- ರಾಘವೇಂದ್ರ ಅಡಿಗ ಎಚ್ಚೆನ್.
ಅಗ್ರಮಾನ್ಯ ಕಾದಂಬರಿಕಾರ ಡಾ|| ಎಸ್.ಎಲ್. ಭೈರಪ್ಪನವರು ಹತ್ತಿರಹತ್ತಿರ ಆರು ದಶಕಗಳ ಅವಧಿಯಲ್ಲಿ ಭೈರಪ್ಪನವರು ನಿರ್ಮಿಸಿರುವ ಇಪ್ಪತ್ತನಾಲ್ಕು ಕಾದಂಬರಿಗಳನ್ನು ಸಾಹಿತ್ಯಜಗತ್ತಿನ ಒಂದು ಅದ್ಭುತ ಅಥವಾ ವಿಸ್ಮಯ. ಕಳೆದ ಎರಡು ಪೀಳಿಗೆಗಳ ಕನ್ನಡ ಓದುಗರನ್ನು ಸೂಜಿಗಲ್ಲಿನಂತೆ ಹಿಡಿದಿರಿಸಿಕೊಂಡಿರುವವರು, ಇಡೀ ಭಾರತದಲ್ಲಿಯೆ ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗಿರುವ ಕಾದಂಬರಿಗಳ ರಚಯಿತರು, ಭಾರತದ ಅನ್ಯಭಾಷೆಗಳಿಗೆ ಅನುವಾದಗೊಂಡಿರುವ ಅತ್ಯಧಿಕಸಂಖ್ಯೆಯ ಕನ್ನಡ ಕಾದಂಬರಿಗಳನ್ನು ನೀಡಿರುವವರು - ಎಂಬ ರೀತಿಯ ಭೈರಪ್ಪನವರ ಕಾದಂಬರಿಗಳ ಅನನ್ಯತೆಯಂತೂ ಎದ್ದುಕಾಣುವಂಥದಾಗಿದೆ. ಇಂತಹಾ ಮೇರು ವ್ಯಕ್ತಿತ್ವದ ಸಾಹಿತಿ ಎಸ್.ಎಲ್. ಭೈರಪ್ಪ ನಮ್ಮನ್ನೆಲ್ಲಾ ಅಗಲಿದ್ದಾರೆ. ಈ ಅಗಲಿಕೆ ಭಾರತೀಯ ಸಾಹಿತ್ಯ ಲೋಕಕ್ಕೊಂದು ದೊಡ್ಡ ನಷ್ಟವನ್ನುಂಟುಮಾಡಿದೆ. ಭೈರಪ್ಪ ಕನ್ನಡ ಸಾಹಿತ್ಯದಲ್ಲಿ ದಾರ್ಶನಿಕತೆ, ಇತಿಹಾಸ, ಸಮಾಜದ ಒಳನೋಟಗಳನ್ನು ಸೃಜನಾಶೀಲ ರೂಪದಲ್ಲಿ ಮಾಡಿಕೊಂಡು ಬರೆಯುವ ಮೂಲಕ ವಿಶಿಷ್ಟ ಸ್ಥಾನ ಹೊಂದಿದ್ದರು. ತೊಗಲುಬೊಂಬೆಯ ಆಟದ ಸೂತ್ರಧಾರ ಬೊಂಬೆಗಳನ್ನು ತನಗೆ ಬೇಕಾದಂತೆ ಕುಣಿಸಿದಂತೆ, ತಮ್ಮ ಕಾದಂಬರಿಗಳಲ್ಲಿ ಪಾತ್ರಗಳನ್ನು ಭೈರಪ್ಪ ಅವರು ಕುಣಿದುತ್ತಿದ್ದರೀನ್ನಬೇಕು.
