Wednesday, August 27, 2025

ನಮ್ಮಲ್ಲಿನ ಸ್ಥಳ ಪುರಾಣಗಳು (Mythes)- 128

 ಕೊಳನಕಲ್ ಮಹಾಗಣಪತಿ ದೇವಸ್ಥಾನ..(Kolanakal Mahaganapati Temple)


ಬೃಹತ್ ಬಂಡೆಯ ಮೇಲೊಂದು ಕೊಳ ಅಲ್ಲೊಂದು ಸುಂದರ ದೇಗುಲ ಇದು ಕುಂದಾಪುರ ತಾಲೂಕಿನಲ್ಲಿರುವ ಕೊಳನಕಲ್ ಮಹಾಗಣಪತಿ ದೇವಸ್ಥಾನ..
ಮಹಾಗಣಪತಿ ದೇವಸ್ಥಾನ ಕೊಳನಕಲ್ಲು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿರುವ ಪ್ರಕೃತಿದತ್ತವಾದ ಪುರಾತನ ದೇವಾಲಯ. ಈ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಗಣಪತಿಯ ಮಹಿಮೆ ಅಪಾರ. ಸಂಕಷ್ಟಿ , ಸಂಕ್ರಮಣ ದಿನಗಳಲ್ಲಿ ಅಪಾರ ಭಕ್ತಾಬಿಮಾನಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಾರೆ. ದೇವಾಲಯವು ಬ್ರಹತ್ ಕಲ್ಲು ಬಂಡೆಯ ಮೇಲೆ ಸ್ಥಾಪಿತವಾಗಿದೆ. ಈ ಬಂಡೆಯ ಆನೆಯ ಆಕಾರ ಹೊಂದಿದ್ದು ನೆಲದ ಮೇಲೆ ನೀರು ಇಲ್ಲದ ಈ ಕಾಲದಲ್ಲಿ ಕಲ್ಲು ಬಂಡೆಯ ಮೇಲೆ ಸದಾ ಕಾಲ ನೀರು ಇರುವುದು ಇಲ್ಲಿಯ ವಿಶೇಷ ಈ ಕಾರಣಕ್ಕಾಗಿಯೇ "ಕೊಳನಕಲ್ಲು" ಎಂದು ಪ್ರಸಿದಿಯಾಗಿದೆ. ಅಭಿವೃದ್ಧಿಯ ಹೊಸ್ತಿಲಲ್ಲಿರುವ ಈ ದೇವಾಲಯಕ್ಕೆ ಭಕ್ತರ ಸಂಖ್ಯೆ ದಿನ ದಿನಕ್ಕೆ  ಏರುತ್ತಿದೆ.,
ಕೊಳ  ಕಲ್ಲು - ಕೊಳವನ್ನು ಹೊಂದಿರುವ ದೈತ್ಯ ಬಂಡೆಯ ಮೇಲೆ ಗಣೇಶನ ಗರ್ಭಗುಡಿ ಇದೆ. ಹಾಗಾಗಿ ಇದಕ್ಕೆ ಕೊಳಂಕಲ್ಲು ಎಂದು ಹೆಸರು ಬಂದಿದೆ.ಈ ಕೊಳದ ನೀರು ಎಂದಿಗೂ ಒಣಗುವುದಿಲ್ಲ. 





***
ಹಲವಾರು ವರ್ಷಗಳ ಹಿಂದೆ, ಬರಗಾಲದ ಪರಿಸ್ಥಿತಿಯನ್ನು ನೀಗಿಸಲು, ಅಳುಪ ರಾಜನು ಚೌಳಿಕೆರೆ ಬಾರ್ಕೂರಿನಲ್ಲಿ ಒಂದು ಕೆರೆಯನ್ನು ನಿರ್ಮಿಸಿದನು. ಆ ಸಮಯದಲ್ಲಿ, ಗಣೇಶನ ರೂಪ ಇದ್ದ ಬಂಡೆ ಇಲ್ಲಿ ಬಿದ್ದಿತು.
ಆಗ ಕೆಲವರು ಇಡೀ ಗಣೇಶ ವಿಗ್ರಹವನ್ನು ತಾವು ತೆಗೆದುಕೊಂಡರಾದರೆ ದೇವರ ಕಿರೀಟ (ಶಿರದ ಕವಚ)  ಹಾರಿ ಇಲ್ಲಿ ಬಿದ್ದಿತು ಎಂದು ಹೇಳುತ್ತಾರೆ, ಮತ್ತು ಉಳಿದ ಭಾಗ ಚೌಳಿಕೆರೆ ಬಳಿ ಬಿದ್ದಿದೆ ಎನ್ನಲಾಗಿದೆ. ಇಂದು, ನಾವಲ್ಲಿ ಭೈರವ ಗಣಪತಿ ದೇವಾಲಯವನ್ನು ಕಾಣಬಹುದು..
ದೇವರು ಹಾರಿಬಂದ ಕಾರಣ, ಈ ಗ್ರಾಮಕ್ಕೆ ಹಾರಿದ ಹಳ್ಳಿ ಎಂಬ ಹೆಸರು ಬಂದಿತು. ಅದು ಕಾಲಾನಂತರದಲ್ಲಿ ಹಾರ್ದಳ್ಳಿಯಾಗಿದೆ.. ಕೆಲವರು ಇಲ್ಲಿನ ಗಣೇಶನು ಮಂಡಿಯೂರಿ ಕುಳಿತ ಭಂಗಿಯಲ್ಲಿದ್ದಾನೆ ಆದ್ದರಿಂದ ಮಂಡಿಹಳ್ಳಿ ಎಂದು ಹೆಸರು ಬಂದಿದೆ, ಅದು ಕಾಲಾಂತರದಲ್ಲಿ ಮಂಡಳ್ಳಿಯಾಗಿದೆ ಎಂದು ಹೇಳುತ್ತಾರೆ.
ತೆರೆದ ಗರ್ಭಗುಡಿಯಲ್ಲಿ ಬೃಹತ್ ಬಂಡೆಯ ಕೆಳಗೆ ಗಣೇಶನನ್ನು ಕಾಣಬಹುದು. ಕೊಳದ ನೀರನ್ನು ಬಳಸಿ ಗಣೇಶನ ಅಭಿಷೇಕವನ್ನು ಮಾಡಲಾಗುತ್ತದೆ. ಸಂಕಷ್ಟಿ ಮತ್ತು ಗಣೇಶ ಚತುರ್ಥಿಯಂದು ಭಕ್ತರು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರುತ್ತಾರೆ.




