Tuesday, November 04, 2025

140 ಕೋಟಿ ಭಾರತೀಯರ ಶುಭಾಕಾಂಕ್ಷೆಯೊಂದಿಗೆ ಬಾಹ್ಯಾಕಾಶ ತಲುಪಿದ ಶುಭಾಂಶು ಶುಕ್ಲಾ

 - ರಾಘವೇಂದ್ರ ಅಡಿಗ ಎಚ್ಚೆನ್.


ಶುಭಾಂಶು ಶುಕ್ಲಾ ಈ ಹೆಸರು ಈಗ ಎಲ್ಲರ ಮನದಲ್ಲಿ ಹೃದಯದಲ್ಲಿ ಕುಳಿತಿದೆ. ಅದಕ್ಕೆ ಕಾರಣ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ..  ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಯಿಂದ 400 ಕಿಲೋ ಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.  ಆಕ್ಸಿಯಮ್ ಮಿಷನ್ 4 ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಗನಯಾತ್ರಿ ಮತ್ತು 1984 ರಲ್ಲಿ ರಾಕೇಶ್ ಶರ್ಮಾ ನಂತರ ಕಕ್ಷೆಗೆ ಪ್ರಯಾಣಿಸಿದ ಎರಡನೇ ಭಾರತೀಯರಾಗಿದ್ದಾರೆ.



