ ಅಧಿಕಾರ ಹೊಂದಿಲ್ಲ. ಅದಕ್ಕಾಗಿ ನೀನು ನಾರಾಯಣನ್ನ್ನು ಕೇಳಿಕೊಳ್ಲಬೇಕು ಎಂದಾಗ ಘಂಟಾಕರ್ಣನಿಗೆ ನಾರಾಯಣನನ್ನು ಕೇಳಲು ಮನಸ್ಸಾಗುವುದಿಲ್ಲ ಆಗ ಶಿವನು ಹಾಗಿದ್ದರೆ ನೀನಿಲ್ಲಿ ಕ್ಷೇತ್ರಪಾಲಕನಾಗಿ ಇರುವವನಾಗು ಎಂದಾಗ ಅವನು ಅದಕ್ಕೆ ಒಪ್ಪಿ ಇಲ್ಲಿಯ ಕ್ಷೇತ್ರಪಾಲಕನಾಗುತ್ತಾನೆ.  ವಿಷ್ಣುವಿನ ಶತ್ರುವಾಗಿದ್ದ ಘಂಟಾಕರ್ಣ ವಿಷ್ಣುವಿನ ಹೆಸರು ಕೇಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ  ಯಾವಾಗಲೂ ತನ್ನ ಕಿವಿಗಳಿಗೆ ಗಂಟೆ ಕಟ್ಟಿಕೊಂಡು ಓಡಾಡುತ್ತಿದ್ದನು. ಮತ್ತು ಈ ರೀತಿಯಾಗಿ ಕಿವಿಗಳಿಗೆ ಗಂಟೆ ಕಟ್ಟಿಕೊಂಡ ಕಾರಣ ಅವನಿಗೆ ಘಂಟಾಕರ್ಣ ಎನ್ನುವ ಹೆಸರಾಗಿದೆ. 

ಇನ್ನು ಈ ಘಂಟಾಕರ್ಣನ ಜನನದ ಬಗ್ಗೆ ಹೇಳುವುದಾದರೆ ದಾರುಕನು ಬ್ರಹ್ಮನಿಂದ ವರವನ್ನು ಪಡೆದ ನಂತರ , ಲೋಕಕ್ಕೆ ತುಂಬಾ ಕಿರುಕುಳ ಕೊಡುತ್ತಿದ್ದನು ಮತ್ತು ಅವನ ಉಪಟಳ ಅಸಹನೀಯವಾದಾಗ ಶಿವನು ತನ್ನ ಮೂರನೇ ಕಣ್ಣಿನಿಂದ ಭದ್ರಕಾಳಿಯನ್ನು ಸೃಷ್ಟಿಸಿದನು ಮತ್ತು ಅವಳು ಅಸುರನನ್ನು ಕೊಂದಳು . ದಾರುಕನ ಪತ್ನಿ ಮತ್ತು ಮಾಯಾಳ ಮಗಳು ಮಂಡೋದರಿ ತನ್ನ ಪತಿಯ ಮರಣದಿಂದ ದುಃಖದಲ್ಲಿ ಮುಳುಗಿದಳು. ಅವಳು ತಪಸ್ಸನ್ನು ಮಾಡಲು ಪ್ರಾರಂಭಿಸಿದಳು . ಶಿವನು ಕಾಣಿಸಿಕೊಂಡು ತನ್ನ ದೇಹದಿಂದ ಕೆಲವು ಹನಿ ಬೆವರನ್ನು ಅವಳಿಗೆ ಕೊಟ್ಟನು, ಅವಳು ಯಾರ ಮೇಲೆ ಬೆವರು ಹನಿಗಳನ್ನು ಸಿಂಪಡಿಸುತ್ತಾಳೋ ಅವರು ಸಿಡುಬಿನಿಂದ ಬಳಲುತ್ತಾರೆ ಮತ್ತು ಅಂತಹ ರೋಗಿಗಳು ಅವಳನ್ನು (ಮಂಡೋದರಿ) ಪೂಜಿಸುತ್ತಾರೆ ಮತ್ತು ಅವಳಿಗೆ ಅಗತ್ಯವಾದ ಆಹಾರವನ್ನು ನೀಡುತ್ತಾರೆ  ಎಂದು ಹೇಳಿದನು. ಆ ದಿನದಿಂದ ಮಂಡೋದರಿ ಸಿಡುಬಿನ ಅಧಿದೇವತೆಯಾದಳು. ಬೆವರಿನ ಹನಿಗಳೊಂದಿಗೆ ಭೂಮಿಗೆ ಹಿಂತಿರುಗುವಾಗ ಮಂಡೋದರಿ ಭದ್ರಕಾಳಿಯನ್ನು ಭೇಟಿಯಾದಳು, ಅವಳ ಗಂಡನ ಸಾವಿಗೆ ಸೇಡು ತೀರಿಸಿಕೊಳ್ಳಲು ಅವಳು ಆ ಬೆವರಿನ ಹನಿಗಳನ್ನು ಎಸೆದಳು. ತಕ್ಷಣವೇ ಭದ್ರಕಾಳಿ ಸಿಡುಬಿನ ದಾಳಿಯಿಂದ ಕೆಳಗೆ ಬಿದ್ದಳು. ಈ ಘಟನೆಯ ಬಗ್ಗೆ ಕೇಳಿದ ಶಿವನು ಘಂಟಾಕರ್ಣ ಎಂಬ ಭಯಾನಕ ರಾಕ್ಷಸನನ್ನು ಸೃಷ್ಟಿಸಿದನು. ಶಿವನ ನಿರ್ದೇಶನದ ಪ್ರಕಾರ ಘಂಟಾಕರ್ಣ ಭದ್ರಕಾಳಿಯ ದೇಹದಿಂದ ಸಿಡುಬನ್ನು ನೆಕ್ಕಿದನು. ಆದರೆ, ಅವನು ಅದನ್ನು ಆಕೆಯ ಮುಖದಿಂದ ನೆಕ್ಕಲು ಪ್ರಯತ್ನಿಸಿದಾಗ ಅವಳು ಅವನನ್ನು ತಡೆದಳು, ತಾನು ಮತ್ತು ಘಂಟಾಕರ್ಣ ಸೋದರ್ ಸೋದರಿಯರು ಮತ್ತು ಸೋದರಿಯ ಮುಖವನ್ನು ಸೋದರ  ನೆಕ್ಕುವುದು ಅನುಚಿತ ಎಂದು ಹೇಳಿದಳು. ಮತ್ತು, ಇಂದಿಗೂ ಸಹ ಭದ್ರಕಾಳಿಯ ಮುಖದ ಮೇಲಿನ ಸಿಡುಬು ಅವಳಿಗೆ ಆಭರಣವಾಗಿ ಉಳಿದಿದೆ.