Sunday, August 17, 2025

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 127

 ಕೊಟ್ಟಿಯೂರು (Kottiyoor)


ಸುತ್ತಲೂ ದಟ್ಟಕಾಡು. ನಡುವಲ್ಲೊಂದು ವಾವಲಿ ನದಿ, ನದಿಯ ಆಕಡೆಯೊಂದು ಈ ಕಡೆಯೊಂದು ಒಂದೇ ದೇವಸ್ಥಾನದ ಎರಡು ಭಾಗಗಳು. ಅದುವೇ ಕೊಟ್ಟಿಯೂರು ದೇವಸ್ಥಾನ ಕೇರಳದ  ಕಣ್ಣುರು ಜಿಲ್ಲೆಯ ಬೆಟ್ಟಗುಡ್ಡಗಳ ಮಧ್ಯೆ ಅಂಕು ಡೊಂಕಾಗಿ ಹಚ್ಚ ಹಸಿರ ಪ್ರಕೃತಿ ಮಧ್ಯೆ ಸಾಗೋ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಕೊಟ್ಟಿಯೂರು ದೇವಸ್ಥಾನ ಸಿಗುತ್ತದೆ. ಬೆಂಗಳೂರಿನಿಂದ ಸುಮಾರು 278 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ನೀವು ವಿಮಾನ ಮಾರ್ಗದ ಮೂಲಕ ಹೋಗಲು ಬಯಸಿದರೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಈ ಪವಿತ್ರವಾದ ದೇವಾಲಯವಿದೆ. ಇಲ್ಲಿಗೆ ನೀವು ಟ್ಯಾಕ್ಸಿಯ ಮೂಲಕ ಭೇಟಿ ನೀಡಬಹುದು. ಇಲ್ಲಿ ಎರಡು ದೇವಸ್ಥಾನವಿದೆ. ಒಂದು ಇಕ್ಕರೆ ಕೊಟ್ಟಿಯೂರು ಮತ್ತಿನ್ನೊಂದು ಅಕ್ಕರೆ ಕೊಟ್ಟಿಯೂರು. ಇಕ್ಕರೆ ಕೊಟ್ಟಿಯೂರು ವರ್ಷದ 11 ತಿಂಗಳೂ ತೆರೆದಿರುತ್ತದೆ. ಆದ್ರೆ ಅಕ್ಕರೆ ಕೊಟ್ಟಿಯೂರು ವರ್ಷದಲ್ಲಿ ಕೇವಲ 28 ದಿನಗಳು ಮಾತ್ರ ತೆರೆದಿರುತ್ತದೆ. ಈ ದೇವಸ್ಥಾನವೇ ತನ್ನ ವಿಶಿಷ್ಟ ನೆಲೆ, ಭಾವನೆ ಮತ್ತು ಸರಳತೆಯಿಂದಾಗಿ ಕೇರಳದಲ್ಲಿ ಮನೆ ಮಾತಾಗಿದೆ. 

ಇದು ಬೃಹ್ಮ ವಿಷ್ಣು ಮಹೇಶ್ವರ ಸೇರಿದಂತೆ ಸಕಲ ದೇವಾನುದೇವತೆಗಳೂ ಒಟ್ಟಿಗಿರೋ(ಕೂಡಿ) ಊರು, ಹಾಗಾಗಿ ಕೂಡಿಯೂರು ಅನ್ನೋ ಹೆಸರು ಬಂತು. ಕಾಲಕ್ರಮೇಣ ಕೂಡಿಯೂರು ಅನ್ನೋದು ಜನರ ಬಾಯಲ್ಲಿ ಕೊಟ್ಟಿಯೂರು ಆಗಿದೆ.. ಇನ್ನೊಂದು ರೀತಿಯಲ್ಲಿ ನೋಡಿದರೆ ದೇವಾಲಯಕ್ಕೆ ಕೊಟ್ಟಿಯೂರು ಎಂಬ ಹೆಸರು ಕತ್ತಿ-ಯೂರ್ ನಿಂದ ವಿಕಸನಗೊಂಡಿದೆ, ಇದು ಪುರಳಿಮಲೆಯ ಕಟ್ಟನ್ ರಾಜವಂಶದೊಂದಿಗೆ ಸಂಬಂಧ ಹೊಂದಿದೆ. 

