Friday, October 29, 2021

ಸಿನಿ ನಟ ನಟಿಯರ ಪ್ರಾಣ ಹಿಂಡುತ್ತಿರುವ ಫಿಟ್ ನೆಸ್ ಮಾಯೆ!

ಬದುಕಲು ದೇಹ ಗಟ್ಟಿಮುಟ್ಟಾಗಿ ಆರೋಗ್ಯವಾಗಿರಬೇಕು ಆದರೆ ದೇಹದಾರ್ಡ್ಯತೆಯೊಂದೇ ಬದುಕಿನಶ್ರೇಷ್ಠತೆಗೆ ಮಾನದಂಡ ಎಂದೆಣಿಸಬಾರದು.... ಇಂದು ಪುನೀತ್ ರಾಜ್ ಕುಮಾರ್ ಸಾವನ್ನು ಕಂಡಾಗ ಹೀಗೆನ್ನಿಸಿತು. ಸ್ಯಾಂಡಲ್ ವುಡ್ ನಲ್ಲಿ ಇದು ಎರಡನೇ ಘಟನೆ, ಕಳೆದ ವರ್ಷ ಯುವನಟ ಚಿರಂಜೀವಿ ಸರ್ಜಾ ಕೂಡ ಹೀಗೇ ಅಚ್ಚರಿಯ ರೀತಿಯಲ್ಲಿ ಸಾವನ್ನು ಕಂಡಿದ್ದರು. ಅಂದೂ ಸಹ ಇಡೀ ಕನ್ನಡ ನಾಡು ಶೋಕದಲ್ಲಿತ್ತು. ಇಂದು ವರನಟ ಡಾ. ರಾಜ್ ಕುಟುಂಬದ ಕುಡಿ, ದೊಡ್ಮನೆ ಹುಡ್ಗ ಪುನೀತ್ ನಮ್ಮನ್ನಗಲಿದ್ದಾರೆ. ಈ ಸಂದರ್ಭದಲ್ಲಿ  ಒಬ್ಬ ಕಲಾವಿದನಿಗೆ ದೇಹದಾರ್ಡ್ಯತೆ ಎಷ್ಟರ ಮಟ್ಟಿಗೆ ಮುಖ್ಯ? ಫಿಟ್ ನೆಸ್ ಇದ್ದವರಿಗೆ ಮಾತ್ರ ಚಿತ್ರದಲ್ಲಿ ನಾಯಕನಾಗುವುದು ಸಾಧ್ಯವೆ? ಒಂದೊಮ್ಮೆ ಫಿಟ್ ನೆಸ್ ಇಲ್ಲದಿದ್ದರೆ ಅಥವಾ ಸಾಕಷ್ಟು ದೇಹದಾರ್ಡ್ಯತೆ ಪ್ರದರ್ಶಿಸದೆ ಹೋದರೆ ಚಿತ್ರೋದ್ಯಮದಲ್ಲಿ ಅಂತಹಾ ನಾಯಕರಿಗೆ ಅವಕಾಶ ಇಲ್ಲವಾಗುತ್ತದೆಯೆ? ಎಂಬತ್ತ ಗಮನ ಹರಿಸಬೇಕಿದೆ.


ನಟ ಪುನೀತ್ ಸೇರಿ ಅನೇಕರು ತಾವು ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಅದು ತಪ್ಪಲ್ಲ. ಆದರೆ ಫಿಟ್ ನೆಸ್ ಕಾಪಾಡಿಕೊಳ್ಳುವ ಉಮೇದಿನಲ್ಲಿ ದೇಹದ ಆರೋಗ್ಯದ ಬಗ್ಗೆ ಗಮನಿಸುವುದೇ ಇಲ್ಲ! ಒಂದು ಚಿತ್ರಕ್ಕಾಗಿ ಅದರಲ್ಲಿನ ಕೆಲ ದೃಶ್ಯಗಳಿಗಾಗಿ ತಮ್ಮ ತೂಕ ಹೆಚ್ಚಿಸಿಕೊಳ್ಳುವ ಅಥವಾ ಇಳಿಸಿಕೊಳ್ಳುವ ನಟ ನಟಿಯರು ಇತ್ತೀಚೆಗೆ ಹೆಚ್ಚುತ್ತಿದ್ದಾರೆ. ಹಾಗೆ ತಮ್ಮ ಅವಶ್ಯಕತೆಗೆ ತಕ್ಕಂತೆ ದೇಹವನ್ನು ಕರಗಿಸುವ, ಬೆಳೆಸಿಕೊಳ್ಳುವ ಅವರು ಇದರಿಂದ ತಮ್ಮ ಹೃದಯಕ್ಕೆ ಹಾಗೂ ವಿವಿಧ ಅಂಗಾಂಗಗಳಿಗೆ ಆಗಬಹುದಾದ ಪರಿಣಾಮದ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ.