ದ್ವಾಪರ ಯುಗದಲ್ಲಿ ಕೃಷ್ಣನು ಕ್ಷೇತ್ರ ಪರ್ಯಟನೆಯ ನಿಮಿತ್ತ ಬದರಿ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಘಂಟಾಕರ್ಣನ ಬೇಟಿಯಾಗುತ್ತದೆ. ಅವನು ಕೃಷ್ಣನಿಗೆ ತಾನು ನಾರಾಯಣನ ದರ್ಶನ ಪಡೆಯಬೇಕು ಎನ್ನುವ ಉದ್ದೇಶ ಹೊಂದಿದ್ದಾಗಿ ಹೇಳುತ್ತಾನೆ. ಅದಕಾಗಿ ಅವನು ರಾಕ್ಷಕಸರು ಸಾಮಾನ್ಯವಾಗಿ ನೀಡುವ ಅತ್ಯುನ್ನತ ಗೌರವದ ಉಡುಗೊರೆಯಾದ ಸತ್ತ ಬ್ರಾಹ್ಮಣನ ಅರ್ಧ ಶವವನ್ನು ಕೃಷ್ಣನಿಗೆ ಅರ್ಪಿಸುತ್ತಾನೆ. ಅದರಿಂದ ಸಂತುಷ್ಟನಾದ ಕೃಷ್ಣ ಅವನ ಬೆನ್ನಿನ ಮೇಲೆ ತಟ್ಟುತ್ತಾನೆ. ಅದರಿಂದಾಗಿ ಘಂಟಾಕರ್ಣ ತನ್ನ ದೇಹವನ್ನು ತ್ಯಜಿಸಿ ವೈಕುಂಠಕ್ಕೆ ತೆರಳುತ್ತಾನೆ ಮುಕ್ತಿ ಪಡೆಯುತ್ತಾನೆ ಎಂದು ಭವಿಷ್ಯ ಪುರಾಣ ಕಥೆ ಹೇಳಿದೆ. ಹೀಗೆ ರಾಕ್ಷಸನೊಬ್ಬ ದೇವತೆಯಾಗಿ ಬದಲಾಗಿ ಇಂದಿಊ ಸಿಡುಬನ್ನು ಗುಣಪಡಿಸುತ್ತಾನೆ ಎಂದು ನಂಬಲಾಗುತ್ತದೆ.


