Tuesday, December 23, 2025

ರಾಷ್ಟ್ರಕವಿ ಕುವೆಂಪು

- ಕನ್ನಡ ದೀವಿಗೆ


ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು. ಕುಪ್ಪಳ್ಳಿ ಅವರ ತಂದೆಯ ಊರು. ಅವರು ಜನಿಸಿದ್ದು ಅವರ ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ1904 ಡಿಸೆಂಬರ್ 29 ರಲ್ಲಿ.

ಇಂಗ್ಲೀಷ್‍ನ ನವೋದಯ ಕಾಲದ ರಮ್ಯ ಕವಿಗಳ(Romantic Poets) ಪ್ರಭಾವಕ್ಕೊಳಗಾಗಿ 'ಬಿಗಿನರ್ಸ್ ಮ್ಯೂಸ್'(Beginner's Muse) ಎಂಬ ಆರು ಕವನಗಳ ಕವನ ಸಂಕಲನವನ್ನು 1922ರಲ್ಲಿ ರಚಿಸಿದರು. ನಂತರ ಐರಿಸ್ ಕವಿ ಜೇಮ್ಸ್ ಕಸಿನ್‍ರವರ ಸಲಹೆಯಂತೆ ಕನ್ನಡದಲ್ಲಿಯೇ ಕೃತಿ ರಚನೆಯಲ್ಲಿ ತೊಡಗಿದರು. ಅವರು ರಚಿಸಿದ ಕನ್ನಡದ ಮೊದಲ ಕೃತಿ 'ಅಮಲನ ಕಥೆ'

ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಕನ್ನಡದಲ್ಲಿ 80 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 'ಶ್ರೀರಾಮಾಯಣ ದರ್ಶನಂ' ಇವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ. ಈ ಮಹಾಕಾವ್ಯಕ್ಕೆ ಮೂಲ ಆಕರಗ್ರಂಥ ವಾಲ್ಮೀಕಿ ರಾಮಾಯಣವಾದರು ಇದರಲ್ಲಿ ಬರುವ ಸನ್ನಿವೇಶಗಳು, ಪತ್ರಗಳ ಚಿತ್ರಣ ವಿಭಿನ್ನವಾಗಿ ಮೂಡಿಬಂದಿದೆ. ಈ ಕೃತಿಯು ಕುವೆಂಪುರವರ ಒಂಬತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿದೆ. ಇದನ್ನು ಅವರು ತಮ್ಮದೇ ಆದ ವಿಶಿಷ್ಟ ಛಂಧಸ್ಸಿನಲ್ಲಿ ರೂಪುಗೊಳಿಸಿದ್ದಾರೆ.

ಇವರು ಬರೆದಿರುವ ಪ್ರಮುಖ ಕೃತಿಗಳು: ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು, ನನ್ನ ದೆವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರ ಕಥೆಗಳು -ಕಥಾಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು - ಕಾದಂಬರಿಗಳು. ರಸೋವೈಸಃ, ತಪೋನಂದನ - ವಿಮರ್ಶಾ ಸಂಕಲನಗಳು, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ - ಮಕ್ಕಳ ಪುಸ್ತಕಗಳು, ಜಲಗಾರ, ಯಮನ ಸೋಲು, ಬೆರಳ್ಗೆ ಕೊರಳ್ - ನಾಟಕಗಳು, ನೆನಪಿನ ದೋಣಿಯಲ್ಲಿ - ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ.

ಶ್ರೀಯುತರಿಗೆ ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1968ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಧಾರವಾಡದಲ್ಲಿ ನಡೆದ 1957ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ 1964ರಲ್ಲಿ ರಾಷ್ಟ್ರಕವಿ, 1988ರಲ್ಲಿ ಪಂಪ ಪ್ರಶಸ್ತಿ, 1991ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಅಲ್ಲದೆ ಮೈಸೂರು, ಕರ್ನಾಟಕ, ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

***

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ 1904 ಡಿಸೆಂಬರ್ 29ಕ್ಕೆ ಜನಿಸಿದರು. ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು. ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು. ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.

ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.

ಕೃತಿಗಳು

ಮಹಾಕಾವ್ಯ

ಶ್ರೀ ರಾಮಾಯಣ ದರ್ಶನಂ (1949)


ಖಂಡಕಾವ್ಯ

ಚಿತ್ರಾಂಗದಾ (1936)


ಕವನ ಸಂಕಲನಗಳು

ಕೊಳಲು (1930)

ಪಾಂಚಜನ್ಯ (1933)

ನವಿಲು (1934)

ಕಲಾಸುಂದರಿ (1934)

ಕಥನ ಕವನಗಳು (1937)

ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)

ಪ್ರೇಮ ಕಾಶ್ಮೀರ (1946)

ಅಗ್ನಿಹಂಸ (1946)

ಕೃತ್ತಿಕೆ (1946)

ಪಕ್ಷಿಕಾಶಿ (1946)

ಕಿಂಕಿಣಿ (ವಚನ ಸಂಕಲನ) (1946)

ಷೋಡಶಿ (1946)

ಚಂದ್ರಮಂಚಕೆ ಬಾ ಚಕೋರಿ (1957)

ಇಕ್ಷುಗಂಗೋತ್ರಿ (1957)

ಅನಿಕೇತನ (1963)

ಜೇನಾಗುವ (1964)

ಅನುತ್ತರಾ (1965)

ಮಂತ್ರಾಕ್ಷತೆ (1966)

ಕದರಡಕೆ (1967)

ಪ್ರೇತಕ್ಯೂ (1967)

ಕುಟೀಚಕ (1967)

ಹೊನ್ನ ಹೊತ್ತಾರೆ (1976)

ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)


ಕಥಾ ಸಂಕಲನ

ಸಂನ್ಯಾಸಿ ಮತ್ತು ಇತರ ಕಥೆಗಳು (1936)

ನನ್ನ ದೇವರು ಮತ್ತು ಇತರ ಕಥೆಗಳು (1940)


ಕಾದಂಬರಿಗಳು

ಕಾನೂರು ಹೆಗ್ಗಡತಿ (1936)

ಮಲೆಗಳಲ್ಲಿ ಮದುಮಗಳು (1967)


ನಾಟಕಗಳು

ಯಮನ ಸೋಲು (1928)

ಜಲಗಾರ (1928)

ಬಿರುಗಾಳಿ (1930)

ವಾಲ್ಮೀಕಿಯ ಭಾಗ್ಯ (1931)

ಮಹಾರಾತ್ರಿ (1931)

ಸ್ಶಶಾನ ಕುರುಕ್ಷೇತ್ರಂ (1931)

ರಕ್ತಾಕ್ಷಿ (1933)

ಶೂದ್ರ ತಪಸ್ವಿ (1944)

ಬೆರಳ್‍ಗೆ ಕೊರಳ್ (1947)

ಬಲಿದಾನ (1948)

ಚಂದ್ರಹಾಸ (1963)

ಕಾನೀನ (1974)


ಪ್ರಬಂಧ

ಮಲೆನಾಡಿನ ಚಿತ್ರಗಳು (1933)


ವಿಮರ್ಶೆ

ಕಾವ್ಯವಿಹಾರ (1946)

ತಪೋನಂದನ (1950)

ವಿಭೂತಿಪೂಜೆ (1953)

ದ್ರೌಪದಿಯ ಶ್ರೀಮುಡಿ (1960)

ರಸೋ ವೈ ಸಃ (1963)

ಇತ್ಯಾದಿ (1970)


ಆತ್ಮಕಥೆ

ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ


ಜೀವನ ಚರಿತ್ರೆಗಳು

ಸ್ವಾಮಿ ವಿವೇಕಾನಂದ

ರಾಮಕೃಷ್ಣ ಪರಮಹಂಸ


ಅನುವಾದ

ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)