ಅಯ್ಯೋ ಇದೇನೂ ಹೊಸದಲ್ಲ ಹಿಂದಿನ ಕಾಲದಿಂದ ಬಂದದ್ದುರಾಜ್ ಕುಮಾರ್ವಿಷ್ಣುವರ್ಧನ್ ಕಾಲದಲ್ಲಿಯೂ ದೇಹದ ಪುಷ್ಟಿದಾಯಕತೆಗೆ ಒತ್ತು ನೀಡಲಾಗುತ್ತಿತ್ತು ಎನ್ನಬಹುದು. ಹೌದು. ವರನಟ ಡಾರಾಜ್ ಪ್ರತಿದಿನವೂ ಯೋಗ ಸಾಧನೆ ಮಾಡುತ್ತಾ ಬಂದಿದ್ದರು. ಅಲ್ಲದೆ ಇನ್ನಿತರೆ ನಟರೂ ಸಹ ಯೋಗಆಸನಗಳ ಅಭ್ಯಾಸ ಮಾಡುತ್ತಿದ್ದರು. ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಆಹಾರ ಪದ್ದತಿ ಬದಲಾಗಿದೆ. ಕೆಲಸದ ಒತ್ತಡ ಅಧಿಕವಾಗಿ ಊಟನಿದ್ರೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಹೀಗಿರುವಾಗ ಇದರ ನಡುವೆ ಫಿಟ್ ನೆಸ್ ಗಾಗಿ ಜಿಮ್ ಗಳ ಮೊರೆ ಹೋಗಿ ವಿಪರೀತವಾಗಿ ದೇಹದಂಡನೆ ಮಾಡಿಕೊಳ್ಳುವುದರಿಂದ ಮಾನವ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಲಿವುಡ್ ನಲ್ಲಿ ನಟರು ಅಪಾಯಕಾರಿ ಪ್ರಮಾಣದಲ್ಲಿ ಪಾತ್ರಗಳಿಗಾಗಿ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ಇಳಿಸಿಕೊಳ್ಳುತ್ತಾರೆ. ನಟಿಯರೂ ಸಹ ತಾವು ಮಗುವನ್ನು ಪಡೆದ ನಂತರ ಮತ್ತೆ ತಮ್ಮ ಹಿಂದಿನ ಫಾರ್ಮ್ ಗೆ ಮರಳಲು ಅನೇಕ ಬಗೆಯಲ್ಲಿ ಕಸರತ್ತುಗಳನ್ನು ನಡೆಸುತ್ತಾರೆ. ಆದರೆ ತೆರೆ ಮೇಲೆ ಸುಂದರವಾಗಿ ಕಾಣಿಸುವ ಸಲುವಾಗಿ ಮಾಡುವ ಈ ತಯಾರಿ ನಟ ನಟಿಯರ ಆರೋಗ್ಯ ದೃಷ್ಟಿಯಿಂದ ಸೂಕ್ತವಾದುದ್ದಲ್ಲ.

ಡಯಟ್ ಫುಡ್ ಕಂಪನಿಗಳು ಪ್ರಸಿದ್ದ ನಟ ನಟಿಯರು ತಮ್ಮ ಉತ್ಪನ್ನಗಳನ್ನು ಬಳಸಿದ್ದಾರೆಂದು ಪ್ರಚುರಪಡಿಸಲು ಬಯಸುತ್ತವೆ. ಹಾಗಾದಾಗ ಜನರೂ ಅಂತಹಾ ಉತ್ಪನ್ನಗಳ ಖರೀದಿಗಿಳಿಯುತ್ತಾರೆ ಎಂದು ಭಾವಿಸಿದೆ. ಅದಕ್ಕಾಗಿ ಅಂತಹಾ ಸಂಸ್ಥೆಗಳು ಎಂಡಾರ್ಸ್‌ಮೆಂಟ್ ಡೀಲ್‌ಗಳಿಗಾಗಿ ಸೆಲೆಬ್ರಿಟಿಗಳನ್ನು ನೇಮಿಸಿಕೊಳ್ಳುತ್ತಾರೆ.

