Sunday, October 26, 2025
ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ ಎಂದರೆ ಅಪ್ಪು: ಡಿ.ಕೆ. ಶಿವಕುಮಾರ್
Wednesday, October 22, 2025
ದೀಪಾವಳಿಗೆ “ಫಸ್ಟ್ ಸ್ಯಾಲರಿ” ಪೋಸ್ಟರ್, ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಪುತ್ರ ಪವನ್ ನಿರ್ದೇಶನದಲ್ಲಿ ಹೊಸ ಕಿರುಚಿತ್ರ
- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು, ನಿರ್ದೇಶಕರೂ ಆದಿಯಾಗಿ ಚಿತ್ರತಂಡ ಮತ್ತು ಸಿನಿಮಾ ಪತ್ರಕರ್ತರೊಂದಿಗೆ ಸಂಪರ್ಕಕೊಂಡಿಯಾಗಿ ಕಳೆದ 5 ದಶಕಗಳಿಂದ ಕೆಲಸ ಮಾಡುತ್ತಿರುವ “ಶ್ರೀ ರಾಘವೇಂದ್ರ ಚಿತ್ರವಾಣಿ” ಸಂಸ್ಥೆ ಹಲವು ಚಿತ್ರಗಳನ್ನು ನಿರ್ಮಾಣದಲ್ಲಿಯೂ ಗುರುತಿಸಿಕೊಂಡು ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಠ ಕೊಡುಗೆ ಮತ್ತು ಸೇವೆ ನೀಡಿದೆ.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕರಾದ ಡಿ.ವಿ ಸುಧೀಂದ್ರ ಅವರು ಕನ್ನಡ ಚಿತ್ರರಂಗದ ಅಗ್ರ ಸಿನಿಮಾ ಪ್ರಚಾರಕರ್ತರು. ಜೊತೆಗೆ ತಮ್ಮದೇ ಸಂಸ್ಥೆಯಿಂದ “ಒಲವಿನ ಉಡುಗೊರೆ; “ಗಣೇಶನ ಮದುವೆ”, “ಗುಂಡನ ಮದುವೆ”, “ಪಟ್ಟಣಕ್ಕೆ ಬಂದ ಪುಟ್ಟ”, “ನಗು ನಗುತಾ ನಲಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮುನ್ನೆಡೆಸುತ್ತಿರುವ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಪುತ್ರ ಪವನ್ ವೆಂಕಟೇಶ್ ಆಕ್ಷನ್ ಕಟ್ ಹೇಳಿರುವ “ ಫಸ್ಟ್ ಸ್ಯಾಲರಿ” ಕಿರುಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ, ಶೀರ್ಷಿಕೆ ಕೆಳಗೆ ಕನಸುಗಳ ಹಾದಿ ಎನ್ನುವ ಅಡಿಬರಹವಿದೆ. ಡಿ.ವಿ ಸುಧೀಂದ್ರ ಅವರ ಆಶೀರ್ವಾದವಿದೆ. “ಫಸ್ಟ್ ಸ್ಯಾಲರಿ” ಕಿರುಚಿತ್ರದ ಪೋಸ್ಟರ್ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
ಕರೋನ ಸಮಯದಲ್ಲಿ ” ಕರಾಳ ರೋಗ ನಾಶ” ಎಂಬ ಕಿರುಚಿತ್ರ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವ ಹೊಂದಿರುವ ಪವನ್ ವೆಂಕಟೇಶ್, ಈಗ “ಫಸ್ಟ್ ಸ್ಯಾಲರಿ” ಎಂಬ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಕಿರುಚಿತ್ರದಲ್ಲಿ ಹಿರಿಯ ಕಲಾವಿದರಾದ ಹರಿಣಿ ಶ್ರೀಕಾಂತ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಜಯ್ ಶಿವಕುಮಾರ್, ಯತಿರಾಜ್,ತ್ರಿಶೂಲ್, ಸ್ನೇಹಶ್ರೀ ಮತ್ತು ರಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀರಾಘವೇಂದ್ರ ಚಿತ್ರವಾಣಿ ಯೂಟೂಬ್‍ನಲ್ಲೇ ಈ ಕಿರುಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಕರೋನಾ ಸೋಂಕಿನ ಸಮಯದಲ್ಲಿ “ಕರೋನಾ ಕರಾಳ ನಾಶ” ಕಿರುಚಿತ್ರ ಮಾಡಿದ್ದೆ ,ಇದರ ಜೊತೆ ಕನ್ನಡದ ಅಗ್ರಗಣ್ಯ ಸಿನಿಮಾ ಪ್ರಚಾರಕರ್ತ ದಿ ಡಿ.ವಿ ಸುಧೀಂದ್ರ ಅವರ ಬದುಕಿನ ಕುರಿತಾದ “ಡಿ ವಿ ಸುಧೀಂದ್ರ ಸಿನಿ ಪಯಣ” ಸಾಕ್ಷ್ಯಚಿತ್ರ ಹಾಗು ಆನಿಮೇಷನ್ ನಲ್ಲಿ “ರಾಮಜನ್ಮ ಭೂಮಿ” ಕಿರುಚಿತ್ರ ನಿರ್ದೇಶನ ಮಾಡಿದ್ದೆ, ಈಗ “ಫಸ್ಟ್ ಸ್ಯಾಲರಿ” ಕಿರುಚಿತ್ರ ಮಾಡಿದ್ದೇನೆ. ನೋಡುಗರಿಗೆ ಬೇಕಾದ ಎಲ್ಲಾ ಕಮರ್ಷಿಯಲ್ ಅಂಶ ಇದೆ.
ಇದು ತಾಯಿಯ ಸೆಂಟಿಮೆಂಟ್ ಆಧರಿಸಿದ ಕಿರುಚಿತ್ರ. ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚು ಕಡಿಮೆ ಒಂದು ತಿಂಗಳು ಆಗಿದೆ. ಕಿರುಚಿತ್ರದಲ್ಲಿ 1 ಹಾಡಿದೆ, ಡಿಐ ಸೇರಿದಂತೆ ಒಟ್ಟಾರೆ ಕಿರುಚಿತ್ರದ ತಯಾರಿಕೆಗೆ 2 ರಿಂದ ಮೂರು ತಿಂಗಳು ಹಿಡಿದಿದೆ .“ಫಸ್ಟ್ ಸ್ಯಾಲರಿ” ಕಿರುಚಿತ್ರ ಒಟ್ಟಾರೆ 24 ನಿಮಿಷದ ಅವಧಿ ಇದೆ.
