Thursday, April 26, 2018

ಕನ್ನಡ ಸಾಹಿತ್ಯದ ಅರಳು ಪ್ರತಿಭೆ ಅಂತಃಕರಣ


ಅವನಿನ್ನೂ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ರಾಜ್ಯದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವನ ಲೇಖನಗಳು ಪ್ರಕಟವಾಗುತ್ತಿದ್ದವು. ಐದನೇ ತರಗತಿಗೆ ಬಂದಾಗ ಐದು ಪುಸ್ತಕಗಳನ್ನು ಪ್ರಕಟಿಸಿದ್ದ.  ಎಂಟನೇ ತರಗತಿಗೆ ಬರುವುದರೊಳಗಾಗಿ ಮೂರು ಸಮಗ್ರ ಕೃತಿ ಸೇರಿ ಒಟ್ಟಾರೆ 24 ಪುಸ್ತಕಗಳನ್ನು ಪ್ರಕಟಿಸಿದ್ದ! ಇದಷ್ಟೇ ಅಲ್ಲ, ಸಾಹಿತ್ಯ ಪರಿಷತ್ ನಡೆಸುವ ಕನ್ನಡ ಪರೀಕ್ಷೆಗಳು, ಕಾವ, ಹಿಂದಿ ಪ್ರವೇಶ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿದ್ದು ರಾಜ್ಯ ಮಟ್ಟದ ಮೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಹ ಆಗಿದ್ದ!
ಇಂತಹಾ ಅದ್ಭುತ ಪ್ರತಿಭೆ ಇರುವುದು ನಮ್ಮ ನಾಡಿನ ಮಲೆನಾಡಿನ ಸೆರಗೆಂದೇ ಖ್ಯಾತವಾದ ಶಿವಮೊಗ್ಗ ಜಿಲ್ಲೆಯಲ್ಲಿ. ಬಾಲಸಾಹಿತಿ, ಸಾಧಕನ ಹೆಸರು  ಅಂತಃಕರಣ.  ಶಿವಮೊಗ್ಗದ ಲೋಯಲಾ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಪ್ರತಿಭಾವಂತ ಸಾಹಿತಿಯ 'ಆಟದ ಬಯಲು' ಪುಸ್ತಕ ಇತ್ತೀಚೆಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಇದುವರೆಗೆ 345  ಅಂಕಣ ಬರಹ, 93 ಕವಿತೆ, 78 ಕತೆ, 5 ಕಾದಂಬರಿ ಮತ್ತು 1 ನಾಟಕ ರಚಿಸಿರುವ ಅಂತಃಕರಣ ಮೆರವಣಿಗೆ, ವೀರ ಸೈನಿಕ, ಆಟವಿಲ್ಲದ ಮೈದಾನ (ಕಥಾ ಸಂಕಲನ), ), ಭಾರತಿವನದ ಅರಳಿಮರ (ಕಾಡಿನ ಕಥೆಗಳು), ), ರಾಮಪುರದ ಗೆಳೆಯರು, ಆಜಾದ್ ನಗರದ ಆಟಗಾರರು, ಹರಳಿಮಠದ ಸಾಹಸಿ ಹುಡುಗರು, ಗ್ವಾಲಿಮರ್ ರಹಸ್ಯ(ಕಾದಂಬರಿ), ಅಮ್ಮನ ಸಿಟ್ಟು, ಗೆಲ್ಲುವೆನು ನಾ ಗೆಲ್ಲುವೆನು, ಕಣ್ಣಾಮುಚ್ಚಾಲೆ (ಕವನ ಸಂಕಲನ) ಸೇರಿದಂತೆ ಹಲವಾರು ಸಾಹಿತ್ಯ ಕೃತಿಗಳ ಲೇಖಕನಾಗಿದ್ದಾನೆ. . ಈತ ಬರೆದ ಪ್ರವಾಸ ಕಥನಗಳು, ಕವನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಇದಲ್ಲದೆ 'ಎಚ್ಚರಿಕೆ', 'ಜೀವನ್ಮುಖಿ' ಹಾಗೂ ಅಂತರ್ಜಾಲ ಪತ್ರಿಕೆಯಾದ 'ವಿಶ್ವ ಕನ್ನಡಿಗ' ದಲ್ಲಿ ವಾರಕ್ಕೆ ಎರಡು ಅಂಕಣ ಬರೆಯುತ್ತಾನೆ.

