ಕೊಟ್ಟಿಯೂರು (Kottiyoor)
ಸುತ್ತಲೂ ದಟ್ಟಕಾಡು. ನಡುವಲ್ಲೊಂದು ವಾವಲಿ ನದಿ, ನದಿಯ ಆಕಡೆಯೊಂದು ಈ ಕಡೆಯೊಂದು ಒಂದೇ ದೇವಸ್ಥಾನದ ಎರಡು ಭಾಗಗಳು. ಅದುವೇ ಕೊಟ್ಟಿಯೂರು ದೇವಸ್ಥಾನ ಕೇರಳದ ಕಣ್ಣುರು ಜಿಲ್ಲೆಯ ಬೆಟ್ಟಗುಡ್ಡಗಳ ಮಧ್ಯೆ ಅಂಕು ಡೊಂಕಾಗಿ ಹಚ್ಚ ಹಸಿರ ಪ್ರಕೃತಿ ಮಧ್ಯೆ ಸಾಗೋ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಕೊಟ್ಟಿಯೂರು ದೇವಸ್ಥಾನ ಸಿಗುತ್ತದೆ. ಬೆಂಗಳೂರಿನಿಂದ ಸುಮಾರು 278 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ನೀವು ವಿಮಾನ ಮಾರ್ಗದ ಮೂಲಕ ಹೋಗಲು ಬಯಸಿದರೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಈ ಪವಿತ್ರವಾದ ದೇವಾಲಯವಿದೆ. ಇಲ್ಲಿಗೆ ನೀವು ಟ್ಯಾಕ್ಸಿಯ ಮೂಲಕ ಭೇಟಿ ನೀಡಬಹುದು. ಇಲ್ಲಿ ಎರಡು ದೇವಸ್ಥಾನವಿದೆ. ಒಂದು ಇಕ್ಕರೆ ಕೊಟ್ಟಿಯೂರು ಮತ್ತಿನ್ನೊಂದು ಅಕ್ಕರೆ ಕೊಟ್ಟಿಯೂರು. ಇಕ್ಕರೆ ಕೊಟ್ಟಿಯೂರು ವರ್ಷದ 11 ತಿಂಗಳೂ ತೆರೆದಿರುತ್ತದೆ. ಆದ್ರೆ ಅಕ್ಕರೆ ಕೊಟ್ಟಿಯೂರು ವರ್ಷದಲ್ಲಿ ಕೇವಲ 28 ದಿನಗಳು ಮಾತ್ರ ತೆರೆದಿರುತ್ತದೆ. ಈ ದೇವಸ್ಥಾನವೇ ತನ್ನ ವಿಶಿಷ್ಟ ನೆಲೆ, ಭಾವನೆ ಮತ್ತು ಸರಳತೆಯಿಂದಾಗಿ ಕೇರಳದಲ್ಲಿ ಮನೆ ಮಾತಾಗಿದೆ.
ಇದು ಬೃಹ್ಮ ವಿಷ್ಣು ಮಹೇಶ್ವರ ಸೇರಿದಂತೆ ಸಕಲ ದೇವಾನುದೇವತೆಗಳೂ ಒಟ್ಟಿಗಿರೋ(ಕೂಡಿ) ಊರು, ಹಾಗಾಗಿ ಕೂಡಿಯೂರು ಅನ್ನೋ ಹೆಸರು ಬಂತು. ಕಾಲಕ್ರಮೇಣ ಕೂಡಿಯೂರು ಅನ್ನೋದು ಜನರ ಬಾಯಲ್ಲಿ ಕೊಟ್ಟಿಯೂರು ಆಗಿದೆ.. ಇನ್ನೊಂದು ರೀತಿಯಲ್ಲಿ ನೋಡಿದರೆ ದೇವಾಲಯಕ್ಕೆ ಕೊಟ್ಟಿಯೂರು ಎಂಬ ಹೆಸರು ಕತ್ತಿ-ಯೂರ್ ನಿಂದ ವಿಕಸನಗೊಂಡಿದೆ, ಇದು ಪುರಳಿಮಲೆಯ ಕಟ್ಟನ್ ರಾಜವಂಶದೊಂದಿಗೆ ಸಂಬಂಧ ಹೊಂದಿದೆ.
ನದಿಯ ಪಶ್ಚಿಮ ದಿಕ್ಕಿನಲ್ಲಿ ಬೃಹತ್ ಶಾಶ್ವತ ದೇವಸ್ಥಾನದ ಕಟ್ಟಡಗಳನ್ನು ಹೊಂದಿರೋ, ವರ್ಷದ ಹನ್ನೊಂದು ತಿಂಗಳು ತೆರೆದಿದ್ದು ಒಂದು ತಿಂಗಳು ಮುಚ್ಚಲಾಗೋ ದೇವಾಲಯ, ವಡಕ್ಕುನಾಥನ್ ಸ್ಥಿತ ಇಕ್ಕರೆ ಕೊಟ್ಟಿಯೂರಾದರೆ... ಯಾವೊಂದೂ ದೇವಸ್ಥಾನದ ರಚನೆಯೇ ಇಲ್ಲದೆ ಬಯಲ ಪೀಠದ ಮೇಲೊಂದು ಲಿಂಗವಿದ್ದೂ ಕೂಡಾ ವರ್ಷದಲ್ಲಿ ಒಂದು ತಿಂಗಳು ಮಾತ್ರ ದರ್ಶನಕ್ಕೆ ಅವಕಾಶವಿರೋ, ಉಳಿದಂತೆ ವರ್ಷಪೂರ್ತಿ ಪ್ರವೇಶ ನಿಶಿದ್ಧವಿರೋ ಬಯಲು ದೇವಾಲಯವೇ ಸ್ವಯಂಭೂ ಲಿಂಗರೂಪದ ಕಿಳಕ್ಕೇಶ್ವರನ್ ಸ್ಥಿತ ಅಕ್ಕರೆ ಕೊಟ್ಟಿಯೂರು...