ಇನ್ನು ಆಹಾರದಲ್ಲಿನ ಪೌಷ್ಟಿಕಾಂಶಗಳ  ಕುರಿತು ವಿಶೇಷ ತಜ್ಞರು ನಟನಟಿಯರು ಸೇವಿಸುವ ಆಹಾರಗಳ ಬಗ್ಗೆ ಅವರೊಂದಿಗೆ ಆಗಾಗ ಚರ್ಚಿಸುತ್ತಾರೆ.ಅದು ಅವರ ತೂಕದಲ್ಲಿನ ನಷ್ಟ ಅಥವಾ ಹೆಚ್ಚಳದ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಟನಿಗೆ ವಿವರವಾದ ಮತ್ತು ವೈಯಕ್ತಿಕವಾಗಿ ಸೂಚಿಸಿದ ಆಹಾರದ ಪಟ್ಟಿ ನೀಡಬಹುದು.  ಇನ್ನೂ ಕೆಲವರು ತೂಕ ಇಳಿಸಿಕೊಳ್ಲಲು ತಮ್ಮದೇ ತಂತ್ರವನ್ನು ಬಳಸಿಕೊಳ್ಳುತ್ತಾರೆ. ನಟಿ ಬೆಯೋನ್ಸ್ ಅವರು ತಮ್ಮ ಚಲನಚಿತ್ರ ಗಳಲ್ಲಿನ  ಡ್ರೀಮ್‌ಗರ್ಲ್ಸ್‌ ನಂತಹಾ ಪಾತ್ರಕ್ಕಾಗಿ  20 ಪೌಂಡ್‌ಗಳನ್ನು ಇಳಿಸಲು ಮಾಸ್ಟರ್ ಕ್ಲೀನ್ಸ್ ಸಿಸ್ಟಮ್ ಅನ್ನು ಬಳಸಿದ್ದಾರೆಂದು ವರದಿಯಾಗಿತ್ತು.  ಮಾಸ್ಟರ್ ಕ್ಲೀನ್ಸ್ ಸಿಸ್ಟಮ್ ಎನ್ನುವುದು ದೇಹದ ತೂಕ ಇಳಿಕೆ ಮಾಡಲು ನಿಂಬೆ ಪಾನಕ ಆಧಾರಿತ ಮಿಶ್ರಣವನ್ನು ಹೊರತುಪಡಿಸಿ ಏನನ್ನೂ ತಿನ್ನಬಾರದೆಂದು ತಾಕೀತು ಮಾಡುತ್ತದೆ.  ಇದು ಶೀಘ್ರದಲ್ಲಿ ತೂಕವನ್ನು ಇಳಿಸಬಲ್ಲದು ಆದರೆ ಇದರಿಂದ ನಿಮಗೆ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತದೆ.

ವೈಯಕ್ತಿಕ ತರಬೇತುದಾರರು ನಟರು ತಮ್ಮ ತೂಕವನ್ನು ಕಳೆದುಕೊಳ್ಳಲು ಮತ್ತು ಉತ್ತಮ ಮೈಕಟ್ಟು ಪಡೆಯಲು ಪ್ರತಿದಿನ ವರ್ಕ್ ಔಟ್ ಮಾಡಲು ಪ್ರೇರೇಪಿಸುವ ಮೂಲಕ ಅತ್ಯುತ್ತಮವಾಗಿ ಕಾಣುವಂತೆ ಸಲಹೆ ನೀಡುತ್ತಾರೆ. ಕೆಲವರು  ಜಿಮ್‌ನಲ್ಲಿ ದಿನಕ್ಕೆ ಮೂರು ಗಂಟೆಗಳ ಕಾಲ ಕಳೆಯುತ್ತಾರೆ ಮತ್ತು ಅವರ ಕಡೆಯಿಂದ ಪರವಾನಗಿ ಪಡೆದ ತರಬೇತುದಾರರು ತಮ್ಮ ರೂಪದ ಕುರಿತು ಕಮೆಂಟ್ ಮಾಡಲು ಬಯಸುತ್ತಾರೆ. ಅಲ್ಲದೆ ಅಂತಹವರಿಗೆ ದಿನನಿತ್ಯ ವ್ಯಾಯಾಮ ಮಾಡಲು ಕೆಲ ಸಲಹೆ ಸೂಚನೆಗಳನ್ನು ಸಹ ನೀಡಲಾಗುವುದು. ಆದರೆ ಇದೆಲ್ಲವೂ ನಿಯಮಿತವಾಗಿದ್ದಲ್ಲಿ ಉತ್ತಮ ಹಾಗೆಂದು ಅತಿಯಾದರೆ ಅದು ನಟ ನಟಿಯರ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಣಕ್ಕೂ ಸಂಚಕಾರ ತರುತ್ತದೆ.

