Monday, March 03, 2025

ಮಂಡ್ಯ ಜಿಲ್ಲೆಯ ಮುಚ್ಚಿಟ್ಟ ರತ್ನ ಬೂದನೂರಿನ ಅವಳಿ ಹೊಯ್ಸಳ ದೇವಾಲಯಗಳು





 ನಾವು ನೀವೆಲ್ಲಾ ಬೆಂಗಳುರು ಮೈಸೂರು ನಡುವೆ ಸಾಕಷ್ಟು ಬಾರಿ ಓಡಾಡಿದ್ದೇವೆ. ಆದರೆ ರಾಜ್ಯ ಹೆದ್ದಾರಿ 17ರಲ್ಲಿ ಬರುವ ಮಂಡ್ಯದ ಸಮೀಪದ ಬೂದನೂರು ಎನ್ನುವ ಗ್ರಾಮದ ಕುರಿತು ನಾವೇನೂ ಅಷ್ಟು ಗಮನ ನೀಡಿರುವುದಿಲ್ಲ. ಇಲ್ಲಿ ಹಳೇ ಬೂದನೂರು ಹಾಗೂ ಹೊಸ ಬೂದನೂರು ಎನ್ನುವ ಎರಡು ಗ್ರಾಮಗಳಿದ್ದು  ನಿಜವಾಗಿ ಅದು ಒಂದು ಸಣ್ಣ ಕುಗ್ರಾಮ.  ಬುದನೂರು 650 ಹೆಕ್ಟೇರ್ ವ್ಯಾಪ್ತಿಯಲ್ಲಿದೆ.  ಸುಮಾರು ಹತ್ತು ಸಾವಿರ ಜನಸಂಖ್ಯೆಯನ್ನು ಹೊಂದಿದೆ!  ಮಂಡ್ಯ ಜಿಲ್ಲೆ ಮಂಡ್ಯ ನಗರ ಕೇಂದ್ರದಿಂದ ಸುಮಾರು  8 ಕಿ. ಮೀ. ದೂರದಲ್ಲಿ ನೆಲೆಯಾಗಿರುವ ಗ್ರಾಮ ಇದು. . ಬೆಂಗಳೂರಿನಿಂದ ಪ್ರಯಾಣಿಸುವಾಗ ನಿಮಗೆ ಮಂಡ್ಯ ತಲುಪುವುದಕ್ಕೆ ಮುನ್ನ ಬಲಭಾಗದ ತಿರುವಿನ;;ಇ ಈ ಗ್ರಾಮ ಸಿಗಲಿದೆ.  

