Thursday, October 09, 2025

"ಹಲೋ ಸರ್ " ಗೆ ಸಿಕ್ಕ ಹೊಸ ನಾಯಕಿ - ಸ್ವಾತಿ ಲಿಂಗರಾಜು

ಕ ನ್ನಡ ಚಿತ್ರರಂಗಕ್ಕೆ ನಿತ್ಯವೂ ಹೊಸಬರ ಪ್ರವೇಶ ಆಗುತ್ತಲೇ ಇದೆ. ಇತ್ತೀಚೆಗಂತೂ ಹೊಸ ಪ್ರತಿಭಾವಂತ ನಟನಟಿಯರ ದಂಡೇ ಇತ್ತ ಹರಿದುಬರುತ್ತಿದೆ. ಅಂತಹವರಲ್ಲಿ ಹಲವರು ಚಿತ್ರರಂಗದ ಹಿನ್ನೆಲೆ ಇರದಂತಹ ಬೇರೆಯದೇ ಕ್ಷೇತ್ರದಲ್ಲಿ ದುಡಿದವರು ಎನ್ನುವುದು ವಿಶೇಷ.


ಸಾಫ್ಟ್‌ವೇರ್ ಟೆಕ್ಕಿಗಳು, ಮಾಡೆಲಿಂಗ್ ಕ್ಷೇತ್ರದವರು, ಖಾಸಗಿ ಬಿಸ್‌ನೆಸ್‌ ನಡೆಸುವವರು ಸಹ ಇದರಲ್ಲಿ ಇದ್ದಾರೆ. ಇವರಲ್ಲಿ ಅನೇಕರು ಚಿತ್ರರಂಗಕ್ಕೆ ಪ್ರವೇಶಿಸುವುದು ಕೇವಲ ಆಕಸ್ಮಿಕವಾಗಿ, ಸ್ವಾತಿ ಲಿಂಗರಾಜು ಸಹ ಅಂತಹವರಲ್ಲಿ ಒಬ್ಬರು. ಮೂಲತಃ ಸಾಫ್ಟ್‌ವೇರ್ ಟೆಕ್ಕಿಯಾಗಿ ನೆಟ್‌ವರ್ಕ್ ಎಂಜಿನಿಯರ್ ಆಗಿದ್ದ ಸ್ವಾತಿ ವಿಧಾನಸೌಧದಲ್ಲಿ ಸಹ ಕೆಲಸ ಮಾಡಿದ್ದಾರೆ.

ಆದರೆ ಈಗ ಆಕೆ 'ವಿಧಿ (ಆರ್ಟಿಕಲ್‌) 370' ಖ್ಯಾತಿಯ ನಿರ್ದೇಶಕ ಶಂಕರ್‌ರ ನಿರ್ದೆಶನದ 'ಹಲೋ ಸರ್' ಚಿತ್ರದ ನಾಯಕಿಯಾಗಿದ್ದಾರೆ. ಸ್ವಾತಿಯ ನಟನಾವೃತ್ತಿ ಹೇಗೆ ಪ್ರಾರಂಭವಾಗಿತ್ತು? ಅವರ ಭವಿಷ್ಯದ ಕನಸೇನು ಎನ್ನುವುದನ್ನು 'ಗೃಹಶೋಭಾ'ದ ಜೊತೆ ಹಂಚಿಕೊಂಡಿದ್ದಾರೆ. ಅವರ ಈ ಸಂದರ್ಶನದ ಸಾರಾಂಶ ಇಲ್ಲಿದೆ : 

ಆರಂಭದ ಕೆರಿಯರ್


ವಿಧಾನಸೌಧದ ಕೆಲಸದಲ್ಲಿದ್ದ ಸಮಯದಲ್ಲಿ ಸ್ವಾತಿಗೆ ಒಂದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಒದಗಿ

ಬಂದಿತು. ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಕ್ಲೀನ್-2022 ಎನ್ನುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ವಾತಿಗೆ, ನಟನಯೇ ತನ್ನ ವೃತ್ತಿಯಾಗಲಿದೆ ಎನ್ನುವುದರ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ. ಆದರೆ ಉದ್ಯೋಗದಲ್ಲಿನ ಕೆಲವು ಅಡೆತಡೆಯ ಬಳಿಕ ಅವರು ನಟನೆಯತ್ತ ವಾಲಿದ್ದರು.