ಚಿರಂಜೀವಿ ಸರ್ಜಾ, ಪುನೀತ್ ಗೆ ನಿಜಕ್ಕೂ ಆದದ್ದೇನು?

ಚಿರಂಜೀವಿ ಸರ್ಜಾ ಸಾವಿನ ಹಿಂದಿನ ದಿನ ಭಾನುವಾರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಆ ತಕ್ಷಣ ಅಂಬ್ಯುಲೆನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಅವರಿಗೆ ಹೃದಯ ಸ್ತಂಭನವಾಗಿತ್ತು. ಅದಕ್ಕೆ ಮುನ್ನ ಮನೆಯಲ್ಲಿದ್ದಾಗಲೇ ಚಿರಂಜೀವಿಯವರಿಗೆ ಒಮ್ಮೆ ಪ್ರಜ್ಞೆ ಮರುಕಲೀಸಿತ್ತು ಆ ವೇಳೆ ಪತ್ನಿ ಮೇಘನಾರನ್ನು ಕರೆದು ನೀನು ಗಾಬರಿಯಾಗಬೇಡನನಗೇನೂ ಆಗುವುದಿಲ್ಲ ಎಂದಿದ್ದರು. ಎಂದು ಚಿರಂಜೀವಿಯವರ ಒಂದನೇ ವರ್ಷದ ಪುಣ್ಯತಿಥಿಯ ವೇಳೆ ಮೇಘನಾ ನೆನ್ಪು ಮಾಡಿಕೊಂಡಿದ್ದಾರೆ.  ಪುನೀತ್ ರಾಜ್ ಕುಮಾರ್ ಸಹ ದಿನನಿತ್ಯ ಮನೆಯಲ್ಲೇ ಇದ್ದ ಜಿಮ್ ನಲ್ಲಿ ಗಂಟೆ ಗಟ್ಟಲೆ ವರ್ಕ್ ಔಟ್ ಮಡುತಿದ್ದರು. ಅವರಿಗೆ ನಿನ್ನೆ ಸಂಜೆಯಿಂದಲೇ ಚಿಕ್ಕದಾಗಿ ಎದೆನೋವಿತ್ತು ಎಂದೂ ವರದಿಯಾಗಿದ್ದು ಹೆಚ್ಚಿನ ಸಮಸ್ಯೆ ಆಗಲಿಕ್ಕಿಲ್ಲ ಎಂಬ ನಿರ್ಲಕ್ಷವೇ ಅವರ ಪ್ರಾಣವನ್ನು ತಿಂದು ಹಾಕಿತೆಇದಕ್ಕೆ ಆ ಸಾವೇ ಉತ್ತರಿಸಬೇಕು. ಆದರೆ ಒಂದಂತೂ ನಿಜ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಭಾರತೀಯ ಚಿತ್ರರಂಗ ಇಂದು ಮಹತ್ವದ ಸದಭಿರುಚಿಯ ನಟನನ್ನು ಕಳೆದುಕೊಂಡಿದೆ. ಅವರ ಅಭಿಮಾನಿಗಳಿಗೆ ಭರಿಸಲಾಗದ ದುಃಖವಾಗಿದೆ. ಇನ್ನು ಈ ಎರಡು ಸಾವಿನ ನಂತರವಾದರೂ ಚಿತ್ರೋದ್ಯಮದ ನಟ ನಟಿಯರು ಫಿಟ್ ನೆಸ್ ಎಂಬ ಮಾಯೆಯಿಂದ ಹೊರಬರುತ್ತಾರೆಯೆ ಎಂದು ಕಾದು ನೋಡಬೇಕಿದೆ.