ಅಮೆರಿಕದ ಕಾಲಮಾನ ಪ್ರಕಾರ, ಜೂನ್ 25ರ ಬುಧವಾರ ಬೆಳಗಿನ ಜಾವ 2:31ಕ್ಕೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್ ಮಿಷನ್-4 ಯಶಸ್ವಿಯಾಗಿ ಉಡಾವಣೆಯಾಗಿತ್ತು. ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39Aನಿಂದ ಈ ಮಿಷನ್ ಲಾಂಚ್ ಆಗಿದೆ. ಫಾಲ್ಕನ್ 9 ರಾಕೆಟ್‌ನಲ್ಲಿ ಅಳವಡಿಸಲಾಗಿದ್ದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆ, ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಅಪಾರ ಪ್ರಮಾಣದ ಬೆಂಕಿ ಉಗುಳುತ್ತಾ ಶರವೇಗದಲ್ಲಿ ಪ್ರಯಾಣಿಸಿತು. ಈ ನೌಕೆಯು ನಾಳೆ ಬೆಳಗ್ಗೆ 7 ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ ಗುರುವಾರ ಸಂಜೆ 4.30ಕ್ಕೆ)  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿತ್ತು. ಅಂತರಿಕ್ಷ ವಿಜ್ಞಾನದಲ್ಲಿ ಭಾರತಕ್ಕೆ ಹಲವು ರೀತಿಯಲ್ಲಿ ಮಹತ್ವದ ಬಾಗಿಲಾಗಿರುವ ಈ ಯೋಜನೆ ಅಡಿಯಲ್ಲಿ ಶುಕ್ಲಾ ನಾಸಾದೊಡನೆ ಇಸ್ರೋದ ಹಲವು ಪ್ರಯೋಗಗಳನ್ನೂ ಸಹ ನಡೆಸುವವರಿದ್ದಾರೆ. ಹೀಗಾಗಿ ಭಾರತದ ಪಾಲಿಗಿದು ಮಹತ್ವದ ಬೆಳವಣಿಗೆ ಆಗಲಿದೆ. ಈ ಯೋಜನೆಯ ಮೂಲಕಕ ಭಾರತ 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಮಾನವನನ್ನು ಕಳಿಸಿದಂತಾಗಿದೆ. ಹಾಗಾಗಿ, ಇದು ಭಾರತದ ಪಾಲಿಗೆ ಬಾಹ್ಯಾಕಾಶ ಕಾರ್ಯಕ್ರಮದಲ್ಲಿನ ಹೊಸ ಹಂತವಾಗಿದೆ. ಅಮೆರಿಕ, ರಷ್ಯ, ಚೀನಾಗಳಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ಹಾಕಿಕೊಂಡಿರುವ ಭಾರತಕ್ಕೆ ಶುಭಾಂಶು ಶುಕ್ಲಾ ಅವರ ಗಗನಯಾನ ಬಹಳ ಮಹತ್ವದ್ದಾಗಿದೆ. ಮಾನವ ಸಹಿತ ಗಗನಯಾನ ಮಾನವ ರಹಿತ ಗಗನಯಾನಗಳಿಗೆ ಹೋಲಿಸಿದರೆ ಬಹಳ ಸಂಕೀರ್ಣ. ಹಾಗಾಗಿ, ಶುಕ್ಲಾ ಅವರ ಅನುಭವ ಸುರಕ್ಷಿತ ಗಗನಯಾನ ಯೋಜನೆಗಳನ್ನು ರೂಪಿಸುವಲ್ಲಿ ಬಹಳ ಮುಖ್ಯವಾಗಿ ನೆರವಿಗೆ ಬರಲಿದೆ. ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸಜ್ಜುಗೊಳಿಸುವುದು, ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವುದು ಮೊದಲಾದ ಯೋಜನೆಗಳನ್ನು ಹಾಕಿಕೊಂಡಿರುವ ಭಾರತಕ್ಕೆ ಈ ಹೆಜ್ಜೆ ಬಹಳ ದೊಡ್ಡ ಎತ್ತರಕ್ಕೆ ತಲುಪಿಸುವಂಥದ್ದಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾನವಸಹಿತ ಗಗನಯಾನಕ್ಕೆ ಭರದ ಸಿದ್ಧತೆ ಕೈಗೊಂಡಿದೆ. ಅದಕ್ಕಾಗಿ ಆಯ್ಕೆಯಾದ ಗಗನಯಾತ್ರಿಗಳಲ್ಲಿ ಶುಭಾಂಶು ಕೂಡ ಒಬ್ಬರು. ಈಗ ಅವರು ಅಮೆರಿಕ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ, 14 ದಿನಗಳ ಕಾಲ ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು,ಅಲ್ಲಿ 60 ಪ್ರಯೋಗಗಳಲ್ಲಿ ಭಾಗಿಯಾಗಲಿದ್ದಾರೆ. ಭಾರತ ಮೂಲದ 7 ಪ್ರಯೋಗಗಳನ್ನು ನಡೆಸಲಿದ್ದಾರೆ. ವಿಶೇಷ ಅಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಪ್ರಯೋಗ ಇದೆ. ಕರ್ನಾಟಕದ ಅಧ್ಯಯನ ಸಂಸ್ಥೆಗಳು ರೂಪಿಸಿರುವ 4 ಪ್ರಯೋಗಗಳು ಅಲ್ಲಿ ನಡೆಯಲಿವೆ. ಜೊತೆಗೆ ದೆಹಲಿಯ 2 ಪ್ರಯೋಗ, ಕೇರಳದ 1 ಪ್ರಯೋಗ ಸಂಬಂಧ ಅಧ್ಯಯನ ನಡೆಯಲಿದೆ.
ಇದು ಭಾರತದ ಗಗನಯಾತ್ರೆಗೆ ಅಮೂಲ್ಯ ಕೊಡುಗೆ ಆಗಿರಲಿದೆ. ಇದರೊಂದಿಗೆ ಭವಿಷ್ಯದಲ್ಲಿ ಸ್ವದೇಶಿ ಅಂತರಿಕ್ಷ ನಿಲ್ದಾಣ ನಿರ್ಮಿಸಲು ಮುಂದಾಗಿರುವ ಭಾರತಕ್ಕೆ ಇವರ ಪ್ರಯೋಗಗಳು ಹೊಸ ದಾರಿಯೊಂದನ್ನು ತೆರೆಯುತ್ತದೆ.   ಇದು ಮುಂದಿನ ದಿನಗಳಲ್ಲಿ ಭಾರತದಲ್ಲಿರುವ ವಿಜ್ಞಾನ ಆಸಕ್ತರಿಗೆ ದೊಡ್ಡ ಸ್ಫೂರ್ತಿಯಾಗುವ ಕ್ಷಣವೂ ಆಗಿದೆ. ಜತೆಗೆ ಇಂಥ ಸಾಧನೆಗಳು ಕೇವಲ ಮುಂದುವರಿದ ದೇಶಗಳಿಗೆ ಮಾತ್ರ ಸೀಮಿತ ಎಂಬ ಮಾತುಗಳನ್ನೂ ಈ ಮೂಲಕ ಭಾರತ ಸುಳ್ಳು ಮಾಡಿದೆ. ಅದರಲ್ಲೂ ಮಂಗಳಕ್ಕೆ ಕಡಿಮೆ ವೆಚ್ಚದಲ್ಲಿ ಉಪಗ್ರಹ ಕಳುಹಿಸಿದ್ದು ಮತ್ತು ಚಂದ್ರನ ಅಂಗಳದಲ್ಲಿ ನೀರು ಇರುವ ಬಗ್ಗೆ ಸಂಶೋಧಿಸಿದ್ದು ಭಾರತದ ಹೆಗ್ಗಳಿಕೆ. ಮುಂದಿನ ದಿನಗಳಲ್ಲಿ ತನ್ನ ರಾಕೆಟ್‌ಗಳಿಂದಲೇ ಭಾರತದ ಗಗನಯಾತ್ರಿಗಳನ್ನು ಕಳುಹಿಸಲೂ ಸಿದ್ಧತೆ ನಡೆಸುತ್ತಿದ್ದು ಈ ನಿಟ್ಟಿನಲ್ಲೂ ಆಶಾದಾಯಕ ಬೆಳವಣಿಗೆಯಾಗಿದೆ.


