- ರಾಘವೇಂದ್ರ ಅಡಿಗ ಎಚ್ಚೆನ್.
ಕರ್ನಾಟಕ ಮಾತ್ರವಲ್ಲ ಇಡೀ ಭಾರತ ದೇಶದ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರಿಗೊಂದು ಗೌರವ ಸ್ಥಾನಮಾನವಿದೆ. ಆದರೆ ಬದುಕಿದಾಗ ಮಾತ್ರವಲ್ಲ ಸಾವಿನ ನಂತರ ಕುಡ ನಾನಾ ರೀತಿಯ ನೋವು, ವಿವಾದಗಳಿಗೆ ಈಡಾದ ಮತ್ತೊಬ್ಬ ನಟ ಬಹುಷಃ ಬೇರೊಬ್ಬರಿಲ್ಲ. ವಿಷ್ಣುವರ್ಧನ್ ಸಮಾಧಿ ಅಥವಾ ಸ್ಮಾರಕ ಅವರ ಸಾವಿನ ನಂತರದಲ್ಲಿ ನಾನಾ ಕಾರಣಗಳಿಗೆ ಸುದ್ದಿಯಾಗಿದ್ದು ಇತ್ತೀಚೆಗೆ ಕೆಂಗೇರಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ನೆಲಸಮಗೊಳಿಸಿರುವುದು ಒಂದು ದುರದೃಷ್ಟಕರ ಘಟನೆ. ಇದನ್ನು ವಿರೋಧಿಸಿ ಈಗ ವಿಷ್ಣುವರ್ಧನ್ ಅಭಿಮಾನಿ ಸಂಘಗಳು ನಾನಾ ರೀತಿಯಲ್ಲಿ ಕ್ರಮಕ್ಕೆ ಮುಂದಾಗಿದೆ. ಇದೇ ಸೆಪ್ಟೆಂಬರ್ ೧೮ಕ್ಕೆ ವಿಷ್ಣುವರ್ಧನ್ ಅವರ ೭೫ನೇ ಹುಟ್ಟಿದ ದಿನ ಇದ್ದು ಈ ಹಿನ್ನೆಲೆಯಲ್ಲಿ ವಿಷ್ಣು ಸ್ಮಾರಕ ಕುರಿತಂತೆ ಪುಟ್ಟ ಪರಿಚಯ ಲೇಖನ ಇಲ್ಲಿದೆ-
ಅಭಿಮಾನ್ ಸ್ಟುಡಿಯೋವನ್ನು ಸರ್ಕಾರವು ಅರಣ್ಯ ಪ್ರದೇಶವೆಂದು ಘೋಷಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಈ ಪ್ರಕ್ರಿಯೆ ಹೊಸದಲ್ಲ. ಈ ಹಿಂದೆಯೂ ನಡೆದಿತ್ತು. ಆದರೆ ಸರ್ಕಾರದ ವತಿಯಿಂದ ಸರಿಯಾದ ರೀತಿಯಲ್ಲಿ ವಾದ ಮಂಡನೆ ಆಗದ ಕಾರಣದಿಂದ ಅಭಿಮಾನ್ ಸ್ಟುಡಿಯೋದ ಮಾಲೀಕರು ಆ ಪ್ರಕ್ರಿಯೆ ವಿರುದ್ಧ ತಡೆಯಾಜ್ಞೆ ತಂದು ಅದನ್ನು ಖಾಸಗಿ ಸ್ವತ್ತು ಎಂದು ಬಿಂಬಿಸಿ ಅವ್ಯವಹಾರ ನಡೆಸಲಾಗುತ್ತಿತ್ತು. ಈ ಬಾರಿಯೂ ಅದೇ ಮರುಕಳಿಸಬಾರದೆಂದು ಡಾ. ವಿಷ್ಣುಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಮತ್ತು ಪದಾಧಿಕಾರಿಗಳು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಒತ್ತಾಯ ಮಾಡಿದ್ದಾರೆ. ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಿದ ನಂತರ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದ ಈ ಮುಟ್ಟುಗೋಲು ಪ್ರಕ್ರಿಯೆಗೆ ತಡೆಯಾಜ್ಞೆ ತರಲು ಉದ್ದೇಶಿಸಿರುವುದರಿಂದ ಕೂಡಲೆ ಕೆವಿಎಟ್ ಅನ್ನು ದಾಖಲಿಸಬೇಕೆಂದು ಕೋರಲಾಗಿದೆ. ಜೊತೆಗೆ ಅರಣ್ಯ ಭೂಮಿ ಎಂದು ಘೋಷಿಸಿದ ನಂತರವೂ ಅಲ್ಲಿ ಡಾ. ವಿಷ್ಣುವರ್ಧನ್ ಮತ್ತು ಬಾಲಕೃಷ್ಣ ಅವರ ಪುಣ್ಯಭೂಮಿ ಅಥವಾ ಪರಿಸರ ಸ್ನೇಹಿ ಸ್ಮಾರಕ ನಿರ್ಮಾಣಕ್ಕೆ ಅವಕಾಶವನ್ನು ಕಲ್ಪಿಸಬೇಕೆಂದು ವಿನಂತಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಅಭಿಮಾನ್ ಸ್ಟುಡಿಯೋವನ್ನು ಸರ್ಕಾರ ಅಧೀನಕ್ಕೆ ತೆಗೆದುಕೊಂಡು, ಅಲ್ಲಿ ಒಂದು ಜೈವಿಕ ಶ್ವಾಶಕೋಶ ಉದ್ಯಾನವನವನ್ನು ನಿರ್ಮಿಸುವುದಾಗಿಯೂ ಮತ್ತು ವಿಷ್ಣುವರ್ಧನ್ ಅವರ ಸಮಾಧಿಗೆ ಸ್ಥಳವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಆಶ್ವಾಸನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಸ್ಮಾರಕದ ಇತಿಹಾಸವನ್ನೊಮ್ಮೆ ನೋಡುವುದಾದರೆ 2009ರ ಡಿ.30ರಂದು ವಿಷ್ಣುವರ್ಧನ್ ನಿಧನರಾಗಿದ್ದರು. ಬಳಿಕ ಅಭಿಮಾನ್ ಸ್ಟುಡಿಯೊದಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಡಾ ರಾಜ್‌ಕುಮಾರ್ ಸ್ಮಾರಕದಂತೆ, ಡಾ ವಿಷ್ಣುವರ್ಧನ್ ಹೆಸರಿನಲ್ಲೂ ಸ್ಮಾರಕ ನಿರ್ಮಾಣ ಆಗಬೇಕೆಂಬ ನಿರ್ಧಾರವಾಯಿತು. ಆಗ ಚಿತ್ರರಂಗದ ಹಲವರಿಗೆ ಮತ್ತು ಸರ್ಕಾರಕ್ಕೆ ಹೊಳೆದಿದ್ದು ‘ಅಭಿಮಾನ್ ಸ್ಟುಡಿಯೋ’! ಆಗ ಅದು ವಿವಾದಿತ ಜಾಗವೆಂಬ ಬಗ್ಗೆ ಯಾರೂ ಆಲೋಚಿಸಿರಲಿಲ್ಲ. ಬಳಿಕ ಆ ಜಾಗದಲ್ಲೇ ಸ್ಮಾರಕ ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬಂತು. ಅಂತ್ಯಸಂಸ್ಕಾರದ ಸ್ಥಳದಲ್ಲೇ ಸ್ಮಾರಕ ಮಾಡಬೇಕೆಂದು ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಒತ್ತಾಯಿಸಿದರು. ಇದಕ್ಕೆ ಮಣಿದ ರಾಜ್ಯ ಸರಕಾರ 2010-11ರ ಬಜೆಟ್‌ನಲ್ಲಿ 11 ಕೋಟಿ ರೂ. ಅನುದಾನ ಘೋಷಿಸಿತು. ಆದರೆ, ಅಭಿಮಾನ್ ಸ್ಟುಡಿಯೊದ ವಿವಾದಿತ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹಿರಿಯ ನಟ ಬಾಲಕೃಷ್ಣ ಕುಟುಂಬವು ವಿರೋಧ ವ್ಯಕ್ತಪಡಿಸಿತು. ಅಭಿಮಾನ್ ಸ್ಟುಡಿಯೊಗೆ ಸಂಬಂಧಿಸಿದ ಪ್ರಕರಣವು 2004ರಿಂದಲೂ ಕೋರ್ಟ್‌ನಲ್ಲಿತ್ತು. ಬಾಲಕೃಷ್ಣ ಅವರು ಅಭಿಮಾನ್ ಸ್ಟುಡಿಯೊಗಾಗಿ 20 ಎಕರೆ ಜಾಗ ಪಡೆದಿದ್ದರು. ಅದರಲ್ಲಿ 10 ಎಕರೆ ಜಾಗವನ್ನು ಬಾಲಕೃಷ್ಣ ಕುಟುಂಬವು ಮಾರಾಟ ಮಾಡಿ, ಉಳಿದ 10 ಎಕರೆಯಲ್ಲಿ ಸ್ಟುಡಿಯೊ ಅಭಿವೃದ್ಧಿ ಮಾಡುತ್ತೇವೆ ಎಂದಿತ್ತು. ಆ ಸಂದರ್ಭದಲ್ಲಿ ಸ್ಟುಡಿಯೊ ಅಭಿವೃದ್ಧಿಪಡಿಸದಿದ್ದರೆ ಜಾಗ ವಶಪಡಿಸಿಕೊಳ್ಳುವ ಅಧಿಕಾರ ಸರಕಾರಕ್ಕಿತ್ತು. ಆದರೆ, ಸ್ಟುಡಿಯೊ ಅಭಿವೃದ್ಧಿಯೂ ಆಗಲಿಲ್ಲ. ಸರಕಾರ ಆ ಜಾಗವನ್ನೂ ವಶಪಡಿಸಿಕೊಳ್ಳಲಿಲ್ಲ. ಈ ಸ್ಟುಡಿಯೊ ಜಾಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣದ ಹಿನ್ನಡೆಗೆ ಕಾರಣವಾಯಿತು. ಸರಕಾರ, ಸ್ಟುಡಿಯೊ ಕಾರ್ಯನಿರ್ವಹಣೆ ಸಂಬಂಧ ತನಿಖೆ ನಡೆಸಿತ್ತು. ತನಿಖಾ ತಂಡವು ಸ್ಟುಡಿಯೊದ 10 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಸರಕಾರವು ಬಾಲಕೃಷ್ಣರ ಮಕ್ಕಳಿಂದ ಭೂಮಿ ಪರಭಾರೆಯ ದಾಖಲೆಗಳು ಹಾಗೂ ದೃಢೀಕರಣ ಪತ್ರವನ್ನು ಮಾಡಿಸಿಕೊಳ್ಳಲಿಲ್ಲ. ನಂತರ ಬಾಲಕೃಷ್ಣರ ಮಕ್ಕಳು, ಸರಕಾರದ ಮುಟ್ಟುಗೋಲು ಆದೇಶದ ವಿರುದ್ಧ 2015ರಲ್ಲಿ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದರು.
ಸರಕಾರ ಸ್ಮಾರಕಕ್ಕೆ ಪಕ್ಕದಲ್ಲೇ ಮತ್ತೊಂದು ಜಾಗ ಗುರುತಿಸಿತು. ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆಯೂ ನಡೆಯಿತು. ಆದರೆ, ಅದು ಅರಣ್ಯ ಪ್ರದೇಶವೆಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಅಭಿಮಾನಿಗಳು ಬಾಲಕೃಷ್ಣರ ಕುಟುಂಬದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. 2023ರಲ್ಲಿ ಕೋರ್ಟ್, ಈ ಪ್ರಕರಣದಲ್ಲಿ ಅಭಿಮಾನಿಗಳಿಗೆ ಹಕ್ಕು ಇಲ್ಲಎಂದು ಹೇಳಿತ್ತು.