ದೊಡ್ಡಮ್ಮನ ಪ್ರೋತ್ಸಾಹ
ಅಂತಃಕರಣನ ತಂದೆ ಸರ್ಜಾ ಶಂಕರ್ ಕಾನೂನು ವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ತಾಯಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಸೂಪರ್ ವೈಸರ್ ಆಗಿದ್ದಾರೆ. ತಂದೆ ತಾಯಿಗಳು ಅವನಿಗೆ ಚಿಕ್ಕ ವಯಸ್ಸಿನಿಂದ ಓದುವ ಹವ್ಯಾಸ ಬೆಳೆಸಿದ್ದು ಯುಕೆಜಿ ಓದುವಾಗಲೇ ಅವನು ಕವಿತೆ, ಕಥೆಗಳನ್ನು ಬರೆಯುತ್ತಿದ್ದ. ಹೀಗೆ ಸಣ್ಣ ಸಣ್ಣ ಬರಹಗಳಿಗೆ ಅವನ ದೊಡ್ಡಮ್ಮ ಅಂಕಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದರು. ಒಂದು ಬರಹಕ್ಕೆ 100ಕ್ಕೆ 95 ಅಥವಾ 96 ಅಂಕಗಳು ಪಡೆಯುತ್ತಿದ್ದ ಅಂತಃಕರಣನಿಗೆ ತಾನು 100ಕ್ಕೆ 100 ಅಂಕ ಪಡೆಯುವಂತೆ ಬರೆಯಬೇಕೆಂದು ಛಲ ಹುಟ್ಟಿತ್ತು. ಇದೇ ಆಸೆಯಿಂದ ಆತ ಇನ್ನಷ್ಟು ಚೆನ್ನಾಗಿ ಬರೆಯುವತ್ತ ಗಮನ ಹರಿಸಿದ್ದ. ಇದೇ ಮುಂದೆ ಆತನಿಗೆ ಸಾಹಿತ್ಯ ಲೋಕದಲ್ಲಿ ಉನ್ನತ ಸ್ಥಾನ ದೊರಕಲು ಕಾರಣವಾಗಿತ್ತು.
"ಮಕ್ಕಳ ಸಾಹಿತ್ಯ ಇಂದಿಗೂ ಕನ್ನಡದಲ್ಲಿ ಉತ್ತಮವಾಗಿ ಮೂಡಿಬರುತ್ತಿದ್ದು ನನ್ನ ವಯೋಮಾನದ ಮಕ್ಕಳು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವುದು ನನಗೆ ಸಂತೋಷ. ದೊಡ್ಡವರೂ ಸಹ ಉತ್ತಮವಾದ ಮಕ್ಕಳ ಸಾಹಿತ್ಯವನ್ನು ರಚನೆ ಮಾಡುತ್ತಾರೆ. ಎಚ್.ಎಸ್. ವಾಕೋಡ ನನ್ನ ಮೆಚ್ಚಿನ ಸಾಹಿತಿ. ಅವರ 'ಕೋಟೆಯಾದವರು' ಕಾದಂಬರಿಯಿಂದ ಸ್ಪೂರ್ತಿಗೊಂಡು ನಾನೂ ಕಾದಂಬರಿ ರಚನೆ ಮಾಡಿದೆ
"ಇಂಗ್ಲೀಷ್ ಸಾಹಿತ್ಯದಲ್ಲಿ ರಸ್ಕಿನ್ ಬಾಂಡ್ ನನ್ನ ಮೆಚ್ಚಿನ ಲೇಖಕ" ಎನ್ನುವ ಅಂತಃಕರಣ ತಾನೀಗ ಪ್ರಥಮ ಬಾರಿಗೆ ಇಂಗ್ಲಿಷ್ ನಲ್ಲಿ ಕಾದಂಬರಿಯೊಂದರ ರಚನೆಯಲ್ಲಿ ತೊಡಗಿದ್ದಾನೆ.

ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ
ತನ್ನ ಅಸಾಮಾನ್ಯ ಪ್ರತಿಭೆಯಿಂದ, ಸಾಹಿತ್ಯ ಅಭಿಮಾನಿಗಳ ಮನಸೂರೆಗೊಂಡ ಈ ಬಾಲಕ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ್ದು ‘ನನ್ನ ನಾಳೆ, ನನ್ನ ಕನಸು ಎನ್ನುವ ವಿಚಾರಪೂರ್ಣ ಪ್ರಬಂಧ ಮಂಡಿಸಿದ್ದಾನೆ. ಅಲ್ಲದೆ ಜ.31 ರಂದು ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಡೆದ ಪ್ರಥಮ  ಕೊಡಗು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಈತ ಆಹ್ವಾನಿತ ಅತಿಥಿಯಾಗಿದ್ದ.. ಫೆ.4ರಂದು ಮುಂಡರಗಿಯಲ್ಲಿ ನಡೆಯಲಿರುವ  ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ಉದ್ಘಾಟಿಸಲು ಸಹ ಅಂತಃಕರಣನಿಗೆ ಆಹ್ವಾನ ಬಂದಿದೆ ಎನ್ನುವುದು ಗಮನಾರ್ಹ.

ಕ್ರೀಡಾಲೋಕದಲ್ಲಿಯೂ ಆಸಕ್ತಿ
ಭವಿಷ್ಯದಲ್ಲಿ ತಾನೊಬ್ಬ ಕ್ರೀಡಾ ಪತ್ರಕರ್ತನಾಗಬೇಕು ಎನ್ನುವ ಗುರಿ ಹೊಂದಿರುವ  ಈತನಿಗೆ ಕ್ರೀಡೆಗಳ ಬಗೆಗೆ ವಿಶೇಷ ಒಲವಿದೆ. ಫುಟ್ ಬಾಲ್, ಡಿಸ್ಕಸ್ ಥ್ರೋ, ಕರಾಟೆ, ಕಬಡ್ಡಿ, ಚೆಸ್ ಹೀಗೆ ನಾನಾ ಕ್ರೀಡೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಈ ಬಾಲಪ್ರತಿಭೆ ಜಿಲ್ಲಾ ಮಟ್ಟದ ಹಲವು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ. 'ವಿಶ್ವ ಕನ್ನಡಿಗ'ದಲ್ಲಿ ವಾರಕ್ಕೊಂದರಂತೆ ಕ್ರೀಡಾ ವಿಚಾರಗಳನ್ನು ಕೇಂದ್ರವಾಗಿಸಿಕೊಂಡು ಅಂಕಣ ಪ್ರಕಟಿಸುತ್ತಿದ್ದಾನೆ.