ಇದಕ್ಕಾಗಿ ಅವರು ಸಂತೋಷ್ ಮೈಮ್‌ರ ಬಳಿ ತರಬೇತಿ ಪಡೆದುಕೊಂಡಿದ್ದು ಚಿತ್ರವೊಂದಕ್ಕೆ ಆಯ್ಕೆಯಾದ ನಂತರವೇ ಇವರು ನಟನಾ ತರಬೇತಿ ಪಡೆಯಲು ಪ್ರಾರಂಭಿಸಿದ್ದರೆನ್ನುವುದು ಮಹತ್ವದ ಸಂಗತಿಯಾಗಿದೆ. “ನಾನು ಸಿನಿಮಾದಲ್ಲಿ ಅಭಿನಯಿಸುವುದರ ಬಗೆಗೆ ನನ್ನ ತಾಯಿ ತ೦ದೆಗೆ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಪತಿಗೆ ಇದರ ಬಗ್ಗೆ ತಿಳಿದಿದೆ. ಅವರ ಸಪೋರ್ಟ್ ನನಗೆ ಬಹಳ ಇದೆ. ಅವರ ಬೆಂಬಲದಿಂದಲೇ ನಾನು ನಟನಾ ಕ್ಷೇತ್ರಕ್ಕೆ ಬಂದಿರುವುದು,' ಎಂದು ಸ್ವಾತಿ ಹೇಳುತ್ತಾರೆ. 

ನಿರ್ದೇಶಕ ಪ್ರಸಿದ್ ಬೆಂಬಲ


 ಕಿರಣ್ ರಾಜ್‌ 'ಭರ್ಜರಿ ಗಂಡು' ಸೇರಿದಂತೆ ಮೂರು ಸಿನಿಮಾ ನಿರ್ದೇಶನ ಮಾಡಿರುವ ಪ್ರಸಿದ್ದ್ ಸ್ವಾತಿಗೆ ಆತ್ಮಸ್ಥೆರ್ಯ ತುಂಬಿದ್ದರು. ಸ್ವಾತಿ ಇದುವರೆಗೆ 'ತಾಯವ್ವ, ಶೇರ್‌,' ಎನ್ನುವ ಸಿನಿಮಾಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸ್ವಾತಿ ತೆಲುಗು ಸಿನಿಮಾವೊಂದರಲ್ಲಿ ಸಹ ಅಭಿನಯಿಸುತ್ತಿದ್ದಾರೆ.

ಸ್ವಾತಿ ಚಿತ್ರರಂಗದ ಜೊತೆಗೆ ಒಬ್ಬ ಉದ್ಯಮಿಯೂ ಹೌದು. ಅವರದೇ ಸ್ವಂತ ಸಂಸ್ಥೆಯೊಂದನ್ನು ನಡೆಸುತ್ತಿರುವ ಇವರು ಆ ಸಂಸ್ಥೆಯ ಮೂಲಕ ಕಸ್ಟಮೈಸ್ ಕಾಟನ್ ಕ್ಲಾತಿಂಗ್ ಪೂರೈಸುತ್ತಿದ್ದಾರೆ. ಅದು ಲೋಗೋ ಮತ್ತು ಬೇರೆ ಬೇರೆ ವೈವಿಧ್ಯಮಯ ಡಿಸೈನ್‌ಗಳನ್ನು ಹೊಂದಿರುತ್ತದೆ. 

ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದ ಕುರಿತು ವಿವರಿಸಿರುವ ನಟಿ, “ನಾನು ಆನ್‌ಲೈನ್ ಆಡಿಷನ್ ತೆಗೆದುಕೊಂಡು ಸ್ಪರ್ಧೆಗೆ ಆಯ್ಕೆಯಾಗಿದ್ದೆ. ಆ ಸ್ಪರ್ಧೆಗಾಗಿ ನಾನು ಮೂರು ತಿಂಗಳ ಕಾಲ ತಯಾರಿ ನಡೆಸಿದ್ದೆ. ಅದರಲ್ಲಿ ಡ್ಯಾನ್ಸ್ ತರಬೇತಿ ಸಹ ಒಳಗೊಂಡಿತ್ತು, ಈ ಸ್ಪರ್ಧೆಯಲ್ಲಿ ನನಗೆ ಮಿಸೆಸ್ ಇಂಡಿಯಾ ಅಲ್ಲುರಿಂಗ್ ಎನ್ನುವ ಟೈಟಲ್ ಬಂದಿದೆ. ನಾಲ್ಕು ಸುತ್ತಿನ ಸ್ಪರ್ಧೆ ಇದಾಗಿದ್ದು, ಅದರಲ್ಲಿ ನನ್ನ ಪರಿಚಯ, ಬೌದ್ಧಿಕ ಸಾಮರ್ಥ್ಯ, ಆಂಗಿಕ ಅಭಿನಯ ಸೇರಿ ನಾನಾ ರೀತಿಯ ಪರೀಕ್ಷೆಗಳಿದ್ದವು,” ಎಂದು ಅವರು ವಿವರಿಸಿದ್ದಾರೆ. 

ಸ್ಟಿಕ್ಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು ಸ್ವಾತಿ ಅವರ ಮನದಾಳದ ಆಸೆಯಾಗಿದೆ. ಮೃದು ಸ್ವಭಾವ ಅವರ ಸಹಜ ಗುಣವಾಗಿದ್ದು, ಅದಕ್ಕೆ ವಿರುದ್ಧ ವಾಗಿ ತೆರೆಯಲ್ಲಿ ಪಾತ್ರ ಮಾಡಬೇಕೆನ್ನುವುದು ಅವರ ಕನಸು. ಅಲ್ಲದೆ, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್‌ರನ್ನು ಇಷ್ಟದ ನಟ ಎನ್ನುವ ಸ್ವಾತಿ, ತೆಲುಗಿನಲ್ಲಿ ಅಲ್ಲು ಅರ್ಜುನ್‌ರನ್ನು ಮೆಚ್ಚುತ್ತಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಅವರಿಷ್ಟದ ನಟ.

ಒಂದು ವೇಳೆ ಚಿತ್ರರಂಗದಲ್ಲಿ ವಿಜಯ್ ಸೇತುಪತಿಯನ್ನು ಭೇಟಿಯಾಗಿದ್ದೇ ಆದರೆ, ಅವರು, ತಮ್ಮನ್ನು ಕೇವಲ ಅವರ ಅಭಿಮಾನಿ

ಎಂದು ನೋಡದೆಯೇ, ತಮ್ಮಂತೆಯೇ ಒಬ ನಟಿ, ಅಭಿನೇತ್ರಿ ಎಂದು ಗುರುತಿಸಬೇಕು ಎನ್ನುವುದು ಸ್ವಾತಿ ಅವರ ಗುರಿಯಾಗಿದೆ. ಅದಕ್ಕಾಗಿ ನಾನು ಸಹ ಸೆಲೆಬ್ರಿಟಿ ಆಗಬೇಕು ಎನ್ನುವುದಾಗಿ ಹೇಳುತ್ತಾರೆ.