ನಿರ್ದೇಶನ ತಂಡದಲ್ಲಿ ಮನೋಜ್ ಕುಮಾರ್ ಎಚ್.ಎನ್. ರವಿ ಸಾಸನೂರು ಕೆಲಸ ಮಾಡಿದ್ದು ಪ್ರಚಾರ ಕಲೆ ಮಣಿ ಅವರದು. ವಿಜಯ್ ಶಿವಕುಮಾರ್ ರಚನೆ, ರಿಚರ್ಡ್ ಡ್ಯಾನಿಯಲ್ ಛಾಯಾಗ್ರಾಹಣದ ಜೊತೆಗೆ ಸಂಕಲನ ಮಾಡಿದ್ದು ವಿಜಯ್ ಹರಿತ್ಸ ಸಂಗೀತ ನೀಡಿದ್ಧಾರೆ. ಡಿ.ಎಸ್ ಸುನೀಲ್ ಸುಧೀಂದ್ರ ಮತ್ತು ಡಿ.ಜಿ ವಾಸುದೇವ್ ಪತ್ರಿಕಾ ಸಂಪರ್ಕವಿದ್ದು ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಚಂದನ ಪ್ರಸನ್ನ ಕಾರ್ಯನಿರ್ವಹಿಸಿದ್ದಾರೆ ಎಂದು ನಿರ್ದೇಶಕ ಪವನ್ ವೆಂಕಟೇಶ್ “ಫಸ್ಟ್ ಸ್ಯಾಲರಿ” ಬಗ್ಗೆ ಮಾಹಿತಿ ನೀಡಿದ್ದಾರೆ
Wednesday, October 15, 2025
ಅಪ್ಪಟ ಕನ್ನಡ ಮಣ್ಣಿನ ಪ್ರತಿಭೆ ಕಾಜಲ್ ಕುಂದರ್
'ಪೆಪೆ' ಮತ್ತು 'ಮೇಘಾ' ಚಿತ್ರದಲ್ಲಿನ ಅಭಿನಯದಿಂದ ಕನ್ನಡಿಗರ ಮೆಚ್ಚಿಗೆ ಗಳಿಸಿರುವ ನಟಿ ಕಾಜಲ್ ಕುಂದರ್ 'ಬಿಳಿಚುಕ್ಕಿ ಹಳ್ಳಿಹಕ್ಕಿ'ಯಲ್ಲಿ ನಾಯಕಿ ನಟಿಯಾಗಿ ನಟಿಸುತ್ತಿದ್ದಾರೆ.
'ಮಹಿರ' ಖ್ಯಾತಿಯ ಮಹೇಶ್ ಗೌಡ ನಟನೆ ಮತ್ತು ನಿರ್ದೇಶನದ 'ಬಿಳಿಚುಕ್ಕಿ ಹಳ್ಳಿ ಹಕ್ಕಿ' ಚಿತ್ರಕ್ಕೆ ನಾಯಕಿಯಾಗಿ ಕಾಜಲ್ ಕುಂದ ನಟಿಸುತ್ತಿದ್ದಾರೆ.
ತೊನ್ನು ಅಥವಾ ವೈಟ್ ಪ್ಯಾಚಸ್ (ವಿಟಿಲಿಗೊ) ಎಂಬ ಚರ್ಮ ಸಂಬಂಧಿತ ಖಾಯಿಲೆ ಸುತ್ತ ಚಿತ್ರದ ಕಥೆ ಸಾಗಲಿದ್ದು, ಅದನ್ನು ಕಮರ್ಷಿಯಲ್ ಧಾಟಿಯಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಈ ಚಿತ್ರವು ವಿಭಿನ್ನ ಪೋಸ್ಟರ್‌ಗಳ ಮೂಲಕ ಗಮನ ಸೆಳೆಯುತ್ತಿದ್ದು, ಚಿತ್ರಕ್ಕೆ ಈ ಮೊದಲು ವೈಷ್ಣವಿ ಗೌಡ ನಾಯಕಿ ಅಂತ ಗೊತ್ತಾಗಿತ್ತು. ಕಾರಣಾಂತರಗಳಿಂದ ಅವರ ಬದಲಿಗೆ ಕಾಜಲ್ ಕುಂದರ್ ಬಂದಿದ್ದಾರೆ.
ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರ್ ಆಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಿಯೋ ಆಂಟೋನಿ ಸಂಗೀತ ಮತ್ತು ಕಿರಣ್ ಸಿಎಟ್‌ಎಂರ ಛಾಯಾಗ್ರಹಣವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಬಲು ರೊಮ್ಯಾಂಟಿಕ್ ಶೈಲಿಯಲ್ಲಿ ಸಾಗುವ ಈ ಚಿತ್ರ ನಗಿಸುತ್ತಲೇ ಅಳಿಸುವ, ಬಹುಕಾಲ ಕಾಡುವ, ಎಲ್ಲಾ ವಯೋಮಾನದ, ಅಭಿರುಚಿಗಳ ಪ್ರೇಕ್ಷಕರಿಗೂ ಪಥ್ಯವಾಗುವಂತೆ ಚಿತ್ರವನ್ನು ನಿರ್ದೆಶಕರು ಕಟ್ಟಿ ಕೊಟ್ಟಿದ್ದಾರೆ.
ಕಾಜಲ್ ಕುಂದರ್ ಹೆಸರು ಕೇಳಿದಾಕ್ಷಣ ಪರಬಾಷ್ಗರು ಎನಿಸಿದರೂ, ಇವರು ಕನ್ನಡದವರೇ, ಮೂಲತಃ ಮಂಗಳೂರಿನವರಾದ ಕಾಜಲ್ ಮುಂಬೈನಲ್ಲಿಯೇ ನೆಲೆಸಿದ್ದು, ಸೊಗಸಾಗಿ ಕನ್ನಡ ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ ಎಂಬುದು ಮತ್ತಷ್ಟು ಸಂತೋಷದ ವಿಷಯ. 'ಮಾಯಾ ಕನ್ನಡಿ, ಬಾಂಡ್ ರವಿ, ಕೆ.ಟಿ.ಎಂ, ಲೈನ್‌ಮೆನ್, ಮೇಘಾ.....' ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಜಲ್ ನಟಿಸಿದ್ದಾರೆ. ಸದ್ಯ ನಮ್ಮಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗುವ ಎಲ್ಲಾ ಲಕ್ಷಣಗಳೂ ಕಾಜಲ್‌ರಿಗೆ ಇದೆ. ಇವರಿಗೆ ಶುಭವಾಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
*** ಮಾರ್ಚ್ 2025ರ ಗೃಹಶೋಭಾ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನ
Edagaiye Apaghatakke Karana Movie Review: ಅನಿಷ್ಟಕ್ಕೆಲ್ಲಾ ಶನೀಶ್ವರ ಅಲ್ಲ ಎಡಗೈ ಕಾರಣ! ಇದು ಲೋಹಿತ್ ಪುರಾಣ
– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಎಡಗೈಯೇ ಅಪಘಾತಕ್ಕೆ ಕಾರಣ
ನಿರ್ದೇಶನ: ಸಮರ್ಥ ಕಡಕೋಳ
ನಿರ್ಮಾಣ: ಗುರುದತ್ ಗಾಣಿಗ, ರವಿಚಂದ್ರ, ರಾಜೇಶ್ ಕೀಳಂಬಿ