ನದಿಯ ಪಶ್ಚಿಮ ದಿಕ್ಕಿನಲ್ಲಿ ಬೃಹತ್ ಶಾಶ್ವತ ದೇವಸ್ಥಾನದ ಕಟ್ಟಡಗಳನ್ನು ಹೊಂದಿರೋ, ವರ್ಷದ ಹನ್ನೊಂದು ತಿಂಗಳು ತೆರೆದಿದ್ದು ಒಂದು ತಿಂಗಳು ಮುಚ್ಚಲಾಗೋ ದೇವಾಲಯ, ವಡಕ್ಕುನಾಥನ್ ಸ್ಥಿತ ಇಕ್ಕರೆ ಕೊಟ್ಟಿಯೂರಾದರೆ... ಯಾವೊಂದೂ ದೇವಸ್ಥಾನದ ರಚನೆಯೇ ಇಲ್ಲದೆ ಬಯಲ ಪೀಠದ ಮೇಲೊಂದು ಲಿಂಗವಿದ್ದೂ ಕೂಡಾ ವರ್ಷದಲ್ಲಿ ಒಂದು ತಿಂಗಳು ಮಾತ್ರ ದರ್ಶನಕ್ಕೆ ಅವಕಾಶವಿರೋ, ಉಳಿದಂತೆ ವರ್ಷಪೂರ್ತಿ ಪ್ರವೇಶ ನಿಶಿದ್ಧವಿರೋ ಬಯಲು ದೇವಾಲಯವೇ ಸ್ವಯಂಭೂ ಲಿಂಗರೂಪದ ಕಿಳಕ್ಕೇಶ್ವರನ್ ಸ್ಥಿತ ಅಕ್ಕರೆ ಕೊಟ್ಟಿಯೂರು...

ಇಲ್ಲಿನ ಪ್ರವೇಶ ನಿಶಿದ್ಧ ಎಷ್ಟು ಕಟ್ಟುನಿಟ್ಟು ಅಂದ್ರೆ, ಒಂದ್ಸಲ ಇಲ್ಲಿಗೆ ಸ್ವಯಂ ಶಂಕರಾಚಾರ್ಯರೇ ಭೇಟಿನೀಡಿದ್ದ ಸಂದರ್ಭದಲ್ಲಿಯೂ ಕೂಡಾ ವೈಶಾಖಮಾಸವಾಗಿರದ ಕಾರಣ ನದಿ ದಾಟದೆ ಅಲ್ಲಿಂದಲೇ ಕೈಮುಗಿದು ಹೋಗಿದ್ದರಂತೆ.. 

***

ಒಮ್ಮೆ ಶಿವನ ಮಾವನಾದ ಹಾಗೂ ಸತಿ ದೇವಿಯ ತಂದೆಯಾದ ದಕ್ಷ ಪ್ರಜಾಪತಿಯು ಯಾಗವನ್ನು ಹಮ್ಮಿಕೊಂಡಾಗ ಅವನು ಶಿವನನ್ನು ತನ್ನ ಯಜ್ಞಕ್ಕೆ ಆಹ್ವಾನಿಸದೇ ಆತನನ್ನು ಅವಮಾನ ಮಾಡುತ್ತಾನೆ. ಇದರಿಂದ ಕೋಪಗೊಂಡ ಸತಿ ದೇವಿಯು ತಂದೆ ಆಯೋಜಿಸಿದ್ದ ಯಜ್ಞ ಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ಸ್ವಂಯಚಾಲಿತವಾಗಿ ತ್ಯಜಿಸುತ್ತಾಳೆ.  ದಕ್ಷನು ಭೃಗುಮಹರ್ಷಿಗಳ ನೇತೃತ್ವದಲ್ಲಿ ಯಾಗ ನಡೆಸಿದ, ಸತಿ ಆ ಯಜ್ಞಕುಂಡದಲ್ಲಿ ಪ್ರಾಣಬಿಟ್ಟ ಜಾಗವೇ ಈ ಅಕ್ಕರೆ ಕೊಟ್ಟಿಯೂರು. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ಬಂದು ದರ್ಶನ ಮಾಡಿದ್ರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಅಂದು ಆಶೀರ್ವಾದ ಮಾಡಿದನು.. 

ಆ ಘಟನಾವಳಿಗಳ ಸಂಪೂರ್ಣ ಯಥಾವತ್ತು ಪುನರ್‌ಸೃಷ್ಟಿಯೇ ವೈಶಾಖ ಮಾಸದಲ್ಲಿ 27ದಿನಗಳ ಕಾಲ ನಡೆಯೋ ವೈಶಾಖ ಮಹೋತ್ಸವ.

ಪಶ್ಚಿಮದ ಇಕ್ಕರೆ ದೇವಸ್ಥಾನದಿಂದ ತರಲಾಗೋ ಉತ್ಸವ ಮೂರ್ತಿಯನ್ನು ಇಲ್ಲಿ ಪ್ರತಿಷ್ಢಾಪಿಸಲಾಗುತ್ತದೆ. ಹಾಗಾಗಿ ಈ 27ದಿನ ಆ ದೇವಾಲಯ ಬಂದ್. (ಈ ವರ್ಷ ಜೂನ್ 8ರಿಂದ ಜುಲೈ 4ರವರೆಗೆ ನಡೆದಿದೆ..) ಇಲ್ಲಿ ಅಂದಿನ ಋಷಿಮುನಿಗಳ ಯಾಗಶಾಲೆಗಳಂತೆಯೇ ತಾಳೆಯ ಪರ್ಣಕುಟೀರ, ತಾಳೆಗರಿಯ ಛತ್ರಿಗಳು ಸೇರಿದಂತೆ ಎಲ್ಲವೂ ಯಥಾವತ್ತು ನಿರ್ಮಾಣ. ಮೊದಲ ದಿನ ಆನೆಯೊಂದಿಗೆ ಶುರುವಾಗೋ ಮಹೋತ್ಸವ, ಕೊನೆಯ ದಿನ ಇದಿಷ್ಟನ್ನೂ ಅದೇ ಆನೆಯಿಂದಲೇ ನೆಲಸಮಗೊಳಿಸೋ ಮುಖಾಂತರ ಕೊನೆಯಾಗುತ್ತದೆ...


Friday, August 15, 2025

ಪೆಟ್ಲು ಎಂಬ ಆಟಿಕೆಯ ಬಂದೂಕು ನಮ್ಮ ಬಾಲ್ಯದ ಆಟ...