ಎಸ್.ಎಲ್. ಭೈರಪ್ಪ ಅವರ ಪೂರ್ಣ ಹೆಸರು ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ. 1931ರ ಆ.20ರಲ್ಲಿ ಹಾಸನ ಜಿಲ್ಲೆ ಸಂತೆಶಿವರ ಗ್ರಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಭೈರಪ್ಪನವರು, ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನ ಪಡೆದಿದ್ದರು. ಕಿತ್ತು ತಿನ್ನುವ ಬಡತನದ ನಡುವೆಯೂ ತಾಯಿಯಿಂದ ಪ್ರಭಾವಿತರಾಗಿದ್ದ ಅವರು, ಗಾಂಧೀಜಿ ಮೌಲ್ಯಗಳಿಗೂ ಮಾರಿ ಹೋಗಿದ್ದರು. ಸ್ವಾತಂತ್ರ್ಯ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಆಗಿನ್ನೂ ಕೇವಲ 13 ವರ್ಷ. ಬಳಿಕ ಪ್ರೌಢ ಶಿಕ್ಷಣ ಮತ್ತು ಕಾಲೇಜು ದಿನಗಳನ್ನ ಮೈಸೂರಿನಲ್ಲಿ ಪೂರೈಸಿದ್ದ ಭೈರಪ್ಪನವರು, ಸುವರ್ಣ ಪದಕದೊಂದಿಗೆ ಎಂ.ಎ ತೇರ್ಗಡೆಯಾಗಿದ್ದರು. ಇಂಗ್ಲೀಷ್ನಲ್ಲಿ ರಚಿಸಿದ “ಸತ್ಯ ಮತ್ತು ಸೌಂದರ್ಯ” ಎಂಬ ಮಹಾ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಹುಬ್ಬಳ್ಳಿ, ಗುಜರಾತ್, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಕೈಗೊಂಡಿದ್ದರು. ʻಧರ್ಮಶ್ರೀʼ ಕಾದಂಬರಿಯಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ ʻಉತ್ತರಕಾಂಡʼದವರೆಗೆ ಜೀವನದ ವಿವಿಧ ಸ್ತರಗಳ ಕುರಿತು ಚಿಂತನೆ ಮಾಡುವಂತಹ ಬೃಹತ್ ಕಥಾನಕಗಳನ್ನು ಕೊಡುಗೆಯಾಗಿ ನೀಡಿರುವ ಕರುನಾಡಿನ ಜೀವಂತ ಸಾಹಿತ್ಯ ದಂತಕಥೆ ಎಂದರೆ ಅವರೇ ಎಸ್.ಎಲ್. ಭೈರಪ್ಪ.
ಭೈರಪ್ಪ ಓರ್ವ ಭಾರತೀಯರ ಪರಂಪರೆಯ ಹಿನ್ನೆಲೆಯಿಂದ ಬಂದವರು. ಮೇಲಾಗಿ ಒಬ್ಬ ತತ್ತ್ವಶಾಸ್ತ್ರಜ್ಞರೂ ಆಗಿದ್ದರು. ಹಾಗಾಗಿ ಅವರ ಮಾತುಗಳು ಚರ್ಚೆಗೆ ಆಸ್ಪದ ನೀಡುವಂತಿರುತ್ತಿತ್ತು. ಅಲ್ಲಚೆ ಭಾರತ ಪರಂಪರೆಯ ಮೂಲವೇ ಚರ್ಚೆ. ನಮ್ಮ ವೇದ, ಉಪನಿಷತ್ ಗಳು ಚರ್ಚೆಯ ಮೂಲಕ ಕುದ್ದು ಪಾಕವಾದ ಅಂಶಗಳನ್ನು ಪಡೆದುಕೊಂಡವುಗಳು. ಹಾಗೆಯೇ ಭೈರಪ್ಪ ಅವರ ಕೃತಿಗಳಲ್ಲಿ ಸಹ ಇಂತಹಾ ಚರ್ಚೆಯ ವಸ್ತುಗಳಿದ್ದವು ಅವರ ನಾನೇಕೆ ಬರೆಯುತ್ತೇನೆ ಕೃತಿಯಲ್ಲಿ ಹೇಳುತ್ತಾರೆ. ನನ್ನ ಕಾದಂಬರಿಯ ಪಾತ್ರದ ವಿಷಯಗಳು ಕುದ್ದು ಪಾಕವಾಗಿ ಹದಕ್ಕೆ ಬಂದ ನಂತರವೇ ಬರಹಕ್ಕೆ ಕೂರುತ್ತೇನೆ ಅದರ ಓಘ ಕೂಡ ತಾನಾಗಿಯೇ ಚರ್ಚೆ ಮಾಡಿಕೊಂಡು ಮುಂದೆ ಹೋಗುತ್ತದೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಹಾಗಾಗಿ ಭೈರಪ್ಪ ಕೇವಲ ಒಬ್ಬ ಕಾದಂಬರಿಕಾರರಲ್ಲ ಬದಲಾಗಿ ತತ್ತ್ವಜ್ಞಾನಿಯಾಗಿ ತರ್ಕಶಾಸ್ತ್ರ ಪ್ರವೀಣರಾಗಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಹಾಗೆಯೇ ಭೈರಪ್ಪ ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೂ ಪ್ರಯಾಣ ಬೆಳೆಸಿದ್ದವರು. ಸುತ್ತಾಡದೆ ಅವರು ಏನನ್ನೂ ಬರೆದವರಲ್ಲ. ಹಾಗಾಗಿಯೇ ಅವರ ಸಾಹಿತ್ಯ ಅವರ ಜೀವನಾನುಭವದ ಕಣಜವಾಗಿದೆ.