ಈ ನಡುವೆ ವಿಷ್ಣು ಕುಟುಂಬ ಮೈಸೂರಿಗೆ ಸ್ಮಾರಕ ಸ್ಥಳಾಂತರಕ್ಕೆ ಪಟ್ಟು ಹಿಡಿಯಿತು. ಇದರ ಮಧ್ಯೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಲಿ ಎಂದು ಪಟ್ಟು ಹಿಡಿದರು. ಕುಟುಂಬದವರ ಆಶಯದಂತೆ ಮೈಸೂರಿನ ಹೆಚ್.ಡಿ.ಕೋಟೆ ರಸ್ತೆಯಲ್ಲಿ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡ್ತು. ಮೈಸೂರಿನಲ್ಲಿ ಭೂಮಿ ಮಂಜೂರಾದರೂ, ರೈತರ ವಿರೋಧದಿಂದಾಗಿ ನಿರ್ಮಾಣ ವಿಳಂಬವಾಯಿತು. ಕೊನೆಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ ಮತ್ತು ಲೋಕಾರ್ಪಣೆ ಕೂಡ ಆಗಿದೆ. . ಮೈಸೂರಿನ ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಲಾದ ಸ್ಮಾರಕದಲ್ಲಿ 'ಆಪ್ತರಕ್ಷಕ' ಚಲನಚಿತ್ರದ ಪಾತ್ರದ ಮಾದರಿಯಲ್ಲಿ ನಿರ್ಮಿಸಲಾದ 7 ಅಡಿ ಎತ್ತರದ ಪ್ರತಿಮೆಯ ಅನಾವರಣವಾಗಿದೆ.
ಇದಕ್ಕೂ ಮಿಗಿಲಾಗಿ ವಿಷ್ಣುವರ್ಧನ್ ಹಗೂ ನಟ ಬಾಲಕೃಷ್ಣ ಅವರ ಸಂಬಂಧ ಬಲವಾದದ್ದು. ಇಬ್ಬರ ಮಧ್ಯೆ ತಂದೆ - ಮಗನ ಬಾಂಧವ್ಯ, ಅನುಬಂಧ ಇತ್ತು. ಬಾಲಣ್ಣ ‘ಅಭಿಮಾನ್ ಸ್ಟುಡಿಯೋ’ ಆರಂಭಿಸಬೇಕು ಎಂದಾಗ ಅಲ್ಲಿಗೆ ಬಂದು ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಿ, ಸಣ್ಣ ಗುಡಿ ಕಟ್ಟಲು ಅಡಿಗಲ್ಲು ಹಾಕಿದ್ದೇ ಡಾ ವಿಷ್ಣುವರ್ಧನ್.. ಈ ಗಣಪತಿ ದೇವಸ್ಥಾನವನ್ನೂ ಸಹ ಈಗ ನೆಲಸಮ ಮಡಲಾಗಿದೆ! ಅಷ್ಟು ಮಾತ್ರವಲ್ಲ ನಟ ಬಾಲಕೃಷ್ಣ ಕನಸಿನ ಅಭಿಮಾನ್ ಸ್ಟುಡಿಯೋದಲ್ಲಿ ಬಾಲಣ್ಣ ಮತ್ತವರ ಪತ್ನಿ ಸ್ಮಾರಕವಿದ್ದಿತ್ತು. ಅದನ್ನೂ ಸಹ ಈಗ ಧ್ವಂಸ ಮಾಡಲಾಗಿದೆ. ಈ ಬಾಲಕೃಷ್ಣ ದಂಪತಿಗಳ ಸ್ಮಾರಕ ನಿರ್ಮಾಣ ಮಾಡಿದ್ದು ನಟ ಕಿಚ್ಚ ಸುದೀಪ್.