Friday, June 27, 2025

ಬೆಂಗಳೂರಿನಲ್ಲಿ ಮನರಂಜನೆಯ ಹೊಸ ಯುಗಾರಂಭ

 ಯಲಹಂಕದ ಕರ್ಮ & ಕರಿಯಲ್ಲಿ ಇಮ್ಮರ್ಸಿವ್ ಇಂಡೀ ಫಿಲ್ಮ್ ಪಾಪ್-ಅಪ್ ಜೊತೆ ಎಲ್ಲೆಲ್ಲೂ ಮನರಂಜನೆ ಜಾರಿ

ಜೂನ್ 27, 2025 ರಂದು, ಎಂಟರ್ಟೈನ್ಮೆಂಟ್ ಎವ್ರಿವೇರ್ (ಇಇ) ಯಲಹಂಕದ ಕರ್ಮ & ಕರಿಯಲ್ಲಿ ಆಯೋಜಿಸಲಾದ ವಿಶೇಷ ಪಾಪ್-ಅಪ್ ಕಾರ್ಯಕ್ರಮದೊಂದಿಗೆ ತನ್ನ ಕ್ರಾಂತಿಕಾರಿ ಚಲನಚಿತ್ರ ಪ್ರದರ್ಶನ ವೇದಿಕೆಯನ್ನು ಅಧಿಕೃತವಾಗಿ ಪ್ರಾರಂಭಿಸಿತು. ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಉಪಕ್ರಮವಾದ ಈ ಕಾರ್ಯಕ್ರಮವು, ಸ್ವತಂತ್ರ ಸಿನಿಮಾವನ್ನು ಹೇಗೆ ಪ್ರೇಕ್ಷಕರಿಗೆ ನಿಕಟವಾಗಿ, ಪರಿಣಾಮಕಾರಿಯಾಗಿ ಮತ್ತು ಸಾಂಪ್ರದಾಯಿಕ ಸ್ಥಳಗಳ ನಿರ್ಬಂಧಗಳಿಲ್ಲದೆ ಅನುಭವಿಸಬಹುದು ಎಂಬುದರ ದಿಟ್ಟ ಮರುಕಲ್ಪನೆ ಆಗಿದೆ.


ಕೇವಲ 25 ವಿಐಪಿ ಅತಿಥಿಗಳಿಗೆ ಸೀಮಿತವಾದ ಈ ಸಂಜೆ, ನೆಹೇಶ್ ಪೋಲ್ ನಿರ್ದೇಶಿಸಿದ ಇಟ್ಸ್ ಅಬೌಟ್ ಚಾಯ್ಸಸ್ ಮತ್ತು ಜಾಗತಿಕವಾಗಿ ಮೆಚ್ಚುಗೆ ಪಡೆದ ಕ್ಲಿಂಗ್ ಜಾನ್ಸನ್ ನಿರ್ದೇಶಿಸಿದ ದ್ವಮದ್ವ  ಎಂಬ ಎರಡು ಸ್ವತಂತ್ರ ಚಲನಚಿತ್ರಗಳನ್ನು ಒಳಗೊಂಡ ಬಹು-ಸಂವೇದನಾಶೀಲ ಸಿನಿಮೀಯ ಅನುಭವವನ್ನು ನೀಡಿತು. ಅತಿಥಿಗಳಿಗೆ ಹೆಚ್ಚಿನ ಗುಣಮಟ್ಟವುಳ್ಳ  ವೈರ್ಲೆಸ್ ಹೆಡ್ ಫೋನ್ ಗಳನ್ನು ನೀಡಿ ಅವರನ್ನು ಸುತ್ತಲಿನ ಗದ್ದಲಿಂದಾಚೆ ನಿಶ್ಯಬ್ದ ಪ್ರಪಂಚದೊಡನೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಯಿತು. ಇದರೊಂದಿಗೆ ಸ್ವಾದಿಷ್ಟ ಆಹಾರ, ಪಾನೀಯದೊಂದಿಗೆ ಚರ್ಚೆಗೆ ಸಹ ಅವಕಾಶಇತ್ತು.. ಇದರ ಫಲಿತಾಂಶವಾಗಿ ಆಯಾವ್ ವ್ಯಕ್ತಿಗಳಿಗೆ ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿವಿಶೇಷವಾಗಿ  ತೊಡಗಿಸಿಕೊಳ್ಳುವ ಭಾವನೆ ಮೂಡಿಸುವ ಸಿನಿಮೀಯ ಅನುಭವ ಸಿಕ್ಕಿತು.

