- ರಾಘವೇಂದ್ರ ಅಡಿಗ ಎಚ್ಚೆನ್.
ಬಹುಭಾಷಾ ನಟಿ ಮೇರು ಕಲಾವಿದೆ ಡಾ. ಬಿ.ಸರೋಜಾದೇವಿ ಅವರು ತುಂಬು ಜೀವನ ನಡೆಸಿ ವಿಧಿವಶರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಸಂದ ಕರ್ನಾಟಕದ ಭವ್ಯ ಕೊಡುಗೆ. ಅವರು ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲಿ ಅಪಾರ ಜನಪ್ರಿಯತೆಗಳಿಸಿದ ಮೇರು ಕಲಾವಿದೆ. ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಮಲ್ಲಮ್ಮನ ಪವಾಡ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ನಮ್ಮನ್ನೆಲ್ಲ ರಂಜಿಸಿದ್ದ ಕಲಾವಿದೆ ಇವರೇ ಬಿ.ಸರೋಜಾದೇವಿ
ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು. ಬಿ.ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ.ಅರುವತ್ತರ ದಶಕದಲ್ಲಿ, ಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ಪುಳಕ ಹುಟ್ಟಿಸುತ್ತವೆ.ಕನ್ನಡ ಚಿತ್ರರಂಗದ ಭೀಷ್ಮ ”’ಹೊನ್ನಪ್ಪ ಭಾಗವತರ್”’ ಅವರ ”’ಮಹಾಕವಿ ಕಾಳಿದಾಸ”’ ಚಿತ್ರದ ಮೂಲಕ 1955ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಿ. ಸರೋಜಾದೇವಿ ತಮ್ಮ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು. ವರನಟರಾದ ಡಾ.ರಾಜ್‌ಕುಮಾರ್, ಕಲ್ಯಾಣ್ಕುಮಾರ್, ಎ. ನಾಗೇಶ್ವರರಾವ್, ಉದಯಕುಮಾರ್, ಎನ್.ಟಿ. ರಾಮರಾವ್, ಜೆಮಿನಿ ಗಣೇಶನ್, ಶಿವಾಜಿಗಣೇಶನ್, ಎಂ.ಜಿ. ರಾಮಚಂದ್ರನ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್ದತ್ ಮೊದಲಾದವರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಭಭ್ರುವಾಹನ 'ಕಿತ್ತೂರು ರಾಣಿ ಚೆನ್ನಮ್ಮ' ಅವರ ಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು, ಆಕೆಯನ್ನು ಕನ್ನಡದಲ್ಲಿ "ಅಭಿನಯ ಸರಸ್ವತಿ" (ನಟನೆಯ ಸರಸ್ವತಿ) ಮತ್ತು ತಮಿಳಿನಲ್ಲಿ "ಕನ್ನಡತು ಪೈಂಗಿಲಿ" (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತತಿತತು.. ಅವರ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಅರಸಿ ಬಂದಿದ್ದವು. ಅದರೊಂದಿಗೇ ಡಾ.ರಾಜ್‌ಕುಮಾರ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ, ತಮಿಳುನಾಡು ಸರ್ಕಾರದಿಂದ ಕಲೈಮಾಣಿ ಪ್ರಶಸ್ತಿ, ಆಂಧ್ರ ಸರ್ಕಾರದಿಂದ ಎನ್‌ಟಿಆರ್ ಪ್ರಶಸ್ತಿಗೆ ಬಿ.ಸರೋಜಾದೇವಿ ಭಾಜನರಾಗಿದ್ದರು.
