Monday, June 02, 2025

ಕನ್ನಡ ಸಹಿಷ್ಣು ಭಾಷೆ; 8 ಜ್ಞಾನಪೀಠ, 1 ಬೂಕರ್ ಪ್ರಶಸ್ತಿ, ಇದು ಕನ್ನಡದ ತಾಕತ್ತು: ಬಾನು ಮುಷ್ತಾಕ್

 ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ.  ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ಬಾನು ಮುಷ್ತಾಕ್ ಅವರು ನಮ್ಮ ಭಾಷೆಗೆ ಬೂಕರ್ ಒದಗಿಸಿಕೊಡುವ ಮೂಲಕ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಇದು ಇಡೀ ಕನ್ನಡ ನಾಡು ಹೆಮ್ಮೆ‌ಪಡುವ ಕ್ಷಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ "ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ"ಗೆ ಭಾಜನರಾಗಿ ಜಾಗತಿಕ ಮಟ್ಟದಲ್ಲಿ ಕನ್ನಡ ನಾಡು - ನುಡಿಯ ಶ್ರೇಯ ಹೆಚ್ಚಿಸಿರುವ ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿ ಅವರನ್ನು ಅಭಿನಂದಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 


ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್, ದೀಪಾ ಭಸ್ತಿ ಅವರಿಗೆ ಸರ್ಕಾರದಿಂದ ತಲಾ ₹10 ಲಕ್ಷ ಪುರಸ್ಕಾರ ನೀಡಲಾಗುವುದು. ಇದರ ಜೊತೆಗೆ ಬಾನು ಅವರ ಕತೆಗಳನ್ನು ಇಂಗ್ಲಿಷ್ ಗೆ ಪ್ರಕಟಿಸಲು, ಅನುವಾದಕ್ಕೂ ಸರ್ಕಾರದ ನೆರವು ನೀಡಲಾಗುವುದು. ಎಂದು ಅವರು ಈ ವೇಳೆ ಘೋಷಿಸಿದರು. 

ಮುಖ್ಯಂತ್ರಿಗಳ ಭಷಣದ ಪ್ರಮುಖಾಂಶಗಳು ಹೀಗಿದೆ - 

ಪತ್ರಕರ್ತೆಯಾಗಿ, ಲೇಖಕಿಯಾಗಿ, ವಕೀಲರಾಗಿ, ಹೋರಾಟಗಾರ್ತಿಯಾಗಿ ಸಮಾಜದಲ್ಲಿ ತೊಡಗಿಸಿಕೊಂಡಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಯ ಶಕ್ತಿ. 

ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಬರೆಯುತ್ತಲೇ, ವಕೀಲೆಯಾಗಿ ಬಡವರ ಪರ ವಕಾಲತ್ತು ವಹಿಸುತ್ತಾ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿರುವುದೇ ಬಾನು ಮುಷ್ತಾಕ್ ಅವರ ಬರವಣಿಗೆಗಳಲ್ಲಿ ಸಮಾಜಮುಖಿ ಸತ್ವ ಇದೆ ಎನ್ನುವುದಕ್ಕೆ ಸಾಕ್ಷಿ. 

ಮುಸ್ಲಿಂ ಸಮುದಾಯದ ಹೆಣ್ಣು‌ಮಕ್ಕಳ ಧ್ವನಿಯಾಗಿ ಮೌಡ್ಯ ವಿರೋಧಿಸಿ ಬರೆಯುವ ಪ್ರಗತಿಪರ ಎದೆಗಾರಿಕೆ ಬಾನು ಅವರಲ್ಲಿದೆ. ಸಾಹಿತ್ಯದ ಮೂಲಕ ಮಾನವೀಯ ಸಂದೇಶ ನೀಡುವ ಜವಾಬ್ದಾರಿ ಬಾನು ಮುಷ್ತಾಕ್ ಅವರು ನಿರ್ವಹಿಸಿದ್ದಾರೆ.