ನಿಮ್ಮಲ್ಲಿ ಎಷ್ಟು ಜನರಿಗೆ ಈ ಪೆಟ್ಲು ಕಾಯಿ ನೆನಪಿದೆ?. ನಾವು ಇದನ್ನು ಪೆಟ್ಲು - ಪೆಟ್ಲು ಕಾಯಿ ಎಂದು ಕರೆಯುತ್ತಿದ್ದೆವು, ಇದು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿನ ಅತ್ಯಂತ ಶಕ್ತಿಶಾಲಿ ಬಂದೂಕುಗಳಲ್ಲಿ ಒಂದಾಗಿದೆ. ಪೆಟ್ಲು ಕೋವಿ ಅಥವಾ ಪೆಟ್ಲು ಗನ್, ವಾಯು ಸಂಕೋಚನದ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಕೃಷ್ಣಾಷ್ಟಮಿ ಸಮಯದಲ್ಲಿ  ಬಹುತೇಕ ಎಲ್ಲಾ ಮಕ್ಕಳ ಕೈಯಲ್ಲಿ ಇರುತ್ತಿತ್ತು.

ಪೆಟ್ಲು ಎಂದರೆ ಆಟವಾಡಲು ಬಳಸುವ ಒಂದು ರೀತಿಯ ಆಟಿಕೆ. ಇದು ಬಿದಿರಿನ ಕೊಳವೆ ಮತ್ತು ಮರದ ಕಡ್ಡಿಯಿಂದ ಮಾಡಲ್ಪಟ್ಟಿದೆ. ಬಿದಿರಿನ ಕೊಳವೆಯ ಒಳಗೆ ಕಾಯಿಯನ್ನು ಹಾಕಿ, ಕಡ್ಡಿಯಿಂದ ಒತ್ತಿದರೆ, ಕಾಯಿ ಜೋರಾಗಿ ಶಬ್ದ ಮಾಡುತ್ತಾ ಹೊರಗೆ ಚಿಮ್ಮುತ್ತದೆ.
ಪೆಟ್ಲು ಕಾಯಿ ಆಟಿಕೆ ಮಲೆನಾಡಿನ ಅಂದಿನ ಮಕ್ಕಳ ಆಟಿಕೆಗಳ ಒಂದು ಭಾಗವಾಗಿತ್ತು.  ಈ ಆಟಿಕೆ ಮಕ್ಕಳಿಗೆ ಬಹಳ ಖುಷಿ ಕೊಡುತ್ತದೆ.  ಸೌಂಡು ಚಂದ ಬರಬೇಕು ಅಂದ್ರೆ ಪೆಟ್ಲೆ ಮುಂದುಗಡೆ ತೆಂಗಿನ ಓಲೆಯಲ್ಲಿ ಸ್ವಲ್ಪ ಸುತ್ತಿ ಆಗ ಪೆಟ್ಲೆಯಲ್ಲಿ ಸೌಂಡ್ ಚೆನ್ನಾಗಿ ಬರುತ್ತಿತ್ತು.
ಮಳೆ ಜೋರಾದಾಗ ಮಕ್ಕಳು ಒಂದೆಡೆ ಕೂತು ಪೆಟ್ಲಾಟ ಆಡೋದು ಎಂತಾ ಖುಷಿ ಇತ್ತು... ಕೃಷ್ಣ ಜನ್ಮಾಷ್ಟಮಿ ವಿಟ್ಲ ನಿಂಗಿ ಹೊತ್ತು ಈ ಪೆಟ್ಲಾಟದ ಗಮ್ಮತ್ತು ಅನುಭವಿಸಿದವರಿಗೆ ಗೊತ್ತು..
ಇನ್ನು ಪೆಟ್ರೋಲ್ ಕಾಯಿ ಉಪ್ಪಿನಕಾಯಿ ಮಾಡೋ ಕ್ರಮವೂ ಇತ್ತು..
ಪೆಟ್ಲು ಕಾಯಿ / ಆರಮರಲು
ಲಿಂಬೆಕಾಯಿ ಜೊತಿಗೆ  ಪೆಟ್ಲುಕಾಯಿ ಸೇರ್ಸಿ ಉಪ್ಪಿನಕಾಯಿ ಮಾಡಿರೆ ಊಟಕ್ಕೆ ಲಾsssಯ್ಕ್ ಆತಿತ್.. ಈ ಮಳೆಗಾಲದ್ ಸುರುಲಿ ಮಲೆನಾಡಿನಲ್ಲಿ ಇಂಬ್ಳದ ಗಿಜಿ ಗಿಜಿ ಅಲ್ಲಿ ಪೆಟ್ಲುಕಾಯಿ ಕುಯ್ದು ತರುದೇ ಒಂದ್ ದೊಡ್ ರಗಳೆ ಆದ್ರೂ ಚಪಲ ಬಿಡೂದಿಲ್ಲ, ಎಸ್ಟ್ ಕಷ್ಟ ಆದ್ರೂ ಹೋಗ್ ತರುದೇ ಉಪ್ಪಿನ್ಕಾಯಿ ಹಾಕುದೇ......
ಮಲೆನಾಡಿನಲ್ಲಿ ಶ್ರಾವಣ ಮಾಸ, ಸಾಲು ಹಬ್ಬಗಳ ಆಗಮನದ ಸೂಚನೆ ಕೊಡಲು ಕಾಡಿನಲ್ಲಿ ಕೆಲ ವಿಶಿಷ್ಟ ಸಸ್ಯಗಳು ತಲೆ ಎತ್ತಿ ಹಸಿರು ತುಂಬಿ ಹೂ ಕಾಯಿ ಬಿಡಲಾರಂಭಿಸುತ್ತವೆ. ಅವುಗಳಲ್ಲಿ ಈ ಸಸ್ಯ ರೂಟೇಸಿ , ಸಿಟ್ರಸ್ ಕುಟುಂಬದ ಒಂದು ಸದಸ್ಯ. ಇದು ಅರಮರಲ ಕಾಯಿ ಅಥವಾ ಪೆಟ್ಲು ಕಾಯಿ. ಈಗ ಗಿಡ ಕಾಡಲ್ಲಿ ಹೂ ಕಾಯಿ ಕಟ್ಟುತ್ತಾ ಕೃಷ್ಣ ಜನ್ಮಾಷ್ಟಮಿ ಕಾಲ, ಹಾಗೂ  ಪೆಟ್ಲು ಹಬ್ಬವನ್ನು ಆಹ್ವಾನಿಸುತ್ತಿದೆ. ಈ ಗಿಡದ ಎಲೆ ಕಾಯಿಗಳಿಗೆ ವಿಶಿಷ್ಟ ಲಿಂಬೆ ಗಿಡದ ಆರೋಮ, ಮುಳ್ಳುಗಳು, ಅರಮರಲು ಕಾಯಿ ಉಪ್ಪಿನಕಾಯಿ ಬಲು ಚೆಂದ.
ಬಿಸಿ ಬಿಸಿ ಕೆಂಪಕ್ಕಿ ಗಂಜಿ + ತುಪ್ಪ ಅದುಕ್ಕೆ ಪೆಟ್ಲುಕಾಯಿ ಉಪ್ಪಿನ್ ಕಾಯಿ  ಆ ಹಾ ಅದರ ಗಮ್ಮತ್ತೇ ಬೇರೆ.....

.




Friday, August 01, 2025

ಪಾಪ ಶಾರೂಖ್‍ಗೆ ಪ್ರಶಸ್ತಿ ಸಿಕ್ಕಿರಲಿಲ್ಲ, ಅದಕ್ಕೇ …

 





ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ಪ್ರಶಸ್ತಿಗಳ ಬಗ್ಗೆ ನಂಬಿಕೆಯೇ ಕಡಿಮೆ ಆಗಿದೆ. ಅದು ಈ ವರ್ಷ ಮತ್ತೊಮ್ಮೆ ಸಾಬೀತಾಗಿದೆ. 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಸಂಜೆ ಘೋಷಣೆಯಾಗಿದೆ. ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರಿಗೆ ಹಂಚಲಾಗಿದೆ. ‘12th Fail’ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಕ್ರಾಂತ್‍ ಮಾಸ್ಸಿಯ ಜೊತೆಗೆ ‘ಜವಾನ್‍’ ಚಿತ್ರದ ಅಭಿನಯಕ್ಕಾಗಿ ಶಾರೂಖ್‍ ಖಾನ್‍ಗೂ ಪ್ರಶಸ್ತಿ ನೀಡಲಾಗಿದೆ. ‘12th Fail’ ಚಿತ್ರದ ಮನೋಜ್‍ ಕುಮಾರ್‍ ಶರ್ಮಾ ಪಾತ್ರದಲ್ಲಿ ವಿಕ್ರಾಂತ್‍ ಜೀವ ತುಂಬ ನಟಿಸಿದ್ದರು. ಅವರ ಅಭಿನಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಶಾರೂಖ್‍ ಖಾನ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಯಾಕೆ?

ಈ ವಿಷಯ ಅರಗಿಸಿಕೊಳ್ಳುವುದು ಕಷ್ಟ. ‘ಜವಾನ್‍’ ಚಿತ್ರದಲ್ಲಿ ಶಾರೂಖ್‍ ಖಾನ್‍ ಅಭಿನಯ ಅತ್ಯಂತ ಸಾಧಾರಣವಾಗಿತ್ತು. ಅದರಲ್ಲಿ ಯಾವುದೇ ವಿಶೇಷತೆಯೂ ಇರಲಿಲ್ಲ ಮತ್ತು ಈ ತರಹದ ಪಾತ್ರಗಳು ಮತ್ತು ಅಭಿನಯ ಯಾವುದೂ ಹೊಸದೇನಲ್ಲ. ಅಂಥದ್ದೊಂದು ಅಭಿನಯಕ್ಕೆ ಯಾವುದೋ ಖಾಸಗೀ ಪ್ರಶಸ್ತಿ ಬಂದಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ರಾಷ್ಟ್ರ ಪ್ರಶಸ್ತಿ ಕೊಟ್ಟಿರುವುದು ನಿಜಕ್ಕೂ ಆಶ್ಚರ್ಯ ಮತ್ತು ವಿಚಿತ್ರ. ಯಾವ ಮಾನದಂಡದ ಮೇಲೆ ಇಂಥದ್ದೊಂದು ಪ್ರಶಸ್ತಿಯನ್ನು ಅವರಿಗೆ ನೀಡಲಾಯ್ತೋ ಗೊತ್ತಿಲ್ಲ. ಹಿಂದೆ ಇದೇ ಶಾರೂಖ್‍ ಖಾನ್‍ಗೆ ‘ಚಕ್‍ದೇ ಇಂಡಿಯಾ’, ‘ಸ್ವದೇಸ್‍’, ‘ಮೈ ನೇಮ್‍ ಈಸ್ ‍ಖಾನ್‍’ ಚಿತ್ರದಲ್ಲಿ ತಮ್ಮ ಅಭಿನಯದಿಂದ ಗಮನಸೆಳೆದಿದ್ದರು. ಆದರೆ, ಆ ಯಾವ ಚಿತ್ರಗಳ ಅಭಿನಯಕ್ಕೂ ಶಾರೂಖ್‍ಗೆ ಪ್ರಶಸ್ತಿ ಬಂದಿರಲಿಲ್ಲ. ಆದರೆ, ‘ಜವಾನ್‍’ನಲ್ಲಿ ಶಾರೂಖ್‍ ಖಾನ್‍ ಅದೇನು ಮಾಡಿದ್ದಾರೆ ಎಂದು ಗುರುತಿಸಿ ಬಾಲಿವುಡ್‍ನ ಜನಪ್ರಿಯ ನಿರ್ದೇಶಕ ಅಶುತೋಷ್ ಗೊವಾರಿಕರ್‍ ನೇತೃತ್ವದ ಸಮಿತಿ ಪ್ರಶಸ್ತಿ ಕೊಟ್ಟಿತೋ ಗೊತ್ತಿಲ್ಲ. ಸಮಿತಿಯೇನೋ ಪ್ರಶಸ್ತಿ ಕೊಟ್ಟಿರಬಹುದು. ಆದರೆ, ಅದನ್ನು ಪಡೆಯುವುದಕ್ಕೆ ಶಾರೂಖ್ ಸಹ ಮುಜುಗರ ಪಟ್ಟರೆ ಆಶ್ಚರ್ಯವಿಲ್ಲ.