ಪ್ರಶಸ್ತಿ ಗೌರವಗಳು
ಅಂತಃಕರಣನ ಅಂತಃಸತ್ವದಲ್ಲಿ ಮೂಡಿಬಂದ ಸಾಹಿತ್ಯ ಕೃತಿಗಳು ಒಂದಕ್ಕಿಂತ ಒಂದು ಉತ್ತಮವಾಗಿದ್ದು ಸಾಹಿತ್ಯ ವಲಯದ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಗಿದೆ. ಆತನ ಪ್ರತಿಭೆಯನ್ನು ಗುರುತಿಸಿದ ನಾಡಿನ ನಾನಾ ಸಂಘ ಸಂಸ್ಥೆಗಳು ಗೌರವಿಸಿ, ಪ್ರಶಸ್ತಿಗಳನ್ನು ನೀಡಿದ್ದು ಅವುಗಳಲ್ಲಿ ಕೆಲ ಪ್ರಮುಖ ಪ್ರಶಸ್ತಿ ಪುರಸ್ಕಾರಗಳು ಹೀಗಿದೆ-
ಕರ್ನಾಟಕ ಸರ್ಕಾರದಿಂದ 'ಅಸಾಧಾರಣ ಪ್ರತಿಭೆ ರಾಜ್ಯ ಪ್ರಶಸ್ತಿ', ಕನ್ನಡ ಸಾಹಿತ್ಯ ಪರಿಷತ್ತಿನ ವಸುಧೇಂದ್ರ ಭೂಪಾಲಂ ಪ್ರಶಸ್ತಿ,  ಕನ್ನಡ ಸಾಹಿತ್ಯ ಪರಿಷತ್ತಿನ ಸಿಸು ಸಂಗಮೇಶ ದತ್ತಿ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡಮೆಯ ಚಿಣ್ಣರ ಚಂದಿರ ಪುಸ್ತಕ ಬಹುಮಾನ, ಧಾರವಾಡ ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ನ ಬೇಂದ್ರೆ ಗ್ರಂಥ ಬಹುಮಾನ, ಪ್ರಜಾವಾಣಿ ಯುಗಾದಿ ಮಕ್ಕಳ ಕವನ ಸ್ಪರ್ಧೆ ಬಹುಮಾನ, ಮಹಾರಾಷ್ಟ್ರದ ಅಕ್ಕಲಕೋಟೆಯ ಆದರ್ಶ ಕನ್ನಡ ಬಳಗದಿಂದ ಬಾಲಪ್ರತಿಭೆ 2017 ಪ್ರಶಸ್ತಿ
ಹೀಗೆ ತನ್ನ ಜನ್ಮಜಾತ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನ ಪ್ರಭಾವಳಿಯನ್ನು ವೃದ್ದಿಸಿಕೊಳ್ಳುತ್ತಿರುವ ಬಾಲಕ ಅಂತಃಕರಣನಿಂದ ಭವಿಷ್ಯದಲ್ಲಿ ಇನ್ನಷ್ಟು ಶ್ರೇಷ್ಠ ಕೃತಿಗಳು ಮೂಡಿ ಬರಲಿ, ಕನ್ನಡ ಸಾಹಿತ್ಯ ಲೋಕಕ್ಕೆ ಅವನಿಂದ ಇನ್ನಷ್ಟು ಸೇವೆ ಲಭಿಸಲಿ.  ಅಂತಃಕರಣನ ಸಾಹಿತ್ಯ ಪ್ರಭೆ ಅನಂತವನ್ನು ತಲುಪಲಿ  ಎಂದು 'ಕನ್ನಡಪ್ರಭ ಡಾಟ್ ಕಾಂ' ಈ ಮೂಲಕ ಶುಭ ಹಾರೈಸುತ್ತದೆ.


(ಈ ನನ್ನ ಲೇಖನವು 04 ಫೆಬ್ರವರಿ 2018ರಂದು ಕನ್ನಡ ಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು https://bit.ly/2KdHGQa)

Wednesday, April 04, 2018

ಶಿಲ್ಪಿಯ ಕೈಯಲ್ಲಿ ಅರಳಿದ ಕೈಲಾಸ

ಕಾಂಚೀಪುರ ದೇವಳಗಳ ನಗರಿ, ರೇಷ್ಮೆ ಸೀರೆಗಳಿಗೆ ಪ್ರಸಿದ್ದಿ, ತಮಿಳುನಾಡಿನ ವಿಶಿಷ್ಟ ಪೊಂಗಲ್, ಕೈ ಮುರುಕು, ತೆಂಗೋಳು, ಹಲ್ಲಿಗೆ ಷಾಕ್, ಪುಳಿಯೋಗರೆಗಳಿಗೆ ಹೆಸರುವಾಸಿ.