ತಾರಾಂಗಣ: ದಿಗಂತ್, ಅನೂಪ್ ಭಂಡಾರಿ, ನಿಧಿ ಸುಬ್ಬಯ್ಯ , ಧನು ಹರ್ಷ ಮುಂತಾದವರು
ರೇಟಿಂಗ್: ***
ನಟ ದಿಗಂತ್, ನಿಧಿ ಸುಬ್ಬಯ್ಯ , ಧನು ಹರ್ಷ ಮುಂತಾದವರು ಅಭಿನಯಿಸಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಂದಿನಿಂದ (ಜೂನ್ 13) ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಗುರುದತ್ ಗಾಣಿಗ, ಬ್ಲಿಂಕ್ ನಿರ್ಮಾಪಕ ರವಿಚಂದ್ರ ಮತ್ತು ಶಾಖಾಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ತನ್ನ ವಿಭಿನ್ನ ಪ್ರಚಾರ ಜೊತೆಗೆ ಟೈಟಲ್, ಟೀಸರ್, ಟ್ರೈಲರ್ ಮೂಲಕ ಭರವಸೆ ಹುಟ್ಟಿಸಿದ್ದ ಸಮರ್ಥ ಕಡಕೋಳ ನಿರ್ದೇಶನದ ಈ ಚಿತ್ರ ಹೇಗಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಎಡಗೈ ಬಳಸುವವರ ಕಷ್ಟ ಸುಖಗಳನ್ನು ಈ ಚಿತ್ರದ ಮೂಲಕ ನಿರ್ದೇಶಕ ಹೇಳಲು ಮುಂದಾಗಿದ್ದಾರೆ. ವಿಶಿಷ್ಟ ಕಥಾ ಹಂದರದ ಸಿನಿಮಾ ಇದಾಗಿದ್ದು ಲೋಹಿತ್ ಅಲಿಯಾಸ್ ಲೊಡ್ಡೆ ಲೋಹಿತ್ (ದಿಗಂತ್) ಒಬ್ಬ ಎಡಚರ ಅಥವಾ ಎಡಗೈ ಬಳಸುವ ವ್ಯಕ್ತಿ. ಹಾಗಾಗಿ ಅವನಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗಿರುತ್ತದೆ. “ಈ ಪ್ರಪಂಚವಿರುವುದು ಬರೇ ಬಲಗಿ ಬಳಕೆಯವರೊಗೆ “ಎನ್ನುವ ವೇದನೆಯಲ್ಲೇ ಅವನ ಜೀವನ ಸಾಗುತ್ತಿರುತ್ತದೆ ಆ ಸಮಯದಲ್ಲಿ ಅವನು ತನ್ನ ಗೆಳತ್ತಿ ಪೂಜಾ(ನಿಧಿ ಸುಬ್ಬಯ್ಯ) ಭೇಟಿಗಾಗಿ ಒಂದು ಐಷಾರಾಮಿ ಫ್ಲ್ಯಾಟ್ ಗೆ ಬರುತ್ತಾನೆ. ಒಂದು ರೊಮ್ಯಾಂಟಿಕ್ ಡೇಟಿಂಗ್ ಆಗಬೇಕಿದ್ದ ಆ ಭೇಟಿ ಪೂಜಾಳ ಸಾವಿನಿಂದ ಬೇರೆಯ ರೀತಿಯಲ್ಲಿ ತಿರುವು ಪಡೆಯುತ್ತದೆ. ಲೋಹಿತ್ ಕೈಗೆ ರಕ್ತ ಅಂಟಿಕೊಳ್ಳುತ್ತದೆ. ಅದಾದ ನಂತರದಲ್ಲಿ ಒಂದು. ಎರಡು.. ಮೂರು… ಹೀಗೆ ಸರಣಿ ಸಾವುಗಳು ನಡೆಯುತ್ತಾ ಹೋಗುತ್ತದೆ. ಅದಕ್ಕೆಲ್ಲಾ ಲೋಹಿತ್ ಎಡಗೈನೇ ಕಾರಣವಾ? ಅದರಿಂದ ಅವನು ಹೇಗೆ ಬಚಾವಾಗಿ ಬರುತ್ತಾನೆ? ತಿಳಿಯಲು ನೀವು ಈ ಸಿನಿಮಾ ನೋಡಬೇಕು.
ಡಾರ್ಕ್ ಕಾಮಿಡಿ ಕಥಾನಕವಿದಾಗಿದ್ದು ಇದನ್ನು ನಿರ್ದೇಶಕರು ಸಂಭಾಷಣೆ ಹಾಗೂ ಚಿತ್ರಕಥೆಯ ಮೂಲಕ ಮನರಂಜನಾತ್ಮಕವಾಗಿ ಹೇಳಲು ತೊಡಗಿದ್ದಾರೆ. ರಕ್ತ, ಕೊಲೆ ನಡೆಯುತ್ತಿದ್ದರೂ ಪ್ರೇಕ್ಷಕರು ನಾಯಕನ ಪೇಚಾಟ ಕಂಡು ನಗುತ್ತಾರೆ. ಪ್ರದ್ಯೋತನ್ ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದು. ಜೊತೆಗೆ ಛಾಯಾಗ್ರಹಣ, ಸಂಕಲನ ಸಹ ಉತ್ತಮವಾಗಿದೆ.
ದಿಗಂತ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸಂಕಟಕ್ಕೆ ಸಿಕ್ಕಿ ಒದ್ದಾಡುವ ಯುವಕನಾಗಿ ಅವರ ಅಭಿನಯ ಪ್ರೇಕ್ಷಕರಿಗೆ ಮಜಾ ಕೊಡುತ್ತದೆ. ನಿಧಿ ಸುಬ್ಬಯ್ಯ ಪಾತ್ರ ಬರುವುದು ಕೆಲವೇ ಸಮಯವಾಗಿದ್ದರೂ ಕಥೆಯಲ್ಲಿ ಮಹತ್ವದ ತಿರುವು ಕಾಣಲು ಇದು ಕಾರಣವಾಗುತ್ತದೆ. ನಾಯಕಿ ಧನು ಹರ್ಷತಮ್ಮ ಮೊದಲ ಚಿತ್ರದಲ್ಲೇ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದು ಗಮನ ಸೇಳೆಯುತ್ತಾರೆ. . ‘ಭಜರಂಗಿ’ ಲೋಕಿ, ಕೃಷ್ಣ ಹೆಬ್ಬಾಳೆ ಪಾತ್ರಗಳು ಅಚ್ಚುಕಟ್ತಾಗಿ ಮೂಡಿ ಬಂದಿದೆ. ನಿರೂಪ್ ಭಂಡಾರಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಇನ್ನು ಕೆಲವೊಂದು ಕಡೆ ಲಾಜಿಕ್ ಇಲ್ಲದಂತಾಗೆ ಜೊತೆಗೆ ಚಿತ್ರದ ಮೊದಲಾರ್ಧದಲ್ಲಿ ಕಂಡ ವೇಗ ದ್ವಿತೀಯಾರ್ಧದಲ್ಲಿ ಮಾಯವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳಬಹುದಾಗಿದೆ ಹಾಗಾಗಿ ಸ್ವಲ್ಪ ಸ್ಪಷ್ಟತೆ ಇರಬೇಕಿತ್ತು. ಇದರ ಹೊರತಾಗಿ ಡಾರ್ಕ್ ಹ್ಯೂಮರ್ ಜೊತೆಗೆ ಕಾಮಿಡಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾ ಎಂದೂ ಮೋಸ ಮಾಡುವುದಿಲ್ಲ.