ಕೊಲಂಬೋ ಇಂದ ಆಲ್ಮೋರಕೆ


ಭಾಷಣ-ಲೇಖನ

ಸಾಹಿತ್ಯ ಪ್ರಚಾರ (1930)

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)

ಷಷ್ಠಿನಮನ (1964)

ಮನುಜಮತ-ವಿಶ್ವಪಥ (1971)

ವಿಚಾರ ಕ್ರಾಂತಿಗೆ ಆಹ್ವಾನ (1976)


ಶಿಶು ಸಾಹಿತ್ಯ

ಅಮಲನ ಕಥೆ (1924)

ಮೋಡಣ್ಣನ ತಮ್ಮ (ನಾಟಕ) (1926)

ಹಾಳೂರು (1926)

ಬೊಮ್ಮನಹಳ್ಳಿಯ ಕಿಂದರಿಜೋಗಿ (1928)

ನನ್ನ ಗೋಪಾಲ (ನಾಟಕ) (1930)

ನನ್ನ ಮನೆ (1946)

ಮೇಘಪುರ (1947)

ಮರಿವಿಜ್ಞಾನಿ (1947)

ನರಿಗಳಿಗೇಕೆ ಕೋಡಿಲ್ಲ (1977)


ಇತರೆ

ಜನಪ್ರಿಯ ವಾಲ್ಮೀಕಿ ರಾಮಾಯಣ


ಆಯ್ದ ಸಂಕಲನಗಳು

ಕನ್ನಡ ಡಿಂಡಿಮ (1968)

ಕಬ್ಬಿಗನ ಕೈಬುಟ್ಟಿ (1973)

ಪ್ರಾರ್ಥನಾ ಗೀತಾಂಜಲಿ (1972)


ಸ್ಮಾರಕಗಳು

ಕವಿಮನೆ, ಕುಪ್ಪಳಿ. ಈಗ ವಸ್ತು ಸಂಗ್ರಹಾಲಯವಾಗಿದೆ.

ಕುಪ್ಪಳಿಯಲ್ಲಿರುವ ಕುವೆಂಪು ಅವರು ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ.

ಅಲ್ಲೇ ಇರುವ ಅವರ ಸಮಾಧಿ ಸ್ಥಳವಾದ 'ಕವಿಶೈಲ' ಒಂದು ವಿಶಿಷ್ಟ ಸ್ಮಾರಕ.

ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.

ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಭಾಷಾ ಭಾರತಿ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.

ಮೈಸೂರಿನ ಕುವೆಂಪು ನಗರದಲ್ಲಿರುವ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಗಳ, ಪಾತ್ರಗಳ ಹೆಸರುಗಳನ್ನು ಇಡಲಾಗಿದೆ.