ನನ್ನ ಈ ಲೇಖನ ಕನ್ನಡದ ಪ್ರಸಿದ್ದ ನ್ಯೂಸ್ ಪೋರ್ಟಲ್ "ಕನ್ನಡಪ್ರಭ ಡಾಟ್ ಕಾಂ"ನಲ್ಲಿ 30 ಅಕ್ಟೋಬರ್ 2021 ಮಧ್ಯಾಹ್ನ 01:25  ಗೆ  ಪ್ರಕಟವಾಗಿದೆ.

Tuesday, October 05, 2021

ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ

ಹಿಂದುತ್ವದ ಜತೆ ಮುಂದುತ್ವವೂ ಬೇಕು, ಬದುಕು ಮುಂದುವರಿಯಬೇಕು. ಅದಕ್ಕಾಗಿ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆ ಎರಡೂ ಅಗತ್ಯವಾಗಿದೆ. ಹಾಗಾಗಿ ಇಲ್ಲಿನ ಬಹುಭಾಷೆಗಳು ದೇಶದ ಏಕತೆಗೆ ಕಾರಣವಾಗಿದೆ ಎಂದ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

ಶಾರದಾ ಬುಕ್ ಅಂಗಡಿ ಆವರಣದಲ್ಲಿ ನಡೆದ ವಿನುತಾ ವಿಶ್ವನಾಥ್ ಅವರ 'ಹುಣ್ಸ್ ಮಕ್ಕಿ ಹುಳ' ಪುಸ್ತಕ ಕುರಿತ ಸಂವಾದದಲ್ಲಿ ಅವರು ಮಾತನಾಡಿದ್ದರು. 

ಕನ್ನಡವೇ ನಮ್ಮ ಹಕ್ಕಿನ ಭಾಷೆ, ಖಾತೆ ಇದ್ದಂತೆ!

ಕೇಂದ್ರದ ಸರ್ಕಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಏಕಾಭಾಷೆಯನ್ನು ನಮ್ಮ ಮೇಲೆ ಹೇರುತ್ತವೆ ಎಂದ ಹಂಸಲೇಖ ಕನ್ನಡ ನಮಗೆ ಎಂದಿಗೂ ಹಕ್ಕಿನ ಭಾಷೆ, ಕನ್ನಡದಿಂದಲೇ ನಮ್ಮ ಈ ರಾಜ್ಯ ಉಳಿಯುವುದು. ಕನ್ನಡ ನಮ್ಮ ಪಾಲಿಗೆ ಖಾತೆ ಇದ್ದಂತೆ ಎಂದಿದ್ದಾರೆ. ನಾವು ಬಹಳ ಅಪಾಯದ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಸ್ಪಷ್ತತೆ ಇಲ್ಲದಿರುವುದು ಇದಕ್ಕೆ ಕಾರಣ. ತಮಿಳುನಾಡಿನಲ್ಲಿ ಧೈರ್ಯವಾಗಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳುತ್ತಾರೆ. ಆದರೆ ನಾವು ಆ ಧೈರ್ಯ ತೋರಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವೀಗ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ ಅದೇನೆಂದರೆ ನಮಗೆ ಹಿಂದಿ ಬೇಕೆ? ಇಂಗ್ಲೀಷ್ ಬೇಕೆ? ಇದರ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲದಿದ್ದರೆ ಗೊಂದಲ ಮುಂದುವರಿಯಲಿದೆ.