- ಜೂನ್ 14, 2025ರಂದು ಗೃಹಶೋಭಾ ಮಾಸಪತ್ರಿಕೆ ಜಾಲತಾಣದಲ್ಲಿ ಪ್ರಕಟವಾಗಿದ್ದ ಸಿನಿಮಾ ರಿವ್ಯೂ
Monday, October 13, 2025
ರೌಡಿ ಬೇಬಿ ನಿಶಾ ರವಿಕೃಷ್ಣನ್
ವಿನಯ್ ರಾಜ್‌ಕುಮಾರ್‌ಗೆ ಜೊತೆಯಾದ 'ಗಮೇಳ' ರೌಡಿ ಬೇಬಿ ನಿಶಾ ರವಿಕೃಷ್ಣನ್, ಇಲ್ಲಿ ತಮ್ಮ ಕುರಿತಾಗಿ ವಿವರವಾಗಿ ಏನು ಹೇಳಿದ್ದಾರೆ ಎಂದು ಗಮನಿಸೋಣವೇ.....?
ಕನ್ನಡ ಕಿರುತೆರೆಯಲ್ಲಿ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ಜನಪ್ರಿಯರಾದ ನಟಿ ನಿಶಾ ರವಿಕೃಷ್ಣನ್ ಕನ್ನಡ ಜನತೆಗೆ ಚಿರವರಿಚಿತ ಹೆಸರು. ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಅವರು ನಟಿಸಿದ ಧಾರಾವಾಹಿ 'ಗಟ್ಟಿಮೇಳ'ದ ನಂತರದಲ್ಲಿ ಅವರನ್ನು ಎಲ್ಲರೂ ರೌಡಿ ಬೇಬಿ ಎಂದೇ ಗುರುತಿಸತೊಡಗಿದರು.
ಈ ಹಿಂದೆ ಅಂಶು' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಈಗ ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ ಅಭಿನಯದ 'ಅಂದೊಂದಿತ್ತು ಕಾಲ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ತೆಲುಗು ಧಾರಾವಾಹಿ ಕೂಡ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪುಟ್ಟ ಪರಿಚಯವೊಂದನ್ನು ಇಲ್ಲಿ ಮಾಡಿಕೊಡಲಾಗಿದೆ.
ನಿಶಾ ಹಿನ್ನೆಲೆ
ಸಕಲೇಶಪುರದಲ್ಲಿ ಜನಿಸಿದ ನಿಶಾರ ತಂದೆ ರವಿಕೃಷ್ಣನ್, ತಾಯಿ ಉಷಾ. ತಂದೆ ಮಂಡ್ಯ ಮಕರ ನಾಟಕ ತಂಡದೊಡನೆ ಆಗಾಗ ಭಾಗವಹಿಸುತ್ತಿದ್ದದ್ದು ನಿಶಾರಿಗೆ ರಂಗನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆಯಾಗಿತ್ತು, ಅವರು ಕರ್ನಾಟಕ ಸಂಗೀತ ಮತ್ತು ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದು, ಶಾಲಾ ದಿನಗಳಲ್ಲೇ ಚಿಂಟು ಟಿವಿಯ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದರು.
'ಇಷ್ಟಕಾಮ್ಯ' ಸಿನಿಮಾಯದ 'ನೀ ನನಗೋಸ್ಕರ' ಹಾಡಿನಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಅಭಿನಯಿಸಿದ್ದ ನಿಶಾ, 'ಸರ್ವ ಮಂಗಲ ಮಾಂಗಲ್ಯ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. 2018-19ರಲ್ಲಿ ಸ್ಟಾರ್ ಸುವರ್ಣದಲ್ಲಿ ಈ ಧಾರಾವಾಹಿ ಪ್ರಸಾರವಾಗಿತ್ತು, ನಂತರ ಅವರು 2019-24ರ ನಡುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು.
ತೆಲುಗು ಧಾರಾವಾಹಿಗಳಲ್ಲಿ ಪಾತ್ರ
ಈ ನಡುವೆ ತೆಲುಗಿನಲ್ಲಿ 'ಗೀತಾ' ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅವರು, ಈಗ 'ಅಮ್ಮಾಯಿಗಾರು' ಹಾಗೂ 'ಅಣ್ಣಯ್ಯ' ಧಾರಾವಹಿಗಳಲ್ಲಿ ನಟಿಸುತ್ತಿದ್ದಾರೆ. 'ಅಣ್ಣಯ್ಯ' ಧಾರಾವಹಿಯ ಪಾರು/ಪಾರ್ವತಿ ಪಾತ್ರ ಕನ್ನಡಿಗರ ಮನಗೆದಿದ್ದೆ.
ನಿಶಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರ ದೊಡ್ಡ ಅಭಿಮಾನಿಯಾಗಿದ್ದಾರೆ. ಧಾರಾವಾಹಿಗಳಲ್ಲಿ ಜೋರು ಅಥವಾ ಬಜಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಶಾ ನಿಜ ಜೀವನದಲ್ಲಿ ತುಂಬಾ ಸೈಲೆಂಟ್ ಹುಡುಗಿ. ಇನ್ನು ಅವರು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಲು ತೆಲುಗು ಕಲಿತದ್ದು ಹೇಗೆ?
ತೆಲುಗು ಕಲತ ಬಗೆ
“ನಂಗೆ ತೆಲುಗು ಬಗ್ಗೆ ಏನು ಎಂದರೆ ಏನೂ ಗೊತ್ತಿರಲಿಲ್ಲ. ತೆಲುಗಿನ ಕೆಲವೇ ಕೆಲವು ಶಬ್ದಗಳು ತಿಳಿದಿದ್ದವು. ಆರಂಭದಲ್ಲಿ ತುಂಬಾ ಕಷ್ಟ ಆಯ್ತು. ಕನ್ನಡ ನಿರರ್ಗಳವಾಗಿ ಮಾತನಾಡಬಲ್ಲೆ. ಇಲ್ಲಿ ನನಗೆ ಹೊಂದಾಣಿಕೆ ಆಗಿತ್ತು.
“ನಾವು ಇಲ್ಲಿ ಲೈವ್ ಶೂಟ್ ಮಾಡುತ್ತೇವೆ. ಹಾಗೆಯೇ ಆಡಿಯೋ ಕ್ಯಾಪ್ಟರ್ ಆಗುತ್ತದೆ. ಅಲ್ಲಿ ಪ್ರಾಂಪ್ಟಿಂಗ್ ಇರುತ್ತಿತ್ತು. ಅದು ನನಗೆ ಹೊಸದು. ಅವರ ಜೊತೆ ನಾವು ಹೇಳಬೇಕು. ಇದು ಕಷ್ಟ ಆಯ್ತು. ಭಾಷೆ ಗೊತ್ತಿಲ್ಲ, ಅವರ ಲಿಪ್ ರೀಡ್ ಮಾಡಿ ಭಾಷೆ ಕೇಳಿ ಹೀಗೆ ಭಾಷೆ ಕಲಿತೆ,' ಎನ್ನುತ್ತಾರೆ.