ಇಷ್ಟಕ್ಕೂ ಶಾರೂಖ್‍ಗೆ ಯಾಕೆ ಒತ್ತಾಯಪೂರ್ವಕವಾಗಿ ಪ್ರಶಸ್ತಿ ನೀಡಲಾಗಿದೆ? ಬಹುಶಃ ಇದುವರೆಗೂ ನೀಡಿರಲಿಲ್ಲ ಎಂಬ ಕಾರಣಕ್ಕೆ ನೀಡಿರುವ ಸಾಧ್ಯತೆ ಇದೆ. ಶಾರೂಖ್‍ ಹೇಳಿಕೇಳಿ ಭಾರತದ ಜನಪ್ರಿಯ, ಬೇಡಿಕೆಯ ಮತ್ತು ದುಬಾರಿ ನಟ. ಅವರು ತಮ್ಮ ಅಭಿನಯಕ್ಕೆ ಹಲವು ಖಾಸಗೀ ಪ್ರಶಸ್ತಿಗಳನ್ನು ಪಡೆದುಕೊಂಡಿರಬಹುದು. ಜನಪ್ರಿಯ ನಟರ ಪೈಕಿ ಹಲವು ವರ್ಷಗಳಿಂದ ಕಾಣಿಸಿಕೊಂಡಿರಬಹುದು. ಆದರೆ, ಇದುವರೆಗೂ ರಾಷ್ಟ್ರ ಪ್ರಶಸ್ತಿಯನ್ನೇ ಪಡೆದಿರಲಿಲ್ಲ. ಅವರು ನೊಂದುಕೊಳ್ಳಬಾರದು ಮತ್ತು ಆ ಕೊರತೆಯನ್ನು ನೀಗಿಸುವುದಕ್ಕೆ ಆಯ್ಕೆ ಸಮಿತಿಯೇ ಅತೀ ಕಾಳಜಿ ವಹಿಸಿ ಪ್ರಶಸ್ತಿ ನೀಡಿದೆಯಾ? ಗೊತ್ತಿಲ್ಲ. ಒಟ್ಟಿನಲ್ಲಿ ಶಾರೂಖ್‍ಗೆ ಪ್ರಶಸ್ತಿ ಕೊಟ್ಟಿದ್ದಿಕ್ಕೆ ಆಯ್ಕೆ ಸಮಿತಿಯ ಅಧ್ಯಕ್ಷ ಅಶುತೋಶ್‍ ಗೊವಾರಿಕರ್‍ ಈ ರೀತಿಯ ಕಾರಣ ನೀಡಿದ್ದಾರೆ. ‘‘ಜವಾನ್‍’ ಚಿತ್ರದಲ್ಲಿನ ಶಾರೂಖ್‍ ಅವರ ಭಾವತೀವ್ರ ಅಭಿನಯ ಅದ್ಭುತವಾಗಿತ್ತು. ಬರೀ ಶತ್ರುಗಳ ಜೊತೆಗೆ ಹೊಡೆದಾಡುವುದಷ್ಟೇ ಅಲ್ಲ, ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡುವ ನಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದು ಹೇಳಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಚಿತ್ರಗಳು ನಿರ್ಮಾಣವಾಗುತ್ತವೆ. ಈ ಪೈಕಿ ಸದಭಿರುಚಿಯ, ಕಲಾತ್ಮಕ, ಪ್ರಯೋಗಾತ್ಮಕ ಮತ್ತು ಗುಣಾತ್ಮಕ ಚಿತ್ರಗಳನ್ನು ಮತ್ತು ಕೆಲಸವನ್ನು ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಹಲವು ದಶಕಗಳಿಂದ ನಡೆದುಬಂದಿದೆ. ಅದರಲ್ಲೂ ಕಮರ್ಷಿಯಲ್‍ ಮತ್ತು ಮುಖ್ಯವಾಹಿನಿಯ ಸಿನಿಮಾಗಳ ಮಧ್ಯೆ ಕಳೆದು ಹೋಗುವ ಸಾಕಷ್ಟು ಕಡಿಮೆ ಬಜೆಟ್‍ನ ಸದಭಿರುಚಿಯ ಚಿತ್ರಗಳನ್ನು ಗುರುತಿಸುವ ಮತ್ತು ಎತ್ತಿ ಹಿಡಿಯುವ ಕೆಲಸ ಈ ಪ್ರಶಸ್ತಿಗಳಿಂದ ಆಗುತ್ತಿತ್ತು. ಒಂದು ಚಿತ್ರಕ್ಕೆ ಅಥವಾ ಒಂದು ಕೆಲಸಕ್ಕೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದೆ ಎಂದರೆ ಅದಕ್ಕೊಂದು ಮೌಲ್ಯ ಇರುತ್ತಿತ್ತು. ಆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಆ ಚಿತ್ರಗಳನ್ನು ನೋಡುವುದಕ್ಕೆ ದೇಶಾದ್ಯಂತ ಜನ ಕಾಯುತ್ತಿದ್ದರು.

ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಒಟ್ಟಾರೆ ಇದರ ಸ್ವರೂಪವೇ ಬದಲಾಗಿದೆ. ರಾಷ್ಟ್ರ ಪ್ರಶಸ್ತಿಗಳು ಎಂದರೆ ಅದು ಬಾಲಿವುಡ್‍ ಅಥವಾ ಕಮರ್ಷಿಯಲ್‍ ಸಿನಿಮಾಗಳಿಗೆ ಸೀಮಿತ ಎನ್ನುವಂತಾಗಿದೆ. ಅದಕ್ಕೆ ಪೂರಕವಾಗಿ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಎರಡು ವಿಷಯಗಳು ಎದ್ದು ನಿಲ್ಲುತ್ತವೆ. ಇದೇ ವರ್ಷ, ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯನ್ನು ತೆಗೆದುಕೊಂಡರೆ, ಬಾಲಿವುಡ್‍ಗೆ ಪ್ರಶಸ್ತಿ ಕೊಡಬೇಕು ಎಂದಿದ್ದರೆ, ವಿಕ್ರಾಂತ್‍ ಜೊತೆಗೆ ‘ಸ್ಯಾಮ್‍ ಬಹದ್ದೂರ್‍’ ಚಿತ್ರದ ಅಭಿನಯಕ್ಕಾಗಿ ವಿಕ್ಕಿ ಕೌಶಾಲ್‍ಗೆ ನೀಡಬಹುದಿತ್ತು. ಸ್ಯಾಮ್‍ ಬಹದ್ದೂರ್‍ ಪಾತ್ರದಲ್ಲಿ ವಿಕ್ಕಿ ನಿಜಕ್ಕೂ ಗಮನಸೆಳೆದಿದ್ದರು. ಅದು ಬಿಟ್ಟು, ಯಾರೂ ಗಣನೆಗೇ ತೆಗೆದುಕೊಳ್ಳದ ‘ಜವಾನ್‍’ ಚಿತ್ರದ ಅಭಿನಯಕ್ಕೆ ಶಾರೂಖ್‍ಗೆ ಪ್ರಶಸ್ತಿ ನೀಡಲಾಗಿದೆ.

ಕಳೆದ ವರ್ಷ ‘ಕಾಂತಾರ’ ಚಿತ್ರದ ಅಭಿನಯಕ್ಕಾಗಿ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಾಗಲೂ, ಆಯ್ಕೆ ಸೂಕ್ತವಲ್ಲ ಎಂಬ ಮಾತು ತೆರೆಮರೆಯಲ್ಲಿ ಕೇಳಿಬಂದಿತ್ತು. ಕನ್ನಡಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು ಹೆಮ್ಮೆ ಮತ್ತು ಖುಷಿ ಒಂದು ಕಡೆಯಾದರೆ, ಅದು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಗುವ ಅಭಿನಯವಲ್ಲ ಎಂಬ ಚರ್ಚೆ ಸಹ ತೆರೆಯ ಹಿಂದೆ ಆಗಿತ್ತು. ಚಿತ್ರ ಮತ್ತು ರಿಷಭ್‍ ಶೆಟ್ಟಿ ಜನಪ್ರಿಯತೆಯನ್ನು ಮಾತ್ರ ಗಮನಿಸಿ ಪ್ರಶಸ್ತಿ ನೀಡಲಾಗಿದೆ ಎಂಬ ಅಪಸ್ವರ ಕೇಳಿಬಂದಿತ್ತು. ಅದರ ಹಿಂದಿನ ವರ್ಷ ‘ಪುಷ್ಪ’ ಚಿತ್ರದ ಅಭಿನಯಕ್ಕಾಗಿ ಅಲ್ಲು ಅರ್ಜುನ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಅಭಿನಯ ಹೇಗಾದರೂ ಇರಲಿ, ಅದೊಂದು ಪಕ್ಕಾ ಸಮಾಜ ಘಾತುಕ ಪಾತ್ರ. ಅಂಥದ್ದೊಂದು ಪಾತ್ರ ಮತ್ತು ಪಾತ್ರಪೋಷಣೆಯನ್ನು ಪ್ರಶಸ್ತಿಗೆ ಪರಿಗಣಿಸಿದ್ದು ದೊಡ್ಡ ತಪ್ಪು ಎಂದು ಸಾಕಷ್ಟು ಕಟುಟೀಕೆಗಳು ಕೇಳಿಬಂದವು. ಆದರೆ, ಅದ್ಯಾವುದನ್ನೂ ಪರಿಗಣಿಸದ ಆಯ್ಕೆ ಸಮಿತಿಯು, ಅಲ್ಲು ಅರ್ಜುನ್‍ಗೆ ಪ್ರಶಸ್ತಿ ನೀಡಿ ಗೌರವಿಸಿತು. ಒಂದು ಚಿತ್ರ ಯಶಸ್ವಿಯಾಗುವುದು, ಆ ಚಿತ್ರದಲ್ಲಿನ ಅಭಿನಯವನ್ನು ಅಭಿಮಾನಿಗಳು ಮೆಚ್ಚುವುದು ಬೇರೆ ವಿಷಯ. ಆದರೆ, ಕೇಂದ್ರ ಸರ್ಕಾರ ಕೊಡುವ ಪ್ರಶಸ್ತಿಗೆ ಒಂದಿಷ್ಟು ಮಾನದಂಡ, ಮೌಲ್ಯಗಳಿರುತ್ತವೆ. ಅದನ್ನೆಲ್ಲಾ ಪರಿಗಣಿಸಿ ಪ್ರಶಸ್ತಿ ನೀಡಬೇಕು. ಆದರೆ, ಆಯ್ಕೆ ಸಮಿತಿಗಳು ಇತ್ತೀಚೆಗೆ ಗಮನಿಸುತ್ತಿರುವುದು ಎರಡೇ ವಿಷಯಗಳನ್ನು. ಒಂದು ಬಾಲಿವುಡ್‍, ಇನ್ನೊಂದು ಮುಖ್ಯವಾಹಿನಿಯ ಸಿನಿಮಾ.