“ಎಂಟರ್ಟೈನ್ಮೆಂಟ್ ಎವೆರಿವೇರ್ ಚಲನಚಿತ್ರ ನಿರ್ಮಾಪಕರನ್ನು ಅವರ ಪ್ರೇಕ್ಷಕರೊಂದಿಗೆ ಸಂಪರ್ಕಿಸುವ ಮೂಲಕ ಅವರ ಬಲವರ್ಧಿಸುವ  ಗುರಿಯನ್ನು ಹೊಂದಿದೆ ಮತ್ತು ಮಾರುಕಟ್ಟೆಯಲ್ಲಿರುವ ವಿಪರೀತ ಸ್ಪರ್ಧೆಯ ನಡುವೆ  ಸ್ವತಂತ್ರ ಚಲನಚಿತ್ರಗಳಿಗೆ ಮೀಸಲಾದ ಸ್ಥಳವನ್ನು ಇಲ್ಲಿ ಒದಗಿಸುತ್ತದೆ, ಚಲನಚಿತ್ರ ನಿರ್ಮಾಪಕರು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ಪ್ರದರ್ಶಿಸಲು ತಾವು ಸ್ಥಳವನ್ನು ಹುಡುಕುತ್ತಿದ್ದರೆ ಅಂಥವರಿಗೆ ಈ ಸಂಸ್ಥೆ  ಪ್ರೋತ್ಸಾಹಿಸುತ್ತದೆ” ಎಂದು ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಮಾಲೀಕ ಶ್ರೀ ನೆಹೇಶ್ ಪೌಲ್ ಹೇಳಿದರು. “ನಮ್ಮ ಚಲನಚಿತ್ರಗಳನ್ನು ಪ್ರದರ್ಶಿಸುವ ಬಯಕೆಯಿಂದ ಎಂಟರ್ಟೈನ್ಮೆಂಟ್ ಎವ್ರಿವೇರ್ ಹುಟ್ಟಿಕೊಂಡಿತು. ನಮಗೆ ಸೂಕ್ತವಾದ  ಅವಕಾಶ ಸಿಗದಿದ್ದಾಗ, ನಾವು ನಮ್ಮದೇ ಆದ ಅವಕಾಶವನ್ನು  ಸೃಷ್ಟಿಸಲು ನಿರ್ಧರಿಸಿದೆವು ಮತ್ತು ಎಂಟರ್ಟೈನ್ಮೆಂಟ್ ಎವೆರಿವೇರ್ ಹೀಗೆ ಅಸ್ತಿತ್ವಕ್ಕೆ ಬಂದಿತು” ಎಂದು ಅವರು ಹೇಳಿದರು. "ಪ್ರೇಕ್ಷಕರು ಉಲ್ಲಿ ಸಾವಿರ ರೂ. ಪಾವತಿಸಿ ಎರಡು ಸಿನಿಮಾ ವೀಕ್ಷಿಸುವದರ ಜೊತೆಗೆ ತಮಗಿಷ್ತವಾದ ಆಹಾರ, ಪಾನೀಯ ಸಹ ಪಡೆಯುವ ಅವಕಾಶವಿದೆ. ಹಾಗಾಗಿ ಇಲ್ಲಿ ಮನರಂಜನೆಯ ಜೊತೆ ಜೊತೆಗೆ ಹಸಿವನ್ನು ಸಹ ನೀಗಿಸುವ ಉದ್ದೇಶವಿದೆ" ಎಂದು ಅವರು ವಿವರಿಸಿದ್ದಾರೆ.  