ನಿಶಾ ಇತ್ತೀಚೆಗೆ ಹೊಸ ಮನೆಯ ಗೃಹಪ್ರವೇಶ ಸಹ ನೆರವೇರಿಸಿದ್ದಾರೆ. ನಿಶಾರಿಗೆ ಚೆಂದದ ಮನೆ ಕಟ್ಟಿಸಬೇಕು ಎನ್ನುವುದು ಬಹು ದಿನಗಳ ಕನಸಾಗಿತ್ತು. ಅದನ್ನು ಕಳೆದ ಮೇ 9ರಂದು ಗೃಹಪ್ರವೇಶ ನಡೆಸುವ ಮೂಲಕ ನನಸು ಮಾಡಿಕೊಂಡಿದ್ದಾರೆ.
ಮದುವೆಯಾಗುವ ಹುಡುಗ
ನಿಶಾ ಮದುವೆಯಾಗುವ ಹುಡುಗ ಹೇಗಿರಬೇಕೆಂದು ಮನಬಿಚ್ಚಿ ಹೇಳಿಕೊಂಡಿದ್ದರು- ಅಷ್ಟೆಲ್ಲಾ ದೊಡ್ಡ ಲಿಸ್ಟ್ ಏನೂ ಇಲ್ಲ ಎಲ್ಲಾ ಹುಡುಗಿಯರೂ ಬಯಸೋ ಥರ ಇದ್ದರಾಯಿತು, ಜಾಸ್ತಿ ನಿರೀಕ್ಷೆ ಮಾಡಲ್ಲ. ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ತನ್ನ ಕನಸಿನ ಹುಡುಗನ ಬಗ್ಗೆ ಮಾತನಾಡುತ್ತಿದ್ದರು.
ಇದಾಗಿ ತಮ್ಮ ಮುಂಬರುವ ಚಲನಚಿತ್ರದ ಕುರಿತು ಮಾತನಾಡಿದ ನಟಿ ನಿಶಾ, 'ಅಂದೊಂದಿತ್ತು ಕಾಲ' ಚಿತ್ರದಲ್ಲಿ ನನ್ನ ಪಾತ್ರ ಚಿಕ್ಕದಾಗಿದ್ದರೂ ಅದು ತೂಕವನ್ನು ಹೊಂದಿದೆ. ನಿರ್ದೇಶಕರು, ನಿರ್ಮಾಪಕರು ತುಂಬಾ ಸಹಕಾರ ನೀಡಿದ್ದಾರೆ.
ಅದೇ ರೀತಿ ನಟ ವಿನಯ್ ರಾಜ್‌ಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸುಂದರ ಪ್ರಮುಖ ಪಾತ್ರವಾಗಿದ್ದು, ಖಂಡಿತಾ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ,' ಎಂದಿದ್ದಾರೆ.
ಅಂದೊಂದಿತ್ತು ಕಾಲ
ಭುವನ್ ಮೂವಿಸ್ ಬ್ಯಾನರ್‌ನ ಭುವನ್ ಸುರೇಶ್ ನಿರ್ಮಾಣದ ಕೀರ್ತಿ ಕೃಷ್ಣಪ್ಪ ನಿರ್ದೇಶನದ 'ಅಂದೊಂದಿತ್ತು ಕಾಲ' ಚಲನಚಿತ್ರ ಸುಂದರವಾಗಿ ಮೂಡಿ ಬಂದಿದೆ. ಈ ಚಿತ್ರ 90ರ ಕಾಲಘಟ್ಟದ ಕಥೆ ಹೊಂದಿದೆ. ಇಲ್ಲಿ ಈಕೆ, ನಾಯಕ ವಿನಯ್ ರಾಜ್‌ಕುಮಾರ್ ಜೊತೆ 10ನೇ ತರಗತಿ ವಿದ್ಯಾರ್ಥಿನಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ನಿಶಾರಿಗೆ ಈ ಸಿನಿಮಾ ಮೂಲಕ ಮತ್ತಷ್ಟು ಅವಕಾಶ ಸಿಕ್ಕಲಿ, ಆ ಮೂಲಕ 'ಗಟ್ಟಿಮೇಳ'ದ ನಟಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
ಆಗಸ್ಟ್ 2025 ತಿಂಗಳ ಗೃಹ ಶೋಭಾ ಮಾಸಪತ್ರಿಕೆಯಲ್ಲಿ... ನನ್ನ ಲೇಖನ ಪ್ರಕಟವಾಗಿದೆ..,.
Thursday, October 09, 2025
"ಹಲೋ ಸರ್ " ಗೆ ಸಿಕ್ಕ ಹೊಸ ನಾಯಕಿ - ಸ್ವಾತಿ ಲಿಂಗರಾಜು
ಕ ನ್ನಡ ಚಿತ್ರರಂಗಕ್ಕೆ ನಿತ್ಯವೂ ಹೊಸಬರ ಪ್ರವೇಶ ಆಗುತ್ತಲೇ ಇದೆ. ಇತ್ತೀಚೆಗಂತೂ ಹೊಸ ಪ್ರತಿಭಾವಂತ ನಟನಟಿಯರ ದಂಡೇ ಇತ್ತ ಹರಿದುಬರುತ್ತಿದೆ. ಅಂತಹವರಲ್ಲಿ ಹಲವರು ಚಿತ್ರರಂಗದ ಹಿನ್ನೆಲೆ ಇರದಂತಹ ಬೇರೆಯದೇ ಕ್ಷೇತ್ರದಲ್ಲಿ ದುಡಿದವರು ಎನ್ನುವುದು ವಿಶೇಷ.
ಸಾಫ್ಟ್‌ವೇರ್ ಟೆಕ್ಕಿಗಳು, ಮಾಡೆಲಿಂಗ್ ಕ್ಷೇತ್ರದವರು, ಖಾಸಗಿ ಬಿಸ್‌ನೆಸ್ ನಡೆಸುವವರು ಸಹ ಇದರಲ್ಲಿ ಇದ್ದಾರೆ. ಇವರಲ್ಲಿ ಅನೇಕರು ಚಿತ್ರರಂಗಕ್ಕೆ ಪ್ರವೇಶಿಸುವುದು ಕೇವಲ ಆಕಸ್ಮಿಕವಾಗಿ, ಸ್ವಾತಿ ಲಿಂಗರಾಜು ಸಹ ಅಂತಹವರಲ್ಲಿ ಒಬ್ಬರು. ಮೂಲತಃ ಸಾಫ್ಟ್‌ವೇರ್ ಟೆಕ್ಕಿಯಾಗಿ ನೆಟ್‌ವರ್ಕ್ ಎಂಜಿನಿಯರ್ ಆಗಿದ್ದ ಸ್ವಾತಿ ವಿಧಾನಸೌಧದಲ್ಲಿ ಸಹ ಕೆಲಸ ಮಾಡಿದ್ದಾರೆ.