ಕುವೆಂಪು ಕುರಿತ ಕೃತಿಗಳು

ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ

ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ

ಕುವೆಂಪು - ಲೇ: ದೇಜಗೌ

ಯುಗದ ಕವಿ - ಲೇ: ಡಾ.ಕೆ.ಸಿ.ಶಿವಾರೆಡ್ಡಿ

ಹೀಗಿದ್ದರು ಕುವೆಂಪು - ಲೇ: ಪ್ರಭುಶಂಕರ

ಕುವೆಂಪು - ಲೇ: ಎಸ್.ವಿ.ಪರಮೇಶ್ವರಭಟ್ಟ

ಶ್ರೀ ಕುವೆಂಪು ಸಂಭಾಷಣೆ ಮತ್ತು ಸಂದರ್ಶನ - ಲೇ: ಎಸ್.ವೃಷಭೇಂದ್ರಸ್ವಾಮಿ

ತರಗತಿಗಳಲ್ಲಿ ಕುವೆಂಪು - ಲೇ: ಎಸ್.ವೃಷಭೇಂದ್ರಸ್ವಾಮಿ

ಕುವೆಂಪು ಕಾವ್ಯಯಾನ - ಲೇ: ಬಿ.ಆರ್. ಸತ್ಯನಾರಾಯಣ

ಕುವೆಂಪು ನುಡಿತೋರಣ - ಸಂ: ಬಿ.ಆರ್.ಸತ್ಯನಾರಾಯಣ

ನಾಟಕ-ಚಲನಚಿತ್ರ-ಧಾರಾವಾಹಿ

"ಬೆರಳ್‌ಗೆ ಕೊರಳ್" ನಾಟಕವು ಚಲನಚಿತ್ರವಾಗಿದೆ.

"ಕಾನೂರು ಹೆಗ್ಗಡಿತಿ" ಕಾದಂಬರಿ ಚಲನಚಿತ್ರವಾಗಿದೆ.

"ಮಲೆಗಳಲ್ಲಿ ಮದುಮಗಳು" ಕಾದಂಬರಿ ಧಾರಾವಾಹಿಯಾಗಿದೆ ಹಾಗೂ ೯ ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿದೆ.

ಅಮರ ಕೊಡುಗೆಗಳು

ಕುವೆಂಪು ಅವರು ಯುಗಪ್ರವರ್ತಕ ಕವಿ.

ಕುವೆಂಪು ಅವರು 'ಶ್ರೀ ರಾಮಾಯಣ ದರ್ಶನಂ' ರಚಿಸುವ ಮೂಲಕ ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದರು.

ಕುವೆಂಪು ಅವರು ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಹೊಸ ಕಾಲಕ್ಕೆ ಅಗತ್ಯವೆನ್ನಿಸಿದ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ.

ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದ್ದಾರೆ.

ಕುವೆಂಪು ಅವರು ಮಂತ್ರಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ರೂಢಿಗೆ ತಂದರು.

ಕುವೆಂಪು ಅವರು ತಮ್ಮ ಕನಸಿನ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದ್ದಾರೆ.

ಕುವೆಂಪು ಅವರು ದಲಿತ ಹಾಗೂ ಬಂಡಾಯ ಚಳವಳಿಗಳಿಗೆ ಸ್ಫೂರ್ತಿಯಾಗಿದ್ದಾರೆ.

1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಗೌರವ/ ಪ್ರಶಸ್ತಿ ಪುರಸ್ಕಾರಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (1955)

ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. (1956)

ಪದ್ಮಭೂಷಣ (೧೯೫೮)

ರಾಷ್ಟ್ರಕವಿ ಪುರಸ್ಕಾರ (೧೯೬೪) [ಕನ್ನಡದ ಎರಡನೆಯ ರಾಷ್ಟ್ರಕವಿ]

ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)

ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)

ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)

ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ (1979)

ಪಂಪ ಪ್ರಶಸ್ತಿ (೧೯೮೮)

ಪದ್ಮವಿಭೂಷಣ (೧೯೮೯)

ಕರ್ನಾಟಕ ರತ್ನ (೧೯೯೨) [ಇವರೊಟ್ಟಿಗೆ ಡಾ॥ ರಾಜಕುಮಾರ್ ಅವರಿಗೂ ನೀಡಲಾಯಿತು]

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ

ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ (ಮರಣೋತ್ತರ)

ಕುವೆಂಪು ಅವರ 113 ನೇ ಜನ್ಮ ದಿನದಂದು, ಗೂಗಲ್ ಇಂಡಿಯಾ ಅವರ ಗೌರವಾರ್ಥ ಡೂಡಲ್ ಪ್ರದರ್ಶಿಸಿತು.(2017 ಡಿಸೆಂಬರ್ 29) [೧]

ಅಧ್ಯಕ್ಷತೆ, ಇತ್ಯಾದಿ

1928ರಲ್ಲಿ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.

1957ರಲ್ಲಿ ನಡೆದ 39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ವಿಶ್ವ ಮಾನವ ದಿನ

ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ 29 ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.

No comments:

Post a Comment