ಕವಿರಾಜಮಾರ್ಗದಲ್ಲಿ ಪರಧರ್ಮ ಮತ್ತು ಪರ ವಿಚಾರಗಳನ್ನು ಸಹಾನುಭೂತಿಯಿಂದ ನೋಡಬೇಕು ಎಂದು ಕರೆ ನೀಡಿದ್ದರೆ, 

ಆದಿಕವಿ ಪಂಪ ಅವರು ಮನುಷ್ಯ ಜಾತಿ ತಾನೊಂದೇ ವಲಂ ಎಂದಿದ್ದಾರೆ, ಬಸವಣ್ಣನವರು "ಇವ ನಮ್ಮವ" ಎಂದು ಹೇಳಿದ್ದಾರೆ. ಹೆಣ್ಣಿನ ಧ್ವನಿಯಾದ ಅಕ್ಕಮಹಾದೇವಿ ಅವರೂ ಇದನ್ನೇ ಧ್ವನಿಸಿದ್ದಾರೆ. ಇವರೆಲ್ಲರ ಆಶಯಗಳ ಮುಂದುವರಿಕೆಯಾಗಿ ಬಾನು ಮುಷ್ತಾಕ್ ಕೆಲಸ ಮಾಡಿದ್ದಾರೆ.

ಇಂಥದ್ದೊಂದು ಮೇರು ಪ್ರಶಸ್ತಿಗೆ ಭಾಜನರಾದ ಬಾನು ಅವರನ್ನು ಸನ್ಮಾನಿಸುವುದು ಕನ್ನಡಿಗನಾಗಿ ನನಗೆ ಸಂತೋಷದ ವಿಷಯ. ಇಂತಹ ಇನ್ನಷ್ಟು ಬರಹಗಳು ಅವರಿಂದ ಹೊರಬರಲಿ ಎಂದು ಹಾರೈಸುತ್ತೇನೆ.


ಕನ್ನಡ ಸಹಿಷ್ಣು ಭಾಷೆ;

 ಕರ್ನಾಟಕದಲ್ಲಿ ಇತರ ಭಾಷೆಗಳ ಬಗ್ಗೆ ಅಸಹಿಷ್ಣುತೆ ಏಕೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ಆಗಾಗ್ಗೆ ಕೇಳುತ್ತವೆ. ಅದಕ್ಕೆ ನಾನು ಕನ್ನಡದ ಬಗ್ಗೆ ನಿಮ್ಮ ತಿಳುವಳಿಕೆ ತಪ್ಪು. ಕನ್ನಡದಷ್ಟು ಸಹಿಷ್ಣು ಭಾಷೆ ಇನ್ನೊಂದಿಲ್ಲ. ಇದು ಇತರ ಅನೇಕರಿಗೆ ವೇದಿಕೆಯನ್ನು ನೀಡಿದ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಒಂದು ಬೂಕರ್ ಪ್ರಶಸ್ತಿಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಕನ್ನಡ ಭಾಷೆ ಹೊಂದಿದೆ ಎಂದು ಮುಷ್ತಾಕ್ ಹೇಳಿದರು.

ಕಮಲ್ ಹಾಸನ್ ವಿವಾದಕ್ಕೆ ಇದೇ ನನ್ನ ಉತ್ತರ

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬೂಕರ್ ವಿಜೇತ ಖ್ಯಾತ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಪತ್ರಕರ್ತರು ಪ್ರಶ್ನಿಸಿದ್ರು. ಈ ವೇಳೆ ಮಾತನಾಡಿದ ಅವರು, ನಾನು ಅದಕ್ಕೆ ಉತ್ತರ ಹೇಳಿದ್ದೇನೆ. ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿದೆ, ಒಂದು ಬೂಕರ್ ಪ್ರಶಸ್ತಿ ಸಿಕ್ಕಿದೆ, ಇದೇ ಅವರ ಹೇಳಿಕೆಗೆ ಉತ್ತರ ಎನ್ನುವ ಮೂಲಕ ಕಮಲ್ ಹಾಸನ್‌ಗೆ ತಿರುಗೇಟು ನೀಡಿದ್ದಾರೆ.

No comments:

Post a Comment