"ನಮ್ಮಲ್ಲಿ ಬೇರೆ ಕಡೆಗಳಲ್ಲಿ ಪ್ರದರ್ಶನಕ್ಕೆ ಸರಿಯಾದ ವ್ಯವಸ್ಥೆ ಕಾಣದೆ ನಿರಾಶರಾದ ಚಿತ್ರ ತಯಾರಕರು ನಮ್ಮಲ್ಲಿಗೆ ಬಂದರೆ ಅವರಿಗೆ ಸ್ಕ್ರೀನಿಂಗ್ ಗೆ ಅವಕಾಶ ಕಲ್ಪಿಸಿಕೊಟ್ಟು ಪ್ರೇಕ್ಷಕರಿಗೆ ಅವರ ಚಿತ್ರ ತಲುಪಿಸಲಾಗುತ್ತದೆ. ಅಲ್ಲದೆ ನಮ್ಮಲ್ಲಿ ಹಲವು ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನವೂ ಇರುತ್ತದೆ." ಎಂದರು. 

ಕೆಫೆಗಳು ಮತ್ತು ಓಪನ್ ಟೆರೇಸ್ ಮೈಕ್ರೋಬ್ರೂವರಿ ಮತ್ತು ಗ್ಯಾಲರಿಗಳ ವರೆಗೆ ಯಾವುದೇ ಜಾಗವನ್ನು ಮೊಬೈಲ್ ಸಿನೆಮಾ ಹಾಲ್ ಆಗಿ ಪರಿವರ್ತಿಸಲು ಎಂಟರ್ಟೈನ್ಮೆಂಟ್ ಎವೆರಿವೇರ್ ವಿಶಿಷ್ಟ ಮಾದರಿಯು ತಂತ್ರಜ್ಞಾನ, ಸೃಜನಶೀಲತೆ ಮತ್ತು ಆತಿಥ್ಯವನ್ನು ಜೊತೆಗೂಡಿಸುತ್ತದೆ. ಪ್ರೇಕ್ಷಕರಿಗೆ . ವೀಕ್ಷಣಾ ಅನುಭವವನ್ನು ಮರಳಿ ಪಡೆಯುವ ಧ್ಯೇಯದೊಂದಿಗೆ, ವೇದಿಕೆಯು  ಶಬ್ದಮಾಲಿನ್ಯ,, ಹೊರಗಿನ ಗದ್ದಲ ಮತ್ತು ಸ್ಕ್ರೀನಿಂಗ್ ಮಾಡಲು ಇರಬಹುದಾದಂತಹಾ  ಸಾಂಪ್ರದಾಯಿಕ ಅಡೆತಡೆಗಳನ್ನು ನಿವಾರಿಸುತ್ತದೆ.

ರಾಡಿಕಲ್ ಕಾನ್ಸೆಪ್ಟ್ಸ್ ಸ್ಟುಡಿಯೋದ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಎಂಟರ್ಟೈನ್ಮೆಂಟ್ ಎವೆರಿವೇರ್ ನ ಸಹ-ಸಂಸ್ಥಾಪಕಿ ಅಕ್ಷರಾ ಸುರೇಶ್ ತಮ್ಮ ಸಂಥೆಯ ಮೂಲ ಉದ್ದೇಶವನ್ನು ಹಂಚಿಕೊಂಡರು. ”ಕೇವಲ ಸ್ಕ್ರೀನಿಂಗ್ ಮಾಡುವುದು ನಮ್ಮ ಗುರಿಯಲ್ಲ, ಕಥೆ ಹೇಳುವ ಪರಿಸರದ ಮರುಸೃಷ್ಟಿಯೂ ಇಲ್ಲಿರಲಿದೆ. . ಎಂಟರ್ಟೈನ್ಮೆಂಟ್ ಎವೆರಿವೇರ್  ಹೆಚ್ಚಾಗಿ ಗಮಕ್ಕೆ ಬಾರದ ಆದರೆ ತಮ್ಮೊಳಗೆ ಅಪಾರ ಕಥನ ಶಕ್ತಿಯನ್ನು ಹೊಂದಿರುವ  ಚಲನಚಿತ್ರ ತಯಾರಕರು ತಮ್ಮ  ತೀಕ್ಷ್ಣವಾದ ಕಥೆಗಳು ಮತ್ತು ಅದರ ಆಳವನ್ನು ಅನುಭವಿಸಬಲ್ಲ ಪ್ರೇಕ್ಷಕರಿಗಾಗಿ. ಈ ಸಂಸ್ಥೆ ಅಸ್ತಿತ್ವದಲ್ಲಿದೆ ಮತ್ತು ಇನ್ನೂ ಹೆಚ್ಚಿನದನ್ನು ನೀಡುವುದಕ್ಕಾಗಿ ಬಯಸುತ್ತಿದೆ ಎನ್ನುವುದಕ್ಕೆ ಈ ಸಂಜೆ ಸಾಕ್ಷಿಯಾಗಿದೆ.” ಎಂದು ಹೇಳಿದರು. 