ಇದಾಗಿ ಅಭಿಮಾನ್ ಸ್ಟುಡಿಯೋ ಸ್ಥಾಪನೆ ಆಗಿದ್ದು ಹೇಗೆ ಎನ್ನುವ ಷಯ ನೋಡುವುದಾದರೆ ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದಲ್ಲಿ ಮಾರ್ಚ್ 27, 1970 ರಂದು ಸ್ಟುಡಿಯೋಗಾಗಿ ಬಾಲಕೃಷ್ಣ ಅವರಿಗೆ ಸರ್ಕಾರ 20 ಎಕರೆ ಜಮೀನು ಮಂಜೂರು ಮಾಡಿತ್ತು. ಅಭಿಮಾನಿಗಳಿಂದ ಬಾಲಣ್ಣ ದೇಣಿಗೆ ಸಂಗ್ರಹಿಸಿ, ತಾವು ಜೀವತಾವಧಿಯಲ್ಲಿ ದುಡಿದಿದ್ದನ್ನೆಲ್ಲಾ ಸುರಿದು, ತೀವ್ರ ಕಷ್ಟದಿಂದ ಬಾಲಣ್ಣ ಕಟ್ಟಿದ ಸ್ಟುಡಿಯೋ ‘ಆಭಿಮಾನ್’. ಈ ಸ್ಟುಡಿಯೋ ಮೇಲೆ ಬಾಲಣ್ಣ ಬಹಳ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಂದುಕೊಂಡಂತೆ ಯಾವುದೂ ಸಾಗಲಿಲ್ಲ. ಬಾಲಣ್ಣ ನಿಧನದ ಬಳಿಕ ಅಭಿಮಾನ್ ಸ್ಟುಡಿಯೋದ ಆಡಳಿತವನ್ನ ಮಗ ಗಣೇಶ್ ವಹಿಸಿಕೊಂಡರು. ಬಾಲಣ್ಣ ಸಾವನ್ನಪ್ಪಿದ ಕೆಲವೇ ವರ್ಷಗಳಲ್ಲಿ ಸ್ಟುಡಿಯೋದ ಜಾಗವನ್ನ ತಮ್ಮ ಹೆಸರಿಗೆ ವರ್ಗಾವಣೆ ಆಗಬೇಕು ಅಂತ ಮಕ್ಕಳಾದ ಗಣೇಶ್ ಮತ್ತು ಶ್ರೀನಿವಾಸ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. 20 ಎಕರೆ ಜಮೀನನ್ನು ತಲಾ 10 ಎಕರೆಯಂತೆ ಪಾರ್ಟಿಷನ್ ಡೀಡ್ ಮಾಡಿಸಿಕೊಂಡರು. ಅದರಲ್ಲಿ ಹೆಣ್ಣು ಮಕ್ಕಳಿಗೆ ಗೊತ್ತಾಗದಂತೆ 10 ಎಕರೆಯನ್ನ ಮಾರಿಬಿಟ್ಟರು. ಹೀಗಾಗಿ, 2004ರಲ್ಲಿ ಗೀತಾ ಬಾಲಿ ಕೋರ್ಟ್ ಮೆಟ್ಟಿಲೇರಿದರು. ಇನ್ಜಂಕ್ಷನ್ ಆರ್ಡರ್ ತಂದರು.