ಆದರೆ ಈಗ ಆಕೆ 'ವಿಧಿ (ಆರ್ಟಿಕಲ್) 370' ಖ್ಯಾತಿಯ ನಿರ್ದೇಶಕ ಶಂಕರ್‌ರ ನಿರ್ದೆಶನದ 'ಹಲೋ ಸರ್' ಚಿತ್ರದ ನಾಯಕಿಯಾಗಿದ್ದಾರೆ. ಸ್ವಾತಿಯ ನಟನಾವೃತ್ತಿ ಹೇಗೆ ಪ್ರಾರಂಭವಾಗಿತ್ತು? ಅವರ ಭವಿಷ್ಯದ ಕನಸೇನು ಎನ್ನುವುದನ್ನು 'ಗೃಹಶೋಭಾ'ದ ಜೊತೆ ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದ ಸಾರಾಂಶ ಇಲ್ಲಿದೆ :
ಆರಂಭದ ಕೆರಿಯರ್
ವಿಧಾನಸೌಧದ ಕೆಲಸದಲ್ಲಿದ್ದ ಸಮಯದಲ್ಲಿ ಸ್ವಾತಿಗೆ ಒಂದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿ
ಬಂದಿತು. ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಕ್ಲೀನ್-2022 ಎನ್ನುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ವಾತಿಗೆ, ನಟನಯೇ ತನ್ನ ವೃತ್ತಿಯಾಗಲಿದೆ ಎನ್ನುವುದರ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ. ಆದರೆ ಉದ್ಯೋಗದಲ್ಲಿನ ಕೆಲವು ಅಡೆತಡೆಯ ಬಳಿಕ ಅವರು ನಟನೆಯತ್ತ ವಾಲಿದ್ದರು.
ಇದಕ್ಕಾಗಿ ಅವರು ಸಂತೋಷ್ ಮೈಮ್‌ರ ಬಳಿ ತರಬೇತಿ ಪಡೆದುಕೊಂಡಿದ್ದು ಚಿತ್ರವೊಂದಕ್ಕೆ ಆಯ್ಕೆಯಾದ ನಂತರವೇ ಇವರು ನಟನಾ ತರಬೇತಿ ಪಡೆಯಲು ಪ್ರಾರಂಭಿಸಿದ್ದರೆನ್ನುವುದು ಮಹತ್ವದ ಸಂಗತಿಯಾಗಿದೆ. “ನಾನು ಸಿನಿಮಾದಲ್ಲಿ ಅಭಿನಯಿಸುವುದರ ಬಗೆಗೆ ನನ್ನ ತಾಯಿ ತ೦ದೆಗೆ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಪತಿಗೆ ಇದರ ಬಗ್ಗೆ ತಿಳಿದಿದೆ. ಅವರ ಸಪೋರ್ಟ್ ನನಗೆ ಬಹಳ ಇದೆ. ಅವರ ಬೆಂಬಲದಿಂದಲೇ ನಾನು ನಟನಾ ಕ್ಷೇತ್ರಕ್ಕೆ ಬಂದಿರುವುದು,' ಎಂದು ಸ್ವಾತಿ ಹೇಳುತ್ತಾರೆ.
ನಿರ್ದೇಶಕ ಪ್ರಸಿದ್ ಬೆಂಬಲ
ಕಿರಣ್ ರಾಜ್ 'ಭರ್ಜರಿ ಗಂಡು' ಸೇರಿದಂತೆ ಮೂರು ಸಿನಿಮಾ ನಿರ್ದೇಶನ ಮಾಡಿರುವ ಪ್ರಸಿದ್ದ್ ಸ್ವಾತಿಗೆ ಆತ್ಮಸ್ಥೆರ್ಯ ತುಂಬಿದ್ದರು. ಸ್ವಾತಿ ಇದುವರೆಗೆ 'ತಾಯವ್ವ, ಶೇರ್,' ಎನ್ನುವ ಸಿನಿಮಾಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸ್ವಾತಿ ತೆಲುಗು ಸಿನಿಮಾವೊಂದರಲ್ಲಿ ಸಹ ಅಭಿನಯಿಸುತ್ತಿದ್ದಾರೆ.
ಸ್ವಾತಿ ಚಿತ್ರರಂಗದ ಜೊತೆಗೆ ಒಬ್ಬ ಉದ್ಯಮಿಯೂ ಹೌದು. ಅವರದೇ ಸ್ವಂತ ಸಂಸ್ಥೆಯೊಂದನ್ನು ನಡೆಸುತ್ತಿರುವ ಇವರು ಆ ಸಂಸ್ಥೆಯ ಮೂಲಕ ಕಸ್ಟಮೈಸ್ ಕಾಟನ್ ಕ್ಲಾತಿಂಗ್ ಪೂರೈಸುತ್ತಿದ್ದಾರೆ. ಅದು ಲೋಗೋ ಮತ್ತು ಬೇರೆ ಬೇರೆ ವೈವಿಧ್ಯಮಯ ಡಿಸೈನ್‌ಗಳನ್ನು ಹೊಂದಿರುತ್ತದೆ.
ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದ ಕುರಿತು ವಿವರಿಸಿರುವ ನಟಿ, “ನಾನು ಆನ್‌ಲೈನ್ ಆಡಿಷನ್ ತೆಗೆದುಕೊಂಡು ಸ್ಪರ್ಧೆಗೆ ಆಯ್ಕೆಯಾಗಿದ್ದೆ. ಆ ಸ್ಪರ್ಧೆಗಾಗಿ ನಾನು ಮೂರು ತಿಂಗಳ ಕಾಲ ತಯಾರಿ ನಡೆಸಿದ್ದೆ. ಅದರಲ್ಲಿ ಡ್ಯಾನ್ಸ್ ತರಬೇತಿ ಸಹ ಒಳಗೊಂಡಿತ್ತು, ಈ ಸ್ಪರ್ಧೆಯಲ್ಲಿ ನನಗೆ ಮಿಸೆಸ್ ಇಂಡಿಯಾ ಅಲ್ಲುರಿಂಗ್ ಎನ್ನುವ ಟೈಟಲ್ ಬಂದಿದೆ. ನಾಲ್ಕು ಸುತ್ತಿನ ಸ್ಪರ್ಧೆ ಇದಾಗಿದ್ದು, ಅದರಲ್ಲಿ ನನ್ನ ಪರಿಚಯ, ಬೌದ್ಧಿಕ ಸಾಮರ್ಥ್ಯ, ಆಂಗಿಕ ಅಭಿನಯ ಸೇರಿ ನಾನಾ ರೀತಿಯ ಪರೀಕ್ಷೆಗಳಿದ್ದವು,” ಎಂದು ಅವರು ವಿವರಿಸಿದ್ದಾರೆ.
ಸ್ಟಿಕ್ಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ಸ್ವಾತಿ ಅವರ ಮನದಾಳದ ಆಸೆಯಾಗಿದೆ. ಮೃದು ಸ್ವಭಾವ ಅವರ ಸಹಜ ಗುಣವಾಗಿದ್ದು, ಅದಕ್ಕೆ ವಿರುದ್ಧ ವಾಗಿ ತೆರೆಯಲ್ಲಿ ಪಾತ್ರ ಮಾಡಬೇಕೆನ್ನುವುದು ಅವರ ಕನಸು. ಅಲ್ಲದೆ, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್‌ರನ್ನು ಇಷ್ಟದ ನಟ ಎನ್ನುವ ಸ್ವಾತಿ, ತೆಲುಗಿನಲ್ಲಿ ಅಲ್ಲು ಅರ್ಜುನ್‌ರನ್ನು ಮೆಚ್ಚುತ್ತಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಅವರಿಷ್ಟದ ನಟ.