ಪೊಲೀಸ್‌ ಪಾತ್ರದ ಕುರಿತು ಹೇಳುವುದಾದರೆ ಮಾಲಾಶ್ರೀ ಪಾತ್ರ ನನಗೆ ಬಹಳ ಇಂಪ್ರೆಸ್ ಆಗಿದೆ ಎನ್ನುತ್ತಾರೆ. ನಿರ್ದೇಶಕ ಶಂಕರ್ 'ಹಲೋ ಸಾರ್' ಚಿತ್ರದಲ್ಲಿ ಅವಕಾಶ ನೀಡಿ ನನಗೆ ಮಾರ್ಗದರ್ಶನ ನೀಡಿದ್ದನ್ನು ಮರೆಯಲಾರೆ ಎಂದವರು ಹೇಳಿಕೊಂಡರು.

ಕೌಟುಂಬಿಕ ಸಾಮರಸ್ಯ

ಕುಟುಂಬ ಹಾಗೂ ನಟನೆಯ ಕುರಿತು ಹೇಳುವ ಸ್ವಾತಿ, ಪತಿ ತುಂಬಾ ಬೆಂಬಲ ನೀಡುವರು ಎನ್ನುತ್ತಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಹೇಳುವ ಸ್ವಾತಿ, ತಾವು ಪಾಂಡವಪುರದಲ್ಲಿದ್ದ ಸಮಯದಲ್ಲಿ ಹೆಚ್ಚು ಸಿನಿಮಾ ನೋಡಿದವರಲ್ಲ, ಸಿನಿಮಾ ಆಸಕ್ತಿಯೂ ಇರಲಿಲ್ಲ ಎನ್ನುತ್ತಾರೆ. 'ಯಜಮಾನ, ದಿಗ್ಗಜರು,' ಸೇರಿ ಕೆಲವೇ ಬೆರಳೆಣಿಕೆಯ ಚಿತ್ರಗಳನ್ನು ಸಿನಿಮಾ ಮಂದಿರದಲ್ಲಿ ವೀಕ್ಷಿಸಿದ್ದರು. ಇನ್ನು ಸ್ವಾತಿಗೆ ಅಡುಗೆ ಮಾಡುವುದೆಂದರೆ ಅಚ್ಚುಮೆಚ್ಚು. ಅವರು ಮಾಡುವ ನಾನ್ ವೆಜ್ ಅಡುಗೆಯನ್ನು ಮನೆಯವರೆಲ್ಲಾ ಮೆಚ್ಚುತ್ತಾರಂತೆ. ಅಲ್ಲದೆ, ಬಿಡುಗವಾಗಿದ್ದಾಗಲೆಲ್ಲಾ ಶಾಪಿಂಗ್ ಮಾಡುವುದು ಅವರ ಹವ್ಯಾಸ.

ಸಿನಿ ಅಭಿಮಾನಿಗಳೆಲ್ಲಾ ಸಿನಿಮಾ ಮಂದಿರಕ್ಕೆ ತೆರಳಿ ಸಿನಿಮಾ ನೋಡಬೇಕು ಎನ್ನುವುದು ಸ್ವಾತಿಯ ಸಲಹೆ. ಚಿತ್ರಮಂದಿರದಲ್ಲಿ ಸೌಂಡ್ ಎಫೆಕ್ಟ್, ದೃಶ್ಯದ ಕ್ವಾಲಿಟಿ ಸೇರಿ ಎಲ್ಲ ರೀತಿ ರಿಯಲ್ ಎಕ್ಸ್‌ಪೀರಿಯನ್ಸ್ ಆಗಬೇಕೆಂದರೆ ಚಿತ್ರ ಮಂದಿರದಲ್ಲೇ ಸಿನಿಮಾ ವೀಕ್ಷಿಸಬೇಕು ಎನ್ನುವುದು ಸ್ವಾತಿಯ ಅಭಿಪ್ರಾಯ.

ಗೃಹ ಶೋಭಾ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ (ಮಾರ್ಚ್ 2025)

No comments:

Post a Comment