ಈ ಗ್ರಾಮದ ಕುರಿತು ಇಷ್ಟೆಲ್ಲಾ ಪೀಠಿಕೆ ಹೇಳುವುದರ ಉದ್ದೇಶವೆಂದರೆ ಇಲ್ಲಿ  ಒಂದಲ್ಲ, 13ನೇ ಶತಮಾನದ ಎರಡು ಅದ್ಭುತ ದೇವಾಲಯಗಳಿದೆ. ಎರಡೂ ಹೊಯ್ಸಳರ ಕಾಲಕ್ಕೆ ಸೇರಿದ ದೇವಾಲಯಗಳಗಿದ್ದು  ಒಂದು-ಶ್ರೀ ಕಾಶಿ ವಿಶ್ವನಾಥ ದೇವಾಲಯವಾದರೆ ಇನ್ನೊಂದು-ಶ್ರೀ ಅನಂತಪದ್ಮನಾಭ ದೇವಾಲಯ ಆಗಿದೆ.
ಶ್ರೀ ಕಾಶಿ ವಿಶ್ವನಾಥ ದೇವಾಲಯ.1276ರ ಹೊಯ್ಸಳ ರಾಜವಂಶದ ದೆವಾಲಯವಾಗಿದ್ದು  ದೇವಾಲಯದ ಕಲ್ಲಿನ ಗೋಡೆಗಳ ಮೇಲೆ ವಿವಿಧ ವಿನ್ಯಾಸದ ಬರಹಗಳು, ರೇಖಾಚಿತ್ರಗಳು ಗೋಚರಿಸುತ್ತವೆ, ಕೆಲವು ಶಿಲ್ಪಗಳು ಅಪೂರ್ಣವಾಗಿದೆ ಅಥವಾ ಮುರಿದಂತಿದೆ. ಇಷ್ಟಾಗಿಯೂ ಭಗವಾನ್ ಶಿವನಿಗೆ ಸಮರ್ಪಿತವಾದ ಶ್ರೀ ಕಾಶಿ ವಿಶ್ವನಾಥ ದೇವಾಲಯ ಭವ್ಯವಾಗಿದ್ದು ಮನ ಸೆಳೆಯುತ್ತದೆ.  ಇದು ಏಕಕೂಟ ಹೊಯ್ಸಳ ದೇವಾಲಯ, ಅಂದರೆ ಪೂರ್ವಕ್ಕೆ ಮುಖ ಮಾಡಿದ್ದು  ಎತ್ತರದ ವೇದಿಕೆಯ ಮೇಲೆ ಇರುವ ಒಂದು ದೇವಾಲಯ!
ಈ ದೇವಾಲಯವನ್ನು ನಿರ್ಮಿಸಿದವರು  ಹೊಯ್ಸಳ ರಾಜವಂಶದ ಕೊನೆಯ ರಾಜರಲ್ಲಿ ಒಬ್ಬರಾದ ಮೂರನೇ ವೀರ ಬಲ್ಲಾಳ (1292-1343) ಭಗವಾನ್ ಶಿವ ಇಲ್ಲಿ ಲಿಂಗ ರೂಪದಲ್ಲಿ ನೆಲೆಸಿದ್ದಾನೆ. ಭಗವಂತನ ಇಬ್ಬರು ಪುತ್ರರಾದ ಗಣಪತಿ ಮತ್ತು ಸುಬ್ರಹ್ಮಣ್ಯ ಅವನ ಅಕ್ಕ ಪಕ್ಕ ನೆಲೆಸಿದ್ದಾರೆ.  ಲಿಂಗಕ್ಕೆ ಎದುರಾಗಿ, ಅತ್ಯಂತ ಸುಂದರವಾದ ನಂದಿಯನ್ನು ಕಾಣಬಹುದು. ಈ ದೇವಾಲಯವನ್ನು ಸಂಪೂರ್ಣವಾಗಿ ಕೆತ್ತನೆ ಮಾಡಿದ ಕಲ್ಲಿನಿಂದ ನಿರ್ಮಿಸಲಾಗಿದೆ! ಈ ದೇವಾಲಯವು 'ಸಪ್ತ ಮಾತೃಕೆಯರ’ ಮೂರ್ತಿಯನ್ನೂ ಸಹ ಒಳಗೊಂಡಿದೆ.