 ಕೈಲಾಸನಾಥ ದೇವಾಲಯ ಹೊರಾಂಗಣ ನೋಟ



ಇಲ್ಲಿನ ಏಕಾಂಬರನಾಥ, ಕಾಮಾಕ್ಷಿ, ವರದರಾಜ ಪೆರುಮಾಳ್, ಕೈಲಾಸನಾಥ ದೇವಾಲಯ ಸೇರಿ ಅನೇಕ ದೇವಾಲಯಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತದೆ.

ಇಂತಹಾ ಸಿಂಹದ ಕೆತ್ತನೆಗಳು ಈ ದೇವಾಲಯದಲ್ಲಿ ಬಹಳಷ್ಟು ಕಾಣಿಸುತ್ತದೆ
ಇದರಲ್ಲಿಯೂ ಕೈಲಾಸನಾಥ ದೇವಾಲಯ ಶಿಲ್ಪಕಲೆ ಕುಸುರಿ ಕೆತ್ತನೆಗಳಿಂದ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಭಾರತದಲ್ಲಿನ ಮೂರು ಪ್ರಮುಖ ಕೈಲಾಸನಾಥ ಮಂದಿರಗಳಲ್ಲಿ ಇದೂ ಒಂದು (ಇನ್ನೆರಡು ದೇವಾಲಯಗಳು ಕ್ರಮವಾಗಿ ಮಹಾರಾಷ್ಟ್ರದ ಎಲ್ಲೋರಾ ಹಾಗೂ ತಮಿಳುನಾಡಿನ ಉತ್ತಿರೂರು ಎನ್ನುವಲ್ಲಿದೆ)

ಕಾಂಚೀಪುರದಲ್ಲಿ ಪಲ್ಲವರಿಂದ ನಿರ್ಮಿತವಾಗಿರುವ ಈ ದೇವಾಲಯ ಸುಮಾರು 1200 ವರ್ಷಗಳಷ್ಟು ಹಳೆಯದು. ಪಲ್ಲವ ರಾಜ 2ನೆಯ ನರಸಿಂಹ ವರ್ಮ ನಿರ್ಮಾಣ ಮಾಡಿದ್ದ ಈ ದೇವಾಲಯ ಎದುರಿನ ಗೋಪುರ ಹಾಗೂ ಬಸವ ಅತ್ಯಂತ ಆಕರ್ಷಕವಾಗಿದೆ.



ಸುಂದರವಾದ ಗರ್ಭಗುಡಿಯ ಮೇಲಿರುವ 
ವಿಮಾನ, ಕಂಬಗಳಿಂದ ಕೂಡಿದ ಮಂಟಪ, ಮುಂಭಾಗ ಮತ್ತು ಸುತ್ತಲೂ ಪ್ರಾಕಾರದಲ್ಲಿರುವ 58 ಪುಟ್ಟ ಗುಡಿಗಳೂ ಅವುಗಳಲ್ಲಿರುವ ಮೆದುವಾದ ಮರಳುಗಲ್ಲಿನಿಂದ ಮಾಡಲ್ಪಟ್ಟಿರುವ ಶಿವ ವಿಗ್ರಹಗಳೂ ಈ ದೇವಾಲಯದ ಹಿರಿಮೆಯ ಪ್ರತೀಕಗಳು. ಮೊದಲಿಗೆ ಈ ವಿಗ್ರಹಗಳನ್ನು ಅಲಂಕರಿಸಲು ಬಳಸಿದ ಆ ಬಣ್ಣಗಳ ಚಿಹ್ನೆಗಳು ಮಾತ್ರ ಈಗ ಉಳಿದುಬಂದಿದೆ.