ಸತ್ಯನಾರಾಯಣ ದೇವರ ಪ್ರಸಾದದಿಂದ ಹುಟ್ಟಿದ ಸರೋಜಾದೇವಿ: ಸರೋಜಾದೇವಿ 1938ರ ಜನವರಿ 7ರಂದು ರಾಮನಗರ ಜಿಲ್ಲೆ ಚೆನ್ನಪಟ್ಟಣದ ದಶಾವರ ಗ್ರಾಮದಲ್ಲಿ ಜನಿಸಿದರು. ತಂದೆ ಭೈರಪ್ಪನವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಾಯಿ ರುದ್ರಮ್ಮ. ನಟಿ ಸರೋಜಾದೇವಿ ಹುಟ್ಟಿದ್ದು ಸತ್ಯನಾರಾಯಣ ದೇವರ ಪ್ರಸಾದದಿಂದವಂತೆ.. ಹೀಗೆಂದು ನಟಿಯೇ ಒಮ್ಮೆಸಂದರ್ಶ್ನವೊಂದರಲ್ಲಿ ಹೇಳಿಕೊಂಡಿದ್ದರು.. "ನಾನು ಸತ್ಯನಾರಾಯಣ ದೇವರ ಪ್ರಸಾದದಿಂದ ಜನಿಸಿದ್ದೆ. ಈ ಕಾರಣಕ್ಕೆ ನನ್ನ ತಾಯಿಗೆ ನಾನು ಅಂದರೆ ಬಹಳ ಪ್ರೀತಿ" ಎಂದು ಎಂದು ಅವರು ಹೇಳಿದದರು. ಸರೋಜಾದೇವಿ ಅವರ ಬಗ್ಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು. ಈ ಸಾಕ್ಷ್ಯಚಿತ್ರದಲ್ಲಿ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.
"ನನ್ನ ತಾಯಿ ರುದ್ರಮ್ಮ ನಾಲ್ಕನೇಯ ಬಾರಿ ಗರ್ಭವತಿಯಾಗಿದ್ದರು. ಡೆಲಿವರಿ ಸಮಯ ಹತ್ತಿರ ಬಂದಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ಮನೆಯ ಹತ್ತಿರದಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ನನ್ನ ತಾಯಿ ಹೊಟ್ಟೆನೋವಿನಿಂದ ಬಳಲುವುದನ್ನು ನೋಡಿ ನೆರೆ ಮನೆಯವರು ದೊನ್ನೆಯಲ್ಲಿ ಸತ್ಯನಾರಾಯಣ ದೇವರ ಸಜ್ಜಿಗೆ ಪ್ರಸಾದವನ್ನು ನೀಡಿದರು. ಸಜ್ಜಿಗೆ ಪ್ರಸಾದವನ್ನು ತಾಯಿ ಸೇವಿಸಿದ ಕೆಲ ಸಮಯದಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದರು. ಮೊದಲ ಮೂರು ಹೆಣ್ಣು ಮಕ್ಕಳೇ ಆಗಿದ್ದರಿಂದ ಸಂಬಂಧಿಕರು ನಾಲ್ಕನೇಯ ಹೆಣ್ಣು ಮಗುವನ್ನು ಯಾರಿಗಾದರೂ ಕೊಡು ಎಂದು ತಾಯಿಗೆ ಹೇಳಿದ್ದರು. ಆದರೆ ತಾಯಿ ನನ್ನನ್ನು ಯಾರಿಗೆ ಕೊಡಲಿಲ್ಲ. ನನ್ನ ಬಹಳ ಪ್ರೀತಿಯಿಂದ ಸಾಕಿದ್ದರು. ಅಂದು ನನಗೆ ಬಹಳ ಪ್ರೋತ್ಸಾಹ ನೀಡಿದ್ದರಿಂದ ನಾನು ಕಲಾವಿದೆಯಾದೆ" ಎಂದು ನಟಿ ಹೇಳಿಕೊಂಡಿದ್ದರು.
ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್: 13ನೇ ವಯಸ್ಸಿನಲ್ಲೇ ಸರೋಜಾ ದೇವಿಗೆ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತ್ತು. ಬಿ.ಆರ್ ಕೃಷ್ಣಮೂರ್ತಿ ಮೊದಲು ಸರೋಜಾದೇವಿಯವರ ಹಾಡು ಕೇಳಿದಾಗ ಅವರಿಗೆ ಅಭಿನಯಿಸಲು ಅವಕಾಶ ಕೊಟ್ಟಿದ್ದರು. ಹೀಗೆ ಸಿನಿಮಾ ಸೇರುವಾಗ ಅವರಿಗೆ ಅವರ ತಾಯಿ ಷರತ್ತೊಂದನ್ನು ಹಾಕಿದ್ದರು. ಅದೇನೆಂದರೆ ಎಂದಿಗೂ ಸ್ವಿಮ್ಮಿಂಗ್ ಸ್ಯೂಟ್ ಹಾಕುವಂತಿಲ್ಲ, ಸ್ಲೀವ್‌ಲೆಸ್ ಧರಿಸಬಾರದು ಎನ್ನುವುದಾಗಿತ್ತು. ಅದರಂತೆಯೇ ಸರೋಜಾದೇವಿಯವರು ತಾವು ಅಭಿನಯಿಸಿದ ಯಾವ ಸಿನಿಮಾದಲ್ಲಿಯೂ ಸ್ಲೀವ್‌ಲೆಸ್ ಡ್ರೆಸ್ ಹಾಕಿಲ್ಲ. 1958ರಲ್ಲಿ ತಮಿಳಿನಲ್ಲಿ ಬಹುಬೇಡಿಕೆ ನಟಿಯಾಗಿದ್ದ ಸರೋಜಾದೇವಿ. ಅವರಿಗೆ `ನಾಡೋಡಿ ಮಾನಾನ್..?’ ಸಿನಿಮಾ ತಮಿಳಿನಲ್ಲಿ ದೊಡ್ಡ ಹೆಸರು ತಂದುಕೊಟ್ಟಿತ್ತು. 1959ರಲ್ಲಿ `ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1970ರ ವರೆಗೂ ತೆಲುಗಿನಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರ ವರೆಗೂ ತಮಿಳಿನಲ್ಲಿ ಬೇಡಿಕೆಯ ಅಭಿನೇತ್ರಿಯಾಗಿದ್ದರು. 1980ರ ವರೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959 ರಿಂದ ಹಿಂದಿ ಸಿನಿಮಾರಂಗದಲ್ಲಿಯೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸರೋಜಾದೇವಿಯವರು ಡಾ. ರಾಜ್‌ಕುಮಾರ್ ಜೊತೆ `ಬಬ್ರುವಾಹನ’, `ಭಾಗ್ಯವಂತರು’, `ತಂದೆ ಮಕ್ಕಳು’ ಎಂಬ ಸಿನಿಮಾಗಳಲ್ಲಿ ಅವರು ನಟಿಸಿ, ಖ್ಯಾತಿ ಪಡೆದಿದ್ದ ಮೇರು ನಟಿ ಇವರಾಗಿದ್ದರು. ಅಷ್ಟೇ ಅಲ್ಲದೇ `ಕಿತ್ತೂರು ರಾಣಿ ಚೆನ್ನಮ್ಮ’ `ಕೋಕಿಲವಾಣಿ’, `ಶ್ರೀರಾಮಪೂಜಾ’, `ರತ್ನಗಿರಿ ರಹಸ್ಯ’, `ಸ್ಕೂಲ್ ಮಾಸ್ಟರ್’, `ಭೂಕೈಲಾಸ’, `ಜಗಜ್ಯೋತಿ ಬಸವೇಶ್ವರ’, ‘ದೇವಸುಂದರಿ’ ಸಿನಿಮಾ ಜನಪ್ರಿಯವಾಗಿದ್ದವು. ಸರೋಜಾ ದೇವಿ ಅವರು ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸಹ ನಟಿಸಿದ್ದರು. ಸರೋಜಾ ದೇವಿ ಅವರು ಪುನೀತ್ ಅವರನ್ನು ತಮ್ಮ ಮಗನಂತೆ ಕಾಣುತ್ತಿದ್ದರು. 1984ರಲ್ಲಿ `ಯಾರಿವನು’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ತೆರೆ ಹಂಚಿಕೊಂಡಿದ್ದ ನಟಿ `ನಟಸಾರ್ವಭೌಮ’ ಚಿತ್ರಗಳಲ್ಲಿ ಅವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. `ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ’ ಎಂಬ ಹಾಡು ಇವತ್ತಿಗೂ ಫೇಮಸ್ ಆಗಿದೆ. ಆ ಹಾಡಿನ ದೃಶ್ಯ ನೋಡಿ ಸರೋಜಾ ದೇವಿ ಅವರು `ಈ ಮಗು ನನ್ನ ಮಗುವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಅಂತ ಹೇಳಿದ್ದರು.
ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದ ನಟಿ: ಬಿ. ಸರೋಜಾದೇವಿಯವರು ಕರ್ನಾಟಕ ಸರ್ಕಾರ ಕನ್ನಡದ ಬಹುತೇಕ ಕಲಾವಿದರಿಗೆ ರಾಷ್ಟ್ರೀಯ ಗೌರವ ಸಲ್ಲುವಂತೆ ಕ್ರಮ ಕೈಗೊಳ್ಳದೆ ಇರುವುದನ್ನು ಹಲವು ಸಂದರ್ಭಗಳಲ್ಲಿ ನೇರ ಮಾತುಗಳಲ್ಲಿ ಹೇಳಿದ್ದರು. “ತಮಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಬಂದಿದ್ದು ತಮಿಳುನಾಡು ಸರ್ಕಾರ ಮಾಡಿದ ಶಿಫಾರಿಸ್ಸಿನಿಂದ. ಕರ್ನಾಟಕದಲ್ಲಿ ಕೂಡ ಉತ್ತಮ ಕೆಲಸ ಮಾಡಿದವರು ಬಹಳಷ್ಟು ಉತ್ತಮ ಕಲಾವಿದರಿದ್ದಾರೆ ಅವರಿಗೆ ಕೂಡ ಗೌರವ ಸಲ್ಲಬೇಕು” ಎಂದು ಅವರು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದರು.
ವಿಶ್ವದಾಖಲೆಯ ನಟಿ: 1955-1978ರವರೆಗಿನ 23 ವರ್ಷಗಳ ಅವಧಿಯಲ್ಲಿ 154 ಚಿತ್ರಗಳಲ್ಲಿ ಮುಖ್ಯ ನಾಯಕಿಯಾಗಿ ನಟಿಸಿದ ಏಕೈಕ ಭಾರತೀಯ ಚಲನಚಿತ್ರ ನಾಯಕಿ ಸರೋಜಾ ದೇವಿ. 1955-1984ರವರೆಗೆ ಪೋಷಕ ಪಾತ್ರಗಳನ್ನು ನಿರ್ವಹಿಸದೆಯೇ 161 ಚಿತ್ರಗಳಲ್ಲಿ - ಸತತವಾಗಿ ಅತಿ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ನಟಿ ಎಂಬ ವಿಶ್ವದಾಖಲೆಯನ್ನು ಅವರು ಹೊಂದಿದ್ದಾರೆ. 1955 ರಿಂದ 2015ರ ನಡುವೆ ಅವರು ನಟಿಸಿದ 190 ಚಿತ್ರಗಳಲ್ಲಿ 165 ಬಾಕ್ಸ್ ಆಫೀಸ್ ಹಿಟ್ ಕಂಡಿದ್ದವು. ತಮ್ಮ ವೃತ್ತಿಜೀವನದ ಉದ್ದಕ್ಕೂ ಆಯಾ ಚಲನಚಿತ್ರೋದ್ಯಮದ ಬಹುಬೇಡಿಕೆಯ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಕಡೆಯ ಚಿತ್ರ: ಸರೋಜಾ ದೇವಿ ಅವರು ಕೊನೆಯದಾಗಿ ಕನ್ನಡದಲ್ಲಿ 2019ರಲ್ಲಿ ತೆರೆಕಂಡ ‘ನಟ ಸಾರ್ವಭೌಮ’ ಚಿತ್ರದಲ್ಲಿ ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ ಜೊತೆಗೆ ನಟಿಸಿದ್ದರು. ಈ ಚಿತ್ರದಲ್ಲಿ ಅವರ ಕಿರು ಪಾತ್ರವು ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು
ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಜ್ಯೂರಿಯಾಗಿ:: ಬಿ. ಸರೋಜಾದೇವಿಯವರ ಅಭಿನಯದ ಮಹತ್ತಿಕೆ ಅರಿವಿದ್ದ ಕೇಂದ್ರ ಸರ್ಕಾರ ಅವರನ್ನು 45 ಹಾಗೂ 53ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ಜ್ಯೂರಿಯನ್ನಾಗಿಸಿತ್ತು. ಕಲಾವಿದರ ಸಂಘದ ಉಪಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದ ಸರೋಜಾದೇವಿ ತಿರುಪತಿ TTDಯ ಲೋಕಲ್ ಅಡ್ವೈಸರಿ ಕಮಿಟಿಯ ಮೆಂಬರ್ ಕೂಡ ಆಗಿದ್ದರು. ಸೆನ್ಸರ್ ಬೋರ್ಡ್‌ನಲ್ಲೂ ಕಾರ್ಯ ನಿರ್ವಹಿಸಿ, ಕರ್ನಾಟಕ ಫಿಲ್ಮ್ ಡೆವೆಲಪ್ಮೆಂಟ್ ಕಾರ್ಪೊರೇಷನ್‌ನ ಅಧ್ಯಕ್ಷೆಯಾಗಿಯೂ ಗುರ್ತಿಸಿಕೊಂಡಿದ್ದರು. ಒಳ್ಳೆಯ ಉದ್ಯಮಿಯಾಗಿಯೂ ಆಗಿದ್ದ ಈ ಅಭಿನೇತ್ರಿ ಪತಿ ಹಾಗೂ ತಾಯಿಯ ಹೆಸರಲ್ಲಿ ಹತ್ತಾರು ಸಮಾಜಿಕ ಕಾರ್ಯಗಳನ್ನ ಸಹ ಮಾಡಿದ್ದರು.
ಸರೋಜಾದೇವಿವರಿಗೆ ಒಲಿದು ಬಂದಿದ್ದ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಹೀಗಿದೆ-
ರಾಷ್ಟ್ರಪ್ರಶಸ್ತಿಗಳು
* 2008ರಲ್ಲಿ ಜೀವಮಾನ ಸಾಧನೆಗಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ
* 1992ರಲ್ಲಿ ಪದ್ಮಭೂಷಣ ಪ್ರಶಸ್ತಿ
* 1969ರಲ್ಲಿ ಪದ್ಮಶ್ರೀ ಪ್ರಶಸ್ತಿ
ರಾಜ್ಯಪ್ರಶಸ್ತಿಗಳು
* 2010ರಲ್ಲಿ ಜೀವಮಾನ ಸಾಧನೆಗಾಗಿ ತಮಿಳುನಾಡು ಸರ್ಕಾರದಿಂದ ಗೌರವ
* 2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ರಾಜಕುಮಾರ್ ರಾಷ್ಟ್ರ ಪ್ರಶಸ್ತಿ
* 2009ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ
* 2001ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ
* 1993ರಲ್ಲಿ ತಮಿಳುನಾಡು ಸರ್ಕಾರದಿಂದ ಎಂಜಿಆರ್ ಪ್ರಶಸ್ತಿ
* 1989ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
* 1980ರಲ್ಲಿ ಕರ್ನಾಟಕ ರಾಜ್ಯದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
* 1969ರಲ್ಲಿ ಕುಲ ವಿಲಕ್ಕು ಸಿನಿಮಾದ ಉತ್ತಮ ನಟನೆಗಾಗಿ ಫಿಲ್ಮ್ ಅವಾರ್ಡ್
* 1965ರಲ್ಲಿ ಕರ್ನಾಟಕ ಸರ್ಕಾರದಿಂದ ಅಭಿನಯ ಸರಸ್ವತಿ ಬಿರುದು.
ಕಲೆಗಾಗಿ ಬದುಕಿ ತಮ್ಮ ಎಲ್ಲ ಕಾರ್ಯದಲ್ಲೂ ಘನತೆ, ಸೌಂದರ್ಯಗಳನ್ನು ಮೆರೆದಿದ್ದ ಡಾ. ಬಿ.ಸರೋಜಾ ದೇವಿ ಅವರ ಕೆಲಸ, ಸಾಧನೆಗಳು ಕನ್ನಡದ ನವ ನಟ ನಟಿಯರಿಗೆ ಮಾದರಿಯಾಗಲಿ ಎಂದು ಈ ಮೂಲಕ ಆಶಿಸೋಣ.
ಆಗಸ್ಟ್ 2025"ವಂದೇ ಕರ್ನಾಟಕ" ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
No comments:
Post a Comment