ಎಂಟರ್ಟೈನ್ಮೆಂಟ್ ಎವೆರಿವೇರ್  ಉದ್ಘಾಟನಾ ಆವೃತ್ತಿಯು ಭಾರತೀಯ ಚಲನಚಿತ್ರ ಸಂಸ್ಥೆ (www.indianfilminstitute.org)  ನೊಂದಿಗೆ ಪ್ರಮುಖ ಸಹಯೋಗವನ್ನು ಹೊಂದಿದೆ. ಇದು ಭಾರತದಾದ್ಯಂತ ಹೊಸತಾದ, ಸ್ವತಂತ್ರ ಸಿನಿಮಾ ತಯಾರಕರ ದ್ವನಿಯನ್ನು  ಪೋಷಿಸುವ ವೇದಿಕೆಯ ಬದ್ದತೆಯನ್ನು ಬಲಪಡಿಸುತ್ತದೆ.

ಎಂಟರ್ಟೈನ್ಮೆಂಟ್ ಎವೆರಿವೇರ್ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಂತೆ, ಬೆಂಗಳೂರು ನಗರ ಇದಕ್ಕೆ ತಕ್ಕ ಹಾದಿಯನ್ನು ತೋರೊಸೊದೆ/: ಇದು ಕೇವಲ ಒಂದು ಘಟನೆಯಲ್ಲ, ಇದು ಕಥೆಗಳು, ತಯಾರಕರು/ನಿರ್ಮಾಪಕರು ಮತ್ತು ವೀಕ್ಷಕರ ನಡುವೆ ಅರ್ಥಪೂರ್ಣ ಸಂವಾದಗಳನ್ನು ಸೃಷ್ಟಿಸಲು ನಿರ್ಮಿಸಲಾದ ಸಾಂಸ್ಕೃತಿಕ ಚರ್ಚಾ ವೇದಿಕೆಯಾಗಿದೆ.

Monday, June 02, 2025

ಕನ್ನಡ ಸಹಿಷ್ಣು ಭಾಷೆ; 8 ಜ್ಞಾನಪೀಠ, 1 ಬೂಕರ್ ಪ್ರಶಸ್ತಿ, ಇದು ಕನ್ನಡದ ತಾಕತ್ತು: ಬಾನು ಮುಷ್ತಾಕ್

 ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ.  ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ಬಾನು ಮುಷ್ತಾಕ್ ಅವರು ನಮ್ಮ ಭಾಷೆಗೆ ಬೂಕರ್ ಒದಗಿಸಿಕೊಡುವ ಮೂಲಕ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ನಾಡು ಹೆಮ್ಮೆ‌ಪಡುವ ಕ್ಷಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ "ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ"ಗೆ ಭಾಜನರಾಗಿ ಜಾಗತಿಕ ಮಟ್ಟದಲ್ಲಿ ಕನ್ನಡ ನಾಡು - ನುಡಿಯ ಶ್ರೇಯ ಹೆಚ್ಚಿಸಿರುವ ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿ ಅವರನ್ನು ಅಭಿನಂದಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 


ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್, ದೀಪಾ ಭಸ್ತಿ ಅವರಿಗೆ ಸರ್ಕಾರದಿಂದ ತಲಾ ₹10 ಲಕ್ಷ ಪುರಸ್ಕಾರ ನೀಡಲಾಗುವುದು. ಇದರ ಜೊತೆಗೆ ಬಾನು ಅವರ ಕತೆಗಳನ್ನು ಇಂಗ್ಲಿಷ್ ಗೆ ಪ್ರಕಟಿಸಲು, ಅನುವಾದಕ್ಕೂ ಸರ್ಕಾರದ ನೆರವು ನೀಡಲಾಗುವುದು. ಎಂದು ಅವರು ಈ ವೇಳೆ ಘೋಷಿಸಿದರು. 

ಮುಖ್ಯಂತ್ರಿಗಳ ಭಷಣದ ಪ್ರಮುಖಾಂಶಗಳು ಹೀಗಿದೆ - 

ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ. 

ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷಿ. 