ವಿಶೇಷ ಎಂದರೆ ಕೊನೆಯ ದಿನಗಳಲ್ಲಿ ವಿಶ್ವೇಶ್ವರ ಭಟ್ಟರು ಮತ್ತು ಅವರ ಶ್ರೀಮತಿಯವರು ಭೈರಪ್ಪನವರನ್ನು ತಂದೆಯಂತೆ ಗೌರವಿಸಿದರು. ಪುಟ್ಟ ಮಗುವಿನಂತೆ ಆರೈಕೆ ಮಾಡಿದರು. ಯಾವುದೋ ಕಾರಣಗಳಿಗೆ ಮೈಸೂರು ತೊರೆದು ಬಂದಿದ್ದ ಭೈರಪ್ಪ ಕಳೆದ ಕೆಲವು ತಿಂಗಳುಗಳಿಂದ ಭಟ್ಟರ ಮನೆಯಲ್ಲಿದ್ದರು.
ಭೈರಪ್ಪ ಅವರ ಸೇವೆ ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರವೇ ಸೀಮಿತವಲ್ಲ ಎನ್ನುವುದು ಗಮನಾರ್ಹ. ಅವರು ತಮ್ಮ ಹುಟ್ಟೂರಾದ ಸಂತೇಶಿವರ ಗ್ರಾಮದ ಅಭಿವೃದ್ಧಿಗಾಗಿ ತಮ್ಮ ಕೊನೆಯ ಕನಸನ್ನು ಈಡೇರಿಸಿಕೊಂಡರು. 90ರ ವಯಸ್ಸಿನಲ್ಲೂ ಅವರು ಸಂತೇಶಿವರದ ಅಭಿವೃದ್ಧಿಗಾಗಿ ಚಿಂತನೆ ಮಾಡಿ, ಕಾರ್ಯಾಚರಣೆಗೆ ತೊಡಗಿದ್ದರು. ಅವರ ಕೊನೆಯ ಆಸೆಯಾಗಿ, ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು ಇತ್ತು. ಈ ಉದ್ದೇಶದಿಂದ ಅವರು ಸರ್ಕಾರಕ್ಕೆ 25 ಕೋಟಿ ರೂಪಾಯಿ ಅನುದಾನಕ್ಕಾಗಿ ಮನವಿ ಮಾಡಿದ್ದರು. ಈ ಮನವಿಯನ್ನು ಆದ್ಯತೆಯಿಂದ ಪರಿಗಣಿಸಿದ ಬಿಜೆಪಿ ಸರ್ಕಾರವು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗೆ ಅನುಮೋದನೆ ನೀಡಿತು. ನಂತರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 25 ಕೋಟಿ ರೂಪಾಯಿ ಬಿಡುಗಡೆ ಮಾಡಿ, ಯೋಜನೆಯನ್ನು ಜಾರಿಗೊಳಿಸಿತು. ಪಕ್ಷಾತೀತವಾಗಿ ಎಲ್ಲರ ಸಹಕಾರದಿಂದ ಈ ಯೋಜನೆ ಪೂರ್ಣಗೊಂಡು, ಕೆರೆಗಳು ನೀರಿನಿಂದ ತುಂಬಿದವು. ಈ ಸಾಧನೆಯನ್ನು ಭೈರಪ್ಪ ಅವರು ತಮ್ಮ ಊರಿಗೆ ಭೇಟಿ ನೀಡಿ, ಕೆರೆಯ ನೀರಿನ ಮೇಲೆ ದೇವಿಯ ವಿಹರವನ್ನು ಮಾಡಿ ಆಚರಿಸಿದರು.
ಇದರೊಡನೆ ಭೈರಪ್ಪ ಅವರು ತಮ್ಮ ದುಡಿದ ಹಣವನ್ನು ಸಮಾಜ ಸೇವೆಗೆ ಮೀಸಲಾಯಿಸಲು ‘ಡಾ. ಎಸ್.ಎಲ್. ಭೈರಪ್ಪ ಪ್ರತಿಷ್ಠಾನ’ ಸ್ಥಾಪಿಸಿದ್ದರು. ಈ ಪ್ರತಿಷ್ಠಾನದ ಮೂಲಕ ಅವರು ಸಂತೇಶಿವರದಲ್ಲಿ ‘ಗೌರಮ್ಮಾ ಟ್ರಸ್ಟ್’ ಸ್ಥಾಪಿಸಿ, ಗ್ರಂಥಾಲಯ ಮತ್ತು ಸಭಾಂಗಣವನ್ನು ನಿರ್ಮಿಸಿದರು. ಇದರೊಂದಿಗೆ ಗ್ರಾಮದ ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಒಂದು ಹೊಸ ಆಯಾಮ ನೀಡಿದರು. ನೀರಾವರಿ ಯೋಜನೆಯನ್ನು ‘ಡಾ. ಎಸ್.ಎಲ್. ಭೈರಪ್ಪ ಏತ್ ನೀರಾವರಿ ಯೋಜನೆ’ ಎಂದು ನಾಮಕರಣ ಮಾಡಲಾಗಿದ್ದು, ಅವರ ಕೊಡುಗೆಯನ್ನು ಶಾಶ್ವತಗೊಳಿಸಿದೆ.