ಒಂದು ಐತಿಹ್ಯದ ಪ್ರಕಾರ, ರಾಜ ರಾಜ ಚೋಳ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಲೆಯೇ ತಂಜಾವೂರಿನಲ್ಲಿ ಬೃಹದೀಶ್ವರ ದೇವಸ್ಥಾನ ಸ್ಥಾಪಿಸಲು ಸ್ಪೂರ್ತಿ ದೊರೆಯಿತು ಎನ್ನಲಾಗುತ್ತದೆ.

ದೇವಾಲಯದ ಮುಂಭಾಗದಲ್ಲಿ ಹಲವಾರು ಪುಟ್ಟ ಗುಡಿಗಳಿವೆ ಮತ್ತು ಕೋಷ್ಟಕಗಳಿದ್ದು ಅದರಲ್ಲಿ ಶಿವಲಿಂಗಗಳಿವೆ.ಒಳಾಂಗಣದ ಭಿತ್ತಿಯಲ್ಲಿ ಸಾಲು ಸಾಲು ಕಂಭಗಳು, ಎಲ್ಲೆಲ್ಲು ನೋಡಿದರೂ ಸಿಂಹಗಳ ಚಿತ್ರ! ದೊಡ್ಡ ಸಿಂಹಗಳು ಬಾಯ್ದೆರೆದು ನಮ್ಮನ್ನು ನೋಡುತ್ತದೆ!














ಮಧ್ಯದಲ್ಲಿರುವ ಕೈಲಾಸನಾಥನ ಆಲಯದ ಗೋಪುರ ಸಾಧಾರಣ ಎತ್ತರವಿದೆ. ಗರ್ಭಗೃಹದಲ್ಲಿ ಕರಿಶಿಲೆಯಲ್ಲಿ ಕೆತ್ತಿದ ದೊಡ್ಡ ಶಿವಲಿಂಗವಿದೆ. ಬಹಳ ಸುಂದರವಾಗಿದೆ. ಇಲ್ಲೇ ಪಕ್ಕದ ಗೋಡೆಗೆ ಒರಗಿಸಿರುವ ಭಿನ್ನವಾಗಿರುವ ಬಹಳ ದೊಡ್ಡ ಪಾಣಿ ಪೀಠ ಒಂದನ್ನು ಇರಿಸಿದ್ದಾರೆ. ಇದು ಮುರುಕಲು ಆದ್ದರಿಂದ ಪೂಜೆಗೆ ಯೋಗ್ಯವಲ್ಲ. ಅದರ ಗಾತ್ರ ನೋಡಿಯೇ ಅಚ್ಚರಿಪಡಬೇಕು. 

ದೇವಾಲಯ ಪ್ರಾಕಾರದಲ್ಲಿ ಶಬರ ಶಂಕರ ವಿಳಾಸದ ಚಿತ್ರಗಳು ಕಣ್ಣಿಗೆ ಕಟ್ಟಿದಂತಿದೆ ಒಟ್ಟಾರೆ ಪಲ್ಲವ ಶಿಲ್ಪಕಲಾ ವೈಭವಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ.  ಭಾರತದಲ್ಲಿ ಬೇರಾವ ದೇವಾಲಯದಲ್ಲಿಯೂ ಸಿಕ್ಕದ ಶಿವನ ಅರವತ್ತ ನಾಲ್ಕು ಕಲಾ ವೈಭವಯುತ ರೂಪವನ್ನು ಈ ದೇವಾಲಯದಲ್ಲಿ ಮಾತ್ರ ಕಾಣಬಹುದು. 

ಇನ್ನು ಈ ದೇವಾಲಯದಲ್ಲಿ ಕಂಬವೊಂದರ ಮೇಲೆ ಚಾಲುಕ್ಯ ಅರಸ 2ನೆಯ ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಕೆತ್ತಿಸಿದ ಕನ್ನಡ ಶಾಸನ ಇರುವುದು ಗಮನಾರ್ಹ ಸಂಗತಿ.
















(ಈ ನನ್ನ ಲೇಖನವು 15 ಏಪ್ರಿಲ್ 2018ರಂದು ಕನ್ನಡ ಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು https://bit.ly/2HtBWjx)