ಒಂದು ವೇಳೆ ಚಿತ್ರರಂಗದಲ್ಲಿ ವಿಜಯ್ ಸೇತುಪತಿಯನ್ನು ಭೇಟಿಯಾಗಿದ್ದೇ ಆದರೆ, ಅವರು, ತಮ್ಮನ್ನು ಕೇವಲ ಅವರ ಅಭಿಮಾನಿ
ಎಂದು ನೋಡದೆಯೇ, ತಮ್ಮಂತೆಯೇ ಒಬ ನಟಿ, ಅಭಿನೇತ್ರಿ ಎಂದು ಗುರುತಿಸಬೇಕು ಎನ್ನುವುದು ಸ್ವಾತಿ ಅವರ ಗುರಿಯಾಗಿದೆ. ಅದಕ್ಕಾಗಿ ನಾನು ಸಹ ಸೆಲೆಬ್ರಿಟಿ ಆಗಬೇಕು ಎನ್ನುವುದಾಗಿ ಹೇಳುತ್ತಾರೆ.
ಪೊಲೀಸ್ ಪಾತ್ರದ ಕುರಿತು ಹೇಳುವುದಾದರೆ ಮಾಲಾಶ್ರೀ ಪಾತ್ರ ನನಗೆ ಬಹಳ ಇಂಪ್ರೆಸ್ ಆಗಿದೆ ಎನ್ನುತ್ತಾರೆ. ನಿರ್ದೇಶಕ ಶಂಕರ್ 'ಹಲೋ ಸಾರ್' ಚಿತ್ರದಲ್ಲಿ ಅವಕಾಶ ನೀಡಿ ನನಗೆ ಮಾರ್ಗದರ್ಶನ ನೀಡಿದ್ದನ್ನು ಮರೆಯಲಾರೆ ಎಂದವರು ಹೇಳಿಕೊಂಡರು.
ಕೌಟುಂಬಿಕ ಸಾಮರಸ್ಯ
ಕುಟುಂಬ ಹಾಗೂ ನಟನೆಯ ಕುರಿತು ಹೇಳುವ ಸ್ವಾತಿ, ಪತಿ ತುಂಬಾ ಬೆಂಬಲ ನೀಡುವರು ಎನ್ನುತ್ತಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಹೇಳುವ ಸ್ವಾತಿ, ತಾವು ಪಾಂಡವಪುರದಲ್ಲಿದ್ದ ಸಮಯದಲ್ಲಿ ಹೆಚ್ಚು ಸಿನಿಮಾ ನೋಡಿದವರಲ್ಲ, ಸಿನಿಮಾ ಆಸಕ್ತಿಯೂ ಇರಲಿಲ್ಲ ಎನ್ನುತ್ತಾರೆ. 'ಯಜಮಾನ, ದಿಗ್ಗಜರು,' ಸೇರಿ ಕೆಲವೇ ಬೆರಳೆಣಿಕೆಯ ಚಿತ್ರಗಳನ್ನು ಸಿನಿಮಾ ಮಂದಿರದಲ್ಲಿ ವೀಕ್ಷಿಸಿದ್ದರು. ಇನ್ನು ಸ್ವಾತಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಅವರು ಮಾಡುವ ನಾನ್ ವೆಜ್ ಅಡುಗೆಯನ್ನು ಮನೆಯವರೆಲ್ಲಾ ಮೆಚ್ಚುತ್ತಾರಂತೆ. ಅಲ್ಲದೆ, ಬಿಡುಗವಾಗಿದ್ದಾಗಲೆಲ್ಲಾ ಶಾಪಿಂಗ್ ಮಾಡುವುದು ಅವರ ಹವ್ಯಾಸ.
ಸಿನಿ ಅಭಿಮಾನಿಗಳೆಲ್ಲಾ ಸಿನಿಮಾ ಮಂದಿರಕ್ಕೆ ತೆರಳಿ ಸಿನಿಮಾ ನೋಡಬೇಕು ಎನ್ನುವುದು ಸ್ವಾತಿಯ ಸಲಹೆ. ಚಿತ್ರಮಂದಿರದಲ್ಲಿ ಸೌಂಡ್ ಎಫೆಕ್ಟ್, ದೃಶ್ಯದ ಕ್ವಾಲಿಟಿ ಸೇರಿ ಎಲ್ಲ ರೀತಿ ರಿಯಲ್ ಎಕ್ಸ್‌ಪೀರಿಯನ್ಸ್ ಆಗಬೇಕೆಂದರೆ ಚಿತ್ರ ಮಂದಿರದಲ್ಲೇ ಸಿನಿಮಾ ವೀಕ್ಷಿಸಬೇಕು ಎನ್ನುವುದು ಸ್ವಾತಿಯ ಅಭಿಪ್ರಾಯ.
ಗೃಹ ಶೋಭಾ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ (ಮಾರ್ಚ್ 2025)
“ನೀ ನಂಗೆ ಅಲ್ಲವಾ' ಚಿತ್ರದ ನಾಯಕಿಯಾದ ಕಾಶಿಮಾ
ಕನ್ನಡ, ತಮಿಳು, ತೆಲುಗು ಸೇರಿ ಬಹು ಭಾಷಾ್ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಕಾಶಿಮಾ ರಫಿ ಈಗ ಕನ್ನಡದ ಮತ್ತೊಂದು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಸಿದ್ಧ ವಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಪ್ಪಟ ಕನ್ನಡ ಪ್ರತಿಭೆ ಕಾಶಿಮಾ “ನೀ ನಂಗೆ ಅಲ್ಲವಾ' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ವಿದ್ಯಾ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದರೆ, `ಮ್ಯಾಟೆ' ಚಿತ್ರದ ಖ್ಯಾತಿ ನಿರ್ಮಾನಕರಾದ ಎಸ್. ಪಾರ್ವತಿ ಗೌಡ, ಪವನ್ ಪರಚುತಿದ್ದು ಹಾಗೂ ಮನೋಹರ್ ಕಾಂಪಲ್ಲಿ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಮನೋಜ್ ಪಿ ನಡಲುಮನೆ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಕಾಶಿಮಾ ರವಿ ಇದಕ್ಕೆ ಮುನ್ನ 'ಸೌತ್ ಇಂಡಿಯನ್ ಹೀರೋ" ಸಿನಿಮಾ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದರು. ಅಲ್ಲದೆ, ಟೆಂರ್, ಕಸ್ತೂರಿ ಮಹರ್ 'ನಲ್ಲಿ ಸಹ ಕಾಣಿಸಿಕೊಂಡಿದ್ದರು.