ಋಗ್ವೇದದಲ್ಲಿ ಉಲ್ಲೇಖಿಸಲಾದ 7 ತಾಯಂದಿರು. ಇದು ಪಾರ್ವತಿ ದೇವಿಯಿಂದ ಪ್ರಾರಂಭವಾಗಿ ಆಕೆಯ ಮಗನಾದ ಗಣೇಶನೊಂದಿಗೆ ಕೊನೆಗೊಳ್ಳುವ 9 ಪ್ರತಿಮೆಗಳ ಕಲ್ಲಿನ ಫಲಕದಲ್ಲಿ ಇದನ್ನು ಕೆತ್ತಲಾಗಿದೆ. ಸಭಾಮಂಟಪದಲ್ಲಿನ ಛಾವಣಿಗಳು ಹೆಚ್ಚು ಅಲಂಕೃತವಾಗಿವೆ. ಇಲ್ಲಿ ಮೇಲ್ಛಾವಣಿಯನ್ನು ಮೂಲತಃ ಚಿತ್ರಿಸಲಾಗಿದೆ ಎಂದು ಸಹ ನೋಡಬಹುದು ಏಕೆಂದರೆ ಕೆಲವು ಲಕ್ಷಣಗಳು ಇನ್ನೂ ಕೆಂಪು ಬಣ್ಣದಲ್ಲಿ ಕಂಡುಬರುತ್ತವೆ. ಕಲ್ಲಿನ ಪುಡಿ, ಹೂವಿನ ಸಾರ ಇತ್ಯಾದಿಗಳನ್ನು ಬೆರೆಸಿ ತಯಾರಿಸಿದ ನೈಸರ್ಗಿಕ ಬಣ್ಣವು ಈಗ 800 ವರ್ಷಗಳಿಂದ ಉಳಿದುಕೊಂಡಿದೆ!
ಇನ್ನು ಅನಂತಪದ್ಮನಾಭ ದೇವಾಲಯವನ್ನು ನಕ್ಷತ್ರಾಕಾರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಬೇಲೂರು, ಹಳೆಬೀಡಿನಂತೆ ಈ ದೇವಸ್ಥಾನ ಕೂಡ ಏಕಕೂಟ ದ್ರಾವಿಡ ಮಾದರಿಯ ದೇವಸ್ಥಾನವಾಗಿದೆ ದೇವಾಲಯದ ಪ್ರವೇಶದ್ವಾರವು ಮುಖಮಂಟಪ ಎಂದು ಕರೆಯಲ್ಪಡುವ ಸ್ತಂಭದ ಮುಖಮಂಟಪದ ಮೂಲಕ ಹಾದು ಹೋಗುತ್ತದೆ. ಇದು ಅಲಂಕೃತ ದ್ವಾರದ ಮೂಲಕ ಯಾವುದೇ ಕಿಟಕಿಗಳಿಲ್ಲದ ಮುಚ್ಚಿದ ಸಭಾಂಗಣಕ್ಕೆ ಕರೆದೊಯ್ಯುತ್ತದೆ. ಇದು  ಗರ್ಭಗೃಹಕ್ಕೆ (ಗರ್ಭಗೃಹ) ಸಂಪರ್ಕಿಸುತ್ತದೆ. ಅಂತರಾಳ ಮತ್ತು ಗರ್ಭಗೃಹ ಎರಡರ ದ್ವಾರಗಳು ಅಲಂಕೃತವಾಗಿವೆ ಮತ್ತು ಬಹು ವಿಧದ ವಿನ್ಯಾಸವನ್ನು ಹೊಂದಿದೆ. ಅಂತರಾಳದ ದ್ವಾರದ ಎರಡೂ ಬದಿಗಳಲ್ಲಿ ಎರಡು ಉಪ ಗುಡಿಗಳಿದ್ದು   ಇವುಗಳಲ್ಲಿ ಗಣೇಶ ಮತ್ತು ಲಕ್ಷ್ಮಿಯ ಸಣ್ಣ ವಿಗ್ರಹಗಳಿವೆ. ಗರ್ಭಗೃಹವು ಸುಂದರವಾಗಿ ಕೆತ್ತಿದ ಅನಂತ ಪದ್ಮನಾಭ  ವಿಗ್ರಹವನ್ನು ಹೊಂದಿದೆ  ಮತ್ತು ಇತರ ದೇವಾಲಯಗಳಲ್ಲಿ ಕಂಡುಬರುವ ವಿಶಿಷ್ಟವಾದ ಮಲಗುವ ಭಂಗಿಗಿಂತ ಭಿನ್ನವಾಗಿ ನಿಂತಿರುವ ಭಂಗಿಯಲ್ಲಿ ಅನಂತಪದ್ಮನಾಭನನ್ನು ನಾವಿಲ್ಲಿ ಕಾಣುತ್ತೇವೆ. ಅನಂತಪದ್ಮನಾಭ ಮೂರ್ತಿಯು ಸ್ಥಾನಿಕ ಮೂರ್ತಿಯಾಗಿರುವುದು ಇಲ್ಲಿನ ವಿಶೇಷ.  6 ಅಡಿ ಎತ್ತರದ ಪದ್ಮನಾಭ ಮಂದಸ್ಮಿತನಾಗಿದ್ದು, ಪದ್ಮ, ಚಕ್ರ, ಗಧಾ ಹಾಗೂ ಶಂಖುಧಾರಿಯಾಗಿದ್ದಾನೆ.   