ಇಂಗ್ಲೀಷ್ ನಮ್ಮ ಕನ್ನಡ ತಾಯಂದಿರ ಆಜ್ಞೆಯಾಗಿದೆ. ಪ್ರತಿ ಹೆಣ್ಣುಮಕ್ಕಳೂ ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸಲೇಬೇಕು ಎಂದು ಆಜ್ಞೆ ಮಾಡಿದ್ದಾರೆ. ಅದನ್ನು ಅವರ ಪತಿ ಅನುಸರಿಸುತ್ತಾರೆ. ಹಾಗಾಗಿ ಇಂಗ್ಲೀಷ್ ಅಥವಾ ಇನ್ನಾವುದೇ ಭಾಷೆ ಕಲಿಯುವ ಭಾಷೆಯಾಗಿರಲಿ ಆದರೆ ಕನ್ನಡ ಎಂದಿಗೂ ನಮ್ಮ ಉಸಿರಾಗಿರಬೇಕು. ಕನ್ನಡ ಸಾವಿರಾರು ವರ್ಷ ಇತಿಹಾಸವಿರುವ ಭಾಷೆ. ಆದರೆ ಇದನ್ನು ದಕ್ಷಿಣ ಭಾರತದ ಅಧಿಕೃತ ಭಾಷೆ ಎನ್ನಲಾಗುವುದಿಲ್ಲ. ತಮಿಳು ಇಲ್ಲಿ ಬಗೆಯ ಸಂವಹನ ಭಾಷೆಯಾಗಿದೆ. ಆದರೆ ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿರುವುದು ನನಗೆ ತಮಾಷೆಯಾಗಿ ಕಾಣುತ್ತಿದೆ ಎಂದ ಹಂಸಲೇಖ ಒಂದೊಮ್ಮೆ ದೇವನಾಗರಿ ಭಾಷೆಯನ್ನು ರಾಷ್ಟ್ರಭಾಷೆ ಅಥವಾ ಆಡಳಿತ ಭಾಷೆಯನ್ನಾಗಿಸಿದರೆ ಯಾರೂ ಸಂಸ್ಕೃತ ಅಥವಾ ದೇವನಾಗರಿಯಲ್ಲಿ ವ್ಯವಹರಿಸುವುದಿಲ್ಲ. ಬದಲಿಗೆ ಇಂಗ್ಲೀಷ್ ನಲ್ಲಿ ವ್ಯ್ವವಹರಿಸುತ್ತಾರೆ ಮುಕ್ಕಾಲು ಪಾಲು ಜನ ಇಂಗ್ಲೀಷ್ ಇನ್ನೂ ಕಾಲು ಭಾಗ ಜನರು ಹಿಂದಿಯಲ್ಲಿ ವ್ಯವಹರಿಸಬಹುದು ಎಂದರು.



ಹಿಂದಿ ಭಾಷೆ ಪರ್ಷಿಯಾ, ಉರ್ದು ಹಾಗೂ ಅರಬ್ ಭಾಷೆಯ ಬಲಮಗು, ಐನೂರು ಅಥವಾ ನಾಲ್ಕು ನೂರು ವರ್ಷಗಳ ಇತಿಹಾಸದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ಬೇರೆ ಯಾವ ಭಾಷೆಯನ್ನೂ ಕಲಿಯುವ ಅವಕಾಶವಿದ್ದರೂ ಒಳಿತು ಎಂದರು. ಕನ್ನಡ ಹೋರಾಟಗಾರರು, ಯುವಕರು ಈ ಬಗ್ಗೆ ಇದೀಗ ಗೊಂದಲದಲ್ಲಿದ್ದಾರೆ ಎಂದು ಹಂಸಲೇಖ ಹೇಳಿದರು. 

ಇಂದು ವೈದಿಕ ಪ್ರಜ್ನೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ:

ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ರಂಗ ಪ್ರವೇಶಿಸಿದ ಮೊದಲ ವರ್ಗ ಅದು ವೈದಿಕ ವರ್ಗವಾಗಿತ್ತು. ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ವರ್ಗವನ್ನು ಮೊದಲು ಪ್ರವೇಶಿಸಿದ್ದು ಈ ವೈದಿಕ ಪ್ರಜ್ಞೆ. ವೈದಿಕ ಪ್ರಜ್ಞೆ ಹಿನ್ನೆಲೆ ದೊರತದ್ದು ನಮ್ಮ ಪುಣ್ಯ. ಇಂದು ಅದೇ ವೈದಿಕ ಪ್ರಜ್ಞೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ. ರಾಷ್ಟ್ರೀಯ ಪ್ರಜ್ಞೆ ನಮಗೂ ಅಗತ್ಯವಿದೆ. ಆದರೆ ಆ ರಾಷ್ಟ್ರೀಯತೆಯ ಜತೆಗೆ ನಮ್ಮ ಪ್ರಾದೇಶಿಕತೆಯ ಸ್ವಾಯತ್ತತೆಯನ್ನು ಕಳೆದುಕೊಳ್ಲಲು ನಾವು ಸಿದ್ದವಾಗಿಲ್ಲ ಎಂದು ಹಂಸಲೇಖ ಹೇಳಿದ್ದಾರೆ. ಅದೊಮ್ಮೆ ಕಳೆದುಹೋದಲ್ಲಿ ಭಾರತದಲ್ಲಿ ಬಹುದೊಡ್ಡ ವ್ಯತ್ಯಾಸಗಳು ಪ್ರಾರಂಭವಾಗಲಿದೆ. ಪುರಿ ಉಂಡೆಯಾಗಿರುವುದನ್ನು ಒಂದೊಂದೇ ಎಳೆ ಬಿಚ್ಚಿದರೆ ಮತ್ತೆ ಈ ಹಿಂದಿದ್ದ ೫೮ ಸಂಸ್ಥಾನಗಳ ರೀತಿಯಲ್ಲಿ ಚಿತ್ರ ವಿಚಿತ್ರವಾಗಿ ಹಂಚಿಕೆಯಾಗಲಿದೆ ಹಾಗಾಗಿ ಸಂವಿಧಾನದ ಹಿನ್ನೆಲೆ ಒಂದಾಗಿರುವ ಭಾರತವನು ಹಾಗೇ ಉಳಿಸಿಕೊಳ್ಲಬೇಕು ಎಂದರು