ಕಾಶಿಮಾರ ತಂದೆ ರಫಿ ನಿರ್ಮಾಣ ಮತ್ತು ಗುತ್ತಿಗೆ ಕ್ಷೇತ್ರದ ಉದ್ಯಮಿಯಾಗಿದ್ದು ಕಾಶಿಮಾ ತಾವು ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದವರು, ಅವರು ಈ ಮುನ್ನ ಮಿಸ್ ಬೆಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. ಗಾಡ್ರಿನ್ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನ ಸಿಂಧಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಕಾಶಿಮಾ 'ಕಳಾಪುರಂ' ಎನ್ನುವ ತೆಲುಗು ಸಿನಿಮಾದಲ್ಲಿ ಹಾಗೂ 'ಕಾದಂಬರಿ' ಎನ್ನುವ ತಮಿಳು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.
'ನೀ ನಂಗೆ ಅಲ್ಲವಾ' ಚಿತ್ರದ ಮೂಲಕ ರಾಹುಲ್ ಆರ್ಕಾಟ್ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡ, ಈಗ ಚಿತ್ರದ ನಾಯಕಿಯ ಬಗ್ಗೆ ಮಾಹಿತಿ ನೀಡಿದೆ. ಬೆಡಗಿ ಕಾಶಿಮಾ 'ನೀ ನಂಗೆ ಅಲ್ಲವಾ' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಕಾಶಿಮಾರಿಗೆ ಚಿತ್ರತಂದ ಸ್ವಾಗತ ಹೇಳಿದೆ.
ಗೃಹ ಶೋಭಾ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ (ಫೆಬ್ರವರಿ 2025)
ಸ್ಯಾಂಡಲ್ ವುಡ್‌ಗೊಂದು ಅಪ್ಪಟ ಹೊಸ ಪ್ರತಿಭೆ - ಪ್ರಕೃತಿ ಸೌಂದರ್ಯಾ
ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಕಷ್ಟು ಪ್ರತಿಭೆಗಳ ಆಗಮನವಾಗುತ್ತಿದೆ. ಹಾಗೆ ಬಂದವರಲ್ಲಿ ಸರಳ ಸೌಂದರ್ಯವತಿಯಾದ ಪ್ರಕೃತಿ ಸೌಂದರ್ಯಾ ಕೂಡ ಒಬ್ಬರು. ದುನಿಯಾ ವಿಜಯ್ ನಿರ್ದೇಶನದ 'ಭೀಮ' ಚಿತ್ರದಲ್ಲಿ ಡ್ರಾಗನ್ ಮಂಜು ಪತ್ನಿಯಾಗಿ 'ರಗಡ್' ಅವತಾರದಲ್ಲಿ ಕಾಣಿಸಿಕೊಂಡಿದ್ದ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು.
ಮೂಲತಃ ತುಮಕೂರಿನವರಾದ ಪ್ರಕೃತಿ ಸೌಂದರ್ಯಾ ಚಿಕ್ಕಂದಿನಿಂದಲೇ ಕಲೆಯ ನಂಟು ಇದು ಇವರ ತಾತಾ ಕೂಡ ಬೆಳೆಸಿಕೊಂಡವರು. ರಂಗಭೂಮಿ ಕಲಾವಿದರಾಗಿ ಅನೇಕ
ನಾಟಕಗಳಲ್ಲಿ ಅಭಿನಯಿಸಿದ್ದರು. ಕಾಲೇಜು ದಿನಗಳಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ ಪ್ರಕೃತಿ ಸೌಂದರ್ಯಾಗೆ ಸ್ನೇಹಿತರೆಲ್ಲ ನೀನು ಚೆನ್ನಾಗಿದ್ದೀಯ, ಹಾಡುವುದಕ್ಕಿಂತ ಆ್ಯಕ್ಸಿಂಗ್ ಮಾಡಿದರೆ ಚೆನ್ನಾಗಿರುತ್ತೆ ಎಂದು ಸಲಹೆ ನೀಡಿದರಂತೆ. ಆ ಮಾತನ್ನೇ ಆಳವಾಗಿ ತೆಗೆದುಕೊಂಡ ಪ್ರಕೃತಿ ನಾನು ಕಲಾವಿದೆಯಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ.
ನಂತರ ಸ್ನೇಹಿತರೊಬ್ಬರ ಸಹಾಯದಿಂದ ಕಿರುತೆರೆಯ 'ಗೀತಾ' ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಆನಂತರ ಸಿಕ್ಕ ದೊಡ್ಡ ಅವಕಾಶವೇ 'ಕನ್ಯಾದಾನ',
ಈ ಸೀರಿಯಲ್‌ನ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡ ಪ್ರಕೃತಿ ಸೌಂದರ್ಯಾರ ಪಾತ್ರ, ಅಭಿನಯ ಎಲ್ಲರ ಗಮನ ಸೆಳೆಯಿತು. ಆದಾದ ನಂತರ ದುನಿಯಾ ವಿಜಯ್, ತಮ್ಮ 'ಭೀಮ' ಚಿತ್ರದ ಪ್ರಮುಖ ಪ್ರಮುಖ ಪಾತ್ರಕ್ಕೆ ಇವರೇ ಸೂಕ್ತ ಎಂದು ಆಯ್ಕೆ ಮಾಡಿಕೊಳ್ಳದ ಪಾತ ಮಾಡಿಕೊಂಡಿದ್ದಾರೆ. `ಭೀಮ' ಚಿತ್ರದ ಪಾತ್ರ ನೋಡಿ. ತೆಲುಗು ಚಿತ್ರರಂಗದ ಕಡೆಯಿಂದಲೂ ಇವರಿಗೆ ಹಲವಾರು ಆಫರ್‌ಗಳು ಬರುತ್ತಿವೆ! ಕಾರು ಆಯಲ್ ಒಂದರಲ್ಲಿ ಈಗಾಗಲೇ ತೆಲುಗು ಸೀರಿಯಲ್ ಕೂಡ ಪ್ರಕೃತಿ ಸೌಂದರ್ಯಾ ಅಭಿನಯಿಸಿದ್ದಾರೆ. ಸದ್ಯ ಕನ್ನಡದ ಬಿಗ್ ಪ್ರಾಜೆಕ್ಟ್ ವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದು, ಅದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಹೇಳಿದ ಪ್ರಕೃತಿ ಸೌಂದರ್ಯಾರಿಗೆ, ಜನರು ಗುರುತಿಸುವಂಥ ಹಾಗೂ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರಗಳಲ್ಲಿ ತಾನು ಕಾಣಿಸಿಕೊಳ್ಳಬೇಕೆ೦ಬ ಕನಸಿದೆ. ಇತ್ತೀಚೆಗಷ್ಟೇ ಆತ್ಮೀಯರ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಕೃತಿ ಸೌಂದರ್ಯಾಗೆ, ಇದೇ ಸಂದರ್ಭದಲ್ಲಿ ಹೊಸ ಹೊಸ ಚಿತ್ರಗಳ ಆಫರ್ ಬರುತ್ತಿರುವುದು ಅವರಿಗೆ ಡಬಲ್ ಖುಷಿ ನೀಡಿದೆ. ಗೃಹಶೋಭಾ ಓದುಗರೆಲ್ಲರ ಪರವಾಗಿ ಪ್ರಕೃತಿ ಸೌಂದರ್ಯಾರಿಗೆ ಆಲ್ ದಿ ಬೆಸ್ಟ್!
ಗೃಹ ಶೋಭಾ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ (ಜನವರಿ 2025)