ಚಿಕ್ಕದಾದ ಶ್ರೀದೇವಿ ಮತ್ತು ಭೂದೇವಿ (ಅವರ ಪತ್ನಿಯರು) ದೇವತೆ ಮೂರ್ತಿಗಳು ಪಾರ್ಶ್ವದಲ್ಲಿದೆ.  
ಸಭಾಮಂಟಪದಲ್ಲಿರುವ ಕಂಬಗಳನ್ನು ಚೆನ್ನಾಗಿ ಕೆತ್ತಲಾಗಿದೆ. ಹೊರಗಿನ ಗೋಡೆಗಳು ಯಾವುದೇ ಶಿಲ್ಪಗಳಿಂದ ಕೂಡಿರುವುದಿಲ್ಲ.  ಗರ್ಭಗುಡಿಯ ಮೇಲಿರುವ ವಿಮಾನ (ಗೋಪುರ) ಕೂಡ  ಚಿಕ್ಕದಾಗಿದೆ. ವಿಶೇಷ ಎಂದರೆ ಕೇರಳದ ಅತ್ಯಂತ ಪುರಾತನ ಹಾಗೂ ಶ್ರೀಮಂತ ದೇಗುಲ ಶ್ರೀ ಅನಂತಪದ್ಮನಾಭ ದೇಗುಲದ ನಂತರ ಮಂಡ್ಯದ ಬೂದನೂರಿನಲ್ಲಿರುವ ಈ ಅನಂತಪದ್ಮನಾಭ ದೇವಸ್ಥಾನವನ್ನ ಪುರಾತನ ದೇವಸ್ಥಾನ ಎಂದು ಹೇಳಲಾಗುತ್ತದೆ.
ಗ್ರಾಮವು ತನ್ನದೇ ಆದ ಕೋಟೆ ಗೋಡೆಗಳನ್ನು ಹೊಂದಿದ್ದು, ಅದರ ದ್ವಾರ ಮಾತ್ರ ಇಂದು ಉಳಿದುಕೊಂಡಿದೆ.
ಇನ್ನುಇಷ್ಟೆಲ್ಲಾ ಐತಿಹಾಸಿಕ ಮಹತ್ವದ ಸ್ಥಳವಾಗಿ ಪ್ರಾಚೀನ ದೇವಾಲಯ, ಶಿಲ್ಪ ಸೌಂದರ್ಯದ ದೇವಸ್ಥಾನಗಳನ್ನು ಹೊಂದಿರುವ ಬೂದನೂರಿನ ಕುರಿತು ಇನ್ನೂ ಸಾಕಹ್ಶ್ತು ಜನರಿಗೆ ಮಾಹಿತಿ ಇಲ್ಲ. ಪ್ರವಾಸೋದ್ಯಮ ಇಲಾಖೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ಈ ಸ್ಥಳವನ್ನು ಪ್ರವಾಸ ಮಾಹಿತಿ ಕೋಶದಲ್ಲಿ ಸೇರಿಸಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಮೂಲಭೂತ ಅವಶ್ಯಗಳ ಅಭಿವೃದ್ದಿ ಮಾಡಿ ಪ್ರವಾಸಿ ಮಾಹಿತಿ ಸಿಕ್ಕುವಂತೆ ಕ್ರಮ ವಹಿಸಿದರೆ ಮುಂದೊಂದು ದಿನ ಇದು ಪ್ರಮುಖ ಪ್ರವಾಸಿ ತಾಣವಾಗುವುದರಲ್ಲಿ ಎರಡು ಮಾತಿಲ್ಲ.