ಇಲ್ಲಿನ ಪ್ರವೇಶ ನಿಶಿದ್ಧ ಎಷ್ಟು ಕಟ್ಟುನಿಟ್ಟು ಅಂದ್ರೆ, ಒಂದ್ಸಲ ಇಲ್ಲಿಗೆ ಸ್ವಯಂ ಶಂಕರಾಚಾರ್ಯರೇ ಭೇಟಿನೀಡಿದ್ದ ಸಂದರ್ಭದಲ್ಲಿಯೂ ಕೂಡಾ ವೈಶಾಖಮಾಸವಾಗಿರದ ಕಾರಣ ನದಿ ದಾಟದೆ ಅಲ್ಲಿಂದಲೇ ಕೈಮುಗಿದು ಹೋಗಿದ್ದರಂತೆ..
***
ಒಮ್ಮೆ ಶಿವನ ಮಾವನಾದ ಹಾಗೂ ಸತಿ ದೇವಿಯ ತಂದೆಯಾದ ದಕ್ಷ ಪ್ರಜಾಪತಿಯು ಯಾಗವನ್ನು ಹಮ್ಮಿಕೊಂಡಾಗ ಅವನು ಶಿವನನ್ನು ತನ್ನ ಯಜ್ಞಕ್ಕೆ ಆಹ್ವಾನಿಸದೇ ಆತನನ್ನು ಅವಮಾನ ಮಾಡುತ್ತಾನೆ. ಇದರಿಂದ ಕೋಪಗೊಂಡ ಸತಿ ದೇವಿಯು ತಂದೆ ಆಯೋಜಿಸಿದ್ದ ಯಜ್ಞ ಕುಂಡಕ್ಕೆ ಹಾರಿ ತನ್ನ ಪ್ರಾಣವನ್ನು ಸ್ವಂಯಚಾಲಿತವಾಗಿ ತ್ಯಜಿಸುತ್ತಾಳೆ. ದಕ್ಷನು ಭೃಗುಮಹರ್ಷಿಗಳ ನೇತೃತ್ವದಲ್ಲಿ ಯಾಗ ನಡೆಸಿದ, ಸತಿ ಆ ಯಜ್ಞಕುಂಡದಲ್ಲಿ ಪ್ರಾಣಬಿಟ್ಟ ಜಾಗವೇ ಈ ಅಕ್ಕರೆ ಕೊಟ್ಟಿಯೂರು. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ಬಂದು ದರ್ಶನ ಮಾಡಿದ್ರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಅಂದು ಆಶೀರ್ವಾದ ಮಾಡಿದನು..
ಆ ಘಟನಾವಳಿಗಳ ಸಂಪೂರ್ಣ ಯಥಾವತ್ತು ಪುನರ್‌ಸೃಷ್ಟಿಯೇ ವೈಶಾಖ ಮಾಸದಲ್ಲಿ 27ದಿನಗಳ ಕಾಲ ನಡೆಯೋ ವೈಶಾಖ ಮಹೋತ್ಸವ.
ಪಶ್ಚಿಮದ ಇಕ್ಕರೆ ದೇವಸ್ಥಾನದಿಂದ ತರಲಾಗೋ ಉತ್ಸವ ಮೂರ್ತಿಯನ್ನು ಇಲ್ಲಿ ಪ್ರತಿಷ್ಢಾಪಿಸಲಾಗುತ್ತದೆ. ಹಾಗಾಗಿ ಈ 27ದಿನ ಆ ದೇವಾಲಯ ಬಂದ್. (ಈ ವರ್ಷ ಜೂನ್ 8ರಿಂದ ಜುಲೈ 4ರವರೆಗೆ ನಡೆದಿದೆ..) ಇಲ್ಲಿ ಅಂದಿನ ಋಷಿಮುನಿಗಳ ಯಾಗಶಾಲೆಗಳಂತೆಯೇ ತಾಳೆಯ ಪರ್ಣಕುಟೀರ, ತಾಳೆಗರಿಯ ಛತ್ರಿಗಳು ಸೇರಿದಂತೆ ಎಲ್ಲವೂ ಯಥಾವತ್ತು ನಿರ್ಮಾಣ. ಮೊದಲ ದಿನ ಆನೆಯೊಂದಿಗೆ ಶುರುವಾಗೋ ಮಹೋತ್ಸವ, ಕೊನೆಯ ದಿನ ಇದಿಷ್ಟನ್ನೂ ಅದೇ ಆನೆಯಿಂದಲೇ ನೆಲಸಮಗೊಳಿಸೋ ಮುಖಾಂತರ ಕೊನೆಯಾಗುತ್ತದೆ...