ಇನ್ನು ಭೈರಪ್ಪ ಆವರ ಸಾಹಿತ್ಯ ಕೃಷಿಯನ್ನು ಗಮನಿಸಿ ಇವರಿಗೆ 2023ರಲ್ಲಿ ಕೇಂದ್ರ ಸರ್ಕಾರ, ಪದ್ಮಭೂಷಣ ಗೌರವ ನೀಡಿತ್ತು. , ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಗೌರವ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ , ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಗುಲಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳನ್ನು ಅವರು ಪಡೆದಿದ್ದಾರೆ. ಅವರ ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ಮತದಾನ, ವಂಶವೃಕ್ಷ ಕಾದಂಬರಿಗಳು ಚಲನಚಿತ್ರಗಳಾಗಿವೆ. ಅವರ ಪರ್ವ ಕಾದಂಬರಿಯು ಅನೇಕ ಚರ್ಚೆಗಳಿಗೆ ನಾಂದಿ ಹಾಡಿತ್ತು. ಮಹಾಭಾರತದ ಕಾಲದ ಸಮಾಜವನ್ನು ಒರೆಗೆ ಹಚ್ಚುವಂಥ ಕೆಲಸವನ್ನು ಆ ಕಾದಂಬರಿಯಲ್ಲಿ ಭೈರಪ್ಪನವರು ಮಾಡಿದ್ದರು. ಅದು ಹೆಚ್ಚು ಚರ್ಚೆಗೆ ಒಳಗಾಗಿತ್ತು.
ಅಂತಿಮವಾಗಿ ಭೈರಪ್ಪ ಅವರ ಬಗ್ಗೆ ಬರೆಯುವುದೆಂದರೆ ಅದೊಂದು ಅಪೂರ್ಣ ಬರಹವೇ ಆಗುತ್ತದೆ. ಏಕೆಂದರೆ ಏನನ್ನು ಎಷ್ಟು ಬರೆದರೂ ಅದು ಮುಗಿಯುವುದಿಲ್ಲ. ಮತ್ತೇನೋ ಇದೆ ಎನ್ನಿಸುವಂತಾಗಿದೆ. ಹಾಗಾಗಿ ಈ ಲೇಖನವನ್ನೂ ಸಹ ನಾನು ಪರಿಪೂರ್ಣ ಲೇಖನ ಎನ್ನುವುದಿಲ್ಲ ಇದೊಂದು ಅಪೂರ್ಣ ಲೇಖನ. ಭೈರಪ್ಪ ಅವರ ವ್ಯಕ್ತಿತ್ವದ ಅಗಾಧತೆ ಹಾಗಿದೆ. ಅವರು ಭೌತಿಕವಾಗಿ ನಮ್ಮನ್ನು ತೊರೆದರೂ ಕನ್ನಡ ಸಾಹಿತ್ಯದೊಂದಿಗೆ ಅವರ ಮೇರು ಕಾಣಿಕೆಗಳ ರೂಪದಲ್ಲಿ ಸದಾ ಕಾಲ ಜೀವಂತವಿರಲಿದ್ದಾರೆ.
ಎಸ್ಎಲ್ ಭೈರಪ್ಪ ಕಾದಂಬರಿಗಳು
ಭೀಮಕಾಯ
ಬೆಳಕು ಮೂಡಿತು
ಧರ್ಮಶ್ರೀ
ದೂರ ಸರಿದರು
ಮತದಾನ
ವಂಶವೃಕ್ಷ
ಜಲಪಾತ
ನಾಯಿ ನೆರಳು
ತಬ್ಬಲಿಯು ನೀನಾದೆ ಮಗನೆ
ಗೃಹಭಂಗ
ನಿರಾಕರಣ
ಗ್ರಹಣ
ದಾಟು
ಅನ್ವೇಷಣ
ಪರ್ವ
ನಲೆ
ಸಾಕ್ಷಿ
ಅಂಚು
ತಂತು
ಸಾರ್ಥ
ಮಂದ್ರ
ಆವರಣ
ಕವಲು
ಯಾನ
ಉತ್ತರಕಾಂಡ
ಸಿನಿಮಾಗಳಾದ ಕಾದಂಬರಿಗಳು
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿನೆರಳು.
ಭೈರಪ್ಪ ಅವರಿಗೆ ಒಲಿದು ಬಂದಿರುವ ಪ್ರಶಸ್ತಿಗಳು - 2010ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ, ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಕ್ಟೋಬರ್ 2025"ವಂದೇ ಕರ್ನಾತಕ" ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ..
No comments:
Post a Comment