-ರಾಘವೇಂದ್ರ ಅಡಿಗ ಎಚ್ಚೆನ್.

Sunday, March 02, 2025

ಸಿನಿಮಾ ಒಂದು ನೋಡುವ ಪುಸ್ತಕ; TS ನಾಗಾಭರಣ

 





"ಸಿನಿಮಾ ಒಂದು ನೋಡುವ ಪುಸ್ತಕ. ಈ ಪುಸ್ತಕವನ್ನು ಆತ ಒಬ್ಬನೇ ನೋಡಲ್ಲ. ಬದಲಾಗಿ ಆತನ ಬೆಂಬಲಿಗರು ಕೂಡ ನೋಡುತ್ತಾರೆ. ಹೀಗಾಗಿ ಸಿನಿಮಾದ ಸೋಲು ಗೆಲುವು ಎಲ್ಲರನ್ನೂ ಒಳಗೊಂಡಿರುತ್ತದೆ," ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ಹೇಳಿದರು.

ಸ್ನೇಹ ಬುಕ್ ಹೌಸ್ ವತಿಯಿಂದ 2025 ಮಾರ್ಚ್ 02 ಭಾನುವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಲೇಖಕ ವಿರಾಟ್ ಪದ್ಮನಾಭ ಅವರ "ಬೆಟ್ಟದ ಹೂವು" ಆಧುನಿಕ ಭಾರತದ ಸಾಮಾಜಿಕ ರಾಮಾಯಣ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

"ಇಂದಿಗೂ ನಾವು ಸಿನಿಮಾದ ಕಲಾಕೃತಿಗಳನ್ನು ಕಟ್ಟಿಕೊಟ್ಟಂತಹ ಅದೆಷ್ಟೋ ಜನರನ್ನ ನಾವು ನೆನಪುಮಾಡಿಕೊಳ್ಳುತ್ತೇವೆ. ಅದಕ್ಕೆ ಮುಖ್ಯ ಕಾರಣ ಅಂದಿನ ಸಿನಿಮಾದ ಜೀವಂತ ವಸ್ತು. ಸಮಾಜ ಸುಧಾರಣೆಯಾಗುವುದು ಎಡ ಬಲದಿಂದವಲ್ಲ. ಮಧ್ಯವ ವರ್ಗದಿಂದ ಎನ್ನುವ ಮಾತುಗಳು ಈ ಕೃತಿಯಲ್ಲಿಯೂ ನೋಡಬಹುದು. ಅದು ಇಂದಿನ ಕಾಲಕ್ಕೆ ನಿಜವೆಂಬುವುದು ಕೂಡ ಭಾಸವಾಗುತ್ತದೆ. ಸರಕಾರಿ ಶಾಲೆಗಳ ಉಳಿವಿಕೆಯ ಹೋರಾಟ ಒಂದು ರೀತಿಯ ಸ್ಥಾಯಿಕ ಭಾವವಾಗಿ ಇಲ್ಲಿ ಕಾಣಬಹುದು. ಸಿನಿಮಾ ಅನ್ನುವುದು ಓದು. ವಿಮರ್ಶಕ ಅನ್ನುವವ ಇದನ್ನು ಮನದಲ್ಲಿಟ್ಟುಕೊಂಡು ಸಿನಿಮಾ ವಿಮರ್ಶೆಯನ್ನು ಸಾಹಿತ್ಯ ಲೋಕಕ್ಕೆ ನೀಡಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಇಂತಹದ ಅವಶ್ಯಕತೆಯಿದೆ ಬಹಳಷ್ಟಿದೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೃತಿಯನ್ನು ವಿಶ್ಲೇಷಿಸಿದ ವಕೀಲ, ಪತ್ರಕರ್ತ ವೀರೇಂದ್ರ ಪಿ.ಎಂ. ಮಾತನಾಡಿ, "ಒಬ್ಬ ಕವಿ, ನಾಟಕಕಾರ ಕೃತಿಕಾರನ ಬಗ್ಗೆ ಕೃತಿ ಪ್ರಕಟವಾಗಲ್ಲವೋ, ಹಾಗೆಯೇ ಸಿನಿಮಾ ಕ್ಷೇತ್ರದಲ್ಲಿಯೂ ವ್ಯಕ್ತಿಯ ಬಗ್ಗೆ ಇರುವಂತಹ ಕೃತಿಗಳು ಬಹಳಷ್ಟು ಕಡಿಮೆ. ಆದರೆ ನಾಗಭರಣ ಅವರ ಬಗ್ಗೆ ಪದ್ಮನಾಭ ಅವರು ಬಹಳಷ್ಟು ಅಧ್ಯಯನ ಮಾಡಿ ಕೃತಿಯನ್ನು ಬರೆದಿದ್ದಾರೆ. ಇಂತಹ ಅಧ್ಯನಶೀಲ, ವ್ಯಕ್ತಿ ವಿಮರ್ಶೆಯ ಕೃತಿಗಳ ಕನ್ನಡ ಸಾಹಿತ್ಯಕ್ಕೆ ಅವಶ್ಯಕ. ಇನ್ನು ಬೆಟ್ಟದ ಜೀವ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಪದ್ಮನಾಭ ಅವರು ನುಡಿಗಟ್ಟುಗಳನ್ನು ಕೊಟ್ಟಿದ್ದಾರೆ. ಮುಖ್ಯವಾಗಿ ನಾವು ಕೃತಿಯಲ್ಲಿ ಗಮನಿಸಬೇಕಾದ ಅಂಶ ಸರಕಾರಿ ಶಾಲೆಗಳ ಬಗೆಗೆ ಕಟ್ಟಿಕೊಟ್ಟಿರುವ ವಿಚಾರ ವಸ್ತುಗಳು. ಈ ನಿಟ್ಟಿನಲ್ಲಿ ಬದುಕಿನ ವಿವಿಧ ಮಜಲುಗಳನ್ನು ತಿಳಿಸಿಕೊಟ್ಟಿದ್ದಾರೆ. ಕಲಾತ್ಮಕ ಸಿನಿಮಾಗಳ ಬಗ್ಗೆ ಬಹಳ ವಿಸ್ತಾರವಾಗಿ ಚರ್ಚಿಸಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಮತ್ತು ಕನ್ನಡ ಸಿನಿಮಾ ಪರಂಪರೆಯ ಬಗ್ಗೆ ಬಹಳ ಸ್ಥೂಲವಾಗಿ ವಿವರಿಸಲಾಗಿದೆ," ಎಂದು ತಿಳಿಸಿದರು.

ಕೃತಿಯ ಲೇಖಕ ವಿರಾಟ್ ಪದ್ಮನಾಭ ಮಾತನಾಡಿ, "ಬೆಟ್ಟದ ಜೀವ ಧರ್ಮ, ನೆಲೆಯನ್ನು ನೋಡುವ ರೀತಿ ಬಹಳ ಭಿನ್ನವಾಗಿ ವ್ಯಕ್ತವಾಗುತ್ತದೆ. ಪುನೀತ್ ರಾಜಕುಮಾರ್ ಅವರ ಸಿನಿಮಾವನ್ನು ಒಳಗೊಂಡ ವಿಚಾರ ವಸ್ತುಗಳಿವೆ. ಈ ಕೃತಿ ಹೊರಬರಲು ನನ್ನ ವಿದ್ಯಾರ್ಥಿ ವೃಂದವೇ ಮುಖ್ಯ. ಸದಾ ಅವರು ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ," ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ ಸುಮತಿ ಅವರು ಸ್ಪೂರ್ತಿಯ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ತ್ರಿವೇಣಿ ಹರ್ಷಿತಾ ಅವರು ಉಪಸ್ಥಿತರಿದ್ದರು.