ಸರ್ಕಾರಿ ಆದೇಶ ಸಂಖ್ಯೆ AFD-54-FGL-69 (09-04-1969) ಅನ್ವಯ, ಮೈಲಸಂದ್ರ ಗ್ರಾಮದ ಸರ್ವೆ ನಂ 26ರಲ್ಲಿ 20 ಎಕರೆ ಪ್ರದೇಶವನ್ನು ಬಾಲಕೃಷ್ಣ ಅವರಿಗೆ ಅಭಿಮಾನ್ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. RD-37-GNA-69 (21-03-1970) ಅನ್ವಯ, ಅಭಿಮಾನ್ ಸ್ಟುಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು, ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾರಾಟ/ಪರಭಾರೆ ಮಾಡದಿರಲು ಷರತ್ತು ವಿಧಿಸಲಾಗಿತ್ತು. ಒಂದು ವೇಳೆ ಷರತ್ತು ಉಲ್ಲಂಘನೆಯಾದರೆ ಮಂಜೂರಾತಿಯನ್ನ ರದ್ದುಪಡಿಸಿ, ಭೂಮಿಯನ್ನು ಸರ್ಕಾರಕ್ಕೆ ಹಿಂಪಡೆಯಲಾಗುವುದು ಎಂದು ಆದೇಶದಲ್ಲಿ ನಮೂದಾಗಿತ್ತು. 20 ಎಕರೆ ಪೈಕಿ 10 ಎಕರೆ ಜಮೀನನ್ನು ಮಾರಾಟ ಮಾಡಿ, ಬಂದ ಹಣದಿಂದ ಸ್ಟುಡಿಯೋವನ್ನು ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಬೇಕೆಂಬ ಷರತ್ತುಗಳೊಂದಿಗೆ ಬಾಲಣ್ಣ ಅವರ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್‌ಗೆ ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಅನುಮತಿ ನೀಡಿದ್ದರು. ಪರಿಣಾಮ, ಶ್ರೀನಿವಾಸ್ ಹಾಗೂ ಗಣೇಶ್ ಜಮೀನು ಮಾರಾಟ ಮಾಡಿದರು. ಮಾರಾಟ ಮಾಡಿದ ಹಣ ಎಲ್ಲಿ ಹೋಗಿದೆ? ಏನಕ್ಕಾಗಿ ಬಳಕೆ ಆಗಿದೆ? ಯಾರಿಗೂ ಗೊತ್ತಿಲ್ಲ. ಅಭಿಮಾನ್ ಸ್ಟುಡಿಯೋ ಮಾತ್ರ ಅಭಿವೃದ್ಧಿ ಕಾಣಲಿಲ್ಲ.
‘’1965ರಲ್ಲಿ ಸ್ಟುಡಿಯೋಗಾಗಿ ನಮ್ಮ ತಂದೆಗೆ ಸರ್ಕಾರ 5 ಎಕರೆ ಜಮೀನು ನೀಡಿತ್ತು. 1970ರಲ್ಲಿ 15 ಎಕರೆ ಹೆಚ್ಚುವರಿಯಾಗಿ ಕೊಟ್ಟು ಒಟ್ಟು 20 ಎಕರೆ ಮಂಜೂರು ಮಾಡಿತ್ತು. ಇದಕ್ಕಾಗಿ ನಮ್ಮ ತಂದೆ ಒಟ್ಟು 6 ಸಾವಿರ ರೂಪಾಯಿ ಹಣ ಕಟ್ಟಿದ್ದರು. ನನ್ನ ತಂದೆಯ ಹೆಸರಿಗೆ ಪಾಣಿಯನ್ನೂ ಮಾಡಿಕೊಟ್ಟರು. ಮೊದಲು ಜಮೀನನ್ನು ಕೊಟ್ಟಿದ್ದು ಲೀಸ್‌ಗೆ. 6 ಸಾವಿರ ರೂಪಾಯಿ ಕಟ್ಟಿದ್ಮೇಲೆ ನಮ್ಮ ತಂದೆಯ ಹೆಸರಿಗಾಗಿದೆ. ದಾಖಲೆಗಳ ಪ್ರಕಾರ, 20 ಎಕರೆ ಜಾಗ ನಮ್ಮ ತಂದೆಯ ಹೆಸರಲ್ಲಿತ್ತು. ಪಾಣಿ ನಮ್ಮ ತಂದೆಯ ಹೆಸರಿನಲ್ಲಿತ್ತು. ತಂದೆಯ ಹೆಸರಿನಲ್ಲೇ ಟ್ಯಾಕ್ಸ್ ಕಟ್ಟಲಾಗಿದೆ. 