ಮುಸ್ಲಿಂ ಸಮುದಾಯದ ಹೆಣ್ಣು‌ಮಕ್ಕಳ ಧ್ವನಿಯಾಗಿ ಮೌಡ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿ ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ.

ಕವಿರಾಜಮಾರ್ಗದಲ್ಲಿ ಪರಧರ್ಮ ಮತ್ತು ಪರ ವಿಚಾರಗಳನ್ನು ಸಹಾನುಭೂತಿಯಿಂದ ನೋಡಬೇಕು ಎಂದು ಕರೆ ನೀಡಿದ್ದರೆ, 

ಆದಿಕವಿ ಪಂಪ ಅವರು ಮನುಷ್ಯ ಜಾತಿ ತಾನೊಂದೇ ವಲಂ ಎಂದಿದ್ದಾರೆ, ಬಸವಣ್ಣನವರು "ಇವ ನಮ್ಮವ" ಎಂದು ಹೇಳಿದ್ದಾರೆ. ಹೆಣ್ಣಿನ ಧ್ವನಿಯಾದ ಅಕ್ಕಮಹಾದೇವಿ ಅವರೂ ಇದನ್ನೇ ಧ್ವನಿಸಿದ್ದಾರೆ. ಇವರೆಲ್ಲರ ಆಶಯಗಳ ಮುಂದುವರಿಕೆಯಾಗಿ ಬಾನು ಮುಷ್ತಾಕ್ ಕೆಲಸ ಮಾಡಿದ್ದಾರೆ.

ಇಂಥದ್ದೊಂದು ಮೇರು ಪ್ರಶಸ್ತಿಗೆ ಭಾಜನರಾದ ಬಾನು ಅವರನ್ನು ಸನ್ಮಾನಿಸುವುದು ಕನ್ನಡಿಗನಾಗಿ ನನಗೆ ಸಂತೋಷದ ವಿಷಯ. ಇಂತಹ ಇನ್ನಷ್ಟು ಬರಹಗಳು ಅವರಿಂದ ಹೊರಬರಲಿ ಎಂದು ಹಾರೈಸುತ್ತೇನೆ.


ಕನ್ನಡ ಸಹಿಷ್ಣು ಭಾಷೆ;

 ಕರ್ನಾಟಕದಲ್ಲಿ ಇತರ ಭಾಷೆಗಳ ಬಗ್ಗೆ ಅಸಹಿಷ್ಣುತೆ ಏಕೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ಆಗಾಗ್ಗೆ ಕೇಳುತ್ತವೆ. ಅದಕ್ಕೆ ನಾನು ಕನ್ನಡದ ಬಗ್ಗೆ ನಿಮ್ಮ ತಿಳುವಳಿಕೆ ತಪ್ಪು. ಕನ್ನಡದಷ್ಟು ಸಹಿಷ್ಣು ಭಾಷೆ ಇನ್ನೊಂದಿಲ್ಲ. ಇದು ಇತರ ಅನೇಕರಿಗೆ ವೇದಿಕೆಯನ್ನು ನೀಡಿದ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಒಂದು ಬೂಕರ್ ಪ್ರಶಸ್ತಿಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಕನ್ನಡ ಭಾಷೆ ಹೊಂದಿದೆ ಎಂದು ಮುಷ್ತಾಕ್ ಹೇಳಿದರು.

ಕಮಲ್ ಹಾಸನ್ ವಿವಾದಕ್ಕೆ ಇದೇ ನನ್ನ ಉತ್ತರ

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬೂಕರ್ ವಿಜೇತ ಖ್ಯಾತ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಪತ್ರಕರ್ತರು ಪ್ರಶ್ನಿಸಿದ್ರು. ಈ ವೇಳೆ ಮಾತನಾಡಿದ ಅವರು, ನಾನು ಅದಕ್ಕೆ ಉತ್ತರ ಹೇಳಿದ್ದೇನೆ. ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿದೆ, ಒಂದು ಬೂಕರ್ ಪ್ರಶಸ್ತಿ ಸಿಕ್ಕಿದೆ, ಇದೇ ಅವರ ಹೇಳಿಕೆಗೆ ಉತ್ತರ ಎನ್ನುವ ಮೂಲಕ ಕಮಲ್ ಹಾಸನ್‌ಗೆ ತಿರುಗೇಟು ನೀಡಿದ್ದಾರೆ.