ಅದರಲ್ಲೂ ಬಾಲಿವುಡ್‍ ಚಿತ್ರಗಳಿಗೆ ಇಲ್ಲಿ ಮೊದಲ ಪ್ರಾಶಸ್ತ್ಯ ಎನ್ನುವಂತಾಗಿದೆ. ಮೊದಲೆಲ್ಲಾ ಬಾಲಿವುಡ್‍ ನಟ-ನಟಿಯರಿಗೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಸಿಗುತ್ತಿದ್ದು ಕಡಿಮೆಯೇ. ಪ್ರಾದೇಶಿಕ ಸಿನಿಮಾ ಮತ್ತು ನಟ-ನಟಿಯರ  ಎದುರು ಬಾಲಿವುಡ್‍ ಮಂದಿ ಪ್ರಶಸ್ತಿ ಪಡೆದಿದ್ದು ಕಡಿಮೆಯೇ.  ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆಯುತ್ತಿರುವ ಬಾಲಿವುಡ್‍ ನಟ-ನಟಿಯರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ಪ್ರತೀ ವರ್ಷ ಅತ್ಯುತ್ತಮ ನಟ ಅಥವಾ ನಟಿ ಪ್ರಶಸ್ತಿ ಎರಡರಲ್ಲಿ ಒಂದಂತೂ ಬಾಲಿವುಡ್‍ಗೆ ಹೋಗುವುದು ಗಮನಿಸಬಹುದು. ಈ ವರ್ಷ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರದ ಅಭಿನಯಕ್ಕೆ ರಾಣಿ ಮುಖರ್ಜಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಕರಣ್‍ ಜೋಹರ್‍ ನಿರ್ದೇಶನದ ‘ರಾಕಿ ಔರ್‍ ರಾಣಿ ಕೀ ಪ್ರೇಮ್‍ ಕಹಾನಿ’ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಎರಡು ವರ್ಷಗಳ ಹಿಂದೆ ಆಲಿಯಾ ಭಟ್‍ ಮತ್ತು ಕೃತಿ ಸನೋನ್ಗೆ ಪ್ರಶಸ್ತಿ ಸಿಕ್ಕಿತ್ತು. ಅದರ ಹಿಂದಿನ ವರ್ಷ ಅಜಯ್ ದೇವಗನ್‍ಗೆ, ಅದರ ಹಿಂದಿನ ವರ್ಷ ಕಂಗನಾ ರಣಾವತ್‍ಗೆ, 66ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ವಿಕ್ಕಿ ಕೌಶಾಲ್‍ ಮತ್ತು ಆಯುಷ್ಮಾನ್‍ ಖುರಾನಾಗೆ … ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.

ಬಾಲಿವುಡ್‍ ಅಥವಾ ಕಮರ್ಷಿಯಲ್‍ ಸಿನಿಮಾಗಳಿಗೆ ಪ್ರಶಸ್ತಿ ನೀಡಬಾರದು ಎಂಬುದು ವಾದವಲ್ಲ. ಮುಖ್ಯವಾಹಿನಿಯೋ, ಪ್ರಯೋಗಾತ್ಮಕ ಚಿತ್ರಗಳೋ ಅರ್ಹರಿಗೆ ಖಂಡಿತಾ ಪ್ರಶಸ್ತಿ ಸಿಗಬೇಕು. ಆದರೆ, ಮಾನದಂಡ ಬದಲಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಇಲ್ಲಿ ಒತ್ತಾಯಪೂರ್ವಕವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅರ್ಹರೋ ಅಲ್ಲವೋ ಬೇರೆ ಮಾತು, ಅವರು ಜನಪ್ರಿಯರು, ಅವರಿಗೆ ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ, ಹಾಗಾಗಿ ಈ ಬಾರಿಯಾದರೂ ಕೊಡಬೇಕು ಎನ್ನುವ ಧೋರಣೆ ಸರಿಯಲ್ಲ. ಹೀಗೆ ಹಂಚುತ್ತಾ ಹೋದರೆ, ಅದಕ್ಕೊಂದು ಅಂತ್ಯವೂ ಇಲ್ಲ ಮತ್ತು ಯಾವ ಉದ್ದೇಶದಿಂದ ಈ ಪ್ರಶಸ್ತಿಗಳು ಸ್ಥಾಪನೆಯಾದವೋ, ಅದರ ಉದ್ದೇವೇ ಈಡೇರುವುದಿಲ್ಲ. ಇದರಿಂದ ನಿಜವಾಗಿ ಏಟು ಬೀಳುವುದು ಅರ್ಹರಿಗೆ, ಪ್ರಾದೇಶಿಕ ಸಿನಿಮಾಗಳಿಗೆ ಮತ್ತು ಪ್ರಯೋಗಾತ್ಮಕ ಸಿನಿಮಾಗಳಿಗೆ ಮಾತ್ರ.