ಭಾರತದ ಏಕತ್ವದ ಸಂಕೇತ ಕುಂಕುಮ

ಭಾರತದ ಏಕತ್ವದ ಸಂಕೇತ ಕುಂಕುಮ ಎಂದಿರುವ ಹಂಸಲೇಖ ಇಲ್ಲಿ ಸಿಖ್ಖರು, ಮುಸ್ಲಿಮರು, ಕ್ರೈಸ್ತರು ಸಹ ಕುಂಕುಮ ಇಡಬಲ್ಲರು. ತಾಳಿ ಎಲ್ಲಾ ಧರ್ಮೀಯರಲ್ಲಿ ಸ್ವೀಕಾರವಾಗಿದೆ. ಗೋವು, ದೇವಾಲಯಗಳು ನಮ್ಮ ಏಕತ್ವದ ಸಂಕೇತಗಳಾಗಿದೆ ಎಂದರು. ಇದೆಲ್ಲಾ ರಾಷ್ಟ್ರೀಯತೆಯಾಗಿದ್ದು ಇದರ ಮೂಲಕ ಬಹುತ್ವವನ್ನೂ ಕಾಪಾಡಿಕೊಳ್ಳುತ್ತಾ, ಏಕತ್ವದ ಸಂಕೇತವನ್ನು ಗೌರವಿಸುತ್ತಾ ಕನ್ನಡವನ್ನು ಸಹ ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಹಂಸಲೇಕ ಅವರು ತಮ್ಮ ಶಾರದಾ ಬುಕ್ ಅಂಗಡಿ ಬಗ್ಗೆ ಪರಿಚಯ ಮಾಡಿಕೊಟ್ಟ ನಂತರದಲ್ಲಿ ವಿನುತಾ ವಿಶ್ವನಾಥ್  ಅವರ "ಹುಣ್ಸ್ ಮಕ್ಕಿ ಹುಳ" ಪುಸ್ತಕದ ಕುರಿತ ಸಂವಾದ ನಡೆಯಿತು. ವಿನುತಾ ಅವರ ಆತ್ಮಕಥೆಯಾಗಿರುವ ಹುಣ್ಸ್ ಮಕ್ಕಿ ಹುಳ ದಲ್ಲಿ ವಿನುತಾ ತಮ್ಮ ಜೀವನದ ಹಲವು ಅನುಭವವನ್ನು ಹಂಚಿಕೊಂಡಿದ್ದು ಓದುಗರಿಗೆ ಸ್ಪೂರ್ತಿಯ ಕಥೆಯನ್ನು ಉಣಬಡಿಸಿದ್ದಾರೆ.

ದಿನಾಂಕ  02/10/2021 ರಂದು ಹಂಲೇಖ ದೇಸಿ ಶಾಲೆ ಆವರಣದ ಶಾರದಾ ಬುಕ್ ಅಂಗಡಿಯಲ್ಲಿ ನಡೆದ ಶ್ರೀಮತಿ ವಿನುತಾ ವಿಶ್ವನಾಥ್ ಅವರ  ಹುಣ್ಸ್ ಮಕ್ಕಿ ಹುಳ ಪುಸ್ತಕ ಸಂವಾದದಲ್ಲಿ ಬಾಗವಹಿಸಿ ತಯಾರಿಸಿದ್ದ ಈ ವರದಿ ದಿನಾಂಕ 04/10/2021ರಂದು ಕನ್ನಡದ ಹೆಸರಾಂತ ನ್ಯೂಸ್ ಪೋರ್ಟಲ್ ಕನ್ನಡಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು.