'ಖಾಂಡ್ಯ' /ಖಂಡೇಯ(Khandya )
'ಖಾಂಡ್ಯ' ಅಥವಾ ಖಂಡೇಯ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನಲ್ಲಿರುವ ಪ್ರಾಚೀನ ಗ್ರಾಮ. ಭದ್ರಾನದಿಯ ಬಲದಂಡೆಯಲ್ಲಿದೆ. ಕಸಬಕ್ಕೆ ಈಶಾನ್ಯದಲ್ಲಿ ಐದು ಮೈಲಿ ದೂರದಲ್ಲಿ ಭದ್ರಾನದಿ ತಿರುವು ಪಡೆದು ಆನೆ ಬಿದ್ದ ಹಳ್ಳವನ್ನು ಕೂಡುತ್ತದೆ.
ಈಗ ಪಾಳು ಬಿದ್ದಿದ್ದರೂ ಹಿಂದೆ ಈ ಗ್ರಾಮ ಒಂದು ದೊಡ್ಡ ಊರಾಗಿತ್ತೆನ್ನಲಾಗಿದೆ. ಬಹು ಹಿಂದಿನ ಕಾಲದ ಅನೇಕ ದೇವಾಲಯಗಳಿಲ್ಲಿವೆ; ಮುಖ್ಯವಾದುದು ಮಾರ್ಕಂಡೇಶ್ವರ ದೇವಾಲಯ.. ಭದ್ರೆಯ ತಟದ ಪ್ರಶಾಂತವಾದ ಸ್ಥಳದಲ್ಲಿ ಈ ಮಂದಿರ ಸ್ಥಾಪಿತಗೊಂಡಿದೆ. ಅಂದಹಾಗೆ, ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದ್ದು ಇದನ್ನು ಅಗಸ್ತ್ಯ ಮುನಿಗಳು ಸ್ಥಾಪಿಸಿದರೆಂದು ಹೇಳಲಾಗುತ್ತದೆ. ಹೊಯ್ಸಳ ಮತ್ತು ವಿಜಯನಗರದ ಅರಸರ ಕಾಲದ ಶಿಲಾಶಾಸನಗಳನ್ನಿಲ್ಲಿ ಕಾಣಬಹುದು. ಈ ಊರು ಮಾರ್ಕಂಡ (ಮೃಕಂಡು) ಋಷಿಯ ತಪೋವನವಾಗಿತ್ತೆಂದು ಹೇಳಲಾಗಿದೆ. ಈತನ ಪ್ರಸಿದ್ಧ ಪುತ್ರನಾದ ಮಾರ್ಕಂಡೇಯ ಶಿವಸಾನಿಧ್ಯವನ್ನು ಪಡೆದುದು ಇಲ್ಲಿಯೇ ಎನ್ನಲಾಗಿದೆ. ಮಾರ್ಕಂಡೇಯನ ಬದಲು ತನ್ನನ್ನು ಒಪ್ಪಿಸಿದ ಜನಾರ್ಧನನ ಮತ್ತು ಕೃಪೆಗೈದ ಮೃತ್ಯುಂಜಯನ ದೇವಾಲಯಗಳು ಇಲ್ಲಿವೆ. ಖಾಂಡೇಯ ಎಂಬುದು ಮಾರ್ಕಂಡೇಯ ಎಂಬುದರ ಸಂಕ್ಷಿಪ್ತ ರೂಪವಿರಬಹುದು. ಬಳಕೆಯಲ್ಲಿ ಇದನ್ನು ಖಾಂಡ್ಯ ಎನ್ನುವರು. ಹಳ್ಳಿಯ ಸಮೀಪದಲ್ಲಿ ಹರಿಯುವ ಭದ್ರಾನದಿಯ ನೀರಿನ ರಭಸದಿಂದಾಗಿ ನದೀ ಪಾತ್ರದ ಕರೀಕಲ್ಲು ನೆಲದಲ್ಲಿ ಉಂಟಾಗಿರುವ ಆಳುದ್ದನೆಯ ನುಣುಪಾದ ಗುಣಿಗಳು ಪ್ರೇಕ್ಷಣೀಯವಾಗಿವೆ.
***
ಭಕ್ತ ಮಾರ್ಕಂಡೇಯನ ಕತೆಯಿದೆ. ಮಾರ್ಕಂಡೇಯ ಶಿವನ ಪರಮ ಭಕ್ತನಾಗಿರುತ್ತಾನೆ, ಅದರೆ ಆಯಷ್ಯವನ್ನು ಪಡೆದು ಬಂದಿರುವುದಿಲ್ಲ. 16 ವರ್ಷದ ಬಾಲಕ ಮಾರ್ಕಂಡೇಯ ಭದ್ರಾ ನದಿಯ ದಡದಲ್ಲಿ ತಪಸ್ಸಿಗೆ ಕೂತು ಮೃತ್ಯುವನ್ನು ತನ್ನಿಂದ ದೂರ ಮಾಡುವಂತೆ ಶಿವನಿಗೆ ಪ್ರಾರ್ಥಿಸಲಾರಂಭಿಸುತ್ತಾನೆ. ಆದರೆ, ಅಷ್ಟರಲ್ಲಿ, ಯಮನ ದೂತರು ಅವನನ್ನು ತೆಗೆದುಕೊಂಡು ಹೋಗಲು ಅಲ್ಲಿಗೆ ಬರುತ್ತಾರೆ. ಅವರನ್ನು ನೋಡಿದ ಮಾರ್ಕಂಡೇಯ ತಪ್ಪಿಸಿಕೊಳ್ಳಲೆಂದು ನುಗ್ಗಿ ಅಲ್ಲಿದ್ದ ಲಿಂಗವನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ. ಆಗ ಶಿವನು ಲಿಂಗದೊಳಗೆ ಐಕ್ಯನಾಗುವಂಥ ವರ ಮಾರ್ಕಂಡೇಯನಿಗೆ ನೀಡುತ್ತಾನೆ.
ಹಾಗೆ, ಮಾರ್ಕಂಡೇಯ ಮೃತ್ಯುವನ್ನು ಜಯಿಸಿದ್ದರಿಂದ ಅವನಿಗೆ ಮೃತ್ಯುಂಜಯನೆಂಬ ಹೆಸರು ಬರುತ್ತದೆ. ಅಲ್ಲಿಂದ ಈ ದೇವಸ್ಥಾನವನ್ನು ಸಂಗಮ ಸ್ಥಳ ಅಂತ ಕರೆಯುತ್ತಾರೆ. ತ್ರಿಂಬಕ ಎಂಬ ಇನ್ನೊಂದು ಹೆಸರು ಸಹ ಮಾರ್ಕಂಡೇಯನಿಗಿದೆ.
ಈ ದೇವಾಸ್ಥಾನಕ್ಕೆ ನವವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ದಾಂಪತ್ಯ ಸುಖಮಯವಾಗಿ ಸಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗೆಯೇ, ಅಗಲಿದ ಪ್ರೀತಿಪಾತ್ರರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿಯೂ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಶಿವರಾತ್ರಿಯ ಸಮಯ ಈ ದೇವಾಸ್ಥಾನದಲ್ಲಿ ಉತ್ಸವ ನಡೆಯುತ್ತದಲ್ಲದೆ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಫಾಲ್ಗುಣ ಮಾಸದಲ್ಲಿ ನಡೆಯುವ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
ಚಿತ್ರಕೃಪೆ: TV9 Kannada
No comments:
Post a Comment