ಭಾರತೀಯ ವಾಯುಪಡೆಯ ಪೈಲೆಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಮುನ್ನ 41 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯಲ್ಲಿಸ್‌ಕ್ವಾಡ್ರನ್‌ ಲೀಡರ್ ಆಗಿದ್ದ ರಾಕೇಶ್ ಶರ್ಮಾ ಅವರು ಸೋವಿಯತ್ ರಷ್ಯಾದ ನೌಕೆಯಲ್ಲಿ ಕುಳಿತು ಅಂತರಿಕ್ಷಕ್ಕೆ ಹೋಗಿದ್ದರು. ಆ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆ ಸೃಷ್ಟಿಸಿದ್ದರು. ಅದಾದ ನಂತರ ಯಾವೊಬ್ಬ ಭಾರತೀಯನಿಗೂ ಬಾಹ್ಯಾಕಾಶ ಯಾನ ಅವಕಾಶ ಸಿಕ್ಕಿರಲಿಲ್ಲ. ರಾಕೇಶ್ ಶರ್ಮಾ ಅವರು ಇತಿಹಾಸ ನಿರ್ಮಿಸಿದ್ದು 1984ರಲ್ಲಿ, ಅದರ ಮರುವರ್ಷವೇ ಜನಿಸಿದ ಶುಭಾಂಶು ಅವರು ಅಮೆರಿಕದಿಂದ ಬಾಹ್ಯಾಕಾಶಕ್ಕೆ ತಲುಪಿದ್ದಾರೆ. ತನ್ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬಮೈಲುಗಲ್ಲು ಸ್ಥಾಪಿಸಿದ್ದಾರೆ. ಅಲ್ಲದೆ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.  ಇನ್ನು ಶುಭಾಂಶು ಅವರ ಯಾತ್ರೆ ಐದು ಬಾರಿ ಮುಂದೂಡಿಕೆಯಾಗಿತ್ತು. ಆರನೇ ಬಾರಿ ಅದು ಸಾಕಾರಗೊಂಡಿದೆ.  . 'ಶುಭಾಂಶು ಶುಕ್ಲಾ 140 ಕೋಟಿ ಭಾರತೀಯರ ಆಕಾಂಕ್ಷೆಗಳೊಂದಿಗೆ ಕಾರ್ಯಕ್ರಮಕ್ಕೂ ತೆರಳಿದ್ದಾರೆ. ಅವರೊಂದಿಗೆ 140 ಕೋಟಿ ಜನರ ಭರವಸೆ ಮತ್ತು ಹಾರೈಕೆಗಳೂ ಇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿಯವರು ಬಾಹ್ಯಾಕಾಶದಲ್ಲಿರುವ ಶುಕ್ಲಾ ಅವರೊಂದಿಗೆ ನೇರವಾಗಿ ಸಂಬಾಷಣೆ ಸಹ ನಡೆಸಿದ್ದಾರೆ.
ಇನ್ನು ಶುಭಾಂಶು ಶುಕ್ಲಾ ಅವರು ಹೀಗೆ ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಅವರಿಗೆ ಯುರೋಪಿಯನ್ ಸ್ಪೇಸ್ ಎಜಿನ್ಸಿಯಲ್ಲಿ ತರಬೇತಿ ನೀಡಲಾಗಿತ್ತು. ಅಲ್ಲದೆ ನಾಸಾದಲ್ಲಿಯೂ, ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೊರೇಷನ್ ಏಜೆನ್ಸಿಯಲ್ಲಿ ಸಹ ತರಬೇತಿ  ಹೊಂದಿದ್ದರು. ಈ ಹಂತದಲ್ಲಿ ಅವರಿಗೆ ಐಎಸ್ಎಸ್ ಕಮ್ಯೂನಿಕೇಷನ್ ಸಿಸ್ಟಂ, ಎಮರ್ಜೆನ್ಸಿ ರೆಸ್ಪಾನ್ಸ್ ಪ್ರಕ್ರಿಯೆ ಟ್ರೇನಿಂಗ್ ಜೊತೆಗೆ ಹಲವು ತರಬೇತಿಗಳನ್ನು ಕೊಡಲಾಗಿತ್ತು.  
ಶುಭಾಂಶು ಶುಕ್ಲಾ ಹಿನ್ನೆಲೆ