1995ರಲ್ಲಿ ತಂದೆ ತೀರಿಕೊಂಡರು. ಅಪ್ಪ ತೀರಿಕೊಂಡ ಬಳಿಕ ಸ್ಟುಡಿಯೋವನ್ನ ನಮಗೆ ಗೊತ್ತಿಲ್ಲದೆ ಶ್ರೀನಿವಾಸ್ ಹಾಗೂ ಗಣೇಶ್ ತಲಾ 10 ಎಕರೆಯಂತೆ ಪಾರ್ಟಿಷನ್ ಡೀಡ್ ಮಾಡಿಸಿಕೊಂಡಿದ್ದಾರೆ. ಇದು ಕಾನೂನಿಗೆ ವಿರುದ್ಧ. ಶ್ರೀನಿವಾಸ್ ಹೆಸರಿಗೆ ಬಂದ 10 ಎಕರೆಯನ್ನ 2003 ರಿಂದ 4 ಮಂದಿಗೆ ಮಾರಾಟ ಮಾಡಲಾಗಿದೆ. ಇದರಲ್ಲಿ ರಾಜಕಾರಣಿಗಳ ಕೈವಾಡ ಇದೆ. ಗಣೇಶನ ಹೆಸರಿನಲ್ಲಿದ್ದ 10 ಎಕರೆ ಜಾಗ ಮಾತ್ರ ಉಳಿದಿದೆ. ಹೆಣ್ಮಕ್ಕಳಿಗೂ ಅಧಿಕಾರ ಇದೆ ಅಂತ ನಾನು 2004ರಲ್ಲಿ ಕೋರ್ಟ್‌ನಲ್ಲಿ ಕೇಸ್ ಹಾಕಿದೆ’’ ಇದು ಬಾಲಕೃಷ್ಣ ಪುತ್ರಿ ಗೀತಾ ಬಾಲಿ ಮಾತು. 2018ರಲ್ಲಿ ಗೀತಾ ಬಾಲಿ ಅವರ ತಮ್ಮ ಶ್ರೀನಿವಾಸ್ ತೀರಿಕೊಂಡರು. 2020ರಲ್ಲಿ ಗಣೇಶ್ ಅವರಿಂದ ಕಾರ್ತಿಕ್ (ಶ್ರೀನಿವಾಸ್ ಮಗ) ಬಲವಂತವಾಗಿ 10 ಎಕರೆ ಜಾಗವನ್ನ ಗಿಫ್ಟ್ ಡೀಡ್ ಆಗಿ ಬರೆಯಿಸಿಕೊಂಡಿದ್ದಾರೆ ಎಂದು ಗೀತಾ ಆರೋಪಿಸಿದ್ದಾರೆ. ಹಾಗೆ ಕಾರ್ತಿಕ್ ಹೆಸರಿಗೆ ಜಾಗ ಬಂದ ನಂತರದಲ್ಲಿ 2021ರಲ್ಲಿ ಕಾರ್ತಿಕ್ 14 ಕೋಟಿ (14,37,15,000) ರೂಪಾಯಿಗೆ ಒಂದು ಎಕರೆ ಜಮೀನನ್ನು ಅನಧಿಕೃತವಾಗಿ ಮಾರಾಟ ಮಾಡಿದ್ದಾರೆ ಎಂಬ ಅಂಶ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಬೆಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬರೆದ ಪತ್ರದಲ್ಲಿದೆ.
ಒಟ್ಟಾರೆಯಾಗಿ ಹೇಲುವುದಾದರೆ ಇನ್ನು ಮುಂಡಾದರೂ ಮೇರುನಟನ ವ್ಯಕ್ತಿತ್ವಕ್ಕೆ ತಕ್ಕಂತೆ ಯಾವ ವಿವಾದ ಅಡೆತಡೆ ಇಲ್ಲದೆ ಸ್ಮಾರಕ ನಿರ್ಮಾಣವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನ, ಪುಣ್ಯತಿಥಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ವಿಷ್ಣುವರ್ಧನ್ ದರ್ಶನ ಪಡೆಯುವಂತಾದರೆ ಅಷ್ಟೇ ಸಾಕು.
ಅಕ್ಟೋಬರ್ 2025"ವಂದೇ ಕರ್ನಾತಕ" ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ..
No comments:
Post a Comment