ಲಖನೌನ ಸಾಮಾನ್ಯ ಕುಟುಂಬದಿಂದ ಬಂದ  ಶುಭಾಂಶು ಶುಕ್ಲಾ ಲಖನೌನ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು.  ಕಾರ್ಗಿಲ್ ಯುದ್ಧದ ನಂತರ. ಕುಟುಂಬಕ್ಕೆ ತಿಳಿಸದೆ NDA ಪರೀಕ್ಷೆ ಬರೆದಿದ್ದ ಇವರು 2005ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ B.Sc ಪದವಿ ಪಡೆದರು. ನಂತರ  ಬೆಂಗಳೂರಿನ IIScನಿಂದ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ   M.Tech ಪದವಿ ಗಳಿಸಿಕೊಂಡು 2006ರಲ್ಲಿ IAFನಲ್ಲಿ ಕಮಿಷನ್ ಪಡೆದು ಫೈಟರ್ ಪೈಲಟ್ ತರಬೇತಿ ಪಡೆದರು. Su-30 MKI, MiG-21, ಜಾಗ್ವಾರ್ ಹಲವು ವಿಮಾನಗಳ ಹಾರಾಟ ನಡೆಸಿದ ಅನುಭವ ಹೊಂದಿರುವ ಶುಕ್ಲಾ ಸುಮಾರು 2000 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿದ್ದಾರೆ. 2024 ರಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ  ಬಡ್ತಿ ಪಡೆದ ಶುಕ್ಲಾ ಅವರು ರಷ್ಯಾ ಮತ್ತು ಭಾರತದಲ್ಲಿ ಬಾಹ್ಯಾಕಾಶ ತರಬೇತಿ ಪೂರ್ಣಗೊಳಿಸಿದ್ದಾರೆ.
ಶುಭಾಂಶು ಅವರು ನಡೆಸಲಿರಿವ 7 ಪ್ರಯೋಗಗಳು
ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾ ಅವರು ಈ ಕೆಳಕಂಡ ಏಳು ಪ್ರಯೋಗಗಳನ್ನು ನಡೆಸುತ್ತಾರೆ.
 ಧಾರವಾಡದ ಕೃಷಿ ವಿವಿ, ಐಐಟಿ ಧಾರವಾಡದಿಂದ ಕಾಳುಗಳು ಮೊಳಕೆ ಹೊಡೆಯುವ ಬಗ್ಗೆ ಅಧ್ಯಯನ, ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆಯ ಬಾಹ್ಯಾಕಾಶದಲ್ಲಿ ಯಾತ್ರಿಗಳ ಮಸಲ್ ಲಾಸ್ ಬಗ್ಗೆ ಅಧ್ಯಯನ, IISC ಯಿಂದ ಕಠಿಣ ಪರಿಸ್ಥಿತಿಯಲ್ಲಿ ಟಾರ್ಡಿಗ್ರೇಡ್ ಸೂಕ್ಷ್ಮಜೀವಿಗಳು ಬದುಕುಳಿಯುವ ಬಗ್ಗೆ ಅಧ್ಯಯನ, IISC ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಡಿಸಪ್ಲೇ ಬಗ್ಗೆ ಅಧ್ಯಯನ, ನವದೆಹಲಿ ICGEBಯ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ 3 ಆಯ್ದ ಖಾದ್ಯ ಸೂಕ್ಷ್ಮ ಪಾಚಿಗಳ ಬೆಳವಣಿಗೆ ಅಧ್ಯಯನ, ನವದೆಹಲಿ ICGEBಯ ಬಾಹ್ಯಾಕಾಶದಲ್ಲಿ ಎರಡು ವಿಧದ ಸೈನೋಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಧ್ಯಯನ ಮತ್ತು ಕೇರಳದ IISTಯ ಸೂಕ್ಷ್ಮ ಗುರುತ್ವಾಕರ್ಷಣೆಗೆ ಒಗ್ಗಿದ ಅಕ್ಕಿ, ಜೋಳ, ಎಳ್ಳು, ಬದನೆಕಾಯಿ, ಟೊಮೆಟೊ ಬೀಜಗಳ ಅಧ್ಯಯನ.

ಆಗಸ್ಟ್ 2025 "ವಂದೇ ಕರ್ನಾಟಕ" ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

No comments:

Post a Comment